ವಿಶಿಷ್ಟ ಸಂಪ್ರದಾಯ ಆಚರಣೆಗಳಿಂದಾಗಿ ವಿಶಿಷ್ಟವಾಗಿ ಗುರುತಿಸಲ್ಪಡುವ ಲಂಬಾಣಿ ಬುಡಕಟ್ಟು ವಿಶಿಷ್ಟ ಸಂಪ್ರದಾಯಗಳೇ ಕೆಲವು ಸಾರಿ ಪ್ರಗತಿಯ ಹಾದಿಯಲ್ಲಿ ಅಡ್ಡಿಯಾಗುತ್ತವೆ ಎಂಬುದಕ್ಕೆ ನಿದರ್ಶನವಾಗಿದೆ. ವಿಶಿಷ್ಟತೆಗಳನ್ನು ಬಿಟ್ಟು ಬಿಟ್ಟರೆ ಯಾವೊಂದು ನೆಲೆಯಿಲ್ಲದೆ ಒಟ್ಟಾಗಿ ಗುರುತಿಸಿಕೊಳ್ಳದೆ ಕಳೆದುಕೊಳ್ಳುವ ಭೀತಿ ಈ ಜನಾಂಗಕ್ಕೆ ಇರುವುದು ಸಹಜವಾದರೂ ಪ್ರಗತಿಗೆ ಬೆನ್ನು ಮಾಡಲು ಬರುವುದಿಲ್ಲ. ಇಂತಹ ಪರಿಸ್ಥತಿಗಳಲ್ಲಿ ಈ ಬುಡಕಟ್ಟಿನ ಜನರಲ್ಲಿ ಕಂಡುಬರುವ ವಿಶಿಷ್ಟತೆಗಳು ಯಾವ ರೀತಿ ಬದಲಾವಣೆಯ ದಾಳಿಗೆ ಒಳಗಾಗುತ್ತಿವೆ ಮತ್ತು ಬುಡಕಟ್ಟು ಹೇಗೆ ಈ ಬದಲಾವಣೆಗಳನ್ನು ಸಹಿಸುತ್ತದೆ ಎಂಬುದನ್ನು ಗಮನಿಸುವ ಅಗತ್ಯವಿದೆ. ಪ್ರಸ್ತುತ ಲೇಖನದಲ್ಲಿ ಈ ಜನಾಂಗದ ವಿಶಿಷ್ಟ ಆಚರಣೆ, ಸಂಪ್ರದಾಯ, ಕಲೆಗಳ ಬಗ್ಗೆ ಹಾಗೂ ಅವುಗಳ ಬದಲಾವಣೆಯ ಬಗ್ಗೆ ಗಮನ ಸೆಳೆಯಲು ಪ್ರಯತ್ನಸಲಾಗಿದೆ. ಸಮುದಾಯದ ಏಳಿಗೆಗಾಗಿ ಯಾವ ಯಾವ ರೀತಿ ಪ್ರಯತ್ನಿಸಬಹುದು ಮತ್ತು ಬುಡಕಟ್ಟಿನ ವಿಶಿಷ್ಟತೆಗಳು ಈ ಪ್ರಯತ್ನಗಳಲ್ಲಿ ವಹಿಸುವ ಪಾತ್ರಗಳೇನು ಎಂದು ಚರ್ಚಿಸಲು ಪ್ರಯತ್ನಿಸಲಾಗಿದೆ.

ಪ್ರಸ್ತಾವನೆ

ಭಾರತದಲ್ಲಿ ಹಲವಾರು ಬುಡಕಟ್ಟುಗಳಿವೆ. ಅವುಗಳಲ್ಲಿ ಲಂಬಾಣಿ ಬುಡಕಟ್ಟು ಬಹಳ ವೈಶಿಷ್ಟ್ಯಪೂರ್ಣ ಹಿನ್ನೆಲೆ ಹಾಗೂ ಸಂಪ್ರದಾಯಗಳಿಂದಾಗಿ ಎದ್ದು ಕಾಣುವ ವಿಶೇಷತೆ ಹೊಂದಿದೆ. ಭೌಗೋಳಿಕವಾಗಿ ಕೆಲವು ಬುಡಕಟ್ಟುಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದರೆ ಲಂಬಾಣಿ ಬುಡಕಟ್ಟು ದೇಶದ ಮೂಲೆ ಮೂಲೆಗಳಲ್ಲಿ ಹರಡಿಕೊಂಡಿರುವುದು ಮಹತ್ತರವಾದ ವಿಶೇಷ ಅಂಶವಾಗಿದೆ. ‘ಲವಣ’ (ಉಪ್ಪು) ಮಾರುವ ಜನರಿಗೆ ಲಂಬಾಣಿ ಎಂಬ ಹೆಸರು ಬಂದಿರಬಹುದು ಎಂದು ಕೆಲವು ಅಭಿಪ್ರಾಯಗಳು ಈ ಜನಾಂಗದ ಬಗ್ಗೆ ಇದೆ. ಲಮಾನ, ಲಮಾನಿ, ಲಂಬಾಡ, ಬಂಜಾರ, ಬಣಜಾರ, ಸುಕಾಲಿ, ಸುಗಾಲಿ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಈ ಸಮುದಾಯಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ.

ಸಮುದಾಯಗಳ ಅಧ್ಯಯನದಲ್ಲಿ ಒಂದು ಕ್ರಮಬದ್ಧತೆ ಬಂದು ಸಮುದಾಯಗಳ ಅಧ್ಯಯನ ಆರಂಭಗೊಳ್ಳುವ ವೇಳೆಗೆ ಆಗ ಲಭ್ಯವಾಗುವ ಮಾಹಿತಿಗಳಿಂದ ಜನಾಂಗಗಳ ಮೂಲದ ಬಗ್ಗೆ ತಿಳಿಯಬಹುದಾಗಿದೆ. ಲಂಬಾಣಿ ಸಮುದಾಯದವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಾ ಜನರಿಗೆ ಉಪಯುಕ್ತವಾಗಬಲ್ಲ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದರು ಎಂಬುದು ತಿಳಿದುಬರುತ್ತದೆ. ಸಮುದ್ರ ಹತ್ತಿರವಿಲ್ಲದ ಜನರಿಗೆ ಉಪ್ಪನ್ನು (ಲವಣವನ್ನು ತಂದುಕೊಡುತ್ತಿದ್ದ ಜನರಿಗೆ ಲಮಾಣ, ಲಮಾಣಿ ಎಂದು ಕರೆಯುತ್ತಾ ಬಂದದ್ದು ಈ ಸಮುದಾಯದ ಹೆಸರಾಯಿತು ಎಂಬುದನ್ನು ಒಪ್ಪಿಕೊಂಡರು ಕೆಲವು ಉಳಿದ ಹೆಸರುಗಳ ಬಗ್ಗೆ ಹೀಗೆ ಸುಲಭವಾಗಿ ಒಪ್ಪಿಕೊಳ್ಳುವುದಕ್ಕರ ಆಗುವುದಿಲ್ಲ. ಬಂಜಾರ, ಬಣಜಾರ ಈ ಹೆಸರುಗಳು ವ್ಯಾಪಾರದ ಬಗ್ಗೆ ಸೂಚಿಸುತ್ತದೆ.

ಗುಂಪು ಗುಂಪಾಗಿ ಚಲಿಸುತ್ತಾ ಜನರು ಸ್ಥಿರವಾಗಿ ನೆಲೆಸಿದ ಸ್ಥಳಗಳಿಗೆ ಸ್ವಲ್ಪ ದೂರದಲ್ಲಿ ತಾತ್ಕಾಲಿಕ ವಾಸಸ್ಥಳ ನಿರ್ಮಿಸಿ ಅಲ್ಲಿ ಕೆಲವು ದಿನ ವಾಸಮಾಡಿ ಮುಂದಿನ ಸ್ಥಳಗಳಿಗೆ ಸಾಗುತ್ತಿದ್ದ ಪ್ರವೃತ್ತಿ ಇವರಲ್ಲಿ ಇತ್ತೆಂದು ಗುರುತಿಸಿದ್ದಾರೆ. ಇವರು ಯುದ್ಧ ಕಾಲದಲ್ಲಿ ಯಾವುದೇ ಪಕ್ಷಕ್ಕೂ ಸೇರದೆ ಇರಬೇಕಾದ ಸಣ್ಣಪುಟ್ಟ ವಸ್ತುಗಳ (ತಂಬಾಕು, ಪಾನಿಯ) ವ್ಯಾಪಾರ ಮಾಡುತ್ತಿದ್ದರು ಎಂಬುದರ ಬಗ್ಗೆ ಗಮನಿಸಿದಾಗ ಇವರು ವ್ಯಾಪಾರಕ್ಕೆ ಮೊದಲ ಆದ್ಯತೆ ನೀಡಿದ ಜನಾಂಗ ಎಂದು ಭಾವಿಸಬಹುದಾಗಿದೆ. ಊರಿನಿಂದ ಹೊರಗೆ ವಾಸ ಮಾಡಿದರೂ ಊರಿನ ಬಳಿಗೆ ಪ್ರವೇಶ ಮಾಡಲು ನಿರ್ಬಂಧಗಳನ್ನು ಇವರು ಎದುರಿಸಿದ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಹೀಗಾಗಿ ಇವರೊಂದಿಗೆ ಸ್ಥಿರವಾಸದ ಜನರು ಯಾವುದೇ ನಿರ್ದಿಷ್ಟ ಸಾಮಾಜಿಕ ಸ್ತರದಲ್ಲಿ ಗಣಿಸಿ ವ್ಯವಹಾರ ಮಾಡುತ್ತಿರಲಿಲ್ಲ ಎಂಬುದು ತಿಳಿದು ಬರುತ್ತದೆ. ಊರ ಹೊರಗಿನ ತಾತ್ಕಾಲಿಕ ವಾಸ್ತವ್ಯ ಇವರ ಭಾರಿ ಗುಂಪು ಅದರೊಂದಿಗಿನ ಪ್ರಾಣಿಗಳ ಹಿಂಡಿಗೆ ಅಗತ್ಯವೇ ಆಗಿರುತ್ತಿತ್ತು. ಹೀಗಾಗಿ ಇವರನ್ನು ಬಹಿಷ್ಕೃತರು ಎಂದು ಪರಿಗಣಿಸುವ ಪದ್ಧತಿ ಇರದಿದ್ದರೂ ಊರ ಹೊರಗಿನ ವಾಸ ಮಾಡುವಿಕೆ/ವ್ಯವಹರಿಸುವ ಜನರೊಂದಿಗೆ ಸಾಮಾಜಿಕ ದೂರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸ್ಪಷ್ಟವಾಗಿ ತಿಳೀಯುತ್ತದೆ.

ಲಂಬಾಣಿಗಳದ್ದು ಪುರುಷಪ್ರಧಾನ ಕುಟುಂಬ ಪದ್ಧತಿಯಾದರೂ ಮಹಿಳೆಯರು ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿ ಸಹಕರಿಸಲೇಬೇಕಾದ ಒತ್ತಡಗಳಲ್ಲಿ ಇರುವುದನ್ನು ಗಮನಿಸಬಹುದಾಗಿದೆ. ಅಲೆಮಾರಿ ಗುಂಪುಗಳಾಗಿ ಚಲಿಸುತ್ತಿರುವಾಗಲೇ ಹೆರಿಗೆ ಬಾಣಂತಣಗಳನ್ನು ಸಹಿಸುತ್ತಾ, ನಿಸರ್ಗದಲ್ಲಿ ಸಿಗುವ ವಸ್ತುಗಳಿಂದಲೇ ಆನಂದ ಅನುಭವಿಸುತ್ತಾ ವಿಭಿನ್ನ ನಿಸರ್ಗ ಪರಿಸರಗಳಲ್ಲಿ ತನಗೆ ಬೇಕಾಗಿರುವುದನ್ನು ಕಂಡುಕೊಂಡ ಈ ಹೆಣ್ಣು ಮಕ್ಕಳಲ್ಲಿ ಸಹಜವಾಗಿಯೇ ಹಲವು ರೀತಿಯಲ್ಲಿ ಮೂಳೆ ಚಿಪ್ಪು ಇವುಗಳಲ್ಲದೆ ನಾಣ್ಯಗಳನ್ನೂ ಬಳಸಿ ಅಲಂಕಾರ ಮಾಡಿಕೊಳ್ಳುವ ಇವರು ರೂಢಿಗಳಲ್ಲಿ ಏನು ಲಭ್ಯವಾಗುತ್ತದೋ ಅದನ್ನೇ ಸುಂದರವಾಗಿ ಹೊಂದಿಸಿ ಆನಂದಿಸುವ ಸ್ವಭಾವ ಗುರುತಿಸುತ್ತೇವೆ. ಇದೇ ಗುಣವನ್ನು ಅವರು ತಲೆಗೂದಲನ್ನು ಅಲಂಕರಿಸುವಲ್ಲಿ, ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವಲ್ಲಿ ಹಾಗೂ ಬಟ್ಟೆಗಳಲ್ಲಿ ಕಸೂತಿ ಮಾಡುವಲ್ಲಿ ಕಾಣಬಹುದು. ತಾವು ಈ ರೀತಿ ಶ್ರಮಪಟ್ಟು ಆಸಕ್ತಿ ವಹಿಸಿ ಮಾಡಿಕೊಂಡ ಅಲಂಕಾರವನ್ನು ಅಭಿಮಾನದಿಂದ ಆರಾಧಿಸಿದಂತೆ ಅದನ್ನು ಸುಲಭವಾಗಿ ಬದಲಾಯಿಸಲು ಮನಸ್ಸು ಮಾಡದೇ ಇರುವುದು ಕಾಣಬಹುದು.

ಲಂಬಾಣಿ ಸಮುದಾಯ ಅಲೆಮಾರಿಯಾಗಿ ಸ್ಥಳ ಬದಲಾಯಿಸುತ್ತಾ ಚಲಿಸಿದರೂ, ಒಂದು ನಿರ್ದಿಷ್ಟ ಭಾಷೆ ಹಾಗೂ ಸಂಪ್ರದಾಯಗಳನ್ನು ಹೊತ್ತೇ ಚಲಿಸುತ್ತಿತ್ತು. ಜಗತ್ತು ಪರಿವರ್ತನೆಗೆ ಒಳಗಾಗದಂತೆ ಇವರ ಚಲನೆ ನಿಂತಿತು. ಅವರು ನೆಲೆಗೊಳ್ಳಲೇಬೇಕಾದ ಅನಿವಾರ್ಯತೆಗಳು ಬಂದವು. ತಾತ್ಕಾಲಿಕವಾಗಿ ನೆಲೆ ನಿಲ್ಲುತ್ತಿದ್ದ ಜಾಗಗಳಲ್ಲೇ ಕೆಲವರಿಗೆ ಕೃಷಿಗೆ ಭೂಮಿ ಹಾಗೂ ಇರಲು ಸ್ಥಿರವಾದ ತಾಣ ಸಿಕ್ಕಿದರೂ ಕೆಲವರಿಗೆ ಸಿಗದೆ ಸಣ್ಣ ಪುಟ್ಟ ಕೂಲಿ ಕೆಲಸ ಸರ್ಕಾರದ ಯೋಜನೆಗಳು ಹಾಗೂ ಸರ್ಕಾರ ಕೊಡುವ ವಿಶೇಷ ಅವಕಾಶಗಳು ಕೆಲವರಿಗೆ ಸಹಕಾರ ನೀಡಬಹುದು. ಆದರೆ ಇಡೀ ಸಮುದಾಯದ ಏಳಿಗೆ ಬಗ್ಗೆ ಕಾರ್ಯಕ್ರಮ ರೂಪಿಸಲು ಈ ಸಮುದಾಯದಲ್ಲಿ ಒಗ್ಗಟ್ಟು ಮೂಡಬೇಕಾಗಿದೆ.

ಆಧುನಿಕತೆಯಿಂದ ಲಂಬಾಣಿಗಳಲ್ಲಾಗಿರುವ ಬದಲಾವಣೆಗಳನ್ನು ಕೆಳಗಿನ ಅಂಶಗಳಲ್ಲಿ ಕಾಣಬಹುದು.

  • ನಗರ ಜೀವನ ಸಂಪರ್ಕದಿಂದ ಜೀವನ ಶೈಲಿಯಲ್ಲಾದ ಬದಲಾವಣೆ
  • ಬುಡಕಟ್ಟು ಜಾತಿಯಾಗಿ ಪರಿವರ್ತನೆಯಾದ ಕಾರಣ ಉಂಟಾದ ಬದಲಾವಣೆ
  • ಉಡುಗೆ ತೊಡುಗೆಗಳಲ್ಲಿ ಬದಲಾವಣೆ
  • ವಾದ್ಯಗಳಲ್ಲಿ ಕಾಣಬಹುದಾದ ಬದಲಾವಣೆ
  • ಆಧುನಿಕ ವಿಚಾರ ಸಂಪರ್ಕದಿಂದ ಉಂಟಾದ ಬದಲಾವಣೆಗಳು

ಜೀವನ ಶೈಲಿಯಲ್ಲಾದ ಬದಲಾವಣೆ

ಲಂಬಾಣಿಗರು ತಮ್ಮ ತಾಂಡಾಗಳಿಗೆ ಪ್ರತ್ಯೇಕ ಸ್ಥಳ ನಾಮಗಳನ್ನಿಟ್ಟುಕೊಂಡಿರುವುದು ಅವರ ಸ್ವಂತಿಕೆಯ ಲಕ್ಷಣವಾಗಿದೆ. ಪೂರ್ವದಲ್ಲಿ ಲಂಬಾಣಿ ತಾಂಡಾಗಳಲ್ಲಿ ಕೇವಲ ಗುಡಿಸಲು ಮನೆಗಳಿದ್ದವು. ಆದರೆ ಇಂದು ಗುಡಿಸಲು ಕಡಿಮೆಯಾಗಿ ಮಾಳಿಗೆ ಮನೆಗಳು ಕಾಣಿಸಿಕೊಂಡಿವೆ. ಹಲವಾರು ತಾಂಡಾಗಳಿಗೆ ಬಸ್ಸಿನ ಸೌಕರ್ಯ, ವಿದ್ಯುತ್‌ದೀಪಗಳು, ಅಂಗನವಾಡಿ ಶಾಲೆಗಳು, ಪ್ರಾಥಮಿಕ ಶಾಲೆಗಳು, ಕೆಲವು ತಾಂಡಾಗಳಲ್ಲಿ ಪ್ರೌಢಶಾಲೆ, ನೀರಿನ ವ್ಯವಸ್ಥೆ ಮೊದಲಾದ ಸೌಕರ್ಯಗಳಾಗಿವೆ. ಇತ್ತೀಚೆಗೆ ಕರ್ನಾಟಕ ಸರ್ಕಾರವು ಲಂಬಾಣಿ ತಾಂಡಾಗಳನ್ನು ಕಂದಾಯ ಹಳ್ಳಿಗಳನ್ನಾಗಿ ಪರಿವರ್ತಿಸಲು ಗಂಭೀರವಾದ ಆಲೋಚನೆ ಮಾಡುತ್ತಿರುವುದು ತಾಂಡಾಗಳ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಸಂಗತಿಯಾಗಿದೆ. ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಈ ಸಮುದಾಯ ಐ.ಎ.ಎಸ್‌., ಕೆ.ಎಎಸ್‌., ಪೊಲೀಸ್‌ಇಲಾಖೆ, ಶಿಕ್ಷಣ ಇಲಾಖೆಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುವುದನ್ನು ಕಾಣಬಹುದಾಗಿದೆ. ಹಾಗೇ ರಾಜಕೀಯವಾಗಿಯೂ ಎಂ.ಎಲ್‌.ಎ., ಎಂ.ಪಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳಲ್ಲಿ ಸ್ಥಾನ ಗಳಿಸಿದ್ದಾರೆ.

ಲಂಬಾಣಿಗಳು ತಮ್ಮ ಸಂಸ್ಕೃತಿ, ಇತಿಹಾಸ, ಜೀವನ ಶೈಲಿಗಳನ್ನು ಕುರಿತು ಗಾಢವಾದ ಸಮುದಾಯ ಅಭಿಮಾನ ತಾಳಿ/ಬಾಳಿದವರು. ಇತರ ಸಂಸ್ಕೃತಿಯಿಂದ ಒಮ್ಮೆಲೇ ಪ್ರಭಾವಿತರಾಗದೆ, ತಮ್ಮ ಸಂಸ್ಕೃತಿಯ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಈ ಸಮುದಾಯ ಸದಾ ಜಾಗರೂಕವಾಗಿ ಕಾರ್ಯ ಮಾಡುತ್ತಾ ಬಂದ ಇತಿಹಾಸವಿದೆ. ಇದಕ್ಕೆ ನಿದರ್ಶನವೆಂದರೆ ಇಂದಿಗೂ ಕಾಣುವ ಸಾಂಪ್ರದಾಯಿಕ ಉಡುಪು ತೊಟ್ಟ ಮಹಿಳೆಯರು. ಸಾಮಾಜಿಕವಾಗಿ ಅವರು ಇತರ ಬಹುಸಂಖ್ಯಾತ ಸಮಾಜಗಳಿಗಿಂತ ಕೆಳಮಟ್ಟದಲ್ಲಿದ್ದರೂ ಒಂದು ಪ್ರತಿಷ್ಠೆಯ ಸ್ಥಾನ ಅವರಿಗಿದೆ. ಅವರ ಸ್ವಾಭಿಮಾನ ತಮ್ಮ ಸಂಸ್ಕೃತಿ ಪೋಷಣೆಯಲ್ಲಿ ಅವರು ತೋರುವ ಸಹಜ ಕಾಳಜಿಗಳು ವಿಶಿಷ್ಟವಾಗಿವೆ.

ರೈಲು ಮತ್ತು ವೇಗದ ಸಂಚಾರ ಸಾಧನಗಳು ದುಡಿಮೆಯ ಬಹುಪಾಲು ಹಣ ಕಬಳಿಸಿ ಇವರ ಆರ್ಥಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಿದಂತೆ ತೋರುತ್ತದೆ. ತಮ್ಮ ದನಕರುಗಳಿಗೆ ನೀರು ಮೇವು ಒದಗಿಸುವ ಚಿಂತೆ ಜೊತೆಗೆ ಕಡುಬಡತನ, ಅನಕ್ಷರತೆ ಮುಂತಾದ ಸಮಸ್ಯೆಗಳು ಇವರ ಪ್ರಗತಿಗೆ ಅಡ್ಡಗೋಡೆಯಾಗಿ ಇವರು ಹೆಚ್ಚಾಗಿ ಗ್ರಾಮ, ನಗರಗಳಿಂದ ಸ್ವಲ್ಪ ದೂರವೇ ಕೊಳ್ಳ, ಕಣಿವೆ, ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆ ನಿಂತಿರಲು ಬಹಳ ಕಾಲ ಬಯಸಿದ್ದು ಇಂದಿಗೂ ಈ ರೀತಿ ಗೂರವಿರುವ ಸ್ವಭಾವ ಕಂಡುಬರುತ್ತದೆ.

ಬುಡಕಟ್ಟು ಜಾತಿಯಾಗಿ ಪರಿವರ್ತನೆಯಾದ ಕಾರಣ ಉಂಟಾದ ಬದಲಾವಣೆಗಳು

ಭಾರತದ ಸಾಮಾಜಿಕ ಪರಿಸರದಲ್ಲಿ ಜಾತಿ ಮತ್ತು ಬುಡಕಟ್ಟುಗಳೆರಡೂ ಅಸ್ತಿತ್ವದಲ್ಲಿವೆ. ಜಾತಿಗಳು ಯಾವಾಗಲೂ ಮೇಲುಮುಖವಾಗಿ ಚಲಿಸಲು ಪ್ರಯತ್ನಿಸುತ್ತಿರುತ್ತವೆ. ಅಂದರೆ ಎಲ್ಲ ಜಾತಿಗಳ ಒಡಲಿನಲ್ಲಿಯೂ ಸಾಮಾಜಿಕವಾಗಿ ಮೇಲಕ್ಕೇರಬೇಕೆಂಬ ಹಂಬಲ ತುಡಿಯುತ್ತಿರುತ್ತದೆ. ಹಾಗೇ ಬುಡಕಟ್ಟುಗಳು ತಮ್ಮ ಮೂಲ ಲಕ್ಷಣಗಳನ್ನು ಕಳೆದುಕೊಂಡು ಜಾತಿಯ ಲಕ್ಷಣಗಳನ್ನು ಮೈಗೂಡಿಸಿಕೊಳ್ಳಲು ಹಂಬಲಿಸುತ್ತವೆ.

ಲಂಬಾಣಿ ಈ ಬಗೆಯ ಬುಡಕಟ್ಟಾಗಿದೆ. ಇಂದುಅದು ಜಾತಿ ರೂಢಿಯಲ್ಲಿರುವ ಹಲವಾರು ಆಚರಣೆಗಳನ್ನು ಹಿಂಬಾಲಿಸುತ್ತಿರುವುದನ್ನು ನೋಡಬಹುದಾಗಿದೆ. ಅಲೆಮಾರಿ ಬುಡಕಟ್ಟುಗಳ ಅಲೆಮಾರಿ ಪ್ರವೃತ್ತಿಯನ್ನು ಕಳೆದುಕೊಂಡು ಈ ಜನರು ಒಂದೆಡೆ ಸ್ಥಿರವಾಗಿ ನೆಲೆ ನಿಲ್ಲುವಂತಾಗಿದೆ. ತಾತ್ಕಾಲಿಕ ಬಿಡಾರಗಳ ಸ್ಥಾನದಲ್ಲಿ ಹೆಂಚಿನ ಮನೆಗಳೂ, ಕೆಲವೆಡೆ ಆರ್‌ಸಿಸಿ ಮನೆಗಳೂ ತಲೆಯೆತ್ತಿವೆ ಎಂದೂ ಮನೆಯ ಮುಂದೆ ರಂಗೋಲಿ ಹಾಕದ ಇವರ ಮನೆಯ ಮುಂದೆ ಇಂದು ರಂಗೋಲಿ ರಾರಾಜಿಸುತ್ತಿದೆ. ಮನೆಯ ಮುಂದೆ ತುಳಸಿಯ ಪೂಜೆಯು ಪ್ರಾರಂಭವಾಗಿದೆ. ಸೇವಾಭಾಯ, ಮರಿಯಮ್ಮಳನ್ನು ಬಿಟ್ಟು ಬೇರೆ ಬೇರೆ ದೇವರುಗಳ ಪರಿಚಯವೇ ಇರದ ಈ ಬುಡಕಟ್ಟು ಜನಗಳಲ್ಲಿ ಇಂದು ಆಯಾ ಪ್ರದೇಶದ ಪ್ರಭಾವಶಾಲಿಗಳಾದ ಎಲ್ಲ ದೇವರುಗಳನ್ನು ಪೂಜಿಸುವ ಪದ್ಧತಿ ಕಂಡುಬರುತ್ತಿದೆ. ತಮ್ಮದೇ ಪ್ರತ್ಯೇಕ ಹಬ್ಬಗಳನ್ನು ಆಚರಿಸುತ್ತಿದ್ದ ಲಂಬಾಣಿಗಳು ಇಂದು ಇತರ ಹಿಂದೂಗಳಂತೆ ಶಿವರಾತ್ರಿ, ಸಂಕ್ರಮಣ, ಪಂಚಮಿ, ಭೂಮಿ, ಹುಣ್ಣಿಮೆ, ಸತ್ಯನಾರಾಯಣ ಪೂಜೆ ಮುಂತಾದವುಗಳನ್ನು ಆಚರಿಸಲು ಪ್ರಾರಂಭಿಸಿದ್ದಾರೆ. ಒಂದು ಬುಡಕಟ್ಟು ಕ್ರಮೇಣ ಹೇಗೆ ಜಾತಿಯಾಗಿ ಬದಲಾಗುತ್ತದೆಂಬುದಕ್ಕೆ ಇದೊಂದು ಜೀವಂತ ನಿದರ್ಶನ. ಲಂಬಾಣಿ ಬುಡಕಟ್ಟಿನ ಜನರಲ್ಲಿ ಈಗ ಬೇರೆ ಬೇರೆ ದೇವರು ಪೂಜಿಸುವ ಬೇರೆ ಬೇರೆ ಆಚರಣೆ ಹೊಂದಿರುವ ಪಂಗಡ ಉಪಪಂಗಡ ಗುಂಪುಗಳು ಉಂಟಾಗಿ ಜಾತಿಯಲ್ಲಿ ಕಂಡುಬರುವ ಸಂಕೀರ್ಣತೆ ಕಂಡುಬರುತ್ತಿದೆ.

ಉಪಜಾತಿ ಉಪಪಂಗಡಗಳನ್ನು ಗುರುತಿಸುತ್ತಾ ಜಾತಿ ಎನಿಸುಕೊಳ್ಳುವ ಮಟ್ಟದಲ್ಲಿ ಬೆಳೆಯಲು ವೇಷಭೂಷಣಗಳು ವಿಶಿಷ್ಟ ಸಂಪ್ರದಾಯಗಳು ಸಹಕರಿಸಿದ್ದರೂ ಸರ್ಕಾರ ಆಡಳಿತ ವ್ಯವಸ್ಥೆಗಳು ಲಂಬಾಣಿಗಳನ್ನು ಗುರುತಿಸಿದ ಬಗೆ ಅದರಲ್ಲಿನ ಹಲವು ಸಣ್ಣ ಪುಟ್ಟ ವಿಶಿಷ್ಟ ಗುಂಪುಗಳನ್ನು ಒಂದು ಮಾಡಿದೆ.

ಉಡುಗೆ ತೊಡುಗೆಯಲ್ಲಿ ಬದಲಾವಣೆ

ಲಂಬಾಣಿ ಹೆಣ್ಣು ಮಕ್ಕಳ ಪೋಷಾಕುಗಳು ನಿಜಕ್ಕೂ ಕಲಾತ್ಮಕವಾಗಿರುತ್ತವೆ. ಬಣ್ಣ ರಂಗುರಂಗಿನ ತಮ್ಮ ವಸ್ತ್ರಗಳಿಗೆ ಕವಡೆ, ಕನ್ನಡಿ, ಬಣ್ಣದ ವಸ್ತ್ರಗಳನ್ನು ಸೇರಿಸಿ ಘಳಘಳನೆ ಹೊಳೆಯುವಂತೆ ಕಸೂತಿ ಕೆಲಸ ಮಾಡಿ ಹೊಲಿದ ಈ ಪೋಷಾಕುಗಳು ನಿಜಕ್ಕೂ ಕಲಾತ್ಮಕವಾಗಿರುತ್ತವೆ. ಅವರ ಈ ಆಕರ್ಷಕ ಕಲೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಣೆಗಳಿಸಿದೆ.

ಆದರೆ ಈ ಚಿತ್ತಾಕರ್ಷಕವಾದ ಉಡುಗೆ/ಪೋಷಕಗಳನ್ನು ಸಿದ್ಧಪಡಿಸಲಿಕ್ಕೆ ತೆಗೆದುಕೊಳ್ಳಬಹುದಾದ ಸಮಯ, ತಗಲುಬಹುದಾದ ವೆಚ್ಚ, ಪರಿಶ್ರಮಗಳನ್ನು ತುಲನೆ ಮಾಡಿದಾಗ ಕುಪ್ಪಸ, ಲಂಗ ಮತ್ತು ಮೇಲು ಹೊದಿಕೆ ಇವುಗಳನ್ನು ಸಿದ್ಧಪಡಿಸಲಿಕ್ಕೆ ಒಬ್ಬರಿಗೆ ಕನಿಷ್ಟ ೨ ರಿಂದ ೩ ತಿಂಗಳ ಕಾಲಾವಧಿ ಬೇಕಾಗುತ್ತದೆ. ಲಂಬಾಣಿ ಸ್ತ್ರೀಯರ ಪೋಷಾಕುಗಳಿಗೆ ವಿವಿಧ ಬಣ್ಣಗಳ ಬಟ್ಟೆಗಳು, ದಾರಗಳು ಮತ್ತು ಕಾಜಿನ ಬಿಲ್ಲೆಗಳು ಬೇಕಾಗುತ್ತವೆ. ಹೀಗಾಗಿ ಈ ಉಡುಪುಗಳನ್ನು ಸಿದ್ಧಪಡಿಸಲಿಕ್ಕೆ ಇಂದು ಹೆಚ್ಚು ಖರ್ಚು ತಗಲುತ್ತದೆ. ಇಂದಿನ ಫ್ಯಾಶನ್‌ಯುಗದಲ್ಲಿ ಈ ಪೋಷಾಕುಗಳಿಗೆ ಬಹಳ ಬೇಡಿಕೆ ಇದೆಯಾದರೂ ಅದು ನಿರಂತರವಾಗಿ ಉಳಿಯುವ ಲಕ್ಷಣಗಳಿಲ್ಲ. ಈ ಉಡುಗೆಗಳನ್ನು ಬಹಳಷ್ಟು ದೇಶ-ವಿದೇಶದವರು ಇಷ್ಟ ಪಡುತ್ತಾರೆ. ಆದರೆ ಲಂಬಾಣಿ ಸ್ತ್ರೀಯರು ಈ ತರಹದ ಉಡುಗೆಗಳನ್ನು ತೊಡುವುದಕ್ಕಿಂತ ಮಾರಲಿಕ್ಕಾಗಿ ತಯಾರಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.

ಆಧುನಿಕತೆಯಿಂದಾಗಿ ತಾಂಡಾಗಳ ಜನರು ಊರು, ನಗರ ಪಟ್ಟಣಗಳಿಗೆ ಹೆಚ್ಚಾಗಿ ಉದ್ಯೋಗ ಅನ್ವೇಷಣೆಗಾಗಿ ವಲಸೆ ಹೋಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತದೆ. ಇಂತಹ ಸನ್ನಿವೇಶಗಳಲ್ಲಿ ತಮ್ಮ ವಿಶಿಷ್ಟವಾದ ಉಡುಗೆ ತೊಡಲು ಲಂಬಾಣಿ ಹೆಂಗಸರು ಮನಸ್ಸು ಮಾಡುವುದಿಲ್ಲ.

ಈಚಿನ ದಿನಗಳಲ್ಲಿ ಲಂಬಾಣಿ ಸ್ತ್ರೀಯರಿಗೆ ಈ ಬಟ್ಟೆಗಳ ಮೇಲಿನ ವ್ಯಾಮೋಹ ಕಡಿಮೆಯಾಗಿದೆ. ಈ ಬಟ್ಟೆಗಳ ಕಸೂತಿ ಕಲಿಯುವ ವಿಚಾರದಲ್ಲಿ ಈಗಿನ ಹೆಣ್ಣು ಮಕ್ಕಳು ಆಸಕ್ತಿ ವಹಿಸಿದರೂ ಕಲಿಯಲು ಸಮಯ ಸಿಗದಂತೆ ಆಗಿರುವುದು ಜೊತೆಗೆ ಇತ್ತೀಚಿನ ನಾಗರಿಕ ವಸ್ತುಗಳ ಮೇಲಿನ ವ್ಯಾಮೋಹ ಈ ಎಲ್ಲ ಕಾರಣಗಳಿಂದ ಲಂಬಾಣಿ ಮಹಿಳೆಯರು ಈ ಬಟ್ಟೆಗಳನ್ನು ತ್ಯಜಿಸುತ್ತಿದ್ದಾರೆ. ಲಂಬಾಣಿ ಮಹಿಳೆಯರ ಕಸೂತಿಗೆ ಅವರದೇ ಆದ ವೈಶಿಷ್ಟ್ಯವಿದೆ. ದಟ್ಟ ಕೆಂಪು ವರ್ಣದ ಬಟ್ಟೆಗಳ ಮೇಲೆ ಅಂದವಾಗಿ ಜೋಡಿಸಿದ ಆಕರ್ಷಕ ವಸ್ತುಗಳೊಂದಿಗೆ ಮನಮೋಹಕ ಕಸೂತಿ ಕಲೆಯ ಬೆಡಗು ವಿನ್ಯಾಸ ಅತ್ಯಂತ ಆಕರ್ಷಣೀಯ.

ಬದಲಾದ ಸನ್ನಿವೇಶದಲ್ಲಿ ಆಧುನಿಕತೆಯ ನೆಪದಲ್ಲಿ ಈ ಜನರಲ್ಲಿ ಬೆಳೆದು ಬಂದ ಕಸೂತಿ ಕಲೆ ನಶಿಸುತ್ತಿವೆ. ಅವರ ಆಕರ್ಷಣೀಯ ಉಡುಪುಗಳೇ ಮರೆಯಾಗುತ್ತಿರುವ ಈ ದಿನಗಳಲ್ಲಿ ಅವರ ತಾಳ್ಮೆಗೆ ಸವಾಲಾಗಿರುವ ಕಸೂತಿ ಕಲೆ ಉಳಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ.

ಪ್ರದರ್ಶನ ಕಲೆಗಳಲ್ಲಾದ ಬದಲಾವಣೆ

ತಮ್ಮ ಅಲೆಮಾರಿ ಜೀವನದಲ್ಲಿ ಸಾಂಸ್ಕೃತಿಕ ಚಟುವಟಿಕೆಯಾಗಿ ತಮ್ಮದೇ ಆದ ವಿಶಿಷ್ಟ ನೃತ್ಯ ಶೈಲಿ ಹೊಂದಿದ್ದ ಲಂಬಾಣಿ ಸಮುದಾಯದ ಜನ ಈಚಿನ ದಿನಗಳಲ್ಲಿ ಮಾಧ್ಯಮಗಳ ಪ್ರೇರಣೆ, ಪ್ರಭಾವಗಳಿಂದ ವಿವಿಧ ರೀತಿಗಳಲ್ಲಿ ಬೇರೆ ನೃತ್ಯ ಪ್ರಕಾರ ಹೊಂದಿಸಿಕೊಂಡು ನರ್ತಿಸುವುದನ್ನು ಕಲಿತಿದ್ದಾರೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ಲಂಬಾಣಿ ಮಹಿಳೆಯರು ಕೋಲು ಹಿಡಿದು ನರ್ತಿಸುವ ವಿಧಾನ ಪ್ರಚಲಿತವಿದೆ. ಇತ್ತೀಚೆಗೆ ಲಂಬಾಣಿಗರ ಸಾಂಪ್ರದಾಯಿಕ ಕೋಲಾಟವು ಜಾನಪದ ನೃತ್ಯ ಪ್ರದರ್ಶನಗಳಲ್ಲಿ ಚಮತ್ಕಾರಗಳಿಂದ ಪ್ರದರ್ಶನಗೊಳ್ಳುತ್ತಿದೆ. ತೇರುಕೋಲು, ಬೆಂಡಾಡುವ ಕೋಲು, ಕಾವಲ ಗೋಡುಕೋಲು, ಕುಕ್ಕರಗಾಲು ಕೋಲು, ಪತ್ರಿಕೋಲು, ಅಂಗಡಿಕೋಲು, ಜಡೆಕೋಲು, ಬೆನ್ನಾಳಿಕೋಲು ಹೀಗೆ ಹತ್ತಾರು ವಿಭಿನ್ನ ಬಗೆಯ ಕೋಲಾಟಗಳನ್ನು ಕಲಿತು ಜಾಣ್ಮೆಯಿಂದ ಲಂಬಾಣಿಗರು ಪ್ರದರ್ಶನ ಮಾಡುತ್ತಾ ಇದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೆಲವು ತಾಂಡಾಗಳು ಕೋಲಾಟದ ಮೇಳಗಳಿಗೆ ಪ್ರಸಿದ್ಧಿ ಪಡೆದಿವೆ. ಅಲ್ಲದೇ ಇಂದು ಲಂಬಾಣಿ ಪುರುಷರ ಕೋಲಾಟ ಕೇವಲ ತಾಂಡಾದವರ ಮನರಂಜನೆಗೆ ಮೀಸಲಾಗದೆ ನಗರಗಳಲ್ಲಿಯೂ ಪ್ರದರ್ಶನಗೊಂಡು ಮೆಚ್ಚುಗೆ ಪಡೆಯುತ್ತಿವೆ.

ವಾದ್ಯಗಳಲ್ಲಿ ಕಾಣಬಹುದಾದ ಬದಲಾವಣೆ

ಆಧುನಿಕತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಇವರು ಹಲವಾರು ವಾದ್ಯಗಳನ್ನು ಬಳಸಿಕೊಂಡು ಲಾವಣಿಗಳನ್ನು ಹಾಡುತ್ತಾರೆ. ಉದಾಹರಣೆಗೆ ಡಪ್ಪು, ಡುಮುಕಿ, ಘಟ, ಗೆಜ್ಜೆಸರ, ತಬಲ, ಕಂಜರ, ತಾಳ ಈ ನವೀನ ವಾದ್ಯಗಳನ್ನು ಬಳಸಿ ಹಾಡುವ ಹಾಗೂ ನರ್ತಿಸುವ ಹಲವಾರು ಮೇಳಗಳು ಈಗ ಲಂಬಾಣಿ ತಾಂಡಾಗಳಲ್ಲಿ ತಲೆ ಎತ್ತಿವೆ.

ಕಾಲಕಾಲಕ್ಕೆ ಮನರಂಜನೆಯ ವಿಚಾರದಲ್ಲಿ ಬದಲಾವಣೆಯನ್ನು ಒಪ್ಪಿಕೊಂಡು ಅನುಕರಿಸುವುದು ಲಂಬಾಣಿಗಳ ಜಾಯಮಾನ, ಹೊಸ ಹೊಸ ವಾದ್ಯ ಪರಿಕರಗಳನ್ನು ಬಳಸಿಕೊಂಡು, ಅವುಗಳಿಗನುಗುಣವಾಗಿ ಹಾಡಿ ಕುಣಿಯುವುದು ಈ ಜನರಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ. ಈಗಿನ ಹೊಸ ಹಾಡುಗಾರರಲ್ಲಿ ಟಿವಿ, ರೇಡಿಯೋ, ಸಿನಿಮಾ ಹಾಡುಗಳ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ. ಇಷ್ಟೆಲ್ಲ ಬದಲಾವಣೆಗಳನ್ನೂ ಹೊಂದಿದ್ದರೂ ಕೂಡ ಅವರು ಕಂಚಿನ ಗಂಗಾಳ, ನಗಾರಿ ಮುಂತಾದ ಸಾಂಪ್ರದಾಯಿಕ ಮೇಳಗಳ ಜನಪ್ರೀಯತೆ ಉಳಿಸಿಕೊಂಡಿರುವುದು ಕಂಡುಬರುತ್ತದೆ.

ಆಧುನಿಕ ವಿಚಾರ ಸಂಪರ್ಕದಿಂದ ಉಂಟಾದ ಬದಲಾವಣೆಗಳು

ನಿರಂತರ ಅಲೆಮಾರಿಗಳಾಗಿದ್ದ ಲಂಬಾಣಿಗಳು ಈಚಿನ ದಿನಗಳಲ್ಲಿ ತಾಂಡಾಗಳಲ್ಲಿ ಒಂದೆಡೆ ನೆಲೆ ನಿಲ್ಲುವಂತಾಗಿದ್ದಾರೆ. ಮೂಢನಂಬಿಕೆ, ಅನಕ್ಷರತೆ, ಕಿತ್ತು ತಿನ್ನುವ ಬಡತನ ಬಲಾಢ್ಯರ ಶೋಷಣೆಗಳಿಂದಾಗಿ ಸಮುದಾಯ ಸ್ಥಿತಿ ದಾರುಣವಾಗಿದೆ. ನಿಶ್ಚಿತ ಉದ್ಯೋಗವಿಲ್ಲದ ಬಹಳ ಜನ ಕೂಲಿ ಮಾಡಿ ಇಲ್ಲವೇ ತಲೆಯ ಮೇಲೆ ಸೌಧೆಯನ್ನು ಹೊತ್ತು ನಗರಗಳಲ್ಲಿ ಮಾರಿ ಸಿಗುವ ಪುಡಿಗಾಸುಗಳಿಂದ ಜೀವನ ನಡೆಸುತ್ತಿದ್ದಾರೆ.

ತಮ್ಮದೇ ಆದ ಸಾಂಸ್ಕೃತಿಕ ವಲಯದಲ್ಲಿ ಬದುಕುವ ಲಂಬಾಣಿ ಸಮುದಾಯದ ಏಳಿಗೆಗೆ ವಿಶೇಷ ಅಧ್ಯಯನಗಳನ್ನು ನಡೆಸಬೇಕಾಗಿದೆ. ಹಾಗೆಯೇ ನಿಶ್ಚಿತ ಉದ್ಯೋಗವಿಲ್ಲದ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ವಿಶೇಷ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ. ಈ ಹೊಣೆಗಾರಿಕೆ ಎಲ್ಲ ಭಾರತೀಯ ನಾಗರಿಕ ಸಮಾಜಗಳಿಗೆ ಸೇರಿದುದಾಗಿದೆ.

ಸಮುದಾಯವನ್ನು ಸಂಘಟಿಸುವುದಕ್ಕಾಗಿ ‘ಅಖಿಲ ಕರ್ನಾಟಕ ಬಂಜಾರ ವಿದ್ಯಾರ್ಥಿ ವೇದಿಕೆ’ ಮತ್ತು ‘ಅಖಿಲ ಭಾರತ ಢಾಡಿ ಮತ್ತು ಬಂಜಾರ ಸಂಘ’ಗಳು ನಿರಂತರವಾಗಿ ಶ್ರಮಿಸುತ್ತಿವೆ. ಆದರೆ ಈ ಪ್ರಯತ್ನದಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಸಾಧಿಸಿಲ್ಲ.

ಭಾರತದಾದ್ಯಂತ ಒಂದೇ ಭಾಷೆಯನ್ನಾಡುವ ಒಂದೇ ರೀತಿಯ ಆಚಾರ-ವಿಚಾರಗಳನ್ನು ಹೊಂದಿರುವ, ಒಂದೇ ಬಗೆಯ ಉಡುಗೆ-ತೊಡುಗೆಯುಳ್ಳ ಮತ್ತು ಗ್ರಾಮಗಳಿಂದ ದೂರದಲ್ಲಿ ತಾಂಡಾಗಳನ್ನು ಕಟ್ಟಿಕೊಂಡು ವಾಸಿಸುವ ಲಂಬಾಣಿಗಳನ್ನು ಸಂಘಟಿಸುವುದು ಅತ್ಯವಶ್ಯಕವಾಗಿ ಆಗಬೇಕಾಗಿದೆ. ಆದರೆ ಈಗಿನ ಕೆಲವು ಸಂಘ ಸಂಸ್ಥೆಗಳು ಒಟ್ಟು ಸಮುದಾಯದ ಮೂಲಕ್ಕೆ ತಲುಪಿ ಸಂಘಟಿಸದೆ, ಕೇವಲ ಮೇಲುಪದರಿನಲ್ಲಿಯೇ ನಿಂತು ಬಿಟ್ಟಿರುವುದರಿಂದ ಸಮಗ್ರ ಸಮುದಾಯವನ್ನು ಒಗ್ಗೂಡಿಸುವುದು ಸಾಧ್ಯವಾಗುತ್ತಿಲ್ಲ. ಇದಲ್ಲದೇ ಕೆಲವರು ಸಂಘ ಸಂಸ್ಥೆಗಳ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಂದ ಲಂಬಾಣಿ ಜನರು ಸಂಘ ಸಂಸ್ಥೆಗಳಿಂದ ಪ್ರಯೋಜನ ಪಡೆದು ಪ್ರಗತಿಯತ್ತ ಸಾಗುವ ಸಾಧ್ಯತೆಗಳಿಂದ ದೂರವಾಗಿದ್ದಾರೆ. ಲಂಬಾಣಿಗರಲ್ಲಿ ಪ್ರಬಲವಾದ ಸಂಘಟನೆ ಇಲ್ಲದಿರುವುದರಿಂದ ಶೋಷಣೆ, ಹಲ್ಲೆ, ಅತ್ಯಾಚಾರ, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಈ ಸಮುದಾಯದಲ್ಲಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದ ಜನರು ತಮ್ಮವರೇ ಆದ ಹಿಂದುಳಿದ ಜನರ ಬಗ್ಗೆ ಗಮನ ಹರಿಸುವುದು ಅತ್ಯಗತ್ಯವಾಗಿದೆ.

ಇಂದಿನ ಆಧುನಿಕ ಜೀವನದಲ್ಲಿ ಅಂದರೆ ಫ್ಯಾಷನ್‌ಯುಗದಲ್ಲಿ ಲಂಬಾಣಿ ಉಡುಗೆ ತೊಡುಗೆಗಳಿಗೆ ದೇಶ ವಿದೇಶಗಳಲ್ಲಿ ಬಹು ಬೇಡಿಕೆ ಇರುವುದರಿಂದ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಮುಂದೆ ಬಂದು ಲಂಬಾಣಿ ಮಹಿಳೆಯರ ಸಂಘಟನೆಯ ಮುಖಾಂತರ ಅವರ ಕಸೂತಿ ಕಲೆಗಳಿಗೆ ಒತ್ತು ಕೊಟ್ಟು ಅವರಿಂದ ಲಂಬಾಣಿ ಉಡುಗೆಗಳನ್ನು ತಯಾರಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಬಹಳ ಅವಶ್ಯಕವಾಗಿದೆ. ಪರಿಶಿಷ್ಟ ಜಾತಿಗಳ ಯಾದಿಯಲ್ಲಿ ಈ ಬುಡಕಟ್ಟನ್ನು ಸೇರಿಸಿರುವುದರಿಂದ ಸರ್ಕಾರದಿಂದ ದೊರೆಯಬಹುದಾದ ಸಕಲ ಸೌಲಭ್ಯಗಳ ಸಂಪೂರ್ಣ ಸದುಪಯೋಗವನ್ನು ಸಮುದಾಯ ಕೊಳ್ಳುತ್ತಿದ್ದಾರೆ. ಅದು ಇನ್ನೂ ಹೆಚ್ಚಾಗಬೇಕಾದ ಅವಶ್ಯಕತೆ ಇದೆ.

ಇದೀಗ ಮುಂದುವರಿಯಲು ಬಯಲುತ್ತಿರುವ ಈ ಸಮುದಾಯಕ್ಕೆ ಇದೇ ಸಮುದಾಯದ ಮೂಲದಿಂದ ಬಂದು ಇಂದು ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆಯ ಸ್ಥಾನ ಪಡೆದಿರುವ ಜನರು ಸ್ಫೂರ್ತಿ ನೀಡುತ್ತಾ ಇದಕ್ಕಾಗಿ ಹಗಲಿರುಳು ಶ್ರಮಿಸಬೇಕಾದ ಅಗತ್ಯವಿದೆ.

ಲಂಬಾಣಿ ಸಮುದಾಯಕ್ಕೆ ವಿಶಿಷ್ಟವಾಗಿ ಎದುರಾಗುವ ಸವಾಲುಗಳು

ಲಂಬಾಣಿಗರ ಭಾಷೆಗೆ ಲಿಪಿ ಅಲ್ಲ. ಆ ಭಾಷೆ ನಿಧಾನವಾಗಿ ಅವರ ಉಡುಪಿನಂತೆಯೇ ನೇಪಥ್ಯಕ್ಕೆ ಸರಿಯುತ್ತಿದೆ. ಅದನ್ನು ಉಳಿಸಬೇಕಾದ ಅಗತ್ಯವಿದೆ. ಉದಾಹರಣೆಗೆ ನೃತ್ಯ ಉಳಿಸಿಕೊಳ್ಳುವುದಾದರೆ ವಿಶಿಷ್ಟ ಉಡುಪು ಉಳಿಸಿಕೊಳ್ಳಲೇಬೇಕಾಗುತ್ತದೆ. ವಿಶಿಷ್ಟವಾದ ತಮ್ಮ ಭಾಷೆಯ ಹಾಡು ಹಾಡುಲೇ ಬೇಕಾಗುತ್ತದೆ. ಕೇವಲ ಎಂದೋ ಒಂದು ದಿನ ನೃತ್ಯಕ್ಕೆ ಮಾತ್ರ ಉಡುಪು ಒಡವೆ ಬಳಸಲು ಸಾಂಪ್ರದಾಯಿಕ ಮನಸ್ಸು ಹಿಂಜರಿಯುತ್ತದೆ. ಹೀಗಾಗಿ ಸಂಪ್ರದಾಯಗಳನ್ನು ಸೂಕ್ತವಾಗಿ ಗುರುತಿಸಿ ಪ್ರಗತಿಗೆ ನೆರವಾಗುವ ಸಂಪ್ರದಾಯಗಳನ್ನು ಪಾಲಿಸುವ ಕಡೆ ಗಮನ ನೀಡಬೇಕಾಗಿದೆ.

ಮನೆಯಲ್ಲಿ ಬಳಸುವ ಭಾಷೆಯ ಕಾರಣದಿಂದ ಮಕ್ಕಳು ಮುಖ್ಯವಾಹಿನಿಯಲ್ಲಿ ಬಂದಾಗ ಮಾತೃಭಾಷೆಗೂ ಸದ್ಯಕ್ಕೆ ಕಲಿಯಬೇಕಾಗಿರುವ ಭಾಷೆಗೂ ಅಂತರ ಹೆಚ್ಚಿ, ಕಲಿಕೆಯಲ್ಲಿ ಹಿಂಜರಿತಗಳು ಉಂಟಾಗುವ ಸಾಧ್ಯತೆಗಳಿರುತ್ತದೆ. ಇದಕ್ಕೆ ಸಮುದಾಯ ಮತ್ತು ಸರ್ಕಾರಗಳೆರಡೂ ಸಮಾಲೋಚಿಸಿ ಒಂದು ನಿರ್ಧಾರಕ್ಕೆ ಬರಬೇಕಾದ ಅಗತ್ಯವಿದೆ.

ಜನಾಂಗದ ಹಿಂದಿನ ಸ್ಥಿತಿಗೆ ಇಂದಿನ ಸ್ಥಿತಿಗೆ ಹೋಲಿಸಿ ನೋಡುವುದು ಹಾಗೂ ಜನಾಂಗದ ಇಂದಿನ ಸ್ಥಿತಿಯನ್ನು ಇತರ ಜನಾಂಗಗಳ ಸ್ಥಿತಿಯೊಡನೆ ಹೋಲಿಸಿ ನೋಡುವುದು ಸಾಮಾನ್ಯವಾದ ರೂಢಿಗಳು. ಇಡೀ ಜನಾಂಗಕ್ಕೆ ಪ್ರಗತಿಯ ಅವಕಾಶಗಳು ಸಮಾನವಾಗಿ ಲಭ್ಯವಾಗುವುದು ಸಾಧ್ಯವಿಲ್ಲ. ಅವಕಾಶ ಸಿಕ್ಕವರು ಸಿಗದವರಿಗೆ ನೆರವಾಗುವ ಸಂದರ್ಭಗಳು ಹೆಚ್ಚಾಗದೇ ಸಮುದಾಯಗಳು ಹೆಚ್ಚಿನ ಪ್ರಗತಿ ಸಾಧಿಸುವುದು ಅಸಾಧ್ಯವಾಗಿದೆ.

ಲಂಬಾಣಿ ಸಮುದಾಯದವರು ತಮ್ಮ ವಿಶಿಷ್ಟತೆಗಳನ್ನು ಉಳಿಸಿಕೊಂಡೇ ಸಮುದಾಯ ಪ್ರಗತಿ ಸಾಧಿಸಲು ಬಯಸುವುದಾದರೆ ಅಲ್ಲಿ ಇರುವ ಮಾನವ ಶಕ್ತಿ ಸಂಪನ್ಮೂಲ ಸರಿಯಾಗಿ ತಿಳುವಳಿಕೆ ಪಡೆದು ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಅಗತ್ಯವಿದೆ. ವಿದ್ಯೆಯ ಅಗತ್ಯವಿರುವವರಿಗೆ ವಿದ್ಯೆಯನ್ನು ಪಡೆಯಲು ಅವಕಾಶ, ದುಡಿಯಬೇಕಾದವರಿಗೆ ಅವಕಾಶ ಕಲ್ಪಿಸುವ ಯೋಜನೆಗಳನ್ನು ಸಮುದಾಯದೊಳಗೆ ರೂಪಿಸಬೇಕಾಗುತ್ತದೆ. ಹೀಗೆ ಮಾಡಲು ಇಡೀ ಸಮುದಾಯಗಳಲ್ಲಿ ಪ್ರಗತಿಗಾಗಿ ಪ್ರಯತ್ನಿಸುವ ಮನೋಭಾವ ಬೆಳೆದು ಸಂಘಟನೆ ಬಲವಾಗಬೇಕಾಗಿದೆ.

ಲಂಬಾಣಿಗರಲ್ಲಿ ಬಹಳ ಮುಖ್ಯವಾಗಿ ಸಮುದಾಯದ ಎಲ್ಲ ಮಟ್ಟದ ಜನರನ್ನು ಸಂಪರ್ಕಿಸಿ, ಅವರಲ್ಲಿ ಭರವಸೆ ಉತ್ಸಾಹ ತುಂಬುವ ಒಂದು ಕಾರ್ಯಪಡೆಯ ರಚನೆ ಆಗಬೇಕಾಗಿದೆ.

ಸರ್ಕಾರಿ ಕೆಲಸಗಳು ಹಾಗೂ ಸರ್ಕಾರದ ಕೆಲವು ಸೌಕರ್ಯಗಳು ಸಮುದಾಯದೊಳಗಿನ ಕೆಲವರಿಗೆ ಮಾತ್ರ ಲಭ್ಯವಾಗುತ್ತದೆ. ಕೆಲವರಿಗೆ ಮಾತ್ರ ಭೂಮಿ ಲಭ್ಯವಾಗಿದೆ. ಯಾವುದೇ ಭದ್ರತೆಗಳಿಲ್ಲದೇ ಬದುಕುವ ಸಮುದಾಯದ ಜನರಿಗೆ ಭದ್ರತೆ ಒದಗಿಸುವ ಯೋಜನೆಗಳನ್ನು ಸಮುದಾಯ ಹಾಕಿಕೊಳ್ಳಬೇಕಾಗಿದೆ. ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಕೃಷಿಯಲ್ಲಿ ಉಂಟಾಗುವ ಬದಲಾವಣೆಗಳಿಂದ ಅವರ ಬದುಕು ಯಾವಾಗಲೂ ಆತಂಕಗಳಿಂದಲೇ ಕೂಡಿರುತ್ತದೆ. ಕುಟುಂಬಗಳು ಸಣ್ಣ ಸಣ್ಣ ಭಾಗಗಳಾಗಿ ಒಡೆಯುತ್ತಿರುವ ಪ್ರವೃತ್ತಿಯಿಂದಾಗಿ ಕಷ್ಟಗಳಿಗೆ ಸಿಲುಕಿದ ಕುಟುಂಬಗಳ ಸದಸ್ಯರು ಆತಂಕದಿಂದ ಕೆಲವು ಸಾರಿ ಆತ್ಮಹತ್ಯೆಗಳಂತಹ ಪ್ರವೃತ್ತಿಗಳಿಗೆ ಶರಣಾಗುತ್ತಿದ್ದಾರೆ. ಮತಾಂತರದ ಸುಳಿವುಗಳಿಗೆ ಸಿಲುಕಿ, ಯಾವುದಾದರೂ ಮತಗಳಿಗೆ ಸೇರುವ ಲಂಬಾಣಿಗಳು ಹಾಗೂ ಹೆಣ್ಣು ಮಕ್ಕಳನ್ನು ಮಾರುವ ಲಂಬಾಣಿ ಕುಟುಂಬಗಳು ಇವರುಗಳನ್ನು ಒಂದೆಡೆ ಸೇರಿಸಿ, ಅವರ ಕಷ್ಟ ತಿಳಿದು ಸಹಕರಿಸಲು ಸಮುದಾಯವು ಕ್ರಿಯಾಶೀಲ ಸಂಘಟನೆ ಹೊಂದಬೇಕಾಗಿದೆ. ಲಂಬಾಣಿ ಹೆಣ್ಣು ಮಕ್ಕಳನ್ನು ಖರೀದಿಸುವ ಹಾಗೂ ಹೀಗೆ ಖರೀದಿಸಿದವರನ್ನು ಮೈ ಮಾರುವ ಜಾಲಗಳಿಗೆ ಒದಗಿಸುವ ಜನರ ಬಗ್ಗೆ ಎಚ್ಚರಿಸಬೇಕಾಗಿದೆ.

ಗ್ರಂಥಋಣ

೧. ಸಣ್ಣರಾಮ, ೧೯೯೯, ಲಂಬಾಣಿ ಸಂಸ್ಕೃತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳರು, ೧೯೯೯.

೨. ಬಸವರಾಜ ನೆಲ್ಲೀಸರ, ೧೯೮೦, ಲಂಬಾಣಿಗರು, ಐ.ಬಿ.ಎಚ್‌. ಪ್ರಕಾಶನ, ಬೆಂಗಳೂರು.

೩. ಪಿ. ಕೆ.ಖಂಡೋಬ, ೧೯೮೮, ಲಂಬಾಣಿ ಸಂಸ್ಕೃತಿ, ದಿ ತೇಜಸಿಂಗ ರಾಠೋಡ್‌ಮೆಮೋರಿಯಲ್‌ಟ್ರಸ್ಟ್‌ ಗುಲಬರ್ಗಾ.

೪. ಪಿ. ಕೆ. ಖಂಡೋಬಾ, ೧೯೯೧, ಕರ್ನಾಟಕದ ಲಂಬಾಣಿಗಳು: ಒಂದು ಸಾಂಸ್ಕೃತಿಕ ಅಧ್ಯಯನ, ತೇಜಸಿಂಗ ರಾಠೋಡ ಮೆಮೊರಿಯಲ್‌ಟ್ರಸ್ಟ್‌, ಗುಲಬರ್ಗಾ.

೫. ಡಿ. ಬಿ. ನಾಯಕ, ಲಂಬಾಣಿ ಜನಪದ ಸಾಹಿತ್ಯ, ಬಂಜಾರಾ ಪ್ರಕಾಶನ, ಗುಲಬರ್ಗಾ

೬. ಗುರುದ್ವಾರ ಧರ್ಮ ಪ್ರಚಾರಕ ಕಮಿಟಿ, ಬಂಜಾರ ಸಮಾಜದ ಮೂಲ ಇತಿಹಾಸ, ಅಣಿ ಶಿಖಜದರ್ಣೇತಿ ಸಂಬಂಧ, ನಾಂದೇಡ.

೭. ಹರಿಲಾಲ ಪವಾರ, ೨೦೦೭, ಬದುಕೊಂದು ಚಿತ್ತಾರ, ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.