ಭಾಷೆಯ ಸಾಮಾನ್ಯ ಸ್ವರೂಪವನ್ನು ಸೈದ್ಧಾಂತಿಕವಾಗಿ ಅಧ್ಯಯನ ಮಾಡುವುದನ್ನು ಸಾಮಾನ್ಯ ಭಾಷಾಶಾಸ್ತ್ರ ಎಂದು ಕರೆಯುವರು. ಅದು ಭಾಷೆಯ ರಚನೆಗೆ ಒತ್ತು ಕೊಡುತ್ತದೆ. ಭಾಷೆಯ ಸಾಮಾನ್ಯ ತತ್ವಗಳನ್ನು ಅದರ ಪೂರಕ ಅಧ್ಯಯನ ವಿಷಯಗಳಿಗೆ ಅನ್ವಯಿಸಿ ವಿವೇಚಿಸಿದರೆ ಅದನ್ನು ಆನ್ವಯಿಕ ಭಾಷಾಶಾಸ್ತ್ರ ಎನ್ನುವರು. ಆ ಅನ್ವಯಿಕ ಭಾಷಾಶಾಸ್ತ್ರದ ಕಕ್ಷೆಯಲ್ಲಿ ಮಾನವಭಾಷಾಶಾಸ್ತ್ರ ಸಮಾವೇಶಗೊಳ್ಳುತ್ತದೆ. ಮಾನವ ಸಂಸ್ಕೃತಿ ಅಧ್ಯಯನದಲ್ಲಿ ಭಾಷೆಗೆ ವಿಶೇಷ ಸ್ಥಾನವುಂಟು. ಭಾಷೆ ಸಂಸ್ಕೃತಿಯ ಒಂದು ಭಾಗ. ಅದು ವ್ಯಕ್ತಿ ವ್ಯಕ್ತಿಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಒಂದು ಭಾಷಾ ಸಮುದಾಯದ ಅಧ್ಯಯನ ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾದರೆ ಆ ಸಮುದಾಯದ ಭಾಷೆಯನ್ನು ಅರಿಯಲೇ ಬೇಕಾಗುತ್ತದೆ. ಭಾಷೆಯನ್ನು ಅರಿಯದೆ ಮಾನವ ಸಂಸ್ಕೃತಿಯನ್ನು ಅಧ್ಯಯನ ಮಾಡುವುದು ಕಷ್ಟಕರ. ಆದುದರಿಂದ ಭಾಷೆ, ಸಂಸ್ಕೃತಿಯನ್ನು ಅರಿಯಲು ಅತಿಮುಖ್ಯ ಸಾಧನವಾಗಿದೆ. ಈ ಕಾರಣದಿಂದಲೇ ಮಾನವಶಾಸ್ತ್ರ ವಿಷಯದಲ್ಲಿ ಮಾನವ ಭಾಷಾಶಾಸ್ತ್ರ ಎಂಬ ಶಾಖೆಯ ಉಗಮಕ್ಕೆ ಕಾರಣವಾಯಿತು.

ಮಾನವನು ನಡೆದುಬಂದ ದಾರಿಯಲ್ಲಿ ನೂರಾರು ಸಂಸ್ಕೃತಿಯ ಲಕ್ಷಣಗಳನ್ನು ತೋರ್ಪಡಿಸದಿದ್ದರೂ ಮಾತನಾಡುವ ಮತ್ತು ಉಪಯೋಗಿಸುತ್ತಿದ್ದ ಭಾಷಾ ಸಂಸ್ಕೃತಿಯಲ್ಲಿ ವಿಶಿಷ್ಟ ಲಕ್ಷಣವನ್ನು ತೋರಿಸುತ್ತದೆ. ಮಾನವಶಾಸ್ತ್ರ ವಿಷಯದ ಅತಿ ಮುಖ್ಯವಾದ ಶಾಖೆ ಇದಾಗಿದೆ. ಭಾಷೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ ಇದಾಗಿದೆ.

ಆದಿಮಾನವನು ಭಾಷೆಯನ್ನು ವ್ಯಕ್ತಪಡಿಸಬೇಕಾದರೆ, ಸೂಚನೆ ಸಂಕೇತ ಮತ್ತು ಧ್ವನಿ ಅಥವಾ ನಾದಗಳ ಮುಖಾಂತರ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ತನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತಿದ್ದನು. ಭಾಷಾಶಾಸ್ತ್ರವು ಬರವಣಿಗೆ ಮತ್ತು ಉಚ್ಚರಿಸುವ ವಿಧಾನಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸುತ್ತದೆ. ಆದಿವಾಸಿ ಸಮುದಾಯಗಳ ಭಾಷೆಯನ್ನು ಕುರಿತು ಅಧ್ಯಯನ ಮಾಡುವಾಗ ಮಾನವಶಾಸ್ತ್ರಜ್ಞರು, ಭಾಷಾತಜ್ಞರ ಸಹಾಯಕ್ಕೆ ಮೊರೆಹೋಗಬೇಕಾಗಿತ್ತು. ಏಕೆಂದರೆ, ಭಾಷಾತಜ್ಞರು ಭಾಷೆಯು ಹಂತ ಹಂತವಾಗಿ ವಿಕಾಸ ಹೊಂದಿದ ಬಗೆಗೆ ಹಾಗೂ ಭಾಷೆಗಳ ಬಳಕೆಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಕಂಡುಕೊಂಡಿರುತ್ತಾರೆ.

ಆದಿಕಾಲದಲ್ಲಿ ಮಾನವನು ಗೊತ್ತು ಗುರಿಯಿಲ್ಲದೆ ಅಲೆಮಾರಿಯಾಗಿ ಬದುಕುತ್ತಿದ್ದ ಕಾಲವೊಂದಿತ್ತು. ಮನುಷ್ಯ ಅಲೆಯುತ್ತಿದ್ದಾಗ ವನ್ಯಪ್ರಾಣಿಗಳಿಂದ, ಕಾಯಿಲೆಗಳಿಂದ ನೈಸರ್ಗಿಕ ವಿಪತ್ತುಗಳಿಂದ ಅನೇಕ ಬಾರಿ ಅಪಾಯಗಳು ಒದಗುತ್ತಿದ್ದವು. ಆ ವಿಪತ್ತು ಕೋಟಲೆಗಳನ್ನು ಎದುರಿಸಲಾಗದ ಸಂದರ್ಭದಲ್ಲಿ ಅವುಗಳ ನಿವಾರಣೆಗೆ ಅಗೋಚರ ಶಕ್ತಿಯನ್ನು ಮನುಷ್ಯ ಆಶ್ರಯಿಸಿದ್ದು ಸಹಜವಿದೆ. ವಾಸ್ತವವಾಗಿ ಇಲ್ಲಿ ಕಂಡುಬರುವ ಪ್ರಧಾನ ಅಂಶವೆಂದರೆ ಮಾನವ ಅಂದು ಅಗೋಚರ ಶಕ್ತಿಗಳ ಮೇಲಿಟ್ಟ ನಂಬಿಕೆಗಳು ಗಾಢವಾಗಿ ಬೆಳೆದುಬಂದವು. ಮನುಷ್ಯ ತನ್ನನ್ನು ಹಾಗೂ ತನ್ನ ಪರಿಸರವನ್ನು ರಕ್ಷಿಸಲು ದೇವರ ಕಲ್ಪನೆಯನ್ನು ಮಾಡಿಕೊಂಡ. ಹಾಗೆ ಮಾಡಿಕೊಂಡ ದೈವಗಳೇ ದೇವತೆಗಳೆನಿಸಿದವು. ಅವುಗಳ ಮೂಲಕ ತನ್ನ ಆಶೆ, ಆಕಾಂಕ್ಷೆಗಳನ್ನು ಈಡೇರಿಸಿಕೊಂಡು ಒಂದೆಡೆ ನೆಲೆ ನಿಂತು ನೆಮ್ಮದಿಯಿಂದ ಬದುಕಲು ಪ್ರಯತ್ನಿಸಿದ. ಇದು ಮನುಕುಲ ಚರಿತ್ರೆಯ ಮಹತ್ವದ ಘಟ್ಟವಾಗಿದೆ.

ಆದಿವಾಸಿಗಳು (ಗಿರಿಜನರು) ಪ್ರಧಾನವಾಗಿ ಅಲೆಮಾರಿಗಳು. ತಮಗೂ ತಮ್ಮ ಪರಿವಾರದವರಿಗೂ ಸಾಕು ಪ್ರಾಣಿಗಳೂ ಆಹಾರ ನೀರನ್ನು ಅರಸುತ್ತ ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಹೋಗುವರು. ಇವರು ಗುಂಪು ಅಥವಾ ಪಂಗಡಗಳಲ್ಲಿ ವಾಸ ಮಾಡುತ್ತಾರೆ. ಹೊಟ್ಟೆ ಪಾಡಿಗಾಗಿ ಗಡ್ಡೆ ಗೆಣಸುಗಳನ್ನೂ ಪ್ರಾಣಿ ಬೇಟೆಯನ್ನೂ ನಂಬಿರುವವರು. ಕಾಲ ಉರುಳಿದಂತೆ ಪಶುಪಾಲನೆಯನ್ನೂ ಬೇಸಾಯವನ್ನೂ ಇನ್ನಿತರ ಗೃಹಕೈಗಾರಿಕೆಗಳನ್ನು ಕಲಿತು ತಮಗೆ ಯುಕ್ತವೆನಿಸಿದ ಪ್ರದೇಶಗಳಲ್ಲಿ ನೆಲೆಸಿದರು. ಪರದೇಶಗಳಿಂದ ಬಂದ ಜನ ಸ್ಥಳೀಯ ಆದಿವಾಸಿಗಳೊಂದಿಗೆ ಹೋರಾಡಿ, ಅವರಲ್ಲಿ ಅನೇಕರನ್ನು ಕೊಂದರು. ಅಳಿದುಳಿದ ಆದಿವಾಸಿಗಳು ಜೀವಭಯದಿಂದ ಕಾಡುಮೇಡುಗಳಲ್ಲಿ ಅಡಗಿದರು. ವಲಸೆ ಬಂದವರಿಗಿಂತ ಸ್ಥಳೀಯ ವರ್ಗ ಬಲವಾಗಿದ್ದ ಕಡೆಗಳಲ್ಲಿ ಪರಸ್ಪರ ಘರ್ಷಣೆ ಬಹುಕಾಲ ನಡೆಯಿತು. ಸೋತ ಮಂದಿ ನಾಡಿನ ಬೇರೆ ಬೇರೆ ಕಡೆಗೆ ಹೋಗಿ ನೆಲೆಸಿದರು. ಯುರೋಪಿಯನ್ನರು ಹೋದ ಕಡೆಗಳಲ್ಲೆಲ್ಲಾ ಸ್ಥಳೀಯ ಆದಿವಾಸಿಗಳನ್ನು ತಮ್ಮಲ್ಲಿದ್ದ ಆಧುನಿಕ ಶಸ್ತ್ರಾಸ್ತ್ರಗಳಿಂದ ಸದೆಬಡಿದಿದ್ದಾರೆ. ಬಲ ಪ್ರಯೋಗಿಸಿ ಗುಲಾಮರನ್ನಾಗಿಸಿದ್ದಾರೆ. ಹಲವಾರು ರೀತಿಗಳಲ್ಲಿ ಸುಲಿದಿದ್ದಾರೆ. ಮಾನವಕುಲ ಶಾಸ್ತ್ರಜ್ಞರು ವಿವರಿಸುವಂತೆ ಆದಿವಾಸಿ ಎಂಬ ಪದ, ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಗುರುತಿಸಬಹುದಾದ ಬುಡಕಟ್ಟು (Tribe) ಜನವರ್ಗವನ್ನು ನಿರ್ದೇಶಿಸುತ್ತದೆ.

ಮಾನವ ತನ್ನ ಭಾವನೆಗಳನ್ನು ಭಾಷೆಯ ಮೂಲಕ ಹಂಚಿಕೊಳ್ಳುತ್ತಾನೆ. ಒಂದು ಸಾಮಾಜಿಕ ಸಂಬಂಧವನ್ನು ನಿಶ್ಚಿತಗೊಳಿಸಿಕೊಳ್ಳಲು ಮಾತು ಬೆಳೆಸುತ್ತಾನೆ. ಮನಸ್ಸಿನ ವಿವಿಧ ಅವಸ್ಥೆಗಳು, ವ್ಯಕ್ತಿ ವಾಸಿಸುವ ಪ್ರದೇಶ, ವ್ಯಕ್ತಿ ಮಾತನಾಡುವ ಸಂದರ್ಭ, ವ್ಯಕ್ತಿಯ ಎತ್ತರ, ಬಣ್ಣ, ತೂಕ ಮುಂತಾದ ದೈಹಿಕ ವಿವರಗಳು ತಾಳ್ಮೆ, ಕೋಪ ಮುಂತಾದ ಮಾನಸಿಕ ಚಟುವಟಿಕೆಗಳು ಇವು ಭಾಷೆಯ ಸಾಮಾಜಿಕ ಚಹರೆಗಳೆಂದು ಗುರುತಿಸುತ್ತೇವೆ. ಲಿಂಗ (ಗಂಡು ಮತ್ತು ಹೆಣ್ಣು), ವಯಸ್ಸು ಇವುಗಳನ್ನು ಜನಾಂಗದೊಡನೆ ಜೋಡಿಸುವ ಪ್ರವೃತ್ತಿ ಬೆಳೆದಿದೆ. ಈ ಎಲ್ಲ ಅಂಶಗಳು ಒಂದು ಸಮುದಾಯದ ಸ್ವರೂಪವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮಾನವ ಭಾಷಾಶಾಸ್ತ್ರದಲ್ಲಿ ಮಾನವನಿಗೂ ಭಾಷೆಗೂ ಇರುವ ಸಂಬಂಧವನ್ನು ವೈಜ್ಞಾನಿಕವಾಗಿ, ಪ್ರಾಯೋಗಿಕವಾಗಿ ವಿವೇಚಿಸಲಾಗುತ್ತದೆ. ಮಾನವನ ಹುಟ್ಟು, ಬೆಳವಣಿಗೆ, ಅವನ ಸಮಾಜ ಮತ್ತು ಸಂಸ್ಕೃತಿಗಳ ವಿಕಾಸ, ಭಾಷೆಯೊಡನೆ ಅವುಗಳಿಗಿರುವ ಸಂಬಂಧ ಮುಂತಾದವುಗಳನ್ನು ಇದು ಪರಿಶೀಲಿಸುತ್ತದೆ. ಭಾಷೆ, ಮಾನವಸೃಷ್ಟಿ, ಅದೊಂದು ಸಾಮಾಜಿಕ ಕ್ರಿಯೆ ಎಂದ ಮೇಲೆ ಭಾಷೆಗೂ ಮನುಷ್ಯನಿಗೂ ಸಮಾಜಕ್ಕೂ ಆಂತರಿಕವಾಗಿ ಸಾಕಷ್ಟು ಸಂಬಂಧವಿರಲೇಬೇಕು. ಭಾಷೆ, ಮಾನವರ ನಡುವೆ ಪರಸ್ಪರ ಭಾವನೆಗಳ ವಿನಿಮಯ ಕಾರ್ಯ ನಡೆಯುತ್ತದೆ. ಆದ ಕಾರಣ ವ್ಯಕ್ತಿ, ಸಮಾಜ, ಸಂಸ್ಕೃತಿಗಳಿಗೆ ಭಾಷೆಯೊಡನೆ ನೇರವಾದ ಸಂಬಂಧವಿದೆ ಎಂದು ಭಾವಿಸಿಕೊಳ್ಳಬಹುದು. ಸಮಾಜದಲ್ಲಿ ಸಂಸ್ಕೃತಿಯನ್ನು ಅರಳಿಸುವ ಅಂಶ ಭಾಷೆ. ಮಾನವನಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಮಾನವಶಾಸ್ತ್ರ ಒದಗಿಸುತ್ತದೆ. ಹಾಗೆಯೇ ಮಾನವನಿಗೂ ಭಾಷೆಗೂ ಇರುವ ಸಂಬಂಧವನ್ನು ಮಾನವ ಭಾಷಾಶಾಸ್ತ್ರವು ತಿಳಿಸುತ್ತದೆ. ಇದು ವ್ಯಕ್ತಿ, ಸಂಸ್ಕೃತಿ, ಸಮಾಜ, ಭಾಷೆ ಇವುಗಳಿಗಿರುವ ಆಂತರಿಕ ಸಂಬಂಧವನ್ನು ತಿಳಿಯಲು ಸಹಾಯ ಮಾಡುತ್ತದೆ.

ಮಾನವ ಸಮಾಜಜೀವಿ. ಅವನು ಆಡುವ ಭಾಷೆಯ ರೀತಿನೀತಿಗಳನ್ನು ಅಧ್ಯಯನ ಮಾಡಲು ಆ ಸಮಾಜದ ವ್ಯಕ್ತಿಯಿಂದಲೇ ಅದಕ್ಕೆ ಸಹಾಯಕವಾಗುವ ಸಾಮಗ್ರಿ ಸಂಗ್ರಹಿಸಬೇಕಾಗುತ್ತದೆ. ಹಾಗೆ ಸಂಗ್ರಹಿಸಿಕೊಂಡ ಸಾಮಗ್ರಿಯ ಸಹಾಯದಿಂದ ಮಾನವನ ಭಾಷೆ ಅದರ ಬೆಳವಣಿಗೆ ಅದರ ಸುತ್ತಮುತ್ತಲಿನ ಪರಿಸರ ಹಾಗೂ ಪರಿಸ್ಥಿತಿ ಮುಂತಾದವುಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಾನವಭಾಷಾಶಾಸ್ತ್ರದಲ್ಲಿ ವಿವೇಚಿಸಬಹುದು. ಜನಾಂಗ, ಜಾತಿ, ಧರ್ಮ, ಕಸುಬು, ಸಮಾಜ, ಸಂಸ್ಕೃತಿ, ಆಚಾರ, ಜನಜೀವನ, ಭಾಷೆ ಇವುಗಳಲ್ಲಿ ಭಾಷೆಗಿರುವ ಸಂಬಂಧವನ್ನು ಅದರಲ್ಲಿ ವಿವೇಚಿಸಲು ಸಾಧ್ಯವಿದೆ. ಅದರಿಂದ ಆಧುನಿಕ ಭಾಷಾಶಾಸ್ತ್ರದ ವಿಕಾಸಕ್ಕೆ ಹೊಸ ತಿರುವು ಪ್ರಾಪ್ತವಾಗುತ್ತದೆ.

ಭಾಷೆಯು ಸಂಸ್ಕೃತಿಯ ಮುಖ್ಯ ಭಾಗ. ಮಾನವನ ಬಹುತೇಕ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಬಿಂದು ಭಾಷೆ. ಭಾಷೆಯ ಮೂಲಕವೇ ಸಂಸ್ಕೃತಿ ಸಂವಹನ ಕಾರ್ಯ ನಡೆಯುವುದು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಭಾಷೆ ಸಾಗಿಬರುವಂತೆ ಸಂಸ್ಕೃತಿಯು ಸಾಗಿಬರುತ್ತದೆ. ಏಕೆಂದರೆ ಭಾಷೆ, ಸಂಸ್ಕೃತಿಯನ್ನು ಹೊಂದಿಕೊಂಡೇ ಸಾಗುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೆ ಭಾಷೆ ಸಹಾಯಕ. ಭಾಷೆಯ ಅಧ್ಯಯನದಿಂದ ಅದನ್ನಾಡುವ ಜನರ ಜನಪದ ಸಂಸ್ಕೃತಿಯನ್ನು ಅರಿಯಬಹುದು. ಭಾಷೆ ಪ್ರಧಾನವಾಗಿ ಒಂದು ಸಾಮಾಜಿಕ ಚಟುವಟಿಕೆ. ನಾವಾಡುವ ನುಡಿ ನಮ್ಮ ಸಾಮಾಜಿಕ ಅಂತಸ್ತನ್ನೂ ಸಾಂಸ್ಕೃತಿಕ ಹಿನ್ನೆಲೆಯನ್ನೂ ಬಿಂಬಿಸುತ್ತದೆ. ಮಾನವನ ವಿಚಾರಧಾರೆ (ವಿವೇಚನೆ, ಆಲೋಚನೆ ಭಾವನೆ), ಅವನು ಮಾತಾಡುವ ಭಾಷೆಯಿಂದ ನಿಯಂತ್ರಿಸಲ್ಪಡುವ ಸಾಧ್ಯತೆ ಇದೆ.

ನಿರ್ದಿಷ್ಟ ಸಂಸ್ಕೃತಿಯೊಂದರ ಅಧ್ಯಯನ ನಡೆಸಬೇಕೆಂದಿರುವ ಮಾನವಶಾಸ್ತ್ರಜ್ಞನಿಗೆ ಸಮಾಜದ ವ್ಯಕ್ತಿ ತಾನು ಗ್ರಹಿಸಿದ ವಿಚಾರವನ್ನು ಯಾವ ರೀತಿಯಲ್ಲಿ ಅಭಿವ್ಯಕ್ತಿಸುತ್ತಾನೆ ಎಂಬ ವಿಚಾರ ಮುಖ್ಯ. ಸಾಮಾಜಿಕ ಸನ್ನಿವೇಶಗಳಿಗೆ ಅನುಗುಣವಾಗಿ ವ್ಯಕ್ತಿಯ ಅಭಿವ್ಯಕ್ತಿ ಮತ್ತು ಪ್ರತಿಕ್ರಿಯೆ ಬದಲಾಗುತ್ತದೆ. ಅವನ ಜನಪದ ಆವರಣಕ್ಕೆ ತಕ್ಕಂತೆ ಪದಗಳು ಸೃಷ್ಟಿಗೊಂಡು ಬಳಕೆಯಾಗುತ್ತವೆ. ಉದಾಹರಣೆಗೆ ‘ಹೋಪಿ’ ಎಂಬ ಅಮೆರಿಕಾ ಬುಡಕಟ್ಟಿನ ಜನರು ಮಳೆಗಾಗಿ ಪ್ರಾರ್ಥಿಸುವಾಗ, ಮೋಡಗಳನ್ನು ನಿರ್ದೇಶಿಸುವಾಗ ಯಾವಾಗಲೂ ಸಚೇತನ ಬಹುವಚನವನ್ನೇ ಬಳಸುವರು. ಈ ಬಗ್ಗೆ ಕುತೂಹಲ ಕಳೆದ ವುರ್ಫ್‌, ಹೋಪಿ ಜನ ಬಳಸುವ ಸಚೇತನ ಬಹುವಚನವು ರೂಪಕವೋ ಅಥವ ಅವರು ಮೋಡಗಳ ಬಗ್ಗೆ ಹೊಂದಿರುವ ಭಾವನೆಯನ್ನು ಪ್ರತಿನಿಧಿಸುವುದೋ ಎಂಬುದನ್ನು ತಿಳಿಯಲು, ಹೋಪಿ ಭಾಷೆಯ ಲಿಂಗ ವ್ಯವಸ್ಥೆಯಲ್ಲಿ ಸಚೇತನ ಮತ್ತು ಅಚೇತನ ರೂಪುವುಂಟೇ ಎಂದು ಪರಿಶೀಲಿಸಿದ. ಮೊದಲು ಅವನು ಕಂಡುಕೊಂಡ ವಿಚಾರವೆಂದರೆ, ಹೋಪಿ ಭಾಷೆಯ ವ್ಯಾಕರಣದಲ್ಲಿ ಲಿಂಗವ್ಯವಸ್ಥೆ ಇಲ್ಲದಿರುವುದು! ಎರಡನೆಯದಾಗಿ ಮೋಡಗಳನ್ನು ನಿರ್ದೇಶಿಸಲು ಹೋಪಿ ಜನ ಸಚೇತನ ಬಹುವಚನ ನಾಮಪದಗಳನ್ನು ಮಾತ್ರ ಬಳಸುತ್ತಾರೆ ಎಂಬುದು. ಹೋಪಿಗಳು ನಾಮಪದಗಳನ್ನೇ ಏಕೆ ಬಳಸುತ್ತಾರೆ ಎಂಬುದು ಮುಖ್ಯ ಪ್ರಶ್ನೆ. ಪ್ರಕೃತಿ ಬಗೆಗೆ ಹೋಪಿಗಳು ತಳೆದಿರುವ ಜನಪದ ನಂಬಿಕೆ ಮತ್ತು ಆಚರಣೆಗಳೇ ಕಾರಣವಿರಬಹುದು ಎಂದು ವುರ್ಫ್‌ಊಹಿಸಿದ್ದಾನೆ. ವ್ಯಕ್ತಿಯ ಮಾತು ಸಾಮಾಜಿಕ ಸಂದರ್ಭಗಳಿಗೆ ತಕ್ಕಂತೆ ಬೇರೆ ಬೇರೆ ಅರ್ಥಗಳನ್ನು ಏಕೆ ಪಡೆಯುತ್ತದೆ? ವ್ಯಕ್ತಿಯ ಪ್ರಾಪಂಚಿಕ ಜ್ಞಾನವನ್ನು ಬಿಂಬಿಸುವುದರಲ್ಲಿ ಭಾಷಿಕ ಅಂಶಗಳು ಎಷ್ಟರಮಟ್ಟಿಗೆ ಸಹಾಯಕವಾಗಿವೆ? ಈ ಎಲ್ಲ ಪ್ರಶ್ನೆಗಳು ಮಾನವ ಕುಲಭಾಷಿಕ ಅರ್ಥವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂಥವು.

ಸಾಮಾಜಿಕ ಸನ್ನಿವೇಶಗಳಲ್ಲಿ ವ್ಯಕ್ತಿಯ ಆಡುನುಡಿಯ ಬಳಕೆಯ ಸಾಮಾಜಿಕ ಆಯಾಮದ ಕಡೆಗೂ ಮಾನವಶಾಸ್ತ್ರಜ್ಞರು ಗಮನ ಹರಿಸುತ್ತಾರೆ. ಒಬ್ಬ ವ್ಯಕ್ತಿ ‘ಅಪರಿಚಿತನೊಬ್ಬನನ್ನು ಸಂಧಿಸಿದಾಗ ಅವನು ಯಾವ ಯಾವ ವಸ್ತು ವಿಷಯಗಳನ್ನು ಕುರಿತು ಯಾವ ರೀತಿ ಸಂಭಾಷಣೆ ನಡೆಸುತ್ತಾನೆ? ಪರಸ್ಪರ ಭೇಟಿಯಾದಾಗ, ಒಬ್ಬರನ್ನು ಪರಿಚಯಿಸುವಾಗ ಅಥವಾ ಸ್ವಾಗತಿಸುವಾಗ ವ್ಯಕ್ತಿ ಯಾವ ಬಗೆಯ ಪದಗಳನ್ನು, ವಿಶೇಷಣಗಳನ್ನು ಬಳಸುತ್ತಾರೆ? ಮುಂತಾದ ಕುತೂಹಲಕರ ಪ್ರಶ್ನೆಗಳಿಗೆ ಸಾಂಸ್ಕೃತಿಕ ಮಾನವತಜ್ಞರು,ಉತ್ತರವನ್ನು ಹುಡುಕಬೇಕಾಗುತ್ತದೆ. ಉದಾಹರಣೆಗೆ: ವ್ಯಕ್ತಿಯೊಬ್ಬರನ್ನು ಸಂಬೋಧಿಸಲು ನಾವು ಶ್ರೀ, ಶ್ರೀಮತಿ, ಕುಮಾರಿ, ಡಾ., ಪ್ರೊ., ಚಿ., ಚಿ. ಸೌ. ಮುಂತಾದ ಪದ ಅಥವಾ ಚಿಹ್ನೆಗಳನ್ನು ಬಳಸುತ್ತೇವೆ. ವ್ಯಕ್ತಿಗಳ ಸಂಬೋಧನ ರೀತಿಗಳನ್ನು ಕುರಿತು ಅಧ್ಯಯನ ನಡೆಸಿರುವ ರೋಜರ್‌ಬ್ರೌನ್‌ಮತ್ತು ಮಾರ್ಗರೈಟ್‌ಪೋರ್ಡ್‌ಅವರು ಕೊಡುವ ಕಾರಣವಿದು: ಜನರಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಸಂಬೋಧನೆಗಳು ವ್ಯಕ್ತಿಯೊಡನೆ ನಾವು ಹೊಂದಿರುವ ಸಾಮಾಜಿಕ ಸಂಬಂಧದ ಸ್ವರೂಪಕಕ್ಕೆ ಅನುಗುಣವಾಗಿ ಬದಲಾಗುತ್ತವೆ’.

ಕೆಲವು ಸಮಾಜಗಳಲ್ಲಿ ಸಂಬೋಧನ ರೀತಿಗಳು ವ್ಯಕ್ತಿಯ ಸ್ಥಾನಮಾನವನ್ನು ಸೂಚಿಸುತ್ತವೆ. ಸೂಡಾನಿನ ನ್ಯೂಯರ್‌ಎಂಬ ಬುಡಕಟ್ಟು ಜನರಲ್ಲಿ ತಮ್ಮ ಪಂಗಡಕ್ಕೆ ಸೇರಿದ ವ್ಯಕ್ತಿಗೆ, ಬೇರೆ ಬೇರೆ ಹೆಸರುಗಳನ್ನು ಇಡುವುದರ ಮೂಲಕ ವ್ಯಕ್ತಿಗಳ ಲಿಂಗಬೇಧ, ವಯಸ್ಸು ಮತ್ತು ಯಾವ ಗುಂಪಿಗೆ ಸೇರಿದವರು. ಎಂಬೆಲ್ಲ ವಿಷಯವನ್ನು ಸ್ಪಷ್ಟವಾಗಿ ತಿಳಿಯುತ್ತಾರೆ. ಉದಾಹರಣೆಗೆ ನ್ಯೂಯರ್‌ಕುಟುಂಬದಲ್ಲಿ ಗಂಡು ಮಗು ಹುಟ್ಟಿದ ಬಳಿಕ, ಆ ಮಗುವಿಗೆ ತಂದೆ ಕಡೆಯ ಸಂಬಂಧಿಗಳು ಮತ್ತು ಅವರ ಆಪ್ತ ಸ್ನೇಹಿತರು ಮಗುವಿಗೆ ತಾವಿಟ್ಟ ಹೆಸರನ್ನೇ ಬಳಸುವರು. ಮಗು ದೊಡ್ಡವನಾದಾಗ, ಅವನ ಧಾರ್ಮಿಕ ದೀಕ್ಷೆಯ ಸಮಾರಂಭ ನಡೆಸುವರು. ಆ ಸಂದರ್ಭದಲ್ಲಿ ಅವನಿಗೆ ಒಂದು ಎತ್ತನ್ನು (ಎತ್ತಿಗೂ ಹೆಸರಿರುತ್ತದೆ) ಬಳುವಳಿಯಾಗಿ ನೀಡುವರು. ಇದರಿಂದಾಗಿ ಅವನು ಆ ಎತ್ತಿನ ಹೆಸರನ್ನೂ ಪಡೆಯುತ್ತಾನೆ. ಮುಂದೆ ಅವನಿಗೆ ಆ ಎತ್ತಿನ ಹೆಸರೇ ಹೆಸರಾಗಿ ಉಳಿಯುತ್ತದೆ! ಅಂತೆಯೇ ಒಬ್ಬ ಹುಡುಗಿ ತಾನು ಹಾಲು ಕರೆಯುವ ಹಸುವಿನ ಕರುವಿಗೆ (ಗಂಡುಕರು) ಇಟ್ಟಿರುವ ಹೆಸರನ್ನು ಇಟ್ಟುಕೊಳ್ಳಬಹುದು. ಆದರೆ ಆ ಹೆಸರನ್ನು ಆಕೆಯ ಸ್ನೇಹಿತರು ಮಾತ್ರ ಬಳಸುವರು. ಕೆಲವೊಮ್ಮೆ ವ್ಯಕ್ತಿ ನೃತ್ಯ ಮಾಡುವಾಗ, ಗೆಳೆಯ ಗೆಳತಿಯರೊಡನೆ ಸಹನರ್ತನ ಮಾಡುವಾಗ, ಸ್ನೇಹದ ಸಲುಗೆಯಿಂದ ಅವರು ತಮ್ಮ ಸ್ನೇಹಿತರ ಎತ್ತಿನ ಹೆಸರುಗಳನ್ನೇ ಅಲ್ಲದೆ ಗುಪ್ತವಾಗಿ ತಾವಿಟ್ಟಿರುವ ಹೆಸರುಗಳಿಂದಲೂ ಕೂಗಿ ಕರೆದು ಸಂತೋಷಪಡುವರು.

ಕೆಲವು ಬುಡಕಟ್ಟು ಭಾಷೆಗಳ ಪದಸಮೂಹಗಳು ವ್ಯಕ್ತಿಯ ಸಾಮಾಜಿಕ ಸ್ಥಾನಮಾನವನ್ನು ಸೂಚಿಸುತ್ತವೆ. ಉದಾಹರಣೆಗೆ ಜಾವಾ ಜನ (ಮುಖ್ಯವಾಗಿ ರೈತರು, ನಗರವಾಸಿಗಳು ಮತ್ತು ಶ್ರೀಮಂತ ಪ್ರಭು ವರ್ಗಗಳು) ಬಳಸುವ ಪದಸಮೂಹಗಳು, ಅವರವರ ಸಾಮಾಜಿಕ ಸ್ಥಾನಮಾನಗಳನ್ನು ಸೂಚಿಸುತ್ತವೆ ಎಂಬ ವಿಚಾರವನ್ನು ಕ್ಲಿಫೋರ್ಡ್‌ಗೀರ್ಟ್ಜ್‌ಎಂಬ ವಿದ್ವಾಂಸ ತೋರಿಸಿಕೊಟ್ಟಿದ್ದಾನೆ. ‘ಈಗ’ (Now) ಎಂಬ ಪದವನ್ನು ರೈತ ಸೈಕಿ (Saiki-ಕೆಳದರ್ಜೆಯ ಒರಟು ರೂಪ) ಎಂದು ನಗರವಾಸಿ ಸನಿಕಿ (Saniki-ಸುಸಂಸ್ಕೃತ ಪದ) ಎಂದೂ ಶ್ರೀಮಂತ ಪ್ರಭುವರ್ಗ ಸಮೆನಿಕ (Samenika-ಹೆಚ್ಚು ಸುಸಂಸ್ಕೃತ ಪದ) ಎಂಬುದಾಗಿ ಬಳಸುವರು. ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ಪದ ಬಳಕೆಯಲ್ಲಿ ಅರ್ಥವ್ಯತ್ಯಾಸಗಳಾಗುತ್ತವೆ.

ಲಿಂಗಭೇದದ ಆಧಾರದಿಂದ ವಾಕ್‌ಶೈಲಿಯಲ್ಲಿ ವ್ಯತ್ಯಾಸಗಳನ್ನು ಪಡೆದಿರುವ ಬುಡಕಟ್ಟು ಭಾಷೆಗಳು ಹಲವಾರಿವೆ. ಕೆನಡಾ, ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ವಾಸಿಸುವ ಕೆಲವು ಅಮೆರಿಕನ್‌ಇಂಡಿಯನ್‌ಸಮಾಜಗಳಲ್ಲೂ ಥೈಲೆಂಡ್‌ಮತ್ತು ಸೈಬೀರಿಯಾಗಳಲ್ಲಿ ವಾಸಿಸುವ ಕೆಲವು ಸಮಾಜಗಳಲ್ಲೂ ಇಂಥ ಭಾಷೆಗಳನ್ನು ಕಾಣಬಹುದು. ಮೇರಿ ಹಾಸ್‌ಎಂಬಾಕೆ ಲೂಸಿಯಾನದ ನೈರುತ್ಯ ಭಾಗದಲ್ಲಿ ಬಳಕೆಯಲ್ಲಿರುವ ಕೊಸತಿ ಭಾಷೆಯನ್ನಾಡುವ ಗಂಡು ಮತ್ತು ಹೆಣ್ಣಿನ ಆಡುನುಡಿಗಳನ್ನು ಭಾಷಿಕವಾಗಿ ವಿಶ್ಲೇಷಿಸಿ, ಆ ಭಾಷೆಯ ಅನೇಕ ಕುತೂಹಲಕಾರಿ ವ್ಯಾಕರಣಾಂಶಗಳನ್ನು ಪ್ರಕಟಪಡಿಸಿದ್ದಾರೆ. ಕೊಸತಿ ಭಾಷೆಯ ಕೆಲವು ನಿರ್ದೇಶಾರ್ಥಕ ಮತ್ತು ಆಜ್ಞಾರ್ಥಕ ಕ್ರಿಯಾಪದ ರೂಪಗಳಲ್ಲಿ ಗಮನಾರ್ಹ ವ್ಯತ್ಯಾಸವಿರುವುದನ್ನು ಹಾಸ್‌ಗಮನಿಸಿದ್ದಾರೆ. ಅವರ ಕ್ಷೇತ್ರಕಾರ್ಯದಲ್ಲಿ ನೆರವಾದ ಭಾಷಾನಿವೇದಕನೊಬ್ಬ ‘ಕೊಸತಿ ಭಾಷೆಯನ್ನಾಡುವ ಹೆಣ್ಣಿನ ಆಡುನುಡಿಯ ಕೆಲವು ಮುಖ್ಯ ಲಕ್ಷಣಗಳನ್ನು ಹೇಳಿದ್ದಾನೆ. ಕೊಸತಿ ಭಾಷೆಯಲ್ಲಿ ಗಂಡಿಗೆ ಮತ್ತು ಹೆಣ್ಣಿಗೆ ಪ್ರತ್ಯೇಕ ಪದ ಸಮೂಹಗಳಿವೆ. ಭಾಷಾ ಬಳಕೆಯಲ್ಲಿ ಲಿಂಗ ಭೇದವಿದೆ’.

ಲಿಂಗಭೇದಕ್ಕನುಗುಣವಾಗಿ ಕಂಡುಬರುವ ಭಾಷಿಕ ವ್ಯತ್ಯಾಸಗಳಿಗಿಂತಲೂ ಹಚ್ಚು ವ್ಯತ್ಯಾಸಗಳು ವ್ಯಕ್ತಿಯ ವಯೋಮಾನಕ್ಕೆ ಅನುಗುಣವಾಗಿ ಕಂಡುಬರುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಬಾಲಭಾಷೆ. ತಾಯಿ ತನ್ನ ಮಗುವಿನೊಡನೆ ಸಂಭಾಷಿಸುವ ರೀತಿ ನಮಗೆಲ್ಲ ತಿಳಿದೇ ಇದೆ. ಕೊಮ್ಯಾಂಚೆ ಇಂಡಿಯನ್ನರ ಮಕ್ಕಳಾಡುವ ಭಾಷಾರೂಪ ವಿಶಿಷ್ಟ ರೀತಿಯದು. ಅದರಲ್ಲಿ ಸುಮಾರು ನಲವತ್ತು ಪದಗಳು ಸಂವಹನಕ್ಕೆ ಸಂಬಂಧಿಸಿದವುಗಳೆಂದು ಮಾನವಭಾಷಾವಿಜ್ಞಾನಿಗಳು ಹೇಳುತ್ತಾರೆ. ಆ ಪದಗಳು ಮೂರು ಮುಖ್ಯ ಗುಣಗಳನ್ನು ಹೊಂದಿವೆ. ೧ ಅವು ಪೂರ್ಣ ವಾಕ್ಯಗಳನ್ನು ಪ್ರತಿನಿಧಿಸುತ್ತವೆ. ೨. ಸರಳವಾದ ಸುಲಭವಾದ ಭಾಷಾಧ್ವನಿಗಳನ್ನು, ಆಕೃತಿಮಾಗಳನ್ನು ಹೊಂದಿವೆ ಮತ್ತು ೩. ಧ್ವನಿಗಳ ಪುನರಾವರ್ತನೆಯ ಮೇಲೆ ಆ ಭಾಷೆಯ ಪದಗಳು ಅವಲಂಬಿತವಾಗಿವೆ.

ಸಂಸ್ಕೃತಿ, ಮಾನವನನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ನೈತಿಕವಾಗಿ ನಿರ್ಧರಿಸುತ್ತದೆ. ಅಲ್ಲದೆ ಅವನಾಡುವ ಭಾಷೆಯನ್ನೂ ನಿರ್ಣಯಿಸುತ್ತದೆ. ಆದರೆ ಸಂಸ್ಕೃತಿ ಸಂವಹನ ಸಾಧ್ಯವಾಗುವುದು ಭಾಷೆಯ ಮೂಲಕವೇ. ಆದ್ದರಿಂದ ಸಂಸ್ಕೃತಿಯ ಅಧ್ಯಯನಕ್ಕೆ ಭಾಷೆ ಅತ್ಯಗತ್ಯ. ಭಾಷೆ ಮತ್ತು ಸಂಸ್ಕೃತಿ ಅವೆರಡೂ ಪರಸ್ಪರ ಪೂರಕವಾಗಿವೆ. ಸಂಸ್ಕೃತಿ ಕಲಿಕೆಯಿಂದ ಸಂವಹನಗೊಳ್ಳುವಂಥದು. ಭಾಷೆಯ ನೆರವಿಲ್ಲದೆ ಸಂಸ್ಕೃತಿ ಸಿದ್ಧಿಸುವುದಿಲ್ಲ, ನಾಗರಿಕತೆ ಬೆಳೆಯುವುದಿಲ್ಲ, ಸಮಾಜ ಬದಲಾಗುವುದಿಲ್ಲ ಎಂಬುದು ಗಮನಿಬೇಕಾದ ಸಂಗತಿ.

ಜನಾಂಗಿಕ ಭಿನ್ನತೆಗಳು ಮಾನವನ ದೈಹಿಕ ರಚನೆಗಳಲ್ಲಿಯ ವ್ಯತ್ಯಾಸಗಳನ್ನು ಒಳಗೊಂಡಿವೆ. ಈ ರಚನಾತ್ಮಕ ವ್ಯತ್ಯಾಸಗಳನ್ನು ವಂಶವಾಹಿನಿಗಳು (ಜೀನ್ಸ್‌)ನಿರ್ಧರಿಸುತ್ತವೆ. ಆದುದರಿಂದ ಜನಾಂಗ ಎಂಬುದು ಜೈವಿಕವಾದ ಅನುವಂಶೀಯತೆಗೆ ಸಂಬಂಧಿಸಿದ ಪದ ಎಂಬ ಸ್ಪಷ್ಟ ತಿಳಿವಳಿಕೆ ವಿದ್ವಾಂಸರಲ್ಲಿ ಇಲ್ಲದ್ದರಿಂದಲೇ ಆ ಪದ ಬೇರೆ ಬೇರೆ ಅರ್ಥಗಳಲ್ಲಿ ಪ್ರಯೋಗಗೊಂಡಿರುವುದಕ್ಕೆ ಕಾರಣವಿರಬಹುದು. ಅನುವಂಶೀಯ ಕಾರಣದಿಂದಾಗಿ ಮಾನವನ ದೈಹಿಕ ಲಕ್ಷಣಗಳು ಬೇರೆಯಾಗಿವೆ: ೧. ತಲೆಗೂದಲು ಮೃದು (ನುಣುಪು), ನೇರ (ನೆಟ್ಟಗಿರುವುದು), ಗುಂಗುರು ಮತ್ತು ಉಣ್ಣೆಯಂಥದು (ತುಪ್ಪುಳು), ೨. ದೇಹದ ಎತ್ತರ, ಎದೆ ಭುಜಗಳ ಪ್ರಧಾನ ಅಳತೆ, ೩. ತಲೆ ಆಕಾರ, ೪. ಮುಖ ಲಕ್ಷಣ : ಕಣ್ಣು, ಮೂಗು, ಗಡ್ಡ, ಕಿವಿ, ಕೆನ್ನೆಲುಬು, ದವಡೆಯ ರೂಪ, ೫. ಚರ್ಮದ ಬಣ್ಣ, ೬. ತೋಳು ಮತ್ತು ಕಾಲುಗಳ ಉದ್ದ. ಮುಂತಾದ ದೈಹಿಕ ಚಹರೆಗಳು ಜನಾಂಗಿಕ ಸಮೂಹಗಳನ್ನು ವರ್ಗೀಕರಿಸುವಾಗ ಮಹತ್ವದ ಪಾತ್ರ ವಹಿಸುತ್ತವೆ.

ಜನಾಂಗಕ್ಕೂ ಭಾಷೆ ಮತ್ತು ಸಂಸ್ಕೃತಿಗೂ ಇರುವ ಅರ್ಥಭೇದಗಳನ್ನು, ವಿವರಣೆಗಳನ್ನು ಗಮನಿಸದೆ ಅವನ್ನೆಲ್ಲ ಸಮಾನಾರ್ಥದಲ್ಲಿ ಬಳಸಿರುವುದರಿಂದ ಗೊಂದಲಕ್ಕೂ ಸಂದೇಹಕ್ಕೂ ಆಸ್ಪದವಾಗಿದೆ. ಮಾನವಶಾಸ್ತ್ರಜ್ಞರು ಮಾನವನನ್ನು ದೈಹಿಕ ರಚನೆಯ ದೃಷ್ಟಿಯಿಂದ ಜನಾಂಗಗಳನ್ನಾಗಿ ವರ್ಗಿಕರಿಸುವಂತೆಯೇ ಭಾಷಾವರ್ಗೀಕರಣದಲ್ಲಿ ಆಸಕ್ತಿ ವಹಿಸಿದ ವಿದ್ವಾಂಸರ ಪೈಕಿ ಕೆಲವರು ಭಾಷೆಗಳನ್ನು ಜನಾಂಗದ ರೀತಿಯಲ್ಲೇ ವರ್ಗೀಕರಿಸಿ ತಪ್ಪು ಮಾಡಿದರು. ನಿರ್ದಿಷ್ಟ ಜನಾಂಗವೊಂದಕ್ಕೆ ಭಾಷೆ ಯಾವುದೂ ಇಲ್ಲವೆಂಬ ವಿಚಾರ ಅವರ ಅರಿವಿಗೆ ಬರಲಿಲ್ಲವಾದ್ದರಿಂದ ಸ್ಲಾವಿಕ್‌, ಲ್ಯಾಟಿನ್‌, ಸೆಮಿಟಿಕ್‌, ಆರ್ಯನ್‌(ಆರ್ಯ), ದ್ರವಿಡಿಯನ್‌(ದ್ರಾವಿಡ) ಮುಂತಾದ ಪದಗಳು ಜನಾಂಗ ಎಂಬ ಅರ್ಥದಲ್ಲೇ ಬಳಕೆಯಾದುವು. ವಾಸ್ತವಿಕವಾಗಿ ಅವು ಭಾಷೆಗಳನ್ನು ಪ್ರತಿನಿಧಿಸುತ್ತವೆಯೇ ಹೊರತು ಜನಾಂಗಗಳನ್ನು ನಿರ್ದೇಶಿಸುವಂಥದಲ್ಲ. ಸ್ಲಾವಿಕ್‌ಭಾಷೆಗಳನ್ನಾಡುವ ಜನ (ರಷ್ಯನ್‌, ಪೊಲಿಷ್‌ಮತ್ತು ಸರ್ಬಿಯನ್‌) ಬೇರೆ ಬೇರೆ ಜನಾಂಗಗಳಿಗೆ ಸೇರಿದವರು. ಅಂತೆಯೇ ಸ್ಪ್ಯಾನಿಷ್‌, ಇಟಾಲಿಯನ್‌ಮತ್ತು ಫ್ರೆಂಚ್‌ಭಾಷೆಗಳನ್ನಾಡುವವರೂ (ಲ್ಯಾಟಿನ್‌ಜನ) ಸೆಮಿಟಿಕ್‌ಗುಂಪಿನ ಅರಾಬಿಕ್‌, ಹೀಬ್ರೂ ಅಥವಾ ಅರಮಾಯಿಕ್‌ಭಾಷೆಗಳನ್ನಾಡುವವರೂ ವಿವಿಧ ಜನಾಂಗಗಳಿಗೆ ಸೇರಿದವರು. ಭಾರತದ ಪ್ರಮುಖ ಭಾಷಾಪರಿವಾರಗಳಾದ ಆರ್ಯನ್‌, ದ್ರವಿಡಿಯನ್‌, ಆಸ್ಟಿಕ್‌ಗುಂಪಿಗೆ ಸೇರಿದ ಅನೇಕ ಭಾಷೆಗಳನ್ನು ಯಾವುದೇ ಒಂದು ನಿರ್ದಿಷ್ಟ ಜನಾಂಗ ಮಾತನಾಡುತ್ತಿಲ್ಲ. ಬೇರೆ ಬೇರೆ ಜನಾಂಗಗಳಿಗೆ ಸೇರಿದ ಪಪುನವ್‌, ಮಲಯನ್‌ಮತ್ತು ಪಾಲಿನೇಷಿಯನ್ನರು ಮಲಯೊಪಾಲಿನೇಷಿಯನ್‌ಭಾಷಾ ವರ್ಗಕ್ಕೆ ಸೇರಿದ ಭಾಷೆಗಳನ್ನಾಡುತ್ತಾರೆ. ಪಪುವನ್ನರು ಆಡುವ ಭಾಷೆ ವಿಶಿಷ್ಟವಾದುದು. ಅದು ಅವರ್ಗೀಕೃತ ಭಾಷಾ ಗುಂಪಿಗೆ ಸೇರಿದ್ದೆಂದು ಮೋರಿಸ್‌ಎಂಬ ಎಂಬ ಮಾನವಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾನೆ.

ಮಾನವನ ದೈಹಿಕ ಚಹರೆಯಲ್ಲಿ ಅನೇಕ ಬಗೆಯ ಭಿನ್ನತೆಗಳನ್ನು ಗುರುತಿಸಬಹುದಾದ ಸಾಧ್ಯತೆಗಳಿವೆ. ಒಂದು ಸಾಮಾಜಿಕ ಗುಂಪಿನ ಸದಸ್ಯರು ವರ್ತನಾ ಮಾದರಿಗಳು ಒಟ್ಟು ಮೊತ್ತದ ಮೇಲೆ ಸಂಸ್ಕೃತಿ ಬದಲಾಗುತ್ತ ಹೋಗುತ್ತದೆ. ಮುಂದುವರಿದ ದೇಶಗಳಲ್ಲಿ ಇಂಥ ವ್ಯತ್ಯಾಸ ಸಹಜವಾಗಿಯೇ ಕಾಣಿಸಿಕೊಳ್ಳುತ್ತದೆ. ಜಪಾನ್, ಭಾರತ, ಅಮೆರಿಕ, ಯುರೋಪ್‌ರಾಷ್ಟ್ರಗಳ ಜನ ತಮ್ಮ ಆಹಾರ, ಉಡುಪು, ಧರ್ಮ ಮತ್ತಿತರ ಸಾಂಸ್ಕೃತಿಕ ಪ್ರಕಾರಗಳಲ್ಲಿ ಭಿನ್ನರಾಗಿದ್ದಾರೆ. ಹೀಗಿದ್ದೂ ಅನೇಕ ವೇಳೆ ಜನಾಂಗಗಳ ಜೊತೆ ಸಾಂಸ್ಕೃತಿಕ ಗುಂಪುಗಳನ್ನು ಸಮೀಕರಿಸುವ ಪ್ರಯತ್ನ ನಡೆದಿದೆ. ಉದಾಹರಣೆಗೆ ನೀಗ್ರೋ ಸಂಸ್ಕೃತಿ, ಯೆಹೂದಿ ಜನಾಂಗ ಎಂಬ ಪ್ರಯೋಗಗಳನ್ನು ಗಮನಿಸಿದಾಗ ಸಹಜವಾಗಿಯೇ ಸಂಶಯ ಮೂಡುತ್ತದೆ. ಕಾರಣ ಎಲ್ಲ ನೀಗ್ರೋಗಳಿಗೆ ಸಮಾನ ಸಂಸ್ಕೃತಿ ಯಾವುದೂ ಇಲ್ಲ. ಆಫ್ರಿಕಾದ, ಅಮೆರಿಕೆಯ ಮತ್ತು ಪೆಸಿಪಿಕ್‌ಸುತ್ತಮುತ್ತಲಿನ ಹಲವಾರು ದ್ವೀಪಗಳಲ್ಲಿ ವಾಸಿಸುತ್ತಿರುವ ನೀಗ್ರೋಗಳಲ್ಲಿ ಗಮನಾರ್ಹ ಸಾಂಸ್ಕೃತಿಕ ಭಿನ್ನತೆಗಳನ್ನು ಕಾಣಬಹುದು. ಅಷ್ಟೇ ಏಕೆ? ಆಫ್ರಿಕಾದಲ್ಲಿ ವಾಸಿಸುತ್ತಿರುವ ನೀಗ್ರೋಗಳಲ್ಲೇ ಈ ಭಿನ್ನತೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ದಕ್ಷಿಣ ಆಫ್ರಿಕದ ಬುಷ್‌ಮನ್‌ಜನ ತಮ್ಮ ನೆರೆಯವರಾದ ಬಾಂಟೊ ಪಂಗಡದೊಂದಿಗೆ ಜನಾಂಗಿಕ, ಭಾಷಿಕ ಮತ್ತು ಸಾಂಸ್ಕೃತಿಕ ಅಂಶಗಳಲ್ಲಿ ವೈದೃಶ್ಯಾತ್ಮಕ ಲಕ್ಷಣಗಳನ್ನು ಪಡೆದಿದ್ದಾರೆ. ಯೆಹೂದಿ ಸಮೂಹಗಳನ್ನು, ಮಂಗೋಲ ಮತ್ತು ನೀಗ್ರೋ ಜನಾಂಗಿಕ ಲಕ್ಷಣಗಳಿಂದಾಗಿ ಅಥವಾ ಅವುಗಳ ಯಾವುದೇ ಒಂದರ ವಿಶಿಷ್ಟ ಸಂಯೋಗದಿಂದಾಗಿ ಅವರನ್ನು ಕಕೇಶಿಯನ್‌ವರ್ಗಕ್ಕೆ ಸೇರಿಸಬಹುದಾದ ಸಾದ್ಯತೆಗಳಿವೆ. ಮಾನವ ಸಂಸ್ಕೃತಿಯ ವ್ಯಾಸಂಗದಲ್ಲಿ ಹಾಗೂ ಭಾಷಾ ವರ್ಗೀಕರಣದಲ್ಲಿ ಮಾನವನ ದೈಹಿಕ ಚಹರೆಗಳು ಬಹುಮುಖ ಪಾತ್ರವಹಿಸುತ್ತವೆ.

ಧ್ರುವ ವಲಯಗಳಲ್ಲಿ ವಾಸಿಸುವ ಎಸ್ಕಿಮೋಗಳು ಸಹ ಭಾಷೆ, ಸಂಸ್ಕೃತಿ ವಿಚಾರಗಳಲ್ಲಿ ತಮ್ಮ ನೆರೆಹೊರೆಯವರಿಗಿಂತ ಭಿನ್ನರಾಗಿದ್ದಾರೆ. ಅನ್ಯ ಸಾಂಸ್ಕೃತಿಕ ಲಕ್ಷಣಗಳು-ಅವರ ಮೇಲೆ ಪ್ರಭಾವ ಬೀರಿವೆ. ಅಲಾಸ್ಕದ ದಕ್ಷಿಣ ತುದಿಯಲ್ಲಿ ವಾಸಿಸುವ ಎಸ್ಕಿಮೋಗಳು ತಮ್ಮ ಪಕ್ಕದವರಾದ ಟ್ಲಿಜಿಟ್‌ಜನರ ಸಾಂಸ್ಕೃತಿಕ ಅಂಶಗಳನ್ನು ಸ್ವೀಕರಿಸಿದ್ದಾರೆ. ಸೈಬೀರಿಯಾದ ಈಶಾನ್ಯ ಭಾಗದಲ್ಲಿ ವಾಸಿಸುವ ಎಸ್ಕಿಮೋ ಮತ್ತು ಚಕ್ಚಿ ಜನರ ನಡುವೆ ಸಾಂಸ್ಕೃತಿಕ ಸೀಮಾರೇಖೆ ಯಾವುದೂ ಇಲ್ಲ. ಅಂದರೆ ಮಾನವ ಸಂಸ್ಕೃತಿ ಮತ್ತು ಭಾಷೆ ಪರಸ್ಪರ ಪೂರಕವಾಗಿವೆ.

ಯಾವುದಾದರೊಂದು ಪ್ರಮುಖ ಭಾಷಾ ಗುಂಪಿಗೆ ಸೇರಿದ ಭಾಷೆಗಳನ್ನು ನಿರ್ದಿಷ್ಟವಾದ ಸಾಂಸ್ಕೃತಿಕ ಕ್ಷೇತ್ರವೊಂದರ ಜನರೇ ಆಡುವುದಿಲ್ಲ. ಬೇರೆ ಬೇರೆ ಕ್ಷೇತ್ರಗಳ ಜನರೂ ಅನೇಕ ಕಾರಣಗಳಿಂದ ಆ ಭಾಷೆಗಳನ್ನಾಡುವರು. ಉದಾಹರಣೆಗೆ ಅಂಥ ಬಾಸ್ಕನ್‌ಭಾಷೆಗಳು. ಈ ಭಾಷೆಗಳನ್ನಾಡುವ ಜನ (ಲೂಷೆ, ಷಿಪ್ಯೂಯನ್‌, ಸಾರ್ಸಿ, ನವಾಹೋ ಮತ್ತು ಹ್ಯೂಪ) ವಿಭಿನ್ನವಾದ ನಾಲ್ಕು ಸಾಂಸ್ಕೃತಿಕ ಕ್ಷೇತ್ರಗಳಿಗೆ ಸೇರಿದ್ದಾರೆ. ಅವರ ಪೈಕಿ ಹ್ಯೂಪ ಇಂಡಿಯನ್ನರ ಸಂಸ್ಕೃತಿ ಸಂಕೀರ್ಣ ಬಗೆಯದು. ಹ್ಯೂಪ ಇಂಡಿಯನ್ನರು ತಮ್ಮ ನೆರೆಯವರಾದ ಯುರೋಕ್‌ಮತ್ತು ಕಾರೋಕ್‌ಜನರೊಂದಿಗೆ ಸಾಂಸ್ಕೃತಿಕವಾಗಿ ಬಹಳಷ್ಟು ಬೆರೆತುಹೋಗಿದ್ದಾರೆ. ಈ ಮೂವರು ಅಮೆರಿಕದ ಮೂರು ಪ್ರಧಾನ ಭಾಷಾ ಗುಂಪುಗಳಿಗೆ ಸೇರಿದ ಭಾಷೆಗಳನ್ನಾಡುತ್ತಾರೆ. ಹ್ಯೂಪ ಇಂಡಿಯನ್ನರು ಬಾಸ್ಕನ್‌ಭಾಷೆಗಳನ್ನು ಯೂರೋಕರು ಆಲ್ಗೋನ್‌ಕಿನ್‌ಮೂಲದಿಂದ ಬೇರೆಯಾಗಿರುವ ಎರಡು ಭಾಷಾ ಗುಂಪಿನ ಪೈಕಿ ಒಂದನ್ನು, ಕಾರೋಕರು ಹೋಕನ್‌ಗುಂಪಿಗೆ ಸೇರಿದ ಭಾಷೆಗಳನ್ನು ಮಾತನಾಡುವರು.

ಈ ರೀತಿ ಜನಾಂಗ, ಭಾಷೆ ಮತ್ತು ಸಂಸ್ಕೃತಿಗಳ ಭಿನ್ನತೆಗಳನ್ನು ಗುರುತಿಸುವ ಪ್ರಯತ್ನ ನಡೆದಿದೆ. ಒಬ್ಬ ವ್ಯಕ್ತಿ ಒಂದು ಜನಾಂಗಕ್ಕೆ ಸೇರಿದ್ದಾನೆ ಎಂದರೆ ಅವನ ತಾಯಿ ತಂದೆ ಮತ್ತು ಅವರ ಹಿರಿಯರಿಂದ ಹರಿದುಬಂದ ವಾಂಶಿಕತೆಗೆ ಒಳಪಟ್ಟಿದ್ದಾನೆ ಎಂದರ್ಥ. ಅವರಾಡುವ ಭಾಷೆಯನ್ನು ಕಲಿತು, ಅವರ ಸಂಸ್ಕೃತಿಗೆ ಸೇರಿದ್ದಾನೆ ಎಂದರೆ ಅವರ ಸಮಾಜದಿಂದ ದತ್ತವಾದ ಕಲಿಕೆ, ಶಿಕ್ಷಣ ಮತ್ತು ಪೌರತ್ವದ ಅವಶ್ಯಕತೆಗೆ ಒಳಪಟ್ಟಿದ್ದಾನೆ ಎಂಬುದಾಗಿ ಭಾವಿಸಬಹುದು. ಜನಾಂಗಿಕ ವ್ಯತ್ಯಾಸಗಳು ಎಷ್ಟೇ ಇದ್ದರೂ ಭಾಷಿಕ ಮತ್ತು ಸಾಂಸ್ಕೃತಿಕ ವಿಚಾರಗಳು ಆ ಜನಾಂಗದಿಂದ ಪ್ರಭಾವಿಸಿರುವ ಸಂದರ್ಭ ಖಂಡಿತ ಸಾಧ್ಯವಿಲ್ಲ. ಏಕೆಂದರೆ ಜನಾಂಗಿಕ ವ್ಯತ್ಯಾಸಗಳಿಗಿಂತ ಸಾಂಸ್ಕೃತಿಕ ವ್ಯತ್ಯಾಸಗಳು ವೇಗವಾಗಿ ಸಾಗುತ್ತವೆ. ಜೈವಿಕ ಪರಿವರ್ತನೆ ನಿಧಾನವಾದರೆ ಮಾತ್ರ ಸಾಂಸ್ಕೃತಿಕ ಪರಿವರ್ತನೆಗಳು ಪ್ರತಿಯೊಂದು ಪ್ರತಿಯೊಂದು ತಲೆಮಾರಿನಲ್ಲೂ ಕಾಣಿಸಿಕೊಳ್ಳಬಹುದು. ಆದರೆ ಸಾಂಸ್ಕೃತಿಕ ಪರಿವರ್ತನೆಗಳನ್ನು ಜನಾಂಗಿಕ ಸ್ಥಿರತೆಯಿಂದ ವಿವರಿಸುವುದು ಪ್ರಯೋಜನಕಾರಿಯಲ್ಲ. ಮಾನವ ಸಂಸ್ಕೃತಿಯನ್ನು ಜನಸಂಪರ್ಕ, ಭೌಗೋಳಿಕ ಪರಿಸರ ಮೊದಲಾದ ಅಂಶಗಳಿಂದ ವಿವರಿಸಲು ಸಾಧ್ಯ. ಆದರೆ ಜನಾಂಗಿಕ ಭಿನ್ನತೆಗಳಿಂದ ವಿವರಿಸಲು ಸಾಧ್ಯವಾಗುವುದಿಲ್ಲ. ಸಾಂಸ್ಕೃತಿಕ ಅಂಶಗಳು ವಾಂಶಿಕವಾಗಿ ನಿರ್ಧಾರವಾಗುವಂಥವಲ್ಲ. ಆನುವಂಶಿಕ ವ್ಯತ್ಯಾಸಗಳಿಗೂ ಬೌದ್ಧಿಕ ಸಾಮರ್ಥ್ಯಗಳಿಗೂ ಸಂಬಂಧವಿಲ್ಲ. ಈ ಕಾರಣದಿಂದ ಜನಾಂಗವನ್ನು ನಿರ್ಧರಿಸುವಲ್ಲಿ ಸಾಂಸ್ಕೃತಿಕ ಸಾಧನೆಯಲ್ಲಿಯ ವ್ಯತ್ಯಾಸಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು.

ಜನಾಂಗ, ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಭಿನ್ನತೆಗಳು ಕಾಣಿಸಿಕೊಂಡ ಮಾತ್ರಕ್ಕೆ ಅವುಗಳಲ್ಲಿ ಪರಸ್ಪರ ಸಂಬಂಧ ಇದೆ ಅಥವಾ ಇಲ್ಲವೆ ಎಂಬ ಪ್ರಶ್ನೆ ಮೂಡುವುದು ಸಹಜ. ಜನಾಂಗ ಭಾಷೆ; ಜನಾಂಗ ಸಂಸ್ಕೃತಿ; ಭಾಷೆ ಸಂಸ್ಕೃತಿ ಇವುಗಳಲ್ಲಿ ಸಂಬಂಧ ಇದೆ ನಿಜ. ಆದರೆ ಅವು ಕೇವಲ ಆಕಸ್ಮಿಕ. ಅವು ಜೊತೆಯಾಗಿ ಏಕಕಾಲದಲ್ಲಿ ಉಗಮ ಹೊಂದಿ ವಿಕಾಸವಾದುವಲ್ಲ. ನಿರ್ದಿಷ್ಟ ಜನಾಂಗಕ್ಕೆ ಯಾವುದೇ ಒಂದು ಭಾಷೆ, ಒಂದು ಸಂಸ್ಕೃತಿ ಸೇರಿಲ್ಲ. ಒಂದೇ ಭಾಷೆ ಬೇರೆ ಬೇರೆ ಜನಾಂಗಗಳನ್ನೂ ಸಂಸ್ಕೃತಿಗಳನ್ನೂ ಒಳಗೊಳ್ಳಬಹುದು. ಭಾಷಿಕ ಪರಿವರ್ತನೆಯಾಗದೆ ಸಾಂಸ್ಕೃತಿಕ ಪರಿವರ್ತನೆ ಸಾಧ್ಯ ಎಂಬ ವಿಚಾರವನ್ನು ಮಾನವ ಭಾಷಾವಿಜ್ಞಾನಿಗಳು ತಮ್ಮ ಸಂಶೋಧನೆಗಳಿಂದ ಸಾಬೀತುಪಡಿಸಿದ್ದಾರೆ. ಜನಾಂಗ, ಭಾಷೆ ಮತ್ತು ಸಂಸ್ಕೃತಿಗಳು ಆಕಸ್ಮಿಕ ಸಂಬಂಧ ಪಡೆದ ಮಾತ್ರಕ್ಕೆ ಅವು ಅವಿಭಾಜ್ಯ ಅಂಶಗಳೆಂದು ತಿಳಿಯುವುದು ತಪ್ಪಾಗುತ್ತದೆ. ಅವು ಪ್ರತ್ಯೇಕವಾಗಿಯೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯಬಲ್ಲವು.

ಭಾಷಿಕ ಸಮುದಾಯಗಳು ರೂಪುಗೊಂಡ ಕ್ರಮವೇನೇ ಇರಲಿ, ಭಾಷಾ ಬಳಕೆಯಲ್ಲಿ ವ್ಯತ್ಯಾಸಗಳಾಗುತ್ತವೆ ಎಂಬುದು ಸ್ಪಷ್ಟ. ಕೆಲವೊಮ್ಮೆ ಒಂದು ಭಾಷೆಯನ್ನಾಡುವ ಜನರು ಒಂದೇ ಬುಡಕಟ್ಟಿಗೆ ಸೇರಿದವರಾಗಿರುತ್ತಾರೆ. ಅವರೆಲ್ಲರೂ ರಕ್ತಸಂಬಂಧಿಗಳು. ತಮ್ಮ ಜನಾಂಗದೊಡನೆ ತಮ್ಮನ್ನು ಗುರುತಿಸಿಕೊಳ್ಳುವಾಗ ತಾವಾಡುವ ಭಾಷೆಯನ್ನೂ ಮುಖ್ಯ ಜನಾಂಗಿಕ ಲಕ್ಷಣವನ್ನಾಗಿ ಅವರು ಗ್ರಹಿಸುತ್ತಾರೆ. ಮತ್ತೆ ಕೆಲವರು ಭಾಷಿಕ ಸಮುದಾಯಗಳಲ್ಲಿ ಬೇರೆ ಬೇರೆ ಬುಡಕಟ್ಟಿನವರಿರುತ್ತಾರೆ. ಆದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಆ ಭಾಷೆಯನ್ನಾಡುವವರು ನೆಲೆಸಿರುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಒಂದು ಭಾಷೆಯನ್ನಾಡುವ ಜನರು ಹಲವಾರು ಭೌಗೋಳಿಕ ಪ್ರದೇಶಗಳಲ್ಲಿ ಹಂಚಿ ಹೋಗಿರುವುದುಂಟು. ಆ ಸಂದರ್ಭದಲ್ಲಿ ಅವರ ಭಾಷೆ ಆ ಸಮುದಾಯದ ಸಾಮಾಜಿಕ ಚಹರೆಯಾಗಿ ಕಾಣಿಸುತ್ತದೆ. ಅದರ ಮೂಲಕ ಆ ಭಾಷಿಕರು ತಮ್ಮ ವಿಶಿಷ್ಟತೆಯನ್ನು ಕಾಯ್ದುಕೊಳ್ಳುತ್ತಾರೆ.

ಭಾಷೆಯ ಮೇಲೆ ಮನುಕುಲದ ಪ್ರಭಾವ

ಯಾವುದೇ ಒಂದು ಸಮಾಜದ ಸಂಸ್ಕೃತಿಯನ್ನು ತಿಳಿಯಲು ಆ ಸಮಾಜದ ಜನರಾಡುವ ಭಾಷೆಯ ಪದಕೋಶ ನೆರವಾಗುತ್ತದೆ. ಆ ಸಮಾಜದ ಸಂಸ್ಕೃತಿಗೆ ಅನುಗುಣವಾಗಿ ಪದಗಳು ಸಿದ್ಧಗೊಂಡಿರುತ್ತವೆ. ಜನರ ವಿಶಿಷ್ಟ ಅನುಭವಗಳು, ಘಟನೆಗಳು, ವಸ್ತುವಿಶೇಷಗಳು ಮತ್ತು ಹವೆಗೆ ಸಂಬಂಧಿಸಿದಂತೆ ಅನೇಕ ಪದಗಳು ಹುಟ್ಟಿಕೊಂಡಿರುತ್ತವೆ. ಒಂದು ಸಮಾಜದ ಸಂಸ್ಕೃತಿಯಲ್ಲಿ ಬದಲಾವಣೆಯಾದರೆ ಆ ಸಮಾಜದ ಜನರಾಡುವ ಭಾಷೆಯಲ್ಲೂ ಬದಲಾವಣೆ ಆಗುತ್ತದೆ. ಉದಾಹರಣೆಗೆ ಯಾವುದೋ ಒಂದು ವಸ್ತು ಅಥವಾ ಪದಾರ್ಥ ಸಮಾಜದಲ್ಲಿ ಇಲ್ಲದಿದ್ದಾಗ ಅದರ ಬಗೆಗಿನ ಯಾವ ಮಾಹಿತಿಯೂ ಆ ಸಮಾಜದ ಜನರಾಡುವ ಭಾಷೆಯಲ್ಲಿ ದೊರಕುವುದಿಲ್ಲ. ಕಾರಣಾಂತರಗಳಿಂದ ಆ ವಸ್ತು ವಿಶೇಷ ಸಮಾಜದಲ್ಲಿ ಬಳಕೆಗೆ ಬಂದರೆ ಅದಕ್ಕೆ ಅನುಗುಣವಾದ ಪದವನ್ನು ಆ ಸಮಾಜ ಸಿದ್ಧಗೊಳಿಸಬೇಕಾಗುವುದು ಅಥವಾ ಬೇರೆ ಭಾಷೆಯಿಂದ ಪದವನ್ನು ಎರವಲು ಪಡೆಯಬೇಕಾಗುತ್ತದೆ.

ಮಾನವಭಾಷಾಶಾಸ್ತ್ರವು ಬುಡಕಟ್ಟು ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಲು ತುಂಬ ನೆರವಾಗುತ್ತದೆ. ಜನಾಂಗಕ್ಕೂ ಭಾಷೆಗೂ ತುಂಬ ಸಾಮ್ಯತೆಯಿದೆ. ಸಿದ್ಧಿಯರ ಸಂಸ್ಕೃತಿ ಮತ್ತು ಅವರ ಸಾಮಾಜಿಕ ಚಹರೆಯನ್ನು ಅಧ್ಯಯನ ಮಾಡಲು ಮಾನವ ಭಾಷಾಶಾಸ್ತ್ರ ಹೇಗೆ ನೆರವಾಗುತ್ತದೆ ಎಂಬ ಅಂಶವನ್ನು ಕುರಿತು ಇಲ್ಲಿ ಕೆಲವು ಸಂಗತಿಗಳನ್ನು ಹೇಳಬಹುದು. ಆಫ್ರಿಕಾದ ಕಣಿವೆ ಕಂದರಗಳಲ್ಲಿ ಸ್ವಚ್ಛಂದವಾಗಿ ಬದುಕು ಸಾಗಿಸುತ್ತಿದ್ದ ನಿಗ್ರೋಗಳ ಕರಿಯರು ಅರಬ್‌ಮತ್ತು ಯೂರೋಪಿಯನ್ನರ ಕಾಕದೃಷ್ಟಿಗೆ ಬಿದ್ದದ್ದು ಮನುಕುಲ ಚರಿತ್ರೆಯ ಒಂದು ದುರಂತ ಅಧ್ಯಾಯ. ಅರಬ್‌ಮತ್ತು ಯುರೋಪಿಯನ್ನರು ಆಫ್ರಿಕಾಕ್ಕೆ ಹದ್ದುಗಳಂತೆ ಎರಗಿ ನಿಗ್ರೋಗಳನ್ನು ಮೃಗಗಳಂತೆ ಹಿಡಿದು ಹಡಗುಗಳ ಮೂಲಕ ಹೊರದೇಶಗಳಿಗೆ ಮಾರಾಟ ಮಾಡುತ್ತಿದ್ದರು. ನಿಗದಿಯಾದ ಬಂದರುಗಳಲ್ಲಿ ಒಟ್ಟುಗೂಡಿಸಿದ ಈ ಅನಾಥ ಮಾನವ ಪ್ರಾಣಿಗಳನ್ನು ಸಮುದ್ರದಲ್ಲಿ ಸಾಗಿಸುತ್ತಿದ್ದ ಅರೀತಿ ಅತ್ಯಂತ ಅಸಹ್ಯಕರವಾಗಿತ್ತು. ‘ದೊಡ್ಡ ದೊಡ್ಡ ಹಡಗುಗಳ ನೆಲ ಕೋಣೆಗಳಲ್ಲಿ ಕುರಿಗಳಂತೆ ತುಂಬಿ ಮೇಲಿನಿಂದ ಆಹಾರ ಎಸೆಯಲಾಗುತ್ತಿತ್ತು. ಅನೇಕ ವಾರಗಳು, ಕೆಲವೊಮ್ಮೆ ಅನೇಕ ತಿಂಗಳು ಈ ಕತ್ತಲು ಕೂಪದಲ್ಲಿ ಬಾಗಿ ಕುಳಿತು, ಸಾಗಣೆಗೆ ಒಳಗಾದ ಅವರಿಗೆ ಹೊರಗೆ ಬರುವ ಅವಕಾಶವಿಲ್ಲ. ಅಲ್ಲಿಯೇ ಮಾಡಿಕೊಂಡ ಮಲಮೂತ್ರಗಳ ದುರ್ವಾಸನೆ ಮತ್ತು ಕೊಳಕಿನಲ್ಲಿ ಉಸಿರಾಡಬೇಕಾದ ಅನಿವಾರ್ಯತೆ. ಇಂತಹ ನರಕಯಾನದಲ್ಲಿ ಉಸಿರುಕಟ್ಟಿ ಸಾಯುತ್ತಿದ್ದವರೇ ಹೆಚ್ಚು’ ಎಂತಹ ಹೃದಯವಿದ್ರಾವಕ ಘಟನೆಯಿದು.

ಆಫ್ರಿಕಾದ ಕರಿಯರನ್ನು ಜಗತ್ತಿನ ಹಲವಾರು ದೇಶಗಳಿಗೆ ಒಯ್ದಂತೆ ಭಾರತಕ್ಕೂ ತಂದರು. ಭಾರತಕ್ಕೆ ಪೋರ್ಚುಗೀಸರು ಇವರನ್ನು ಕರೆತಂದರು. ಪೋರ್ಚುಗೀಸರು ತಮ್ಮ ವಸಾಹತು ಕೇಂದ್ರವಾದ ಗೋವಾದಲ್ಲಿ ಗುಲಾಮರ ವ್ಯಾಪಾರಕ್ಕೆ ಒತ್ತು ಕೊಟ್ಟರು. ಗೋವಾದ ಹಲವು ಗೊತ್ತಾದ ಸ್ಥಳಗಳಲ್ಲಿ ಇವರನ್ನು ಹರಾಜು ಮಾಡಲಾಗುತ್ತಿತ್ತು. ಶ್ರೀಮಂತರು ಇವರನ್ನು ಹಣ ಕೊಟ್ಟು ಕೊಳ್ಳುತ್ತಿದ್ದರು. ಹೀಗೆ ಮಾರಾಟವಾದ ನಿಗ್ರೋಗಳನ್ನು ಶ್ರೀಮಂತರ ಮನೆಯ ತೊತ್ತುಗಳಾಗಿ ಇಲ್ಲವೆ ಸಂಘ, ಸಂಸ್ಥೆ ಸರ್ಕಾರಗಳ ಕಠಿಣ ಕೆಲಸಗಳಿಗೆ ಬಳಸುತ್ತಿದ್ದರು. ಕೆಲಸವಿಲ್ಲದಿದ್ದಾಗ ಹಿಂಸಿಸಿ ರಂಜಿಸುತ್ತಿದ್ದರು! ಬೋರಲಿಂಗಯ್ಯನವರು ಈ ಎಲ್ಲ ಅಂಶಗಳನ್ನು ಮಾರ್ಮಿಕವಾಗಿ ಉದಾಹರಣೆ ಸಮೇತ ಪ್ರತಿಪಾದಿಸಿದ್ದಾರೆ. ಈ ಭಾಗವು ಸಿದ್ಧಿಯರ ಮಾನವ ಸಂಸ್ಕೃತಿಯ ಪೂರ್ವವೃತ್ತಾಂತ ಹಾಗೂ ಅವರ ದಾಸ್ಯತ್ವದ ಸ್ವರೂಪವನ್ನು ತಿಳಿಸುವುದಕ್ಕೆ ಸಹಾಯಕವಾಗಿದೆ.

ಈ ಜನ ಕರ್ನಾಟಕದ ಪಶ್ಚಿಮ ಕರಾವಳಿಯ, ಉತ್ತರ ಕನ್ನಡ ಜಿಲ್ಲೆಗೆ ಯಾವಾಗ ಬಂದರು? ಏಕೆ ಬಂದರು? ಎಂಬ ಪ್ರಶ್ನೆಗಳನ್ನು ಎತ್ತಿ ಚರ್ಚೆ ಬೆಳೆಸುತ್ತಾರೆ. ಬೋರಲಿಂಗಯ್ಯನವರು ಊಹಿಸಿದಂತೆ ‘ಇಂಗ್ಲಿಷರ ಆಗಮನದಿಂದಾಗಿ ಉತ್ತರ ಕನ್ನಡದ ಹಲವು ಭಾಗಗಳನ್ನು ಪೋರ್ಚುಗೀಸರು ಕಳೆದುಕೊಂಡ ಮೇಲೆ ಇಲ್ಲಿಯ ಸಿದ್ಧಿಯರು ಪೋರ್ಚುಗೀಸರ ಹಂಗಿನಿಂದ ಹೊರಬಂದಂತೆ ಕಾಣುತ್ತದೆ. ಕ್ರಮೇಣ ಹವ್ಯಕರ ತೋಟಗಳಲ್ಲಿಯ ದುಡಿಮೆ ಹಾಗೂ ಕಾಡಿನ ಉತ್ಪನ್ನ ಸಂಗ್ರಹಣೆ, ಇವರ ಕಸುಬಾಗಿ ಹಂತ ಹಂತವಾಗಿ ಸ್ವತಂತ್ರಗೊಂಡಂತೆ ಕಾಣುತ್ತದೆ’ (ಸಿದ್ಧಿಯರ ಸಂಸ್ಕೃತಿ, ಪುಟ. ೩೨). ಇದರ ಜೊತೆಗೆ ಆಗಿನ ಬ್ರಿಟಿಷ್‌ಸರ್ಕಾರ ಗುಲಾಮಗಿರಿ ಒಂದು ಅಪರಾಧ ಎಂಬ ಕಾನೂನನ್ನು ರೂಪಿಸಿತು. ಅದರೊಂದಿಗೆ ಬರ, ರೋಗರುಜಿನಗಳು ಇಂತಹ ಪ್ರಾಕೃತಿಕ ವಿದ್ಯಮಾನಗಳ ಕಾರಣ ಕಾಡು ಬಿಟ್ಟು ಊರಿಗೆ ಬಂದು ಮತ್ತೆ ಕಾಡು ಸೇರಿದರು. ಇದನ್ನು ಮಾನವ ಸಂಸ್ಕೃತಿಯಲ್ಲಿ ‘ಸಾಂಸ್ಕೃತಿಕ ಪಲ್ಲಟ’ವೆಂದು ಕರೆಯುತ್ತಾರೆ.

ಸಿದ್ಧಿಯರ ಸಾಮಾಜಿಕ ಜೀವನದ ಒಂದು ವಿಶೇಷತೆ ಎಂದರೆ ಒಂದೇ ಕುಟುಂಬದಲ್ಲಿ ಮೂರು ಧರ್ಮದ ಜನರು ಇರುತ್ತಾರೆ. ಇದಕ್ಕೆ ಕಾರಣವೆಂದರೆ ಆಫ್ರಿಕಾದಿಂದ ಇಲ್ಲಿ ಬಂದ ಅವರನ್ನು ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಕೊಂಡುಕೊಂಡರು. ಅವರಿದ್ದ ಧನಿಗಳ ಧರ್ಮವನ್ನು ಅವರು ಸ್ವೀಕರಿಸಿದರು. ಅದು ಅನಿವಾರ್ಯ. ಹೀಗಾಗಿ ಹಿಂದೂ ಸಿದ್ಧಿಯರು, ಕ್ರಿಶ್ಚಿಯನ್‌ಸಿದ್ಧಿಯರು ಮತ್ತು ಮುಸ್ಲಿಂ ಸಿದ್ಧಿಯರು ಎಂಬ ಮೂರು ಬಗೆಯಲ್ಲಿ ಅವರನ್ನು ವಿಂಗಡಿಸಬಹುದು. ಆದರೆ ಸಾಂಪ್ರದಾಯಕ ಗುಡಿ, ಚರ್ಚು, ಮಸೀದಿಗಳಲ್ಲಿ ಅವರಿಗೆ ಪ್ರವೇಶವಿಲ್ಲ. ಏಕೆಂದರೆ ಇವರು ಗುಲಾಮರು ತಾನೆ! ಇಂತಹ ದುರಂತ ಪ್ರಪಂಚ ಯಾವ ಜನಾಂಗಕ್ಕೂ ಬಂದಿರಲಾರದು. ಈ ಕಾರಣಗಳಿಂದಾಗಿ ಸಿದ್ಧಿಯರು ತಮ್ಮತಮ್ಮೊಳಗೆ ವೈವಾಹಿಕ ಸಂಬಂಧ ಬೆಳೆಸಿ ಧಾರ್ಮಿಕ ಸೌಹಾರ್ದತೆಗೆ ಕಾರಣರಾದರು. ಇದು ಗಮನಾರ್ಹ ಸಿದ್ಧಿಯರ ಮೇಲೆ ಅವರ ಭೂಮಾಲೀಕರಾದ ಹವ್ಯಕ ಬ್ರಾಹ್ಮಣರ ಪ್ರಭಾವ ದಟ್ಟವಾಗಿದೆ. ಹವ್ಯಕರು ಆಚರಿಸುವ ಗೌರಿಗಣೇಶ ಹಬ್ಬ, ನವರಾತ್ರಿ ಮುಂತಾದ ಹಬ್ಬ ಹರಿದಿನಗಳನ್ನು ಸಿದ್ಧಿಯರು ಶ್ರದ್ಧೆಯಿಂದ ಮಾಡುತ್ತಾರೆ. ಉತ್ತರ ಕನ್ನಡದ ಗೊಂಡರು, ಹಾಲಕ್ಕಿಯರು ಪೂಜಿಸುವ ‘ಜಟ್ಟಿಗ’ನನ್ನು ಇವರೂ ಪೂಜಿಸುತ್ತಾರೆ. ಸಿದ್ಧಿಯರು ‘ಸಿದ್ಧನಾಸ’ ಮತ್ತು ‘ಬೇಟೆನಾಸ’ ಎಂಬ ದೇವತೆಗಳನ್ನು ವಿಶೇಷವಾಗಿ ಪೂಜಿಸುತ್ತಾರೆ.

ಸಿದ್ಧಿಯರು ಮಗು ಹುಟ್ಟಿದಾಗ ಹಾಗೂ ಮದುವೆಯ ಸಂದರ್ಭದಲ್ಲಿ ಬ್ರಾಹ್ಮಣರನ್ನು ಕರೆಯಿಸಿ ಪೌರೋಹಿತ್ಯ ಕಾರ್ಯ ಏರ್ಪಡಿಸುತ್ತಾರೆ. ಸಿದ್ಧಿಯರು ಹೆಣ್ಣು ಕೇಳಲು ಹೋಗುವಾಗ ಎರಡು ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹೆಣ್ಣು ಒಪ್ಪಿಗೆಯಾದಲ್ಲಿ ಆ ಕಾಯಿಗಳನ್ನು ಹೆಣ್ಣಿನ ಕಡೆಯವರೆಗೆ ಕೊಟ್ಟು ತೆಂಗು ಒಡೆದು ಬೆಲ್ಲಹಾಕಿ ಎಲ್ಲರಿಗೂ ಹಂಚುತ್ತಾರೆ. ಅದು ಶುಭದ ಸಂಕೇತವೆಂಬುದು ಅವರ ಭಾವನೆಯಾಗಿದೆ. ಸಿದ್ಧಿ ಗಂಡಸರು ಇತರ ಬುಡಕಟ್ಟಿನ ಹೆಂಗಸರ ಜೊತೆ ಮದುವೆಯಾಗುವ ಸಂದರ್ಭಗಳು ಬಂದಾಗ ಒಂದು ವಿಶೇಷ ಆಚರಣೆ ನಡೆಯುತ್ತದೆ. ಒಂದು ಹುಲ್ಲಿನ ಗುಡಿಸಲಿನೊಳಗೆ ಹೆಣ್ಣನ್ನು ಕೂಡಿಹಾಕಿ ಬೆಂಕಿ ಹಚ್ಚುತ್ತಾರೆ. ಅದರಿಂದ ತಪ್ಪಿಸಿಕೊಂಡು ಹೆಣ್ಣು ಹೊರಬರಬೇಕು. ಹಾಗೆ ಬಂದನಂತರ ಸುಟ್ಟ ಬೂದಿಯನ್ನು ಮುಖ್ಯಸ್ಥ ಆ ಹೆಣ್ಣಿಗೆ ತಿನ್ನಿಸುತ್ತಾನೆ. ಅಲ್ಲಿಂದ ಅವಳು ಸಿದ್ಧಿಯಾಗಿ ಮಾರ್ಪಡುತ್ತಾಳೆ. ಇದು ಒಂದು ರೀತಿಯಲ್ಲಿ ‘ಸಿದ್ಧಿ ದೀಕ್ಷೆ’ ನೀಡುವ ವಿಧಾನ. ಆ ಮೂಲಕ ಆ ಹೆಣ್ಣಿನ ಹಳೆಯ ಜಾತಿ ಸುಟ್ಟು ಹೊಸ ಜನ್ಮ ಬಂತೆಂಬ ಇವರ ನಂಬಿಕೆಯ ಹಿಂದೇ, ಸುಡುವ ಕ್ರಿಯೆಯ ಮೂಲಕ ಹೊಸ ಸೃಷ್ಟಿಯ ಆಶಯವಿದೆ.

ಸಿದ್ಧಿಯರ ಧರ್ಮದಂತೆಯೇ ಅವರ ಭಾಷೆಯೂ ಕೂಡ ಮೂರು ದಾರಿಗಳ ಸಂಗಮ. ಅವರು ಗೋವಾ, ಮಹಾರಾಷ್ಟ್ರದ ಮೂಲಕ ಕರ್ನಾಟಕಕ್ಕೆ ಹಾದು ಬಂದಿರುವುದರಿಂದ ಸಹಜವಾಗಿ ಕೊಂಕಣಿ, ಮರಾಠಿ, ಕನ್ನಡ ಈ ಮೂರು ಭಾಷೆಗಳ ಮಿಶ್ರಣವೇ ಸಿದ್ಧಿ ಭಾಷೆ. ಅದೊಂದು ಸಾಮಾಜಿಕ ಉಪಭಾಷೆಯಾಗಿದೆ. ಅವರ ಅಭಿವ್ಯಕ್ತಿಯಲ್ಲಿ ಮೂರು ಭಾಷೆಗಳ ಮಿಶ್ರಣ ಇದ್ದೇ ಇರುತ್ತದೆ.

. ನಾರಾಯಣಚೆಬಜನೆ ಕರಾರೇ
ಹಾತಿಪಾಯೋ ದೂನಗೇನ
ಗಂಧಕುಂಕುಮ ಲಾಲಗೇನ
ಭಕ್ತಿ ಬಾವಾನು ಬಸುಮ ಬಜನೆ ಕರಾ

. ತಾಳತಮಟೆ ಗೇಯಾ
ದಪ್ಪ ದಮಾಮ ಗೇನ್

ಇಂತಹ ಹಾಡುಗಳಲ್ಲಿ ಬರುವ ಭಜನೆ, ಗಂಧ, ಕುಂಕು, ತಮಟೆ, ತಾಳ ಮುಂತಾದ ಕನ್ನಡ ಪದಗಳು ಸೇರಿವೆ. ಸಿದ್ಧಿಯರಲ್ಲಿ ಕಥನ ಕಾವ್ಯದ ರೀತಿಯ ಹಾಡುಗಳಿಲ್ಲ. ಜಾನಪದ ಸಾಹಿತ್ಯದ ಸರಳ ಅಭಿವ್ಯಕ್ತಿಗಳಾದ ಗಾದೆ, ಒಗಟುಗಳು ಸಮೃದ್ಧವಾಗಿವೆ. ಅವರ ಜಾನಪದ ಸಾಹಿತ್ಯದ ಮೇಲೆ ಕನ್ನಡದ ಪ್ರಭಾವ ಧಾರಾಳವಾಗಿದೆ.

. ಅಂಗಿ ಚಡ್ಡಿ ಕಾದಾನು
ಬಾಯಿತ ಊಡಿ ಮಾರತ
ಉತ್ತರ : ಕೇಳಿ
(
ಅಂಗಿ ಚಡ್ಡಿ ತೆಗೆದವನೆ
ಬಾಯಿಯಲ್ಲಿ ಹಾರುತ್ತಾನೆ
ಉತ್ತರ : ಬಾಳೆಹಣ್ಣು)

. ದಿಸಬರಬಹುತ
ರಾತಿನಿ ಮೂಲ್ಯಾತ ಬಸತ
ಉತ್ತರ : ಅಜ್ಜ
(
ಹಗಲೆಲ್ಲ ತಿರುಗಿ ರಾತ್ರಿ ಬಂದು
ಮೂಲೆ ಸೇರೋದು
ಉತ್ತರ : ಅಜ್ಜನಕೋಡು)

ಭಾಷಾಮಿಶ್ರಣದ ಅಧ್ಯಯನಕ್ಕೆ ಸಿದ್ಧಿಯರ ಭಾಷೆ ಉತ್ತಮ ನಿದರ್ಶನವಾಗಿದೆ. ಸಿದ್ಧಿಯರ ಸೃಜನಶೀಲತೆಯನ್ನು ವಿಕಾಸಗೊಳಿಸಿ ಅವರಿಂದ ಅವರಿಂದ ಶ್ರೇಷ್ಠ ಸಾಹಿತ್ಯವನ್ನು ರಚಿಸುವ ಅವಕಾಶವನ್ನು ಒದಗಿಸಿಕೊಡಬೇಕಾಗಿದೆ. ಅದು ಕನ್ನಡಿಗರ ಕರ್ತವ್ಯವೂ ಆಗಿದೆ.

ಸಿದ್ಧಿಯರು ತಮ್ಮ ಪರಿಸರದ ಪ್ರಭಾವ ಪ್ರೇರಣೆಯಿಂದ ಜನಪದ ಕಲೆಗಳನ್ನು ರೂಢಿಸಿಕೊಂಡಿದ್ದಾರೆ. ಮೀನುಗಾರರು ಆಚರಿಸುವ ‘ಪುಗಡಿ ಕುಣಿತ’, ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ‘ಮೊಹರಂ ಕುಣಿತ’, ‘ಸಂಗ್ಯಾಬಾಳ್ಯಾ’ ಸಣ್ಣಾಟಗಳನ್ನು ಕಲಾತ್ಮಕವಾಗಿ ಮೈಗೂಡಿಸಿಕೊಂಡಿದ್ದಾರೆ. ಅವರ ಆಫ್ರಿಕನ್‌ಮೂಲದ ಸ್ವಂತಿಕೆಯನ್ನು ತೋರಿಸುವ ‘ಡಮಾಮಿ’ ಕುಣಿತವನ್ನು ನವರಾತ್ರಿಯಲ್ಲಿ ಕುಣಿಯುತ್ತಾರೆ. ಕಲೆಯ ಜೊತೆಗೆ ಕ್ರೀಡೆಯಲ್ಲಿಯೂ ಅವರಿಗೆ ತುಂಬ ಆಸಕ್ತಿಯಿದೆ. ಸಿದ್ಧಿಗಳು ಗಟ್ಟಿಮುಟ್ಟಾಗಿರುವುದರಿಂದ ಉತ್ತಮ ಕುಸ್ತಿಪಟುಗಳಾಗಿದ್ದಾರೆ. ಅವರಿಗೆ ಒಳ್ಳೆಯ ತರಬೇತಿ ಕೊಟ್ಟರೆ ಕರ್ನಾಟಕದ ಕ್ರೀಡಾಕ್ಷೇತ್ರದಲ್ಲಿ ಹೊಸ ಶಕೆಯೇ ಆರಂಭವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಸಿದ್ಧಿಯರಿಗೆ ತಮ್ಮದೇ ಆದ ಸಂಸ್ಕೃತಿ ಸಾಹಿತ್ಯವಿದ್ದರೂ ಅವರಿಗೆ ಆತ್ಮವಿಶ್ವಾಸವಿಲ್ಲ. ಒಳ ಒತ್ತಡ ಮತ್ತು ಹೊರ ಒತ್ತಡಗಳಿಂದ ಅವರ ಬಹಿರಂಗದ ಬದುಕು ಅಂತರಂಗದ ಆಲೋಚನೆಗಳು ನಿಯಂತ್ರಿತವಾಗಿವೆ. ಅವರಲ್ಲಿ ಆತ್ಮಸ್ಥೈರ್ಯ ಬರುವಂತೆ ಯಾವ ಜನಾಂಗವೂ ಪ್ರಯತ್ನಿಸಿಲ್ಲ. ‘ಇವರು ನಮ್ಮವರಲ್ಲ’ ಎಂಬ ಭಾವನೆಯಲ್ಲೇ ಅವರನ್ನು ದೂರವಿಟ್ಟಿರುವುದರಿಂದ ಸಾಮಾಜಿಕ ಕೀಳರಿಮೆ ಅವರನ್ನು ಕಾಡುತ್ತಿದೆ. ಈ ಕೀಳರಿಮೆಯೇ ಇಡೀ ಅವರ ಮಾನಸಿಕ ಬದುಕನ್ನು ಕೂಡ ಮೇಲ್ವರ್ಗದವರ ಮೇಲೆ ಅವಲಂಬಿತಗೊಳಿಸಿದೆ. ಅವರ ಪ್ರತಿಭೆಯನ್ನು ವಿಕಾಸಗೊಳಿಸಿ ಸಿದ್ಧಿ ಜನಾಂಗವನ್ನು ಆತ್ಮವಿಶ್ವಾಸದ ನೆಲೆಗೆ ಕೊಂಡೊಯ್ಯುವ ಸಾಮಾಜಿಕ ಮತ್ತು ಶೈಕ್ಷಣಿಕ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಬಂಧನದಿಂದ ಹೊರಬರುವಂತೆ ಮಾಡಲು ಅವರ ಬದುಕಿನಲ್ಲಿ ಚಲನಶೀಲತೆ ತರಬೇಕಾಗಿದೆ. ಆಧುನಿಕತೆಯ ಸ್ಪರ್ಶ ನೀಡಬೇಕಾಗಿದೆ. ಅದುವೇ ಪರಿವರ್ತನಶೀಲ ಮಾನವ ಸಂಸ್ಕೃತಿಯ ಲಕ್ಷಣವಾಗಿದೆ.

ಭಾಷಾಶಾಸ್ತ್ರಕ್ಕೂ ಮಾನವಶಾಸ್ತ್ರಕ್ಕೂ ಅರ್ಥಪೂರ್ಣ ಸಂಬಂಧವಿದೆ. ಭಾಷಾಶಾಸ್ತ್ರವು ಭಾಷೆಯ ಅಧ್ಯಯನಕ್ಕೆ ಎಲ್ಲ ಸಾಮಗ್ರಿಯನ್ನು ಭಾಷಾಸಮುದಾಯದಿಂದ ತೆಗೆದುಕೊಳ್ಳುತ್ತದೆ. ಭಾಷೆ ಮಾನವ ಬದುಕನ್ನು ಅರ್ಥಪೂರ್ಣವನ್ನಾಗಿ ಮಾಡುವಂತಹ, ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸುವಂತಹ ಮತ್ತು ಬದಲಾವಣೆಯನ್ನು ಸ್ವೀಕರಿಸಲು ಹಾಗೂ ತರಲು ಪ್ರೇರೇಪಣೆ ಮಾಡುವಂತಹ ಒಂದು ಪ್ರಬಲ ಸಾಮಾಜಿಕ ಪ್ರಕ್ರಿಯೆಯಾಗಿದೆ. ಮಾನವ ಜೈವಿಕ ಜೀವಿಯ ಹಂತದಿಂದ ಸಾಮಾಜಿಕ ಜೀವಿಯ ಪರಿಸ್ಥಿತಿಯನ್ನು ತಲುಪುವುದು ಭಾಷೆಯ ಮೂಲಕವೇ. ಭಾಷೆ ಎಂದರೆ ಮೂಲಭೂತವಾಗಿ ಕಲಿಕೆ, ಅರಿವು, ಅನುಭವ ಎಂದು ಅರ್ಥೈಸಬಹುದು.

ಭಾಷಾಶಿಕ್ಷಣದ ಕಾರ್ಯಗಳು ಜ್ಞಾನ ಪ್ರಸರಣವೇ ಅಲ್ಲದೆ, ವ್ಯಕ್ತಿತ್ವವನ್ನು ರೂಪಿಸುವುದು, ಆಯಾ ಸಂಸ್ಕೃತಿಯ ಪ್ರಮುಖ ಮೌಲ್ಯಗಳನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವುದು, ಮಾನವೀಯ ಭಾವನೆಗಳನ್ನು ವ್ಯಕ್ತಿಗಳಲ್ಲಿ ಮೂಡಿಸುವುದು ಹಾಗೂ ಪ್ರಗತಿಪರವಾದಂಥ ಬದಲಾವಣೆಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿ, ಆಂತರೀಕರಿಸಿಕೊಳ್ಳುವುದು ಇವುಗಳೆಲ್ಲ ಭಾಷಾ ಶಿಕ್ಷಣದ ಕಾರ್ಯಗಳೇ ಆಗಿವೆ. ಒಟ್ಟಿನಲ್ಲಿ, ಸಂಸ್ಕೃತಿಯ ಪ್ರಸರಣ ಹಾಗೂ ಮನೋಭಾವನೆಗಳ ಸೃಷ್ಟಿ ಇವು ಭಾಷಾ ಶಿಕ್ಷಣದ ಮೂಲ ಉದ್ದೇಶಗಳು.

ಭಾಷಾ ಶಿಕ್ಷಣದಲ್ಲಿ ಸಾಮಾನ್ಯವಾಗಿ ಎರಡು ಬಗೆಗಳನ್ನು ಗುರುತಿಸಬಹುದು. ಅವುಗಳೆಂದರೆ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ. ಔಪಚಾರಿಕ ಶಿಕ್ಷಣ ಎಂದರೆ ಯೋಜನಾ ಬದ್ಧವಾದ, ಉದ್ದೇಶಪೂರ್ವಕವಾದ ಹಾಗೂ ಒಂದು ನಿಯಮಿತ ಸಾಂಸ್ಥಿಕ ಚೌಕಟ್ಟಿನೊಳಗೆ ನಡೆಯುವಂಥ ಶೈಕ್ಷಣಿಕ ಚಟುವಟಿಕೆಗಳು ಎಂದಾಗುತ್ತವೆ. ಶಾಲಾ ಕಾಲೇಜುಗಳು, ಸಾಮಾನ್ಯವಾಗಿ ಆಹಾರ, ಅರಿವೆ, ಆಸರೆ ಈ ಮೂರನ್ನು ಮಾತ್ರ ಮಾನವನ ಮೂಲಭೂತ ಅವಶ್ಯಕತೆಗಳೆಂದು ಗುರುತಿಸಲಾಗುತ್ತದೆಯಾದರೂ ಅರಿವು ಕೂಡ ಮಾನವ ಜೀವನಕ್ಕೆ ಅಷ್ಟೇ ಅವಶ್ಯವಾದಂಥ ಒಂದು ಸಾಧನ. ಮಾನವನನ್ನು ಪ್ರಾಣಿ ಸ್ಥಿತಿಯಿಂದ ಮೇಲೆತ್ತುವುದೇ ಜ್ಞಾನಾರ್ಜನೆ. ತನ್ನ ಸುತ್ತಮುತ್ತಣ ಪ್ರಪಂಚದ ಬಗ್ಗೆ ಮಾನವ ಅರಿವನ್ನು ಪಡೆಯುವ ಪ್ರಕ್ರಿಯೆಯನ್ನು ಸಮಾಜೀಕರಣ ಎಂದು ಹೇಳುತ್ತಾರೆ. ಶಿಕ್ಷಣ ಈ ಸಾಮಾಜೀಕರಣದ ಪ್ರಮುಖ ಸಾಧನಗಳಲ್ಲಿ ಒಂದು. ಶಿಕ್ಷಣದ ಸ್ವರೂಪ ಔಪಚಾರಿಕವೇ ಆಗಲಿ, ಅನೌಪಚಾರಿಕವೇ ಆಗಲಿ ಆ ಶಿಕ್ಷಣ ಎಂಬ ಪ್ರಕ್ರಿಯೆಗೆ ಒಳಪಟ್ಟ ವ್ಯಕ್ತಿಗಳೆಲ್ಲಾ ವಿಷಯ ಸಂಗ್ರಹಣೆಯೇ ಅಲ್ಲದೆ ಆಯಾ ಸಮಾಜದಲ್ಲಿ ಜಾರಿಯಲ್ಲಿರುವಂಥ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆಯೂ ತಿಳಿವಳಿಕೆಯನ್ನು ಪಡೆಯುತ್ತಾರೆ. ಕಲಿಕೆಯ ಪ್ರಕ್ರಿಯೆಯಲ್ಲಿಯೇ ಜೀವನವನ್ನು ಕುರಿತು ದೃಷ್ಟಿಕೋನಗಳನ್ನು ವ್ಯಕ್ತಿಗಳು ಬೆಳೆಸಿಕೊಳ್ಳುತ್ತಾರೆ. ತಮ್ಮ ತಮ್ಮ ಸಾಮಾಜಿಕ ಪರಿಸರವನ್ನು ಕುರಿತಂತೆ ಅರಿವನ್ನು ಮೂಡಿಸಿಕೊಳ್ಳಲು ವಯಸ್ಕರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ಶಿಕ್ಷಣವನ್ನೇ ಅವಲಂಬಿಸಿರುವುದರಿಂದ ಮಾನವ ಸಮಾಜೀಕರಣದಲ್ಲಿ ಭಾಷಾ ಶಿಕ್ಷಣದ ಪಾತ್ರ ಮಹತ್ವವಾದುದು.

ಪ್ರತಿಯೊಂದು ಸಾಮಾಜಿಕ ವ್ಯವಸ್ಥೆಗೂ ತನ್ನದೇ ಆದಂತಹ ಸಂಸ್ಕೃತಿ ಇರುತ್ತದೆ. ಸಮಾಜ ನಿರ್ಮಿಸಿರುವಂತಹ ಈ ಸಾಂಸ್ಕೃತಿಕ ವ್ಯವಸ್ಥೆಯ ಬಗ್ಗೆ ಆಯಾ ಸಮಾಜದ ಸದಸ್ಯರು ತಿಳಿವಳಿಕೆಯನ್ನು ಪಡೆದುಕೊಂಡು ಆ ಸಂಸ್ಕೃತಿಯ ಸಾರವನ್ನು ಮುಂಬರುವ ಪೀಳಿಗೆಗೆ ವರ್ಗಾಯಿಸಬೇಕಾಗುತ್ತದೆ. ಶಿಕ್ಷಣ ಸಾಂಸ್ಕೃತಿಕ ವ್ಯವಸ್ಥೆಯ ಚಿಹ್ನೆಗಳ ವರ್ಗಾವಣೆಯ ಒಂದು ಪ್ರಮುಖ ಸಾಧನ. ಸಮಾಜದ ಇತಿಹಾಸ, ಸಾಧನೆಗಳು, ಧರ್ಮ, ಭಾಷೆ, ಮೌಲ್ಯಗಳು, ಸಾಹಿತ್ಯ, ಕಲೆ, ತಾಂತ್ರಿಕ ಜ್ಞಾನ ಇವೇ ಮುಂತಾದ ಸಂಸ್ಕೃತಿಯ ಎಲ್ಲ ಅಂಶಗಳನ್ನೂ ಶಿಕ್ಷಣ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸುತ್ತದೆ.

ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಭಾಷೆಯು ಅತ್ಯಂತ ಪ್ರಭಾವಕಾರಿ ಕಾರ್ಯಗಳಲ್ಲಿ ಒಂದಾಗಿದೆ. ಭಾಷಾ ಪ್ರಕ್ರಿಯೆ ರೂಪುಗೊಳ್ಳುವುದು ಸಮಾಜದಲ್ಲಿಯೇ ಆದುದರಿಂದ ಭಾಷೆಗೂ ಸಮಾಜಕ್ಕೂ ಶಿಕ್ಷಣಕ್ಕೂ ಪರಸ್ಪರ ಸಂಬಂಧ ಹಾಗೂ ಅವಲಂಬನೆಯಿದೆ. ಭಾಷಾ ಪ್ರಕ್ರಿಯೆ ಸ್ಥಗಿತವಾದುದಲ್ಲ. ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಉಂಟಾಗುವ ಬದಲಾವಣೆಗೆ ಅದು ಸ್ಪಂದಿಸುವಂಥದ್ದಾಗಿದೆ. ಹಾಗೆಯೇ ಭಾಷೆಯಿಂದಲೂ ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ಉಂಟಾಗುತ್ತವೆ. ಜನರಲ್ಲಿ ಪ್ರಗತಿಪರ ಮನೋಭಾವಗಳನ್ನು ಬೆಳೆಸುವುದರ ಮೂಲಕ ಬದಲಾವಣೆಗಳನ್ನು ಸ್ವೀಕರಿಸಲು ಭಾಷೆ ಅವರನ್ನು ತಯಾರು ಮಾಡುತ್ತದೆ. ಭಾಷೆಯ ಮೂಲ ಯಾವುದೇ ಇರಲಿ, ಅದರಲ್ಲಿ ಸಂಸ್ಕೃತಿಯ ವರ್ಗಾವಣೆ, ಮೌಲ್ಯಗಳ ಸೃಷ್ಟಿ ಹಾಗೂ ಕಲಿಸುವಿಕೆ ಇವೇ ಮುಂತಾದ ಹತ್ತು ಹಲವು ಜವಾಬ್ದಾರಿ ಗಳಿರುತ್ತವೆ.

ಒಟ್ಟಾರೆ ಭಾಷಾಶಾಸ್ತ್ರ ಅಭ್ಯಾಸದಿಂದ ಮಾನವಶಾಸ್ತ್ರಜ್ಞರಿಗೆ ಬಹಳಷ್ಟು ಸಹಾಯವಿದೆ. ಮಾನವ ಸಮಾಜದ ವ್ಯವಸ್ಥೆ ಮತ್ತು ಪರಂಪರೆಯ ಪ್ರಭಾವವೂ ಭಾಷೆಯ ಮೇಲೆ ಆಗಿಯೇ ಇರುತ್ತದೆ. ಭಾಷೆಯ ಮೂಲಕ ಮಾನವ ಸಮಾಜದ ಇತಿಹಾಸವನ್ನೂ ಸಂಸ್ಕೃತಿಯನ್ನೂ ತಿಳಿದುಕೊಳ್ಳಬಹುದು. ಆಯಾ ಭಾಷೆಯನ್ನು ಆಡುವವರ ಸಂಸ್ಕೃತಿ, ನಾಗರಿಕತೆಯನ್ನು ಭಾಷೆ ಪ್ರತಿಬಿಂಬಿಸುತ್ತದೆ. ಭಾಷೆಯ ಇತಿಹಾಸದಿಂದ ನಾಗರಿಕತೆಯ ವಿಕಾಸ ಅರಿತಂತೆ ಆಗುವುದು, ಭಾಷೆಯ ಚಾರಿತ್ರಿಕ ಬೆಳವಣಿಗೆ, ಮೂಲಭಾಷೆಯ ಪುನಾರಚನೆ, ಭಾಷಾ ಸಮಾಜದಲ್ಲಿರುವ ಕುಟುಂಬ ವಾಚಕಗಳು, ಬಂಧುತ್ವ ವ್ಯವಸ್ಥೆ ಇತ್ಯಾದಿ ಅಂಶಗಳನ್ನು ಅರಿಯಬಹುದು. ಭಾಷೆ, ಮಾನವ ವಿಕಾಸದ ಪ್ರತೀಕವಾಗಿರುವುದರಿಂದ ಅವೆರಡೂ ಒಂದರಿಂದೊಂದು ಪ್ರಯೋಜನ ಪಡೆಯುತ್ತವೆ.