ಕಳೆದುಹೋದ ಕನ್ನಡ ಸಾಹಿತ್ಯ ಶ್ರೇಣಿಯಲ್ಲಿ ಪೊನ್ನನ ಭುವನೈಕರಾಮಾಭ್ಯುದಯ ಒಂದು ಪ್ರಮುಖ ಗ್ರಂಥವೆನಿಸಿದೆ. ಆದುದರಿಂದಲೇ ಅದರ ವಿಷಯವಾಗಿ ಅನೇಕ ವಿದ್ವಾಂಸರು ಚರ್ಚೆ-ಪ್ರತಿಚರ್ಚೆಗಳನ್ನು ಮಂಡಿಸುತ್ತ ಬಂದಿದ್ದಾರೆ. ಇವುಗಳಲ್ಲಿ ಈ ಕೃತಿಯ ನಾಯಕ ರಾಷ್ಟ್ರಕೂಟ ಕೃಷ್ಣIIIನೋ, ಶಂಕರಗಂಡನೋ ಎಂಬುದು ಮುಖ್ಯ ಚರ್ಚೆಯಾಗಿದೆ. ಇದು ಇತಿಹಾಸವೋ, ಕಾವ್ಯವೋ, ಇವೆರಡನ್ನೂ ‘ತಗುಳ್ಚಿ ಪೇೞೆದ’ ಕೃತಿಯೋ ಎಂಬುದು ಇನ್ನೊಂದು ಚರ್ಚೆಯಾಗಿದೆ. ಡಾ. ದ. ರಾ. ಬೇಂದ್ರೆಯವರು ಇದು ಶುದ್ಧ ಇತಿಹಾಸ ಕೃತಿಯಾಗಿದೆಯೆಂದರೆ, ಮಿಕ್ಕವರು ಪಂಪಭಾರತ, ಗದಾಯುದ್ಧಗಳಂತೆ ‘ತಗುಳ್ಚಿ ಪೇೞೆದ’ಕೃತಿಯಾಗಿದೆ ಎನ್ನುತ್ತಾರೆ.

ಈ ತಗುಳ್ಳಿ ಪೇೞುವ ಕ್ರಿಯೆ ಕನ್ನಡದಲ್ಲಿ ಎರಡು ತೆರನಾಗಿದೆ. ಒಂದು ತಗುಳ್ಚಿ ಪೇೞೆದ ಕಾವ್ಯ. ಇದಕ್ಕೆ ಪಂಪಭಾರತ, ಗದಾಯುದ್ಧ ಉದಾಹರಣೆಗಳು. ಇನ್ನೊಂದು ತಗುಳ್ಚಿ ಪೇೞೆದ ಶಾಸ್ತ್ರ. ಇದಕ್ಕೆ ಕವಿರಾಜಮಾರ್ಗ, ಮದನತಿಲಕ, ಅಪ್ರತಿಮವೀರಚರಿತೆ ಉದಾಹರಣೆಗಳು. ಇವುಗಳಲ್ಲಿ ಭುವನೈಕರಾಮಾಭ್ಯುದಯ ‘ತಗುಳ್ಚಿ ಪೇೞೆದ ಶಾಸ್ತ್ರ’ ವರ್ಗಕ್ಕೆ ಸೇರಬಹುದೇ? ಎಂಬುದು ನನ್ನ ಸಂದೇಹ. ಇದಕ್ಕೆ ಊಹಾತ್ಮಕ ಆಧಾರಗಳು ಮೂರು.

೧. ಕನ್ನಡದಲ್ಲಿ ತಗುಳ್ಚಿ ಪೇೞುವ ಶಾಸ್ತ್ರ ಪರಂಪರೆಯೊಂದು ಕಂಡುಬರುತ್ತದೆ. ಉದಾ. ಮೇಲೆ ಹೇಳಿದ ಕವಿರಾಜಮಾರ್ಗ, ಮದನತಿಲಕ, ಅಪ್ರತಿಮ ವೀರಚರಿತೆ. ಈ ಪರಂಪರೆಯ ಇನ್ನೊಂದು ಕೃತಿಯಾಗಿರಬಹುದು, ಭುವನೈಕರಾಮಾಭ್ಯುದಯ ೨. ಕವಿರಾಜಮಾರ್ಗಕ್ಕೆ ‘ನೃಪತುಂಗಾಭ್ಯುದಯ’ ಎಂಬ ದ್ವಿತೀಯ ನಾಮವಿರುವ ಸಂಗತಿ, ಇತ್ತೀಚೆಗೆ ನಾನು ಶೋಧಿಸಿದ ಅದರ ಹಸ್ತಪ್ರತಿಯಿಂದ ಬೆಳಕಿಗೆ ಬಂದಿದೆ. ಹೀಗಾಗಿ ‘ನೃಪತುಂಗಾಭ್ಯುದಯ’ ಒಂದು ಶಾಸ್ತ್ರವಾಗಿರುವಂತೆ ‘ಭುನನೈಕ್ಯರಾಮಾಭ್ಯುದಯ’ವೂ ಒಂದು ಶಾಸ್ತ್ರವಾಗಿರಬಹುದೇ? (ಎರಡೂ ಹೆಸರುಗಳಲ್ಲಿಯ ‘ಅಭ್ಯುದಯ’ ಪದಗಳನ್ನು ಗಮನಿಸಿರಿ). ರಾಷ್ಟ್ರಕೂಟ ವಂಶದ ನೃತುಂಗನನ್ನು ಕುರಿತು ಒಂದು ಶಾಸ್ತ್ರಕೃತಿ ‘ನೃಪತುಂಗಾಭ್ಯುದಯ’ವಾದರೆ, ಅದೇ ರಾಷ್ಟ್ರಕೂಟ ವಂಶದ ಕೃಷ್ಣ IIIನನ್ನು ಕುರಿತ ‘ಭುವನೈಕರಾಮಾಭ್ಯುದಯ’ ಇನ್ನೊಂದು ಶಾಸ್ತ್ರಕೃತಿಯಾಗಿರಬಹುದು. ೩. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ “ಇವನು ಒಂದು ಅಲಂಕಾರ ಗ್ರಂಥವನ್ನು ಬರೆದಿರುವುದಾಗಿ ಕೆಲವರು ಹೇಳುತ್ತಾರೆ.[1] ಎಂದು  ಕವಿಚರಿತೆಕಾರರು ಪೊನ್ನನನ್ನು ಕುರಿತು ಬರೆದಿದ್ದಾರೆ. ಇವರಿಗೆ ಏನು ಆಧಾರವಾಗಿದ್ದಿತೋ ಗೊತ್ತಿಲ್ಲ. ಆದರೆ ಈ ಮಾತು ನಮ್ಮ ಊಹೆಗೆ ಒಂದು ಆಧಾರವಾಗಿ ನಿಲ್ಲುತ್ತದೆ ಎಂಬುದು ಗಮನಿಸಬೇಕಾದ ವಿಷಯ (ಕಾವ್ಯಾವಲೋಕನ, ದರ್ಪಣಗಳಂಥ ಶಾಸ್ತ್ರಗ್ರಂಥಗಳಲ್ಲಿ ಭುವನೈಕರಾಮಾಭ್ಯುದಯದ ಅವಶೇಷಗಳು ಲಕ್ಷ್ಯಪದ್ಯಗಳಾಗಿ ಬಂದುದನ್ನು ಇಲ್ಲಿ ನೆನೆಯಬಹುದು).

ಇಷ್ಟು ಹಿನ್ನೆಲೆಯಲ್ಲಿ ‘ಭುವನೈಕರಾಮಾಭ್ಯುದಯ’ವು ರಾಷ್ಟ್ರಕೂಟ ಕೃಷ್ಣನನ್ನು ಕುರಿತ ಒಂದು ತಗುಳ್ಚಿ ಪೇೞೆದ ಶಾಸ್ತ್ರಕೃತಿ. ಅದರಲ್ಲಿಯೂ ತಗುಳ್ಚಿ ಪೇೞೆದ ಒಂದು ಅಲಂಕಾರಶಾಸ್ತ್ರಕೃತಿಯಾಗಿದೆ ಎಂದು ಊಹಿಸಬಹುದು.[2]

[1] ಕ.ಕ.ಚ. (೧೯೬೧), ಪು. ೪೧

[2] ಅ. ಭುವನೈಕರಾಮಾಭ್ಯುದಯ ೧೪ ಆಶ್ವಾಸಗಳ ಗ್ರಂಥವೆಂದು ಪೊನ್ನ ಹೇಳುತ್ತಾನೆ. ‘ಆಶ್ವಾಸ’ ಎಂಬ ಪದ ಕಾವ್ಯದಂತೆ ಲಕ್ಷಣಗ್ರಂಥವನ್ನೂ ಸೂಚಿಸಬಹುದೇ? ವಿಚಾರಿಸಬೇಕು. ಆ. ಮೇಲೆ ಅಲಂಕಾರ ಸೂತ್ರ, ಕೆಳಗೆ ರಾಜನ ಚರಿತ್ರೆಯೋ, ವರ್ಣನೆಯೋ ಇರುವ ಪದ್ಯಗಳ ಗ್ರಂಥವಾಗಿರಬಹುದು. “ಶಾಸ್ತ್ರಕಾವ್ಯ, ಶ್ಲೇಷಕಾವ್ಯ, ಸಮಸ್ತಕಾವ್ಯ” ಹೆಸರಿನ ಮುಂದಿನ ಲೇಖನ ನೋಡಿರಿ.