ಪ್ರಸ್ತಾವನೆ

ಮುಖ್ಯವಾಹಿನಿಯ ಜನರ ತಿಳುವಳಿಕೆಗಳಿಂದ ಅಲೆಮಾರಿ ಹಾಗೂ ವಿಮುಕ್ತ ಪಂಗಡಗಳು ಯಾವಾಗಲೂ ಹೊರಗೆ ಉಳಿದಿವೆ. ಈ ಪಂಗಡಗಳು ಹಳ್ಳಿಗಳಲ್ಲಿ ದವಸ-ಧಾನ್ಯ, ಉಪ್ಪು, ಅರಣ್ಯೋತ್ಪಾದನೆಗಳ ವಿತರಕರಾಗಿ ಮತ್ತು ಮನರಂಜಕರಾಗಿ ಬಹುಮುಖ್ಯವಾದ ಭೂಮಿಕೆಯನ್ನು ಹೊಂದಿದ್ದರೂ ಇವರ ಕ್ಷಣಿಕ ಇರುವಿಕೆ ಇವರ ಬಗೆಗೆ ಸಂಶಯ ಮತ್ತು ಇವರ ಸುತ್ತಲು ರಹಸ್ಯಗಳನ್ನು ಹೆಣೆದುಕೊಳ್ಳಲು ಕಾರಣವಾಯಿತು. ಬ್ರಿಟಿಷ್‌ಸರ್ಕಾರ ಉತ್ತರ ಭಾರತದಲ್ಲಿ ೧೮೭೧ರಲ್ಲಿ ಈ ತರಹದ ಪ್ರಕೃತಿ ಅವಲಂಬಿತ ಮತ್ತು ತನ್ನ ಆಡಳಿತದ ಪರಿಧಿಗೆ ಬಾರದೇ ಇರುವ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಅಪರಾಧಿ ಬುಡಕಟ್ಟುಗಳೆಂದು ಅಧಿ ಸೂಚಿಸಿತು. ಈ ಅಧಿನಿಯಮವನ್ನು ೧೯೧೧ರಲ್ಲಿ ಬ್ರಿಟಿಷರು ಆಳುವ ಭಾರತದಲ್ಲಿ ಪರಿಷ್ಕರಿಸಿ ವಿಸ್ತರಿಸಲಾಯಿತು. ಮುಂದುವರಿದು ೧೮೯೭, ೧೯೧೧, ೧೯೨೩, ೧೯೨೪ ಮತ್ತು ೧೯೪೭ ಈ ವರ್ಷಗಳಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿ ಮಾಡಿ ಪರಿಷ್ಕರಿಸಲಾಯಿತು (ಮೇತ್ರಿಕೆ ಎಂ: ೨೦೦೮). ಅಲೆಮಾರಿಗಳು ಬ್ರಿಟಿಷರ ಕಾನೂನುಗಳನ್ನು ಒಪ್ಪುತ್ತಿರಲಿಲ್ಲ. ಅವರು ಪ್ರಬಲವಾಗಿ ವಿರೋಧಿಸುತ್ತಿದ್ದರು. ಬ್ರಿಟಿಷರ ವಸಾಹತು ಯೋಜನೆಯಡಿಯಲ್ಲಿ ದೊಡ್ಡ ಪ್ರಮಾಣದ ಸಂಪರ್ಕ ಜಾಲಗಳಾದ ರಸ್ತೆಗಳು, ರೈಲುಗಳು ಮತ್ತು ಉದ್ಯಮಗಳು ಉದಯವಾದವು.

ಈ ಗುಂಪುಗಳನ್ನು ವಸಾಹತುಗಳಲ್ಲಿ ಬೇಲಿ ಹಾಕಿ ಇಡಲಾಗುತ್ತಿತ್ತು. ಇವರು ದಿನಾಲು ಪೋಲಿಸರಿಗೆ ಹಾಜರಿಯನ್ನು ನೀಡುವುದು ಕಡ್ಡಾಯವಾಗಿತ್ತು. ಒಮ್ಮೆ ಅಪರಾಧಿ ಪಂಗಡವೆಂದು ಘೋಷಿಸಲ್ಪಟ್ಟ ಪಂಗಡದ ಪ್ರತಿಯೊಬ್ಬ ಸದಸ್ಯನು ಅಪರಾಧ ಮಾಡಿದ್ದಾನೊ ಇಲ್ಲವೋ ಎನ್ನುವುದನ್ನು ಪರಿಗಣಿಸದೆ ಬಂಧಿಸಲಾಗುತ್ತದೆ. ಜೈಲಿಗೆ ಕಳುಹಿಸಲಾದ ಸಾಮಾನ್ಯ ಕೈದಿಯ ಶಿಕ್ಷೆಗೆ ಕೊನೆ ಇದ ಮತ್ತು ಬಿಡುಗಡೆಯಾಗುವ ಆಸೆ ಇದ್ದೇ ಇರುತ್ತದೆ. ಆದರೆ ಅಪರಾಧಿ ಪಂಗಡಗಳ ಕಾಯ್ದೆಯಡಿಯಲ್ಲಿ ಅಪರಾಧಿ ಪಂಗಡದ ಸದಸ್ಯನಿಗೆ ಈ ಯಾವ ಆಸೆಗಳಿಗೂ ಅವಕಾಶ ಇರಲಿಲ್ಲ. ಇವರ ವಸಾಹತುಗಳು ಇವರಿಗೆ ಜೈಲುಗಳಾಗಿದ್ದವು. ಒಮ್ಮೆ ಅಪರಾಧಿ ಎಂದು ನಿರ್ಧರಿಸಲ್ಪಟ್ಟರೆ ಅದು ಜೀವನ ಪರ್ಯಂತ ಅಲ್ಲದೇ ಅವರ ಮುಂದಿನ ಪೀಳಿಗೆಗೂ ಸಹ ಅಪರಾಧಿ ಎಂಬ ಹಣೆಪಟ್ಟಿಯನ್ನು ಕಟ್ಟಲಾಗುತ್ತಿತ್ತು. ಮುಖ್ಯವಾಗಿ ಬ್ರಿಟಿಷರು ಆಗ ತಾನೇ ಭಾರತಕ್ಕೆ ಪರಿಚಯಿಸಿದ ಉದ್ದಿಮೆಗಳು, ರೈಲ್ವೆ ಇಲಾಖೆ ಮುಂತಾದವುಗಳಲ್ಲಿ ಒತ್ತಾಯ ಪೂರ್ವಕವಾಗಿ ಪುಕ್ಕಟೆ ಆಳುಗಳಾಗಿ ಈ ಸಮುದಾಯದ ಜನರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಇವರ ಮಕ್ಕಳಿಗಾಗಿ ಶಾಲೆಗಳನ್ನು ಹಾಗೂ ಇವರಿಗೆ ಕೆಲಸಗಳಲ್ಲಿ ಕುಶಲತೆ ಹೆಚ್ಚಿಸುವುದಕ್ಕಾಗಿ ತರಬೇತಿ ಕೇಂದ್ರಗಳನ್ನು ಬ್ರಿಟಿಷರು ಆರಂಭಿಸಿದರು. ಇವರನ್ನು ನೋಡಿಕೊಳ್ಳಲು ಪ್ರತಿಯೊಂದು ವಸಾಹತುವಿಗೆ ಒಬ್ಬ ಸಮಾಜಕಲ್ಯಾಣ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ. ಈತರಹದ ಅಪರಾಧಿ ಬುಡಕಟ್ಟುಗಳ ವಸಾಹತುಗಳು ಕರ್ನಾಟಕದ ಗದಗ, ಹುಬ್ಬಳ್ಳಿ, ಬಿಜಾಪುರ, ಬೆಳಗಾವಿ, ಬಾಗಲಕೋಟೆ ಇತ್ಯಾದಿಗಳಲ್ಲಿ ಕೊರಮ, ಗಂಟಿಚೋರ್, ಭೋವಿ, ಪಾರ್ಧಿ,ಕಂಜರಭಾಟ, ಚಪ್ಪರಬಂದ್ ಸಮುದಾಯಗಳನ್ನು ಕಾಣಬಹುದಾಗಿದೆ.

ವಿಮುಕ್ತ ಬುಡಕಟ್ಟುಗಳ ಚಾರಿತ್ರಿಕ ಹಿನ್ನೆಲೆ

ಅಪರಾಧಿ ಬುಡಕಟ್ಟು ಎನ್ನುವ ಪದ ಬಳಕೆಗೊಳ್ಳುವುದರ ಹಿಂದೆ ಬ್ರಿಟಿಷ್ ಆಳ್ವಿಕೆಯ ಭಾರತದ ಚರಿತ್ರೆ ಅಡಗಿದೆ. ಭಾರತದ ಸಂಸ್ಕೃತಿಯನ್ನು ಅರಿಯದ ಭಾರತಕ್ಕಿಂತ ಭಿನ್ನ ಸಂಸ್ಕೃತಿಯಿಂದ ಬಂದ ಬ್ರಿಟಿಷರಿಗೆ ಭಾರತವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಭಾರತದ ಸಾಮಾನ್ಯನನ್ನು ಅರ್ಥಮಾಡಿಕೊಳ್ಳದೆ ಅವರು ಇಲ್ಲಿ ಯಾವುದೆ ವಹಿವಾಟು ಮತ್ತು ರಾಜ್ಯಭಾರ ಮಾಡುವುದು ಕಷ್ಟದ ವಿಚಾರವೆ ಆಗಿತ್ತು. ಹೀಗಾಗಿ ಇಲ್ಲಿಯ ಜನರ ಆಚಾರ ವಿಚಾರಗಳನ್ನು ಅರಿಯುವ ಉದ್ದೇಶವನ್ನು ಇರಿಸಿಕೊಂಡೆ ಪಾಶ್ಚಿಮಾತ್ಯರು ಇಲ್ಲಿಯ ಸಮುದಾಯಗಳ ಅಧ್ಯಯನಗಳನ್ನು ೧೮-೧೯ನೆ ಶತಮಾನದಲ್ಲಿ ಕೈಗೊಂಡ ಪಾಶ್ಚಿಮಾತ್ಯರು ಮುಖ್ಯವಾಹಿನಿಯಲ್ಲಿರುವ ಜಾತಿಗಳಿಗಿಂತ ಭಾರತದ ಕುಶಲಕರ್ಮಿ, ಆದಿವಾಸಿ, ಅಲೆಮಾರಿ ಸಮುದಾಯಗಳ ಮೇಲೆ ಹೆಚ್ಚು ಒತ್ತನ್ನು ಕೊಟ್ಟು ಅಧ್ಯಯನ ನಡೆಸಿದರು. “ಇವತ್ತು ಹೆಚ್ಚಾಗಿ ಕಂಪೆನಿ ಆಡಳಿತದ ಸಂದರ್ಭದಲ್ಲಿ ನಡೆದ ಜಾತಿ ಮತ್ತು ಬುಡಕಟ್ಟುಗಳ ಅಧ್ಯಯನ ಸಂಪುಟಗಳನ್ನು ತೆರೆದು ನೋಡಿದರೆ ಅಲ್ಲಿನ ಪುಟಗಳು ಹೆಚ್ಚಾಗಿ ಈ ಮೂರು ಗುಂಪಿನ ಸಮುದಾಯಗಳಿಗೆ ಹೆಚ್ಚು ಆದ್ಯತೆಯನ್ನು ಕೊಟ್ಟಿರುವುದನ್ನು ಕಾಣಬಹುದಾಗಿದೆ (ಪ್ರಭಾಕರ ಎ. ಎಸ್. ೨೦೦೭, ೪೬) ಕಂಪನಿ ಆಡಳಿತ ಪೂರ್ವದಲ್ಲಿ ಭಾರತದ ಪ್ರತಿಯೊಂದು ಹಳ್ಳಿಯೂ ಹಲವು ಸಮುದಾಯಗಳನ್ನು ಒಳಗೊಂಡಿದ್ದು, ಆ ಸಮುದಾಯಗಳು ಒಂದಕ್ಕೊಂದು ಪೂರಕವಾಗಿದ್ದು ಇಡಿ ಈ ಹಳ್ಳಿಯನ್ನೆ ಸ್ವಾವಲಂಬಿಯಾಗುವ ರೀತಿಯ ಸಂರಚನೆ ಮಾಡಿಕೊಂಡಿದ್ದರು. ಇಲ್ಲಿಯ ಪ್ರತಿ ಸಮುದಾಯವೂ ಒಂದಕ್ಕೊಂದು ಪೂರಕವಾಗಿ ಗೌರವ ಕೊಟ್ಟುಕೊಳ್ಳುತ್ತಲೆ ಕಾರ್ಯನಿರ್ವಹಿಸುತ್ತ ಸ್ವಯಂ ಪರಿಪೂರ್ಣ ಎನ್ನುವಂತಹ ಜೀವನ ನಡೆಸುತ್ತಿದ್ದವು. ಇದು ಕೇವಲ ಒಂದು ಹಳ್ಳಿಯ ಕಥೆಯಲ್ಲ. ಒಟ್ಟಾರೆಯಾಗಿ ಇಡೀ ಭಾರತದ ಕತೆಯೆ ಇದಾಗಿದೆ. ಆದರೆ ಕಂಪೆನಿ ಸರ್ಕಾರ ಭಾರತದ ಆಳ್ವಿಕೆ ತೊಡಗಿದ ತರುವಾಯ ಭಾರತದ ಸ್ಥಿತಿಯೇ ನಿಧಾನಕ್ಕೆ ಬದಲಾಗತೊಡಗಿತು. ಕಂಪನಿ ಆಡಳಿತವು ಹೊಸ ಕೃಷಿ ನೀತಿ ಮತ್ತು ಭೂಕಂದಾಯ ವ್ಯವಸ್ಥೆ ಜಾರಿಗೆ ತಂದಿತು. ಇವರ ಈ ಹೊಸ ಕ್ರಮದಿಂದ ದೇಶಿಯ ಕೃಷಿ ಮತ್ತು ಊಳಿಗಮಾನ್ಯ ವ್ಯವಸ್ಥೆ ಮತ್ತು ಅದಕ್ಕೆ ಪೂರಕವೆಂಬಂತೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಕಂಪೆನಿಯು ಹೊಸ ಕಾಯ್ದೆ ಗಳು ನಿಯಂತ್ರಣಕ್ಕೆ ತಗೆದುಕೊಳ್ಳತೊಡಗಿದವು. ಭಾರತದ ಊಳಿಗಮಾನ್ಯ ಆರ್ಥಿಕ ವ್ಯವಸ್ಥೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ಕುಶಲಕರ್ಮಿ, ವ್ಯಾಪಾರಿ, ಸೇವಕ ವರ್ಗಗಳು ತಮ್ಮ ಮೂಲ ಕಸುಬಿನಿಂದ ದೂರ ಸರಿಯಬೇಕಾದ ಅನಿವಾರ್ಯತೆಯು ಉಂಟಾಯಿತು. ಪ್ರಾಯಶಃ ಕಂಪನಿ ಆಡಳಿತದ ಉದ್ದೇಶವೂ ಅದೇ ಆಗಿದ್ದಿತ್ತು. “ಅಲೆಮಾರಿ ವ್ಯಾಪಾರಿಗಳು ನಗರ ಮತ್ತು ಹಳ್ಳಿಗಳ ನಡುವೆ ಸೇತುವೆಯಾಗಿದ್ದುಕೊಂಡು ಸ್ಥಳೀಯ ವ್ಯವಹಾರ ಪೋಷಿಸುತ್ತಿದ್ದರು. ಸೇವಕ ವರ್ಗವಂತೂ ಇನ್ನಿಲ್ಲದಂತೆ ಊಳಿಗಮಾನ್ಯ ವ್ಯವಸ್ಥೆಯನ್ನು ಆರ್ಥಿಕವಾಗಿ ಅವಲಂಬಿಸಿತ್ತು. ಇಂತಹ ಸಂದರ್ಭದಲ್ಲಿ ಕೃಷಿ ಮತ್ತು ವ್ಯಾಪಾರಿಗಳ ಮೇಲೆ ಕಂಪನಿ ಆಡಳಿತದ ತಂದ ಕಾಯ್ದೆಗಳು ಭಾರತದ ಪಾರಂಪರಿಕ ಉತ್ಪಾದನೆ ಸಂಬಂಧಗಳನ್ನು ನಿರ್ಣಾಯಕವಾಗಿ ತಮ್ಮದೆ ಆದ ರೀತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ ಇಲ್ಲಿಯ ಅಲೆಮಾರಿ, ಆದಿವಾಸಿ ಬುಡಕಟ್ಟುಗಳು ತಮ್ಮ ಮೂಲ ಕಸುಬುಗಳನ್ನು ಕಳೆದುಕೊಳ್ಳುವುದರೊಂದಿಗೆ, ದಿಕ್ಕೇಡಿಗಳಾಗಿ ಉಳಿಯಬೇಕಾಯಿತು. ಈ ರೀತಿ ದಿಕ್ಕೇಡಿಗಳಾಗಿ ಉಳಿದ ಸಮುದಾಯಗಳು ತಮ್ಮ ಅನ್ನ ಕಸಿದುಕೊಂಡವರ ವಿರುದ್ಧ ನಿಲ್ಲುವುದು ಸಹಜನೂ, ಅನಿವಾರ್ಯವೂ ಆಗಿದ್ದಿತು. ಹೀಗಾಗಿ ಆ ಸಮುದಾಯಗಳೆಲ್ಲಾ ನೇರವಾಗಿಯೇ ಪರೋಕ್ಷವಾಗಿಯೇ ಕಂಪನಿ ಆಡಳಿತ ವ್ಯವಸ್ಥೆಯನ್ನು ನಿರಾಕರಿಸಿದವು. ಈ ನಿರಾಕರಣೆಯೆ ತರುವಾಯ ಆಕ್ರೋಶವಾಗಿ ಹೊರಹೊಮ್ಮಲ್ಪಟ್ಟಿತು.

ಒಂದು ಕಡೆ ಉತ್ತರ ಭಾರತದಿಂದ ವಲಸೆ ಬಂದ ಅಲೆಮಾರಿ ಸಮುದಾಯಗಳು, ಮತ್ತೊಂದು ಕಡೆ ಸ್ಥಳೀಯ ಅರಸರ ಅವನತಿಯ ನಂತರ ಚದುರಿದ ಕುಶಲಕರ್ಮಿ ಮತ್ತು ಮೂಲನಿವಾಸಿ ಸಮುದಾಯಗಳು. ತಾವು ನೆಲೆನಿಂತ ಪ್ರದೇಶಗಳಲ್ಲಿಯೇ ಪರ್ಯಾಯ ಜೀವನ ಮಾರ್ಗಗಳನ್ನು ಕಂಡುಕೊಂಡವು. ಆದರೆ ಕಂಪನಿ ಆಡಳಿತ ವ್ಯವಸ್ಥೆ ಪ್ರದೇಶವಾದ ನಂತರ ಅವರ ಹೊಸ ನೀತಿ-ಕಾಯ್ದೆಗಳು ಇವರನ್ನು ಮತ್ತಷ್ಟು ಅಧೋಗತಿಗೆ ತಳ್ಳಿದವು. ಮೊದಲೆ ತಿಳಿಸಿದಂತೆ ಕಂಪನಿ ಅಧಿಕಾರಿಗಳು ಈ ಸಮುದಾಯಗಳನ್ನು ತುಂಬಾ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು. ಪ್ರಾಯಶಃ ಇದಕ್ಕೆ ತಮ್ಮದಲ್ಲದ ಅನ್ಯದೇಶಿಯ ಜನರ ಅಂಕೆಯಲ್ಲಿ ತಾವು ಸಿಲುಕುವ ಸ್ಥಿತಿ ಬಂದಾಗ ಈ ಸಮುದಾಯಗಳು ವ್ಯವಸ್ಥೆಯ ವಿರುದ್ಧ ನಿಂತವು.

“ಹೈದರ್‌ಅಲಿ ಮತ್ತು ಟಿಪ್ಪು ಸುಲ್ತಾನರ ಸೈನ್ಯದ ಪ್ರಮುಖ ತುಕಡಿಗಳಲ್ಲಿ ಕಾರ್ಯ ನಿರತವಾಗಿದ್ದ ಈ ಸಮುದಾಯಗಳನ್ನು ಟಿಪ್ಪುವಿನ ಮರಣದ ನಂತರ ಬ್ರಿಟಿಷರು ಹಿಂಸಾತ್ಮಕವಾಗಿ ಹತ್ತಿಕ್ಕಿದರು” (ಅದೇ ೩) ಹಾಗೇ ತಮ್ಮ ವಿರುದ್ಧ ಧ್ವನಿಯೆತ್ತಿದ ಸಮುದಾಯಗಳನ್ನು ನಿಯಂತ್ರಿಸಲೆಂದೇ ೧೭೯೩ ರಲ್ಲಿ ರೆಗ್ಯುಲೇಷನ್‌ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ಕಾಯ್ದೆಯು ಮುಂದೆ ೧೮೩೬ರಲ್ಲಿ ಮರಳಿ ಪರಿಷ್ಕರಣೆಗೆ ಒಳಗಾಯಿತು. ತರುವಾಯ ೧೮೯೧ರಲ್ಲಿ ಈ ಕಾಯ್ದೆಯನ್ನು ಸಾಕಷ್ಟು ಬದಲಾವಣೆಗೆ ಒಳಪಡಿಸಿ ‘ಇಂಡಿಯನ್‌ಪೀನಲ್‌ಕೋಡ್‌’ ಆಗಿ ಜಾರಿಗೆ ತರಲಾಯಿತು. ನಂತರ ೧೮೭೧ರಲ್ಲಿ ಅಪರಾಧಿ ಬುಡಕಟ್ಟು ಕಾಯ್ದೆಯನ್ನು ತರಲಾಯಿತು. ಇದೇ ಕಾಯ್ದೆ ೧೯೧೦ ಮತ್ತು ೧೯೨೦ರಲ್ಲಿ ಹಲವು ತಿದ್ದುಪಡಿಗೆ ಒಳಗಾಗಿ ಜಾರಿಗೊಂಡಿತು” (ಅದೇ. ಪುಟ.೪). ಆ ಕಾಯ್ದೆಯ ಅಡಿಯಲ್ಲಿ ಯಾವ ಯಾವ ಸಮುದಾಯಗಳು ಬರಬೇಕು, ಯಾವ ಸಮುದಾಯವನ್ನು ಈ ಕಾಯ್ದೆಯಡಿ ನಿರ್ಧರಿಸಬೇಕೆಂಬುದನ್ನು ತೀರ್ಮಾನ ಮಾಡಲೆಂದೇ ಅಲೆಮಾರಿಗಳನ್ನು, ಕುಶಲಕರ್ಮಿ ಮತ್ತು ಆದಿವಾಸಿ ಸಮುದಾಯಗಳನ್ನು ಅಧ್ಯಯನ ಮಾಡಲು ಬ್ರಿಟಿಷ್‌ಅಧಿಕಾರಿಗಳು ತೊಡಗಿದ್ದರು. ಅದರ ಫಲವಾಗಿಯೇ Enthnohraphic Scrvey of India ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇಲ್ಲಿಯ ಇಂತಹ ಮೂಲನಿವಾಸಿಗಳ ವಿವರಗಳನ್ನು ಸ್ಥಳೀಯ ಜನರ ಸಹಾಯದಿಂದ ಆ ಜನ ಸಂಪಾದಿಸಿದರು.

ಮುಖ್ಯವಾಗಿ ಈ ಕಾಯ್ದೆಯು ಕೇವಲ ಅಪರಾದಿ ಜನಗಳನ್ನು ನಿಯಂತ್ರಿಸಿ ಅವರನ್ನು ಸನ್ಮಾರ್ಗದಲ್ಲಿ ಸಾಗಿಸುವ ಏಕಮಾತ್ರ ಉದ್ದೇಶದಿಂದ ಕೂಡಿರಲಿಲ್ಲ. ಅದು ತಮ್ಮ ವಿರುದ್ಧ ದಂಗೆ ಏಳುವ ಚಳವಳಿಗಾರರು ಮತ್ತು ರಾಜಕೀಯ ಹೋರಾಟಗಾರರನ್ನು ಈ ಕಾಯ್ದೆಯಡಿಯಲ್ಲಿ ಹತ್ತಿಕ್ಕುವ ತಂತ್ರ ಮತ್ತು ಉದ್ದೇಶವೂ ಇತ್ತು ಎಂಬುದನ್ನು ಮೀನಾ ರಾಧಕೃಷ್ಣ, ಮಲ್ಲಿಗಾಂಧಿ, ಕೆ.ಎಂ.ಮೇತ್ರಿ ಮುಂತಾದ ವಿದ್ವಾಂಸರು ತಿಳಿಸುತ್ತಾರೆ. ಪ್ರಾಯಶಃ ಆ ಕಾರಣಕ್ಕಾಗಿಯೇ ಈ ಕಾಯ್ದೆಯನ್ನು ಕಂಪನಿ ಆಡಳಿತ ಹೆಚ್ಚಾಗಿ ಬಳಸಿಕೊಂಡಿತು.

‘ಯಾವುದೇ ಅಪರಾಧ ಮಾಡದೆ ತಮ್ಮ ಪಾಡಿಗೆ ತಾವು’ ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದ ಜನರನ್ನು ಅಪರಾಧದಲ್ಲಿ ತೊಡಗಬೇಕಾದಂತಹ ಅನಿವಾರ್ಯತೆಗೆ ನೂಕಿದವರೆ ಬ್ರಿಟಿಷರು. ತರುವಾಯ ಸಮಾಜ ಸುಧಾರಣೆಯ ಹೆಸರಿನಲ್ಲಿ ಅಂತಹ ಸಮುದಾಯಗಳನ್ನು ವಸಾಹತುಗಳಲ್ಲಿ ಬಂಧನಗೊಳಿಸಿದವರೂ ಅವರೆ. ಒಟ್ಟಾರೆಯಾಗಿ ಹೇಳುವುದಾದರೆ ಅಪರಾಧಿ ಬುಡಕಟ್ಟು ಕಾಯ್ದೆಯನ್ನು ತಮ್ಮ ವಿರುದ್ಧ ನಿಲ್ಲುವವರ ಮೇಲೆ ಸೇಡು ತೀರಿಸಿಕೊಳ್ಳುವ ಒಂದು ಅಸ್ತ್ರವಾಗಿ ಬಳಸಿಕೊಂಡರೆಂಬುದಂತೂ ಸತ್ಯ. ಕಂಪನಿ ಆಡಳಿತದ ಎಲ್ಲಾ ನಿರ್ಬಂಧಗಳಿಗೆ ಒಳಗಾಗಬೇಕಿತ್ತು. ಯಾವುದೇ ಗುಂಪು, ವರ್ಗ, ಯಾವುದೇ ಸಮುದಾಯದ ಒಂದು ಭಾಗವನ್ನು ಅಥವಾ ವ್ಯಕ್ತಿಯನ್ನು ಅಪರಾಧಿ ಬುಡಕಟ್ಟು ಕಾಯ್ದೆ ಅಡಿಯಲ್ಲಿ ಬಂಧಿಸುವ ಪೂರ್ಣ ಸ್ವಾತಂತ್ರ್ಯ ಕಂಪನಿ ಅಧಿಕಾರಿಗೆ ನೀಡಲಾಗಿತ್ತು.

೧೮೯೭ರ ಅಪರಾಧಿ ಬುಡಕಟ್ಟುಗಳ ಕಾಯ್ದೆ

೧೮೯೭ರಲ್ಲಿ ವಸಾಹತುಶಾಹಿ ಸರ್ಕಾರವು ಅಪರಾಧಿ ಬುಡಕಟ್ಟುಗಳ ಕುರಿತು ಮತ್ತೊಂದು ಕಾಯ್ದೆಯನ್ನು ಹೊರತಂದಿತು. ಇದು ಅಪರಾದಿ ಬುಡಕಟ್ಟು ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ವಸಾಹತುಗಳನ್ನು ನಿರ್ಮಿಸುವ ಕುರಿತಾಗಿದೆ. ಈ ಎಲ್ಲಾ ವಸಾಹತುಗಳು ಕೆಲಸ ಕಾರ್ಯಗಳನ್ನು ಮಾಡು ಕುರಿತು, ವೃತ್ತಿ ಕೌಶಲ್ಯತೆ ಮತ್ತು ವಿಧೇಯ ಜೀವನದ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಸಗಳನ್ನು ಒಳಗೊಂಡಿದ್ದವು. ಅವರ ಮಕ್ಕಳನ್ನು ಶಾಲೆಗೆ ಕಳಿಸುವುದು ಮತ್ತು ಅವರಿಗೆ ಪುನರ್ವಸತಿ ಕಲ್ಪಸಿಕೊಟ್ಟು ಅವರ ಬದುಕಿನಲ್ಲಿ ಹೊಸತನದ ಹೆಜ್ಜೆಗಳನ್ನು ಇರಿಸುವಂತೆ ಮಾಡುವುದು ಆಕಸ್ಮಾತ್‌ಯಾವುದಾದರು ಕುಟುಂಬವು ಇವರ ನಿಬಂಧನೆಗಳನ್ನು ಒಪ್ಪಿಕೊಂಡು ನಡೆಯದಿದ್ದರೆ ಅಂತಹ ಕುಟುಂಬದ ಜನರಿಗೆ ಕಡ್ಡಾಯವಾಗಿ ಶಿಕ್ಷೆ ವಿಧಿಸಲಾಗುತ್ತಿತ್ತು. ಅಪರಾಧಿ ಬುಡಕಟ್ಟುಗಳು ತಮ್ಮ ಅಲೆಮಾರಿತನ ಬಿಟ್ಟು ಪುನಃ ನೆಲೆ ನಿಲ್ಲುವಂತೆ ಮಾಡುವುದು ಮತ್ತು ನ್ಯಾಯಕ್ಕೆ ವಿಧೇಯರಾಗಿರುವ ನಾಗರೀಕರನ್ನಾಗಿಸುವುದು. ಆಕಸ್ಮಾತ್‌ಅವರು ಎಲ್ಲಾ ನಿಯಮಗಳನ್ನು ಧಿಕ್ಕರಿಸಿ ನಡೆದರೆ ಅಂಥವರಿಗೆ ಶಿಕ್ಷೆ ಮತ್ತು ದಂಡಗಳನ್ನು ವಿಧಿಸುವುದಕ್ಕೆ ಅವಕಾಶವಿದ್ದಿತು.

ಅಪರಾಧಿ ಬುಡಕಟ್ಟು ಕಾಯ್ದೆ II, ೧೮೯೭ರ ಕಾಯ್ದೆಯ ವಿವರಗಳಲ್ಲಿ ಕೆಲವು ನ್ಯೂನ್ಯತೆಗಳಿವೆ. ೧೯೦೨-೦೩ರಲ್ಲಿ ಪೊಲೀಸ್‌ಕಮಿಷನ್‌(ಆಯೋಗ)ರವರು ಮೇಲಿನ ಕಾಯ್ದೆಯನ್ನು ವಿಮರ್ಶಿಸಿದ್ದಾರೆ. ೧೮೯೭ ಮೇಲಿನ ಕಾಯ್ದೆಯ ಅವಗುಣಗಳನ್ನು ಅನುಲಕ್ಷಿಸಿ ೧೯೧೧ರಲ್ಲಿ ಹೊಸ ಕಾಯ್ದೆ (ಕಾಯ್ದೆ III-೧೯೧೧)ಯನ್ನು ಜಾರಿಗೊಳಿಸಲಾಯಿತು. ಕೆಲವು ಹೊಸ ನಿಯಮಗಳನ್ನು ಈ ಕಾಯ್ದೆಯಲ್ಲಿ ತರಲಾಗಿದೆ.

ನೋಂದಾಯಿತ ಅಪರಾಧಿ ಬುಡಕಟ್ಟು ಜನರ ಬೆರಳಿನ ಗುರುತುಗಳನ್ನು ಪಡೆಯುವುದು. ಅವರು ನೆಲೆ ಬದಲಿಸಿ ಬೇರೆ ಕಡೆ ಹೋಗಿ ವಾಸಿಸುತ್ತಿದ್ದರೆ ಅಂಥವರ ಮೇಲೆ ಕ್ರಮಕೈಗೊಳ್ಳುವುದು. ಈ ಕಾಯ್ದೆಯನ್ನು ಸರಕಾರಕ್ಕೆ ಆ ವ್ಯಕ್ತಿಗಳು ತಾವು ಎಲ್ಲಿ ನೆಲೆ ಬದಲಿಸಿದ್ದೇವೆ ಎಂಬುದನ್ನು ತಿಳಿಸಬೇಕಾಗಿತ್ತು. ಹಾಗೆಯೇ ಪಾಲಕರಿಂದ ಬೇರ್ಪಡಿಸಿರುವ ಮಕ್ಕಳ ವಯಸ್ಸನ್ನು ನಾಲ್ಕರ ವಿರೋಧಿ ಚಟುವಟಿಕೆ ಎಂದು ಗುರುತಿಸಲ್ಪಡುತ್ತಿದ್ದವು. ಅಂತಹ ಕಾಯ್ದೆಗಳಿಂದ ನಿರುಮ್ಮಳವಾಗುವಂತೆ ಮಾಡಿದವರಲ್ಲಿ ಗೋಪಾಲಕೃಷ್ಣ ಗೋಖಲೆಯವರು ಪ್ರಮುಖರಾಗಿದ್ದಾರೆ.

೧೯೧೧ರ ಅಪರಾಧಿ ಬುಡಕಟ್ಟು ಕಾಯ್ದೆ

ಅಪರಾಧಿ ಬುಡಕಟ್ಟು ಕಾಯ್ದೆ ಪೊಲೀಸ್‌ಕಮಿಷನ್‌೧೯೦೨-೦೩ರ ಮೂಲ ವರದಿಯ ಅಪರಾಧಿ ಬುಡಕಟ್ಟು ಕಾಯ್ದೆ ೧೯೧೧ರಲ್ಲಿದೆ. ಅಪರಾಧಿ ಬುಡಕಟ್ಟು ಕಾರ್ಯ ಚಟುವಟಿಕೆಗಳ ಮೇಲೆ ಪೊಲೀಸ್‌ವ್ಯವಸ್ಥೆ ತಿಳುವಳಿಕೆ ಪಡೆಯುವುದು ಮತ್ತು ನಿರಂತರವಾಗಿ ಅಪರಾಧಗಳಲ್ಲಿ ನಿರತವಾದ ಕೆಲವು ಗ್ಯಾಂಗ್‌ಗಳನ್ನು ಗುರುತಿಸುವ ಕೆಲಸ ಮಾಡುವ ಕುರಿತು ತಿಳಿಸುತ್ತದೆ.

ಅಪರಾಧಿ ಬುಡಕಟ್ಟುಗಳನ್ನು ಹಿಡಿತದಲ್ಲಿರಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಶಕ್ತಿ ಮತ್ತು ಅಧಿಕಾರ ಬೇಕೆಂಬುದನ್ನು ತಿಳಿಸುತ್ತದೆ. ಪೊಲೀಸ್‌ಕಮೀಷನ್‌ಶಿಪರಸ್ಸು ಮಾಡಿದಂತೆ ೧೮೯೭ರ ಅಪರಾಧಿ ಬುಡಕಟ್ಟು ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲಾಯಿತಾದರೂ ಈ ಕಾಯ್ದೆಯು ಕೆಲವು ನ್ಯೂನ್ಯತೆಗಳಿಂದ ಕೂಡಿರುವುದನ್ನು ೧೯೧೧ರ ಕಾಯ್ದೆ ತೋರಿಸಿಕೊಟ್ಟಿತು. ಹೀಗಾಗಿ ೧೮೯೭ರ ಕಾಯ್ದೆ ಬದಲಾಗಿ ೧೯೧೧ರ ಕಾಯ್ದೆ ಜಾರಿಗೊಂಡಿತು.

೧೯೧೧ರ ಕಾಯ್ದೆಯ ಮಹತ್ವಗಳು

೧೯೧೧ ರ ಕಾಯ್ದೆಯ ಪ್ರಮುಖ ವಿಷಯಗಳು ೧, ಅಧಿಸೂಚನೆ, ೨, ನೋಂದಣಿ, ೩, ಬುಡಕಟ್ಟುಗಳ ಮುನ್ನಡೆ ನಿರ್ಬಂಧಗಳು, ೪, ವಸಾಹತುಗಳು, ಶಾಲೆಗಳು ಮತ್ತು ದಂಡಗಳ ಕುರಿತಾದ ಸ್ಥಳೀಯ ಸರ್ಕಾರವು ಯಾವುದೇ ಗ್ಯಾಂಗ್, ವರ್ಗ ಮತ್ತು ಬುಡಕಟ್ಟು ವ್ಯಕ್ತಿ , ಯಾವುದೇ ಗುಂಪು ಅಥವಾ ಜಾಮೀನುರಹಿತ ಅಪರಾಧಗಳಲ್ಲಿ ತೊಡಗಿದ್ದರೆ, ಅಥವಾ ತೊಡಗಿದೆಯೆಂದು ನಂಬಿಕೆ ಬಂದರೆ ಸ್ಥಳೀಯ ಕಛೇರಿಯ ಗೆಜೆಟ್ನ ಅನುಸೂಚಿಯ ಪ್ರಕಾರ ಅಂಥವರನ್ನು ಅಥವಾ ಅಂತಹ ಗುಂಪನ್ನು ಅಪರಾಧಿ ಬುಡಕಟ್ಟು (ಸೆಕ್ಷನ್-೩) ಎಂದು ಘೋಷಿಸಿಬಹುದು. ಈ ಜನಗಳ ಕುರಿತು ನೋಂದಾವಣೆ ಮಾಡಿಕೊಳ್ಳುವುದು ಮತ್ತು ವಸಾಹತುಗಳಲ್ಲಿರಿಸುವುದು ಈಎರಡೂ ಕ್ರಮಗಳನ್ನು ಅನುಸರಿಸಬಹುದು. ಅಂತಹ ಸಮುದಾಯಗಳು ಜೀವಿಸುವ ಸ್ಥಳಗಳನ್ನು ಪೊಲೀಸರು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವುದು. ಎರಡನೆಯದಾಗಿ, ಸೆಟ್ಲಮೆಂಟ್‌ಗಳು ಅಂದರೆ ಅಂತಹ ಸಮುದಾಯಗಳು ನಿಯಂತ್ರಣದಲ್ಲಿರಿಸಿಕೊಳ್ಳಲು ವಿಶೇಷ ಸ್ಥಳಗಳನ್ನು ನಿರ್ಮಿಸಿ ಅಲ್ಲಿ ಅವರನ್ನು ನೋಂದಾವಣೆ ಮಾಡಿ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವುದು (Home Judicial department, 1917). ಮತ್ತು ಅಂತಹ ಜನರ ಗುರುತಿಗಾಗಿ ಅವರ ಕೈಬೆರಳಿನ ಮತ್ತು ಇತರ ಗುರುತುಗಳನ್ನು ಆ ಬುಡಕಟ್ಟುಗಳಿಂದ ಪಡೆಯಬಹುದು.

ಸೆಕ್ಷನ್ ೨೨ರ ಕಾಯ್ದೆಯೊಳಗೆ ಅಪರಾಧಿ ಬುಡಕಟ್ಟಿನ ಕುಟುಂಬದ ಯಾವುದೇ ಸದಸ್ಯರು ನಿಯಮಗಳನ್ನು ಮೀರಿ ನಡೆದರೆ ಅಂತಹ ವ್ಯಕ್ತಿಯನ್ನು ಅಥವಾ ಕುಟುಂಬವನ್ನು ಶಿಕ್ಷಿಸುವುದು ಮತ್ತು ಜೈಲಿನಲ್ಲಿರಿಸುವುದು. ಮೊದಲನೆ ಅಪರಾಧಕ್ಕೆ ಒಂದು ವರ್ಷ ಜೈಲು, ಎರಡನೆ ಅಪರಾಧಕ್ಕೆ ಎರಡು ವರ್ಷ ಜೈಲು ಅದಕ್ಕೂ ಮಿಕ್ಕಿದರೆ ಅಂಥವರನ್ನು ಕುರಿತು ಸಭೆ ಕರೆದು ಏನು ಮಾಡಬಹುದು ಎಂದು ನಿರ್ಣಯಿಸಲಾಗುತ್ತಿತ್ತು.

೧೮೭೧ ಮತ್ತು ೧೯೧೧ ಕಾಯ್ದೆಗಳ ನಡುವೆ ಇರುವ ವ್ಯತ್ಯಾಸಗಳು

೧೮೭೧ರ ಅಪರಾಧಿ ಬುಡಕಟ್ಟು ಕಾಯ್ದೆಯು ಕೆಲವೇ ನಿರ್ದಿಷ್ಟ ಪ್ರದೇಶಗಳಿಗೆ ಅಂದರೆ, ಉತ್ತರ ಭಾರತದಲ್ಲಿ ಬೆನಾಲ್ United provines, ವಾಯುವ್ಯ ಪ್ರದೇಶ (Narth west province) ಮತ್ತು ಪಂಜಾಬ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಕಾಯ್ದೆಯು ಇಡೀ ಭಾರತಕ್ಕೆ ಅನ್ವಯವಾಗುತ್ತಿತ್ತು. ೧೮೭೧ರ ಅಪರಾಧಿ ಬುಡಕಟ್ಟು ಕಾಯ್ದೆಯು ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ಪೂರ್ಣವಾಗಿ ಅನ್ವಯಿಸಲು ಕೆಲವು ತೊಡಕಗಳಿದ್ದವು. ಆದರೆ ೧೯೧೧ರ ಕಾಯ್ದೆಯು ೧೮೭೧ರ ಕಾಯ್ದೆಯನ್ನು ಮೀರಿ ಎಲ್ಲಾ ಪ್ರದೇಶಗಳಿಗೂ ಅದು ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಯಿತು. ೧೯೧೧ರ ಕಾಯ್ದೆಯ ವಿಶೇಷತೆ ಏನೆಂದರೆ, ಅದರ ತಿದ್ದುಪಡಿಯಲ್ಲಿ ಸ್ಥಳೀಯ ಆಡಳಿತಕ್ಕೆ ಬಲ ನೀಡುವ ಮತ್ತು ಅಪರಾಧಿ ಬುಡಕಟ್ಟುಗಳನ್ನು ನಿಯಂತ್ರಿಸುವ ಶಕ್ತಿಯನ್ನು ದೊರೆಕಿಸಿಕೊಟ್ಟಿತು ಮತ್ತು ನೊಂದ ವ್ಯಕ್ತಿಗಳನ್ನು ಪ್ರಶ್ನೆ ಮಾಡದೇ ಅವರನ್ನು ನೋಂದಾವಣೆಗೆ ಗುರಿಪಡಿಸಿ ಸೆಟಲ್‌ಮೆಂಟ್‌ಗಳಲ್ಲಿ ಇರಿಸುವ ಅಧಿಕಾವನ್ನು ದೊರೆಕಿಸಿಕೊಟ್ಟಿತು.

೧೯೧೧ರ ಕಾಯ್ದೆಯಿಂದಾಗಿ ದೊರೆತ ಸವಲತ್ತುಗಳು

೧೯೧೧ರ ಅಪರಾಧಿ ಬುಡಕಟ್ಟು ಕಾಯ್ದೆಯು ಸ್ಥಳೀಯ ಆಡಳಿತಕ್ಕೆ ಬಲವನ್ನು ತಂದು ಕೊಟ್ಟಿತು.

೧. ಯಾವುದೇ ಬುಡಕಟ್ಟು, ಪಂಗಡ, ಗುಂಪನ್ನು ಅಪರಾಧಿ ಬುಡಕಟ್ಟೆಂದು ಗುರುತಿಸುವ ಮತ್ತು ಅವುಗಳು ಅಪರಾಧಗಳನ್ನು ಎಸಗುತ್ತಿದ್ದರೆ ಅಂಥವುಗಳನ್ನು ಜಾಮೀನುರಹಿತ ಅಪರಾಧಗಳೆಂದು ಪರಿಗಣಿಸಬಹುದಾಗಿತ್ತು.

೨. ಯಾವುದೇ ಅಪರಾಧಿ ಬುಡಕಟ್ಟಿನ ನೋಂದಾವಣಿಗೊಂಡ ಸದಸ್ಯರ ಬೆರಳಿನ ಗುರುತುಗಳನ್ನು ಪಡೆಯಬಹುದಾಗಿತ್ತು.

೩. ಪ್ರತಿಯೊಬ್ಬ ನೋಂದಾವಣಿಗೊಂಡ ಸದಸ್ಯರು ತಾವು ಯಾವ ಕಾರಣಕ್ಕಾಗಿ ತಮ್ಮ ನೆಲೆಯನ್ನು ಬದಲಿಸುತ್ತಿದ್ದೇವೆ ಎಂದು ನೇರವಾಗಿ ವರದಿ ಮಾಡಬೇಕಾಗಿತ್ತು. ಅದನ್ನು ಸ್ಥಳೀಯ ಸರ್ಕಾರವು ಘೋಷಿಸಬೇಕು. ಅಪರಾಧಿ ಬುಡಕಟ್ಟುಗಳು ತಮ್ಮ ಚಲನವಲನಕ್ಕೆ ಸಂಬಂಧಿಸಿದಂತೆ, ನಿರ್ಧರಿತ ಪ್ರದೇಶಗಳಲ್ಲಿ ಅಥವಾ ಸ್ಥಳಗಳಲ್ಲಿ ನೆಲೆಸಬೇಕಾಗಿತ್ತು. (ಸೆಕ್ಷನ್ ೧೨) ಆದರೆ ಅದರ ಕುರಿತು ಮೊದಲೇ ಕ್ರಮಕೈಗೊಳ್ಳಬೇಕಾಗುತ್ತಿತ್ತು. ಜೀವನ ಶೈಲಿ, ಅವರು ಜೀವನಕ್ಕಾಗಿ ಯಾವ ರೀತಿಯ ದುಡಿಮೆ ಮಾಡುತ್ತಾರೆ ಎಂಬುದನ್ನು ಪರಿಗಣಿಸಿ ಅವರ ಕುರಿತು ತೃಪ್ತಿ ಎನಿಸಿದಾಗ ಮಾತ್ರ ಸರ್ಕಾರವು ಅವರ ನೆಲೆಯ ಕುರಿತು ಪರವಾನಿಗೆ ನೀಡಬಹುದಾಗಿತ್ತು.

ಇದರ ಹೊರತಾಗಿ ಆ ಕಾಯ್ದೆಯ ಮುಖ್ಯಾಂಶವೆಂದರೆ ಸ್ಥಳೀಯ ಸರ್ಕಾರವು ಅಂತಹ ಜನರಿಗಾಗಿ ಕೆಲವೊಂದು ಕಾರ್ಖಾನೆಗಳು, ವ್ಯವಸಾಯ ಕುರಿತು ತಿಳುವಳಿಕೆ ನೀಡುವ ಶಾಲೆಗಳು, ಪಾಲಕರು ಮತ್ತು ಮಕ್ಕಳನ್ನು ಬೇರ್ಪಡಿಸುವುದು, (ಸೆಕ್ಷನ್-೧೭) ಆ ಕಾಯ್ದೆಯ ಉಪಯುಕ್ತತೆಯಾಗಿದೆ.

ಅವರ ಎಲ್ಲಾ ಮಕ್ಕಳನ್ನು ಕಾಯುವ ಅಧಿಕಾರ ಸ್ಥಳೀಯ ಆಡಳಿತಕ್ಕೆ ದೊರೆಕಿತಲ್ಲದೆ ಆ ಮಕ್ಕಳ ವಾತಾವರಣ ಬದಲಿಸಿ ಅವರಿಗೆ ಶಿಕ್ಷಣ ಇತರೆ ತರಬೇತಿಯನ್ನು ನೀಡಲಾಗುತ್ತಿತ್ತು. ಈ ರೀತಿ ಮಾಡುವುದರಿಂದ ಆ ಮಕ್ಕಳು ವಿಧೇಯ ನಾಗರೀಕರಾಗಿ ಬೆಳೆಯುತ್ತಾರೆ ಎಂದು ಕಂಪೆನಿ ಸರ್ಕಾರವು ಭಾವಿಸಿದ್ದಿತು. ಆ ಕಾಯ್ದೆಯ ಸೆಕ್ಷನ್ ೨೦ರ ಅಡಿಯಲ್ಲಿ ಸ್ಥಳೀಯ ಸರ್ಕಾರವು ನಿಯಮಗಳನ್ನು ರೂಪಿಸುವುದು ಮತ್ತು ಆ ನಿಯಮಗಳು ಯಾವ ಉದ್ದೇಶಕ್ಕಾಗಿ ರೂಪಿಸಲಾಗಿದೆಯೋ ಆ ಉದ್ದೇಶ ಈಡೇರಿಸಲು ಬಳಸುವುದಾಗಿತ್ತು. (ಮಲ್ಲಿಗಾಂಧಿ, ೨೦೦೮, ಪು. ೮) ಅಪರಾಧಿ ಬುಡಕಟ್ಟುಗಳಿಗೆ ನೋಟಿಸ್ ಕೊಡುವ ಮೂಲಕ ದಂಡಶುಲ್ಕವನ್ನು ವಿಧಿಸಿ ವಸೂಲು ಮಾಡಲಾಗುತ್ತಿತ್ತು.

೧೯೧೯ರ ಅಪರಾಧಿ ಬುಡಕಟ್ಟು ಕಾಯ್ದೆ

೧೯೧೯ರ ಅಪರಾಧಿ ಬುಡಕಟ್ಟು ಕಾಯ್ದೆಯನ್ನು ಪ್ರಶ್ನಿಸಿ ೧೯೨೩ರ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅಪರಾಧಿ ಬುಡಕಟ್ಟುಗಳ ವಸಾಹತುಗಳನ್ನೊಳಗೊಂಡ ಜೊತೆಗೆ ಭಾರತದ ಎಲ್ಲಾ ಬಂಧೀಖಾನೆ ಕಮಿಟಿಯನ್ನು ಇದು ಒಳಗೊಂಡಿದೆ. ಜೈಲ್ ಕಮಿಟಿಯು ಕೇವಲ ಇತರೆ ಸ್ವರೂಪದ ಜೈಲುಗಳಿಗೆ ಒತ್ತುಕೊಡುವುದಲ್ಲದೆ ವಸಾಹತುಗಳಿಗೂ (Settlements) ಒತ್ತು ನೀಡಿತು. ಅಪರಾಧಿ ಬುಡಕಟ್ಟು ವಸಾಹತು ಸ್ಥಳಗಳು ಅವರ ಆರ್ಥಿಕ ಅಭಿವೃದ್ಧಿಗೂ ಅವಕಾಶ ನೀಡದೆ ಕೇವಲ ವಸಾಹತುವಾಸಿ ಅಪರಾಧಿ ಬುಡಕಟ್ಟುಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡಿತು. ಅಪರಾಧಿ ಬುಡಕಟ್ಟು ವಸಾಹತುಗಳು ಕೇವಲ ಈ ಸಮುದಾಯಗಳಿಂದ ಸಮಾಜವನ್ನು ಕಾಯುವ ನಿಟ್ಟಿನಲ್ಲಿ ಸೀಮಿತವಾಗದೆ, ಸೆಟ್ಲಮೆಂಟಿನಲ್ಲಿರುವ ಜನರ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿತು. ಈ ಸಮಿತಿಯು ಸೆಟ್ಲಮೆಂಟ್‌ಗಳ ಉದ್ದೇಶ ಈಡೇರಿಕೆಗೆ ಔಧ್ಯಮಿಕೆ ಪ್ರದೇಶಗಳಲ್ಲಿ ವಸಾಹತುಗಳನ್ನು ನಿರ್ಮಿಸಲು ಶಿಫಾರಸ್ಸು ಮಾಡಿತು. ಈ ವಸಾಹತು ಜನ ಉದ್ದಿಮೆಗಳಲ್ಲಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಸೆಟಲ್‌ಮೆಂಟ್ ವಾಸಿಗಳಿಗೆ ಕೃಷಿಯ ಕುರಿತು ತಿಳುವಳಿಕೆ ಕೊರೆತೆ ಇತ್ತು ಹಾಗೂ ಅವರಿಗೆಲ್ಲಾ ನೀಡುವಷ್ಟು ಭೂಮಿ ದೊರೆಯುವುದು ಅಸಂಭವವಾಗಿತ್ತು. ಇದರಿಂದಾಗಿ ಕೃಷಿಯನ್ನು ಕುರಿತು ಈ ಸಮಿತಿ ಅಪರಾಧಿ ಬುಡಕಟ್ಟು ಜನರು ತೃಪ್ತಿದಾಯಕವಾಗಿ ಉದ್ದಿಮೆಗಳಲ್ಲಿ ಕೆಲಸ ಮಾಡುವುದು ಅನುಮಾನದ ವಿಚಾರವೇ ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಸಮಾಜಕ್ಕೆ ಉಪಯುಕ್ತ ಕೆಲಸಗಳನ್ನು ಇವರಿಂದ ಮಾಡಿಸಬಹುದು ಎಂಬ ಶಿಫಾರಸ್ಸನ್ನು ಈ ಸಮಿತಿ ಮಾಡಿತು. ಮೊದಲ ಬಾರಿಗೆ ಸರ್ಕಾರ ಅಪರಾಧಿ ಬುಡಕಟ್ಟುಗಳ ಸಮಸ್ಯೆಗಳನ್ನು ಪರಿಗಣಿಸಿ ಅವುಗಳ ಕುರಿತು ಹೆಚ್ಚಿನ ಒತ್ತನ್ನು ನೀಡಿತು ಹಾಗೂ ಆ ಸಮುದಾಯಗಳ ಆರ್ಥಿಕ ಅಭಿವೃದ್ದಿಯತ್ತ ಗಮನ ಹರಿಸಿತು.

೧೯೨೪ರ ಅಪರಾಧಿ ಬುಡಕಟ್ಟು ಕಾಯ್ದೆ

೧೯೨೩ರ ಅಪರಾಧಿ ಬುಡಕಟ್ಟು ಕಾಯ್ದೆಯು ಮರಳಿ ತಿದ್ದುಪಡಿಗೊಂಡು ಭಾರತೀಯ ಬಂದಿಖಾನೆ (Jail) ವಿಚಾರಣಾ ಸಮಿತಿಗೆ ಶಿಫಾರಸ್ಸು ಮಾಡಿತು. ಇದು ೧೯೨೪ರ ಬ್ರಿಟಿಷ್ ಆಡಳಿತದ ಭಾರತದ ಎಲ್ಲಾ ಪ್ರದೇಶಕ್ಕೂ ಅನ್ವಯವಾಗುತ್ತಿತ್ತು. ೧೯೧೧ರ ಕಾಯ್ದೆಯು ಹಲವಾರು ನ್ಯೂನತೆಗಳಿಂದ ಕೂಡಿತ್ತು. ಅದು ಅಪರಾಧಿಗಳ ಪುನರ್ವಸತಿ ಮತ್ತು ಸುಧಾರಣೆಗಳ ಕುರಿತು ಪ್ರಯತ್ನಿಸಲಿಲ್ಲ. ಕೇವಲ ಅಪರಾಧಿ ಪಾಲಕರಿಂದ ಮಕ್ಕಳನ್ನು ಬೇರ್ಪಡಿಸುವುದು ಮತ್ತು ಅಂತಹ ಮಕ್ಕಳಿಗೆ ಶಿಕ್ಷಣ ಒದಗಿಸುವುದಕ್ಕೆ ಸೀಮಿತವಾಗಿಬಿಟ್ಟಿತು. ಆಂತರಿಕವಾಗಿ ಪಾಲಕರು ಮತ್ತು ಮಕ್ಕಳ ಮಧ್ಯ ಹೊಸ ಸಮಸ್ಯೆಗಳು ಸೇರ್ಪಡೆಗೊಂಡವು. ಅಪರಾಧಿ ಭಾವನೆ ಅವರಲ್ಲಿ ಮುಂದುವರೆಯುವ ಸಾಧ್ಯತೆಗಳೇ ಹೆಚ್ಚಾಗಿದ್ದವು. ಮುಖ್ಯವಾಗಿ ಈ ಕಾಯ್ದೆಯು ಈ ಕೆಳಗಿನ ಕೆಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ.

೧. ಅನುಸೂಚನೆ ೨. ನೋಂದಾವಣೆ ೩. ಬುಡಕಟ್ಟುಗಳ ವಲಸೆ, ಚಲನೆಗಳ ಮೇಲಿನ ನಿರ್ಬಂಧಗಳು ೪. ಅಪರಾಧಿ ಬುಡಕಟ್ಟುಗಳಿಗಾಗಿ ನಿರ್ಮಿಸಿದ ಶಾಲೆಗಳು ಮತ್ತು ವಸಾಹತುಗಳು ೫. ಶಿಕ್ಷೆ (ಅದೇ. ಪು.೯)

೧೯೨೮ರ ಕಾಯ್ದೆಯಲ್ಲಿದ್ದ ಸೌಲಭ್ಯಗಳು

. ನೊಂದಣಿ: ಪ್ರತಿಯೊಬ್ಬ ಅಪರಾಧಿಗಳು ಮತ್ತು ಕಾರ್ಯರೂಪಕ್ಕೆ ಬರಬಹುದಾದ ಅಪರಾಧಿಗಳು ಎಂದು ಹಣೆಪಟ್ಟಿಯನ್ನು ಹಚ್ಚಿ ವರ್ಗೀಕರಿಸಲಾಗುತ್ತಿತ್ತು. ಆ ಬುಡಕಟ್ಟುಗಳು ಯಾವ ಸ್ವರೂಪದವು ಎಂಬುದನ್ನು ಪೊಲೀಸ್ ಇಲಾಖೆ ಅಥವಾ ಗ್ರಾಮದ ಮುಖ್ಯಸ್ಥರಿಂದ ತಿಳಿದು ನಿರ್ಣಯಿಸಲಾಗುತ್ತಿತ್ತು. ಈ ರೀತಿ ವರ್ಗೀಕರಿಸುವ ಉದ್ದೇಶವು ಆ ಪಂಗಡಗಳನ್ನು ಯಾವ ಸ್ಥಳದಲ್ಲಿರಿಸಬೇಕೆಂಬ ಎಚ್ಚರಿಕೆ ವಹಿಸುವ ಉದ್ದೇಶವನ್ನು ಹೊಂದಿದೆ. ಹೊಸದಾಗಿ ಹುಟ್ಟಿದ ಪ್ರತಿಯೊಂದು ಮಗುವನ್ನು ದಾಖಲೆಗಳಲ್ಲಿ ನೋಂದಾಯಿಸಿಕೊಳ್ಳಲಾಗುತ್ತಿತ್ತು. ಶಿಕ್ಷೆಗೆ ಒಳಪಡಿಸುವಂತಹ ಅಪರಾಧಗಳನ್ನು ಇಂತಹ ನೋಂದಣಿಯಿಂದ ಸುಲಭವಾಗಿ ಪತ್ತೆಹಚ್ಚಬಹುದಾಗಿತ್ತು.

. ನೋಂದಣಿಗೊಂಡ ಪ್ರತಿಯೊಬ್ಬ ಅಪರಾಧಿ ಬುಡಕಟ್ಟಿನ ವ್ಯಕ್ತಿಯನ್ನು ಪೊಲೀಸರು ಅಥವಾ ಗ್ರಾಮಾಧಿಕಾರಿಗಳು ತಮ್ಮ ಕಣ್ಗಾವಲಿನಲ್ಲಿ ಹುಷಾರಾಗಿ ಕಾಯಬಹುದಾಗಿತ್ತು. ಆ ವ್ಯಕ್ತಿಗಳು ತಮ್ಮ ವಾಸಸ್ಥಾನವನ್ನು ಬಿಟ್ಟು ಹೊರತೆರಳಬೇಕಾದ ಸಂದರ್ಭ ಬಂದರೆ ತಾನು ಯಾವ ಉದ್ದೇಶಕ್ಕಾಗಿ ಹೊರಹೋಗಬೇಕಾಗಿದೆ. ಯಾವಾಗ ಮರಳಿ ಬರುತ್ತೇನೆ, ಇತ್ಯಾದಿ ಪ್ರತಿಯೊಂದು ವಿವರವನ್ನು ಹಾಗೂ ತನ್ನ ಹೆಸರು, ವಿಳಾಸ ಎಲ್ಲವನ್ನೂ ಬರೆದುಕೊಟ್ಟು ತೆರಳಬೇಕಾಗಿತ್ತು. ಒಟ್ಟಾರೆ ಆ ವ್ಯಕ್ತಿಯ ಹಿಂದಿನ ಚರಿತ್ರ್ಯಯನ್ನು ಪರಿಗಣಿಸಿ ಆತನ ಕುರಿತು ಯಾವ ರೀತಿಯ ಕಾವಲು ವ್ಯವಸ್ಥೆ ರೂಪಿಸಬಹುದೆಂದು ನಿರ್ಣಯಿಸಲಾಗುತ್ತಿತ್ತು.

. ಪ್ರತ್ಯೇಕಿಸಿಡುವಿಕೆ: ಅಪರಾಧವನ್ನು ಭೇದಿಸಲು ಒಬ್ಬ ವ್ಯಕ್ತಿ ಅಥವಾ ಇಡೀ ಕುಟುಂಬವನ್ನು ಒಳಗು ಮಾಡಲು ನೊಂದಣಿ ಅಥವಾ ವರದಿಗಳು ಆಧಾರವಾಗಿ ಇರುತ್ತಿದ್ದವು. ಅವುಗಳು ಅವರನ್ನು ನಿಯಂತ್ರಿಸಲು ಮತ್ತು ಕಾಯಲು ಸೆಟಲ್‌ಮೆಂಟ್‌ಗಳಲ್ಲಿ ಇರಿಸಬಹುದಾಗಿತ್ತು. ಈ ಸೆಟಲ್‌ಮೆಂಟ್‌ಗಳ ಮೇಲ್ವಿಚಾರಣೆ (Management), ಕ್ರಿಶ್ಚಿಯನ್‌ಮಿಷನರಿಗಳು ನೋಡಿಕೊಳ್ಳುತ್ತಿದ್ದವು. ಅವರಿಗೆ ನ್ಯಾಯಾಧೀಶನ ಮತ್ತು ಪೊಲೀಸರಿಗಿರುವ ಎಲ್ಲಾ ಅಧಿಕಾರಗಳನ್ನು ನೀಡಲಾಗಿತ್ತು. ಸ್ವಲ್ಪ ವ್ಯವಸಾಯ ಯೋಗ್ಯ ಭೂಮಿಯನ್ನು ವಸಾಹತುಗಳಲ್ಲಿ ನೆಲಸಿದವರಿಗೆ ನೀಡಿ ಅವರಿಂದ ಕೃಷಿ ಚಟುವಟಿಕೆ ಮಾಡಲು ಮತ್ತು ಅದರಿಂದ ಫಲ ತೆಗೆಸುವ ಪ್ರಯತ್ನ ಮಾಡಲಾಗುತ್ತಿತ್ತು.

ಮೇಲ್ವಿಚಾರಕರ ಅಥವಾ ಮ್ಯಾನೇಜಮೆಂಟ್‌ನ ವರದಿಯನ್ನು ಆಧರಿಸಿ ಅಂತಹ ವ್ಯಕ್ತಿ ಮತ್ತು ಕುಟುಂಬಗಳನ್ನು ದಿನಕ್ಕೆ ಮೂರು ಬಾರಿಯಂತೆ, ಅಂದರೆ ಬೆಳಿಗ್ಗೆ ಅಥವಾ ಮ್ಯಾನೇಜಮೆಂಟ್‌ನ ವರದಿಯನ್ನು ಆಧರಿಸಿ ಅಂತಹ ವ್ಯಕ್ತಿ ಮತ್ತು ಕುಟುಂಬಗಳನ್ನು ದಿನಕ್ಕೆ ಮೂರು ಬಾರಿಯಂತೆ, ಅಂದರೆ ಬೆಳಿಗ್ಗೆ ರಾತ್ರಿ ಮಧ್ಯಾಹ್ನ ಅವರನ್ನು ಶೋಧಿಸುವುದು ಮತ್ತು ಅವರನ್ನು ನಿಯಂತ್ರಣದಲ್ಲಿಡುವ ಕಾರ್ಯ ನಡೆಯುತ್ತಿತ್ತು. ಕೆಲವು ವಸಾಹತುಗಳ ಗಡಿಗೆ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಲಾಗಿತ್ತು. ಆಂಧ್ರಪ್ರದೇಶದಲ್ಲಿ ೧೯೦೬ ರಿಂದ ೧೯೧೭ರೊಳಗೆ ಇಂತಹ ಐದು ಸೆಟ್ಲಮೆಂಟ್‌ಗಳನ್ನು ನಿರ್ಮಿಸಲಾಗಿತ್ತು. ಅದೇ ರೀತಿಯಾ ಕರ್ನಾಟಕದಲ್ಲಿ ಸುಮಾರು ಹತ್ತಕ್ಕಿಂತ ಹೆಚ್ಚು ಸೆಟ್ಲಮೆಂಟ್‌ಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಹುಬ್ಬಳ್ಳಿ, ಗದಗ, ಬಳ್ಳಾರಿ, ಬಾಗಲಕೋಟೆ, ಖಾನಾಪುರ, ಬಿಜಾಪುರ, ಬೆಳಗಾಂ, ದಾಂಡೇಲಿ, ಕಮ್ಮಾರಗಣಿ, ಗೋಕಾಕ್‌ಫಾಲ್ಸ್‌ಇತ್ಯಾದಿಗಳಲ್ಲಿ ಇಂತಹ ಸೆಟ್ಲಮೆಂಟ್‌ಗಳನ್ನು ಕಾಣಬಹುದು. ಇತ್ತೀಚೆಗೆ ಕೆಲವು ಕಡೆ ಸೆಟ್ಲಮೆಂಟ್‌ಗಳು ನಾಮಾವಶೇಷಗೊಂಡಿವೆ. ಇನ್ನೂ ಕೆಲವು ಕಡೆ ಈ ಸೆಟಲ್‌ಮೆಂಟ್‌ಗಳ ಅಸ್ತಿತ್ವವನ್ನು ಕಾಣಬಹುದಾಗಿದೆ. ಕಾಯ್ದೆಯು ಸೆಕ್ಷನ್‌೩ ರಂತೆ ಸ್ಥಳೀಯ ಸರ್ಕಾರವು ಯಾವುದೇ ವರ್ಗ, ಬುಡಕಟ್ಟು ಅಥವಾ ವ್ಯಕ್ತಿಯನ್ನು ಅವರು ಜಮೀನುರಹಿತ ಅಪರಾಧಗಳಲ್ಲಿ ತೊಡಗಿದ್ದಾರೆ ಎಂಬ ನಂಬಿಕೆಗೆ ಅರ್ಹವಾದ ವಿಚಾರಗಳು ತಿಳಿದುಬಂದರೆ ಅಂತಹ ಸಮಯದಲ್ಲಿ ಅವರನ್ನು ಅಪರಾಧಿ ಬುಡಕಟ್ಟೆಂದು ಘೋಷಿಸಬಹುದಾಗಿತ್ತು. ಸೆಕ್ಷನ್‌೪ ಮತ್ತು ೫ ರಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ರು ತಮ್ಮ ನ್ಯಾಯಾಧಿಕರಣದೊಳಗೆ ಅಪರಾಧಿ ಬುಡಕಟ್ಟುಗಳ ಪ್ರತಿಯೊಬ್ಬ ವ್ಯಕ್ತಿಯನ್ನು ಕುರಿತು ನಿರಂತರವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿತ್ತು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರು ಬುಡಕಟ್ಟನ್ನು ಸಂಪರ್ಕಿಸಿ ಅವರಿಂದ ವಿಚಾರಿಸಿ ಅವರ ಕುರಿತು ವಿವರಗಳನ್ನು ಪಡೆಯಬೇಕಾಗಿತ್ತು. ಕಾಯ್ದೆಯು ಸೆಕ್ಷನ್‌೧೬ರ ಪ್ರಕಾರ ಉದ್ದಿಮೆಗಳು, ಕಾರ್ಖಾನೆಗಳು, ಕೃಷಿ, ಸೆಟಲ್‌ಮೆಂಟ್‌ಮಕ್ಕಳಿಗಾಗಿ ಪುನರ್ವಸತಿ ಶಾಲೆ ಇತ್ಯಾದಿಗಳನ್ನು ಸ್ಥಾಪಿಸಬಹುದಾಗಿತ್ತು. ಸ್ಥಳೀಯ ಸರ್ಕಾರವು ಬುಡಕಟ್ಟುಗಳ ಸೆಟಲ್‌ಮೆಂಟ್‌ಗೆ ಯಾವುದೇ ಸ್ಥಳವನ್ನು ನಿಗದಿಗೊಳಿಸಬಹುದಾಗಿತ್ತು. ಅಪರಾಧಿ ಬುಡಕಟ್ಟು ಕಾಯ್ದೆಯ ಸೆಕ್ಷನ್‌೨೩ರ ಪ್ರಕಾರ ಆ ವಗ್ಧ ಅಪರಾಧವನ್ನು ಹೊತ್ತು, ದಂಡನೆ ಅನುಭವಿಸುತ್ತಿರುವ ಯಾವುದೇ ವ್ಯಕ್ತಿಯನ್ನು ಐ.ಪಿ.ಸಿ. (ಇಂಡಿಯನ್‌ಪೀನಲ್‌ಕೋಡ್‌) ಪ್ರಕಾರ ಮರಳಿ ಎರಡನೇ ಭಾರಿಯು ಅಪರಾಧವನ್ನು ಮಾಡದಲ್ಲಿ ಅಂತಹ ವ್ಯಕ್ತಿಗೆ ಕನಿಷ್ಟ ಏಳುವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು. ಮತ್ತು ಮೂರನೇ ಭಾರಿ ಅಪರಾಧವೆಸಗಿದರೆ ಮರಣ ದಂಡನೆ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಪೊಲೀಸ್‌ಮತ್ತು ಗ್ರಾಮಾಧಿಕಾರಿಯ ವರದಿಯ ಮೇರೆಗೆ ಅವರಿಗೆ ಕೂಲಿ ಕಾರ್ಮಿಕರಿಗಾಗಿ ಕಾರ್ಯನಿರ್ವಹಿಸುವ ಪಾಸ್‌ಗಳನ್ನು ನೀಡಲಾಗುತ್ತಿತ್ತು.

೧೯೪೮ರ ಮದ್ರಾಸ್ ನಿರ್ಬಂಧಿತ ರೂಢಿಗತ ಅಪರಾಧಿಗಳ ಕಾಯ್ದೆ

೧೯೪೭ರ ಪ್ರಕಾರ, ಅಪರಾಧಿ ಬುಡಕಟ್ಟು ಕಾಯ್ದೆಯ ಅಡಿಯಲ್ಲಿ ಸೆಕ್ಷನ್‌೨೩ರ ಪ್ರಕಾರ ಎರಡನೆ ಬಾರಿ ಅಪರಾಧವೆಸಗಿದವನಿಗೆ ಕನಿಷ್ಟ ಏಳು ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು ಮತ್ತು ಮೂರನೇ ಭಾರಿ ಅಪರಾಧವೆಸಗಿದರೆ ಮರಣದಂಡನೆಗೆ ಗುರಿಪಡಿಸಲಾಗುತ್ತಿತ್ತು. ಈ ಸಂಜೆಯನ್ನು ಮರುವಿನ್ಯಾಸಗೊಳಿಸಿ ಅದನ್ನು ಏಳು ವರ್ಷದ ಸಜೆಗೆ ಬದಲಿಸಲಾಯಿತು. ಅದೂ ನ್ಯಾಯಾಲಯವು ಅಪರಾಧಿ ಬುಡಕಟ್ಟುಗಳು ಆ ಅಪರಾಧವನ್ನು ಮಾಡಿವೆ ಎಂದು ನಿರ್ಣಯಿಸಿದಲ್ಲಿ ಆ ರೀತಿಯ ಶಿಕ್ಷೆಗೆ ಗುರಿಪಡಿಸಬಹುದಾಗಿತ್ತು. ಇದು ಜಾರಿಗೆ ಬಂದದ್ದು ೨೯ ಏಪ್ರಿಲ್‌೧೯೪೮ರಲ್ಲಿ. ಈ ಕಾಯ್ದೆಯ ಗುರಿ ಅಪರಾಧಗಳನ್ನು ನಿಯಂತ್ರಿಸುವುದು ಮತ್ತು ಅಪರಾಧವನ್ನೇ ವೃತ್ತಿಯಾಗಿಸಿಕೊಳ್ಳುವುದನ್ನು ತಪ್ಪಿಸುವುದಾಗಿತ್ತು. ಈ ಕಾಯ್ದೆ ಜಾರಿಗೊಂಡ ತರುಆಯ ಪೋರ್ಬ್‌ಸೈಂಟ್‌ಜಾರ್ಜ್‌ಗೆಜೆಟ್‌ದಿನಾಂಕ ೨೨ ನವೆಂಬರ್‌೧೯೪೯ರಲ್ಲಿ ಪ್ರಕಟಗೊಳಿಸಲಾಯಿತು. ಈ ಕಾಯ್ದೆ ಅರ್ಜಿಯು ಕೇವಲ ಸೀಮಿತ ವಲಯಕ್ಕೆ ಸಂಬಂಧಿಸಿದುದು. ಇದು ಕೇವಲ ಅಪರಾಧಿಗಳಿಗೆ ಮಾತ್ರ ಸೀಮಿತವಾಗಿದೆ. ತೀವ್ರತರವಾದ ಅಪರಾಧಗಳನ್ನು ಮಾಡುವವರಿಗೆ ಮತ್ತು ಅಪರಾಧಿ ಮನೋಭಾವದ ವ್ಯಕ್ತಿಗಳನ್ನು ಮಾತ್ರ ಸೆಟಲ್‌ಮೆಂಟ್‌ನೊಳಗೆ ಇರಿಸಬಹುದೆಂದು ಈ ಕಾಯ್ದೆ ತಿಳಿಸುತ್ತದೆ. ಭಾರತ ಸರ್ಕಾರ ಪ್ರಕಟಿಸಿದ ಅಖಿಲಭಾರತ ರೂಢಿಗತ ಅಪರಾಧಿಗಳ ಬಿಲ್ ಅಪರಾಧವನ್ನು ತಡೆಗಟ್ಟುವಲ್ಲಿ ಈ ಕಾಯ್ದೆ ತುಂಬಾ ಪರಿಣಾಮಕಾರಿಯಾಯಿತು.

ಎನ್‌. ಜಿ. ರಂಗ ಅವರು ಮದ್ರಾಸ್‌ಪ್ರೆಸಿಡೆನ್ಸಿ ಅಪರಾಧಿ ಬುಡಕಟ್ಟು ಕಾಯ್ದೆಗಳನ್ನು ಹಿಂದಿನಂತೆ ಅನುಸರಿಸುವುದರ ಕುರಿತು ತೀವ್ರವಾಗಿ ವಿರೋಧ ಮಾಡಿದರು. ಅವರ ಹೇಳಿಕೆ ಪ್ರಕಾರ “ಅಪರಾಧಿ ಬುಡಕಟ್ಟು ಕಾಯ್ದೆಉಯು ಆ ದಿನಗಳಲ್ಲಿ ರಾಜಕೀಯ ಕಾರ್ಯಕರ್ತರನ್ನು ದಮನ ಮಾಡಲು ಉಪಯೋಗಿಸಲಾಗುತ್ತಿತ್ತಂತೆ” (ಅದೇ ೩೬) ಕೇಂದ್ರ ಸಚಿವ ಸಂಪುಟದಲ್ಲಿ (Central legislative Assembly)ಈ ವಿಚಾರವಾಗಿ ಎರಡು ಬಿಲ್‌ಗಳನ್ನು ಪಾಸು ಮಾಡಲಾಯಿತು. ಅಪರಾಧಿ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ ಮೊದಲನೇ ಬಿಲ್ಲನ್ನು ಎಂ.ಎಲ್‌.ಎ. ವೆಂಕಟಸುಬ್ಬ ರೆಡ್ಡಿಯಾರ್‌ಅವರ ಕೊಡುಗೆಯಾಗಿದೆ. ಎರಡನೇ ಬಿಲ್ಲಿನ ಕೊಡುಗೆ ಎನ್‌. ಜಿ. ರಂಗಾ ಅವರದು. ಅವರು ಸೆಕ್ಷನ್‌೧೦, ೧೧, ೧೨, ೧೩, ೧೭, ೧೮, ೧೯ ಮತ್ತು ೨೦ನ್ನು ಹಿಮ್ಮೆಟ್ಟಿಸುವ ಕಾಯ್ದೆಯನ್ನು ಕುರಿತು ಪ್ರಸ್ತಾಪಿಸಿದರು.

೧೯೫೨ರ ಅಪರಾಧಿ ಬುಡಕಟ್ಟು ಕಾನೂನು ರದ್ದುಪಡಿಸುವ ಕಾಯ್ದೆ (೧೯೫೨ರ xxiv)

ಇದನ್ನು ೧೯೫೨ರ ಅಪರಾಧಿ ಬುಡಕಟ್ಟು ಕಾನೂನು ಕಾಯ್ದೆ ಎಂದು ಕರೆಯುತ್ತಾರೆ. ಜಮ್ಮು ಮತ್ತು ಕಾಶ್ಮೀರಗಳನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಈ ಕಾಯ್ದೆ ಅನ್ವಯಗೊಳ್ಳುತ್ತದೆ. ಅಪರಾಧಿ ಬುಡಕಟ್ಟು ಕಾಯ್ದೆ ಮತ್ತು ಇತರೆ ಕಾನೂನುಗಳಿಗೆ ಸಂಬಂಧಿಸಿದಂತೆ ೩೧ ಆಗಸ್ಟ್‌೧೯೫೨ರಲ್ಲಿ ರದ್ದುಗೊಳಿಸಲಾಯಿತು. ಹೇಗೆಂದರೆ ಕೇಂದ್ರ ಸರ್ಕಾರವು ಅಫಿಷಿಯಲ್‌ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿ ಎಲ್ಲಾ ರಾಜ್ಯಗಳಲ್ಲಿ ಅಪರಾಧಿ ಬುಡಕಟ್ಟು ಕಾಯ್ದೆಗಳನ್ನು ರದ್ದುಗೊಳಿಸಿರುವ ಕುರಿತು ತಿಳಿಸಿತು (ನೋಡಿ ಗೃಹಖಾತೆ, ಮದ್ರಾಸ್‌ಸರ್ಕಾರ: ಆದೇಶ ಸಂ: ೨೯೦೦:೧೯೫೨). ಕೆಲವು ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾಯ್ದೆ ಕಾನೂನುಗಳು ೧೯೫೫ರಲ್ಲಿಯೂ ಇದ್ದು, ಇನ್ನು ಕೆಲವು ಪ್ರದೇಶಗಳಲ್ಲಿ ಈ ಕಾಯ್ದೆಗಳು ೧೯೬೫ರವರೆಗೂ ಮುಂದುವರೆದವು. ಆಂಧ್ರಪ್ರದೇಶದಲ್ಲಿ ರೂಢಿಗತ ಅಪರಾಧಿ ಕಾಯ್ದೆ ೧೯೬೨ರವರೆಗೆ ಇದ್ದಿತು.

೧೮೭೧ರಲ್ಲಿ ವ್ಯವಸ್ಥಿತವಾಗಿ ಅಪರಾಧಿ ಬುಡಕಟ್ಟು ಕಾಯ್ದೆ ಜಾರಿಗೆ ತರಲಾಯಿತು. ಆ ತರುವಾಯ ಈ ಕಾಯ್ದೆಯು ಕಾಲಕ್ರಮದಲ್ಲಿ ಹಲವಾರು ತಿದ್ದುಪಡಿಗಳಿಗೆ ಗುರಿಯಾಯಿತು ಮತ್ತು ಹೊಸ ಕಾಯ್ದೆಗಳು ಜಾರಿಗೆ ಬಂದವು. ಹುಟ್ಟಿನಿಂದಲೇ ಅಪರಾಧಿಗಳೆಂದು ಕಂಪನಿ ಸರ್ಕಾರ ಆ ಬುಡಕಟ್ಟುಗಳನ್ನು ಗುರುತಿಸಿದುದರಿಂದಾಗಿ ಅವುಗಳಿಗೆ ಸ್ವತಂತ್ರ ಭಾರತದಲ್ಲಿಯೂ ಅಷ್ಟು ಸುಲಭವಾಗಿ ಬಿಡುಗಡೆ ದೊರೆಯದೆ ಹೋಯಿತು. ಉದಾಹರಣೆಗೆ ನೋಡಬಹುದಾದರೆ ಸ್ವಾತಂತ್ರ್ಯ ಭಾರತದ ಪೊಲೀಸರಿಗೆ ತರಬೇತಿ ನೀಡುವಾಗ ಪೊಲೀಸರಿಗಾಗಿ ರಚಿಸಿದ ಪಠ್ಯಕ್ರಮದಲ್ಲಿ ಅಪರಾಧಿ ಬುಡಕಟ್ಟುಗಳನ್ನು ಯಾವ ಬಗೆಯಲ್ಲಿ ಸೇರಿಸಲಾಯಿತು ಮತ್ತು ಅವರನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ವಿಷಯಗಳನ್ನು ಪಾಠಗಳಾಗಿ ಸೇರಿಸಲಾಯಿತು. ೧೯೫೨ರಲ್ಲಿ ನೆಹರೂ ಸರ್ಕಾರ ಅಪರಾಧಿ ಬುಡಕಟ್ಟು ಕಾಯ್ದೆಯನ್ನು ರದ್ದುಗೊಳಿಸಿತು. ಮತ್ತು ಸ್ವತಃ ನೆಹರೂ ಅವರೇ ಅಪರಾಧಿ ಬುಡಕಟ್ಟುಗಳನ್ನು ಇರಿಸುವ ವಸಾಹತುವೊಂದರ ಮುಳ್ಳುತಂತಿಯನ್ನು ಸಾಂಕೇತಿಕವಾಗಿ ಕತ್ತರಿಸಿ ಅವರನ್ನು ಸ್ವಾತಂತ್ರ್ಯ ಭಾರತದಲ್ಲಿ ಬಂಧ ಮುಕ್ತರು (Habitual offaida Act) ಅಡಿಯಲ್ಲಿ ಗುರುತಿಸಬೇಕೆಂದು ಪೊಲೀಸರಿಗೆ ಬೋಧಿಸಲಾಗುತ್ತಿತ್ತು. ಈ ಕಾಯ್ದೆಯು ವ್ಯಕ್ತಿ ಅಥವಾ ಸಮುದಾಯವೊಂದನ್ನು ಅಪರಾಧಿ ಎಂದು ಗುರುತಿಸಲೆಂದೇ ರೂಪುಗೊಂಡಿತೆಂಬಂತೆ ತೋರಿರುವುದಾದರೂ, ಬ್ರಿಟಿಷ್‌ನಂತರದ ಸ್ವತಂತ್ರ ಭಾರತದಲ್ಲಿ ವಿಮುಕ್ತ ಬುಡಕಟ್ಟು ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿತು. ಈ ಕಾಯ್ದೆಯು ಅಪರಾಧವನ್ನು ಕಾಯಿಲೆಯೆಂದು, ಅಪರಾಧಗಳನ್ನು ಮಾಡುವವರು ಮಾನಸಿಕ ರೋಗಿಗಳಾಗಿರುತ್ತಾರೆಂದೂ ಪರಿಗಣಿಸಿತು. (ಅಪರ್ಣರಾವ್‌, ಮೈಕೆಲ್‌ಕಸ್ಮಿರ್‌:೨೩೫). ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಾದ ಮೇಲೆಯೂ ಈ ಸಮುದಾಯಗಳನ್ನು ಇಂದಿಗೂ ಸಾಮಾನ್ಯ ಜನ ಮತ್ತು ಪೊಲೀಸ್‌ಇಲಾಖೆ ಗುಮಾನಿಯಿಂದಲೇ ನೋಡುವುದನ್ನು ಕಾಣಬಹುದು. ಇಂದಿಗೂ ನಗರವೊಂದರಲ್ಲಿ ದರೋಡೆ, ಕಳ್ಳತನಗಳಾದರೆ ಪೊಲೀಸರು ವಿಚಾರಣೆಗೆ ಬರುವುದು ಮೊದಲಿಗೆ ಈ ಸಮುದಾಯಗಳ ಬಳಿಗೆ. ಈ ಸಮುದಾಯದವರು ಇಂತಹ ಅಪರಾಧ ಮಾಡಿದ್ದಾರೋ ಇಲ್ಲವೋ ಎಂಬ ಪೂರ್ವಪರ ವಿಚಾರವನ್ನು ಈ ಇಲಾಖೆ ಮಾಡದೆ ಅವರನ್ನು ತಪ್ಪಿತಸ್ಥರನ್ನಾಗಿಸುವುದು ತುಂಬಾ ಅಪಮಾನಕರ ವಿಚಾರವಾಗಿದೆ.

ಅಪರಾಧಿ ಬುಡಕಟ್ಟು ಕಾಯ್ದೆಯಡಿ ಬರುವ ಸಮುದಾಯಗಳನ್ನು ಜಿ. ಎನ್‌. ದೇವಿಯವರು ಹೀಗೆ ಪಟ್ಟಿ ಮಾಡುತ್ತಾರೆ.

೧. ಅಲೆಮಾರಿ ಗಾಯಕ ಪರಂಪರೆಯ ಸಮುದಾಯಗಳ

೨. ಫಕೀರರು

೩. ಚಿಕ್ಕ ವರ್ತಕರು

೪. ಪ್ರದರ್ಶನ ಕಲೆಗಳನ್ನು ಅವಲಂಬಿಸಿದ ಸಮುದಾಯಗಳು

೫. ಸಾಮಾನು ಸರಂಜಾಮುನುಗಳನ್ನು ಸಾಗಿಸುವ ಕಾಯಕ ಮಾಡುವ ಸಮುದಾಯಗಳನ್ನು ಈ ಅಪರಾಧಿ ಬುಡಕಟ್ಟು ಕಾಯ್ದೆಯಡಿ ತರಲಾಯಿತು.

ಗ್ರಂಥಋಣ

೧. ಪ್ರಭಾಕರ ಎ. ಎಸ್‌., ಕರ್ನಾಟಕದ ಡೊಂಬರು, ೨೦೦೭, ಅಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨. ಮಹಾಶ್ವೇತಾ ದೇವಿ (ಅನು: ಸುಜ್ಞಾನಮೂರ್ತಿ ಬಿ)ಯಾರದೀ ಕಾಡು: ಸಿವಿಜಿ ಪಬ್ಲಿಕೇಶನ್ಸ್‌: ಬೆಂಗಳೂರು : ೨೦೦೩.

೩. ವೆಂಕಟರಂಗೋಕಟ್ಟಿ: ಮುಂಬೈ ಇಲಾಖೆಗೆ ಸೇರಿದ ಕರ್ನಾಟಕ ಭಾಗದ್ದು: ಮುಂಬೈ ಗೌರ್ನಮೆಂಟ್‌ಸೆಂಟ್ರಲ್‌ಬುಕ್‌ಡಿಪೊ: ೧೮೯೩

೪. Hardiman, david, The coming of the Devi-Adivasi Assertion in western India, OUP, New Delhi : 1987.

೫. Malli Gandhi; De notified Tribes: Demensions of change: Kanishka publishers: New Delhi: 2008.

೬. CTA Enquiry committee report of 1911, Madras 1912, pp. 1-2,

೭. Home judicial department, G.O. No. 101, dated 15th January 1917 Goernment central press, Andhra Pradesh : 1917.

೮. Semhadri Y. C. : Ex-Criminal Tribes of India : National Publishing House, New Delhi, 1990.

೯. Criminal Classes in the Bombay Presidency : Government central press, Bombay: 1908.

೧೦. Home judicial department, special G. O. No. 2900, Government of Madras : 1952

೧೧. Anantha krisna Iyer K: The Mysore Tribes and Castes: Vol. III: Mittal publication, New Delhi: 1998.

೧೨. ಚಂದ್ರಶೇಖರ ಕಂಬಾರ : ಜಾನಪದ ವಿಶ್ವಕೋಶ: ಕನ್ನಡ ಸಾಹಿತ್ಯ ಪರಿಷತ್ತು: ಬೆಂಗಳೂರು: ೧೯೮೫

೧೩. Aparna rao, Michael J casimir: Movements of peoples, Nomads in India, Sociology and sociological anthropology, Mumbai : 2003.

೧೪. Blacksmith K R : Nomadic Tribes and social work in India: Cambridge University press, Cambridge: 1978.

೧೫. Devy G N : Budhan: DNT Rights Group, Vadodara: April-June, 2001.

೧೬. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾತಿ/ಸಿಂಧುತ್ವ ಪ್ರಮಾಣಪತ್ರ ನೀಡುವ ಕುರಿತು ಹೊರಡಿಸಲಾದ ಪ್ರಮುಖ ಆದೇಶಗಳ ಸಂಗ್ರಹ-೧೯೫೦ ರಿಂದ ೨೦೦೯ : ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು.

೧೭. ಮಹಾರಾಷ್ಟ್ರದ ವಿಮುಕ್ತ ಬುಡಕಟ್ಟು ಜಾತಿಗಳ ಪಟ್ಟಿ, (ಸರ್ಕಾರದ ಅನುಸೂಚಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ) ಸಂ.ಸಿ.ಬಿ.ಸಿ, ೧೯೬೧, ದಿನಾಂಕ ೨೧, ನವೆಂಬರ್‌೧೯೬೧.

೧೮. ಮೇತ್ರಿ ಕೆ. ಎಂ, ಚಲುವರಾಜು (ಸಂ): ಬುಡಕಟ್ಟು ಅಧ್ಯಯನ, ಪ್ರಸಾರಾಂಗ, ಕ.ವಿ.ವಿ., ಹಂಪಿ, ೨೦೦೭.

೧೯. ಮೇತ್ರಿ ಕೆ ಎಂ (ಸಂ), ಮಲ್ಲಿಕಾರ್ಜುನ ಬಿ ಮಾನ್ಪಡೆ, (ಲೇ), ಕೊರಮ: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು: ೨೦೦೮.