ಜಿಲ್ಲೆಯ ಸ್ಥೂಲ ಪರಿಚಯ

ಕರ್ನಾಟಕ ರಾಜ್ಯದ ದಕ್ಷಿಣದಲ್ಲಿರುವ ಮೈಸೂರು ಜಿಲ್ಲೆಯು ಆಗ್ನೇಯ, ಪೂರ್ವ ಮತ್ತು ದಕ್ಷಿಣದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ರಾಜ್ಯಗಳನ್ನು, ಪಶ್ಚಿಮದಲ್ಲಿ ಕೊಡಗು, ಉತ್ತರದಲ್ಲಿ ಹಾಸನ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳಿಂದ ಸುತ್ತುವರೆದಿದೆ. ದಕ್ಷಿಣ ಪ್ರಸ್ಥಭೂಮಿಯು ಒಂದು ಭಾಗವಾಗಿರುವ ಈ ಜಿಲ್ಲೆಯು ಉತ್ತರ ಅಕ್ಷಾಂಶ ೧೧.೦೩ ರಿಂದ ೧೨.೪೫ವರೆಗೂ, ಪೂರ್ವರೇಖಾಂಶ ೭೫.೪೫ ರಿಂದ ೭೭.೪೫ರವರೆಗೆ ಹಬ್ಬಿಕೊಂಡಿದೆ. ಈ ಜಿಲ್ಲೆಯು ದಕ್ಷಿಣೋತ್ತರವಾಗಿ ೯೫ ಕಿಲೋಮೀಟರ್‌, ಪೂರ್ವಪಶ್ಚಿಮವಾಗಿ ೧೯೨ ಕಿಲೋಮೀಟರ್‌ಅಗಲವಿದ್ದು, ಜಿಲ್ಲೆಯ ಒಟ್ಟು ವಿಸ್ತೀರ್ಣ ೧೧.೯೫೪ ಚದರ ಕಿಲೋಮೀಟರ್‌ಗಳೆಂದು ಅಂದಾಜು ಮಾಡಲಾಗಿದೆ. ಮೈಸೂರು ಜಿಲ್ಲೆಯು ಸಮುದ್ರಮಟ್ಟದಿಂದ ಸರಾಸರಿ ೭೫೦-೮೦೦ ಮೀಟರ್‌ಎತ್ತರದಲ್ಲಿದೆ. ಜಿಲ್ಲೆಯಲ್ಲಿ ಪಿರಿಯಾಪಟ್ಟಣ ಮತ್ತು ಹೆಗ್ಗಡದೇವನ ಕೋಟೆ ತಾಲೂಕುಗಳಲ್ಲಿ ಪಶ್ಚಿಮಘಟ್ಟಗಳು ಹಬ್ಬಿವೆ.

ಮೈಸೂರು ಜಿಲ್ಲೆಯು ಒಟ್ಟು ಏಳು ತಾಲೂಕುಗಳನ್ನು ಹೊಂದಿದೆ. ಹೆಗ್ಗಡದೇವನಕೋಟೆ, ಹುಣಸೂರು, ಕೃಷ್ಣರಾಜಸಾಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ ಹಾಗೂ ತಿರುಮಕೂಡಲು ನರಸೀಪುರ ಕ್ಷೇತ್ರಗಳಾಗಿವೆ. ಹೆಗ್ಗಡದೇವನಕೋಟೆ (೧೯೪.೧೩೮ ಹೆಕ್ಟೇರ್‌ಪ್ರದೇಶ) ಅತ್ಯಂತ ಹೆಚ್ಚು ಭೂವಿಸ್ತೀರ್ಣವನ್ನು ಹೊಂದಿರುವ ತಾಲ್ಲೂಕು ಕೇಂದ್ರವಾಗಿದೆ. ತಾಲೂಕಿನಲ್ಲಿ ೨೯೮ ಗ್ರಾಮಗಳು, ೧೧ ವಾರ್ಡ್‌ಗಳನ್ನು ಹೊಂದಿದ್ದು ತಾಲೂಕಿನ ಒಟ್ಟು ಜನಸಂಖ್ಯೆ ೨,೪೫,೯೩೦ (ಗಂಡು ೧,೨೪,೭೦೫ ಹೆಣ್ಣು ೧,೨೧,೨೨೫). ಲಿಂಗಾನುಪಾತ ೯೭೨, ಸಾಕ್ಷರತೆ ಮಟ್ಟ ೫೧.೭ ಗಂಡು ೬೦.೯ ಹೆಣ್ಣು ೪೨.೨ ರಷ್ಟಿದೆ. ತಾಲೂಕಿನಲ್ಲಿ ೬,೬೩,೭೨ ಪರಿಶಿಷ್ಟ ಜನರು (ಗಂಡು ೩೩,೬೫೯ ಹೆಣ್ಣು ೩,೭೭,೧೩). ಪರಿಶಿಷ್ಟ ಪಂಗಡ ೫೧,೪೮೨. (ಗಂಡು ೨೫,೭೧೪, ಹೆಣ್ಣು ೨೫,೭೬೮) ಎಂಬುದಾಗಿದೆ. (Census of India 2001, Director of Census Operation Karnataka)

ಕಪಿಲಾ ನದಿ ತಾಲೂಕಿನಲ್ಲಿ ಹರಿಯುವ ಪ್ರಮುಖ ನದಿಯಾಗಿದೆ. ಗುಂಡ್ಲುಹೊಳೆ (ಗುಂಡಾಲ್‌) ಮಾವಿನಳ್ಳ, ಸುವರ್ಣಾವತಿ ಮತ್ತು ಸಣ್ಣಪುಟ್ಟ ತೊರೆಗಳು ಇದನ್ನು ಸೇರಿಕೊಂಡು ಹರಿಯುತ್ತ ತಿರುಮಲಕೂಡಲು ನರಸೀಪುರದಲ್ಲಿ ಕಾವೇರಿ ನದಿಯೊಡನೆ ಸಂಗಮವಾಗುತ್ತದೆ. ಕರ್ನಾಟಕದಲ್ಲಿ ಸುಮಾರು ೧೯೭ ಕಿಲೋಮೀಟರ್‌ನಷ್ಟು ದೂರದವರೆಗೆ ಹರಿಯುವ ಈ ನದಿಯು ಮೈಸೂರು ಜಿಲ್ಲೆಯ ಜೀವನಾಡಿ ಎಂದು ಹೇಳಬಹುದು. ಈ ನದಿತೀರದಲ್ಲಿ ಅನೇಕ ಬುಡಕಟ್ಟು ಜನಾಂಗಗಳು ನೆಲೆಸಿರುವುದು ಕಂಡುಬರುತ್ತದೆ.

ಪೀಠಿಕೆ

‘ಎರವ’ ಎಂಬ ಒಂದು ಬುಡಕಟ್ಟು ಜನಾಂಗವು ಸಾಮಾನ್ಯವಾಗಿ ಕೊಡಗು ಮತ್ತು ಮೈಸೂರು ಜಿಲ್ಲೆಯ ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳಲ್ಲಿ ಹಿಂದಿನಿಂದಲೂ ವಾಸವಾಗಿರುವ ಒಂದು ವಿಶಿಷ್ಟ ಜನಾಂಗ. ಎರವರ ಬಗ್ಗೆ ಹಿಂದೆ ಅನೇಕ ಸಂಶೋಧನೆಗಳು ನಡೆದಿವೆ ಹಾಗೂ ಎರವರ ಬಗ್ಗೆ ಅನೇಕ ಮಾಹಿತಿಗಳು ಲಭ್ಯವಿದ್ದು, ಅವು ಒಂದಕ್ಕಿಂತ ಮತ್ತೊಂದು ಭಿನ್ನವಾಗಿರುವುದನ್ನು ಕಾಣಬಹುದು.

ಎರವ ಎನ್ನುವುದು ಕೊಡಗಿನ ಬುಡಕಟ್ಟು ಸಮುದಾಯವೊಂದರ ಹೆಸರು. ಕೊಡವ ಭಾಷೆಯಲ್ಲಿ ‘ಎರ’ ಎಂದರೆ ಬೇಡು ಎಂದರ್ಥ. ಎರವ ಎಂದರೆ ಬೇಡುವವನು ಎಂಬ ಅರ್ಥ ಬರುತ್ತದೆ. ಆದುದರಿಂದ ಈ ಸಮುದಾಯಕ್ಕೆ ಎರವರು ಎಂಬುದಾಗಿ ಕರೆದಿರಬೇಕು. ಕೊಡಗಿನಲ್ಲಿ ಗುಲಾಮರಾಗಿದ್ದವರು ಎಂದು ಕೊನ್ನೂರ್‌(೧೮೮೦) ಗುರುತಿಸಿದ್ದಾರೆ. ಕೆಲವು ದಾಖಲೆಗಳ ಪ್ರಕಾರ ಕೇರಳದ ವೈನಾಡಿನಿಂದ ಬಂದವರು ಎಂಬುದಾಗಿ ಹಾಗೂ ಕೆಲವು ಸಂಶೋಧನೆಗಳಲ್ಲಿ ಕೊಡಗಿನ ಮೂಲನಿವಾಸಿಗಳು ಎಂಬುದಾಗಿ (ಕೃಷ್ಣಯ್ಯ ೧೯೭೪) ಜನಸಮುದಾಯ ಸಂಪುಟ (ರಾಜ್ಯಕೋಶ ೪)ರಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬರುವ ಮತ್ತೊಂದು ವಿಶಿಷ್ಟ ಅಂಶವೇನೆಂದರೆ ಎರವರು ಕರ್ನಾಟಕದ ದಕ್ಷಿಣದ ಪಶ್ಚಿಮಘಟ್ಟಗಳ ಅರಣ್ಯ ಪ್ರದೇಶಗಳ ನದಿ ತೀರಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳು ಎಂಬುದು ಅಧ್ಯಯನದಿಂದ ತಿಳಿಯಬಹುದಾಗಿದೆ. ಈ ಬುಡಕಟ್ಟು ಜನರು ಕೆಲವೊಂದು ಕಾರಣಗಳಿಂದ ನಾಗರಿಕ ಸಮಾಜದ ಹತ್ತಿರ ವಾಸಿಸಲು ಪ್ರಾರಂಭಿಸಿರುವುದು ಅಧ್ಯಯನದಿಂದ ತಿಳಿದುಬರುತ್ತದೆ.

ಎರವರಲ್ಲಿ ಪಂಜಿರಿ ಮತ್ತು ಪಣಿಯ ಎರವ ಎಂಬ ಎರಡು ಗುಂಪುಗಳಿರಿವುದಾಗಿ ಹೇಳುವುದಾದರೂ ಹೆಚ್‌. ಡಿ. ಕೋಟೆ ತಾಲೂಕಿನ ಅಂಕನಾಥಪುರ, ಉದ್ಬೂರು, ಹೊಸಮಾಳ, ಮಚ್ಚೂರು, ಯಶವಂತಪುರ (ಗುಂಡ್ಲುಪೇಟೆ) ಬ್ರಹ್ಮಗಿರಿ, ಎನ್‌. ಬೇಗೂರು, ಹೊಸೂರು, ಮೇದಿಕುಪ್ಪೆ, ಮರಕಡಾವು, ಬಸವಪುರ, ಕಿತ್ತೂರುಗಳಲ್ಲಿ ವಾಸಿಸುವ ಎರವ ಬುಡಕಟ್ಟು ಸಮುದಾಯವು ಮೇಲಿನ ಪಂಜರಿ ಮತ್ತು ಪಣಿಯ ಬುಡಕಟ್ಟುಗಳಿಗೆ ಸೇರದೆ ‘ಎರವ’ ಎಂದೇ ಗುರ್ತಿಸಿಕೊಳ್ಳುವ ಇವರ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನಗಳಲ್ಲಿ ಆಗಿರುವ ಪರಿವರ್ತನೆಗಳನ್ನು ಗಮನಿಸಿ, ಇವರ ಬಗ್ಗೆ ಅಧ್ಯಯನವನ್ನು ಮಾಡಲಾಗಿದೆ.

ಮೈಸೂರು ಜಿಲ್ಲೆ ಪಶ್ಚಿಮಕ್ಕೆ ಸರಿಸುಮಾರು ೬೧ ಕಿಲೋಮೀಟರ್‌ದೂರದಲ್ಲಿರುವ ಅಂಕನಾಥಪುರ ಗ್ರಾಮವು ಸರಿಸುಮಾರು ೮೦-೧೦೦ ಮನೆಗಳನ್ನು ಹೊಂದಿದ್ದು ಅವುಗಳಲ್ಲಿ ಸುಮಾರು ೧೧೫ ರಿಂದ ೧೨೦ ಕುಟುಂಬಗಳು ವಾಸವಿರುವುದು ತಿಳಿದುಬರುತ್ತದೆ.

ಈ ಕ್ಷೇತ್ರದ ಎರವ ಬುಡಕಟ್ಟು ಜನರಿಗೆ ಯಾವುದೇ ರೀತಿಯ ಪರ್ಯಾಯ ಹೆಸರುಗಳಿರುವುದು ಕಂಡುಬರುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಸರ್ಕಾರವು ನೀಡಿರುವ ಚುನಾವಣೆ ಗುರುತಿನ ಚೀಟಿ ತಾಲೂಕು ಕಚೇರಿಯಲ್ಲಿ ನೀಡಿದವು, ಜಾತಿ ಪ್ರಮಾಣ ಪತ್ರ ಹಾಗೂ ಶಾಲೆಯ ದಾಖಲಾತಿ ಪುಸ್ತಕಗಳಲ್ಲಿ ಎರವ ಎಂಬುದಾಗಿ ನಮೂದಿಸಲಾಗಿದ್ದು, ಈ ಗ್ರಾಮದ ಇತರರು ಸಹಾ ಇವರನ್ನು ಎರವ ಎಂಬುದಾಗಿ ಕರೆಯುತ್ತಾರೆ.

ಭೌಗೋಳಿಕ ಪರಿಸರ ಮತ್ತು ಪರಿವರ್ತನೆಗೆ ಕಾರಣ

ಕಬಿನಿ ಜಲಾಶಯ ನಿರ್ಮಾಣವಾಗುವ ಮೊದಲು ಎರವರು ನದಿತೀರದ ಕಾಡಿನಲ್ಲಿ ಗುಂಪಾಗಿ ವಾಸ ಮಾಡುತ್ತಿದ್ದರು. ಕಬಿನಿ ಜಲಾಶಯ ನಿರ್ಮಾಣವಾದ ಮೇಲೆ ಅದರ ಹಿನ್ನೀರಿನಿಂದ ಅವರು ವಾಸಿಸುತ್ತಿದ್ದ ಪ್ರದೇಶವು ಮುಳುಗಡೆಯಾಗಿ ಅವರು ಸ್ವಾಭಾವಿಕವಾಗಿಯೇ ಎತ್ತರದ ಪ್ರದೇಶಗಳಿಗೆ ವಲಸೆ ಬರಬೇಕಾಯಿತು. ‘ನಾವು ತಾತಂದಿರು ಇಲ್ಲಿಗೆ ಬಂದ ಮೇಲೆ ಗೌಡರ ಮನೆಗಳಲ್ಲಿ ಜೀತಕ್ಕೆ ಸೇರಿಕೊಂಡರು. ಜೀತ ಮುಕ್ತಿಯಾದ ಮೇಲೆ ನಾವು ವ್ಯವಸಾಯವನ್ನು ಮಾಡುತ್ತಾ ಕೂಲಿನಾಲಿಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ’ ಎಂಬುದಾಗಿ ತಿಳಿಸುತ್ತಾರೆ.

ಎರವರ ಸಾಮಾಜಿಕ ಜೀವನ

ಎರವರು ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಇತರ ಸಮುದಾಯಗಳೊಡನೆ ಸಾಮಾಜಿಕ ಜೀವನ ನಡೆಸುತ್ತಿದ್ದಾರೆ. ಅಂಕನಾಥಪುರದಲ್ಲಿ ನಾಯಕರು, ಹತ್ತಿರದ ಪೆಂಜಳ್ಳಿಯಲ್ಲಿ ಜೇನುಕುರುಬರಿದ್ದು ಎಲ್ಲರೂ ಸಹಬಾಳ್ವೆ ನಡೆಸುತ್ತಿದ್ದಾರೆ. ವಿವಾಹ ಮತ್ತಿತರ ಶುಭ ಕಾರ್ಯಗಳಲ್ಲಿ ಹಿಂದೆ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಇತ್ತೀಚೆಗೆ ಎಲ್ಲರೂ ಸ್ವಲ್ಪ ಪರಿವರ್ತನೆಯಾಗಿರುವುದರಿಂದ ಸಾಮಾಜಿಕ ಕಾರ್ಯಗಳ ಹೊರತಾಗಿ ಕುಟುಂಬದ ಇತರ ಕಾರ್ಯಗಳಿಗೆ ಸಾಮಾನ್ಯವಾಗಿ ಬರುವುದಿಲ್ಲ.

ಎರವರ ದೈಹಿಕ ಲಕ್ಷಣಗಳು

ಈ ರಾಮದಲ್ಲಿ ವಾಸಿಸುತ್ತಿರುವ ಎರವರ ದೈಹಿಕ ಲಕ್ಷಣಗಳು ಸ್ಥಳೀಯ ಇತರ ಸಮುದಾಯಗಳ ಜನರಂತೆಯೇ ಇದೆ. ಕೆಲವೇ ಕೆಲವು ಎರವರ ದೈಹಿಕ ಲಕ್ಷಣಗಳು ಸ್ವಲ್ಪ ಭಿನ್ನವಾಗಿವೆ. ಅವುಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ ದಪ್ಪ ಹಾಗೂ ಅಗಲವಾದ ಮೂಗು, ದಪ್ಪ ತುಟಿಗಳು, ಕಪ್ಪು ಬಣ್ಣ ಇವು ಪ್ರಮುಖವಾದವು.

ಎರವರ ಭಾಷೆ

ಎಲ್ಲ ಬುಡಕಟ್ಟು ಜನಾಂಗಗಳಿಗೂ ತಮ್ಮದೇ ಆದ ಭಾಷೆಗಳಿರುತ್ತವೆ. ಎರವರು ಕನ್ನಡ ಕೊಡವ ಮತ್ತು ಮಲೆಯಾಳಂ ಭಾಷೆಗಳ ಪದಗಳಿಂದ ಕೂಡಿದ ಭಾಷೆ ಎಂಬುದಾಗಿ ಉಲ್ಲೇಖವಿದೆ. ಆದರೆ ಇಲ್ಲಿನ ಎರವರ ಭಾಷೆಯು ಕನ್ನಡವಾಗಿದೆ. ಇವರಲ್ಲಿ ಬಹುಭಾಷೆಗಳಿಲ್ಲ. ಕೆಲವು ಕುಟುಂಬಗಳು ಕೇರಳ ಮತ್ತು ಕೊಡಗಿನ ಕಡೆ ಕೂಲಿಗೆ ಹೋಗುತ್ತಿರುವುದರಿಂದ ಮಲಯಾಳಂ ಮತ್ತು ಕೊಡವ ಭಾಷೆಗಳನ್ನು ಕಲಿತಿದ್ದಾರೆ.

ಎರವರ ವಸ್ತು ಸಂಸ್ಕೃತಿ

ಎರವರ ವಾಸಸ್ಥಳವು ಇಂದು ಗ್ರಾಮವಾಗಿದೆ. ಇಲ್ಲಿ ೮೦-೯೦ ಮನೆಗಳಿದ್ದು, ೮೦-೧೧೫ ರಿಂದ ೧೨೦ ಕುಟುಂಬಗಳು ವಾಸ ಮಾಡುತ್ತಿವೆ. ಒಂದೊಂದು ಮನೆಯಲ್ಲಿ ಒಂದು, ಎರಡು ಕುಟುಂಬಗಳು ವಾಸ ಮಾಡುತ್ತಿರುವುದು ಕಂಡುಬರುತ್ತದೆ.

ಎರವರ ಮನೆಗಳು ಹಿಂದೆ ಗುಡಿಸಲುಗಳಾಗಿದ್ದವು. ಸರ್ಕಾರವು ಇವರ ವಸತಿಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದರಿಂದ ಇಂದು, ಇಟ್ಟಿಗೆ, ಸಿಮೆಂಟ್‌ಗಳಿಂದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮನೆಯ ಚಾವಣಿಯನ್ನು ಮಂಗಳೂರು ಹೆಂಚುಗಳಿಂದ ನಿರ್ಮಿಸಲಾಗಿದೆ. ಗೋಡೆಗಳಿಗೆ ಸುಣ್ಣ-ಬಣ್ಣಗಳನ್ನು ಬಳಿದು ಅಲಂಕರಿಸಿಕೊಂಡಿದ್ದಾರೆ.

ಹಿಂದೆ ಮನೆಗಳನ್ನು ಸ್ವತಃ ತಾವೇ ಮಣ್ಣಿನಿಂದ ಕಟ್ಟಿಕೊಳ್ಳುತ್ತಿದ್ದರು. ಆದರೆ ಸರ್ಕಾರವು ಮನೆ ಕಟ್ಟುವ ತರಬೇತಿ, ಹೊಲಿಗೆ ತರಬೇತಿ, ಕರಕುಶ ವಸ್ತುಗಳ ತಯಾರಿಕೆ, ಕೆತ್ತನೆ ತರಬೇತಿಗಳನ್ನು ನೀಡಿದ್ದಾರೆ. ತರಬೇತಿ ಪದವರಿಂದ ಮನೆ ನಿರ್ಮಿಸುತ್ತಾರೆ.

ಗೃಹಬಳಕೆಯ ವಸ್ತುಗಳು

ಹಿಂದೆ ಮಣ್ಣಿನ ಮಡಿಕೆಗಳನ್ನು ಅಡುಗೆಗೆ ಬಳಸುತ್ತಿದ್ದರು. ನೀರಿಗಾಗಿ ಕೊಳವೆಗಳು, ಕುಕ್ಕೆಗಳಿಗೆ ಎಲೆಗಳನ್ನು ಅಂಟಿಸಿ ನೀರು ಸಂಗ್ರಹಿಸುತ್ತಿದ್ದುದ್ದಾಗಿ ತಿಳಿಸಿದ್ದಾರೆ. ಆದರೆ ಇತ್ತೀಚೆಗೆ ಅಡುಗೆ ಮಾಡಲು ಅಲ್ಯುಮಿನಿಯಂ, ಸ್ಟೀಲ್‌ಪಾತ್ರೆಗಳನ್ನು ಬಳಸುತ್ತಿದ್ದಾರೆ. ಪ್ಲಾಸ್ಟಿಕ್‌ಪದಾರ್ಥಗಳ ಬಳಕೆಯು ಇದೆ. ಉರುವಲುಗಳಿಗೆ ಸೌದೆ, ಕೆಲವರು ಸೀಮೆ ಎಣ್ಣೆಯನ್ನು ಬಳಸುತ್ತಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಆಹಾರ ಪದ್ಧತಿ

ಎರವರು ಹಿಂದೆ ಕಾಡಿನಲ್ಲಿ ಗೆಡ್ಡೆ, ಗೆಣಸು, ಪ್ರಾಣಿಗಳ ಬೇಟೆ ಇತ್ಯಾದಿಗಳು ಅವರ ಮುಖ್ಯ ಆಹಾರವಾಗಿತ್ತು. ಆದರೆ ಇಂದು ರಾಗಿಮುದ್ದೆ, ಅನ್ನ, ಸೊಪ್ಪು, ಕಾಳುಗಳು, ತರಕಾರಿಗಳ ಸಾಂಬಾರು, ರಾಗಿರೊಟ್ಟಿ, ಗೋಧಿರೊಟ್ಟಿ, ಜೋಳ ರೊಟ್ಟಿ ಇತ್ಯಾದಿಗಳು ಪ್ರತಿನಿತ್ಯದ ಆಹಾರವಾದರೆ, ವಿಶೇಷ ಸಂದರ್ಭಗಳಲ್ಲಿ ರವೆಉಂಡೆ, ಒಬ್ಬಟ್ಟು, ಕಜ್ಜಾಯ, ಪಾಯಸ ಇತ್ಯಾದಿಗಳು ಸಾಮಾನ್ಯವಾಗಿರುತ್ತವೆ. ಇತ್ತೀಚೆಗೆ ಚಿತ್ರಾನ್ನ, ಇಡ್ಲಿ, ವಡೆ, ದೋಸೆ, ಚಪಾತಿಯನ್ನು ಸಹಾ ಮಾಡುವುದು ಕಂಡುಬರುತ್ತದೆ. ಎರವರು ಸಸ್ಯಹಾಗಿ ಹಾಗೂ ಮಾಂಸಾಹಾರಿಗಾಗಿದ್ದಾರೆ. ಇವರು ಕೋಳಿ, ಆಡು, ಕುರಿ ಮಾಂಶ ತಿನ್ನುತ್ತಾರೆ. ಹಂದಿ, ಎಮ್ಮೆ ಪ್ರಾಣಿಗಳ ಮಾಂಶ ಆಹಾರಗಳನ್ನು ತಿನ್ನುವುದಿಲ್ಲ. ಇಂತಹ ಆಹಾರ ಸೇಸಿವವರು ಮನೆಯೊಳಗೆ ಬರುವಂತಿಲ್ಲ ಎಂದು ಹೇಳುತ್ತಾರೆ.

ಎರವರು ತಾವು ಬೆಳೆದ ಆಹಾರ ಪದಾರ್ಥಗಳನ್ನು ಸಂಗ್ರಹಣೆ ಮಾಡಿಕೊಳ್ಳುತ್ತಾರೆ. ಹೆಚ್ಚಾಗಿ ಬೆಳೆದ ಭತ್ತ, ರಾಗಿ, ಜೋಳ ಮುಂತಾದವುಗಳನ್ನು ಅಲ್ಪಪ್ರಮಾಣದಲ್ಲಿ ಹಣಕ್ಕಾಗಿ ಮಾರಾಟ ಮಾಡುವುದು ಕಂಡುಬರುತ್ತದೆ.

ಎರವರ ಉಡುಪು

ಎರವರು ಇತರ ಜನರಂತೆಯೇ ಬಟ್ಟೆಗಳನ್ನು ತೊಡುತ್ತಾರೆ. ಇವರಲ್ಲಿ ವೈವಿಧ್ಯಮಯವಾದ ಯಾವುದೇ ರೀತಿಯ ಸಾಂಪ್ರದಾಯಿಕ ಉಡುಪುಗಳಿಲ್ಲ. ಆಭರಣಗಳಲ್ಲೂ ಸಹ ವ್ಯತ್ಯಾಸವಿಲ್ಲ. ಓಲೆ, ಜುಮುಕಿ, ಕರಿಮಣಿಸರ, ತಾಳಿ, ಕಾಲುಂಗುರಗಳು ಸಾಮಾನ್ಯವಾಗಿರುತ್ತವೆ. ಸ್ತ್ರೀಯರು ಕೈಗಳಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹಚ್ಚೆ ಇಲ್ಲದ ಕೈಗಳಿಂದ ಹೆಣ್ಣು ಗಂಡನಿಗೆ ಊಟ ಬಡಿಸಿದರೆ ಮೈ ಹತ್ತುವುದಿಲ್ಲ ಎಂಬ ನಂಬಿಕೆ ಇವರಲ್ಲಿದೆ.

ಆರ್ಥಿಕ ಜೀವನ

ಈ ಕ್ಷೇತ್ರದ ಜನರ ಮುಖ್ಯ ಆರ್ಥಿಕ ಸಂಪನ್ಮೂಲಗಳೆಂದರೆ ವ್ಯವಸಾಯ. ಕಾಡಿನ ಪದಾರ್ಥಗಳ ಸಂಗ್ರಹ ಹಾಗೂ ಕೂಲಿ. ಹಿಂದೆ ಭೂಮಿಯನ್ನು ಹಿಡಿದುಕೊಂಡ ಕೆಲವು ಎರವರು ವ್ಯವಸಾಯಗಳನ್ನು ಮಾಡಿಕೊಂಡಿದ್ದರೆ, ಮತ್ತೆ ಕೆಲವರು ಕಾಡಿನಲ್ಲಿ ದೊರೆಯುವ ಚಕ್ಕೆ, ಪಾಚಿ ಮುಂತಾದವುಗಳನ್ನು Lamp Societyಗಳಿಗೆ ಮಾರುತ್ತಾರೆ. ಮತ್ತೆ ಕೆಲವರು ಕೂಲಿ ಮಾಡಲು ಕೊಡಗು ಕಡೆಗೆ ಹೋಗುತ್ತಾರೆ. ಎರವರು ಸಾಮಾನ್ಯವಾಗಿ ಭತ್ತ, ರಾಗಿ, ಜೋಳ, ಕಾಳುಗಳನ್ನು ಬೆಳೆಯುತ್ತಾರೆ. ತಾವು ಬೆಳೆದ ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು ಇವರ ಮುಖ್ಯ ಆದಾಯವಾಗಿರುತ್ತದೆ.

ಆರೋಗ್ಯ

ಎರವರು ಹಿಂದೆ ತಮ್ಮ ಜನರಲ್ಲಿ ಕಂಡುಬರುವ ರೋಗಗಳಿಗೆ ತಮ್ಮ ಬುಡಕಟ್ಟಿನವರಿಂದಲೇ ನಾಟಿ ಔಷಧಿ ಉಪಚಾರ ಮಾಡಿಸುತ್ತಿದ್ದರು. ಆದರೆ ಇಂದು ನಾಟಿವೈದ್ಯರು ಇಲ್ಲದ ಕಾರಣ ವೈಜ್ಞಾನಿಕ ಆರೋಗ್ಯ ಪದ್ಧತಿಗಳನ್ನು ಅನುಸರಿಕೊಂಡಿದ್ದಾರೆ.

ಶೈಕ್ಷಣಿಕ ಮಟ್ಟ

ಈ ಗ್ರಾಮದಲ್ಲಿ ೧ ರಿಂದ ೭ನೇ ತರಗತಿವರೆಗೆ ೬೩ ವಿದ್ಯಾರ್ಥಿಗಳಿದ್ದು, ೩೧ ವಿದ್ಯಾರ್ಥಿಗಳು, ೩೨ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇದಲ್ಲದೆ ಹತ್ತು ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲೂ, ೬ ವಿದ್ಯಾರ್ಥಿಗಳು ಟಿ.ಸಿ.ಎಚ್‌ನಲ್ಲೂ, ೧ ವಿದ್ಯಾರ್ಥಿಯು ಬಿ.ಎ.ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವುದು ಕಂಡುಬರುತ್ತದೆ.

ಉಪಸಂಹಾರ

ಒಟ್ಟಾರೆ ಅಂಕನಾಥಪುರದಲ್ಲಿ ವಾಸ ಮಾಡುತ್ತಿರುವ ಎರವ ಸಮುದಾಯವು ಪಂಜಿರಿ ಮತ್ತು ಪಣಿಯ ಬುಡಕಟ್ಟು ಗುಂಪಿಗೆ ಸೇರದೆ ತಮ್ಮನ್ನು ಎರವ ಸಮುದಾಯಕ್ಕೆ ಸೇರಿದವರು ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಇವರ ಆಚಾರ-ವಿಚಾರ, ವಸ್ತುಸಂಸ್ಕೃತಿ, ಉಡುಪು, ವ್ಯವಸಾಯಕ್ರಮ, ಧಾರ್ಮಿಕ ಆಚರಣೆಗಳು, ಸಾಮಾಜಿಕ, ಆರ್ಥಿಕ, ರಾಜಕೀಯ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಮಟ್ಟವು ಮುಂದುವರೆದಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಈ ಬುಡಕಟ್ಟು ಜನಾಂಗವು ಪರಿವರ್ತನೆಯಾಗಿ ನಾಗರಿಕ ಸಮಾಜದೊಂದಿಗೆ ಜೀವಿಸುವುದರಲ್ಲಿ ಸಂಶಯವಿಲ್ಲ.