ಪ್ರಪಚಂದ ಪ್ರತಿಯೊಂದು ಜನಾಂಗ ತಮ್ಮದೇ ಆದ ವ್ಯಕ್ತಿಗತ ಹಿನ್ನೆಲೆ, ಸಂಸ್ಕೃತಿ, ರೀತಿ-ನೀತಿಗಳನ್ನು ಹೊಂದಿರುತ್ತದೆ. ಪರಂಪರೆಯಿಂದ ತಮ್ಮದೇ ಆದ ವೇಷ, ಭಾಷೆ, ಆಚಾರ, ವಿಚಾರ, ನಡವಳಿಕೆ, ಜನನ, ಮರಣ, ಸಂಸ್ಕಾರ, ಸಂಸ್ಕೃತಿ ಇತ್ಯಾದಿಗಳನ್ನು ಇಂದಿಗೂ ತಮ್ಮೊಂದಿಗೆ ಆಚರಣೆಗೆ ಇಟ್ಟುಕೊಂಡು ಬಂದಿರುತ್ತಾರೆ. ಲಂಬಾಣಿ ಸಮುದಾಯ ತನ್ನ ಸಂಸ್ಕೃತಿಯನ್ನು, ತನ್ನದೇ ವಿಶಿಷ್ಟತೆಯನ್ನು ಉಳಿಸಿಕೊಂಡು ಬಂದಿದೆ. ಸದರಿ ಸಮುದಾಯದ ಅಧ್ಯಯನ ನಡೆಸಿದ ವಿದ್ವಾಂಸರುಗಳು ತಮ್ಮ ಸಂಶೋಧನೆಯಲ್ಲಿ ದೊರೆತ ಮಾಹಿತಿಗಳನ್ನು ತಿಳಿಸಿರುತ್ತಾರೆ. ಇವರ ಪರಂಪರೆಯನ್ನು ಗಮನಿಸಿದಾಗ ಇವರು ಮೂಲತಃ ಅಲೆಮಾರಿ ವ್ಯಾಪಾರಿ ಸಮುದಾಯವಾಗಿದ್ದು ತಮ್ಮ ಅಸಂಖ್ಯ ದನಕರುಗಳ ಮೇಲೆ ಖಾದ್ಯ ಪದಾರ್ಥಗಳನ್ನು ಹೇರಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಮಾರಿಗಳಾಗಿ ಸಂಚರಿಸುತ್ತಿದ್ದರು. ರೈಲು ಹಾಗೂ ರಸ್ತೆ ಸಂಚಾರ ಆಗಿನ ಕಾಲದಲ್ಲಿರಲಿಲ್ಲ. ಆದುದರಿಂದ ಮುಖ್ಯ ವ್ಯಾಪಾರವೆಲ್ಲ ಇವರ ಸಾಗಾಣಿಕೆಯ ಮೂಲಕ ನಡೆಯುತ್ತಿತ್ತು. ಸಂಚಾರಿ ವ್ಯಾಪಾರಿಗಳಾಗಿದ್ದ ಇವರ ಜೀವನ ಕಷ್ಟಕರವಾಗಿತ್ತು. ಈ ಧೈರ್ಯಶಾಲಿ ಸಮುದಾಯ ಆತಂಕಗಳನ್ನು ಎದುರಿಸುತ್ತಾ ತಮ್ಮ ಧರ್ಮ ಸಂಸ್ಕೃತಿಯನ್ನು ಪಾಲಿಸುತ್ತಾ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿದ್ದರು. ರೈಲು ಮತ್ತು ರಸ್ತೆ ಸಾರಿಗೆ ಪ್ರಾರಂಭವಾದ ಮೇಲೆ ಇವರ ಸಂಚಾರಿ ವ್ಯಾಪಾರಕ್ಕೆ ಬಹುದೊಡ್ಡ ಪೆಟ್ಟು ಬಿದ್ದು ಬದುಕು ದುಸ್ತರವಾಯಿತು.

ಆರ್ಥಿಕ ಮುಗ್ಗಟ್ಟು, ಕಡುಬಡತನದಿಂದಾಗಿ ಇವರ ಬದುಕು ಕಷ್ಟಮಯವಾಯಿತು. ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಇಡೀ ಭಾರತವನ್ನು ಆಕ್ರಮಿಸಿ, ಭಾರತದ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ತಮ್ಮ ಕಪಿಮುಷ್ಟಿಯಲ್ಲಿರಿಸಿಕೊಂಡರು. ಇದರಿಂದ ಕಂಗೆಟ್ಟ ಲಂಬಾಣಿಗರು ನಾಡಿನಿಂದ ಕಾಡು ಸೇರಲು ಪ್ರಾರಂಭಿಸಿ ಕಾಡಿನ ಉತ್ಪನ್ನಗಳ ಮಾರಾಟ ಮಾಡಿ ಜೀವನ ಸಾಗಿಸಲು ಪ್ರಾರಂಭಿಸಿದರು. ಕಷ್ಟಕರವಾದ ಜೀವನ, ಬಡತನ, ಹೊರಗಿನವರ ದಬ್ಬಾಳಿಕೆ ಇತ್ಯಾದಿಗಳ ಕಾರಣ ಕೆಲವು ಲಂಬಾಣಿಗಳು ಸಣ್ಣ ಪುಟ್ಟ ಅಪರಾಧ ಮಾಡಿದ ಕಾರಣ ತಮ್ಮ ವ್ಯಾಪಾರಕ್ಕೆ ಪೈಪೋಟಿ ನೀಡಿದ್ದ ವ್ಯಾಪಾರಿ ವೈರಿ ಎಂದು ಬ್ರಿಟಿಷ್‌ಭಾರತ ಸರ್ಕಾರವು ಇವರನ್ನು ೧೮೭೧ರ ಅಪರಾಧಿ ಪಂಗಡ ಅಧಿನಿಯಮದ ಅಡಿಯಲ್ಲಿ ಅಪರಾಧಿ ಪಂಗಡವೆಂದು ನಮೂದಿಸಿ ಇವರ ವ್ಯಾಪಾರ ಸಂಚಾರ ಚಲನವಲನಗಳನ್ನು ನಿಯಂತ್ರಿಸಿತು. ಶಾಂತಪ್ರಿಯ ಜನಾಂಗವೆಂದು ಸ್ಥಳೀಯವಾಗಿ ಗುರುತಿಸಲ್ಪಟ್ಟ ಈ ಜನಾಂಗವನ್ನು ಕೆಲವೇ ಕೆಲವರು ಮಾಡಿದ ಅಪರಾಧಗಳ ಪರಿಣಾಮವಾಗಿ ಇಡೀ ಸಮುದಾಯವನ್ನು ಅಪರಾಧಿ ಪಂಗಡವೆಂದು ಸೂಚಿಯ ಅಡಿಯಲ್ಲಿ ತರಲಾಯಿತು. ಸ್ವತಂತ್ರ ಭಾರತದ ೧೯೫೨ರಲ್ಲಿ ಈ ಅಧಿನಿಯಮವನ್ನು ರದ್ದುಪಡಿಸಿ, ಭಾರತದಲ್ಲಿ ವಾಸಿಸುವ ಯಾವುದೇ ಪಂಗಡ ಅಪರಾಧಿ ಪಂಗಡವಲ್ಲ ಎಲ್ಲರೂ ಸಮಾನರು ಮತ್ತು ಸ್ವತಂತ್ರರು ಎಂದು ಘೋಷಿಸಿದ ಪರಿಣಾಮ ಈ ಸಮುದಾಯಕ್ಕೆ ಇದ್ದ ಅಪರಾಧಿ ಪಂಗಡ ಕಳಂಕ ತೊಲಗಿದಂತಾದರೂ ಇನ್ನೂ ನೆಲೆ ಇಲ್ಲದ ಇವರ ಬಡತನ, ಆರ್ಥಿಕ ಮುಗ್ಗಟ್ಟು ಮತ್ತಷ್ಟು ಹೆಚ್ಚಾಯಿತು. ಇವತ್ತಿಗೂ ಶೇ. ೮೦ ರಷ್ಟು ಲಂಬಾಣಿಗರು ಅವಿದ್ಯಾವಂತರು, ಬಡವರು, ನಾಗರಿಕ ಪ್ರಪಂಚದ ಅರಿವಿಲ್ಲದೆ ಬದುಕುತ್ತಿದ್ದಾರೆ. ಹಾಗೂ ಹೊಟ್ಟೆ ಪಾಡಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೂಲಿಗಾಗಿ ವಲಸೆ ಹೋಗುತ್ತಲೇ ಇದ್ದಾರೆ.

ವಲಸೆ ಒಂದು ಸಾಮಾಜಿಕ ಪ್ರಕ್ರಿಯೆ. ಪ್ರತಿಯೊಂದು ಸಮಾಜದಲ್ಲೂ ಇದು ನಿರಂತರವಾಗಿ ನಡೆಯುವ ಪರಿಕಲ್ಪನೆಯಾಗಿದೆ. ಒಂದು ನಿರ್ದಿಷ್ಟ ಭೂ ಪ್ರದೇಶದ ಜನಸಂಖ್ಯೆಯ ಗಾತ್ರದ ಬದಲಾವಣೆ, ಬೆಳವಣಿಗೆ, ನಗರೀಕರಣ, ಕೈಗಾರೀಕರಣ ಮತ್ತು ಸಂಪರ್ಕ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಲಸೆಯ ಪಾತ್ರ ಮತ್ತರವಾದದ್ದು. ವಲಸೆ ಎಂದರೆ ಒಬ್ಬ ವ್ಯಕ್ತಿ ಇಲ್ಲವೇ ಒಂದು ಭಾಷಿಕ ಸಮುದಾಯ ದೈಹಿಕವಾಗಿ ಒಂದು ಸಾಮಾಜಿಕ ಪರಿಸರದಿಂದ ಇನ್ನೊಂದು ಸಾಮಾಜಿಕ ಪರಿಸರದಲ್ಲಿ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನೆಲೆಸುವುದು. ವಲಸೆ ಅಲ್ಪ ಕಾಲದ್ದಾಗಿರಬಹುದು ಅಥವಾ ದೀರ್ಘ ಕಾಲದ್ದಾಗಿರಬಹುದು, ಇಲ್ಲವೇ ಋತುಮಾನ ಕಾಲದ ವಲಸೆ ಆಗಿರಬಹುದು. ವಿಶೇಷವಾಗಿ ಋತುಮಾನ ಕಾಲದ ವಲಸೆಯ ಬಗೆಗೆ ಬಹುತೇಕ ಅಧ್ಯಯನ/ಸಂಶೋಧನ ಕಾರ್ಯ ಆಗಿಲ್ಲ. ಲಂಬಾಣಿ ಸಮುದಾಯದ ಜನರು ಬಹುತೇಕವಾಗಿ ಋತುಮಾನ ಕಾಲದ ವಲಸೆಗಾರರಾಗಿರುತ್ತಾರೆ. ಇವರ ಮೇಲಿನ ಸಂಶೋಧನ ಕಾರ್ಯದ ಅವಶ್ಯಕತೆ ಇರುತ್ತದೆ. ಋತುಮಾನ ವಲಸೆಗೆ ಹಲವು ಕಾರಣಗಳಿವೆ. ಅವು ಬಡತನ, ಬರಗಾಲ, ಬೆಳೆಯ ವೈಫಲ್ಯ, ನಿರುದ್ಯೋಗ, ನೈಸರ್ಗಿಕ ವಿಕೋಪ, ಪರಸ್ಥಳದಲ್ಲಿ ಉತ್ತಮ ಕೂಲಿ, ದುಡಿಮೆ ವಿಶೇಷವಾಗಿ ಋತುಮಾನ ವಲಸೆಗೆ ಕಾರಣಗಳಾಗಿರುತ್ತವೆ.

ಇದು ಆಧುನಿಕ ಯುಗ. ಅತೀ ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಔದ್ಯೋಗೀಕರಣ ಮತ್ತು ಸಂಪರ್ಕ ಮಾಧ್ಯಮ ಇಂತಹ ಯುಗದಲ್ಲಿಯೂ ನಮ್ಮ ಲಂಬಾಣಿ ಸಮುದಾಯದವರು ಶಿಕ್ಷಣದಿಂದ ವಂಚಿತರಾಗಿ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿ ಕಡುಬಡತನದ ಕತ್ತಲಿನಲ್ಲಿಯೇ ಜೀವಿಸುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ೧೨೦೦ ಬುಡಕಟ್ಟು ಸಮುದಾಯಗಳಿವೆ. ಲಂಬಾಣಿ ಪಂಗಡವು ಸಹ ಇವುಗಳಲ್ಲಿ ಒಂದಾಗಿದ್ದು ಸುಧಾರಣೆಯತ್ತ ಸಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತವಾಗಿ ೨೫-೩೦ ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯದಲ್ಲಿ ಮಾತ್ರ ಶೇ. ೧.೭೫ (೨೦೦೧ ಸಮೀಕ್ಷೆ) ಇದೆ. ಇಷ್ಟೊಂದು ಕಡುಬಡತನಕ್ಕೆ ಕಾರಣ ಅತ್ಯಲ್ಪ ಶಿಕ್ಷಣ ಪ್ರಮಾಣ. ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ಅವರು ಹೇಳುವಂತೆ ಒಂದು ಸಮುದಾಯವು ಮುಂದುವರೆಯಬೇಕಾದರೆ ಆ ಸಮುದಾಯಕ್ಕೆ ಶಿಕ್ಷಣ, ಸಂಘಟನೆ ಹಾಗೂ ಸಂಘಟನಾತ್ಮಕ ಹೋರಾಟದ ಅವಶ್ಯಕತೆ ಇರುತ್ತದೆ. ಕರ್ನಾಟಕ ರಾಜ್ಯ ಮಟ್ಟದ ರಾಜ್ಯ ಬಂಜಾರ ಸಮುದಾಯದ ಸಂಘಟನಾ ಸಮಿತಿಯವರು ಪ್ರಸ್ತುತ ಬಂಜಾರ (ಲಂಬಾಣಿ) ಸಮುದಾಯದ ಸ್ಥಿತಿಗತಿ ಹಾಗೂ ಭವಿಷ್ಯದ ಸವಾಲುಗಳು ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ೧೬ನೇ ನವೆಂಬರ್‌೨೦೦೮ರಲ್ಲಿ ನಡೆಸಿದರು. ಸದರಿ ಸಮ್ಮೇಳನದಲ್ಲಿ ಆಶಯ ಭಾಷಣದಲ್ಲಿ ಶ್ರೀಯುತರಾದ ಡಾ. ಡಿ. ಬಿ. ನಾಯ್ಕ ಅವರು ಲಂಬಾಣಿ ಸಂಸ್ಕೃತಿಯ ಬಗ್ಗೆ ವಿವರ ನೀಡುತ್ತಾ ಡಾ. ಬಿ. ಆರ್‌. ಅಂಬೇಡ್ಕರ್‌ಅವರನ್ನು ನೆನೆಸುತ್ತಾ ಅವರು ಹೇಳಿರುವಂತೆ ಯಾರಿಗೆ ತನ್ನ ಸಂಸ್ಕೃತಿಯ ಇತಿಹಾಸ ಗೊತ್ತಿರುವುದಿಲ್ಲವೋ ಅಂತಹವರು ಇತಿಹಾಸ ಸೃಷ್ಟಿಸಲಾರರು. ಗುಲ್ಬರ್ಗಾದ ಚಿಂಚೋಳಿ ತಾಲೂಕಿನ ಕೊಂಚಾವರಂ ಪ್ರದೇಶದಲ್ಲಿ ಲಂಬಾಣಿ ತಾಂಡಾಗಳಲ್ಲಿ ಹಸುಗೂಸುಗಳ ಮಾರಾಟ, ಲಂಬಾಣಿ ಮಹಿಳೆಯರ ಮಾರಾಟ ಇಡೀ ದೇಶವೇ ತಲೆ ತಗ್ಗಿಸುವ ವಿಷಯವೆಂದು ಹೇಳಿರುವರು.

ಅದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಶೀರ್ವಚನ ನೀಡಿದ ಶ್ರೀ ಶಿವಮೂರ್ತಿ ಮುರಾಘಾ ಶರಣರು ಶ್ರೀ ಮುರುಘಾಮಠ, ಚಿತ್ರದುರ್ಗ ಇವರು ಲಂಬಾಣಿ ಸಮುದಾಯಕ್ಕೆ Social sanctity-cultural heritage ಇದೆ. ಲಂಬಾಣಿಗರು ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ೨೧ನೇ ಶತಮಾನದಲ್ಲಿ ಹೋರಾಟಗಳು ಅನಿವಾರ್ಯ, ಲಂಬಾಣಿಗರು ತಮ್ಮ ಹಕ್ಕಿಗಾಗಿ ಹೋರಾಡಲೇಬೇಕಾಗಿದೆ. ಕಾರಣ ಲಂಬಾಣಿಗರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ. World is converting in to global village ಇಡೀ ಜಗತ್ತಿ ಒಂದು ಹಳ್ಳಿಯಾಗಲಿದೆ. ಅಂತಹದರದಲ್ಲಿ, ಸಂಸ್ಕೃತಿ ಎಲ್ಲಿಯ ಮಾತು, ಆದುದರಿಂದ ಲಂಬಾಣಿಗರು ತಮ್ಮ ಸಂಸ್ಕೃತಿಯ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ. ಸಾಮಾಜಿಕ ನ್ಯಾಯದ ಅವಶ್ಯಕತೆ ಇದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವಿರಲಿ, ಲಂಬಾಣಿ ಬಾಂಧವರಿಗೆ ಇದರ ಅರಿವಿರಲಿ. ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾವಲಂಬನೆ, ಸಮಾನತೆ ಅವಶ್ಯಕತೆ ಇದೆ. ಅದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಇತ್ಯಾದಿ ಆಗಿರಬಹುದು ಎಂದು ಲಂಬಾಣಿ ಸಮುದಾಯಕ್ಕೆ ಎಚ್ಚರಗೊಳ್ಳಲು ತಿಳಿಸಿದರು.

ವಾಸ್ತವಿಕವಾಗಿ ಲಂಬಾಣಿ ಸಮುದಾಯದಲ್ಲಿ ಶಿಕ್ಷಣ ಕೊರತೆ ಇದೆ. ಸಮರ್ಪಣಾತ್ಮಕ ಸೇವಾ ಮನೋಭಾವ ಸಂಪೂರ್ಣ ಸಮಾಜಕ್ಕೆ ಅರ್ಪಿತವಾದ ಲಂಬಾಣಿ ಸಂಘಟನೆಗಳು ಇಲ್ಲವೇ ಇಲ್ಲ. ಎಲ್ಲೋ ಒಂದೆರಡು ಇದ್ದರೂ ಅವುಗಳಲ್ಲಿ ಸಂಘಟನೆಯ ಕೊರತೆ ಇದೆ. ಮತ್ತು ಅವು ನಗರ ಪ್ರದೇಶಗಳಲ್ಲಿ ಮಾತ್ರ ಇವೆ. ಶೇ. ೯೯.೦೦ ತಾಂಡಾಗಳಲ್ಲಿ ಇರುವ ಲಂಬಾಣಿಗರಿಗೆ ಇವುಗಳ ಗಂಧವೇ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ, ಸಂಘಟನೆ ಮತ್ತು ನಮ್ಮ ಹಕ್ಕಿಗಾಗಿ ಸಂಘಟನಾತ್ಮಕ ಹೋರಾಟದ ಅವಶ್ಯಕತೆ ಅತೀ ಅಗತ್ಯವಾಗಿದೆ.

ಪ್ರಸ್ತುತವಾಗಿ ಕರ್ನಾಟಕ ರಾಜ್ಯದಲ್ಲಿ ೩೦-೩೫ ಲಕ್ಷ ಲಂಬಾಣಿ ಬುಡಕಟ್ಟಿನ ಸಮುದಾಯ ವಾಸವಾಗಿದ್ದು ಶೇ. ೯೯ ಲಂಬಾಣಿಗರು ತಾಂಡಾಗಳಲ್ಲಿ ವಾಸವಾಗಿದ್ದಾರೆ. ಆರ್ಥಿಕ ಮುಗ್ಗಟ್ಟು ಕಿತ್ತು ತಿನ್ನುವ ಬಡತನ, ಸ್ಥಳೀಯ ಶೋಷಣೆ ಇತ್ಯಾದಿಗಳಿಂದ ತುಳಿತಕ್ಕೊಳಗಾಗಿರುವ ಲಂಬಾಣಿಗರು ವಲಸೆ ಹೋಗುತ್ತಿದ್ದಾರೆ. ಶೇ. ೬೦ ಲಂಬಾಣಿಗರು ೮-೧೦ ತಿಂಗಳು ಬೇರೊಂದು ಊರಿಗೆ ವಲಸೆ ಹೋಗಿ ಇನ್ನೊಂದು ಸಂಸ್ಕೃತಿಯೊಂದಿಗೆ ಇದ್ದು ಕಷ್ಟ ಪಟ್ಟು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ, ಮಹಾರಾಷ್ಟ್ರಕ್ಕೆ, ಕೇರಳಕ್ಕೆ ಹಾಗೂ ಕರ್ನಾಟಕ ರಾಜ್ಯದ ಮಂಗಳೂರು, ಉಡುಪಿ, ಕಾಫಿ ಬೆಳೆಯುವ ಕಾಫಿ ಸೀಮೆಗಳಿಗೆ ವಲಸೆ ಹೋಗುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ಗೋವಾ ರಾಜ್ಯ ಒಂದರಲ್ಲಿ ೫೦,೦೦೦ಕ್ಕಿಂತ ಹೆಚ್ಚಿನ ವಲಸೆ ಲಂಬಾಣಗರಿದ್ದಾರೆ. ಕರ್ನಾಟಕದ ಕಾಫಿ ನಾಡುಗಳಾದ ಮಡಿಕೇರಿ, ಹಾಸನ, ಚಿಕ್ಕಮಗಳೂರು, ಮಂಗಳೂರಿಗೆ ಒಂದು ಲಕ್ಷಕ್ಕಿಂತ ಹೆಚ್ಚಿಗೆ ಲಂಬಾಣಿಗರು ವಲಸೆ ಹೋಗಿರುತ್ತಾರೆ. ಇವರು ೮-೧೦ ತಿಂಗಳು ಅಲ್ಲಿದ್ದು ದುಡಿದುಕೊಂಡು ಮತ್ತೆ ತಮ್ಮ ತಾಂಡಾಕ್ಕೆ ವಾಪಸ್ಸಾಗುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಇವರ ಮಕ್ಕಳ ಬಗ್ಗೆ ಇವರ ವಯಸ್ಸಾದ ತಂದೆ ತಾಯಿಗಳ ಬಗ್ಗೆ ಯಾರಾದರೂ ಚಿಂತಿಸಿದ್ದಾರೆಯೇ? ದುಡಿಮೆಗಾಗಿ ವಲಸೆ ಹೋಗುವುದು ಅನಿವಾರ್ಯ. ಬದುಕುವುದಕ್ಕೆ ಅವರು ಉತ್ತಮ ಕೂಲಿ ಇದ್ದ ಕಡೆಗೆ ವಲಸೆ ಹೋಗಲೇಬೇಕು. ಆದರೆ ಏನೂ ಅರಿಯದ ಇವರ ಅಮಾಯಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೋಟಿಗಟ್ಟಲೆ ಹಣವನ್ನು ಶಿಕ್ಷಣಕ್ಕಾಗಿ ವ್ಯರ್ಥವಾಗಿ ಖರ್ಚು ಮಾಡುವ ಸರ್ಕಾರವು ಶಿಕ್ಷಣ ವಂಚಿತ ಅಮಾಯಕ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾಜದ ಮುಖ್ಯವಾಹಿನಿಗೆ ಸೇರಿಸಿದಂತಾಗುತ್ತದೆ.

ರಾಜ್ಯದಲ್ಲಿ ಸಮರ್ಪಕವಾದ ಮಳೆ ಆಗದೇ ಬರಗಾಲದಿಂದ ಬೆಂಗಾಡು ಆಗುತ್ತಿರುವ ಮೇಲಿನ ಜಿಲ್ಲೆಗಳಿಂದ ಸಾವಿರಾರು ಜನರು ಕೆಲಸ ಅರಸಿಕೊಂಡು ಕಾಫಿ ಸೀಮೆಗೆ, ಉಡುಪಿಗೆ, ಮಂಗಳೂರಿಗೆ, ಗೋವಾಕ್ಕೆ ವಲಸೆ ಹೋಗುತ್ತಾರೆ. ಈ ಕುಟುಂಬಗಳು ದೀಪಾವಳಿ ಹಬ್ಬ ಮುಗಿಸಿ ಹೋದರೆ ಮತ್ತೆ ಸ್ವಗ್ರಾಮ (ತಾಂಡಾಕ್ಕೆ) ಸೇರುವುದು ಜೂನ್‌ಜುಲೈ ತಿಂಗಳಲ್ಲೇ. ಮಳೆಗಾಲದ ಕಾರಣ ಕೂಲಿ ಸಿಗದೆ ವಾಪಸ್ಸಾಗುತ್ತಾರೆ. ೮-೧೦ ತಿಂಗಳು ಇವರು ಹೀಗೆ ವಲಸೆ ಹೋದಾಗ ಇವರ ಮಕ್ಕಳಿಗೆ ಋತುಮಾನ ವಸತಿ ಶಾಲೆಗಳು ಊಟ, ವಸತಿ, ಬಟ್ಟೆ, ಪುಸ್ತಕ ಇತ್ಯಾದಿಗಳನ್ನು ನೀಡುತ್ತವೆ. ಇದು ವಲಸೆ ಲಂಬಾಣಿಗರ ಮಕ್ಕಳ ಶಿಕ್ಷಣಕ್ಕೆ ಒಂದು ಆಶಾದಾಯಕ ಯೋಜನೆ. ಬ್ಯಾಡಗಿ ತಾಲೂಕಿನ ಕಲ್ಲೇದೇವರು (ಲಮಾಣಿ ತಾಂಡ) ಚಿಕ್ಕಅಣಜಿತಾಂಡ, ಬಡಮಲ್ಲಿತಾಂಡ, ಶಿವಾಜಿನಗರ, ಛತ್ರತಾಂಡಗಳಲ್ಲಿ ಈ ಶಾಲೆಗಳಿವೆ. ಹಾನಗಲ್ಲ ತಾಲೂಕು ಬಳ್ಳೂರು (ಲಮಾಣಿ ತಾಂಡ) ಬಮ್ಮನಹಳ್ಳಿ, ಬಾಳೂರು, ಜಂಗಿನಕೊತ್ರ, ಅಕ್ಕಿ-ಆಲೂರು, ಹಾವೇರಿ ತಾಲೂಕು ಬಸಾಪುರ, ಗುತ್ತ ತಾಂಡ (ಶಿವಾನಗರ) ಕೂರಗೊಂದ, ಕಬ್ಬೂರು ತಾಂಡ, ರಾಣೆಬೆನ್ನೂರು ತಾಲೂಕು ಮೆಡ್ಲೇರಿ, ನೂಕಾಪುರ, ಗೋವಿಂದ ಬಡಾವಣೆ, ಶ್ರೀನಿವಾಸಪುರ, ಹನುಮಸಾಗರ ಹೀಗೆ ಹಾವೇರಿ ಜಿಲ್ಲೆಯಲ್ಲಿ ಈ ಶಾಲೆಗಳು ಇದ್ದರೂ ಸಹ ಪಾಲಕರು ಇವುಗಳ ಉಪಯೋಗಗಳನ್ನು ಸಮರ್ಪಕವಾಗಿ ತೆಗೆದುಕೊಳ್ಳುತ್ತಿಲ್ಲ. ಬಳ್ಳಾರಿ ಜಿಲ್ಲೆಯ ಕೊಯಿಲಾರಗಟ್ಟ ತಾಂಡ, ದಾಸರಹಳ್ಳಿ ತಾಂಡ, ಗೋವಿಂದಪುರ ತಾಂಡ, ಮದ್ಲಾಪುರ ತಾಂಡ, ಕಾಲ್ವಿ ತಾಂಡ, ಬರಹಳ್ಳಿ ತಾಂಡ ಇತ್ಯಾದಿಗಳಲ್ಲಿಯ ಋತುಮಾನ ವಸತಿ ಶಾಲೆಗಳು ಸಹ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದೇ ತರಹ ಗದಗ, ಧಾರವಾಡ ಜಿಲ್ಲೆಗಳಲ್ಲಿ ಅವುಗಳ ಸದುಪಯೋಗವಾಗಬೇಕಾಗಿದೆ. ಹಾವೇರಿ ಜಿಲ್ಲೆಯ ಗುತ್ತಲ ತಾಂಡದ ಋತುಮಾನ ವಸತಿ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ಶಾಲೆಯ ಶಿಕ್ಷಕ ಶ್ರೀ ಸಿ. ಕೆ. ಲಮಾಣಿ ಇವರು ಹೇಳುವಂತೆ ಶಿಕ್ಷಣ ಇಲಾಖೆ ವೈಜ್ಞಾನಿಕ ವ್ಯವಸ್ಥಿತ ವಿಧಾನಗಳ ಮೂಲಕ ವಲಸೆ ಹೋಗುವ ಲಂಬಾಣಿ ಕುಟುಂಬಗಳ ಸಮೀಕ್ಷೆ ನಡೆಸಿ ಆ ಕುಟುಂಬದಲ್ಲಿನ ಶಾಲಾ ಮಕ್ಕಳನ್ನು ತಾಂಡದಲ್ಲೇ ಇಟ್ಟುಕೊಂಡು ಈ ವಸತಿ ಶಾಲೆಗೆ ಸೇರಿಸಿದರೆ ಅವರ ಉತ್ತಮ ಶಿಕ್ಷಣ ದೊರಕುತ್ತದೆ. ಆದರೆ, ಶೇ. ೭೫ ಜನರು ತಮ್ಮ ಮಕ್ಕಳನ್ನು ವಲಸೆ ಹೋಗುವಾಗ ತಮ್ಮ ಜತೆಗೆ ಕರೆದುಕೊಂಡು ಹೋಗಿ ಅವರನ್ನೂ ಶಿಕ್ಷಣ ವಂಚಿತನ್ನಾಗಿಸುತ್ತಾರೆ. ಪ್ರತಿಯೊಂದು ಲಂಬಾಣಿ ತಾಂಡದಿಂದ ಕನಿಷ್ಟವೆಂದರೂ ಶೇಕಡಾ ೫೦ ಕುಟುಂಬಗಳು ವಲಸೆ ಹೋಗುತ್ತವೆ. ಆದುದರಿಂದ ಪ್ರತಿಯೊಂದು ತಾಂಡದಲ್ಲಿ ಆಶ್ರಮ ಶಾಲೆಯ ಮಾದರಿಯಲ್ಲಿಯೇ ಋತುಮಾನ ವಸತಿಶಾಲೆ ಇರಬೇಕು. ಆದರೆ ಇಂತಹ ಶಾಲೆಗಳು ಬೆರಳೆಣಿಕೆಯಷ್ಟು ತಾಂಡಗಳಲ್ಲಿ ಮಾತ್ರ ಇದ್ದು ಅವೂ ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ಕಾರ್ಯನಿರ್ವಹಿಸುವವರು ಸಮರ್ಪಣ ಸೇವಾ ಮನೋಭಾವದವರಿರಬೇಕು. ಕೆಲವು ತಾಂಡಾಗಳಲ್ಲಿ ಜನಾಭಿಪ್ರಾಯ ಏಕೆಂದರೆ ಕಿತ್ತು ತಿನ್ನುವ ಬಡತನಕ್ಕೆ ನಮ್ಮ ಮಕ್ಕಳು ತುತ್ತಾಗಬಾರದು, ಅವರು ಶಿಕ್ಷಣದಿಂದ ವಂಚಿತರಾಗಬಾರದು. ಆದುದರಿಂದ ಋತುಮಾನ ವಸತಿಶಾಲೆ ಬಡತನದಿಂದ ಬಳಲುವ ತಾಂಡಾಗಳಲ್ಲಿರಬೇಕು. ಈ ಶಾಲೆ ಬಡ ಲಂಬಾಣಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತುಂಬ ಅನುಕೂಲವಾಗಿದೆ. ವಸತಿ ಶಾಲೆಯಲ್ಲಿ ಉಳಿಯುವ ಮಕ್ಕಳಿಗೆ ಶಾಲೆಗಿಂತ ಮುಂಚಿತವಾಗಿ ಬೆಳಗಿನ ಜಾವ ವಿಶೇಷ ಕಲಿಕಾ ತಂತ್ರಗಳ ಮೂಲಕ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ಹರಿಸಲು ಸಾಧ್ಯವಾಗುತ್ತದೆ. ಶಾಲಾ ಮಕ್ಕಳ ಹಾಜರಾತಿ ಅಧಿಕವಾಗುತ್ತದೆ. ಶಾಲೆಯ ಶೈಕ್ಷಣಿಕ ಪ್ರಗತಿ ಹೆಚ್ಚಾಗುತ್ತದೆ. ವಲಸೆ ಹೋದ ಪಾಲಕರು ತಮ್ಮ ಮಕ್ಕಳ ಬಗ್ಗೆ ಯಾವುದೇ ಚಿಂತೆ ಮಾಡದೆ ನಿರ್ಭೀತಿಯಿಂದ ತಮ್ಮ ದುಡಿಮೆಯತ್ತ ಗಮನ ಹರಿಸುತ್ತಾರೆ.

ಋತುಮಾನ ಶಾಲೆಯಿಂದ ಉಂಟಾಗುವ ಉಪಯೋಗಗಳು

ಪಾಲಕರಿಗೆ

ಪ್ರತಿ ವರ್ಷ ಪಾಲಕರು ವಲಸೆ ಹೋಗುವ ಸ್ಥಳಗಳಿಗೆ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಕೆಲಸದ ಒತ್ತಡದ ಮಧ್ಯೆಯೂ ಮಕ್ಕಳ ಪಾಲನೆ ಜೊತೆಗೆ ಜೀವನ ಸಾಗಿಸಬೇಕಾಗಿತ್ತು. ಆದರೆ ಋತುಮಾನ ವಸತಿ ಶಾಲೆ ಪ್ರಾರಂಭವಾಗಿದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೇ ನಿಶ್ಚಿಂತೆಯಿಂದ ಶಾಲೆಯಲ್ಲಿಯೇ ಬಿಟ್ಟು ಯಾವುದೇ ಚಿಂತೆಯಿಲ್ಲದೇ ದುಡಿಮೆ ಮಾಡಿಕೊಂಡು ಹಸನ್ಮುಖಿಗಳಾಗಿ ವಾಪಸ್ಸು ಊರಿಗೆ ಬರಬಹುದಾಗಿದೆ.

ವಸತಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಪಾಲಕರು ಕಣ್ಣಾರೆ ಕಂಡು ವಲಸೆ ಹೋಗದೇ ಇರುವ ಪಾಲಕರೂ ಸಹ ತಮ್ಮ ತಮ್ಮ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ಪ್ರತಿದಿನ ಐದಾರು ಪಾಲಕರು ದೂರವಾಣಿ ಹಾಗೂ ಮೊಬೈಲ್‌ನಲ್ಲಿ ತಮ್ಮ ಮಕ್ಕಳ ಜೊತೆಗೆ ಮಾತನಾಡಲು ಶಾಲಾ ಸಿಬ್ಬಂದಿ ವರ್ಗ ಸೌಲಭ್ಯ ಕಲ್ಪಿಸಿಕೊಟ್ಟಿದೆ.

ಮಕ್ಕಳಿಗೆ

ಮಕ್ಕಳು ಪಾಲಕರೊಂದಿಗೆ ವಲಸೆ ಹೋಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಆದರೆ ಈಗ ಯಾವ ಮಗುವೂ ಕೂಡ ಶಿಕ್ಷಣದಿಂದ ವಂಚಿತರಾಗುವ ಅವಕಾಶ ಇಲ್ಲದಂತಾಗಿದೆ. ಸತತ ಮತ್ತು ಅನಿಯಮಿತವಾಗಿ ಹಾಗೂ ಬಡತನದ ಬವಣೆಯಿಂದ ಬಳಲುತ್ತಿದ್ದ ಮಕ್ಕಳು ಇಂದು ಕೂಲಿ ಕೆಲಸವನ್ನು ಬಿಟ್ಟು ಶಾಲೆಯತ್ತ ಮುಖ ಮಾಡುವಂತಾಗಿದೆ.

ವಸತಿ ಶಾಲೆಯಲ್ಲಿ ಮನೆಯಲ್ಲಿ ದೊರೆಯದೇ ಇರುವಂತಹ ಪೌಷ್ಟಿಕವಾದ ಆಹಾರದ ಜೊತೆಗೆ ಕಲಿಕಾ ಸಾಮಗ್ರಿಗಳು, ಉಚಿತ ವೈದ್ಯಕೀಯ ಸೇವೆ, ದಿನಬಳಕೆಯ ಇತರೆ ವಸ್ತುಗಳು ಅವರ ಪಾಲಿಗೆ ಸುಲಭವಾಗಿ ದೊರೆಯುವಂತಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಆರೋಗ್ಯಕರವಾದ ಬೆಳವಣಿಗೆಗೆ ಹಾಗೂ ಓದು ಬರಹದ ಬಗ್ಗೆ ಉತ್ಸಾಹ ಮೂಡಿದೆ.

ಶೈಕ್ಷಣಿಕ ಪ್ರಗತಿ

೧. ಶಿಕ್ಷಣದಿಂದ ವಂಚಿತರಾಗಿ ಪಾಲಕರೊಂದಿಗೆ ವಲಸೆ ಹೋಗುತ್ತಿದ್ದ ಮಕ್ಕಳು ವಸತಿ ಶಾಲೆ ಪ್ರಾರಂಭವಾಗಿದ್ದರಿಂದ ಇಂದು ನಿರಂತರವಾಗಿ ಶಿಕ್ಷಣ ಪಡೆಯುತ್ತಿದ್ದಾರೆ.

೨. ಶಾಲಾ ಹಾಜರಾತಿ ಶೇಕಡಾ ೨೦ ರಷ್ಟು ಹೆಚ್ಚಾಗಿದೆ.

೩. ಸತತ ಮತ್ತು ಅನಿಯಮಿತ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

೪. ಶಿಕ್ಷಕರು ಪಾಲಕರ ಮನೆ ಮನೆಗೆ ಹೋಗಿ ಅವರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳಿಸಿ ಎನ್ನುವ ಪರಿಪಾಟ ಕಡಿಮೆಯಾಗಿದೆ.

೫. ವಸತಿ ಗೃಹದಲ್ಲಿ ಉಳಿದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ರಾತ್ರಿ ವೇಳೆಯಲ್ಲಿ ಶಿಕ್ಷಕರು ಮತ್ತು ಸ್ವಯಂ ಸೇವಕರಿಂದ ವಿಶೇಷ ಬೋಧನೆಯ ಸದುಪಯೋಗ ಪಡೆದುಕೊಳ್ಳುವಂತಾಗಿದೆ.

೬. ವಸತಿ ಗ್ರಹದಲ್ಲಿ ಉಳಿಯುವಂತೆ ಮಕ್ಕಳಿಗೆ ಸಾಂಘಿಕ ಜೀವನದ ತಿಳುವಳಿಕೆ ಮೂಡಿದೆ.

೭. ಮಕ್ಕಳು ತಮ್ಮ ವೈಯಕ್ತಿಕ ಸ್ವಚ್ಛತೆ ಮಾಡಿಕೊಳ್ಳುವುದರಿಂದ ಶಿಸ್ತನ್ನು ಮೈಗೂಡಿಸಿಕೊಂಡಿದ್ದಾರೆ.

೮. ಮಕ್ಕಳು ರಾತ್ರಿ ವೇಳೆಯಲ್ಲಿ ಸಹ ಪಠ್ಯ ಚಟುವಟಿಕೆಗಳಾದ ಕೋಲಾಟ, ನೃತ್ಯ, ಹಾಡು ಇನ್ನು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗಿಗಳಾಗಿ ಪ್ರಯೋಜನ ಪಡೆಯುತ್ತಿದ್ದಾರೆ.

೯. ಒಟ್ಟಾರೆಯಾಗಿ ಕೂಲಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಲಂಬಾಣಿಗರ ಮಕ್ಕಳಿಗೆ ಋತುಮಾನ ವಸತಿ ಶಾಲೆಯಿಂದ ಕಲಿಕೆಯಲ್ಲಿ ಪ್ರಗತಿ ಕಾಣಲು ಉತ್ತಮ ಬೆಳವಣಿಗೆಯಾಗಿದೆ.

ಆಧಾರ ಗ್ರಂಥಗಳು ಹಾಗೂ ನಿಯತಕಾಲಿಕೆಗಳು

೧. ಬದುಕೊಂದು ಚಿತ್ತಾರ, ಲಂಬಾಣಿ ಬುಡಕಟ್ಟು, ಡಾ. ಹರಿಲಾಲ್‌ಪವಾರ್‌, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೨೦೦೭.

೨. ಚಾಮರಾಜನಗರ ಸುತ್ತಿನ ಲಂಬಾಣಿ ಸಂಸ್ಕೃತಿ, ಡಾ. ಮಹಾದೇವಿಬಾಯಿ ಕೀರ್ತಿ ಪ್ರಕಾಶ, ಕೋಳಿ ಪಾಳ್ಯ ಗ್ರಾಮ, ೨೦೦೭.

೩. ಕನ್ನಡಿಗರ ಗೋವೆ ವಲಸೆ, ಹರಿಶ್ಚಂದ್ರ ದಿಗ್ಸಂಗಿಕರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

೪. ಬಳ್ಳಾರಿ ಜಿಲ್ಲೆಗೆ ತೆಲುಗರ ವಲಸೆ, ಪಿ. ಮಹಾದೇವಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

೫. Lamani Economy and Society in Change, Dr. G. H. Halbar, Mittal Publications, Delhi-35, 1986.

೬. Ex-Criminal Tribes of India, V. C. Simhadri, National Publishing House, New Delhi-2, 1979.

ದಿನ ಪತ್ರಿಕೆಗಳು

೧. ವಿಜಯ ಕರ್ನಾಟಕ, ೩. ೧೧. ೨೦೦೬

೨. ಪ್ರಜಾವಾಣಿ, ೫.೧೧.೨೦೦೬,

೩. ವಿಜಯ ಕರ್ನಾಟಕ, ೮. ೧೧. ೨೦೦೬,

೪. ಸಂಯುಕ್ತ ಕರ್ನಾಟಕ, ೨೪. ೧೧. ೨೦೦೬

೫. ವಿಜಯ ಕರ್ನಾಟಕ, ೨೩. ೧೧. ೨೦೦೭

೬. ಪ್ರಜಾವಾಣಿ, ೧೨. ೧೨. ೨೦೦೭

೭. ವಿಜಯ ಕರ್ನಾಟಕ, ೧೩. ೧೨. ೨೦೦೭

೮. ಪ್ರಜಾವಾಣಿ, ೧೮. ೧೨. ೨೦೦೭

೯. ವಿಜಯ ಕರ್ನಾಟಕ, ೦೨. ೦೧. ೨೦೦೮

೧೦. ಪ್ರಜಾವಾಣಿ, ೩೧.೧೨.೨೦೦೭

೧೧. ಉದಯವಾಣಿ, ೦೮. ೦೧. ೨೦೦೮