“ಜೈನಪ್ರತಿಭೆ” ಎಂದೇ ಬೆರಳಿಟ್ಟು ತೋರಿಸುವ ರೀತಿಯಲ್ಲಿ ಪ್ರಾಚೀನ ಕಾಲದಲ್ಲಿ ಈ ಧರ್ಮದ ಕವಿಗಳು ಕನ್ನಡದಲ್ಲಿ ಬೆಳೆದು ಬಂದಿದ್ದಾರೆ. ಧರ್ಮವೇ “ನಿಚಿತ ಪ್ರಯೋಜನ”ವಾಗಿದ್ದುದರಿಂದ, ಎಷ್ಟೇ ಸ್ವಾತಂತ್ರ್ಯವಹಿಸಿದರೂ ಅದರ ನಿರ್ದೇಶನದಲ್ಲಿಯೇ ಇವರು “ಕಾವ್ಯಕರ್ಮ”ವನ್ನು ಪೂರೈಸುತ್ತಿದ್ದರು. ಈ ನಿಲುವಿನ ಹಿನ್ನೆಲೆಯಲ್ಲಿ ಇವರು ನಡೆಸಿದ ಕೆಲವು ಪ್ರಯೋಗಗಳನ್ನು ಕುರಿತು ಚರ್ಚಿಸಬಹುದು.

ಪುನಃಸಂಘಟನ ಪ್ರಕ್ರಿಯೆ-ವಿಘಟನ ಪ್ರಕ್ರಿಯೆ

ಪ್ರಾಚೀನ ಕರ್ನಾಟಕದಲ್ಲಿ ವೇದವ್ಯಾಖ್ಯಾನಗಳಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ವೈದಿಕಧರ್ಮಗಳೆನಿಸಿವೆ. ಬೌದ್ಧ, ಜೈನ, ಲಿಂಗಾಯತಗಳು ವೈದಿಕ ವಿರೋಧಿ ಧರ್ಮಗಳೆನಿಸಿವೆ. ಇವುಗಳಲ್ಲಿ ಜೈನಧರ್ಮವು ವೈದಿಕ ಧರ್ಮದೊಂದಿಗೆ ನಡೆಸಿದ ಸಂಘರ್ಷ ಮನೋಭಾವದ ನೆಲೆಯಲ್ಲಿ ಈ ಪುನಃಸಂಘಟನ (Re-mythification) ಸಾಹಿತ್ಯ, ವಿಘಟನ (De-mythification) ಸಾಹಿತ್ಯ ಹುಟ್ಟಿಕೊಂಡಿವೆಯೆಂದೇ ಹೇಳಬೇಕು. ಹೀಗಾಗಿ ಜೈನದ ಪುನಃಸಂಘಟನ, ವಿಘಟನ ಸಾಹಿತ್ಯವೆಂದರೆ ವೈದಿಕ ಸಾಹಿತ್ಯದ ಮೇಲೆ ನಡೆಸಿದ ಸಂಘರ್ಷ ಪ್ರಯೋಗವೆನಿಸಿದೆ.

“ವೈದಿಕ”ವೆಂಬುದು ಭಾರತೀಯ ಪರಿಸರದಲ್ಲಿ ಪ್ರಬಲ ಧರ್ಮವಾಗಿದೆ. ಈ ಧರ್ಮೀಯರನ್ನು ಮತಾಂತರಗೊಳಿಸಿಕೊಳ್ಳುತ್ತಲೇ ವೈದಿಕ ಕೃತಿಗಳ ಜೈನೀಕರಣ ಕ್ರಿಯೆಯನ್ನು, ಅಂದರೆ ಪುನಃಸಂಘಟನಗೊಳಿಸುವುದು ಮತ್ತು ವಿಘಟನಗೊಳಿಸುವುದು-ಎಂಬ ಎರಡು ಬಗೆಯ ಪ್ರಯೋಗಗಳನ್ನು ಜೈನಕವಿಗಳು ಮಾಡುತ್ತ ಬಂದರು. ಕನ್ನಡಕ್ಕೆ ಬಂದರೆ, ಪುನಃಸಂಘಟನೆಗೆ ಪಂಪರಾಮಾಯಣ, ವಿಘಟನೆಗೆ ಪಂಪಭಾರತ ನಿದರ್ಶನವೆನಿಸಿದೆ.

ಜೈನಕವಿಗಳ “ಪುನಃಸಂಘಟನ” ಪ್ರಕ್ರಿಯೆಗೆ ನೇರ ಗುರಿಯಾದವು. ಮಹಾಭಾರತ, ರಾಮಾಯಣ ಕಾವ್ಯಗಳು ಮತ್ತು ಶಿವನ ಕಾಮಸಂಹಾರ, ಪಾಶುಪಶಾಸ್ತ್ರ ಲೀಲೆಗಳು. ಮಹಾಭಾರತ, ರಾಮಾಯಣಗಳು ವೈದಿಕ ಪರಂಪರೆಯ ಜನಪ್ರಿಯ ಕಾವ್ಯಗಳು. ಹೀಗಾಗಿ ಜೈನರು ಈ ಕಾವ್ಯಗಳಿಗೇ ಲಗ್ಗೆ ಹಾಕಿದರು. ಅಂದರೆ ಇವುಗಳನ್ನು ಜೈನೀಕರಿಸಿಕೊಂಡರು. (ಆದರೆ ಇವು ಮೂಲತಃ ಜೈನಕಾವ್ಯಗಳೆಂದು.) ಈ ಕ್ರಿಯೆ ಮೊದಲು ಸಂಸ್ಕೃತ ಪ್ರಾಕೃತಗಳಲ್ಲಿ ಸೆಲೆಯೊಡೆದು, ಕನ್ನಡದಲ್ಲಿಯೂ ಮುಂದುವರಿಯಿತು.

ನೈಸಾಹಿತ್ಯದಲ್ಲಿ ೨೨ನೆಯ ತೀರ್ಥಂಕರನಾದ ನೇಮಿನಾಥ ಹರಿವಂಶದವ. ಈ ವಂಶದ ಸಂಬಂಧಿಗಳಾದ ಕುರುವಂಶದವರ ಕಥೆ ಅಂದರೆ ಮಹಾಭಾರತ ಕಥೆಯೂ ಇಲ್ಲಿ ಬರುತ್ತದೆ. ಇದೇ ರೀತಿ ೨೦ನೆಯ ಮುನಿಸುವ್ರತ ತೀರ್ಥಂಕರನ ಕಥೆಯ ಭಾಗವಾಗಿ ರಾಮಾಯಣ ಬರುತ್ತದೆ. ಹೀಗೆ ತೀರ್ಥಂಕರ ಕಥೆಗಳೊಂದಿಗೆ ಜೈನಕವಿಗಳು ಸಮನ್ವಯಗೊಳಿಸಿದ ಮತ್ತು ಸ್ವತಂತ್ರವಾಗಿಯೂ ರಚಿಸಿದ ಈ ರಾಮಾಯಣ ಮಹಾಭಾರತಗಳು, ಹಳೆಯ ಕಟ್ಟಡವನ್ನು ಆಧುನೀಕರಿಸಿದ ರೀತಿಯಲ್ಲಿ ಒಂದಿಷ್ಟು ಅಸ್ತವ್ಯಸ್ತ ಕಾಣಿಸುತ್ತವೆ. ಕೆಲವು ವೈದಿಕ ಪಾತ್ರ, ಘಟನೆಗಳು ಮೂಲಕ್ಕೆ ತೀರ ವಿರುದ್ಧವೆಂಬಂತೆ ಬೆಳೆದಿರುವ ಪ್ರಸಂಗಗಳಲ್ಲಿಯಂತೂ ಓದುಗ ಕಕ್ಕಾವಿಕ್ಕಿಯಾಗುತ್ತಾನೆ. ಅಲ್ಲದೆ ಆ ವೈದಿಕ ಕೃತಿಗಳಿಗೆ ಹೊಂದಿಕೊಂಡ ಭಾರತೀಯರ ಮನಸ್ಸಿಗೆ ಈ ಜೈನೀಕೃತ ರಚನೆಗಳುಅಷ್ಟಾಗಿ ರುಚಿಸುತ್ತಿಲ್ಲವೆಂದೇ ಹೇಳಬೇಕು. “ಆರ್‌ಆದರಿಪರ್‌ಉಚಿತವರಿಯದ ವೈದಿಕ ಕವಿಗಳ ಕವಿತ್ವಮಂ” ಎಂದು ನೇಮಿಚಂದ್ರ ಹೇಳುವನಾದರೂ, ಈ ಮಾತು ಜೈನ ಮಹಾಭಾರತ ರಾಮಾಯಣಗಳಿಗೇ ಹೆಚ್ಚು ಒಪ್ಪುತ್ತದೆ.

ಈ ಕೃತಿಗಳನ್ನು ಬಿಟ್ಟರೆ ಜೈನರು ದಾಳಿಮಾಡುದುದು ವೈದಿಕ “ಕಾಮಸಂಹಾರಲೀಲೆ”ಯ ಮೇಲೆ. “ಜಿನತತ್ವಂ ಸ್ಮರತತ್ವಂ ದೂರಸ್ಥಂ” ಇದು ಜೈನಧರ್ಮದ ಮಹತ್ವಪೂರ್ಣ ತತ್ವ. ಈ ಧರ್ಮೀಯರ ಪರಮಸಾಧನೆಯೆಂದರೆ ಕಾಮನನ್ನು ಗೆದೆಯುವಲ್ಲಿ ಈ ಶಿವನಿಗಿಂತ ತಮ್ಮ ಜಿನ ಮೇಲು-ಎಂದು ಸಾಧಿಸುವುದು ಮುಖ್ಯವೆನಿಸಿತು. ಆಗ ಶಿವನನ್ನು ಗೆದ್ದ ಕಾಮನು ಜಿನನಿಗೆ ಸೋತನೆಂಬಂತೆ ಕಥೆಗೆ ಜೈನೀಯ ತಿರುವು ಕೊಟ್ಟರು.

ಕನ್ನಡದಲ್ಲಿ ಮೊದಲು ಈ ಕಥೆಯ ರೇಖಾಚಿತ್ರ ಬರೆದವ ನಾಗಚಂದ್ರ, ಆಮೇಲೆ ಬಣ್ಣ ತುಂಬಿದವರ ಆಂಡಯ್ಯ. ಮೂಲ ಮಲ್ಲಿನಾಥ ಪುರಾಣದಲ್ಲಿಲ್ಲದ “ಕಾಮನ ಪರಾಜಯ” ಪ್ರಸಂಗವನ್ನು ನಾಗಚಂದ್ರ ಹೀಗೆ ಸೃಷ್ಟಿಸಿಕೊಂಡಿದ್ದಾನೆ : ಮಲ್ಲಿಜಿನೇಂದ್ರನು ಕಾಮನ ಶ್ವೇತವನದಲ್ಲಿ ತಪಸ್ಸಿಗೆ ಕುಳಿತ ಸಂದರ್ಭ ತಪೋಭಂಗಕ್ಕಾಗಿ ಬಂದ ಕಾಮ ಈ ತೀರ್ಥಂಕರನಿಗೆ ಸೋತು, ತನ್ನ ಅಪಮಾನ-ಕೋಪಗಳ ಜ್ವಾಲೆಯಲ್ಲಿ ತಾನೇ ಸುಟ್ಟುಹೋದನು. ಇದನ್ನು ಕಂಡು ವಿರಹತಾಪದಿಂದ ರತಿಯೂ ಅಸುನೀಗಿದಳು.

ಈ ಉಪಕಥೆಯ ಎಳೆಯನ್ನು ಹಿಡಿದು ಆಂಡಯ್ಯ ಒಂದು ಸ್ವತಂತ್ರ ಕೃತಿಯನ್ನೇ ರಚಿಸಿದನು. ಶಿವನು ಚಂದ್ರನನ್ನು ಸೆರೆಹಿಡಿದಿರುವನೆಂಬ ಸುದ್ದಿಯನ್ನು ಕೇಳಿ ಕೋಪಾವಿಷ್ಟನಾದ ಯುದ್ಧಕ್ಕೆ ಹೊರಟು, ದಾರಿಯಲ್ಲಿ ತಪೋಮಗ್ನನಾದ ಜೈನಸನ್ಯಾಸಿಯನ್ನು ದಂಡಿಸಲು ಸಿದ್ಧನಾಗುತ್ತಾನೆ. ಮಗ್ಗುಲಲ್ಲಿದ್ದ ಮಂತ್ರಿ ವಸಂತನು ವಿವರಿಸಿದ ಈ ಸನ್ಯಾಸಿಯ ಸಾಮರ್ಥ್ಯವನ್ನು ಕೇಳಿ, ಅವನಿಗೆ ಶರಣಾಗುತ್ತಾನೆ. ಮುಂದುವರಿದು, ಶಿವನನ್ನು ಸೋಲಿಸಿ, ಅವನನ್ನು ಅರೆವೆಣ್ಣಾಗಿಸುತ್ತಾನೆ.

ಈ ಪುನಃಸಂಘಟನ ಪ್ರಕ್ರಿಯೆಯಲ್ಲಿ ಮೂಲದ ಎಲ್ಲ ಆಯಾಮಗಳನ್ನು ತನ್ನ ಅನುಕೂಲತೆಗೆ ತಕ್ಕಂತೆ ಎಷ್ಟೇ ತರ್ಕಬದ್ಧವಾಗಿ ತಿರುಗಿಸಿಕೊಂಡಿದ್ದರೂ ಅಲ್ಲಲ್ಲಿ ಆಭಾಸ ತಲೆದೋರಿದೆಯೆಂದೇ ಹೇಳಬೇಕು. ಮತಾವೇಶನವೇ ನಿಚಿತ ಪ್ರಯೋಜನವಾಗಿರುವುದರಿಂದ ಇಂಥ ವಿರೋಧಾಭಾಸಗಳು ಅನಿವಾರ್ಯ. ಇದಲ್ಲದೆ ಬೇರೊಂದೆಡೆ ನಾಗಚಂದ್ರನ ಮಲ್ಲಿನಾಥಪುರಾಣದಲ್ಲಿ ಬಂದ “ಆ ವೇಶ್ಯಾವಾಟದೊಳ್‌ಧೂರ್ಜಟಿಯ ನೊಸಲ ಕಣ್ಣಂ ಸ್ಮರಂ ನಂದೆ ಪೊಯ್ವಂ”, “ಪುಷ್ಪಾಚಾಪಾಂಚಿತ ಮಧುಕರ ಮೌರ್ವೀಲಲಾಟಂಕೃತಕ್ಕಳ್ಕಿದಂ ಗೌರೀನಾಥಂ…”, “ಹರಂಗರುಣಲೋಚನಮಂ ಪಡೆದಂ ಲಲಾಟದೊಳ್‌ಗಿರಿಜೆಯ ಪಾದಯಾವಕದೆ” ಎಂಬ ಮಾತುಗಳೂ ಶಿವನ ಈ ಕಾಮದಹನ ಲೀಲೆಯನ್ನು ನಿಂದಿಸುವವೇ ಆಗಿವೆ.

ಇವುಗಳನ್ನು ಬಿಟ್ಟರೆ, ರನ್ನನ ಗದಾಯುದ್ಧದಲ್ಲಿ (೩-೩೯) ಬರುವ “ಗಂಟಲಂ ಮೆಟ್ಟಿದೊಡಿಟ್ಟೆಡೆಯೊಳ್ಕೊಟ್ಟಂ..ನರಂಗೆ ಪಾಶುಪತಮಂ ರುದ್ರಂ” ಎಂಬ ಮಾತು, ನೇಮಿಚಂದ್ರನ ಲೀಲಾವತಿಯ” (೧-೧೧) “ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ..” ಎಂಬ ಮಾತು, ಶೈವಪುರಾಣದ ಪಾಶುಪತಾಶ್ತ್ರಲೀಲೆಯನ್ನು ಪರ್ಯಾಯವಾಗಿ ನಿಂದಿಸುತ್ತಿವೆಯೆಂದೇ ಹೇಳಬೇಕು.

* * *

ಹೀಗೆ ರಾಮಾಯಣ, ಮಹಾಭಾರತ ಇತ್ಯಾದಿ ಪೌರಾಣಿಕ ಘಟನೆಗಳಿಗೆ ನಿಲ್ಲದೆ ಈ ಪುನಃಸಂಘಟನ ಪ್ರಕ್ರಿಯೆ ಐತಿಹಾಸಿಕ ಘಟನೆಗಳಿಗೂ ಮುಂದುವರಿದುದು ಬೇಸರದ ಸಂಗತಿಯಾಗಿದೆ. ದೇವಚಂದ್ರನ ರಾಜಾವಳಿ ಕಥೆಯ ತುಂಬ ಸ್ವಮತ ಮೇಲ್ಮೆಗಾಗಿ ಇತಿಹಾಸವನ್ನು ತಿರುಚಿದ ನೂರಾರು ಪ್ರಸಂಗಗಳನ್ನು ಕಾಣಬಹುದು. ಬಸವಣ್ಣನು ಜೈನನಾದ ಬಿಜ್ಜಳನ ವಿರೋಧಿಯೆಂದು ಭ್ರಮಿಸಿ, ಅವನ ಚರಿತ್ರೆಯನ್ನು ವಿರೂಪಗೊಳಿಸಿದುದನ್ನೂ ಇಲ್ಲಿ ನೆನೆಯಬಹುದು. ವಿಜಯಕುಮಾರ ಚರಿತೆ (ಶ್ರುತಕೀರ್ತಿ ೧೫೬೭), ವಿಜಯಕುಮಾರಿ ಚರಿತೆ (?), ಬಿಜ್ಜಳರಾಯ ಚರಿತೆ (ಧರಣಿಪಂಡಿತ ೧೬೫೦), ಬಿಜ್ಜಳರಾಯ ಪುರಾಣ (ಚಂದ್ರಸಾಗರವರ್ಣಿ ೧೮೧೦)ಗಳಲ್ಲಿ ಈ ಚರಿತ್ರೆ ಪಡೆದಿರುವ ತಿರುವುಗಳನ್ನು ನೋಡಿದರೆ, ಈ ಜೈನಕವಿಗಳ ಬಗ್ಗೆ ಮರುಕ ಹುಟ್ಟುತ್ತದೆ. ಮೊದಲಿನ ಇಬ್ಬರು ವಿಜಯಕುಮಾರಿಯ ಕಲ್ಪಿತ ಕಥೆಯನ್ನು ನೆವವಾಗಿಟ್ಟುಕೊಂಡು ಬಸವಣ್ಣನ ತೇಜೋವಧೆ ಮಾಡಿದರೆ, ಆ ಮೇಲಿನ ಎರಡು ಕೃತಿಗಳು ನೇರವಾಗಿ ಬಸವಣ್ಣನನ್ನು ಗುರಿಯಿಟ್ಟು ಹುಟ್ಟಿವೆ. ಅವನನ್ನು ಖಳನಾಯಕನಂತೆ ಚಿತ್ರಿಸಿವೆ. ಇದು ವಿಘಟನೆಯ ಪರಮಾವಧಿಯೆಂದೇ ಹೇಳಬೇಕು. ಪುರಾಣಗಳಲ್ಲಿ ಸಾಮಾನ್ಯವಾಗಿ ಸಕಾರಾತ್ಮಕ ಪುನಃ ಸಂಘಟನೆ ಇದ್ದರೆ, ಇತಿಹಾಸದಲ್ಲಿ ನಕಾರಾತ್ಮಕ ಪುನಃಸಂಘಟನೆ ಕಂಡುಬರುತ್ತದೆ.

ಇದು ಸಾಲದೆಂಬಂತೆ ಬ್ರಹ್ಮಶಿವನು ತನ್ನ ಸಮಯಪರೀಕ್ಷೆಯನ್ನು ಇಂಥ ಅನೇಕ ಪೌರಾಣಿಕ, ಐತಿಹಾಸಿಕ ಅಂಶಗಳನ್ನು ಜೈನಪರವಾಗಿ ಪುನಃಸಂಘಟಿಸುವುದಕ್ಕಾಗಿಯೇ ಮೀಸಲಿಟ್ಟಿರುವುದನ್ನು ನೆನೆಯಬೇಕು. ವೃತ್ತವಿಲಾಸನ ಧರ್ಮಪರೀಕ್ಷೆಯೂ ಇದೆ ಧೋರಣೆಯ ಕೃತಿಯಾಗಿದೆ.

* * *

ಇನ್ನು ವೈದಿಕ ಕೃತಿಗಳ “ವಿಘಟನೆ” ಪ್ರಕ್ರಿಯೆಯನ್ನು ಕುರಿತು ಹೇಳುವುದಾದರೆ, ಈಗ ತಿಳಿದ ಮಟ್ಟಿಗೆ ಗುಣವರ್ಮನ ಅನುಪಲಬ್ಧ ಶೂದ್ರಕ ಕೃತಿಯಿಂದಲೇ ಇದು ಆರಂಭವಾದಂತಿದೆ. ಕವಿ ಗುಣವರ್ಮ ಗಂಗರ ಎರೆಯಪ್ಪನನ್ನು ಶೂದ್ರಕ ಮಹಾರಾಜನೊಂದಿಗೆ ಹೋಲಿಸುವ ಮೂಲಕ ಈ ಕ್ರಿಯೆಯನ್ನು ಆರಂಭಿಸಿದ. ಇದು ಪಂಪ ರನ್ನರಲ್ಲಿ ಮಹಾಭಾರತದ ವಿಘಟನ, ಪೊನ್ನನಲ್ಲಿ ರಾಮಾಯಣದ ವಿಘಟನ ಕಾರ್ಯವಾಗಿ ಕಾಣಿಸಿಕೊಂಡಿತು. ಈ ಶೂದ್ರಕ, ಪೊನ್ನನಲ್ಲಿ ರಾಮಾಯಣದ ವಿಘಟನ ಕಾರ್ಯವಾಗಿ ಕಾಣಿಸಿಕೊಂಡಿತು. ಈ ಶೂದ್ರಕ, ಭಾರತ, ರಾಮಾಯಣ ವಿಘಟನಗಳಲ್ಲಿ ನಮಗೆ ಉಳಿದು ಬಂದುದೆಂದರೆ ಭಾರತವೊಂದೇ. ಈ ಕ್ರಿಯೆಯನ್ನು ಪಂಪನು ಸಮಗ್ರ ಭಾರತಕ್ಕೆ ಅನ್ವಯಿಸಿದರೆ, ರನ್ನ ಗದಾಪರ್ವಕ್ಕೆ ಅನ್ವಯಿಸಿದ.

ಈ ಕವಿಗಳ ಉದ್ದೇಶ ಎರಡು ಬಗೆಯಾಗಿದೆ. ತಮ್ಮ ಕಥಾನಾಯಕನರಾದ ರಾಜರನ್ನು ವೈದಿಕ ದೇವತಾಪುರುಷರಷ್ಟು ಉದಾತ್ತಗೊಳಿಸುವುದು ಅಥವಾ ವೈದಿಕ ದೇವತಾಪುರುಷರನ್ನು ತಮ್ಮ ರಾಜರಷ್ಟು ಅನುದಾತ್ತಗೊಳಿಸುವುದು. ಬಹುಶಃ ಎರಡನೆಯ ಅಭಿಪ್ರಾಯವೇ ಸರಿಯಾದುದು.

ಶ್ರೀಯನರಾತಿಸಾಧನ ಪಯೋನಿಧಿಯೊಳ್ಪಡೆದುಂ ಧರಿತ್ರಿಯಂ
ಜೀಯೆನೆ
ಬೇಡಿಕೊಳ್ಳದೆ ವಿರೋಧಿನರೇಂದ್ರನೊತ್ತಿಕೊಂಡುಮಾ
ತ್ಮೀಯ
ಸುಪುಷ್ಟದೃಷ್ಟಿಯನೊಡಂಬಡೆ ತಾಳ್ದಿಯುಮಿಂತುದಾತ್ತ ನಾ
ರಾಯಣನಾದ
ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ ||

ಇದು ಶ್ಲೇಷಾಲಂಕಾರ, “ಉಪಮಾ” ಪ್ರಪಂಚಕ್ಕೆ ಸೇರಿದ್ದು. ಈ ಅಲಂಕಾರದಲ್ಲಿ ಉಪಮೇಯ, ಉಪಮಾನಗಳಿರಲೇಬೇಕು. ಇಲ್ಲಿ ಉಪಮಾನವಾಗಿರುವ ವಿಷ್ಣುಗಿಂತಲೂ ಉಪಮೇಯವಾದ ಅರಿಕೇಸರಿ “ಉದಾತ್ತ” ಎಂದು ಹೇಳುವುದನ್ನು ನೋಡಿದರೆ, ವೈದಿಕ ದೇವತೆಯನ್ನು ಪರ್ಯಾಯವಾಗಿ ಅನುದಾತ್ತಗೊಳಿಸುವುದೇ ಈ ಕವಿಗಳ ಉದ್ದೇಶವೆನ್ನಬೇಕಾಗುತ್ತದೆ. ಈ ಮಾದರಿಯಲ್ಲಿ ಉದಾರಮಹೇಶ್ವರ, ಪ್ರಚಂಡಮಾರ್ತಾಂಡ, ಸಹಜಮನೋಜರನ್ನು ವರ್ಣಿಸುವುದೆಂದರೆ ವೈದಿಕ ದೇವತೆಗಳನ್ನು ಅನುದಾತ್ತಗೊಳಿಸುವುದೇ ಆಗಿದೆ. ಈ ಕಾವ್ಯದ ಮುಂದಿನ ಭಾಗಗಳಲ್ಲಿ ತಗುಳ್ಚುವ ಪ್ರಕ್ರಿಯೆಯಲ್ಲಿ ಆಗಾಗ ಕೀಲು ತಪ್ಪಿದ್ದರೂ ಒಟ್ಟು ಸೃಷ್ಟಿಯಲ್ಲಿ ಪಂಪಭಾರತ, ಗದಾಯುದ್ಧಗಳನ್ನು ಖಂಡಿತವಾಗಿಯೂ ವಿಘಟನ ವಿಭಾಗದಲ್ಲಿಯೇ ಪರಿಗಣಿಸಬೇಕಾಗುತ್ತದೆ.

ಪುನಃಸಂಘಟನೆಯೇ ಆಗಿರಲಿ, ವಿಘಟನೆಯೇ ಆಗಿರಲಿ, ಜೈನರು ಸಾಹಿತ್ಯದಲ್ಲಿ ಈ ಮೂರ್ತಿಭಂಜನ ಕೆಲಸವನ್ನೇಕೆ ಆರಂಭಿಸಿದರೆಂಬುದು ಕೇಳಬೇಕಾದ ಪ್ರಶ್ನೆಯಾಗಿದೆ. ಬಹಶಃ  ಪ್ರತಿಸ್ಪರ್ಧಿಯಾಗಿ ಎದುರು ಬೆಳೆದ ಧರ್ಮಗಳನ್ನು ನ್ಯಾಯಮಾರ್ಗದಲ್ಲಿ ಗೆದೆಯುವುದು ಅಸಾಧ್ಯವಾದಾಗ, ಅಸಹನೆಯ ಮನಸ್ಸು ಇಂಥ ಹಾದಿ ಹಿಡಿಯುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಮೊದಲು ವೈಷ್ಣವದ ಎದುರು, ಬಳಿಕ ಶೈವದ ಎದುರು ಸೋಲನ್ನು ಅನುಭವಿಸಿದ ಫಲಿತವೆಂಬಂತೆ ಜೈನರಲ್ಲಿ ಈ ಕ್ರಿಯೆ ಜರುಗಿದೆ. ಇಂಥ ಐತಿಹಾಸಿಕ ಸಂದರ್ಭ ಕಾರಣವಾಗಿ ಅನಾರೋಗ್ಯಕರ ಮನಸ್ಸು ಸೆಲೆಯೊಡೆದು, ಪ್ರವಾಹವಾಗುತ್ತ ನಡೆಯುವಲ್ಲಿ, ಇಂಥ ಸಾಹಿತ್ಯ ಸೃಷ್ಟಿಯಾಗುತ್ತ ಬಂದಿತೆಂದು ಹೇಳುವುದು ಅನಿವಾರ್ಯವಾಗುತ್ತದೆ.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಅನೇಕ ಪಾರಿಭಾಷಿಕ ಪದಗಳು ಬಳಕೆಯಾಗಿದ್ದು, ಇವುಗಳಿಗೆ ನಿರ್ದಿಷ್ಟ ಅರ್ಥ ಹೇಳುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ. ಕವಿರಾಜ ಮಾರ್ಗವನ್ನೇ ತೆಗೆದುಕೊಂಡರೆ ಗದ್ಯಕಥಾ, ಚತ್ತಾಣ, ಬೆದಂಡೆ ಗಬ್ಬ, ಅಧ್ವಕೃತಿ, ನಿರತಿಶಯವಸ್ತುವಿಸ್ತರ, ಪ್ರಕಟತರವಸ್ತುವಿಸ್ತರ ಇತ್ಯಾದಿಗಳಿಗೂ, ಆಮೇಲಿನ ಪ್ರಬಂಧ, ಚಂಪೂ, ದೇಸಿ, ಮಾರ್ಗ, ವಸ್ತುಕ, ವರ್ಣಕ, ಕಥೆ, ವಸ್ತುಕೃತಿ, ವರ್ಣಕೃತಿ, ಇಡುಕುಂಗಬ್ಬ ಇತ್ಯಾದಿಗಳಿಗೂ ನಾವು ವಿವರಣೆ ನೀಡಬೇಕಾಗಿದೆ. ಇದೇ ರೀತಿ ಜೈನಕಾವ್ಯಗಳಲ್ಲಿ ಬರುವ ಪ್ರಾಬೃತ, ಕಥಾ, ಅಕಥಾ, ವಿಕಥಾ, ಪದಗಳೂ ಪುರಾಣ, ಚರಿತಪುರಾಣ, ಚರಿತೆ ಪದಗಳೂ ಇನ್ನೂ ಸ್ಪಷ್ಟನೆಯನ್ನು ಬಯಸುತ್ತವೆ.

ಸಾಹಿತ್ಯವನ್ನು ಅಕಥಾತ್ಮಕ, ಕಥಾತ್ಮಕವೆಂದು, ಕಥಾತ್ಮಕವನ್ನು ಅಚರಿತಾತ್ಮಕ, ಚರಿತ್ರಾತ್ಮಕವೆಂದು ವರ್ಗೀಕರಿಸಬಹುದು. ಚರಿತ್ರಾತ್ಮಕವನ್ನು ಜೈನರು ಮಹಾಪುರಾಣ, ಪುರಾಣ, ಚರಿತಪುರಾಣ, ಚರಿತೆಯೆಂಬ ನಿರ್ದಿಷ್ಟ ಪರಿಕಲ್ಪನೆಯಲ್ಲಿ ಬಳಸಿಕೊಂಡಿದ್ದರೂ, ಕಾಲಕ್ರಮದಲ್ಲಿ ಈ ಶಬ್ದಗಳನ್ನು ಕೈಗೆ ಬಂದಂತೆ ಬಳಸಲಾಗಿದೆ. ಅನಂತನಾಥ ಪುರಾಣ-ಅನಂತನಾಥ ಚರಿತೆ, ಬಿಜ್ಜಳರಾಯ ಪುರಾಣ-ಬಿಜ್ಜಳರಾಯ ಚರಿತೆ ಇತ್ಯಾದಿ ಶೀರ್ಷಿಕೆಗಳೇ ಇದಕ್ಕೆ ನಿದರ್ಶನ. ಈ ವಿವರಣೆಯ ಬೆಳಕಿನಲ್ಲಿ ಮಹಾಪುರಾಣ, ಪುರಾಣ, ಚರಿತಪುರಾಣ, ಚರಿತೆಗಳೆಂಬ ಪಾರಿಭಾಷಿಕಗಳ ಬಗ್ಗೆ ಚರ್ಚಿಸಬಹುದು.

ಮಹಾಪುರಾಣ

ಪುರಾತನ>ಪುರಾಅಣ>ಪುರಾಣ ಹೀಗೆ ಪುರಾಣ ಪದದ ನಿಷ್ಪತ್ತಿಯನ್ನು ಹೇಳಲಾಗುತ್ತಿದೆ. ಇದು ಮೂಲತಃ ಇತಿಹಾಸವಾಗಿದ್ದರೂ ತೀರ ಪುರಾತನ ಕಾಲದ್ದಾಗಿರುತ್ತದೆ. ಅಂದರೆ ಇತಿಹಾಸವು ಪುರಾತನವಾದರೆ ಪುರಾಣವೆನಿಸಿಕೊಳ್ಳುತ್ತದೆ. ಹೀಗೆ ಪುರಾತನವಾಗುವುದಕ್ಕೋಸುಗ ಅಲ್ಲಿ ಇತಿಹಾಸವನ್ನು ವೈಭವೀಕರಿಸುವುದು ಸಹಜ. ವೈಭವೀಕರಿಸಿಕೊಂಡ ಇಂಥ ಇತಿಹಾಸವನ್ನು ಬರೆಯುವಲ್ಲಿ ೬೩ ಜನ ಶಲಾಕಾಪುರುಷರನ್ನು ವಸ್ತುವಾಗಿಟ್ಟುಕೊಂಡುದೇ ಜೈನರಲ್ಲಿ “ಮಹಾಪುರಾಣ”ವೆನಿಸುತ್ತದೆ. ಜೈನರಲ್ಲಿ ಈ ಶಲಾಕಾಪುರುಷರ ವಿವರ ಹೀಗಿದೆ.

೨೪ ಜನ ತೀರ್ಥಂಕರರು
೧೨
ಜನ ಚಕ್ರವರ್ತಿಗಳು
ಜನ ಬಲದೇವರು
ಜನ ವಾಸುದೇವರು
ಜನ ಪ್ರತಿವಾಸುದೇವರು

ಈ ೬೩ ಜನರನ್ನು ಕುರಿತು ಸಮಗ್ರಕೃತಿಯೇ ಜೈನರಲ್ಲಿ “ಮಹಾಪುರಾಣ”ವೆನಿಸಿಕೊಳ್ಳುತ್ತದೆ. ಜೈನರ ಪುರಾಣ ಮಹಾಪುರಾಣ ಎಂದಾಕ್ಷಣ ವೈದಿಕರ ಭಾರತ  ಮಹಾಭಾರತ ಶಬ್ದಗಳು ನೆನಪಾಗುತ್ತವೆ. ಆದರೆ ವೈದಿಕರ ಭಾರತ ಮಹಾಭಾರತಗಳಿಗೆ ಅಂಥ ಅರ್ಥವ್ಯತ್ಯಾಸವಿಲ್ಲ. ಜೈನರ ಪುರಾಣ ಮಹಾಪುರಾಣಗಳಿಗೆ ಅರ್ಥವ್ಯತ್ಯಾಸವಿದೆ. ಘಟನೆಗಳು ಎಷ್ಟೇ ಬಿಡಿಬಿಡಿಯಾಗಿದ್ದರೂ ಮಹಾಭಾರತಕ್ಕೆ ಕೇಂದ್ರೀಯತೆಯಿದೆ. ಮಹಾಪುರಾಣ ಮಾತ್ರ ಬೇರೆ ಬೇರೆ ಕಾಲದ ೨೪ ಜನ ತೀರ್ಥಂಕರರ ಕಥಾಜೋಡಮೆಯೆನಿಸಿರುವುದರಿಂದ ಇಲ್ಲಿ ಕೇಂದ್ರಿಯತೆ ತಪ್ಪಿಹೋಗಿರುತ್ತದೆ. ಕವಿಪರಮೇಷ್ಠಿ ಎಂಬುವನು “ವಾಗರ್ಥ ಸಂಗ್ರಹ” ಹೆಸರಿನ ಒಂದು ಮಹಾಪುರಾಣವನ್ನು ಕನ್ನಡದಲ್ಲಿ ಬರೆದಿರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ. ಅದು ಇನ್ನೂ ಅನುಪಲಬ್ಧ. ಈಗ ಲಭ್ಯವಾಗಿರುವ ಪ್ರಾಚೀನ ಕನ್ನಡ ಕೃತಿಯೆಂದರೆ ಚಾವುಂಡರಾಯನ “ತ್ರಿಷಷ್ಟಿ ಲಕ್ಷಣ ಮಹಾಪುರಾಣಂ” ಪ್ರಜ್ಞಾಪೂರ್ವಕವಾಗಿಯೇ ಕವಿ ಇಲ್ಲಿ “ಮಹಾಪುರಾಣಂ” ಪದವನ್ನು ಬಳಸಿದ್ದಾನೆ.

ಪುರಾಣ, ಚರಿತಪುರಾಣ

ಮೇಲೆ ಹೇಳಿದಂತೆ “ಪುರಾಣ” ಪದವನ್ನು ತುಂಬ ಸಡಿಲವಾಗಿ ಬಳಸುತ್ತಿದ್ದರೂ ಮೂಲತಃ ೬೩ ಮಹಾಪುರುಷರಲ್ಲಿ ೨೪ ಜನ ತೀರ್ಥಂಕರರ ಬಿಡಿಯಾದ ಚರಿತ್ರೆಗೆ ಮಾತ್ರ “ಪುರಾಣ”ವೆಂದೂ ಮಿಕ್ಕ ೩೯ ಜನರ ಚರಿತ್ರೆಗೆ “ಚರಿತಪುರಾಣ”ವೆಂದೂ ಕರೆಯುತ್ತಿರಬಹುದೆನಿಸುತ್ತದೆ. ಈ ಸ್ಪಷ್ಟನೆಗಾಗಿಯೇ ನಾಗಚಂದ್ರನು ತಾನು ಬರೆದ ಬಲದೇವನ ಕೃತಿಗೆ ರಾಮಚಂದ್ರ ಪುರಾಣವೆನ್ನದೆ “ರಾಮಚಂದ್ರ ಚರಿತಪುರಾಣ”ವೆಂದು ಕರೆಯುತ್ತಿರಬಹುದೆನಿಸುತ್ತದೆ. ಈ ಸ್ಪಷ್ಟನೆಗಾಗಿಯೇ ನಾಗಚಂದ್ರನು ತಾನು ಬರೆದ ಬಲದೇವನ ಕೃತಿಗೆ ರಾಮಚಂದ್ರ ಪುರಾಣವೆನ್ನದೆ “ರಾಮಚಂದ್ರ ಚರಿತಪುರಾಣ”ವೆಂದು ಕರೆದಂತಿದೆ. ಇವನು ತನ್ನ ಮಲ್ಲಿನಾಥನ ಚರಿತ್ರೆಗೆ “ಪುರಾಣ”ವೆಂದೂ ರಾಮಚಂದ್ರನ ಚರಿತ್ರೆಗೆ “ಚರಿತಪುರಾಣ”ವೆಂದೂ ಕರೆದುದು ತುಂಬ ಎಚ್ಚರದ ನಾಮಕರಣವೆನಿಸುತ್ತದೆ. ಒಟ್ಟಾರೆ ಚರಿತಪುರಾಣಕ್ಕೆ ಆ ಕಡೆ ಚರಿತೆಗಿಂತ ಉದಾತ್ತ, ಪುರಾಣಕ್ಕಿಂತ ಅನುದಾತ್ತವೆಂಬ ಅರ್ಥವಿರುವಂತಿದೆ. ಆದುದರಿಂದ ೬೩ ಪುರುಷರ ಮಹಾಪುರಾಣವೆನ್ನುವುದು ಪುರಾಣ+ಚರಿತಪುರಾಣಗಳ ಸಂಯುಕ್ತ ರಚನೆಯೆನಿಸುತ್ತದೆ. ಇಲ್ಲಿಯ ೨೪ ಜನತೀರ್ಥಂಕರರನ್ನು ಕುರಿತುವು “ಪುರಾಣ”, ಮಿಕ್ಕ ೩೯ ಜನರನ್ನು ಕುರಿತುವು “ಚರಿತಪುರಾಣ”ಗಳೆಂದು ಕರೆಯುವುದು ಶಾಸ್ತ್ರಶುದ್ಧವೆನಿಸುತ್ತದೆ.

ಹೀಗೆ ೬೩ ಮಹಾಪುರುಷರ ಕಥಾಸಂಪುಟವನ್ನು “ಮಹಾಪುರಾಣ”ವೆಂದು ಕರೆಯುವುದು ನ್ಯಾಯವಾಗಿದ್ದರೂ, ಅದು “ಚರಿತಪುರಾಣ+ಪುರಾಣ”ಗಳ ಸಂಯುಕ್ತ ರಚನೆಯಾಗಿರುವುದರಿಂದ “ಚರಿತಪುರಾಣ”ವೆಂದೂ, ಕೆಲವೊಮ್ಮೆ ಸೌಲಭ್ಯಕ್ಕಾಗಿ “ಪುರಾಣ”ವೆಂದೂ ಕರೆದರು. ಉದಾ.

ಚರಿತಪುರಾಣದೊಳೊಂದನೆ
ಬರೆದರ್
ಬರೆದಿಕ್ಕಿದರ್ತ್ರಿಷಷ್ಟಿಶಲಾಕಾ |
ಪುರುಷರ
ಪುರಾಣಮಂ ಕವಿ
ಪರಮೇಶ್ವರರಂತು
ಜಸಕೆ ನೋಂತರುಮೊಳರೇ ||

ಇಲ್ಲಿ “ಚರಿತಪುರಾಣ+ಪುರಾಣ”ಕ್ಕೆ ಬದಲು “ಚರಿತಪುರಾಣ”ವೆಂದೂ, “ತ್ರಿಷಷ್ಟಿಶಲಾಕಾ ಪುರುಷ ಮಹಾಪುರಾಣ”ಕ್ಕೆ ಬದಲು “ತ್ರಿಷಷ್ಟಿಸಲಾಕಾಪುರುಷ ಪುರಾಣ”ವೆಂದೂ ಕರೆದುದನ್ನು ಗಮನಿಸಬಹುದು.

೬೩ ಜನರ ಕಥಾಸಂಪುಟವನ್ನು ಸಮಗ್ರವಾಗಿ ಬರೆಯುವಲ್ಲಿ ಎದುರಾಗದ “ಕೃತಿಶಿಲ್ಪ” ಸಮಸ್ಯೆಯು, ಒಬ್ಬ ತೀರ್ಥಂಕರನ ಪುರಾಣ ರಚನಾಸಂದರ್ಭದಲ್ಲಿ ತಲೆದೋರುವುದು ಸಹಜ. ಆಗ ಜೈನಕವಿಗಳು “ಪುರಾಣಶಿಲ್ಪ”ವನ್ನು  ಕುರಿತು ಆಲೋಚಿಸಿದರೆಂದು ಕಾಣುತ್ತದೆ. ಈ ಶಿಲ್ಪವನ್ನು ಮೊದಲು ಸೂಚಿಸಿದವರು ಪೂರ್ವಪುರಾಣದ ಜಿನಸೇನಾಚಾರ್ಯರು ಅವರ ಪ್ರಕಾರ

ಲೋಕೋ ದೇಶಃ ಪುರಂ ರಾಜ್ಯಂ ತೀರ್ಥಾಂ ದಾನತಪೋದ್ವಯಂ |
ಪುರಾಣೇಷ್ವಷ್ಟಧಾಖ್ಯೇಯಂ
ಗತಯಃ ಫಲಮಿತ್ಯಪಿ || ()

ಇದು ಜೈನಪುರಾಣ ಶಿಲ್ಪ. ಇದರಲ್ಲಿ ಲೋಕ, ದೇಶ, ಪಟ್ಟಣ, ರಾಜ್ಯ, ತೀರ್ಥ, ದಾನ, ತಪಸ್ಸು, ಗತಿಗಳು, ಫಲ ಹೀಗೆ ಎಂಟು ವಿಷಯಗಳಿರಬೇಕೆಂದು ಹೇಳಲಾಗಿದೆ. ಇದನ್ನೇ ಪಂಪ “ಪುರಾಣಕ್ಕಂ ಲೋಕಾಕಾರಕಥನಮುಂ ದೇಶನಿವೇಶೋಪದೇಶಮುಂ ನಗರ ಸಂಪತ್ಪರಿವರ್ಣನಮುಂ ರಾಜ್ಯರಾಮಣೀಯಕಾಖ್ಯಾನಮುಂ ತೀರ್ಥಮಹಿಮಾ ಸಮರ್ಥ ನಮುಂ ಚತುರ್ಗತಿಸ್ವರೂಪನಿರೂಪಣಮುಂ ತಪೋದಾನವ್ಯಾವರ್ಣನಮುಂ ತತ್ಫಲಪ್ರಾಪ್ತಿ ಪ್ರಕಟನಮುಮೆಂದಿಂತವಯವಂಗಳೆಂಟಕ್ಕುಂ” ಎಂದೂ, ಚಾವುಂಡರಾಯನು “ಇಂತು ಕಾಲಾವತಾರಮುಂ ಷೋಡಶಕುಲಧರಾವತಾರಮುಮಂ ಪ್ರಥಮಾನುಯೋಗ ಪೀಠಿಕೆಯೊಳಭಿ ವರ್ಣಿಸೆ ಪುರಾಣಕಥನದೊಳ್‌ಲೋಕಾಖ್ಯಾನಮುಂ ದೇಶಖ್ಯಾನಮುಂ ನಗರಾಖ್ಯಾನಮುಂ ರಾಜಾಖ್ಯಾನಮುಂ ತೀರ್ಥಾಖ್ಯಾನಮುಂ ತಪೋದಾನಾಖ್ಯಾನಮುಂ ಗತಾಖ್ಯಾನಮುಂ ಫಲಾಖ್ಯಾನಮುಮೆಂದಷ್ಟವಿಧ ವರ್ಣನಮಕ್ಕುಂ” ಎಂದೂ ಹೇಳಿದ್ದಾರೆ. ಈ ಪರಂಪರೆಯಲ್ಲಿ ಒಂದಿಷ್ಟು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ, ರನ್ನ.

ಸುರಲೋಕಾವತರೋತ್ಸವಂ ಪರಿಕೃತಂ ಜನ್ಮಾಭಿಷೇಕಕೋತ್ಸವಂ
ಪರಿನಿಷ್ಕ್ರಾಂತಿಮಹೋತ್ಸವಂ
ಪ್ರವಿಮಲಂ ಕೈವಲ್ಯಬೋಧೋತ್ಸವಂ
ಪರಿನಿರ್ಮಾಣಮಹೋತ್ಸವಂ
ಜಿನ [ಕಥಾ]ಕಲ್ಯಾಣಮಯ್ದುಂ ಸವಿ
ಸ್ತರದಿಂದಿರ್ಪುವು
ವರ್ಣಕಂಗಳಿವರಿಂ ಭವ್ಯಾಂಗಮೇನೊಪ್ಪದೇ ||

ಹೀಗೆ ಹೇಳುವಲ್ಲಿ ತೀರ್ಥಂಕರನ “ಪಂಚಕಲ್ಯಾಣ”ಗಳೇ ಪುರಾಣದ ಪಂಚಹಂತಗಳೆಂಬ ಸೂಚನೆಯಿದೆ. ಜಿನಸೇನಪರಂಪರೆಯ ವ್ಯಾಖ್ಯೆ ಒಂದಿಷ್ಟು ಸಂಕೀರ್ಣ ಅಥವಾ ಅಷ್ಟಷ್ಪವಾಗಿದ್ದರೆ, ಇಲ್ಲಿ “ಪಂಚಕಲ್ಯಾಣ” ಚೌಕಟ್ಟನ್ನು ಪುರಾಣದಲ್ಲಿ ಕಲ್ಪಿಸಿದುದು ವಿಶೇಷನಿಸಿದೆ. ಈ ಎರಡಕ್ಕಿಂತ ಒಂದಿಷ್ಟು ಭಿನ್ನನಾಗಿದ್ದಾನೆ, ಅನಂತನಾಥ ಪುರಾಣದ ಜನ್ನ.

ಮುನಿಮಾರ್ಗೋಕ್ತಪುರಾಣಪದ್ಧತಿಗೆ ಲೋಕಾಕಾರಮುಂ ತೀರ್ಥವ
ರ್ತನಮುಂ
ವ್ಯಾಪ್ತಚರ್ತುರ್ಗಸ್ಥಿತಿಗಳುಂ ಭಾಸ್ವತ್ತಪೋದಾನಕೀ
ರ್ತನಮುಂ
ತತ್ಫಲಸಿದ್ಧಿಯುಂ ನೆಗಳ್ದುವೈದಂಗಂ ಕವಿಪ್ರೋಕ್ತ ಕಾ
ವ್ಯನಿಬಂಧೋಚಿತಮೆಂಟು
ದೇಶನಗರೀರಾಜ್ಯೋತ್ಸವಾಖ್ಯಾನದಿಂ ||

ಎಂದು ಹೇಳುವಲ್ಲಿ ಜಿನಸೇನಾಚಾರ್ಯರ ಪರಂಪರೆಯನ್ನು ಒಪ್ಪಿಕೊಂಡಿದ್ದರೂ, ಅವರು ಸೂಚಿಸುವ ಎಂಟು ಅಂಗಗಳಲ್ಲಿ ಲೋಕಾಕಾರ ಕಥನ, ತೀರ್ಥಮಹಿಮಾಸಮರ್ಥನ, ಚತುರ್ಗತಿಸ್ವರೂಪ, ತಪೋದಾನವಿಧಾನ ವರ್ಣನ ಮತ್ತು ತತ್ಫಲಪ್ರಾಪ್ತಿ-ಈ ಐದು “ಮುನಿಮಾರ್ಗ”ವೆಂದೂ ದೇಶ, ನಗರ ಮತ್ತು ರಾಜ್ಯೋತ್ಸವಾಖ್ಯಾನ ಈ ಮೂರು ಮೂರು “ಕವಿಮಾರ್ಗ”ವೆಂದೂ ಬಿಡಿಸಿ ಮಂಡಿಸಿದ್ದಾನೆ.

ಕನ್ನಡದಲ್ಲಿ ಈ ಮೂರು ದಾರಿಗಳ (ಪಂಪ, ರನ್ನ, ಜನ್ನ) ನೂರಾರು ಜೈನ ಪುರಾಣಗಳು ಸೃಷ್ಟಿಯಾಗುತ್ತ ಬಂದಿದ್ದರೂ ಅವುಗಳಲ್ಲಿ ಆದಿನಾಥ, ಪಾರ್ಶ್ವನಾಥ, ಮಹಾವೀರ, ಅಂತಿಮ ಜಿನನೆಂಬ ಕಾರಣದಿಂದ  ಇವರು ಹೆಚ್ಚು ಸಲ ವಸ್ತುವಾದರೂ ಪಾರ್ಶ್ಚನಾಥ, ಮಹಾವೀರ ಪುರಾಣಗಳ ಸಂಖ್ಯೆಯೇ ಅಧಿಕ. ಆದಿನಾಥ ಪ್ರಥಮಜಿನ, ಮಹಾವೀರ ಅಂತಿಮ ಜಿನನೆಂಬ ಕಾರಣದಿಂದ ಇವರು ಹೆಚ್ಚು ಸಲ ವಸ್ತುವಾದರೂ ಪಾರ್ಶ್ವನಾಥ ಹೆಚ್ಚು ಸಲ ವಸ್ತುವಾಗಲು ಮುಖ್ಯ ಕಾರಣ, ಈತನ ಯಕ್ಷಿಯಾದ “ಪದ್ಮಾವತಿ”. ಕನಾಟಕದಲ್ಲಿ ಪದ್ಮಾವತಿಯಕ್ಷಿ ತುಂಬ ಪ್ರಭಾವಶಾಲಿ ದೇವತೆ. ಇವಳ ಮೇಲಿನ ಭಕ್ತಿಕಾರಣವಾಗಿ ಇವಳ ತೀರ್ಥಂಕರನಾದ ಪಾರ್ಶ್ವನಾಥನು ಕಥಾವಸ್ತುವಾಗುತ್ತ ಬಂದನೆಂದು ಹೇಳಬಹುದು. ಇವನು ಅಂತಿಮಪೂರ್ವ (೨೩) ತೀರ್ಥಂಕರನಾಗಿದ್ದುದೂ ಕವಿಗಳ ಆಕರ್ಷಣೆಗೆ ಇನ್ನೊಂದು ಕಾರಣವಾಗಿರಬಹುದು.

ಚರಿತ್ರೆ

ಮೇಲಿ ಹೇಳಿದ ಮಹಾಪುರಾಣ, ಪುರಾಣ, ಚರಿತಪುರಾಣಗಳಿಗೆ ಹೊರತಾದ ಅಂದರೆ ೬೩ ಮಹಾಪುರುಷರಿಗೆ ಹೊರತಾದ ಕಥಾತ್ಮಕ ಜೈನಸಾಹಿತ್ಯವನ್ನು “ಚರಿತ್ರೆ” ಎಂದು ಕರೆಯಬಹುದು. ಈ ಪದ ಚರಿತೆ, ಚರಿತ ರೂಪಗಳಲ್ಲಿಯೂ ಬಳಕೆಯಾಗಿದೆ. ಇದು ಪೌರಾಣಿಕ, ಚಾರಿತ್ರಿಕ ಇಲ್ಲವೆ ಕಾಲ್ಪನಿಕವಾಗಿರಬಹುದು. ಪೌರಾಣಿಕಕ್ಕೆ ಸುಕುಮಾರ ಚರಿತೆ, ಪದ್ಮಾವತಿಚರಿತ್ರೆ, ಐತಿಹಾಸಿಕಕ್ಕೆ ಕೊಲ್ಲಾಪುರ ನಿಂಬಸಾಮಂತರಾಜನ ಚರಿತೆ, ಬಿಜ್ಜಳರಾಯ ಚರಿತೆ, ಪೂಜ್ಯಪಾದಚರಿತೆ, ಕಾಲ್ಪನಿಕಕ್ಕೆ ಅಂಜನಾಚರಿತೆ, ಅನಂತಕುಮಾರಿ ಚರಿತೆಗಳನ್ನು ಉದಾಹರಣೆಯಾಗಿ ಹೇಳಬಹುದು. ಇವು ಕೆಲವೊಮ್ಮೆ ಪುರಾಣ, ಕಥೆ ಎಂಬ ಉತ್ತರಪದದೊಂದಿಗೆ ಬಳಕೆಯಾಗುವುದನ್ನು ನೋಡಿದರೆ ಚರಿತ್ರೆ ಪದವೂ ಕಟ್ಟು ನಿಟ್ಟಾಗಿ ಬಳಕೆಯಾಗಿಲ್ಲವೆಂದು ತಿಳಿದುಬರುತ್ತದೆ.

ಹೀಗೆ ಜೈನಸಾಹಿತ್ಯದಲ್ಲಿ ಪಾರಿಭಾಷಿಕ, ಅರೆಪಾರಿಭಾಷಿಕಗಳಂತೆ ಮಹಾಪುರಾಣ ಪುರಾಣ, ಚರಿತಪುರಾಣ-ಚರಿತೆ ಪದಗಳು ಬಳಕೆಯಾಗುತ್ತ ಬಂದಿವೆಯೆಂದು ಹೇಳಬಹುದು.