ಸಾಹಿತ್ಯವು ತನ್ನ ವಿಕಾಸಮಾರ್ಗದಲ್ಲಿ ಸಾರ್ವಜನಿಕ ಆಸ್ತಿ, ಅರೆಖಾಸಗಿ ಆಸ್ತಿ, ಖಾಸಗಿ ಆಸ್ತಿ – ಈ ಮೂರು ಮಜಲುಗಳಲ್ಲಿ ಸಾಗಿಬಂದಿದೆ. ಇವುಗಳಲ್ಲಿ ಜನಪದ ಸಾಹಿತ್ಯ ಸಾರ್ವಜನಿಕ ಆಸ್ತಿ. ಇದರ ಸೃಷ್ಟಿ-ಶಿಲ್ಪ-ಪರಿಷ್ಕರಣ – ಮುಂದುವರಿಕೆಗಳು ಸಾರ್ವಜನಿಕ ಜವಾಬ್ದಾರಿ ಅಂದರೆ ಸಾಮೂಹಿಕ ಜವಾಬ್ದಾರಿಯಾಗಿರುತ್ತವೆ. ಇದರಿಂದ ಭಿನ್ನವಾದ ಸರ್ವಜ್ಞನ ವಚನದಂತಹ ಬರವಣಿಗೆ ಅರೆಖಾಸಗಿ ಆಸ್ತಿಯಾಗಿದೆ. ಏಕೆಂದರೆ ಸಾರ್ವಜನಿಕರು ಕಾಲಕಾಲಕ್ಕೆ ಅಗತ್ಯವೆನಿಸಿದ ಹೊಸ ಮೌಲ್ಯನಿಷ್ಠ ತ್ರಿಪದಿಗಳನ್ನು ಸೃಷ್ಟಿ ಪ್ರಸಾರಮಾಡುತ್ತ ಬಂದರೂ ಅವರು ಸರ್ವಜ್ಞಕವಿಯ ಹೆಸರು ಮತ್ತು ಮುದ್ರಿಕೆಗಳನ್ನೇ ಬಳಸಬೇಕಾಗುತ್ತದೆ. ಇವುಗಳನ್ನು ಹೊರತುಪಡಿಸಿದ ಪಂಪ, ಕುವೆಂಪು ಮೊದಲಾದವರ ಸಾಹಿತ್ಯವು ಖಾಸಗಿ ಆಸ್ತಿ. ಇದು ಯಾರೂ ಬದಲಾವಣೆ ಮಾಡದಂತೆ ಲೇಖಕನ ಸ್ವಾಮಿತ್ವಕ್ಕೆ ಒಳಪಟ್ಟಿರುತ್ತದೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಪ್ರಾಚೀನಕಾಲದಲ್ಲಿ ವಿದ್ವಾಂಸರ ಸಾಮೂಹಿಕ ಪರಿಷ್ಕರಣೆಗೆ ಒಳಗಾಗಿ, ರಾಜನ ಅನುಮತಿ ಪಡೆದು ಬೆಳಕು ಕಾಣುತ್ತಲಿದ್ದ “ಸಾಹಿತ್ಯರಚನಾ” ವ್ಯವಸ್ಥೆಯೊಂದು ಅಸ್ತಿತ್ವದಲ್ಲಿದ್ದಿತೆಂದು ತೋರುತ್ತದೆ. ಈ ಉದ್ದೇಶಕ್ಕಾಗಿಯೇ ರಾಜನ ಅಧ್ಯಕ್ಷತೆಯ ಕೆಳಗೆ ಆಸ್ಥಾನದಲ್ಲಿ ವಿದ್ವಾಂಸರ ಸಮೂಹವಿರುತ್ತಿರಬಹುದು. ಮುಂದಿನ ದಿನಗಳಲ್ಲಿ ಇಂಥ ಸಭೆ ರಾಜನ ಚಿತ್ತರಂಜನೆಯ ದಿಕ್ಕಿನಲ್ಲಿ ಬೆಳೆದಿರಬಹುದಾದರೂ, ಮೂಲತಃ ಇದು ಯೋಗ್ಯ ಸಾಹಿತ್ಯಸೃಷ್ಟಿಯ ನಿರ್ವಹಣೆಗಾಗಿ ಇರುತ್ತಿದ್ದಿತೆಂದು ಕಾಣುತ್ತದೆ, ಗ್ರೀಕ್‌ಅಕಾಡೆಮಿಗಳಂತೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕವಿಗಳು ಬರೆದ ಸಾಹಿತ್ಯವು ಸಮಾಜಕ್ಕೆ ಅಹಿತವನ್ನುಂಟುಮಾಡುವ ಸಾಧ್ಯತೆಯಿರುತ್ತದೆ. ಇಂಥದನ್ನು ತಕ್ಕಮಟ್ಟಿಗಾದರೂ ನಿಯಂತ್ರಿಸಲು, ಅಂದು ಪ್ರಜಾಸತ್ತಾತ್ಮಕ ಚರ್ಚೆ (ವಿಮರ್ಶೆ)ಗೆ ಗುರಿಪಡಿಸಿದ ಬಳಿಕ, ಒಂದು ಕೃತಿ ಹೊರಬರುತ್ತಿದ್ದಿತು ಮತ್ತು ಅದು ಅರಸನ ಮತ (ಸಮ್ಮತ)ವೆಂಬಂತೆ ಪ್ರಸಾರವಾಗುತ್ತಿದ್ದಿತು. ರಾಜನ ನೇತೃತ್ವದಲ್ಲಿ ವಿದ್ವಾಂಸರು ಸೇರಿ ಸಂಕಲಿಸಿದ ತಮಿಳು ಸಂಘ ಸಾಹಿತ್ಯವು ಈ ಶ್ರೇಣಿಗೆ ಸಂಬಂಧಿಸಿದುದಾಗಿದೆ.

ರಾಜನ ಆಡಳಿತದ ಉದ್ದೇಶ ಕೇವಲ ಭೌತಿಕ ರಾಜ್ಯ ಕಟ್ಟುವುದಿಲ್ಲ, ಅದೂ ಒಳಗೊಂಡಂತೆ ಸಾಂಸ್ಕೃತಿಕ ಸಾಮ್ರಾಜ್ಯವನ್ನು ಕಟ್ಟುವುದು. ಹೀಗಿರುವಾಗ ಕವಿಗಳು ತಮತಮಗೆ ತಿಳಿದಂತೆ ಸಾಹಿತ್ಯ ರಚಿಸುವುದೆಂದರೆ ಸಮಾಜದ ಮನಸ್ಸನ್ನು ಕಂಡಕಂಡ ಕಡೆಗೆ ಎಳೆದುಕೊಂಡು ಹೋಗುವುದೆನಿಸುತ್ತದೆ. ಕಾವ್ಯಪ್ರಯೋಜನವನ್ನು ಗಂಭೀರವಾಗಿ ಪರಿಗಣಿಸದ ಬರಹಗಾರರ ಸಂಖ್ಯೆ ಸಣ್ಣದಿರುವುದಿಲ್ಲ. ರಾಗದ್ವೇಷ ನಿಬದ್ಧಮಪ್ಪ ಕೃತಿರಚಿಸಿ ಸಮಾಜದ ಮನಸ್ಸನ್ನು ಅನಾರೋಗ್ಯಗೊಳಿಸುವ ಇಂಥವರಿಂದಾಗಿ, ರಾಜ್ಯಕ್ಕೆ ಸರಿಯಾದ ಸಾಂಸ್ಕೃತಿಕ ವಿವೇಕ ಪ್ರಾಪ್ತವಾಗುವುದಿಲ್ಲ. ಈ ಸಂದರ್ಭದಲ್ಲಿ, ಸ್ಪೆಯಿನ್‌ದೇಶದ ನೆಬ್ರಿಜಾ ಎಂಬ ಭಾಷಾಶಾಸ್ತ್ರಜ್ಞ (೧೪೪೨-೧೫೨೨), ಅಂದು ಆಳುತ್ತಲಿದ್ದ ಪ್ರಖ್ಯಾತ ರಾಣಿ ಇಸಾಬೆಲ್ಲಾ ಎಂಬವಳಿಗೆ ಮಾಡಿಕೊಂಡಿದ್ದ ಮನವಿ ನಮ್ಮ ಗಮಕ ಸೆಳೆಯುತ್ತದೆ. ರಾಜ್ಯದಲ್ಲಿ “ಸ್ಪೆಯಿನ್‌ನ ಪ್ರಜ್ಞೆಗಳು ಬಳಸಲುತ್ತಲಿರುವ ಕಾಸ್ಟಲಿನ್‌ಭಾಷೆಯು ಈಗ ಯಾವುದೇ ನಿಯಂತ್ರಣವಿಲ್ಲದೆ ಸ್ಥಳಸ್ಥಳಕ್ಕೂ ಭಿನ್ನವಾಗಿ ಹೋಗಿದೆ. ನೂರಾರು ಗ್ರಾಮಗಳಲ್ಲಿ ಛಿದ್ರವಾಗಿ ಹೋಗಿದೆ ಮತ್ತು ಹಿತವಿಲ್ಲದೆ ಇದು ದಿನದಿನವು ಬದಲಾಗುತ್ತ ಹೋಗುತ್ತಿದೆ. ಹೀಗೆ ಭಾಷೆಯು ಛಿದ್ರೀಕರಣವಾಗುವುದರಿಂದ ನಮ್ಮ ಸಾಮ್ರಾಜ್ಯವೇ ಛಿದ್ರವಾಗಿದೆ ಮತ್ತು ಇವತ್ತಿನ ಭಾಷೆಯಲ್ಲಿ ಬರೆದಿಟ್ಟ ರಾಣಿಯ ವೈಭವದ ಇತಿಹಾಸವು ಮುಂದಿನ ಜನಕ್ಕೆ ತಲುಪದೆ ವ್ಯರ್ಥವಾಗುವಷ್ಟು ಇದು ತ್ವರೆಯಲ್ಲಿ ಬದಲುಗೊಳ್ಳುತ್ತಿದೆ. ಒಂದು ಸಾಮ್ರಾಜ್ಯವನ್ನು ಮತ್ತು ಇತಿಹಾಸವನ್ನು ನಿರ್ಮಿಸಬೇಕೆಂದರೆ, ಅದಕ್ಕೆ ತಕ್ಕದಾದ ಒಂದು ಸ್ಥಿರ (ಪ್ರಮಾಣ) ಭಾಷೆಯನ್ನು ನಿರ್ಮಿಸಿಕೊಳ್ಳಬೇಕು. ರಾಣಿಯ ಅಧಿಕೃತ ಮುದ್ರೆಯುಳ್ಳ ಪ್ರಮಾಣ ರಾಜಭಾಷೆಯೊಂದು ಈಗ ಅತ್ಯಗತ್ಯವಾಗಿದೆ. ನಾನೀಗ ಆ ಛಿದ್ರಭಾಷೆಯನ್ನು ಶುದ್ಧಗೊಳಿಸಿ, ಸಂಕಲಿಸಿ ಅದಕ್ಕೊಂದು ವ್ಯಾಕರಣವನ್ನು ರಚಿಸುತ್ತೇನೆ ಮತ್ತು ಆ ಮೂಲಕ ಪ್ರಮಾಣ ರಾಜಭಾಷೆಯನ್ನು ನಿರ್ಮಿಸುತ್ತೇನೆ. ಅದಕ್ಕೆ ರಾಣಿಯ ಸಮ್ಮತಿ ಮತ್ತು ಸಹಾಯಗಳನ್ನು ಬೇಡುತ್ತೇನೆ”[1] ಈ ಬಿನ್ನಹ “ಭಾಷೆಯೆನ್ನುವುದು ಯಾವತ್ತೂ ಸಾಮ್ರಾಜ್ಯದ ಸಂಗಾತಿ, ಶಾಶ್ವತ ಸಹಚರಿ”[2] ಎಂಬುದನ್ನು ಧ್ವನಿಸುತ್ತದೆ.

ಇದೇ ರೀತಿ ಸಾಹಿತ್ಯವೆನ್ನುವುದೂ ಸಾಮ್ರಾಜ್ಯದ ಸಂಗಾತಿ, ಶಾಶ್ವತ ಸಹಚರಿ. ಸಾಮ್ರಾಜ್ಯನಿರ್ಮಾಣಕ್ಕೆ ಸಾಹಿತ್ಯನಿರ್ಮಾಣವೂ ಸಹಕಾರಿ ಎಂದು ಕನ್ನಡಿಗರೂ ಅರ್ಥಮಾಡಿಕೊಂಡಿದ್ದ ಕಾರಣ, ಈ ‘ಮತ’ ಸಾಹಿತ್ಯನೀತಿಯನ್ನು ರೂಢಿಸಿಕೊಂಡಿದ್ದರೆಂದು ತೋರುತ್ತದೆ. ಅಂದರೆ ರಾಜ್ಯದಲ್ಲಿ ಇಲ್ಲಿಯವರೆಗೆ ಬೆಳೆದ ಸಾಹಿತ್ಯದ ಸ್ವರೂಪ ಎಂತಹುದು? ಇನ್ನುಮೇಲೆ ಬೆಳೆಯಬೇಕಾಗಿರುವುದರ ಸ್ವರೂಪವೇನು? ಈ ಬಗ್ಗೆ ವಿವೇಕಶಾಲಿ ವಿಮರ್ಶಕರು ಸಾಮೂಹಿಕವಾಗಿ ಚರ್ಚಿಸಿ, ಅಭಿಪ್ರಾಯಗಳನ್ನು ಪರಿಷ್ಕರಿಸಿ, ತೀರ್ಪುನೀಡಿ, ಅಧಿಕೃತತೆಯೆಂಬಂತೆ ರಾಜನ ಸಮ್ಮತಿಗೆ ಒಳಪಡಿಸುತ್ತಿರುವುದೇ ಮತಸಾಹಿತ್ಯ ಅಥವಾ ಅನುಮತಸಾಹಿತ್ಯ. ಅಂಥ ಪರಂಪರೆಯೊಂದು ಕನ್ನಡದಲ್ಲಿ ಬೆಳೆದು ಬಂದಿದ್ದಿತು. ಕೊನೆಯಪಕ್ಷ ಶಾಸ್ತ್ರಸಾಹಿತ್ಯ ವಿಷಯವಾಗಿಯಾದರೂ ಬೆಳೆದು ಬಂದಿದ್ದಿತು.

ಕನ್ನಡದಲ್ಲಿ “ಶಿವಮಾರಮತ”ವೆಂಬ ಗಜಶಾಸ್ತ್ರಕೃತಿ, “ನೃಪತುಂಗದೇವಮತ” (೩-೯೮)ವೆಂಬ ಕವಿರಾಜಮಾರ್ಗ ಪರ್ಯಾಯನಾಮದ ಅಲಂಕಾರಶಾಸ್ತ್ರಕೃತಿ, “ರಟ್ಟಮತ”ವೆಂಬ ಋತುಮಾನಶಾಸ್ತ್ರಕೃತಿ-ಇವು, ಶಿವಮಾರ, ನೃಪತುಂಗ, ರಟ್ಟ (?) ಅರಸರ ಆಸ್ಥಾನದಲ್ಲಿ ಆಯಾಕ್ಷೇತ್ರದ ವಿದ್ವಾಂಸರಿಂದ ಚರ್ಚೆಗೆ ಒಳಪಟ್ಟು, ಕೊನೆಯಲ್ಲಿ ಅವರ ಅಭಿಮತ ಪಡೆದು ಹೊರಬಂದುವಾಗಿವೆ. ಹೀಗಾಗಿ ಈವರೆಗೆ ತಿಳಿದಿರುವಂತೆ ಶಿವಮಾರಮತವೆಂಬುದು ಗಂಗ ಅರಸು ಶಿವಮಾರಕೃತವಲ್ಲ, ರಟ್ಟಮತವು ರಾಷ್ಟ್ರಕೂಟ ಅರಸನಿಂದ ಸೃಷ್ಟಿಯಾದುದಲ್ಲ, ಕವಿರಾಜಮಾರ್ಗವು ಚಕ್ರವರ್ತಿ ನೃಪತುಂಗಕೃತವಲ್ಲ. ಇವರ ಮತ (ಅನುಮತ)ದ ಮುದ್ರೆ ಪಡೆದಂಥವು. ಪ್ರಾಚೀನ ಈ ಪದ್ಧತಿಯನ್ನು ತಿಳಿದುಕೊಳ್ಳದ ಕಾರಣ ಕವಿರಾಜಮಾರ್ಗದ ಕರ್ತೃವಿಷಯವಾಗಿ ವಿದ್ವಾಂಸರಲ್ಲಿ ವಾದ ಹುಟ್ಟಿದೆಯೆಂದು ಹೇಳಬಹುದು.[3]

ಕವಿರಾಜಮಾರ್ಗದಲ್ಲಿ ನೃಪತುಂಗದೇವಮತ (೩-೧೦೭) ಎಂಬ ಪ್ರಯೋಗಗಳೂ ಇರುವುದರಿಂದ ಮತ ಎಂಬುದಕ್ಕೆ ಕ್ರಮ, ಮಾರ್ಗವೆಂಬುವೂ ಪರ್ಯಾಯನಾಮಗಳಂತೆ ಅಂದು ಬಳಕೆಯಾಗುತ್ತಿರಬಹುದು. ಈ (ಸಂ)ಮತ ಕೃತಿಗಳು ಅಂತಿಮದಲ್ಲಿ ಅರಸನ ಅಪ್ಪಣೆಗೆ ಪಡೆದೇ ಹೊರಬರುತ್ತಿದ್ದುರಿಂದ, ಇದನ್ನು ಜನರಿಗೆ ತಿಳಿಯಪಡಿಸುವುದರ ಸಲುವಾಗಿ “ನೃಪತುಂಗದೇವಾನುಮತಮಪ್ಪ” ಎಂಬಂಥ ವಾಕ್ಯಗಳನ್ನು ಕೆಲವೊಮ್ಮೆ ಈ ಕೃತಿಗಳ ಒಡಲಲ್ಲಿ, ಕಡ್ಡಾಯವಾಗಿ ಪ್ರಕರಣಾಂತ್ಯದಲ್ಲಿ ಮತ್ತು ಗ್ರಂಥಾಂತ್ಯದಲ್ಲಿ ಸೇರಿಸಲಾಗುತ್ತಿರಬಹುದು. ಈ ನಿಯಂತ್ರಣವು ಕಾಲಕ್ರಮೇಣ ನಿರ್ಬಂಧವಾಗಿ ಪರಿಣಮಿಸಲು, ಅದನ್ನು ಸಹಜವಾಗಿಯೇ ಮುರಿದುಹಾಕಲಾಯಿತೆಂದು ತೋರುತ್ತದೆ.

[1] ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು, ಕೆ. ವಿ. ಸುಬ್ಬಣ್ಣ, ಪು. ೩೮

[2] ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು, ಕೆ. ವಿ. ಸುಬ್ಬಣ್ಣ, ಪು. ೩೮

[3] ಈ ಮೂರು ಕೃತಿಗಳಲ್ಲದೆ ಕಲ್ಯಾಣ ಚಾಲುಕ್ಯಚಕ್ರವರ್ತಿ ಜಯಸಿಂಹನ (೧೦೧೫-೪೨) ಆಸ್ಥಾನದಲ್ಲಿ ಹುಟ್ಟಿದ ‘ವೀರಾವಳಿ’ ಹೆಸರಿನ ಕೋಶವನ್ನು ಕೆಲವೊಮ್ಮೆ ‘ವೀರಾವಳಿ ಮತ’ವೆಂದು ಕರೆಯಲಾಗಿದೆ. ಮುಹೂರ್ತಗಳ ಬಗ್ಗೆ ಹೇಳುವ ‘ಸಹದೇವಮತ’ ಹೆಸರಿನ ಹಸ್ತಪ್ರತಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿದೆ. ಇವು ಮಾತ್ರ ಸಾಮಾಜಿಕರು ಒಪ್ಪಿಕೊಂಡ ವ್ಯಕ್ತಿ ಅಭಿಮತವನ್ನು ಸೂಚಿಸುತ್ತಿರಬಹುದು.