ಭಾರತದ ಉದ್ದಕ್ಕೂ ಅಲೆಮಾರಿ ಸಮುದಾಯಗಳು ಕಂಡುಬರುತ್ತವೆ. ಅವು ಇಂಥಲ್ಲಿಯೇ ನೆಲೆಸಬೇಕು ಎನ್ನುವ ಕಟ್ಟುಪಾಡಿಗೆ ಒಳಗಾಗದೆ ತಮ್ಮ ಜೀವನಕ್ಕೆ ಅನುಕೂಲವಾದ ಪ್ರದೇಶಗಳಲ್ಲಿ ಅಲೆದಾಡುತ್ತಲೇ ಇರುತ್ತವೆ. ಡುಂಗ್ರಿ ಗರಾಸಿಯ ಸಮುದಾಯವು ಇಂತಹ ಅಲೆಮಾರಿ ಸಮುದಾಯಗಳಲ್ಲಿ ಒಂದು.

ಬುಡಕಟ್ಟು ಸಮುದಾಯಗಳ ಕುರಿತು ವಿದ್ವಾಂಸರಲ್ಲಿ ಹಲವಾರು ಗೊಂದಲಗಳಿವೆ. ಹೀಗಾಗಿ ಯಾವುದೋ ಬುಡಕಟ್ಟು ಸಮುದಾಯವನ್ನು ಇನ್ನಾವುದೋ ಸಮುದಾಯದೊಂದಿಗೆ ಸಮೀಕರಿಸಿ ಹೇಳುವ ಸಾಧ್ಯತೆಗಳೂ ಇರುತ್ತವೆ. ಇಂದು ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಿ ನಾಡಿಗೆ ದೂಡಲಾಗುತ್ತಿದೆ. ಆ ಸಮುದಾಯಗಳಿಗಾಗಿ ಕಾಲೋನಿಗಳನ್ನು ಸೃಷ್ಟಿಸಿ ಎಲ್ಲ ಬುಡಕಟ್ಟುಗಳನ್ನು ಒಂದೇ ಕಾಲೋನಿಯಲ್ಲಿ ನೆಲೆಸುವಂತೆ ಮಾಡಿದ ಸಾಧ್ಯತೆಗಳೂ ಇರುತ್ತದೆ. ಹಕ್ಕಿಪಿಕ್ಕಿಗಳು, ಸೋಲಿಗರು, ಇರುಳಿಗರು ಹೀಗೆ ಎಲ್ಲ ಸಮುದಾಯಗಳನ್ನು ಒಂದೇ ಕಡೆ ನೆಲೆಸುವಂತೆ ಮಾಡಿದಾಗ ಅಧ್ಯಯನಕಾರನು ಕೆಲವೊಮ್ಮೆ ಸಮುದಾಯಗಳ ಕುರಿತು ಹೇಳುವಾಗ ಗೊಂದಲಗೊಳ್ಳುವ ಸಾಧ್ಯತೆಗಳಿರುತ್ತವೆ. ಯಾಕೆಂದರೆ ಬಹುತೇಕ ಬುಡಕಟ್ಟುಗಳು ಒಂದೇ ಸ್ವರೂಪದಲ್ಲಿರುವಂತೆ ಮೇಲ್ನೋಟಕ್ಕೆ ಕಾಣಬಹುದು. ಅವುಗಳ ಅಂತರಾಳಕ್ಕೆ ಇಳಿದು ನೋಡಿದಾಗ ಮಾತ್ರ ಅವುಗಳ ಭಿನ್ನತೆಯ ಅರಿವಾಗುತ್ತದೆ. ಕರ್ನಾಟಕದಲ್ಲಿ ಡುಂಗ್ರಿ ಗರಾಸಿಯ ಸಮುದಾಯವನ್ನು ಗುರುತಿಸುವಲ್ಲಿಯೂ ಇಂತಹ ಹತ್ತೆಂಟು ಗೊಂದಲಗಳು ಕಾಡಿದ್ದುಂಟು. ಮೈಸೂರು ಪ್ರಾಂತ್ಯದ ಒಂದು ಕಾಲೋನಿಯಲ್ಲಿ ವಾಸಿಸುವ ಡುಂಗ್ರಿ ಗರಾಸಿಯರನ್ನು ಹಕ್ಕಿಪಿಕ್ಕಿಗಳು ಎಂದು ಕರೆಯಲಾಗುತ್ತದೆ. ಬಳ್ಳಾರಿ ಪ್ರದೇಶದಲ್ಲಿ ಡುಂಗ್ರಿ ಗರಾಸಿಯರನ್ನು ಗೋಸಂಗಿಗಳು, ಬೆಳಗಾವಿ ಪ್ರದೇಶದಲ್ಲಿ ಗೋಸಾಯಿಗಳು ಎಂದು ಕರೆಯಲಾಗುತ್ತಿದೆ. ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಈ ಸಮಸ್ಯೆಗಳಿವೆ. ಆದರೆ ಗೋಸಾಯಿ, ಗೋಸಂಗಿ, ಗೋಸಾವಿ, ಸಮುದಾಯಗಳಿಗೂ ಹಾಗೂ ಡುಂಗ್ರಿ ಗರಾಸಿಯ ಬುಡಕಟ್ಟಿಗೂ ಆಂತರ್ಯದಲ್ಲಿ ತುಂಬಾ ವ್ಯತ್ಯಾಸಗಳಿವೆ. ಹಕ್ಕಿಪಿಕ್ಕಿಯವರಿಗೂ ಡುಂಗ್ರಿ ಗರಾಸಿಯರಿಗೂ ಯಾವುದೇ ರೀತಿಯ ರಕ್ತಸಂಬಂಧಗಳಿರುವುದಿಲ್ಲ. ಹಾಗೇ ಗೋಸಂಗಿ, ಗೋಸಾವಿ, ಗೋಸಾಯಿಗಳಿಗೂ ಡುಂಗ್ರಿ ಗರಾಸಿಯರಿಗೂ ಯಾವುದೇ ರೀತಿಯ ಹೋಲಿಕೆಗಳು ಸಾಧ್ಯವಿಲ್ಲ. ಡುಂಗ್ರಿಗರಾಸಿಯರ ಬೆಡಗುಗಳು, ಗೋಸಂಗಿ, ಗೋಸಾಯಿಯವರ ಬೆಡಗು, ಆಚರಣೆ, ದೈವಗಳಿಗೂ ತುಂಬಾ ಭಿನ್ನತೆ ಇರುವುದು. ಹಾಗಾಗಿ ಡುಂಗ್ರಿ ಗರಾಸಿಯ ಸಮುದಾಯಕ್ಕೂ ಗೋಸಂಗಿ, ಗೋಸಾಯಿ, ಗೋಸಾವಿ ಸಮುದಾಯಗಳಿಗೂ ಪರಸ್ಪರ ಸಂಬಂಧಗಳಿಲ್ಲ. ಆದರೆ, ಆಶ್ಚರ್ಯದ ವಿಚಾರವೆಂದರೆ ಎಷ್ಟೋ ಪ್ರದೇಶಗಳಲ್ಲಿ ಡುಂಗ್ರಿ ಗರಾಸಿಯರನ್ನು ಗೋಸಂಗಿ, ಗೋಸಾಯಿ, ಗೋಸಾವಿ, ಹಕ್ಕಿಪಿಕ್ಕಿ, ಶಿಳ್ಳೇಕ್ಯಾತ ಎಂದು ಗುರುತಿಸುತ್ತಿರುವುದು ಕಂಡುಬರುತ್ತಿದೆ (ಜಗದೀಶ, ಕೆ. ಕೆ. : ೨೦೦೮).

ಡುಂಗ್ರಿ ಗರಾಸಿಯಾ ಸಮುದಾಯ ಕುರಿತು ಸೈಯದ್‌ಸಿರಾಜ್‌ಉಲ್‌ಹಸನ್‌ಅವರು ಭಿಲ್‌ಸಮುದಾಯ ಕುರಿತು ವಿವರಿಸುತ್ತ ಅದರೊಳಗಿರುವ ಒಳಪಂಗಡಗಳ ಬಗ್ಗೆ ವಿವರಣೆ ನೀಡಿದ್ದಾರೆ. The term ‘Bhil’ includes, besides The Bhil proper, several aboriginal tribes of the sahyadri and satpura ranges, such as Khotils, Pavras, Varlis, Mavchs or Gavits, Dangchais, Tadvis, Nirdhis, etc. (ಸಯ್ಯದ್‌ಸಿರಾಜ್‌ಉಲ್‌ಹಸನ್ : ೧೯೨೦:೭೧). ವಿವಾಹ, ಪಂಚಾಯ್ತಿ ಕಾರ್ಯ, ಸಾಮಾಜಿಕವಾಗಿ ಇವರಿಗಿರುವ ಸ್ಥಾನಮಾನ ಮುಂತಾದ ವಿವರಣೆಗಳನ್ನು ಇದರಲ್ಲಿ ನೀಡಲಾಗಿದೆ. ಆದರೆ ಡುಂಗ್ರಿ ಗರಾಸಿಯ ಹೆಸರನ್ನು ಎಲ್ಲಿಯೂ ಬಳಸದೇ ಇರುವುದು ಕಂಡುಬರುತ್ತದೆ.

ಆರ್‌ಇ ಎಂಥೋವನ್‌ಅವರ ಕೃತಿಯಲ್ಲಿ ಭಿಲ್‌ಗಳ ಕುರಿತು ವಿವರಣೆ ನೀಡಲಾಗಿದೆ. ಇದರಲ್ಲಿ ಭಿಲ್‌ಸಮುದಾಯದೊಳಗೆ ಭಿಲಾಲ, ನಿರ್ಧಿ, ತಡ್ವಿ ಮುಂತಾದ ಒಳಪಂಗಡಗಳ ವಿವರಣೆ ನೀಡಲಾಗಿದೆ. ಇದರಲ್ಲಿ ಹದಿನೇಳು ಬೆಡಗು (Clans)ಗಳನ್ನು ದಾಖಲಿಸಲಾಗಿದೆ. ಇವು ಭಿಲ್ಲರ ಡುಂಗ್ರಿ ಗರಾಸಿಯ ಬುಡಕಟ್ಟಿಗೆ ಹತ್ತಿರದ ನಂಟನ್ನು ಹೊಂದಿವೆ. ಇದರಲ್ಲಿ ದಾಖಲಿಸಿದ ಮಾಲಿ, ಪವಾರ್‌, ವಾಘ್‌ಎನ್ನುವ ಬೆಡಗುಗಳು ಡುಂಗ್ರಿ ಗರಾಸಿಯರಲ್ಲಿ ಕಾಣಸಿಗುವವು.

ಎಂಥೋವನ್‌ಅವರು ಭಿಲ್‌ಸಮುದಾಯದೊಳಗಿನ ಒಳಪಂಗಡವಾದ ಡಾಂಗ್ಚಿಸ್‌ಅಥವಾ ಡಾಂಗ್‌ಭಿಲ್ಸ್‌(Dangchis or Dang Bhil)ಗಳ ಕುರಿತು ವಿವರಣೆ ನೀಡಿದ್ದಾರೆ. ಆ ಸಮುದಾಯ ಪೂಜಿಸುವ ದೈವಗಳು ಹಾಗೂ ಆಚರಣೆಗಳು (Khotils worship Tiger god) ಡುಂಗ್ರಿ ಗರಾಸಿಯರಲ್ಲಿ ಇಂದಿಗೂ ಚಾಲನೆಯಲ್ಲಿವೆ (ಎಂಥೋವನ್‌ಆರ್‌ಇ: ೧೯೯೦:೧೫೬). ಬಹುಶಃ ಡಾಂಗ್ಚಿಸ್‌ಅಥವಾ ಡಾಂಗ್‌ಭಿಲ್ಲರೇ ಕಾಲಾಂತರದಲ್ಲಿ ಡುಂಗ್ರಿ ಗರಾಸಿಯ ಆಗಿರುವ ಸಾಧ್ಯತೆಗಳೂ ಇರಬಹುದು.

ಎ ಎ ಡಿ ಲೂಯಿಸ್‌ರ ಕೃತಿಯಲ್ಲಿ ಭಿಲ್‌ಸಮುದಾಯ ಕುರಿತು ವಿವರಣೆಗಳಿವೆ. ಕನ್ನಡದಲ್ಲಿ ಬಳಕೆಗೊಳ್ಳುವ ವಿಲ್ಲು ಅಥವಾ ಬಿಲ್ಲಿನಿಂದ ‘ಭಿಲ್‌’ ಎನ್ನುವ ಪದ ಬಂದಿರಬಹುದು ಎಂದು ವಿವರಿಸುತ್ತಾರೆ. ಇವರನ್ನು ‘ದಸ್ಸು’ಗಳೆಂದು ಕರೆಯುತ್ತಿದ್ದಾರೆಂದೂ ತಿಳಿಸುತ್ತಾರೆ. ಹಿಂದೆ ಮೈಸೂರಿನಲ್ಲಿ ವಾಸಿಸುತ್ತಿದ್ದ ಡುಂಗ್ರಿ ಗರಾಸಿಯರನ್ನೆ ಬಹುಶಃ ಲೇಖಕರು ಸಂದರ್ಶಿಸಿರಬಹುದು. ಡುಂಗ್ರಿ ಗರಾಸಿಯರಲ್ಲಿರುವ ಬೆಡಗು, ದೈವ ಮತ್ತು ಅವರ ವೃತ್ತಿಯ ಕುರಿತ ವಿವರಣೆ ಈ ಕೃತಿಯಲ್ಲಿ ದೊರೆಯುತ್ತದೆ. (ಲೂಯಿಸ್‌ಎ ಎ ಡಿ : ೧೯೬೩:೨೬-೩೮).

ಕೆ ಎಸ್‌ಸಿಂಗ್‌ಅವರು ಡುಂಗ್ರಿ ಗರಾಸಿಯರ ಕುರಿತು ವಿವರಿಸುತ್ತಾ ಇವರು ಭಿಲ್‌ಪಂಗಡಕ್ಕೆ ಸೇರಿದವರು, ಗುಜರಾತಿನಲ್ಲಿ ವಾಸಿಸುತ್ತಾರೆ. ಇವರ ಹಿಂದಿನ ತಲೆಮಾರಿನವರು ಅಂದಾಜು ಮುನ್ನೂರು ವರ್ಷಗಳ ಹಿಂದೆ ಮೇವಾರ್‌ಅಥವಾ ರಾಜಸ್ಥಾನದಿಂದ ವಲಸೆ ಬಂದಿರಬೇಕು ಎಂದು ತಿಳಿಸುತ್ತಾರೆ ಹಾಗೂ ಇವರಲ್ಲಿ ಸಾಕಷ್ಟು ಬೆಡಗುಗಳಿವೆ (Clans, Atak) ಎಂದು ತಿಳಿಸುತ್ತಾರೆ. ಇವರ ಜೀವನಕ್ರಮ ಕುರಿತು ಸಂಕ್ಷಿಪ್ತವಾದ ವಿವರಣೆಗಳನ್ನು ಕೊಟ್ಟಿದ್ದಾರೆ (ಸಿಂಗ್‌ಕೆ ಎಸ್‌: ೧೯೯೮:೪೩೫).

ಕೆ ಎಸ್‌ಸಿಂಗ್‌ಅವರು ತಮ್ಮ The Scheduled Tribes ಕೃತಿಯಲ್ಲಿ ಗುಜರಾತ್‌ನ ಡುಂಗ್ರಿ ಗರಾಸಿಯ ಬುಡಕಟ್ಟಿನವರು ಸಸ್ಯಾಹಾರದ ಜೊತೆಗೆ ಮಾಂಸ, ಮೊಟ್ಟೆ, ಮೀನು ಕೋಳಿ ಮುಂತಾದವುಗಳನ್ನು ಆಹಾರವಾಗಿ ಬಳಸುತ್ತಾರೆ. ಕೃಷಿ ಹಾಗೂ ಇತರ ಕೂಲಿಗಳಾಗಿ ಕೆಲಸ ಮಾಡುತ್ತಾರೆ. ಮುಖ್ಯವಾಗಿ, ಹೋಳಿ, ದೀಪಾವಳಿ, ನವರಾತ್ರಿ ಹಬ್ಬಗಳನ್ನು ಆಚರಿಸುತ್ತಾರೆ. ಭಿಲ್‌ನ ಇತರ ಪಂಗಡಗಳು ಡುಂಗ್ರಿ ಗರಾಸಿಯ ಬುಡಕಟ್ಟನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು.(The other Bhil groups do not consider the Dungri Garasias equal) ಎಂಬುದನ್ನು ತಿಳಿಸುತ್ತಾರೆ (ಸಿಂಗ್‌ಕೆ ಎಸ್‌: ೧೯೯೪ : ೧೨೯:-೧೩೦).

ಕೆ ಎಸ್‌ಸಿಂಗ್‌, ದೇವೇಂದರ ಕುಮಾರ ಸಕ್ರಿ ಅವರು Bhils occupy the second largest scheduled tribe of India, numbering around 7,367,973 (1981 census) (Singh K S : 1994: 118). They occupied first position in 1991 census, numbering 7,730,094 constituting 14.35 per cent of the total tribal population of India. The tribe has been notified as a scheduled tribe in Andhra Pradesh, Chattisgarh, Gujarat, Karnataka, Madhya Pradesh, Maharastra, Rajasthan and Tripura. In the union territory of Delhi Bhil community is listed in scheduled caste. Madhya Pradesh has the highest share of Bhils with a population of 3,436,743(35.32%) followed by Gujarat with a number of 2,638,488 (27.11%) Rajasthan with a population 2,305,982 (23.69%), Maharastra having 1,344,554 Bhils (13.81%) of the total Bhils population at national level. Bhils constitute negligible number in Andhra Pradesh (312), preceded by Tripura (1,754) and Karnataka (2,261). So far as the percentage of the Bhils to the total tribal population of the state is concerned, Gujarat has the highest percentage (42.82%)followed by Rajastan (42.11%) Madhya Pradesh (22.31%), Maharastra (18.37%), Tripura (0.20%), Karnataka (0.11%) and Andhra Pradesh (0.07%).

As per census returns in earlier census, more than 99 per cent of the Bhils are followers of Hinduism along with their indigenous folk beliefs and sacred performances. The redual Bhils have returned themselves as Christians, Muslims, Jains and the follower of `other religion’.

Traditionally they have been practicing cultivation, hunting, gathering, cattle rearing etc. Some of the section of Bhils also practiced slash and burn cultivation on the hill slopes till late fifties i.e. before the implementation of national forest policy. Presently they are predominantly cultivators and agricultural labours followed by various type of wage labour works, collection of forest produces, animal husbandry and other occupations including jobs in private and government sectors (Devender Kumar Sikri : 2004 : 79) ಎಂದು ಹೇಳಿರುವರು.

ಹೆಸರಿನ ಔಚಿತ್ಯ

ಡುಂಗ್ರಿ ಗರಾಸಿಯ ಹೆಸರಿನ ಔಚಿತ್ಯವನ್ನು ಅರಿಯಲು ಆ ಪದದ ನಿಷ್ಪತ್ತಿ ಹಾಗೂ ಅರ್ಥಗಳನ್ನು ತಿಳಿದುಕೊಳ್ಳುವುದು ಉಚಿತ.

ಪದ ನಿಷ್ಪತ್ತಿ: ಮೂಲತಃ ಗುಜರಾತ್ ಮೂಲದ ಡುಂಗ್ರಿ ಗರಾಸಿಯ ಸಮುದಾಯವು ಭಾರತದ ಬೇರೆ ಬೇರೆ ಪ್ರಾಂತಕ್ಕೆ ವಲಸೆ ಹೋಗಿರಬೇಕು. ಡುಂಗ್ರಿ ಗರಾಸಿಯ ಎನ್ನುವುದು ಮೂಲತಃ ಗುಜರಾತಿ ಭಾಷೆಯ ಪದವಿರಬೇಕು. ಡುಂಗರ್‌+ಘರ್‌+ಸಿಯಾ ಅಥವಾ ಡುಂಗರ್‌+ಆಸಿಯಾ ಈ ಪದಗಳ ಸಮೂಹವೇ ಡುಂಗ್ರಿ ಗರಾಸಿಯ ಆಗಿರಬೇಕು. ಗುಜರಾತಿಯಲ್ಲಿ ಡುಂಗರ್‌ಎಂದರೆ ಕಾಡು, ಬೆಟ್ಟ, ಗುಡ್ಡ ಎನ್ನುವ ಅರ್ಥವಿದೆ. ಹಾಗೆ ಘರ್‌ಎಂದರೆ ಮನೆ ಎಂದರ್ಥ. ಸಿಯಾ ಎಂದರೆ ಗುಜರಾತಿ ಭಾಷೆಯಲ್ಲಿ ಮಕ್ಕಳು ಎನ್ನುವ ಅರ್ಥವಿದೆ. ಡುಂಗ್ರಿ ಗರಾಸಿಯ ಎಂದರೆ ಬೆಟ್ಟಗುಡ್ಡಗಳಲ್ಲಿ ಮನೆಮಾಡಿಕೊಂಡು ವಾಸಿಸುವ ಮಕ್ಕಳು ಅಥವಾ ಜನ ಎನ್ನುವ ಅರ್ಥವನ್ನು ಕೊಡುತ್ತದೆ. ಇಲ್ಲಿ ಮಕ್ಕಳು ಎನ್ನುವ ಪದವು ವಿಶಾಲಾರ್ಥದಲ್ಲಿ ಬಳಕೆಗೊಂಡಿದ್ದು, ಅದನ್ನು ಸಮುದಾಯ ಎಂದು ಬಳಕೆ ಮಾಡಬಹುದು. ಡುಂಗ್ರಿ ಗರಾಸಿಯ ಎನ್ನುವ ಪದ ಕನ್ನಡದಲ್ಲಿ ಕಾಡಿನ ಮಕ್ಕಳು ಎಂದು ಅರ್ಥೈಸಿಕೊಳ್ಳಬಹುದು. ಹಾಗೇ ಈ ಸಮುದಾಯದವರು ಹೆಚ್ಚು ಅನಕ್ಷರಸ್ಥರಿರುವುದರಿಂದ ಹಾಗೂ ಸಾಮಾಜಿಕ ಜಾಗೃತಿ ಈ ಸಮುದಾಯದಲ್ಲಿ ಕಡಿಮೆ ಇರುವುದರಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ತಿಳಿದ ಯಾವುದೋ ಒಂದು ಅಂದರೆ ಗೋಸಂಗಿ, ಗೋಸಾಯಿ, ಗೋಸಾವಿ, ಹಕ್ಕಿಪಿಕ್ಕಿ, ಸಿಳ್ಳೆಕ್ಯಾತ, ಕಿಳ್ಳೆಕ್ಯಾತ ಮುಂತಾದ ಸಮುದಾಯದ ಹೆಸರುಗಳನ್ನು ಹೇಳುವುದುಂಟು. ಬೆಳಗಾವಿ ಪ್ರದೇಶದಲ್ಲಿ ಈ ರೀತಿಯಾಗಿ ಡುಂಗ್ರಿ ಗರಾಸಿಯರನ್ನು ಗೋಸಾಯಿ, ಗೋಸಾವಿಗಳೆಂದು ಕರೆದುಕೊಳ್ಳುತ್ತಿರುವುದರಿಂದ ಇವರಿಗೆ ಸಂವಿಧಾನಬದ್ಧವಾಗಿ ಪರಿಶಿಷ್ಟರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಹೋಗಿವೆ.

ಕೆ ಎಂ ಮೇತ್ರಿ ಅವರು ಡುಂಗ್ರಿ ಗರಾಸಿಯ ಅವರ ಕುರಿತು As per the constitution (Scheduled Tribes) Order, 1950. (As amended by the Scheduled Castes and Scheduled Tribes Lists (Modification Order) 1956, the Bombay Reorganisation Act, 1960, and the Scheduled Castes and Scheduled Tribes Orders (Amendment) Act 1976) Dungri Garasia under Bhil Tribe considered as scheduled tribes in Karnataka.

A Bhil community living in Karnataka, their forefathers migrated from Mewar in Rajasthan about three hundred years ago. Dungri Garasia is one of major Nomadic tribe in Karnataka comes under Bhil group. They are also locally known as Gosangi, Gosayi. The word Gosangi is derived from Gosika, Gosikollu, Gosthika. It is believed that they are called Gosangi because of their occupations as care takers of cattle. It is a religious medicant community came from Northern and Western India. The names Gosai signifies Go-Swamy i.e master of Cows (senses). The innocent Gosangi are also called Gosai which leads to the identity crises. The term Gosavi is not a caste. Any devotee, irrespective of profession, caste and social life is called Gosavi. According to Jathaka Purana Lord Shiva appeared before them and ordered them to become the master of cows. The same are Gosangi who accompany the cows.

The community Dungri Garasia tribe is troubled by the identity crises. In Bellary district they are called as Gosangi (schedule caste) in some places they are called as Sillekyathas (SC), Gosavi (OBC). But the clans and cultural characteristics are one and the same (Metry, K M: 2008) ಎಂದು ಹೇಳುವರು.

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಿನ್ನೆಲೆ

ಅಲೆಮಾರಿ ಡುಂಗ್ರಿ ಗರಾಸಿಯ ಸಮುದಾಯದ ಮೂಲದ ಕುರಿತು ಹಲವಾರು ಪೌರಾಣಿಕ ಐತಿಹ್ಯಗಳು, ದಂತಕಥೆಗಳು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

೧. ಈಗಿನ ರಾಜಸ್ಥಾನದ ಒಂದು ಊರಿನಲ್ಲಿ ಅನಾಥನೊಬ್ಬನಿದ್ದ. ಆತನ ಮುಖ್ಯ ಕಸುಬು ಹಂದಿಗಳನ್ನು ಹೊಡೆದುರುಳಿಸುವುದು. ಹಂದಿಗಳಿಗೆ ಗುರಿ ಇಡುವುದರಲ್ಲಿ ತುಂಬ ನಿಪುಣನಾಗಿದ್ದ ಆತನು ಯಾವಾಗಲೂ ತನ್ನ ಕೈಯಲ್ಲಿ ಮೊಣಕೈ ಉದ್ದದ ದೊಣ್ಣೆಯೊಂದನ್ನು ಹಿಡಿದುಕೊಂಡಿರುತ್ತಿದ್ದ. ಪ್ರಾಣಿಗಳನ್ನು ಹೊಡೆಯಲು ಮುಖ್ಯವಾಗಿ ಆ ದೊಣ್ಣೆಯನ್ನು ಬಳಸುತ್ತಿದ್ದ ತಮ್ಮ ಹೊಲಗಳಿಗೆ ಕಾಟ ಕೊಡುವ ಹಂದಿಗಳನ್ನು ಬೇಟೆಯಾಡಲು ಸ್ಥಳೀಯ ಲಂಬಾಣಿಗಳು ಈತನ ಸಹಾಯವನ್ನು ಪಡೆಯುತ್ತಿದ್ದರು. ಲಂಬಾಣಿಗಳ ಹೊಲಗಳ ಕಾವಲಿಗೆ ಹೋಗುತ್ತಿದ್ದ ಈ ವ್ಯಕ್ತಿ ಅಂದಿನ ತನ್ನ ಊಟ ಉಪಚಾರಗಳನ್ನು ಅವರಲ್ಲಿಯೇ ಪೂರೈಸಿಕೊಳ್ಳುತ್ತಿದ್ದ. ಬಾಲಕನಾಗಿದ್ದ ಆತ ಕಾಲಕ್ರಮೇಣ ಹರೆಗೆಯಕ್ಕೆ ಬಂದ. ಆಗ ಸ್ಥಳಿಯರು ಒಬ್ಬ ಅನಾಥ ಲಂಬಾಣಿಯ ಹೆಣ್ಣನ್ನು ಇವನಿಗೆ ಮದುವೆ ಮಾಡಿಸಿದರು. ಆ ಇವರಿಗೆ ದೇವಿಯ ಹಾಗೂ ಜಂಗೀಯ ಎಂಬ ಎರಡು ಗಂಡು ಮಕ್ಕಳು ಹುಟ್ಟಿದವು. ಆದರೆ ಈ ಮಕ್ಕಳನ್ನು ಲಂಬಾಣಿ ಸಮುದಾಯವು ತಮ್ಮ ಕುಲಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಹಾಗಾಗಿ ಈ ಎರಡು ಹುಡುಗರು ಬಾವಾಜಿಗಳೆಂದು ಕರೆಯಲ್ಪಟ್ಟರು. ಅಂದಿನಿಂದ ಈ ಎರಡು ಹುಡುಗರು ಬಾವಾಜಿಗಳಾಗಿ, ಊರುರೂ ಸುತ್ತಾಡತೊಡಗಿದರು. ಇವರ ಸಂತಾನವೇ ಮುಂದೆ ಡುಗ್ರಿಗರಾಸಿಯ ಸಮುದಾಯವಾಗಿ ಬೆಳೆಯಿತು ಎನ್ನುವ ಕತೆ ಇವರಲ್ಲಿ ಚಾಲ್ತಿಯಲ್ಲಿದೆ.

೨. ಡುಂಗ್ರಿ ಗರಾಸಿಯ ಸಮುದಾಯದ ಹಿರಿಯರಾದ ದೇವಿಯ ಹಾಗೂ ಜಂಗಿಯಾ ಎನ್ನುವ ಇಬ್ಬರಿಗೆ ಎರಡು ನಾಯಿಗಳು ಸಿಕ್ಕವಂತೆ ಆ ನಾಯಿಗಳಿಗೆ ಹಬೂಲ್ ಹಾಗೂ ಕಾಬೂಲ್ ಎಂಬ ಹೆಸರನ್ನು ಇಡುತ್ತಾರೆ. ತಾವು ಬೇಟೆಗೆ ಹೋದಾಗಲೆಲ್ಲ ತಾವು ಸಾಕಿದ ಆ ನಾಯಿಗಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಅವರೊಂದಿಗೆ ಬೇಟೆಗೆ ಹೋದ ನಾಯಿಗಳು ಕಾಡಿನಲ್ಲಿ ಅವರಿಗಿಂತ ಮೊದಲೇ ಬೇಟೆಯ ಪ್ರಾಣಿಗಳನ್ನು ಹಿಡಿಯುತ್ತಿದ್ದವಂತೆ. ತಮ್ಮನ್ನು ಸಾಕಿದವರಿಗೆ ಈ ರೀತಿಯಾಗಿ ನಾಯಿಗಳು ಸಹಾಯ ಮಾಡುತ್ತಿದ್ದವಂತೆ. ಕೊನೆಕೊನೆಗೆ ಬೇಟೆಯಾಡಲು ಹೊರಟಾಗ ಕಾಡಿನಲ್ಲಿ ಹಬೂಲ್ ಮತ್ತು ಕಾಬೂಲ್ ಎಂದು ನಾಯಿಗಳ ಹೆಸರು ಕೂಗಿದರೆ ಸಾಕು ಕಾಡಿನ ಪ್ರಾಣಿಗಳು ಅಲ್ಲಿಯೇ ಸತ್ತು ಬೀಳುತ್ತಿದ್ದ ವಂತೆ.

ದೇವಿಯ ಹಾಗೂ ಜಂಗಿಯಾ ಇಬ್ಬರು ಹರೆಯಕ್ಕೆ ಬಂದಾಗ ಮದುವೆಯಾದರಂತೆ. ಇವರಿಗೆ ಏಳು ಜನ ಗಂಡು ಮಕ್ಕಳು ಹುಟ್ಟಿದರು. ಈ ಮಕ್ಕಳು ಹರೆಯಕ್ಕೆ ಬಂದಾಗ ಯಾರೂ ಇವರಿಗೆ ಹೆಣ್ಣನ್ನು ಕೋಡಲೇ ಇಲ್ಲವಂತೆ. ಲಂಬಾಣಿಗಳಂತೂ ಇವರನ್ನು ತೀರಾ ನಿಕೃಷ್ಟವಾಗಿ ನೋಡಿದರಂತೆ. ಇದರಿಂದ ಸಹೋದರರು ಬೇಸತ್ತು ಕೊಂಡರಂತೆ. ಇಲ್ಲಿರುವುದು ಸರಿಯಲ್ಲವೆಂದು ಅವರು ಅಲೆದಾಡತೊಡಗಿದರಂತೆ. ಅಂದಿನಿಂದ ಈ ಸಮುದಾಯ ಒಂದು ಕಡೆ ನೆಲೆ ನಿಲ್ಲದೆ ಅಲೆಮಾರಿಗಳಾಗಿ ಅಲೆದಾಡತೊಡಗಿದರಂತೆ.

೩. ದೇವಿಯ ಹಾಗೂ ಜಂಗಿಯರಿಗೆ ಹುಟ್ಟಿದ್ದ ಏಳು ಮಕ್ಕಳು ಅಲೆಮಾರಿಯಾಗಿ ತಿರುಗಾಡುತ್ತಿರುವಾಗ ಭಾಟ್ ಎನ್ನುವವನ ಸಂಪರ್ಕ ದೊರೆಯುತ್ತದೆ. ಭಾಟ್‌ನು ಈ ಏಳು ಮಕ್ಕಳಿಗೆ ಒಂದೊಂದು ಹೆಸರನ್ನು ಇಟ್ಟನಂತೆ. ಆ ಹುಡುಗರ ಹೆಸರುಗಳೇ ಮುಂದೆ ಡುಂಗ್ರಿ ಗರಾಸಿಯ ಸಮುದಾಯದ ಬೆಡಗುಗಳಾದವಂತೆ.

೪. ತುಂಬಾ ಹಿಂದಿನ ಕಾಲದಲ್ಲಿ ಏಳು ಜನ ಅಣ್ಣ ತಮ್ಮಂದರು ಒಟ್ಟಾಗಿ ಜೀವಿಸುತ್ತಿದ್ದರು.ಅವರು ತುಂಬಾ ಅನ್ಯೋನ್ಯವಾಗಿದ್ದರು. ಕಾಡಿನಲ್ಲಿಯೇ ವಾಸ ಮಾಡುತ್ತಿದ್ದ ಇವರು ತಮಗೆ ಹಸಿವಾದಾಗ ಒಟ್ಟಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಮತ್ತು ಕಾಡಿನಲ್ಲಿಯೇ ಸಿಗುವ ಗೆಡ್ಡೆ ಗೆಣಸುಗಳನ್ನು, ಹಣ್ಣು ಹಂಪಲಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು.

ಹೀಗೆ ಆ ಏಳು ಜನ ಅಣ್ಣ ತಮ್ಮಂದಿರು ಕಾಡಿನಲ್ಲಿ ಸುತ್ತುತ್ತಾ ಇರುವಾಗ ಒಮ್ಮೆ ಏಳು ಕವಲಿನ ದಾರಿಗಳು ಅವರಿಗೆ ಕಂಡುಬಂದವು. ಅವರಲ್ಲಿಯೆ ಒಬ್ಬ ತಮ್ಮ ಸಹೋದರರಿಗೆ ತನ್ನ ಆಲೋಚನೆಯನ್ನು ಹೀಗೆ ತಿಳಿಸಿದನು. ನಾವು ಏಳು ಜನ ಒಟ್ಟಾಗಿ ಆಹಾರ ಹುಡುಕುವುದಕ್ಕಿಂತ ಈ ಎಳು ದಾರಿಗಳಲ್ಲಿ ಬೇರೆ ಬೇರೆಯಾಗಿ ಹೋದರೆ ಹೆಚ್ಚಿನ ಆಹಾರ ಸಿಗಬಹುದಲ್ಲವೆ ಎಂದು ತಿಳಿಸಿದ. ಇನ್ನುಳಿದ ಸಹೋದರರು ಅವನ ಮಾತಿಗೆ ಸಮ್ಮತಿಸಿ ಒಂದೊಂದು ಕವಲಿನಲ್ಲಿ ಒಬ್ಬೊಬ್ಬರು ತೆರಳಿದರು. ಹೀಗೆ ತೆರಳಿದ ಅಣ್ಣತಮ್ಮಂದಿರಲ್ಲಿ ಒಬ್ಬ ಡುಂಗ್ರಿ ಗರಾಸಿಯನಾಗಿ ಮಾರ್ಪಟ್ಟ. ಇನ್ನುಳಿದವರಲ್ಲಿ ಒಬ್ಬ ಮಾರವಾಡಿಯಾಗಿ, ಇನ್ನೊಬ್ಬ ಗುಜರನಾಗಿ (ಗುರ್) ಮತ್ತೊಬ್ಬ ಲಬಾನೋ (ಲಂಬಾಣಿ) ಆಗಿ ಹಾಗೇ ಮತ್ತೊಬ್ಬ ಪಾರ್ಧಿ(ವಾಗ್ರಿ)ಯಾದರಂತೆ ಎನ್ನುವ ಕತೆ ಬೆಳಗಾವಿ ಜಿಲ್ಲೆಯ ಡುಂಗ್ರಿ ಗರಾಸಿಯರಲ್ಲಿ ಚಾಲ್ತಿಯಲ್ಲಿದೆ (ಜಗದೀಶ, ಕೆ ಕೆ:೨೦೦೮). ಇವರಲ್ಲಿ ಪ್ರಚಲಿತವಿರುವ ಕಥೆಗಳು ಇವರ ವೃತ್ತಿ, ಮೂಲ, ಬೆಡಗು ಅವರ ಜೀವನ ಶೈಲಿಗಳಮೇಲೆ ಬೆಳಕನ್ನು ಚೆಲ್ಲುತ್ತವೆ.

ಮೂಲ ಮತ್ತು ಪ್ರಸಾರ

ಡುಂಗ್ರಿ ಗರಾಸಿಯ ಬುಡಕಟ್ಟು ಭಿಲ್ ಆದಿವಾಸಿ ಸಮುದಾಯದ ಒಂದು ಒಳ ಪಂಗಡ. ಇದು ಡುಂಗರ್ + ಘರ್ + ಸಿಯಾ = ಡುಂಗರ್ ಗರಾಸಿಯಾ > ಡುಂಗ್ರಿ ಗರಾಸಿಯ ಎಂದು ಬಳಕೆಗೆ ಬಂದಂತಿದೆ. ಇಲ್ಲಿ ಡುಂಗರ್ ಎಂದರೆ ಬೆಟ್ಟಗುಡ್ಡ, ಘರ್ ಎಂದರೆ ಮನೆ, ಸಿಯಾ ಎಂದರೆ ಮಕ್ಕಳು ಎಂದರ್ಥ. ಒಟ್ಟಾರೆಯಾಗಿ ಹೇಳುವುದಾದರೆ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಜನ ಎಂದರ್ಥ. ಆದ್ದರಿಂದ ಸಮುದಾಯದ ಮೂಲ ಹಾಗೂ ಸಾಮಾನ್ಯ ಕಸುಬು ಬೇಟೆ ಆಹಾರ ಸಂಗ್ರಹಣೆ ಹಾಗೂ ಪಶುಪಾಲನೆ ಆಗಿರುತ್ತದೆ. ಈ ಕಾಯಕಗಳಿಗಾಗಿ ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಹೋಗುವುದು ಸಹಜವಾಗಿತ್ತು.

ಕಾಲಾಂತರದಲ್ಲಿ ಸಹಜ ಬೇಟೆ, ಆಹಾರ ಸಂಗ್ರಹಣೆ, ಮೀನುಗಾರಿಕೆ, ಭಿಕ್ಷಾಟನೆಗಳು ಕಾನೂನುಬದ್ಧವಾಗಿ ನಿಯಂತ್ರಣಕ್ಕೆ ಒಳಪಟ್ಟವು. ಇವರ ಸಹಜ ಬದುಕು ಸಂವಿಧಾನ ಬದ್ಧವಾಗಿ ನಿಯಂತ್ರಣಕೊಳಪಟ್ಟಾಗ ಬದುಕಿಗಾಗಿ ಇವರ ಗುಂಪುಗಳ ಪಲಾಯನ ಅಧಿಕವಾಯಿತು. ರಾಜಕೀಯ ವೈಪರೀತ್ಯ ಹಾಗೂ ಪ್ರಕೃತಿ ವಿಕೋಪಗಳಿಂದಾಗಿ ರಾಜಸ್ಥಾನ ಮೂಲದಿಂದ ದೇಶಾಂತರ ಹೊರಟವರಲ್ಲಿ ಕರ್ನಾಟಕದ ಡುಂಗ್ರಿ ಗರಾಸಿಯ ಬುಡಕಟ್ಟು ಒಂದು ಎಂದು ಸಮುದಾಯದ ಕೆಲವು ಹಿರಿಯರ ಅಭಿಪ್ರಾಯವಾಗಿದೆ.

ಹಿಂದೆ ಸಮುದಾಯವು ಸರ್ವ ಸ್ವಾತಂತ್ರ್ಯವನ್ನು ಹೊಂದಿತು. ಕೆರೆ, ಹೊಳೆ, ಹಳ್ಳ, ಹಳ್ಳ, ಬೆಟ್ಟ ಗುಡ್ಡಗಳು, ತಮಗೆ ಸೂಕ್ತವೆನಿಸಿದ ಸ್ಥಳದಲ್ಲಿ ತಮಗೆ ಸಾಕು ಎನ್ನುವಷ್ಟು ದಿನಗಳು ಅಲ್ಲಿ ಅವರು ಕಳೆಯುತ್ತಿದ್ದರು. ಬೇರೆ ಯಾರದೇ ಅನ್ಯ ಸಮುದಾಯದವರ ಅಧಿಕಾರ, ಅಪ್ಪಣೆಗಳು ಎಲ್ಲಿಯಾದರೂ ಇರಲು ಬೇಕಾಗಿರಲಿಲ್ಲ. ಅನ್ಯರ ಸಂಪರ್ಕವೂ ವಿರಳವಾಗಿತ್ತು.

ಗೋಸಾಯಿಗಳು ತಮ್ಮ ಶಿಷ್ಯರೊಡನೆ ಅನ್ಯ ಸಮುದಾಯದವರಂತೆ ಊರ ಹೊರಗೆ ಬಂದು ನೆಲೆಸುತ್ತಿದ್ದರು. ಇವರು ಧಾರ್ಮಿಕ ಭಿಕ್ಷುಕರಾಗಿದ್ದು, ಇವರ ಗುಂಪಿನಲ್ಲಿ ಗುರುಗಳು ಹಾಗೂ ಶಿಷ್ಯರ ತಂಡ ಇರುತ್ತಿತ್ತು. ಗುರುಗಳು ಮಠ ಮಂದಿರಗಳಲ್ಲಿ ಕುಳಿತಾಗ ಅವರ ಶಿಷ್ಯರು ತಮ್ಮ ಗುರುಗಳು ಬಂದಿರುವ ವಿಷಯ ಗ್ರಾಮಕ್ಕೆ ತಿಳಿಸಿ ದವಸಧಾನ್ಯಗಳನ್ನು ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಿದ ದವಸಧಾನ್ಯಗಳನ್ನು ಗುರುಗಳು ತಮ್ಮ ಮೂಲ ಸ್ಥಾನಗಳಿಗೆ ಹೊತ್ತು ಶಿಷ್ಯರ ಮತ್ತೊಂದು ಗುಂಪಿಗೆ ಕೊಟ್ಟು ಕಳುಹಿಸುತ್ತಿದ್ದರು.

ಗೋಸಾಯಿ ಶಿಷ್ಯರು ದವಸಧಾನ್ಯಗಳನ್ನು ಹೊತ್ತುಕೊಂಡು ಹೋಗುವಾಗ ಡುಂಗ್ರಿ ಗರಾಸಿಯರ ಕೆಲವರಿಗೆ ಭೇಟಿಯಾದರು. ಇವರು ಮೂಲತಃ ಮಾಂಸಾಹಾರಿಗಳಾಗಿದ್ದರಿಂದ ಇವರು ಹೆಚ್ಚು ದಷ್ಟಪುಷ್ಟವಾಗಿದ್ದರು. ಗೋಸಾಯಿ ಶಿಷ್ಯರು ಇವರಿಗೆ ಅಲ್ಪ ದವಸ ಧಾನ್ಯಗಳನ್ನು ಕೊಟ್ಟು ತಮ್ಮ ಹೊರೆಯನ್ನು ಅವರಿಗೆ ಹೊರಿಸುತ್ತಿದ್ದರು.

ಗೋಸಾಯಿ ಶಿಷ್ಯರು ತಮ್ಮ ಹೊರೆ ಅಥವಾ ದವಸಧಾನ್ಯಗಳನ್ನು ಹೊತ್ತೊಯ್ಯಲು ಇವರು ಯೋಗ್ಯರು ಎಂದು ತಿಳಿದು ಇವರನ್ನು ಬಳಸಿಕೊಳ್ಳಬೇಕೆಂಬ ಆಲೋಚನೆ ಅವರಿಗಾಯಿತು. ಆಗ ಅವರು ಸಮುದಾಯದ ಕೆಲವು ಪುರುಷರನ್ನು ಪುಸಲಾಯಿಸಿ, ನಿಮಗೆ ಬೇಕಾದಷ್ಟು ದವಸಧಾನ್ಯಗಳನ್ನು ಕೊಡುತ್ತೇವೆಂದು ತಮ್ಮೊಟ್ಟಿಗೆ ಕೊಂಡೊಯ್ದು ಅವರಿಗೆ ಒಂದು ಕಾವಿ ಬಟ್ಟೆ ಸುತ್ತಿ, ತಲೆಗೆ ಒಂದು ಬಟ್ಟೆಯನ್ನು ಕಟ್ಟಿ, ಕೊರಳಿಗೆ ಒಂದು ಮಾಲೆಯನ್ನು ಹಾಕಿ ಹಣೆಗೆ ಮೂರು ಪಟ್ಟೆ ವಿಭೂತಿ ಹಚ್ಚಿ ಇವರನ್ನು ತಮ್ಮೊಟ್ಟಿಗೆ ಕೆಲವು ದಿನ ಜೊತೆಗೆ ಕರೆದುಕೊಂಡು ತಿರುಗಿ, ತಮಗೆ ನೀಡಿದ ದವಸಗಳನ್ನು ಇವರಿಗೆ ಹೊರಲು ನೀಡುತ್ತಿದ್ದರು. ಅಂದರೆ ಗೋಸಾಯಿ ಗುರುಗಳು ಶಿಷ್ಯರು ಈ ಸಮುದಾಯದ ಕೆಲವರನ್ನು ತಮ್ಮ ಶಿಷ್ಯರನ್ನಾಗಿ ಬಳಸಿಕೊಳ್ಳುತ್ತಿದ್ದರು. ಮುಂದಿನ ದಿನಗಳಲ್ಲಿ ಇದು ಅತಿಯಾಗಿ ಗೋಸಾಯಿ ಗುರುಗಳು ಒಂದೆಡೆ ತಂಗಲು ತಮ್ಮ ಶಿಷ್ಯರನ್ನು ಗ್ರಾಮದೊಳಗೆ ಕಳುಹಿಸಿದರೆ ಈ ಶಿಷ್ಯರು ಮತ್ತೊಂದು ಕಡೆ ಕುಳಿತು ಸಮುದಾಯದವರನ್ನು ದವಸ ಧಾನ್ಯಗಳ ಶೇಖರಣೆಗೆ ಮನೆ ಮನೆಗಳಿಗೆ ಕಳುಹಿಸುತ್ತಿದ್ದರು. ಆಗ ಇವರಿಗೆ ಹಿಂದೆಂದೂ ಕಾಣದ ಆದರ ಆತಿಥ್ಯಗಳು ದೊರೆತವು ಇವುಗಳನ್ನು ಕಂಡು ಸಮುದಾಯದವರು ದಂಗು ಬಡಿದರು.

ಗೋಸಾಯಿಗಳು ಆ ಪ್ರದೇಶವನ್ನು ಬಿಟ್ಟು ಮತ್ತೊಂದು ಪ್ರದೇಶಕ್ಕೆ ಹೋಗಬೇಕಾದ ಸಮಯ ಬಂದಾಗ, ಅವರ ಶಿಷ್ಯರು ಡುಂಗ್ರಿ ಗರಾಸಿಯ ಸಮುದಾಯದವರಿಗೆ ನೀಡಿದ ಕಾವಿಬಟ್ಟೆ, ಮಾಲೆ, ಜೋಳಿಗೆ, ಗಂಧಗಳನ್ನು ವಾಪಸ್‌ಪಡೆಯಲು ಹೇಸಿಗೆ ಪಟ್ಟರು. ಇವನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳಿ ಹೊರಟರು.

ಸಮುದಾಯದ ಧನ್ಯಾತ್‌ಮುಣಿಯಾಣಿ ಎಂಬ ಹಿರಿಯರು ಇವುಗಳನ್ನು ನಾವೇಕೆ ಉಪಯೋಗಿಸಬಾರದು ಎಂದು ಮನಗಂಡು ಗೋಸಾಯಿ, ಗೋಸಾವಿ ಗುರುಗಳು ಹೆಸರು ಹೇಳಿ ಧಾರ್ಮಿಕ ಭಿಕ್ಷಾಟನೆಗೆ ಮುಂದಾದರು. ದಿನದಿಂದ ದಿನಕ್ಕೆ ಇವರಿಗೆ ಸಾರ್ವಜನಿಕರ ಮಧ್ಯೆ ಹೆಚ್ಚು ಹೆಚ್ಚು ಆದರಾತಿಥ್ಯಗಳು ದೊರೆತವು. ಹೀಗಾಗಿ ಸಮುದಾಯದ ಕೆಲವರು ಗೋಸಾಯಿಗಳೆಂದು ತಮ್ಮ ಬದುಕು ಮುಂದುವರೆಸಲು ಕಾರಣವಾಯಿತು ಎಂದು ಹಿರಿಯ ಮಾಹಿತಿದಾರರಾದ ತಾಂತಿಯೋ ಉಮ್ಮಟ್‌, ಗೋವಿಂದ್ಯೋ ಮಾಂಗ್ಳ್ಯೊ, ದಾದೊ ಖಾಗಳ್‌, ಗೌರಿಬುಡಿ, ವಿಚ್ಚು ಮುಣಿಯಾಣಿ, ಜಲಾಲ್‌ಮುಣಿಯಾಣಿ, ಭುರಿ ಬುಡಿ, ಸೋಜಿರ್‌ಮಾಂಗ್ಳ್ಯೊ, ಭಾಯಿಲೊ ಮಾಂಗ್ಳ್ಯೊ, ಈಶ್ವರಿಯೋ ಉಮ್ಮಟ್‌, ಬಂಧು ಮುಣಿಯಾಣಿ, ಧೋಂಡ್ಯೊ, ವುಮ್ಮಟ್‌, ಸಿರಮಂತ್‌ಮುಣಿಯಾಣಿ, ಸೂರ್ಯೊ ಖಾಗಳ್‌, ಮೊದಲಾದ ಹಿರಿಯರು ಹೇಳುತ್ತಿದ್ದರು ಎಂದು ಮೈಸೂರು ಪ್ರಾಂತ್ಯದ ಸಮುದಾಯದವರು ಹೇಳುತ್ತಾರೆ.

ಹಾಗೆಯೇ ಸಮುದಾಯದಲ್ಲಿ ಗೋಸಾಯಿ/ವಿಗಳ ಪ್ರದೇಶದ ಬಗ್ಗೆ ಬೆಳಗಾವಿ ಪ್ರಾಂತ್ಯದಲ್ಲಿ ಸ್ವಲ್ಪ ಭಿನ್ನವಾಗಿ ಹೇಳುತ್ತಾರೆ. ಕಾಡು ಪ್ರದೇಶದಲ್ಲಿ ವಾಸವಿದ್ದ ಸಮುದಾಯ ತಮ್ಮ ಉಳಿವಿಗಾಗಿ ಬ್ರಿಟಿಷರ ವಿರುದ್ದ ಗೆರಿಲ್ಲಾ ಮಾದರಿಯ ಯುದ್ಧಗಳನ್ನು ಮಾಡುತ್ತಿದ್ದರು. ಇದರಿಂದ ಬ್ರಿಟಿಷರು ಇವರನ್ನು ಕ್ರಿಮಿನಲ್‌ಗಳೆಂದು ಹಣೆಪಟ್ಟಿ ಹಚ್ಚಿ ಬುಡಕಟ್ಟು ಜನರ ವಿರುದ್ಧವಾದ ಅರಣ್ಯ ಕಾಯಿದೆಗಳನ್ನು ಜಾರಿಗೆ ತಂದು ಕಾಡಿನಿಂದ ಒಕ್ಕಲೆಬ್ಬಿಸಿದರು. ಇದರಿಂದ ಸಮುದಾಯವು ತಮ್ಮ ವಾಸದ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಅನ್ಯ ಸಮುದಾಯದವರಿಂದ ಬಹುದೂರದ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದರು. ಆಗ ಒಂದು ದಿನ ಎಲ್ಲಿಗೋ ಬೇರೆಡೆಗೆ ಹೋಗುತ್ತಿದ್ದಾಗ ರಾತ್ರಿಯಾಯಿತು. ದಾರಿಯಲ್ಲಿದ್ದ ಡುಂಗ್ರಿ ಗರಾಸಿಯ ಸಮುದಾಯದ ನೆಲೆಯ ಹತ್ತಿರ ಮೂರು ಜನ ಗೋಸಾಯಿ ಸಾಧುಗಳು ಬಂದರು. ಇವರು ಸಮುದಾಯದ ಪೂರ್ಣ ಪ್ರಮಾಣದ ಮಾಹಿತಿ ಪಡೆದರು. ತೀರಾ ಸಂಕಷ್ಟ ಸ್ಥಿತಿ ಅಂದರೆ ಕೇವಲ ಬೇಟೆಯನ್ನೇ ಅವಲಂಬಿಸಿ ತಮ್ಮ ನಿತ್ಯದ ಬದುಕನ್ನು ಸಾಗಿಸುತ್ತಿದ್ದ ಈ ಸಮುದಾಯದವರನ್ನು ಕಂಡು ಗೋಸಾಯಿ ಸಾಧುಗಳಿಗೆ ಮರುಕ ಉಂಟಾಯಿತು. ಸಮುದಾಯದ ದುಸ್ಥಿತಿಯನ್ನು ಕಂಡು “ನೀವೇಕೆ ಹೀಗೆ ಸಾಯುತ್ತೀರಿ, ನಾವು ಹೇಳಿದ ಹಾಗೆ ಕೇಳಿ” ಎಂದು ತಮ್ಮಲ್ಲಿದ್ದ ಜೋಲಿಗೆ, ಕಾವಿಬಟ್ಟೆ, ಮಾಲೆ, ಭಸ್ಮವನ್ನು ನೀಡಿ ನೀವೇನು ಮಾತಾಡಬೇಡಿ ಸುಮ್ಮನೆ ಊರಿನಲ್ಲಿ ಹೋದರೆ ಸಾಕು ನಿಮಗೆ ದಾನ ಧರ್ಮಗಳು ಸಾಕಷ್ಟು ದೊರೆಯುತ್ತವೆ. ಒಂದು ವೇಳೆ ನಮ್ಮಂತೆಯೇ ಸನ್ಯಾಸಿಗಳು ಅಥವಾ ಸಾಧುಗಳು ಯಾರಾದರೂ ಸಿಕ್ಕಿ ಕೇಳಿದರೆ ನಾವು ಗೋಸಾಯಿಗಳು ಎಂದು ಹೇಳಿ ಎಂಬ ತಿಳುವಳಿಕೆ ಕೊಟ್ಟು ಬೆಳಗಿನ ಜಾವ ಹೊರಟು ಹೋದರಂತೆ.

ಆ ನಂತರದ ದಿನ ಡುಂಗ್ರಿ ಸಮುದಾಯದ ಹಿರಿಯರಾದ ಮುಕ್ಕುಂದ್ಯೊಖಾಗಳ್‌ಸಾಧುಗಳು ಹೇಳಿದಂತೆ ಮಾಡಿದರು. ಆಗ ಅವರು ಹೊರಲಾರದಷ್ಟು ದವಸ ಧಾನ್ಯಗಳನ್ನು ತಂದರು. ಹೀಗೆ ಇವರ ಮಗ ದಾಚ್ಯೋ ಖಾಗಳ್‌ಕೂಡ ಭಿಕ್ಷಾಟನೆಯನ್ನು ಪ್ರಾರಂಭ ಮಾಡಿದರು. ಸಮುದಾಯದಲ್ಲಿ ಇವರನ್ನು ನೋಡಿ ಇತರರು ಸಹ ಈ ಕಸುಬನ್ನು ಪ್ರಾರಂಭಿಸಿದರು. ಅಂದಿನಿಂದಲೇ ತಾವು ಗೋಸಾಯಿಗಳು ಎಂದು ಹೇಳಲು ಆರಂಭಿಸಿದೆವು ಎಂದು ಬೆಳಗಾವಿ ಪ್ರಾಂತ್ಯದ ರಾವ್ಣ್ಯೊ ಖಾಗಳ್‌ಮಾಹಿತಿ ನೀಡುತ್ತಾರೆ.

ಹೀಗೆ ಬೆಟ್ಟ-ಗುಡ್ಡಗಳಲ್ಲಿ ವಾಸ ಮಾಡಿತ್ತಿದ್ದ ಜನ ನಾಡಿನ ಹತ್ತಿರ ಅಂದರೆ ಸ್ವಲ್ಪ ದೂರದಲ್ಲಿ (ಊರಿನ ಹೊರಭಾಗದಲ್ಲಿ ) ವಾಸ ಮಾಡಲು ಪ್ರಾರಂಭವಾಯಿತು. ಈ ಧಾರ್ಮಿಕ ಭಿಕ್ಷಾಟನೆಯನ್ನು ಸಮುದಾಯದ ಹಿರಿಯ ವ್ಯಕ್ತಿಗಳು ಅನುಸರಿಸಿದರೆ, ಯುವಕರು ಬೇಟೆಗಾರಿಕೆಯನ್ನು ಅವಲಂಬಿಸಿದರು. ಆಗ ಆಹಾರಕ್ಕೆ ಬೇಟೆಯ ಮಾಂಸವೂ ಆಯಿತು. ದವಸಧಾನ್ಯವೂ ಆಯಿತು. ಈ ಬೇಟೆಗಾರಿಕೆಯ ಹಾಗೂ ಮಾಂಸಾಹಾರದ ಗುಟ್ಟು ಅನ್ಯ ಸಮುದಾಯದವರಿಗೆ ತಿಳಿಯಬಾರದೆಂದು ಗ್ರಾಮಗಳಿಂದ ಸಾಕಷ್ಟು ದೂರದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆದರೂ ಅನ್ಯ ಸಮುದಾಯದವರು ಕೆರೆ. ಬಾವಿಗಳಲ್ಲಿ ನೀರು ತುಂಬಿಸಲು ಇವರನ್ನು ಬಿಡುತ್ತಿರಲಿಲ್ಲ. ಅಸ್ಪೃಶ್ಯೆರಂತೆ ಈ ಸಮುದಾಯವನ್ನು ಕಾಣಲಾಗುತ್ತಿತ್ತು. ಆದರೆ ಅದೇ ಸಮುದಾಯ ಬೆಳಗಿನ ಜಾವ ಧಾರ್ಮಿಕ ಭಿಕ್ಷಾಟನೆಗೆ ಕಾವಿಯನ್ನು ಹಾಕಿ ಗೋಸಾಯಿ/ಗೋಸಾವಿಗಳಾಗಿ ಹೋದರೆ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು ಮತ್ತು ದಾನ ಧರ್ಮಗಳನ್ನು ಮಾಡುತ್ತಿದ್ದರು.

ಹೀಗೆ ಸಮುದಾಯದಲ್ಲಿ ಧಾರ್ಮಿಕ ಭಿಕ್ಷೆಯು ಪ್ರಾರಂಭವಾಗಿ ಅಸ್ಪೃಶ್ಯತೆಯನ್ನು ತಮ್ಮಿಂದ ಕಳೆಯಲು ಸಮುದಾಯದಲ್ಲಿ ಗೋಸಾಯಿ, ಗೋಸಾವಿ ಪದಗಳು ಬಳಕೆಗೆ ಬಂದವು. ನಂತರದ ದಿನಗಳಲ್ಲಿ ಇನ್ನಷ್ಟು ಅರಣ್ಯ ಕಾನೂನುಗಳು, ಕಾನೂನಾತ್ಮಕ ತೊಡಕುಗಳು ಸಮುದಾಯದ ಬೇಟೆಗಾರಿಕೆಯನ್ನು ಕಡಿಮೆಗೊಳಿಸಲು ಅಥವಾ ಮಿತಿಗೊಳಿಸಲು ಯಶಸ್ವಿಯಾದವು. ಆಗ ಅನ್ಯಮಾರ್ಗವಿಲ್ಲದೆ ಸಮುದಾಯದಲ್ಲಿ ಕೂದಲು ಹೆರಕುವುದನ್ನು (ಸ್ತ್ರೀಯರು ತಲೆ ಬಾಚಿ ಕೋಮಿನಲ್ಲಿ ಬರುವ ಕೂದಲನ್ನು ಉಂಡೆ ಕಟ್ಟಿರುತ್ತಾರೆ) ಪ್ರಾರಂಭ ಮಾಡಿದರು. ಇದು ಇತ್ತೀಚೆಗೆ ೫೦ ವರ್ಷಗಳಲ್ಲಿ ಕಂಡ ಬದಲಾವಣೆಯಾಗಿದೆ. ಆ ನಂತರ ಹೊರ ಸಮುದಾಯದ ಸಂಪರ್ಕ ಅಧಿಕವಾಗಿ ಮೀನು ಬೇಟೆಯಾಡಿ ತಂದ ಮೀನುಗಳನ್ನು ಮಾರುವುದು. ಗಂಧದ ಎಣ್ಣೆಯನ್ನು ಮಾರಾಟ ಮಾಡುವುದು, ಹಲ್ಲು ಕಟ್ಟುವುದು, ಪ್ಲಾಸ್ಟಿಕ್‌ವಸ್ತುಗಳ ರೀಪೇರಿ ಈ ಉದ್ಯೋಗಗಳು ಸಮುದಾಯದಲ್ಲಿ ಬೆಳಕಿಗೆ ಬಂದವು. ಆಗ ಸಮುದಾಯಕ್ಕೆ ಅನ್ಯ ಸಮುದಾಯ ತೀರಾ ಹತ್ತಿರವಾಯಿತು. ಊರಿನ ಪಕ್ಕದಲ್ಲಿ ವಾಸ ಮಾಡಲು ಪ್ರಾರಂಭ ಮಾಡಿದರು.

ಅನ್ಯ ಸಮುದಾಯದ ನಿತ್ಯ ಬದುಕನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭವಾಗಿ ಸಮುದಾಯದ ಪುರುಷರು, ಮದ್ಯ ಕುಡಿಯುವುದು, ಎಲೆಅಡಿಕೆ ಜಗಿಯುವುದು, ಹೊಗೆ ಸೊಪ್ಪು, ಬೀಡಿ ಸೇದುವುದು, ಈ ರೀತಿಯ ಚಟಗಳನ್ನು ಪ್ರಾರಂಭಿಸಿಕೊಂಡರು. ಈ ಚಟಗಳು ಅಧಿಕವಾಗಿ ಬೇರೆ ಗತಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾದಾಗ ಸಮುದಾಯದ ಸ್ತ್ರೀಯರನ್ನು ಭಿಕ್ಷಾಟನೆಗೆ ಹಚ್ಚಿದರು (ಅಲ್ಲಿಯವರೆಗೆ ಸಮುದಾಯದಲ್ಲಿ ಸ್ತ್ರೀಯು ಕೇವಲ ಗೃಹಿಣಿಯಾಗಿ ಮಾತ್ರ ಇದ್ದಳು). ಸಮುದಾಯದಲ್ಲಿ ತರುವಾಯ ಆರ್ಥಿಕತೆಯ ಅವಶ್ಯಕತೆ ಬಹಳವಾಗಿ ಪರಿಣಮಿಸಿತು.

ಸಮುದಾಯದಲ್ಲಿ ಮೊಟ್ಟ ಮೊದಲು ಅಂದರೆ ೩೫ರಿಂದ ೪೦ ವರ್ಷಗಳ ಹಿಂದೆ ಈಗಿನ ದಾವಣಗೆರೆಯ ಪಂಡಿತ್‌ಪಡಿಯಾರ್‌ಎಂಬಾತನು ಗ್ರಾಮವಾಸಿಯಾಗಿದ್ದು ಅನ್ಯ ಸಮುದಾಯದ ಒಬ್ಬನನ್ನು ದತ್ತು ಮಗನಾಗಿ ಪಡೆದಿದ್ದನು. ಈತನ ಹೆಸರು ಶಂಕರ. ಈತನು ಬುದ್ಧಿವಂತನಾಗಿದ್ದು ಅನ್ಯ ಸಮುದಾಯದವನಾದ್ದರಿಂದ ವ್ಯಾವಹಾರಿಕ ಜ್ಞಾನವೂ ಹೆಚ್ಚಾಗಿತ್ತು. ಇವರು ಪ್ಲಾಸ್ಟಿಕ್‌ಚಪ್ಪಲಿಗಳನ್ನು ಸಮುದಾಯದಿಂದ ಖರೀದಿಸಲು ಪ್ರಾರಂಭ ಮಾಡಿದರು. ಇದರಿಂದ ಸಮುದಾಯದಲ್ಲಿ ಪ್ಲಾಸ್ಟಿಕ್‌ಚಪ್ಪಲಿ ಹೆರಕುವ ಕಾರ್ಯ ಆಧಿಕವಾಗಿ ಪಸರಿಸಲು ಸಾಧ್ಯವಾಯಿತು.

ಅನಂತರ ದಿನಗಳಲ್ಲಿ ನಿರುಪಯುಕ್ತ ಪ್ಲಾಸ್ಟಿಕ್‌ಪದಾರ್ಥಗಳು, ಚಿಂದಿ ಪ್ಲಾಸ್ಟಿಕ್‌ಗಳ ಕೊಳ್ಳುವಿಕೆ ಅಧಿಕವಾದಾಗ ಸಮುದಾಯದ ಸ್ತ್ರೀಯರೂ ಕೂಡ ಹೆಗಲಿಗೆ ಖಂದೇಡಿ (ಚಿಂದಿ ಪ್ಲಾಸ್ಟಿಕ್‌ಹೆರಕುವ ದೊಡ್ಡ ಜೋಳಿಗೆ. ಇದನ್ನು ಪ್ಲಾಸ್ಟಿಕ್‌ಚೀಲಗಳಿಂದ ಹೊಲಿಯಲಾಗುತ್ತದೆ) ಹಾಕಿ ಚಿಂದಿ ಆಯುವ ಕಾರ್ಯವನ್ನು ಪ್ರಾರಂಭಗೊಳಿಸಿದ್ದಾರೆ. ಆಗ ಸಮುದಾಯದಲ್ಲಿ ಹೆಚ್ಚು ಹಣ ಕಾಣತೊಡಗಿತು ಹಾಗೂ ಪ್ರತಿಯೊಂದು ಕೈಂಕರ್ಯಗಳು ಗ್ರಾಮಗಳಿಂದಲೇ ಪ್ರಾರಂಭವಾದವು. ಹಾಗೆಯೇ ಬೇಟೆಗಾರಿಕೆಗೂ ತೊಡಕುಗಳುಂಟಾಯಿತು. ಆಗ ಅನಿವಾರ್ಯವಾಗಿ ಸಮುದಾಯವು ಗ್ರಾಮಗಳಿಗೆ ಹೆಚ್ಚು ಅವಲಂಬಿತವಾಯಿತು ಮತ್ತು ತಮ್ಮ ನಿತ್ಯ ಬದುಕನ್ನು ಗ್ರಾಮಗಳ ಪಕ್ಕದಲ್ಲಿ ವಾಸಿಸಿ ಕಳೆಯಲು ಅನುವು ಮಾಡಿಕೊಂಡಿತು.

ಆಗ ಸಾಮಾನ್ಯವಾಗಿಯೇ ಹಾಗೂ ಸುಲಭವಾಗಿಯೇ ಪುರುಷರೊಂದಿಗೆ ಹಲವು ಸ್ತ್ರೀಯರು ಕೂಡ ಕುಡಿತ, ಎಲೆ, ಅಡಿಕೆ, ಹೊಗೆಸೊಪ್ಪು, ಮುಂತಾದ ಚಟಗಳಿಗೆ ಬಲಿಯಾದರು. ಇದರಿಂದ ಸಮುದಾಯದಲ್ಲಿ ಸುಲಭವಾಗಿ ಸಮುದಾಯದ ಸಂಸ್ಕೃತಿ ಪದ್ಧತಿಗಳು ನಶಿಸಲು ಕಾರಣವಾದವು. ಸಮುದಾಯದ ಮೂಲ ಸಂಸ್ಕೃತಿ ಸಾಕಷ್ಟು ಬದಲಾಗಿದ್ದು ಅವುಗಳ ಶೋಧಕಾರ್ಯ ನಡೆಸಬೇಕಾಗಿದೆ.

ಕಾಡು ಪ್ರದೇಶದಲ್ಲಿ ವಾಸವಾಗಿದ್ದ ಸಮುದಾಯ ಅನ್ಯ ಸಮುದಾಯದ ಆಕರ್ಷಣೆಗೆ ಒಳಪಟ್ಟು ಇಂದು ನಾಡಿನಲ್ಲಿ ವಾಸ ಮಾಡುವಂತಹ ಸ್ಥಿತಿ ‘ಕಾಡ್‌ಥಿನ್‌ನಾಡೆ ಆಯಾ’ ಎಂದು ಹೇಳುತ್ತಾರೆ.

ಗುಜರಾತ್‌, ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದ ಇವರು ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಪಸರಿಸಿಕೊಂಡಿದ್ದಾರೆ. ಇಂದಿಗೂ ಮಹಾರಾಷ್ಟ್ರ ರಾಜ್ಯದಲ್ಲಿ ಇವರ ಸಂಖ್ಯೆ ಅಧಿಕವಾಗಿ ಕಾಣಬಹುದಾಗಿದೆ.

ಡುಂಗ್ರಿ ಗರಾಸಿಯ ಸಮುದಾಯದ ಮೂಲ ಈಗಿನ ರಾಜಸ್ಥಾನವಿರಬೇಕು. ಅದಕ್ಕೆ ಸಂಬಂಧಿಸಿದ ಕತೆಯೊಂದು ಇವರಲ್ಲಿ ಪ್ರಚಲಿತವಿದೆ. ರಾಜಸ್ಥಾನದ ಅನಾಥ ಹುಡುಗನೊಬ್ಬ ಲಂಬಾಣಿ ವಿಧವೆಯೊಂದಿಗೆ ವಿವಾಹವಾಗಿ ದೇವಿಯ ಹಾಗೂ ಜಂಗಿಯಾ ಎನ್ನುವ ಗಂಡು ಮಕ್ಕಳು ಹುಟ್ಟಿದರಂತೆ. ಅವರೆ ಈ ಸಮುದಾಯದ ಮೂಲ ವ್ಯಕ್ತಿಗಳು ಎನ್ನುವ ನಂಬಿಕೆಯೊಂದಿದೆ. ಹಾಗೇ ದೇವಿಯ ಹಾಗೂ ಜಂಗಿಯಾ ಎನ್ನುವ ಎರಡು ಹುಡುಗರನ್ನು ಶಿವ ಹಾಗೂ ಪಾರ್ವತಿಯರು ಸೃಷ್ಟಿಸಿ ಭೂಮಿಗೆ ಕಳಿಸಿದರಂತೆ. ಇವರೇ ಈ ಭೂಮಿಗೆ ಒಡೆಯರಾದರಂತೆ. ತರುವಾಯ ವಿವಾಹವಾಗಿ ಹಲವಾರು ಮಕ್ಕಳನ್ನು ಹೆತ್ತರಂತೆ. ಆ ಮಕ್ಕಳೇ ಈ ಸಮುದಾಯದ ಹುಟ್ಟಿಗೆ ಮೂಲಕಾರಣರಾದರು ಎನ್ನುವ ನಂಬಿಕೆಯು ಇವರಲ್ಲಿದೆ. ಒಟ್ಟಾರೆಯಾಗಿ ನೋಡಿದರೆ ಉತ್ತರ ಭಾರತ ಇಲ್ಲವೆ ಮಧ್ಯಭಾರತವು ಈ ಸಮುದಾಯದ ಮೂಲವಾಗಿರಬೇಕು. ಪ್ರಾರಂಭದಲ್ಲಿ ಡುಂಗ್ರಿ ಗರಾಸಿಯ, ಗುಜ್ಜರ್‌, ಮಾರವಾಡಿ, ಲಬಾನೋ ಘಿಸಾಡಿ, ಪಾರ್ಧಿ ಮುಂತಾದ ಸಮುದಾಯಗಳು ಪೂರ್ವದಲ್ಲಿ ಒಂದೇ ಆಗಿದ್ದು ಕಾಲಾಂತರದಲ್ಲಿ ಬೇರೆಯಾಗಿರಬೇಕು. ಇಂದಿಗೂ ಡುಂಗ್ರಿ ಗರಾಸಿಯ ಸಮುದಾಯವು ಇವರನ್ನು ತಮ್ಮ ಸಹೋದರ ಸಮುದಾಯಗಳೆಂದು ತಿಳಿಸುತ್ತಾರೆ.