‘‘ಚಂಪೂ’’ ಹೆಸರಿನಿಂದ ಕರೆಯುತ್ತ ಬಂದಿರುವ ಕನ್ನಡದ ವೈಭವಪೂರ್ಣ ಸಾಹಿತ್ಯ ಪ್ರಕಾರದ ಉಗಮ ಮತ್ತು ಹೆಸರಿನ ಅರ್ಥಗಳ ಬಗೆಗೆ ಕನ್ನಡದಲ್ಲಿ ವಿಪುಲ ಚರ್ಚೆನಡೆದಿದ್ದರೂ, ಅದು ಇನ್ನೂ ನಿಜವಾದ ನೆಲೆಯನ್ನು ತಲುಪಿಲ್ಲ. ಇಂಥ ಸಂದರ್ಭದಲ್ಲಿ ಈ ಸಾಹಿತ್ಯ ಪ್ರಕಾರದ ನಿಜವಾದ ಹೆಸರು ಚಂಪುವಲ್ಲ, ಇದರ ಲಕ್ಷಣ ಚಂಪುವಿಗಿಂತ ಭಿನ್ನವೆಂದು ಹೇಳುವ ಮೂಲಕ, ಈ ವಾದಕ್ಕೆ ಇನ್ನೊಂದು ಆಯಾಮ ಜೋಡಿಸುವುದು ಈ ಲೇಖನದ ಉದ್ದೇಶವಾಗಿದೆ.

ಚಂಪೂ ಸಾಹಿತ್ಯ ಪ್ರಕಾರದ ವ್ಯಾಖ್ಯೆ ಮೊದಲು ಕಂಡುಬರುವುದು ಆರನೆಯ ಶತಮಾನದ ದಂಡಿಯ ಕಾವ್ಯಾದರ್ಶನದಲ್ಲಿ. ಸಾಹಿತ್ಯವನ್ನು ಗದ್ಯ ಮತ್ತು ಪದ್ಯವೆಂದು ವಿಂಗಡಿಸಿ, ಈ ಗದ್ಯ ಪದ್ಯಗಳ ಮಿಶ್ರಣವೇ ಚಂಪೂ ಎಂದು ಅಲ್ಲಿ ಹೇಳಲಾಗಿದೆ. ಇದನ್ನು ಅನುಸರಿಸುವ ಕವಿರಾಜಮಾರ್ಗಕಾರ ಕನ್ನಡ ಸಾಹಿತ್ಯವನ್ನು ಗದ್ಯ (=ಗದ್ಯಕಥಾ), ಪದ್ಯ (ಚತ್ತಾಣ ಬೆದಂಡೆಗಬ್ಬ)ವೆಂದು ಎರಡು ಭಾಗವಾಗಿ ವಿಂಗಡಿಸುತ್ತ, ಮಿಶ್ರದ ಬಗೆಯಾದ ಚಂಪೂವಿನ ವಿಷಯವಾಗಿ ಮೌನ ತಾಳಿದ್ದಾನೆ. ಆದುದರಿಂದ ಕವಿರಾಜಮಾರ್ಗದಷ್ಟು ಪೂರ್ವದಲ್ಲಿ ಚಂಪುವಿನ ಅಸ್ತಿತ್ವ, ಕನ್ನಡದಲ್ಲಿ ಕಂಡುಬರುವುದಿಲ್ಲವೆಂದೇ ಹೇಳಬೇಕು.

ಈ ತರುವಾಯ ಗುಣವರ್ಮ, ಪಂಪ, ರನ್ನ ಮೊದಲಾದವರು ಸೃಷ್ಟಿಸಿದ ಸಾಹಿತ್ಯವನ್ನು ನಾವು “ಚಂಪೂ” ಎಂದು ಕರೆಯುತ್ತಲಿದ್ದೇವೆ. ಇದು ತಪ್ಪು ಉಪಕ್ರಮವೆಂದೇ ತೋರುತ್ತದೆ. ಏಕೆಂದರೆ ಈ ಕವಿಗಳು ಕೃತಿಗಳನ್ನು ಎಲ್ಲಿಯೂ “ಚಂಪೂ” ಎಂದು ಕರೆದಿಲ್ಲ. ಹೀಗಿರುವಾಗ ‘ಚಂಪೂ’ ಎಂದು ಕರೆಯಲು ನಮಗೆ ಏನು ಅಧಿಕಾರ?

ಚಂಪೂ ಎಂಬ ಪದ್ಯವನ್ನು ಕನ್ನಡದಲ್ಲಿ ಮೊದಲು ಬಳಸಿದವ ಎರಡನೆಯ ನಾಗವರ್ಮ. ತನ್ನ ಕಾವ್ಯಲೋಕನದಲ್ಲಿ “ಬೆರಸಿ ಬರೆ ಗದ್ಯಪದ್ಯಮವೆರಡುಂ ಕೃತಿ ಚಂಪುವೆಂಬ ಪೆಸರಂ ಪಡೆಗುಂ” ಎಂದು ಈತನು ಹೇಳಿದುದು ದಂಡಿಯ ಅನುವಾದವೇ ಹೊರತು, ಪಂಪಾದಿಗಳ ಸಾಹಿತ್ಯವನ್ನು ಕುರಿತು ಆಡಿದ ಮಾತಲ್ಲ. ಹೀಗಿರುವಾಗ ಆಧುನಿಕರಾದ ನಾವು ಪಂಪಾದಿಗಳ ಸಾಹಿತ್ಯದಲ್ಲಿ ಗದ್ಯ ಮತ್ತು ಪದ್ಯಗಳ ಮಿಶ್ರಣವಿರುವುದನ್ನು ಗಮನಿಸಿ, ಅವರ ಬರವಣಿಗೆಯನ್ನು “ಚಂಪೂ” ಎಂದು ಪ್ರಚಾರ ಮಾಡಿದ್ದೇವೆ. ಆದರೆ ಇದರ ನಿಜವಾದ ಹೆಸರು “ಪ್ರಬಂಧ” ಎಂದು ಇರಬಹುದಾಗಿದೆ. ಏಕೆಂದರೆ ೧. “ಪೆಳಲೊಡರ್ಚಿದೆನೀ ಪ್ರಬಂಧಮಂ” ಎಂದು ಮುಂತಾಗಿ ಹೇಳುತ್ತ ಸ್ವತಃ ಪಂಪ ತನ್ನ ಕೃತಿಯನ್ನು “ಪ್ರಬಂಧ” ಎಂದು ಕರೆದಿದ್ದಾನೆಯೇ ಹೊರತು “ಚಂಪೂ” ಎಂದು ಕರೆದಿಲ್ಲ. ೨. ಕನ್ನಡದಲ್ಲಿ ಈ ಬಗೆಯ ಕೆಲವು ಕಾವ್ಯಗಳನ್ನು ನೇರವಾಗಿ ಗಿರಿಜಾ ಕಲ್ಯಾಣ  ಪ್ರಬಂಧ. ಲೀಲಾವತಿ ಪ್ರಬಂಧದಂ ಎಂದು ಅವುಗಳ ಕರ್ತೃಗಳೇ ಕರೆದಿದ್ದಾರೆ. ‘ಗಿರಿಜಾ ಕಲ್ಯಾಣ ಚಂಪೂ’ ಎಂದು ಮುಂತಾಗಿ ಕರೆದಿಲ್ಲ. ೩. ತೆಲುಗು ನಾಡಿನಲ್ಲಿ ಈ ಬಗೆಯ ಸಾಹಿತ್ಯವನ್ನು ಚಂಪೂವೆನ್ನದೆ ‘ಪ್ರಬಂಧ’ ಎಂದೇ ಕರೆಯುತ್ತಾರೆ. ನಮ್ಮಲ್ಲಿ ‘ಚಂಪೂಯುಗ’ವೆನ್ನುವಂತೆ ಅವರು ‘ಪ್ರಬಂಧಯುಗ’ವೆಂದು ನಾಮಕರಣ ಮಾಡಿದ್ದಾರೆ. ಪಂಪನ ಪೂರ್ವಜರು ತೆಲುಗು ನಾಡಿನವರು, ಅವನು ತನ್ನ ಕಾವ್ಯರಚನಾ ದಿನಗಳನ್ನು ಕಳೆದುದೂ ತೆಲುಗುನಾಡಿನಲ್ಲಿ, ಇಂದಿಗೂ ‘ಪ್ರಬಂಧ’ ಹೆಸರು ಪ್ರಚಲಿತವಿರುವ ಪ್ರದೇಶದಲ್ಲಿ. ಆದುದರಿಂದ ಕನ್ನಡದ ಈ ಸಾಹಿತ್ಯ ಪ್ರಕಾರವನ್ನು ಪ್ರಾಚೀನರು ಪ್ರಬಂಧವೆಂದೇ ಕರೆಯುತ್ತಿದ್ದರೆನಿಸುತ್ತದೆ.

ಗದ್ಯ-ಪದ್ಯ ಮಿಶ್ರಣವೇ ಸಂಸ್ಕೃತ ಚಂಪೂವಿನ ಮುಖ್ಯಲಕ್ಷಣ. ಹೆಚ್ಚಿನ ಉದ್ದೇಶ ಅಲ್ಲಿ ಕಾಣುವುದಿಲ್ಲ. ಆದರೆ ಕನ್ನಡ “ಪ್ರಬಂಧ” ನೋಡಲಿಕ್ಕೆ ಗದ್ಯ-ಪದ್ಯ ಮಿಶ್ರಣವಾಗಿ ಕಂಡರೂ ಇದರ ಉದ್ದೇಶವೇ ಬೇರೆಯಾಗಿದ್ದು, ಅದನ್ನು ಹೀಗೆ ವಿವರಿಸಬಹುದು.

ಸಾಹಿತ್ಯವನ್ನು ನಾವು ದೃಶ್ಯ, ಶ್ರವ್ಯವೆಂದು ವರ್ಗೀಕರಿಸುತ್ತೇವೆ. ಇವುಗಳಲ್ಲಿ ದೃಶ್ಯವು ಉತ್ತಮಪುರುಷ ನಿರೂಪಣಾತ್ಮಕ (First person narrative), ಶ್ರವ್ಯವು ಪ್ರಥಮಪುರುಷ ನಿರೂಪಣಾತ್ಮಕ (Third person narrative) ರೂಪದ್ದಾಗಿವೆ. ಪಾತ್ರಗಳೇ ಮಾತನಾಡಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಉತ್ತಮಪುರುಷ ನಿರೂಪಣಾತ್ಮಕ ವಿಧಾನವಾದ ದೃಶ್ಯವು, ಪಾತ್ರಗಳ ಪರವಾಗಿ ಕವಿಯೇ ಮಾತನಾಡುವ ಪ್ರಥಮಪುರುಷ ನಿರೂಪಣಾತ್ಮಕ ವಿಧಾನವಾದ ಶ್ರವ್ಯಕ್ಕಿಂತ ಹೆಚ್ಚು ಪರಿಣಾಮಕಾರಿಯಾದುದು. ಇಂಥ ಪರಿಣಾಮವನ್ನು ತಮ್ಮ ರಚನೆಯಲ್ಲಿಯೂ ತರುವ ಉದ್ದೇಶದಿಂದ ನಮ್ಮ ಕವಿಗಳು ದ್ರಶ್ಯವನ್ನು ಶ್ರವ್ಯೀಕರಿಸಿದ ವಿನೂತನ ಪ್ರಯೋಗವೇ ಪ್ರಬಂಧವಾಗಿದೆ. ಈ ತಂತ್ರವು ಕಾವ್ಯದಲ್ಲಿ ಅವತರಿಸಿಕೊಂಡಾಗ ಸಾಮಾನ್ಯವಾಗಿ ಪಾತ್ರಗಳು ಪದ್ಯರೂಪದಲ್ಲಿ ಮಾತನಾಡುವುದೂ, ಕವಿಯು ದೃಶ್ಯದ ಸೂತ್ರದಾರನಂತೆ ಗದ್ಯರೂಪದಲ್ಲಿ (ಕೊಂಡಿ ರೂಪದ ಮತ್ತು ವಿವರಣರೂಪದ) ಮಾತನಾಡುವುದೂ ಏರ್ಪಟ್ಟು, ಕಿವಿಯಿಂದ ನಾಟಕಸುಖ ಅನುಭವಿಸುವ ‘ಪ್ರಬಂಧ’ ಹೆಸರಿನ ಈ ಹೊಸ ಶ್ರವ್ಯಪ್ರಕಾರ ಸೃಷ್ಟಿಯಾಗಿರಬೇಕು. ಈ ತಂತ್ರ ಕಾರಣವಾಗಿಯೇ ಪ್ರಾರಂಭದ ಪ್ರಯೋಗಗಳಾದ ಪಂಪಭಾರತ, ಗದಾಯುದ್ಧಗಳು ಹೆಚ್ಚು ನಾಟಕೀಯತೆಯಿಂದ ಶೋಭಿಸುತ್ತವೆ. ಗದಾಯುದ್ಧದಲ್ಲಿ ನಾಟಕದ ಅಂಗವಾದ ಕಂಚುಕಿ, ಮೇಳದ ಕೆಳದಿ, ನರ್ಮಸಚಿವ (ವಿದೂಷಕ) ಪಾತ್ರಗಳು ಬರುವುದನ್ನು ಗಮನಿಸಿದಲ್ಲಿ ಪಂಪ ರನ್ನಾದಿಗಳ ಕೃತಿಗಳು ನಾಟಕದ ಆದರ್ಶದಲ್ಲಿ ಹುಟ್ಟಿದ ಕಾವ್ಯಗಳಾಗಿವೆಯೆಂದು ಇನ್ನೂ ಸ್ಪಷ್ಟವಾಗುವುತ್ತದೆ. ಮುಂದೆ ಬಂದ ಕನ್ನಡ ಕವಿಗಳು ಈ ನಾಟಕೀಯ ತತ್ವವನ್ನು ಅರ್ಥಮಾಡಿಕೊಳ್ಳದೆ, ಕೇವಲ ಗದ್ಯ-ಪದ್ಯಗಳ ಮಿಶ್ರಣರೂಪದ ತಂತ್ರವನ್ನು ಮುಂದುವರಿಸಿದರು. ಆದುದರಿಂದ ತರುವಾಯದ ಕನ್ನಡ ಕೃತಿಗಳ ಈ ‘ಪ್ರಬಂಧ’ ಪರಂಪರೆಯ ಮುಂದುವರಿಕೆಯೆನಿಸಿದರೂ ನಾಟಕತತ್ವವನ್ನು ಮರೆತ ಕಾರಣ, ಅವು ಗದ್ಯ ಪದ್ಯ ಮಿಶ್ರಣರೂಪದ ಸಂಸ್ಕೃತ ಚಂಪುವನ್ನು ಹೋಲುವ ಸ್ಥಿತಿಗಳಿದವು.

ಕಿವಿಯಿಂದ ಕೇಳುವ ನಾಟಕವೆನಿಸುವ ಈ “ಪ್ರಬಂಧ”ವು ಜಾನಪದ “ಪ್ರಸಂಗ” ಅಥವಾ “ತಾಳಮದ್ದಲೆ”ಯನ್ನು ಹೋಲುತ್ತದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದಿಗೂ ಪ್ರಸಾರದಲ್ಲಿರುವ “ಪ್ರಸಂಗ”ವೆಂಬುದು ಯಕ್ಷಗಾನದೃಶ್ಯದ ಶ್ರವ್ಯರೂಪವೇ ಆಗಿದೆ. ಮನೆಯಲ್ಲಿ ಅಥವಾ ಸಾರ್ವಜನಿಕ ಕಟ್ಟಡದಲ್ಲಿ ಆಸಕ್ತರು ತಮ್ಮ ದೈನಂದಿನ ವೇಷದಲ್ಲಿಯೇ ಸ್ತ್ರೀ-ಪುರುಷ ಪಾತ್ರಗಳಾಗಿ ಕುಳಿತು, ಸೂತ್ರದಾರನ ನಿರ್ದೇಶನದಲ್ಲಿ ಯಕ್ಷಗಾನದೃಶ್ಯವನ್ನು ಶ್ರವ್ಯರೂಪದಲ್ಲಿ ಮುನ್ನಡೆಸುವ ಕಲೆಯಿದು.

ಶೂನ್ಯಸಂಪಾದನೆಯಲ್ಲಿಯೂ ಇದೇ ತಂತ್ರವಿರುವುದರಿಂದ ಅದೂ “ಪ್ರಸಂಗ” ಸಾಹಿತ್ಯ ಪ್ರಕಾರಕ್ಕೆ ಸೇರುವಂತೆ ತೋರುತ್ತದೆ. ಎಲ್ಲ ಶೂನ್ಯಸಂಪಾದನಕಾರರು ತಮ್ಮ ಕೃತಿಗಳನ್ನು “ಮಹಾನುಭಾವ ಪ್ರಸಂಗ” ಎಂದು ಕರೆದುದಲ್ಲದೆ, ಇದನ್ನು “ಪ್ರಸಂಗಮಂ ಮಾಡಿ ಸುಖಿಸುವುದು” ಎಂದು ಹಾರೈಸಿದ್ದಾರೆಯೇ ಹೊರತು, ಓದಿ ಇಲ್ಲವೆ ಕೇಳಿ ಸುಖಿಸುವುದು ಎಂದು ಹಾರೈಸಿಲ್ಲ. ಶೂನ್ಯ ಸಂಪಾದನೆಯನ್ನು “ತಾಳಮದ್ದಲೆ” ಗೋಷ್ಠಿ ಮೂಲಕ ಆಸ್ವಾದಿಸುವುದೇ ಸರಿಯಾದ ಉಪಕ್ರಮವೆಂದು ಇದರಿಂದ ಸ್ಪಷ್ಟವಾಗುತ್ತದೆ. ಆದುದರಿಂದ ಈ ಕೃತಿಯ ನಿಜವಾದ ಹೆಸರು “ಶೂನ್ಯಸಂಪಾದನ ಪ್ರಸಂಗ’. ಇದರ ಸರಿಯಾದ ಆಸ್ವಾದನ ವಿಧಾನ “ತಾಳಮದ್ದಲೆ” ಏರ್ಪಡಿಸುವುದು ಎಂದು ಹೇಳಬೇಕಾಗುತ್ತದೆ.

ಹೀಗೆ ನಮ್ಮ ನಾಡಿನಲ್ಲಿ ಒಂದು ಕಡೆ ಶ್ರವಣಯೋಗ್ಯವಾದ “ಪ್ರಸಂಗ” ಅಸ್ತಿತ್ವದಲ್ಲಿದ್ದಂತೆಯೇ ಇದರ ಆದರ್ಶದಲ್ಲಿ (Model) ಪ್ರೌಢಕವಿಗಳು ವಾಚನಯೋಗ್ಯವಾದ “ಪ್ರಬಂಧ”ವನ್ನು ರೂಪಿಸಿದರೆಂದು ಕಾಣುತ್ತದೆ. ಆದರೆ ಇಲ್ಲಿಯ ಗದ್ಯ-ಪದ್ಯ ಮಿಶ್ರಣವನ್ನು ಗಮನಿಸಿ, ಗದ್ಯ-ಪದ್ಯ ಮಿಶ್ರಣವಾದ ಸಂಸ್ಕೃತದ “ಚಂಪೂ” ಹೆಸರನ್ನು ಇದಕ್ಕೂ ನಾವು ತಪ್ಪಾಗಿ ಬಳಸುತ್ತಲಿರುವಂತಿದೆ. ಹೀಗಾಗಿ ಚಂಪುವೆಂದು ಕರೆಯುತ್ತಲಿರುವ ಕನ್ನಡದ ಈ ಸಾಹಿತ್ಯ ಪ್ರಕಾರದ ಉಗಮವನ್ನು ಇನ್ನು ಮೇಲೆ ಸಂಸ್ಕೃತದಲ್ಲಿ ಹುಡುಕದೆ, ಜಾನಪದ ಪ್ರಕಾರವಾದ “ಪ್ರಸಂಗ”ದಲ್ಲಿ ಶೋಧಿಸುವುದು ಸರಿಯೆನಿಸುತ್ತದೆ.