ಜಾಗತೀಕರಣ ಹಿನ್ನೆಲೆಯಲ್ಲಿ ಬೇರೆ ಬೇರೆ ವಿಷಯಗಳ ಬಗೆಗೆ ಇಂದಿನ ದಿನಗಳಲ್ಲಿ ಮಾತನಾಡುವುದು ಹೆಚ್ಚಾಗಿದೆ. ಇದಕ್ಕೆ ಕಾರಣವೂ ಇದೆ. ಅನೇಕ ಭಾಷೆಗಳು ವಿಶೇಷವಾಗಿ ಸಣ್ಣ ಪುಟ್ಟ ಭಾಷೆಗಳು, ಬುಡಕಟ್ಟು ಭಾಷೆಗಳು ಬೇಗ ಇಲ್ಲವಾಗುತ್ತವೆ ಎಂಬ ಆತಂಕ ಮನೆ ಮಾಡಿದೆ. ಇವುಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ಈ ನಿಟ್ಟಿನಲ್ಲಿ ಬುಡಕಟ್ಟುಗಳ ಭಾಷೆಗಳನ್ನು ತುರ್ತಾಗಿ ಆಗಬೇಕಾದ ಕೆಲಸಗಳಾಗಿವೆ.

ಈ ಲೇಖನದಲ್ಲಿ ಬುಡಕಟ್ಟು ಭಾಷೆಗಳಲ್ಲಿ ಪಠ್ಯ ತಯಾರಿಸುವ ಮತ್ತು ಅವುಗಳನ್ನು ಸರಿಯಾಗಿ ಜಾರಿಗೆ ತರುವ ಬಗೆಗೆ ಅದೇ ರೀತಿ ಈ ನಿಟ್ಟಿನಲ್ಲಿ ಅಂದುಕೊಂಡ ಗುರಿಯನ್ನು ತಲುಪುವ ನಿಷ್ಟಾವಂತ ಪ್ರಯತ್ನಗಳ ಬಗೆಗೆ ಒಂದಷ್ಟು ಮಾತನಾಡಲಾಗಿದೆ.

ಪಠ್ಯಗಳಾಗಿ ಬುಡಕಟ್ಟುಗಳ ಜಗತ್ತಿನಿಂದ ಏನನ್ನು ಕೊಡಬೇಕು, ಸ್ಥಳೀಯ ಆಡಳಿತ ಮಾತು ಮತ್ತು ಸುತ್ತಲಿನ ಸಂಸ್ಕೃತಿಯಿಂದ ಏನನ್ನು ಕೊಡಬೇಕು ಎಂಬುದರ ಬಗೆಗೆ ಇಲ್ಲಿ ಮಾತುಕತೆ ಇದೆ. ಎಲ್ಲ ಬುಡಕಟ್ಟುಗಳು ತಮ್ಮತನವನ್ನು ಉಳಿಸಿಕೊಂಡು ಆ ನಾಡಿನ ಮತ್ತು ದೇಶದೊಂದಿಗೆ ಬೆರೆತು ಬಾಳುವ ಬಗೆಯನ್ನು ಹೇಳಿಕೊಡಬೇಕಾದ ಭಾರವನ್ನು ಈ ಪಠ್ಯಗಳ ಮೇಲಿಡಬೇಕು. ಪಠ್ಯಗಳ ತಯಾರಿ ಮತ್ತು ಅವುಗಳನ್ನು ಜಾರಿಗೆ ತರಬೇಕಾದ ಹಂತದಲ್ಲಿ ಆಗಬೇಕಾದ ಕೆಲವು ಮಹತ್ವದ ಅಂಶಗಳನ್ನು ಇಲ್ಲಿ ಬೆರಳು ಮಾಡುವ ಪ್ರಯತ್ನ ಮಾಡಲಾಗಿದೆ. ಅದೇ ವೇಳೆಗೆ ಆ ಪಠ್ಯಗಳನ್ನು ಹೇಳಿಕೊಡುವ ಶಿಕ್ಷಕರನ್ನು ಬೆಳೆಸುವ ಮತ್ತು ಅವರಲ್ಲಿ ಆ ಕೆಲಸದ ಬಗೆಗೆ ಆಸಕ್ತಿಯನ್ನು ಮೂಡಿಸಬೇಕಾದ ಬಗೆಗೂ ಕೆಲವು ಮಾತುಗಳಿವೆ.

ಒಟ್ಟಿನಲ್ಲಿ ಬುಡಕಟ್ಟುಗಳ ಭಾಷೆಯಲ್ಲಿ ಪಠ್ಯ ತಯಾರಿಯ ಬಗೆಗೆ ಒಂದು ಅವಲೋಕನ ನಡೆಯಬೇಕಾಗಿದೆ.

ಇಂದು ಜಗತ್ತಿನ ವಿವಿಧ ಮುಖಗಳಲ್ಲಿ ಬುಡಕಟ್ಟು ಜನ ಅಡಕತ್ತರಿಗೆ ಸಿಲುಕುತ್ತಿದ್ದಾರೆ. ಬುಡಕಟ್ಟುಗಳ ಉಳಿವು ಒಂದು ಪ್ರಶ್ನೆಯಾಗಿ ಕಾಡುತ್ತಿದೆ. ಭಾರತ ದೇಶದ ವೈವಿಧ್ಯತೆಗೆ ಬುಡಕಟ್ಟುಗಳ ಕಾಣಿಕೆ ಪರಿಗಣಿಸುವಂತದ್ದು. ಬುಡಕಟ್ಟುಗಳು ಹೊಂದಿರುವ ಅರಿವು ಈ ಆಧುನಿಕ ಜಗತ್ತಿಗೆ ಸರಿಯಾಗಿ ಗೊತ್ತಿಲ್ಲ. ಬುಡಕಟ್ಟುಗಳ ಸಾವಿನಿಂದ ಈ ಎಲ್ಲವುಗಳು ಸತ್ತುಹೋಗುತ್ತವೆ. ಬುಡಕಟ್ಟು ವ್ಯಕ್ತಿಗಳು ತಮ್ಮ ನೆಲದೊಂದಿಗೆ ಹೊಂದಿರುವ ಕರುಳಬಳ್ಳಿ ಸಂಬಂಧವನ್ನು ಕಿತ್ತೆಸೆದು ಬದುಕಿದರೆ ಅದು ಬುಡಕಟ್ಟುಗಳ ಸಾವು ಎಂದೇ ಅರ್ಥ ಆಗ ಅಷ್ಟು ಮಟ್ಟಿಗೆ ದೇಶ, ಜಗತ್ತು ವೈವಿಧ್ಯತೆಯನ್ನು ಕಳೆದುಕೊಳ್ಳುತ್ತದೆ. ಅಲ್ಲಿನ ಅರಿವನ್ನು ಕಳೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ ಬುಡಕಟ್ಟುಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸಮಾಜಕ್ಕಿದೆ.

ಈ ನಿಟ್ಟಿನಲ್ಲಿ ಬುಡಕಟ್ಟುಗಳ ಮಾತು ಬಲುಮುಖ್ಯ ಪಾತ್ರವನ್ನು ವಹಿಸುತ್ತದೆ. ಆ ಬುಡಕಟ್ಟುಗಳ ಅರಿವನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ಮಾತು ಬದುಕಿದರೆ ಅಷ್ಟು ಮಟ್ಟಿಗೆ ಅವುಗಳ ಅರಿವು ನಮ್ಮೊಂದಿಗೆ ಉಳಿದುಕೊಳ್ಳುತ್ತದೆ. ಆದರೆ ಇಂದು ಜಗತ್ತಿನ ಎಲ್ಲ ಬುಡಕಟ್ಟು ಮಾತುಗಳು, ಕಡಿಮೆ ಮಂದಿ ಮಾತನಾಡುವ ಮಾತುಗಳು ಅಳಿವಿನಂಚಿಗೆ ಬಂದುನಿಂತಿವೆ. ಒಂದು ವೇಳೆ ಮಾತು ಸತ್ತುಹೋದರೆ ಆ ಬುಡಕಟ್ಟುಗಳ ಒಟ್ಟು ವಿಶ್ವನೋಟವೇ ಇಲ್ಲವಾಗುತ್ತದೆ. ಜಗತ್ತಿನ ಅರಿವಿನ ವಿಸ್ತಾರಕ್ಕೆ ಅಷ್ಟು ಮಟ್ಟಿಗೆ ಕೊರತೆಯುಂಟಾಗುತ್ತದೆ. ಹಾಗಾಗಿ ಬುಡಕಟ್ಟು ಮಾತುಗಳನ್ನು ಉಳಿಸಿಕೊಳ್ಳುವುದರತ್ತ ಗಂಭೀರವಾದ ಹೆಜ್ಜೆಗಳನ್ನು ಇಡಬೇಕಿದೆ. ಹಾಗಾದಾಗ ಬುಡಕಟ್ಟುಗಳ ಅರಿವು, ವಿಶ್ವನೋಟ ಮೊದಲಾದವುಗಳು ಉಳಿದುಕೊಂಡು ಬರುತ್ತವೆ.

ಇಂದು ಮಾತುಗಳು ಸಾಯುತ್ತಿವೆ ಎಂಬ ಅಂಶ ಎಲ್ಲರಿಗೂ ತಿಳಿದ ವಿಷಯ. ಇದು ಹೆಚ್ಚು ತೀವ್ರವಾಗಿದೆ ಎಂದು ಹೇಳಲಾಗುತ್ತದೆ. ಅದರಲ್ಲಿಯೂ ಎರಡು ತಿಂಗಳಿಗೆ ಒಂದರಂತೆ ಮಾತುಗಳು ಈ ಜಗತ್ತಿನಿಂದ ಕಣ್ಮರೆಯಾಗುತ್ತಿವೆ ಎಂದು ಹೇಳುವುದನ್ನು ಕೇಳುತ್ತವೆ. ಆದರೆ ಭಾರತದ ಸಂದರ್ಭದಲ್ಲಿ ಇದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಆಗದು. ಯಾಕೆಂದರೆ ಭಾರತದಲ್ಲಿ ಯಾವತ್ತಿನಿಂದಲೂ ಯಾವ ಮಾತೂ ಕೊಲ್ಲುವ ಮಾತಾಗಿ ನಿಂತಿಲ್ಲ ಬದಲಾಗಿ, ಒಂದಕ್ಕೊಂದು ಪೂರಕವಾಗಿ ಬದುಕಿ ಬಂದಿವೆ. ಹಾಗಾಗಿ ಯುರೋಪಿನ ವಾತಾವರಣ ಭಾರತದಲ್ಲಿ ಇಲ್ಲ ಎಂದೆನ್ನಬಹುದು.

ಆದರೆ ಇದರಿಂದ ಇಲ್ಲಿಯ ಮಾತುಗಳಿಗೆ ಅಪಾಯ ಇಲ್ಲ ಎಂದು ಹೇಳಲಾಗದು. ಮುಂದೊಂದು ಕಾಲಕ್ಕೆ ಅಪಾಯವೊದಗದೆ ಇರದು. ಈಗಾಗಲೇ ಅನೇಕ ಮಾತುಗಳನ್ನು ಯುವಜನಾಂಗ ಆಡುವುದು ಕಮ್ಮಿಯಾಗುತ್ತಿರುವುದನ್ನು ನೊಡಬಹುದು. ಇದನ್ನು ವಿಶೇಷವಾಗಿ ಬುಡಕಟ್ಟು ಮಾತುಗಳು ಮತ್ತು ಕಡಿಮೆ ಜನರಿರುವ ಮಾತುಗಳನ್ನು ನೋಡಬಹುದು. ಈಗ್ಗೆ ಒಂದು ನೂರು ವರ್ಷಗಳ ಹಿಂದೆ ಇದ್ದ ಮಾತುಗಳ ನಡುವಿನ ಕೂಡಿಬಾಳುವ ಲಕ್ಷಣಗಳು ಕಡಿಮೆಯಾಗಿ ಭಾರತದಲ್ಲಿಯೂ ಕೊಲ್ಲುವ ಮಾತುಗಳು ಬೆಳೆಯುತ್ತಿರುವ ಬೆಳೆದಿರುವ ಹಾಗೆ ಕಾಣುತ್ತಿದೆ. ರಾಜ್ಯಗಳ ಮುಖ್ಯ ಮಾತುಗಳು ಆ ಆ ರಾಜ್ಯಗಳ ಬೇರೆ ಬೇರೆ ಸಣ್ಣ ಸಣ್ಣ ಪುಟ್ಟ ಮಾತುಗಳನ್ನು ತಮ್ಮ ಅಡಿಯಲ್ಲಿ ತರುವ ಮತ್ತು ಅವುಗಳನ್ನು ಹಿಂಡಿ ಹಿಪ್ಪೆ ಮಾಡುವ ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಈ ಎಲ್ಲ ಅಂಶಗಳು ಮಾತುಗಳಿಗೊದಗಿರುವ ಬಲುದೊಡ್ಡ ಅಪಾಯವನ್ನು ಗಂಟೆ ಬಾರಿಸಿ ಸಾರುತ್ತಿದೆ. ಆದ್ದರಿಂದ ಇದಕ್ಕೆ ಪೂರಕವಾಗಿ ಮಾತುಗಳನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಈ ದೇಶಿಕರಿಗೆ ತಿಳಿಸಿಕೊಡಬೇಕು ಮತ್ತು ಅದಕ್ಕೆ ತಕ್ಕಂತೆ ಮಾತುಗಳನ್ನು ಉಳಿಸಿಕೊಳ್ಳುವುದಕ್ಕೆ ಬೇಕಾದ ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಾಗತೀಕರಣಕ್ಕೆ ನೆಲದ ಇಂತಾ ಬೆಳವಣಿಗೆಗಳು ಸೇರಿಕೊಂಡರೆ ಮಾತುಗಳು ಬೇಗ ಸತ್ತು ಹೋಗುತ್ತವೆ ಎಂದು ಬೇರೆ ಹೇಳಬೇಕಾದ ಅವಶ್ಯಕತೆಯೇ ಇಲ್ಲ.

ಇಲ್ಲಿ ಸದ್ಯ ಗಮನ ಹರಿಸುತ್ತಿರುವುದು ಬುಡಕಟ್ಟು ಮಾತುಗಳನ್ನು ಮಾತ್ರ. ಅವುಗಳಿಗೊದಗಿರುವ ಅಪಾಯ ಯಾಕೆ ಬಂದಿದೆ, ಯಾವ ಹಂತದಲ್ಲಿದೆ ಎಂಬುದರತ್ತ ಇಲ್ಲಿ ಗಮನಹರಿಸಿಲ್ಲ. ಬದಲಾಗಿ ಇವುಗಳನ್ನು ಉಳಿಸಿಕೊಳ್ಳುವ ಹಂತದಲ್ಲಿ ಒಂದು ಪ್ರಮುಖ ಹೆಜ್ಜೆಯಾದ ಪಠ್ಯಪುಸ್ತಕಗಳ ತಯಾರಿಯ ಬಗೆಗೆ ಮಾತನಾಡಲಾಗಿದೆ. ಇದು ಆ ಮಾತಿನ ಹೊಸ ಜನಾಂಗವನ್ನು ಆ ಮಾತಿನೊಂದಿಗೆ ಬೆಸೆಯುವುದಕ್ಕೆ ಅವರಲ್ಲಿ ತಮ್ಮ ಮಾತಿನ ಬಗೆಗೆ ಅಭಿಮಾನ ಪ್ರೀತಿ ಮೊದಲಾದವು ಬೆಳೆಯುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅತ್ಯಂತ ಜರೂರಾಗಿ ಬುಡಕಟ್ಟುಗಳ ಮಾತುಗಳಲ್ಲಿ ಪಠ್ಯಗಳ ತಯಾರಿಯತ್ತ ಗಮನ ಹರಿಸಬೇಕಾಗಿದೆ.

ಪಠ್ಯಗಳ ತಯಾರಿಯ ಮೊದಲು ಆ ಮಾತುಗಳನ್ನು ಅಧ್ಯಯನ ಮಾಡಬೇಕಾಗಿದೆ. ಈಗಾಗಲೇ ಅನೇಕ ಅಧ್ಯಯನಗಳು ಹೆಚ್ಚಿನ ಬುಡಕಟ್ಟು ಮಾತುಗಳ ಮೇಲೆ ಬಂದಿರುವುದು ನಿಜ. ಆದರೆ ಇನ್ನೂ ಅನೇಕ ಅಧ್ಯಯನಗಳು ಬರಬೇಕಾಗಿದೆ. ಬುಡಕಟ್ಟು ಮಾತುಗಳ ವ್ಯಾಕರಣ, ಪದಕಟ್ಟು ಮೊದಲಾದವುಗಳನ್ನು ತಯಾರಿಸಬೇಕು. ಇದರೊಂದಿಗೆ, ಆ ಮಾತಿನ ಜನಪದವನ್ನು ಕಟ್ಟಿಕೊಡುವ ವ್ಯವಸ್ಥಿತ ಪ್ರಯತ್ನ ಮಾಡಬೇಕಿದೆ. ಈ ಹಂತದಲ್ಲಿ ಆ ಮಾತುಗಳ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಬೇಕು. ಅವುಗಳ ನುಡಿಗಟ್ಟುಗಳು, ಗಾದೆಗಳು, ಅವರ ಗಣಿತ, ವೈದ್ಯಕೀಯ, ತಾಂತ್ರಿಕತೆ, ಬೇರೆ ಬೇರೆ ಬಗೆಯ ಕುಶಲತೆಗಳು ಇವುಗಳ ಬಗೆಗೆ ಸರಿಯಾದ ಅಧ್ಯಯನವಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಕೊಡಬೇಕು. ಅದರೊಂದಿಗೆ ಅವುಗಳನ್ನು ಅಧ್ಯಯನ ಮಾಡಿ ವಿವರಿಸಬೇಕು. ಅವುಗಳ ಮಹತ್ವವನ್ನು ಸಮಾಜಕ್ಕೆ, ಜಗತ್ತಿಗೆ ತೋರಿಸಿಕೊಡಬೇಕು. ಆ ಮಾತುಗಳ ಸಮುದಾಯಗಳಾಗ ಆಗಿ ಹೋದ ಸಾಂಸ್ಕೃತಿಕ ವೀರರನ್ನು, ನಾಯಕರನ್ನು ಗುರುತಿಸಿ ಅವರನ್ನು ಇತಿಹಾಸವನ್ನು ದಾಖಲಿಸಬೇಕು. ಅದರೊಂದಿಗೆ ಆ ಮಾತಿನ ಯುವಕರಿಗೆ ಇವುಗಳನ್ನು ಕೊಟ್ಟು ಈ ಎಲ್ಲ ಅಂಶಗಳು ಯಾವತ್ತೂ ಅಚ್ಚಳಿಯದಂತೆ ಉಳಿಯುವಂತೆ ಮಾಡಬೇಕಿದೆ. ಹಾಗೆ ನೋಡಿದರೆ ಇದನ್ನು ಈ ನೆಲದ ಜನತೆ ಯಾವತ್ತಿನಿಂದಲೂ ಉಳಿಸಿಕೊಂಡು ಬಂದಿದ್ದಾರೆ. ಆದರೆ ಇಂದಿನ ಸಮಾಜದ ಒತ್ತಡ ಅವರನ್ನು ಇವುಗಳಿಂದ ದೂರಕ್ಕೆ ಕರೆದುಕೊಂಡು ಬರುತ್ತಿದೆ ಎಂಬ ಅಂಶವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆ ಮಾತುಗಳ, ಅವುಗಳನ್ನಾಡುವ ಮಂದಿಯ ಇತಿಹಾಸವನ್ನು ಕಟ್ಟಿಕೊಡಬೇಕು. ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ಆಗಿವೆ ಎಂಬುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. ಅಲ್ಲಲ್ಲಿ ಹರಡಿಕೊಂಡಿರುವ ಸಾಧ್ಯತೆಗಳಿರುವ ಇಂತಹ ಕೆಲಸಗಳನ್ನು ಒಂದೆಡೆ ತಂದು ಹಾಕಿ ಅನಂತರ ಇನ್ನೂ ಉಳಿದಿರಬಹುದಾದ ಕೊರತೆಗಳನ್ನು ತುಂಬಿಕೊಳ್ಳಬಹುದು. ಇದೆಲ್ಲವೂ ಅನೇಕ ಹಂತಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಆ ಮಾತುಗಳಲ್ಲಿ ಅಧ್ಯಯನಗಳೂ ಆಗುತ್ತವೆ. ಅದೇ ವೇಳೆಗೆ ಆ ಮಾತುಗಳ ಮುಂದನ್ನು ಕಾಣುವ ಪ್ರಯತ್ನ ಮಾಡಬಹುದು. ಈ ಎಲ್ಲ ಅಧ್ಯಯನಗಳು ಪಠ್ಯ ತಯಾರಿಕೆಗೆ ಕೂಡ ಅನುಕೂಲವಾಗುವಂತವು. ಅದೇ ವೇಳೆಗೆ ಬಹಳ ಮುಖ್ಯವಾಗಿರುವ ಅಂಶವೆಂದರೆ ಹೊಸತಾಗಿ ಅಕ್ಷರ ಕಲಿತವರಿಗೆ ಓದಲು ಸಾಮಗ್ರಿಯನ್ನು ಒದಗಿಸಿದಂತಾಗುತ್ತದೆ. ಹಾಗಾಗಿ ಪಠ್ಯಗಳ ತಯಾರಿಯ ಜೊತೆಜೊತೆಯಲ್ಲಿ ಈ ಎಲ್ಲ ಅಂಶಗಳತ್ತ ಗಮನವನ್ನು ಹರಿಸಬೇಕು.

ಇನ್ನು ಬುಡಕಟ್ಟು ಮಾತುಗಳಲ್ಲಿ ಪಠ್ಯ ತಯಾರಿಸುವ ಹಂತದಾಗ ಗಮನಿಸಬೇಕಾದ ಮುಖ್ಯವಾದ ಅಂಶಗಳನ್ನು ಇಲ್ಲಿ ಗಮನಿಸಬಹುದು. ಇದು ಒಂದು ಹರಹುಳ್ಳ ಅವಲೋಕನೆಯಾಗದೆ ಅಳವುಳ್ಳ ಅವಲೋಕನೆ ನಿಟ್ಟಿನಲ್ಲಿ ಇನ್ನೂ ಆಳಕ್ಕಿಳಿದು ಪಠ್ಯದ ರಚನೆಯನ್ನು ಸಿದ್ಧಪಡಿಸಬೇಕಿದೆ.

ಶಿಕ್ಷಣದಲ್ಲಿ ಕೊಡುವ ಮುಖ್ಯ ಅಂಶಗಳೆಂದರೆ, ಲಿಪಿ, ಮಾತು ಮತ್ತು ವಸ್ತು ಮೊದಲಾದವು. ಪಠ್ಯವನ್ನು ಬುಡಕಟ್ಟುಗಳ ಮಾತುಗಳಲ್ಲಿಯೇ ಕೊಡಬೇಕು ಎಂಬುದು ಈಗಿನ ವಿಚಾರ. ಇದು ಮನಸದ್ಯಯನಕಾರರು ಮನೋವಿಜ್ಞಾನಿಗಳು ಹೇಳುವ ವಿಚಾರವಾಗಿದೆ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬಹುದು. ಇನ್ನುಳಿದಂತೆ ಲಿಪಿ ಮತ್ತು ವಸ್ತುಗಳ ಬಗೆಗೆ ನೋಡಬಹುದು.

ಸಾಮಾನ್ಯವಾಗಿ ಆ ನಾಡಿನ ಮಾತಿನ ಲಿಪಿಗಳನ್ನೇ ಬಳಸಿಕೊಳ್ಳಬಹುದು. ಬುಡಕಟ್ಟು ಮಾತುಗಳಲ್ಲಿ ಈಗ ಲಿಪಿ ಇಲ್ಲದಿರುವುದರಿಂದ ಅವು ನೆಲೆಗೊಂಡಿರುವ ನಾಡಿನ ಮಾತಿನ ಲಿಪಿಯನ್ನು ಅಳವಡಿಸಿಕೊಳ್ಳುವುದು ಸಹಜವಾಗಬಹುದು. ಆದರೆ ಈ ನಿಟ್ಟಿನಲ್ಲಿ ಅನೇಕ ಸಮಸ್ಯೆಗಳು ಬರುವುದು ನಿಜ. ಕೆಲವು ಬಗೆಯ ಸಾಮಾನ್ಯ ಸಮಸ್ಯೆಗಳನ್ನು ನೋಡಬಹುದು.

೧. ಒಂದು ಮಾತಿಗೆ ಈಗಾಗಲೇ ಒಂದು ಲಿಪಿಯನ್ನು ಬಳಸುತ್ತಿರಬಹುದು.

೨. ಒಂದು ಮಾತು ಒಂದಕ್ಕಿಂತ ಹೆಚ್ಚು ನಾಡುಗಳಲ್ಲಿ ವ್ಯಾಪಿಸಿಕೊಂಡಿರಬಹುದು

೩. ಬುಡಕಟ್ಟುಗಳ ಮಾತುಗಳು ಆ ನಾಡಿನ ಮಾತಿಗಿಂತ ಇನ್ನೊಂದು ಮಾತಿಗೆ ಹೆಚ್ಚು ಸಮೀಪದ ಸಂಬಂಧವನ್ನು ಇಟ್ಟುಕೊಂಡಿರಬಹುದು, ಇಲ್ಲವೇ ಆ ಮಾತುಗಳ ಸಮುದಾಯ ಇಂತಹ ಸಂಬಂಧವನ್ನು ಬಯಸಬಹುದು.

೪. ಒಂದು ನಾಡಿನಲ್ಲಿ ಒಂದಕ್ಕಿಂತ ಹೆಚ್ಚು ಲಿಪಿಗಳು ಬಳಕೆಯಲ್ಲಿರಬಹುದು

ಈ ಮೊದಲಾದ ಅನೇಕ ಸಮಸ್ಯೆಗಳು ಲಿಪಿಯ ಅಳವಡಿಕೆಯಲ್ಲಿ ಬರಬಹುದು. ಕೆಲವು ಮಾತುಗಳಿಗೆ ಒಂದಕ್ಕಿಂತ ಹೆಚ್ಚು ಸಮಸ್ಯೆಗಳು ಒಟ್ಟಿಗೆ ಇದ್ದಿರಲೂಬಹುದು. ಇಂತಹ ಹೊತ್ತಿನಲ್ಲಿ ಆ ಮಾತುಗಳ ಸಮುದಾಯಗಳನ್ನು ಮತ್ತು ಆ ನಾಡಿನ ಮಾತು ಮತ್ತು ಸಮಾಜ ಮತ್ತು ಅವುಗಳ ನಡುವೆ ಇರುವ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಅರಿಗರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಮಸ್ಯೆಗಳನ್ನು ದಾಟಲು ಸಾಧ್ಯವಾಗದೇ ಹೋಗುವಂತಿದ್ದರೆ, ತಾತ್ಕಾಲಿಕವಾದ ಪರಿಹಾರಗಳನ್ನು ಕಂಡುಕೊಂಡು ಮುಂದುವರೆಯಬಹುದು. ಮಾತುಗರು ನೆಲೆಸಿರುವ ಜಾಗ, ಅಲ್ಲಿನ ಸಮಾಜ ಮತ್ತು ಅವುಗಳ ವಾತಾವರಣ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎರಡು ಲಿಪಿಗಳ ಬಳಕೆಯನ್ನೂ ಮಾಡಬಹುದು.

ಇನ್ನು ಪಠ್ಯವಸ್ತುವಿನ ಬಗೆಗೆ ಮಾತನಾಡಬಹುದು.

ಸಾಮಾನ್ಯವಾಗಿ ಪ್ರಾಥಮಿಕಪೂರ್ವ ಶಾಲೆಗಳಲ್ಲಿ ಆಟೋಟಗಳನ್ನು ಹೇಳುವಾಗ ಪೂರ್ಣವಾಗಿ ಆ ಮಾತಿನದೇ ಆಗಿರಬೇಕು. ಆ ಮಕ್ಕಳಿಗೆ ಮನೆಯ ವಾತಾವರಣವನ್ನೇ ಮತ್ತೆ ಕಟ್ಟಿಕೊಡಬೇಕು. ಇದು ಮಕ್ಕಳ ಶೈಕ್ಷಣಿಕ ಜೀವನದ ಮೊದಲ ಹೆಜ್ಜೆಯಾಗುವುದರಿಂದ ಶಾಲೆಯ ವಾತಾವರಣವನ್ನು ಮೊದಲ ಬಾರಿಗೆ ಪರಿಚಯಿಸಿಕೊಡುವುದರಿಂದ ಇದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಕ್ಕಳೆ ಶಾಲೆಯೊಂದಿಗೆ ತಮ್ಮದೇ ಮಾತುಗಳೊಂದಿಗೆ ಅಂಟಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾದ ಅಂಶವಾಗಿದೆ. ಇದು ಮುಂದಿನ ಅವರ ಶಿಕ್ಷಣಕ್ಕೆ ಒಳ್ಳೆಯ ದಾರಿಯನ್ನು ಮಾಡಿಕೊಡುತ್ತದೆ.

ಇಲ್ಲಿ ಮಕ್ಕಳಿಗೆ ಹೇಳಿಕೊಡುವ ಆಟೋಟಗಳು ಆ ಸಮಾಜದವುಗಳೇ ಆಗಿರಬೇಕು. ಆ ಮಾತುಗಳು ಮತ್ತು ಅವುಗಳನ್ನಾಡುವ ಸಮುದಾಯಗಳ ಜನಪದ ಆಟಗಳು, ಜನಪದ ಮಕ್ಕಳ ಸಾಹಿತ್ಯ, ಒಗಟು, ಗಾದೆ, ಜನಪದ ಗಣಿತ ಆ ನೆಲದ ತಿಳುವಳಿಕೆ ಆ ಮೊದಲಾದ ಅಂಶಗಳ ಮೇಲೆ ಹೆಚ್ಚು ಗಮನವನ್ನು ಹರಿಸಬಹುದು.

ಇಲ್ಲಿಂದ ಮುಂದೆ ಮೊದಲ ತರಗತಿಯಲ್ಲಿ ಅವರ ಮಾತಿನಲ್ಲಿ ಪುರ್ಣ ಪಠ್ಯವನ್ನು ಕೊಡಬಹುದು. ಇಲ್ಲಿ ಪರಿಚಯಿಸುವ ಭೌತಿಕ ವಸ್ತುಗಳನ್ನು ಆ ಮಾತಿನಲ್ಲಿ ಪರಿಚಯಿಸಬೇಕು. ಅದು ಆ ಮಾತುಗಳಿಂದ ಎತ್ತಿಕೊಂಡ ವಸ್ತುಗಳೇ ಆಗಿರಬೇಕು ಎಂಬುದು ಬಲು ಮುಖ್ಯವಾದ ಅಂಶ. ಇದರಲ್ಲಿ ಕೆಲವು ಅಂಶಗಳನ್ನು ಎತ್ತಿ ಹೇಳಬಹುದು. ಆ ಮಾತಿನಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು, ಆ ಮಾತುಗಳ ಪರಿಕಲ್ಪನೆಗೆ ಸಿಗುವಂತವು ಮೊದಲಾದವು. ಇಲ್ಲಿ ಆ ವಸ್ತುಗಳಿಗೆ ಆ ಮಾತಿನಲ್ಲಿ ಮತ್ತು ಅವುಗಳನ್ನಾಡುವ ಸಮುದಾಯಗಳಲ್ಲಿ ಇರುವ ಪ್ರಾಮುಖ್ಯತೆಯನ್ನು ಪರಿಚಯಿಸಿಕೊಡಬೇಕು. ಅವುಗಳ ಮಹತ್ವವನ್ನು ತಿಳಿಸಿಕೊಡಬೇಕು. ಅದೇ ವೇಳೆಗೆ ಬೇರೆ ಸಮಾಜದವರು ಕೀಳಾಗಿ ಕಾಣುವಂತಹ ವಸ್ತುಗಳನ್ನು ಸರಿಯಾಗಿ ಪರಿಚಯಿಸಿಕೊಡಬೇಕು. ಮುಂದೆ ಅವುಗಳಿಂದಾಗಿ ಮಕ್ಕಳು ದೊಡ್ಡದಾದ ಸಮಾಜದಿಂದ ಅನುಭವಿಸಬಹುದಾದ ಕೀಳರಿಮೆಯಿಂದ ಹೊರಬರಲು ಕೂಡ ಅನುವಾಗುತ್ತದೆ. ಆದರೆ ಇದರ ಮೂಲಕ ಆ ಮಕ್ಕಳು ಮತ್ತೆ ತಮ್ಮದೇ ವೃತ್ತಿಯಲ್ಲಿ ಮಾತ್ರ ಮುಂದುವರೆಯುವಂತೆ ಆಗಕೂಡದು. ಬದಲಾಗಿ ಅವುಗಳ ಬಗೆಗೆ ತಿಳುವಳಿಕೆಯನ್ನು ಅವರು ಇಟ್ಟುಕೊಂಡಿರಬೇಕು. ಏನಿಲ್ಲವೆಂದರೂ ಅವರ ಸಮಾಜದ ವಸ್ತುಗಳು ಮತ್ತು ಸಮುದಾಯಗಳ ಇತಿಹಾಸ ಎಂದಾದರೂ ಅವುಗಳ ಪರಿಚಯ ಅವರಿಗಾಗಬೇಕು. ಮುಂದೆ ಆ ಮಕ್ಕಳನ್ನು ಉಳಿದೆಲ್ಲರಂತೆ ಆಯ್ಕೆಯ ಅವಕಾಶಗಳತ್ತ ಎಳೆಯಬೇಕು. ಜನಪದ ಸಾಹಿತ್ಯವನ್ನು ಇಲ್ಲಿ ಬಳಸಿಕೊಳ್ಳಬಹುದು. ಮಕ್ಕಳಿಗೆ ಕೊಡಬಹುದಾದ ಸಾಹಿತ್ಯವನ್ನು ಕಲೆಹಾಕಿ ಅವರಿಗೆ ಅವರ ಮಾತು ಕಂಡ, ಕಾಣುವ ಜಗತ್ತನ್ನು ಪರಿಚಯಿಸುವಂತ ಗಮನ ಇರಬೇಕು. ಅದರಲ್ಲಿ ಇರಬಹುದಾದ ಕೆಲವು ಅಂಶಗಳೆಂದರೆ,

೧. ಆ ಮತುಗಳ ಗಾದೆ, ಒಗಟು, ಪರಿಚಯಿಸುವತ್ತ ಗಮನ ಇರಬೇಕು. ಅದರಲ್ಲಿ ಇರಬಹುದಾದ ಕೆಲವು ಅಂಶಗಳೆಂದರೆ,

೨. ಆ ಮಾತು ಕಾಣುವ ದೈಹಿಕ ಇಲ್ಲ. ಅಮಾನವೀಯ ಅಂಶಗಳು, ಕಲ್ಪನೆ, ಅವರ ಮೌಲ್ಯಗಳು, ಅನುಭವಿಸುವ ಸೌಂದರ್ಯ ಮೊದಲಾದವು.

೩. ಆ ಮಾತುಗಳು ತಿಳಿದುಕೊಂಡಿರುವ ಪ್ರಾಣಿ, ಪಕ್ಷಿಗಳು, ಅವರ ಭೂಗೋಳ, ಖಗೋಳ ಪಂಚಾಗ ಈ ಮೊದಲಾದವು.

೪. ಆ ಮಾತುಗಳು ಗಣಿತ, ವೈದ್ಯಕೀಯ ಮೊದಲಾದ ಅರಿಮೆಗಳು.

೫. ಆ ಮಾತುಗಳದೇ ಆದ ವಿಶಿಷ್ಟ ಅಂಶಗಳು.

೬. ಆ ಮಾತುಗಳು ಸಮುದಾಯಗಳ ಇತಿಹಾಸ, ಅವುಗಳ ವಿಶಿಷ್ಟಾಂಶಗಳು.

೭. ಆ ಮಾತುಗಳ ವೀರರ-ಸಾಂಸ್ಕೃತಿಕ ವೀರರ, ಇತಿಹಾಸದ ಪರಿಚಯ ಮಾಡಿಕೊಡುವಂತಾ ಕತೆಗಳು, ಲಾವಣಿಗಳು ಮೊದಲಾದವು.

೮. ಆ ಮಾತುಗಳು ನಿರ್ದಿಷ್ಟ ನೆಲದಲ್ಲಿ ನೆಲೆಗೊಂಡಿದ್ದರೆ ಆ ನೆಲದ ವಿಶಿಷ್ಟಾಂಶಗಳು.

೯. ಆ ಮಾತುಗಳ ಆಟಗಳು

೧೦. ಆ ಮಾತುಗಳ ಸಮುದಾಯದವರ ಉದ್ಯೋಗಕ್ಕೆ ಸಂಬಂಧಪಟ್ಟ ಅಂಶಗಳು.

೧೧. ಆ ಮಾತುಗಳ ಸಮುದಾಯದವರ ಉದ್ಯೋಗಕ್ಕೆ ಸಂಬಂಧಪಟ್ಟ ಅಂಶಗಳು.

ಹೀಗೆ ಈ ಮೊದಲಾದ ಅಂಶಗಳನ್ನು ಇಲ್ಲಿ ಕೊಡಬಹುದು.

ಇಲ್ಲಿಂದ ಮುಂದೆ ಎರಡನೆಯ ತರಗತಿಯಲ್ಲಿ ಈ ಎಲ್ಲ ಅಂಶಗಳನ್ನು ಇನ್ನಷ್ಟು ಅಗಲಿಸಿ ಕೊಳ್ಳಬಹುದು. ಆದರೆ ಅದೇ ವೇಳೆಗೆ ಆ ಮಕ್ಕಳನ್ನು ಆಯಾ ಪ್ರದೇಶದ ರಾಜ್ಯಗಳ ಮಾತುಗಳ ವಾತಾವರಣವನ್ನು ಪರಿಚಯಿಸುವುದಕ್ಕೆ ಪೂರಕವಾಗುವಂತೆ ಕೆಲವು ಅಂಶಗಳನ್ನು ಕೊಡಬಹುದು. ಇದು ಮೊದಲು ಆ ಬುಡಕಟ್ಟು ಮಾತು ಆ ನಾಡಿನ ಮಾತಿನೊಂದಿಗೆ ಇಟ್ಟುಕೊಂಡಿರುವ ಸಂಬಂಧವನ್ನು ತೋರಿಸುವುದರೊಂದಿಗೆ ಮೊದಲಾಗಬಹುದು. ಇದು ಮಕ್ಕಳು ತಮ್ಮ ಮಾತಿನೊಂದಿಗೆ ಉಳಿದುಕೊಂಡೂ ರಾಜ್ಯದ ಮಾತಿನೊಂದಿಗೆ ಬೆರೆಯುವುದಕ್ಕೆ ಅವಕಾಶವೊದಗಿಸಿ ಕೊಡುತ್ತದೆ. ಇದು ಮಾತುಗಳ ನಡುವಿನ ಸಾಮರಸ್ಯಕ್ಕೆ ಮುನ್ನುಡಿ ಬರೆಯುತ್ತದೆ.

ಮೂರನೆಯ ತರಗತಿಗೆ ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬಹುದು. ಇಲ್ಲಿ ಮತ್ತೆ ನಾಡಿನ ಮಾತನ್ನು ಹೆಚ್ಚು ಕೊಡುವುದರತ್ತ ಗಮನ ಹರಿಸಬಹುದು. ಇಲ್ಲಿ ಆ ನಾಡಿನ ವಿಷಯಗಳನ್ನು ನಿಯಮಿತವಾಗಿ ತಂದುಕೊಡಬಹುದು. ಇಲ್ಲಿ ಮತ್ತೆ ನಾಡಿನ ಮಾತಿನಿಂದ ವಿಷಯವನ್ನು ಕೊಡುವಾಗ ನಾಡಿನ ಮಾತು ಆ ಬುಡಕಟ್ಟು ಮಾತಿನೊಂದಿಗೆ ಇಟ್ಟುಕೊಂಡಿರುವ ಸಂಬಂಧವನ್ನು ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಇದರಲ್ಲಿ ಪ್ರದೇಶವಾರು ವೈವಿದ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾಡಿಗೆಲ್ಲ ಒಂದೇ ಬಗೆಯ ಪಠ್ಯವನ್ನು ಕೊಡುವುದರ ಬದಲು ಪ್ರದೇಶವಾರು, ಒಳನುಡಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯಗಳನ್ನು ಕಟ್ಟಬೇಕು. ಇದೇ ಮಾದರಿಯನ್ನು ಬುಡಕಟ್ಟು ಮಾತುಗಳ ಪಠ್ಯಗಳಲ್ಲಿ ಆ ನಾಡಿನ ಮಾತನ್ನು ಸೇರಿಸುವಾಗ ಅನುಸರಿಸಬಹುದು. ಆ ಬುಡಕಟ್ಟು ಇರುವ ಪ್ರದೇಶದ ಒಳನುಡಿಯನ್ನು ಅಲ್ಲಿ ಕೊಡಬೇಕು. ಆ ಭಾಗದ ಮಕ್ಕಳು ಮಾತಿನ ಆ ಭಾಗದ ಒಳನುಡಿಯನ್ನು ತಿಳಿದು ಕೊಂಡಿರುವ ಸಾಧ್ಯತೆಗಳಿರುತ್ತವೆ. ಅದರಲ್ಲಿ ಆ ಭಗದ ಇತರ ಮಕ್ಕಳೊಂದಿಗೆ ಮತ್ತು ಬೇರೆ ಬೇರೆ ವ್ಯಕ್ತಿಗಳೊಂದಿಗೆ ವ್ಯವಹರಿಸಬಲ್ಲವರೂ ಆಗಿರುತ್ತಾರೆ. ಆದ್ದರಿಂದ ಆ ಒಳನುಡಿಯೊಂದಿಗೆ ಮಕ್ಕಳು ಹೊಂದಿರುವ ಸಂಬಂಧವನ್ನು ಬಳಸಿಕೊಂಡು ಅವರನ್ನು ನಾಡಿನ ಮಾತಿನೊಂದಿಗೆ ಬೆಸೆಯಬಹುದು. ಇದು ಹೆಚ್ಚು ಸರಳವಾಗಬಹುದು. ಮುಂದೆ ನಾಡಿನ ಮಾತಿನಲ್ಲಿ ಒಳನುಡಿಯಿಂದ ಶಿಷ್ಟಮಾತಿಗೆ ಬದಲಾಯಿಸುವಂತೆಯೇ ಕ್ರಮೇಣ ಬುಡಕಟ್ಟು ಮಾತುಗಳಲ್ಲಿ ಕೊಡುವ ನಾಡಿನ ಮಾತಿಗೆ ಒಳನುಡಿಯನ್ನು ಮೆಲ್ಲಗೆ ಶಿಷ್ಟಮಾತಿನತ್ತ ಬದಲಾಯಿಸಬಹುದು.

ಇದನ್ನು ನಾಲ್ಕನೆಯ ತರಗತಿಯಲ್ಲಿ ಮುಂದುವರಿಸಿಕೊಂಡು ಹೋಗಬಹುದು. ಇಲ್ಲಿ ನಾಡಿನ ಮಾತಿಗೆ ಹೆಚ್ಚು ಜಾಗವನ್ನು ಕಾಯ್ದಿಡಬಹುದು. ಮುಂದೆ ಪೂರ್ಣವಾಗಿ ಪಠ್ಯವನ್ನು ನಾಡಿನ ಮಾತಿನಲ್ಲಿ ಕೊಡಲು ಪೂರ್ಣಸಿದ್ಧತೆ ಆಗಬೇಕು. ಈ ನಿಟ್ಟಿನಲ್ಲಿ ಮಕ್ಕಳು ಸಿದ್ಧರಾಗಬೇಕು. ಮುಂದೆ ಆರನೆಯ ತರಗತಿಯಲ್ಲಿ ಹೆಚ್ಚು ಭಾಗ ಪಠ್ಯವನ್ನು ನಾಡಿನ ಮಾತಿನಲ್ಲಿ ಕೊಡಬಹುದು. ಇಲ್ಲೆಲ್ಲ ಪಠ್ಯಗಳಲ್ಲಿ ಕೊಡುವ ವಿಷಯ ವಸ್ತುಗಳು ಕೂಡ ಬುಡಕಟ್ಟು ಮತ್ತು ನಾಡಿನ ಮಾತುಗಳ ನಡುವೆ ಪಠ್ಯದಲ್ಲಿ ಇಟ್ಟುಕೊಂಡಿರುವ ಅಂತರದಂತೆಯೇ ಇಟ್ಟುಕೊಳ್ಳಬಹುದು. ಮುಂದೆ ಇದನ್ನು ನಾಡಿನ ಮಾತುಗಳಲ್ಲಿ ಕೊಡುವ ಪಠ್ಯದೊಂದಿಗೆ ಸೇರಿಕೊಳ್ಳುವ ಹಾಗೆ, ನಾಡಿನ ಮಾತಿನಲ್ಲಿಯೇ ಒಂದನೆಯ ತರಗತಿಯಿಂದ ಕಲಿತ ಮಗುವಿನೊಂದಿಗೆ ಸಮನಾಗಿ ನಿಲ್ಲುವ ಹಾಗೆ ಬುಡಕಟ್ಟು ಮಕ್ಕಳನ್ನು ತಯಾರಿಸಬೇಕು. ಹಾಗೆ ವಿಷಯವನ್ನು ವಿನ್ಯಾಸಗೊಳಿಸಬೇಕು.

ಮುಂದೆ ಆರನೆಯ ತರಗತಿಯಿಂದ ಬುಡಕಟ್ಟು ಮಕ್ಕಳನ್ನು ಇತರ ಮಕ್ಕಳೊಂದಿಗೆ ಶಿಕ್ಷಣಕ್ಕೆ ತಂದುಕೊಳ್ಳಬಹುದು. ಹೀಗೆ ತರುವಾಗ ಬುಡಕಟ್ಟು ಮಕ್ಕಳು ಮತ್ತು ಇತರ ಮಕ್ಕಳ ನಡುವೆ ಯಾವುದಾದರೂ ತುಂಬಬೇಕಾದ ಅಂತರಗಳು ಉಳಿದಿವೆಯೇ ಎಂಬುದನ್ನು ಅವಲೋಕಿಸಬೇಕು. ಅಲ್ಲಿಂದ ಮುಂದೆ ನಾಡಿನ ಮತ್ತು ದೇಶದ ಮಾತುಗಳು, ವಸ್ತು ವಿಷಯಗಳು ಮೊದಲಾದವು ಮುಂದುವರೆಯಬಹುದು.

ಪಠ್ಯಪುಸ್ತಕಗಳು ತಯಾರಿಯು ಬುಡಕಟ್ಟು ಮಕ್ಕಳನ್ನು ತಮ್ಮ ಮಾತಿನಲ್ಲಿ ಚಿಂತಿಸಲು ತೊಡಗಿಸುತ್ತವೆ. ಅಂದರೆ ಇದು ಅವರ ಮಾತಿನಲ್ಲಿ ಅರಿವಿನ ಹರಹಿಗೆ ಕಾರಣವಾಗುತ್ತದೆ.

ಹೀಗೆ ಬುಡಕಟ್ಟು ಮಕ್ಕಳು ತಮ್ಮ ಮಾತಿನಿಂದ ನಾಡಿನ ಮಾತಿನ ಪಠ್ಯಕ್ಕೆ ತಿರುಗಿಸಿದ ಬಳಿಕ ಅವರಿಗೆ ಅವರ ಮಾತುಗಳಲ್ಲಿ ಓದುವುದಕ್ಕೆ ಪಠ್ಯಗಳು ಇರುವಂತೆ ನೋಡಿಕೊಳ್ಳಬೇಕು. ಅವರ ಸಾಹಿತ್ಯವನ್ನು ಪ್ರಕಟಿಸಬೇಕು. ಅದರೊಂದಿಗೆ ಇತರೆಲ್ಲ ಬಗೆಯ ಕೆಲಸಗಳನ್ನು ಮಾಡಿಕೊಳ್ಳಬೇಕು. ಅಂದರೆ ಪ್ರಕಟಿಸಬೇಕು. ಅದರೊಂದಿಗೆ ಇತರೆಲ್ಲ ಬಗೆಯ ಕೆಲಸಗಳನ್ನು ಮಾಡಿಕೊಳ್ಳಬೇಕು. ಅಂದರೆ ಮುಂದೆಯೂ ಅವರು ತಮ್ಮ ಮಾತಿನೊಂದಿಗೆ ಓದು-ಬರಹಗಳನ್ನು ಉಳಿಸಿಕೊಳ್ಳುತ್ತಾರೆ.

ಈಗಾಗಲೆ ಬುಡಕಟ್ಟುಗಳಲ್ಲಿ ಪಠ್ಯ ತಯಾರಿಸುವ ಕೆಲವು ಪ್ರಯತ್ನಗಳಾಗಿವೆ. ಆದರೆ ಅವು ಜಾರಿಗೆ ತರುವ ಹಂತದಲ್ಲಿ ಲೆಕ್ಕಿಸಿದಷ್ಟು ಸಾಧನೆ ತಲುಪಿಲ್ಲ ಇದಕ್ಕೆ ಕಾರಣಗಳೇನಿರಬಹುದು ಎಂಬುದರತ್ತ ಒಂದಷ್ಟು ನೋಡಬಹುದು.

ಇಂದಿನ ಸಮಾಜದಲ್ಲಿ ಕನ್ನಡ, ತಮಿಳು, ಬಂಗಾಳಿಯಂತಹ ದೊಡ್ಡ ಮಾತುಗಳು ಕೂಡ ಇಂಗ್ಲಿಷ್‌ನ ಭಯವನ್ನು ಅನುಭವಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಮಾತುಗಳಲ್ಲಿ ಕಲಿಯುವುದಕ್ಕಿಂತ ಇಂಗ್ಲಿಷ್‌ನಲ್ಲಿ ಕಲಿಯುವುದರ ಮೂಲಕ ಒಳ್ಳೆಯ ಉದ್ಯೋಗ ಬೇಟೆಗೆ ಅನುಕೂಲವಾಗುತ್ತದೆ ಎಂಬ ತಿಳುವಳಿಕೆ ವ್ಯಾಪಕವಾಗಿದೆ. ಭಾರತೀಯ ಸಮಾಜವೂ ಇದಕ್ಕೆ ಒಂದಷ್ಟು ಪೂರಕವಾಗಿದೆ ಎಂದು ಹೇಳಬಹುದು. ಆದರೆ ಶಿಕ್ಷಣ ಕೊಡುವ ಮಾಧ್ಯಮ ಮನೆ ಮಾತೇ ಆಗಿರಬೇಕು ಎಂಬ ಮನಸಧ್ಯಯನಕಾರರ ಮಾತನ್ನು ಕಡೆಗಣಿಸಲಾಗದು. ಇಂಗ್ಲಿಷ್‌ನ ವ್ಯಾಮೋಹವನ್ನು ಕಡಿಮೆ ಮಾಡುವತ್ತ ಭಾರತೀಯ ಶಿಕ್ಷಣ ಮುಂದಾಗಬೇಕಿದೆ.

ಇನ್ನುಳಿದಂತೆ ಮನೆಮಾತಿನಲ್ಲಿ ಶಿಕ್ಷಣ ಪಡೆಯಬೇಕಾದ ಅವಶ್ಯಕತೆಯನ್ನು ಬುಡಕಟ್ಟು ಮಂದಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಸಮಾಜ ಸೇವಾ ಸಂಸ್ಥೆ ಮೊದಲಾದವುಗಳ ಸಹಾಯ ಪಡೆದುಕೊಳ್ಳಬಹುದು. ಇದಕ್ಕೆಲ್ಲ ಪೂರಕವಾಗಿ ಉದ್ಯೋಗಾವಕಾಶಗಳು ಕೆಲವೇ ಮಕ್ಕಳಿಗೆ ಮೀಸಲಾಗಿರುವಂತಹ ಸ್ಥಿತಿಯಿಂದ ಸಮಾಜ ಹೊರಬರಬೇಕಾಗಿದೆ. ಇದುವೇ ಬಹು ಮುಖ್ಯವಾದ ಅಂಶವಾಗಿದೆ. ಇದರಿಂದ ಉಳಿದ ಮಾತುಗಳಲ್ಲಿ ಶಿಕ್ಷಣ ಪಡೆಯುವುದು, ಬುಡಕಟ್ಟು ಮಾತುಗಳಲ್ಲಿ ಶಿಕ್ಷಣ ಯಶಸ್ಸು ಕಾಣುವುದು ಮೊದಲಾದವು ಸಾಧ್ಯವಾಗುವುದು.

ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಕೊಡಲು ಆ ಬುಡಕಟ್ಟುಗಳಿಂದ ಶಿಕ್ಷಕರನ್ನು ಆರಿಸಬೇಕಿದೆ. ಇದು ಶಿಕ್ಷಣ ಪರಿಣಾಮಕಾರಿಯಾಗಲು ಇರುವ ಒಂದು ಮಹತ್ವದ ಅಂಶ. ಈಗಾಗಲೇ ಸುತ್ತಲಿನ ಮಾತುಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಆರಿಸಿ ಅವರಿಗೆ ವಿಶೇಷ ತರಬೇತಿಯನ್ನು ನೀಡಿ ಅವರ ಮಾತಿನಲ್ಲಿ ಪಾಠ ಹೇಳಲು ಅವರನ್ನು ಸಿದ್ಧಗೊಳಿಸಬೇಕು. ಈ ರೀತಿಯಲ್ಲಿ ಬೋಧನೆಗೆ ಮುಂದಾಗುವ ಶಿಕ್ಷಕರನ್ನು ಬೆಂಬಲಿಸಬೇಕು. ಇದಕ್ಕೆ ಮತ್ತೆ ಸಮಾಜ ಸೇವಾ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳಬಹುದು.

ಅವರ ಮಾತುಗಳಲ್ಲಿ ಶಿಕ್ಷಣವನ್ನು ಕೊಡುವುದರ ಮೂಲಕ ಅವರದೇ ಆದ ವಿಶ್ವನೋಟವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಬುಡಕಟ್ಟುಗಳನ್ನು ಇಂದಿನ ಆಧುನಿಕ ಸಮಾಜಕ್ಕೆ ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ. ಬುಡಕಟ್ಟು ಮಕ್ಕಳು ಅವರ ಮಾತಿನಲ್ಲಿ ಶಿಕ್ಷಣ ಪಡೆಯುವುದಾದರೆ ಬಹಳ ಬೇಗ ತಮ್ಮ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗುತ್ತದೆ. ನಾಡನ್ನು ಇದುವರೆಗೆ ದೂರವಾಗಿರಿಸಿಕೊಂಡಿರುವ ಬುಡಕಟ್ಟು ಪ್ರತಿಭೆಗಳು ನಾಡಿಗೆ ದೊರೆಯುತ್ತವೆ. ಆಗ ಅವರ ಹಕ್ಕುಗಳಿಗಾಗಿ ಅವರೇ ಮಾತನಾಡಲು ಮುಂದಾಗುತ್ತಾರೆ. ಅವರ ಮುಂದನ್ನು ಅವರೇ ನಿರ್ಧರಿಸುತ್ತಾರೆ. ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೆ ತರಬೇಕಾದ ಅವಶ್ಯಕತೆ ಇದೆ. ಅವರಿಗೆ ಪರಿಹಾರ ಕೊಡುವ, ಆಶ್ರಯ ಕೊಡುವ, ಸಹಾಯ ಮಾಡುವ ಈ ಎಲ್ಲ ಬಗೆಗಳಿಗಿಂತ ಇದು ಬಲು ಎತ್ತರದ ದಾರಿಯಾಗುತ್ತದೆ.