ಪ್ರಾಚೀನಶಾಸ್ತ್ರಗಳಾದ ಅಲಂಕಾರ, ವ್ಯಾಕರಣ, ಛಂದಸ್ಸು, ಆಧುನಿಕ ಶಾಸ್ತ್ರಗಳಾದ ಗ್ರಂಥಸಂಪಾದನೆ, ಸಂಶೋಧನೆ, ಜಾನಪದ, ನಾಮವಿಜ್ಞಾನ, ಭಾಷಾಂತರ ಇವುಗಳ ‘ಜಿಜ್ಞಾಸೆ’ ರೂಪದ ಲೇಖನಗಳ ಸಂಗ್ರಹವಿದು. ಹೀಗಾಗಿ ಈ ಪುಸ್ತಕವನ್ನು ಪ್ರಾಚೀನ, ಆಧುನಿಕವೆಂದು ವಿಭಾಗಿಸಲಾಗಿದೆ ಮತ್ತು ಈ ಎರಡೂ ಕ್ಷೇತ್ರಗಳ ಮುಖ್ಯ ವಿಷಯಗಳ ಬಗ್ಗೆ ನಡೆಸಿದ ಮೂಲ ಜಿಜ್ಞಾಸೆ ಕಾರಣವಾಗಿ, ಇದಕ್ಕೆ ‘ಪರಿಕಲ್ಪನೆ’ ಎಂದು ಹೆಸರಿಡಲಾಗಿದೆ.

ನನಗೆ ಗ್ರಂಥಕ್ಕಿಂತ ಸಂಲೇಖನ ಬರವಣಿಗೆ ಇಷ್ಟವಾದುದು. ನನ್ನ ಇಂಥ ಸಂಲೇಖನಗಳ ನಾಲ್ಕು ಸಂಪುಟಗಳು ‘ಮಾರ್ಗ’ ಹೆಸರಿನಿಂದ ಬೆಳಕು ಕಂಡಿವೆ. ಈ ಸಂಪುಟಗಳಿಂದ ಆಯ್ದ ಲೇಖನಗಳ ‘ಐತಿಹಾಸಿಕ’, ‘ಸಂಸ್ಕೃತಿ-ವಿಕೃತಿ’ ಹೆಸರಿನ ಎರಡು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಇವುಗಳಲ್ಲಿ ‘ಐತಿಹಾಸಿಕ’ವು ಮಹತ್ವದ ಸಂಶೋಧನ ಲೇಖನಗಳ ‘ಸಂಗ್ರಹ’ವಾಗಿದ್ದರೆ, ‘ಸಂಸ್ಕೃತಿ-ವಿಕೃತಿ’ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಲೇಖನಗಳ ‘ಸಂಕಲನ’ವಾಗಿದೆ. ಈ ಪುಸ್ತಕ ಅವುಗಳಿಂದ ಭಿನ್ನವೆಂಬಂತೆ ಬೇರು ಹುಡುಕುವ, ಬೇರಿನಲ್ಲಿ ಕಳೆದುಹೋದ ಬೀಜವನ್ನು ಗುರುತಿಸುವ ಕೆಲಸ ಮಾಡುತ್ತಲಿದೆ.

‘ಪರಿಕಲ್ಪನೆ’ ತುಂಬ ಮಹತ್ವದ ಪದ. ‘ಅರ್ಥಗ್ರಹಿಕೆ’ ಎಂಬುದು ಇದರ ಅರ್ಥ. ಇಲ್ಲಿಯ ಲೇಖನಗಳು ಜ್ಞಾನಕ್ಷೇತ್ರವೊಂದರ ಮೂಲಸತ್ಯವನ್ನು ಕುರಿತು ನಡೆಸಿದ ಅನ್ವೇಷಣೆಗಳಾಗಿವೆ. ಹೊಸದನ್ನು ಹೇಳದಿದ್ದರೆ ಬರೆಯಲೇಬಾರದು ಎಂಬ ಪ್ರಜ್ಞೆಯ ನೆಲೆಯಲ್ಲಿ ಹುಟ್ಟಿದ ಇವು, ಮೇಲೆ ಹೇಳಿದ ಕ್ಷೇತ್ರಗಳನ್ನು ಹೊಸರೀತಿಯಿಂದ ನೋಡುವ ಇಲ್ಲವೆ ಅವುಗಳ ಹೊಸ ಮಗ್ಗಲುಗಳನ್ನು ತಿಳಿಸಿಕೊಡುವ ಕಾರ್ಯಮಾಡುತ್ತವೆ.

ಕಾಲದೃಷ್ಟಿಯಿಂದ ‘ಸಾಹಿತ್ಯ’ಕ್ಕಿಂತ ಕಾವ್ಯ, ಕಾವ್ಯಕ್ಕಿಂತ, ‘ವಾಙ್ಮಯ’ ಹಳೆಯ ಪರಿಭಾಷೆಗಳಾಗಿದ್ದು, ಒಂದು ಸಾಮಾಜಿಕ ಹಿತದ ಮೇಲೆ, ಇನ್ನೊಂದು ಕಾವ್ಯಸೌಂದರ್ಯದ ಮೇಲೆ, ಮತ್ತೊಂದು ಭಾಷಾಸೃಜನಶೀಲತೆಯ ಮೇಲೆ ಹೆಚ್ಚು ಒತ್ತು ಕೊಡುತ್ತವೆ. ಸಾಹಿತ್ಯವು ಮೂಲತಃ ಸಮೂಹ ಆಸ್ತಿಯಾಗಿದ್ದು, ಕ್ರಮೇಣ ಅರೆ ಖಾಸಗಿ ಆಸ್ತಿಯಾಗಿ, ಇಂದು ಖಾಸಗಿ ಆಸ್ತಿ ನೆಲೆಗೆ ಬಂದು ನಿಂತಿದೆ. ಪ್ರಾಚೀನ ಕನ್ನಡ ಸಾಹಿತ್ಯವು ಶ್ರವಣನಿಷ್ಠವಾಗಿ ಹುಟ್ಟಿದ್ದು, ಇಂದು ಸಾಕ್ಷರತೆ ಕಾರಣವಾಗಿ ಅದನ್ನು ವಾಚನನಿಷ್ಠವಾಗಿ ಗ್ರಹಿಸುವ ಮೂಲಕ, ಅದರ ಸಂವಹನಸತ್ಯಕ್ಕೆ ಅನ್ಯಾಯಮಾಡುತಲಿದ್ದೇವೆ. ಪ್ರಾಚೀನಕಾಲದಲ್ಲಿ ಸಾಹಿತ್ಯಕೃತಿಯೊಂದು ಆಸ್ಥಾನದಲ್ಲಿ ವಿದ್ವಾಂಸರ ಚರ್ಚೆಗೆ ಒಳಗಾಗಿ ರಾಜಸಮ್ಮತಿಯಿಂದ ಹೊರಬರುತ್ತಿದ್ದು, ಕೆಲವು ಕೃತಿಗಳಿಗೆ ಬಳಸಲಾಗಿರುವ ‘ಶಿವಮಾರಮತ’, ‘ನೃಪತುಂಗಾನುಮತ’, ‘ರಟ್ಟಮತ’ ಎಂಬ ಶೀರ್ಷಿಕೆಗಳಲ್ಲಿ ಇದರ ಸೂಚನೆ ಉಳಿದುಕೊಂಡಿದೆ. ತೊಳ್ಕಾಪ್ಪಿಯಂ ಮತ್ತು ಕವಿರಾಜಮಾರ್ಗಗಳು ಎಷ್ಟೇ ಸಂಸ್ಕೃತ ಪ್ರಭಾವಕ್ಕೆ ಒಳಗಾದರೂ, ಮೂಲತಃ ಅವು ದ್ರಾವಿಡ ಕಾವ್ಯತತ್ವ, ದ್ರಾವಿಡ ಕಾವ್ಯಶಾಸ್ತ್ರ ವಿನ್ಯಾಸವನ್ನೊಳಗೊಂಡ ಕೃತಿಗಳಾಗಿವೆ. ಪೊನ್ನ ಅನುಪಲಬ್ಧ ಭುವನೈಕ ರಾಮಾಭ್ಯುದಯವು ಮೇಲಿನ ಸ್ತರದಲ್ಲಿ ಕಾವ್ಯತತ್ವವಿಚಾರ, ಕೆಳಗಿನ ಸ್ತರದಲ್ಲಿ ರಾಷ್ಟ್ರಕೂಟ ಮೂರನೆಯ ಕೃಷ್ಣನಿಗೆ ಸಂಬಂಧಿಸಿದ ಉದಾಹರಣೆಗಳನ್ನೊಳಗೊಂಡ ಅಲಂಕಾರಗ್ರಂಥವಾಗಿರಬಹುದು. ಮೇಲೆ ಹೇಳಿದ ಭುವನೈಕರಾಮಾಭ್ಯುದಯದಂಥ “ಶಾಸ್ತ್ರಕಾವ್ಯ”ವಲ್ಲದೆ “ಶ್ಲೇಷಕಾವ್ಯ”ಗಳು ಸಂಸ್ಕೃತ ಇತ್ಯಾದಿ ಭಾಷೆಗಳಲ್ಲಿ ಹುಟ್ಟಿದ್ದರೂ, ಪಂಪಾದಿಗಳ ‘ಸಮಸ್ತಕಾವ್ಯ’ ಸೃಷ್ಟಿ, ಕನ್ನಡಿಗರ ಕೊಡುಗೆಯಾಗಿದೆ. ಕನ್ನಡ ಚಂಪೂ ಪ್ರಕಾರದ ಮೂಲವನ್ನು ಸಂಸ್ಕೃತದಲ್ಲಿ ಹುಡುಕುವ ವ್ಯರ್ಥಪ್ರಯತ್ನ ನಡೆದಿದ್ದು, ಅದು ಕನ್ನಡಿಗರ ಪ್ರಸಂಗದ (ತಾಳಮದ್ದಳೆ)ಗ್ರಾಂಥಿಕ ರೂಪವಾಗಿದೆ. ಅದರ ನಿಜನಾಮ ಚಂಪೂ ಅಲ್ಲ, ಪ್ರಬಂಧ. ಜೈನರು ಪುರಾಣ, ಚರಿತಪುರಾಣ, ಮಹಾಪುರಾಣ, ಲೌಕಿಕ ಕಾವ್ಯ, ಆಗಮಿಕ ಕಾವ್ಯ, ಲೌಕಿಕವನ್ನು ಸಮಸ್ತೀಕರಿಸಿದ ಕಾವ್ಯ ಮೊದಲಾದ ಯಶಸ್ವೀ ಪ್ರಯೋಗಗಳನ್ನು ಕನ್ನಡದಲ್ಲಿ ನಡೆಸಿದವರಾಗಿದ್ದಾರೆ. ರಾಷ್ಟ್ರಕೂಟ ನೃಪತುಂಗನ (೯ನೆಯ ಶತಮಾನ) ಆಸ್ಥಾನದಂತೆ ಕಲ್ಯಾಣ ಚಾಲುಕ್ಯ ಜಯಸಿಂಹನ (೧೧ನೆಯ ಶತಮಾನ)ಆಸ್ಥಾನವೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಪ್ರಯೋಗಗಳಿಗೆ ಜನ್ಮಭೂಮಿಯೆನಿಸಿದ್ದು, ಅಲ್ಲಿ ಸಾಹಿತ್ಯದೊಂದಿಗೆ ಕಾವ್ಯಶಾಸ್ತ್ರಸಾಹಿತ್ಯ, ಲೌಕಿಕಶಾಸ್ತ್ರ ಸಾಹಿತ್ಯ ಕನ್ನಡದಿಂದ ಸಂಸ್ಕೃತಕ್ಕೆ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಸಾಹಿತ್ಯ ಹುಟ್ಟಿದೆ. ಹೀಗಾಗಿ ೧೧ನೆಯ ಶತಮಾನ ಬರಡು ಯುಗವಲ್ಲ, ಸಾಹಿತ್ಯ ಪ್ರಯೋಗಯುವಾಗಿದೆ. ಆದಿಪಂಪನ ಪರಂಪರೆಯನ್ನು ತೀವ್ರವಾಗಿ ಪ್ರತಿಭಟಿಸಿದ ಕಾರಣ, ನಾಗಚಂದ್ರ ತನ್ನನ್ನು ‘ಅಭಿನವ ಪಂಪ’ನೆಂದು ಕರೆದುಕೊಂಡಿದ್ದು, ಭಾವವನ್ನು ಉದ್ರೇಕಗೊಳಿಸುವ ಎಂಟು ಲೌಕಿಕ ರಸಗಳ ‘ಲೌಕಿಕ ಕಾವ್ಯ’ ರಚನೆಯನ್ನು ನಿರಾಕರಿಸಿ, ಅದನ್ನು ಉದ್ರೇಕಿಸುತ್ತಲೇ ಉಪಶಮನಗೊಳಿಸುವ ಒಂಬತ್ತು ರಸಗಳ ‘ಆಗಮಿಕ ಕಾವ್ಯ’ ರಚನೆಯನ್ನು ಇವನು ಪ್ರೋತ್ಸಾಹಿಸುತ್ತಾನೆ. ಬಹುಶಃ ಕನ್ನಡದಲ್ಲಿ ನಾಥಸಂಪ್ರದಾಯದವರ ಸೃಷ್ಟಿಯಾಗಿರುವ ಸೂಳ್ನುಡಿ ಪ್ರಕಾರಕ್ಕೆ ‘ಸತ್ಸಗದ ಮಾತು’ ಎಂಬ ಅರ್ಥವಿದ್ದು, ಇದನ್ನು ೧೨ನೆಯ ಶತಮಾನದ ಅನುಭಾವಿಗಳು ‘ವಚನ’ವೆಂದು ಕರೆದರೆ, ಆಚಾರ್ಯರು ಈ ಸಿದ್ಧಪಠ್ಯವನ್ನು ಆಗಮೀಕರಣಗೊಳಿಸಿ ‘ವಚನಾಗಮ’ವೆಂದು ಕರೆದಂತಿದೆ. ‘ಲಿಂಗವಿಲ್ಲದ ಶಬ್ದಸೂತಕ, ಕೇಳಲಾಗದು’ ಎನ್ನುತ ಶರಣರು ‘ಭಾಷೆ’ ಸೂತಕರಹಿತವಾಗಿರಬೇಕೆನ್ನುತ್ತ, ಸಂಸ್ಕೃತದ ಸಂಪರ್ಕವೆಂಬ ಜಟಿಲತೆ, ರಾಜಸ್ತುತಿಯೆಂಬ ದುರ್ಬಳಕೆ-ಈ ಎರಡೂ ಸೂತಕಗಳಿಂದ ಕನ್ನಡ ಭಾಷೆಯನ್ನು ಮುಕ್ತಗೊಳಿಸಿ ‘ವಚನ’ ಮಾಧ್ಯಮಕ್ಕೆ ಬಳಸಿದ್ದು, ಈ ಮಾಧ್ಯಮವು ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬರೆದ ಸೂತ್ರವೆನಿಸಿದರೆ ಮತ್ತು ಭಾಷಾವಿನ್ಯಾಸದಲ್ಲಿ ಅನೇಕ ವಾಕ್ಯ ಸಾಧ್ಯತೆಗಳನ್ನು ಸೃಷ್ಟಿಸಿದೆ. ತರುವಾಯದ ಕಾಲದಲ್ಲಿ ‘ವಚನ’ವೆಂಬ ಸಿದ್ಧಸಾಹಿತ್ಯವನ್ನು ಬಳಸಿಕೊಂಡು ಶ್ರಮಪ್ರಧಾನವಾದ ‘ಸಂಗ್ರಹ’, ತತ್ವಪ್ರಧಾನವಾದ ಸಂಕಲನ, ಸಂವಾದ ಪ್ರಧಾನವಾದ ‘ಸಂಪಾದನೆ’ಗಳೆಂಬ ಮರುಪ್ರಕಾರಗಳು ಹುಟ್ಟಿಕೊಂಡುದು, ಒಂದು ವಿಶಿಷ್ಟ ಸಾಧನೆಯಂದೇ ಹೇಳಬೇಕು. ರೂಪದೃಷ್ಟಿಯಿಂದ ಸರ್ವಜ್ಞನ ಬರವಣಿಗೆ ಪದ್ಯನಿಷ್ಠವಾಗಿದ್ದರೂ, ಶರಣರ ಬರವಣಿಗೆ ಗದ್ಯನಿಷ್ಠವಾಗಿದ್ದರೂ ಅವುಗಳನ್ನು ‘ವಚನ’ವೆಂಬ ಒಂದೇ ಹೆಸರಿನಿಂದ ಕರೆದುದನ್ನು ನೋಡಿದರೆ, ಈ ಶಬ್ದವು ಸಾಹಿತ್ಯದ ಬೇರೆ ಲಕ್ಷಣವನ್ನು ಸೂಚಿಸುತ್ತಿದ್ದು, ಅದು ನಡೆದಂತೆ ನುಡಿದವರ ಪ್ರತಿಜ್ಞಾ (ವಚನ)ವಾಕ್ಯವೆಂಬ ಅರ್ಥವನ್ನು ಸ್ಪುರಿಸುತ್ತಿರಬಹುದೆನಿಸುತ್ತದೆ. ಇದರಲ್ಲಿ ಗದ್ಯಮುಖಿಯಾಗಿರುವ ‘ವಚನ’ವನ್ನು ಬಿಟ್ಟರೆ, ಪದ್ಯಮುಖಿಯಾಗಿರುವ ‘ಸ್ವರವಚನ’ವೆಂಬ ಬೇರೊಂದು ಪ್ರಕಾರವು ಬೆಳೆದುಬಂದಿರುವುದರಿಂದ, ಈಗಿನ ಮಟ್ಟಿಗೆ ಶರಣರೇ ಕನ್ನಡ ಗೀತಸಾಹಿತ್ಯ ಪಿತಾಮಹರೆಂದು ಹೇಳಬಹುದು.

ಕುಮಾರವ್ಯಾಸಾದಿಗಳು ಹೇಳುವ “ವೀರನಾರಾಯಣನೆ ಕವಿ. ಲಿಪಿಕಾರ ಕುವರವ್ಯಾಸ”ವೆಂಬಂಥ ಮಾತುಗಳು ವ್ಯಕ್ತಿತ್ವದ ನಿರಾಕರಣೆಯನ್ನಲ್ಲ, ವ್ಯಕ್ತಿತ್ವದ ನಿರ್ಲಿಪ್ತ ಸ್ಥಿತಿಯನ್ನು, ವಿಕಾಸಸ್ಥಿತಿಯನ್ನು ಸೂಚಿಸುತ್ತಿದ್ದು, ಇದು ಟಿ.ಎಸ್‌. ಇಲಿಯಟ್‌ಹೇಳುವ ವ್ಯಕ್ತಿತ್ವ ನಿರಸನ ತತ್ವ (Impersonal Theory)ವನ್ನು ಪ್ರತಿನಿಧಿಸುತ್ತದೆ.

ಪ್ರಾಚೀನ ಕನ್ನಡದಲ್ಲಿ ಶಬ್ದದ ಎರಡನೆಯ  ಸ್ಥಾನದ ಆ ಅಕ್ಷರವನ್ನು ಅs ಎಂಬಂತೆ ಉಚ್ಚರಿಸುತ್ತಿದ್ದರೆಂದು, ಅದನ್ನು ಇಂದು ಆ ದಂತೆ ಉಚ್ಚರಿಸಲಾಗುವುದೆಂದು (ಉದಾ. ಮಾದರಚೆನ್ನಯ್ಯ>ಮಾದsರ ಮಾದಾರ ಚೆನ್ನಯ್ಯ) ತಿಳಿದುಬರುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಬ್ರಾಹ್ಮಣರು ಸಾಮಾನ್ಯವಾಗಿ ಹದಿನೈದನೆಯ ಶತಮಾನದವರೆಗೆ ಅಸ್ಪೃಶ್ಯ ದೃಷ್ಟಿಯನ್ನು, ಜೈನರು ಅವ್ಯಾವಹಾರಿಕವೆಂಬಷ್ಟು ಅತಿಪ್ರೀತಿಯ (ಉದಾ. ಆಂಡಯ್ಯ) ದೃಷ್ಟಿಯನ್ನು, ಲಿಂಗಾಯತರು ಕನ್ನಡಕ್ಕೆ ಧಕ್ಕೆ ಬರುವಂತೆ ಯಾವುದೇ ಭಾಷೆಯ ಶಬ್ದ ವಾಕ್ಯಗಳನ್ನು ಸ್ವೀಕರಿಸುವ ವೈಜ್ಞಾನಿಕ (ಆರೋಗ್ಯಕರ) ದೃಷ್ಟಿಯನ್ನು ಹೊಂದಿದ್ದರು. ಶಬ್ದಮಣಿದರ್ಪಣದ ಇಡೀ ತದ್ಧಿತ ಪ್ರಕರಣ ಅವೈಜ್ಞಾನಿಕವಾಗಿದ್ದು, ಕೇಶಿರಾಜ ಹೇಳುವ ತದ್ಧಿತಪ್ರತ್ಯಗಳ ಸಂಖ್ಯೆ ೨೯, ಆದರೆ ನಿಜವಾಗಿ ಅಲ್ಲಿರುವವು ೧೩ ಮಾತ್ರ. ಶಬ್ದಮಣಿದರ್ಪಣಕ್ಕೆ ಕೇಶಿರಾಜನು ಅರ್ಥವೃತ್ತಿಯನ್ನು ಲಿಂಗಣಾರಾಧ್ಯನು ಅನ್ವಯವೃತ್ತಿಯನ್ನು ಬರೆದಿದ್ದು, ಆತನದು ಸಾಮಾನ್ಯವಾಗಿ ಸಂಗ್ರಹಸ್ವರೂಪದ್ದು, ಈತನದು ಸಾಮಾನ್ಯವಾಗಿ (ವೃತ್ತಿ ಮತ್ತು ಪ್ರಯೋಗ) ಮಿಶ್ರಣರೂಪದ್ದೆಂದು ತಿಳಿದುಬರುತ್ತದೆ.

ಮೂರು ಬಗೆಯ ಅಂಶಗಳಲ್ಲಿ ರುದ್ರಗಣದ ಅಸ್ತಿತ್ವದ ಬಗ್ಗೆ ನನಗೆ ಸಂದೇಹವಿದೆ. ಮಿಕ್ಕ ಬ್ರಹ್ಮಗಣ ಮತ್ತು ವಿಷ್ಣುಗಣಗಳು ಒಂದು ಕಾಲ ಸಂದರ್ಭದಲ್ಲಿ ಅಂಶಗಣದಿಂದ ಮಾತ್ರಾಗಣಕ್ಕೆ ಪರಿವರ್ತನೆಗೊಳ್ಳಲಾರಂಭಿಸಿದ ಕಾರಣ, ಬ್ರಹ್ಮಗಣದ ಸಂಖ್ಯೆ ೪ ರಿಂದ ೬ಕ್ಕೇರಿತು, ವಿಷ್ಣುಗಣದ ಸಂಖ್ಯೆ ೮ ರಿಂದ ೧೮ಕ್ಕೇರಿತು. ಇದರಿಂದಾಗಿ ಗಣಗಳಲ್ಲಿಯ ತರಂಗವು ನಿಸ್ತರಂಗಗೊಂಡಿತು. ತೀ.ನಂ.ಶ್ರೀ. ಅವರು ಕನ್ನಡ ಛಂದಸ್ಸಿನ ಬಗೆಗೆ ಹೊಸ ದಿಕ್ಕಿನಲ್ಲಿ ಆಲೋಚನೆ ಮಾಡಿದ ಆದ್ಯರಲ್ಲಿ ಒಬ್ಬರು. ಆದರೆ ಪ್ಲುತ-ಕಂಪಿತ, ಮುಡಿಪದ್ಮಗಣಗಳ ಅರ್ಥದ ವಿಷಯವಾಗಿ, ಇವುಗಳ ಮಾತ್ರಾಮೌಲ್ಯ ಮತ್ತು ಚರಣದಲ್ಲಿ ಇವು ಬರಬೇಕಾದ ಸ್ಥಾನಗಳ ವಿಷಯವಾಗಿ, ಇವುಗಳ ಮಾತ್ರಾಮೌಲ್ಯ ಮತ್ತು ಚರಣದಲ್ಲಿ ಇವು ಬರಬೇಕಾದ ಸ್ಥಾನಗಳ ವಿಷಯವಾಗಿ ಅವರು ನೀಡಿದ ನಿರ್ಣಯ ವೈಜ್ಞಾನಿಕವೆನಿಸುವುದಿಲ್ಲ. ಕಿವಿಯಿಂದ ಕೇಳಿದ ಗಣಮೌಲ್ಯವನ್ನು ನಿರ್ಧರಿಸಬೇಕಾದ ತರಂಗಯುಕ್ತ ಬ್ರಹ್ಮಗಣ, ವಿಷ್ಣುಗಣಗಳನ್ನು ಕಣ್ಣಿನಿಂದ ನೋಡಿದ ಕಾರಣ ಈ ದೋಷ ಘಟಿಸಿದೆ. ಕುವೆಂಪು ಅವರು ಅಂಶಲಯ ಘಟಿತ ಛಂದಸ್ಸಿನಿಂದ ಮಾತ್ರ ಲಯ ಘಟಿತ ಛಂದಸ್ಸನ್ನು ಬಳಸುತ್ತಾರೆ. ಹೀಗಿದ್ದೂ ಅವರು ಛಂದಸ್ಸನ್ನು ಅಲಕ್ಷಿಸಿದ ಕವಿಯಲ್ಲ, ಆಶ್ರಯಿಸಿ ನಿಂತ ಕವಿಯೂ ಅಲ್ಲ, ಅರಗಿಸಿಕೊಂಡು ಬೆಳೆದ ಕವಿ. ಪದ್ಯಕ್ಕಿಂತ ಗದ್ಯದಲ್ಲಿ ಗದ್ಯಲಯದಲ್ಲಿ ಅವರ ಶಕ್ತಿಯಿದೆ. ನಮ್ಮಲ್ಲಿ ಅಂಶಗಣದ ಚೌಕಟ್ಟು ಭದ್ರವಾಗಿದ್ದು, ಅದರ ಒಳಗಿನ ಅಂಶಗಳು ವಿರಳ ಸಾಂದ್ರವಾಗುವುದುಂಟು. ಇದು ಕಿವಿಗೆ ಪ್ರತೀತವಾಗುವ ವಿಷಯ. ಆದರೆ ಕಣ್ಣಿನಿಂದ ನೋಡಿ ಗಣವನ್ನು ನಿರ್ಧರಿಸುವ ತಪ್ಪು ರೀತಿ ಕಾರಣವಾಗಿ, ವಿದ್ವಾಂಸರು ‘ಉಯ್ಯಲಗಣ’ವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಮೇಲಾಗಿ ಇದನ್ನು ‘ನಿಸ್ತರಂಗ’ಕ್ಕೆ ವಿರುದ್ಧವೆಂಬಂತೆ ‘ತರಂಗಗಣ’ವೆಂದು ಕರೆಯುವುದು ಹೆಚ್ಚು ಸೂಕ್ತ.

ಎರಡನೆಯ ಭಾಗ ಆಧುನಿಕ ಶಾಸ್ತ್ರಜ್ಞಾನಿಗಳಿಗೆ ಸಂಬಂಧಿಸಿದೆ. ಇಲ್ಲಿ ವಿದ್ವಾಂಸರೇ ಹೊಸ ದಾರಿ ಬರೆಯಬೇಕಾಗುತ್ತದೆ, ಗುರಿ ತಲುಪಬೇಕಾಗುತ್ತದೆ.

ಗ್ರಂಥಸಂಪಾದನ ಶಾಸ್ತ್ರವು ಕಳೆದ ಶತಮಾನದಲ್ಲಿ ಕರ್ನಾಟಕವನ್ನು ಪ್ರವೇಶಿಸಿದೆ. ಇದರ ಭಾಗವಾಗಿರುವ ಹಸ್ತಪ್ರತಿ ಶಾಸ್ತ್ರವು ಸಂಯೋಜನಮುಖ ಮತ್ತು ಪ್ರಯೋಜನಮುಖಗಳೆಂದ ಎರಡು ಆಯಾಮಗಳನ್ನೊಳಗೊಂಡಿದೆ. ದೇಶದ ಮೂಲೆಮೂಲೆಯಲ್ಲಿ ಉಳಿದುಕೊಂಡಿರುವ ಹಸ್ತಪ್ರತಿಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸುವವನಿಗೆ ಸೈದ್ಧಾಂತಿಕ ಜ್ಞಾನ, ಪ್ರಾಯೋಗಿಕ ಜ್ಞಾನ, ತಾಂತ್ರಿಕಜ್ಞಾನಗಳ ಅರ್ಹತೆ ಅವಶ್ಯವೆನಿಸಿದೆ. ಇದು ಕೇಳವ ಪಠ್ಯಶೋಧವಲ್ಲ, ಪರಿಸರಶೋಧವೂ ಆಗಿದೆ. ಕನ್ನಡದ ಅಪೂರ್ವ ಆಸ್ತಿಯಾಗಿರುವ ವಚನಗಳು ‘ದೇಶೀ’ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿವೆ. ಆದರೆ ಮಾರ್ಗಸಾಹಿತ್ಯ ಸಂಪಾದನೆಯ ನಿಯಮಗಳನ್ನು ಅನ್ವಯಿಸುವುದರಿಂದ, ಈ ದೇಶೀ ಸಾಹಿತ್ಯ ಸಂಪಾದನೆಗೆ ಚ್ಯುತಿ ಬರುತ್ತದೆ, ಬಂದಿದೆ. ಕಾರಣ ಒಂದು ಉತ್ತಮ ಹಸ್ತಪ್ರತಿಯನ್ನಾಧರಿಸಿ, ಅದರ ಭಾಷಾದೋಷ, ಲಿಪಿಕಾರನ ಅಜ್ಞಾನ ಇತ್ಯಾದಿ ದೋಷಗಳನ್ನು ನಿವಾರಿಸುವುದೇ ಸರಿಯಾದ ಕ್ರಮವಾಗಿದೆ. ಮಾರ್ಗಸಾಹಿತ್ಯ ಸಂಪಾದನೆಯ ವಿಧಿವಿಧಾನಗಳನ್ನೇ ದೇಶಿಸಾಹಿತ್ಯ ಸಂಪಾದನೆಗೆ ಅನುಸರಿಸುವ ನಾವು, ಕೆಲವೊಮ್ಮೆ ಅದನ್ನು ಜನಪದಸಾಹಿತ್ಯ ಸಂಪಾದನೆಗೂ ವಿಸ್ತರಿಸುವ ದೊಡ್ಡತಪ್ಪು ಮಾಡುತ್ತಲಿದ್ದೇವೆ. ಲಿಖಿತ ಸಾಹಿತ್ಯದ ಸುತ್ತ ಬೆಳೆಯುವ ಭಿನ್ನಪಾಠ ರೀತಿಯೇ ಬೇರೆ, ಮೌಖಿಕ ಸಾಹಿತ್ಯದ ಸುತ್ತ ಬೆಳೆಯುವ ಭಿನ್ನಪಾಠ ರೀತಿಯೇ ಬೇರೆ. ಹಾಗೆ ನೋಡಿದರೆ ಜನಪದಸಾಹಿತ್ಯದ ಪ್ರತಿಸಲದ ಅಭಿವ್ಯಕ್ತಿಯೂ ಮೂಲಪಾಠವೇ, ನಿಜಪಾಠವೇ. ಆದರೆ ಅದನ್ನು ಕಾಲ, ದೇಶ, ಸಮಾಜ, ಸಂದರ್ಭ, ವ್ಯಕ್ತಿ ಈ ಪಂಚಸೂತ್ರಗಳ ಬೆಳಕಿನಲ್ಲಿ ಲಿಖಿತಕ್ಕಿಳಿಸುವುದೇ ಸರಿಯಾದ ಪರಿಷ್ಕರಣವೆನಿಸುತ್ತದೆ. ಇದಕ್ಕಿಂತ ಆಡಿಯೋ ವಿಡಿಯೋ ಚಿತ್ರಣವೇ ಸರಿಯಾದ ಪರಿಷ್ಕರಣವಾಗಿದೆ. ಇಂದು ಹಸ್ತಪ್ರತಿಗಳನ್ನಾಧರಿಸಿ ಗ್ರಂಥಪರಿಷ್ಕರಣಕ್ರಿಯೆ ಪೂರೈಸುತ್ತೇವೆ. ‘ರೂಪಕ್ಕೆ ನಾಶಮುಂಟು’ ಎಂಬ ತತ್ವಕ್ಕನುಗುಣವಾಗಿ ಲಭ್ಯ, ಅಲಭ್ಯ ಹಸ್ತಪ್ರತಿಗಳೆಲ್ಲವೂ ನಾಶವಾದ ಸಂದರ್ಭದಲ್ಲಿ, ಇಂದಿನ ಆವೃತ್ತಿಗಳ ಅಡಿಯಲ್ಲಿ ವಿದ್ವಾಂಸರು ಸಂಗ್ರಹಿಸಿರುವ ಭಿನ್ನಪಾಠಗಳ ಬಲದಿಂದ ‘ಪರಿಷ್ಕರಣದ ಪರಿಷ್ಕರಣ’ ಕೈಗೊಳ್ಳಬೇಕಾಗುತ್ತದೆ.

ಸಂಶೋಧನೆಯೆನ್ನುವುದು ಅನ್ವೇಷಣಾತ್ಮಕ, ಆವಿಷ್ಕರಣಾತ್ಮಕವೆಂದು ಎರಡು ಬಗೆಯಾಗಿದೆ. ಸಾಹಿತ್ಯಕ್ಕೆ ಸಂಬಂಧಪಟ್ಟುದು ಅನ್ವೇಷಣಾತ್ಮಕ ಸಂಶೋಧನೆ. ಇದು ಆಕರಶೋಧ, ಶೋಧಿತ ಆಕರಗಳ ವಿಶ್ಲೇಷಣ, ವಿಶ್ಲೇಷಿತ ಆಕರಗಳ ವ್ಯಾಖ್ಯಾನವೆಂದು ಮೂರು ಬಗೆಯದಾಗಿದೆ. ಇವುಗಳಲ್ಲಿ ಕೊನೆಯದನ್ನು ವಿಮರ್ಶೆಯೆಂದು ಕರೆಯಬಹುದು. ಯಾವುದೇ ಸಂಶೋಧನೆ ಇರಲಿ, ಅದು ಸಾಮಾಜಿಕ ಬದ್ಧತೆಯಿಂದ ಕೂಡಿರುವುದು ಮುಖ್ಯ. ಜನಪದ ಸಾಹಿತ್ಯ ನಿರೀಕ್ಷರಿಗಳ ಮೌಖಿಕ ಸೃಷ್ಟಿಯಾಗಿದೆ. ಶ್ರಮ, ವಿರಾಮ, ಆಚರಣೆ, ಉಪಜೀವನ ಈ ನಾಲ್ಕು ನೆಲೆಗಳಲ್ಲಿ ಹುಟ್ಟುವ ಇದು ಕಾಲ, ದೇಶ, ಪರಿಸರಗಳಿಗೆ ತಕ್ಕಂತೆ ಬದಲಾಗುತ್ತ ಬೆಳೆಯುತ್ತದೆ. ಇಂದು ಸಾಕ್ಷರತೆ ಬೆಳೆಯುತ್ತಲಿದೆ. ಶ್ರಮ, ವಿರಾಮ, ಆಚರಣೆ, ಉಪಜೀವನ ವಿಧಾನಗಳು ಬದಲಾಗಿವೆ. ಧ್ವನಿಮುದ್ರಿಕೆಯಿಂದಾಗಿ ಪಠ್ಯದ ಪುನಃ ಸೃಷ್ಟಿಕ್ರಿಯೆ ಜರುಗುತ್ತಿಲ್ಲ. ಹೀಗಾಗಿ ಜನಪದ ಸಾಹಿತ್ಯದ ಹಳೆಯ ರೀತಿಯ ಸೃಷ್ಟಿಕ್ರಿಯೆ ವಿಧಾನಗಳನ್ನು ಇನ್ನು ಮುಂದು ಅಪೇಕ್ಷಿಸುವಂತಿಲ್ಲ. ಶಿಷ್ಟ ಮತ್ತು ಜನಪದ ಸಾಹಿತ್ಯದ ಮಧ್ಯೆ ಇನ್ನೊಂದು ಬಗೆಯ ಸಾಹಿತ್ಯವಿದ್ದು, ಸಾಮಾನ್ಯವಾಗಿ ಬ್ರಾಹ್ಮಣ ಜನತೆಯಲ್ಲಿ ಬಳಕೆಯಲ್ಲಿರುವ ಅದನ್ನು ‘ಜಾನಪದ ಸಾಹಿತ್ಯ’ವೆಂದು ಕರೆಯಬಹುದು. ಜಾನಪದ ಪ್ರೇಕ್ಷಕರು ಚಿಂತನಶೀಲರಾಗಿ ಪ್ರದರ್ಶನದ ಆಳಕ್ಕೆ ಇಳಿಯದೆ, ಭಾವುಕರಾಗಿ ಮೇಲೆ ಮೇಲೆ ನೋಡುವುದರಿಂದ, ಅವರಿಗೆ ಪ್ರಥಮ ಆಕರ್ಷಣೆ ಎಂದರೆ ಆಂಗಿಕ, ಆಹಾರ್ಯ, ಆಮೇಲೆ ವಾಚಿಕ, ಕೊನೆಗೆ ಸಾತ್ವಿಕ.

ಮಾರ್ಗಸಾಹಿತ್ಯ ಮತ್ತು ಜನಪದ ಸಾಹಿತ್ಯಗಳು ಯಾವುದೇ ಲಿಖಿತಭಾಷೆಯಲ್ಲಿ ವಿರುದ್ಧಪೂರಕ ರಚನೆಗಳು. ಇವುಗಳಲ್ಲಿ ಮಾರ್ಗವೆನ್ನುವುದು, ಪ್ರಾಂತೀಯ, ಜಾನಪದವೆನ್ನುವುದು, ಉಪಪ್ರಾಂತೀಯ. ಸಾಮಾನ್ಯವಾಗಿ ಮಾರ್ಗವು ಸೋತು ನಿಂತಾಗಿ ದೇಶಿಯಿಂದ ಕಸುವು ಪಡೆಯುತ್ತ ಹೋದುದು ಇತಿಹಾಸದುದ್ದಕ್ಕೂ ಕಂಡುಬರುತ್ತದೆ. ವೀರಮೌಲ್ಯಕ್ಕೆ ಬದಲು ಭಕ್ತಿಮೌಲ್ಯ ನಮ್ಮಲ್ಲಿ ಅಸ್ತಿತ್ವಕ್ಕೆ ಬಂದುದರ ಫಲವಾಗಿ ದೊಡ್ಡಾಟದ ಮಗ್ಗುಲಲ್ಲಿ ಸಣ್ಣಾಟ ಬೆಳೆದುಬಂದಿತು. ಅತ್ತ ದೊಡ್ಡಾಟದ ಗುಂಗಿನಿಂದ ಜನ ಪೂರ್ಣ ಪರಾಗಿರಲಿಲ್ಲ, ಇತ್ತ ನಾಟಕದ ಅಭಿರುಚಿ ಆರಂಭವಾಗಿದ್ದಿತು. ಈ ಸಂಧಿಕಾಲ ಕಾರಣವಾಗಿ ಸಣ್ಣಾಟ ವಿಫುಲ ಪ್ರಮಾಣದಲ್ಲಿ ಹುಟ್ಟಲಿಲ್ಲ. ಉತ್ತರ ಕರ್ನಾಟಕದಲ್ಲಿ ಕಥಾತ್ಮಕ-ಅಕಥಾತ್ಮಕ ವಸ್ತುವನ್ನುಳ್ಳ ‘ಲಾವಣಿ’ಯು ನಿರ್ದಿಷ್ಟ ಲಕ್ಷಣಗಳಿಂದ ಕೂಡಿದ ವಿಶಿಷ್ಟ ಜನಪದಸಾಹಿತ್ಯ ಪ್ರಕಾರವಾಗಿದೆ. ಹೀಗಿರುವಾಗ ಮೈಸೂರು ಪ್ರಾಂತದಲ್ಲಿ ಇತ್ತೀಚೆಗೆ ಕಥನ ಗೀತಗಳಾದ ಬ್ಯಾಲೆಡ್‌ಗೆ ‘ಲಾವಣಿ’ಯೆಂದು ವಿದ್ವಾಂಸರು ಕರೆಯುತ್ತಲಿರುವುದು ಅವೈಜ್ಞಾನಿಕವೆನಿಸುತ್ತದೆ. ಸಂಸ್ಕೃತಿಯ ಘಟಕವಾಗಿರುವ ಅಡ್ಡ ಹೆಸರು, ಪರಂಪರೆ, ಪ್ರಾದೇಶಿಕತೆ, ವೃತ್ತಿ ಇತ್ಯಾದಿಗಳನ್ನು ಸೂಚಿಸುತ್ತಿದ್ದು, ಇವುಗಳ ಬಳಕೆಯಲ್ಲಿಯೂ ವ್ಯತ್ಯಾಸ ಕಂಡುಬರುತ್ತವೆ.

ನೋಡುವ ನಾಟಕ, ನೋಡುವ-ಕೇಳುವ ನಾಟಕ, ಕೇಳುವ ನಾಟಕ, ಓದುವ ನಾಟಕವೆಂದು ನಾಲ್ಕು ಹಂತಗಳಲ್ಲಿ ನಾಟಕ ಬೆಳೆದು ಬಂದಿದೆ. ಇವುಗಳಲ್ಲಿ ನೋಡಿಸಿಕೊಳ್ಳುವುದೇ ನಾಟಕದ ಮುಖ್ಯ ಲಕ್ಷಣವಾಗಿದೆ. ಕಲೆಯು ವ್ಯಕ್ತಿನಿಷ್ಠ, ನೆರವು ನಿಷ್ಠ, ಸಂಘಟನೆನಿಷ್ಠವೆಂದು ಮೂರು ಬಗೆಯಾಗಿದ್ದು, ನಾಟಕ ಇವುಗಳಲ್ಲಿ ಕೊನೆಯ ವರ್ಗಕ್ಕೆ ಸೇರುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಸೂತ್ರಧಾರ ಪ್ರಧಾನವಾಗಿದ್ದ ಇದು ಭಾಷಾರಹಿತವಾದ ನೋಡುವ ‘ಪ್ರದರ್ಶನಕಲೆ’ಯಾಗಿ ಬೆಳೆದಿದ್ದು, ಕಾಲ ಗತಿಸಿದಂತೆ ಭಾಷೆಯ ವಿಶೇಷ-ವಿಶಿಷ್ಟ ಪ್ರವೇಶದಿಂದಾಗಿ ‘ಸಾಹಿತ್ಯ ಕಲೆ’ಯಾಗಿ ಬೆಳೆಯಿತು. ಆದುದರಿಂದ ನಮ್ಮ ರಂಗಭೂಮಿ ಹಾಳಾಗಲು ಈ ಬದಲಾವಣೆಯೇ ಕಾರಣವೆನ್ನಬಹುದು. ಹೀಗಾಗಿ ನಾಟಕವನ್ನು ವೃತ್ತಿ, ಹವ್ಯಾಸಿ ಎಂದು ವಿಭಾಗಿಸದೆ ಸೂತ್ರಧಾರ ಪ್ರಧಾನ, ನಾಟಕವಿಪ್ರಧಾನವೆಂದು ವರ್ಗೀಕರಿಸುವುದೇ ಸರಿಯಾದ ಕ್ರಮವಾಗಿದೆ. ಭಾಷೆಯು ಸಮಾಜಗಳ ಮಧ್ಯೆ ಗೋಡೆ ಕಟ್ಟುತ್ತದೆ, ಭಾಷಾಂತರ ಆ ಗೋಡೆಯನ್ನು ಒಡೆಯುತ್ತದೆ. ಆದರೆ ಭಾಷಾಂತರವೆನ್ನುವುದು ಕೃತಕವಾಗಿ ಒಂದು ಶಬ್ದಕ್ಕೆ ಪ್ರತಿಶಬ್ದ ಇಡುವುದಿಲ್ಲ. ನಮ್ಮ ಆಡಳಿತ ಭಾಷೆಯಲ್ಲಿ ಜರುಗುತ್ತಲಿರುವ ಇಂತಹ ಕೃತಕ ಕ್ರಿಯೆ ನಿಲ್ಲಬೇಕು. ಇದೇ ರೀತಿ ಒಂದು ಪ್ರದೇಶದವರಿಗೆ ಅರ್ಥವಾಗದ ಬೇರೊಂದು ಪ್ರದೇಶದ ಭಾಷೆಗೆ ಬದಲು ಪ್ರಮಾಣಭಾಷೆಯನ್ನು ಭಾಷಾಂತರದಲ್ಲಿ ಬಳಸಬೇಕು. ಇದಲ್ಲದೆ ಭಾಷೆಯೆಂದರೆ ಶಬ್ದವಲ್ಲ, ವಾಕ್ಯ. ಹೀಗಾಗಿ ಕನ್ನಡಕ್ಕೆ ಹೊಂದುವ ವಾಕ್ಯರಚನೆ ರೂಢಗೊಳ್ಳಬೇಕು. ಈ ಎಲ್ಲ ಸಾಧ್ಯತೆಗಳು ಮಾತ್ರ ಆಡಳಿತ ಭಾಷೆಗೆ ಅರ್ಥ ತುಂಬಬಲ್ಲವು.

ಹೀಗಾಗಿ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದ, ಅನೇಕ ವಿಷಯಗಳ ಮೂಲಭೂತ ತಿಳುವಳಿಕೆಯನ್ನು ಸ್ಪಷ್ಟಪಡಿಸುವ ಲೇಖನಗಳ ಸಂಗ್ರಹವಾದ ಇದಕ್ಕೆ ‘ಪರಿಕಲ್ಪನೆ’ ಎಂದು ಹೆಸರಿಟ್ಟಿದ್ದೇನೆ. ತನ್ನ ‘ಹೊನ್ನಾರು’ ಮಾಲೆಯಲ್ಲಿ ಇದನ್ನು ಪ್ರಕಟಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ, ಅದರಲ್ಲಿಯೂ ಕುಲಪತಿಗಳಾದ ಮಾನ್ಯ ಡಾ. ಬಿ. ಎ. ವಿವೇಕ ರೈ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಆತ್ಮೀಯ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಕೃತಜ್ಞನಾಗಿದ್ದೇವೆ. ಲೇಖನ ಸಂಗ್ರಹ ಕಾರ್ಯದಲ್ಲಿ ನೆರವಾದ ಡಾ. ಹನುಮಂತ ಮೇಲಿನಮನಿ ಅವರಿಗೂ, ಡಾ. ಸರಸ್ವತಿದೇವಿ ಭಗವತಿ ಅವರಿಗೂ ವಂದನೆಗಳು.

ಎಂ. ಎಂ. ಕಲಬುರ್ಗಿ