ದಕ್ಷಿಣದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗು ಕರ್ನಾಟಕದ ಒಂದು ಚಿಕ್ಕ ಜಿಲ್ಲೆ. ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಎಂಬ ಮೂರು ತಾಲೂಕುಗಳಿದ್ದು, ಜಿಲ್ಲೆಯ ಕೇಂದ್ರ ಆಡಳಿತ ಕಚೇರಿ ಮಡಿಕೇರಿಯಲ್ಲಿದೆ. ಇಡೀ ಕೊಡಗು ಹಸಿರುಮಯ. ಪರ್ವತ ಶ್ರೇಣಿಗಳಿಂದ ಕೂಡಿದ ಜಿಲ್ಲೆಯಾದರೂ ಸ್ಥಳದಿಂದ ಸ್ಥಳಕ್ಕೆ ಇದರ ಲಕ್ಷಣಗಳು ವ್ಯತ್ಯಾಸವಾಗುತ್ತದೆ. ಕೊಡಗಿನ ಮುಖ್ಯ ನದಿ ಕಾವೇರಿ. ಬ್ರಹ್ಮಗಿರಿಯಲ್ಲಿ ಹುಟ್ಟಿ, ಹಲವಾರು ಸ್ಥಳಗಳನ್ನು ದಾಟಿ ಬೇರೆ ಉಪನದಿಗಳೊಂದಿಗೆ ಜೊತೆಗೂಡಿ ಇದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕೊಡಗು ಪ್ರದೇಶದ ಮೂಲನಿವಾಸಿಗಳು ಕೊಡವರು. ಅಲ್ಲದೆ ಇಲ್ಲಿ ಗೌಡರು, ಐರಿಗಳು, ಅಮ್ಮ ಕೊಡುವರು, ಮರಾಠರು ಹಾಗೂ ಬುಡಕಟ್ಟುಗಳಾದ ಮೇದರು, ಕುಡಿಯರು, ಎರವರು, ಜೇನು, ಬೆಟ್ಟ ಮತ್ತು ಕಾಡು ಕುರುಬರು, ಪಣಿಯರು ಮುಂತಾದವರು ನೆಲೆಸಿದ್ದಾರೆ. ಇವರೆಲ್ಲರೂ ಮೂಲನಿವಾಸಿಗಳೆಂದು ತಿಳಿಯಲ್ಪಟ್ಟಿದೆ.

ವಿಶಿಷ್ಟ ಬುಡಕಟ್ಟುಗಳು ಮನೆ ಮಾಡಿರುವ ಈ ಜಿಲ್ಲೆ ಹಲವಾರು ಸಂಘ ಸಂಸ್ಥೆಗಳ ಹಾಗೂ ದೇಶ ವಿದೇಶದ ಅಧ್ಯಯನಕಾರರ ಗಮನ ಸೆಳೆದಿದೆ. ಬುಡಕಟ್ಟುಗಳ ಸಂಸ್ಕೃತಿ, ಭಾಷೆ, ನಡೆ, ನುಡಿ, ಆಚರಣೆ ಮುಂತಾದವುಗಳ ಬಗ್ಗೆ ತಿಳಿದಷ್ಟೂ ತೀರದ ಸಮೃದ್ಧ ಸಂಸ್ಕೃತಿ ಬುಡಕಟ್ಟು ಜನರದು. ತಮ್ಮದೇ ಆದ ಸಾಮಾಜಿಕ ಉಪಭಾಷೆ, ಮೂಲ ಪುರುಷ, ಆದಿದೈವ ಹಾಗೂ ಮುಖಂಡರನ್ನು ಹೊಂದಿರುವ ರೂಢಿ, ನಂಬಿಕೆ, ಸಂಪ್ರದಾಯಗಳನ್ನು ಹಾಡು, ಕಥೆ, ಗಾನ, ಒಗಟು ಮುಂತಾದ ಸಾಹಿತ್ಯದ ಸಾಮಗ್ರಿಗಳನ್ನು ಮನೋರಂಜಕ ಕಲೆ, ಮಂತ್ರ, ಮಾಟ ಮುಂತಾದ ವಿಶೇಷ ಜ್ಞಾನಗಳನ್ನು, ತಮ್ಮದೇ ಆದ ವಿಧಿ, ನಿಷೇಧಗಳನ್ನು, ನೈಸರ್ಗಿಕ ಕಾಯಿದೆ ಕಟ್ಟಳೆಗಳು, ಸಂಘಟಿತ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಬುಡಕಟ್ಟು ಜನರು ಒಂದು ಸಂಪನ್ನ ಜನಾಂಗ.

ಗಿರಿನಿವಾಸಿಗಳಾದ ಬುಡಕಟ್ಟು ಜನಾಂಗಗಳು ಮೂಲತಃ ಒಂದೆಡೆ ನೆಲೆ ನಿಂತು ವ್ಯವಸಾಯವನ್ನು ಮಾಡಿ ಜೀವನವನ್ನು ಸಾಗಿಸಿದವರಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಇನ್ನಿತರ ಆದೇಶಗಳು ಅವರ ಜೀವನವನ್ನು ಅಸ್ತವ್ಯಸ್ತಗೊಳಿಸಿದವು. ಕಾಡಿನ ಸಂಪತ್ತನ್ನು ಅನುಭೋಗಿಸುವ ಇವರ ಹಕ್ಕನ್ನು ಕಸಿದುಕೊಂಡ ಪ್ರಯುಕ್ತ ಇವರಲ್ಲಿ ಅನೇಕರು ಅನಾಥರಾದರು. ಕಾಡಿನಲ್ಲಿ ಜೀವನ ಸಾಗಿಸುವುದು ಇವರಿಗೆ ದುರ್ಭರವಾಗಿ, ಕಾಡನ್ನು ತ್ಯಜಿಸಿ ಗ್ರಾಮಗಳಲ್ಲಿ ನೆಲೆಸಿ ಇಂದಿನ ಬದಲಾದ ಸ್ಥಿತಿಗೆ ಹೊಂದಿಕೊಂಡು ಜೀವನ ಸಾಗಿಸತೊಡಗಿದ್ದಾರೆ.

ಮಲೆಯನ್‌, ಕುಡಿಯನ್‌, ಗೌಡರ್‌, ಕುಡಿಯ, ಮಲೆ ಕುಡಿಯ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ಕುಡಿಯ ಜನಾಂಗ ಮುಖ್ಯವಾಗಿ ಗಿರಿನಿವಾಸಿಗಳು. ಪುರಾತನ ಕಾಲದಿಂದಲೂ ಮಲೆಗಳ ತುದಿಗಳಲ್ಲಿ ವಾಸಿಸುತ್ತಿರುವ ಈ ಜನಾಂಗವನ್ನು ಮಲೆ ಕುಡಿಯರು ಅಂದರೆ ಮಲೆಗಳ ತುದಿಗಳಲ್ಲಿ ವಾಸಿಸುವವರು ಎಂದು ಗುರುತಿಸಲಾಗಿದೆ. ಭೌಗೋಳಿಕವಾಗಿ ಬೇರ್ಪಟ್ಟ ಈ ಜನಾಂಗದ ಸದಸ್ಯರು ಪರಸ್ಪರ ಸಂಪರ್ಕವನ್ನು ಉಳಿಸಿಕೊಂಡಿಲ್ಲ. ಇಡೀ ಕುಡಿಯ ಜನಾಂಗವನ್ನು ಒಗ್ಗೂಡಿಸುವ ಕೇಂದ್ರ ಸಂಸ್ಥೆಯಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ, ತಾತ್ವಿಕ ನೆಲೆಯಾಗಲಿ, ಇಲ್ಲದಿರುವ ಕಾರಣ ಪ್ರತಿಯೊಂದು ಗುಂಪಿನ ಕುಡಿಯರು ತಮ್ಮ ತಮ್ಮ ಜೀವನಕ್ರಮವನ್ನು ಆಯಾ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತೆ ತಾವೂ ಯಾವ ಉತ್ತಮ ಜಾತಿಯವರೊಡನೆ ದಿನನಿತ್ಯ ಸಂಪರ್ಕಕ್ಕೆ ಬರುತ್ತಿದ್ದಾರೆಯೋ ಅವರನ್ನು ತಮ್ಮ ಆದರ್ಶವನ್ನಾಗಿ ಸ್ವೀಕರಿಸಿ ಅವರನ್ನು ಅನುಸರಿಸುವ, ಅನುಸರಿಸುವ ಪ್ರಯತ್ನದಲ್ಲಿ ಮೂಲ ಕುಡಿಯ ಜನಾಂಗಕ್ಕೆ ಇದ್ದಿರಬಹುದಾದ ಭಾಷೆಯನ್ನು, ಸಂಸ್ಕೃತಿಯನ್ನು ಇಂದು ಅವರು ಕಳೆದುಕೊಂಡಿದ್ದಾರೆ. ಕುಡಿಯರನ್ನು ಮುಖ್ಯವಾಗಿ ಎರಡು ಗುಂಪಾಗಿ ವಿಂಗಡಿಸಬಹುದು. ನಾಲ್ಮಮಲೆ ಕುಡಿಯರು ಮತ್ತು ಮೂರುಮಲೆ ಕುಡಿಯರು. ಬ್ರಹ್ಮಗಿರಿಯ ಪರ್ವತದ ಸಾಲಿನಲ್ಲಿಯೇ ಬರುವ ಮೂರು ಪ್ರದೇಶಗಳಲ್ಲಿ ವಾಸಿಸುವ ಕುಡಿಯರನ್ನು ಪೂಮಲೆ, ತೇಮಲೆ ಕುಡಿಯರೆಂದು ಗುರುತಿಸುತ್ತಿದ್ದರು.

ಕುಡಿಯರಲ್ಲಿ ಒಳಪ್ರಭೇದಗಳೇನು ಇಲ್ಲ. ಆದರೆ ಮೂಲ ಸಂಪ್ರದಾಯ ಯಾವುದೂ ಅವರಲ್ಲಿ ಉಳಿದಿಲ್ಲ. ಒಂದು ಮಲೆಯ ಕುಡಿಯರು, ಮತ್ತೊಂದು ಮಲೆಯ ಕುಡಿಯರೊಡನೆ ಕೊಟ್ಟು ತರುವ ಸಂಬಂಧವನ್ನಾಗಲೀ, ಸಾಮಾಜಿಕ ಸಂಪರ್ಕವನ್ನಾಗಲೀ ಉಳಿಸಿಕೊಂಡಿಲ್ಲ. ಹೀಗಾಗಿ ಪ್ರತಿಯೊಂದು ಮಲೆಯ ಕುಡಿಯರಲ್ಲಿ ಕಂಡುಬರುವ ಆಚಾರಗಳು ಅವರಿಗೆ ವಿಶಿಷ್ಟವಾಗಿರುತ್ತದೆ. ಆಯಾ ಪ್ರದೇಶದಲ್ಲಿನ ಮೇಲುವರ್ಗದವರ ಪ್ರಭಾವವನ್ನು ಆಯಾ ಕುಡಿಯರ ಪಂಗಡಗಳಲ್ಲಿ ಗುರುತಿಸಬಹುದಾಗಿದೆ.

ಕೊಡವರ ಸಂಸ್ಕೃತಿಗೆ ಸಂಬಂಧಿಸಿದ ಲಿಖಿತ ಕೃತಿಗಳಲ್ಲಿ ಅತ್ಯಂತ ಹಳೆಯದು ಮತ್ತು ಮೂಲದ ಸಂಪ್ರದಾಯಗಳ ಖಚಿತ ದಾಖಲೆಯೂ ಆದ ಪಟ್ಟೋಲ ಪಳಮೆಯಲ್ಲಿ “ಕೊಡಗಿನ ಮೂಲ ನಿವಾಸಿಗಳೆಂದರೆ ಕೊಡವರು, ಕುಡಿಯರು ಮತ್ತು ಕೆಂಬಟ್ಟೆ ಹೊಲೆಯರು” ಎಂಬ ಮಾತಿದೆ. ಕೊಡವರು ಈ ನಾಡಿಗೆ ಬಂದು ನೆಲೆಸಿದಾಗ ಅವರು ತಮ್ಮೊಡನೆ ಕೆಲವು ಜನಾಂಗದವರನ್ನು ಕರೆತಂದಿರಬೇಕೆಂದು ಅದರಲ್ಲಿ ಮುಖ್ಯವಾಗಿ ಮಡಿವಾಳ, ಮರ ಕೆಲಸದ ಆಚಾರಿ, ಕುಕ್ಕೆ ನೇಯುವ ಮೇದ, ಕೆಂಬಟ್ಟೆ ಹೊಲೆಯರು ಮತ್ತು ಕುಡಿಯ ಎಂದು ಗುರುತಿಸಲಾಗಿದೆ. ಈ ಐದು ಜನಾಂಗದವರು ಇಂದಿಗೂ ಕೊಡವರಂತೆಯೇ ವೇಷ, ಭೂಷಗಳನ್ನು ಧರಿಸುವುದಲ್ಲದೆ, ಕೊಡವರಂತೆಯೇ ಕನ್ನಡದ ಜೊತೆಗೆ ಕೊಡವ ಭಾಷೆಯನ್ನು ಮನೆಮಾತಾಗಿ ಬಳಸುತ್ತಾರೆ. ಕೊಡವರಿಗೂ ಕುಡಿಯರಿಗೂ ಹುಟ್ಟು, ಮದುವೆ, ಸಾವು ಈ ಯಾವ ಸಂದರ್ಭದ ಸಂಪ್ರದಾಯಗಳಲ್ಲಿಯೂ ಸ್ವಲ್ಪವೂ ವ್ಯತ್ಯಾಸವಿಲ್ಲ.

ಕೊಡಗಿನಲ್ಲಿ ಬೆಟ್ಟತ್ತೂರಿನ ಪೂವತ್ತಮಾರು ದೇವರ ಭಂಡಾರ ಇರುವುದು ಕುಡಿಯರ ಮನೆಯಲ್ಲಿ. ಎಷ್ಟೋ ದೇವಸ್ಥಾನಗಳಲ್ಲಿ ಕುಡಿಯರ ಕುಟುಂಬದವರು ಬಾರದೆ ದೇವರ ಉತ್ಸವ ನಡೆಯುವುದಿಲ್ಲ. ಕುಡಿಯರು ಮುಖ್ಯವಾಗಿ ಮಾಂಸಾಹಾರಿಗಳು, ಮುಳ್ಳುಹಂದಿ, ಚಿಪ್ಪಿನ ಹಂದಿಗಳ ಬಿಲವನ್ನು ಪತ್ತೆ ಮಾಡಿ ಬೇಟೆ ಆಡುವುದರಲ್ಲಿ ನಿಸ್ಸೀಮರು. ಸಸ್ಯಾಹಾರವಾಗಿ ಅಕ್ಕಿ ಅವರ ಮುಖ್ಯ ಆಹಾರ. ಒಂದು ಕಾಲದಲ್ಲಿ ಕುಡಿಯರು ನೆಲೆ ನಿಲ್ಲದ ಜನಾಂಗ. ಹಿಂದೆ ಅಡಿಗೆಗೆ ಮಡಕೆಗಳನ್ನು ಬಳಸುತ್ತಿದ್ದರು. ಈಗಲೂ ಸೌದೆಯೇ ಮುಖ್ಯ ಇಂಧನ.

ಬಲು ಹಿಂದೆ ಮಲೆಗಳಲ್ಲಿ ನೈಸರ್ಗಿಕವಾಗಿ ಇರುತ್ತಿದ್ದ ಗುಹೆಗಳು ಕುಡಿಯರ ನಿಸರ್ಗದತ್ತ ಮಲೆಗಳಾಗಿದ್ದವು. ಜನಸಂಖ್ಯೆ ಹೆಚ್ಚಾದಂತೆ ಗುಹೆ ತೊರೆದು ಗುಡಿಸಲುಗಳನ್ನು ನಿರ್ಮಿಸಿಕೊಂಡರು. ಕೇಂದ್ರದಲ್ಲಿ ಒಂದು ಕಂಬ, ನಾಲ್ಕು ಮೂಲೆಗಳಿಗೆ ನಾಲ್ಕು ಕಂಬಗಳನ್ನು ನೆಟ್ಟು, ಗಟ್ಟಿಯಾದ ಬೊಂಬನ್ನು ಜಂತಿಗಳಾಗಿ ಕಂಬಕ್ಕೆ ನೂಜೆ ಹುಲ್ಲಿನ ಹಗ್ಗಗಳಿಂದ ಬಿಗಿದು, ಬೊಂಬನ್ನು ಸೀಳಿ ಹಚ್ಚೆಗಳಾಗಿ ಮಾಡಿ ಅವುಗಳನ್ನು ಮಾಡಿಗೆ ಆಧಾರವಾಗಿ ಬಿಗಿಯುತ್ತಿದ್ದರು. ಅವುಗಳ ಮೇಲೆ ಹುಲ್ಲಿನ ಹೊದಿಕೆಯನ್ನು ಹಾಸುತ್ತಿದ್ದರು. ಯಾವ ಗುಡಿಸಲಿಗೂ ಕಿಟಕಿಗಳು ಇರುತ್ತಿರಲಿಲ್ಲ. ಕುಡಿಯರಲ್ಲಿ ಹೆಂಗಸರು ಮುಟ್ಟಾದರೆ ಇರುವುದಕ್ಕೆ ಅವರ ಕೇರಿಯ ತುದಿಯಲ್ಲಿ ಬೇರೊಂದು ಗುಡಿಸಲನ್ನು ನಿರ್ಮಿಸುತ್ತಿದ್ದರು. ಕೇರಿಯ ಯಾವ ಹೆಂಗಸೇ ಆಗಲಿ, ಮುಟ್ಟಾದ ಮೂರು ದಿನಗಳಲ್ಲಿ ಅಲ್ಲಿ ಕಳೆದು ನಾಲ್ಕನೆಯ ದಿನ ಮಿಂದು ಶುದ್ಧಳಾಗಿ ತನ್ನ ಗುಡಿಸಲಿಗೆ ಬರಬೇಕಿತ್ತು. ಸರಕಾರಿ ನೆರವು ಪಡೆಯಲು ಪ್ರಾರಂಭಿಸಿದ ಮೇಲೆ ಹುಲ್ಲಿನ ಗುಡಿಸಲುಗಳು ಕ್ರಮೇಣವಾಗಿ ಮಾಯವಾಗುತ್ತಿವೆ. ಮಾಡಿದ ಹುಲ್ಲು ಕಾಣದಾಗಿ ಮಂಗಳೂರು ಹೆಂಚುಗಳು ಕಾಣುತ್ತಿವೆ. ಕುಡಿಯರು ಅವರ ವಾಸಸ್ಥಳವಾದ ಕಾಡಿನಲ್ಲಿ ಭಗಿನಿ ಮರದಿಂದ ಹೆಂಡವನ್ನು ಇಳಿಸುವುದನ್ನು ಗಂಡು ಹೆಣ್ಣು ಆದಿಯಾಗಿ ಅಭ್ಯಾಸ ಮಾಡಿಕೊಂಡಿದ್ದರಿಂದ ಅದನ್ನು ಅವರ ಕುಲಕಸುಬು ಎನ್ನಬಹುದು. ಹೆಂಡ ಇಳಿಸುವ ವೃತ್ತಿಯನ್ನು ಬಿಟ್ಟರೆ ಕುಡಿಯರಿಗೆ ಒಗ್ಗಿ ಹೋದ ಮತ್ತೊಂದು ಕಸುಬು ಮಲೆಗಳ ನೈಸರ್ಗಿಕ ಗವಿಗಳಲ್ಲಿ ಹಾಗೂ ಅರಣ್ಯದ ಉನ್ನತವಾದ ವೃಕ್ಷಗಳಲ್ಲಿ ಹೇರಳವಾಗಿ ಕಟ್ಟುವ ಹೆಜ್ಜೇನನ್ನು ಸಂಗ್ರಹಿಸುವುದು. ಈ ವೃತ್ತಿಯಲ್ಲಿ ಇವರು ಜೇನುಕುರುಬರಿಗೆ ಸರಿಸಾಟಿಯಾದವರು. ಕಾಡುಗಳಲ್ಲಿ ತಾನಾಗಿ ಬೆಳೆಯುತ್ತಿದ್ದ ಯಾಲಕ್ಕಿಯನ್ನು ಸಂಗ್ರಹಿಸಿ ಹತ್ತಿರದ ಮಾರುಕಟ್ಟೆಗಳಲ್ಲಿ ಮಾರಿ ಹಣಗಳಿಸುವ ಸಾಧನವನ್ನು ನಂತರದ ದಿನಗಳಲ್ಲಿ ಕಂಡುಕೊಂಡರು. ಸರ್ಕಾರದವರು ಕಾಡಿನಲ್ಲಿ ವಾಸಿಸಲು ಹೆಚ್ಚೆಚ್ಚು ನಿರ್ಬಂಧಗಳನ್ನು ತರುತ್ತಿರುವುದರಿಂದ ಸ್ವಂತ ಜಮೀನು ಇಲ್ಲದೆ ಇಲ್ಲಿನ ಕುಡಿಯರು ದೊಡ್ಡ ದೊಡ್ಡ ಕಾಫಿ ಬೆಳೆಗಾರರ ತೋಟಗಳಲ್ಲಿ ಕೂಲಿ ಆಳುಗಳಾಗಿ ಕೆಲಸ ಮಾಡುವಂತಾಯಿತು. ಇತ್ತೀಚಿನ ದಿನಗಳಲ್ಲಿ ಕುಡಿಯರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ವಿದ್ಯಾಭ್ಯಾಸದ ಸೌಲಭ್ಯವನ್ನು ಉಪಯೋಗಿಸಿಕೊಂಡು ಕೊಡಗಿನ ಕುಡಿಯರಲ್ಲಿ ಅನೇಕ ಜನ ಭಾರತದ ಸೈನ್ಯದಲ್ಲಿ ಸೈನಿಕರಾಗಿ, ಸೈನ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಎಲ್ಲರಂತೆಯೇ ಅವರೂ ವಿವಿಧ ಕಸುಬುಗಳನ್ನು ಅವಲಂಬಿಸಿ ಆಧುನಿಕ ಜೀವನಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕುಡಿಯ ಹೆಂಗಸರೂ ಕೂಡ ವಿದ್ಯಾವಂತರಾಗಿ ನಾನಾ ಸ್ಥಾನವನ್ನು ತುಂಬಿದ್ದಾರೆ.

ಕುಡಿಯರಲ್ಲಿ ಮೈನೆರೆಯುವ ಶಾಸ್ತ್ರ ಬಹಳ ಸಂಭ್ರಮದಿಂದ ನೆರವೇರುತ್ತದೆ. ಮೈನೆರೆದಾಗ ಪ್ರತ್ಯೇಕ ಗುಡಿಸಲಿನಲ್ಲಿಯೇ ವಾಸ. ತದನಂತರ ಹನ್ನೆರಡನೇ ದಿನ ‘ಮದಿಮ್ಮಳ ಮದಿವೆ’ ಸಮಾರಂಭ ಜರುಗುತ್ತದೆ. ಅರಿಶಿಣ, ಎಣ್ಣೆಯಿಂದ ಮೈಯನ್ನು ತಿಕ್ಕಿ ಮದುವೆ ಹುಡುಗಿಯಂತೆ ಅಲಂಕರಿಸಿ, ಆರತಿ ಬೆಳಗಿ ಬಂದ ಮುತ್ತೈದೆಯರು ಕಾಣಿಕೆ ನೀಡುತ್ತಾರೆ. ಆ ರಾತ್ರಿ ಅವಳನ್ನು ಮಾನವ ಮನೆಗೆ ಕಳುಹಿಸಲಾಗುತ್ತದೆ. ಹದಿಮೂರನೆ ದಿವಸ ಹುಡುಗಿ ಮನೆಯನ್ನು ಪ್ರವೇಶಿಸುತ್ತಾಳೆ. ನಂತರ ಒನಕೆ, ಮಡಕೆ, ತೆಂಗು, ಬಾಳೆ, ಹಲಸು ಮುಂತಾದವುಗಳಿಗೆ ನಮಸ್ಕರಿಸುತ್ತಾಳೆ. ಈ ಕ್ರಿಯೆಗಳು ಹುಡುಗಿ ದೊಡ್ಡವಳಾಗಿದ್ದಾಳೆ. ಮನೆಯ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದ್ದಾಳೆ. ಅಂತೆಯೇ ಫಲ ನೀಡುವ ವೃಕ್ಷದಂತೆ ಆಕೆಯೂ ಸಂತಾನವನ್ನು ವೃದ್ಧಿಸುವ ವ್ಯಕ್ತಿಯಾಗಿ ವಿಕಾಸ ಹೊಂದಬೇಕು ಎಂಬ ಆಶಯವಾಗಿದೆ.

ತೇಮೆಲೆ ಕುಡಿಯರಲ್ಲಿ ಮದುವೆ ದೊಡ್ಡ ಸಾಮಾಜಿಕ ಸಮಾರಂಭವಲ್ಲ. ಗಂಡು ಹೆಣ್ಣು ಪರಸ್ಪರ ಇಷ್ಟಪಟ್ಟರೆ ಸ್ವಲ್ಪ ದಿನ ಜೊತೆಯಲ್ಲಿದ್ದು ಲೈಂಗಿಕವಾಗಿ ಪರಸ್ಪರ ತೃಪ್ತಿ ಪಡೆದಾಗ ಮಾತ್ರವೇ ಮದುವೆಗೆ ಸಮ್ಮತಿಸುತ್ತಾರೆ. ಕುಡಿಯರಲ್ಲಿ ಯಾರಾದರೂ ಸತ್ತರೆ ಹೆಣಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಸುಡುವ ಕ್ರಮ ಇದೆ. ಸಾಯುವ ಕಾಲಕ್ಕೆ ಬಾಯಿಗೆ ನೀರು ಬಿಟ್ಟು “ನೇರವಾಗಿ ಸ್ವರ್ಗಕ್ಕೆ ಹೋಗಿ” ಎಂದು ಹೇಳುತ್ತಾರೆ. ಸತ್ತ ಮೂರನೇ ದಿನ ಮನೆಯನ್ನು ಸಾರಿಸಿ ಶುದ್ಧಗೊಳಿಸುತ್ತಾರೆ. ಸತ್ತ ವ್ಯಕ್ತಿಗೆ ಮದುವೆಯ ದಿನದ ಉಡುಪನ್ನು ಹಿಂದುಮುಂದಾಗಿ ತೊಡಿಸಿ ಅಲಂಕರಿಸುತ್ತಾರೆ. ಹದಿನೈದು ದಿನ ಕಳೆದ ನಂತರ ಹದಿನಾರನೇ ದಿನ ನೆಂಟರೆಲ್ಲ ಸೇರಿ, ಶವದಹನ ಸ್ಥಳಕ್ಕೆ ಭೇಟಿ ನೀಡಿ ಎಡೆಯನ್ನು ಇಟ್ಟು ಬಂದು ಪೂಜಿಸಿ ಭೋಜನ ಸೇವಿಸುತ್ತಾರೆ. ಸಾವಿಗೆ ಸಂಬಂಧಿಸಿದ ಎಲ್ಲ ಖರ್ಚನ್ನು ಕುಟುಂಬದ ಒಕ್ಕಲು ಭರಿಸುತ್ತದೆ. ಸತ್ತ ವ್ಯಕ್ತಿಯ ಮಗ ಅಥವಾ ಮಗ ಸಮಾನನಾದ ಸಂಬಂಧಿಕ ದೀಕ್ಷೆಯನ್ನು ಪಡೆಯುತ್ತಾನೆ. ವ್ಯಕ್ತಿ ಮಾಂಸಾಹಾರ ತಿನ್ನಬಾರದು. ಮದ್ಯಪಾನದಿಂದ ದೂರವಿರಬೇಕು. ದೀಕ್ಷೆ ಪಡೆದವನು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಹೋಗಿ ದೀಕ್ಷೆ ವಿಸರ್ಜನೆ ಮಾಡಿ ಸತ್ತ ವ್ಯಕ್ತಿಗೆ ಪಿಂಡ ಪ್ರಧಾನ ಮಾಡಿ ಮುಡಿಯನ್ನು ಕೊಟ್ಟು ಶುದ್ಧವಾಗಿ ಪವಿತ್ರ ಜಲವನ್ನು ತಂದು, ಮನೆಯಲ್ಲಿ ತೀರ್ಥ ಪ್ರೋಕ್ಷಿಸುತ್ತಾನೆ.

ಕುಡಿಯರಲ್ಲಿ ಹುಟ್ಟು ಒಂದು ಶುಭ ಶಕುನವೆಂದು ಪರಿಗಣಿಸಲ್ಪಟ್ಟಿದೆ. ಮಗಳು ಗರ್ಭವತಿಯಾದ ಕೂಡಲೇ, ಅಂದರೆ ಏಳು ತಿಂಗಳು ತುಂಬಿದ ನಂತರ ಅವಳನ್ನು ತವರು ಮನೆಗೆ ಕರೆತರುತ್ತಾರೆ. ತಂದೆ, ತಾಯಿ ಅಥವಾ ಅಕ್ಕ ಭಾವ ಈ ಕೆಲಸವನ್ನು ನೆರವೇರಿಸುತ್ತಾರೆ. ತನ್ನ ಗಂಡನ ಮನೆಯಿಂದ ಹೊರಡುವಾಗ ಅವಳು ತನ್ನ ಹಸ್ತಗಳನ್ನು ಅಕ್ಕಿ ಪುಡಿ ಮಿಶ್ರಣದಲ್ಲಿ ಅದ್ದಿ ಅದನ್ನು ಪೂಜೆ ಕೊಠಡಿಯ ಗೋಡೆಯ ಮೇಲೆ ಅಚ್ಚು ಒತ್ತುತ್ತಾಳೆ. ಕುಡಿಯರೇ ಹೇಳುವಂತೆ ಹಿಂದಿನ ಕಾಲದಲ್ಲಿ ಹೆರಿಗೆ ಸಮಯದಲ್ಲಿ ತಾಯಂದಿರು ಸಾವನ್ನಪ್ಪುತ್ತಿದ್ದುದರಿಂದ ಈ ಪದ್ಧತಿ ಅವರ ನೆನಪಿಗೆಂದು ನಡೆದುಕೊಂಡು ಬಂದಿದೆ.

ಹೆರಿಗೆ ಸಮಯದಲ್ಲಿ ಒಂದು ಪ್ರತ್ಯೇಕ ಗುಡಿಸಲನ್ನು ಕಟ್ಟಲಾಗುತ್ತದೆ. ಮಗು ಹುಟ್ಟಿದ ತಕ್ಷಣ, ಜೇನು ತುಪ್ಪದೊಂದಿಗೆ, ಕರಿಮೆಣಸು ಪುಡಿಯನ್ನು ಬೆರೆಸಿ ಮಗುವಿನ ನಾಲಿಗೆಯ ಮೇಲೆ ಸವರುತ್ತಾರೆ. ಇದು ಬಾಯಲ್ಲಿರುವ ಕೊಳೆಯನ್ನು ತೆಗೆಯುವ ಒಂದು ವಿಧಾನ. ಒಂದು ಗಂಟೆಯ ನಂತರ ತಾಯಿಗೆ ಸ್ನಾನ ಮಾಡಿಸಿ ಜಾಗ ಬದಲಾಯಿಸುತ್ತಾರೆ. ಈ ಜಾಗ ಬದಲಾಯಿಸುವ ಪದ್ಧತಿಯ ಹಿಂದೆ ಒಂದು ನಂಬಿಕೆ ಇದೆ. ಅದೇನೆಂದರೆ ‘ಇದ್‌ಕುಳಿ’ ಎಂಬ ಶಕ್ತಿ ಸಾವು ಹಾಗೂ ಹುಟ್ಟು, ಇವೆರಡು ಸಮಯದಲ್ಲಿ ಇದ್ದು ಮಗುವಿಗೆ ತೊಂದರೆ ನೀಡುತ್ತದೆ.

ಮಗುವಿನ ಜನನದ ನಂತರ ಹೊಕ್ಕಳು ಬಳ್ಳಿಯನ್ನು ಹರಿತವಾದ ಚಾಕುವಿನಿಂದ ತುಂಡರಿಸಿ ಅದನ್ನು ತಾಯಿಯ ಹಾಸಿಗೆಯ ಕೆಳಗೆ ಅಥವಾ ಮಗುವಿನ ಹಾಸಿಗೆಯ ಕೆಳಗೆ ಇಡುತ್ತಾರೆ. ಐದನೇ ದಿನ ಅಥವಾ ಏಳನೇ ದಿನ ‘ಅಮೆಶಾಸ್ತ್ರ’ ಮಾಡುತ್ತಾರೆ. ಇದು ಮೈಲಿಗೆಯನ್ನು ತೆಗೆಯುವ ಶಾಸ್ತ್ರ. ಹತ್ತಿರದ ದೇವಸ್ಥಾನದಿಂದ ಮಡಿ ನೀರನ್ನು ತಂದು ತಾಯಿ ಮತ್ತು ಮಗುವಿಗೆ ಪ್ರೋಕ್ಷಿಸುತ್ತಾರೆ. ಅದೇ ದಿನ ಧೋಬಿ ಹೆಂಗಸು ಬಂದು ಮಗುವಿಗೆ ಎಳೆನೀರು ಕುಡಿಸುತ್ತಾಳೆ. ಅಲ್ಲಿಗೆ ಶಾಸ್ತ್ರ ಮುಗಿಯುತ್ತದೆ.

ಮಗು ಹುಟ್ಟಿದ ಮೊದಲ ಮೂರು ದಿನ ತಾಯಿಗೆ ಬೆಳ್ಳುಳ್ಳಿ, ಅರಿಶಿನ, ಕರಿಮೆಣಸು ಮತ್ತು ಒಂದು ತರಹದ ಎಲೆಯನ್ನು ನೀಡಲಾಗುತ್ತದೆ. ಮುಂದಿನ ಹನ್ನೆರಡು ದಿನಗಳು ಜೀರಿಗೆ, ಓಮಕ್ಕಿ, ಜೇನುತುಪ್ಪ ಹಾಗೂ ಇತರೆ ಬಿಸಿ ಪದಾರ್ಥ ನೀಡುತ್ತಾರೆ. ಅನ್ನದ ಜೊತೆಯಲ್ಲಿ ಕರಿಮೆಣಸು, ಉಪ್ಪು, ತುಪ್ಪ, ಈರುರ್ಳಳಿ ಮತ್ತು ಮುನಿ (ಒಂದು ತರಹದ ಮಂಗ)ನ ಮಾಂಸವನ್ನು ನೀಡುತ್ತಾರೆ. ಶರೀರವನ್ನು ಬಿಸಿ ಮಾಡಿ, ಮೈಯಲ್ಲಿರುವ ನೀರನ್ನು ಒತ್ತಿಸುತ್ತಾರೆ. ಎರಡು ತಿಂಗಳು ಕಳೆದ ನಂತರ ದೇಹವನ್ನು ತಂಪಾಗಿರಿಸಲು ಉದ್ದಿನ ಬೇಳೆ, ಮೆಂತೆ, ಕೊಬ್ಬರಿಯನ್ನು ಮಿಶ್ರಣ ಮಾಡಿ, ಉಂಡೆ ತಯಾರಿಸಿ ಬಾಣಂತಿಗೆ ತಿನ್ನಿಸುತ್ತಾರೆ. ತಾಯಿಯನ್ನು ೪೦ ದಿನಗಳ ಕಾಲ ಕಟ್ಟುನಿಟ್ಟಾದ ಪಥ್ಯದಲ್ಲಿ ಇರಿಸುತ್ತಾರೆ.

ಪ್ರತಿದಿನ ತಾಯಿ ಮತ್ತು ಮಗುವಿಗೆ ಎಣ್ಣೆ ಸ್ನಾನ ಮಾಡಿಸುತ್ತಾರೆ. ನಂತರ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಹಿಂದೆ ಮಗುವನ್ನು ಸ್ನಾನ ಮಾಡಿಸಿ ಬಾಳೆ ಎಲೆಯ ಮೇಲೆ ಮಲಗಿಸಿ, ಎಲೆಯನ್ನು ಬೆತ್ತದ ತಟ್ಟೆಯ ಮೇಲೆ ಇರಿಸುತ್ತಿದ್ದರು.

೧೬ನೇ ದಿನ ನಾಮಕರಣಶಾಸ್ತ್ರ ನಡೆಯುತ್ತದೆ. ಅಂದು ಐದು ಮುತ್ತೈದೆಯರು ಮಗುವಿಗೆ ಆರತಿ ಮಾಡುತ್ತಾರೆ. ಮಗುವಿಗೆ ಬಟ್ಟೆ, ಹಣ ನೀಡಿ ಆಶೀರ್ವದಿಸುತ್ತಾರೆ. ಅಂದು ಮಗುವಿಗೆ ಅನ್ನ ಹಾಲಿನ ಮಿಶ್ರಣ ನೀಡುತ್ತಾರೆ. ನಲವತ್ತು ದಿನಗಳು ಕಳೆದ ನಂತರ ತಾಯಿ ಮತ್ತು ಮಗುವನ್ನು ಹತ್ತಿರದ ಗುಡಿಗೆ ಕರೆದುಕೊಂಡು ಹೋಗುತ್ತಾರೆ.

‘ಆಮೆಶಾಸ್ತ್ರ’ ಮುಗಿಯುವ ತನಕ ಮನೆಯವರು, ನೆಂಟರಿಸ್ಟರು ದೇವಸ್ಥಾನಕ್ಕೆ ಹೋಗುವ ಹಾಗಿಲ್ಲ ಅಥವಾ ಪೂಜೆ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ನಾಮಕರಣ ದಿನದಂದು ಎಲ್ಲ ದೇವತೆಗಳು, ದೆವ್ವಗಳನ್ನು ಪೂಜಿಸಿ ದೋಸೆ ಮತ್ತು ಕೋಳಿ ಸಾರು ಅರ್ಪಿಸುತ್ತಾರೆ. ಜೊತೆಗೆ ಸೇಂದಿಯನ್ನು ನೀಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಹೆರಿಗೆಗಳು ಸಾಮಾನ್ಯವಾಗಿದೆ. ಇದು ಅವರಲ್ಲಿ ಮೂಡಿರುವ ಅರಿವಿನ ಬಗ್ಗೆ ಸೂಚಿಸುತ್ತದೆ. ಅವರು ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಬಾಣಂತಿಯ ಆರೈಕೆಗೆ ಸಂಬಂಧಿಸಿದಂತೆ, ಅವರ ಬಹುಕಾಲದ ಹಳೆಯ ಪದ್ಧತಿಯನ್ನೇ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಹಿಂದೆ ಅವರು ಗುಡ್ಡಗಾಡು ಪ್ರದೇಶಕ್ಕೆ ಸೀಮಿತವಾಗಿದ್ದುದರಿಂದ, ಅವರು ಕಾಡಿನಲ್ಲಿ ದೊರೆಯುವಂತಹ ಗಿಡಮೂಲಿಕೆಗಳನ್ನು ಬಳಸುತ್ತಿದ್ದರು. ಅದನ್ನು ಅವರು ನಂತರದ ತಲೆಮಾರಿನವರಿಗೂ ತಿಳಿಸಿಕೊಡುತ್ತಿದ್ದರು. ಆರೋಗ್ಯಕ್ಕೆ ಸಂಬಂಧಿಸಿದಂತೆ, ಹೆಂಗಸರು ಅಂತಹ ಯಾವುದೇ ದೊಡ್ಡ ಕಾಯಿಲೆಗಳಿಗೆ ಬಲಿಯಾದಂತೆ ಕಾಣುತ್ತಿಲ್ಲ. ಅವರೇ ಹೇಳುವಂತೆ ಉತ್ತಮ ಹವಾಮಾನ, ಒಳ್ಳೆಯ ಬಾಣಂತಿ ಆರೈಕೆ, ಒಳ್ಳೆಯ ಊಟ ವಿಧಾನ ಮತ್ತು ದುಡಿಮೆ ಇವೆಲ್ಲವೂ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಈ ಹಳೆಯ ಆರೋಗ್ಯ ಪದ್ಧತಿಯನ್ನು ಇತರ ಜನಾಂಗದವರು ಕೂಡ ಅನುಸರಿಸಿಕೊಂಡು ಹೋಗುತ್ತಿದಾರೆ.

ಪರಾಮರ್ಶನ ಗ್ರಂಥಗಳು

೧. Dr. Bhamini Raghavaiah, K. 2004, “Genetic Demography and Dematoglyphic Variations among the Tribes: The medas, the Kudiyas and the Yeravas of Coorg District, Karnataka, India (Ph.D. Thesis), University of Mysore, Mysore.

೨. Edgar Thurston: Caste and Tribes of South India, 1909

೩. Dr. S. G. Morab : Kudiya : An Anthropological Servey.

೪. ನಡಿಕೇರಿಯಂಡ ಚಿಣ್ಣಪ್ಪ “ಪಟ್ಟೋಳೆ ಪಳಮೆ”, ಪ್ರ: ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು.

೫. ಡಾ. ಡಿ. ಬಿ. ರಾಮಚಂದ್ರಾಚಾರ್‌“ಕುಡಿಯರ ಸಂಸ್ಕೃತಿ” ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.