ವಾಙ್ಮಯವನ್ನು ಶಾಸ್ತ್ರ ಮತ್ತು ಕಾವ್ಯವೆಂದು, ಕಾವ್ಯವನ್ನು ಪುರಾಣಕಾವ್ಯ ಮತ್ತು ಚರಿತ್ರೆಕಾವ್ಯವೆಂದು ವರ್ಗೀಕರಿಸಬಹುದಾಗಿದ್ದು, ಈ ಮೂರು (ಶಾಸ್ತ್ರ, ಪುರಾಣ, ಚರಿತ್ರೆ) ಸ್ವತಂತ್ರ ಸಾಹಿತ್ಯಪ್ರಕಾರಗಳಾಗಿ ಭರತಖಂಡದಲ್ಲಿ ಬೆಳೆದುಬಂದಿವೆ. ಜೊತೆಗೆ ಈ ಮೂರರಲ್ಲಿ ಯಾವುದೇ ಎರಡನ್ನು ಸಮನ್ವಯಗೊಳಿಸಿದ ಮಿಶ್ರಕಾವ್ಯ ಪ್ರಯೋಗಗಳೂ ಹೀಗೆ ಬೆಳೆದು ಬಂದಿವೆ: ಶಾಸ್ತ್ರ+ಪುರಾಣ, ಶಾಸ್ತ್ರ+ಚರಿತ್ರೆ, ಪುರಾಣ+ಪುರಾಣ, ಪುರಾಣ+ಚರಿತ್ರೆ. ಈ ಮಿಶ್ರಣದಿಂದಾಗಿ ಹುಟ್ಟಿಕೊಂಡಿರುವ ಕಾವ್ಯಪ್ರಕಾರಗಳನ್ನು ತಂತ್ರದೃಷ್ಟಿಯಿಂದ ೧. ಶಾಸ್ತ್ರಕಾವ್ಯ (ಶಾಸ್ತ್ರ+ಪುರಾಣ, ಶಾಸ್ತ್ರ+ಚರಿತ್ರೆ), ೨. ಶ್ಲೇಷಕಾವ್ಯ (ಪುರಾಣ+ಪುರಾಣ, ಪುರಾಣ+ಚರಿತ್ರೆ), ೩. ಸಮಸ್ತಕಾವ್ಯ (ಪುರಾಣ+ಚರಿತ್ರೆ)ವೆಂದು ವರ್ಗೀಕರಿಸಬಹುದು. ಇವುಗಳಲ್ಲಿ ಪುರಾಣ ಮತ್ತು ಚರಿತ್ರೆಗಳನ್ನು ಸಮನ್ವಯಗೊಳಿಸಿಕೊಂಡ ಪಂಪಭಾರತ ಸಮಸ್ತ ಕಾವ್ಯ ವರ್ಗಕ್ಕೆ ಸೇರುತ್ತದೆ. ಇದಕ್ಕೂ ಪೂರ್ವದಲ್ಲಿ ಶಾಸ್ತ್ರಕಾವ್ಯ, ಶ್ಲೇಷಕಾವ್ಯಗಳ ಪ್ರಬುದ್ಧ ಪ್ರಯೋಗಗಳು ನಡೆದುದು ಪಂಪನಿಗೆ ಗೊತ್ತಿದೆ. ಬಹುಶಃ ಗಂಗ ಅರಸು ಎರೆಯಪ್ಪನನ್ನು ಶೂದ್ರಕ ಮಹಾರಾಜನೊಂದಿಗೆ ಸಮೀಕರಿಸಿ ಬರೆದಿರಬಹುದಾದ ಗುಣವರ್ಮನ ‘ಶೂದ್ರೂಕ’ ಹೆಸರಿನ ಸಮಸ್ತಕಾವ್ಯವೂ ಪಂಪನ ಕಣ್ಣುಮುಂದಿದೆ. ಈ ಎಲ್ಲ ಪ್ರಯೋಗಗಳನ್ನು ವಿವೇಚಿಸುತ್ತ, ಇವುಗಳ ಹಿನ್ನೆಲೆಯಲ್ಲಿ ಮಾಡಿದ ಪಂಪನ ‘ಸಮಸ್ತ ಕಾವ್ಯ’ ರಚನಾ ಪ್ರಯತ್ನವನ್ನು ಪರೀಕ್ಷಿಸಿ ಬೆಲೆ ಕಟ್ಟುವುದು, ಈ ಲೇಖನದ ಉದ್ದೇಶ.

ಶಾಸ್ತ್ರಕಾವ್ಯ

ಶಾಸ್ತ್ರವನ್ನು ಬರೆಯುವ ಸಂದರ್ಭದಲ್ಲಿ ಮೇಲೆ ಸೂತ್ರಗಳನ್ನು ಹೇಳಿ, ಪ್ರಯೋಗಗಳಿಗಾಗಿ ಪೌರಾಣಿಕ ವ್ಯಕ್ತಿ ಇಲ್ಲವೆ ಚಾರಿತ್ರಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಪದ್ಯಗಳನ್ನು ರಚಿಸುವುದು ಈ ಕಾವ್ಯದ ಉದ್ದೇಶ. ಇದರಿಂದಾಗಿ ಏಕಕಾಲಕ್ಕೆ ಶಾಸ್ತ್ರವನ್ನೂ ಕಾವ್ಯವನ್ನೂ ರಚಿಸಿದ ಲಾಭ ಪ್ರಾಪ್ತವಾಗುತ್ತದೆ. ಒಂದು ಪರಂಪರೆಯಾಗಿ ಬೆಳೆದು ಬಂದ ಈ ಬಗೆಯ ಸಾಹಿತ್ಯದಲ್ಲಿ ಎರಡು ಪ್ರಭೇದಗಳನ್ನು ಗುರುತಿಸಬಹುದು. ವ್ಯಾಕರಣ ಅಲಂಕಾರಗಳಂಥ ಯಾವುದೇ ಶಾಸ್ತ್ರವನ್ನು ನಿರೂಪಿಸುತ್ತ, ಪ್ರಯೋಗಗಳಿಗಾಗಿ ‘ಪುರಾಣಕಥೆ’ಗೆ ಸಂಬಂಧಿಸಿದ ಪದ್ಯಗಳನ್ನೇ ರಚಿಸುತ್ತ ಹೋಗುವುದು ಒಂದು ಪ್ರಭೇದವಾದರೆ, ಪ್ರಯೋಗಗಳಿಗಾಗಿ ಆಶ್ರಯ ನೀಡಿದ ‘ಅರಸನ ಚರಿತ್ರೆ’ಗೆ ಸಂಬಂಧಿಸಿದ ಪದ್ಯಗಳನ್ನೇ ರಚಿಸುತ್ತ ಹೋಗುವುದು ಇನ್ನೊಂದು ಪ್ರಭೇದವಾಗಿದೆ. ಈ ಎರಡೂ ವಿಧಗಳಲ್ಲಿ ಸಮಗ್ರಕಥೆಯನ್ನು ಸೂತ್ರ ಕಡಿದುಹೋಗದಂತೆ ಹೆಣೆಯಬಹುದು. ಇಲ್ಲವೆ ಕಥಾಸಮಗ್ರತೆಯ ಕಡೆಗೆ ಗಮನ ಕೊಡದೆ ಕೇವಲ ಬಿಡಿಪದ್ಯಗಳನ್ನು ರಚಿಸಬಹುದು.

ಭಟ್ಟಿಯ ‘ರಾವಣವಧ’ ಕೃತಿಯು ರಾಮಾಯಣಕಥೆಯಾದರೂ ಅಲಂಕಾರ ವ್ಯಾಕರಣ ನಿರೂಪಣೆ ಇದರ ವಸ್ತು. ಭಟ್ಟ ಭೀಮನ ‘ರಾವಣಾರ್ಜುನೀಯ’ವು ರಾವಣ ಮತ್ತು ಕಾರ್ತವೀರಾರ್ಜುನರ ಕಥೆಯನ್ನು ಹೇಳುತ್ತಿದ್ದರೂ ಇದು ಪಾಣಿನೀಯ ಅಷ್ಟಾಧ್ಯಾಯಿಯನ್ನು ಕುರಿತುದಾಗಿದೆ. ಪುರಾಣಕಥೆಯನ್ನಾಧರಿಸಿದ ಇಂಥ ಅನೇಕ ಶಾಸ್ತ್ರಗ್ರಂಥಗಳು ಸಂಸ್ಕೃತದಲ್ಲಿ ಹುಟ್ಟುಕೊಂಡು ಬಂದಿವೆ. ಇವೆಲ್ಲ ಪುರಾಣಕತೆಯನ್ನಾಧರಿಸಿ ಬರೆದ ಶಾಸ್ತ್ರಕಾವ್ಯಗಳು.

ಬರುಬರುತ್ತ ಪುರಾಣಕಥೆಗಳಿಗೆ ಬದಲು ರಾಜಚರಿತ್ರೆಯನ್ನು ವಸ್ತುವಾಗಿಟ್ಟುಕೊಂಡು ಇಂಥ ಶಾಸ್ತ್ರಕೃತಿಗಳನ್ನು ಬರೆಯುವ ಪದ್ಧತಿ, ನಮ್ಮ ದೇಶದಲ್ಲಿ ತಲೆಯೆತ್ತಿತು. ಏಕಕಾಲಕ್ಕೆ ಶಾಸ್ತ್ರವನ್ನೂ ರಾಜನ ಚರಿತ್ರೆಯನ್ನೂ ಪ್ರತಿಪಾದಿಸುವ ಸಾಹಿತ್ಯಪ್ರಕಾರವಿದು. ಇಂಥ ಕೃತಿಗಳಲ್ಲಿ ಹಲಾಯುಧನ ‘ಕವಿರಹಸ್ಯ’ ಮುಖ್ಯವಾದುದು. ಕ್ರಿಯಾಪದ ರೂಪಗಳನ್ನು ಪ್ರತಿಪಾದಿಸುವ ವ್ಯಾಕರಣವಾಗಿರುವ ಇದು, ರಾಷ್ಟ್ರಕೂಟ ಮೂರನೆಯ ಕೃಷ್ಣನ (೯೪೦-೫೬) ಪ್ರಶಂಸಾಪರ ಪದ್ಯಗಳನ್ನು ಉದಾಹರಣೆಗಾಗಿ ಬಳಸಿದೆ. ಹೇಮಚಂದ್ರನ ‘ಕುಮಾರಪಾಲಚೆರಿತ’ವು ಹೆಸರೇ ಸೂಚಿಸುವಂತೆ ಅಣಹಿಲವಾಡ ದೇಶದ ಕುಮಾರಪಾಲನ ಚರಿತ್ರೆಯೇ ಆಗಿದ್ದು, ಇದು ಸಂಸ್ಕೃತ ವ್ಯಾಕರಣ, ಪ್ರಾಕೃತ ವ್ಯಾಕರಣ ಪ್ರಕ್ರಿಯೆಯನ್ನು ವಿವರಿಸುವ ಕೃತಿಯಾಗಿದೆ. ಕನ್ನಡದಲ್ಲಿ ಕವಿರಾಜಮಾರ್ಗ [ಇದಕ್ಕೆ ನೃಪತುಂಗಾಭ್ಯುದಯ ಎಂಬ ಇನ್ನೊಂದು ಹೆಸರೂ ಇರುವುದನ್ನು ನಾನು ಬೇರೆಡೆ ತೋರಿಸಿಕೊಟ್ಟಿದ್ದೇನೆ; ನೃಪತುಂಗಾಭ್ಯುದಯ (ಕರ್ನಾಟಕ ಭಾರತಿ ೧೦-೩)] ಈ ಸಂಪ್ರದಾಯದ ಕೃತಿಯೆಂದು ಹೇಳಬಹುದು. ಅಲಂಕಾರ ಗ್ರಂಥವಾದ ಇದರಲ್ಲಿ ಉದಾಹರಣೆಗಾಗಿ ನೃಪತುಂಗನ ಪ್ರಶಂಸಾಪದ್ಯಗಳಿರುವುದನ್ನು ಗಮನಿಸಬೇಕು. ಪೊನ್ನನು ಅಲಂಕಾರ ಗ್ರಂಥ ಬರೆದಿರುವನೆಂದು ಕವಿಚರಿತೆಕಾರರು ಹೇಳುವುದರಿಂದಲೂ, ನೃಪತುಂಗಾಭ್ಯುದಯ ಮಾದರಿಯಲ್ಲಿ ಇವನ ಕೃತಿಗೆ ಭುವನೈಕರಾಮಾಭ್ಯುದಯ ಎಂಬ ಹೆಸರಿರುವುದರಿಂದಲೂ ಈತನ ಅನುಪಲಬ್ಧ ಭುವನೈಕರಾಮಾಭ್ಯುದಯವೂ ಒಂದು ಶಾಸ್ತ್ರಕಾವ್ಯವಾಗಿರಬಹುದೇ? ಎನಿಸುತ್ತದೆ. ಕನ್ನಡದಲ್ಲಿ ಅಪ್ರತಿಮವೀರಚರಿತೆ, ನರಪತಿಚರಿತೆಗಳು ಈ ಮಾದರಿಯ ಇತರ ಶಾಸ್ತ್ರಕೃತಿಗಳಾಗಿವೆ.

ಒಂದು ವೇಳೆ ಈ ಪ್ರಯೋಗವು ಬಿಡಿಪದ್ಯರಚನಾ ಪದ್ಧತಿಯಾಗಿದ್ದರೆ, ಕವಿಗೆ ಅರಸನ ಉದಾತ್ತ ಘಟನೆಗಳನ್ನು ಚಿತ್ರಿಸುವ ಸ್ವಾತಂತ್ರ್ಯವಿರುತ್ತದೆ. ಅದೇ ರೀತಿ ಸಮಗ್ರ ಕಥಾಪದ್ಧತಿಯಾಗಿದ್ದರೂ ಇಲ್ಲಿ ಉದಾತ್ತ ಚಾರಿತ್ರಿಕ ಅಂಶಗಳನ್ನು ಮಾತ್ರ ಹೆಣೆದುಕೊಂಡು ಹೋಗುವ ಸ್ವಾತಂತ್ರ್ಯವಿರುತ್ತದೆ. ಅದೇನೇ ಇದ್ದರೂ ಶಾಸ್ತ್ರಕೃತಿಯಲ್ಲಿ ಅರಸನನ್ನು ತಳುಕು ಹಾಕಿಕೊಂಡು ಹೋಗುವ ಸ್ಪಷ್ಟಪ್ರಯತ್ನವನ್ನು ಪ್ರಾಚೀನ ಕಾಲದಲ್ಲಿ ಕಾಣಬಹುದಾಗಿದೆ.

ಶ್ಲೇಷಕಾವ್ಯ

ಇದು ಶ್ಲೇಷೆಯ ಮೂಲಕ ಒಂದಕ್ಕಿಂತ ಹೆಚ್ಚು ಕಥೆಗಳನ್ನು ಮೇಳವಿಸಿಕೊಂಡು ಮುನ್ನಡೆವ ಕಾವ್ಯಪ್ರಯೋಗ. ಶಾಸ್ತ್ರಕಾವ್ಯದಂತೆ ಒಂದು ಪ್ರಯೋಗವಾಗಿರುವ ಇದು, ಪ್ರತಿಭೆಯ ಜೊತೆ ಪಾಂಡಿತ್ಯವನ್ನೂ ಬಯಸುತ್ತದೆ. ರಾಮಾಯಣಕಥೆ ಮತ್ತು ಮಹಾಭಾರತ ಕಥೆಗಳನ್ನೊಳಗೊಂಡ ಧನಂಜಯನ (೧೧೨೩-೪೦) ರಾಘವಪಾಂಡವೀಯ, ರಾಮಕಥಾ ಮತ್ತು ನಳಕಥಾಗಳನ್ನೊಳಗೊಂಡ ಹರಿದತ್ತಸೂರಿಯ ರಾಘವನೈಷಧೀಯ, ಪಾರ್ವತಿ ಪರಮೇಶ್ವರರ ಮತ್ತು ರುಕ್ಮಿಣೀಕೃಷ್ಣರ ವಿವಾಹಗಳನ್ನು ವರ್ಣಿಸುವ ಚಾಲುಕ್ಯ ಸೋಮದೇವನ ಪಾರ್ವತಿರುಕ್ಮೀಣೀಯ, ಭಾಗವತ ಮತ್ತು ರಾಮಾಯಣಗಳನ್ನೊಳಗೊಂಡ ವೆಂಕಟಾಧ್ವರಿಯ ಯಾದವರಾಘವೀಯಗಳು ಸುಪ್ರಸಿದ್ಧ ಶ್ಲೇಷಕಾವ್ಯ ಅಥವಾ ದ್ವಿಸಂಧಾನ ಕಾವ್ಯಗಳಾಗಿವೆ. ಈ ಪ್ರಯೋಗದ ಬೆಳವಣಿಗೆಯೆಂಬಂತೆ ರಾಮಾಯಣ, ಭಾರತ, ಭಾಗವತಗಳ ಮುಪ್ಪರಿಯಾಗಿ ಹುಟ್ಟಿದ “ರಾಘವ-ಪಾಂಡವ-ಯಾದವೀಯ” (ಕಥಾತ್ರಯೀ)ವು ತ್ರಿಸಂಧಾನ ಕಾವ್ಯವಾಗಿದೆ. ಪುರಾಣವಸ್ತುವನ್ನೊಳಗೊಂಡ ಈ ಸಂಸ್ಕೃತ ಸಂಧಾನಕಾವ್ಯಗಳನ್ನು ಬರೆದವರು ಸಾಮಾನ್ಯವಾಗಿ ಕನ್ನಡಿಗರಾಗಿದ್ದರೂ, ಕನ್ನಡ ಭಾಷೆಯಲ್ಲಿ ಇಂಥ ಒಂದೂ ಶ್ಲೇಷಕಾವ್ಯ ಹುಟ್ಟದಿರುವುದು ಸೋಜಿಗದ ವಿಷಯವೆನಿಸಿದೆ.

ಇವೆಲ್ಲ ಪುರಾಣಕಥೆಗಳನ್ನಾಧರಿಸಿ ಬರೆದ ಸಂಸ್ಕೃತ ಸಂಧಾನಕಾವ್ಯಗಳು. ಇದೇ ರೀತಿ ಸಂಸ್ಕೃತದಲ್ಲಿ ರಾಜಚರಿತ್ರೆಯನ್ನಾಧರಿಸಿ ಹುಟ್ಟಿದ ದ್ವಿಸಂಧಾನ ಕಾವ್ಯವೆಂದರೆ ಸಂಧ್ಯಾಕರನಂದಿಯ (೧೧ನೆಯ ಶತಮಾನ)ರಾಮಚರಿತೆ. ಇದು ಶ್ಲೇಷೆಯ ಮೂಲಕ ರಾಮಾಯಣದ ಶ್ರೀರಾಮನ ಕಥೆ ಮತ್ತು ಬಂಗಾಲದ ರಾಮಪಾಲ ಅರಸನ ಚರಿತ್ರೆಗಳನ್ನು ವಿವರಿಸುತ್ತದೆ. ರಾಮನಿಗೆ ಸಂಬಂಧಿಸಿದ ಉದಾತ್ತ ಘಟನೆಗಳನ್ನು ತನ್ನ ಅರಸು ರಾಮಪಾಲನಿಗೆ ಈತ ಶ್ಲೇಷೆಯಿಂದ ಹೊಂದಿಸಿರಬಹುದು. ರಾಮನ ಹೆಂಡತಿಯಾದ ಸೀತೆಯನ್ನು ರಾವಣ ಅಪರಹರಿಸಿದಂಥ ಅನುದಾತ್ತ ಘಟನೆಗಳನ್ನು ಶ್ಲೇಷೆಯ ಮೂಲಕ ಪರಿಹರಿಸಿಕೊಂಡಿರಲಿಕ್ಕಿಲ್ಲ. ಅದೇನೇ ಇದ್ದರೂ ಪುರಾಣಕಥೆಗಳೊಂದಿಗೆ ಆಶ್ರಯದಾತ ಅರಸನ ಕಥೆಯನ್ನು ಹೊಂದಿಸಿಕೊಂಡು ಹೋಗುವ ಉಪಕ್ರಮ ಶ್ಲೇಷಕಾವ್ಯಗಳಲ್ಲಿ ಬೆಳೆದುಬರುತ್ತಿದ್ದುದರ ದ್ಯೋತಕವಿದು.

ಸಮಸ್ತ ಕಾವ್ಯ

ಹೀಗೆ ಶಾಸ್ತ್ರಕಾವ್ಯ, ಶ್ಲೇಷಕಾವ್ಯಗಳು ತಮ್ಮ ಜೊತೆಗೆ ಪುರಾಣಕಥೆಗಳನ್ನೋ ಆಶ್ರಯ ನೀಡಿದ ಅರಸರ ಕಥೆಗಳನ್ನೋ ಪ್ರತಿಪಾದಿಸುತ್ತ ಬೆಳೆದುಬಂದವು. ಅರಸರ ವಿಷಯವನ್ನು ಹೊಂದಿಸಿಕೊಳ್ಳುವ ಈ ಕಾವ್ಯ ಪರಂಪರೆಯೇ ಪಂಪಾದಿಗಳಿಗೆ ‘ಸಮಸ್ತ ಕಾವ್ಯ’ ಎಂಬ ಹೊಸಪ್ರಯೋಗವನ್ನು ಆವಿಷ್ಕರಿಸಲು ಪ್ರೇರಣೆ ನೀಡಿರಬಹುದು. ಇದರ ಫಲವಾಗಿ ಗುಣವರ್ಮನ ಶೂದ್ರಕ, ಪಂಪನ ಭಾರತ, ರನ್ನನ ಗದಾಯುದ್ಧಗಳೆಂದ ಸಮಸ್ತ ಕಾವ್ಯಗಳು ಕನ್ನಡದಲ್ಲಿ ಹುಟ್ಟಿಬಂದವು. ಬಹುಶಃ ಇದು ಕನ್ನಡಿಗರು ಮಾತ್ರ ಮಾಡಿದ, ಕನ್ನಡ ಭಾಷೆಯಲ್ಲಿ ಮಾತ್ರ ನಡೆದ ಪ್ರಯೋಗವೆಂದು ತೋರುತ್ತದೆ. ಇದರ ಒಂದು ಪರಿಮಿತಿಯೆಂದರೆ ಶಾಸ್ತ್ರಕಾವ್ಯಗಳು ಶಾಸ್ತ್ರ-ಪುರಾಣ, ಶಾಸ್ತ್ರ-ಚರಿತ್ರೆಗಳನ್ನೂ, ಶ್ಲೇಷಕಾವ್ಯಗಳು ಪುರಾಣ-ಪುರಾಣ, ಪುರಾಣ-ಚರಿತ್ರೆಗಳನ್ನೂ ಮೇಳವಿಸಿಕೊಂಡರೆ ಈ ಸಮಸ್ತ ಕಾವ್ಯವು ಪುರಾಣಿ-ಇತಿಹಾಸಗಳನ್ನು ಮಾತ್ರ ಮೇಳವಿಸಿಕೊಳ್ಳುತ್ತದೆ. ಇಷ್ಟು ಹಿನ್ನೆಲೆಯಲ್ಲಿ ‘ಸಮಸ್ತಕಾವ್ಯ’ ಹೆಸರಿನ ಕನ್ನಡಿಗರ ಹೊಸ ಕಾವ್ಯಪ್ರಯೋಗವನ್ನು ವಿಮರ್ಶಿಸಬಹುದು.

ಕಾವ್ಯಶಾಸ್ತ್ರ, ಶ್ಲೇಷಕಾವ್ಯಗಳ ಸುಳುಹು ಹಿಡಿದು ಹುಟ್ಟಿದ ಈ ಕಾವ್ಯಪ್ರಯೋಗ ಬಹುಶಃ ಕನ್ನಡದಲ್ಲಿ ಮೊದಲನೆಯ ಗುಣವರ್ಮನ ಶೂದ್ರಕದಲ್ಲಿ ಕಂಡುಬರುತ್ತಿದ್ದರೂ ಅದು ಉಪಲಬ್ಧವಿಲ್ಲ. ಈಗಿನ ಮಟ್ಟಿಗೆ ಈ ಕಾವ್ಯಪ್ರಯೋಗದ ಲಭ್ಯ ಪ್ರಥಮಕೃತಿ ಪಂಪಭಾರತ. ಪಂಪನೂ “ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೇಳ್ವೊಡೆ ಪಂಪನೆ ಪೇಳ್ಗುಂ”, “ಈ ಕಥೆಯೊಳ್ತಗುಳ್ಚಿ ಪೋಲಿಯೋಡೆನಗಳ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್‌”, “ಆರೂಢಸರ್ವಜ್ಞನಂ… ನಾಯಕಂ ಮಾಡಿ ಸಂದರ್ಜುನ ನೊಳ್ಪೋಲ್ವೀ ಕಥಾಭಿತ್ತಿಯನನುನಯದಿಂ ಪೇಳಲೆಂದೆತ್ತಿಕೊಂಡೆಂ” ಎಂದು ತಾನು ಏನೋ ಒಂದು ದೊಡ್ಡ ಪ್ರಯೋಗ ಮಾಡಹೊರಟಿದ್ದೇನೆ ಎಂಬಂತೆ ಪದೇ ಪದೇ ಹೇಳಿಕೊಳ್ಳುತ್ತಾನೆ. ಇಂದಿನ ವಿದ್ವಾಂಸರೂ ಈ ಮಾತಿನ ಸಾರ್ಥಕತೆಯನ್ನು ಆಳವಾಗಿ ವಿಮರ್ಶಿಸದೆ ಹೊಗಳುತ್ತ ನಡೆದಿದ್ದಾರೆ. ಸಾಮಾನ್ಯವಾಗಿ ಹಿರಿಯ ತಲೆಮಾರಿನವರು ವ್ಯಕ್ತಪಡಿಸಿದ ಸಿದ್ಧ ಹೇಳಿಕೆಗಳು ವೇದವಾಕ್ಯಗಳಾಗಿ ತೇಲುತ್ತ ಬರುವುದು ಸಹಜ. ಯಾವುದೋ ಕಾಲದಲ್ಲಿ, ಆ ಕಾಲದ ಪರಿಮಿತ ತಿಳುವಳಿಕೆಯ ಹಿನ್ನೆಲೆಯಲ್ಲಿ ಅವರು ಆಡಿದ ಇಂಥ ಮಾತುಗಳು ತಲೆಮಾರಿನಿಂದ ತಲೆಮಾರಿಗೆ ಧ್ವನಿಸಿ, ಆ ಬಗ್ಗೆ ಹೊವಿಚಾರ ಮಾಡಲೂ ಅವಕಾಶ ಕೊಡುವುದಿಲ್ಲ. ಈಗ ಅಂಥ ಹೇಳಿಕೆಗಳ ಮರುಪರಿಶೀಲನೆ ಕನ್ನಡದಲ್ಲಿ ಅವಶ್ಯ ನಡೆಯಬೇಕಾಗಿದೆ. ಹೀಗೆ ಪರಿಶೀಲಿಸಬೇಕಾದವುಗಳಲ್ಲಿ  ಪಂಪನ ‘ತಗುಳ್ಚಿ ಪೇಳುವ’ ಉಪಕ್ರಮ ಅಂದರೆ ‘ಸಮಸ್ತ ಕಾವ್ಯ’ ಪದ್ಧತಿಯೂ ಒಂದು.

ಪಂಪಭಾರತದ ಪ್ರಮಾಶ್ಚಾಸದಲ್ಲಿ ಆಶ್ರಿತರಾಜನ ವಂಶಾವಳಿಯನ್ನು ವರ್ಣಿಸಲಾಗಿದೆ. ಇದು ಇತಿಹಾಸ, ಸಾಹಿತ್ಯ ಈ ಎರಡೂ ದೃಷ್ಟಿಯಿಂದಲೂ ನಿಸ್ಸಂದೇಹವಾಗಿ ಉತ್ತಮಭಾಗ. ಆದರೆ ಇದಕ್ಕೂ ತಗುಳ್ಚಿ ಪೇಳುವಿಕೆಗೂ ಏನೂ ಸಂಬಂಧವಿಲ್ಲ. ತಗುಳ್ಚಿ ಪೇಳುವ ಪ್ರಯೋಗ ನಡೆದುದು ಪಂಪಭಾರತದ ಮುಂದಿನ ಭಾಗದಲ್ಲಿ. ಅದು ಮಹಾಭಾರತದ ಎಲ್ಲ ಪಾತ್ರ-ಎಲ್ಲ ಘಟನೆಗಳನ್ನು ಅರಿಕೇಸರಿ ಪರಿಸರದ ಎಲ್ಲ ಪಾತ್ರ-ಎಲ್ಲ ಘಟನೆಗಳೊಂದಿಗೆ ತಗುಳ್ಚುವುದಲ್ಲ, ಮಹಾಭಾರತದ ಒಂದು ಪಾತ್ರವಾದ ಅರ್ಜುನನ ಪ್ರಸಂಗದಲ್ಲಿ ಅಂದರೆ ಆತನ ಘಟನೆಗಳ ಪ್ರಸಂಗದಲ್ಲಿ ‘ಅರ್ಜುನ’ ಪದಕ್ಕೆ ಬದಲು ಆಗಾಗ ‘ಅರಿಕೇಸರಿ’ ಪದವನ್ನು ಇಡುತ್ತ ಹೋಗುವುದಾಗಿದೆ.

ಇದು ಮೇಲೆ ಹೇಳಿದ ಶಾಸ್ತ್ರಕಾವ್ಯ ಮತ್ತು ಶ್ಲೇಷಕಾವ್ಯಗಳ ರೀತಿಗಿಂತ ಭಿನ್ನವಾಗಿದೆ. ಶಾಸ್ತ್ರಕಾವ್ಯವು ಹೇಳಿಕೊಳ್ಳುವಂಥ ಪ್ರಯೋಗವೇನಲ್ಲ, ಅಲ್ಲಿ ಉದಾಹರಣೆಗಳಿಗಾಗಿ ರಾಜನ ಪರವಾದ ಪದ್ಯಗಳನ್ನು ರಚಿಸಲಾಗುತ್ತದೆ. ಶ್ಲೇಷಕಾವ್ಯ ಮಾತ್ರ ಖಂಡಿತವಾಗಿಯೂ ಒಂದು ಕಾವ್ಯಪ್ರಯೋಗ. ವಿದ್ವತ್ತಿನ ಭೂಮಿಕೆಯ ಮೇಲೆ ಏಳಬೇಕಾದ ಈ ಸೌಧ ಕೇವಲ ಒಂದು ಪ್ರಕಾರವಲ್ಲ, ಒಂದು ಪ್ರಯತ್ನ. ಏಕಕಾಲಕ್ಕೆ ಶ್ಲೇಷೆಯ ಮೂಲಕ ಎರಡೂ ಕಥೆಗಳನ್ನು ಬೆಳೆಸಿಕೊಂಡು ಹೋಗಿ ಎರಡು ಪ್ರತ್ಯೇಕ ಗುರಿಗಳನ್ನು ಸಾಧಿಸುವ ಸಾಹಸ. ಆದರೆ ‘ಸಮಸ್ತಕಾವ್ಯ’ ಪದ್ಧತಿಯ ಮೂಲಕ, ಪೌರಾಣಿಕ ಮತ್ತು ಚಾರಿತ್ರಿಕ ಪಾತ್ರಗಳನ್ನು ಸಮನ್ವಯೀಕರಿಸುವೆನೆಂಬ ಪಂಪನ ಮಾತು ಬರಿಯ ಮಾತಿನ ಸ್ತರದಲ್ಲಿ ನಿಲ್ಲುತ್ತದೆಯೇ ಹೊರತು, ಸಾರ್ಥಕತೆಯ ಮಟ್ಟಕ್ಕೆ ಏರುವುದೇ ಇಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ‘ಅರ್ಜುನ’ ಪದಕ್ಕೆ ಪ್ರತಿಯಾಗಿ ‘ಅರಿಕೇಸರಿ’ ಪದವನ್ನೋ ಅವನ ಬಿರುದನ್ನೋ ಬಳಸಿದರೆ ಏನು ಮಾಡಿದಂತಾಯಿತು? ಇದರಿಂದ ಈ ಕಡೆ ಅರಿಕೇಶರಿಗೂ ನ್ಯಾಯ ಒದಗಿಸಲಿಲ್ಲ, ಆ ಕಡೆ ಅರ್ಜುನನಿಗೂ ನ್ಯಾಯ ಒದಗಿಸಲಿಲ್ಲ. ಹೀಗಾಗಿ ‘ತಗುಳ್ಳಿ ಪೇಳುವೆ’ನೆಂಬ ಆತನ ಮಾತು ಕೇವಲ ತೋರಿಕೆಯಾಗಿ ಉಳಿಯುತ್ತದೆ. ೧. ಅರ್ಜುನನ ಪ್ರಶಸ್ತ ಘಟನೆಗಳು, ೨. ಅರ್ಜುನನ ಅಪ್ರಶಕ್ತಘಟನೆಗಳು, ೩. ಅರಕೇಸರಿಗೆ ಮಾತ್ರ ಸಂಬಂಧಿಸಿದ ಘಟನೆಗಳು, ೪. ಅರ್ಜುನನಿಗೆ ಮಾತ್ರ ಸಂಬಂಧಿಸಿದ ಘಟನೆಗಳು ಹೀಗೆ ನಾಲ್ಕು ಬಗೆಯ ಘಟನೆಗಳಲ್ಲಿ ಪಂಪನ ಈ ಪ್ರತಿಜ್ಞೆ ತುಳಿದ ದಾರಿಯನ್ನು ಇಲ್ಲಿ ನೋಡಬಹುದು.

೧. ಅರ್ಜುನನ ಪ್ರಶಸ್ತ ಘಟನೆಗಳು: ಅರ್ಜುನನ ಬದುಕಿನ ಪ್ರಶಸ್ತ ಘಟನೆಗಳನ್ನು ಅರಿಕೇಸರಿಗೆ ತಗುಳ್ಚಿ ವರ್ಣಿಸುವಾಗ ನಮ್ಮ ಮನಸ್ಸನ್ನು ಆವರಿಸುವವನು ಅರ್ಜುನನೇ ಹೊರತು ಅರಿಕೇಸರಿ ಅಲ್ಲ. ಉದಾ: “ದೇವೇಂದ್ರನೊಳರ್ಧಾಸನಮೇರಿದ ಗುಣಾರ್ಣವನ ಮಹಿಮೆಯಂ” ಎನ್ನುತ್ತ, ಗುಣಾರ್ಣವ ಎಂಬ ಅರಿಕೇಸರಿಯ ಬಿರುದನ್ನು ಎತ್ತಿ ಹೇಳಿದ್ದರೂ ಇಲ್ಲಿ ನಮಗೆ ತಟ್ಟನೇ ನೆನಪಾಗಿ, ಮನದಲ್ಲಿ ನಿಲ್ಲುವವ ಅರ್ಜುನನೇ ಹೊರತು ಅರಿಕೇಸರಿಯಲ್ಲ. ಇಂಥ ಅನೇಕ ಘಟನೆಗಳು ಪಂಪಭಾರತದಲ್ಲಿ ಸಿಗುತ್ತವೆ.

ಕೆಲವೊಮ್ಮೆ ಘಟನೆ ಪ್ರಶಸ್ತವಾಗಿದ್ದರೂ ತಗುಳ್ಚಿ ಹೇಳಲು ಮಾಡಿದ ಪ್ರಯತ್ನ ಕಾರಣವಾಗಿ, ಇಡಿ ಹೇಳಿಕೆ ಅಸಂಬದ್ಧವಾಗುವುದಕ್ಕೆ ಅರ್ಜುನ ವ್ಯಕ್ತಪಡಿಸುವ ಈ ಕೆಳಗಿನ ಪದ್ಯವನ್ನು ನೋಡಬಹುದು.

ನರಸಿಂಗಂಗಂ ಜಾಕ |
ಬ್ಬರಸಿಗಮಳವೊದವೆ
ಪುಟ್ಟೆ ಪುಟ್ಟಿಯುಮರಿಕೇ ||
ಸರಿಯೆನೆ
ನೆಗಳ್ದುಮರಾತಿಯ |
ಸರಿದೊರೆಗಂ
ಬಂದೆನಪ್ಪೊಡಾಗಳ್ನಗಿರೇ ||

ಅರ್ಜುನ ಹೇಳುವ ಈ ಮಾತು ತೀರ ಅಸಂಬಂಧ್ದತೆಯನ್ನೇ ಸೃಷ್ಟಿಸುತ್ತದೆ.

೨. ಅರ್ಜುನನ ಅಪ್ರಶಸ್ತ ಘಟನೆಗಳು: ಅರ್ಜುನನ ಜೀವನದಲ್ಲಿ ಪ್ರಶಸ್ತದಂತೆ ಕೆಲವು ಅಪ್ರಶಸ್ತ ಘಟನೆಗಳೂ ಆಗಾಗ ಜರುಗಿವೆ. ಇಂಥ ಪ್ರಸಂಗಗಳಲ್ಲಿ ಅರ್ಜುನನ ಜೊತೆ ಅರಿಕೇಸರಿಗೂ ಅವಮಾನ ಅಂಟಿಕೊಂಡು ಬಿಡುತ್ತದೆ. ವಿರಾಟನಲ್ಲಿ ಅರ್ಜುನ ಬಳೆತೊಟ್ಟು, ಸೀರೆಯುಟ್ಟು ಬೃಹನ್ನಳೆಯಾದನೆಂದೂ. ಗೋಗ್ರಹಣಪ್ರಸಂಗದಲ್ಲಿ “ಬಿಡೆ ಪಿಣಿಲಂ ಕುರುಧ್ವಜಿನಿ ತೊಟ್ಟನೆ ಬಾಯನೆ ಬಿಟ್ಟುದು ರಥಮನೇರಲೊಡಂ ಪಡೆಮೆಚ್ಚೆಗಂಡನಾ” ಎನ್ನುತ್ತ, ಪಡೆಮೆಚ್ಚಗಂಡ ಬಿರುದಿನ ಅರಿಕೇಸರಿ ಹೆರಳನ್ನು ಬಿಚ್ಚಿಕೊಂಡನೆಂದೂ ಸೂಚಿಸುವುದು ಅರಿಕೇಸರಿಯ ವಿಷಯವಾಗಿ ಅಪ್ರಶಕ್ತ ಘಟನೆಗಳೇ ಆಗುತ್ತವೆ. ಯುದ್ಧದಲ್ಲಿ ಕರ್ಣನ ಬಾಣಹತಿಗೆ ಅರ್ಜುನನ ಕಿರೀಟ ಭೂಮಿಗೆ ಬಿದ್ದು, ಜಡೆಯ ಗಂಟು ಚಲ್ಲಾಪಿಲ್ಲಿಯಾದುದು ಅರಿಕೇಸರಿಗೆ ಅವಮಾನಕಾರಕವೇ ಆಗಿದೆ. ಇಂಥ ಘಟನೆಗಳು ತಳಳ್ಚುವುದಕ್ಕೆ ವಸ್ತುವಾಗುವಲ್ಲಿ, ಅರ್ಜುನನೊಂದಿಗೆ ಅರಿಕೇಸರಿಗೂ ಅಪ್ರಸಿದ್ಧಿಯನ್ನುಂಟು ಮಾಡುತ್ತವೆ.

೩. ಅರಿಕೇಸರಿಗೆ ಮಾತ್ರ ಸಂಬಂಧಿಸಿದ ಘಟನೆಗಳು: ಕೆಲವೊಮ್ಮೆ ಅರಿಕೇಸರಿಗೆ ಮಾತ್ರ ಸಂಬಂಧಿಸಿದ ನೇರ ಘಟನೆಗಳು ಸೇರಿಕೊಂಡು ಒಟ್ಟು ಮಹಾಭಾರತದ ಕಥಾ ಓಟದಲ್ಲಿ ಸಾಮರಸ್ಯಗೊಳ್ಳದೆ ಪ್ರತ್ಯೇಕವಾಗಿ ನಿಲ್ಲುತ್ತವೆ. ಅಂದರೆ ಅರ್ಜುನನ ಘಟನೆಗಳನ್ನು ಹೇಳುತ್ತ ನಡೆದು, ಅದನ್ನು ತಟ್ಟನೆ ನಿಲ್ಲಿಸಿ, ಅರಿಕೇಸರಿಗೆ ಮಾತ್ರ ಸಂಬಂಧಿಸಿದ ಘಟನೆಗಳನ್ನು ಹೇಳತೊಡಗುವಲ್ಲಿ ಎರಡಕ್ಕೂ ಸಂಬಂಧ ತಪ್ಪಿ, ಅರಿಕೇಸರಿಯ ಆ ಘಟನೆಗಳು ಮಹಾಭಾರತಕ್ಕೆ ಅನವಶ್ಯ ತೇಪೆ ಹಚ್ಚಿದಂತೆ ಕಾಣುತ್ತವೆ.

“ತ್ರಿಣೇತ್ರನೊಳ್ಕಾದಿ ಪಾಶುಪತಾಸ್ತ್ರಮಂ ಪಡೆದ ಕದನತ್ರಿಣೇತ್ರನ ಗಂಡ ಗರ್ವಮುಮನಿಂದ್ರಲೋಕಕ್ಕೆ ಪೋಗಿ ದೇವೇಂದ್ರನ ಪಗೆವರಪ್ಪ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರಂ ಪಡಲ್ವಡಿಸಿದ ಪಡೆಮೆಚ್ಚಿ ಗಂಡನ ಗಂಡುಮಂ, ದೇವೇಂದ್ರನೊಳರ್ಧಾಸನಮನೇರಿದ ಗುಣಾರ್ಣವನ ಮಹಿಮೆಯುಮಂ, ಚಳುಕ್ಯಳತಿಳಕನಪ್ಪ ವಿಜಯಾದಿತ್ಯಂಗೆ ಗೋವಿಂದರಾಜಂ ಮುಳಿಯೆ ತಳರದೆ ಪೆರಗಿಕ್ಕಿ ಕಾದ ಶರಣಾಗತ ಜಳನಿಧಿಯ ಪೆಂಪುಮಂ, ಗೊಜ್ಜಿಗನೆಂಬ ಸಕಳ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿರಿದು ಗೆಲ್ದ ಸಾಮಂತಚೂಡಾಮಣಿಯ ವೀರಮುಮಂ…”. ಇಲ್ಲಿಯ ಪೂರ್ವಾರ್ಧ, ಉತ್ತರಾರ್ಧ ವಿವರಗಳು ಹೊಂದಿಕೊಳ್ಳದೆ ಪ್ರತ್ಯೇಕ ನಿಲ್ಲುತ್ತವೆ.

೪. ಅರ್ಜುನನಿಗೆ ಮಾತ್ರ ಸಂಬಂಧಿಸಿದ ಘಟನೆಗಳು: ಕೆಲವು ಸಲ ಅರಿಕೇಸರಿಯನ್ನು ಕೈಬಿಟ್ಟು, ನೇರವಾಗಿ ಅರ್ಜುನನನ್ನೇ ವರ್ಣಿಸುತ್ತ ಹೋಗುತ್ತಾನೆ, ಪಂಪ. ಆಗ ನಮಗೆ ಅರಿಕೇಸರಿ ನೆನಪಿಗೆ ಬರುವುದಿಲ್ಲ. ಉದಾ. “ವಿಜಯಂ ನೆಲಕಿಕ್ಕಿ ಗಂಟಲಂ ಮೆಟ್ಟದೆಕೊಂಡನೇ ಹರನ ಪಾಶುಪತಾಶ್ತ್ರಮನಿಂದ್ರಕೀಳದೊಳ್‌…”. ‘ಗಂಧರ್ವರುಯ್ವಂದು ನಿನ್ನಂ, ಕರುವಿಟ್ಟಂತಿರ್ದುದಿಲ್ಲಾ? ನೆರೆದ ಕುರುಬಲಂ, ತಂದವಂ ಪಾರ್ಥನಲ್ಲಾ?’ ಇಂಥ ಹೇಳಿಕೆಗಳಲ್ಲಿ ಅರ್ಜುನನೇ ವಿಜೃಂಭಿಸಿ, ಅರಿಕೇಸರಿ ನೆನಪಿಗೂ ಬರದೆ ಹೋಗುತ್ತಾನೆ. ಇದು ‘ತಗುಳ್ಚಿ ಪೇಳಿದ’ ಕಾವ್ಯವೆಂಬ ಅಂಶ ನಮ್ಮ ಮನದಲ್ಲಿ ಸುಳಿಯುವುದೇ ಇಲ್ಲ.

ಈ ನಾಲ್ಕು ಬಗೆಗಳಲ್ಲದೆ ಆಗಾಗ ಅರ್ಜುನ ಅರಿಕೇಸರಿಗಳ ಸಮೀಕರಣದ ಜೊತೆ “ಸಹಜಮನೋಜನಂ ನಾಡೋಜನಂ” ಎಂದು ತನ್ನನ್ನೂ ಸಮೀಕರಿಸಿಕೊಂಡಿದ್ದಾನೆ, ಪಂಪ. ಇದೆಲ್ಲವನ್ನು ನೋಡಿದರೆ ಈ ಬಗೆಯ ತಗುಳ್ಚಿ ಪೇಳುವಲ್ಲಿ ಅಂಥ ವಿಶೇಷತೆ ಇಲ್ಲ, ಇದು ಒಂದು ‘ಕಾವ್ಯ ಪ್ರಯೋಗ’ವು ಅಲ್ಲ, ಸ್ವತಃ ಕವಿಯೇ ಈ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ ಎನಿಸುತ್ತದೆ. ಆದುದರಿಂದ ಅಲ್ಲಲ್ಲಿ ತನ್ನ ಅರಸರ ಹೆಸರನ್ನು ಸೇರಿಸಿದ ಒಂದು ‘ಸರಳಕ್ರಿಯೆ’ಯಿದು ಎನ್ನಬಹುದು. ಈ ಕ್ರಿಯೆಯನ್ನು ಪದೇ ಪದೇ ಮಾಡಿದ್ದರೆ ಕಾವ್ಯ ವಾಚನಪ್ರಸಂಗದಲ್ಲಿ ಅರಿಕೇಸರಿ ಮೇಲಿಂದ ಮೇಲೆ ಕಣ್ಣಿಗೆ ಬೀಳುತ್ತಿದ್ದ. ಅದೆಲ್ಲವನ್ನು ಬಿಟ್ಟು ಹುಣ್ಣಿಮೆಗೊಮ್ಮೆ, ಅಮವಾಸ್ಯೆಗೊಮ್ಮೆ ಎಂಬಂತೆ ಅರಿಕೇಸರಿಯನ್ನು ಪ್ರಸ್ತಾಪ ಮಾಡುವುದರಿಂದ, ಒಮ್ಮೊಮ್ಮೆ ಆತನ ಅಪ್ರಸಿದ್ಧ ಬಿರುದುಗಳನ್ನೂ ಬಳಸುವುದರಿಂದ ಪಂಪಭಾರತವನ್ನು ಓದುವಾಗ ಅರಿಕೇಸರಿ ನಿರಂತರವಾಗಿ ಕಾವ್ಯದಲ್ಲಿ ನಿಂತಿರುವ ಅನುಭವವೇ ಉಂಟಾಗುವುದಿಲ್ಲ. ಗುಣವರ್ಮನ ಶೂದ್ರಕವೂ ಈಗ ಲಭ್ಯವಿಲ್ಲದ ಕಾರಣ, ಪಂಪಭಾರತವನ್ನು ಬಿಟ್ಟರೆ ನಮ್ಮ ಕೈಗೆ ಉಳಿದು ಬಂದಿರುವ ಇನ್ನೊಂದು ಏಕೈಕ ತಗುಳ್ಚಿ ಪೇಳಿದ ಕಾವ್ಯವೆಂದರೆ ಗದಾಯುದ್ಧ [ಭುವನೈಕ ರಾಮಾಭ್ಯುದಯ: ಒಂದು ಅಲಂಕಾರ ಗ್ರಂಥ (ಸಾ. ಪ. ೬೭-೨) ಈ ಲೇಖನವನ್ನು ನೋಡಬಹುದು]. ಇದು ಪಂಪಭಾರತದ ದಾರಿಯಲ್ಲಿಯೇ ನಡೆದಿರುವುದರಿಂದ ಆ ಕಾವ್ಯಕ್ಕೆ ಹೇಳಿದ ಮಾತುಗಳು ಇದಕ್ಕೂ ಅನ್ವಯಿಸುತ್ತವೆ. ನಾಗವರ್ಮನ ಕರ್ಣಾಟ ಕಾದಂಬರಿ, ಆಂಡಯ್ಯನ ಕಬ್ಬಿಗರ ಕಾವಗಳೂ ತಗುಳ್ಚಿ ಪೇಳಿದ ಕಾವ್ಯಗಳೆಂದು ಕೆಲವು ಭಾವಿಸುವರಾದರೂ ಅವು ಪಂಪಭಾರತ, ಗದಾಯುದ್ಧಗಳಿಂದ ಪ್ರತ್ಯೇಕ ನಿಲ್ಲುತ್ತವೆ.

ಪಂಪ ತನ್ನ ಯುಗವನ್ನು ಮಹಾಭಾರತದ ಕಥೆಯೊಂದಿಗೆ ಸಮನ್ವಯಮಾಡಿರುವುದು ನಿಜ. ಆದರೆ ಇದು ಯಾವುದೇ ಉತ್ತಮ ಕವಿ ಮಾಡಬೇಕಾದ ಕೆಲಸ. ಕೈಗೆತ್ತಿಕೊಂಡಿರುವ ಪ್ರಾಚೀನ ಕಥಾಮಾಧ್ಯಮದ ಮೂಲಕ ತನ್ನ ಯುಗದ ಮೌಲ್ಯಗಳನ್ನು ಪ್ರಕಟಿಸುವದು ಆತನ ಹೊಣೆಯಾಗಿರುತ್ತದೆ. ಹೀಗಾಗಿ ದ್ವಾಪರಯುಗದ ಕಥೆ ಮತ್ತು ೧೦ನೆಯ ಶತಮಾನದ ಕನ್ನಡಿಗರ (ವೀರ)ಮೌಲ್ಯಗಳನ್ನು ಸಮೀಕರಿಸುವುದೇ ‘ಪಂಪನ ತಗುಳ್ಚಿ ಪೇಳಿದ’ ರೀತಿ ಎಂದು ವಾದಿಸಿದರೆ, ಅದು ಪಂಪನನ್ನು ರಕ್ಷಿಸಲು ಹೇಳಿದ ಮಾತಾಗುತ್ತದೆ. ಏಕೆಂದರೆ ತಗುಳ್ಚಿ ಪೇಳುವೆನೆಂಬ ಪಂಪನ ಪ್ರತಿಜ್ಞೆ ಅರಿಕೇಸರಿ ಅರ್ಜುನರ ಜೀವನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದುದರಿಂದ ಪಂಪಭಾರತ ನಿಸ್ಸಂದೇಹವಾಗಿ ಮಹಾಕಾವ್ಯವಾಗಿದ್ದರೂ ಅದಕ್ಕೆ ಕವಿ ಬಳಸಿದ ‘ತಗುಳ್ಚಿ ಪೇಳಿದೆ’ ತಂತ್ರ ಮಾತ್ರ ಒಂದು ವಿಫಲ ಕಾವ್ಯಪ್ರಯೋಗವೆಂದೇ ಹೇಳಬೇಕು.

ಹೀಗೆ ಅರಿಕೇಸರಿಯನ್ನು ಅರ್ಜುನನೊಂದಿಗೆ ತಗುಳ್ಚಿ ಪೇಳುವಲ್ಲಿ ವಿಫಲನಾದ ಕವಿ, ಅರ್ಜುನನ್ನು ಕಥಾನಾಯಕನನ್ನಾಗಿ ಮಾಡಿಕೊಳ್ಳುವುದಕ್ಕಾಗಿ ವ್ಯಾಸಭಾರತದಲ್ಲಿ ಮಾಡಿಕೊಂಡ ಮಾರ್ಪಾಟು, ಅದರಿಂದುಂಟಾದ ಫಲ-ವಿಫಲಗಳ ಅಧ್ಯಯನ ಬೇರೊಂದು ಲೇಖನದ ವಿಷಯವಾಗಿದೆ.