ಬಳ್ಳಾರಿ ಜಿಲ್ಲೆಯ ಪರಿಚಯ

ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಜಿಲ್ಲೆ ಬಳ್ಳಾರಿ ಜಿಲ್ಲೆ. ಬಳ್ಳಾರಿ ಜಿಲ್ಲೆಯು ನಮ್ಮ ದೇಶದಲ್ಲಿಯೇ ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದು. ಬಳ್ಳಾರಿ ಜಿಲ್ಲೆಯ ನಾಗರಿಕತೆಯು ಶಿಲಾಯುಗದಿಂದ ನವೀನ ಯುಗದವರೆವಿಗೂ ಸಾಗಿ ಬಂದಿದೆ. ಸಂಗನಕಲ್ಲು, ತೆಕ್ಕಲಕೋಟೆ, ಬೇಡರ ಬೆಳಗಲ್ಲು ಮುಂತಾದ ಕಡೆಗಳಲ್ಲಿ ಇತಿಹಾಸಕಾರರು ಸಂಶೋಧಿಸಿದ್ದಾರೆ. ಮಾನವ ಕುಲದ ಎಲ್ಲ ಘಟ್ಟಗಳ ಅಖಂಡವಾದ ಬೆಳವಣಿಗೆ ಬಳ್ಳಾರಿ ಜಿಲ್ಲೆಯಲ್ಲಿ ಕಂಡುಬಂದಿದೆ. ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಅವಲೋಕಿಸಿದಾಗ ಈ ಜಿಲ್ಲೆಯು ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಪ್ರಾರಂಭವಾಗಿ ವಿಜಯನಗರ, ನಿಜಾಮರ, ಟಿಪ್ಪು ಸುಲ್ತಾನ್‌ಮತ್ತು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು ಕಾಲದ ಕುಲುಮೆಯಲ್ಲಿ ಬೆಂದು ಪುಟಕ್ಕಿಟ್ಟ ಚಿನ್ನವಾಗಿ ಅವುಗಳ ಪ್ರಭಾವದಿಂದ ತನ್ನ ಪ್ರತಿಭಾಸಂಪನ್ನವಾದ ಸಾಂಸ್ಕೃತಿಕ ಪರಂಪರೆಯನ್ನು, ಸಮೃದ್ಧಗೊಳಿಸಿಕೊಂಡಿದ್ದಕ್ಕೆ ಸಿಕ್ಕಿರುವ ಸಾವಿರಾರು ಶಾಸನಗಳು, ಕೈಫಿಯತ್ತುಗಳು, ಸ್ಥಳಪುರಾಣಗಳು, ವಾಸ್ತುಶಿಲ್ಪಗಳು, ವೀರಗಲ್ಲು ಮತ್ತು ಮಾಸ್ತಿಗಲ್ಲು ವಿಪುಲವಾದ ಸಾಹಿತ್ಯ ಪ್ರಕಾರಗಳು ಸಾಕ್ಷಿ ನುಡಿಯುತ್ತವೆ. ಅನೇಕ ರಾಜ ಮನೆತನಗಳು ನಿರಂತರವಾಗಿ ಈ ಜಿಲ್ಲೆಯನ್ನು ಆಳಿವೆ. ಕೀರ್ತಿ, ಸಂಪತ್ತು, ಶ್ರೇಯಸ್ಸುಗಳನ್ನು ಗಳಿಸಿವೆ.

ಬಳ್ಳಾರಿ ಜಿಲ್ಲೆಯೆಂದರೆ ಬಿಸಿಲಿನ ಜಿಲ್ಲೆಯೆಂದೇ ಜನ ಜನಿತವಾದ ಮಾತು ಬೇರೆ ಇದೆ. ಕಬ್ಬಿಣದ ಬೀಡು ಎನ್ನುವ ಮಾತು ಸಹ ಇದೆ. ಶೇ. ೩೮ ರಷ್ಟು ಉತ್ಕೃಷ್ಟತೆಯ ಕಬ್ಬಿಣಾಂಶ ಹೊಂದಿದ ಅದಿರು ಇಲ್ಲಿಯದು. ಕರ್ನಾಟಕದ ಮಾತೆಯಂತೆ ಬಳ್ಳಾರಿ ಜಿಲ್ಲೆ ಹಲವು ವೈವಿಧ್ಯ –ವೈಶಿಷ್ಟ್ಯ ಹಾಗೂ ವಿಭಿನ್ನತೆಗಳಿಂದ ಕೂಡಿದ ಗತ ವೈಭವದ ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಾರುವ ಹಾಗೂ ಪ್ರಕೃತಿದತ್ತ ಬೆಟ್ಟದ ಸಾಲುಗಳಿಂದ ಕೂಡಿ ಜಿಲ್ಲೆಯ ಜೀವನಾಡಿಯಂತಿರುವ ತುಂಗಭದ್ರಾ ನದಿಯ ಮಹತ್ತರ ಉಪಯೋಗದಿಂದ ಜಿಲ್ಲೆಯ ರೈತರಿಗೆ ಆಶಾದೀಪವಾಗಿದೆ. ‘‘ಗಂಗಾ ಸ್ನಾನ-ತುಂಗಾಪಾನ” ಎಂಬ ನಾಣ್ಣುಡಿಯ ಸಾರ್ಥಕ ಸಾರಿದ ಬಳ್ಳಾರಿ ಜಿಲ್ಲೆ ಜಾಗತಿಕ ಮಹತ್ವದ ಐತಿಹಾಸಿಕ ಘಟನೆಗಳ ಹಿನ್ನೆಲೆ ಹೊಂದಿ ಇಂದಿಗೂ ಎಲ್ಲ ದೆಸೆಗಳಲ್ಲಿ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣವೆನಿಸಿ ಮುನ್ನಡೆದಿದೆ.

ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕರ್ನಾಟಕದ ಹೃದಯದಂತಿರುವ ಬಳ್ಳಾರಿ ಜಿಲ್ಲೆಯು ಬಹಳ ವಿಶಿಷ್ಟ ಹಾಗೂ ವಿಶೇಷವಾದ ಸ್ಥಾನವನ್ನು ಪಡೆದಿದೆ. ಉತ್ತರಕ್ಕೆ ರಾಯಚೂರು, ದಕ್ಷಿಣಕ್ಕೆ ಚಿತ್ರದುರ್ಗ, ಪೂರ್ವಕ್ಕೆ ಅನಂತಪುರ ಮತ್ತು ಕರ್ನೂಲು, ಪಶ್ಚಿಮಕ್ಕೆ ಧಾರವಾಡ ಜಿಲ್ಲೆಗಳಿಂದ ಸುತ್ತುವರೆಯಲ್ಪಟ್ಟಿದೆ. ಜೊತೆಗೆ ಕರ್ನಾಟಕದ ಮಧ್ಯದ ಸ್ಥಾನದಲ್ಲಿರುವ ದಕ್ಷಿಣೋತ್ತರವಾಗಿ ನೋಡಿದರೆ ಬಳ್ಳಾರಿ ಜಿಲ್ಲೆಯು ಈಶಾನ್ಯ ಮತ್ತು ನೈಋತ್ಯ ದಿಕ್ಕಿನಲ್ಲಿ ಉದ್ದಕ್ಕೆ ಹಬ್ಬಿದೆ. ಬಳ್ಳಾರಿ ಜಿಲ್ಲೆಯು ಆಡಳಿತದ ಅನುಕೂಲಕ್ಕಾಗಿ ಏಳು ತಾಲೂಕುಗಳನ್ನು ಹೊಂದಿದೆ. ಕ್ರಮವಾಗಿ ಬಳ್ಳಾರಿ, ಹೊಸಪೇಟೆ, ಸಂಡೂರು, ಹಡಗಲಿ, ಕೂಡ್ಲಿಗಿ, ಸಿರಗುಪ್ಪ ಮತ್ತು ಹಗರಿಬೊಮ್ಮನಹಳ್ಳಿಗಳನ್ನು ಹೊಂದಿದೆ. ಜನ್ನನ “ಯಶೋಧರ ಚರಿತ್ರೆ”ಯಲ್ಲಿಯೂ ಬಳ್ಳಾರಿಯ ಉಲ್ಲೇಖವಿದೆ. ಹೀಗೆ ಬಳ್ಳಾರಿ ಜಿಲ್ಲೆ ಹಲವು ವೈವಿಧ್ಯ ವಿಶಿಷ್ಟತೆಗಳಿಂದ ಕೂಡಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಬುಡಕಟ್ಟುಗಳಿವೆ. ಹಲವಾರು ಬುಡಕಟ್ಟುಗಳು ಒಂದೊಂದು ಊರಿನಲ್ಲಿ ಒಂದೊಂದು ಗುಂಪುಗಳಾಗಿ ಇರುವುದನ್ನು ಬಳ್ಳಾರಿ ಜಿಲ್ಲೆಯಲ್ಲಿ ಗುರುತಿಸಬಹುದಾಗಿದೆ.

ಬಳ್ಳಾರಿ ಜಿಲ್ಲೆಯ ಬುಡಕಟ್ಟುಗಳು

ಬಳ್ಳಾರಿ ಜಿಲ್ಲೆ ಬುಡಕಟ್ಟುಗಳ ವಾಸಸ್ಥಾನವೆನ್ನಬಹುದು. ಹಲವಾರು ಬುಡಕಟ್ಟುಗಳು ತಮ್ಮದೇ ಆದ ವಿಶೇಷ ಕೊಡುಗೆಯನ್ನು ಬಳ್ಳಾರಿ ಜಿಲ್ಲೆಗೆ ನೀಡಿವೆ. ಬಳ್ಳಾರಿ ಜಿಲ್ಲೆಯಲ್ಲಿರುವ ಬುಡಕಟ್ಟುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದಾಗಿದೆ.

೧. ಅರಣ್ಯವಾಸಿ ಬುಡಕಟ್ಟುಗಳು
೨. ನಾಡವಾಸಿ ಬುಡಕಟ್ಟುಗಳು
೩. ಅಲೆಮಾರಿ ಬುಡಕಟ್ಟುಗಳು
೪. ಅರೆ ಅಲೆಮಾರಿ ಬುಡಕಟ್ಟುಗಳು

ಈ ಮೇಲಿನ ನಾಲ್ಕು ಬುಡಕಟ್ಟುಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಗುರುತಿಸಬಹುದಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಂದು ಅಂದಾಜಿನ ಪ್ರಕಾರ ಹದಿನೆಂಟು ಬುಡಕಟ್ಟು ಸಮುದಾಯಗಳಿವೆ. ಅರಣ್ಯವಾಸಿ ಬುಡಕಟ್ಟುಗಳಲ್ಲಿ ಅಡವಿಚೆಂಚರು ಮತ್ತು ಚೆಂಚರನ್ನು ಗುರುತಿಸಬಹುದಾಗಿದೆ. ನಾಡವಾಸಿ ಬುಡಕಟ್ಟುಗಳಲ್ಲಿ ಬೇಡರು, ಮ್ಯಾಸಬೇಡರು, ಮೇದರು ಸಮುದಾಯವನ್ನು ಗುರುತಿಸಬಹುದಾಗಿದೆ. ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಹಕ್ಕಿಪಿಕ್ಕಿ ಬುಡಕಟ್ಟುಗಳನ್ನು ಗುರುತಿಸಬಹುದಾಗಿದೆ.

ಕಾಡುಕುರುಬ, ಬೇಡ, ನಾಯಕ, ತಳವಾರ, ಪರಿವಾರ, ಮುದ್ದೆಗಂಬಾರ, ಕಮ್ಮಾರ, ಮಲಯ, ಮಲ್ಲೆತ್ತಾಯ, ಸೋಲಿಗರು, ಪಾರ್ಧಿ, ಕೊರಗ, ಹೊಲೆಯ, ಗೊಂಡ, ತೋಡ, ಟೋಕರೆ, ರಾಜಗೊಂಡ, ಹಸಲರು, ಯರವ, ಭಿಲ್ಲರು ಇತ್ಯಾದಿ ಸಮುದಾಯಗಳು ಬುಡಕಟ್ಟು ಸಮುದಾಯಗಳಾಗಿವೆ. ಬುಡಕಟ್ಟು ಸಮುದಾಯಗಳಲ್ಲಿ ಪ್ರತ್ಯೇಕವಾದ ಒಂದೊಂದು ಗುಂಪುಗಳಿರುತ್ತವೆ. ಅವರದೇ ಆದ ದೈಹಿಕ ಲಕ್ಷಣಗಳಿರುತ್ತವೆ. ಆಹಾರ, ಉಡುಗೆ-ತೊಡುಗೆ ಆಚರಣೆ, ಧರ್ಮ, ದೈವ ಅವರದೇ ಆದ ಸಂಪ್ರದಾಯದಲ್ಲಿ ನಡೆಯುತ್ತದೆ. ಅವರಲ್ಲಿ ತಮ್ಮದೇ ಆದ ಆಡು ಭಾಷೆ ಇರುತ್ತದೆ. ಒಂದು ವಿಶಿಷ್ಟ ಸಂಸ್ಕೃತಿಯನ್ನು ಅವರಲ್ಲಿ ಗುರುತಿಸಬಹುದಾಗಿದೆ. ಮೇದರು ಜನಾಂಗದ ವೃತ್ತಿ ಬಿದಿರು ಮಾರುವುದಾಗಿರುತ್ತದೆ. ಮೊದಮೊದಲು ಕಾಡಿನಿಂದ ಬಿದಿರನ್ನು ತಂದು ಮಾರುತ್ತಿದ್ದರು. ಕಾಡಿನಲ್ಲಿ ವಾಸಿಸುತ್ತಿದ್ದರು. ಆದರೆ ಬರುಬರುತ್ತಾ ಅವರು ಬಿದಿರಿನ ಅವಶ್ಯಕತೆ ಹೆಚ್ಚಾದಂತೆ ಕಾಡಿನಿಂದ ನಾಡಿಗೆ ಬಂದರು. ಬೇಡರ ವೃತ್ತಿ ಮೊದಲು ಬೇಟೆಯಾಡುವುದಾಗಿತ್ತು ಮತ್ತು ಪಶುಪಾಲನೆಯಾಗಿತ್ತು. ಈಗಲೂ ನಾಯಕರು, ಮಯಾಸ ನಾಯಕರು ‘ಪಶುಪಾಲನೆ, ಕುರಿ ಸಾಕಾಣೆ ಮಾಡುತ್ತಿದ್ದಾರೆ. ಅವರಲ್ಲಿ ದೈಹಿಕ ಲಕ್ಷಣ ವಿಭಿನ್ನವಾಗಿರುವುದನ್ನು ನೋಡಬಹುದಾಗಿದೆ. ಧೈರ್ಯಶಾಲಿಗಳಾಗಿರುವುದರಿಂದ ಅವರು ಬೇಟೆಗಾರಿಕೆಗೆ ಹೆಸರುವಾಸಿಯಾಗಿದ್ದರು ಎಂಬುದನ್ನು ಅರಿಯಬಹುದಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಚೆಂಚರು ಮತ್ತು ಅಡವಿಚೆಂಚರ ಗುಂಪುಗಳನ್ನು ಇಂದಿಗೂ ಕಾಣಬಹುದಾಗಿದೆ. ಬಳ್ಳಾರಿ ಮತ್ತು ಆಂಧ್ರದ ಗಡಿಭಾಗದಲ್ಲಿಯೂ ಇವರು ವಾಸಿಸುತ್ತಿರುವುದನ್ನು ನೋಡಬಹುದಾಗಿದೆ. ಬೇಡ ಅಥವಾ ನಾಯಕ ಸಮುದಾಯ ಹೊಸಪೇಟೆ ಮತ್ತು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರದೇ ಆದ ಏಳು ಕೇರಿಗಳು ಕಮಲಾಪುರ ಮತ್ತು ಹೊಸಪೇಟೆಯಲ್ಲಿವೆ. ಅವರದೇ ಆದ ಆಡುಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿಗೂ ಗುರುತಿಸಬಹುದಾಗಿದೆ. ಆಧುನಿಕ ಪ್ರಭಾವ ಎಷ್ಟೇ ಬೀರಿದರೂ ತಮ್ಮ ಮೂಲ ಗುಣಲಕ್ಷಣಗಳನ್ನು ಮಾತ್ರ ಈ ಬುಡಕಟ್ಟು ಸಮುದಾಯ ಬಿಟ್ಟುಕೊಡದು.

ಕಮಲಾಪುರ ನಾಯಕರು ಪ್ರಾಣಿಪ್ರಿಯರು. ಪಶುಪಾಲನೆ ಇಂದಿಗೂ ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮೊದಲಿನಿಂದಲೂ ಅವರು ಬೇಟೆಗಾರರಾಗಿರುವುದರಿಂದ ಅವರು ಬೇಟೆ ನಾಯಿಗಳನ್ನು ಸಾಕುತ್ತಿದ್ದರು. ಈಗಲೂ ಮನೆಗೆರಡರಂತೆ ನಾಯಿಗಳು ಅವರ ಪ್ರಿಯವಾದ ಪ್ರಾಣಿಗಳಾಗಿವೆ. ಈಗಲೂ ಅವರು ಸಾಕುಪ್ರಾಣಿ ನಾಯಿಯ ಮೇಲೆ ತೋರಿಸುತ್ತಿರುವ ಪ್ರೀತಿ ಮಾತ್ರ ಅಗಾಧವಾದದ್ದು. ಕಮಲಾಪುರದ ನಾಯಕ ಬುಡಕಟ್ಟು ಸಮುದಾಯದವರ ಮನೆಯ ಒಳಗೂ ಮತ್ತು ಹೊರಗೂ ಅವುಗಳು ಓಡಾಡುವುದನ್ನು ನೋಡಿದರೆ ಅವರು ಅವುಗಳ ಮೇಲೆ ತೋರಿಸುತ್ತಿರುವ ಕಾಳಜಿ ಎಷ್ಟೆಂಬುದು ಮನವರಿಕೆಯಾಗುತ್ತದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ತಮ್ಮದೇ ಆದ ಗುಂಪು ಜೀವನವನ್ನು ನಡೆಸುತ್ತಿದ್ದಾರೆ. ಹೊಸಪೇಟೆ ತಾಲ್ಲೂಕಿನ ಕಂಪ್ಲಿಯಲ್ಲಿಯೂ ಕೂಡ ಅಲೆಮಾರಿ ಮತ್ತು ಅರೆ ಅಲೆಮಾರಿಗಳ ಗುಂಪು ಜೀವನ, ಅವರದೇ ಆದ ಸಂಸ್ಕೃತಿ, ಊಟೋಪಚಾರ, ಉಡುಗೆ ತೊಡುಗೆಗಳನ್ನು ಕಾಣಬಹುದು. ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಬುಡಕಟ್ಟುಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಮ್ಮನ್ನು ಮುನ್ನಡೆಗೆ ತಂದುಕೊಳ್ಳಲು ಪರದಾಡುತ್ತಿವೆ. ಕೆಲವು ಬುಡಕಟಟುಗಳು ಸ್ವಾವಲಂಬನೆ, ಸ್ವಾಭಿಮಾನ ಮತ್ತು ಆತ್ಮ ಬಲದಿಂದ ಸಾಂಸ್ಕೃತಿಕ ಪರಂಪರೆಯನ್ನು ಮೈಗೂಡಿಸಿಕೊಂಡು ಅದಕ್ಕನುಗುಣವಾಗಿ ಸಾಮಾಜಿಕ ಆರ್ಥಿಕ ಬುದ್ಧಿ ವಿಕಾಸ ಪ್ರಜ್ಞೆಗಳೊಂದಿಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಸಾಧಿಸುತ್ತಿವೆ.

ವೇಷಭೂಷಣ, ವ್ಯವಸಾಯ, ಉಪಕರಣ, ಮನೆ, ಆಚರಣೆಗಳು, ಆಹಾರ ಪದ್ಧತಿ, ಮದುವೆ, ಸಂಪ್ರದಾಯಗಳಲ್ಲಿ ಯಾವುದೇ ಬದಲಾವಣೆಗಳು ಬುಡಕಟ್ಟು ಸಮುದಾಯಗಳಲ್ಲಿ ಕಂಡುಬರುವುದಿಲ್ಲ. ತಮ್ಮ ಆಹಾರಕ್ಕಾಗಿ ರಾಗಿಮುದ್ದೆ, ಜೋಳದ ಮುದ್ದೆ, ಗುರಾಳಪುಡಿ, ಹುಂಚಿಕಾಯಿ ಚಟ್ನಿ, ಕಡಲೆ ಪುಡಿ, ಸುಟ್ಟ ಬದನೆಕಾಯಿ ತಂಬ್ಳಿ, ನೆವಣಕ್ಕಿ ಅನ್ನ, ಮಜ್ಜಿಗೆ, ಮೊಸರು, ಬುಡಕಟ್ಟು ಸಮುದಾಯಗಳ ಆಹಾರವಾಗಿದೆ. ಆಯಾ ದಿನದ ದುಡಿಮೆಯಲ್ಲಿಯೇ ಆಯಾ ದಿನದ ಆಹಾರ ತಯಾರಿಸಿಕೊಳ್ಳುವ ಪದ್ಧತಿ ಬುಡಕಟ್ಟು ಜನರಲ್ಲಿದೆ. ಅವಿಭಕ್ತ ಕುಟುಂಬ ಪದ್ಧತಿ ಬುಡಕಟ್ಟು ಸಮುದಾಯಗಳಲ್ಲಿ ಕಂಡುಬರುವ ಪ್ರಮುಖ ಲಕ್ಷಣವಾಗಿದೆ. ವಿಭಕ್ತ ಕುಟುಂಬಕ್ಕೆ ಅಷ್ಟೊಂದು ಮಹತ್ವವನ್ನು ಈ ಸಮುದಾಯಗಳು ಕೊಡಲಾರವು. ಬಳ್ಳಾರಿ ಜಿಲ್ಲೆಯ ಬುಡಕಟ್ಟುಗಳಲ್ಲಿ ಬಹುಪಾಲು ಜನರು ಅನಕ್ಷರಸ್ಥರಾಗಿರುವುದು ಮೇಲುನೋಟಕ್ಕೆ ಕಂಡುಬರುತ್ತದೆ. ಶೇ. ೯೦ರಷ್ಟು ಜನರು ಬಡವರು, ಕಡುಬಡವರಾಗಿದ್ದಾರೆ. ಬಡತನವು ಅಜ್ಞಾನಕ್ಕೆ ಕಾರಣವಾಗಿದೆ. ಆದರೆ ಅವರಲ್ಲಿ ಹೇರಳವಾಗಿ ಇಂದಿಗೂ ಮೌಖಿಕ ಸಾಹಿತ್ಯವಿರುವುದನ್ನು ಮೂರು ದಿನಗಳವರೆಗೆ ಹಾಡುವ ಸೋಬಾನ ಪದಗಳು ಇರುವುದನ್ನು ಕಾಣಬಹುದಾಗಿದೆ.

ಬಳ್ಳಾರಿ ಜಿಲ್ಲೆಯ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಜನಪದ ಕಲೆಗಳನ್ನು ಹೊಂದಿವೆ. ಕೋಲಾಟ, ಭಜನೆ, ಡೊಳ್ಳು ಕುಣಿತ, ಹಲಗೆವಾದನ, ಬಂಡಿ ಎತ್ತುವ ಸ್ಪರ್ಧೆ, ಗುಂಡು ಉರುಳಿಸುವ ಸ್ಪರ್ಧೆ ಇನ್ನಿತರ ಜನಪದ ಕಲೆಗಳನ್ನು ಪೋಷಿಸಿಕೊಂಡು ಬರುತ್ತಿವೆ. ಇತ್ತೀಚೆಗಂತೂ ಬಳ್ಳಾರಿ ಜಿಲ್ಲೆ ಎಷ್ಟೇ ನಗರೀಕರಣಕ್ಕೆ ಒಳಗಾದರೂ ತಮ್ಮ ಮೂಲ ಕಸುಬನ್ನು ಬುಡಕಟ್ಟು ಸಮುದಾಯಗಳು ಬಿಟ್ಟುಕೊಡಲಾರವು. ಭೂಮಿಯ ಉಳುಮೆಯಲ್ಲಿ ತೊಡಗುವುದು ಎತ್ತಿನಬಂಡಿಗಳನ್ನು ಹೊಂದುವುದು ರೈತರ ಜೀವನವಾಗಿದೆ.

ಬಳ್ಳಾರಿ ಜಿಲ್ಲೆಯ ಬುಡಕಟ್ಟು ಸಮುದಾಯಗಳು ತಮ್ಮ ಮೂಲ ದೇವರ ದೇವತೆಯ ಪೂಜೆ-ಪುರಸ್ಕಾರಗಳನ್ನು ಬಿಟ್ಟು ಅನ್ಯದೇವತೆಗಳನ್ನು ಸ್ವೀಕರಿಸುವುದಿಲ್ಲ. ಹಬ್ಬ ಹರಿದಿನಗಳಲ್ಲೂ ಅಷ್ಟೇ ಶ್ರದ್ಧೆಯನ್ನು ಈ ಸಮುದಾಯಗಳಲ್ಲಿ ಗುರುತಿಸಬಹುದಾಗಿದೆ. ಅವರ ದೇವರುಗಳೆಂದರೆ, ಹುಲಿಗೆಮ್ಮ, ಸುಂಕಮ್ಮ, ದುರುಗಮ್ಮ, ಮಾರಮ್ಮ, ಆಂಜನೇಯ, ಸಂಕಲಮ್ಮ, ತಾಯಮ್ಮ, ಕೊಂಗಮ್ಮ ಇನ್ನಿತರ ದೇವರ ಪೂಜೆ ಬುಡಕಟ್ಟು ಸಮುದಾಯಗಳಲ್ಲಿದೆ.

ಊರಿನ ಹೊರಗಡೆ ಹೆಚ್ಚಾಗಿ ಬದುಕುವ ಕೆಲ ಬುಡಕಟ್ಟು ಸಮುದಾಯಗಳು ಯಾವುದೇ ಕಾರಣಕ್ಕೂ ಊರಿನ ಒಳಗೆ ಇರಲು ಇಷ್ಟಪಡುವುದಿಲ್ಲ. ಅವರ ಮನೆಗಳು ಯಾವಾಗಲೂ ಊರ ಹೊರಗಡೆ ಇರುತ್ತವೆ. ಗುಂಪು ಜೀವನ ಅವರಲ್ಲಿ ಗುರುತಿಸಬಹುದಾದ ಪ್ರಮುಖ ಲಕ್ಷಣವಾಗಿದೆ. ಆಧುನಿಕ ಬೆಳದಂತೆ ಅವರಲ್ಲಿ ಅಸೂಯೆ, ವೈಷಮ್ಯ, ದ್ವೇಷಗಳು ಕಡಿಮೆಯಾಗಿ ಸಂಘಟನೆಯ ಮನೋಭಾವನೆಯನ್ನು ಅವರಲ್ಲಿ ನೋಡಬಹುದಾಗಿದೆ.

ಬಳ್ಳಾರಿ ಜಿಲ್ಲೆಯ ಕೆಲ ಬುಡಕಟ್ಟುಗಳಲ್ಲಿ ಅವರಲ್ಲದೇ ಆದ ಅಚ್ಚುಕಟ್ಟಾದ “ನ್ಯಾಯ ವ್ಯವಸ್ಥೆಯನ್ನು ಅಥವಾ ನ್ಯಾಯ ತೀರ್ಮಾನವನ್ನು” ನೋಡಬಹುದಾಗಿದೆ. ಈ ನ್ಯಾಯ ವ್ಯವಸ್ಥೆಗೆ ದೈವತ್ವದ ಸ್ಥಾನವನ್ನು, ಮಹತ್ವವನ್ನು ನೀಡುವರು. ಅದಕ್ಕೆ “ದೈವ” ಎಂದು ಕರೆಯುವುದು ವಾಡಿಕೆಯಲ್ಲಿದೆ. ತಮ್ಮ ತಮ್ಮಲ್ಲಿಯೇ ಈ ಸಮುದಾಯಗಳು ನ್ಯಾಯ ತೀರ್ಮಾನವನ್ನು ಮಾಡಿಕೊಳ್ಳುತ್ತವೆ. ೨೧ನೇ ಶತಮಾನಕ್ಕೆ ಕಾಲಿಟ್ಟರೂ ಬಳ್ಳಾರಿ ಜಿಲ್ಲೆಯ ಬುಡಕಟ್ಟು ಜನರ ಜೀವನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಭೂಮಿಯ ಬುಡಕಟ್ಟು ಮಕ್ಕಳು ಮತ್ತು ಮಹಿಳೆಯರು ಕೇವಲ, ಬಡತನ, ನಿರ್ಲಕ್ಷ್ಯ ಮತ್ತು ಸಾಮಾಜಿಕ ಅಸಮಾನತೆಯಿಂದ ಬದುಕುತ್ತಿದ್ದಾರೆ. ಬುಡಕಟ್ಟು ಜನರ ಭೂಮಿಯನ್ನು ಅತಿಕ್ರಮಣ ಮಾಡಿ ಒಕ್ಕಲೆಬ್ಬಿಸುವ ಕಾಲವಿನ್ನೂ ದೂರವಿಲ್ಲ. ಹೊಸಪೇಟೆ ನಾಯಕರ ಏಳು ಕೇರಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳಬೇಕಾಗುತ್ತದೆ. ಇಂದಿಗೂ ಬುಡಕಟ್ಟು ಜನರು ದಯನೀಯ ಸ್ಥಿತಿಯಲ್ಲಿ ಬರುತ್ತಿದ್ದಾರೆ. ಬುಡಕಟ್ಟು ಜನರ ಹಕ್ಕುಗಳ ಪರವಾಗಿ ಹೋರಾಟ ಮಾಡಲು ಸಂಘ ಸಂಸ್ಥೆಗಳು ಚಿಂತನೆ ಮಾಡಬೇಕಾಗಿದೆ, ಮುಂದೆ ಬರಬೇಕಾಗಿದೆ.

ಬುಡಕಟ್ಟುಗಳಲ್ಲಿ ನಂಬಿಕೆ

ಬಳ್ಳಾರಿ ಜಿಲ್ಲೆಯ ಬುಡಕಟ್ಟು ಸಮುದಾಯಗಳು ನಂಬಿಕೆ ಬಗ್ಗೆ ಅಗಾಧವಾದ ಕಾಳಜಿಯನ್ನು ವಹಿಸಿವೆ. ನಂಬಿಕೆಯೇ ಅವರ ಬಾಳಿಗೆ ಮೂಲ. ಈ ಲಕ್ಷಣವನ್ನು ಅವರಲ್ಲಿ ಇಂದಿಗೂ ಗುರುತಿಸಬಹುಬಹುದಾಗಿದೆ. ನಮ್ಮ ಭೌತಿಕ ಜಗತ್ತು ವಿವಿಧ ರೀತಿಯ ವಸ್ತುಗಳಿಂದ ಆಗಿದೆ. ಈ ವಸ್ತುಗಳ ಸೃಷ್ಟಿಗೆ ಮೂಲ ಕೆಲವೇ ಮೂಲ ವಸ್ತುಗಳು. ವಿಜ್ಞಾನವನ್ನು ಅಧ್ಯಯನ ಮಾಡುವಾಗ ಈ ಮೂಲ ವಸ್ತುಗಳು ಮೂಲ ಆಧಾರವಾಗುತ್ತವೆ. ಈ ಮೂಲ ವಸ್ತುಗಳು ಇಲ್ಲದಿದ್ದರೆ ಭೌತಿಕ ಜಗತ್ತು ಕುಸಿದು ಬೀಳುತ್ತದೆ. ಇದೇ ರೀತಿಯಲ್ಲಿ ಸಮಾಜ ಆರಂಭವಾಗುತ್ತದೆ. ಈ ಬದುಕುವ ನಂಬಿಕೆಯಿಂದ ಸಮಾಜ ಆರಂಭವಾಗುತ್ತದೆ. ಈ ಬದುಕುವ ನಂಬಿಕೆ ಬಂದ ಮೇಲೆ ಬುಡಕಟ್ಟು ಸಮುದಾಯಗಳು ತಮ್ಮ ಬದುಕಿಗೆ ಬೇಕಾದ ಇತರ ಪರಿಕರಗಳನ್ನು ಸೃಷ್ಟಿಸಿಕೊಳ್ಳುತ್ತವೆ. ಮಾನವ ಸಮಾಜ ಅಸ್ತಿತ್ವಕ್ಕೆ ಈ ನಂಬಿಕೆ ಮೂಲವಸ್ತು. ಹಾಗಾಗಿ ಬಳ್ಳಾರಿ ಜಿಲ್ಲೆಯ ಕೆಲವು ಬುಡಕಟ್ಟುಗಳು ನಂಬಿಕೆಯನ್ನು ಬಿಟ್ಟು ಹೋಗಲಾರವು. ಪ್ರತಿಯೊಂದು ಜೀವನದಲ್ಲಿ ನಡೆಯುವ ಹಬ್ಬ, ಹರಿದಿನ, ಜಾತ್ರೆ ಮತ್ತು ಆಚರಣೆಗಳಲ್ಲಿ ತಮ್ಮ ತಮ್ಮ ನಂಬಿಕೆಯ ಜಾಡನ್ನು ಹಿಡಿದುಕೊಂಡು ತಮ್ಮ ಜೀವನಕ್ಕೆ ಒಂದು ಅರ್ಥವನ್ನು ತಂದುಕೊಟ್ಟಿದ್ದಾರೆ. ಇಂದಿಗೂ ಇವರಲ್ಲಿ ನಂಬಿಕೆ ಅಗಾಧವಾದ ಪರಿಣಾಮವನ್ನು ಬೀರಿದೆ.

ಬುಡಕಟ್ಟುಗಳಲ್ಲಿ ಭಾಷೆ

ಬುಡಕಟ್ಟುಗಳಲ್ಲಿ ಅವರದೇ ಆದ ಭಾಷೆ ಇರುತ್ತದೆ. ಅವರು ಅದನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುತ್ತಾರೆ. ಭಾಷೆ ಸಂಸ್ಕೃತಿಯ ಮುಖ್ಯ ಅಂಗ. ಸಂಸ್ಕೃತಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ಭಾಷೆ ಬುನಾದಿಯಾಗಿರುತ್ತದೆ. ಭಾಷೆ-ಸಮಾಜ-ಸಂಸ್ಕೃತಿ ಇವು ಪರಸ್ಪರ ಪೂರಕವಾಗಿವೆ. ಭಾಷಾ ಸಮುದಾಯದಲ್ಲಿ ಕತೆ, ಗಾದೆ, ಒಗಟು, ವಾಗ್ರೂಢಿ ಹಾಗೂ ಹೆಸರುಗಳ ಮೂಲಕ ಸಮುದಾಯದ ಸಂಸ್ಕೃತಿ ಅಭಿವ್ಯಕ್ತವಾಗುತ್ತದೆ. ಸಮುದಾಯದ ಭಾಷಿಕ ಚಟುವಟಿಕೆಗಳು ಸಾಮಾಜಿಕ ಸ್ತರವನ್ನು ಸಮೀಕರಿಸಿಕೊಂಡು ಸಾಂಸ್ಕೃತಿಕ ಸ್ತರದಲ್ಲಿ ವಿರಮಿಸುತ್ತವೆ. ಹೀಗಾಗಿ ಸಾಮಾಜಿಕ ಭಾಷಾಧ್ಯಯನವು ಭಾಷೆ ಮತ್ತು ಸಂಸ್ಕೃತಿ ದೃಷ್ಟಿಯಿಂದ ಸ್ವಾರಸ್ಯಕರವಾದ ಸಂಗತಿಗಳನ್ನು ತಿಳಿಸಿಕೊಡುತ್ತದೆ.

ಭಾಷೆ ಸಂಸ್ಕೃತಿಯ ವಾಹಕ. ಒಂದು ಸಂಸ್ಕೃತಿಯ ಶಾಬ್ದಿಕ ಹಾಗೂ ಕ್ರಿಯಾತ್ಮಕ ಬಗೆಗಳನ್ನು ವಿವರಿಸಲು ಅಧ್ಯಯನಕಾರರು ಭಾಷೆಯ ಮೊರೆ ಹೋಗಬೇಕಾಗುತ್ತದೆ. ಭಾಷೆಯು ಒಂದು ಸಮುದಾಯದ ಸಂಸ್ಕೃತಿಯ ವಿಶಿಷ್ಟ ಅಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುತ್ತದೆ. ಭಾಷೆ ಕೇವಲ ಪದಗಳನ್ನಷ್ಟೇ ಒಳಗೊಳ್ಳದೆ ಆ ಪದಗಳ ಹಿಂದೆ ಆ ಭಾಷಾ ಸಮುದಾಯದ ಜನರ ಬದುಕು-ಜೀವನ ಕ್ರಮದ ಅನೇಕ ಅಂಶಗಳನ್ನೊಳಗೊಂಡಿರುತ್ತದೆ.

ಆದಿಮಾನವರಲ್ಲಿ ಚಿಕ್ಕ ಪುಟ್ಟ ವರ್ಗ ಮತ್ತು ಸಮಾಜಗಳಿದ್ದವು. ಅವರು ತಮ್ಮ ತಮ್ಮಲ್ಲೇ ಮೊದಲು ಭಾವನೆಗಳನ್ನು ಅಭಿವ್ಯಕ್ತಪಡಿಸಲು ವಿಭಿನ್ನ ಸ್ತರಗಳಲ್ಲಿ ಬೇರೆ ಬೇರೆ ರೀತಿಯ ಸಂಪರ್ಕಗಳನ್ನು ಸ್ಥಾಪಿಸಿದ್ದರು. ಆ ಸಂಪರ್ಕಕ್ಕಾಗಿ ಸ್ಪರ್ಶ ಮೊದಲಾದ ಸಹಾಯದೊಡನೆ ಆಸ್ಯಧ್ವನಿಗಳು ನೆರವನ್ನೂ ಪಡೆಯಲಾಯಿತು. ಅದರ ವಿಕಸಿತ ರೂಪವೇ ಭಾಷೆ. ಬಳ್ಳಾರಿ ಜಿಲ್ಲೆಯ ಬುಡಕಟ್ಟು ಸಮುದಾಯಗಳಲ್ಲಿ ಅವರದೇ ಆದ ಭಾಷೆ ಅರ್ಥವಂತಿಕೆಯನ್ನು ಪಡೆದಿರುತ್ತದೆ.

ಮ್ಯಾಸಬೇಡರ ಪ್ರತಿಯೊಂದು ಮನೆಯೂ ಪೆಟ್ಟಿಗೆಯಂತಿರುತ್ತದೆ. ಮನೆಯೊಳಗಡೆ ಗಾಳಿ, ಬೆಳಕಿನ ವ್ಯವಸ್ಥೆ ಕಡಿಮೆ. ಮನೆಯ ಮೇಲೆ ಹಂಚು ಹೊದಿಸುವ ಅಭ್ಯಾಸವೂ ಇರುವುದಿಲ್ಲ. ಎಂಟು-ಹತ್ತು ಅಡಿ ಎಬ್ಬಿಸಿದ ಗೋಡೆಯ ಮೇಲೆ ಈಚಲು, ತೆಂಗು ಅಥವಾ ಇನ್ನಾವುದೇ ಮರದ ದಿಮ್ಮಿಗಳನ್ನು ಅಡ್ಡಹಾಸಿ ಅದರ ಮೇಲೆ ಅವುರಿಕೆ, ಲಕ್ಕಿ ಬರಲು ಹಾಕಿ ಮಣ್ಣು ಮುಚ್ಚುವುದು, ಚೌಕಾಕಾರದ ಒಳ ಹಜಾರದಲ್ಲಿ ಅರ್ಧ ಭಾಗ ದನ ಕಟ್ಟುವ ಜಾಗವಾದರೆ ಇನ್ನರ್ಧ ಭಾಗ ವಾಸದ ಅನುಕೂಲವಾಗಿರುತ್ತದೆ. ಸಂಜೆಯಾದಲ್ಲಿ ದನಕರುಗಳೂ ಜನರೂ ಮನೆಯ ಒಳಭಾಗ ಸೇರಿ ದೊಡ್ಡದಾದ ಮುಂಬಾಗಿಲನ್ನು ಮುಚ್ಚಿದರೆ ಮತ್ಯಾವ ಕಡೆಯಿಂದಲೂ ಆ ಮನೆಗೆ ಪ್ರವೇಶ ಕಷ್ಟವೇ. ಇಂಥ ಮನೆಯ ಉದ್ದೇಶವೆಂದರೆ ಕಟ್ಟುವ ಮನೆಗಳಿಂದಲೇ ತಮ್ಮನ್ನು ತಾವು ಅಲ್ಲದೇ ತಮ್ಮ ಬದುಕಿನ ಆಧಾರವಾಗಿರುವ ದನ ಕರುಗಳನ್ನು ರಕ್ಷಣೆ ಮಾಡುವುದಾಗಿತ್ತೆಂದು ತಿಳಿಯಬಹುದು.

ಬೇಡನಾಯಕರು ವಾಸಿಸುವ ಗುಡಿಸಲೆಂದರೆ ಅದು ಒಂದು ಅಂಕಣ ಮಾತ್ರ ಇರಬಹುದಾದ ಸ್ಥಳವಾಗಿರುತ್ತದೆ. ಅಷ್ಟರಲ್ಲಿ ವೃತ್ತಾಕಾರಕ್ಕೆ ನಡುವಿನೆತ್ತರದ ಗೋಡೆಯೆಬ್ಬಿಸಿ ಅದರ ಮೇಲೆ ಗುಂಬಕಾರಕ್ಕೆ ಲಕ್ಕಿ ಬರಲು ಜೋಡಿಸಿ ಕಟ್ಟಿ ಅಂಚಿ ಹುಲ್ಲು ಹೊದಿಸಿದರೆ ಮುಗಿಯಿತು. ಕೆಳಗೆ ಸೆಗಣಿ ಸಾರಿಸಿದ ನೆಲವಿರುತ್ತದೆ. ಈ ಗುಡಿಸಲಿಗೆ ಒಬ್ಬ ವ್ಯಕ್ತಿನಿಂತೇ ಒಳಗೆ ಹೋಗಬಹುದಾದಂಥ ಬಾಗಿಲಿರುವುದಿಲ್ಲ. ಕೂತು ತೆವಳಿಕೊಂಡೇ ಒಳಗೆ ಹೋಗಬೇಕು. ಸಾಮಾನ್ಯವಾಗಿ ಬುಡಕಟ್ಟು ಜನಾಂಗದ ವಾಸದ ನೆಲೆಯ ರಚನೆಯನ್ನು ಗಮನಿಸಿದರೂ ಇದೇ ಮಾದರಿಯಲ್ಲಿರುತ್ತದೆ. ಅರಣ್ಯವಾಸಿಗಳಾಗಿದ್ದ ಇವರು ದುಷ್ಟ ಪ್ರಾಣಿಗಳು ಅತಿಸುಲಭವಾಗಿ ತಮ್ಮ ನೆಲೆಯೊಳಗೆ ಆಕ್ರಮಣ ಮಾಡಬಾರದೆಂಬ ಉದ್ದೇಶದಿಂದ ಬಾಗಿಲಿನಿಂದ ಹಿಡಿದು ಇಡೀ ಗುಡಿಸಲೇ ಅತಿಚಿಕ್ಕದಾಗಿರುವುದಕ್ಕೆ ಮತ್ತೆ ಅದರ ಸುತ್ತ ಮುಳ್ಳುಬೇಲಿ ಹಾಕುವುದಕ್ಕೆ ಕಾರಣಗಳಾಗಿವೆ.

ಬೇಡ ನಾಯಕರ ಮೈಬಣ್ಣ ಸಾಮಾನ್ಯವಾಗಿ ಕಪ್ಪು, ಉದ್ದ ಶರೀರ, ತಲೆಯ ಮೇಲೆ ಪೇಟ, ಬರಿಮೈ, ಹೆಗಲ ಮೇಲೆ ಒಂದು ಕಪ್ಪು ಕಂಬಳಿ. ಈ ಕಂಬಳಿ ಹಾಸಿಹೊಕ್ಕಲು ಹೊದ್ದುಕೊಳ್ಳಲು ಬೇಕಾದರೆ ಒಂದು ಕಡೆ ಗುಪ್ಪೆ ಇಟ್ಟು ಕೂತುಕೊಳ್ಳಲು ಬರುವಂಥದ್ದು. ಮಳೆಗಾಲದಲ್ಲಿ ಹೊದ್ದುಕೊಂಡು ಮಲಗಿದರೂ ನೆನೆಯದಂತೆ ಬಿದ್ದ ಹನ ಅತ್ತ ಇತ್ತ ಸೋರಿ ಹೋಗಿ ಬಿಡುವಂಥ ಕಂಬಳಿ ಇದು. ನಡುವಿನಲ್ಲಿ ಒಂದು ಚಲ್ಲಣ, ಕೈಯಲ್ಲಿ ಒಂದು ಕೋಲು ಹೆಂಗಸಾದರೆ ಬಿಳಿಯ ಸೀರೆ ಉಟ್ಟು ಅದರ ಸೆರಗನ್ನು ಹೆಗಲು ಬಳಸಿ ಎದೆ ಮುಚ್ಚಿಕೊಳ್ಳುವ ರೂಢಿಯಿದ್ದು, ರವಿಕೆ ತೊಡುವ ರೂಢಿ ಇವರಲ್ಲಿರಲಿಲ್ಲ. ಆದರೆ ಈಗೀಗ ಬೇಡನಾಯಕ ಭಾಷಾ ಸಮುದಾಯ ಆಧುನಿಕತೆಗೆ ಹೊಂದಿಕೊಂಡು ಹಳೆಯ ಸ್ವರೂಪವನ್ನು ಬಿಟ್ಟುಕೊಡುತ್ತಿರುವುದನ್ನು ಎಲ್ಲ ಕಡೆಗೂ ಗಮನಿಸಬಹುದಾಗಿದೆ. ಅದು ಅನಿವಾರ್ಯವೂ ಆಗಿದೆ.

ಮ್ಯಾಸಬೇಡರ ಮೂಲವೃತ್ತಿ ಬೇಟೆ. ಇತ್ತಿತ್ತಲಾಗಿ ತಮ್ಮ ಹಟ್ಟಿ ಸಮೀಪದ ಊರುಗಳಲ್ಲಿ ತಳವಾರಿಕೆ ವೃತ್ತಿ ಕೈಕೊಂಡಿದ್ದಾರೆ. ಕೆಲವರು ಕೃಷಿಯನ್ನು, ಪಶುಪಾಲನೆಯನ್ನು ಅವಲಂಬಿಸಿದ್ದಾರೆ. ಸಾಮಾಯವಾಗಿ ಊರ ಹೊರಗೆ ಹಟ್ಟಿ ಕಟ್ಟಿಕೊಂಡು ಜೀವನ ಸಾಗಿಸುವ ಈ ಬೇಡರ ಬದುಕಿನ ಕ್ರಮ ಬುಡಕಟ್ಟಿನ ಎಲ್ಲ ಲಕ್ಷಣಗಳನ್ನು ಹೊಂದಿರುತ್ತದೆ.

ಬಳ್ಳಾರಿ ಪರಿಸರದ ಬೇಡ ಭಾಷಾ ಸಮುದಾಯದಲ್ಲಿ ಶಬ್ದಾದಿಯ “ಕ”ದ ಮುಂದೆ ಸಜಾತಿಯ ದ್ವಿತ್ವವಿದ್ದರೆ ಶಬ್ದಾದಿಯ “ಕ”ದಲ್ಲಿಯ ‘ಅ’ ಧ್ವನಿ “ಒ” ಆಗಿ ಪರಿವರ್ತನೆ ಹೊಂದುವುದು ತುಂಬಾ ಸ್ವಾರಸ್ಯದ ಸಂಗತಿಯಾಗಿದೆ. ಆ ಸಮುದಾಯದ ವಿದ್ಯಾವಂತ, ಅವಿದ್ಯಾವಂತರ ಆಡುನುಡಿಯಲ್ಲಿ ಈ ಕ್ರಿಯೆ ಧಾರಾಳವಾಗಿ ನಡೆಯುತ್ತಿದೆಯಾದರೂ ಆಧುನೀಕರಣ ಮತ್ತು ನಗರೀಕರಣಗಳ ಪ್ರಭಾವದಿಂದ ಈಗ ವಿದ್ಯಾವಂತರ ಆಡುನುಡಿಯಲ್ಲಿ ಕಡಿಮೆಯಾಗುತ್ತಿದ್ದು ಅವಿದ್ಯಾವಂತರ ಆಡುನುಡಿಯಲ್ಲಿ ಉಳಿದಿದೆ.

ಕಲ್ಲು > ಕೊಲ್ಲು
ಕಣ್ಣು > ಕೊಣ್ಣು
ಕಬ್ಬು > ಕೊಬ್ಬು
ಕಪ್ಪು > ಕೊಪ್ಪು
ಕಪ್ಪೆ > ಕೊಪ್ಪೆ

ಇಲ್ಲಿ ಪದಾದಿಯಲ್ಲಿರುವ ‘ಅ’ ಧ್ವನಿ ‘ಒ’ ಆಗಿದೆ. (ಅ>ಒ) ‘ಅ’ ಪೂರ್ವಸ್ವರ ‘ಒ’ ಪಶ್ಚಸ್ವರವಾಗಿ ಬದಲಾವಣೆಯಾಗಿದೆ. ನಾಲಗೆಯ ಸ್ಥಿತಿ ಬದಲಾಗದೆ ತುಟಿಗಳ ಸ್ಥಿತಿ ಮಾತ್ರ ಬದಲಾಗುತ್ತದೆ. ಆವೃತ್ತ ಸ್ವರ, ಸಂತೃಪ್ತ ಸ್ವರವಾಗಿ ಪರಿವರ್ತನೆಯಾಗಿದೆ. ಈ ಪ್ರಕ್ರಿಯೆ ಪದಾದಿಯ ‘ಕ’ ವ್ಯಂಜನ ಧ್ವನಿಯಾಗಿದ್ದಾಗ ಮಾತ್ರ ನಡೆಯುತ್ತದೆ. ಉಳಿದೆಡೆ ನಡೆಯುವುದಿಲ್ಲ.

ಗಲ್ಲ > ಗೊಲ್ಲ
ಬಣ್ಣ > ಬೊಣ್ಣ
ಹಕ್ಕಿ > ಹೊಕ್ಕಿ
ಮಣ್ಣು > ಮೊಣ್ಣು

ಪದಾದಿ ‘ಕ’ ಹೊರತುಪಡಿಸಿ ಬೇರೆ ಧ್ವನಿಗಳಿದ್ದರೆ ‘ಓ’ ಆಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಬೇಡರು ತಮ್ಮದೇ ಆದ ಧ್ವನಿ ರಚನೆ, ಪದರಚನೆಯನ್ನು ಹೊಂದಿರುವ ಹಾಗೆ ತಮ್ಮದೇ ಆದ ದೇಸಿಜ್ಞಾನ ಸಂಪತ್ತನ್ನು ಹುದುಗಿಸಿಕೊಂಡು ತಮ್ಮದೇ ಭಾಷೆಯ ಸಾಮಾಜಿಕ ಚಹರೆಯನ್ನು ಉಳಿಸಿಕೊಂಡಿದ್ದಾರೆ. ಅವರಾಡುವ ವ್ಯಾವಹಾರಿಕ ಕನ್ನಡ ಒಂದು ಚಹರೆಯಾದರೆ ಭಾಷಾ ಬಳಕೆಯ ಸಾಮಾಜಿಕ ಚಹರೆ ಇನ್ನೊಂದು ಬಗೆ ಸಾಮಾಜಿಕ ನಿಯೋಗದ ಭಾಷಾ ಬಳಕೆಯಲ್ಲಿ ಹಲವು ವಾಗ್ರೂಢಿಗಳನ್ನು ಬಳಸುತ್ತಾರೆ. ಅವುಗಳ ಬಳಕೆಯ ಸ್ವರೂಪ ಅಧ್ಯಯನ ಯೋಗ್ಯವಾಗಿದೆ.

ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯ ಬುಡಕಟ್ಟು ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಆರ್ಥಿಕತೆಯನ್ನು ಜಾಗತೀಕರಣದ ಪೈಪೋಟಿಗಳಿಗೆ ಒಳಪಡಿಸಿದಾಗ ಜಾಗತಿಕ ಪೈಪೋಟಿಯನ್ನು ಎದುರಿಸಲು ಕೆಲ ಬುಡಕಟ್ಟು ಸಮುದಾಯಗಳು ಸಾಮರ್ಥ್ಯ ಎದುರಿಸಲಾರದೇ ಹೋಗಿವೆ. ಇದಕ್ಕೆ ಬಳ್ಳಾರಿ ಜಿಲ್ಲೆಯ ಕೆಲ ಬುಡಕಟ್ಟು ಸಮುದಾಯಗಳು ಹೊರತಾಗಿಲ್ಲ.

ಉದಾಹರಣೆಗೆ ಪ್ರಸಿದ್ಧ ಆರ್ಥಿಕತಜ್ಞರಾದ ಅಮರ್ತ್ಯಸೇನ್‌ಅವರು ತಿಳಿಸುವುದು ಕೂಡ ಇದನ್ನೇ. “ಸಾಮರ್ಥ್ಯ ಹೊಂದಿದ ಸಮುದಾಯಗಳು ಜಾಗತೀಕರಣ ಪ್ರಕ್ರಿಯೆಯಿಂದ ಇನ್ನೂ ಮುದುಮಾಡುವ ಸ್ಥಿತಿಗೆ ಇಳಿಯುತ್ತದೆ ಎಂಬ ಮಾತು ಬಳ್ಳಾರಿ ಜಿಲ್ಲೆಯ ಬುಡಕಟ್ಟು ಸಮುದಾಯಗಳಿಗೆ ಅನ್ವಯಿಸುವಂತಿದೆ.

ಆಧಾರ ಗ್ರಂಥಗಳು

೧. ಬುಡಕಟ್ಟು ಕುಲಕಸುಬುಗಳು, ಡ. ಕೆ. ಎಂ. ಮೇತ್ರಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೨.

೨. ಕನ್ನಡ ಜನಪದ ನಂಬಿಕೆಗಳು, ಡಾ. ಮಂಜುನಾಥ ಬೇವಿನಟ್ಟಿ, ಜ್ಯೋತಿ ಪ್ರಕಾಶನ, ಮೈಸೂರು, ೨೦೦೭.

೩. ಭಾರತೀಯರ ಹಬ್ಬಗಳು, ಪಂಡಿತ ಚೆ. ಎ. ಕವಲಿ, ರಾಮಾಶ್ರಯ ಪಬ್ಲಿಕೇಶನ್‌, ಧಾರವಾಡ.

೪. ಕರ್ನಾಟಕ ಬುಡಕಟ್ಟು ಭಾಷೆ, ಡಾ. ಎಸ್‌. ಎಸ್‌. ಅಂಗಡಿ, ಸೃಷ್ಟಿ ಪಬ್ಲಿಕೇಷನ್ಸ್‌, ಬೆಂಗಳೂರು, ೨೦೦೮.

೫. ಕುರುಬ ಸಮುದಾಯ ಭಾಷೆ, ಮಾನವಶಾಸ್ತ್ರ ಅಧ್ಯಯನ, ಡಾ. ಎಸ್‌. ಎಸ್‌. ಅಂಗಡಿ. ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ, ಚಿತ್ರದುರ್ಗ ಜಿಲ್ಲೆ, ೨೦೦೯.

೬. ಪ್ರಾಚೀನ ಭಾರತ, ಆರ್‌. ಎಸ್‌. ಶರ್ಮ, ನವಕರ್ನಾಟಕ ಪ್ರಕಾಶನ, ಬೆಂಗಳೂರು, ೨೦೦೭.

೭. ಹೊಸಪೇಟೆ ನಾಯಕರ ಏಳು ಕೇರಿಗಳು: ಒಂದು ಸಾಂಸ್ಕೃತಿಕ ಅಧ್ಯಯನ, ಡಾ. ತಾರಿಹಳ್ಳಿ ಹನುಮಂತಪ್ಪ, ೨೦೦೧.