ಪ್ರಾಚೀನ ಕನ್ನಡ ಸಾಹಿತ್ಯವನ್ನು ಈವರೆಗೆ ಸಂಸ್ಕೃತ ಸಾಹಿತ್ಯ ಪರಂಪರೆಯ ಬೆಳಕಿನಲ್ಲಿ ಅರ್ಥವಿಸುತ್ತ ಬರಲಾಗಿದೆ. ಈಗ ಅದನ್ನು ತಮಿಳು ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ಅರ್ಥವಿಸಿದರೆ ಭಿನ್ನ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆಯಿದೆ. ತಮಿಳಿನ ತೊಳ್ಕಾಪ್ಪಿಯಂ ಮತ್ತು ಕನ್ನಡದ ಕವಿರಾಜಮಾರ್ಗಗಳ ತೌಲನಿಕ ಅಧ್ಯಯನ ಈ ದೃಷ್ಟಿಯಿಂದ ತುಂಬ ಉಪಯುಕ್ತವೆನಿಸುವಂತಿದೆ.

“ಕವಿರಾಜಮಾರ್ಗ” ಎಂದಾಕ್ಷಣ ದಂಡಿಯ ಕಾವ್ಯಾದರ್ಶವೇ ನೆನಪಾಗುವಷ್ಟರಮಟ್ಟಿಗೆ ನಾವು ಈ ಎರಡೂ ಕೃತಿಗಳ ಧನ ಋಣ ಸಂಬಂಧವನ್ನು ಸ್ಥಾಪಿಸುತ್ತ ಬಂದಿದ್ದೇವೆ. ಇದು ಬಹುಮಟ್ಟಿಗೆ ನಿಜವಿದ್ದರೂ ಮೂಲತಃ ದಕ್ಷಿಣದ್ದೇ ಆದ ಒಂದು ಕಾವ್ಯಮೀಮಾಂಸಾ ಪದ್ಧತಿ ಇದ್ದಿರಬಹುದೇ? ಹಾಗಿದ್ದರೆ ಈ “ಶಾಸ್ತ್ರಶಿಲ್ಪ”ದ ಸ್ವರೂಪವೇನು? ಈ ಎರಡು ಅಂಶಗಳ ಬೆಳಕಿನಲ್ಲಿ ತೊಳ್ಕಾಪ್ಪಿಯಂ ಮತ್ತು ಕವಿರಾಜಮಾರ್ಗಗಳನ್ನು ತೌಲನಿಕವಾಗಿ ಪರಿಶೀಲಿಸಬಹುದಾಗಿದೆ.

ತೊಳ್ಕಾಪ್ಪಿಯಂ ಮತ್ತು ಕವಿರಾಜಮಾರ್ಗಗಳು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯ ಪ್ರಥಮ ಲಭ್ಯಕೃತಿಗಳು, ಮಹತ್ವದ ಲಾಕ್ಷಣಿಕ ಕೃತಿಗಳು. ತೊಳ್‌+ಕಾಪ್ಪಿಯಂ ಅಂದರೆ ಕಾವ್ಯರಚನೆಗೆ ಅವಶ್ಯವಾಗ ಪೂರ್ವಭೂಮಿಕೆಯೆಂದು ಅರ್ಥ. ಕವಿರಾಜಮಾರ್ಗಕ್ಕೂ ಸಾಮಾನ್ಯವಾಗಿ ಇದೇ ಅರ್ಥವಿದೆ. ಕಾವ್ಯರಚನೆಗೆ ಅವಶ್ಯವೆನಿಸಿದ ಪೂರ್ವಭಾವಿ ರಾಜಮಾರ್ಗವೆಂದು ಇದು ಅರ್ಥಕೊಡುತ್ತದೆ. ಈ ವಿವರಣೆಯಿಂದ ಎರಡೂ ಕೃತಿಗಳ ಮೂಲ ಉದ್ದೇಶ ಒಂದೇ ಆಗಿದ್ದು, ಒಂದು ವ್ಯಾಕರಣದ ಮೂಲಕ, ಇನ್ನೊಂದು ಅಲಂಕಾರದ ಮೂಲಕ ಕಾವ್ಯದ ಪೂರ್ವಭೂಮಿಕೆಯನ್ನು ಪ್ರತಿಪಾದಿಸುತ್ತವೆಯೆಂದು ಸ್ಪಷ್ಟವಾಗುತ್ತದೆ. ಇದಕ್ಕಿಂತ, ಇವೆರಡೂ ತಮ್ಮ ತಮ್ಮ ಭಾಷೆಗಳಲ್ಲಿ ಅಂದಂದಿನ ಸಾಹಿತ್ಯಕ ಸಂದರ್ಭದ ಅಗತ್ಯವನ್ನು ಪೂರೈಸಲು ಹುಟ್ಟಿದ “ಚಾರಿತ್ರಿಕ ಮಹತ್ವದ ಕೃತಿ”ಗಳೆಂಬುದು ಗಮನಿಸಬೇಕಾದ ಅಂಶವಾಗಿದೆ.

ಶಾಸ್ತ್ರಕೃತಿಗಳಾದ ವ್ಯಾಕರಣ, ಅಲಂಕಾರ, ಛಂದಸ್ಸುಗಳನ್ನು ಸಂಸ್ಕೃತ ಲಾಕ್ಷಣಿಕರು ಒಂದರಲ್ಲಿ ಒಂದನ್ನು ಬೆರಸದೆ ಸ್ವತಂತ್ರವಾಗಿ ರಚಿಸುತ್ತಾರೆ. ದಂಡಿಯ ಕಾವ್ಯಾದರ್ಶವನ್ನು ತೆಗೆದುಕೊಂಡರೆ ಅದು ಶುದ್ಧಾಂಗವಾಗಿ ಅಲಂಕಾರಶಾಸ್ತ್ರ. ಅದರಲ್ಲಿ ಕಾವ್ಯದೋಷಗಳನ್ನು ಹೇಳುವಾಗ ಭಾಷಾವಿಚಾರ ಬಂದರೂ ಅದು ವ್ಯಾಕರಣದ ವಿಷಯವೆಂಬಂತೆ ಬರುವುದಿಲ್ಲ. ಕಾವ್ಯಭಾಷೆಯ ವಿಷಯವೆಂಬಂತೆ ಬರುತ್ತದೆ. ಹೀಗೆ ಸಂಸ್ಕೃತದವರು ಒಂದು ಶಾಸ್ತ್ರವನ್ನು ಅದರ ನಿರ್ದಿಷ್ಟ ಗೆರೆಮನೆಯಲ್ಲಿಯೇ ಎರಕಹೊಯ್ಯುತ್ತಾರೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಕವಿರಾಜಮಾರ್ಗವು ಅಲಂಕಾರ ಗ್ರಂಥವಾಗಿದ್ದರೂ ಅಲ್ಲಿ ಒಂದಿಷ್ಟು ಛಂದೋವಿಚಾರವಿದೆ, ವ್ಯಾಕರಣ ವಿಷಯವಂತೂ ವಿಶೇಷ ಪ್ರಮಾಣದಲ್ಲಿದೆ. ಈ ಗ್ರಂಥದ ವಿಶಿಷ್ಟ ಕೊಡುಗೆ ಬೆಲೆಯುಳ್ಳ ಭಾಗ ಅಲಂಕಾರವಲ್ಲ, ವ್ಯಾಕರಣವೆಂಬಷ್ಟು ಆ ವಿಚಾರ ಮಹತ್ವದ್ದಾಗಿದೆ. ಇನ್ನೂ ಹೆಚ್ಚಿನದಾಗಿ ಇಲ್ಲಿ ಕರ್ನಾಟಕದ ಮೇರೆ, ಕನ್ನಡಿಗರ ಗುಣವಿಶೇಷ, ಕನ್ನಡದ ತಿರುಳು, ತಿರುಳ್ಗನ್ನಡದ ಭೂವ್ಯಾಪ್ತಿ ಇತ್ಯಾದಿ ವಿಚಾರಗಳು “ಅಲಂಕಾರಶಾಸ್ತ್ರದಲ್ಲಿ ಇವುಗಳದೇನು ಕೆಲಸ?” ಎಂಬಂತೆ ಸೇರಿಕೊಂಡಿವೆ. ಆದುದರಿಂದ ಈ ಬಗೆಯ “ವಿಷಯಮಿಶ್ರಶಾಸ್ತ್ರಶಿಲ್ಪ”ಕ್ಕೆ ಸಂಸ್ಕೃತದಿಂದ ಭಿನ್ನವಾದ ಬೇರೊಂದೂ ಶಿಲ್ಪಪರಂಪರೆ, ಹಿನ್ನೆಲೆಯಿದ್ದಿರಬಹುದು. ಬಹುಶಃ ಅದು ದ್ರಾವಿಡದ್ದೇ ಆಗಿರಬೇಕು.

ಆಶ್ಚರ್ಯದ ಸಂಗತಿಯೆಂದರೆ ಕವಿರಾಜಮಾರ್ಗವು ಅಲಂಕಾರ ವಿಷಯ ದೃಷ್ಟಿಯಿಂದ ಸಂಸ್ಕೃತದ ಕಾವ್ಯಾದರ್ಶನಕ್ಕೆ ಋಣಿಯಾಗಿದ್ದರೂ “ವಿಷಯಮಿಶ್ರಶಾಸ್ತ್ರಶಿಲ್ಪ” ದೃಷ್ಟಿಯಿಂದ ತೊಳ್ಕಾಪ್ಪಿಯಂ ಗ್ರಂಥವನ್ನು ಹೋಲುತ್ತದೆ. ಏಕೆಂದರೆ ಕವಿರಾಜಮಾರ್ಗವು ಅಲಂಕಾರೇತರ ವಿಷಯಗಳನ್ನೂ ತಬ್ಬಿಕೊಂಡಂತೆ, ತೊಳ್ಕಾಪ್ಪಿಯಂ ವ್ಯಾಕರಣೇತರ ವಿಷಯಗಳನ್ನೂ ತಬ್ಬಿಕೊಂಡಿದೆ. ವ್ಯಾಕರಣಕ್ಕೆ ಹೊರತಾದ ಅಲಂಕಾರ, ಛಂದಸ್ಸು, ಕಾವ್ಯಪ್ರಕಾರ, ಕಾವ್ಯವಸ್ತು, ತಮಿಳು-ಜನ-ಕುಟುಂಬ-ಸಮಾಜಗಳ ಸ್ವರೂಪ, ಉತ್ತರದ ವೆಂಕಟಮ್‌ದಿಂದ ದಕ್ಷಿಣದ ಕುಮಾರಿವರೆಗೆ ಹಬ್ಬಿದ ತಮಿಳು ಭಾಷೆಯ ವಿಸ್ತಾರ, ಆ ಭಾಷೆಯ ತಿರುಳು ಎನಿಸಿದ ಸೆಂದಮಿಳ್‌ಇತ್ಯಾದಿ ವಿಷಯಗಳು ಇದರಲ್ಲಿ ಸೇರಿಕೊಂಡಿವೆ. ಆದುದರಿಂದ ಮೂಲತಃ ದ್ರಾವಿಡರಲ್ಲಿ “ಸಮ್ಮಿಶ್ರ ಪದ್ಧತಿ”ಯ ಶಾಸ್ತ್ರಶಿಲ್ಪ ಪರಂಪರೆಯಿದ್ದು, ಇದರ ಪ್ರತಿನಿಧಿಗಳಾಗಿ ಈ ಎರಡೂ ಕೃತಿಗಳ ಹುಟ್ಟಿಕೊಂಡಂತಿದೆ. ಈ ಮಿಶ್ರಪದ್ಧತಿಯ ಮುಂದುವರಿಕೆಯೆಂಬಂತೆ ಅಲಂಕಾರ ಗ್ರಂಥವಾದ ನಾಗವರ್ಮನ ಕಾವ್ಯಾವಲೋಕನದಲ್ಲಿ “ಶಬ್ದಸ್ಮೃತಿ” ಹೆಸರಿನಿಂದ ವ್ಯಾಕರಣ ವಿಷಯ ಒಂದು ಭಾಗವಾಗಿ ಸೇರಿಕೊಂಡಿದೆ.

ಹೀಗೆ ಸಂಸ್ಕೃತದಿಂದ ಭಿನ್ನವಾಗಿರುವ ಶಾಸ್ತ್ರಶಿಲ್ಪವೊಂದರ ಆದರ್ಶ (Model)ವನ್ನು ಉಳಿಸಿಕೊಂಡಿರುವ ಕವಿರಾಜಮಾರ್ಗವು, ವಿಷಯದೃಷ್ಟಿಯಿಂದಲೂ ಸಂಸ್ಕೃತದಿಂದ ಭಿನ್ನವಾದ ಪ್ರಾದೇಶಿಕ ಅನೇಕ ಹೊಸ ವಿಚಾರಗಳನ್ನು ಅಳವಡಿಸಿಕೊಂಡಂತಿದೆ. ಇಲ್ಲಿ ಪ್ರತಿಪಾದಿತವಾದ ಸಾಹಿತ್ಯದ ಪ್ರಕಾರಗಳು, ಸ್ವರೂಪ, ಪ್ರಯೋಜನ, ಕಾರಣಗಳು ದಂಡಿಗಿಂತ ಸ್ವಲ್ಪ ಬೇರೆಯೇ ಆಗಿವೆ. ‘ಮಿಶ್ರ’ವನ್ನು ಕೈಬಿಟ್ಟು ಕಾವ್ಯವನ್ನು ಗದ್ಯ, ಪದ್ಯವೆಂದು ವರ್ಗೀಕರಣವನ್ನು ಒಪ್ಪಿಕೊಂಡುದು, ಪ್ರಕಟಿತರ ವಸ್ತುವಿಸ್ತರ, ನಿರತಿಶಯ ವಸ್ತುವಿಸ್ತರ ಎಂದು ವಸ್ತುದೃಷ್ಟಿಯಿಂದಲೂ ಸಾಹಿತ್ಯವನ್ನು ವಿಂಗಡಿಸಿದುದು, ಮಾತರಿವಂನಿಪುಣಂ-ಜಾಣಂ-ಬಲ್ಲಂ-ಕವಿವೃಷಭಂ ಎಂದು ಸಾಹಿತಿಗಳ ಶ್ರೇಣಿಯನ್ನು ಬಿಡಿಸಿ ಹೇಳಿದುದು, ಕಾವ್ಯವಸ್ತುವನ್ನು ಸ್ತ್ರೀಗೆ ಹೋಲಿಸದೆ “ಕಾವ್ಯವಸ್ತುಪುರುಷ” ಎಂದು ನುಡಿದುದು ಇತ್ಯಾದಿ ಹೊಸ ಅಂಶಗಳು ದ್ರಾವಿಡ ಪರಂಪರೆಯ ಕೊಡುಗೆಗಳಾಗಿರಬಹುದು.

ಇದೆಲ್ಲವನ್ನು ನೋಡಿದರೆ, ದ್ರಾವಿಡ ಭಾಷೆಗಳಲ್ಲಿ ಹುಟ್ಟಿರುವ ಪ್ರಾಚೀನ ಸಾಹಿತ್ಯಶಾಸ್ತ್ರಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಮೂಲಕ, ನಮ್ಮದೇ ಆದ “ವಿಷಯಸ್ವರೂಪ” ಮತ್ತು “ಶಾಸ್ತ್ರಶಿಲ್ಪ” ಲಕ್ಷಣಗಳನ್ನು ಪುನರ್ರಚಿಸುವುದು ಸಾಧ್ಯವಿದೆಯೆನಿಸುತ್ತದೆ.