ಮಾನವ ವಿಕಸನದ ಮೂಲ ಘಟ್ಟವೇ ಅಲಾಮಾರಿತನ, ಬೇಟೆಯಾಡುವುದು ಹಾಗೂ ಗ್ರಾಮಗಳೊಂದಿಗೆ ಕಸುಬಾದಾರಿತ ಕುಟುಂಬಗಳು ನಂತರ ಎದುರಾದವು. ಪಶುಪಾಲನೆ ಮಾಡುವುದರಿಂದಾಗಿ. ಆದ್ದರಿಂದ ಅಲೆದಾಡುವುದು ಅನಿವಾರ್ಯವಾಗಿತ್ತು. ಬೇಸಾಯವನ್ನು ಆರಂಭಿಸಿದ ಮೇಲೆ ಒಂದು ಹಂತದಲ್ಲಿ ಅಲೆಮಾರಿತನ ಕಡಿಮೆಯಾಗಿತ್ತು. ಬೇಸಾಯದಿಂದ ಹಳ್ಳಿಗಳು ಅಥವಾ ಗ್ರಾಮಗಳು ಉದಯವಾದವು. ನಂತರ ಸಾಮಾಜಿಕ ಸ್ಥಾನಮಾನಗಳ ಪರಿವರ್ತನೆಯಿಂದ ಹಲವು ಕಸುಬಾಧರಿತ ಸಮುದಾಯಗಳು ತಮ್ಮ ಬದುಕಿಗಾಗಿ ಮತ್ತೆ ಅಲೆಮಾರಿತನವನ್ನು ಮುಂದುವರೆಸಿದವು. ಅಂತಹ ಸಮುದಾಯಗಳೆಂದರೆ ಕಾಡುಗೊಲ್ಲ, ಚೆಂಚು ದೊಂಬಿದಾಸ, ಬುಂಡೆಬೆಸ್ತ ಸಮುದಾಯಗಳಾಗಿವೆ.

ಬುಂಡೇಬೆಸ್ತ ಸಮುದಾಯವು ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಕಡೆಗಳಲ್ಲೂ ಕಂಡುಬರುತ್ತದೆ. ನದಿಗಳ ತೀರಪ್ರದೇಶಗಳ ಅಥವಾ ಕೆರೆಕಟ್ಟೆಗಳ ಸಮೀಪಗಳಲ್ಲಿ ಹೆಚ್ಚಾಗಿ ಇವರು ನೆಲೆಸಿರುತ್ತಾರೆ. ಈ ಸಮುದಾಯದ ಜನರು ಹಿಂದೆ ಬೇರೆ ಯಾವುದೇ ಉದ್ಯೋಗವನ್ನು ಮಾಡುತ್ತಿರಲಿಲ್ಲ. ಇವರ ಮೂಲಕಸಬು ಕೆರೆಕಟ್ಟೆಗಳಲ್ಲಿ ನದಿಗಳಲ್ಲಿ ಮೀನುಗಳ ಬೇಟೆ ಅಥವಾ ಶಿಕಾರಿಯನ್ನು ಮಾಡುವುದು ಮಾತ್ರ. ಬೇರೆ ಕಸುಬು ಅಥವಾ ಉದ್ಯೋಗವನ್ನು ಮಾಡಿದರೆ ಅದು ಪಾಪದ ಕೆಲಸವೆಂದು ಪರಿಗಣಿಸುತ್ತಿದ್ದರು. ಆದ್ದರಿಂದ ವ್ಯವಸಾಯವನ್ನಾಗಲಿ, ಪಶುಪಾಲನೆಯನ್ನಾಗಲಿ ಇವರು ಮಾಡುತ್ತಿರಲಿಲ್ಲ. ಹಾಗಾಗಿ ಈ ಸಮುದಾಯದ ಪ್ರಮುಖ ವೃತ್ತಿ ಮೀನುಗಳ ಶಿಕಾರಿ ಅಥವಾ ಬೇಟೆ ಮಾತ್ರ ಆಗಿತ್ತು. ಆದ್ದರಿಂದ ಇವರು ಒಂದೇ ಕಡೆ ಶಾಶ್ವತವಾಗಿ ನೆಲೆಸದೇ ಅಲೆಮಾರಿಗಳಂತೆ ನದಿ ತೀರದ ಪ್ರದೇಶಗಳ ಉದ್ದಕ್ಕೂ ಒಂದು ಕಡೆಯಿಂದ ಮತ್ತೊಂದು ಕಡೆಗೆ, ಕೆರೆಕಟ್ಟೆಗಳ ಕಡೆಗೆ ಮೀನುಗಳ ಬೇಟೆಗಾಗಿ ಇಡೀ ವರ್ಷವೆಲ್ಲ ತಿರುಗಾಡುತ್ತಾರೆ.

ಬುಂಡೇಬೆಸ್ತ ಸಮುದಾಯವು ಕಾವೇರಿ, ಲಕ್ಷ್ಮಣತೀರ್ಥ ಹಾಗೂ ಕಬಿನಿ ನದಿಗಳ ತೀರಗಳಾದ ನಂಜನಗೂಡು, ನಾಗರಹೊಳೆ, ಬಿಸಿ ಕಾಲೋನಿ, ಹುಣಸೂರು, ಕಾಕನಕೋಟೆ ಅರಣ್ಯಗಳು, ಶ್ರೀರಂಗಪಟ್ಟಣ, ಚುಂಚನಕಟ್ಟೆ, ರಾಮನಾಥಪುರ, ಗುಂಡ್ಲುಪೇಟೆ ಹಾಗೂ ಕೃಷ್ಣರಾಜಸಾಗರ, ಬಲಮುರಿ ಇತ್ಯಾದಿ ಸ್ಥಳಗಳಲ್ಲಿ ನೆಲೆಸಿದ್ದಾರೆ.

ಈ ಸಮುದಾಯದ ಮೂಲದ ಬಗ್ಗೆ ಯಾವ ರೀತಿಯ ಅಭಿಪ್ರಾಯಗಳು ಇರುವುದಿಲ್ಲ. ಇವರು ಬಳಸುವ ಭಾಷೆ ಮಾತ್ರ ಮರಾಠಿ ಭಾಷೆಯಾಗಿದೆ. ಆದ್ದರಿಂದ ಇವರು ಮರಾಠಿಯವರಾಗಿದ್ದಾರೆ. ಮೂಲತಃ ಇವರು ಮಹಾರಾಷ್ಟ್ರದಿಂದ ವಲಸೆ ಬಂದವರು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಈ ಸಮುದಾಯದವರು ಆರಾಧಿಸುವ ದೇವರು ಚಾಮುಂಡೇಶ್ವರಿ ಮತ್ತು ಕೊಲ್ಲಾಪುರದಮ್ಮ ಬಹಳ ಕಾಲದಿಂದಲೂ ಈ ದೇವತೆಯನ್ನು ಪೂಜಿಸುವ ಅಥವಾ ಆರಾಧಿಸುವ ಪದ್ಧತಿ ಇವರಲ್ಲಿದೆ. ಕನ್ನಡವನ್ನು ಕನ್ನಡ ಭಾಷೆ ಬಲ್ಲವರಿಗಿಂತ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಮಾತೃಭಾಷೆ ಮಾತ್ರ ಮರಾಠಿ ಭಾಷೆ. ಆದ್ದರಿಂದ ಮಹಾರಾಷ್ಟ್ರದಿಂದ ಬಂದವರು ಎಂಬುದರಲ್ಲಿ ಅನುಮಾನವೇ ಇಲ್ಲ. ಇವರು ಮಾತ್ರ ಕನ್ನಡನಾಡು ತಮ್ಮ ಮೂಲ ಎನ್ನುತ್ತಾರೆ.

ಈ ಬುಂಡೇಬೆಸ್ತರ ಸಮುದಾಯದಲ್ಲಿ ಪಸಗ್ರಾಯ, ದುರ್ವರಾಯ, ದುಮಾಳ ಮತ್ತು ಸಾಸಕೇನ್‌ಎಂಬ ನಾಲ್ಕು ಉಪಪಂಗಡಗಳಿವೆ. ಪಸಗ್ರಾಯ ಪಂಗಡದವರೇ ಇವರಲ್ಲಿ ಶ್ರೇಷ್ಠಯೆನ್ನುತ್ತಾರೆ. ಈ ಸಮುದಾಯಗಳ ಕುಟುಂಬಗಳಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಾದರೆ ಈ ಪಂಗಡದವರ ಮುಂದಾಳತ್ವದಲ್ಲಿಯೇ ನಡೆಯಬೇಕು. ವಿವಾಹದ ಸಂಬಂಧಗಳು ಹಬ್ಬ ಹರಿದಿನಗಳು ಸಾಮಾಜಿಕ ಕಾರ್ಯಕಟ್ಟಳೆಗಳು ಈ ನಾಲ್ಕು ಪಂಗಡಗಳ ಗುಂಪಿನ ನಡುವೆ ನಡೆಯುತ್ತವೆ. ಇವರು ಸಾಮಾಜಿಕ, ಆರ್ಥಿಕ, ಧಾರ್ಮಿಕವಾಗಿ ತುಂಬ ಹಿಂದುಳಿದವರಾಗಿದ್ದಾರೆ. ಸಾಂಪ್ರಾದಾಯಿಕವಾಗಿ ಇವರ ಆರ್ಥಿಕ ಜೀವನದ ಬೆನ್ನೆಲುಬು ಮೀನು ಹಿಡಿಯುವುದೇ ಆಗಿದೆ. ಮೀನು ಬೇಟೆ ಅಥವಾ ಶಿಕಾರಿ, ಹಚ್ಚೆ ಹಾಕುವುದು, ಬಲೆ ಹೆಣೆಯುವುದು ಅಥವಾ ನೇಯುವುದು ಇವರ ಪ್ರಮುಖ ಆರ್ಥಿಕ ಜೀವನದ ಮೆಟ್ಟಿಲುಗಳು. ಪ್ರತಿದಿನ ಸಂಜೆಯ ಸಮಯದಲ್ಲಿ ಬಲೆಯನ್ನು ಕೆರೆ ಅಥವಾ ನದಿಯಲ್ಲಿ ಬಿಟ್ಟು ಬೆಳಗಿನ ಸಮಯದಲ್ಲಿ ಬಲೆಯನ್ನು ಎತ್ತುವ ಕಾರ್ಯ ನಡೆಯುತ್ತದೆ. ಬೆಳಗ್ಗೆ ೫ರಿಂದ ೮ ಗಂಟೆಯವರೆಗೆ ಮಾತ್ರ ಶಿಕಾರಿ ಮಾಡುತ್ತಾರೆ. ಶಿಕಾರಿ ಮಾಡಿದ ಮೀನುಗಳನ್ನು ಪಕ್ಕದ ಹಳ್ಳಿಯಲ್ಲಿ ಹೆಂಗಸರು ಮಾರಾಟ ಮಾಡಿ ತಮ್ಮ ದಿನಬಳಕೆ ವಸ್ತುಗಳನ್ನು ನಗರಗಳಲ್ಲಿ ಖರೀದಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೀನುಗಳನ್ನು ಹಳ್ಳಿಗರಿಗೆ ಕೊಟ್ಟು ಅದರ ಬದಲಿಗೆ ರಾಗಿ, ಜೋಳ, ಅಕ್ಕಿ ಮುಂತಾದ ಸಾಮಾನುಗಳು ವಿನಿಮಯ ಮಾಡಿಕೊಳ್ಳುವುದುಂಟು. ಜಾಸ್ತಿ ಮೀನುಗಳ ಶಿಕಾರಿ ಮಾಡಿದರೆ ಮಾತ್ರ ಗಂಡಸರು ನಗರಗಳಿಗೆ ಒಯ್ದು ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಗ್ರಾಹಕರೇ ಇವರು ಶಿಕಾರಿಯನ್ನು ಮುಗಿಸಿಕೊಂಡು ಬರುವ ವೇಳೆಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಕಾಯುವುದುಂಟು. ಒಂದೊಂದು ದಿನ ಮೀನು ಬೇಟೆಯಾಗದ ಅಥವಾ ಶಿಕಾರಿಯಾಗದ ದಿನ ತಮ್ಮ ಕುಟುಂಬಗಳ ಸ್ತ್ರೀಯರು ಹಳ್ಳಿ ಹಳ್ಳಿಗೆ ಹೋಗಿ ಹಚ್ಚೆ ಹಾಕುವುದರ ಮೂಲಕ ಅಂದರೆ, ಪುರಾತನ ಕಾಲದ ಐತಿಹಾಸಿಕ ದಾಖಲೆಗಳನ್ನು ಚಿತ್ರದ ರೂಪವಾಗಿ ಹಳ್ಳಿ ಅಥವಾ ಗ್ರಾಮೀಣ ಜನರ ಮೈ ಕೈಗಳ ಮೇಲೆ ಚಿತ್ರಿಸುತ್ತಾರೆ. ಹಚ್ಚೆ ಹಾಕಿಸಿಕೊಂಡ ಗ್ರಾಮೀಣ ಜನರು ನೀಡುವ ಹಣವನ್ನು ಇಲ್ಲದಿದ್ದರೆ ಹಣದ ರೂಪದಲ್ಲಿ ರಾಗಿ, ಜೋಳ, ಅಕ್ಕಿ ಇತ್ಯಾದಿ ದವಸಗಳನ್ನು ಪಡೆದು ತಮ್ಮ ಜೀವನವನ್ನು ಸಾಗಿಸುತ್ತಾರೆ.

ಈ ಸಮುದಾಯದ ಆರ್ಥಿಕ ಸ್ಥಿತಿಗತಿಗಳು ದುರ್ಬಲವಾಗಿದ್ದರೂ ತಮ್ಮ ಸಾಂಪ್ರದಾಯಿಕ ಧಾರ್ಮಿಕ ಜೀವನದಲ್ಲಿ ನಡೆಯುವಂತಹ ಹಬ್ಬ ಹರಿದಿನಗಳು, ಮದುವೆ ಸಮಾರಂಭಗಳಿಗೆ ಕುಲದ ಗುರುಗಳನ್ನು ವರ್ಷಕ್ಕೊಮ್ಮೆ ಮನೆಗೆ ಕರೆಸಿ ಪೂಜಿಸುವುದು ಇವರ ಸಂಪ್ರದಾಯ. ಪ್ರತಿಯೊಬ್ಬರೂ ಗುರುಗಳಿಗೆ ಕಾಣಿಕೆ ಅಥವಾ ಹರಕೆಯ ರೂಪದಲ್ಲಿ ಗೌರವ ಸಲ್ಲಿಸುವರು. ಹೀಗೆ ಸಲ್ಲಿಸುವುದರಲ್ಲಿ ಕಡಿಮೆಯಾದರೆ ತಮ್ಮನ್ನು ಗುರುಗಳು ಎಲ್ಲಿ ಕೀಳು ಎಂದು ಭಾವಿಸುತ್ತಾರೋ ಎಂಬ ಭಯದಿಂದ ಎಷ್ಟೇ ಕಷ್ಟವಾದರೂ ತಮ್ಮ ಅಕ್ಕಪಕ್ಕದ ಹಳ್ಳಿಯವರಿಂದ ಸಾಲವನ್ನಾದರೂ ಮಾಡಿ ತಮ್ಮ ಕುಲದ ಗುರುಗಳಿಗೆ ಕಾಣಿಕೆ ಸಲ್ಲಿಸುತ್ತಾರೆ. ಈ ಸಮುದಾಯದವರಲ್ಲಿ ಕುಲದ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಕುಲದ ಹಬ್ಬದ (ಕೊಂಡ) ಜೊತೆಗೆ ಗಂಗಾಮಾತೆ ಹಬ್ಬ, ಕೊಲ್ಲಾಪುರದಮ್ಮನ ಹಬ್ಬವನ್ನು ಸಹ ಆಚರಿಸುತ್ತಾರೆ. ಕುಲದ ಹಬ್ಬ ಅಥವಾ ಕೊಂಡದ ಹಬ್ಬದಲ್ಲಿ ಮದುವೆಯಾಗದ ಕನ್ಯೆಯರು ಹಾಗೂ ಮದುವೆಯಾದರೂ ಗರ್ಭವತಿಯಾಗದ ಸ್ತ್ರೀಯರು ಈ ಹಬ್ಬಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಸಮುದಾಯದ ಧರ್ಮವಿಧಿ, ಈ ಹಬ್ಬವನ್ನು ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಇಲ್ಲಿ ತಮ್ಮ ಪುರಾತನ ಸಂಪ್ರದಾಯವನ್ನು ಚಾಚೂತಪ್ಪದೆ ನಿರ್ವಹಿಸುತ್ತಾರೆ.

ಈ ಜನಾಂಗದಲ್ಲಿ ಸಂಪ್ರದಾಯ, ಧಾರ್ಮಿಕ ವಿಚಾರದಲ್ಲಿ ಸ್ತ್ರೀಪುರುಷರ ಪಾತ್ರ ಒಂದೇ ಇವರ ಎಲ್ಲ ಆಚರಣೆಗಳಲ್ಲಿಯೂ ಹಿಂದೂ ಸಂಪ್ರದಾಯದ ಪ್ರಭಾವ ಎದ್ದು ಕಾಣುತ್ತದೆ. ಇವರ ಎಲ್ಲ ಕಾರ್ಯಗಳಲ್ಲಿ ‘ಶಕುನ’ ಅತ್ಯಂತ ಮಹತ್ವವಾದದ್ದು. ಶಕುನ ಹಾಗೂ ಭವಿಷ್ಯದ ಬಗ್ಗೆ ಅಪಾರವಾದ ನಂಬಿಕೆ ಹಾಗೂ ವಿಶ್ವಾಸವನ್ನು ಹೊಂದಿದ್ದಾರೆ. ಬೇಟೆಗೆ ಹೋಗುವ ಸಮಯದಲ್ಲಿ ಎದುರಿಗೆ ರೈತನು, ಜೋಡಿ ಎತ್ತುಗಳ ಮೇಲೆ ನೇಗಿಲು ಹೇರಿಕೊಂಡು ಬಂದರೆ ಶುಭ ಶಕುನವೆಂದು ನಂಬುತ್ತಾರೆ. ರೈತನು ಎತ್ತುಗಳ ಮೇಲೆ ನೇಗಿಲು ಹೇರಿಕೊಂಡು ಬಂದರೆ ಶುಭ ಶಕುನವೆಂದು ನಂಬುತ್ತಾರೆ. ರೈತನು ಎತ್ತುಗಳ ಮೇಲೆ ನೇಗಿಲು ಹೇರಿಕೊಂಡು ಹೋದ ರೀತಿಯಲ್ಲಿ ಮೀನುಗಳನ್ನು ಬುಟ್ಟಿಯ ತುಂಬಾ ತುಂಬಿಕೊಂಡು ಬರುತ್ತೇವೆಂಬ ನಂಬಿಕೆ ಇವರಿಗೆ ಉಂಟು. ಧಾರ್ಮಿಕತೆಯಲ್ಲಿ ಶಕುನ ಒಂದು ವೈಚಾರಿಕ ವೈಶಿಷ್ಟ್ಯವಾದರೆ, ಅವರ ಮೈಮೇಲೆ ಆವೇಶ ಬರುವುದು ಇನ್ನೊಂದು ವೈಶಿಷ್ಟ್ಯ. ಇಂತಹ ಸಮಯಗಳಲ್ಲಿ ಬಹುಭಯದಿಂದ ಹಾಗೂ ಕ್ರಿಯಾತ್ಮಕವಾದ ಭಾವನೆಯಿಂದ ನಡೆದುಕೊಂಡು ಇಂತಹುಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಭೂತಪ್ರೇತ ಪಿಶಾಚಿ ದೆವ್ವಗಳಿಗೆ ಇವರು ಹೆದರುವುದಿಲ್ಲ ಅಥವಾ ಭಯ ಪಡುವುದಿಲ್ಲ. ಆದರೆ ಈ ಸಮುದಾಯದ ಜನರು ಮಾಟ ಮಂತ್ರಗಳನ್ನು ಹೆಚ್ಚಾಗಿ ನಂಬುವುದು ಕಂಡುಬರುತ್ತದೆ.

ಈ ಸಮುದಾಯದವರು ಇತ್ತೀಚೆಗೆ ಇತರ ನಾಗರಿಕ ಸಮಾಜದವರಂತೆ ಜೀವನ ನಡೆಸುವ ರೀತಿಯನ್ನು ರೂಢಿಸಿಕೊಂಡಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಸ್ಥಿತ್ಯಂತರ ಹೊಂದಿರುವುದನ್ನು ಕಾಣಬಹುದಾಗಿದೆ. ಕೂಲಿ ಕಾರ್ಮಿಕರಾಗಿ ತಮ್ಮ ಆರ್ಥಿಕ ಜೀವನದ ಮಟ್ಟವನ್ನು ಸುಧಾರಿಸಿಕೊಂಡಿದ್ದಾರೆ. ಅಲೆಮಾರಿಗಳಾದ ಇವರು ಇತ್ತೀಚೆಗೆ ಒಂದೇ ಕಡೆ ನೆಲೆಸುವುದನ್ನು ರೂಢಿಸಿಕೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಈ ಸಮುದಾಯದ ಮಕ್ಕಳು ಶಾಲೆಗೆ ಹೋಗುತ್ತಿರುವುದು ಕಂಡುಬರುತ್ತದೆ.