ಕರ್ನಾಟಕದಾದ್ಯಂತ ಒಟ್ಟು ೫೦ ಬುಡಕಟ್ಟು ಸಮುದಾಯಗಳನ್ನು ಕಾಣಬಹುದು. ಇವರನ್ನು ‘ಆದಿವಾಸಿ’ಗಳು ಎಂದು ಸಹಾ ಕರೆಯುತ್ತಾರೆ. ಶಿಲಾಯುಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದ ಕರ್ನಾಟಕದ ಮೂರು ಮುಖ್ಯ ಸ್ಥಳಗಳಲ್ಲಿ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬಿಳಿಗಿರಿ ರಂಗನಬೆಟ್ಟದ ಮೈದಾನ ಪ್ರದೇಶವೂ ಒಂದಾಗಿದೆ. ಪುರಾತತ್ವ ಸಂಶೋಧಕರು ಕ್ರಿ. ಶ. ೧೮೬೭ ಮತ್ತು ೧೯೧೭ರ ನಡುವಣ ಅವಧಿಯಲ್ಲಿ ಈ ಸ್ಥಳಗಳಲ್ಲಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಬುಡಕಟ್ಟು ಜನರು ಇಲ್ಲಿ ವಾಸವಿದ್ದರು ಎಂಬ ಅಂಶವು ಬೆಳಕಿಗೆ ಬಂದಿದೆ. ಇದು ಹೆಚ್ಚು ಫಲವತ್ತಾದ ನೆಲ ಮತ್ತು ಸಮೃದ್ಧ ಅರಣ್ಯದಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿಯ ಸಂಪತ್ತನ್ನು ನೋಡಿಯೇ ಬುಡಕಟ್ಟು ಜನರು ನೆಲೆಯೂರಿದ್ದರು. ಎಂಬುದನ್ನು ಗ್ರಹಿಸಬಹುದು. ಅವುಗಳೆಂದರೆ ಸೋಲಿಗರು, ಜೇನುಕುರುಬರು, ಬೆಟ್ಟಕುರುಬರು ಮತ್ತು ಎರವರು.

ಇವರು ಬೇಟೆಗೆ ಹಣ್ಣು ಹಂಪಲು, ಗೆಡ್ಡೆ ಗೆಣಸಿನಂತಹ ಆಹಾರ ಪದಾರ್ಥಗಳಿಗೆ, ಕಟ್ಟಿಗೆ ಅಂಟುಗಳಂತಹ ಅಗತ್ಯ ವಸ್ತುಗಳಿಗಾಗಿ ಇಲ್ಲಿನ ಕಾಡುಗಳನ್ನು ಅವಲಂಬಿಸಿದ್ದರು. ಕಾಲಕ್ರಮೇಣ ಸಮತಟ್ಟಾದ ಅರಣ್ಯಗಳನ್ನು ಕಡಿದು ಮೈದಾನ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ವಿಸ್ತರಿಸಿಕೊಳ್ಳುತ್ತಾ ಬಂದರು. ಬೇಟೆ ಮತ್ತು ಇನ್ನಿತರ ಕಿರು ಅರಣ್ಯ ಉತ್ಪನ್ನಗಳು ಅರಣ್ಯ ಪ್ರದೇಶದಿಂದ ದೊರಕಬಹುದಾದ ಕಂದಮೂಲಗಳಾಗಿ ಕಾನನವನ್ನೇ ಆಧರಿಸಿದ್ದ ಜನರು ಮೈದಾನ ಪ್ರದೇಶವನ್ನು ಬಿಟ್ಟು ಬೆಟ್ಟಗಳತ್ತ ವಲಸೆ ಬಂದು ಇಲ್ಲಿನ ದಟ್ಟ ಅರಣ್ಯದಲ್ಲೇ ವಾಸಿಸತೊಡಗಿದ್ದಾರೆ. ಬುಡಕಟ್ಟು ಸಮುದಾಯಗಳು ಕಾಡಿನೊಂದಿಗೆ ತನ್ನದೇ ಆದ ಒಂದು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಇವರು ಪೂಜಿಸುವ ಎಲ್ಲ ದೇವತೆಗಳು, ವಸ್ತುಗಳು ಕಾಡಿಗೆ ಸಂಬಂಧಿಸಿದವುಗಳಾಗಿವೆ. ಭಾರತದ ಬಹಳಷ್ಟು ಬುಡಕಟ್ಟು ಸಮುದಾಯದ ಇತಿಹಾಸವು ಇದೇ ಮಾದರಿಯಲ್ಲಿದ್ದು, ಕೃಷಿಗಾಗಿ ಬಯಲು ಪ್ರದೇಶದಲ್ಲಿರುವ ಅರಣ್ಯವನ್ನು ಕಡಿದು ಕೃಷಿ ಮತ್ತು ವಾಸಕ್ಕೆ ಉಪಯೋಗಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದ ದಕ್ಷಿಣದ ಸುತ್ತ ತುತ್ತ ತುದಿಯಲ್ಲಿರುವ ಚಾಮರಾಜನಗರ ಜಿಲ್ಲೆಯು ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಇದರ ಹಿಂದಿನ ಹೆಸರು “ಅರಿಕುಠಾರ ಒಡೆಯನೂರು”, “ವಿದ್ಯಾಗಿರಿ” ಎಂದೂ ಹೆಸರಾಗಿತ್ತು. ಇಲ್ಲಿ ಮೈಸೂರಿನ ಹೆಸರಾಂತ ಅರಸರಾದ ಶ್ರೀಚಾಮರಾಜ ಒಡೆಯರ್‌ಅವರು ೧೭೭೪ನೇ ಇಸವಿ ಮಾರ್ಚ್‌೧ರಂದು ಹಿಂದೆ ಅರಮನೆ ಪ್ರದೇಶ ಎಂದು ಹೆಸರಾದ ಈ ವಿಶಿಷ್ಟ ಮಂಪಟದಲ್ಲಿ ಜನಿಸಿದವರಾಗಿದ್ದರಿಂದ ಈ ಸ್ಥಳಕ್ಕೆ ‘ಚಾಮರಾಜನಗರ’ ಎಂದು ನಾಮಕರಣವಾಯಿತು. ಈ ಪ್ರದೇಶವು ಶತ್ರುಗಳಿಂದ ಸಂರಕ್ಷಣೆಯ ತಾಣವಾಗಿಯೂ, ಬಿಳಿಗಿರಿರಂಗನಬೆಟ್ಟ ಹಾಗೂ ಬಂಡಿಪುರದಲ್ಲಿ ಬೇಟೆ ಹಾಗೂ ಆನೆಗಳನ್ನು ಪಳಗಿಸುವ ಕೆಡ್ಡಾ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು ಎಂಬ ವಿಚಾರಗಳಿವೆ. ಚಾಮರಾಜ ನಗರ ಜಿಲ್ಲೆಯು ೧೯೯೭ರಲ್ಲಿ ಹೊಸದಾಗಿ ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತವಾದ ೭ ಜಿಲ್ಲೆಗಳಲ್ಲಿ ಒಂದಾಗಿ ಮೈಸೂರು ಜಿಲ್ಲೆಯಿಂದ ಬೇರ್ಪಡಿಸಲ್ಪಟ್ಟಿದೆ. ಚಾಮರಾಜನಗರ ಜಿಲ್ಲೆಯು ಈ ಕೆಳಕಂಡ ನಾಲ್ಕು ತಾಲ್ಲೂಕುಗಳನ್ನು ಒಳಗೊಂಡಿದೆ.

೧. ಚಾಮರಾಜನಗರ

೨. ಯಳಂದೂರು

೩. ಕೊಳ್ಳೇಗಾಲ

೪. ಗುಂಡ್ಲುಪೇಟೆ

ಸೋಲಿಗ ಬುಡಕಟ್ಟು ಜನರಿಗೆ ಅನೇಕ ಶತಮಾನಗಳಿಂದ ಆಶ್ರಯ ನೀಡಿದ ಅರಣ್ಯ ಪ್ರದೇಶವೆಂದರೆ “ಬಿಳಿಗಿರಿ ರಂಗಸ್ವಾಮಿ ದೇವಾಲಯದ ಅಭಯಾರಣ್ಯ”. ಈ ಅಭಯಾರಣ್ಯದ ಒಳಗೆ ಹಾಗೂ ಅಂಚಿನಲ್ಲಿ ಅಲ್ಲಲ್ಲಿ ಚದುರಿದಂತೆ ಸೋಲಿಗರು ವಾಸಿಸುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟವೆಂದರೆ ಅದರ ಹೆಚ್ಚಿನ ಪ್ರದೇಶವು ಬಿಳಿಗಿರಂಗಸ್ವಾಮಿ ದೇವಾಲಯದ ಅಭಯಾರಣ್ಯವಾಗಿದೆ. ಈ ವನ್ಯಧಾಮವು ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದ್ದು, ಎರಡು ದಿಬ್ಬಗಳು ದಕ್ಷಿಣೋತ್ತರವಾಗಿ ಚಾಚಿಕೊಂಡಿದ್ದು, ೨೦೦೦ ಮೀಟರ್‌ಗಳಷ್ಟು ಎತ್ತರಕ್ಕಿದೆ. ಸುತ್ತಲು ಸಣ್ಣ ಪುಟ್ಟ ಗುಡ್ಡಗಳ ಸರಮಾಲೆಯೇ ಇದ್ದು, ಇದರ ಕೆಳಗಿನ ಬಯಲು ಭೂಮಿಯಿಂದ ನೋಡಿದರೆ ವಿಶಾಲ ಹಸಿರು ರಾಶಿಯ ಮಧ್ಯ ಒಂದು ಕಡಿದಾದ ಕಂದರದ ಮೇಲೆ ಅಚ್ಚ ಬಿಳಿಬಣ್ಣದಂತೆ ಕಾಣುವ ಪುರಾತನ ರಂಗಸ್ವಾಮಿ ದೇವರ ಗುಡಿ ಇರುವುದರಿಂದ ಈ ವನ್ಯಧಾಮಕ್ಕೆ “ಬಿಳಿರಂಗಸ್ವಾಮಿ ದೇವಾಲಯದ ಅಭಯಾರಣ್ಯ” ಎಂದು ಹೆಸರು ಬಂದಿದೆ.

ಸೋಲಿಗರು ಎಂದರೆ “ಬಿದಿರಿನಿಂದ ಬಂದವರು” ಎಂದು ಡಾ. ಹೆಚ್‌. ಕೆ. ಭಟ್ಟರವರು ಹೇಳುತ್ತಾರೆ. “ಸೋಲೈ” ಎಂದರೆ “ದಟ್ಟ ಅರಣ್ಯ” ಅಥವಾ “ಕಾಡು” ಎಂದರ್ಥ ಸೋಲಿಗ ಎಂಬ ಪದವು ತಮಿಳು ಭಾಷೆಯಿಂದ ಬಂದಿರಬಹುದಾಗಿದೆ ಎಂದು ಲೂಹಿಜ್‌(೧೯೬೧) ಅವರು ಹೇಳುತ್ತಾರೆ. ಇದರಿಂದಾಗಿಯೇ ಯಾವುದೇ ವಾದವನ್ನು ಮಂಡಿಸಿದರೂ ಸೋಲಿಗರಿಗೂ, ಅರಣ್ಯಕ್ಕೂ ಒಂದು ನಿಕಟವಾದ ಸಂಬಂಧವಿದೆ ಎನಿಸುತ್ತದೆ.

ಸೋಲಿಗರು ನೋಡಲು ಕಪ್ಪು ಬಣ್ಣ, ದಪ್ಪನಾದ ಮೂಗು, ನೇರವಾದ ಹಣೆ, ಕಿರಿದು ಗಾತ್ರದ ತಲೆಯನ್ನು ಹೊಂದಿರುತ್ತಾರೆ. ಇವರು ಇತರ ಬುಡಕಟ್ಟು ಸಮುದಾಯಗಳ ರೀತಿಯಲ್ಲಿಯೇ ಮತ, ಧರ್ಮ ಮತ್ತು ಪೂಜೆ ಪುನಸ್ಕಾರಗಳಿಗೆ ನಿಸರ್ಗವನ್ನೇ ಆಧರಿಸಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂ ದೇವತೆಗಳ ಪೂಜಾ ಸಂಪ್ರದಾಯವು ನಿಧಾನವಾಗಿಯೇ ಬಳಕೆಗೆ ಬರುತ್ತಿದೆಯಾದರೂ, ಪ್ರಮುಖವಾಗಿ ಈಗಲೂ ಸೋಲಿಗರಿಗೆ ಅರಣ್ಯ, ಭೂಮಿ ತಾಯಿಯೇ ಪ್ರಮುಖ ದೇವರುಗಳು. ಇವರು ಪೂಜಿಸುವ ಕೆಲವು ಅರಣ್ಯದೊಳಗಿನ ಮುಖ್ಯವಾದ ಪೂಜಾ ಸ್ಥಳಗಳೆಂದರೆ “ದೊಡ್ಡ ಸಂಪಿಗೆ”, “ಚಿಕ್ಕ ಸಂಪಿಗೆ”, ಬಿಳಿಗಿರಿರಂಗನಾಥಸ್ವಾಮಿ, ಕ್ಯಾತೇ ದೇವರು, ಜಡೇಸ್ವಾಮಿ ಸೋಲಿಗರ ಅತ್ಯಂತ ಮಹತ್ವವಾದ ಪೂಜಾ ಸ್ಥಳವೆಂದರೆ “ದೊಡ್ಡ ಸಂಪಿಗೆ”. ಇಲ್ಲಿ ಒಂದು ದೊಡ್ಡ ಸಂಪಿಗೆ ಮರವಿದೆ. ಈ ಮರಕ್ಕೆ ಸಾವಿರಾರು ವರ್ಷಗಳಷ್ಟು ಹಿಂದಿನ ಇತಿಹಾಸವಿದೆ ಎಂದು ನಂಬಲಾಗಿದೆ. ಬಿಳಿಗಿರಿ ರಂಗನ ಬೆಟ್ಟದ ಮೇಲಿರುವ ಬಿಳಿಗಿರಿ ರಂಗನಾಥ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಪುರಾತನ ಇತಿಹಾಸವಿದ್ದು, ಮೊದಲಿಗೆ ಈ ಅರಣ್ಯವನ್ನು “ಚಂಪಕಾರಣ್ಯ” ಎಂದು ಕರೆಯಲಾಗುತ್ತಿತ್ತು.

ಸೋಲಿಗರ ಸಾಂಪ್ರದಾಯಿಕ ಜೀವನದಲ್ಲಿ ಅಡಕವಾಗಿರುವ ಮೌಲ್ಯಗಳು ನಾಗರಿಕತೆ ಎಲ್ಲವೂ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾಗಿವೆ. ಇವರಲ್ಲಿ “ಕುಲಪದ್ಧತಿಯು” ಇನ್ನೂ ರೂಢಿಯಲ್ಲಿದೆ. ಸೋಲಿಗರಲ್ಲಿ ಮುಖ್ಯವಾಗಿ ಐದುಕುಲ, ಏಳುಕುಲದ ಸೋಲಿಗರು ಚಾಮರಾಜನಗರದಲ್ಲಿ ವಾಸಿಸುತ್ತಿದ್ದಾರೆ. ಐದುಕುಲದ ಸೋಲಿಗರು ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಆಸುಪಾಸಿನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರಲ್ಲಿ ಬೆಳ್ಳೀರು, ಸೂರ್ಯರು, ತೆನೇರು, ಸೆಳಕರು, ಹಾಲೇರು ಕುಲವು ಪ್ರಮುಖವಾದವು. ಈ ಬುಡಕಟ್ಟು ಗುಂಪುಗಳಲ್ಲಿ ಯಜಮಾನನ ಆಯ್ಕೆಯು ಈ ಐದು ಕುಲದವರಲ್ಲಿ ಸೆಳಕರು ಮತ್ತು ಹಾಲೇರು ಗುಂಪುಗಳಲ್ಲಿ ಮಾತ್ರ ನಡೆಯುತ್ತದೆ. ಈ ಐದು ಕುಲದ ಸೋಲಿಗರು ಬೇರೆ ಕುಲಗಳಿಗೆ ಹೋಲಿಸಿ ತಮ್ಮದೇ ಪವಿತ್ರ ಹಾಗೂ ಪ್ರಮುಖ ಕುಲವೆಂದು ಭಾವಿಸಿರುವುದುಂಟು. ಕುಲಪಂಚಾಯತಿಯ ಪಟ್ಟೇಗಾರ, ಕೋಲ್ಕಾರ ಮತ್ತು ಛಲವಾದಿ ಇವರುಗಳನ್ನು ತೆನೇರು, ಬೆಳ್ಳೀರು ಮತ್ತು ಸೂರ್ಯರ ಕುಲದಿಂದ ವಂಶಪರಂರ್ಯವಾಗಿ ಆರಿಸಲ್ಪಡುತ್ತಾರೆ. ಏಳುಕುಲದ ಸೋಲಿಗರು ಸಹ ಬಿಳಿಗಿರಿರಂಗನಬೆಟ್ಟ ದೇವಾಲಯದ ಅಭಯಾರಣ್ಯದ ಆಸುಪಾಸಿನ ಪೋಡಿನಲ್ಲಿ ವಾಸ ಮಾಡುತ್ತಿದ್ದಾರೆ. ಇವರಲ್ಲಿಯೂ ಬೆಳ್ಳೀರು, ಸೂರ್ಯರು, ತೆನೇರು, ಸೆಲಕರು, ಹಾಲೇರು ಕುಲದವರ ಕೂಡ ಕುಂಬಳಕುಲ ಮತ್ತು ಜೇನುಕುಲ ಸೇರುತ್ತದೆ. ಸೋಲಿಗರಲ್ಲಿ ಸಮಕುಲದ ಮದುವೆ ನಿಷೇಧವಿದ್ದು, ಬೇರೆ ಬೇರೆ ಕುಲದವರೊಂದಿಗೆ ವಿವಾಹವು ಮಾನ್ಯವಿರುತ್ತದೆ. ಇವರ ಒಳಬಾಂಧವ್ಯದಲ್ಲಿ ಕೆಲವು ಗುಂಪುಗಳಿವೆ. ಈ ಗುಂಪುಗಳು ಮುಖ್ಯವಾಗಿ ಇವರ ಭೌಗೋಳಿಕ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ. ಅವು ಯಾವುವೆಂದರೆ

೧. ಊರು ಸೋಲಿಗರು

೨. ಮಲೆ ಸೋಲಿಗರು

೩. ಕಾಡು ಸೋಲಿಗರು

೪. ಊರುಬತ್ತಿ ಸೋಲಿಗರು

೫. ದೇವಸೋಲಿಗರು

ಸೋಲಿಗರು ಮಾತನಾಡಲು ಕನ್ನಡ ಭಾಷೆ ಮತ್ತು ಲಿಪಿಯನ್ನು ಬಳಸುತ್ತಾರೆ. ಸೋಲಿಗರು ಮುಖ್ಯವಾಗಿ ವ್ಯವಸಾಯಕ್ಕೆ ಸಂಬಂಧಿಸಿದ ಹಬ್ಬಗಳಾದ ರೊಟ್ಟಿ ಹಬ್ಬ, ಹೊಸರಾಗಿ ಹಬ್ಬಗಳನ್ನು ಆಚರಿಸುತ್ತಾರೆ. ದೊಡ್ಡ ಜಾತ್ರೆಗಳಾದ ಮಲೆ ಮಹದೇಶ್ವರ ಹಾಗೂ ಬಿಳಿಗಿರಿರಂಗನ ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಸೋಲಿಗರದ್ದು ಸರಳ ಸಜ್ಜನಿಕೆಯ ಜೀವನ. ಇವರು ವಾಸಿಸುವ ಸ್ಥಳಗಳಿಗೆ ಪೋಡು, ದೊಡ್ಡಿ, ಹಾಡಿ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಈ ಪೋಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿತ್ರಣವೆಂದರೆ ಒಂದು ಪುಟ್ಟ ದೇವಸ್ಥಾನ, ಅದರ ಸುತ್ತಾ ಚಿಕ್ಕ ಚಿಕ್ಕ ಮನೆಗಳು. ಪೋಡಿನ ಮಧ್ಯೆ ಕೃಷಿ ಭೂಮಿ ಇಲ್ಲವೆ ಒಂದಿಷ್ಟು ದಿನನಿತ್ಯ ಉಪಯೋಗಿಸುವಂತಹ ಗೃಹೋಪಯೋಗಿ ಗಿಡಗಳು, ಹಣ್ಣು ಹಂಪಲು ಮರಗಳನ್ನು ಕಾಣಬಹುದು. ಯಾವುದೇ ಪೋಡುಗಳು ನಿರ್ಮಾಣವಾಗಬೇಕಾದರೆ ನೀರಿನ ಮೂಲ ಇರುವಲ್ಲಿಯೇ ನಿರ್ಮಾಣ ಮಾಡುವುದು ಸರ್ವೇಸಾಮಾನ್ಯ. ಈ ಪೋಡಿನಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಕುಟುಂಬಗಳು ವಾಸ ಮಾಡುತ್ತಾರೆ. ಹಿಂದೆ ಇವರು ಒಂದೆಡೆ ಪೋಡು ಅಥವಾ ದೊಡ್ಡಿಯನ್ನು ಮಾಡಿಕೊಂಡು ವಾಸ ಮಾಡುತ್ತಿದ್ದ ಸ್ಥಳಗಳಲ್ಲಿ ಏನಾದರೂ ಕಾಯಿಲೆ, ವಿಪತ್ತುಗಳು ಕಂಡುಬಂದಲ್ಲಿ ಅಥವಾ ಒಂದೇ ಸ್ಥಳದಲ್ಲಿ ವಾಸವಿದ್ದು, ಮೂರು ವರ್ಷಗಳು ಕಳೆದಿದ್ದರೆ ಆ ಸ್ಥಳದಿಂದ ಬೇರೆಡೆಗೆ ಹೋಗುತ್ತಿದ್ದರು. ಆದರೆ ಈ ಪದ್ಧತಿಯು ಈಗ ಅವರಲ್ಲಿಲ್ಲ.

ಚಾಮರಾಜನಗರದಿಂದ ೩೦ ಕಿ. ಮೀ. ದೂರದಲ್ಲಿರುವ ಬೂದಿಪಡಗ ಎಂಬ ಪೋಡಿನಲ್ಲಿ ೧೫೦ ಸೋಲಿಗ ಕುಟುಂಬವಿದ್ದು, ಇಲ್ಲಿ ಸುಮಾರು ೭೦೦ ಸೋಲಿಗರು ವಾಸಿಸುತ್ತಿದ್ದಾರೆ. ಈ ಗಿರಿಜನರ ಪೋಡು ಪುಣಜನೂರು ಅರಣ್ಯ ವಲಯಕ್ಕೆ ಸೇರಿದ್ದಾಗಿದೆ. ಇಲ್ಲಿ ಪ್ರಖ್ಯಾತಯದು ವಂಶಸ್ಥರಾದ ಮೈಸೂರಿನ ಅರಸರಾದ ಜಯಚಾಮರಾಜೇಂದ್ರ ಒಡೆಯರ್‌ಪ್ರಪ್ರಥಮವಾಗಿ ಆನೆಗಳನ್ನು ಸೆರೆಯಿಡಿಯುವ ಖೆಡ್ಡಾವನ್ನು ಸ್ಥಾಪಿಸಿ ಇಲ್ಲಿ ಬಿಡಾರ ಹೂಡುತ್ತಿದ್ದರು ಎಂಬುದಕ್ಕೆ ಇಲ್ಲಿ ಇವರು ಕಟ್ಟಿಸಿರುವ ಪ್ರಾಚೀನ ಪ್ರವಾಸಿಮಂದಿರ ಮತ್ತು ಇವರು ಕೂಡ ಬಂದಂತಹ ಮಂತ್ರಿಗಳು ಮತ್ತು ಇನ್ನಿತರರು ಉಳಿದುಕೊಳ್ಳುತ್ತಿದ್ದ ವೈಸರಾಯ್‌ಬಂಗಲೆ ಅಥವಾ ಬುಗುರಿ ಮನೆ ಸಾಕ್ಷಿಯಾಗಿದೆ. ಇಲ್ಲಿಯ ಹಿರಿಯ ಸೋಲಿಗರನ್ನು ಊರಿನ ಹೆಸರಿನ ಬಗ್ಗೆ ತಿಳಿಸಲು ಕೇಳಿದರೆ ಇಲ್ಲಿ ನೂರೊಂದು ಕುಲುಮೆಗಳಿದ್ದವು. ಈ ಕುಲುಮೆಯಿಂದ ಉತ್ಪತ್ತಿಯಾಗುತ್ತಿದ್ದ ಬೂದಿಯನ್ನು ಒಂದೆಡೆ ಸುರಿಯುತ್ತಿದ್ದರು. ಈ ಬೂದಿಯ ಗುಡ್ಡೆಯು ಬೂದಿಕಲ್ಲಾಗಿದೆ. ಆದ್ದರಿಂದ ಈ ಊರಿಗೆ ಬೂದಿಪಡಗ ಎಂದು ಹೆಸರು ಬಂದಿದೆ ಎಂದು ತಿಳಿಸುತ್ತಾರೆ.

೧೯೫೩ನೇ ಇಸವಿಯಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಕೆಂಗಲ್‌ಹನುಮಂತಪ್ಪ ಅವರು ಗಿರಿಜನರಿಗಾಗಿ ೧ ರಿಂದ ೫ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಶ್ರಮ ಶಾಲೆಯನ್ನು ಹಾಗೂ ಇವರಿಗೆ ವಸತಿ ಸೌಕರ್ಯವನ್ನು ಕಲ್ಪಿಸಿದ್ದಾರೆ.

ಆರ್ಥಿಕ ಜೀವನ ಕ್ರಮ

ಚಾಮರಾಜನಗರ ತಾಲ್ಲೂಕಿನ ಬೂದಿಪಡಗ ಎಂಬ ಪೋಡಿನಲ್ಲಿ ಶೇ. ೯೭ ಜನರು ಈಗಿನ ಕೃಷಿ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. ಈ ಸೋಲಿಗರ ಹಾಡಿಯಲ್ಲಿ ಕೃಷಿಗೆ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಈ ಪ್ರದೇಶದಲ್ಲಿ ಮುಖ್ಯವಾಗಿ ಮಳೆಯನ್ನೇ ಅವಲಂಬಿಸಿ ಬೆಳೆಯುವಂತಹ ಬೆಳೆಗಳನ್ನೇ ಯಥೇಚ್ಛವಾಗಿ ಇವರು ಬೆಳೆಯುತ್ತಾರೆ. ಮಳೆಯನ್ನು ಕುರಿತು ಹಿರಿಯ ಸೋಲಿಗರನ್ನು ಕೇಳಿದರೆ ಅತ್ಯಂತ ನಿಖರವಾಗಿ ಯಾವ ಮಳೆ ಎಂದು ಪ್ರಾರಂಭವಾಗುತ್ತದೆ? ಅದರ ಗುಣ ಲಕ್ಷಣಗಳೇನು? ಅದರ ಅವಧಿ ಎಷ್ಟು? ಆ ದಿನಗಳಲ್ಲಿ ಯಾವ ಕೃಷಿ ಚಟುವಟಿಕೆಗಳನ್ನು ಮಾಡಬಹುದು ಎಂದು ಹೇಳುತ್ತಾರೆ. ಇವರು ತಿಳಿದಿರುವಂತೆ ಯುಗಾದಿ ಮುಗಿದ ಮೇಲೆ ಮಳೆ ಚಕ್ರ ಪ್ರಾರಂಭವಾಗುತ್ತದೆ. ಮೊದಲಿಗೆ ರೇವತಿ ಮಳೆ ಗೋಚರಿಸುತ್ತದೆ. ಇದು ಮುಂಗಾರು ಮಳೆ ನಂತರ ಅಶ್ವಿನಿ, ಭರಣಿ, ಕೃತಿಕ, ಮೃಗಶಿರಾ, ಆರಿದ್ರಾ, ಪುಷ್ಯ, ಪುನರ್ವಸು ಹೀಗೆ ಮೇ ತಿಂಗಳಿಂದ ಹಿಡಿದು ನವೆಂಬರ್‌ವರೆಗಿನ ೧೫ಕ್ಕೂ ಹೆಚ್ಚು ಬಗೆಯ ಮಳೆ ನಕ್ಷತ್ರಗಳು ಸೋಲಿಗರಿಗೆ ತಿಳಿದಿದೆ. ಈ ಜನರು ಪ್ರತಿ ಮಳೆಯ ಸುತ್ತ ಅದಕ್ಕೆ ಅನುಕೂಲವಾಗುವಂತೆ ತಮ್ಮ ಕೃಷಿ ಚಟುವಟಿಕೆಗಳನ್ನು ರೂಪಿಸಿಕೊಳ್ಳುತ್ತಾರೆ. ಅಂದರೆ ಯಾವ ಮಳೆ ಬಂದಾಗ ಯಾವ ಬೀಜ ಬಿತ್ತನೆ ಮಾಡಿದರೆ ಕೀಟಗಳ ಬಾಧೆ ತಪ್ಪಿಸಬಹುದು? ಯಾವ ಫಸಲನ್ನು ಚೆನ್ನಾಗಿ ಪಡೆಯಬಹುದೆಂಬ ತಿಳಿವಳಿಕೆ ಇರುವುದರಿಂದ ಮಳೆ ಬರುವ ಸಮಯಕ್ಕೆ ಸರಿಯಾಗಿ ಬಿತ್ತನೆಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ.

ಕ್ರ.
ಸಂ.
ಕ್ಯಾಲೆಂಡರ್ತಿಂಗಳು ಮಾಸ ಸೋಲಿಗರ ಮಾಸ ಸೋಲಿಗರ ಮಳೆ ನಕ್ಷತ್ರ ಬೇಸಾಯ ಚಟುವಟಿಕೆ ಹಬ್ಬ
೧. ಫೆಬ್ರವರಿ

ಮಾರ್ಚ್‌

ಉಗಾದಿ ರಾಶಿ ಕಳೆ ಕೀಳುವುದು, ಜಡ್ಡು ಕೆತ್ತುವ ಕೆಲಸ ರೊಟ್ಟಿ ಹಬ್ಬ
೨. ಮಾರ್ಚ್‌ಏಪ್ರಿಲ್‌ ದೊಡ್ಡ ಜಾತ್ರೆ ಮೆಸುರಾ ಮುಳ್ಳು ಪೊದೆಗಳಿಗೆ ಬೆಂಕಿ ಇಡುವುದು ರೊಟ್ಟಿ ಹಬ್ಬ
೩. ಏಪ್ರಿಲ್‌ಮೇ ತೆಪ್ಪ ಆದ್ರಿ ಜೋಳ, ಬೇಳೆಕಾಳು, ಔಡು ಹಾಗಲ, ಹೀರೆ, ಕುಂಬಳ, ಪಡುವಲಕಾಯಿ ಬಿತ್ತನೆ ರೊಟ್ಟಿ ಹಬ್ಬ
೪. ಮೇ ಜೂನ್‌ ಆದೇಶ ದೊಡ್ಡ ಆದೇರ ರಾಗಿ ಬಿತ್ತನೆ, ಸಾಸುವೆ ರಾಗಿ ಬಿತ್ತನೆ, ಸಾಸುವೆ ನವಣೆ ಮತ್ತು ದಂಟಿನ ಸೊಪ್ಪು ಬಿತ್ತನೆ ಪೂಜೆ
೫. ಜೂನ್‌ಜುಲೈ ಕಕ್ಕಾಟ ಕಕ್ಕಾಟ ಕಳೆ ಕೀಳುವುದು ಜೋಳದ ಪೈರುಪೂಜೆ
೬. ಜುಲೈ ಆಗಸ್ಟ್‌ ಶ್ರಾವಣ ಆಶ್ಲೇಷ ಜೋಳದ ಕೊಯ್ಲು ಜೋಳ ನೈವೇದ್ಯ
೭. ಆಗಸ್ಟ್‌ಸೆಪ್ಟೆಂಬರ್‌ ಶ್ರಾವಣ ಹುಬ್ಬೆ ಜೋಳ ಮತ್ತು ತೊಗರಿ ಬಿಡಿಸುವುದು ಜೋಳ ನೈವೇದ್ಯ
೮. ಸೆಪ್ಟೆಂಬರ್‌ಅಕ್ಟೋಬರ್‌ ಮಾರ್ಲಮಿ ಹುಬ್ಬೆ ಕಳೆ ಕೀಳುವುದು ಜೋಳ ನೈವೇದ್ಯ
೯. ಅಕ್ಟೋಬರ್‌ನವೆಂಬರ್‌ ದೀವಳಿಗೆ ಚಿತ್ತ ರಾಗಿ ಕೊಯ್ಲು ಹೊಸರಾಗಿ ಹಬ್ಬ
೧೦. ನವೆಂಬರ್‌ ಕಿರಿ ದೀವಳಿಗೆ ಸತ್ ಆನೆಗಂಪಲು ಉದ್ದು, ತೊಗರಿ, ಹೆಸರು ಕೊಯ್ಲು
೧೧. ಡಿಸೆಂಬರ್‌ಜನವರಿ ಸಂಕ್ರಾಂತಿ ಹಸ್ತ ಔಡಲ (ಹರಳು) ಮತ್ತು ಗೆಡ್ಡೆ ಗೆಣಸು ಕೊಯ್ಲು ಭೂದೇವಿಗೆ ಗೆಣಸಿನ ಪೂಜೆ
೧೨. ಜನವರಿ ಶಿವಯೋಗ ಹಸ್ತ ಔಡಲ (ಹರಳು) ಮತ್ತು ಗೆಡ್ಡೆ ಗೆಣಸು ಕೊಯ್ಲು ರೊಟ್ಟಿ ಹಬ್ಬಕ್ಕೆ ರಾಗಿ ಬೇಳೆ ಕಾಳು ಸಂಗ್ರಹ

ರೇವತಿ ಮಳೆಗೆ ಮೊದಲೇ ಹೊಲವನ್ನು ಎತ್ತು ಮತ್ತು ನೇಗಿಲಿನಿಂದ ಹಸನುಗೊಳಿಸಿ ಬಿತ್ತನೆಯ ಸಿದ್ಧತೆಯನ್ನು ಮಾಡುತ್ತಾರೆ. ಇವರು ಸಾಲು ಬೇಸಾಯ ಹಾಗೂ ಎರಚಲು ಬೇಸಾಯ ಎರಡನ್ನೂ ರೂಢಿಸಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಮಳೆ ಬರುತ್ತಿದ್ದ ಹಾಗೆಯೇ ಬಿತ್ತನೆಯನ್ನು ಮುಗಿಸುತ್ತಾರೆ. ಹಾಗೆಯೇ ಮಳೆ ಬರದಿದ್ದಲ್ಲಿ ಬಿತ್ತನೆಯನ್ನು ಜುಲೈ ಆಗಸ್ಟ್‌ಅಥವಾ ಸೆಪ್ಟೆಂಬರ್‌ವರೆವಿಗೂ ಮುಂದೂಡುತ್ತಾರೆ. ಇವರಲ್ಲಿ ಮಹಿಳೆಯರೇ ಹೊಲದ ನಿರ್ವಹಣೆ ಮತ್ತು ಕೃಷಿ ಕಾರ್ಯದ ಬಹುಪಾಲು ಹೊಣೆಯನ್ನು ಹೊರುತ್ತಾರೆ. ಯಾವ ಬೀಜದ ಬಿತ್ತನೆ ಹೇಗಿರಬೇಕು? ಯಾವಾಗ ಬಿತ್ತನೆ ಆಗಬೇಕು ಎಂಬುದನ್ನು ಮಹಿಳೆಯರೇ ನಿರ್ಧರಿಸುತ್ತಾರೆ. ಹಿಂದಿನ ಫಸಲಿನ ಜೊತೆಗಿದ್ದ ಕಳೆಗಳನ್ನೆಲ್ಲಾ ಒಣಗಿಸಿ, ಸುಟ್ಟು ಆ ಫಸಲಿನ ದಂಟುಗಳನ್ನು ಕೊಳೆಯಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಹೊಲಗಳಿಗೆ ಹಾಕುವುದರಿಂದ ಹೊಲದ ಫಲವತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಜೋಳ, ಹಲಸಂದೆ, ಅವರೆ, ಬೀಜಗಳನ್ನು ಬಿತ್ತುತ್ತಾರೆ ಅವೆಲ್ಲಾ ಮೊಳಕೆ ಬರುತ್ತಲೇ ಅವುಗಳ ಜೊತೆ ಹುಟ್ಟುವ ಕಳೆಯನ್ನು ಇವರು ಕೀಳುತ್ತಾರೆ. ಇವರು ಸಾಸುವೆ, ರಾಗಿ, ಜೋಳವನ್ನು, ಬೀಸುಬಿತ್ತನೆಯಿಂದ ಬಿತ್ತುತ್ತಾರೆ. ಬೀಸುಬಿತ್ತನೆ ಮಾಡುವುದಕ್ಕೆ ಮುನ್ನ ಒಮ್ಮೆ ಕುಂಟೆಯನ್ನು ಉಪಯೋಗಿಸಿ ಕಳೆಯನ್ನು ತೆಗೆಯುತ್ತಾರೆ. ಮುಂದೆ ಫಸಲು ಕೈಗೆ ಬರುವ ತನಕವೂ ಕಳೆಕೀಳುವ ಕಾರ್ಯ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಇಲ್ಲಿನ ಹೊಲದ ಉಳುಮೆಗಾಗಲಿ ಅಥವಾ ಕಳೆಕೀಳಲು ಕುಂಟೆಯನ್ನು ತಂದು ಉಳುಮೆ ಮಾಡಿದರೆ ದಿನವೊಂದಕ್ಕೆ ೭೫ ರೂ.ಗಳನ್ನು ಕೂಲಿಯಂತೆ ಹಾಗೂ ಬೆಳಗ್ಗೆ ಮಧ್ಯಾಹ್ನ ಊಟವನ್ನು ನೀಡುತ್ತಾರೆ. ಊಟವಿಲ್ಲದಿದ್ದರೆ ೧೫೦ ರೂ.ಗಳನ್ನು ಕೂಲಿಯಂತೆ ನೀಡುತ್ತಾರೆ. ಬಿತ್ತನೆ ಮತ್ತು ಕಳೆಕೀಳುವ ಕೆಲಸವು ಬಹುಪಾಲು ಮಹಿಳೆಯರದ್ದೇ ಆದ್ದರಿಂದ ಇವರಿಗೂ ಕೂಡ ಒಂದು ದಿನಕ್ಕೆ ೪೫ ರಿಂದ ೫೦ ರೂ.ವರೆಗಿನ ಕೂಲಿಯನ್ನು ನೀಡುತ್ತಾರೆ. ಇಲ್ಲಿನ ಸೋಲಿಗರು “ಒಟ್ಟು ಬೇಸಾಯ”ದ ದವಸ ಧಾನ್ಯಗಳನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ಶುಷ್ಕ ಭೂಮಿಯಲ್ಲಿ ಮಳೆಯನ್ನು ಆಧರಿಸಿ ರಾಗಿ, ಜೋಳ, ಹುಚ್ಚೆಳ್ಳು, ಎಳ್ಳು, ಅವರೆ, ತೊಗರಿ ಕಾಳುಗಳನ್ನು ಬೆಳೆಯುತ್ತಾರೆ. ದೊಡ್ಡ ದೊಡ್ಡ ಮರಗಳ ಬುಡಗಳಲ್ಲಿ ಕುಂಬಳ, ಹಿತ್ತಲ ಅವರೆ, ಹೀರೆ, ಪಡುವಲಕಾಯಿ ಇನ್ನಿತರ ಬಳ್ಳಿಗಳನ್ನು ಬಳೆಸುತ್ತಾರೆ. ಅರಣ್ಯ ವೃಕ್ಷಗಳ ನಡುವೆಯೇ ಹಲವಾರು ಬಾಳೆಗಳು ಅಂದರೆ ಮದರಂಗಿ ಬಾಳೆ, ಏಲಕ್ಕಿ, ಬಾಳೆ, ಕದಿರುಬಾಳೆ, ಪುಟ್ಟುಬಾಳೆ, ಬೂದಿಬಾಳೆ, ಆನೆಗಳನ್ನು ಬೆಳೆಸುತ್ತಾರೆ. ಅದರ ನಡುವೆಯೇ ಬೆಳ್ಳೆಗೆಣಸು (ಸಿಹಿಗೆಣಸು), ಕೆಸು, ನೆವೆಗೆಣಸು, ನೂರೇಗೆಣಸು, ಬೆಳ್ಳಾರೆ ಗೆಣಸುಗಳನ್ನು ಬೆಳೆಸುತ್ತಾರೆ. ಗೆಣಸು ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೇರಳವಾಗಿ ದೊರೆಯುತ್ತದೆ. ಈ ಗೆಣಸನ್ನು ಬೆಂಕಿ ಹಾಕಿ ಸುಟ್ಟು ತಿನ್ನುತ್ತಾರೆ. ಈ ಗಿಡಬಳ್ಳಿಗಳ ನಡುವೆ ಔಷಧಯುಕ್ತ ಸಸ್ಯಗಳಾದ ಬ್ರಾಹ್ಮೀ, ಪುದೀನಾ, ಮೆಣಸು, ಎಲೆಬಳ್ಳಿಗಳನ್ನು ಬೆಳೆಸುತ್ತಾರೆ. ಇವಕ್ಕೆ ಯಾವುದೇ ಪ್ರತ್ಯೇಕ ಗೊಬ್ಬರವನ್ನಾಗಲೀ ಅಥವಾ ಪೋಷಕಾಂಶಗಳನ್ನಾಗಲೀ ಹಾಕುವುದಿಲ್ಲ.

ಸೋಲಿಗರು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳು

ಅಕ್ಕಿ- ದಿನವೊಂದಕ್ಕೆ ೨ ರಿಂದ ೩ ಪಾವು

ರಾಗಿ – ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ೧ ಅಥವಾ ೨ ಮುದ್ದೆ (೧೫೦ ಗ್ರಾಂ ನಿಂದ ೨೦೦ ಗ್ರಾಂ) ಕಾಳು- ಒಂದು ದಿನಕ್ಕೆ ೧೧೪ ಅಥವಾ ೨ ಪಾವು

ತರಕಾರಿ-ತಾವೇ ಬೆಳೆದದ್ದು, ಕಾಡಿನಲ್ಲಿ ದೊರಕುವ ಸೊಪ್ಪು

ಮೆಣಸಿನ ಹಣ್ಣು, ಜೀರಿಗೆ, ಮೆಣಸು, ಅರಿಸಿನ, ಕೊತ್ತಂಬರಿ, ತೆಂಗಿನಕಾಯಿ ರುಬ್ಬಿ ಅಥವಾ ಅರೆದು ಉಪಯೋಗಿಸುತ್ತಾರೆ. ಅವುಗಳು ಸಿಕ್ಕಷ್ಟು ಮತ್ತು ಇದ್ದರೆ ಮಾತ್ರ.

ಹುಸೆಹಣ್ಣು – ತಾವೇ ಬೆಳೆದದ್ದು ಅಥವಾ ಕೊಂಡದ್ದು.

ಉಪ್ಪು ಮತ್ತು ಒಳ್ಳೆಣ್ಣೆ – ರುಚಿಗೆ ತಕ್ಕಷ್ಟು

ಹಾಲು – ಹಸುಗಳನ್ನು ತಾವೇ ಸಾಕಿ ತಮಗೆ ಬೇಕಾದಷ್ಟು ಹಾಲನ್ನು ಇಟ್ಟುಕೊಂಡು ಬೇರೆಯವರಿಗೆ ಹಣವನ್ನು ತೆಗೆದುಕೊಳ್ಳದೆ ಕೊಡುತ್ತಾರೆ.

ಟೀ – ರು. ಪೊಟ್ಟಣ.

ಬೆಲ್ಲ – ೧ ಅಚ್ಚು ಅಥವಾ ೨. ಪ್ರತಿಬಾರಿಗೆ ಸೋಲಿಗರು ಬಹುತೇಕ ಕಪ್ಪು ಚಹಾ ಮತ್ತು ಮೇಕೆ ಹಾಲನ್ನು ಉಪಯೋಗಿಸುತ್ತಾರೆ.

ಸೋಲಿಗರು ಯಾವುದೇ ಸೀಮೆಗೊಬ್ಬರ ಇಲ್ಲದೆ ತಮ್ಮ ಪೋಡುಗಳಲ್ಲಿಯೇ ಸಾಕಿದ ಹಸು, ಕುರಿ, ಆಡುಗಳ ಗೊಬ್ಬರಗಳನ್ನು ಅಲ್ಪ ಪ್ರಮಾಣದಲ್ಲಿ ಉಪಯೋಗಿಸಿ ಹೊಲದಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಈ ಬೇಸಾಯ ಬೆಳೆಗಳ ಜೊತೆ ಅರಣ್ಯಗಳಿಂದ ನೈಸರ್ಗಿಕವಾಗಿ ಸಂಗ್ರಹಿಸಿದ ಜೇನು, ಗೆಡ್ಡೆಗೆಣಸು, ಹಣ್ಣು ಹಂಪಲು, ವಿವಿಧ ರೀತಿಯ ಸೊಪ್ಪುಗಳು ಕೂಡ ಸೋಲಿಗರ ಆರೋಗ್ಯ ರಕ್ಷಣೆಗೆ ನೆರವು ನೀಡುತ್ತಾರೆ.

ಸೋಲಿಗರು ಒಂದು ದಿನಕ್ಕೆ ತಾವು ಬೆಳೆದ ಯಾವುದಾದರೂ ಒಂದನ್ನು ಒಮ್ಮೆಗೆ ಅಂದರೆ ೪ ಕೆಜಿ, ತಾವೇ ಬೆಳೆದ ತರಕಾರಿ, ರಾಗಿ ಒಂದರಿಂದ ಎರಡು ಮುದ್ದೆ, ಸಾಂಬಾರಿಗೆ ಹುಣಸೆಹಣ್ಣು, ಮೆಣಸಿನ ಹಣ್ಣು, ಅರಿಸಿನ, ಕೊತ್ತಂಬರಿ ಇವನ್ನು ಅರೆದು ಅಥವಾ ರುಬ್ಬಿ ಉಪಯೋಗಿಸುತ್ತಾರೆ. ಕೆಲವೊಮ್ಮೆ ಕಾಳುಗಳನ್ನು ಬೇಯಿಸಿ ಬಸಿದು ಅದರ ಜೊತೆ ಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣನ್ನು ಕಿವುಚಿ ರಾಗಿ ಮುದ್ದೆಯ ಜೊತೆ ಉಪಯೋಗಿಸುತ್ತಾರೆ. ಇವರು ಬೆಲ್ಲದ ಟೀಯನ್ನು ಹೆಚ್ಚಾಗಿ ಬಳಸುತ್ತಾರೆ. ಇವರು ಅಕ್ಕಿಯನ್ನು ಬಳಸುವುದು ವಿರಳ ಅಂದರೆ ಒಂದು ದಿನಕ್ಕೆ ೨ ಸೇರು ಅಥವಾ ೧೨ ಪಾವು ಅಕ್ಕಿಯನ್ನು ಬೇಯಿಸಿ ಮನೆಯಲ್ಲಿರುವವರೆಲ್ಲರೂ ಉಪಯೋಗಿಸುತ್ತಾರೆ. ಅಕ್ಕಿ ಇಲ್ಲವೆಂದರೆ ಜೋಳ, ರಾಗಿಯಿಂದ ರೊಟ್ಟಿಯನ್ನು ತಯಾರಿಸಿ ತಿನ್ನುತ್ತಾರೆ. ರೊಟ್ಟಿಯೊಂದಿಗೆ ಇವರು ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಉಪಯೋಗಿಸುತ್ತಾರೆ. ಕೆಲವೊಮ್ಮೆ ಹುಚ್ಚೆಳ್ಳನ್ನು ತಮ್ಮ ಹೊಲದಲ್ಲಿಯೇ ಬೆಳೆದು ಅದನ್ನು ಒಳ್ಳೆಣ್ಣೆಯ ಬದಲಾಗಿ ಹುಚ್ಚೆಳ್ಳನ್ನು ಕುಟ್ಟಿ ಪುಡಿ ಮಾಡಿ ಅಥವಾ ಅರೆದು ಇದನ್ನು ಉಪಯೋಗಿಸುತ್ತಾರೆ.

ಇವರು ಕೆಲವೊಮ್ಮೆ ಕಾಡಿನಲ್ಲಿ ದೊರಕುವ ಕಾಡುಕೋಳಿ, ಜಿಂಕೆ, ಸಾರಂಗದ ಮಾಂಸವನ್ನು ಉಪಯೋಗಿಸುತ್ತಾರೆ. ತಪ್ಪಿಯೂ ಕಾಡುಹಂದಿಯ ಮಾಂಸವನ್ನು ತಿನ್ನುವುದಿಲ್ಲ. ಕಾರಣ ಇವರ ಆರಾಧ್ಯ ದೇವರುಗಳಾದ ಜಡೇಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿರಂಗಸ್ವಾಮಿ ದೇವರಿಗೆ ಹಂದಿ ಮಾಂಸ ಆಗುವುದಿಲ್ಲವೆಂದು, ತಿಂದರೆ ಏನಾದರೂ ಅನಾಹುತ ಆಗುತ್ತದೆಂಬುದು ಇವರ ನಂಬಿಕೆ.

ಜಮೀನಿಲ್ಲದೇ ಇರುವ ಬೂದಿಪಡಗದ ಸೋಲಿಗರು ತಮ್ಮ ಜೀವನ ನಿರ್ವಹಣೆಗೆಂದು ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವುಗಳೆಂದರೆ ದೂರದಲ್ಲಿರುವ ಎಸ್ಟೇಟುಗಳಲ್ಲಿ ಅಥವಾ ಬೇರೆ ಜಿಲ್ಲೆಗಳಲ್ಲಿ, ಪಕ್ಕದ ರಾಜ್ಯವಾದ ಕೇರಳಕ್ಕೆ ತೆರಳುತ್ತಾರೆ. ಇವರು ಟೀ ಎಲೆ ಬಿಡಿಸಲು, ಕಾಫಿ ಹಣ್ಣುಗಳನ್ನು ಬಿಡಿಸಲು, ಗಾರೆಕೆಲಸಗಳಿಗಾಗಿ ದೂರದ ಊರುಗಳನ್ನು ಅವಲಂಬಿಸಿದ್ದಾರೆ. ಇವರಿಗೆ ಇಲ್ಲಿ ಕೂಲಿಯೂ ರೂ. ೮೦ ರಿಂದ ೧೦೦ರ ವರೆಗೆ ದೊರೆಯುತ್ತದೆ.

ಅರಣ್ಯ ಇಲಾಖೆಯವರು ಕಾಡಿನಲ್ಲಿ ಮಳೆಗಾಲದಲ್ಲಿ ಹೊಸ ಗಿಡಗಳನ್ನು ನೆಡಿಸಲು, ಗೇಮ್‌ರೋಡುಗಳನ್ನು ಶುಚಿಗೊಳಿಸಲು, ರಸ್ತೆ ಇಕ್ಕೆಲುಗಳಲ್ಲಿ ಬೆಳೆದಿರುವ ಗಿಡಗಳನ್ನು ಕತ್ತರಿಸಲು, ಕಾಡ್ಗಿಚ್ಚುಗಳನ್ನು ನಂದಿಸಲು , ಒಬ್ಬ ಮಧ್ಯವರ್ತಿಯನ್ನು ನೇಮಕ ಮಾಡುತ್ತಾರೆ. ಈ ಮಧ್ಯವರ್ತಿಯಿಂದ ದಿನವೊಂದಕ್ಕೆ ಇವರಿಗೆ ರೂ. ೧೦ ರಿಂದ ೧೫೦ರವರೆಗೆ ದಿನಗೂಲಿಯಂತೆ ಹಣವನ್ನು ನೀಡಿ ಕೆಲಸವನ್ನು ಮಾಡಿಸುತ್ತಾರೆ.

ಬೂದಿಪಡಗದ ಹಾದಿಯಲ್ಲಿರುವ ಸೋಲಿಗರಿಗೆ ಸರ್ಕಾರದ ವತಿಯಿಂದ ಒಂದು ಕುಟುಂಬಕ್ಕೆ ೩ ರಿಂದ ೪ ಎಕರೆ ಜಮೀನನ್ನು ವಿತರಿಸಲಾಗಿದೆ. ಈ ಜಮೀನಿನಲ್ಲಿ ಇವರು ಹುಣಸೆಹಣ್ಣಿನ ಮರಗಳನ್ನು ಬೆಳೆಸಿ ವರ್ಷಕ್ಕೆ ಒಂದು ಮರದಿಂದ ೪ ರಿಂದ ೫ ಕ್ವಿಂಟಾಲ್‌ಹುಣಸೆಹಣ್ಣನ್ನು ಪಡೆಯುತ್ತಾರೆ. ಒಂದು ಕ್ವಿಂಟಾಲ್‌ಹುಣಸೆಹಣ್ಣಿಗೆ ರೂ. ೬೦೦ ರಿಂದ ೯೦೦ರವರೆಗೆ ಮಾರಿ ಹಣ ಗಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇವರು ತಮ್ಮ ಜಮೀನಿನಲ್ಲಿ ಹೂವಿನ ಬೇಸಾಯವನ್ನು ಮಾಡುವುದುಂಟು. ಹೂವಿನ ಬೇಸಾಯವೆಂದರೆ ಪಕ್ಕದಲ್ಲಿರುವ ತಮಿಳುನಾಡಿನ ತೋಟಗಾರಿಕೆ ಇಲಾಖೆಯವರು ಅಥವಾ ಸುಗಂಧ ದ್ರವ್ಯಗಳನ್ನು ತಯಾರಿಸುವ ಕಾರ್ಖಾನೆಯವರು ಧನಸಹಾಯ ಮಾಡಿ ಮಲ್ಲಿಗೆ, ಚಂಡು, ಕನಕಾಂಬರ ಹೂವಿನ ಬೇಸಾಯವನ್ನು ಮಾಡುತ್ತಿದ್ದಾರೆ.

ಇಲ್ಲಿನ ಸೋಲಿಗರ ಕೆಲವು ಮಹಿಳೆಯರು ಹಸು ಮತ್ತು ಕುರಿಗಳನ್ನು ಬೇರೆಯವರಿಂದ ಪಡೆದು ಅವುಗಳನ್ನು ಬಾಡಿಗೆಗಾಗಿ ಮೇಯಿಸುತ್ತಾರೆ. ಇವುಗಳನ್ನು ಮೇಯಿಸಲು ದಿನವೊಂದಕ್ಕೆ ೨ ಹಸುವಿಗೆ ೧ ರೂ.ನಂತೆ ವರ್ಷಕ್ಕೆ ೩೫೦ ರಿಂದ ೪೫೦ ರೂ.ಗಳನ್ನು ಪಡೆಯುತ್ತಾರೆ.

ಇಲ್ಲಿನ ಬೆರಳೆಣಿಕೆಯಷ್ಟು ಸೋಲಿಗರು ಸರ್ಕಾರದ ಕೆಲಸಗಳಿಗೆ ಸೇರಿಕೊಂಡಿದ್ದಾರೆ. ೯ನೇ ತರಗತಿವರೆಗೆ ಓದಿದ ನಂತರ ಅರಣ್ಯ ಇಲಾಖೆಯಲ್ಲಿ ವನಪಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಹಾಗೂ ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ಆಶ್ರಮಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಅಡುಗೆ, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರಾಗಿ, ದಿನಗೂಲಿ ಹಾಗೂ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಸೋಲಿಗರು ಕಾಡಿನ ಅಂಚಿನಲ್ಲಿ ದೊರಕುವ ಒಣ ಕಟ್ಟಿಗೆಗಳನ್ನು ಮಾರಿ ಜೀವನ ನಡೆಸುತ್ತಿದ್ದಾರೆ. ಅಭಯಾರಣ್ಯದ ಒಳಗೆ ಹಾಗೂ ಹೊರಗಿನ ಸಾವಿರಾರು ಜನರು ಉರುವಲಿಗಾಗಿ ೫೬೦ ಚ.ಕಿ.ಮೀ. ವಿಸ್ತೀರ್ಣದ ಕಾಡನ್ನೇ ಅವಲಂಬಿಸಿದ್ದಾರೆ. ಅಭಯಾರಣ್ಯದ ಅಂಚಿನ ಕಾಡಲ್ಲಿ ಜನವಸತಿ ಹೇರಳವಾಗಿರುವುದರಿಂದ ಆ ಪ್ರದೇಶದಲ್ಲಿ ಶೇ. ೮೬ರಷ್ಟು ಉರುವಲು ಸಂಗ್ರಹಣೆಯಾಗುತ್ತದೆ. ಇಲ್ಲಿ ವರ್ಷಕ್ಕೆ ಸುಮಾರು ೫೦ ಟನ್‌ಗಳಷ್ಟು ಸೌದೆಗೆ ಬೇಡಿಕೆ ಇದೆ. ಸಹಜವಾಗಿಯೇ ಅತಿಯಾದ ಪ್ರಮಾಣದಲ್ಲಿ ಉರುವಲನ್ನು ಸಾಗಿಸುವ ಪ್ರಯತ್ನಗಳು ನಡೆಯುತ್ತವೆ. ಅಂದರೆ ದಿನಕ್ಕೆ ಸರಾಸರಿ ೩೦ ಕೆ.ಜಿಯಷ್ಟು ಉರುವಲನ್ನು ಸಂಗ್ರಹಿಸಿ ೧ ಕಟ್ಟಿಗೆಗೆ ರೂ. ೫೦ ರಂತೆ ಸಂಗ್ರಹಿಸುತ್ತಾರೆ. ಸೋಲಿಗರ ಮುಖ್ಯ ವೃತ್ತಿ ಬೇಸಾಯ ಶೇ.೯೭ ಭಾಗದ ಕುಟುಂಬಗಳು ವ್ಯವಸಾಯವನ್ನು ಒಂದು ಮುಖ್ಯ ವೃತ್ತಿಯನ್ನಾಗಿ ಮಾಡುತ್ತಿವೆ.

ಅರಣ್ಯ ಉತ್ಪನ್ನಗಳು

ಭಾರತದಲ್ಲಿ ಬಹುತೇಕ ಎಲ್ಲ ಕಿರು ಅರಣ್ಯ ಸಂಪತ್ತುಗಳನ್ನು ರಾಷ್ಟ್ರೀಕರಣ ಮಾಡಲಾಗಿದ್ದು ಅವೆಲ್ಲಾ ಸರ್ಕಾರದ ಸ್ವತ್ತುಗಳೇ ಆಗಿದ್ದು, ಅವನ್ನು ಸಂಗ್ರಹಿಸಿದವರು ಸರ್ಕಾರಕ್ಕೆ ಮಾರಬೇಕಾಗುತ್ತದೆ. ರಾಷ್ಟ್ರೀಕರಣಕ್ಕೆ ಮೊದಲು ಇಂತಹ ಉತ್ಪನ್ನಗಳನ್ನು ಅವರು ಯಾರಿಗೆ ಬೇಕಾದರೂ ಸಹ ಮಾರಬಹುದಾಗಿತ್ತು. ಸೋಲಿಗರು ಸಂಗ್ರಹಿಸಿದ ಕಿರು ಉತ್ಪನ್ನಗಳನ್ನು ಅರಣ್ಯ ಗುತ್ತಿಗೆಗಾರರಿಗೆ ಮಾರುತ್ತಿದ್ದರು. ಆದರೆ ೩೦ ವರ್ಷಗಳ ಹಿಂದೆ ಆದಿವಾಸಿಗಳು ಸಂಗ್ರಹಿಸಿದ ಇಂಥಹ ಕಿರು ಉತ್ಪನ್ನಗಳ ಮಾರಾಟಕ್ಕೆಂದು ಸರ್ಕಾರ “ಲ್ಯಾಂಪ್ಸ್‌” ಹೆಸರಿನ ಸಹಕಾರ ಸಂಸ್ಥೆಯನ್ನು ಸ್ಥಾಪಿಸಿತು. ಇಲ್ಲಿ ಆದಿವಾಸಿಗಳು ಸಂಗ್ರಹಿಸಿದ ಜೇನು, ನೆಲ್ಲಿಕಾಯಿ, ಸೀಗೆಕಾಯಿ, ತಾರೆ, ಅಂಟುವಾಳ, ಅರಳೆ, ಬೇಲ, ಮಾಕಳಿಬೇರು, ಪಾಚಿಯನ್ನು ಖರೀದಿಸಲಾಗುತ್ತಿತ್ತು. ಬಿಳಿಗಿರಿರಂಗನ ದೇವಾಲಯದ ಅಭಯಾರಣ್ಯದ ಬಹುಮುಖ್ಯ ಕಿರುಉತ್ಪನ್ನವೆಂದರೆ ನೆಲ್ಲಿಕಾಯಿ. ಈ ನೆಲ್ಲಿಕಾಯಿ ಸಂಗ್ರಹಕ್ಕಾಗಿಯೇ ಶೇ. ೬೦ ರಷ್ಟು ಸೋಲಿಗರು ದುಡಿಯುತ್ತಾರೆ. ನೆಲ್ಲಿಕಾಯಿಯು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎಲೆ ಉದುರಿ ಹೂ ಅರಳುತ್ತವೆ. ಕಾಯಿಗಳನ್ನು ನವೆಣಬರ್‌ಮತ್ತು ಡಿಸೆಂಬರ್‌ತಿಂಗಳಲ್ಲಿ ಕೊಯ್ದು ಮಾಡಲಾಗುವುದು. ಆದಿವಾಸಿಗಳು ಸಂಗ್ರಹಿಸಿದ ನೆಲ್ಲಿಕಾಯಿಗೆ ಕೆ.ಜಿ.ಗೆ ರೂ. ೩.೫೦ರಂತೆ ಲ್ಯಾಂಪ್ಸ್‌ಸೊಸೈಟಿಯವರು ಖರೀದಿಸಿ ಅದನ್ನು ಮಾರುಕಟ್ಟೆಯಲ್ಲಿ ರೂ.೫.೫೦ ರಿಂದ ೬.೦೦ ರೂಗಳಿಗೆ ಮಾರುತ್ತಾರೆ. ಸಹಕಾರ ಸಂಘದವರು ೩ ರಿಂದ ೪ ಹಾಡಿಗಳಿಗೆ ಒಬ್ಬ ಮಧ್ಯವರ್ತಿಯನ್ನು ಆಯ್ಕೆ ಮಾಡಿ ಈ ಮಧ್ಯವರ್ತಿಗಳಿಗೆ ರೂ.೫.೫೦ರಂತೆ ಕೆಜಿ ನೆಲ್ಲಿಕಾಯಿಗೆ ೦.೫೦ ಪೈಸೆ ದಲ್ಲಾಳಿ ಹಣವನ್ನು ಪಾವತಿಸುತ್ತಾರೆ.

ಪಾಚಿ

ಈ ಪಾಚಿ ಇದ್ದೆಡೆ ನೀರಿನ ಅಂಶ ಇದ್ದೇ ಇರುತ್ತದೆ. ಅವುಗಳನ್ನು ಆಧರಿಸಿ ಅನೇಕ ಬಗೆಯ ಸೂಕ್ಷ್ಮ ಜೀವಿಗಳು ಜೀವಿಸುತ್ತವೆ. ವಾಯುಮಾಲಿನ್ಯ ಜಾಸ್ತಿ ಇದ್ದಲ್ಲಿ ಇವು ಹೆಚ್ಚು ಬದುಕಲಾರವು. ಇವು ಮಾಲಿನ್ಯದ ಸೂಚಕಗಳೆನ್ನಬಹುದು. ಮಳೆಗಾಲದ ಅಬ್ಬರ ಕಡಿಮೆಯಾದ ನಂತರ ಅಂದರೆ ಸೆಪ್ಟೆಂಬರ್ ಮಾಹೆಯಲ್ಲಿ ಇದರ ಕೊಯ್ಲು ಪ್ರಾರಂಭವಾಗುತ್ತದೆ. ಮಳೆ ಬೀಳುತ್ತಿದ್ದರೆ, ಮರಗಳು ತುಂಬಾ ಜಾರುವುದರಿಂದ ಕೊಯ್ಲು ಈ ಸಮಯದಲ್ಲಿ ಅಸಾಧ್ಯ. ಹಾಗೆಯೇ ದೊಡ್ಡ ಮರಗಳಲ್ಲಿ ಇದನ್ನು ಶೇಖರಿಸಲು ಕಚ್ಚು ಹಾಕಿ ಮೆಟ್ಟಿಲಿನಿಂದ ಮಾಡಿಇದನ್ನು ಸಂಗ್ರಹಿಸುತ್ತಾರೆ. ಒಬ್ಬ ಸೋಲಿಗ ದಿನವೊಂದಕ್ಕೆ ೫ ಕೆ. ಜಿ. ಯಿಂದ ೬ಕೆ. ಜಿ. ವರೆಗೆ ಸಂಗ್ರಹಿಸಿ ಕೆ.ಜಿ.ಯೊಂದಕ್ಕೆ ೬೦ ರೂ. ನಂತೆ ಲ್ಯಾಂಪ್ಸ್ ಸೊಸೈಟಿಗೆ ಮಾರುತ್ತಾರೆ. ಪಾಚಿಯನ್ನು ಸೊಸೈಟಿಯ ಮೂಲಕ ಬಣ್ಣ ಮತ್ತು ವಾರ್ನಿಶ್ ತಯಾರಿಕಾ ಉದ್ದಿಮೆಗಳಿಗೆ ಸರಬರಾಜು ಮಾಡಲಾಗುತ್ತದೆ ಹಾಗೂ ಲ್ಯಾಂಪ್ಸ್‌ನವರು ಉದ್ದಿಮೆದಾರರಿಗೆ ೭೦ ರೂ. ನಿಂದ ೮೦ ರೂ. ಕೆ.ಜಿ ಮಾರುತ್ತಾರೆ.

ಜೇನು

ಹಿಂದೆ ಸೋಲಿಗರು ಜೇನನ್ನು ಸಂಗ್ರಹಿಸಿ ಮಡಿಕೆಗಳಲ್ಲಿ ಶೇಖರಿಸಿ ಮನೆಗಳಲ್ಲಿ ಇಟ್ಟುಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಬೇರೆ ಆಹಾರ ಪದಾರ್ಥಗಳು ಉಪಯೋಗಿಸಲು ಸುಲಭವಾಗಿ ಸಿಗದಿದ್ದಲ್ಲಿ ಜೇನನ್ನೇ ದೊಡ್ಡ ಪ್ರಮಾಣದಲ್ಲಿ ಸೇವಿಸುತ್ತಿದ್ದರು. ಇವುಗಳಲ್ಲಿ ೪ ವಿಧವಾದ ಜೇನುಗಳಿವೆ.

೧. ಹೆಜ್ಜೇನು

೨. ತುಡುವೆ ಜೇನು

೩. ಕಡ್ಡಿ ಜೇನು

೪. ನುಸುರಿ ಜೇನು

ಈಗ ಜೇನನ್ನು ಆಹಾರ, ð‌ಔಷಧಕ್ಕಾಗಿ ಸೇವನೆ ಮಾಡುತ್ತಾರಾದರೂ ಸಾಕಷ್ಟು ಪ್ರಮಾಣದಲ್ಲಿ ಅದನ್ನು ಕಿರುಅರಣ್ಯ ಉತ್ಪಾದಕರಿಗೆ ಮಾರಿ ಇವರು ನಗದನ್ನು ಗಳಿಸುತ್ತಾರೆ. ಜೇನು ಸಂಗ್ರಹಿಸುವ ಸೋಲಿಗರಿಗೆ ಈ ನಾಲ್ಕು ಪ್ರಭೇಧಗಳ ಜೇನಿನಲ್ಲೇ ಅತಿಹೆಚ್ಚು ಲಾಭದಾಯಕ ಮತ್ತು ಆದಾಯವನ್ನು ತಂದುಕೊಡುವ ಜೇನೆಂದರೆ ‘ಹೆಜ್ಜೇನು’. ಇವು ಎತ್ತರದ ಕಲ್ಲು ಬಂಡೆಗಳಿಗೆ ಹುಟ್ಟು ಕಟ್ಟುವುದರಿಂದ ಇದನ್ನು ‘ರಾಕ್‌ಬೀಸ್’ ಎಂತಲೂ ಕರೆಯುತ್ತಾರೆ.

ಅಂಟುವಾಳ ಕಾಯಿ

ಸಾಬೂನಿನಂತೆ ನೊರೆವರುವ ನೈಸರ್ಗಿಕ ಹಣ್ಣು ಅಂಟುವಾಳಕಾಯಿ ಇದು ಸಾಮಾನ್ಯ ಗಾತ್ರದ ಮರವಾಗಿ ಹೆಚ್ಚಿನ ತೇವಾಂಶ ಇರುವ ಪ್ರದೇಶಗಳಲ್ಲಿ ಹಳ್ಳಿಗಳ ಅಂಚಿನಲ್ಲಿ, ಶೋಲಾ ಕಣಿವೆಗಳಲ್ಲಿ ಹಾಗೂ ಸದಾ ಹಸಿರಿನಿಂದ ಕೂಡಿದ ಗಿಡಮರಗಳ ಮಧ್ಯೆ ಅಂಟುವಾಳಕಾಯಿ ಮರಗಳು ತಾವಾಗಿಯೇ ಬೆಳೆಯುತ್ತವೆ. ಇದರ ಕಾಯಿಯನ್ನು ಬಟ್ಟೆ ತೊಳೆಯಲು, ತಲೆಕೂದಲು ತೊಳೆಯಲು, ಒಡವೆಗಳಿಗೆ ಹೊಳಪು ನೀಡಲುಉಪಯೋಗಿಸುತ್ತಾರೆ. ಪ್ರತಿವರ್ಷ ಫೆಬ್ರವರಿ ಮಾರ್ಚ್ ತಿಳಗಳಲ್ಲಿ ಇದರ ಕಾಯಿಗಳನ್ನು ಸಂಗ್ರಹ ಮಾಡಲಾಗುತ್ತದೆ. ಅಂಟುವಾಳ ಕಾಯಿಗಳನ್ನು ಸಂಗ್ರಹಿಸಿದ ಆದಿವಾಸಿಗಳಿಗೆ ಲ್ಯಾಂಪ್ಸ್‌ಸೊಸೈಟಿಯವರು ೨೦೦೩ರಲ್ಲಿ ಪ್ರತಿ ಕೆ.ಜಿ.ಗೆ ರೂ.೪.೯೦ರಂತೆ ದರವನ್ನು ನಿಗದಿಗೊಳಿಸಿ ನೀಡುತ್ತಿದ್ದರು. ಅದನ್ನು ನಗರ ಪ್ರದೇಶಗಳಲ್ಲಿ ರೂ.೭.೮೦ರಂತೆ ಮಾರಾಟ ಮಾಡಿ ಲ್ಯಾಂಪ್ಸ್‌ ಸೊಸೈಟಿಯವರು ಅಲ್ಪ ಪ್ರಮಾಣದಲ್ಲಿ ಲಾಭಗಳಿಸುತ್ತಾರೆ.

ಸೀಗೆಕಾಯಿ

ದೊಡ್ಡ ಮರಗಳನ್ನೂ ಅಥವಾ ಪೊದೆಗಳನ್ನು ಆಶ್ರಯಿಸಿ ಬೆಳೆಯುವ ಈ ಸೀಗೆಕಾಯಿಗಳನ್ನು ಸಂಗ್ರಹಿಸಿ ಒಣಗಿಸಿ ಬೀಜವನ್ನು ಕುಟ್ಟಿ ಪುಡಿಮಾಡಿ ತಲೆ ಸ್ನಾನಕ್ಕೆ, ಪಾತ್ರೆ ಹಾಗೂ ಬಟ್ಟೆ ತೊಳೆಯಲು ಇದನ್ನು ಯಥೇಚ್ಚವಾಗಿ ಬಳಸುತ್ತಾರೆ. ಸೀಗೆಕಾಯಿಯನ್ನು ಮಾರ್ಚ್ ಮತ್ತು ಏಪ್ರಿಲ್‌ತಿಂಗಳಲ್ಲಿ ಸಂಗ್ರಹ ಮಾಡಲಾಗುತ್ತದೆ.

ಯಾವುದೇ ಫಸಲಿನ ಕೊಯ್ಲು ಮಾಡುವಾಗ ಅಂತಹ ಫಸಲು ಮುಂದಿನ ಸುಗ್ಗಿಯಲ್ಲಿ ಕೊಯ್ಲು ಮಾಡುವಂತೆ ಇವರು ಆಶಿಸುವುದುಂಟು. ಇದು ಮುಂದಿನ ಪೀಳಿಗೆಗೂ ಸಿಗುವಂತಿರಬೇಕು. ಒಂದನ್ನು ಬಳಸಿದರೆ ಇನ್ನೊಂದರ ಮೇಲೆ ಹೇಗೆ ಅದು ಪರಿಣಾಮ ಬೀರುತ್ತದೆ ಎಂಬುದನ್ನು ಸರಳವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಕಿರುಅರಣ್ಯ ಉತ್ಪಾದನೆಯನ್ನು ಶೇಖರಿಸುವ ಕೃತ್ಯದಿಂದ ಅರಣ್ಯದ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ ಎಂದು ದಾಖಲಿಸುವ ವ್ಯವಸ್ಥೆಯನ್ನು ಸೋಲಿಗರ ನೆರವಿನಿಂದ ಪ್ರತಿ ಲ್ಯಾಂಪ್ಸ್‌ಸೊಸೈಟಿಗಳಲ್ಲಿ ಮಾಡಲಾಗಿದೆ.

ಪ್ರತಿವರ್ಷವು ಕೊಯ್ಲಿಗೆ ಮುನ್ನ ಸೋಲಿಗರು ಕೇವಲ ಕಣ್ಣಳತೆಯಲ್ಲಿಯೇ ಎಲ್ಲವನ್ನು ಸಮೀಕ್ಷೆ ನಡೆಸುತ್ತಾರೆ. ಸಾಮಾನ್ಯವಾಗಿ ಅದರ ಅಂದಾಜು ಈ ಬಗ್ಗೆ ಸರಿಯಾಗಿಯೇ ಇರುತ್ತದೆ. ಕೊಯ್ಲು ಮುಗಿದ ಬಳಿಕ ಮತ್ತೊಮ್ಮೆ ಸಭೆ ಸೇರಿ ಒಟ್ಟಾರೆ ಉತ್ಪಾದನೆಯ ಮಟ್ಟದ ಬಗ್ಗೆ ವಿಮರ್ಶೆ ಮಾಡುತ್ತಾರೆ. ಈ ವಿಧಾನದಿಂದಾಗಿಯೇ ಹಿಂದಿನ ಹತ್ತು ವರ್ಷಗಳ ಕಿರುಅರಣ್ಯ ಸಂಪತ್ತುಗಳ ಉತ್ಪಾದನೆ ಮತ್ತು ಕೊಯ್ಲಿನ ವಿವರಗಳು ದಾಖಲಿಸಲ್ಪಟ್ಟಿದ್ದು, ಈ ಅಭಯಾರಣ್ಯದ ಹಲವು ಭಾಗಗಳಲ್ಲಿ ಕೆಲವು ವರ್ಷಗಳ ಇಳುವರಿಯಲ್ಲಿ ಸಾಕಷ್ಟು ಏರಿಳಿತಗಳು ದಾಖಲಾಗಿವೆ.

ಸಾರಾಂಶ

ಸೋಲಿಗರು ಅರಣ್ಯದಲ್ಲಿ ದೊರಕುವ ಕೆಲವು ಮರಮುಟ್ಟುಗಳನ್ನು ಬಿಟ್ಟು ಉಳಿದವುಗಳನ್ನು ಕಿರುಅರಣ್ಯ ಉತ್ಪನ್ನವೆಂದು ಕರೆಯುತ್ತಾರೆ. ಅನೇಕ ಶತಮಾನಗಳ ಹಿಂದೆ ಸೋಲಿಗರು ಹಿಂದಿನ ಕಾಲದ ಇತರೆ ಆದಿವಾಸಿ ಸಮುದಾಯಗಳಂತೆಯೇ ಬೇಟೆ, ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮತ್ತು ಕೃಷಿ ಮಾಡುತ್ತಾ ಜೀವನ ನಡೆಸುತ್ತಿದ್ದರು. ಇವರ ಎಲ್ಲ ಅಗತ್ಯಗಳ ಪೂರೈಕೆಗೆ ಅರಣ್ಯದಿಂದ ಹಾಗೂ ಅಭಯಾರಣ್ಯದಲ್ಲಿ ತೆರವು ಮಾಡಿಕೊಂಡಿದ್ದ ಕೃಷಿ ಭೂಮಿಯಿಂದ ಪೂರೈಕೆಯಾಗುತ್ತಿದ್ದವು. ೧೯೭೨ರಲ್ಲಿ ಬಿಳಿಗಿರಿರಂಗನ ದೇವಾಲಯದ ಅಭಯಾರಣ್ಯ ಅಸ್ತಿತ್ವಕ್ಕೆ ಬಂದ ನಂತರ ಸೋಲಿಗರ ವಲಸೆ ಜೀವನ ಶೈಲಿ ಮತ್ತು ಸ್ಥಳಾಂತರ ಬೇಸಾಯದ ವಿಧಾನ ಅಂತ್ಯಗೊಂಡಿದ್ದು, ಒಂದೆಡೆ ನೆಲೆಸುವಂತೆ ಹಾಗೂ ಒಂದೇ ಜಮೀನಿನಲ್ಲಿ ಪ್ರತಿವರ್ಷವೂ ಬೇಸಾಯ ಮಾಡುವಂತೆ ಅವರ ಮನವೊಲಿಸಿ ಅವರಿಗೆ ಸರ್ಕಾರದ ವತಿಯಿಂದ ಪಟ್ಟಾ ಜಮೀನುಗಳನ್ನು ನೀಡಲಾಗಿದೆ.

೨೦೦೪ನೇ ಇಸವಿ ಆರಂಭದಲ್ಲಿ ಅರಣ್ಯ ಇಲಾಖೆ ಹಠಾತ್ತಾಗಿ ಅಭಯಾರಣ್ಯದಲ್ಲಿ ಕಿರುಅರಣ್ಯ ಉತ್ಪನ್ನಗಳ ಸಂಗ್ರಹವನ್ನು ನಿಷೇಧಿಸಿತು. ಕಾರಣವೇನೆಂದರೆ, ವನ್ಯಜೀವಿ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ಮಾಡಲಾಗಿದ್ದು, ಅದು ೨೦೦೩ರ ಏಪ್ರಿಲ್‌೦೧ ರಿಂದ ಜಾರಿಗೆ ಬಂದಿರುವುದು. ಸದರಿ ತಿದ್ದುಪಡಿಯ ಪ್ರಕಾರ ಅಭಯಾರಣ್ಯದಲ್ಲಿ ಹಣ ಗಳಿಕೆಯ ಉದ್ದೇಶಕ್ಕೆಂದು ಕಿರುಅರಣ್ಯ ಉತ್ಪನ್ನಗಳನ್ನು ಸಂಗ್ರಹ ಮಾಡುವಂತಿಲ್ಲ.

ಸೋಲಿಗರು ತಮ್ಮ ಅಲ್ಪ ಆದಾಯಕ್ಕೆ ತುಸು ಹೆಚ್ಚಿನ ಹಣವನ್ನು ಜಮೆ ಮಾಡುವ ಉದ್ದೇಶದಿಂದ ಕಿರುಅರಣ್ಯ ಉತ್ಪನ್ನಗಳ ಸಂಗ್ರಹಣೆಯಲ್ಲಿ ತೊಡಗುತ್ತಾರೆ. ಇಲ್ಲಿನ ಸೋಲಿಗರು ಆಗಿನ ಕಾಲದ ಇತರ ಆದಿವಾಸಿ ಸಮುದಾಯದವರಂತೆಯೇ ಬೇಟೆ, ಸಂಗ್ರಹಣೆ, ಇತರೆ ಕೃಷಿ ಚಟುವಟಿಕೆಗಳಲ್ಲಿ ಬಂದ ಆದಾಯದಲ್ಲಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಈಗಲೂ ಸಹ ಸೋಲಿಗರು ಬೇಟೆಯ ಹೊರತಾಗಿ ಮೊದಲಿನಂತೆ ಜೀವನ ನಿರ್ವಹಿಸುತ್ತಿದ್ದರೂ ಪ್ರತಿಯೊಂದು ಪದಾರ್ಥಗಳ ಬೆಲೆ ಏರಿಕೆಯಾಗಿರುವುದು ದುಸ್ತರದ ಸಂಗತಿಯೇ ಸರಿ.

೧೯೭೨ರಲ್ಲಿ ಬಿಳಿಗಿರಿರಂಗನಬೆಟ್ಟದ ದೇವಾಲಯದ ವನ್ಯಧಾಮವು ಅಸ್ತಿತ್ವಕ್ಕೆ ಬಂದ ನಂತರ ಅಲೆಮಾರಿ ಜೀವನಕ್ಕೂ ಕುತ್ತು, ಸಂಚಕಾರ ಬಂದಿದೆ ಕಾಡಿನಿಂದ ಬರುವ ಕಿರು ಉತ್ಪನ್ನಗಳನ್ನೇ ಸಂಗ್ರಹಿಸಿ ಜೀವನ ನಿರ್ವಹಿಸುತ್ತಿದ್ದರು. ಅರಣ್ಯ ನೀತಿಯಿಂದಾಗಿ ಇಂದು ಹಲವಾರು ಕಟ್ಟುಪಾಡುಗಳನ್ನು ಹೇರಿರುವುದರಿಂದ ಸೋಲಿಗರು ಇಂದು ಕೇವಲ ಕೃಷಿಯನ್ನು ಅವಲಂಬಿಸಿ ಬದುಕಬೇಕಾಗಿದೆ. ಅದರಲ್ಲೂ ಮಳೆಯನ್ನು ಆಧರಿಸಿ ಬೆಳೆಯುವ ಬೆಳೆಯನ್ನು ಮಾತ್ರವೇ ಬೆಳೆಯುವುದರಿಂದ ಬೆರಳೆಣಿಕೆಯಷ್ಟು ಸೋಲಿಗರಲ್ಲಿ ಮಾತ್ರವೇ ಆದಾಯ ಕಾಣಬಹುದಾಗಿದ್ದು ಉಳಿದ ಸೋಲಿಗರು ತಮ್ಮ ಜೀವನದ ನಿರ್ವಹಣೆಗೆ ಕೂಲಿಯನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿ ಸರ್ಕಾರವು ಎಷ್ಟೇ ಸವಲತ್ತುಗಳನ್ನು ನೀಡಿದರೂ ಸಹ ಅವರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ.

ಕಿರು ಅರಣ್ಯ ಉತ್ಪನ್ನಗಳನ್ನು ಎಷ್ಟೇ ಸಂಗ್ರಹಿಸಿದರೂ ಲ್ಯಾಂಪ್ಸ್‌ಸೊಸೈಟಿಗಳಿಗೆ ಮಾರುವ ಪರಿಪಾಠವಿತ್ತು. ಈ ಮಾರಾಟದಿಂದ ಮಧ್ಯವರ್ತಿಗಳಿಗೆ ದಳ್ಳಾಳಿ ಹಣ ಗಳಿಕೆಯಾಗುತ್ತಿತ್ತು ಹಾಗೂ ಲ್ಯಾಂಪ್ಸ್‌ಸೊಸೈಟಿಯವರು ಇವರಿಂದ ಕಡಿಮೆ ಬೆಲೆಗೆ ಖರೀದಿಸಿದರೂ ಇದನ್ನು ಹೆಚ್ಚಿನ ಬೆಲೆಗಳಿಗೆ ಮಾರಾಟಮಾಡಿ ಬಂದ ಲಾಭದಲ್ಲಿ ಗಿರಿಜನ ಹಾಡಿಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದು, ಕಡುಬಡತನದಲ್ಲಿರುವ ಸೋಲಿಗರಿಗೆ ಪಾತ್ರೆಗಳನ್ನು ಇನ್ನಿತರ ಮೂಲಭೂತ ಸೌಕರ್ಯದ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಂಪೂರ್ಣವಾಗಿ ನಿಂತಂತಾಗಿದೆ. ಇವರು ತಮ್ಮ ಜೀವನ ನಿರ್ವಹಣೆಗೆ ಪ್ರತಿಯೊಂದಕ್ಕೂ ಸರ್ಕಾರದಿಂದ ಒದಗಿಸುವ ಸೌಲಭ್ಯಗಳನ್ನು ಅವಲಂಬಿಸಲು ಸಾಧ್ಯವಿಲ್ಲ. ಕೃಷಿ ಚಟುವಟಿಕೆಗಳಲ್ಲಿ ಆದಾಯವಿಲ್ಲವೆಂಬಂತಾಗಿದೆ. ಈಗಿನ ನಿಷೇಧವನ್ನು ರದ್ದು ಮಾಡದಿದ್ದರೆ ಅವರ ಬದುಕು ಇನ್ನಷ್ಟು ಕಷ್ಟದಾಯಕವಾಗಿರುತ್ತದೆ. ಹೊರ ಜಗತ್ತಿನ ಪ್ರಭಾವಕ್ಕೆ ಒಳಗಾಗುತ್ತಿರುವ ಸೋಲಿಗರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿದ್ದಾರೆ.

ಕಳೆದ ೨೦ ರಿಂದ ೩೦ ವರ್ಷಕ್ಕೆ ಹೋಲಿಸಿದರೆ ಸೋಲಿಗರ ಜೀವನ ಕ್ರಮ, ಆಹಾರ ಪದ್ಧತಿ, ಆರ್ಥಿಕ ಸ್ಥಿತಿಗತಿಗಳು ಅಲ್ಪಮಟ್ಟಿಗೆ ಬದಲಾವಣೆಗೊಳ್ಳುತ್ತಿವೆ. ಅದರಲ್ಲೂ ಇದಕ್ಕೆ ಬಹುಮುಖ್ಯ ಕಾರಣ ನೆರೆಹೊರೆಯ ಸಮುದಾಯದೊಂದಿಗೆ ಬೆರೆತು ಅವರಂತೆಯೇ ಆಹಾರ ಪದ್ಧತಿಯಲ್ಲಿ ಬಹುಮಟ್ಟಿನ ಬದಲಾವಣೆಯನ್ನು ಕಂಡುಕೊಂಡಿದ್ದಾರೆ. ಕೇವಲ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಅದನ್ನು ತಮ್ಮ ಉಪಯೋಗಕ್ಕೆ ಮಾತ್ರ ಉಪಯೋಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಲ್ಯಾಂಪ್ಸ್‌ಸೊಸೈಟಿ ಮತ್ತು ಕೆಲವು ಸಮುದಾಯದೊಡನೆ ವಸ್ತುಗಳಿಗೆ ಬದಲಾಗಿ ಈ ಉತ್ಪನ್ನಗಳನ್ನು ವಿನಿಮಯ ಮಾಡಿಕೊಂಡು ಬದುಕಲಾರಂಭಿಸಿದ್ದಾರೆ. ಉಡುಗೆ, ತೊಡುಗೆಯಲ್ಲಿಯೂ ಸಹ ತುಂಬಾ ಬದಲಾವಣೆಯನ್ನು ಕಾಣಬಹುದಾಗಿದೆ. ಹಳೆಯ ಪದ್ಧತಿಯಲ್ಲಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದ ಇವರಲ್ಲಿ ಬೇಸಾಯ ಕ್ರಮವೂ ಬದಲಾವಣೆಗೊಳಗಾಗಿದೆ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಓದಲಾರಂಭಿಸಿದ್ದಾರೆ. ಆದರೂ ಇವರು ಸುತ್ತಮುತ್ತ ಇರುವ ಬೇರೆ ಬೇರೆ ಸಮುದಾಯದವರೊಂದಿಗೆ ಸರಿ ಸಮಾನವಾಗಿ ಪೈಪೋಟಿ ಮಾಡಲಾಗದಷ್ಟು ಬೆಳೆದಿಲ್ಲ. ಇದಕ್ಕೆ ಮುಖ್ಯ ಕಾರಣ “ಬದಲಾಗುವ ಇವರ ಕೆಲವು ಸಂಪ್ರದಾಯ ಮತ್ತು ಅವರ ಜೀವನ ಕ್ರಮ”

References :

  1. Bhat H. K., 1971, Encycolopedic profile of tribes, Ed : Sachidananda et.al., Discovery Publishing House, New Delhi.
  2. Morab S. G., 1997, The Soligas of Biligiri Rangana Hilla, Anthropological survey of India Publication, Cucutta.