ಹಲವು ಕಲಿಗಳ ಸ್ಥಾನ ಹಲಗಲಿ. ಇದು ಮುಧೋಳ ಸಂಸ್ಥಾನದ ಕೊನೇ ಹಳ್ಳಿ. ಈ ಗ್ರಾಮದಲ್ಲಿ ೧೮೫೭ ಡಿಸೆಂಬರ್‌೧೧ ರಂದು ಉದಯರವಿ ಮೂಡಣದಲ್ಲಿ ಕಣ್ಣೀರೊರೆಸಿ ಕೊಳ್ಳುತ್ತಲೇ ಮೇಲೆದ್ದ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯ ವಿರುದ್ಧ ಬಂಡೆದ್ದ ಹಲಗಲಿ ಬೇಡರ ಪಡೆಯ ಬಂಧನಕ್ಕೊಳಗಾದವರಲ್ಲಿ ೧೯ ಜನರನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವರಲ್ಲಿ ಹದಿಮೂರು ಜನರನ್ನು ಡಿಸೆಂಬರ್‌೧೧, ೧೮೫೭ ರಂದು ಮುಧೋಳದ ಸಂತೆಯಲ್ಲಿ ನೆರೆದಿದ್ದ ಜನರ ಸಮ್ಮುಖದಲ್ಲಿ ನಿರ್ದಯವಾಗಿ ಗಲ್ಲಿಗೇರಿಸಿದರು ಮತ್ತು ಉಳಿದ ಆರು ಜನರನ್ನು ಡಿಸೆಂಬರ್‌೧೪,೧೮೫೭ ರಂದು ಹಲಗಲಿಯಲ್ಲಿ ಗಲ್ಲಿಗೇರಿಸಲಾಯಿತು. ಇಂದಿಗೆ ಹಲಗಲಿ ದಂಗೆಗೆ ೧೫೧ ವರ್ಷಗಳಾಗಿವೆ.

ಜಗತ್ತಿನಲ್ಲಿ ಬೇಡರಷ್ಟು ಶೂರರು ಸಿಗಬಹುದು.
ಆದರೆ ಬೇಡರಿಗಿಂತ ಶೂರರು ದೊರೆಯಲಾರರು
– ವಿಲಿಯಂ ಸ್ಮಿಥ್

ಭಾರತೀಯರು ತಕ್ಷಣ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ತಂದು ಸರಕಾರಕ್ಕೆ ಒಪ್ಪಿಸಿ ಲೈಸನ್ಸ್‌ಪಡೆಯಬೇಕೆಂದು ಬ್ರಿಟಿಷ್‌ಸರಕಾರ ೧೮೫೭ ಸೆಪ್ಟೆಂಬರ್‌೧೧ರಂದು ಆಜ್ಞೆಯನ್ನು ಹೊರಡಿಸಿತು. ಹಲಗಲಿಗೂ ಈ ಹುಕುಮು ಬಂದಿತು. ಹಲಗಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಸಂಸ್ಥಾನದ ಒಂದು ಸಣ್ಣ ಹಳ್ಳಿ. ಊರ ತುಂಬ ಬೇಡರು ಹೆಚ್ಚು ಕಂಡುಬರುತ್ತಾರೆ. ಮುಧೋಳ ಸಂಸ್ಥಾನದ ರಾಜೇಸಾಹೇಬರಾದ ಘೋರ್ಪಡೆಯವರು ಬ್ರಿಟಿಷ್‌ಸರಕಾರಕ್ಕೆ ಅತ್ಯಂತ ವಿಧೇಯರಾಗಿದ್ದರಿಂದ ಸಂಸ್ಥಾನದಲ್ಲಿ ಯಾವ ತೊಂದರೆಯೂ ಇರಲಿಲ್ಲ. ಆದರೆ ಈ ಶಸ್ತ್ರಾಸ್ತ್ರ ನಿರ್ಬಂಧ ಕಾಯ್ದೆ ಎಲ್ಲರನ್ನೂ ಕೆರಳಿಸಿತು. ಅದರಲ್ಲಿ ಹಲಗಲಿಯ ಬೇಡರು ಅಸಾಮಾನ್ಯ ನಿಷ್ಠಾವಂತರೂ ಹಾಗೂ ಅದ್ಭುತ ಯೋಧರಾಗಿದ್ದರು. ತಮ್ಮ ಹಕ್ಕು ಬಾಧ್ಯತೆಗಳನ್ನು ರೂಢಿ ಸಂಪ್ರದಾಯಗಳನ್ನು ಪ್ರಾಣದ ಹಂಗು ತೊರೆದು ರಕ್ಷಿಸಿಕೊಳ್ಳುವುದೇ ಅವರ ಜೀವನದ ಪರಮ ಧ್ಯೇಯವಾಗಿತ್ತು. ಶಸ್ತ್ರಧಾರಣೆಯು ತಮ್ಮ ಆಧ್ಯ ಪವಿತ್ರ ಕರ್ತವ್ಯವೆಂದು ಪ್ರತಿಯೊಬ್ಬರು ನಂಬಿದರಲ್ಲದೆ ಹಲವಾರು ತಲೆಮಾರುಗಳಿಂದ ನಡೆದು ಬಂದ ಈ ರೂಢಿ ಸಂಪ್ರದಾಯಕ್ಕೆ ಧಾರ್ಮಿಕ ಹಿನ್ನೆಲೆ ಇತ್ತು. ಕೆಲವು ಪಾರಂಪರಿಕ ಸಮಾರಂಭಗಳಲ್ಲಿ ಆಯುಧಗಳು ಪೂಜಾ ವಸ್ತುಗಳಾಗಿದ್ದವು. ಶಸ್ತ್ರಧಾರಣೆ ಇವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಇದನ್ನು ಉಲ್ಲಂಘನೆ ಮಾಡುವುದು. ಇದಕ್ಕೆ ಅಡೆತಡೆ ಒಡ್ಡುವುದು ಧರ್ಮಬಾಹಿರ ಕಾರ್ಯವೆಂಬ ನಂಬಿಕೆ ಅವರದಾಗಿತ್ತು. ಆತ್ನ ಗೌರವಕ್ಕೆ ಚ್ಯುತಿ ಬಂದಾಗ ಎಂಥಾ ಶಾಂತಿಪ್ರಿಯರೂ ಸಿಡಿದು ನಿಲ್ಲುತ್ತಾರೆ ಎನ್ನುವುದಕ್ಕೆ ಹಲಗಲಿ ಬೇಡರು ನಿದರ್ಶನ.

೧೮೫೭ ಸೆಪ್ಟೆಂಬರ್೧೧ ರಂದು ಜಾರಿಗೊಳಿಸಲ್ಪಟ್ಟ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ ಬೆಳಗಾವಿ

ಮ್ಯಾಜಿಸ್ಟ್ರೇಟ್‌ಲೆ.ಕ.ಜೆ.ಬಿ. ಸೆಟನ್‌ಕರನ ಮೂಲಕ ದಕ್ಷಿಣ ಮರಾಠಾ ನಾಡಾದ ಮುಧೋಳ ಸಂಸ್ಥಾನಕ್ಕೂ ಬಂದು ತಲುಪಿತು. ಸಂಸ್ಥಾನದಲ್ಲಿಯೂ ಕೆಲ ಸ್ವಾಭಿಮಾನಿ ಸೈನಿಕರು ಮೊದಮೊದಲು ಈ ಕಾನೂನು ವಿರೋಧಿಸಿದರೂ ಕೂಡ ಪರಿಸ್ಥಿತಿಯೊಡನೆ ರಾಜಿ ಮಾಡಿಕೊಂಡು ಶಸ್ತ್ರಗಳನ್ನು ಒಪ್ಪಿಸಿಬಿಟ್ಟರು. ಇಲ್ಲಿ ಕುಂದರಗಿಯ ಕೃಷ್ಣರಾವ್‌ಎಂಬ ವ್ಯಕ್ತಿ ಕಾರಭಾರಿಯಾಗಿದ್ದು ಶಸ್ತ್ರಾಸ್ತ್ರಗಳನ್ನು ಕಂಪನಿ ಸರ್ಕಾರಕ್ಕೆ ಒಪ್ಪಿಸಬೇಕೆನ್ನುವ ಸೂಚನೆ ಹಲಗಲಿಗೂ ಬಂತು. ಶಸ್ತ್ರಾಸ್ತ್ರಗಳಿಂದ ಬೇಟೆಯನ್ನೇ ಮೂಲ ಉದ್ಯೋಗವನ್ನಾಗಿಸಿಕೊಂಡು ಬದುಕುತ್ತಿದ್ದ ಹಲಗಲಿಯ ಬೇಡ ಬಂಟರಿಗೆ ಈ ಸೂಚನೆ ಅಪಥ್ಯವೆನಿಸಿತು. ಸೂಚನೆಯನ್ನು ಮೊದಮೊದಲು ನಯವಾಗಿ ತಳ್ಳಿ ಹಾಕಿದರು. ಕೃಷ್ಣರಾವ್‌ಹಲವಾರು ಭರಿ ಸಂಧನಕ್ಕೆ ಯತ್ನಿಸಿದ ಜಗ್ಗಿದಷ್ಟು ಸಂಧಾನದ ಹಗ್ಗ ಕಗ್ಗಂಟಾಗತೊಡಗಿತು. ಆಯುಧಗಳನ್ನು ಕೊಡುವುದೆಂದರೆ ಮಗ್ಗುಲಲ್ಲಿದ್ದ ಹೆಂಡತಿಯನ್ನೇ ಕೊಟ್ಟಂತೆಂದು ಪೌರುಷತನದಿಂದ ಆಂಗ್ಲರ ಸವಾಲನ್ನು ವಿರೋಧಿಸುತ್ತಾರೆ. ಬೇಡರ ಈ ಆತ್ಮಾಭಿಮಾನವನ್ನು ಬ್ರಿಟಿಷ್‌ಸರ್ಕಾರಕ್ಕೆ ವಿವರಿಸಲು ಮಧ್ಯವರ್ತಿಗಳು ವಿಫಲರಾದರು.

೧೮೫೭ ನವೆಂಬರ್‌೨೯ ರಂದು ಅಶ್ವಗಳ ಸೈನಿಕರೊಂದಿಗೆ ಬ್ರಿಟಿಷರು ಹಲಗಲಿಯ ಮೇಲೆ ನುಗ್ಗಲು ಕಾರಣವಾಯಿತು. ಇವರ ದಾಳಿಗೆ ಹೆದರದ ಬೇಡರ ಪಡೆ ಆಂಗ್ಲರ ಮೇಲೆ ಮುಗಿಬಿದ್ದು ಪ್ರತಿ ಗುಂಡಿನ ಮಳೆಗೆರೆದು. ಭರ್ಚಿ ಎಸೆದರು. ಕವಣೆಗಲ್ಲು ತೂರಿದರು. ಕುದುರೆಗಳ ಕಾಲು ಕಡಿದರು. ಉಭಯ ಬಣ್ಣಗಳಲ್ಲಿ ಅಪಾರ ಸಾವು ನೋವು ಸಂಭವಿಸಿದರೂ ಬೇಡರ ಪಡೆ ಧೈರ್ಯ ಕಳೆದುಕೊಳ್ಳಲಿಲ್ಲ. ಈ ದಂಗೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೇಡ ಸಮುದಾಯದವರು ಪಾಲಗೊಂಡಿದ್ದರು. ಹಲಗಲಿಯ ಬೇಡರ ಪ್ರಮುಖ ನಾಯಕರೆಂದರೆ, ಜಡಗ, ಪೂಜಾರಿ ಹನುಮ, ಬಾಳ, ಭೀಮ, ಮಹಿಳೆಯಾದ ರಾಮಿ ಪಡೆಯ ಮುಂಚೂಣಿಯಲ್ಲಿ ನಿಂತು ಬೇಡ ಪಡೆಗೆ ಹುರುಪು ತುಂಬುತ್ತಾ ಆದೇಶ ನೀಡುತ್ತಿದ್ದರು. ನಿಂಬಾಳ್ಕರರು ಹಲಗಲಿ ಬಂಡಾಯಕ್ಕೆ ಹುರುಪು ನೀಡಿದ್ದರು. ಅಪಾಯವನ್ನರಿತ ಲೆ.ಕ.ಸೆಟನ್‌ಕರ್‌ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡಾಗ ಮರುದಿವವೇ ಲೆ.ಕ.ಮಾಲ್ಕಂ ಹೆಚ್ಚಿನ ಸೈನ್ಯದೊಂದಿಗೆ ನೆರವಿಗೆ ಧಾವಿಸಿದ. ಆಧುನಿಕ ಶಸ್ತ್ರಾಸ್ತ್ರ ಅಪರಿಮಿತ ಬಲ ತಮ್ಮ ಮೇಲೆ ಬಂದೆರುಗುತ್ತಿದ್ದರೂ ಹೆದರದೇ ಬೇಡರ ಪಡೆ ಪ್ರತಿದಾಳಿ ಮಾಡಿದರು. ಈ ದಾಳಿಯಲ್ಲಿ ಫಸ್ಟ್‌ಅಸಿಸ್ಟೆಂಟ್‌ಮ್ಯಾಜಿಸ್ಟ್ರೇಟ್‌ವಿಲಿಯಂ ಹೆನ್ರಿ ಹೆವಲಾಕ್‌ಗುಂಡಿನೇಟಿನಿಂದ ಅಸುನೀಗಿದ. ಬಣಗಳು ಹಿಂದೆ ಸರಿಯದೇ ಈ ಸಮಯದಲ್ಲಿ ಅಸಂಖ್ಯಾತ ಸಾವು ನೋವು ಸಂಭವಿಸಿದವು. ಹೆಣಗಳ ರಾಶಿಯೇ ಬಿದ್ದಿತು. ಈ ಹೋರಾಟದಲ್ಲಿ ಯಾರೂ ಗೆಲ್ಲಲಿಲ್ಲ. ಯಾರೂ ಸೋಲಲಿಲ್ಲ.

ಕುಂತಂತ್ರಕ್ಕೆ ಇನ್ನೊಂದು ಹೆಸರೇ ಆಗಿರುವ ಇಂಗ್ಲಿಷರು ಮಧ್ಯ ರಾತ್ರಿಯಲ್ಲಿ ಹಲಗಲಿ ಊರಿಗೆ ಕೊಳ್ಳಿ ಇಟ್ಟರು. ಮದ್ದಿನ ಮನೆಗೆ ಸಗಣಿ ತುಂಬಲಾಯಿತು. ಊರು ಹೊತ್ತಿ ಉರಿಯ ತೊಡಗಿತು. ಮಕ್ಕಳ ಚೀತ್ಕಾರ ದನಕರುಗಳ ಅಂಬಾ ಎಂಬ ಆರ್ತನಾದಕ್ಕೆ ಓಗೊಟ್ಟು ಅವುಗಳ ರಕ್ಷಣೆಗೆ ಧಾವಿಸಿದ ಬೇಡರನ್ನೂ ಕ್ರೂರಿ ಆಂಗ್ಲರು ಗುಂಡಿಟ್ಟು ಕೊಂದರು. ಅವರ ಕ್ರೂರತನಕ್ಕೆ ಇನ್ನೊಂದು ನಿದರ್ಶನವೆಂದರೆ ಬಚಾವಾಗಲು ಹತ್ತಿ ಕಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡ ಇಪ್ಪತ್ಮೂರು ಜನರನ್ನು ಒಟ್ಟಿಗೆ ಸುಟ್ಟು ಕರಕಲಾದ ದೃಶ್ಯ. ಹಲಗಲಿ ಬೇಡರ ನಾಯಕರು ಮರಣ ಹೊಂದಿದ ಬಳಿಕ ಬ್ರಿಟಿಷ್‌ಸೈನಿಕರಿಗೆ ಯಾರ ಹಂಗೂ ಇಲ್ಲದಂತಾಗಿತ್ತು. ಆಗ ಸೈನಿಕರು ಊರನ್ನೆಲ್ಲಾ ಲೂಟಿ ಮಾಡಿದರು. ಈ ಹೋರಾಟದಲ್ಲಿ ೩೦೦ಕ್ಕೂ ಹೆಚ್ಚು ಜನರನ್ನು ಬಂಧಿಸಿತು. ೧೮೫೭ ನೇ ಡಿಸೆಂಬರ್‌೧೧ರಂದು ಮುಧೋಳದ ಸಂತೆ ಸೇರುವ ಸ್ಥಳದಲ್ಲಿ ೧೩ ಜನರನ್ನೂ ಮತ್ತು ಡಿಸೆಂಬರ್‌೧೪ ರಂದು ಹಲಗಲಿಯಲ್ಲಿ ೬ ಜನರನ್ನು ಗಲ್ಲಿಗೇರಿಸಲಾಯಿತು.

ತ್ಯಾಗ ಬಲಿದಾನ ಸ್ವಾಭಿಮಾನದ ಸಂಕೇತವಾಗಿರುವ ಹಲಗಲಿ ಬೇಡರು ನಿಶ್ಯಸ್ತ್ರೀಕರಣಕ್ಕೆ ಶಸ್ತ್ರಚಿಕಿತ್ಸೆ ನೀಡಿದರು. ಹಲಗಲಿ ಬೇಡರು ಆಂಗ್ಲರ ವಿರುದ್ಧ ವಿರುದ್ಧ ಸಮರ ಸಾರಿ ಮಣ್ಣಲ್ಲಿ ಮಣ್ಣಾಗಿ ಹೋಗಿ ಚಿರಸ್ಮರಣೀಯರಾದರು. ಇವರನ್ನು ಕಡೆಗಣಿಸದೇ ನೆನಪಿಸಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯ ತಾನೇ.

ಗೃಂಥಋಣ

ಕ್ಯಾತನಹಳ್ಳಿ ರಾಮಣ್ಣ, ಪ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಪುಟ ೬೪.

ಮಾರ್ಕ್ಸ್‌ಎಂಗೆಲ್ಸ್‌ಪ್ರಥಮ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ೧೮೫೭-೧೮೫೯ ನವ ಕರ್ನಾಟಕ ಪಬ್ಲಿಕೇಷನ್‌ಪ್ರೈವೆಟ್‌ಲಿಮಿಟೆಡ್‌, ಬೆಂಗಳೂರು.

ದಿವಾಕರ ರಂಗನಾಥ ಸಂ ೧೯೬೦, ಸ್ವಾತಂತ್ರ್ಯ ಸಂಗ್ರಾಮ, ಬೆಂಗಳೂರು ಪುಟ ೧೫೭.

ಶರ್ಮಾ ತಿ. ತಾ. ೧೯೭೩ ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮ, ಬೆಂಗಳೂರು.