ಹಕ್ಕಿ-ಪಿಕ್ಕಿ ಜನಾಂಗದವರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು ಅಲೆಮಾರಿ ಜನಾಂಗದವರಾಗಿದ್ದಾರೆ. ಇವರ ಮೂಲ ಸ್ಥಳವನ್ನು ಯಾವುದೆಂದು ಸರಿಯಾಗಿ ಯಾರೂ ತಿಳಿದಿರುವುದಿಲ್ಲ. ಅನೇಕ ಮಾನವಶಾಸ್ತ್ರಜ್ಞರ ಪ್ರಕಾರ ಬೇರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ೨೦೦ ವರ್ಷಗಳ ಹಿಂದೆ ವಲಸೆ ಬಂದವರೆಂದು ವ್ಯಕ್ತಪಡಿಸಿರುತ್ತಾರೆ. ಇವರು ಕರ್ನಾಟಕ ರಾಜ್ಯದ ವಿವಿಧ ಭಾಗಗಳ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆಲೆಸಿರುತ್ತಾರೆ. ಇವರ ಅಲೆಮಾರಿ ಜನಾಂಗದವರಾಗಿದ್ದ ಕಾರಣ ಒಟ್ಟು ಜನಸಂಖ್ಯೆಯನ್ನು ತಿಳಿಯುವುದು ಕಷ್ಟವಾಗಿರುತ್ತದೆ. ಆದರೂ ೧೯೯೧ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ ೫,೨೮೭.

ಪಕ್ಷಿರಾಜಪುರ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿಗೆ ೬ ಕಿಲೋ ಮೀಟರ್‌ದೂರದಲ್ಲಿರುವ ಪುಟ್ಟ ಗ್ರಾಮ. ಈ ಗ್ರಾಮದ ಸಮೀಪದಲ್ಲಿ ಇತರ ಜಾತಿಯವರು ನೆಲೆಸಿರುತ್ತಾರೆ. ಈ ಗ್ರಾಮದಲ್ಲಿ ಹಕ್ಕಿ-ಪಿಕ್ಕಿ ಜನಾಂಗದವರಿಗೆ ೧೯೫೮ರಲ್ಲಿ ಭಾರತ ಸರ್ಕಾರ ಗಿರಿಜನ ಅಭಿವೃದ್ಧಿ ಯೋಜನೆಯನ್ವಯ ಪುನರ್‌ವಸತಿ ಸ್ಥಳವನ್ನು ನೀಡಲಾಗಿದೆ. ಈ ಗ್ರಾಮದಲ್ಲಿ ೧೨೫ ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಚಿಕ್ಕ ವಯಸ್ಸಿನವರಿಂದ ೭೫, ೮೯ ವಯಸ್ಸಿನ ವೃದ್ಧರು ಇದ್ದಾರೆ.

ಇವರ ಒಟ್ಟು ಜನಸಂಖ್ಯೆ ೬೭೫. ಒಂದು ಮನೆಯಲ್ಲಿ ನಾಲ್ಕು ಐದು ಜನರಿರುತ್ತಾರೆ. ಇವರಿಗೆ ಈ ಮನೆಗಳು ಖಾಯಂ ವಾಸ ಸ್ಥಳವಾಗಿರುತ್ತದೆ. ಇಲ್ಲಿ ಆಧುನಿಕ ಎಲ್ಲ ಸೌಲಭ್ಯಗಳನ್ನು ಮಾಡಿಕೊಡಲಾಗಿರುತ್ತದೆ. ವಿದ್ಯುಚ್ಛಕ್ತಿ, ರಸ್ತೆ, ಕುಡಿಯುವ ನೀರು, ಶೌಚಾಲಯ, ಪ್ರತಿ ಮನೆಯಲ್ಲಿ ಎರಡು ಕೋಣೆ, ಅಡುಗೆ ಮನೆ ಇತರ ಸೌಲಭ್ಯಗಳನ್ನು ಕಾಣಬಹುದು.

ಇವರಲ್ಲಿ ಸಾಂಪ್ರದಾಯಿಕ ಜೀವನದ ಚಟುವಟಿಕೆಗಳು ಕಂಡುಬರುತ್ತವೆ. ಉದಾಹರಣೆಗೆ ಉಡಿಗೆ, ಆಭರಣ, ವೃತ್ತಿ, ಹಬ್ಬ ಹರಿದಿನಗಳು, ಮದುವೆ ಜನರ ಆಚರಣೆ ಮತ್ತು ಶವಸಂಸ್ಕಾರ ಇತ್ಯಾದಿ. ಇವರ ನಿಜವಾದ ಜೀವನದ ವೃತ್ತಿ ಬೇಟೆ ಮತ್ತು ಅನೇಕ ವಸ್ತುಗಳನ್ನು ಊರಿಂದ ಊರಿಗೆ ಹೋಗಿ ಮಾರಾಟ ಮಾಡುವುದು. ಈಗಲೂ ಕೆಲವು ಕುಟುಂಬಗಳು ಊರು ಊರು ಸುತ್ತುತ್ತಾ ವಿವಿಧ ಬಗೆಯ ವಸ್ತುಗಳನ್ನು ಪ್ರಾಣಿ ಪಕ್ಷಿಗಳ ಚರ್ಮದಿಂದ ಮಾಡಿದ ವಸ್ತುಗಳನ್ನು, ಗಿಡಮೂಲಿಕೆ, ಔಷಧಿಗಳನ್ನು ಮಾರಿ ಜೀವನ ನಡೆಸುತ್ತಿದಾರೆ. ಇವರನ್ನು ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ನರಿ ಶಿಕಾರಿಗಳೆಂದು ಮತ್ತು ಆಂಧ್ರಪ್ರದೇಶದಲ್ಲಿ ಮೇಲು ಶಿಕಾರಿಗಳೆಂದು ಕರೆಯುತ್ತಾರೆ. ಇವರು ಶರೀರ ರಚನೆಯಲ್ಲಿ ನೋಡಲು ದಪ್ಪ ಪುಷ್ಟವಾಗಿಯೂ, ಎಣ್ಣೆಗೆಂಪು ಬಣ್ಣವನ್ನು ಹೊಂದಿರುತ್ತಾರೆ. ಸ್ತ್ರೀಯರು ಉದ್ದನೆಯ ಕೂದಲನ್ನು ಬಿಡುತ್ತಾರೆ ಮತ್ತು ವಿವಿಧ ರೀತಿಯ ಆಭರಣಗಳನ್ನು ಧರಿಸುತ್ತಾರೆ. ಕೆಲವು ಗಂಡಸರು ಸಹ ಸ್ತ್ರೀಯರಂತೆ ಕೂದಲು ಬಿಡುತ್ತಾರೆ ಮತ್ತು ಕಿವಿಗೆ ಓಲೆಯನ್ನು ಹಾಕುತ್ತಾರೆ. ಹೆಂಗಸರು ಮತ್ತು ಪುರುಷರು ಹಿಂದೂ ಸಂಪ್ರದಾಯದಂತೆ ಬಟ್ಟೆ ಬರೆಗಳನ್ನು ಹಾಕುತ್ತಾರೆ. ಇವರು ವಿವಿಧ ಭಾಷೆಗಳನ್ನು ಬಳಸುತ್ತಾರೆ. ಅಲೆಮಾರಿಗಳಾದ ಕಾರಣ ಹಿಂದಿ, ಕನ್ನಡ, ಉರ್ದು, ತಮಿಳು, ಮರಾಠಿ, ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಇವರದೇ ಭಾಷೆಯಾದ “ವಾಘ್ರಿ” ಭಾಷೆಯಲ್ಲಿ ಮಾತನಾಡುತ್ತಾರೆ. ಇವರು ಊರಿನಿಂದ ಊರಿಗೆ ಹೋಗಬೇಕಾದರೆ ಕುದುರೆ ಎತ್ತು ಮತ್ತು ಹಸುಗಳ ಮೇಲೆ ತಾವು ಉಪಯೋಗಿಸುವ ಸಾಮಗ್ರಿಗಳನ್ನು ಹಾಕಿಕೊಂಡು ಸಾಗುತ್ತಾರೆ. ಇದರ ಆಹಾರ ಪದ್ಧತಿಯಲ್ಲಿ ಇತರ ಜನಗಳಿಗಿಂತ ವ್ಯತ್ಯಾಸವಿರುತ್ತದೆ. ಇವರು ಮಾಂಸಾಹಾರಿಗಳು ಮತ್ತು ಬೇಟೆಯಾಡಿ ಪ್ರತಿಯೊಂದು ಕಾಡು ಪ್ರಾಣಿಗಳನ್ನು ತಿನ್ನುತ್ತಾರೆ. ಉದಾಹರಣೆಗೆ ಉಡ, ನರಿ, ಕಾಡು ಕುರಿ, ಜಿಂಕೆ, ಕಾಡು ಎಮ್ಮೆ, ಪುನಗ, ಮೊಲ, ಮುಂಗುಸಿ, ಆಮೆ ಮತ್ತು ಮೀನು, ಏಡಿ ಇತ್ಯಾದಿ ಪ್ರಾಣಿ ಪಕ್ಷಿಗಳು. ಸಂಜೆ ಸಮಯದಲ್ಲಿ ಗಂಡಸರು ಮತ್ತು ಹೆಂಗಸರು ಮದ್ಯಪಾನವನ್ನು ಸೇವಿಸುತ್ತಾರೆ. ಉದಾಹರಣೆಗೆ ಸಾರಾಯಿ, ಹೆಂಡ ಮತ್ತು ಬ್ರ್ಯಾಂದಿ ಇತ್ಯಾದಿಗಳನ್ನು, ಬೀಡಿ ಮತ್ತು ಸಿಗರೇಟನ್ನು ಸೇದುತ್ತಾರೆ.

ಸಾಮಾಜಿಕ ಜೀವನ

ಸಾಮಾಜಿಕ ಜೀವನದ ಪ್ರಮುಖ ಹಂತ ಮದುವೆ. ಪುರುಷ ಅಥವಾ ಹೆಂಗಸರಿಗೆ ಮದುವೆಯಾಗಿರುತ್ತದೆ. ಮದುವೆ ಆಗದಿದ್ದರೆ ಅವರ ಸಮಾಜದಲ್ಲಿ ಸ್ಥಾನಮಾನ ಇರುವುದಿಲ್ಲವೆಂದು ತಿಳಿದಿರುತ್ತದೆ. ಇವರಲ್ಲಿ ಏಕಪತ್ನಿತ್ವ ಪದ್ಧತಿ ಇರುತ್ತದೆ. ಮದುವೆಯಲ್ಲಿ ವರದಕ್ಷಿಣೆ ಪದ್ಧತಿ ರೂಢಿಯಲ್ಲಿರುತ್ತದೆ. ಇವರಲ್ಲಿ ಹೊಸ ಸಂಬಂಧವನ್ನು ಬಯಸುತ್ತಾರೆ. ವರದಕ್ಷಿಣೆ ಪದ್ಧತಿಯನ್ನು ‘ಮಡ್ಕರ್‌’ ಎಂದು ಕರೆಯುತ್ತಾರೆ. ವರದಕ್ಷಿಣೆ ಬೆಲೆಬಾಳುವ ವಸ್ತುಗಳನ್ನು ಕೊಡುವ ಪದ್ಧತಿ ಇರುತ್ತದೆ.

ಈ ಸಮಾಜದಲ್ಲಿ ಕುಟುಂಬದ ಯಜಮಾನನ ಪಾತ್ರ ಬಹುಮುಖ್ಯವಾಗಿರುತ್ತದೆ. ಪ್ರತಿಯೊಂದು ಕಾರ್ಯಗಳಲ್ಲಿ ಯಜಮಾನ ಭಾಗವಹಿಸುತ್ತಾನೆ. ಉದಾಹರಣೆಗೆ ಮದುವೆ, ಜನನ ಆಚರಣೆ ಗ್ರಾಮದಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ, ಸತ್ತಾಗ ಆಚರಿಸುವ ಆಚರಣೆ ಮತ್ತು ಜಗಳ ಹೊಡೆದಾಟವನ್ನು ಬಗೆಹರಿಸುವಿಕೆಯಲ್ಲಿ ಇನ್ನೂ ಇತರ ಕಾರ್ಯಕ್ರಮಗಳಲ್ಲಿ ಯಜಮಾನನ ಪಾತ್ರ ಮುಖ್ಯವಾಗಿರುತ್ತದೆ. ಇವರು ದೇವರನ್ನು ಆರಾಧಿಸುತ್ತಾರೆ. ದೇವರನ್ನು ‘ದಾದಾಜಿ’ ಎಂದು ಕರೆಯುತ್ತಾರೆ. ದೇವರಲ್ಲಿ ನಂಬಿಕೆ ಇಟ್ಟಿರುತ್ತಾರೆ. ಇವರ ಶವಸಂಸ್ಕಾರದಲ್ಲಿ ಸುಡುವ ಪದ್ಧತಿ ಇರುವುದಿಲ್ಲ. ಹೂಳುವ ಪದ್ಧತಿ ಇರುತ್ತದೆ ಮತ್ತು ೧೩ನೇ ದಿನದಂದು ತಿಥಿಯನ್ನು ಆಚರಿಸುತ್ತಾರೆ ಇದನ್ನು ‘ಬಾರ’ ಎಂದು ಕರೆಯುತ್ತಾರೆ.

ಈ ಗ್ರಾಮದ ಹಕ್ಕಿ-ಪಿಕ್ಕಿ ಜನಾಂಗದಲ್ಲಿ ಅನೇಕ ರೀತಿಯ ಸಾಮಾಜಿಕ ಬದಲಾವಣೆಯನ್ನು ಕಾಣಬಹುದಾಗಿದೆ. ಇವರ ಊಟ, ತಿಂಡಿ, ಉಡುಗೆ, ಬೆಲೆ ಬಳುವ ಆಭರಣಗಳು, ಮನೆಯಲ್ಲಿ ಆಧುನಿಕ ವಸ್ತುಗಳಾದ ಕುರ್ಚಿ, ಮಂಚ, ಸೈಕಲ್‌, ಸ್ಕೂಟರ್‌, ಟಿವಿ, ರೇಡಿಯೋ, ಕೈಗಡಿಯಾರ, ಗೋಡೆ ಗಡಿಯಾರ, ಅಡುಗೆ ಪಾತ್ರೆಗಳು, ಅಡುಗೆ ಮಾಡಲು ಗ್ಯಾಸ್‌ಮತ್ತು ಕೆಲವರಲ್ಲಿ ಮೊಬೈಲ್‌ಫೋನ್ ಇತ್ಯಾದಿ ವಸ್ತುಗಳು.

ಹಕ್ಕಿಪಿಕ್ಕಿ ಆರ್ಥಿಕ ಜೀವನ ಮತ್ತು ಬದಲಾವಣೆಗಳು

ಹಕ್ಕಿ-ಪಿಕ್ಕಿಯವರು ಸಾಂಪ್ರದಾಯಿಕವಾಗಿ ತಲೆತಲಾಂತರಗಳಿಂದ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಅವುಗಳಿಂದ ಕೊಬ್ಬಿನಾಂಶವನ್ನು ತೆಗೆಯುವುದು ಅವುಗಳಿಂದ ಔಷಧಿಯನ್ನು ತೆಗೆದು ಕಾಲು ನೋವು, ತಲೆನೋವು, ಅರ್ಧ ತಲೆನೋವು, ಉಳುಕು, ಚರ್ಮ ರೋಗ ಹೀಗೆ ಹತ್ತಾರು ರೋಗಗಳಿಗೆ ಈ ಔಷಧಿಯನ್ನು ನೀಡುವುದು ಇವರ ಕುಲಕಸುಬಾಗಿತ್ತು. ಹಬ್ಬ ಹರಿದಿನಗಳಲ್ಲಿ ಜಾತ್ರೆ ಮತ್ತು ಸಂತೆಯ ದಿನಗಳಲ್ಲಿ ಈ ಔಷಧಿಯನ್ನು ಮಾರಾಟ ಮಾಡುವುದು ಮತ್ತು ಮೈ ಕೈ ನೋವಿಗೆ ವಿವಿಧ ಬಗೆಯ ಎಣ್ಣೆಯಿಂದ ಶರೀರಕ್ಕೆ ತಿಕ್ಕುವುದು ಇವರ ಕಸುಬಾಗಿದೆ. ಕಾಡಂಚಿನಲ್ಲಿ ಸಿಗುವಂತಹ ನರಿ, ಮುಂಗುಸಿ, ಕೋತಿ, ಜಿಂಕೆ ಇತರ ಪ್ರಾಣಿಗಳನ್ನು ಕೊಂಡು ಮಾಂಸವನ್ನು ಆಹಾರಕ್ಕೆ ಬಳಸಿ ಅದರ ಚರ್ಮವನ್ನು ಹದ ಮಾಡಿ ಜೀವ ಇರುವ ಪ್ರಾಣಿಯಂತೆ ಮಾಡಿ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಾರೆ. ಅನೇಕ ಬಗೆಯ ನಾಟಿ ಔಷಧಿಯನ್ನು ಮಾರಾಟ ಮಾಡುತ್ತಾರೆ. ಇವರು ಗದ್ದೆ, ಹೊ ಅರಣ್ಯದಲ್ಲಿ ಮತ್ತು ಕೆರೆಗಳಲ್ಲಿ ಬಲೆಯನ್ನು ಹಾಕಿ ಪ್ರಾಣಿ ಪಕ್ಷಿಗಳನ್ನು ಹಿಡಿಯುತ್ತಾರೆ. ಅರಣ್ಯದಲ್ಲಿ ಸಿಗುವ ಅನೇಕ ಜಾತಿಯ ಮರಗಿಡಗಳಿಂದ ಬೀಜವನ್ನು ಸಂಗ್ರಹಿಸಿ ವಿವಿಧ ಬಗೆಯ ಸರಗಳನ್ನು ಮಾಡಿ ಮಾರುತ್ತಾರೆ. ವಿವಿಧ ಬಗೆಯ ರುದ್ರಾಕ್ಷಿಗಳಾದ ಏಕಮುಖಿ, ದ್ವಿಮುಖಿ, ತ್ರಿಮುಖ ಮತ್ತು ಪಂಚಮುಖದ ರುದ್ರಾಕ್ಷಿಯನ್ನು ಮಾರುತ್ತಾರೆ. ಇವುಗಳನ್ನು ಪವಿತ್ರ ಸ್ಥಳವಾದ ಹಿಮಾಲಯದ ಹರಿದ್ವಾರ ಮತ್ತು ಹೃಷಿಕೇಶ ಸ್ಥಳದಿಂದ ತಂದಿರುತ್ತೇವೆಂದು ನಂಬಿಸಿರುತ್ತಾರೆ. ಇದರ ಬೆಲೆ ೧೦೦ ರೂಪಾಯಿಯಿಂದ ೧೦೦೦ ರೂಪಾಯಿಯವರೆಗೆ ಇರುತ್ತದೆ. ಹೆಂಗಸರು ಪ್ರಾಣಿಗಳ ಕೂದಲಿನಿಂದ ಚೌಲಿಗಳು, ಬಾಚಣಿಕೆಗಳನ್ನು ಮಾಡಿ ಮಾರುತ್ತಾರೆ. ಇವುಗಳನ್ನು ೧೦ ರೂಪಾಯಿಯಿಂದ ೧೦೦, ೧೫೦ ರೂಪಾಯಿಗಳವರೆಗೆ ಮಾರುತ್ತಾರೆ.

ಈ ಪಕ್ಷಿರಾಜಪುರದಲ್ಲಿ ಸರಿ ಸುಮಾರು ೧೨೫ ಕುಟುಂಬಗಳು ವಾಸವಾಗಿವೆ. ಇವರ ಕುಲ ಕಸುಬಿನೊಂದಿಗೆ ಅನೇಕ ಬಗೆಯ ವಿವಿಧ ಜೀವನೋಪಾಯ ಮಾರ್ಗಗಳಿಂದ ಜೀವನ ಸಾಗಿಸುತ್ತಿದ್ದಾರೆ. ಕುಲಕಸುಬು ಮಾಡಲು ಅರಣ್ಯ ಇಲಾಖೆಯವರು ಬೇಟೆಯಾಡಲು ನಿರ್ಬಂಧಿಸಿರುತ್ತಾರೆ. ಈ ಕಾರಣದಿಂದ ಇವರಿಗೆ ಕಾಡಿನಲ್ಲಿ ಬೇಟೆಯಾಡುವುದು ಕಷ್ಟವಾಗಿದೆ. ಕೆಲವರು ಸರ್ಕಾರದಿಂದ ನೀಡಿರುವ ಜಮೀನಿನಲ್ಲಿ ಹೊಗೆಸೊಪ್ಪು, ಜೋಳ, ರಾಗಿ ಮತ್ತು ಇತರ ತರಕಾರಿಗಳನ್ನು ಬೆಳೆಯಲು ಪ್ರಯತ್ನಿಸಿದರು. ಆದರೆ ಈ ವೃತ್ತಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಇದರಿಂದ ಕೆಲವರಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ನಂತರ ಇವರು ಗುಡಿಕೈಗಾರಿಕೆಯ ಮುಖಾಂತರ ಹಣ ಸಂಪಾದಿಸುತ್ತಾರೆ. ಪೇಟೆಯಿಂದ ಬೇಕಾದ ಕಚ್ಚಾ ವಸ್ತುಗಳನ್ನು ತಂದು ಅದರಿಂದ ವಿವಿಧ ರೀತಿಯ ಮನೆಯ ಅಲಂಕೃತ ವಸ್ತುಗಳನ್ನು ತಯಾರಿಸುತ್ತಾರೆ. ಇತರ ಪಕ್ಕದ ರಾಜ್ಯಗಳ ಹಕ್ಕಿ-ಪಿಕ್ಕಿ ಜನರೊಡನೆ ಸೇರಿ ವಿವಿಧ ಬಗೆಯ ಪ್ರಾಣಿ ಪಕ್ಷಿಗಳ ಪ್ರತಿರೂಪಗಳನ್ನು ಮಾಡಲು ಕಲಿತು ಮಾರಾ ಮಾಡಿ ಹಣ ಸಂಪಾದನೆ ಮಾಡುತ್ತಾರೆ. ಅನೇಕ ಪಟ್ಟಣಗಳಲ್ಲಿ ಸಂಚರಿಸಿ ತಮ್ಮ ಜ್ಞಾನ ಅಭಿವೃದ್ಧಿಯನ್ನು ಹೆಚ್ಚಿಸಿಕೊಂಡಿರುತ್ತಾರೆ. ಈ ಗ್ರಾಮದ ಹೆಂಗಸರು ಮತ್ತು ಗಂಡಸರು ಒಟ್ಟಿಗೆ ೧೦೫ ಜನರು ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತಾರೆ. ಇವರಲ್ಲಿ ಶೇಕಡ ೮೫ ರಷ್ಟು ಮಂದಿ ಅನಕ್ಷರಸ್ಥರು. ಓದಲು ಬರೆಯಲು ಬರುವುದಿಲ್ಲ. ಬಹುತೇಕ ಜನಗಳು ಪಾಸ್‌ಪೋರ್ಟ್‌ನಲ್ಲಿ ತಮ್ಮ ಹೆಬ್ಬೆಟ್ಟಿನ ಸಹಿ ಮಾಡಿದ್ದಾರೆ. ಇವರು ವರ್ಷದಲ್ಲಿ ೬ ತಿಂಗಳು ವಿವಿಧ ವಸ್ತುಗಳಾದ ಎಮ್ಮೆಯ ಕೊರಟಿನಿಂದ ಮಾಡಿದ ತೆಳುವಾದ ದಾರದ ತರಹ ಎಳೆಯನ್ನು ತೆಗೆದು ಅದನ್ನು ಆನೆ ಬಾಲದ ಕೂದಲೆಂದು ಮಾರಾಟ ಮಾಡುತ್ತಾರೆ ಕಂದು ಬಣ್ಣದ ಹಸುವಿನ ಚರ್ಮಕ್ಕೆ ವಿವಿಧ ರೀತಿಯ ಬಣ್ಣದ ಲೇಪನ ಮಾಡಿ ಹುಲಿ ಚರ್ಮದಂತೆ ತಯಾರಿಸಿ ಹುಲಿ ಚರ್ಮವೆಂದು ಜನಗಳಿಗೆ ಮಾರಾಟ ಮಾಡುತ್ತಾರೆ. ಇದನ್ನು ೨೫೦೦೦ ರೂ.ನಿಂದ ೧೦,೦೦೦ವರೆಗೆ ಮಾರುತ್ತಾರೆ. ಎಮ್ಮೆಯ ಗೊರಸೆಯಿಂದ ಹುಲಿ ಆಕೃತಿಯನ್ನು ಮಾಡಿ ಹುಲಿ ಉಗುರೆಂದು ಮಾರಾಟ ಮಾಡುತ್ತಾರೆ. ಒಂದಕ್ಕೆ ರೂ. ೫೦೦ ರಿಂದ ೧೦೦೦ ರೂಪಾಯಿಗೆ ಮಾರುತ್ತಾರೆ. ಕೆಲವು ಬಗೆಯ ಕುರಿ, ಆಡು ಮತ್ತು ಹಸುವಿನ ಚರ್ಮವನ್ನು ಬಳಸಿ ಅದಕ್ಕೆ ಸುಗಂಧ ದ್ರವ್ಯವನ್ನು ಬಳಸಿ ಅದರಿಂದ ಕಸ್ತೂರಿಯಂತೆ ಹೋಲುವ ವಸ್ತುಗಳನ್ನು ತಯಾರಿಸುತ್ತಾರೆ. ಇವುಗಳನ್ನು ೫೦ ರೂಪಾಯಿಯಿಂದ ೨೦೦ ರೂಪಾಯಿಗಳವರೆಗೆ ಮಾರಾಟ ಮಾಡುತ್ತಾರೆ. ಇವರು ಭಾರತದಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಹಣ ಸಂಪಾದನೆ ಆಗುವುದಿಲ್ಲವೆಂದು ತಿಳಿದು ಹೊರದೇಶಗಳಿಗೆ ಹೋಗಿ ವ್ಯಾಪಾರ ಮಾಡುವುದನ್ನು ಕಂಡುಕೊಂಡಿದ್ದಾರೆ. ಇವರು ಮುಂಬೈ ಏರ್‌ಪೋರ್ಟ್‌ನಿಂದ ಈ ಪ್ರಮಾಣ ಪತ್ರದೊಂದಿಗೆ ದೇಶ ವಿದೇಶಗಳಿಗೆ ಹೋಗಿ ಅಲ್ಲಿ ಇವುಗಳನ್ನು ನಿಜವಸ್ತುಗಳೆಂದು ಹೆಚ್ಚಿನ ಹಣಕ್ಕೆ ಮಾರುತ್ತಾರೆ. ಮುಖ್ಯವಾಗಿ ಇರಾನ್‌, ಇರಾಕ್‌, ಸಿಲೋನ್‌, ರಂಗೂನ್, ಸಿಂಗಾಪುರ ಮತ್ತು ಥೈಲ್ಯಾಂಡ್‌ಹೀಗೆ ಹತ್ತಾರು ದೇಶಗಳಿಗೆ ಹೋಗಿ ಈ ವಸ್ತುಗಳನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಅಲ್ಲಿಂದ ಹಿಂತಿರುಗಿ ೬ ತಿಂಗಳು ತಮ್ಮ ಊರಿನಲ್ಲಿ ನೆಲೆಸುತ್ತಾರೆ. ಪುನಃ ವಿವಿಧ ಕರಕುಶಲ ವಸ್ತುಗಳನ್ನು ಹೆಚ್ಚಿಣ ಹಣಕ್ಕೆ ಮಾರಾಟ ಮಾಡಿ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಅಲ್ಲಿಂದ ಹಿಂತಿರುಗಿ ೬ ತಿಂಗಳು ತಮ್ಮ ಊರಿನಲ್ಲಿ ನೆಲೆಸುತ್ತಾರೆ. ಪುನಃ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸಿ ಬೇರೆ ಯಾವುದಾದರೂ ದೇಶಕ್ಕೆ ಹೋಗುತ್ತಾರೆ. ಇವರಿಗೆ ಇಂಗ್ಲಿಷ್‌ಓದಲು ಬರೆಯಲು ಬರುವುದಿಲ್ಲ. ಇತರ ದೇಶಗಳಿಗೆ ಹೋಗಿಬರುವುದರಿಂದ ಇಂಗ್ಲಿಷ್‌ಭಾಷೆಯನ್ನು ಮಾತನಾಡುತ್ತಾರೆ. ಈ ವ್ಯಾಪಾರದ ಕಾರಣದಿಂದ ಈ ಗ್ರಾಮದ ಕೆಲವು ಕುಟುಂಬದವರ ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾಗಿರುತ್ತಾರೆ. ಇಲ್ಲಿ ಬರೇ ಗಂಡಸರು ಮಾತ್ರವಲ್ಲದೇ ಹೊರದೇಶಕ್ಕೆ ಹೋದವರಲ್ಲಿ ಹೆಂಗಸರು ಸಹಾ ದೇಶ ವಿದೇಶಗಳಿಗೆ ಹೋಗಿ ವ್ಯಾಪಾರ ಮಾಡಿ ಬರುತ್ತಾರೆ. ಈ ಬುಡಕಟ್ಟು ಜನರಲ್ಲಿ ಆರ್ಥಿಕ ಸ್ಥಿತಿಗತಿಯ ಅನೇಕ ರೀತಿಯಲ್ಲಿ ಪರಿವರ್ತನೆಗೊಂಡಿರುತ್ತಾರೆ.

ಈ ಗ್ರಾಮದ ಜನರನ್ನು ಅಕ್ಕಪಕ್ಕದಲ್ಲಿರುವ ಇತರ ಜಾತಿಯವರೆಗೆ ಹೋಲಿಸಿದರೆ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಬುಡಕಟ್ಟು ಜನರು ಉತ್ತಮವಾಗಿರುವುದು ಕಂಡುಬರುತ್ತದೆ. ಇತ್ತೀಚಿನ ಯುವ ಪೀಳಿಗೆಯವರು ಓದು ಬರಹ ಕಲಿಯಲು ಶಾಲೆಗಳಿಗೆ ಹೋಗುತ್ತಿರುವುದು ಒಂದು ವಿಶೇಷತೆಯೆಂದು ಹೇಳಬಹುದು. ಕೆಲವರು ಇಂದಿನ ಕೃಷಿಗೂ ಹೊಂದಿಕೊಂಡಿರುವುದು ಅಚ್ಚರಿಯ ಸಂಗತಿ ಮತ್ತು ತಮ್ಮ ಕೆಲವು ಸಂಪ್ರದಾಯಗಳನ್ನು ಮುರಿಯದೆ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅನೇಕ ಹಿರಿಯ ವಯಸ್ಸಿನ ವೃದ್ಧರು ಕಾರಣರಾಗಿದ್ದಾರೆ.

ಗ್ರಂಥಋಣ

೧. ಕನ್ನಡ ವಿಶ್ವಕೋಶ, ೧೯೭೯, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ.

೨. ಇವನ್‌ಪ್ರಿಚರ್ಡ್‌ಇ.ಇ., ೧೯೪೦, ದಿನ್ಯೂರ್ಯ.

೩. ಮಲಿನೋಸ್ಕಿ ಬಿ, ೧೯೪೮, ಆರ್ಗೋನಾಟ್ಸ್‌ಆಫ್‌ದಿ ವೆಸ್ಟರ್ನ್‌, ಪಿಸಿ ಪಿಕ್‌.

೪. ಗುರ್ಯೆ ಜಿ. ಎಸ್‌., ೧೯೪೫, ಮಹದೇವ ಕೋಳಿ.

೫. ಕೆ. ಎನ್‌. ವೆಂಕಟರಾಯಪ್ಪ, ೧೯೬೫, ರೂರಲ್‌ಸೊಸೈಟಿ ಮತ್ತು ಸೋಸಿಯಲ್‌ಚೇಂಜ್‌.

೬. ಇನ್‌ಪುರ ಎಲ್‌, ೧೯೭೧, ಮಾನವಶಾಸ್ತ್ರದ ಪರಿಚಯ.

೭. ಎಲ್‌. ಕೆ. ಅಯ್ಯಂಗಾರ್‌, ೧೯೫೬, ಕಾಡು ಕುರುಬರು.