ಪೃಥ್ವಿ ಮೇಲಿನ ಮನುಷ್ಯನ ಜೀವನ ಆರಂಭದೊಂದಿಗೆ ಸಾಮಾಜಿಕ ಪರಂಪರೆಯನ್ನು ನೋಡಬಹುದು. ಈ ಮಾನವನು ಯಾವತ್ತು ಗುಂಪು ಜೀವನವನ್ನು ರಚಿಸಿಕೊಂಡನೋ ಅಂದಿನಿಂದಲೇ ನಾಗರಿಕತೆಯನ್ನು ಮೈಗೂಡಿಸಿಕೊಂಡನು. ಈ ಹಂತದಲ್ಲಿ ಹಲವಾರು ಮಾನಸಿಕ ದೈಹಿಕ ಪರಿವರ್ತನೆಗಳೊಂದಿಗೆ ದೈನಂದಿನ ಬದಲಾವಣೆ ಆಗುತ್ತಾ ಬಂದವು. ಇಂತಹ ಬದಲಾವಣೆಗಳನ್ನು ಅಥವಾ ವಿಕಾಸಗಳನ್ನು ವಿದ್ವಾಂಸರು ಗಿರಿಜನ ಸಂಸ್ಕೃತಿ ಮತ್ತು ನಗರ, ಗ್ರಾಮೀಣ ಸಂಸ್ಕೃತಿಗಳೆಂಬ ಮೂರು ಪ್ರಕಾರಗಳಲ್ಲಿ ಗುರುತಿಸಿದ್ದಾರೆ. ಪರಿವರ್ತನೆಯ ಪ್ರಕ್ರಿಯೆಯು ಎಲ್ಲ ಸಮುದಾಯಗಳಲ್ಲಿ ಏಕಕಾಲದಲ್ಲಿ ಹೊಸ ಹೊಸ ಆವಿಷ್ಕಾರ ಮತ್ತು ಚಿಂತನೆಗಳು ಉಂಟಾಗಲಿಲ್ಲ. ಅದರಲ್ಲಿ ಕೆಲವು ಸಮುದಾಯಗಳು ಹೊಸ ಶೋಧನೆ ಮತ್ತು ಚಿಂತನೆಗಳಿಂದ ಆಧುನಿಕತೆಯ ಕಡೆ ಮುಖ ಮಾಡಿ ಚಲಿಸಿದರೆ, ಇನ್ನು ಕೆಲವು ಇದರ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿದ್ದುಂಟು. ಈ ಕಾರಣದಿಂದಾಗಿ ಒಂದು ಸಮುದಾಯ ಮೇಲು ಸ್ತರದಲ್ಲಿದ್ದರೆ ಇನ್ನೊಂದು ಸಮುದಾಯ ಇಂದು ತಳಸ್ತರದಲ್ಲಿ ಇರುವ ಸಾಧ್ಯತೆ ಇದೆ.

ಭಾರತದಲ್ಲಿ ಇಂದಿಗೂ ಗ್ರಾಮ ಮತ್ತು ನಗರಗಳಿಂದ ಬಹುದೂರವಿರುವ ಆಧುನಿಕತೆಯ ಸೋಂಕಿಲ್ಲದ ಅನೇಕ ಸಮುದಾಯಗಳು ಅಸ್ತಿತ್ವದಲ್ಲಿವೆ. ಇತ್ತೀಚಿನ ಬೆಳವಣಿಗೆಯಂತೂ ಸಮುದಾಯದ ಸ್ವರೂಪವನ್ನೇ ಬದಲಾಯಿಸುತ್ತವೆ. ಒಂದು ಕಡೆ ಅರಣ್ಯನಾಶ, ಇನ್ನೊಂದು ಕಡೆ ಅರಣ್ಯ ರಕ್ಷಣಾ ನೀತಿಗಳು, ಹೊಸ ಅಣೆಕಟ್ಟುಗಳ ನಿರ್ಮಾಣ, ಬೃಹತ್‌ಕೈಗಾರಿಕೆ, ಗಣಿಗಾರಿಕೆ ಇಂತಹ ಹಲವು ಕಾರಣಗಳಿಂದ ಬುಡಕಟ್ಟು ಸಮುದಾಯದ ಜನರು ಗ್ರಾಮ ಮತ್ತು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹೀಗೆ ವಲಸೆ ಬಂದ ಜನರು ತಮ್ಮ ಜೀವನದಲ್ಲಿ ಸಂಪೂರ್ಣ ಹೊಸತನ್ನು ಅಳವಡಿಸಿಕೊಳ್ಳದೆ ಸ್ವಂತಿಕೆಯನ್ನು ಉಳಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸಿದ್ದಾರೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಯಾವುದೇ ಸಮುದಾಯಗಳು ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲದೆ ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಉದ್ಭವಿಸಿದೆ. ಯಾವುದೇ ಬೆಳೆಯುತ್ತಿರುವ ಸಮಾಜದಲ್ಲಿ ಈ ಅನಿವಾರ್ಯತೆ ಉಂಟಾಗುತ್ತಲೇ ಇರುತ್ತದೆ. ಇದರಿಂದಾಗಿ ಅನೇಕ ಆದಿವಾಸಿ ಸಮುದಾಯಗಳು ಮಾರ್ಪಾಡುಗಳನ್ನು ಒಪ್ಪಿಕೊಂಡು ತಮ್ಮ ಆಚಾರ, ವಿಚಾರಗಳಲ್ಲಿ ತಮ್ಮದೇ ಸಮಾಜ, ಸಂಸ್ಕೃತಿಯ ವೈಶಿಷ್ಟ್ಯತೆಗಳನ್ನು ಉಳಿಸಿಕೊಂಡು ಬಂದಿವೆ. ಅವರು ಹಿಂದಿನ ಕೊಂಡಿಗಳನ್ನು ಉಳಿಸಿಕೊಂಡಿರುವುದನ್ನು ಕಾಣಬಹುದು.

ಕೆಲವು ಅರಣ್ಯವಾಸಿ ಸಮುದಾಯಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಪಂಗಡಗಳು ಉಂಟಾಗಿರುವುದನ್ನು ನೋಡಬಹುದು. ಉದಾಹರಣೆಗೆ ಊರುಬೇಡ, ಮ್ಯಾಸಬೇಡ, ಕಾಡು ಕುರುಬ, ಊರುಕುರುಬ ಹಾಗೂ ಕಾಡುಗೊಲ್ಲ, ಊರುಗೊಲ್ಲ ಇತ್ಯಾದಿ.

ಈ ಪ್ರಕಾರ ಪರಿವರ್ತನೆಗೆ ಒಳಗಾದ ಭಾರತೀಯ ಸಮುದಾಯಗಳಲ್ಲಿ ಧೀರೇಂದ್ರನಾಥ ಮಜುಂದಾರ್‌ಅವರು ಮೂರು ಹಂತಗಳನ್ನು ಗುರುತಿಸಿದ್ದಾರೆ.

೧. ಜಾತಿಗಳಾಗಿ ಸಂಪೂರ್ಣ ಪರಿವರ್ತಿತವಾಗಿರುವ ಸಮುದಾಯಗಳು.

೨. ಹಿಂದೂಗಳೊಡನೆ ಭಾಗವಹಿಸಿಯೂ ತಮ್ಮ ಸಂಪ್ರದಾಯಗಳನ್ನು ನಂಬಿಕೆಗಳನ್ನು ಉಳಿಸಿಕೊಂಡಿರುವ ಸಮುದಾಯಗಳು.

೩. ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗದೇ, ಆ ಧರ್ಮದ ದಬ್ಬಾಳಿಕೆಯನ್ನು ಸಹಿಸದೆ ತಮ್ಮ ಸ್ವಾತಂತ್ರ್ಯಕ್ಕಾಗಿ ಪ್ರತ್ಯೇಕವಾಗಿ ಹೋರಾಡುತ್ತಿರುವ ಸಮುದಾಯಗಳು. ಈ ಮೇಲಿನ ಮೂವರು ಹಂತಗಳನ್ನು ಗಮನಿಸಿ ಕರ್ನಾಟಕದ ಬೇಡನಾಯಕರನ್ನು ಅಧ್ಯಯನ ಮಾಡಿದಾಗ ಇವರಲ್ಲಿಯ ಒಂದು ಪಂಗಡ ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿ ಸಂಪೂರ್ಣ ಬದಲಾಗಿದ್ದಾರೆಂದು ಮತ್ತು ಇದೇ ಪಂಗಡದ ಮ್ಯಾಸ ಬೇಡರು ಹಾಗೂ ಇತರರು ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದರೂ ತಮ್ಮ ಸಂಪ್ರದಾಯ ಹಾಗೂ ನಂಬಿಕೆಗಳನ್ನು ಬೆಳೆಸಿಕೊಂಡು ಬಂದಿರುವರು ಎಂದು ತಿಳಿದುಬರುತ್ತದೆ.

ಗುಲಬರ್ಗಾ ಜಿಲ್ಲೆಯ ಚಾರಿತ್ರಿಕ ಹಿನ್ನೆಲೆ

ಗುಲ್ಬರ್ಗಾ ಜಿಲ್ಲೆ ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿದ್ದು ೧೬೧೨ ಮತ್ತು ೧೭೪೬ ಉತ್ತರ ಅಕ್ಷಾಂಶ ಹಾಗೂ ೭೬೦೪ ಮತ್ತು ೭೪೨ ರೇಖಾಂಶಗಳ ಮಧ್ಯದಲ್ಲಿ ವಿಸ್ತರಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಜಿಲ್ಲೆಯು ಸರಾಸರಿ ೬೯೩ ಸೆಂ. ಮೀ. ಎತ್ತರದಲ್ಲಿ ಇರುತ್ತದೆ. ಜಿಲ್ಲೆಯ ಉತ್ತರ ಭಾಗದಲ್ಲಿ ಬೀದರ್‌, ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್‌ಪೂರ್ವಭಾಗದಲ್ಲಿ ಆಂಧ್ರಪ್ರದೇಶದ ಮೇಡಕ್‌ಹಾಗೂ ಮೆಹಬೂಬ್‌ನಗರ, ದಕ್ಷಿಣದಲ್ಲಿ ರಾಯಚೂರು ಹಾಗೂ ಪಶ್ಚಿಮದಲ್ಲಿ ಬಿಜಾಪುರ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಜಿಲ್ಲೆಯಲ್ಲಿ ಮುಖ್ಯವಾಗಿ ಕೃಷ್ಣೆ, ಭೀಮಾ, ಕಾಗಿಣಾ, ಗೋರಿ ಮತ್ತು ಅಮರ್ಜಾ ಮಲ್ಲಾಮುರಿ ಎಂಬ ನದಿಗಳು ಹರಿಯುತ್ತವೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಸುರಪುರ, ಶಹಾಪುರ ಮತ್ತು ಜೇವರ್ಗಿ ತಾಲೂಕುಗಳಲ್ಲಿ ಕೃಷಿಗೆ ನೀರಾವರಿ ಕಲ್ಪಿಸಲಾಗಿದೆ.

ಇದು ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿದೆ. ಒಟ್ಟು ಭೌಗೋಳಿಕ ಪ್ರದೇಶ ೧೬.೧೦೨ ಚ. ಕಿ. ಮೀ. ಇದ್ದು, ರಾಜ್ಯದ ಶೇ. ೮.೦೫ರಷ್ಟು ಪ್ರದೇಶವನ್ನೊಳಗೊಂಡಿದೆ. ಒಟ್ಟು ೧.೪೩೭ ಹಳ್ಳಿಗಳಿದ್ದು ಇವುಗಳಲ್ಲಿ ೧.೩೬೦ ಗ್ರಾಮಗಳು ಜನವಸತಿ ಇರುವ ೭೭ ಹಳ್ಳಿಗಳು ಜನವಸತಿ ಇಲ್ಲದವೂ ಆಗಿವೆ. ೨೦೦೧ರ ಜನಗಣತಿಯ ಪ್ರಕಾರ ಜಿಲ್ಲೆಯ ಒಟ್ಟು ೩೧.೩೦ ಲಕ್ಷ ಇದ್ದು, ಇದರಲ್ಲಿ ೧೫.೯೨ ಲಕ್ಷ ಗಂಡಸರು ಮತ್ತು ೧೫.೩೮ ಲಕ್ಷ ಹೆಂಗಸರು ಇದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೨೨.೭೮ ಲಕ್ಷ ಜನರು ಗ್ರಾಮ ನಿವಾಸಿಗಳಾಗಿದ್ದು, ಉಳಿದ ೮.೫೨ ಲಕ್ಷ ಜನರು ನಗರವಾಸಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿಯೊಂದು ಸಾವಿರ ಗಂಡಸರ ಪ್ರಮಾಣಕ್ಕೆ ೯೬೬ ಹೆಂಗಸರು ಇದ್ದಾರೆ. ೨೦೦೧ರ ಜನಗಣತಿಯ ಪ್ರಕಾರ ಗುಲಬರ್ಗಾ ಜಿಲ್ಲೆಯಲ್ಲಿ ಒಟ್ಟು ೧.೫೪ ಲಕ್ಷ ಪರಿಶಿಷ್ಟ ವರ್ಗದವರಿದ್ದು ಇದು ಕ್ರಮವಾಗಿ ಒಟ್ಟು ಜನಸಂಖ್ಯೆಯ ಶೇ. ೪.೯೨ ಆಗಿದೆ. ಅದರಲ್ಲಿ ಬೇಡ ಬುಡಕಟ್ಟಿನ ಜನಸಂಖ್ಯೆ ಜಿಲ್ಲೆಯಲ್ಲಿ ಒಟ್ಟು ೧,೨೧,೨೭೦ ಇದ್ದು ಅದರಲ್ಲಿ ಪುರುಷರು ೬೧.೦೦೯ ಮಹಿಳೆಯರು ೬೦.೨೬೧ ರಷ್ಟು ಇರುವುದು ಕಂಡು ಬರುತ್ತದೆ.

ಬೇಡ ಸಮುದಾಯ ಹಿನ್ನೆಲೆ

ಸಮಾಜದಲ್ಲಿರುವ ಪ್ರತಿಯೊಂದು ಸಮುದಾಯಕ್ಕೆ ತನ್ನದೆ ಆದ ಚರಿತ್ರೆಯಿರುವಂತೆ ಬೇಡ ಬುಡಕಟ್ಟು ಸಮುದಾಯಕ್ಕೆ ವಿಶಿಷ್ಟವಾದ ಇತಿಹಾಸ ಹಾಗೂ ಸಂಸ್ಕೃತಿಯಿದೆ. ಮೂಲತಃ ಇವರು ದ್ರಾವಿಡ ಸಮುದಾಯದವರು. ಅದಕ್ಕೆ ಪುಳಿಂದ, ಭಿಲ, ಕಿರಾತ, ವ್ಯಾಧ, ಶಬರ, ನಿಷಾದ ಮುಂತಾದ ಪುರಾತನ ಹೆಸರುಗಳಿದ್ದವು. ಅದರಂತೆ ದ್ರಾವಿಡ ಭಾಷೆಗಳಲ್ಲಿ ವೇಡನ್‌, ವೇದನ್‌, ವೇಟ್ಟುವನ್‌ಎಂದೆಲ್ಲಾ ಹೆಸರುಗಳಿದ್ದವು. ಅವರು ಆಡುತ್ತಿದ್ದ ಬೇಟೆಗನುಸಾರವಾಗಿ ಅವರಿಗೆ ಎಯನರ್‌, ಪುಲಿಂದರ್‌, ಕುಳಿಂದರ್‌, ಕೋವರ್‌ಎಂಬ ಹೆಸರುಗಳು ದೊರಕುತ್ತವೆ. ಇವರು ಕಾಡಿನ ಸಂಸ್ಕೃತಿಯಿಂದ ನಾಡಿನ ಸಂಸ್ಕೃತಿಯನ್ನು ರೂಢಿಸಿಕೊಂಡವರು. ಯೋಧ ಸಮುದಾಯವೆಂದು ಗುರುತಿಸಿಕೊಂಡ ಇವರು ದೈಹಿಕ ಸದೃಢತೆಗೆ ಮತ್ತು ಧೈರ್ಯ ಸಾಹಸಗಳಿಗೆ ಪ್ರಸಿದ್ಧಿಯಾಗಿದ್ದಾರೆ. ಅದಕ್ಕಾಗಿ ಜಗತ್ತಿನಲ್ಲಿ ಬೇಡರಷ್ಟು ಶೂರರು ಸಿಗಬಹುದು. ಆದರೆ ಬೇಡರಿಗಿಂತ ಶೂರರು ಸಿಗಲಾರರು ಎಂಬ ವಿಲಿಯಂ ಸ್ಮಿಥ್‌ನ ನುಡಿ ಉಲ್ಲೇಖನೀಯ.

ಈ ಸಮುದಾಯದಲ್ಲಿ ಕುಮಾರರಾಮ, ವೀರ ಮದಕರಿ ನಾಯಕ, ಸುರಪುರದ ರಾಜಾ ವೆಂಕಟಪ್ಪ ನಾಯಕ ಹೀಗೆ ಹಲವರು ನಾಯಕರು ಶೌರ್ಯ, ಸಾಹಸಗಳಿಗೆ ಹೆಸರಾದ ಚಾರಿತ್ರಿಕ ವ್ಯಕ್ತಿಗಳಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆ ಬಲದಿಂದ ಬಹುಸಂಖ್ಯಾತವಾಗಿರುವ ನಾಯಕ ಬುಡಕಟ್ಟು ದಿವಂಗತ ಎಲ್‌. ಜಿ. ಹಾವನೂರ ಅವರ ಅಧ್ಯಯನದ ಫಲಶೃತಿಯಿಂದ ೧೯.೦೪.೧೯೯೩ ರಿಂದ ಬೇಡರನ್ನು ಬುಡಕಟ್ಟು, ಮೀಸಲಾತಿ ಅನುಭವಿಸಲು ಅರ್ಹಗೊಂಡಿತು (ಕೆ.ಎಂ.ಮೈತ್ರಿ. ಪುಟ. ೧೮೭). ಈಗ ೨೦೦೧ರ ಜನಗಣತಿ ವರದಿಯನ್ನು ಗಮನಿಸಿದಾಗ ರಾಜ್ಯದಲ್ಲಿ ೨೯,೧೮,೬೪೯ ಲಕ್ಷ ಜನಸಂಖ್ಯೆ ಕಂಡುಬರುತ್ತದೆ. ಅದರಲ್ಲಿ ಇಡೀ ರಾಜ್ಯದಲ್ಲಿಯೇ ಬಳ್ಳಾರಿ, ಚಿತ್ರದುರ್ಗ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೇಡರ ಅತೀ ಹೆಚ್ಚು ಜನಸಂಖ್ಯೆ ಇರುವುದು ಕಂಡುಬರುತ್ತದೆ.

ಬೇಡ ಬುಡಕಟ್ಟಿನ ಜೀವನ

ಒಂದು ನಿರ್ದಿಷ್ಟವಾದ ಪರಿಸರದಲ್ಲಿ ಸಮುದಾಯಗಳು ನೆಲೆ ನಿಲ್ಲಬೇಕಾದರೆ ಅಲ್ಲಿನ ಸಾಮಾಜಿಕ, ಭೌಗೋಳಿಕ ಹಾಗೂ ಫಲವತ್ತಾದ ಮಣ್ಣು, ನೀರು, ಹವಾಗುಣ ಪ್ರಮುಖ ಪಾತ್ರವಹಿಸುತ್ತವೆ. ಈ ಕಾರಣಾಂಶಗಳು ಮಾನವನ ಅಲೆಮಾರಿತನವನ್ನು ಅಂತ್ಯಗೊಳಿಸಿ ನೆಲೆ ನಿಲ್ಲುತ್ತವಂತೆ ಮಾಡುತ್ತವೆ. ಇದರಿಂದ ಸಮುದಾಯಗಳು ಅಭಿವೃದ್ಧಿಗೊಂಡು ಸಮಾಜದ ಬೆಳವಣಿಗೆ ಪೂರಕವಾದ ಸದಾವಕಾಶವನ್ನು ಒದಗಿಸುತ್ತವೆ. ಅದರ ಜೊತೆಗೆ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಶಾಂತಿ, ಭದ್ರತೆ, ಸಹಕಾರ ಮತ್ತು ಬುದ್ಧಿಶಕ್ತಿ ಇತರೆ ಅಂಶಗಳು ಪ್ರಮುಖವಾದವು ಆಗಿವೆ. ಅದರಲ್ಲಿ ಮಾನವನ ಸಮಾಜವು ಸಾಮಾಜಿಕ ಸಂಬಂಧಗಳ ಬಲೆಯಾಗಿದೆ. ಸಮಾಜದಲ್ಲಿ ಜೀವಿಸುವಂತಹ ಪ್ರತಿಯೊಂದು ಸಮುದಾಯಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಂತಹ ಸಂಸ್ಕೃತಿ ಮತ್ತು ಸಾಮಾಜಿಕ ಅಂಶಗಳು ಪ್ರೇರಣದಾಯಕ ಆಗಿರುತ್ತವೆ. ಅದೇ ರೀತಿ ನಾಯಕ ಬುಡಕಟ್ಟು ಸಮುದಾಯವು ಸಹ ಭೌತಿಕ ಮತ್ತು ಅಭೌತಿಕ ಕ್ರಮದ ಅನುಗುಣವಾಗಿ ಹಲವು ಪ್ರಕಾರದ ಲೋಕ ರೂಢಿಗಳು.

ಸಂಪ್ರದಾಯಗಳು, ಆಹಾರ ಪದ್ಧತಿ, ಉಡುಗೆತೊಡುಗೆ, ವೃತ್ತಿ, ವಿವಾಹ ಇತರೆ ವ್ಯವಸ್ಥೆಗಳನ್ನು ಒಳಗೊಂಡು, ಇವೆಲ್ಲವುಗಳಿಗೂ ತನ್ನದೇ ಆದ ಸಮುದಾಯದ ನೀತಿನಿರ್ಧಾರ, ಹಿರಿಯರ ಆಜ್ಞೆ ಮಾರ್ಗದರ್ಶನ ಇಂತಹ ಹಲವು ಆಚರಣಾ ಕ್ರಮಗಳೊಂದಿಗೆ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುತ್ತಾ, ಜೀವನ ಮುಂದುವರೆಸುವುದನ್ನು ನಾವು ನೋಡಬಹುದು, ಇವರು ಅನುಸರಿಸುವ ಕ್ರಮಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಕಂಡುಬರುವುದು ಸೋಜಿಗದ ಸಂಗತಿಯೇನಲ್ಲ. ಆದರೆ ಗುಲಬರ್ಗಾದಂತಹ ಬಯಲುಸೀಮೆಯ ಒಡಲಿನಲಿ ಬಿರುಬಿಸುಲಿನ ತಾಪಮಾನದ ತಾಪತ್ರಯೊಳಗಡೆ ತಮ್ಮ ಜೀವನವು ಪುರೋಹಿತಶಾಹಿ ಮೌಲ್ಯಗಳಿಂದ, ಮತೀಯ ಸಂಸ್ಕೃತಿಯಿಂದ ಮತ್ತು ಕೈಗಾರಿಕೆ ಸಂಸ್ಕೃತಿಯಿಂದ ರೂಢಿಸಿಕೊಂಡವರಲ್ಲ. ಕೇವಲ ತಮ್ಮ ದೈಹಿಕ ದುಡಿಮೆ ಅಥವಾ ಶ್ರಮಿಕ ಸಂಸ್ಕೃತಿಯಿಂದ ರೂಢಿಸಿಕೊಂಡವರಲ್ಲ. ಕೇವಲ ತಮ್ಮ ದೈಹಿಕ ದುಡಿಮೆ ಅಥವಾ ಶ್ರಮಿಕ ಸಂಸ್ಕೃತಿಯಿಂದ ಜೀವನ ಮುಂದುವರೆಸುತ್ತಿರುವವರು. ಪ್ರತಿನಿತ್ಯದ ಜೀವನದ ಹೊಟ್ಟೆಪಾಡಿಗಾಗಿ ಶ್ರಮಿಸುವರು. ಇಡೀ ನಮ್ಮ ರಾಷ್ಟ್ರೀಯ ರಾಜಕೀಯದಲ್ಲಿ ಇವರ ಪಾತ್ರ ನಿರ್ಣಾಯಕವಾಗೇನೂ ಇಲ್ಲ. ಇಂತಹ ಸಂದರ್ಭದಲ್ಲಿ ನಾಯಕ ಬುಡಕಟ್ಟು ಬದಲಾವಣೆಯ ಕೆಲವು ಸಂಗತಿಗಳನ್ನು ಗಮನಿಸೋಣ.

ಆಹಾರ ಪದ್ಧತಿಯಲ್ಲಿ ಬದಲಾವಣೆ

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದದ್ದು ಆಹಾರ ಇದು ಅವನನ್ನು ಜೀವಿಸಲು ಪ್ರೇರಣೆ ನೀಡುತ್ತದೆ. ಇದರ ಮಹತ್ವ ಕುರಿತು ಗುಲಬರ್ಗಾ ಪರಿಸರದಲ್ಲಿ ಜೋಳದ ರೊಟ್ಟಿಯಂತಹ ಊಟವಿಲ್ಲ ಜೀತ ಪದ್ಧತಿಯಿಂದ ಮುಕ್ತಿಯಿಲ್ಲ ಎಂಬ ನಾಣ್ಣುಡಿ ಬಹಳ ಜನಪ್ರಿಯವಾಗಿದೆ. ಈ ಬಯಲು ಪ್ರದೇಶದಲ್ಲಿ ಜೋಳವನ್ನು ಅತ್ಯಧಿಕವಾಗಿ ಬೆಳೆಯುತ್ತಿರುವುದರಿಂದ, ಇದು ದಿನನಿತ್ಯದ ಪ್ರಮುಖ ಆಹಾರವಾಗಿದೆ. ಅರಣ್ಯವಾಸಿ ಜನಾಂಗವಾದ ನಾಯಕ ಬುಡಕಟ್ಟು ಮೂಲತ ಮಾಂಸಾಹಾರಿಗಳಾದರೂ ಇವತ್ತಿನ ಬದಲಾದ ಸಂದರ್ಭದಲ್ಲಿ ಸಸ್ಯಾಹಾರಕ್ಕೆ ಮೈಗೂಡಿಸಿಕೊಂಡಿರುವುದು ಕಂಡುಬರುತ್ತದೆ. ಒಂದು ಸಂದರ್ಭದಲ್ಲಿ ಇಲ್ಲಿನ ಕುರುಚಲು ಅರಣ್ಯದಲ್ಲಿ ದೊರೆಯುವ ಮೊಲ, ಬುರ್ಲಿ, ಕೌಜುಗಾ, ಜಿಂಕೆ ಮತ್ತು ಇತರೆ ಪ್ರಾಣಿಪಕ್ಷಿಗಳನ್ನು ಬೇಟೆಯಾಡಿ ತಿನ್ನುವ ಪ್ರವೃತ್ತಿಯೂ ಇಂದು ಕಡಿಮೆಯಾಗಿದೆ. ಈ ತೆರನಾದ ಪರಿವರ್ತನೆಗೆ ಪ್ರಮುಖವಾಗಿ ವನ್ಯಜೀವಿ ಸಂರಕ್ಷಣೆ ಕಾಯಿದೆ ೧೯೭೨ರ ಪ್ರಭಾವ ಎಂದು ಹೇಳಬಹುದು.

ವಸತಿ ವ್ಯವಸ್ಥೆಯಲ್ಲಿ ಬದಲಾವಣೆ

ಮೂಲತಃ ಕಾಡಿನಿಂದ ಕಾಲಾಂತರದಲ್ಲಿ ನಾಡಿಗೆ ಬಂದಂತಹ ಬೇಡ ಬುಡಕಟ್ಟು ಸಮುದಾಯವು ಪಶು ಸಂಗೋಪನೆ, ಕೃಷಿ, ಕೃಷಿಯೇತರ ಕಾರ್ಯಗಳ ಜೊತೆಗೆ ಕೃಷಿ ಕೂಲಿ ಕಾರ್ಮಿಕರಾಗಿ ನೆಲೆ ಕಂಡುಕೊಂಡ ನಂತರ ತಮ್ಮ ಸಮುದಾಯದವರೆಲ್ಲರೂ ಒಂದೆಡೆ ಸೇರಿ ಗ್ರಾಮದಿಂದ ಹೊರಗಡೆ ಚಿಕ್ಕಪುಟ್ಟ ಹಟ್ಟಿ ದೊಡ್ಡಿಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವುದು ಕಂಡುಬರುತ್ತದೆ. ಇವರು ವಾಸ ಮಾಡುವ ಗುಡಿಸಲು ಹಾಗೂ ಮನೆಗಳು ಅತೀ ಸರಳವಾಗಿ ರಚನೆಯಾಗಿರುವುದನ್ನು ಕಾಣಬಹುದು. ಅದು ನಿಸರ್ಗದತ್ತವಾಗಿ ದೊರೆಯುವಂತಹ ಕಲ್ಲು ಮಣ್ಣು ಮತ್ತು ತೊಗರಿ ಕಟ್ಟಿಗೆ ಸೌದೆ ರಬ್ಬರ ಬಳಿ, ಹಾಪು ಒಂದು ರೀತಿಯ ಗರಿಕೆ ಹುಲ್ಲು ಹಾಗೂ ಸರಕಾರಿ ಜಾಲಿ ಕಟ್ಟಿಗೆ ಇನ್ನಿತರ ಪರಿಕರಗಳೊಂದಿಗೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಂದಿನವರೆಗೂ ಸರಕಾರದಿಂದ ಲಭಿಸುವಂತಹ ಆಶ್ರಯ ಯೋಜನೆ ಮನೆಗಳು ಸಮರ್ಪಕವಾದ ರೀತಿಯಲ್ಲಿ ದೊರೆತಿಲ್ಲ.

ವೃತ್ತಿಯಲ್ಲಿ ಬದಲಾವಣೆ

ಬುಡಕಟ್ಟು ಸಮುದಾಯದ ಜನರು ಅರಣ್ಯದಲ್ಲಿ ವಾಸಿಸುವಂತಹ ಸಂದರ್ಭದಲ್ಲಿ ತಮ್ಮ ಅಗತ್ಯಕ್ಕೆ ಅನುಸಾರವಾಗಿ ಪರ ವಸ್ತುಗಳಿಗೆ ತೊಂದರೆಯಾಗದಂತೆ ಜೀವನ ನಡೆಸುತ್ತಿದ್ದರು. ಜೊತೆಗೆ ಹಸಿವನ್ನು ಹೀಡೇರಿಸಿಕೊಳ್ಳಲು ಋತುಮಾನಕ್ಕೆ ಅನುಗುಣವಾಗಿ ಲಭಿಸುವಂತಹ ಗಡ್ಡೆಗೆಣಸು, ಹಣ್ಣುಹಂಪಲು ಹಾಗೂ ಕಾಡಿನಲ್ಲಿರುವ ಪ್ರಾಣಿಪಕ್ಷಿಗಳನ್ನು ಶೋಧ ಮಾಡುವುದೇ ಅವರ ಪ್ರಮುಖ ಕಾಯಕ ಆಗಿತ್ತು. ಈ ತತ್ವದ ಮೇಲೆ ಜೀವನ ರೂಪಿಸಿಕೊಂಡಿದ್ದು ಹಲವು ಅಧ್ಯಯನಗಳು ಸ್ಪಷ್ಟಪಡಿಸುತ್ತವೆ. ಆದರೆ ಎಂದೂ ಅರಣ್ಯ ಸಂಪತ್ತಿನ ಮೇಲೆ ಆಧುನೀಕರಣದ ಕರಿನೆರಳು ಬಿತ್ತೋ ಅಂದಿನಿಂದ ಬುಡಕಟ್ಟು ಸಂಘಜೀವನಕ್ಕೆ ಅತಂತ್ರ ಸ್ಥಿತಿಯೂ ಬಂದು ಅಪ್ಪಳಿಸಿತು. ಇಂತಹ ಸಮಯದಲ್ಲಿ ಉಳುಮೆ ಮಾಡಲು ಭೂಮಿಯೂ ಇಲ್ಲದೆ ಜೀವನವು ದುಸ್ಥಿತಿಗೆ ತಳ್ಳಲ್ಪಟ್ಟಿತು. ಅನಿವಾರ್ಯ ಕಾರಣದಿಂದ ಬೃಹತ್‌ಭೂಮಾಲೀಕರ ಭೂಮಿಯಲ್ಲಿ, ತೋಟ, ಗದ್ದೆಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುವುದು ಅನಿವಾರ್ಯವಾಗಿ ಅವರ ಜೀವನವು ಮುಂದುವರೆದುಕೊಂಡು ಬಂತು. ಈ ಕ್ರಮವು ನಿರಂತರವಾಗಿ ನಡೆಯದೆ ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಪ್ರವೇಶ ಪಡೆದ ಸಂದರ್ಭದಲ್ಲಿ ಇವರ ವೃತ್ತಿಗೆ ವಿರಾಮ ಬಿದ್ದು ತಮ್ಮ ಉಪಜೀವನಕ್ಕಾಗಿ ಉದ್ಯೋಗ ಅನ್ನುವುದಕ್ಕಿಂತ ಅನ್ನದ ಹುಡುಕಾಟಕ್ಕಾಗಿ ಹಲವಾರು ಮಾರ್ಗಗಳನ್ನು ಶೋಧಿಸಿ ಮತ್ತೆ ಹಳೇ ಗಂಡನ ಪಾದವೆ ಗತಿ ಎನ್ನುವಂತೆ ವಲಸೆ ಪ್ರವೃತ್ತಿಗೆ ಪಾದಾರ್ಪಣೆ ಮಾಡಲು ಪ್ರಾರಂಭಿಸಿದರು. ಕೊನೆಗೆ ದೊರೆತ ಮಾರ್ಗವೆಂದರೆ ನಗರಗಳಿಗೆ ವಲಸೆ ಹೋಗುವುದು.

ಇಡೀ ಗುಲಬರ್ಗಾ ಜಿಲ್ಲೆಯಲ್ಲಿ ಬರುವಂತಹ ಭೂರಹಿತ ಬುಡಕಟ್ಟು ಕುಟುಂಬದವರು ಅನ್ನದ ದಾಹವನ್ನು ತೀರಿಸಿಕೊಳ್ಳಲು ಇಂದು ಈ ರಾಜ್ಯದ ಹಲವು ಭಾಗಗಳಿಗೆ ಕುಟುಂಬ ಸಮೇತ ವಲಸೆ ಹೋಗಿದ್ದಾರೆ. ಅದರಲ್ಲಿ ಬೆಂಗಳೂರಿನ ದಾಸರಹಳ್ಳಿ, ಪೀಣ್ಯ, ವೈಟ್‌ಫೀಲ್ಡ್‌, ಮಾರತ್‌ಹಳ್ಳಿ, ಮಂಗಳೂರು, ಹುಬ್ಬಳ್ಳಿ, ಬಳ್ಳಾರಿಯ ಸಂಡೂರು, ಹೊಸಪೇಟೆ, ಹಾಗೂ ಗಂಗಾವತಿ ಸುತ್ತಮುತ್ತಲಿನ ಅಕ್ಕಿಗಿರಣಿ, ಕಟ್ಟಡಗಳ ನಿರ್ಮಾಣ, ರಸ್ತೆ ದುರಸ್ತಿ, ಟೆಕ್ಸಟೈಲ್ಸ್‌ಉದ್ಯಮ, ಮೈನ್ಸ್‌ಲಾರಿ ಚಾಲಕರಾಗಿ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಗೋವಾ ರಾಜ್ಯದ ಪಣಜಿ, ಮಹಾರಾಷ್ಟ್ರದ ಸೋಲ್ಲಾಪುರ, ಕೊಲ್ಲಾಪುರ, ಪುಣೆ, ಪಿಂಪರಿ, ನಾಂದೇಡ್‌, ರತ್ನಗಿರಿ, ಆಂಧ್ರಪ್ರದೇಶದ ಕಡಪ, ಮೆಹಬೂಬ್‌ನಗರ ಇನ್ನಿತರ ನಗರ ಪ್ರದೇಶಗಳಿಗೆ ವಲಸೆ ಹೋಗಿ ಜೀವನ ನಿರ್ವಹಿಸುತ್ತಿರುವುದನ್ನು ನೋಡಿದರೆ ಒಂದು ರೀತಿಯ ಅನಿವಾರ್ಯತೆ ಎಂದೂ ಹೇಳಬಹುದು. ಅದರಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅವರ ಮಕ್ಕಳು ಶೈಕ್ಷಣಿಕ ಪರಿಸ್ಥಿತಿ, ಆರೋಗ್ಯ ಕಾಳಜಿ ಹಾಗೂ ಊರಲ್ಲಿರುವ ವಯೋವೃದ್ಧರ ವೇದನೆ ಇವೆಲ್ಲಾ ತುಂಬಾ ನೋವಿನ ಸಂಗತಿಗಳಾಗಿವೆ. ಆದರೂ ಅನಿವಾರ್ಯತೆ ಉಂಟಾಗಿದೆ.

ಸಾಕ್ಷರತೆಯಲ್ಲಿ ಬದಲಾವಣೆ

ಈ ಜಿಲ್ಲೆಯ ನಾಯಕ ಬುಡಕಟ್ಟಿನ ಅಕ್ಷರಸ್ಥರ ಸಂಖ್ಯೆಯೂ ಬಹಳ ಕಡಿಮೆ ಎಂದೂ ಹೇಳಬಹುದು. ಶಿಕ್ಷಣವು ಜ್ಞಾನ ಹಾಗೂ ವೈಚಾರಿಕ ತಿಳುವಳಿಕೆ ಒದಗಿಸಿ ಸಮಾಜದಲ್ಲಿ ತಾವು ಆದರ್ಶಪ್ರಾಯವಾಗಿ ಜೀವನ ನಡೆಸಲು ಮೂಲಭೂತವಾದ ಕೌಶಲ್ಯವನ್ನು ಕೊಡುತ್ತದೆಂಬ ಕಲ್ಪನೆಯಿಂದ ನಾಯಕ ಬುಡಕಟ್ಟು ಬಹುದೂರವಿರುವುದು ಈ ಪರಿಸರದಲ್ಲಿ ಕಂಡುಬರುತ್ತದೆ. ಇನ್ನೊಂದು ಕಾರಣವೆಂದರೆ ಸಮುದಾಯದ ಹಿರಿಯರು ಅನಕ್ಷರಸ್ಥರು ಹಾಗೂ ಬಡತನದಿಂದ ಬಳಲುತ್ತಿರುವವರು, ಇವತ್ತಿನ ದುಬಾರಿ ಶುಲ್ಕದ ಶಿಕ್ಷಣವನ್ನು ಪಡೆಯುವಲ್ಲಿ ಅನರ್ಹರೂ ಆಗಿದ್ದಾರೆ. ಮಾನವ ಅಭಿವೃದ್ಧಿ ವರದಿಯು ಸ್ಪಷ್ಟಪಡಿಸುವಂತೆ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಗುಲಬರ್ಗಾವು ಇದರ ವ್ಯಾಪ್ತಿಯೊಳಗೆ ಬರುವ ಶಹಾಪುರ, ಸುರಪುರ, ಯಾದಗಿರಿ ಇತರೆ ತಾಲೂಕುಗಳು ಎಲ್ಲ ಕನಿಷ್ಠ ಪ್ರಮಾಣದ ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿ ಕೊನೇ ಸ್ಥಾನದಲ್ಲಿದೆ. ಇದಕ್ಕೆ ಮೂಲಕಾರಣವೇನು, ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಜನರಲ್ಲಿ ಪ್ರಜ್ಞೆ ಇಲ್ಲವೆ ಅಥವಾ ಜನರಿಗೆ ಅವಕಾಶಗಳನ್ನು ತಲುಪಿಸುವಲ್ಲಿ ಆಡಳಿತದ ವೈಪಲ್ಯವೇ ಪ್ರಮುಖ ಕಾರಣವೇ ಇಂತಹ ಹಲವಾರು ಕಾರಣಗಳಿಂದ ಈ ಭಾಗದ ಬೇಡ ಬುಡಕಟ್ಟು ಸಮುದಾಯದ ಸಾಕ್ಷರತೆ ಪ್ರಮಾಣವು ಈ ರೀತಿಯಾಗಿ ಕಂಡುಬರುತ್ತದೆ.

ಗುಲಬರ್ಗಾ ಜಿಲ್ಲೆಯ ಪರಿಶಿಷ್ಟ ಪಂಗಡದ ಸಾಕ್ಷರತೆ ಪ್ರಮಾಣ ೨೦೦೧

    ಪುರುಷರು ಮಹಿಳೆಯರು ಒಟ್ಟು
ಕರ್ನಾಟಕ ರಾಜ್ಯ ಒಟ್ಟು ೫೯.೭ ೩೬.೬ ೪೮.೩
ಗ್ರಾಮೀಣ ೫೬.೯ ೩೩.೩ ೪೫.೩
ನಗರ ೭೪.೪ ೫೪.೩ ೬೪.೬
ಗುಲಬರ್ಗಾ ಜಿಲ್ಲೆ ಒಟ್ಟು ೪೩.೮ ೨೦.೮ ೩೨.೪
ಗ್ರಾಮೀಣ ೪೦.೭ ೧೮.೦ ೨೯.೪
ನಗರ ೬೪.೭ ೩೯.೨ ೫೨.೨

(ಮೂಲ, ಡಾ. ಹೆಚ್‌. ಡಿ. ಪ್ರಶಾಂತ ೨೦೦೫ ಪುಟ ೧೦೬)

ಈ ಮೇಲಿನ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ದಶಕದ ಬೆಳವಣಿಗೆಯೂ ಮಂದಗತಿಯಲ್ಲಿ ಪರಿವರ್ತನೆಯಾಗಿದೆ ಎಂದು ಹೇಳಬಹುದು. ಅದು ಪುರುಷರ ಸಾಕ್ಷರತೆಯೂ ೨೦೦೧ರಲ್ಲಿ ೪೩.೮೨ರಷ್ಟು ಆಗಿದೆ. ಅದೇ ರೀತಿಯಾಗಿ ಮಹಿಳೆಯರದು ೨೦೦೧ರಲ್ಲಿ ೨೦.೭೭ರಷ್ಟು ಆಗಿದೆ. ಅದರ ಮಹಿಳೆಯರದು ಕೇವಲ ೨೦.೭೭ ಇರುವುದು ಪ್ರಗತಿಯೆನ್ನಲು ಬರುವುದಿಲ್ಲ ಒಟ್ಟು ಗುಲಬರ್ಗಾ ಜಿಲ್ಲೆಯದು ೩೨.೪ರಷ್ಟು ಇದ್ದು ಇನ್ನೂ ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಆಗಬೇಕಾಗಿದೆ.

ಬೇಡ ಬುಡಕಟ್ಟು ಮತ್ತು ಭೂಮಾಲೀಕರ ಸಂಬಂಧ

ಈ ರಾಜ್ಯದ ಕೃಷಿ ಭೂಮಿಯ ಚರಿತ್ರಯೂ ಬಹು ವ್ಯಾಪಕವಾದದ್ದು. ಅದರಲ್ಲಿ ಅಧ್ಯಯನದ ಮಿತಿಗೆ ಸಂಬಂಧಿಸಿದಂತೆ ಬೇಡ ಬುಡಕಟ್ಟು ಸಮುದಾಯ ಮತ್ತು ಭೂ ಮಾಲೀಕರ ಸಂಬಂಧ ಹಾಗೂ ಭೂಮಿಯೊಂದಿಗಿನ ಒಡನಾಟವನ್ನು ವಿವರಣೆ ನೀಡಲು ಪ್ರಯತ್ನಸಿದ್ದೇನೆ. ಪ್ರತಿಯೊಂದು ಬುಡಕಟ್ಟು ಸಮುದಾಯಗಳಲ್ಲಿ ಭೂಮಿ, ಪ್ರಕೃತಿ, ಜಲ, ಮತ್ತು ಇತರೆ ಅಂಶಗಳನ್ನು ಕುರಿತು ದೈವ ಕಲ್ಪನೆಯೊಂದು ಇವರಲ್ಲಿದೆ. ಇದರಿಂದಾಗಿ ನಿಸರ್ಗದ ಪ್ರತಿಯೊಂದು ಸಂಪತ್ತು ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳದೆ ಅಗತ್ಯಕ್ಕೆ ಅನುಗುಣವಾಗಿ ಉಪಯೋಗಿಸುತ್ತಿದ್ದರು. ಭೂಮಿಯೂ ಜೀವನ ಮುಂದುವರಿಕೆಗೆ ವಿನಾ ಆರ್ಥಿಕವಾಗಿ ಅಲ್ಲ ಎಂಬುದು ತಿಳಿದುಬರುತ್ತದೆ. ಇನ್ನೊಂದು ಪ್ರಮುಖವಾದದುಯೆಂದರೆ ಅವರು ಎಂದೂ ನೇಗಿಲಿಂದ ಉಳುಮೆ ಮಾಡಿದರೆ ಭೂಮಿಯ ಎದೆ ಸೀಳಿದಂತೆ ಎನ್ನುವ ಪವಿತ್ರ ನಂಬಿಕೆ ಅವರಲ್ಲಿತ್ತು (ಎ.ಎಸ್‌. ಪ್ರಭಾಕರ, ಪುಟ,೯೪). ಇಂತಹ ಹಲವಾರು ಕಾರಣಗಳಿಂದ ಇವರು ಜೀವನ ನಡೆಸುತ್ತಿದ್ದರು. ಆದರೆ ಇವರನ್ನು ಪರಾವಲಂಬಿತನ ಮಾಡುವಲ್ಲಿ ನಾಗರಿಕರು ಕಾಯ್ದೆ ಕಾನೂನು ಮುಖವಾಡ ಕಟ್ಟಿಕೊಂಡು ಇವರ ಮೇಲೆ ಎರಗಲು ಅವಕಾಶವಾಯಿತು. ಇದರಿಂದ ಕರ್ನಾಟಕದ ಬುಡಕಟ್ಟು ಸಮುದಾಯಗಳು ದಿಕ್ಕೆಟ್ಟು ಹೋದವು, ಅದರಲ್ಲಿ ಗುಲಬರ್ಗಾ ಪರಿಸರದ ಬೇಡ ಬುಡಕಟ್ಟು ಸಮುದಾಯವೊಂದು. ಚರಿತ್ರೆಯಲ್ಲಿ ರಾಜಪ್ರಭುತ್ವದ ಕಾಲದಲ್ಲಿ ತನ್ನಲ್ಲಿದ್ದ ಭೂಮಿಯನ್ನು ಓಲೆಕಾರನಿಗೆ, ಹಲಗೆಬಾರಿಸುವನಿಗೆ, ತನ್ನ ಗಡಿರಕ್ಷಣೆಯ ರಕ್ಷಕರಿಗೆ, ದಳಪತಿಗಳಿಗೆ ಶಾನುಭೋಗರಿಗೆ ಇತರೆಲ್ಲ ಸೇವಕರಿಗೆ ಭೂಮಿಯನ್ನು ದಾನ ಮಾಡಿದಂತಹ ಉದಾಹರಣೆಗಳು ಇಂದಿಗೂ ಜನಪದರಲ್ಲಿ ನೋಡಬಹುದು. ದುರಂತವೆಂದರೆ ದಾನ ಮಾಡಿದ ಸಮುದಾಯದವರು ಭೂ ರಹಿತವಾಗಿ ಕೂಲಿ ಕಾರ್ಮಿಕರಾಗಿ ಬೇರೆಯವರ ಭೂಮಿಯಲ್ಲಿ ಕೃಷಿಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವುದು ಈ ಬುಡಕಟ್ಟಿನ ದುರಂತವೇ ಸರಿ. ಭೂಸುಧಾರಣೆ ಕಾಯಿದೆಯೂ ದಿ. ಡಿ. ದೇವರಾಜು ಅರಸು ಅವರ ಸಂದರ್ಭದಲ್ಲಿ ಜಾರಿಗೆ ಬಂದರೂ ಅದು ಕೆಲವೇ ಪ್ರದೇಶಗಳಲ್ಲಿ ಮಾತ್ರ ಕ್ರಾಂತಿಕಾರಿಯನ್ನಿಸಿತು. ಅದು ದಕ್ಷಿಣ ಕರ್ನಾಟಕದ ಮಲೆನಾಡಿನ ಕೆಲವು ಪ್ರದೇಶವೆಂದು ಹೇಳಬಹುದು. ಈ ಕ್ರಾಂತಿಗೆ ಪ್ರೇರಣೆಯೆಂದರೆ ಅವರ ವೈಚಾರಿಕತೆ ಮತ್ತು ಸಾಕ್ಷರತೆ ಪ್ರಮಾಣವು ಗರಿಷ್ಠ ಮಟ್ಟದಲ್ಲಿರುವುದು ಪ್ರಮುಖವಾಯಿತು. ಆದರೆ ಈ ಜಿಲ್ಲೆಯ ನಾಗರಿಕರು ಈ ಎರಡು ಅಂಶಗಳಿಂದ ದೂರ ಇದ್ದಾರೆ. ಕನಿಷ್ಠ ಪ್ರಮಾಣದ ಸಾಮಾಜಿಕ ಜೀವನ ನಡೆಸುತ್ತಿರುವರು ಭೂ ಸುಧಾರಣೆಯ ಪ್ರತಿಫಲವನ್ನು ಸಂಪೂರ್ಣವಾಗಿ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಕೆಲವೊಬ್ಬರಿಗೆ ದೊರೆತಿರುವ ಬಂಜರು ಭೂಮಿ ಬಿತ್ತನೆಗೆ ಯೋಗ್ಯವಲ್ಲದಂತಹದ್ದು. ಇಂತಹ ಅನೇಕ ಕಾರಣಗಳಿಂದ ಬೇಡ ಬುಡಕಟ್ಟು ಸಮುದಾಯವು ನಗರ ಪ್ರದೇಶಗಳತ್ತ ಪಲಾಯನ ಮಾಡುತ್ತಿದೆ.

ಉಡುಗೆತೊಡುಗೆಯಲ್ಲಿ ಬದಲಾವಣೆ

ಈ ಸಮುದಾಯದ ಜನ ಪುರಾತನ ಸಾಮಾಜಿಕ ಜೀವನವು ಇಂದಿನ ವಿಕಾಸಮುಖಿ ಸಂಸ್ಕೃತಿ ಪರ ಪ್ರತಿರೋಶಿಸುವಾಗ ಉದ್ಭವಿಸುವ ಅನನ್ಯತೆಯ ಭಯವು ಎದ್ದು ಕಾಣುತ್ತದೆ. ಅದರಲ್ಲಿ ಸಮುದಾಯದ ಉಡುಗೆತೊಡುಗೆ, ಶೈಲಿ, ಸಂಸ್ಕೃತಿ ರೂಪಾಂತರಗೊಂಡು ವಿಶ್ಲೇಷಿಸುವುದು ಕಷ್ಟದ ಕೆಲಸ. ಆದರೂ ಸಹ ಅಂದಿನ ಅನಿವಾರ್ಯತೆ ಸಂದರ್ಭದಲ್ಲಿ, ಮನುಷ್ಯನ ವೈಚಾರಿಕ ತಿಳುವಳಿಕೆಯ ಮೊದಲ ಘಟ್ಟವೆ ಅಂಗಾಂಗಗಳನ್ನು ಮುಚ್ಚಿಕೊಳ್ಳಲು, ಮರದ ತೊಗಟೆ, ತೊಪ್ಪಲು, ಪ್ರಾಣಿಗಳ ಚರ್ಮ ಇತ್ಯಾದಿಗಳಿಂದ ರಕ್ಷಣೆ ಮಾಡಿಕೊಂಡು, ವೇಷ ಭೂಷಣದ ಮೊದಲ ಕ್ರಾಂತಿ ಮಾಡಿರುವವನೇ ಕಾಡಿನ ಮಾನವ ಎಂದು ಹೇಳಿದರೆ ತಪ್ಪಾಗಲಾರದು. ಆದರೂ ವಸಾಹತುಶಾಹಿ ಕಾರ್ಯತಂತ್ರವು ತನ್ನ ಆರ್ಥಿಕ ಚಟುವಟಿಕೆಗಳನ್ನು ತನಗಿಷ್ಟ ಬಂದಂತೆ ಗಿರಿವಾಸಿಗಳ ನೆಲೆಗಳ ಮೇಲೆ ದಾಳಿ ಮಾಡಿದಾಗ ಅನಿವಾರ್ಯತೆಯಿಂದ ನಾಡಿನತ್ತ ಪಯಣ ಬೆಳೆಸಿದ. ಇದೆ ಸಂದರ್ಭದಲ್ಲಿ ಆಧುನಿಕ ಸಂಸ್ಕೃತಿಯ ಉಡುಗೆತೊಡುಗೆಗಳನ್ನು ಧರಿಸಲು ಪ್ರಾರಂಭಿಸಿದರು. ಈ ಪ್ರಕ್ರಿಯೆಯಲ್ಲಿ ಕೆಲವೊಂದು ಆದಿವಾಸಿಗಳು ಬದಲಾವಣೆ ಹೊಂದಿದ್ದರೂ ಇನ್ನೂ ಕೆಲವು ಗಿರಿಜನ ಸಮುದಾಯಗಳು ಇವತ್ತಿನವರೆಗೂ ಬದಲಾವಣೆ ಅದೇ ಸ್ಥಿತಿಯಲ್ಲಿವೆ. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವಂತಹ ಸಿದ್ಧಿಯರು, ಗೌಳಿಗರು, ಇತರರು ಎಂದು ಹೇಳಬಹುದು. ಆದರೆ ಪರಿವರ್ತನೆಗೆ ಒಳಪಟ್ಟು ಆದಿವಾಸಿಗಳಲ್ಲಿ ಮತ್ತೊಂದು ಸಮಸ್ಯೆಯೆಂದರೆ ಅವರಲ್ಲಿನ ಶುಚಿತ್ವದ ಕಲ್ಪನೆಯು ಇಂದಿನ ಹಾಗೂ ಇವತ್ತಿನ ಬೇಡ ಬುಡಕಟ್ಟು ಸಮುದಾಯದಲ್ಲಿ ಬದಲಾಗದೆ ಇರುವುದು ಹಲವು ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ದಿನವಿಡಿ ಬಿಸಿಲು, ಗಾಳಿ, ಮಳೆ, ಧೂಲಿನಲ್ಲಿ ದೈಹಿಕ ಶ್ರಮ ವಹಿಸುವುದರಿಂದ ಅನೇಕ ರೀತಿಯ ಕಾಯಿಲೆ ಬರುವಂತಹ ಸಂದರ್ಭವುಂಟು. ಮುಖ್ಯವಾಗಿ ಕಾಲರಾ, ಮಲೇರಿಯಾ, ಹಲವು ರೀತಿಯ ಸೋಂಕು ರೋಗಗಳಿಗೆ ಒಳಗಾಗಿ ಅಕಾಲಿಕ ಮರಣ ಹೊಂದುವುದರಿಂದ ಇವರ ಕುಟುಂಬ ಹಾಗೂ ಸಮುದಾಯದಲ್ಲಿ ಇನ್ನಷ್ಟು ಸಮಸ್ಯೆ ಮತ್ತು ಸವಾಲುಗಳು ಎದುರಾಗುತ್ತವೆ. ಇದರಿಂದ ಒಂದು ಸಮುದಾಯದ ಸಾಮಾಜಿಕ ಜೀವನ ಅಭಿವೃದ್ಧಿ ಆಗುವ ಬದಲು ಅವನತಿಯತ್ತ ಸಾಗುವ ಮುನ್ಸೂಚನೆಯುಂಟು. ಇಂತಹ ದುಷ್ಟರಿಣಾಮಗಳನ್ನು ಸರಿಪಡಿಸಲು ಸರಕಾರವು ಹಮ್ಮಿಕೊಳ್ಳುವ ಸಮುದಾಯ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳಿಂದ ಪರಿಸರ ನೈರ್ಮಲ್ಯ, ಶಿಕ್ಷಣ ಮತ್ತು ಆರೋಗ್ಯದ ಅರಿವು ಅವಲೋಕಿಸಿ, ಅವರೊಡನೆ ಚರ್ಚಿಸಿ ಆಯಾ ಪರಿಸರದಲ್ಲಿ ವಿಶೇಷವಾಗಿ ಹಮ್ಮಿಕೊಂಡರೆ ಅಲ್ಪ ಪ್ರಮಾಣದ ಬದಲಾವಣೆ ಆಗಬಹುದು. ಅದಕ್ಕೆ ಆಡಳಿತ ಯಂತ್ರವು ಮನಸ್ಸು ಮಾಡಬೇಕು.

ಸಮುದಾಯದ ಜನಪದ ಸಾಹಿತ್ಯ ಮತ್ತು ಚರಿತ್ರೆ

ಬೇಡ ಸಮುದಾಯಕ್ಕೆ ಸಂಬಂಧಿಸಿದಂತೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಚಾರಿತ್ರಿಕ ಆಕರಗಳು ನಮಗೆ ನೋಡಲು ದೊರೆಯುತ್ತವೆ. ಆದರೆ ಅವುಗಳನ್ನು ರಕ್ಷಿಸುವಂತಹ ಕೆಲಸವು ಬಹುಮುಖ್ಯವಾಗಿ ಆಗಬೇಕಾಗಿದೆ. ಆದರೆ ಸುರಪುರ, ಶಹಾಪುರ, ವಾಗನಗೆರೆ, ವನದುರ್ಗಾ, ಮತ್ತು ಇನ್ನೂ ಮುಂತಾದ ಸ್ಥಳಗಳಲ್ಲಿ ಈ ಸಮುದಾಯದ ಐತಿಹಾಸಿಕ ಪರಂಪರೆಯನ್ನು ಬಿತ್ತರಿಸುವಂತಹ ಕೋಟೆಗಳು, ಸ್ಮಾರಕಗಳು, ಹುಡೆಗಳು, ದ್ವಾರಬಾಗಿಲುಗಳು, ಹಾಗೂ ದೇವಸ್ಥಾನಗಳು, ಹಸ್ತಪ್ರತಿಗಳು, ಇನ್ನಿತರೆಗಳನ್ನು ಉಳಿಸಿಬೆಳೆಸುವುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇವರಿಗೆ ಸಂಬಂಧಿಸಿದ ಚರಿತ್ರಯನ್ನು ಮುಂದಿನ ತಲಾಮಾರಿಗೆ ಪರಿಚಯಿಸುವಂತಹ ಪ್ರಯತ್ನವನ್ನು ಸರಕಾರವು ಮಾಡಬೇಕಾಗಿದೆ. ಅದರ ಜೊತೆಗೆ ಈ ಸಮುದಾಯದ ರಾಜರು ಆಡಳಿತ ಮಾಡಿದಂತಹ ಸುರಪುರ ಕ್ಷೇತ್ರದಲ್ಲಿ ಬರುವಂತಹ ಕೋಟೆ ದರ್ಬಾರಗಳನ್ನು ಭಾರತೀಯ ಪುರಾತತ್ವ ಇಲಾಖೆ ವಹಿಸಿಕೊಟ್ಟು ರಕ್ಷಣೆ ಮಾಡುವಲ್ಲಿ ಪ್ರಯತ್ನ ಮಾಡಬೇಕಾಗಿದೆ. ಅದರ ಅಡಿಯಲ್ಲಿ ಇದೇ ಪರಿಸರದಲ್ಲಿ ಇಂದಿನವರೆಗೂ ಆಚರಣೆಯಲ್ಲಿರುವ ಅನೇಕ ಜನಪದ ಹಾಡುಗಳು ಅದರಲ್ಲೂ ಆರತಿ ಪದಗಳು, ಬೀಸುವ ಕುಟ್ಟುವ ಪದಗಳು, ಮೊಹರಂ ಪದಗಳು, ಸೋಬಾನ ಪದಗಳು, ಹಾಗೂ ಒಗಟುಗಳು, ಇನ್ನಿತರ ಹಾಡುಗಳು ಹಳ್ಳಿಗಳಲ್ಲಿ ಜೀವಂತವಾಗಿವೆ. ಇವುಗಳನ್ನು ಸಂಗ್ರಹಿಸುವ ಕಾರ್ಯ ಮೊದಲು ನಡೆಯಬೇಕಿದೆ. ಇಂತಹ ಕಾರ್ಯಗಳಿಂದ ಮತ್ತೊಮ್ಮೆ ಸ್ಥಳೀಯ ಮೌಖಿಕ ಆಕರಗಳ ಮೂಲಕ ಈ ಸಮುದಾಯದ ಚರಿತ್ರೆಯನ್ನು ರಚಿಸುವಂತಾಗಬೇಕಿದೆ. ಅಂದಾಗ ಮಾತ್ರ ಒಂದು ಸಮುದಾಯದ ಮರೆಯಾದ ಚಿತ್ರಣವನ್ನು ಮತ್ತೆ ಮುಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ಅತ್ಯಂತ ಮಹತ್ವದ ಕೆಲಸವಾಗುವುದರಲ್ಲಿ ಸಂದೇಹವೇ ಬರಲಾರದು.

ಆಕರ ಗ್ರಂಥಗಳು

೧. ಡಾ. ಮಂಜುನಾಥ ಬೇವಿನಕಟ್ಟಿ, ೨೦೦೭, ವ್ಯಾಧ ಚರಿತೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ

೨. ಡಾ. ಕೆ. ಎಂ. ಮೈತ್ರಿ, ೨೦೦೨, ಬುಡಕಟ್ಟು ಕುಲಕಸುಬುಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ

೩. ಡಾ. ಎಚ್‌. ಡಿ. ಪ್ರಶಾಂತ್‌, ಈಶಾನ್ಯ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ, ೨೦೦೫, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ

೪. ಎ. ಎನ್‌. ಪ್ರಭಾಕರ, ೨೦೦೦, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ