ಕನ್ನಡನಾಡು ಏಕೀಕರಣಗೊಂಡು ಐವತ್ತು ತುಂಬಿದ ಚಿನ್ನದ ಹಬ್ಬದ ಹರ್ಷದ ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡವನ್ನು ಕಟ್ಟಿದ ಹಿರಿಯರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕನಸಿನ ಹೊನ್ನಾರು ಮಾಲೆ ಇಲ್ಲಿ ರೂಪು ತಾಳಿದೆ. ಕೃಷಿ ಸಂಸ್ಕೃತಿಯನ್ನು ನೆಲದ ಸಂಸ್ಕೃತಿಯನ್ನಾಗಿ ಭಾವಿಸಿ ಪರಿಭಾವಿಸಿ ಕಟ್ಟಿ ಬೆಳೆಸಿದ ಕನ್ನಡ ನಾಡಿನಲ್ಲಿ ಕನ್ನಡಸಾಹಿತ್ಯ ಸಂಸ್ಕೃತಿಯ ಬೀಜವನ್ನು ಬಿತ್ತಿ ಚಿನ್ನದ ಬೆಳೆಗಳನ್ನು ಬೆಳೆದ ಹಿರಿಯ ಬೇಸಾಯಗಾರರ ಒಂದೊಂದು ಹೊಸ ಬೆಳೆಯನ್ನು ನಾಡಿಗೆ ಒಪ್ಪಿಸುವ ಧನ್ಯತಾ ಭಾವ ನಮ್ಮದು. ಹೀಗೆ ಹೊನ್ನಾರು ಚಿನ್ನದ ಬೆಳೆಯೂ ಹೌದು, ಕನ್ನಡದ ಚಿಣ್ಣರಿಗೆ ಹೊಸಬೆಳೆ ಬೆಳೆಯಲು ಪ್ರೇರಣೆಯೂ ಹೌದು.

ಕಳೆದ ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಮಣ್ಣಿನಲ್ಲಿ ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಉತ್ಸಾಹ ಪ್ರೀತಿ ಮತ್ತು ಪರಿಶ್ರಮಗಳಿಂದ ನಿರಂತರವಾಗಿ ಕನ್ನಡದ ಬಹುಬೆಳೆಗಳನ್ನು ಬೆಳೆಸಿಕೊಂಡುಬಂದ ಹಿರಿಯರ ಹೊಸಬೆಳೆಯ ಹೊನ್ನಾರುಮಾಲೆಯಲ್ಲಿ ಅನನ್ಯ ಫಲಗಳನ್ನು ಪಡೆಯಲಾಗಿದೆ: ಸಾಹಿತ್ಯ, ಬದುಕು, ಸಂಸ್ಕೃತಿ ಇವುಗಳ ಬಗ್ಗೆ ಐವತ್ತು ವರ್ಷಗಳ ಹಿಂದೆ ಇದ್ದ ಪರಿಕಲ್ಪನೆಗಳು ಇಂದು ಬದಲಾವಣೆಗೊಂಡಿವೆ. ಯಾವುದು ಸಾಹಿತ್ಯ, ಯಾವುದು ಸಾಹಿತ್ಯ ಅಲ್ಲ ಎನ್ನುವ ಚರ್ಚೆ ಕಾಲಕಾಲಕ್ಕೆ ನಡೆದು ಬೇರೆ ಬೇರೆ ಅರ್ಥಗಳನ್ನು ಶೋಧಿಸುತ್ತ ಈ ಹಂತವನ್ನು ತಲುಪಿದೆ. ಸಾಹಿತ್ಯ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಬದುಕು ಎನ್ನುವ ಭಿನ್ನತೆಗಳು ಕಣ್ಮರೆಯಾಗಿ ಸಂಕೀರ್ಣ ಹಾಗೂ ವೈವಿಧ್ಯದ ವಿನ್ಯಾಸಗಳು ಕಾಣಿಸಿಕೊಂಡಿವೆ. ಸೃಜನಶೀಲ ಮತ್ತು ಸೃಜನೇತರ ಎನ್ನುವ ಪ್ರಭೇದಗಳು ಸಾಹಿತ್ಯ ಚರ್ಚೆಗಳಲ್ಲಿ ಹಿಂದಕ್ಕೆ ಸರಿದಿವೆ. ಸಾಹಿತ್ಯದ ಪಠ್ಯ ಮತ್ತು ಪರಿಸರ ಎನ್ನುವ ವರ್ಗೀಕರಣ ಅಪ್ರಸ್ತುತವಾಗಿದೆ. ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಎನ್ನುವ ಪರಿಭಾಷೆಗಳು ಈಗ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡು ಒಂದು ಇನ್ನೊಂದರೊಡನೆ ಮಿಳಿತವಾಗಿ ‘ಸಾಹಿತ್ಯ’ ಎನ್ನುವುದು ಸರ್ವವ್ಯಾಪ್ತಿಯಾಗಿದೆ ಮತ್ತು ಸರ್ವರಿಗೂ ಸಲ್ಲುವಂಥದ್ದಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನೈದು ವರ್ಷಗಳಿಂದ ‘ಸಾಹಿತ್ಯ’ದ ಪ್ರಕ್ರಿಯೆಯನ್ನು ಕುರಿತು ಚರ್ಚೆ ಹಾಗೂ ‘ಸಾಹಿತ್ಯ’ ಪರಿಕಲ್ಪನೆಯ ನಿರಂತರ ಕಟ್ಟುವಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕನ್ನಡ ಭಾಷೆ, ಸಾಹಿತ್ಯ, ಭಾಷಾಂತರ, ಹಸ್ತಪ್ರತಿ, ದ್ರಾವಿಡ ಸಂಸ್ಕೃತಿ, ಮಹಿಳಾ ಅಧ್ಯಯನ, ಚರಿತ್ರೆ, ಪುರಾತತ್ವ, ಶಾಸನಶಾಸ್ತ್ರ, ಜಾನಪದ, ಬುಡಕಟ್ಟು, ಅಭಿವೃದ್ಧಿ, ಸಂಗೀತ, ಚಿತ್ರ, ಶಿಲ್ಪ: ಹೀಗೆ ಬಹುಬಗೆಗಳಲ್ಲಿ ಬಹುಅಧ್ಯಯನ ಶಿಸ್ತುಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿ ಮತ್ತು ಕನ್ನಡನಾಡನ್ನು ಹೊಸತಾಗಿ ಶೋಧಿಸುತ್ತಾ ವಿವರಿಸುತ್ತಾ ರೂಪಿಸುತ್ತಾ ಬಂದಿದೆ. ಐವತ್ತು ವರ್ಷಗಳ ಏಕೀಕೃತ ಕನ್ನಡನಾಡಿನ ಶರೀರದಲ್ಲಿ ಹದಿನೈದು ವರ್ಷಗಳ ಕನ್ನಡ ವಿಶ್ವವಿದ್ಯಾಲಯದ ಭಾವಬುದ್ಧಿಗಳು ಜೀವಧಾತುಗಳಾಗಿವೆ.

ಕರ್ನಾಟಕ ಸರಕಾರವು ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊನ್ನಾರುಮಾಲೆಯ ಪ್ರಕಟಣೆಯ ಯೋಜನೆಯನ್ನು ಸಂತೋಷದಿಂದ ಒಪ್ಪಿಕೊಂಡು ಕನ್ನಡ ಸಂಸ್ಕೃತಿಯ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿಗಳೂ ಸಾಹಿತ್ಯ ಸಂಸ್ಕೃತಿ ಪ್ರಿಯರೂ ಆಗಿರುವ ಶ್ರೀ ಐ. ಎಂ. ವಿಠ್ಠಲಮೂರ್ತಿ ಅವರು ಹೊನ್ನಾರುಮಾಲೆಯ ಯೋಜನೆಯನ್ನು ಮೆಚ್ಚಿಕೊಂಡು ಸರಕಾರದ ಅಂಗೀಕಾರವನ್ನು ದೊರಕಿಸಿಕೊಟ್ಟು ಚಿನ್ನದ ಕನಸನ್ನು ನನಸನ್ನಾಗಿಸಿದ್ದಾರೆ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್‌. ಡಿ. ಕುಮಾರಸ್ವಾಮಿ ಅವರು ಈ ವಿಶಿಷ್ಟ ಯೋಜನೆಯನ್ನು ಅಂಗೀಕರಿಸಿ ತಮ್ಮ ಕನ್ನಡ ಸಾಹಿತ್ಯ ಸಂಸ್ಕೃತಿಯ ಕಾಳಜಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ, ಕನ್ನಡ ಸಾಹಿತ್ಯ ಸಂಸ್ಕೃತಿಯ ಕಾಳಜಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಸಾಂಸ್ಕೃತಿಕ ಪ್ರೀತಿಯನ್ನು ಕನ್ನಡ ವಿಶ್ವವಿದ್ಯಾಲಯ ಅಕ್ಕರೆಯಿಂದ ಸ್ಮರಿಸುತ್ತದೆ.

ಡಾ. ಎಂ. ಎಂ. ಕಲಬುರ್ಗಿ ಅವರು ಕನ್ನಡ ಸಂಶೋಧನ ಕ್ಷೇತ್ರಕ್ಕೆ ವಿಶೇಷ ಶಕ್ತಿಯನ್ನು ತುಂಬಿದವರು. ಸಂಶೋಧನೆಯಲ್ಲಿ ಹೊಸ ಅಧ್ಯಯನ ವಿಧಾನಗಳನ್ನು ರೂಪಿಸುವುದು ಅವರ ಕಾಯಕ. ಇವರ ಮಾರ್ಗ ಸಂಪುಟಗಳ ಸಂಪ್ರಬಂಧಗಳು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಸಂಸ್ಕೃತಿಯ ನೆಲೆಯಲ್ಲಿ ಅನೇಕ ಹೊಸ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿವೆ.  ಅವರ ಪರಿಕಲ್ಪನೆ ಎನ್ನುವ ಈ ಸಂಶೋಧನಾ ಸಂಕಲನದಲ್ಲಿ ಪ್ರಾಚೀನ ಮತ್ತು ಆಧುನಿಕ ಎನ್ನುವ ವರ್ಗಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ವಿಶಿಷ್ಟ ಶೋಧಗಳು ಮಂಡಿತವಾಗಿವೆ ಮತ್ತು ಚರ್ಚಿತವಾಗಿವೆ. ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಡಾ. ಎಂ. ಎಂ. ಕಲಬುರ್ಗಿ ಅವರು ಸ್ಥಾಪಿತ ಶೋಧಗಳನ್ನು ಪಲ್ಲಟ ಮಾಡುವ ಧೈರ್ಯದ ಮಾರ್ಗವನ್ನು ಅನುಸರಿಸುತ್ತಾರೆ. ಹೊಸ ಪರಿಭಾಷೆಗಳನ್ನು ನಿರ್ಮಿಸಿ ಅವುಗಳ ಅರ್ಥಪ್ರಬೇಧವನ್ನು ಖಚಿತಪಡಿಸುತ್ತಾರೆ. ವಾಙ್ಮಯ, ಕಾವ್ಯ ಮತ್ತು ಸಾಹಿತ್ಯ ಎನ್ನುವ ಪರಿಕಲ್ಪನೆಯಿಂದ ತೊಡಗಿ, ಚಂಪೂ-ಪ್ರಬಂಧ-ಪ್ರಸಂಗ ಎನ್ನುವ ಪ್ರಭೇದಗಳ ವಿವರಣೆಯಿಂದ ಮುಂದುವರಿದು ಶಾಸ್ತ್ರಕಾವ್ಯ-ಶ್ಲೇಷಕಾವ್ಯ-ಸಮಸ್ತಕಾವ್ಯದಂತಹ ಹೊಸ ಪರಿಭಾಷೆಗಳ ಅರ್ಥವ್ಯಾಪ್ತಿಯವರೆಗೆ ಇವರ ಅನ್ವೇಷಕ ಪ್ರವೃತ್ತಿ ಕೆಲಸ ಮಾಡಿದೆ. ಪ್ರಾಚೀನ ಕನ್ನಡದ ಉಚ್ಚಾರದಂತಹ ಲೇಖನಗಳು ಭಾಷೆಗಳ ಬರಹ ಮತ್ತು ಉಚ್ಚಾರಣೆಗಳ ನಡುವಿನ ಸಂಬಂಧವನ್ನು ಹೊಸದಾಗಿ ನೋಡುತ್ತೇವೆ. ಆಧುನಿಕ ಎನ್ನುವ ಭಾಗದಲ್ಲಿ ಪ್ರಧಾನವಾಗಿ ಹಸ್ತಪ್ರತಿ ಮತ್ತು ಜಾನಪದದಂತಹ ಸಂಶೋಧನಾ ಅಧ್ಯಯನದ ಲೇಖನಗಳು ಮೂಡಿಬಂದಿವೆ. ವಚನ, ಜಾನಪದ, ಸಾಹಿತ್ಯ, ನಾಟಕದಂತಹ ಪ್ರಕಾರಗಳನ್ನು ಪರಿಭಾವಿಸುವ ಸಂರಕ್ಷಿಸುವ ಹೊಸ ದೃಷ್ಟಿಕೋನಗಳನ್ನು ಇಲ್ಲಿ ವಿವೇಚಿಸಲಾಗಿದೆ. ಸಂಶೋಧನ, ಪರಿಷ್ಕರಣೆ, ಅಧ್ಯಯನ ಹೀಗೆ ಬಗೆಬಗೆಯ ನೆಲೆಗಳಲ್ಲಿ ಮೌಖಿಕ ಮತ್ತು ಲಿಖಿತ ವಾಙ್ಮಯವನ್ನು ಪರಿಭಾವಿಸುವ ಹೊಸ ನೆಲೆಗಳನ್ನು ಇಲ್ಲಿ ಕಂಡುಕೊಳ್ಳಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಡಾ. ಎಂ. ಎಂ. ಕಲಬುರ್ಗಿ ಅವರ ಸಾಹಿತ್ಯ ಹಾಗೂ ಸಂಸ್ಕೃತಿಯ ತುಡಿತವನ್ನು ನಿರಂತರವಾಗಿ ಇಟ್ಟುಕೊಂಡು ಸಾಮಾನ್ಯರು ಪ್ರವೇಶಿಸಲು ದುರ್ಗಮವಾದ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಾ, ಹೊಸದನ್ನು ಕಂಡುಕೊಳ್ಳುತ್ತಾ, ತಲ್ಲಣ ತವಕಗಳನ್ನು ಮೀರಿ ಕನ್ನಡ ಸಂಶೋಧನ ಕ್ಷೇತ್ರವನ್ನು ಚಲನಶೀಲವನ್ನಾಗಿ ಮಾಡಿದವರು ಅವರು. ಹೊನ್ನಾರು ಮಾಲೆಗೆ ಈ ಹಸ್ತಪ್ರತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿರುವುದಕ್ಕೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಪ್ರೀತಿ ಅಭಿಮಾನದ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತೆರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ. . ವಿವೇಕ ರೈ
ಕುಲಪತಿ