ಛಪ್ಪರಬಂದ ಬುಡಕಟ್ಟಿನ ಜನರು ನಮ್ಮ ರಾಜ್ಯದ ವಿಜಾಪುರ, ಬಾಗಲಕೋಟ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಇವರ ಮೂಲವನ್ನು ಕುರಿತು ವಿವಿಧ ಚಿಂತಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಕೆನಡಿ (೧೦೭:೪೬) ಅವರ ಪ್ರಕಾರ “ಛಪ್ಪರಬಂದರು ಮೂಲತಃ ಶೇಖ ಮೊಹಮ್ಮದರಾಗಿದ್ದು ಇವರು ಪಂಜಾಬ್‌ಮೂಲದಿಂದ ಬಂದವರು” ಎಂದು ಹೇಳುತ್ತಾರೆ. ಎಂಥೋವೆನ್‌(೧೯೪೫:೨೮೬) ಅವರು ಹೇಳುವಂತೆ “ಇವರು ರಜಪೂತ ಮೂಲದವರಾಗಿದ್ದು ಭಾರತದ ಮೇಲ್ಭಾಗದಿಂದ ಬಂದವರಾಗಿದ್ದು ಮನೆಯಲ್ಲಿ ಹಿಂದೂಸ್ಥಾನಿ ಭಾಷೆಯನ್ನು ಮಾತನಾಡುತ್ತಾರೆ. ಅಲ್ಲದೇ ಭಾರತದ ಮೇಲ್ಭಾಗದ ಬ್ರಾಹ್ಮಣರನ್ನು ತಮ್ಮ ಪುರೋಹಿತರನ್ನಾಗಿಸಿಕೊಂಡವರಾಗಿದ್ದಾರೆ.” ಮುಂಬೈ ಗ್ಯಾಜೆಟ್ಟಿಯರ (೧೮೮೪) (ಸಂಪುಟ ೨೩ : ೨೯೬)ದಲ್ಲಿ ಇವರ ಬಗ್ಗೆ ತಿಳಿಸುತ್ತಾ “ಇವರು ಗುಜರಾತ ಭಾಗದಿಂದ ಬಂದವರಾಗಿದ್ದು ಆದಿಲ್‌ಶಾಹಿ ಆಳ್ವಿಕೆಯಲ್ಲಿ ಕೆಲಸವನ್ನು ಅರಸುತ್ತಾ ವಿಜಾಪುರ ಜಿಲ್ಲೆಗೆ ೧೯೪೯-೧೯೬೦ರ ಸುಮಾರು ಬಂದವರಾಗಿದ್ದಾರೆ.” ಈಟನ್‌(೧೯೭೮) ಅವರ ಅಭಿಪ್ರಾಯದಂತೆ ಛಪ್ಪರಬಂದರು ಗುಜರಾತದಿಂದ ೧೬ ಮತ್ತು ೧೭ನೇ ಶತಮಾನದಲ್ಲಿ ಬಂದವರಾಗಿದ್ದು ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರಾಗಿದ್ದಾರೆ. ಅವರ ಮೂಲವನ್ನು ಕುರಿತು ಅವರನ್ನೇ ಪ್ರಶ್ನಿಸಿದಾಗ ಅವರು ‘ಛಪ್ರಾ’ ಎಂಬ ಬಿಹಾರದ ಒಂದು ಹಳ್ಳಿಯಿಂದ ಬಂದವರಾಗಿದ್ದರಿಂದ ಅವರನ್ನು ಛಪ್ಪರಬಂದ ಎಂದು ಕರೆಯಲಾಗುತ್ತದೆ ಎಂದು ಹೇಳುತ್ತಾರೆ.

ಛಪ್ಪರಬಂದ ಎಂಬ ಪದ ಹಿಂದಿ ಶಬ್ದ ‘ಛಪ್ಪರ’ ಎಂಬ ಶಬ್ದದಿಂದ ಬಂದದ್ದಾಗಿದ್ದು ಅದರ ಅರ್ಥ (ಹೊದಿಕೆ) ಮೇಲ್ಛಾವಣಿ ಹಾಗೂ ಬಂದ್‌ಎಂಬುದರ ಅರ್ಥ ಹಾಕುವುದು ಅಥವಾ ಕಟ್ಟುವುದು ಎಂದು ಆಗುತ್ತದೆ. ಆದ್ದರಿಂದ ಛಪ್ಪರಬಂದರನ್ನು ಮೇಲ್ಛಾವಣಿ ಕಟ್ಟುವವರೆಂದು ಕರೆಯಲಾಗುತ್ತದೆ. (೧೯೦೬:೧೧೩) ಅವರ ಪ್ರಕಾರ “ಛಪ್ಪರಬಂದರು ವಿಜಾಪುರ ಜಿಲ್ಲೆಯಲ್ಲಿ ೧೭ನೇ ಶತಮಾನದಲ್ಲಿ ಮೊಗಲ್‌ ಚಕ್ರವರ್ತಿಯೊಂದಿಗೆ ಬಂದು ವಾಸಿಸುತ್ತಿದ್ದು ಚಕ್ರವರ್ತಿಯ ಸೈನ್ಯದ ಸೈನಿಕರಿಗೆ ಛಪ್ಪರವನ್ನು ಹಾಕುವ ಕೆಲಸದಲ್ಲಿ ನಿರತರಾದವರು.

ಎಡ್ವರ್ಡ್ಸ್‌(೧೯೩೧:೬) ಅವರ ಪ್ರಕಾರ “ಛಪ್ಪರಬಂದರು ಒಂದು ಉತ್ಸಾಹಭರಿತ ಗುಂಪಾಗಿದ್ದು ಮೊಹಮ್ಮದ್‌ಸೈನ್ಯದ ಸೈನಿಕರಿಗೆ ಗುಡಿಸಲನ್ನು ಹಾಕುವ ಕೆಲಸದಲ್ಲಿ ನಿರತರಾಗಿದ್ದವರು” ಎಂದು ಹೇಳುತ್ತಾರೆ. ಎಂಥೋವೆನ್‌(೧೯೭೫:೨೮೬) ಎಂಬ ಮತ್ತೊಬ್ಬ ಚಿಂತಕರ ಪ್ರಕಾರ ಇವರ ಮೂಲ ಉದ್ಯೋಗ ಛಪ್ಪರವನ್ನು ಹಾಕುವುದು ಆಗಿದ್ದು ಇದಲ್ಲದೇ ಇವರು ಖೊಟ್ಟಿ ನಾಣ್ಯವನ್ನು ತಯಾರಿಸುವುದರಲ್ಲಿ ನಿಪುಣರಾದವರು” ಎಂದು ಹೇಳುತ್ತಾರೆ. ಗೇಯರ್‌(೧೯೦೬:೧೧೩) ಎಂಬ ಚಿಂತಕರ ಅಭಿಪ್ರಾಯದಂತೆ ಒಂದು ನೂರು ವರ್ಷಗಳ ಹಿಂದೆ ಯುದ್ಧಗಳು ಕೊನೆಗೊಂಡಾಗ ಛಪ್ಪರಬಂದರು ಚಡಪಡಿಸುತ್ತಾ ದೇಶದ ತುಂಬೆಲ್ಲ ಸಣ್ಣ ವ್ಯಾಪಾರಸ್ಥರಾಗಿ ಕಪಟ ಸಾಧುಗಳಾಗಿ ಕೊನೆಗೆ ಖೊಟ್ಟಿ ನಾಣ್ಯ ತಯಾರಿಕೆಯಲ್ಲಿ ತೊಡಗಿದರು.

ಅಲೆಕ್ಸಾಂಡರ್‌(೧೯೦೨) ಎಂಬ ಚಿಂತಕರು ಹೇಳುವಂತೆ ಛಪ್ಪರಬಂದರು ತಮ್ಮ ತಮ್ಮೊಳಗೆ ಅಂದರೆ ತಮ್ಮ ಸಮುದಾಯದಲ್ಲಿ ಪರಸ್ಪರರನ್ನು ‘ಬಾದೂ’ಗಳೆಂದು ಕರೆಯುತ್ತಾರೆ. ಆದರೆ ಅವರು ಖೊಟ್ಟಿ ನಾಣ್ಯವನ್ನು ತಯಾರಿಸುವುದು ಹಾಗೂ ಅದರ ಚಲಾವಣೆಯಲ್ಲಿ ನಿರತರಾಗಿದವರಾಗಿದ್ದರಿಂದ ಅಪರಾಧ ಲೋಕದಲ್ಲಿ ಥರ್ಸ್ವನ್‌(೧೯೦೯:೧೬) ಅವರು ಹೇಳುವಂತೆ “ಖೂಲಸೂರ್ಯರು” ಎಂದು ಕರೆಯಲಾಗುತ್ತಿತ್ತು.

ಛಪ್ಪರಬಂದರ ಬಗ್ಗೆ ಪಾಪಾರಾವ್‌ನಾಯ್ಡು ಎಂಬುವರು (೧೯೦೭) ೧೯೦೪ರಲ್ಲಿ ರಾಯಪೂರದ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಅವರ ಮುಂದೆ ಕುತೂಹಲಕರ ಕಥೆಯನ್ನು ಥರ್ಸ್ವನ್‌(೧೯೦೯:೨೦) ಅವರು ತಮ್ಮ ಪುಸ್ತಕ ‘ದಕ್ಷಿಣ ಭಾರತದ ಜಾತಿಗಳು ಹಾಗೂ ಬುಡಕಟ್ಟುಗಳು’ ಎಂಬ ಪುಸ್ತಕದಲ್ಲಿ ಈ ಕೆಳಗಿನಂತೆ ದಾಖಲಿಸಿದ್ದಾರೆ.

ಮೊಗಲರ ಆಳ್ವಿಕೆಯಲ್ಲಿ ಛಪ್ಪರಬಂದರು ವಿಜಾಪುರ ಜಿಲ್ಲೆಯಲ್ಲಿ ವಾಸವಾಗಿದ್ದರು. ಆ ವೇಳೆಯಲ್ಲಿ ಪೀರ್‌ಭಾಯಿ ಪೀರ್‌ಮಖಾನ್‌ಎಂಬ ಫಕೀರನು ಈ ಜಿಲ್ಲೆಯಲ್ಲಿ ವಾಸವಾಗಿದ್ದನು. ಒಬ್ಬ ಛಪ್ಪರಬಂದನು ಈ ಫಕೀರನಲ್ಲಿ ಬಂದು ಛಪ್ಪರಬಂದರಿಗೆ ಒಂದು ಒಳ್ಳೆಯ ಉದ್ಯೋಗದಲ್ಲಿ ತೊಡಗಿಸುವಂತೆ ದೇವರಿಗೆ ಮೊರೆಹೋಗಬೇಕಾಗಿ ವಿನಂತಿಸಿದನು. ಇದಕ್ಕೆ ಫಕೀರನು ಆ ವ್ಯಕ್ತಿಗೆ ಒಂದು ರೂಪಾಯಿ ನಾಣ್ಯವನ್ನು ಕೊಟ್ಟು ಹಿಂದೆ ನೋಡದೆ ಮನೆಗೆ ಹೋಗುವಂತೆ ತಿಳಿಸಿದನು. ಆ ವ್ಯಕ್ತಿಯು ಮನೆಗೆ ಓಡುತ್ತ ಹೊರಟನು. ಮಧ್ಯ ಯಾವುದೋ ಒಬ್ಬ ವ್ಯಕ್ತಿಯು ಅವನನ್ನು ಕರೆದಂತಾಯಿತು. ಹೀಗಾಗಿ ಅವನು ಹಿಂದಕ್ಕೆ ತಿರುಗಿ ನೋಡಿದನು. ಆದರೆ ಅಲ್ಲಿ ಯಾರೂ ಇರಲಿಲ್ಲ. ಮುಂದೆ ಅವನು ಹೋಗಿ ರೂಪಾಯಿಯನ್ನು ನೋಡಿದನು. ಫಕೀರನು ಕೊಟ್ಟ ಒಂದು ರೂಪಾಯಿ ನಾಣ್ಯವು ಖೊಟ್ಟಿ ನಾಣ್ಯವಾಗಿ ಬದಲಾಗಿತ್ತು. ಆ ನಾಣ್ಯದೊಂದಿಗೆ ವ್ಯಕ್ತಿಯು ಪುನಃ ಫಕೀರನಲ್ಲಿಗೆ ಹೋಗಿ ಅವನು ಖೊಟ್ಟಿ ನಾಣ್ಯವನ್ನು ತನಗೆ ಕೊಟ್ಟಿದ್ದಾಗಿ ಆರೋಪಿಸಿದನು. ಇದರಿಂದ ಫಕೀರನು ಕೋಪಗೊಂಡು ಆ ವ್ಯಕ್ತಿಯು ಮಾರ್ಗ ಮಧ್ಯ ಹಿಂದಿರುಗಿ ನೋಡಿದ್ದರಿಂದ ನೈಜ ನಾಣ್ಯ ಖೊಟ್ಟಿ ನಾಣ್ಯವಾಗಿದೆ ಎಂದು ತಿಳಿಸಿದನು. ಮುಂದೆ ಛಪ್ಪರಬಂದರು ಖೊಟ್ಟಿ ನಾಣ್ಯವನ್ನು ತಯಾರಿಸಿ ಅವನ್ನು ಚಲಾಯಿಸಿ ತಮ್ಮ ಜೀವನವನ್ನು ಸಾಗಿಸಿದರು ಎಂದು ತಿಳಿಸಲಾಗಿದೆ.

ಅಲೆಕ್ಸಾಂಡರ್‌ಅವರ (೧೯೦೨)ಅಭಿಪ್ರಾಯದಂತೆ ಛಪ್ಪರಬಂದರು ಖೊಟ್ಟಿ ನಾಣ್ಯವನ್ನು ಚಲಾಯಿಸುವಾಗ ತಮ್ಮ ರೂಢಿಗತ ಮುಸಲ್ಮಾನ ವೇಷವನ್ನು ಕಳಚಿಟ್ಟು ಫಕೀರ ವೇಷ ಹಾಕಿಕೊಂಡು ತಮ್ಮ ಹೆಂಗಸರೊಂದಿಗೆ ಹಳ್ಳಿ ಹಳ್ಳಿ ಸುತ್ತುತ್ತಾ ನಾಣ್ಯಗಳನ್ನು ಚಲಾಯಿಸುತ್ತಿದ್ದರು. ಗೇಯರ್‌(೧೯೦೬ : ೧೧೩) ಅವರ ಅಭಿಪ್ರಾಯದಂತೆ ಛಪ್ಪರಬಂದರು ಕಲಬುರ್ಗಿ ಅಜ್ಮೀರ ಹಾಗೂ ಹಿಮಾಲಯದ ಹತ್ತಿರ ಇರುವ ತಮ್ಮ ಗುರುವಿನ ಆರಾಧನೆಯನ್ನು ಮಾಡುತ್ತಾರೆ ಎಂದು ಹೇಳುತ್ತಾರೆ. ಪ್ರತಿ ರವಿವಾರದ ದಿವಸ ಇವರು ಖೊಟ್ಟಿ ನಾಣ್ಯವನ್ನು ತಯಾರಿಸಿ ತಮ್ಮ ‘ಪೀರ-ಮಖಾನ್‌’ ಗುರುವಿನ ಎದುರಿಗೆ ಇಟ್ಟು ಆರಾಧನೆ ಮಾಡಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು.

ಮೇಲೆ ತಿಳಿಸಿದ ಎಲ್ಲ ಚಿಂತಕರ ಒಟ್ಟಾಭಿಪ್ರಾಯದಂತೆ ಛಪ್ಪರಬಂದರು ಖೊಟ್ಟಿ ನಾಣ್ಯವನ್ನು ತಯಾರಿಸಿ ಹಳ್ಳಿಗಳಲ್ಲಿ ಅವುಗಳನ್ನು ಚಲಾಯಿಸುತ್ತಿದ್ದರು. ಈ ನಾಣ್ಯಗಳನ್ನು ಅವರು ‘ಹಮಿಣಿ’ ಎಂಬ ಉದ್ದನೆಯ ನಡುವಿಗೆ ಕಟ್ಟಿಕೊಳ್ಳುವ ಚೀಲದಲ್ಲಿ ಹಾಕಿ ನಡುಪಟ್ಟಿಯಾಗಿ ಅದನ್ನು ಕಟ್ಟಿಕೊಂಡು ಫಕೀರ ವೇಷಧಾರಿಗಳಾಗಿ ಕುದುರೆಯ ಮೇಲೆ ಹಳ್ಳಿ ಹಳ್ಳಿಗೆ ಸಂಚರಿಸುತ್ತ ಹಳ್ಳಿಗಳಲ್ಲಿ ಇರುವ ವಯಸ್ಸಾದ ಅಜ್ಜ ಹಾಗೂ ಅಜ್ಜಿಯರನ್ನು ನಂಬಿಸಿ ಅವರಲ್ಲಿರುವ ಒಂದು ನೈಜ ನಾಣ್ಯಕ್ಕೆ ಎರಡು ಖೊಟ್ಟಿ ನಾಣ್ಯ ಕೊಟ್ಟು ಪರಾರಿ ಆಗುತ್ತಿದ್ದರು. ಹೀಗೆ ಹೋಗುವಾಗ ಓಣಿಯಲ್ಲಿಯ ಒಂದು ಗಂಡು ಮಗುವನ್ನಾಗಲೀ ಅಥವಾ ಹೆಣ್ಣು ಮಗುವನ್ನಾಗಲೀ ಅಪಹರಿಸಿಕೊಂಡು ಹೋಗುತ್ತಿದ್ದರು ಎಂಬ ನಂಬಿಕೆ ಇದ್ದಿತು. ಇವರ ಈ ಎಲ್ಲ ಚಟುವಟಿಕೆಗಳನ್ನು ಅವಲೋಕಿಸಿ ಆಗಿನ ಬ್ರಿಟಿಷ್‌ಸರ್ಕಾರವು ಇವರ ಬುಡಕಟ್ಟನ್ನು ಅಪರಾಧಿ ಬುಡಕಟ್ಟು ಎಂದು ಘೋಷಿಸಿ ಅಪರಾಧಿ ಬುಡಕಟ್ಟು ಕಾಯ್ದೆ ೧೮೮೭ರ ಅಡಿಯಲ್ಲಿ ೧೯೧೨ನೇ ಇಸ್ವಿಯಲ್ಲಿ ಘೋಷಿಸಿ ಅವರನ್ನು ವಿಜಾಪುರ, ಹುಬ್ಬಳ್ಳಿ, ಗದಗ, ಬಾಗಲಕೋಟ ಹಾಗೂ ಮುಂತಾದೆಡೆ ವಾಸಸ್ಥಾನವನ್ನು ಕಲ್ಪಿಸಿ ನಿಯಮ ಅನುಸಾರ ಕಟ್ಟಳೆಗಳನ್ನು ವಿಧಿಸಿದರು. ಹೈಕರವಾಲಾ (೧೯೩೪) ಅವರ ಅಭಿಪ್ರಾಯದಂತೆ ಮುಂಬೈ ಪ್ರಾಂತದಲ್ಲಿ ವಾಸಸ್ಥಾನವನ್ನು ನಿಗದಿಪಡಿಸಿ ಕಾನೂನಿನ ಅಡಿ ಕಟ್ಟಳೆಗಳನ್ನು ವಿಧಿಸಿ ಇಟ್ಟ ಬುಡಕಟ್ಟುಗಳಲ್ಲಿ ಛಪ್ಪರಬಂದರು ಮೊದಲಿಗರಾಗಿದ್ದಾರೆ ಎಂದು ಹೇಳುತ್ತಾರೆ.

ಛಪ್ಪರಬಂದ ಬುಡಕಟ್ಟುಗಳಲ್ಲಿ ‘ಬಾರಾಗಂಡಾ’ ಎಂಬ ಒಂದು ಗುಂಪು ‘ಛೇಗಂಡಾ’ ಎಂಬ ಇನ್ನೊಂದು ಗುಂಪು ಹೀಗೆ ಎರಡು ಗುಂಪುಗಳಿದ್ದು ಮೊದಲ ಗುಂಪನ್ನು ‘ಬಡೆ ಭಾಯಿ’ ಎಂದು ಎರಡನೇ ಗುಂಪನ್ನು ‘ನನ್ಹೆ ಭಾಯಿ’ ಎಂದೂ ಕರೆಯಲಾಗುತ್ತದೆ. ‘ಭಾರಾಗಂಡಾ’ ಹಾಗೂ ‘ಛೇಗಂಡಾ’ ಎಂಬ ಶಬ್ದಗಳು ಹಿಂದಿ ಹಾಗೂ ಛಪ್ಪರಬಂದಿ ಭಾಷೆಯಿಂದ ಬಂದಿವೆ. ಇಲ್ಲಿ ‘ಬಾರಾ’ ಅಥವಾ ‘ಛೆ’ ಎಂಬ ಶಬ್ದಗಳು ಹಿಂದಿ ಶಬ್ದಗಳಾಗಿದ್ದು ‘ಗಂಡಾ’ ಎಂದರೆ ನಾಲ್ಕು ಬಿಡಿಗಳು ಸೇರಿದ ಒಂದು ಗುಂಪು. ಬಾರಾ ಗಂಡಾ ಎಂದು ನಾಲ್ಕು ಬಿಡಿಗಳು ಸೇರಿದ ಒಂದು ಗುಂಪಿನಂತೆ ಒಟ್ಟು ಹನ್ನೆರಡು ಗುಂಪುಗಳು, ಛೇಗಂಡಾ ಎಂದರೆ ನಾಲ್ಕು ಬಿಡಿಗಳು ಸೇರಿದ ಒಂದು ಗುಂಪಿನಂತೆ ಒಟ್ಟು ಆರು ಗುಂಪುಗಳು. ಈ ಗುಂಪುಗಳ ಆಧಾರದಿಂದ ಛಪ್ಪರಬಂದರ ಸಾಮಾಜಿಕ ಸ್ಥಾನಮಾನ ನಿರ್ಣಯಿಸಲಾಗುತ್ತದೆ.

‘ಬಾರಾಗಂಡಾ’ ಛಪ್ಪರಬಂದರು ಮೂಲ ಛಪ್ಪರಬಂದರಾಗಿದ್ದು ಛೇಗಂಡಾ ಛಪ್ಪರಬಂದರು ಸಾಕು ಛಪ್ಪರಬಂದರಾಗಿದ್ದಾರೆ. ತಮ್ಮ ಸ್ಥಾನಮಾನ ಕುರಿತು ಛಪ್ಪರಬಂದರು ತಾವೇ ತೆಗೆದುಕೊಂಡ ನಿರ್ಣಯ ಈ ಕೆಳಗಿನಂತಿದೆ.

ಬಾರಾಗಂಡಾ ಛಪ್ಪರಬಂದರು ಮೂಲ ಛಪ್ಪರಬಂದರಾಗಿದ್ದು ಇವರಿಗೆ ‘ಭಡೆಭಾಯಿ’ ಛಪ್ಪರಬಂದರೆಂದು ಕರೆಯುವುದುಂಟು. ಇವರು ತಾವು ತಯಾರಿಸಿದ ಖೊಟ್ಟಿ ನಾಣ್ಯಗಳಲ್ಲಿ ಒಂದು ದಿನಕ್ಕೆ ೪೮ ನಾಣ್ಯಗಳನ್ನು ಚಲಾಯಿಸುವ ಅರ್ಹತೆಯನ್ನು ಹೊಂದಿವರಾಗಿದ್ದರಿಂದಲೇ ಇವರನ್ನು ‘ಬಾರಾಗಂಡಾವಾಲೆ’ ಅಥವಾ ‘ಭಡೆಭಾಯಿವಾಲೆ’ ಎಂದು ಕರೆದಿದ್ದಾರೆ. ಹೀಗಾಗಿ ಇವರು ಸಾಮಾಜಿಕ ಸ್ಥಾನಮಾನದಲ್ಲಿ ಛೇಗಂಡಾ ಛಪ್ಪರಬಂದರಿಗಿಂತ ಉನ್ನತ ಸ್ಥಾನಮಾನವನ್ನು ಹೊಂದಿದ್ದಾರೆ.

ಬಾರಾಗಂಡಾ ಛಪ್ಪರಬಂದರು ಈಗಾಗಲೇ ಹೇಳಿದಂತೆ ಫಕೀರ ವೇಷ ಧರಿಸಿಕೊಂಡು ಮಧ್ಯಾಹ್ನ ವೇಳೆ ಖೊಟ್ಟಿ ನಾಣ್ಯಗಳನ್ನು ಚಲಾಯಿಸಲು ಹೋಗುತ್ತಿದ್ದರು. ನಾಣ್ಯಗಳನ್ನು ಚಲಾಯಿಸಿದ ನಂತರ ಸಾಧ್ಯವಾದರೆ ಯಾವ ಓಣಿಯಲ್ಲಿ ನಾಣ್ಯ ಚಲಾಯಿಸಿದ್ದಾರೋ ಅಲ್ಲಿ ಒಂದು ಹೆಣ್ಣು ಮಗು ಅಥವಾ ಒಂದು ಗಂಡು ಮಗುವನ್ನು ಅಪಹರಿಸಿಕೊಂಡು ಹೋಗಿ ತಮ್ಮ ಮಗುವಿನಂತೆ ಬೆಳೆಸುತ್ತಿದ್ದರು. ತಮ್ಮ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರ ಅವರು ಈ ರೀತಿ ಮಕ್ಕಳನ್ನು ಅಪಹರಿಸುತ್ತಿದ್ದರು. ಈ ರೀತಿ ಅಪಹರಿಸಿದ ಹೆಚ್ಚಿನ ಮಕ್ಕಳು ಹಿಂದೂ ಧರ್ಮಕ್ಕೆ ಸೇರಿದ ಮಕ್ಕಳು ಆಗಿರುತ್ತಿದ್ದರು. ಇವರನ್ನು ಬೆಳೆಸಿ ದೊಡ್ಡವರಾದ ನಂತರ ಅಪಹರಿಸಿದ ಗಂಡು ಹಾಗೂ ಹೆಣ್ಣಿಗೆ ಮದುವೆ ಏರ್ಪಡಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು ಮತ್ತು ಅವರನ್ನು ನನ್ಹೆಭಾಯಿವಾಲೆ ಖೊಟ್ಟಿ ನಾಣ್ಯಗಳನ್ನು ಚಲಾಯಿಸುವ ಅರ್ಹತೆಯನ್ನು ಹೊಂದಿದವರಾಗಿದ್ದರು. ಅಲ್ಲದೇ ಯಾವುದೇ ಸಂದರ್ಭದಲ್ಲಿ ಇವರ ಸ್ಥಾನಮಾನ ಬಾರಾಗಂಡಾ ಛಪ್ಪರಬಂದರಿಗಿಂತ ಹೆಚ್ಚಿನದಾಗಿರುವುದಿಲ್ಲ.

ಭಾಷೆ, ಉಡುಗೆ ತೊಡಿಗೆ ಹಾಗೂ ಆಹಾರ ಕ್ರಮ

ಈಟನ್‌(೧೯೭೮) ಅವರು ಇವರು ಗುಜರಾತಿ ಮಿಶ್ರಿತ ಉರ್ದು ಭಾಷೆ ಮಾತನಾಡುತ್ತಾರೆಂದು ತಿಳಿಸುತ್ತಾರೆ. ಮುಂಬೈ ಪ್ರಾಂತ ಗೆಜೆಟಿಯರ್‌(೧೮೧೮: ೭೪)ನಲ್ಲಿ “ಇವರು ಗುಜರಾತಿ ಮಿಶ್ರಿತ ಉರ್ದು ಮಾತನಾಡುತ್ತಾರೆ” ಎಂದು ತಿಳಿಸಲಾಗಿದೆ. ಇವರು “ಕನ್ನಡ ಮಿಶ್ರಿತ ಹಿಂದಿ ಮಾತನಾಡುತ್ತಾರೆ” ಎಂದು ಗುಂಥ್ರೋಪ (೧೮೮೨:೭೪) ಅವರು ಅಭಿಪ್ರಾಯಪಡುತ್ತಾರೆ. ಇವರು ಹೆಂಗಸರಿಗೆ ‘ಮಾಯಿ’ (ತಾಯಿ) ಎಂದು ಗಂಡಸರಿಗೆ “ದಾತಾ” ಎಂದೂ ಕರೆಯುವುದುಂಟು. ಲೆಮೆರಚಂದ (೧೯೧೫: ೧೨) ಅವರ ಪ್ರಕಾರ “ಛಪ್ಪರಬಂದ ಅವರು ಉತ್ತರ ಭಾರತದ ಹಿಂದೂಸ್ಥಾನಿ ಮಿಶ್ರಿತ ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆಂದು ತಿಳಿಸುತ್ತಾರೆ.” ಅಲೆಕ್ಸಾಂಡರ್‌(೧೯೦೨) ಅವರು “ಛಪ್ಪರಬಂದರು ಮರಾಠಿ ಭಾಷೆ ಮಾತನಾಡುವವರಾಗಿದ್ದು ಇದರಲ್ಲಿ ತಮ್ಮದೇ ಆದ ಶಬ್ದ ಭಂಡಾರ ಹೊಂದಿದ್ದಾರೆ” ಎಂದು ಹೇಳುತ್ತಾರೆ. ಡಾಲಿ (೧೯೧೬: ೬೧) ಅವರ ಅಭಿಪ್ರಾಯದಂತೆ “ಛಪ್ಪರಬಂದರು ಮರಾಠಿ ಧಾಟಿಯಲ್ಲಿಯ ಛಪ್ಪರಬಂದ ಭಾಷೆ ಮಾತನಾಡುವವರಾಗಿದ್ದು ಆಯಾ ಭಾಗದ ಸ್ಥಾನಿಕ ಭಾಷೆಯ ಶಬ್ದಗಳನ್ನು ತಮ್ಮ ಭಾಷೆಯಲ್ಲಿ ಅಳವಡಿಸಿ ಮಾತನಾಡುತ್ತಾರೆ” ಎಂದು ತಿಳಿಸುತ್ತಾರೆ.

ಮೇಲೆ ತಿಳಿಸಿದ ಎಲ್ಲ ಚಿಂತಕರ ಅಭಿಪ್ರಾಯಗಳು ಛಪ್ಪರಬಂದರ ಭಾಷೆ ಕುರಿತು ಭಿನ್ನವಾಗಿರುವುದು ಕಂಡುಬರುತ್ತದೆ. ಛಪ್ಪರಬಂದರು ಮೊಗಲ್‌ಚಕ್ರವರ್ತಿಯ ಸೈನ್ಯದೊಂದಿಗೆ ಭಾರತದ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಬಂದದ್ದು ತಿಳಿಯುತ್ತದೆ. ಮೂಲತಃ ಇವರು ಉತ್ತರ ಭಾಗದ ಗ್ರಾಮ್ಯ ಹಿಂದಿ ಭಾಷಿಕರಾಗಿದ್ದು ಗುಜರಾತ, ಮರಾಠಿ ಕನ್ನಡ ಭಾಷಿಕ ಪ್ರದೇಶಗಳಿಗೆ ಹೋಗಿದ್ದರಿಂದ ಅಲ್ಲಿಂದ ಮುಂದೆ ಖೊಟ್ಟಿನಾಣ್ಯಗಳನ್ನು ತಯಾರಿಸಿ ಕಳ್ಳತನದಿಂದ ಚಲಾಯಿಸುವಾಗ ತಮ್ಮದೇ ಆದ ಕಳ್ಳ ಶಬ್ದಗಳನ್ನು ಬಳಸಿ ಉರ್ದು, ಹಿಂದಿ, ಗುಜರಾತಿ, ಮರಾಠಿ, ಕನ್ನಡ ಶಬ್ದಗಳನ್ನು ಸೇರಿಸಿ ತಮ್ಮದೇ ಆದ ಶೈಲಿಯಲ್ಲಿ ಮಾತನಾಡುತ್ತ ಛಪ್ಪರಬಂದ ಭಾಷೆಯ ಉಗಮಕ್ಕೆ ಕಾರಣವಾಗಿರಬಹುದು ಎಂದು ಕಂಡುಬರುತ್ತದೆ. ಇವರ ಭಾಷೆಯು ಮೌಖಿಕ ಸ್ವರೂಪದಲ್ಲಿ ಮಾತ್ರವಿದ್ದು ಯಾವುದೇ ಲಿಪಿಯನ್ನು ಹೊಂದಿಲ್ಲ.

ಛಪ್ಪರಬಂದರು ತಮ್ಮ ಭಾಷೆಯಲ್ಲಿ ಬಳಸುವ ಕೆಲ ಪದಗಳು ಇಂತಿವೆ.

ಲಾಂಡ್ಪಾ – ಹುಡುಗ
ಲೋಂಡಿಯಾ – ಹುಡುಗಿ
ಬಾಪು – ತಂದೆ
ಮಾಯಿ – ತಾಯಿ
ಆಜಾ – ಗಂಡಜ್ಜ
ಆಜಿ – ಗಂಡಜ್ಜಿ
ನಾನಾ – ಹೆಣ್ಣಜ್ಜ
ನಾನಿ – ಹೆಣ್ಣಜ್ಜಿ
ಮನ್ನಾಸಾ – ಗಂಡ
ಮುನ್ನಾಸಾ – ಗಂಡ
ಮೇರಿ – ಹೆಂಡತಿ
ಪೋತ – ಮಗ
ಥೀ – ಮಗಳು
ನಾಥೀ – ಮೊಮ್ಮಗ
ನಥನಿ – ಚಿಕ್ಕಮ್ಮ
ಜತೋಡೆ – ದೊಡ್ಡಣ
ಖಾಗಡಾ – ಗುಂಪಿನ ಮುಖಂಡ
ಬೋಂಧರ್‌- ಖೊಟ್ಟಿ ನಾಣ್ಯ ತಯಾರಿಸುವವ
ಹಂದಿವಲ – ಗುಂಪಿನ ಜೊತೆ ಇರುವ ಹುಡುಗ
ಕುಟ್ಟ ಕೊಪರಾಲ – ಸಿಪಾಯಿ ಅಥವಾ ಜವಾನ
ಖಮ್‌- ಅಚ್ಚು
ಗುತಾರ – ಬಡೆ ಛಪ್ಪರಬಂದರನ್ನು ನೋಡಿಕೊಳ್ಳುವ ಸಿರಿವಂತ ಛಪ್ಪರಬಂದ
ಭಾತು – ಛಪ್ಪರಬಂದ
ಬೈಗಿ – ಮಾರುವೇಷ ಹೊಂದು
ತಿಯಾರಿ – ನೈಜ ನಾಣ್ಯ
ಗಿಮಾಲೊ – ಬಚ್ಚಿಟ್ಟುಕೊಳ್ಳು
ತಬ್ಬಾಜೊ – ಓಡಿ ಹೋಗು
ಜೋಡಿ ಆವತಿ ಹೆ – ಸಂಗಡಿಗರು ಬರುತ್ತಿದ್ದಾರೆ
ಟೆಕೊಲಿನ್‌- ದಸ್ತಗಿರಿ
ನುಕಾದಿಯೊ – ರದ್ದುಪಡಿಸು
ಡೊಂಕ – ಮನೆ
ರೆಂಡಾ – ದಾರಿ
ಪಾನಾ – ದಾರಿಯಲ್ಲಿ ಬಿಟ್ಟ ಸುಳಿವು
ನವಡಿ – ಪೊಲೀಸ್‌ಠಾಣೆ
ಚಿಮಟಿ – ಅಚ್ಚು ತಯಾರಿಸಲು ಉಪಯೋಗಿಸುವ ಜೇಡಿ ಮಣ್ಣು

ಈ ರೀತಿ ಹಲವಾರು ಶಬ್ದಗಳನ್ನು ಛಪ್ಪರಬಂದ ಸಮುದಾಯ ತಮ್ಮ ಭಾಷೆಯಲ್ಲಿ ಬಳಸುವುದನ್ನು ಕಾಣುತ್ತೇವೆ.

ಗ್ರಾಮ ಪ್ರದೇಶ ಹಾಗೂ ಪಟ್ಟಣ ಪ್ರದೇಶದಲ್ಲಿ ವಾಸಿಸುವ ಛಪ್ಪರಬಂದರ ವೇಷ ಭೂಷಣದಲ್ಲಿ ಭಿನ್ನತೆಯನ್ನು ಕಾಣುತ್ತೇವೆ. ಹಳ್ಳಿಗಳಲ್ಲಿ ವಾಸಿಸುವ ಛಪ್ಪರಬಂದರು ಆ ಪ್ರದೇಶದ ಹಿಂದೂಗಳು ತೊಡುವ ಉಡುಗೆಗಳನ್ನೇ ಧರಿಸುತ್ತಾರೆ. ಗಂಡಸರು ಸಾಮಾನ್ಯವಾಗಿ ಧೋತರ, ಅಂಗಿ ಹಾಗೂ ತಲೆಗೆ ಪಟಕವನ್ನು ಸುತ್ತಿಕೊಳ್ಳುವುದು ವಾಡಿಕೆ. ಅದೇ ರೀತಿ ಹೆಣ್ಣು ಮಕ್ಕಳು ಆಯಾ ಪ್ರದೇಶದ ಹಿಂದೂ ಹೆಂಗಸರು ಧರಿಸುವ ಸೀರೆ, ಕುಪ್ಪಸ ಧರಿಸುತ್ತಾರೆ ಅಲ್ಲದೇ ಮೂಗುಬಟ್ಟು ಕಿವಿಯಲ್ಲಿ ಓಲೆ ಹಾಕಿಕೊಳ್ಳುವುದು ವಾಡಿಕೆ.

ಪಟ್ಟಣದಲ್ಲಿ ವಾಸಿಸುವ ಛಪ್ಪರಬಂದರು ಸಾಮಾನ್ಯವಾಗಿ ಪೈಜಾಮ ಹಾಗೂ ಶರ್ಟ್ ಹಾಕಿಕೊಳ್ಳುತ್ತಾರೆ. ಆದರೆ ಕಾಲಾನುಕ್ರಮವಾಗಿ ಅವರು ಈಗ ಪ್ಯಾಂಟ್‌ಹಾಗೂ ಶರ್ಟ್‌ತೊಟ್ಟುಕೊಳ್ಳುತ್ತಾರೆ. ಪಟ್ಟಣದ ಹೆಂಗಸರೂ ಕೂಡ ಆಯಾ ಪ್ರದೇಶದ ಹಿಂದೂ ಹೆಂಗಸರ ಹಾಗೆ ಸೀರೆ ಹಾಗೂ ಕುಪ್ಪಸ ಧರಿಸುವುದು ವಾಡಿಕೆ ಅಲ್ಲದೇ ಹುಡುಗಿಯರು ಕುರ್ತಾ ಪೈಜಾಮು ಹಾಗೂ ಓಡನಿ ಧರಿಸುತ್ತಾರೆ.

ಛಪ್ಪರಬಂದರು ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಅಂದರೆ ಧಾರವಾಡ, ಗದಗ, ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು ಈ ಭಾಗದ ಜನರ ಆಹಾರ ಪದ್ಧತಿಯನ್ನು ಅವರೂ ರೂಢಿಸಿಕೊಂಡಿದ್ದಾರೆ. ಇವರ ದಿನನಿತ್ಯದ ಆಹಾರ ಜೋಳದ ರೊಟ್ಟಿ ಹಾಗೂ ಅನ್ನ ಸಾಮಾನ್ಯವಾಗಿದ್ದು ಈ ಭಾಗದ ಸಾಮಾನ್ಯ ಜನರು ಉಪಯೋಗಿಸುವ ಬೇಳೆ ಕಾಳುಗಳನ್ನು ಹಾಗೂ ಕೆಲವು ಕುಟುಂಬಗಳು ಮಾಂಸದೂಟವನ್ನು ಕೂಡ ಸೇವಿಸುತ್ತಾರೆ. ಛಪ್ಪರಬಂದ ಬುಡಕಟ್ಟಿನ ಎರಡು ಗುಂಪುಗಳಲ್ಲಿ ಕೆಲವರು ಸಾರಾಯಿ ಸೇವಿಸುತ್ತಾರೆ. ಛಪ್ಪರಬಂದ ಬುಡಕಟ್ಟಿನ ಎರಡು ಗುಂಪುಗಳಲ್ಲಿ ಕೆಲವರು ಸಾರಾಯಿ ಸೇವಿಸುವುದನ್ನು ಕಾಣುತ್ತೇವೆ. ಅದರಲ್ಲಿಯೂ ಬಾರಾಗಂಡಾ ಛಪ್ಪರಬಂದರಲ್ಲಿ ಇದರ ಪ್ರಮಾಣ ಹೆಚ್ಚು, ಕಂಡುಬರುತ್ತದೆ. ಹಳ್ಳಿಗಳಲ್ಲಿ ವಾಸವಾಗಿರುವ ಛಪ್ಪರಬಂದರಿಗಿಂತ ಪಟ್ಟಣದಲ್ಲಿ ವಾಸಿಸುತ್ತಿರುವ ಛಪ್ಪರಬಂದರಲ್ಲಿ ಸಾರಾಯಿ ಸೇವನೆ ಹೆಚ್ಚೆಂಬುದು ಕಂಡುಬರುತ್ತದೆ.

ಮದುವೆ ಹಾಗೂ ಕೌಟುಂಬಿಕ ಜೀವನ

ಇವರು ಮುಸಲ್ಮಾನ ಧರ್ಮಕ್ಕೆ ಸೇರಿದವರಾದ್ದರಿಂದ ಸಹಜವಾಗಿ ಮುಸಲ್ಮಾನ ಸಮಾಜದ ಜನರ ಆಚರಣೆಗಳೆಲ್ಲವನ್ನು ರೂಢಿಸಿಕೊಂಡವರಾಗಿದ್ದಾರೆ. ಛೇಗಂಡಾ ಛಪ್ಪರಬಂದರು ಮೂಲತಃ ಹಿಂದೂ ಧರ್ಮೀಯರಾದರೂ ಬಾರಾಗಂಡಾ ಗುಂಪಿನ ಪಾಲನೆ ಘೋಷಣೆಯಲ್ಲಿ ಬೆಳದಿದ್ದರಿಂದ ಸಹಜವಾಗಿ ಅವರು ಧಾರ್ಮಿಕವಾಗಿ ಆಚರಿಸುವ ಎಲ್ಲ ಧಾರ್ಮಿಕ ಕಾರ್ಯಗಳನ್ನು ಆಚರಿಸುತ್ತಾರೆ.

ಮದುವೆಯೂ ಕೂಡ ಮುಸಲ್ಮಾನ ಸಮುದಾಯದಲ್ಲಿ ನಡೆಯುವ ಮದುವೆ ಆಚರಣೆಯಂತೆ ಖಾಜಿಯ ನೇತೃತ್ವದಲ್ಲಿ ಹಿರಿಯರ ಸಮಕ್ಷಮ ಗಂಡು ಹೆಣ್ಣು ಪರಸ್ಪರ ಒಪ್ಪಿಗೆ ಕೊಡುವ ಮೂಲಕ ನಡೆಯುತ್ತದೆ. ಛಪ್ಪರಬಂದರಲ್ಲಿ ‘ಬಾರಾಗಂಡಾ’ ಛಪ್ಪರಬಂದರು ಛೇಗಂಡಾ ಛಪ್ಪರ ಬಂದರನ್ನು ಸಾಕಿ ಬೆಳೆಸಿದ್ದರಿಂದ ಯಾವಾಗಲೂ ಪಿತೃಸ್ಥಾನದಲ್ಲಿರುತ್ತಾರೆ. ಹೀಗಾಗಿ ‘ಬಾರಾ ಗಂಡಾ’ ಹಾಗೂ ಛೇಗಂಡಾ ಛಪ್ಪರಬಂದರ ಮಧ್ಯೆ ವಿವಾಹ ಸಂಬಂಧಗಳು ನಡೆಯುವುದಕ್ಕೆ ಅವಕಾಶವಿಲ್ಲ.

ಛಪ್ಪರಬಂದರಲ್ಲಿಯೂ ಕೂಡ ಇನ್ನುಳಿದ ಹಿಂದೂ ಹಾಗೂ ಮುಸಲ್ಮಾನ ಕುಟುಂಬಗಳಲ್ಲಿಯಂತೆ ಕೆಲ ಅವಿಭಕ್ತ ಕುಟುಂಬಗಳು ಹಾಗೂ ಹೆಚ್ಚು ವಿಭಕ್ತ ಕುಟುಂಬಗಳನ್ನು ಕಾಣುತ್ತೇವೆ. ಈ ಕುಟುಂಬಗಳೂ ಕೂಡ ಸಾಮಾನ್ಯವಾಗಿ ಪಿತೃಪ್ರಧಾನವಾದ ಕುಟುಂಬಗಳಾಗಿದ್ದು ಕುಟುಂಬದ ಸದಸ್ಯರೆಲ್ಲ ಮುಖ್ಯಸ್ಥನ ಅಣತಿಯಂತೆ ನಡೆಯುತ್ತಾರೆ. ಈ ಸಮುದಾಯವು ತನ್ನ ಸಮಾಜದ ಕುಟುಂಬಗಳ ಸದಸ್ಯರಿಗೆ ಅದರಲ್ಲಿಯೂ ಕೂಡ ವಿಶೇಷವಾಗಿ ಸಹೋದರರು ಪರಸ್ಪರ ಸೌಹಾರ್ದದಿಂದ ಇರಬೇಕೆಂದು ಕಟ್ಟಳೆ ವಿಧಿಸಿದ ಅಲ್ಲದೆ ಚಿಕ್ಕವರ ಬಗ್ಗೆ ಮುತುವರ್ಜಿವಹಿಸುವುದು, ಅವರು ತಮ್ಮ ಜೀವನದಲ್ಲಿ ಸರಿದಾರಿಯಲ್ಲಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಕೂಡ ಹಿರಿಯ ಸಹೋದರನದಾಗಿರುತ್ತದೆ.

ಛಪ್ಪರಬಂದರ ಕುಟುಂಬಗಳು ಸಾಮಾನ್ಯವಾಗಿ ಯಾವ ಅಡ್ಡ ಹೆಸರನ್ನು ಹೊಂದಿಲ್ಲ. ಪ್ರತಿ ಕುಟುಂಬವೂ ಛಪ್ಪರಬಂದ ಎಂಬ ಅಡ್ಡ ಹೆಸರಿನಿಂದಲೇ ಕರೆಯಲ್ಪಡುತ್ತದೆ. ಆದರೆ ಕೆಲ ಛಪ್ಪರಬಂದ ಕುಟುಂಬಗಳು ತಾವು ಕೈಗೊಂಡಿರುವ ವೃತ್ತಿಯನ್ನು ಆಧರಿಸಿ ವೃತ್ತಿಯ ಹೆಸರನ್ನು ಅಡ್ಡ ಹೆಸರೆಂದು ಹೇಳಿ ಸರಕಾರಿ ದಾಖಲೆಗಳಲ್ಲಿ ಅಂದರೆ, ವೋಟಿನ ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕಿನ ಖಾತೆಗಳಲ್ಲಿ ಮುಂತಾದ ಸರಕಾರಿ ದಾಖಲೆಗಳಲ್ಲಿ ನಮೂದಿಸಿದ್ದಾರೆ. ಉದಾಹರಣೆ ಬಡಿಗತನವನ್ನು ಮಾಡುವವನು ಸುತಾರ ಎಂದೂ, ಕಲಾಯಿ ಮಾಡುವನು ಕಲಾಯಿಗಾರನೆಂದು, ಅತ್ತರ್‌ಮಾರುವವನು ಅತ್ತರ್‌ವಾಲೆ ಎಂದು ಕಾಯಿಪಲ್ಲೆ ಮಾರುವವನು ಭಾಗವಾನ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಾರೆ. ಪಟ್ಟಣದಲ್ಲಿ ವಾಸಿಸುತ್ತಿರುವ ಕೆಲ ಛಪ್ಪರಬಂದರು ತಮ್ಮ ಊರಿನ ಹೆಸರನ್ನು ತಮ್ಮ ಕುಟುಂಬದ ಹೆಸರೆಂದು ನೋಂದಾಯಿಸಿದ್ದೂ ಕೂಡ ಕಂಡು ಬರುತ್ತದೆ. ಉದಾಹರಣೆಗೆ ಧಾರವಾಡ ಪಟ್ಟಣದಲ್ಲಿ ವಾಸಿಸುತ್ತಿರುವ ಹೆಚ್ಚಿನ ಛಪ್ಪರಬಂದರು ವಿಜಾಪೂರ ಜಿಲ್ಲೆಯ ಬಸವನ ಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕಿನ ವಿವಿಧ ಹಳ್ಳಿಗಳಿಂದ ವಲಸೆ ಬಂದವರಾದ್ದರಿಂದ ತಮ್ಮ ಹಳ್ಳಿಯ ಹೆಸರುಗಳಾದ ಬಳಬಟ್ಟಿ, ರಾಜನಾಳ, ಬ್ಯಾಕೋಡ, ಜಾಯವಾಡಗಿ, ವಡವಡಗಿ, ಬಳಗಾನೂರ, ಕೂಡಗಿ ಮುಂತಾದ ಊರುಗಳ ಹೆಸರನ್ನು ತಮ್ಮ ಕುಟುಂಬಗಳ ಹೆಸರುಗಳನ್ನಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಸರಕಾರಿ ದಾಖಲೆಗಳಲ್ಲಿ ಆ ರೀತಿ ನೋಂದಾಯಿಸಿದ್ದು ಕೂಡ ಕಂಡುಬಂದಿದೆ.

ಆರ್ಥಿಕ ಚಟುವಟಿಕೆಗಳು

ಛಪ್ಪರಬಂದರು ಮೊಗಲರೊಂದಿಗೆ ವಿಜಾಪೂರಕ್ಕೆ ೧೭೧೮ರ ಸುಮಾರು ಬಂದರೆಂದು ದಾಖಲೆಗಳು ತಿಳಿಸುತ್ತವೆ. ಈಗಾಗಲೇ ತಿಳಿಸಿದಂತೆ ಮೊಗಲರ ಸೈನ್ಯಕ್ಕೆ ಗುಡಿಸಲನ್ನು ಹಾಕುವ ಕೆಲಸದಲ್ಲಿ ಇವರು ನಿರತರಾಗಿದ್ದರಿಂದ ಅವರು ಯಾವುದೇ ಹೆಚ್ಚಿನ ಆರ್ಥಿಕ ತೊಂದರೆಗೆ ಒಳಗಾಗಿದ್ದಿಲ್ಲ. ಮೊಗಲರ ಆಳ್ವಿಕೆ ಕೊನೆಗೊಂಡ ನಂತರ ಬ್ರಿಟಿಷ್‌ಸರಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಛಪ್ಪರಬಂದರು ಆರ್ಥಿಕ ತೊಂದರೆಗೆ ಸಿಲುಕಿದರೆಂದು ಅಧ್ಯಯನದಿಂದ ತಿಳಿದುಬರುತ್ತದೆ. ಕುತೂಹಲದಾಯಕ ಅಂಶಗಳೇನೇ ಇದ್ದರೂ ಯಾವ ಕಾರಣಕ್ಕೆ ಛಪ್ಪರಬಂದರು ಖೊಟ್ಟಿನಾಣ್ಯಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಖೊಟ್ಟಿ ನಾಣ್ಯಗಳನ್ನು ತಯಾರಿಸುತ್ತಿದ್ದ ಇವರಿಗೆ ಬುಡಕಟ್ಟು ಕಾನೂನಿನಂತೆ ಸರಿಯಾದ ವಾಸಸ್ಥಳ ನಿಗದಿಪಡಿಸಿ ಅವರು ಒಂದು ಉದ್ಯೋಗದಲ್ಲಿ ನಿರತರಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಆಗಿನ ಮುಂಬೈ ಪ್ರಾಂತದಲ್ಲಿಯ ಸಮಾಜ ಕಲ್ಯಾಣ ಇಲಾಖೆ, ಅದರಂತೆ ವಿಜಾಪೂರ, ಬಾಗಲಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಅವರಿಗೆ ವಾಸಸ್ಥಳಗಳನ್ನು ನಿಗದಿಪಡಿಸಲಾಯಿತು ಉದ್ಯೋಗದಲ್ಲಿ ಆಸಕ್ತಿ ಹೊಂದಿದವರಿಗೆ ವಿವಿಧ ಉದ್ಯೋಗಗಳಾದ ಬಡಿಗತನ, ಮನೆಕಟ್ಟುವುದು, ನೇಕಾರಿಕೆ, ಮುದ್ರಣದಲ್ಲಿ ತೊಡಗುವುದು ಮುಂತಾದ ಉದ್ಯೋಗದಲ್ಲಿ ತರಬೇತಿ ನೀಡಲಾಯಿತು. ಕೃಷಿಯಲ್ಲಿ ಆಸಕ್ತಿ ವಹಿಸಿದವರಿಗೆ ವಿಜಾಪೂರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷಿಭೂಮಿಯನ್ನು ನೀಡಲಾಯಿತು.

ಛಪ್ಪರಬಂದ ಬುಡಕಟ್ಟಿನ ಎರಡೂ ಗುಂಪುಗಳು ‘ಬಾರಾಗಂಡಾ’ ಹಾಗೂ ‘ಛೇಗಂಡಾ’ಗಳಲ್ಲಿ ಬಾರಾಗಂಡಾ ಗುಂಪಿನ ಹೆಚ್ಚು ಜನರು ಪಟ್ಟಣಗಳಲ್ಲಿಯ ಉದ್ಯೋಗಗಳಾದ ಬಡಿಗತನ, ನೇಕಾರಿಕೆ, ಮುದ್ರಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಳ್ಳಿಗಳಲ್ಲಿಯೂ ಕೂಡ ಬಾರಾಗಂಡಾ ಜನರಿಗೆ ಕೃಷಿಭೂಮಿಯನ್ನು ನೀಡಲಾಗಿತ್ತು. ಆದರೆ ಇವರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳದೇ ಪಟ್ಟಣದ ಬದುಕನ್ನು ಹೆಚ್ಚಿನವರು ಬಯಸಿ ಪಟ್ಟಣವಾಸಿಗಳಾದರು. ಮೇಲೆ ತಿಳಿಸಿದ ಉದ್ಯೋಗದಲ್ಲಿ ಪರಿಣತಿ ಪಡೆಯದೇ ಇರುವವರು ಸಣ್ಣಪುಟ್ಟ ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೆಲವರು ಗರ್ದಿಗಮ್ಮತ್ತು ತೋರಿಸುವುದು, ಜಾತ್ರೆಗಳಲ್ಲಿ ತೂಗುಯ್ಯಾಲೆ ಹಾಕುವುದು, ಕಣ್ಣಲ್ಲಿ ಹರಳು ಹಾಗೂ ಕಿವಿಯಲ್ಲಿ ಜಿಡ್ಡು ತೆಗೆಯುವುದು ಮುಂತಾದ ಕಸಬುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಲಾನುಕ್ರಮದಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಹೊಸ ಉದ್ಯೋಗಗಳಲ್ಲಿಯೂ ಕೂಡ ತೊಡಗಿದ್ದಾರೆ.

ಛೇಗಂಡಾ ಛಪ್ಪರಬಂದರು ಮೂಲತಃ ಹಿಂದೂಗಳಾಗಿದ್ದರಿಂದ ಹಳ್ಳಿಗಳಲ್ಲಿ ಸರಕಾರ ತಮಗೆ ನೀಡಿದ ಭೂಮಿಯಲ್ಲಿ ಕೆಲಸ ಮಾಡುತ್ತಾ ಹಳ್ಳಿಗಳಲ್ಲಿ ಇತರ ಸಮುದಾಯದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿ ಜೀವನವನ್ನು ನಡೆಸುತ್ತಿರುವುದನ್ನು ಈಗಲೂ ನಾವು ಕಾಣುತ್ತೇವೆ. ಇವರಿಗೆ ಕೃಷಿ ಭೂಮಿಯನ್ನು ವಿಜಾಪೂರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ನೀಡಿದ್ದರಿಂದ ಎರಡೂ ಜಿಲ್ಲೆಗಳು ಮಳೆ ಆಧಾರಿತ ಕೃಷಿ ಚಟುವಟಿಕೆ ಹೊಂದಿದ್ದರಿಂದ ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಇವರಲ್ಲಿ ಬಹುತೇಕರು ಕೆಲಸವನ್ನು ಅರಸುತ್ತಾ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಇವರು ಧಾರವಾಡ, ಗದಗ, ಮಹಾರಾಷ್ಟ್ರದ ರತ್ನಗಿರಿ, ಪುಣೆ ಮುಂಬೈ ಮುಂತಾದ ನಗರಗಳಿಗೆ ವಲಸೆ ಹೋಗಿದ್ದು ಕಂಡುಬಂದಿದೆ. ಈ ಸ್ಥಳಗಳಲ್ಲಿ ಇವರು ಕಟ್ಟಡ ಕೆಲಸಗಳಲ್ಲಿ ತೊಡಗಿದ್ದನ್ನು ನಾವು ಕಾಣುತ್ತೇವೆ. ಇವರಲ್ಲಿ ಕೆಲವರು ಮನೆ ಕಟ್ಟುವುದು, ಕೆಲವರು ಬಡಿಗತನ, ಇನ್ನೂ ಕೆಲವರು ಮನೆಗಳಿಗೆ ಟೈಲ್ಸ್‌ಹಾಕುವುದು ಹಾಗೂ ಅವುಗಳನ್ನು ಪಾಲೀಶ್‌ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿಗಳಲ್ಲಿಯೇ ನೆಲೆ ನಿಂತು ಛಪ್ಪರಬಂದರು ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಜೀವನವನ್ನು ನಡೆಸುತ್ತಾರೆ.

ಬಾರಾಗಂಡಾ ಛಪ್ಪರಬಂದರು ಹೆಚ್ಚಿನ ಶಿಕ್ಷಣ ಪಡೆದ ಉದಾಹರಣೆಗಳಿಲ್ಲ. ಆದರೆ ಛೇಗಂಡಾ ಛಪ್ಪರಬಂದರ ಗುಂಪಿನವರು ಶೈಕ್ಷಣಿಕ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಪ್ರಗತಿ ಸಾಧಿಸಿದ್ದನ್ನು ಕಾಣಬಹುದು. ಹಳ್ಳಿಗಳಲ್ಲಿಯ ಹಾಗೂ ಪಟ್ಟಣಗಳಲ್ಲಿ ವಾಸಿಸುವ ಛಪ್ಪರಬಂದ ಜನರು ಶಿಕ್ಷಣವನ್ನು ಪಡೆದದ್ದನ್ನು ಕಾಣುತ್ತೇವೆ. ಅಲ್ಲದೇ ಕೆಲವರು ಸರಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದನ್ನು ಕಾಣುತ್ತೇವೆ. ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಸಂಘಟನೆಯನ್ನು ಸ್ಥಾಪಿಸಿ ಕೆಲಸ ಹಕ್ಕುಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಮುಂದೆ ತಮ್ಮ ಅಹವಾಲನ್ನು ಇಟ್ಟಿದ್ದಾರೆ. ಅಪರಾಧಿ ಬುಡಕಟ್ಟುಗಳೆಂದು ಬುಡಕಟ್ಟು ಕಾಯ್ದೆಯಡಿ ನಮೂದಿಸಲ್ಪಟ್ಟ ಎಲ್ಲ ಬುಡಕಟ್ಟುಗಳನ್ನು ಸ್ವಾತಂತ್ರ್ಯಾನಂತರ ಆ ಕಾಯ್ದೆಯ ವ್ಯಾಪ್ತಿಯಿಂದ ಹೊರತಂದು ಅವರಿಗೆ ಕೆಲ ಸೌಲಭ್ಯಗಳನ್ನು ನೀಡಿ ಹೆಚ್ಚಿನ ಬುಡಕಟ್ಟುಗಳನ್ನು ಪರಿಶಿಷ್ಟ ಜಾತಿ/ಪಂಗಡದಲ್ಲಿ ಸೇರಿಸಿ ಸರಕಾರಿ ಸೌಲಭ್ಯಗಳಲ್ಲಿ ಮೀಸಲಾತಿ ತಂದದ್ದನ್ನು ಕಾಣುತ್ತೇವೆ. ಆದರೆ ಈ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡದಿಂದ ಹೊರಗಿಟ್ಟಿದ್ದರಿಂದ ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಿ ಮೀಸಲಾತಿಯನ್ನು ನೀಡಬೇಕಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ವಿನಂತಿಸಿದ್ದಾರೆ.

ಆಧಾರ ಗ್ರಂಥಗಳು

 1. Alexander K. C. Prasad R. R. Jahagirdar M. P. 1991, “Tribals and Development’’, Jaipur, Rawat Publication.
 2. Bose, Nirmal Kumar, 1971, “Tribal Life in India’’, New Delhi National Book Trust, India.
 3. Daly F. C. 1916, “Manual of Criminal Classes operating in Bengal’’, Calcutta: The Bengal Secretariat press.
 4. Eaton, Richard Maxwell, 1978, “Sufis of Bijapur, 1300-1700, Social role of sufis in Medival India’’, New jersey : Princeton University press.
 5. Edwards C. M. 1931, “Criminal Tribes at Hubli (1920-1930)’’ West Minister, SWL : SPG in Foreign parts.
 6. Enthoven R. E. 1920 and 1922 “Tribes and castes of Bombay’’ Vol, 2-3, Bombay, Government Central press.
 7. Gayer, G. W. 1906, “Some criminal Tribes of India’’ Nagpur : Government press.
 8. Gunthrope E. J. 1882, “Notes on Crinimal Tribes Residing in or Frequenting the Bombay presidency, Betay and Central provinces’’ Bombay : Times o India Steam press.
 9. Kennedy M, 1907, “The Criminal classes in Bombay presidency’’ Bombay: Government Central press.
 10. Lemerchand A.E.M. 1915, “A Guide to Criminal Tribes’’ Nagpur : Government Central press.
 11. Naidu M. panta Rao, 1907, “The Criminal Tribes of India : The History of Baories, Sansis, Chapparbands, Cabrilees and Irains’’ Val-III, Madras: Higgin Bothom and Co.
 12. Simhadri Y. C. 1979, “Ex-Criminal Tribes of India’’, New Delhi: National publishing House.
 13. ಕತ್ತೆಬೆನ್ನೂರ ಪಿ. ಜೆ. ಸಂಪಾದಕರು ೧೯೭೯, ಹುಬ್ಬಳ್ಳಿಯ ಏಸುನಾಮ ದೇವಾಲಯ ಸಭೆಯ ಸಂಕ್ಷಿಪ್ತ ಚರಿತ್ರೆ ಅ. ಖ. ೠ. Hubli, Golden Jubilee Souvenir, 1928-1979
 14. ಕಟ್ಟಿ ವೆಂಕಟರಂಗೊ, ೧೮೯೩, “ರಾಜ್ಯ ಪತ್ರ-ಮುಂಬೈ ಸಂಸ್ಥಾನಗಳು ಕರ್ನಾಟಕ ಭಾಗದ್ದು, ಮುಂಬೈ : ಸರಕಾರಿ ಕೇಂದ್ರ ಪುಸ್ತಕ ಮಳಿಗೆ.
 15. ಹಳದಿಪುರ ಎಸ್‌. ವಿ. “ಮುಂಬೈ ಇಲಾಖೆಯ ದುರುಳರು ಮುಂಬೈ: ಸರಕಾರಿ ಕೇಂದ್ರೀಯ ಪುಸ್ತಕ ಮಳಿಗೆ.