ಭೌಗೋಳಿಕತೆ

ಅಲೆಮಾರಿ ಡುಂಗ್ರಿ ಗರಾಸಿಯ ಸಮುದಾಯವು ಬೇಟೆಯನ್ನೇ ಜೀವನೋಪಾಯವಾಗಿಸಿಕೊಂಡವರು.ಆ ಕಾರಣಕ್ಕಾಗಿಯೇ ನಾಯಿಗಳನ್ನು ಪಳಗಿಸಿ ಸಾಕುವ ಕಲೆಯು ಇವರಿಗೆ ಪ್ರಾಪ್ತವಾಯಿತು. ಇಂದಿಗೂ ನಾಯಿಗಳು ಇವರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿಯೇ ಉಳಿದಿವೆ. ಇವರ ಗುಡಾರಗಳ ಮುಂಭಾಗದ ಎಡಮಗ್ಗಲಿಗೆ ನಾಯಿಗಳನ್ನು ಕಟ್ಟಲೆಂದೇ ಗೂಟಗಳನ್ನು ಹೂಳುವುದುಂಟು.

ಡುಂಗ್ರಿ ಗರಾಸಿಯ ಸಮುದಾಯವು ಭಾರತದ ಮೂಲನಿವಾಸಿಗಳಲ್ಲೊಂದು. ದಕ್ಷಿಣ ಭಾರತದ ಕೇರಳ ಹಾಗೂ ತಮಿಳುನಾಡು ರಾಜ್ಯಗಳನ್ನು ಹೊರತುಪಡಿಸಿ ಭಾರತದ ಬಹುತೇಕ ರಾಜ್ಯಗಳಲ್ಲಿ ಈ ಸಮುದಾಯವು ನೆಲೆ ನಿಂತಿರುವುದನ್ನು ಕಾಣಬಹುದು. ರಾಜಸ್ತಾನದಿಂದ ಗುಜರಾತಿಗೆ ವಲಸೆ ಬಂದು ತರುವಾಯ ಬೇರೆ ಬೇರೆ ಪ್ರದೇಶಗಳಿಗೆ ಇವರು ವಲಸೆ ಹೋಗಿರಬೇಕು.

ಅಂಡಮಾನ್‌ಹಾಗೂ ನಿಕೋಬಾರ್‌ದ್ವೀಪಗಳಲ್ಲೂ ಈ ಸಮುದಾಯ ನೆಲೆಸಿರುವುದು ತಿಳಿದುಬರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಇವರನ್ನು ಗುರುತಿಸಲಾಗುತ್ತದೆ. ಭಿಲ್‌, ಭಿಲ್‌ಗರಾಸಿಯ, ಢೋಲಿ ಭಿಲ್‌, ಡುಂಗ್ರಿ ಭಿಲ್‌, ಡುಂಗ್ರಿ ಗರಾಸಿಯ, ಮೇವಾಸಿ ಭಿಲ್‌, ರಾವಲ್‌ಭಿಲ್‌, ತಡ್ವಿ ಭಿಲ್‌ಭಗಾಲಿಯ, ಭೀಲಾಲ, ಪಾವರಾ, ವಾಸವಾ, ವಾಸವೇ ಹೀಗೆ ನಾನಾ ಹೆಸರುಗಳಿಂದ ಇವರನ್ನು ಗುರುತಿಸಲಾಗುತ್ತದೆ.

ಜನಸಂಖ್ಯೆ : ಭಾರತದ ರಾಜಸ್ತಾನ ಮೂಲದ ಡುಂಗ್ರಿ ಗರಾಸಿಯ ಸಮುದಾಯವು ದೇಶದ ವಿವಿಧ ಭಾಗಗಳಲ್ಲಿ ವಲಸೆ ಹೋಗಿ ನೆಲೆಸಿರುವುದು ಕಂಡುಬರುತ್ತದೆ. ಗುಜರಾತಿನ ಅಹಮದಾಬಾದ್‌, ಬಾಣಸಕಂಠ, ಮಹಸಾನ, ಅಜ್ಮೀರ್‌, ಮೆರ್‌ವಾರ ಹಾಗೂ ಮಧ್ಯ ಪ್ರದೇಶದ ಧಾರ್‌, ಪೂರ್ವ ರತ್ಲಮ್‌, ಶಹಜಾನರ್‌, ಪಶ್ಚಿಮ ನಿಮಾರ್‌, ದೇವಾಸ್‌, ಗುನಾ, ರಾಜ್‌ಘರ್‌, ಸಹೋರ್‌, ನಿಮಾರ್‌, ಇಂದೋರ್‌, ಝಭೂವಾ, ಸಬರ್‌ಕಂಠ್‌, ಸೂರತ್‌, ಮಣ್‌ಸೂರ್‌, ಉಜೈನ್‌, ಮಹಾರಾಷ್ಟ್ರದ ಅಹಮದ್‌ನಗರ, ಔರಂಗಾಬಾದ್‌, ಧುಲೇ, ಜಲ್‌ಗಾಂವ್‌, ನಾಸಿಕ್‌ಮುಂತಾದ ಕಡೆ ಹಾಗೂ ರಾಜಸ್ತಾನದ ಅಜ್ಮೀರ್‌ಬನ್ಸ್‌ವಾರ, ಚಿತ್ತೋರ್‌ಘರ್‌, ಡುಂಗರ್‌ಪುರ್‌, ಕೋಟ್‌, ಪಾಲಿ, ಸಿರೋಹಿ, ಉದಯಪುರ್‌ಹಾಗೂ ಅಂಡಮಾನ್‌, ನಿಕೋಬಾರ್‌ದ್ವೀಪಗಳು ಮಧ್ಯ ಭಾರತ ಹಾಗೂ ಪಶ್ಚಿಮ ಭಾರತದ ಹಲವಾರು ಪ್ರದೇಶಗಳಲ್ಲಿ ಹಾಗೇ ಆಂಧ್ರ ಪ್ರದೇಶದ ಗಡಿ ಭಾಗಗಳಲ್ಲಿ ಕರ್ನಾಟಕದ ಹೈದರಾಬಾದ್‌ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಪ್ರದೇಶಗಳಲ್ಲಿ ನೆಲೆಸಿರುವುದನ್ನು ಕಾಣಬಹುದಾಗಿದೆ.

ರಾಜಸ್ತಾನದ ಗರಾಸಿಯ ಬುಡಕಟ್ಟಿನ ಜನಸಂಖ್ಯೆ (೨೦೦೧)

/ ಗ್ರಾ/ ಒಟ್ಟು ಗಂಡು ಹೆಣ್ಣು
ಒಟ್ಟು ,೩೨,೫೪೫ ,೧೭,೯೭೫ ,೧೪,೫೭೦
ಗ್ರಾಮೀಣ ,೨೯,೭೭೫ ,೧೬,೨೯೯ ,೧೩,೪೭೬
ನಗರ ,೭೭೦ ,೬೭೬ ,೦೯೪

ಗರಾಸಿಯ ಬುಡಕಟ್ಟನ್ನು ಭಿಲ್ಲರಿಂದ ಪ್ರತ್ಯೇಕವಾಗಿ ರಾಜಸ್ತಾನದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಇದರಲ್ಲಿ ರಜಪೂತ ಗರಾಸಿಯರನ್ನು ಹೊರಗಿಡಲಾಗಿದೆ. ೨೦೦೧ ಜನಗಣತಿಯ ಪ್ರಕಾರ ಅಲ್ಲಿಯ ಇವರ ಜನಸಂಖ್ಯೆ ೨,೩೨,೫೪೫. ಅವರಲ್ಲಿ ಬಹುಸಂಖ್ಯಾತರು ಗ್ರಾಮೀಣ ಮತ್ತು ಗುಡ್ಡಗಾಡುಗಳಲ್ಲಿ ವಾಸವಾಗಿರುವರು. ನಗರಗಳಲ್ಲಿ ವಾಸವಾದವರ ಪ್ರಮಾಣ ಕೇವಲ ೧.೧೯ರಷ್ಟು ಮಾತ್ರ.

ಕರ್ನಾಟಕದಲ್ಲಿ ಡುಂಗ್ರಿ ಗರಾಸಿಯ ಭೌಗೋಳಿಕ ನೆಲೆಗಳು

ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿಯೇ ಕಾಡಿಗೆ ಸಂಬಂಧಿಸಿದ ಕಾನೂನುಗಳು ಸೃಷ್ಟಿಗೊಂಡವು ಭಾರತ ಸ್ವತಂತ್ರವಾದ ತರುವಾಯ ಈ ಕಾನೂನುಗಳು ಇನ್ನೂ ಬಿಗಿಯಾಗಿ ಹೆಣೆಯಲ್ಪಟ್ಟವು. ಕಾಡಿನಲ್ಲಿ ವಾಸಿಸುವ ಆದಿವಾಸಿ ಅಲೆಮಾರಿಗಳ ಬದುಕು ಅತಂತ್ರ ಸ್ಥಿತಿಗೆ ನೂಕಲ್ಪಟ್ಟಿತು. ಅಂತಹ ಅತಂತ್ರ ಸ್ಥಿತಿಯಲ್ಲಿ ಕಾಡಿನಿಂದ ನಾಡಿಗೆ ವಲಸೆ ಬಂದವರು ಡುಂಗ್ರಿ ಗರಾಸಿಯ ಸಮುದಾಯದವರು. ಅಲೆಮಾರಿಗಳಾದ ಇವರು ಇತ್ತೀಚೆಗಷ್ಟೆ ನೆಲೆ ನಿಲ್ಲತೊಡಗಿರುವರು. ಇಂದಿಗೂ ಇವರು ಅಲೆಮಾರಿ ಬದುಕನ್ನು ಪೂರ್ಣವಾಗಿ ತೊರೆದವರಲ್ಲ. ತಾವು ನೆಲೆ ನಿಂತ ಕಡೆಯಿಂದಲೇ ಬೇರೆ ಬೇರೆ ಕಡೆಗೆ ವಲಸೆ ಹೋಗಿ ಹೊಟ್ಟೆ ಹೊರೆದು ತರುವಾಯ ತಮ್ಮ ನೆಲೆಗೆ ಮರಳಿ ಬರುವರು.

೧೯೯೧ರ ಜನಗಣತಿಯಲ್ಲಿ ಕರ್ನಾಟಕ ರಾಜ್ಯದ ೨೦ ಜಿಲ್ಲೆಗಳಲ್ಲಿ ಭಿಲ್‌ಮತ್ತು ಇದರ ಪರ್ಯಾಯ ಪದಗಳಾದ ಭಿಲ್‌ಗರಾಸಿಯ, ಢೋಲಿ ಭಿಲ್‌, ಡುಂಗ್ರಿ ಭಿಲ್‌, ಡುಂಗ್ರಿ ಗರಾಸಿಯ, ಮೇವಾಸಿ ಭಿಲ್‌, ರಾವಲ್‌ಭಿಲ್‌, ತಡ್ವಿ ಭಿಲ್‌, ಭಗಾಲಿಯ, ಬಿಲಾಲ, ಪಾವರಾ, ವಾಸವಾ, ವಾಸವೆ ಸೇರಿರುವವು. ಇವರ ಒಟ್ಟು ಜನಸಂಖ್ಯೆ ೨೨೬೧. ಆದರೆ, ೨೦೦೧ರ ಜನಗಣತಿಯಲ್ಲಿ ಇವರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ರಾಜ್ಯದ ೨೪ ಜಿಲ್ಲೆಗಳಲ್ಲಿ ಕೇವಲ ೧,೬೩೩ ಜನ ಈ ಜನಗಣತಿಯಲ್ಲಿ ದಾಖಲಾಗಿದ್ದಾರೆ. ಹೀಗಾಗಲು ಮುಖ್ಯ ಕಾರಣ ಇವರ ಅಲೆಮಾರಿತನ ಹಾಗೂ ವಿವಿಧ ಹೆಸರುಗಳಿಂದ ಗುರಿತಿಸಿಕೊಳ್ಳುವುದೇ ಆಗಿದೆ.

ಕರ್ನಾಟಕದಲ್ಲಿಯ ಡುಂಗ್ರಿ ಗರಾಸಿಯರ ಜನಸಂಖ್ಯೆ ಮತ್ತು ಲಿಂಗ ಪ್ರಮಾಣ : ಕನ್ನಡ ಪುಸ್ತಕ ಪ್ರಾಧಿಕಾರದ ೨೦೦೭ರ ಸಮೀಕ್ಷೆಯ ಪ್ರಕಾರ ಕರ್ನಾಟಕದ ಒಟ್ಟು ೧೯ ಜಿಲ್ಲೆಗಳಲ್ಲಿ ಈ ಸಮುದಾಯವು ಕಂಡುಬರುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಾರವಾರ, ಕೋಲಾರ, ಕೊಡಗು, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಇವರು ಕಾಣಸಿಗುವರು. ಕರ್ನಾಟಕದಲ್ಲಿ ಡುಂಗ್ರಿ ಗರಾಸಿಯ ಸಮುದಾಯದಲ್ಲಿ ಒಟ್ಟು ೧೫೪೯ ಕುಟುಂಬಗಳು ನೆಲೆಸಿದ್ದು ಒಟ್ಟು ೬೨೩೪ ಜನರಿರುವುದು ಕಂಡುಬರುತ್ತದೆ. ಇದರಲ್ಲಿ ಪುರುಷರು ೩೧೩೨ರಷ್ಟಿದ್ದರೆ ಮಹಿಳೆಯರು ೩೧೦೨ರಷ್ಟಿದ್ದಾರೆ. ಅದರಲ್ಲಿಯೂ ಡುಂಗ್ರಿ ಗರಾಸಿಯರು ಹಳ್ಳಿಗಳಲ್ಲಿ ಪಟ್ಟಣಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಾಸಿಸುವುದು ಕಂಡುಬರುತ್ತದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕಾರವಾರ, ಮಂಡ್ಯ, ಮೈಸೂರು, ಮಂಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಡುಂಗ್ರಿ ಗರಾಸಿಯ ಸಮುದಾಯದವರು ಕಂಡುಬರುತ್ತಾರೆ. ಇದರಲ್ಲಿ ಶೇಕಡ ೩೭.೬೭ರಷ್ಟು ಪುರುಷರು ಮತ್ತು ೩೬.೫೨ ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವುದು ಸಮೀಕ್ಷೆಯಿಂದ ತಿಳಿದುಬರುತ್ತದೆ. ನಗರ ಪ್ರದೇಶದಲ್ಲಿ ವಾಸಿಸುವ ಪುರುಷರು ಶೇ. ೬೨.೩೩ ರಷ್ಟಿದ್ದರೆ ಮಹಿಳೆಯರು ೬೩.೪೮ರಷ್ಟು ಇರುವರು. ಶೇಕಡ ಮುಕ್ಕಾಲು ಭಾಗ ಜನ ನಗರ ಪ್ರದೇಶದಲ್ಲಿಯೇ ವಾಸಿಸುವುದು ಕಂಡುಬರುವುದು. ಕರ್ನಾಟಕದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಇವರ ಜನಸಂಖ್ಯೆಯು ಅತ್ಯಲ್ಪವೆಂದೇ ಹೇಳಬಹುದು. ಕರ್ನಾಟಕದ ೧೨,೦೬೬೮ ಚದರ ಕಿ. ಮೀ. ವ್ಯಾಪ್ತಿಯಲ್ಲಿ ಇವರು ವಾಸಿಸುವರು.

ಕರ್ನಾಟಕದ ಒಟ್ಟು ಜನಸಾಂದ್ರತೆಗೆ ಹೋಲಿಸಿದರೆ ಇವರ ಜನಸಾಂದ್ರತೆ ಕೇವಲ ೦.೦೭೩೫ ರಷ್ಟು ಮಾತ್ರ ಇರುವುದು. ಇವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯು ಕಡಿಮೆ ಇರುವುದು. ಸರಾಸರಿ ೧೦೦೦ ಪುರುಷರಿಗೆ ೯೯೦ ಮಹಿಳೆಯರಿರುವುದಾಗಿ ಸಮೀಕ್ಷೆಯಿಂದ ತಿಳಿದುಬರುತ್ತದೆ. ಅಂದರೆ ಪುರುಷ ಹಾಗೂ ಮಹಿಳೆಯರ ಮಧ್ಯದ ಅಂತರವು ಸರಾಸರಿ ಏಳರಷ್ಟಿದೆ.

ಕರ್ನಾಟಕ ಡುಂಗ್ರಿ ಗರಾಸಿಯರ ಜಿಲ್ಲಾವಾರು ಜನಸಂಖ್ಯೆ ಮತ್ತು ಲಿಂಗ ಪ್ರಮಾಣ (೨೦೦೭)

ಕ್ರ.
ಸಂ.
ಜಿಲ್ಲೆ ಕುಟುಂಬ ಪುರುಷ ಮಹಿಳೆ ಒಟ್ಟು ಲಿಂಗ ಪ್ರಮಾಣ
೧. ಬೆಂಗಳೂರು ೯೨ ೧೮೬ ೨೧೦ ೩೯೬ ೧೧೨೯
೨. ಬೆಳಗಾವಿ ೩೧೨ ೬೫೨ ೫೯೨ ೧೨೪೪ ೯೦೭
೩. ಬಳ್ಳಾರಿ ೧೫೯ ೩೧೮ ೩೦೮ ೬೨೬ ೯೬೮
೪. ಚಾಮರಾಜನಗರ ೨೫ ೬೧ ೪೮ ೧೦೯ ೭೮೬
೫. ಚಿಕ್ಕಮಗಳೂರು ೩೬ ೬೨ ೫೬ ೧೧೮ ೯೦೩
೬. ಚಿತ್ರದುರ್ಗ ೮೩ ೧೫೩ ೧೪೬ ೨೯೯ ೯೫೪
೭. ದಾವಣಗೆರೆ ೧೪೬ ೩೦೬ ೩೧೧ ೬೧೭ ೧೦೧೬
೮. ಧಾರವಾಡ ೨೨೩ ೫೧೫ ೫೪೭ ೧೦೬೨ ೧೦೬೨
೯. ಗದಗ ೧೧ ೨೬ ೧೮ ೪೪ ೬೯೨
೧೦. ಹಾಸನ ೪೬ ೯೬ ೮೮ ೧೪೮ ೯೧೬
೧೧. ಹಾವೇರಿ ೩೧ ೭೩ ೭೦ ೧೪೩ ೯೫೮
೧೨. ಉತ್ತರ ಕನ್ನಡ ೧೮೩ ೩೧೮ ೩೩೬ ೬೫೪ ೧೦೫೬
೧೩. ಮಂಡ್ಯ ೨೨ ೪೫ ೪೧ ೮೬ ೯೧೧
೧೪. ದಕ್ಷಿಣ ಕನ್ನಡ ೧೮ ೨೭ ೫೦೦
೧೫. ಮೈಸೂರು ೯೯ ೧೭೫ ೧೭೫ ೩೫೦ ೧೦೦೦
೧೬. ಶಿವಮೊಗ್ಗ ೨೧ ೩೨ ೩೩ ೬೫ ೧೦೩೧
೧೭. ತುಮಕೂರು ೩೬ ೬೮ ೮೨ ೧೫೦ ೧೨೦೫
೧೮. ಉಡುಪಿ ೧೭ ೨೭ ೩೧ ೫೮ ೧೧೪೮
೧೯. ಕೊಡಗು ೧೦೦೦
  ಒಟ್ಟು ೧೫೪೯ ೩೧೩೨ ೩೧೦೨ ೬೨೩೪ ೯೯೦

ಕರ್ನಾಟಕ ರಾಜ್ಯದಲ್ಲಿ ಡುಂಗ್ರಿ ಗರಾಸಿಯರ ೧೫೪೯ ಕುಟುಂಬಗಳಿಗೆ ೩೧೩೨ ಪುರುಷರು ೩೧೦೨ರಷ್ಟು ಮಹಿಳೆಯರಿರುವುದು ಕಂಡುಬರುತ್ತದೆ. ಇದರಲ್ಲಿ ಬಳ್ಳಾರಿ ಜಿಲ್ಲೆ ಹೊರತುಪಡಿಸಿದ ಗೂಸಂಗಿ ಸಮುದಾಯವನ್ನು ಬಿಟ್ಟು ಗುಣಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಗೋಸಂಗಿ ಹೆಸರಿನವರು ಡುಂಗ್ರಿ ಗರಾಸಿಯರೊಂದಿಗೆ ರಕ್ತ ಸಂಬಂಧ ಹಂಚಿಕೊಳ್ಳುವುದರಿಂದ ಅಲ್ಲಿಯವರನ್ನು ಇಲ್ಲಿಯ ಸಮೀಕ್ಷೆಗೆ ಒಳಪಡಿಸಲಾಗಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಜನಸಂಖ್ಯೆ ವಿವರ

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಒಟ್ಟು ಕುಟುಂಬಗಳು ಶೇಕಡ ೩೭ರಷ್ಟು ಇದ್ದು ಇದರಲ್ಲಿ ಪುರುಷರು ಶೇ. ೩೭.೬೭ ಹಾಗೂ ಮಹಿಳೆಯರು ಶೇ. ೩೬.೫೨ ವಾಸಿಸುತ್ತಿದ್ದು ಗ್ರಾಮೀಣ ಪ್ರದೇಶದ ಡುಂಗ್ರಿ ಗರಾಸಿಯ ಬುಡಕಟ್ಟಿನ ಒಟ್ಟು ಜನಸಂಖ್ಯೆ ಶೇ. ೩೭ರಷ್ಟಿದೆ. ಒಟ್ಟು ೧೫ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಇವರು ನೆಲೆಸಿರುವುದು ಕಂಡುಬರುತ್ತದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಶೇಕಡ ೬೩ರಷ್ಟು ಜನ ಕಾಣಸಿಗುವುದು ಪ್ರಸ್ತುತ ಸಮೀಕ್ಷೆಯಿಂದ ತಿಳಿದುಬರುವುದು.

ವಲಸೆ

ಡುಂಗ್ರಿ ಗರಾಸಿಯ ಸಮುದಾಯದವರು ಕರ್ನಾಟಕದಲ್ಲಿ ಹಲವಾರು ಜಿಲ್ಲೆಗಳಲ್ಲಿ ನೆಲೆನಿಂತರೂ ತಮ್ಮ ತಮ್ಮ ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಗಂಧದ ಎಣ್ಣೆ ವ್ಯಾಪಾರ, ಗಿಡಮೂಲಿಕೆಗಳ ವ್ಯಾಪಾರ, ಪ್ಲಾಸ್ಟಿಕ್‌ಸಾಮಾನುಗಳನ್ನು ಮಾರುವುದು, ಪ್ಲಾಸ್ಟಿಕ್‌ರಿಪೇರಿ, ಚಿಂದಿ ಪ್ಲಾಸ್ಟಿಕ್‌ಆಯುವುದು, ಸ್ಟೌವ್‌ರಿಪೇರಿ, ಸೋಫ ರಿಪೇರಿ, ಮೀನುಗಾರಿಕೆ, ಕಾವಿ ವೇಷವನ್ನು ಧರಿಸಿ ಭಿಕ್ಷಾಟನೆಯನ್ನು ನಡೆಸುವುದು. ಮುಂತಾದ ಕಾರಣಗಳಿಗಾಗಿ ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ರಾಜ್ಯದ ಹೊರತಾಗಿಯೂ ರಾಜ್ಯಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ಟ್ರ ಮುಂತಾದ ಕಡೆಗೆ ವಲಸೆ ಹೋಗುವುದುಂಟು. ಮುಖ್ಯವಾಗಿ ಗಂಧದ ಎಣ್ಣೆ ವ್ಯಾಪಾರದಲ್ಲಿ ಇವರು ತುಂಬಾ ಪ್ರಸಿದ್ಧರು. ಅಂಗಡಿಗಳಲ್ಲಿ ದೊರೆಯುವ ಸುವಾಸನೆ ದ್ರವ್ಯಗಳನ್ನು ಖರೀದಿಸಿ ಅವುಗಳಿಗೆ ಒಳ್ಳೆಣ್ಣೆ, ಎಳ್ಳೆಣ್ಣೆಗಳನ್ನು ಬೆರೆಸಿ ಸಂಸ್ಕರಿಸಿ ಹೆಚ್ಚಿನ ಬೆಲೆಗೆ ಜನ ಸಾಮಾನ್ಯರಿಗೆ ಮಾರುವುದುಂಟು. ಸಾಮಾನ್ಯವಾಗಿ ಇವರು ವಲಸೆ ಹೋದಾಗ ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣ, ಊರ ಹೊರಭಾಗದ ಬಯಲು ಪ್ರದೇಶಗಳನ್ನು ತಮ್ಮ ನೆಲೆಯಾಗಿಸಿಕೊಳ್ಳುತ್ತಾರೆ. ತಾತ್ಕಾಲಿಕವಾಗಿ ಒಂದೆರಡು ದಿನ ಅಲ್ಲಿ ಇದ್ದು ಕೆಲಸ ಪೂರ್ಣಗೊಂಡ ತರುವಾಯ ಬೇರೆ ಊರುಗಳಿಗೆ ವಲಸೆ ಹೋಗುತ್ತಾರೆ.

ಬಂಧುತ್ವ

ಕುಲ, ಬಳಿ, ಬೆಡಗು : ಡುಂಗ್ರಿ ಗರಾಸಿಯ ಬುಡಕಟ್ಟಿನಲ್ಲಿ ಒಟ್ಟು ೧೮ ಬೆಡಗುಗಳನ್ನು ಕಾಣಬಹುದು. ಕರ್ನಾಟಕದಲ್ಲಿ ವಾಸಿಸುವವರಲ್ಲಿ ಒಟ್ಟು ೧೧ ಬೆಡಗುಗಳು ಕಾಣಸಿಗುವವು. ಈ ಬೆಡಗುಗಳನ್ನು ಕುಲಗಳೆಂದು ಕರೆಯುತ್ತಾರೆ. ಈ ಕುಲಗಳು ಡುಂಗ್ರಿ ಗರಾಸಿಯದ ಬಂಧುತ್ವದ ಮೂಲವನ್ನು ಸಂಕೇತಿಸುತ್ತವೆ. ಇಂದಿಗೂ ರಕ್ತ ಸಂಬಂಧಗಳನ್ನು ಬೆಸೆಯುವಾಗ ಕುಲಗಳು ಮಹತ್ವದ ಸ್ಥಾನವನ್ನು ಪಡೆಯುತ್ತವೆ. ಸ್ವಜಾತಿ ಕುಲಗಳಲ್ಲಿ ವೈವಾಹಿಕ ಸಂಬಂಧಗಳು ಏರ್ಪಡುವುದಿಲ್ಲ. ವಿಜಾತಿ ಕುಲಗಳಲ್ಲಿ ಮಾತ್ರ ರಕ್ತಸಂಬಂಧಗಳು ಏರ್ಪಡುತ್ತವೆ. ಡುಂಗ್ರಿ ಗರಾಸಿಯರ ಕುಲಗಳಲ್ಲಿ ಒಂದೊಂದು ಕುಲಕ್ಕೂ ವಿಭಿನ್ನವಾದ ಆಚರಣೆಗಳಿವೆ. ಆಯಾ ಆಚರಣೆಗಳ ಮೇಲೆಯೇ ಇವರು ಇಂಥ ಕುಲಕ್ಕೆ ಸೇರಿದವರೆಂದು ಸುಲಭವಾಗಿ ಗುರುತಿಸಬಹುದು. ಡುಂಗ್ರಿ ಗರಾಸಿಯಲ್ಲಿ ಹಲವಾರು ಕುಲಗಳಿವೆ. ಅವುಗಳನ್ನು ಕರ್ನಾಟಕದ ಇತರೆ ಬುಡಕಟ್ಟುಗಳಲ್ಲಿ ಕಂಡುಬರುವ ಬೆಡಗುಗಳಿಗೆ ಸಮಾನ ಎಂದು ಪರಿಗಣಿಸಬಹುದು. ಈ ಸಮುದಾಯದಲ್ಲಿ ಒಂದು ಹೇಳಿಕೆ ಇದೆ. ಅದೇನೆಂದರೆ “ಅಠ್ರಾ ಪಗಡೀರೀ ಜಾತ್‌ಅಪಾರಿ” ಅಂದರೆ ಹದಿನೆಂಟು ಕುಲಗಳನ್ನು ತಮ್ಮ ಬುಡಕಟ್ಟು ಹೊಂದಿದೆ ಎಂದರ್ಥ. ಅವು ೧. ಮುಣಿಯಾಣಿ ೨. ಖಾಗಳ್‌೩. ಉಮ್ಮಟ್‌೪. ಮಾಂಗ್ಳ್ಯ ೫. ಪಡಿಯಾರ್‌೬. ಜುಂವಾ ೭. ಪಂವಾರ್‌೮. ಘಟಾಡ್‌೯. ಮಕ್ವಾಣ ೧೦. ಗೋಡ್‌೧೧. ವಾಘೇಲಾ ೧೨. ರಾಠೋಡ್‌೧೩. ಕಾಳಮಾ ೧೪. ತೇಂವಾಲಿಯಾ ೧೫. ಬೋಡ್ಕ್ಯಾ ೧೬. ಇಸ್ಳಾವಂತ್‌೧೭. ಚಂವಾಣ್‌೧೮. ಬಾಮ್ಣಿಯಾ ಮಹಾರಾಷ್ಟ್ರ ರಾಜ್ಯದಲ್ಲಿ ಈ ಕೆಳಗಿನಂತೆ ತಮ್ಮನ್ನು ತಾವು ಹೇಳಿಕೊಳ್ಳುವರು.

ಮುಣಿಯಾಣಿ – ಮುಳೇಕರ್‌
ಮಾಗ್ಳ್ಯ – ಮಾಳಿ
ಪಡಿಯಾರ್‌- ಜಾದವ್‌
ಘಟಾಡ್‌- ಗಾಡ್ಗೆ, ಘಾಡ್ಗೆ
ಪಂವಾರ್‌ – ಪವಾರ್‌
ಮಕ್ವಾಣ – ಮಕ್ವಾನೆ
ಜುಂವಾ – ಜುಂವೇಕರ್‌
ಗೋಡ್‌ – ಗೋಡ್ಕೆ
ಚಂವಾಣ್‌ – ಚೌಹಾಣ್‌

ಕರ್ನಾಟಕದಲ್ಲಿ ವಾಸಿಸುವ ಗರಾಸಿಯರಲ್ಲಿ ಮುಖ್ಯವಾಗಿ ಮುಣಿಯಾಣಿ, ಖಾಗಳ್‌, ಉಮ್ಮಟ್‌, ಮಾಂಗ್ಳ್ಯ, ಪಡಿಯಾರ್‌, ಜುಂವಾ, ಪಂವಾರ್‌, ಘಟಾಡ್‌, ಮಕ್ವಾಣ, ಗೋಡ್‌, ವಾಘೇಲಾ ಎನ್ನುವ ಹನ್ನೊಂದು ಕುಲಗಳು ಮಾತ್ರ ಕಂಡುಬರುತ್ತವೆ. ಅವುಗಳ ಕುಟುಂಬವಾರು ವಿವರ ಹೀಗಿದೆ.

ಡುಂಗ್ರಿ ಗರಾಸಿಯರ ಬೆಡಗುವಾರು ಕುಟುಂಬಗಳು (೨೦೦೭)

ಬೆಡಗು ಕುಟುಂಬಗಳು
ಖಾಗಳ್‌ ೪೬೦
ಮುಣಿಯಾಣಿ ೨೪೦
ಪಡಿಯಾರ್‌ ೨೩೩
ಜುಂವಾ ೨೦೬
ಮಾಂಗ್ಳ್ಯ ೨೦೨
ಪಂವಾರ್‌ ೯೪
ಉಮ್ಮಟ ೫೫
ಮಕ್ವಾಣ ೩೯
ಗೋಡ್‌ ೧೧
ಘಟಾಡ್‌
ವಾಘೇಲಾ
ಒಟ್ಟು ಕುಟುಂಬಗಳು ೧೫೪೯

ಡುಂಗ್ರಿ ಗರಾಸಿಯರಲ್ಲಿ ಸ್ವ-ಕುಲಗಳಲ್ಲಿ ವೈವಾಹಿಕ ಸಂಬಂಧಗಳು ಏರ್ಪಡಿಸುವುದಿಲ್ಲ. ಬೆಸ ಕುಲಗಳೊಂದಿಗೆ ವಿವಾಹ ಮಾನ್ಯವಿರುವುದು.

ಡುಂಗ್ರಿ ಗರಾಸಿಯ ಸಮುದಾಯದಲ್ಲಿ ಹೇಗೆ ಕುಲ ಗೋತ್ರಗಳು ಉಂಟಾದವು ಎನ್ನುವ ಕುರಿತು ಕಥೆಯೊಂದು ಪ್ರಚಲಿತದಲ್ಲಿದೆ. ದೇವರಿಂದ ಸೃಷ್ಟಿಗೊಂಡ ದೇವಿಯ ಹಾಗೂ ಜಂಗಿಯ ಎನ್ನುವ ಇಬ್ಬರಿಗೆ ಹನ್ನೆರಡು ಮಕ್ಕಳಿದ್ದರಂತೆ. ಈ ಹನ್ನೆರಡು ಮಕ್ಕಳಿಗೆ ಒಮ್ಮೆ ಭಾಟ್‌ನ ಸಂಪರ್ಕ ದೊರೆಯಿತಂತೆ. ಭಾಟ್‌ನು ಆ ಹನ್ನೆರಡು ಮಕ್ಕಳನ್ನು ಗುರುತಿಸಲು ಒಂದೊಂದಕ್ಕೆ ಒಂದೊಂದು ಹೆಸರನ್ನು ಇರಿಸಿದನಂತೆ. ಮುಂದೆ ಆ ಹನ್ನೆರಡು ಮಕ್ಕಳ ವಂಶಜರೆ ಒಂದೊಂದು ಕುಲಗಳಾಗಿ ಸಮುದಾಯದಲ್ಲಿ ವಿಂಗಡಿತರಾದರಂತೆ ಎನ್ನುವ ಕತೆಯೂ ಇದೆ. ಈ ೧೨ ಕುಲಗಳು ಮುಂದೆ ೧೮ ಕುಲಗಳಾಗಿ ಮಾರ್ಪಟ್ಟವಂತೆ ಎನ್ನುವ ಕಥೆ ಇವರಲ್ಲಿ ಪ್ರಚಲಿತದಲ್ಲಿದೆ.

ಸಮುದಾಯದ ಮೂಲದಲ್ಲಿ ವಿವರಿಸಿದಂತೆ ಸಮುದಾಯಕ್ಕೆ ಗೋಸಾಯಿ/ಗೋಸಾವಿಗಳ ಭೇಟಿಯಾಗಿ ಅವರು ನೀಡಿದ ಕಾವಿ ಬಟ್ಟೆ, ಮಾಲೆ ಹಾಗೂ ಜೋಳಿಗೆಯ ಬಳಸುವಿಕೆಯಿಂದ ಅಡವಿ ಅಂಚಿನಲ್ಲಿದ್ದ ಸಮುದಾಯ ಊರಿನ ಹತ್ತಿರಕ್ಕೆ ಬರಲು ಕಾರಣವಾಯಿತು. ಹಾಗೆಯೇ ಅಲ್ಲಿನ ಅಸ್ಪೃಶ್ಯತೆಯನ್ನು ಕಂಡು ಪೂರ್ತಿ ಸಮುದಾಯವು ಗೋಸಾಯಿಗಳು, ಗೋಸಾವಿಗಳು ಎಂದು ಹೇಳಿಕೊಳ್ಳಲು ಪ್ರಾರಂಭಿಸಿದರು. ಇದರಿಂದ ಸಮುದಾಯದವರಿಗೆ ಗ್ರಾಮಗಳಲ್ಲಿ ಹೆಚ್ಚು ಆದರಾತಿಥ್ಯಗಳು ದೊರೆತವು ಹಾಗೂ ಗ್ರಾಮದಿಂದ ಗ್ರಾಮಕ್ಕೆ ಹೋದಾಗ ಅಲ್ಲಿನ ಜನ ಇವರನ್ನು ಗೋಸಾಮಿಗಳು/ಗೋಸಾವಿಗಳು ಎಂದು ಕರೆಯಲು ಪ್ರಾರಂಭಿಸಿದರು. ಹೀಗೆ ಅನ್ಯ ಸಮುದಾಯಳೊಟ್ಟಿಗಿನ ಒಡನಾಟ ಹೆಚ್ಚಾದಾಗ ಸಮುದಾಯದಲ್ಲಿ ಗಂಧದ ಎಣ್ಣೆ ವ್ಯಾಪಾರ, ಹಲ್ಲು ಕಟ್ಟುವುದು, ನಾಟಿ ಔಷಧಿಗಳ ವ್ಯಾಪಾರ, ಪ್ಲಾಸ್ಟಿಕ್ ವಸ್ತುಗಳ ರಿಪೇರಿ, ಸೋಫಾ ರೀಪೇರಿ, ಸ್ಟೌವ್‌ರಿಪೇರಿ ಹಾಗೂ ಚಿಂದಿ ಪ್ಲಾಸ್ಟಿಕ್‌ಆರಿಸುವುದು ಮತ್ತು ಧಾರ್ಮಿಕ ಭಿಕ್ಷೆ ಬೇಡುವುದು ಇವು ಪ್ರಾರಂಭವಾದವು.

ಆ ನಂತರದ ದಿನಗಳಲ್ಲಿ ಸಮುದಾಯದವರನ್ನು ಕಂಡು ಅನ್ಯ ಸಮುದಾಯದವರು ಹಕ್ಕಿ-ಪಿಕ್ಕಿಗಳು, ನಾಯಿಗೋಸಾಯಿಗಳು, ಗೋಸಾವಿಗಳು, ಗಂಧದೆಣ್ಣೀಯರು, ಗೋಸಂಗಿಗಳು, ಗೋಸಾಯಿಗಳು, ಕಿಳ್ಳೇಕ್ಯಾತರು, ಜೋಗಿಗಳು, ಗರಾಸಿಯ, ಮೀನುಗಾರರೂ, ಭಿಕ್ಷುಕರು ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇವರ ಹೆಸರಿನ ಬಗ್ಗೆ ಇಷ್ಟೆಲ್ಲ ಗೊಂದಲಗಳಿರುವವು. ಹೀಗಾಗಿ ಡುಂಗ್ರಿ ಗರಾಸಿಯ ಬುಡಕಟ್ಟು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಯಲ್ಲಿದ್ದರೂ ಇದುವರೆಗೂ ಸರ್ಕಾರದಿಂದ ಲಭ್ಯವಾಗುವ ಸಂವಿಧಾನಬದ್ಧ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವಾಗಲಿಲ್ಲ.

ಕರ್ನಾಟಕದಲ್ಲಿ ಪ್ರಮುಖವಾಗಿ ಗೋಸಾಯಿ, ಗೋಸಾವಿ ಹಾಗೂ ಗೋಸಂಗಿಗಳೆಂದು ಕರೆದಿರುವುದು ಮೇಲ್ಕಾಣಿಸಿದ ರೀತ್ಯಾ ಗೋಚರಿಸುತ್ತಿದೆ. ಆದರೆ ಗೋಸಾವಿಗಳಿಗೂ ಡುಂಗ್ರಿ ಗರಾಸಿಯ ಸಮುದಾಯದವರಿಗೂ ವ್ಯತ್ಯಾಸಗಳಿವೆ. ಅವರ ಆಹಾರ, ಉಡುಪು, ಆಚರಣೆ, ಬದುಕುವ ಶೈಲಿ, ಬೆಡಗುಗಳು ಇವು ಯಾವುದೂ ಕೂಡ ಡುಂಗ್ರಿ ಗರಾಸಿಯ ಸಮುದಾಯಕ್ಕೆ ಹೊಂದಾಣಿಕೆ ಇಲ್ಲದಿರುವುದು ಇಲ್ಲಿ ಸ್ಪಷ್ಟವಾಗಿದೆ.

ಥರ್ಸ್ಟನ್‌ಹೇಳುವ ಗೋಸಾಯಿಗಳು ಶಂಕರಾಚಾರ್ಯನ ಅನುಯಾಯಿಗಳಾಗಿದ್ದು ಉತ್ತರ ಭಾರತದ ಪ್ರಮುಖ ವೈದಿಕ ಮಠಗಳ ಜೊತೆ ಸಂಪರ್ಕಗಳನ್ನಿಟ್ಟುಕೊಂಡಿದ್ದಾರೆ. ಇವರು ಒಂದು ಧಾರ್ಮಿಕ ಸಮುದಾಯ. ಬಂಗಾಳದಲ್ಲಿ ಇವರಿಗೆ ಬೈರಾಗಿ ಗುರುಪರಂಪರೆಗೆ ಸೇರಿದವರು ಎಂದಿದೆ.

ಥರ್ಸ್ಟನ್‌ರ ಪ್ರಕಾರ ಗೋಸಾಯಿ, ಗೋಸ್ವಾಮಿ ಎಂಬ ಹೆಸರುಗಳು ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಾಥಪಂಥದ ಅಲೆಮಾರಿ ಸಂತರಿಗೆ ಕರೆಯುವ ಹೆಸರುಗಳಾಗಿವೆ. ಕರ್ನಾಟಕದಲ್ಲಂತೂ ಈ ಬಗೆಯ ನಾಥ ಸಾಧುಗಳ ಹೆಸರಿನಲ್ಲಿ ಕೆರೆಗಳು, ಬೆಟ್ಟಗಳು, ಊರುಗಳಿವೆ. ಹೀಗಾಗಿ ಇದೊಂದು ಧಾರ್ಮಿಕ ಪಂಥವಾಗಿದ್ದು ಎಲ್ಲ ಜಾತಿಯ ಜನರು ಗೋಸಾಯಿಗಳು ಆಗಬಹುದಾದ ಸಾಧ್ಯತೆಗಳಿವೆ. ಹೀಗಾಗಿ ಕರ್ನಾಟಕದಲ್ಲಿ ಗೋಸಾಯಿ ಎನ್ನುವ ಸಮುದಾಯ ಉತ್ತರ ಕರ್ನಾಟಕದಲ್ಲಿ ಗೋಸಾಯಿಗಳೆಂದು ಕರೆದುಕೊಳ್ಳುವ ನಾಥ ಪಂಥದ ಬೈರಾಗಿಗಳನ್ನು ತಮ್ಮ ಗುರು ಪರಂಪರೆಯಿಂದ ಕರೆದುಕೊಳ್ಳುತ್ತದೆ. ಥರ್ಸ್ಟನ್‌ಕರ್ನಾಟಕದಲ್ಲಿ ತನ್ನ ಕ್ಷೇತ್ರಕಾರ್ಯದ ಉದ್ದಕ್ಕೂ ಭೇಟಿಯಾದ ಗೋಸಾಯಿಗಳೇ ಈ ಶೈವ ಬ್ರಾಹ್ಮಣರು.

ಥರ್ಸ್ಟನ್‌ಕೊನೆಯಲ್ಲಿ ಗೋಸಾಯಿಗಳ ಕುರಿತು: “The Gosavi is no castes and generally and devotee may be called as such, whether he lives a life of cebibacy or not; whether he roams about the country collecting alms in houses like the rest of the people, whether he deads an indolent life or employs himself in trade” ಎನ್ನುತ್ತಾರೆ.

ಉತ್ತರ ಭಾರತದಲ್ಲಿ ಗೋಸಾಯಿಗಳು, ಗೋಸಾವಿಗಳು ಎಂದು ಕರೆಯಲ್ಪಡುವ ಸಮುದಾಯವು ಮುಖ್ಯವಾಗಿ ವ್ಯಾಪಾರಿ ಸಮುದಾಯವಾಗಿದ್ದು, ಸಾಮಾಜಿಕ ಸ್ಥಾನಮಾನಗಳಲ್ಲಿ ಉಚ್ಚಸ್ತರದಲ್ಲಿದೆ. ಗೋಸಾವಿಗಳು ಗುರುಪರಂಪರೆಗೆ ನಾಥ ಪಂಥದ ಅನುಯಾಯಿಗಳು. ಗೋಸಾವಿಗಳನ್ನು ಕುರಿತು ಮುಂಬಯಿ ಕರ್ನಾಟಕದ ಇಲಾಖೆಗೆ ಸೇರಿದ ಗೆಜಟಿಯರ್‌ನಲ್ಲಿ ಈ ರೀತಿಯಿದೆ.

ಇವರ ಜನ್ಮಭಾಷೆ ಹಿಂದೂಸ್ತಾನಿ. ಇವರೊಳಗೆ ಗಿರೀ, ಪುರೀ, ಭಾರತಿವನ, ಅರಣ್ಯ, ತೀರ್ಥ, ಆಶ್ರ, ಸಾಗರ, ಪರ್ವತವೆಂಬ ಹತ್ತು ಭೇದಗಳಿರುತ್ತವೆ. ಗೋಸಾವಿಗಳು ಶಿವನ ಭಕ್ತರು, ಭೈರಾಗಿಗಳ ವಿರೋಧಿಗಳು. ಮದ್ಯ ಮಾಂಸ ಮುಟ್ಟುವುದಿಲ್ಲ. ತಂಬಾಕು, ಗಾಂಜ, ಅಪೀಮು ಇವುಗಳ ವ್ಯಸನ ಬಹಳ. ಬ್ರಾಹ್ಮಣರಿಗೆ ಮಾನ ಕೊಡುವರು. ಹೆಣಗಳನ್ನು ಹುಗಿಯುವರು. ಗೋಸಾವಿಗಳಲ್ಲಿ ಕೆಲವರು ಮದುವೆ ಮಾಡಿಕೊಂಡು ಗೃಹಸ್ಥಾಶ್ರಮಗಳಾಗಿ ಮನೆ ಮಾಡಿಕೊಂಡು ಒಕ್ಕಲುತನ ಮುಂತಾದ ಹೊರೆಗಳನ್ನು ಮಾಡುವರು. ಇವರ ಹೆಂಗಸರು ಶಾಟಿಗಳನ್ನಾಡುವರು.

ಆದರೆ ಗೋಸ್ಯಾವಿಗಳಲ್ಲಿ ವಿರಕ್ತರೇ ಬಹಳ. ಅವರು ಜಡೆಯನ್ನು ಉಗುರುಗಳನ್ನು ಬೆಳೆಸುವರು. ಮೈತುಂಬಾ ಭಸ್ಮ ಹಚ್ಚಿಕೊಳ್ಳುವರು. ಲಂಗೋಟಿ ಶಾಟಿಗಳನ್ನು ಧರಿಸುವರು. ಭಿಕ್ಷೆಯಿಂದ ಜೀವಿಸುವರು. ಈ ಗೋಸಾವಿಗಳಿಗೆ ಗಾಂಜ ವ್ಯಸನವಿರುತ್ತದೆ. ಕೆಲವರು ಅಫೀಮು ತಿನ್ನುವರು. ನಿಜವಾಗಿ ವೈರಾಗ್ಯದಿಂದ ವರ್ತಿಸುವ ಗೋಸಾವಿಗಳು ಬಹುಸ್ವಲ್ಪ ಜನರು. ಅವರು ಪಂಚಾಗ್ನಿ, ಊರ್ಧ್ವಬಾಹು, ಏಕಪಾದ ಮುಂತಾದ ತಪಶ್ಚರ್ಯಗಳನ್ನು ಮಾಡುವರು. ಪಂಚಾಗ್ನಿ ಎಂದರೆ ತಲೆಯ ಮೇಲೆ ಸೂರ್ಯ ನಾಲ್ಕು ದಿಕ್ಕುಗಳಲ್ಲಿ ಅಗ್ನಿಜ್ವಾಲೆ. ಈ ಪ್ರಕಾರ ಐದು ತಾಪಗಳನ್ನು ಸಹ ಮಾಡಿಕೊಂಡು ದೇವರ ಧ್ಯಾನ ಮಾಡುವುದು. ಈ ಗೋಸಾವಿಗಳು ಕಾಶಿ, ರಾಮೇಶ್ವರಗಳ ಯಾತ್ರೆಯನ್ನು ಯಾವಾಗಲು ಮಾಡುತ್ತಿರುವರು. ಇವರಿಗೆ ಜಾತಿ ನಿರ್ಬಂಧವಿಲ್ಲ. ಬೇಕಾದವರಲ್ಲಿ ಅನ್ನ ಕೊಳ್ಳುವರು. ಇವರು ಬೇಕಾದ ಜಾತಿಯವರಿಗೆ ಉಪದೇಶ ಮಾಡಿ ಅವರನ್ನು ತಮ್ಮ ಶಿಷ್ಯರನ್ನು ಮಾಡಿಕೊಳ್ಳುವರು. ಹೊಸ ಶಿಷ್ಯರಿಗೆ ಇವರು ಬೋಧಿಸುವ ಕಟ್ಟಳೆಗಳೇನೆಂದರೆ “ಬ್ರಹ್ಮಚರ್ಯದಿಂದ ಭಿಕ್ಷೆಯಿಂದ ಜೀವಿಸುವ ಸಾಧಿಸಿದಷ್ಟು ಅನ್ನದಾನ ಮಾಡು, ತೀರ್ಥಕ್ಷೇತ್ರ ಯಾತ್ರೆಗಳನ್ನು ಮಾಡುತ್ತಿರು ಇತ್ಯಾದಿ”.

ಭಾಷೆಯ ನೆಲೆಗಟ್ಟಿನಲ್ಲಿ ಹಕ್ಕಿಪಿಕ್ಕಿ, ಲಂಬಾಣಿ, ಪಾರ್ಧಿ, ಗುಜರಾತಿ, ರಾಜಸ್ಥಾನಿ, ಹಿಂದಿ, ಭಾಷೆಗಳು ಕೂಡ ಡುಂಗ್ರಿ ಗರಾಸಿಯ ಭಾಷೆಗೆ ಹತ್ತಿರದಲ್ಲಿವೆ. ಆದರೆ ಭಾಷೆಯೊಂದರಿಂದಲೇ ಒಂದು ಸಮುದಾಯವನ್ನು ಮತ್ತೊಂದು ಸಮುದಾಯಕ್ಕೆ ಸಮೀಕರಿಸಲು ಸಾಧ್ಯವಿಲ್ಲ. ಗೋಸಂಗಿಗಳಲ್ಲಿ ಹೋಂಸ್‌ಸಾಂಗಡ್‌, ದಾಂದು, ಪಡೆಯಾರ್‌, ಚೌವ್ಹಾಣ್‌, ಕೋಳಿ, ಸಿಂಧೆ, ಚಾವಡೆ, ವಾಡೇಲ್‌, ಖತ್ರಿ, ಮುಣಿಯಾಣಿ, ಗೇಲೋತ್‌, ಸಾಳಂಕಿ, ಜಾದವ್‌, ಮೇಣ್ಯ, ಪವಾರ್‌ಮೊದಲಾದ ಬೆಡಗುಗಳಿದ್ದು ಇವುಗಳಲ್ಲಿ ಪಡೆಯಾರ್‌, ಚೌಹ್ವಾಣ್‌, ಪವಾರ್‌ಬೆಡಗುಗಳು ಡುಂಗ್ರಿ ಗರಾಸಿಯ ಬೆಡಗುಗಳ ಹೆಸರನ್ನು ಹೋಲುತ್ತವೆ. ಆದರೆ ಈ ಬೆಡಗಿನವರೊಂದಿಗೆ ಡುಂಗ್ರಿ ಗರಾಸಿಯ ಸಮುದಾಯದವರು ರಕ್ತ ಸಂಬಂಧ ಬೆಳೆಸುವುದಿಲ್ಲ. ಈ ಬೆಡಗುಗಳಲ್ಲಿಯ ಆಚರಣೆಗಳಲ್ಲಿ ಹೊಂದಾಣಿಕೆಯಿಲ್ಲ. ಮಾರುತಿ ವಿ ಎಸ್‌ಅವರು ಕೈಗೊಂಡ ಅಧ್ಯಯನವು ಡುಂಗ್ರಿ ಗರಾಸಿಯ ಬುಡಕಟ್ಟಿಗೆ ಹೋಲುವುದುಂಟು. ಆದರೆ ಇವರು ಗೋಸಂಗಿ ಹೆಸರಿನಲ್ಲಿ ತಮ್ಮ ಮಹಾಪ್ರಬಂಧವನ್ನು ಮಂಡಿಸಿರುವರು.

ಆಧಾರಗಳು

೧. ಕಟ್ಟೀ, ವೆಂಕಟರಂಗೋ (ಅನು)., ಗ್ಯಾಝೆಟೀಯರು ಮುಂಬಯೀ ಇಲಾಖೆಗೆ ಸೇರಿದ ಕರ್ನಾಟಕ ಭಾಗದ್ದು: ಧಾರವಾಡ ಬೆಳಗಾವಿ ವಿಜಾಪುರ ಕಾನಡಾ ನಾಲ್ಕು ಜಿಲ್ಲೆಗಳದ್ದು (ಮುಂಬಯಿ : ಗವರ್ನಮೆಂಟ್‌ಸೆಂಟ್ರಲ್‌ಬುಕ್‌ಡಿಪೊ, ೧೮೯೩; ಪುನರ್‌ಮುದ್ರಣ. ೧೯೮೪, ಹೊಸ ದೆಹಲಿ: ಏಷಿಯನ್‌ಎಜುಕೇಷನಲ್‌ಸರ್ವೀಸೆಸ್‌).

೨. ಜಗದೀಶ, ಕೆ ಕೆ., ಡುಂಗ್ರಿ ರಗಾಸಿಯ (ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೮)

೩. ಮಾರುತಿ, ವಿ ಎಸ್‌., ಗೋಸಂಗಿ ಸಮುದಾಯ : ಒಂದು ಅಧ್ಯಯನ (ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್‌ಡಿ ಪದವಿಗಾಗಿ ಸಲ್ಲಿಸಿದ ಅಪ್ರಕಟಿತ ಮಹಾಪ್ರಬಂಧ, ೨೦೦೨).

೪. ಮೇತ್ರಿ, ಕೆ ಎಂ., ಬುಡಕಟ್ಟು ಕುಲಕಸುಬುಗಳು (ಹಂಪಿ : ಕನ್ನಡ ವಿಶ್ವವಿದ್ಯಾಲಯ, ೨೦೦೨).

೫. Devender Kumar Sikri., Census of India 2001 : The Scheduled ribe Atlas of India (New Delhi : Controller of Publications, 2004).

೬. Enthoven, R E., The Tribes and Castes of Bombay (Bombay : Government Central Press, 192; rpt. 1975, Delhi : Cosmo Publications, rpt. 1990, New Delhi : Asian Educational Services) 3 Vols.

೭. Eustace J Kitts, A Compenaium of the Castes and Tribes found in India : Census of India 1881 (Byculla : Education Society Press, 1885; rpt. 1982, Gurgaon : The Academic Press, Gurgaon).

೮. Hassan, S S., The Castes and Tribes of H E H Nizam’s Dominions (Bombay : Government Central Press, 1920; rpt. 1989, New Delhi : Asian Educational Services).

೯. Luiz, AAD., Tribes of Mysore (Bangalore : G. S. Viswa & Co.m 1963), pp. 25-38.

೧೦. Metry, K M., An Extensive Study and Evaluation of Tribal Setup in Karnataka (2004-09), SAP Mid Term Report submitted UGC, 2008

೧೧. Singh, K S., The Scheduled Tribes (Delhi : Oxford University, Press, 1994) People of India National Series, Vol. 3

೧೨. India’s Communities (Delhi : Oxford University, Press 1998). People of India National Series, vol. 4-6.

೧೩. (General Editor)., People of India : Karnataka (New Delhi : Anthropologial Survey of India, 2003) Volume XXVI.

೧೪. Thurston, E., Ethnographic Notes on Southern India (Madrass: Government Press, 1906).

೧೫. Castes and Tribes of Southern India (Madrass : Government Press, 1909;rpt. 1975, Delhi: Cosmo Publications)