ಭಾರತದ ಯಾವುದೇ ಬುಡಕಟ್ಟು, ಸಮುದಾಯ ತನ್ನ ಸಮುದಾಯದ ಕೆಲವು ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತದೆ. ಇಂದು ಆದಿವಾಸಿ ಸಮುದಾಯಗಳು ಆಧುನೀಕರಣವನ್ನು ಹೊಂದುತ್ತಲೇ ವಂಶಪರಂಪರೆಯಾಗಿ ಬಂದ ಕೆಲವು ನಿಲುವುಗಳನ್ನು ಉಳಿಸಿಕೊಂಡಿವೆ. ಅಲ್ಲದೆ ಕೆಲವು ಮೌಲ್ಯಗಳು ತಮ್ಮಲ್ಲಿಯೇ ಇರಬೇಕೆಂಬ ಛಲವನ್ನು ಹೊಂದಿರುತ್ತವೆ. ಕಾಡಿನಲ್ಲಿರುವ ಬುಡಕಟ್ಟು ಆದಿವಾಸಿ ಸಮುದಾಯಗಳು ಹಾಗೂ ಕೆಳಜಾತಿಗಳನ್ನು ಮಾನವೀಯತೆಯ ದೃಷ್ಟಿಯಿಂದ ನೋಡದೇ ಮೃಗಗಳಂತೆ ನೋಡುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಪುರೋಹಿತಶಾಹಿ ಆಧುನೀಕರು, ಪಶ್ಚಿಮದವರು ಗೊಡ್ಡು ಸಮುದಾಯಗಳೆಂದು ಕರೆದಿದ್ದಾರೆ. ಇದನ್ನು ವಿಮರ್ಶೆಗೆ ಒಳಪಡಿಸಿದಾಗ ಪ್ರಸ್ತುತ ಸಮಾಜದಲ್ಲಿ ದೇಶೀಯ ಸಂಸ್ಕೃತಿಯೇನಾದರೂ ಉಳಿದಿದೆ ಎಂದರೆ ಕೆಳಜಾತಿ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಮಾತ್ರ ಎಂಬುದು ನಿಜವಾದ ಸಂಗತಿಯಾಗಿದೆ.

ಭಾರತದಲ್ಲಿ ಅನೇಕ ಸಾಮ್ರಾಜ್ಯಶಾಹಿ, ಪುರೋಹಿತಶಾಹಿ, ವಸಾಹತುಶಾಹಿ ಆಳ್ವಿಕೆಯಿಂದಲೂ ಹಾಗೂ ಇತ್ತೀಚೆಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬುಡಕಟ್ಟುಗಳ ಬಗ್ಗೆ ಆಲೋಚಿಸಿದವರು ತುಂಬ ವಿರಳ. ಆದರೆ, ಇತ್ತೀಚೆಗೆ ಮಂದಗತಿಯಲ್ಲಿ ಬುಡಕಟ್ಟುಗಳ ಬಗ್ಗೆ ಕಾಳಜಿಯನ್ನು ವಹಿಸಿ ಅವರನ್ನು ಅವರದೇ ಆದ ಸಂಸ್ಕೃತಿಯಲ್ಲಿ ಅಭಿವೃದ್ಧಿ ಮಾಡುವ ಕಾರ್ಯ ನಡೆಯುತ್ತಿದೆ.

ಕುಡುಬಿ ಸಮುದಾಯವು ಜಾಗತೀಕರಣ ಮತ್ತು ವಸಾಹತುಶಾಹಿಗಳ ಸುಳಿಯಲ್ಲಿದೆ. ಈ ಹಿನ್ನೆಲೆಯಲ್ಲಿಯಾದರೂ ಯಾವುದೇ ರೀತಿಯ ಪ್ರಭಾವಗಳಿಗೆ ಸಿಲುಕದೆ, ಒಂದು ಕಡೆ ನೆಲೆನಿಂತು ಜೀವನವನ್ನು ನಡೆಸುತ್ತಿದೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಮನಿಸಿದಂತೆ, ಪ್ರಪಂಚದ ಯಾವುದೇ ಬುಡಕಟ್ಟುಗಳ ಅಭಿವೃದ್ಧಿಗಾಗಿ ರಚನೆಯಾದ ಕಾನೂನುಗಳು ಬುಡಕಟ್ಟು ಸಮುದಾಯಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂಬುದರ ಬಗ್ಗೆ ಯಾವುದೇ ರೀತಿ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ಎ. ಎಸ್‌. ಪ್ರಭಾಕರ್‌ಅವರು ತಮ್ಮ ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು ಎಂಬ ಪುಸ್ತಕದ ಮಾಹಿತಿಯನ್ನು ನೆನಪಿಸಿಕೊಳ್ಳಬಹುದು. ಜಾಗತೀಕರಣವು ಪ್ರಾಚೀನ ಕಾಲದಿಂದ ಪ್ರಸ್ತುತ ಭಾರತದಲ್ಲಿ ಸಾಮಾಜಿಕ, ಕುಟುಂಬ, ರಾಷ್ಟ್ರದ ಮೇಲೆ ಅನೇಕ ರೀತಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಬೀರಿವೆ ಎಂದಿದ್ದಾರೆ. ಇದು ನಿಜವೇ ಎಂದು ತೋರುತ್ತದೆ. ಇಂದು ಮಾಹಿತಿ ತಂತ್ರಜ್ಞಾನವು ಮಾನವನು ಹಾಕುವ ಪ್ರತಿಯೊಂದು ಹೆಜ್ಜೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ನವೀನತೆಯಿಂದ ಕೂಡಿದ ಆವಿಷ್ಕಾರಗಳು, ಪ್ರಯೋಗಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಾಗಿ ಹೇಳುವುದಾದರೆ ಕರ್ನಾಟಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿದರೆ ತಾಂತ್ರಿಕ ಜಗತ್ತು ವೇಗವಾಗಿ ಬೆಳವಣಿಗೆಯಾಗುವುದರ ಜೊತೆಯಲ್ಲಿ ಜಾನಪದೀಯ ಹಾಗೂ ಆದಿವಾಸಿಗಳ ಬದುಕನ್ನು ವಿನಾಶದ ಅಂಚಿನ ಕಡೆಗೆ ತೆಗೆದುಕೊಂಡು ಹೋಗುತ್ತವೆ ಎಂಬುದನ್ನು ಗಮನಿಸಬಹುದು.

ಬುಡಕಟ್ಟುಗಳಲ್ಲಿ ಆದಿವಾಸಿ ಸಮುದಾಯದ ಕುಡುಬಿ ಸಮುದಾಯವು ಆಧುನಿಕತೆಯಿಂದ ಕೂಡಿದೆ. ತಾಂತ್ರಿಕ ಯುಗದಲ್ಲಿಯೂ ಕೂಡ ತನ್ನ ಸಮುದಾಯದಲ್ಲಿ ತಮ್ಮದೇ ಆದ ರೀತಿ, ರಿವಾಜು, ನಿಯಮಗಳು, ಕಟ್ಟುಪಾಡುಗಳನ್ನು ರಚಿಸಿಕೊಂಡು ಇವುಗಳಿಗೆ ಸರಿಹೊಂದುವಂತೆ ಜೀವನವನ್ನು ನಡೆಸುತ್ತಿವೆ.

ಕುಡುಬಿಯರ ಸಾಮಾಜಿಕ ಹಿನ್ನೆಲೆ

ಕರ್ನಾಟಕದಲ್ಲಿ ಕುಡುಬಿ ಸಮುದಾಯ ಒಂದು ಆದಿವಾಸಿ ಬುಡಕಟ್ಟಾಗಿದೆ. ಈ ಸಮುದಾಯದಲ್ಲಿ ಅನೇಕ ಒಳಪಂಗಡಗಳಿದ್ದು ಎಲ್ಲ ಪಂಗಡಗಳ ಮೂಲ ಅಥವಾ ಹಿನ್ನೆಲೆ ಒಂದೇ ಆಗಿರುವುದನ್ನು ಕಾಣಬಹುದು. ಆದರೆ ಕೆಲವೊಂದು ಆಚಾರ, ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಭಿನ್ನತೆಯನ್ನು ಕಂಡರೂ, ಈ ಸಮುದಾಯ ಆರ್ಥಿಕವಾಗಿ ಕೆಲವೊಂದು ಜಿಲ್ಲೆಗಳಲ್ಲಿ ಶಿವಮೊಗ್ಗ ಉತ್ತಮವಾದ ಸ್ಥಿತಿಯಲ್ಲಿದೆ. ಉಳಿದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಮಂಗಳೂರಿನಲ್ಲಿ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿದೆ. ಕರ್ನಾಟಕದಲ್ಲಿ ಸಮುದಾಯಗಳ ಚರಿತ್ರೆ ರೂಪಗೊಂಡ ಹಿನ್ನೆಲೆಯನ್ನು ಅವಲೋಕಿಸಿದಾಗ ಇದರ ಹಿಂದೆ ಅನೇಕ ರಾಜಕೀಯ ಹುನ್ನಾರಗಳ ಕೈವಾಡವಿದೆ ಎಂದು ತಿಳಿಯಬಹುದಾಗಿದೆ. ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತ ಪೂರ್ವ ಹಾಗೂ ಬ್ರಿಟಿಷರ ಅವಧಿಯಲ್ಲಿ ರೂಪುಗೊಂಡ ಸಮುದಾಯಗಳೇ ಚರಿತ್ರೆಯ ಪಾಶ್ಚಾತ್ಯ ಮತ್ತು ವಸಾಹತುಶಾಹಿಯ ದೃಷ್ಟಿಕೋನದ ಮತೀಯ ಪೂರ್ವಗ್ರಹಗಳು ಭಾರತದ ಆದಿವಾಸಿಗಳ ಬದುಕನ್ನು ವಿರೂಪಗೊಳಿಸಿವೆ. ಶ್ರಮಿಕವರ್ಗ ಹಾಗೂ ಆದಿವಾಸಿ ಸಮುದಾಯಗಳ ಕುರಿತು ವಸಾಹತುಶಾಹಿ ವ್ಯವಸ್ಥೆ ಅನೇಕ ಅಪಕಲ್ನೆಗಳನ್ನು ಮೈಗೂಡಿಸಿಕೊಂಡಿದೆ. ಕುಣಿಬಿ ಅಥವಾ ಕುಡುಬಿ ಸಮುದಾಯ ಗೋವಾದಿಂದ ಕರ್ನಾಟಕದ ಕಡೆ ವಲಸೆ ಬಂದ ಮೇಲೆ ಸಾಮಾಜಿಕ ಅಥವಾ ಸಾಂಸ್ಕೃತಿಕವಾಗಿ ಭಿನ್ನವಾದ ರೀತಿಯಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ.

ವಕ್ತೃಪ್ರಕಾರ

ಮಲ್ಲಿಕಾರ್ಜುನ ಲಿಂಗ ತಮಗೆ ದೊರೆತ ಬಗ್ಗೆ ಮತ್ತು ಅದಕ್ಕೆ ಅವರೇ ಅರ್ಚಕರಾದ ಬಗ್ಗೆ ಕುಡುಬಿಯರಲ್ಲಿ ಒಂದು ಪುರಾಣವಿದೆ. ಗೋವೆಯಲ್ಲಿ ಕುಡಿಬಿಯರು ಕಾಡಿನಲ್ಲಿ ಪೊದೆಗಳನ್ನು, ಮರಗಳನ್ನು ಕಡಿದು ಸಮತಟ್ಟುಗೊಳಿಸುವಾಗ ಒಂದು ಲಿಂಗ ದೊರೆಯಿತು. ಆ ಲಿಂಗಕ್ಕೆ ಕುಡುಬಿಯರೆಲ್ಲ ಸೇರಿಕೊಂಡು ದೇವಸ್ಥಾನ ಕಟ್ಟಿ ಅದರಲ್ಲಿ ಲಿಂಗವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದರು. ಆದರೆ, ಪಾರಂಪರಿಕ ವೃತ್ತಿಯವರಾದ ಬ್ರಾಹ್ಮಣರು ಅರ್ಚಕರಾಗಿ ಮುಂದೆ ಬಂದರು. ಆಗ ಲಿಂಗ ಇದ್ದಕ್ಕಿದ್ದಂತೆ ಮಾಯವಾಯಿತು. ನಂತರ ಅದೇ ಲಿಂಗ ಮತ್ತೆ ಕಾಣಿಸಿಕೊಂಡಿತು. ಈ ರೀತಿಯಾಗಿ ಸಿಕ್ಕ ಲಿಂಗದಿಂದ ಒಂದು ಕಣ್ಣಲ್ಲಿ ಹಾಲು ಮತ್ತೊಂದು ಕಣ್ಣಲ್ಲಿ ರಕ್ತ ಸುರಿಯುತ್ತಿತ್ತು. ಕುಡುಬಿ ಸಮುದಾಯದವರೆಲ್ಲ ಒಗ್ಗೂಡಿ ಪ್ರತ್ಯೇಕವಾದ ಒಂದು ದೇವಸ್ಥಾನವನ್ನು ಕಟ್ಟಿ ಲಿಂಗವನ್ನು ಸ್ಥಾಪಿಸಿ ಅದಕ್ಕೆ ತಮ್ಮವರಲ್ಲಿ ಒಬ್ಬರನ್ನು ಅರ್ಚಕರಾಗಿ ಮಾಡಿದರು ಎಂದು ಮಲ್ಲಿಕಾರ್ಜುನನ ಬಗೆಗೆ ಪುರಾಣವನ್ನು ಹೇಳುತ್ತಾರೆ. ಆ ಪುರಾಣದ ಮೂಲಕ ಪ್ರಮುಖವಾಗಿ ಗುರುತಿಸಬಹುದಾದ ಅಂಶಗಳು, ಕುಡುಬಿಯರು ಕಾಡಿನಲ್ಲಿ ಬೇಸಾಯವನ್ನು ಮಾಡುತ್ತಿದ್ದರು. ಮಲ್ಲಿಕಾರ್ಜುನನಿಗೆ ಕುಡುಬಿಯರೇ ಅರ್ಚಕರಾಗಿದ್ದರು. ಇವರು ಅನ್ಯ ಜಾತಿಗಳ ಸಂಪರ್ಕದಿಂದ ದೂರವಿರುವುವರಾಗಿದ್ದರು.

ಪ್ರತಿಯೊಂದು ಬುಡಕಟ್ಟು ಸಮುದಾಯ ಕೂಡ ತನ್ನ ಆಚರಣೆ ನಡವಳಿಕೆಗಳಿಗೆ ತಮ್ಮದೇ ಆದ ಅರ್ಥ ಮತ್ತು ವಿವರಣೆಗಳನ್ನು ನೀಡುತ್ತಿರುತ್ತದೆ. ತಮ್ಮ ದೈವಕ್ಕೆ ಕುಡುಬಿ ಸಮುದಾಯದವರೇ ಅರ್ಚಕರಾದ ಬಗ್ಗೆ ವಿವರಣೆಯನ್ನು ಈ ಪುರಾಣದಲ್ಲಿ ಕಾಣಬಹುದಾಗಿದೆ. ಗೋವಾದಲ್ಲಿ ಪೋರ್ಚುಗೀಸರು ಕುಡುಬಿಯರನ್ನು ಬಲಾತ್ಕಾರದ ಮತಾಂತರಕ್ಕೆ ಪ್ರಚೋದಿಸಿದ ಸಂದರ್ಭದಲ್ಲಿ ಮತಾಂತರಕ್ಕೆ ಒಪ್ಪದೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಪೋರ್ಚುಗೀಸರು ಈ ಸಮುದಾಯದ ದೇವಸ್ಥಾನವನ್ನು ಪುಡಿಮಾಡಿ ಲಿಂಗವನ್ನು ಸಮುದ್ರಕ್ಕೆ ಎಸೆದರು. ಕುಡುಬಿಯವರು ಮತಾಂತರಕ್ಕೆ ಹೆದರಿ ಅಲ್ಲಿಂದ ವಲಸೆ ಹೋದರು ಎಂದು ಕ್ಷೇತ್ರಕಾರ್ಯದ ಸಮಯದಲ್ಲಿ ಕುಡುಬಿಯರು ತಮ್ಮ ವಲಸೆ ಕಾರಣವನ್ನು ವಿಷಾದಪಡಿಸಿದ್ದಾರೆ. ಇದರಿಂದಾಗಿ ಇಲ್ಲಿ ಮುಖ್ಯವಾಗಿ ಗಮನಿಸುವುದೇನೆಂದರೆ ಪೋರ್ಚುಗೀಸರ ಭಯ ಮತ್ತು ಬಲಾತ್ಕಾರದ ಮತಾಂತರ ಹಾಗೂ ಮಲ್ಲಿಕಾರ್ಜುನನಿಗೆ ಗುಡಿಯಿಲ್ಲದಿರುವ ಬಗ್ಗೆ ಸಮರ್ಥನೆಯಾಗಿದೆ.

ಐತಿಹಾಸಿಕವಾಗಿ ಸುಮಾರು ೧೫೫೪-೧೫೮೦ ಪೋರ್ಚುಗೀಸರು ಗೋವಾವನ್ನು ಸ್ವಾಧೀನಪಡಿಸಿಕೊಂಡ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಪೋರ್ಚುಗೀಸರು ಸ್ಥಳೀಯರನ್ನು ಮತಾಂತರಕ್ಕೆ ಬಲತ್ಕರಿಸುತ್ತಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಈ ಇತಿಹಾಸವೇ ಕುಡುಬಿಯಲ್ಲಿ ಪುರಾಣದ ರೂಪವನ್ನು ಪಡೆದುಕೊಂಡಿದೆ. ವಸಾಹತುಶಾಹಿಯ ಹಿನ್ನೆಲೆಯಿಂದ ಕುಡುಬಿಯರು ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದರು. ಇದರಲ್ಲಿ ಒಂದು ಗುಂಪು ಶರಾವತಿಗೆ ನಿರ್ಮಾಣ ಮಾಡಲಾಗಿರುವ ಲಿಂಗನಮಕ್ಕಿಯಲ್ಲಿ ಬೀಡುಬಿಟ್ಟಿತು. ಆದರೆ ಸುಮಾರು ವರ್ಷಗಳ ನಂತರ ಈ ದೇಶದಲ್ಲಿ ಕೆಳಜಾತಿಗಳು ಮತ್ತು ಬುಡಕಟ್ಟುಗಳ ಬಗ್ಗೆ ಕಾಳಜಿ ವಹಿಸಿದ ಸರ್ಕಾರ ಶರಾವತಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಿಸಿದರು. ಇದರಿಂದಾಗಿ ಕುಡುಬಿಯರು ತಾವು ವಾಸಿಸಲು ಯೋಗ್ಯವಾದ ನೆಲೆಯನ್ನು ಹುಡುಕುತ್ತಾ ಹೊರಟು ಮೇಘಾನೆಯೆಂಬ ಬೆಟ್ಟದ ತುದಿಯನ್ನು ಸೇರಿದರು. ಆಗ ಅಲ್ಲಿ ಪ್ರಾರಂಭವಾದ ಇವರ ಬದುಕು ಒಂದು ರೀತಿಯ ಶೋಚನೀಯ ಸ್ಥಿತಿಯನ್ನುಂಟು ಮಾಡಿತು. ಈ ಹಿನ್ನೆಲೆಯಲ್ಲಿ ಆದಿವಾಸಿಗಳಾದ ಇವರ ಬದುಕು ಮೇಲೇಳಲು ಆಗಲಿಲ್ಲ. ಇದರಿಂದಾಗಿ ಮೇಘಾನೆಯಲ್ಲಿರುವ ಕುಡುಬಿ ಸಮುದಾಯವನ್ನು ಯಾರೂ ಗಮನಿಸಿಯೇ ಇಲ್ಲ. ಅವರದೇ ಆದ ಸಂಪ್ರದಾಯದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಇವರು ಅಧ್ಯಯನದ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆ ಪಡೆದಿದ್ದಾರೆ.

ಕುಡುಬಿಯರು ಅವಿಭಕ್ತ ಕುಟುಂಬವನ್ನು ರಚಿಸಿಕೊಂಡು ನಿಸರ್ಗದಲ್ಲಿ ಸಿಗುವ ಸಲಕರಣೆಗಳನ್ನು ತೆಗೆದುಕೊಂಡು ಮಣ್ಣಿನ ಗೋಡೆಯನ್ನು ಮಾಡಿ ಹುಲ್ಲಿನಿಂದ ಮನೆಯ ಮೇಲ್ಛಾವಣಿಯನ್ನು ಮುಚ್ಚುತ್ತಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಮನಿಸಿದಂತೆ ಯಾವುದೇ ಭೇದಭಾವವಿಲ್ಲದೆ ಒಂದೇ ತಲೆಮಾರಿನಿಂದ ಕೂಡಿದ ಒಂದೇ ಬಳ್ಳಿಯನ್ನು ಹೊಂದಿರುವ ಅಣ್ಣ ತಮ್ಮಂದಿರು, ಸ್ತ್ರೀಯರು ಮತ್ತು ಮಕ್ಕಲು ಜೀವನವನ್ನು ರೂಪಿಸಿಕೊಂಡು ಸಾಮಾಜಿಕ ಬದುಕನ್ನು ಸುಗಮವಾಗಿ ನಡೆಸುತ್ತಿದ್ದಾರೆ.

ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಮನಿಸಿದಂತೆ ಕುಡುಬಿಯರು ತಮ್ಮ ಮನೆಗಳಿಗೆ ದಕ್ಷಿಣ ಭಾಗಕ್ಕೆ ಪ್ರವೇಶದ್ವಾರವನ್ನು ಮಾಡಿಕೊಂಡಿದ್ದಾರೆ. ಪಶ್ಚಿಮ ಭಾಗದಲ್ಲಿ ಮಾತ್ರ ಒಂದು ಹಿಂಬಾಗಿಲು ಇರುತ್ತದೆ. ಪ್ರವೇಶದ್ವಾರದ ಎಡ ಮತ್ತು ಬಲ ಭಾಗಗಳನ್ನು ಮಣ್ಣು ಹಾಕಿ ಎತ್ತರಿಸಿ ಚಾವಡಿಯನ್ನಾಗಿ ಮಾಡಿರುತ್ತಾರೆ. ಪರ ಜಾತಿಯವರಿಗೆ ಚಾವಡಿಯವರೆಗೆ ಮಾತ್ರ ಪ್ರವೇಶವಿರುವುದು. ಚಾವಡಿಯಲ್ಲಿ ಕುಳಿತು ತಮ್ಮ ವ್ಯವಹಾರವನ್ನು ನಡೆಸಬೇಕು. ಕುಡುಬಿ ಸಮುದಾಯದಲ್ಲಿ ಅನ್ಯ ಸಮುದಾಯದವರಿಗೆ ಒಳಗಡೆ ಪ್ರವೇಶವಿಲ್ಲ. ಇವರ ಮನೆಗೆ ಹೊಂದಿಕೊಂಡು ಮನೆಯ ಎಡಗಡೆಯಲ್ಲಿ ಕುಟುಂಬದ ಯಜಮಾನನ ಹಿರಿಮನೆ ಇರುತ್ತದೆ. ಈ ಮನೆಯಲ್ಲಿ ದೇವರ ಕೋಣೆ ಮಲಗುವ ಕೋಣೆ ಮತ್ತು ವಿಶಾಲವಾದ ಒಂದು ಕೋಣೆ ಇವಿಷ್ಟು ಇರುತ್ತದೆ. ವಿಶಾಲವಾದ ಕೋಣೆಯಲ್ಲಿ ಧವಸ ಧಾನ್ಯಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. ಈ ಹಿರಿಯ ಮನೆಯ ಎದುರುಗಡೆ ವಿಶಾಲವಾದ ಅಂಗಳದ ಮಧ್ಯೆ ತುಳಸಿಕಟ್ಟೆ ಇರುತ್ತದೆ. ಇವರ ಮನೆಯ ಪಕ್ಕದಲ್ಲಿ ಹಿರಿಮನೆಗೆ ಅಭಿಮುಖವಾಗಿ ಪ್ರವೇಶದ್ವಾರದ ಬಲಗಡೆ ಜಾನುವಾರುಗಳನ್ನು ಕಟ್ಟುವ ಹಟ್ಟಿಯಿರುತ್ತದೆ. ಈ ಹಟ್ಟಿಗೆ ಹೊಂದಿಕೊಂಡ ಒಂದು ಅಡುಗೆ ಮನೆ ಇರುತ್ತದೆ. ಇನ್ನುಳಿದ ಸೂಕ್ತ ಚಿಕ್ಕ ಚಿಕ್ಕ ಕೋಣೆಗಳನ್ನು ಕುಟುಂಬ ಸದಸ್ಯರಿಗೆ ಮೀಸಲಿರುತ್ತವೆ. ವಿಶೇಷವೆಂದರೆ ಈ ಕೋಣೆಗಳಿಗೆ ಬಾಗಿಲುಗಳಿರುವುದಿಲ್ಲ. ಆದರೆ ಮುಖ್ಯ ದ್ವಾರಕ್ಕೆ ಬಾಗಿಲು ಇರುತ್ತದೆ. ಅಲ್ಲದೆ ಪ್ರತಿ ಕೋಣೆಯಲ್ಲಿ ಜಗಲಿಗಳಿರುತ್ತವೆ. ಕುಣುಬಿಯರ ಕುಟುಂಬ ಪದ್ಧತಿ ಮತ್ತು ಮನೆಯ ರಚನೆಗೂ ನೇರವಾದ ಸಂಬಂಧವಿರುವುದು ಸ್ಪಷ್ಟವಿದೆ. ಇಡೀ ಕುಟುಂಬದ ಕೆಲವು ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಎರಡು ಬಾಗಿಲುಗಳಿರುತ್ತವೆ. ಇಲ್ಲಿ ಬೇರೆ ಜಾತಿಯವರಿಗೆ ಪ್ರವೇಶವಿರುವುದಿಲ್ಲ. ಅಪರಿಚಿತರು ಯಾರೇ ಬಂದರೂ ಮೊದಲು ಯಜಮಾನನನ್ನು ಮಾತ್ರ ಮಾತನಾಡಿಸಬೇಕು. ಅಲ್ಲದೆ ಇಡೀ ಮನೆಯ ಯಾವುದೇ ಕೆಲಸ ನಡೆಯಬೇಕಾದರೆ ಯಜಮಾನನೇ ನಿರ್ಧರಿಸಬೇಕು. ಯಜಮಾನನ ಕೋಣೆಯು ವಿಶಾಲವಾಗಿರುತ್ತದೆ ಹಾಗೂ ಕುಟುಂಬದ ದೇವರನ್ನು ಪೂಜಿಸುವ ಕೋಣೆ ಯಜಮಾನನ ಕೋಣೆಯಲ್ಲಿರುತ್ತದೆ. ಕುಡುಬಿಯರಲ್ಲಿ ಒಂದು ವಿಶೇಷತೆ ಎಂದರೆ ಊಟದ ನಂತರ ಮನೆಯ ಒಳಗಡೆ ಗೋಮಂತ್ರವನ್ನು (ಗೋಮೂತ್ರ) ಹಾಕಿ ಸಿಂಪಡಿಸಬೇಕೆಂಬ ನಿಯಮವಿದೆ.

ವಕ್ತ್ರ ಪ್ರಕಾರ

ಕುಡುಬಿಯರ ಸಾಮಾಜಿಕ ವ್ಯವಸ್ಥೆಯನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಣಪತಿ ಎಂಬ ಯುವಕನ ಪತ್ನಿ ದೇವರ ಕೋಣೆ ಮುಟ್ಟಾದವರಿಗೆ, ಸೂತಕವಿರುವವರಿಗೆ ಪ್ರವೇಶ ನಿಷೇಧ ಎಂಬುದನ್ನು ತಿಳಿಸಿದರು. ಕುಟುಂಬದ ಯಾವುದೇ ಸಾಮಾಜಿಕ, ಧಾರ್ಮಿಕ, ಆಚರಣೆಗಳ ವಿಧಿ ವಿಧಾನಗಳನ್ನು ಮದುವೆ, ಸಾವು, ಸಂಪ್ರದಾಯ, ಕೌಟುಂಬಿಕ ನ್ಯಾಯಗಳು, ತುಳಸಿಕಟ್ಟೆಯ ಬಳಿಯಲ್ಲಿಯೇ ಯಜಮಾನನ ನೇತೃತ್ವದಲ್ಲಿ ನಡೆಯುತ್ತವೆ. ಕೃಷಿಗೆ ಪ್ರಧಾನವಾಗಿ ಬೇಕಾಗಿರುವ ಸದಸ್ಯರ ಮೇಲೆ ಗಮನವಿರಿಸಲು ಮತ್ತು ನಿಯಂತ್ರಣವನ್ನು ಹೊಂದಲು ಸಹಾಯಕವಾಗುವಂತೆ ಯಜಮಾನನ್ನು ನೇಮಿಸಲಾಗಿದೆ.

ಕುಡುಬಿಯರ ಸಮುದಾಯದಲ್ಲಿ ಇಡೀ ಕುಟುಂಬಕ್ಕೆ ಒಂದು ಅಡುಗೆ ಮನೆಯಿರುತ್ತದೆ. ಈ ಅಡುಗೆ ಮನೆಯಲ್ಲಿ ಸಾಮೂಹಿಕವಾಗಿ ಅಡುಗೆ ಮಾಡಲಾಗುತ್ತದೆ. ಇವರ ಮನೆಯ ಮುಂದೆ ವಿಶಾಲವಾದ ಕಣ ಇರುವುದನ್ನು ನೋಡಬಹುದು. ಇವರ ಸಾಮಾಜಿಕ ವಿಶೇಷತೆ ಎಂದರೆ ಮನೆಯ ಸುತ್ತ ಬೆಟ್ಟದ ತುದಿಯಿಂದ ಬರುವ ನೀರಿಗೆ ತರಕಾರಿಗಳನ್ನು ಬೆಳೆಯುತ್ತಾರೆ.

ಈ ಸಮುದಾಯದವರು ಗದ್ದೆ ಅಥವಾ ತೋಟಕ್ಕಾಗಿ ಎರಡು ಅಥವಾ ಮೂರು ಕಿ. ಮೀಟರ್‌ನಡೆದು ಹೋಗಬೇಕಾಗಿಲ್ಲ. ಅದರ ಬದಲಿಗೆ ಮನೆಯ ಸುತ್ತಲೂ ಗದ್ದೆಗಳು, ತೋಟಗಳು ಇರುವುದನ್ನು ಕಾಣಬಹುದು. ಕ್ಷೇತ್ರಕಾರ್ಯದ ಸಮಯದಲ್ಲಿ ವೀಕ್ಷಿಸಿದಂತೆ ಇವರ ಹೊಲಗದ್ದೆಗಳು ಹಾಗೂ ಮನೆಗಳನ್ನು ಕಾಡು ಆವರಿಸಿಕೊಂಡಿದೆ. ಇವರಲ್ಲಿ ಒಂದೇ ಬಳಿಗೆ ಸೇರದವರು ಒಂದೇ ಮನೆಯಲ್ಲಿ ಜೊತೆಗೂಡಿ ಬದುಕುವ ಪರಂಪರೆ ಇದೆ. ಈ ಸಮುದಾಯದಲ್ಲಿ ಜೊತೆಗೂಡಿ ಬದುಕುವುದು ಮತ್ತು ಜೊತೆಗೂಡಿ ದುಡಿಯುವ ಪರಿಪಾಟದಲ್ಲಿ ಸ್ತ್ರೀ ಮತ್ತು ಪುರುಷ ಎಂಬ ಭಿನ್ನ ಭೇದವಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ರೀತಿಯ ಸಾಮಾಜಿಕ ನೆಮ್ಮದಿಯ ಜೀವನವು ಇವರ ಆರ್ಥಿಕ ಭದ್ರತೆಯನ್ನು ಮತ್ತು ರಕ್ಷಣೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಬುಡಕಟ್ಟು ಸಮುದಾಯಗಳ ಸಾಮಾಜಿಕ ಬದುಕು ಅವರ ಕೌಟುಂಬಿಕ ಮತ್ತು ಸಾಂಸ್ಕೃತಿಕತೆಯನ್ನು ಕಾಪಾಡುವ ಪ್ರಯತ್ನ ಮಾಡುತ್ತವೆ.

ಬುಡಕಟ್ಟು ಸಮುದಾಯವಾದ ಕುಡುಬಿಯರ ಮೇಲೆ ಆಧುನೀಕರಣದ ಪ್ರಭಾವವಾಗಿದ್ದರೂ ಸಹ ಅವರು ತಮ್ಮ ಎಲ್ಲ ಜೀವನವರ್ತನದ ಆಚರಣೆಗಳು ವಾರ್ಷಿಕ ವರ್ತಮಾನದ ಆಚರಣೆಗಳು, ಹಬ್ಬಗಳು ಅವರ ಮನೆಯ ಮುಂದೆ ಇರುವ ತುಳಸಿಕಟ್ಟೆಯ ಮುಂದೆ ನಡೆಯುತ್ತದೆ. ಕುಡುಬಿ ಸಮುದಾಯದವರು ಸಾಕುವ ಪ್ರಾಣಿಗಳೆಂದರೆ: ಕೋಣ, ಎತ್ತು, ಹಸು, ಎಮ್ಮೆ, ನಾಯಿ ಈ ರೀತಿಯಾಗಿ ಅನೇಕ ಪ್ರಾಣಿಗಳನ್ನು ಸಾಕುವುದರ ಜೊತೆಗೆ ಇವುಗಳಿಗೆ ಮೇಲೆ ಹೇಳಿದಂತೆ ಪ್ರತ್ಯೇಕವಾದ ಕೊಠಡಿಗಳಿರುತ್ತವೆ. ಹೀಗೆ ಆದಿವಾಸಿ ಸಮುದಾಯವಾದ ಕುಡುಬಿ ಸಮುದಾಯವು ಬದುಕಿನ ಸಂದರ್ಭದಲ್ಲಿ ತಮ್ಮ ಮಿತಿಗಳಿಗೆ ಅನುಗುಣವಾಗಿ ಜೀವನವನ್ನು ಮಾಡುವಂತಹ ಬುಡಕಟ್ಟಾಗಿದೆ. ಈ ಸಮುದಾಯ ನಾಯಿಯನ್ನು ಒಂದು ಮನೆಗೆ ಎರಡರಂತೆ ಸಾಕುತ್ತಾರೆ. ಇದರ ವಿಶಿಷ್ಟತೆಯೆಂದರೆ ರಾತ್ರಿಯ ಸಮಯದಲ್ಲಿ ಕಾಡು ಹಂದಿಗಳು, ಕಳ್ಳರು, ಹುಲಿ, ಕರಡಿ, ಸಿಂಹ ಈ ತರಹದ ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ಮನೆಯನ್ನು ಕಾಯಲು ನಾಯಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಇದಕ್ಕೆ ಪ್ರತಿಯಾಗಿ ನಾಯಿಗಳು ಸಹ ಅಷ್ಟೇ ಪ್ರಾಮಾಣಿಕತೆಯಿಂದ ಇರುತ್ತವೆ.

ಕುಡುಬಿ ಸಮುದಾಯದವರ ಭಾಷೆ

ಬುಡಕಟ್ಟು ಸಮುದಾಯಗಳಲ್ಲಿ ಪಶ್ಚಿಮದ ಘಟ್ಟಗಳಲ್ಲಿ ಕತ್ತಲೆಯ ಪ್ರಪಂಚದಲ್ಲಿ ಆದಿವಾಸಿ ಸಮುದಾಯಗಳೆಂದು ಗುರುತಿಸಿಕೊಂಡು ಒಮ್ಮೆ ಕತ್ತಲಿನಂತೆ ಮತ್ತೊಮ್ಮೆ ಬೆಳಕಿನಂತೆ ಜೀವನವನ್ನು ನಡೆಸುವ ಕುಡುಬಿ ಸಮುದಾಯ ಇತರೆ ಬುಡಕಟ್ಟು ಸಮುದಾಯಗಳಂತೆ ತನ್ನದೇ ಆದ ವಿಶಿಷ್ಟ ಭಾಷೆಯನ್ನು ರೂಢಿಸಿಕೊಂಡು ಬಂದಿದೆ. ಪ್ರಪಂಚದಲ್ಲಿ ಯಾವುದೇ ಬುಡಕಟ್ಟುಗಳನ್ನು ಅಧ್ಯಯನ ಮಾಡಿದರೆ ಮೊದಲು ಗುರುತಿಸುವುದು ಅವರ ವಿಶಿಷ್ಟ ಭಾಷೆ. ಈ ಹಿನ್ನೆಲೆಯಲ್ಲಿ ಕುಡುಬಿ ಸಮುದಾಯವು ಸಹ ತನ್ನದೇಯಾದ ಒಂದು ಭಾಷೆಯನ್ನು ಮೈಗೂಡಿಸಿಕೊಂಡಿದೆ. ಭಾಷೆಯ ದೃಷ್ಟಿಯಿಂದ ಕುಡುಬಿ ಅಥವಾ ಕುಣುಬಿ ಪದದ ಅರ್ಥವನ್ನು ನೋಡುವುದಾದರೆ ಒಕ್ಕಲುತನ ಎಂದು, ಕುಣಿಬಿಯೆಂದರೆ ಮರಾಠಿಯಲ್ಲಿ ರೈತ ಎಂದು ಅರ್ಥ ಕಲ್ಪಿಸಬಹುದಾಗಿದೆ. ಈ ರೀತಿಯಾಗಿ ಅವರು ಸಮುದಯದ ಅರ್ಥವನ್ನು ಹೊಂದಿಕೊಂಡು ಈಗಲೂ ಸಹ ಒಕ್ಕಲುತನವನ್ನೇ ಮಾಡುತ್ತಿದ್ದಾರೆ.

ಇಂಡೋ ಆರ್ಯನ್‌ಭಾಷಾ ಸಮುದಾಯಕ್ಕೆ ಸೇರಿದ ಕೊಂಕಣಿ ಕುಡುಬಿಯರ ಮಾತೃಭಾಷೆಯಾಗಿದೆ. ಶಿವಮೊಗ್ಗದ ಸಾಗರ ತಾಲೂಕಿನ ಮೇಘಾನೆಯಲ್ಲಿರುವ ಕುಡುಬಿಯರು ಕನ್ನಡ, ಮರಾಠಿ, ತುಳು ಮತ್ತು ಕೊಂಕಣಿ ಮಿಶ್ರಿತ ಭಾಷೆಯನ್ನು ಮಾತನಾಡುತ್ತಾರೆ. ಆದರೆ ಇತರೆಯವರ ಜೊತೆ ವ್ಯವಹಾರದ ದೃಷ್ಟಿಯಿಂದ ಮರಾಠಿ, ಕನ್ನಡದಲ್ಲಿ ಮಾತನಾಡುತ್ತಾರೆ.

ಕುಡುಬಿಯರು ಹೆಚ್ಚಾಗಿ ಕುಂದಾಪುರ, ಶಿವಮೊಗ್ಗ, ಭಟ್ಕಳ, ಉತ್ತರ ಕನ್ನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಕನ್ನಡ ಕಾಡಿನ ಇಳಿಜಾರಿನಲ್ಲಿಯೇ ವಾಸವಾಗಿರುವುದನ್ನು ನೋಡಬಹುದಾಗಿದೆ. ಇದರಿಂದಾಗಿ ಕುಡುಬಿಯರ ಭಾಷೆ ಮೇಲೆ ಕನ್ನಡ, ಮರಾಠಿ ಮತ್ತು ತುಳು ಭಾಷೆಗಳ ಪ್ರಭಾವ ಬೀರಿವೆ. ಈ ಭಾಷೆಗಳ ಪ್ರಭಾವ ಕುಡುಬಿಯರ ಹಾಡುಗಳ ಮೇಲೂ ಆಗಿದೆ, ಇದಕ್ಕೆ ಸಾಕ್ಷಿಯಾಗಿ ೭೪ ವರ್ಷದ ಗಣೇಶಜ್ಜ ಹೇಳುವಂತೆ ೫ ರಾತ್ರಿ ೫ ಹಗಲು ರಾಮಾಯಣ ಹಾಗೂ ಮಹಾಭಾರತವನ್ನು ನಿರಂತರವಾಗಿ ತಮ್ಮ ಭಾಷೆಯಲ್ಲಿ ಹಾಡುವ ಕಲೆಯನ್ನು ಹೊಂದಿದ್ದಾನೆ. ಈ ರೀತಿಯ ವಿಶಿಷ್ಟ ಭಾಷೆಯನ್ನು ಹೊಂದಿರುವುದರಿಂದ ಮೇಘಾನೆ ಮತ್ತು ಬಚ್ಚೋಡಿಯಲ್ಲಿರುವ ಕುಡುಬಿಯರನ್ನು ಇತರೆ ಜನರು ಸೇರುವುದಿಲ್ಲ.

ಕುಡುಬಿಯರ ಆಹಾರ ಸೇವನೆ

ಕರ್ನಾಟಕ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕುಡುಬಿ ಸಮುದಾಯವು ಆದಿವಾಸಿ ಸಮುದಾಯಗಳಲ್ಲಿ ಭಿನ್ನವಾದ ರೀತಿಯ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದೆ. ಕಾಡಿನಲ್ಲಿಯೇ ತನ್ನ ಜೀವನವನ್ನು ಪ್ರಾರಂಭಿಸುವ ಕುಡುಬಿಯರು ಇತರ ಬುಡಕಟ್ಟು ಸಮುದಾಯಗಳಾದ ಸೋಲಿಗರು, ಸಿದ್ಧಿಗಳು, ಗೌಳಿಗರು, ಹಕ್ಕಿಪಿಕ್ಕಿಯರು, ಗೋಸಂಗಿಗಳು, ದುರುಗಮುರುಗಿಯವರು, ಗೊಂಡರು ಮುಂತಾದ ಸಮುದಾಯಗಳಿಗಿಂತ ಭಿನ್ನವಾದ ರೀತಿಯಲ್ಲಿ ಆಹಾರವನ್ನು ಸೇವಿಸುತ್ತಾರೆ. ಜಾಗತೀಕರಣ ಮತ್ತು ವಸಾಹತುಶಾಹಿಯ ಹಿನ್ನೆಲೆಯಲ್ಲಿ ಕೆಲವು ಬುಡಕಟ್ಟು ಸಮುದಾಯಗಳು ಉಳುಮೆ ಮಾಡಲು ಭೂಮಿಯೇ ಇಲ್ಲದೆ ತಮ್ಮ ಜೀವನಕ್ಕಾಗಿ ಅನೇಕ ವೃತ್ತಿಗಳನ್ನು ಅವಲಂಬಿಸಿಕೊಂಡಿವೆ. ಆದರೆ ಒಂದು ಕಾಲದಲ್ಲಿ ಗೆಡ್ಡೆಗೆಣಸು, ಹಣ್ಣುಗಳನ್ನು ತಿಂದು ಬದುಕುತ್ತಿದ್ದ ಈ ಸಮುದಾಯ ಇಂದು ಕಾಡಿನಲ್ಲಿ ಭೂಮಿಯನ್ನು ಉಳುಮೆ ಮಾಡಿ ಕೃಷಿಯನ್ನು ಜೀವನದ ವೃತ್ತಿಯಾಗಿ ರೂಪಿಸಿಕೊಂಡು ಭತ್ತವನ್ನು ಬೆಳೆಯುತ್ತಿದ್ದುದರಿಂದ ಅವರ ಮುಖ್ಯವಾದ ಆಹಾರ ಅಕ್ಕಿಯಾಗಿದೆ.

ಕುಡುಬಿಯರು ಸಸ್ಯ ಮತ್ತು ಮಾಂಸಾಹಾರಿಯ ಆಹಾರವನ್ನು ರೂಢಿಸಿಕೊಂಡಿದ್ದು ಮಾಂಸಾಹಾರದಲ್ಲಿ ನಿಯಮವೊಂದನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಇವರು ಕಾಡಿನಲ್ಲಿಯೇ ಬದುಕುವ ಬುಡಕಟ್ಟು ಸಮುದಾಯವಾಗಿರುವುದರಿಂದ ಕಾಡಿನ್ಲಲಿ ಸಿಗುವ ಪ್ರಾಣಿ, ಪಕ್ಷಿಗಳನ್ನು ಮಾತ್ರ ಆಹಾರವಾಗಿ ಬಳಸುವ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ಸಾಕು ಪ್ರಾಣಿಗಳಾದ ಕುರಿ, ಆಡು, ದನ, ಊರ ಹಂದಿ ಮತ್ತು ಊರ ಕೋಳಿಗಳ ಮಂಗಗಳ ಮಾಂಸಗಳಿಗೆ ನಿಷೇಧವಿದೆ. ನವಿಲಿನ ಮಾಂಸವನ್ನು ಸಹ ನಿಷೇಧಿಸಿದ್ದಾರೆ. ಆದರೆ ಬೇಟೆಯ ಸಮಯದಲ್ಲಿ ಏನಾದರೂ ನವಿಲು ಸಿಕ್ಕರೆ ಬೇಟೆಯಾಡುವುದಿಲ್ಲ. ಒಂದು ಪಕ್ಷ ಬೇಟೆಯಾದರೆ ಆ ಸಮಯದಲ್ಲಿ ಮಾಂಸವನ್ನು ತಿನ್ನಬಹುದು ಎಂದು ಹೇಳುತ್ತಾರೆ. ಕುಡುಬಿಯರಿಗೆ ಆಹಾರದ ದೃಷ್ಟಿಯಿಂದ ಕಾಡುಹಂದಿಯ ಮಾಂಸ ಪ್ರಿಯವಾದ ಆಹಾರವಾಗಿದೆ. ಪ್ರತಿ ಮನೆಯ ಸುತ್ತ ಮುತ್ತ ಹಾಗೂ ತಮ್ಮ ಹೊಲಗಳ ಸುತ್ತ ಸಾಂಪ್ರದಾಯಿಕವಾಗಿ ಹಂದಿ ಬೇಟೆಯಾಡುವ ದೃಷ್ಟಿಯಿಂದ ಉರುಳುಗಳನ್ನು ಬಿಡುತ್ತಾರೆ. ಈ ರೀತಿಯಾಗಿ ಸಾಂಪ್ರದಾಯಿಕ ಬೇಟೆಯು ಎರಡು ರೀತಿಯಲ್ಲಿ ಕುಡುಬಿಯರಿಗೆ ಉಪಯೋಗವಾಗುತ್ತದೆ. ಉರುಳುಗಳಲ್ಲಿ ಬಿದ್ದ ಹಂದಿಯನ್ನು ಊಟಕ್ಕೆ ಬಳಸುತ್ತಾರೆ. ಈ ಸಮುದಾಯದವರು ಹಂದಿಗಳು ಬರುವ ಜಾಡನ್ನು ಗುರುತಿಸಿಕೊಂಡು ಆ ದಾರಿಯಲ್ಲಿ ಮರದ ತುಂಡುಗಳಿಂದ ಉರುಳನ್ನು ತಯಾರಿಸುತ್ತಾರೆ ಹಾಗೂ ಈ ಮರದ ತುಂಡುಗಳ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟಿರುತ್ತಾರೆ. ಹಂದಿಗಳು ಈ ಉರುಳಿನ ಒಳಗಡೆಯಿಂದ ನುಸುಳಿ ಬರುವಾಗ ಮರ ಮತ್ತು ಕಲ್ಲುಗಳು ಏಕಕಾಲದಲ್ಲಿ ಹಂದಿಗಳ ಮೇಲೆ ಕುಸಿಯುತ್ತವೆ ಮತ್ತು ದಾರಿಗಳು ಮುಚ್ಚುತ್ತವೆ. ಇದರ ಪರಿಣಾಮವಾಗಿ ಹಂದಿಗಳು ಬಿದ್ದ ಸೂಕ್ಷ್ಮವನ್ನು ತಿಳಿದ ತಕ್ಷಣ ಬಿದುರುಗಳಿಂದ ಮಾಡಿದ ಕೆಲವು ಚೂಪಾದ ಬರ್ಚಿಯಿಂದ ಹಂದಿಯನ್ನು ಕೊಲ್ಲುತ್ತಾರೆ. ನಂತರ ಹಂದಿಯನ್ನು ಊಟಕ್ಕೆ ಬಳಸುತ್ತಾರೆ.

ಕುಡುಬಿಯರಲ್ಲಿ ಯಾರಾದರು ಕೋಳಿಯನ್ನು ತಿಂದರೆ ಸಮುದಾಯದ ನಿಷೇಧಕ್ಕೆ ಒಳಗಾಗುತ್ತಾರೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿರುವುದನ್ನು ನೋಡಬಹುದಾಗಿದೆ. ಕುಡುಬಿಯರು ಮೀನಿನ ಅಡುಗೆಯನ್ನು ಮನೆಯ ಹೊರಗಡೆ ಮಾಡಿ ಊಟ ಮಾಡುತ್ತಾರೆ.

ಸಸ್ಯಹಾರ ಪದ್ಧತಿ

ಕೃಷಿಯಾಧಾರಿತ ಕಸುಬನ್ನು ರೂಢಿಸಿಕೊಂಡಿರುವ ಕುಡುಬಿಯರು ತಮ್ಮ ಹೊಲಗದ್ದೆಗಳಲ್ಲಿ ಹಾಗೂ ತಮ್ಮ ಮನೆಯ ಹಿಂದೆ ಅನೇಕ ರೀತಿಯ ತರಕಾರಿಗಳನ್ನು ಬೆಳೆಯುತ್ತಾರೆ. ಇವರು ಊಟಕ್ಕೆ ಬಳಸುವ ತರಕಾರಿಗಳೆಂದರೆ ಮೂಲಂಗಿ, ಮೆಣಸಿನಕಾಯಿ, ಗೆಣಸು, ಬದನೆಕಾಯಿ, ಈರುಳ್ಳಿ, ಟೊಮೊಟೋ ಮುಂತಾದ ಸಸ್ಯಹಾರಿ ತರಕಾರಿಗಳನ್ನು ಆಹಾರಕ್ಕೆ ಬಳಸುತ್ತಾರೆ.

ಕುಡುಬಿಯರ ಕುಟುಂಬ ವ್ಯವಸ್ಥೆ

ಕುಟುಂಬವನ್ನು ಇಂಗ್ಲಿಷ್‌ನಲ್ಲಿ ಪ್ಯಾಮಿಲಿ ಎನ್ನುತ್ತಾರೆ. ಪ್ಯಾಮಿಲಿ ಎಂಬುದು ಪ್ಯಾಮಾಲಸ್‌ಎಂಬ ಲ್ಯಾಟಿನ್‌ಶಬ್ದದಿಂದ ನಿಷ್ಪನ್ನಗೊಂಡಿದೆ. ಪ್ಯಾಮುಲಸ್‌ಎಂದರೆ ಆಳು ಎಂದರ್ಥ. ಇದರಿಂದಾಗಿ ಪ್ರಾಚೀನ ಕಾಲದ ಕುಟುಂಬದಲಲ್‌ಇ ಪತ್ನಿ ಮತ್ತು ಮಕ್ಕಳಲ್ಲದೆ ಆಳುಗಳು ಗುಲಾಮರು ಇದ್ದರೆಂಬ ವಿಚಾರ ವ್ಯಕ್ತವಾಗುತ್ತದೆ. ಕುಡುಬಿಯರ ಸಾಮಾಜಿಕ ಸ್ಥಾನಮಾನಗಳನ್ನು ನೋಡಿದರೆ ಅವರ ಹಾಡಿಯನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅವಲೋಕಿಸಿದಂತೆ ಈ ಸಮುದಾಯ ಪಿತೃಪ್ರಧಾನ ವ್ಯವಸ್ಥೆಯನ್ನು ಹೊಂದಿರುವ ಬುಡಕಟ್ಟಾಗಿದೆ. ಕುಡುಬಿಯರಲ್ಲಿ ಶೇಕಡ ೭೫ ರಷ್ಟು ಭಾಗ ಅವಿಭಕ್ತ ಕುಟುಂಬ ವ್ಯವಸ್ಥೆ ಕಂಡುಬರುತ್ತದೆ. ಆದರೆ ಇತ್ತೀಚೆಗೆ ಅವಿಭಕ್ತ ಕುಟುಂಬಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಪಿತೃಪ್ರಧಾನ ವ್ಯವಸ್ಥೆಯಿಂದ ಕೂಡಿರುವ ಕುಡುಬಿ ಸಮುದಾಯದಲ್ಲಿ ಏಕಪತ್ನಿತ್ವ ಪದ್ಧತಿ ಜಾರಿಯಲ್ಲಿದೆ. ಈ ಸಮುದಾಯದಲ್ಲಿ ಕುಟುಂಬದ ಯಜಮಾನ ಮನೆಯ ಹಿರಿಯ ವ್ಯಕ್ತಿಯಾಗಿರುತ್ತಾನೆ. ಕ್ಷೇತ್ರಕಾರ್ಯದ ಸಮಯದಲ್ಲಿ ಗಮನಕ್ಕೆ ಬಂದಂತೆ ಮೇಘಾನೆ ಮತ್ತು ಬಚ್ಚೋಡಿಯಲ್ಲಿ ಗಣೇಶಜ್ಜನನ್ನು ಹೊರತುಪಡಿಸಿದರೆ ಬೇರೆಯವರು ಎರಡು ಜನ ಸ್ತ್ರೀಯರನ್ನು ಮದುವೆಯಾದದ್ದು ಕಂಡುಬರುವುದಿಲ್ಲ.

ಕುಟುಂಬ ಪದ್ಧತಿಯ ಬಗ್ಗೆ ಮಾನವಶಾಸ್ತ್ರಜ್ಞರು ಗುರುತಿಸಿರುವ ಹಾಗೂ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಕುಟುಂಬ ವ್ಯವಸ್ಥೆಯನ್ನು ಅವಲೋಕಿಸಿದಾಗ ಪಿತೃಪ್ರಧಾನ ಕುಟುಂಬ ಮತ್ತು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯು ನಮ್ಮ ಗಮನಕ್ಕೆ ಬರುತ್ತದೆ. ಅಲ್ಲದೆ ಸ್ತ್ರೀಪುರುಷರ ಸಮ್ಮಿಲನವನ್ನು ಶಾಸ್ತ್ರೋಕ್ತವಾಗಿ ಅಂಗೀಕರಿಸಿ ಪುರೋಭಿವೃದ್ಧಿಗೂ ಅವಕಾಶ ಕಲ್ಪಿಸಿಕೊಡುವ ವಿವಾಹವನ್ನು ಆಧಾರವಾಗಿಟ್ಟುಕೊಂಡು ಕುಟುಂಬಗಳು ರಚಿತವಾಗಿರುವುದನ್ನು ನೋಡಬಹುದು. ಪ್ರಪಂಚದ ಬುಡಕಟ್ಟುಗಳ ಬದುಕನ್ನು ಗಮನಿಸಿದರೆ ಪ್ರಾಚೀನ ಕಾಲದಲ್ಲಿ ಆದಿವಾಸಿ ಸಮೂಹಗಳಲ್ಲಿ ಕುಟುಂಬ ವ್ಯವಸ್ಥೆಯು ಪ್ರಾಮುಖ್ಯತೆಯನ್ನು ಪಡೆದಿದೆ. ಒಂದು ಕಡೆ ಮಾರ್ಗನ್‌ಅವರು ಪ್ರಾಚೀನ ಆದಿವಾಸಿ ಸಮುದಾಯಗಳಲ್ಲಿ ಸ್ವೇಚ್ಛಾ ಸಂಭೋ—ವಿದ್ದಿತೆಂದು ಆ ಕಾರಣದಿಂದ ಕುಟುಂಬ ವ್ಯವಸ್ಥೆಗೆ ಅವಕಾಶವಿರಲಿಲ್ಲವೆಂದು ತಿಳಿಸುತ್ತಾರೆ. ಇದರ ಅರ್ಥ ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಗುಂಪು ವಿವಾಹ ಎಂದಾಗುತ್ತದೆ.

ಇಂದು ಕುಟುಂಬಗಳಲ್ಲಿ ಹೆಂಡತಿ ಮತ್ತು ಗಂಡ ಮಾತ್ರ ಇರುವ ಕುಟುಂಬಗಳು ಹಾಗೂ ಮಕ್ಕಳೇ ಇಲ್ಲವೇ ಬೇರೆಯವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತಹ ಅನೇಕ ಸಂಗತಿಗಳು ಉದಾಹರಣೆಗಳಾಗಿವೆ. ಆಗ್‌ಬರ್ನ್‌ಮತ್ತು ನಿಮ್ಕಾಪ್‌ಅವರ ಅಭಿಪ್ರಾಯದಂತೆ ಕುಟುಂಬದ ಸದಸ್ಯರ ಸಂಬಂಧವು ಅವರು ಒಂದೇ ರಕ್ತ ಸಂಬಂಧ ಹೊಂದಿರುವ ಆಧಾರದ ಮೇಲೆ ನಿರ್ಧರಿತವಾಗುತ್ತದೆ ಎಂದಿದ್ದಾರೆ.

ಕುಡುಬಿಯರ ಸಮುದಾಯದಲ್ಲಿ ಮನೆಯ ಹಿರಿಯನೇ ಇಡೀ ಕುಟುಂಬದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಆಚರಣೆಗಳನ್ನು ನಿಯಂತ್ರಿಸುವವನಾಗಿರುತ್ತಾನೆ. ಅಲ್ಲದೆ ಯಾವುದೇ ಹಬ್ಬ, ಮದುವೆ ಮುಂತಾದ ಶುಭಕಾರ್ಯಗಳಿಗೆ ಮನೆಮಂದಿಗೆಲ್ಲ ಬಟ್ಟೆ ಆಭರಣಗಳನ್ನು ತರುವಂತಹ ಅಧಿಕಾರ ಮನೆಯ ಹಿರಿಯರಿಗಿರುತ್ತದೆ. ಮಗನಿಗೆ ಹೆಣ್ಣು ಹುಡುಕುವ ಮತ್ತು ಮಗಳಿಗೆ ಗಂಡು ಹುಡುಕಿ ಮದುವೆ ಮಾಡುವ ಅಧಿಕಾರ ಹೊಂದಿರುತ್ತಾನೆ. ಆಸ್ತಿಯ ಹಕ್ಕು ಸಾಮಾನ್ಯವಾಗಿ ತಂದೆಯ ನಂತರ ಮನೆಯ ಹಿರಿಯ ಗಂಡು ಮಗನಿಗೆ ಬರುತ್ತದೆ. ತಂದೆಯ ನಂತರ ಅವನ ಮನೆಯ ಎಲ್ಲ ಜವಾಬ್ದಾರಿಗಳನ್ನು ನಡೆಸಿಕೊಂಡು ಹೋಗುತ್ತಾನೆ. ಇದಕ್ಕೆ ಎಲ್ಲರೂ ನಡೆದುಕೊಳ್ಳುತ್ತಾರೆ. ಈ ಸಮುದಾಯದಲ್ಲಿ ಮಗನಿಗೆ ಮದುವೆ ಮಾಡಿಕೊಂಡು ಬಂದ ನಂತರ ಪ್ರಸ್ಥವು ಕೂಡ ತಂದೆಯ ಅನುಮತಿಯ ಮೇರೆಗೆ ನಡೆಯುತ್ತದೆ. ಹೀಗೆ ಕುಡುಬಿಯರ ಕುಟುಂಬ ವ್ಯವಸ್ಥೆಯು ಒಂದೇ ಬಳಿಯನ್ನು ಹೊಂದಿದವರೆಲ್ಲರೂ ಒಟ್ಟಿಗೆ ವಾಸಿಸಲು ನೆರವಾಗಿದೆ. ಕುಡುಬಿಯರಲ್ಲಿ ಸ್ತ್ರೀಯರು ಪುರುಷರಂತೆ ಹೊಲಗದ್ದೆ, ತೋಟಗಳಲ್ಲಿ ಮನೆಯಲ್ಲಿ ಶ್ರಮಜೀವಿಗಳಾಗಿ ದುಡಿಯುತ್ತ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರುತ್ತಾರೆ. ಇಲ್ಲಿ ಸ್ತ್ರೀಯರಿಗೆ ವಿಶೇಷವಾದ ಯಾವುದೇ ಸ್ಥಾನವಿಲ್ಲ. ಬದಲಿಗೆ ಸಮಾನವಾದ ವ್ಯವಸ್ಥೆಯಿದೆ. ಆದರೆ ಪತಿಯ ಮತ್ತು ಮನೆಯವರೆಲ್ಲರ ಊಟವಾದ ಮೇಲೆಯೇ ಸ್ತ್ರೀಯರು ಊಟ ಮಾಡುತ್ತಾರೆ. ಇದರಿಂದಾಗಿ ತಿಳಿಯುವುದೇನೆಂದರೆ ಪ್ರಾಚೀನ ಕಾಲದ ಸಂಸ್ಕೃತಿ ಅಥವಾ ವ್ಯವಸ್ಥೆ ಏನಾದರೂ ಉಳಿದುಕೊಂಡಿದೆ ಎಂದರೆ ಅದು ಬುಡಕಟ್ಟು ಸಮುದಾಯಗಳಲ್ಲಿ ಮಾತ್ರ ಎಂಬುದು ಮಕ್ಕಳ ಪಾಲನೆ, ಪೋಷಣೆಯಲ್ಲಿ ಸ್ತ್ರೀಯರು ಪ್ರಧಾನವಾದ ಪಾತ್ರವಹಿಸುತ್ತಾರೆ. ಕುಡುಬಿಯರಲ್ಲಿ ಹೊಲಕ್ಕೆ ಬೀಜಗಳನ್ನು ಬಿತ್ತುವುದು ಅಥವಾ ಸಸಿ ನೆಡುವ ಪದ್ಧತಿ ಅವಿಭಕ್ತ ಕುಟುಂಬದಲ್ಲಿ ಹೆಚ್ಚು ಮಂದಿ ಅಣ್ಣ ತಮ್ಮಂದಿರು ಇದ್ದಲ್ಲಿ ಅವರ ಪೈಕಿ ಹಿರಿಯವನು ಮೊದಲ ಸಸಿ ನೆಡಬೇಕು. ಅನಂತರವೇ ಮನೆಯ ಕಿರಿಯವರು ಸಸಿ ನಡೆಸಬಹುದಾಗಿದೆ. ಈ ರೀತಿ ಭಿನ್ನವಾದ ಕುಟುಂಬ ವ್ಯವಸ್ಥೆ ಕುಡುಬಿಯರಲ್ಲಿ ಕಾಣಬಹುದು.

ಕುಡುಬಿಯರ ನ್ಯಾಯಪದ್ಧತಿ

ಕುಡುಬಿ ಸಮುದಾಯದಲ್ಲಿ ಕುಟುಂಬ ಮಟ್ಟದ ತೀರ್ಮಾನಗಳನ್ನು ಕುಟುಂಬದ ಯಜಮಾನನೇ ಮಾಡುತ್ತಾನೆ. ಜೊತೆಗೆ ಕುಟುಂಬದ ಯಾವುದೇ ತೀರ್ಮಾನಗಳನ್ನು ಅವನೇ ತೆಗೆದುಕೊಳ್ಳುತ್ತಾನೆ. ಆದರೆ ಕುಡುಬಿ ಸಮುದಾಯವು ಆಧುನೀಕರಣದ ರೀತಿಯ ರಕ್ಷಣೆ ಇಲಾಖೆಯ ತೀರ್ಮಾನಗಳನ್ನು ಒಪ್ಪುವುದಿಲ್ಲ. ಪೊಲೀಸ್‌ಎಂಬ ಪದದ ಬಗ್ಗೆ ಅರಿವೇ ಇಲ್ಲ. ಇದರಿಂದಾಗಿ ಪ್ರಾಚೀನ ಕಾಲದಿಂದ ಬಂದ ಗ್ರಾಮದ ನ್ಯಾಯಪದ್ಧತಿಯನ್ನು ರೂಢಿಸಿಕೊಂಡು ಬಂದಿದೆ. ಇದರಂತೆ ಇಡೀ ಸಮುದಾಯಕ್ಕೆ ಸಂಬಂಧಿಸಿದ ನ್ಯಾಯಗಳಿದ್ದರೆ ಮೂರು ಜನರ ಸಮ್ಮುಖದಲ್ಲಿ ಹಾಗೂ ಇಡೀ ಹಾಡಿಯ ಜನರ ಮುಂದೆ ಪರಿಹರಿಸಿಕೊಳ್ಳುತ್ತಾರೆ. ಹಾಡಿಯಲ್ಲಿಯೇ ಹಿರಿಯರು ಹಾಗೂ ಅವರಲ್ಲಿಯೇ ಸ್ವಲ್ಪ ಮಟ್ಟಿಗೆ ಬುದ್ಧಿವಂತಿಕೆ ಇರುವಂತವರನ್ನು ಮುಖಂಡರಾಗಿ ಮಾಡಿರುತ್ತಾರೆ. ಇವರನ್ನು ಆಯ್ಕೆ ಮಾಡುವ ಹಕ್ಕು ಇಡೀ ಹಾಡಿಯ ಜನರಿಗೆ ಇರುತ್ತದೆ. ಈ ಮೂರು ಜನರು ಕಲ್ಲಿನ ಮೇಲೆ ಕುಳಿತು ಕುಡುಬಿಯರ ಆಂತರಿಕ ಕರಹಗಳು ಅಥವಾ ಹಬ್ಬಕ್ಕೆ ಸಂಬಂಧಿಸಿದ ಕಲಹಗಳು, ಅಕ್ರಮಸಂಬಂಧಿ ಕಲಹಗಳು, ಅನೈತಿಕತೆಯಿಂದ ಕೂಡಿದ ಕಲಹಗಳು ಮುಂತಾದವುಗಳ ಬಗ್ಗೆ ಸಾಮಾನ್ಯವಾಗಿ ಪಂಚಾಯಿತಿಯನ್ನು ಸೇರಿಸಿ ತೀರ್ಮಾನಗಳನ್ನು ದಂಡದ ರೂಪದಲ್ಲಿ, ಬಹಿಷ್ಕಾರ ಹಾಕುವ ಪದ್ಧತಿ ಇದೆ. ಕುಟುಬಿಯರ ಸಮುದಾಯದಲ್ಲಿ ಅನೈತಿಕ ಸಂಬಂಧವನ್ನು ಇರಿಸಿಕೊಂಡಿದ್ದ ಕಾರಣಕ್ಕಾಗಿ ಗಂಡಿಗೂ ಬಹಿಷ್ಕಾರವನ್ನು ಹಾಕುತ್ತಾರೆ. ಇಲ್ಲಿ ಗಂಡ ಸತ್ತ ನಂತರ ವಿಧವೆಯು ಗರ್ಭಿಣಿಯಾದರೆ ಅವಳಿಗೆ ಸಮುದಾಯದಿಂದ ಬಹಿಷ್ಕಾರ ವಿಧಿಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಕುಡುಬಿಯರಲ್ಲಿ ವಿಧವೆಗೆ ಮರು ಮದುವೆಗೆ ಅವಕಾಶವಿಲ್ಲ. ಆದರೆ ಪುರುಷನಿಗೆ ಮರುಮದುವೆಗೆ ಅವಕಾಶವಿದೆ. ಇಲ್ಲಿ ಮಹಿಳೆಯರು ಪುರುಷರು ಹೇಳಿದಂತೆ ಪತಿಯೇ ದೇವರು, ಪತಿಯೇ ಸರ್ವಸ್ವ ಎಂದು ಒಪ್ಪಿಕೊಂಡು ಬದುಕುವ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಸ್ಥಾನಮಾನಗಳಿವೆ. ಆದರೆ ಮಕ್ಕಳಿಗೆ ಯಾವುದೇ ರೀತಿ ನಿರ್ಬಂಧವಿಲ್ಲ. ಕುಡುಬಿಯರಲ್ಲಿ ವಿವಾಹ ವಿಚ್ಛೇದನಗಳಿಲ್ಲ. ಅಂತ ಘಟನೆ ಬಾರದಂತೆ ಜಾಗರೂಕತೆಯಿಂದ ಇರುತ್ತಾರೆ.

ಕುಡುಬಿಯರ ಸಮುದಾಯದಲ್ಲಿ ಯಾರಾದರೂ ಅವರ ಹಾಡಿಗಳಿಗೆ ಹೋದರೆ ಸ್ತ್ರೀಯರು ಹೊರಗೆ ಬರುವುದಿಲ್ಲ. ಒಳಗಡೆ ಇರುತ್ತಾರೆ. ಪುರುಷರು ಮಾತ್ರ ಹೊರಗೆ ಬಂದು ವಿಚಾರಿಸುವ ಪದ್ಧತಿ ಇದೆ. ಈ ಸಮುದಾಯದವರು ತಮ್ಮದೇ ಆದ ನ್ಯಾಯ ಪಂಚಾಯತಿಯನ್ನು ನಿರ್ಮಿಸಿಕೊಂಡು ಜೀವನವನ್ನು ಮಾಡುತ್ತಿರುವುದನ್ನು ನೋಡಬಹುದು.

ಟಿಪ್ಪಣಿಗಳು

೧. ಗೊಂಡರ ಸಂಸ್ಕೃತಿ, ಉಪ ಸಂಸ್ಕೃತಿ ಅಧ್ಯಯನ ಮಾಲೆ, (ಪ್ರ. ಸಂ) ಪ್ರೊ. ಬರಗೂರು ರಾಮಚಂದ್ರಪ್ಪ, ಪು. ೨೬.

೨. ಮಾನವಶಾಸ್ತ್ರ, ಡಾ. ಆರ್‌. ರಾಮಕೃಷ್ಣ, ಪು. ೧೫೦, ೧೫೧, ೧೬೦,

೩. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಲಭ್ಯವಾದ ಮಾಹಿತಿ