ಕರ್ನಾಟಕ ರಾಜ್ಯದ ದಕ್ಷಿಣದಲ್ಲಿರುವ ಮೈಸೂರು ಜಿಲ್ಲೆಯನ್ನು ಆಗ್ನೇಯ, ಪೂರ್ವ ಮತ್ತು ದಕ್ಷಿಣದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ರಾಜ್ಯಗಳನ್ನು, ಪಶ್ಚಿಮದಲ್ಲಿ ಕೊಡಗು, ಉತ್ತರದಲ್ಲಿ ಹಾಸನ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳು ಸುತ್ತುವರೆದಿವೆ. ದಕ್ಷಿಣ ಪ್ರಸ್ಥಭೂಮಿಯ ಒಂದು ಭಾಗವಾಗಿರುವ ಈ ಜಿಲ್ಲೆಯು ಉತ್ತರ ಅಕ್ಷಾಂಶ ೧೧೦.೩೦ ರಿಂದ ೧೨೦.೪೫ವರೆಗೂ, ಪೂರ್ವರೇಖಾಂಶ ೭೫೦.೪೫ ರಿಂದ ೭೭೦.೪೫ ರವರೆಗೆ ಹಬ್ಬಿಕೊಂಡಿದೆ. ಈ ಜಿಲ್ಲೆಯು ದಕ್ಷಿಣೋತ್ತರವಾಗಿ ೯೫ ಕಿಲೋಮೀಟರ್‌, ಪೂರ್ವಪಶ್ಚಿಮವಾಗಿ ೧೯೨ ಕಿಲೋಮೀಟರ್‌ಅಗಲವಿದ್ದು, ಜಿಲ್ಲೆಯ ಒಟ್ಟು ವಿಸ್ತೀರ್ಣ ೧೧.೯೫೪ ಚದರ ಕಿಲೋ ಮೀಟರ್‌ಗಳೆಂದು ಅಂದಾಜು ಮಾಡಲಾಗಿದೆ. ಮೈಸೂರು ಜಿಲ್ಲೆಯು ಒಟ್ಟು ಏಳು ತಾಲ್ಲೂಕುಗಳನ್ನು ಹೊಂದಿದೆ. ಹೆಗ್ಗಡದೇವನ ಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ ಹಾಗೂ ತಿರುಮಕೂಡಲು ನರಸೀಪುರ ಕ್ಷೇತ್ರಗಳಾಗಿವೆ.

ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಕಾವೇರಿ, ಕಪಿಲಾ ನದಿಗಳು ಪ್ರಮುಖವಾದರೆ, ಲಕ್ಷ್ಮಣತೀರ್ಥ, ಗುಂಡ್ಲುಹೊಳೆಗುಂಡಾಲ್‌, ನಾಗರಹೊಳೆ, ಎಡುತೊರೆಹಳ್ಳ, ಮಾವಿನಹಳ್ಳ, ಸುವರ್ಣವತಿ ಮತ್ತು ಸಣ್ಣಪುಟ್ಟ ತೊರೆಗಳು ಜಿಲ್ಲೆಯಲ್ಲಿ ಹರಿಯುವುದು ಕಂಡುಬರುತ್ತದೆ. ಕಾವೇರಿ ನದಿಯು ಕೊಡಗು ಜಿಲ್ಲೆಯ ತಲಕಾವೇರಿ ಎಂಬಲ್ಲಿ ಹುಟ್ಟಿ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹರಿದು, ತಿರುಮಕೂಡಲು ನರಸೀಪುರ ತಾಲೂಕಿನ ಬನ್ನೂರು ಸಮೀಪ ಮೈಸೂರು ಜಿಲ್ಲೆಯನ್ನು ಪ್ರವೇಶಿಸಿ, ತಾಲೂಕಿನಾದ್ಯಂತ ಹರಿಯುವಾಗ, ಮಳವಳ್ಳಿ ಮತ್ತು ತಿರುಮಕೂಡಲು ನರಸೀಪುರ ತಾಲೂಕಿನ ಗಡಿಭಾಗದಲ್ಲಿ ಹರಿಯುತ್ತಾ ಮುಂದೆ ಸಾಗುತ್ತದೆ. ಕಪಿಲಾ ನದಿಯು ಕೇರಳ ರಾಜ್ಯದ ಗಡಿಪ್ರದೇಶವಾದ ವೈನಾಡು ಎಂಬಲ್ಲಿ ಹುಟ್ಟಿ, ಕರ್ನಾಟಕವನ್ನು ಹೆಚ್‌. ಡಿ. ಕೋಟೆ ತಾಲೂಕಿನ ಬಾವಲಿ ಎಂಬಲ್ಲಿ ಪ್ರವೇಶಿಸಿ ಹರಿಯುತ್ತಾ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯೊಡನೆ ಸಂಗಮವಾಗುತ್ತದೆ.

ಮುಡುಕುತೊರೆ ಮತ್ತು ತಲಕಾಡು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲೂಕಿನ ಪ್ರಸಿದ್ಧ ಎರಡು ಅವಳಿ ಕ್ಷೇತ್ರಗಳು. ಮೈಸೂರಿನಿಂದ ಪೂರ್ವಕ್ಕೆ ಸುಮಾರು ೫೪ ಹಾಗೂ ೫೮ ಕಿಲೋಮೀಟರ್‌ದೂರದಲ್ಲಿರುವ ಈ ಕ್ಷೇತ್ರಗಳು ಧಾರ್ಮಿಕವಾಗಿ, ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಹಳ ಪ್ರಸಿದ್ಧ ಕ್ಷೇತ್ರಗಳಾಗಿರುವುದು ಅಧ್ಯಯನದಿಂದ ಕಂಡುಬರುತ್ತದೆ.

ಮುಡುಕುತೊರೆ ಕ್ಷೇತ್ರವು ಕಾವೇರಿ ನದಿಯ ಎಡದಂಡೆಯಿಂದ ಸುಮಾರು ಒಂದು ಕಿಲೋ ಮೀಟರ್‌ದೂರದಲ್ಲಿನ ಬೆಟ್ಟದ ಮೇಲೆ ಶ್ರೀಮಲ್ಲಿಕಾರ್ಜುನಸ್ವಾಮಿ ಹಾಗೂ ಭ್ರಮರಾಂಬಿಕ ದೇವಿಯ ದೇವಾಲಯಗಳಿವೆ. ಈ ಕ್ಷೇತ್ರದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಕಾವೇರಿ ನದಿ ಒಮ್ಮೆಲೆ ದಕ್ಷಿಣಕ್ಕೆ ತಿರುಗಿ ಹರಿಯುವುದರಿಂದ ಈ ಕ್ಷೇತ್ರಕ್ಕೆ ಮುಡುಕುತೊರೆ ಎಂಬುದಾಗಿ ಹೆಸರು ಬಂದಿದೆ ಎಂಬುದಾಗಿ ಹೇಳಲಾಗುತ್ತದೆ. ನದಿತೀರದ ಬೆಟ್ಟದ ಮೇಲೆ ದೇವಾಲಯ ಹಾಗೂ ತಳದಲ್ಲಿ ಹಳ್ಳಿ ನೆಲೆಸಿರುವುದರಿಂದ ಬೆಟ್ಟಳ್ಳಿ ಎಂಬುದಾಗಿಯೂ ಕರೆಯಲಾಗುತ್ತದೆ. ಸುತ್ತಲು ಹಸಿರು ಗಿಡಮರಗಳು, ಮಂಟಪಗಳು, ನದಿಕಾಲುವೆಗಳು ಹರಿಯುವ ಈ ಕ್ಷೇತ್ರವು ಯಾತ್ರಿಕರ ಹಾಗೂ ಪ್ರವಾಸಿಗರ ತಾಣವಾಗಿದೆ.

ಮುಡುಕುತೊರೆಯಿಂದ ದಕ್ಷಿಣಕ್ಕೆ ೪ ಕಿಲೋಮೀಟರ್‌ಕ್ರಮಿಸಿದರೆ ಕಾವೇರಿ ನದಿಯ ಎಡದಂಡೆಯ ಮೇಲಿರುವ ತಲಕಾಡು ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿದೆ. ತಲಕಾಡು ಗಂಗರ ರಾಜಧಾನಿಯಾಗಿ ಮೆರೆದ ಪ್ರಾಚೀನ ನಗರ. ಕ್ರಿ. ಶ. ೧೮೬೮ರವರೆಗೆ ತಾಲೂಕು ಕೇಂದ್ರವಾಗಿ ಅನಂತರ ತಿರುಮಕೂಡಲು ನರಸೀಪುರಕ್ಕೆ ತಾಲೂಕು ಬದಲಾಯಿಸಿದ್ದರಿಂದ ಈ ಗ್ರಾಮದ ಬೆಳವಣಿಗೆ ಅಷ್ಟಕ್ಕೆ ನಿಂತುಹೋಯಿತು. ತಲಕಾಡನ್ನು ಹಿಂದೆ ತಳವನಪುರ ಎಂದು ಕರೆಯುತ್ತಿದ್ದರು ಎಂಬುದಾಗಿ ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ತಲ ಹಾಗೂ ಕಾಡ ಎಂಬ ಇಬ್ಬರು ಬೇಡರು ಶಿವನ ಭಕ್ತರಾಗಿದ್ದು ಅನಂತರ ಶಿವನ ಕೃಪೆಗೆ ಪಾತ್ರರಾಗಿ ಮುಕ್ತಿ ಪಡೆದದ್ದರಿಂದ ಈ ಕ್ಷೇತ್ರಕ್ಕೆ ತಲಕಾಡು ಎಂಬ ಹೆಸರು ಬಂತು ಎಂಬುದಾಗಿ ಉಲ್ಲೇಖವಿದೆ.

ಹೀಗೆ ಕೇವಲ ನಾಲ್ಕು ಕಿಲೋಮೀಟರ್‌ಅಂತರದಲ್ಲಿರುವ ಮುಡುಕುತೊರೆ ಮತ್ತು ತಲಕಾಡು ಕ್ಷೇತ್ರಗಳು ಸಮತಟ್ಟಾದ ಭೂಮಿಯ ಮೇಲೆ ನೆಲೆಸಿದ್ದು ಈ ಕ್ಷೇತ್ರಗಳ ಸುತ್ತಲೂ ಸಣ್ಣಪುಟ್ಟ ಬೆಟ್ಟಗಳು, ನದಿ ಕಾಲುವೆಗಳು ಹರಿಯುವುದರಿಂದ ಈ ಕ್ಷೇತ್ರವು ಬಹಳ ಜನಪ್ರಿಯವು ಹಾಗೂ ಪ್ರಾಕೃತಿಕ ಸೊಬಗನ್ನು ಹೊಂದಿರುವ ಕ್ಷೇತ್ರವಾಗಿದೆ. ಧಾರ್ಮಿಕವಾಗಿ, ಐತಿಹಾಸಿಕವಾಗಿ, ಪ್ರವಾಸಿಗರ ತಾಣವಾಗಿರುವ ಈ ಕ್ಷೇತ್ರದಲ್ಲಿ ೪ ರಿಂದ ೧೨ ವರ್ಷಗಳಿಗೆ ಒಮ್ಮೆ ನಡೆಯುವ ಪಂಚಲಿಂಗದರ್ಶನ ಮುಡುಕುತೊರೆ ಜಾತ್ರೆ, ತಲಕಾಡು ಬ್ರಹ್ಮ ರಥೋತ್ಸವ, ಶಿವರಾತ್ರಿ, ದೀಪಾವಳಿ ಮುಂತಾದ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಭೇಟಿ ನೀಡುವುದು ಕಂಡುಬರುತ್ತದೆ. ಪ್ರತಿಯೊಂದು ಜಾನಪದ ಸಾಹಿತ್ಯ, ನೃತ್ಯ, ಕಲೆಗಳ ಹಿಂದೆ ಒಂದೊಂದು ಕಥೆಗಳು, ಧಾರ್ಮಿಕ ಹಿನ್ನೆಲೆಗಳಿರುತ್ತವೆ ಎಂಬುದು ಅವುಗಳ ಹುಟ್ಟು ಬೆಳವಣಿಗೆಗಳಿಂದ ತಿಳಿದುಬರುತ್ತದೆ. ಈ ರೀತಿಯ ಕಲೆಯಲ್ಲಿ ಮುಡುಕುತೊರೆ ಕ್ಷೇತ್ರದ ಕುರುಬರ ದೇವರಗಡಿ ಕುಣಿತವು ವರತಾಗಿಲ್ಲ. ಬಹಳ ವಿಶಿಷ್ಟವಾದ ಹಾಗೂ ತನ್ನದೇ ಆದ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಹೊಂದಿರುವ ಈ ಆಚರಣೆಯು ಸರ್ವಕಾಲಕ್ಕೂ ಅನುಗುಣವಾಗುವಂತೆ ಬೆಳೆದು ಬಂದಿರುವುದು ಇಂದಿಗೂ ಅಲ್ಲಿ ನಾವು ಕಾಣಬಹುದಾಗಿದೆ.

ಕುರುಬರ ಉಗಮ ಮತ್ತು ಸಂಸ್ಕೃತಿ

ಕುರುಬ ಸಮುದಾಯವು ಭಾರತದಲ್ಲಿನ ಅತ್ಯಂತ ಹಳೆಯ ಸಮುದಾಯವಾಗಿದೆ ಎಂಬುದಕ್ಕೆ ಮಹಾಭಾರತದಲ್ಲಿ ಉಲ್ಲೇಖವಿದೆ ಎಂಬುದಾಗಿ ತಿಳಿದುಬರುತ್ತದೆ. ಅಲ್ಲದೆ ಭವ್ಯ ಭಾರತದ ಇತಿಹಾಸದಲ್ಲಿ ಕುರುಬರ ಪಾತ್ರ ಪ್ರಮುಖವಾಗಿರುವುದನ್ನು ಸಹಾ ಕಾಣಬಹುದು. ವಿಜಯನಗರದ ಸ್ಥಾಪಕರಾದ ಹಕ್ಕರಾಯ ಮತ್ತು ಬುಕ್ಕರಾಯ ಕುರುಬ ಸಮುದಾಯದವರಾಗಿದ್ದಾರೆ. ಅನಂತರದ ದಿನಗಳಲ್ಲಿ ಹೊಯ್ಸಳ, ಪಲ್ಲವ ವಂಶಗಳಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಈ ವಂಶದ ಸಂಗೊಳ್ಳಿ ರಾಯಣ್ಣ, ಮೌರ್ಯರ ವಂಶದ ಕಾಳಿದಾಸ, ಕನಕದಾಸ ಮುಂತಾದವರನ್ನು ಕಾಣಬಹುದಾಗಿದೆ.

ಹಾಲುಮತ ಎಂದು ಗುರುತಿಸಲ್ಪಡುವ ಇವರು ಕರ್ನಾಟಕದ ಅತಿದೊಡ್ಡ ಕುರಿಗಾಹಿಗಳ ಸಮುದಾಯಕ್ಕೆ ಸೇರಿದವರು. ನಂಜುಂಡಯ್ಯ ಮತ್ತು ಅಯ್ಯರ್‌(೧೯೩೫) ಅವರು ಇವರಲ್ಲಿ ಮುಖ್ಯವಾಗಿ ಮೂರು ಒಳ ಬಾಂಧವ್ಯದ ಗುಂಪುಗಳಿವೆ ಎಂದಿದ್ದಾರೆ. ಅವರೆಂದರೆ ಹಾಲು, ಹಂಡೆವಜೀರ ಅಥವಾ ಕಂಬಳಿಕುರುಬ. ಇವುಗಳಲ್ಲಿನ ಕೆಲವು ಉಪಪಂಗಡಗಳನ್ನು ದಾಖಲಿಸಿದ್ದಾರೆ (ಹಸ, ಹಳೆ, ಸಾದ, ಕುಂಚಿ, ಮುಳ್ಳು). ಉತ್ತರ ಕರ್ನಾಟಕದಲ್ಲಿ ಇವರಲ್ಲಿ ಎರಡು ಮುಖ್ಯ ಪಂಗಡಗಳಿವೆ. ಅವೆಂದರೆ ಹತ್ತಿಕಂಕಣ, ಉಣ್ಣಿ ಕಂಕಣ. ಇವರಲ್ಲಿ ಜನಪ್ರಿಯವಾಗಿರುವ ಒಂದು ದಂತಕಥೆಯ ಪ್ರಕಾರ ಉಂಡಾಡಿ ಪದುಮಣ್ಣನ ವಂಶದವರೆಂದು ಹೇಳಿಕೊಳ್ಳುತ್ತಾರೆ. ಶಿವನು ಉಂಡಾಡಿ ಪದುಮಣ್ಣನಿಗೆ ಆಶೀರ್ವಾದ ಮಾಡಿ ಕುರಿಗಾಹಿಯನ್ನಾಗಿ ಮಾಡಿದನೆಂದು ಕಥೆ ಹೇಳುತ್ತಾರೆ. (ಪು. ೨೪, ಜನಸಮುದಾಯ ಸಂಪುಟ ೪).

ದೇವರಗಡಿ ಕುಣಿತದ ಹುಟ್ಟು ಮತ್ತು ಧಾರ್ಮಿಕ ಹಿನ್ನೆಲೆ

ಶರಣರ ಸಾಹಿತ್ಯದ ಕೆಲವು ಅಂಶಗಳಲ್ಲಿ ಧರೆಗೆ ದೊಡ್ಡವರು ಶಿವನ ಅವತಾರ ಮಹಾಪುರುಷನು ಈ ಧರೆಯಲ್ಲಿ ಶಿವನಿಗೆ ಯಾರು ಪರಮ ಶ್ರೇಷ್ಠ ಭಕ್ತರು ಅನ್ನುವ ಬಗ್ಗೆ ಪರಿಶೀಲನೆ ಮಾಡಲು ಧರೆಗೆ ದೊಡ್ಡವರು, ಮುಸ್ಸಂಜೆ ಕಾಲದಲ್ಲಿ ಶುದ್ಧ ಹಾಲುಮತದ ಮಹಾದೈವಭಕ್ತಿಯುಳ್ಳವನಾದ ಬೊಪ್ಪೆಗೌಡನ ಮನೆಗೆ ಹೋಗುತ್ತಾರೆ. ತನಗೆ ಉಳಿದುಕೊಳ್ಳಲು ಸ್ವಲ್ಪ ಜಾಗ ಬೇಕೆಂದು ಗೌಡನನ್ನು ಕೇಳಿದಾಗ ಜಾಗ ಕೊಡಲು ಸಾಧ್ಯವಿಲ್ಲ. ಬೇಕಾದರೆ ಚಾವಡಿಯಲ್ಲಿ ಮಲಗಿದ್ದು ಹೋಗು ಎಂದು ಹೇಳುತ್ತಾನೆ. ಅದಕ್ಕೆ ಅವನು ತಾನು ಮತ್ತು ತನ್ನ ಕಂಡಾಯ ಇಲ್ಲೇ ಉಳಿಯಬೇಕೆಂದು ಒತ್ತಾಯಿಸುತ್ತಾನೆ. ಆ ಸಂದರ್ಭದಲ್ಲಿ ಅವರ ಹೆಂಡತಿ ಕಾಳಮ್ಮ, ಇವರು ಯಾರೋ ಮಹಾಪುರುಷ ಇರಬೇಕು ಎಂದು ಅವರಿಗೆ ಉಳಿದುಕೊಳ್ಳಲು ಸ್ವಲ್ಪ ಜಾಗ ನೀಡಲು ಗಂಡನಿಗೆ ಸಲಹೆ ಕೊಡುತ್ತಾಳೆ. ಅನಂತರ ಕುರಿ ಕೊಟ್ಟಿಗೆಯಲ್ಲಿ ಸ್ವಲ್ಪ ಸ್ಥಳವನ್ನು ನೀಡುತ್ತಾರೆ. ಅಲ್ಲಿಯೇ ಉಳಿದುಕೊಂಡ ಧರೆಗೆ ದೊಡ್ಡವರು ಬೊಪ್ಪೆಗೌಡನ ದುರ್ವರ್ತನೆಯಿಂದ ಕೋಪಗೊಂಡು ಅವನ ಮನೆಯಲ್ಲಿದ್ದಂತಹ ದನಕರುಗಳು, ಕುರಿ ಮೇಕೆಗಳನ್ನು ತನ್ನ ಪವಾಡದಿಂದ ಕೊಂದುಬಿಡುತ್ತಾರೆ. ಬೆಳಗ್ಗೆ ದಂಪತಿಗಳು ದನಕರುಗಳೆಲ್ಲಾ ಸಾವನ್ನಪ್ಪಿರುವುದನ್ನು ಕಂಡು ದುಃಖತಪ್ತರಾಗಿ ಮಹಾತ್ಮನನ್ನು ಕೇಳಿದಾಗ ನೀವು ಮಾಡಿದ ಪಾಪದ ಫಲವೇ ಇದು ಎಂದು ಹೇಳುತ್ತಾರೆ. ಅವರು ಮರುಗುತ್ತಿರುವಾಗ ಮಹಾತ್ಮರು ತಾನು ಹೇಳಿದಂತೆ ಕೇಳಿದರೆ ಈಗ ನೀವು ಕಳೆದುಕೊಂಡ ಎರಡರಷ್ಟು ಸಂಪತ್ತು ಕೊಡುತ್ತೇನೆ ಎಂದು ಹೇಳುತ್ತಾರೆ. ಬೊಪ್ಪೆಗೌಡನು ನಾನು ಏನು ಮಾಡಬೇಕೆಂದು ಮಹಾತ್ಮರನ್ನು ಪ್ರಶ್ನಿಸಿದಾಗ, ನೀವು ಈ ಮನೆಯನ್ನು ಮಠಕ್ಕಾಗಿ ಬಿಟ್ಟುಕೊಡಬೇಕು ಎಂದು ಹೇಳುತ್ತಾರೆ. ಅದಕ್ಕೆ ಬೊಪ್ಪೆಗೌಡ ತನ್ನ ಆಸ್ತಿಪಾಸ್ತಿ, ನೆಂಟರಿಷ್ಟರನ್ನು ಬಿಟ್ಟು ಹೇಗೆ ಹೋಗುವುದು ಎಂದಾಗ, ಹೊನ್ನನಾಯಕನ ಹಳ್ಳಿಯಲ್ಲಿ ಬಳೆನಿಂಗಮ್ಮನ ಮನೆ ಪಕ್ಕದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿ, ನಿಮ್ಮನ್ನು ಆಕಾಶಕ್ಕೆ ಕಳುಹಿಸುವುದಿಲ್ಲ, ಭೂಮಿಯಲ್ಲಿ ಉಳಿಯಲು ಬಿಡುವುದಿಲ್ಲ. ಆದರೆ ನಿನ್ನನ್ನು ಕುರುಬ ಸಮಾಜದ ಬೀರೇಶ್ವರ ಬಿರುದನ್ನು ನೀಡಿ ನಿನ್ನನ್ನು ದೇವರನ್ನಾಗಿ ಮಾಡುತ್ತೇನೆ. ನಿನ್ನ ಕುರಿಕಾಯುವ ಕೋಲು ನಂದಿಕಂಬವಾಗಲಿ, ನಿನ್ನ ಹಿಪ್ಪನೇರಳೆ ಸೊಪ್ಪು ಕತ್ತರಿಸುವ ಆಯುಧ ಗಂಡುಕತ್ತಿಯಾಗಲಿ ಎಂದು ಹೇಳಿ ಪವಾಡ ಮಾಡುತ್ತಾರೆ. ಅಲ್ಲದೆ ಭೂಲೋಕದಲ್ಲಿ ಎರಡನೇ ಕೈಲಾಸವಾಗಿರುವ ಮುಡುಕುತೊರೆಯ ಮಲ್ಲಿಕಾರ್ಜುನ ಸನ್ನಿಧಿಗೆ ಬರುವ ಕೂಟಗಳಲ್ಲಿ ನಿನ್ನನ್ನು ಮೆರೆಯುವ ದೇವರನ್ನಾಗಿ ಮಾಡುತ್ತೇನೆ. ಈ ಪ್ರಾಂತ್ಯದ ೮೮ ಕೂಟಗಳಿಗೆ ನಿನ್ನನ್ನು ಯಜಮಾನನನ್ನಾಗಿ ಮಾಡಿ ಈ ಲೋಕದಲ್ಲಿ ಯಾವ ಜಾತಿಯ ಕೂಟ ಒಡೆದರೂ ಕುರುಬ ಕೂಟ ಒಡೆಯದ ರೀತಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅನುಗ್ರಹಿಸಿದಾಗ ಈ ದಂಪತಿಗಳು ಒಪ್ಪಿಕೊಳ್ಳುತ್ತಾರೆ.

ಈ ರೀತಿ ಪ್ರಾರಂಭವಾದ ಕುರುಬ ಸಮುದಾಯದ ದೇವರ ಕುಣಿತ, ಗಡಿಕುಣಿತ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ, ಮರಳಿ, ತಲಕಾಡು, ಚಂದಳ್ಳಿ, ಅಸಳ್ಳಿ ಹೊನ್ನೂರಿನ ಬೀರೇಶ್ವರ ಗರಡಿ, ಅಗಸನಪುರದ ಚಿಕ್ಕಯ್ಯ, ಪೂರಿಗಾಲಿಯ ಪಾತಾಳೇಶ್ವರ, ಕಾಳಿಹುಂಡಿಯ ಬೊಮ್ಮನಕಾಳಮ್ಮ, ಕಾಳಿಹುಂಡಿಯ ಬೊಮ್ಮನಪುರದ ಸಿದ್ಧರಾಮೇಶ್ವರ ಗರಡಿಗಳು ಆ ಸಮುದಾಯದ ಸಾಂಪ್ರದಾಯಿಕ ಹತ್ತು ಗರಡಿಗಳಿವೆ. ಜಾತ್ರೆಯ ದಿನ ಈ ಮೇಲಿನ ಊರುಗಳಿಂದ ದೇವರ ಗಡಿಗಳು ಕುರುಬ ಮಂಟಪಕ್ಕೆ ಬಂದು ನೆಲಸುತ್ತವೆ. ಬೀರೇಶ್ವರ ಗುಡಿಗೆ ವಿವಿಧ ಪುಷ್ಪಗಳಿಂದ, ಅಲಂಕಾರ ವಸ್ತುಗಳಿಂದ, ಜರತಾರಿ ಸೀರೆಗಳಿಂದ, ಕಳಸಗಳು, ಬಿದಿರು, ಪಂಚಲೋಹಗಳು, ಹಣ್ಣು, ಹೂವು, ಹೊಂಬಾಳೆ, ವಿವಿಧ ಪ್ರಾಣಿಗಳ ಗೊಂಬೆಗಳಿಂದ ದೇವರಗುಡಿಗಳನ್ನು ಅಲಂಕರಿಸಿ, ಜಾತ್ರೆಯ ದಿನದಿಂದ ತಪ್ಪದೆ ಐದು ದಿನಗಳ ಕಾಲ ದೇವರ ಗುಡಿ ಕುಣಿತ ಸಂಜೆ ೫ ಗಂಟೆಯಿಂದ ರಾತ್ರಿಯವರೆಗೆ ನಡೆಯುತ್ತದೆ. ಇದಲ್ಲದೆ ಈ ಪ್ರಾಂತ್ಯದಲ್ಲಿ ಕುರುಬರು ನೆಲೆಸಿರುವ ಮಾರಳ್ಳಿ, ಚಂದಳ್ಳಿ, ಅಸಳ್ಳಿ, ತಲಕಾಡು, ಅಗಸನಪುರ, ಪೂರಿಗಾಲಿ, ಕಾಳಿಹುಂಡಿ, ಹೊನ್ನೂರು, ಬೊಮ್ಮನಪುರ ಹಾಗೂ ಇತರ ಅನೇಕ ಗ್ರಾಮಗಳ ಗಡಿಗಳಲ್ಲಿ ಮುಡುಕುತೊರೆಯಿಂದ ಪಾರ್ವತಿಯನ್ನು ಕುಳ್ಳಿರಿಸಿಕೊಂಡು ಶ್ರೀಶೈಲಕ್ಕೆ ಹೋಗುವ ಬಸವಗಳನ್ನು ದೇವರ ಹೆಸರಿನಲ್ಲಿ ಬಿಟ್ಟು ಅವುಗಳನ್ನು ಗ್ರಾಮದ ಜನರ ಸಹಾಯದಿಂದ ಒಬ್ಬ ಗೋಪಾಲಕನನ್ನು ನೇಮಿಸಿ ಅವನಿಗೆ ದವಸಧಾನ್ಯ, ಗೋವಿಗೆ ಮೇವುಗಳನ್ನು ಗ್ರಾಮದವರು ನೀಡುತ್ತಾರೆ. ಈ ಬಸವಗಳನ್ನು ಬಹಳ ಜೋಪಾನವಾಗಿ ಸಾಕಲಾಗುತ್ತದೆ. ಅವುಗಳಿಗೆ ಎಂಜಲು ಬಡಿಸುವುದಾಗಲಿ, ಕೊಂಬುಗಳನ್ನು ಹೊರೆದು ಅಲಂಕಾರ ಮಾಡುವುದು, ಕಾಲುಗಳಿಗೆ ಲಾಳ ಕಟ್ಟಿಸುವುದಾಗಲಿ, ಕೊಂಬುಗಳನ್ನು ಹೊರೆದು ಅಲಂಕಾರ ಮಾಡುವುದು, ಕಾಲುಗಳಿಗೆ ಲಾಳ ಕಟ್ಟಿಸುವುದಾಗಲಿ ಮಾಡುವಂತಿಲ್ಲ. ಅವುಗಳನ್ನು ದೇವರಂತೆಯೇ ಪೂಜಿಸಿ, ಅವುಗಳ ಕಾಲಿಗೆ ಬೆಳ್ಳಿಕಡಗ, ಕೊಂಬಿಗೆ ರೇಷ್ಮೆ ಕುಚ್ಚು, ಹೊಂಬಾಳೆ, ಮೂಗಿಗೆ ರೇಷ್ಮೆದಾರ, ಕತ್ತಿಗೆ ವಿವಿಧ ಬಣ್ಣದ ಅಲಂಕಾರ ವಸ್ತುಗಳು ಅದರ ಬೆನ್ನ ಮೇಲೆ ವಸ್ತ್ರಗಳನ್ನು ಹಾಕಿ ಶೃಂಗರಿಸುತ್ತಾರೆ. ಜಾತ್ರೆಯ ಸಮಯದಲ್ಲಿ ಮದುವಣಗಿತ್ತಿಯಂತೆ ಶೃಂಗರಿಸಿ, ಅವುಗಳನ್ನು ಪ್ರದರ್ಶನಕ್ಕೆ ನಿಲ್ಲಿಸುತ್ತಾರೆ. ಈ ಕ್ಷೇತ್ರಕ್ಕೆ ಬಂದ ಜನರು ದವಸಧಾನ್ಯಗಳನ್ನು, ಅವುಗಳಿಗೆ ಮೇವುಗಳನ್ನು ನೀಡುತ್ತಾರೆ. ಅವುಗಳಿಗೆ ಪಾದಪೂಜೆ ಮಾಡುವುದು ಇತ್ಯಾದಿ ಧಾರ್ಮಿಕ ಕಾರ್ಯಗಳಿಗೆ ಬಸವಗಳನ್ನು ತಪ್ಪದೇ ಕರೆ ತರುವುದು ಸಾಮಾಜಿಕ ಕಾರ್ಯಗಳಲ್ಲಿ ಒಂದು ಎಂಬುದನ್ನು ತಿಳಿಯಬಹುದು.

ಹೀಗೆ ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರಗಳ ಜನರು ಮರಳ್ಳಿ, ಚಂದಳ್ಳಿ, ಅಗಸಳ್ಳಿ, ತಲಕಾಡು, ಅಗಸನಪುರ, ಪೂರಿಗಾಲಿ, ಕಾಳಿಹುಂಡಿ, ಹೊನ್ನೂರು, ಬೊಮ್ಮನಪುರ, ಗಡಿಗಳ ಜನರು ಜಾತ್ರೆಯ ಸಮಯದಲ್ಲಿ ಮುಡುಕುತೊರೆಯಲ್ಲಿರುವ ತಮ್ಮ ಸಮುದಾಯದವರಿಗೆ ನಿರ್ಮಿಸಿರುವ ಮಂಟಪದಲ್ಲಿ ಉಳಿದುಕೊಂಡು ದೇವರಗಡಿ ಮತ್ತು ಬಸವ ಪೂಜೆಗಳ ಜೊತೆಗೆ ತಮ್ಮ ಸಂಘದಲ್ಲಿರುವ ಒಟ್ಟು ಹಣ, ವಾರ್ಷಿಕ ಆಯವ್ಯಯಗಳನ್ನು ಮಂಡಿಸುವುದು, ತಮ್ಮ ಸಮುದಾಯದವರಿಂದ ಹಣ ಸಂಗ್ರಹಿಸುವುದು, ಮುಂದಿನ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಯೋಜನೆ ಮಾಡುವುದು, ತಾವು ತಂದಂತಹ ಧಾರ್ಮಿಕ, ಸಾಂಪ್ರದಾಯಕ ವಸ್ತುಗಳಾದ ಕರಿಯ ಕಂಬಳಿ, ಕುರಿಯ ತುಪ್ಪಟದಿಂದ ಮಾಡಿದ ಕಂಬಳಿಗಳು, ಗದ್ದುಗೆ ಕಂಬಳಿ ಮುಂತಾದ ವಸ್ತುಗಳ ಮಾರಾಟ ಮಾಡುವುದು ಕಂಡುಬರುತ್ತದೆ.

ಈ ರೀತಿಯಾಗಿ ಮುಡುಕುತೊರೆಯಲ್ಲಿ ಕುರುಬ ಸಮುದಾಯದವರು ತಮ್ಮ ಸಮುದಾಯದ ಮೂಲ ಪುರುಷ, ತಮ್ಮ ಪವಿತ್ರ ವಸ್ತುಗಳು, ತಮ್ಮ ಜನರ ಒಗ್ಗಟ್ಟು, ಸಾಂಪ್ರದಾಯಕ ನೃತ್ಯ, ಅನ್ನದಾನ, ವ್ಯಾಪಾರ, ಮನೋರಂಜನೆಗಳನ್ನು ಹಿಂದಿನಿಂದಲೂ ಚಾಚೂ ತಪ್ಪದೇ ನೆರವೇರಿಸಿಕೊಂಡು ಬರುತ್ತಿದ್ದು, ಜಗತ್ತು ೨೧ನೇ ಶತಮಾನಕ್ಕೆ ಕಾಲಿಟ್ಟಿದ್ದರೂ ಸಹ ತಮ್ಮ ಸಾಂಪ್ರದಾಯಿಕ, ಜಾನಪದ ನೃತ್ಯ, ಧಾರ್ಮಿಕ ನಂಬಿಕೆ, ವ್ಯಾಪಾರಗಳನ್ನು ಪವಿತ್ರಕ್ಷೇತ್ರಗಳಲ್ಲಿ ಮಾಡಿಕೊಂಡು ಬರುತ್ತಿದ್ದು, ತಮ್ಮ ಸಮುದಾಯದ ಜನರಲ್ಲಿ ಉತ್ತಮ ಸಂಬಂಧವನ್ನು, ಸಂಘಟನೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ಇಂದಿಗೂ ಕರ್ನಾಟಕದಲ್ಲಿ ಕುರುಬ ಸಮಾಜವು ಒಗ್ಗಟ್ಟಿನಿಂದ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಒಗ್ಗಟ್ಟಿನಿಂದ ಇತರ ಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸುತ್ತಿರುವುದು ಕಂಡುಬರುತ್ತದೆ.

ಗ್ರಂಥಋಣ

೧. ಅನಿಲ್‌ರಾಜ್‌. ಡಿ. ೧೯೯೩, ಮಂಗಲ ಮಾರಮ್ಮ ದೇವಿಯ ಜಾತ್ರೆಯು ಎಲ್ಲ ಕೋಮುಗಳನ್ನು ಒಗ್ಗೂಡಿಸುವ ಸಾಮಾಜಿಕ ಸಂಕೇತ: ಒಂದು ಅಧ್ಯಯನ. ಮಹಾಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ.

೨. ಗುರುರತ್ನಬಾಬು ಡಿ. ೧೯೯೯, ತಲಕಾಡಿನ ಗಂಗರಸರ ಸಾಂಸ್ಕೃತಿಕ ಪರಂಪರೆ : ಒಂದು ಅಧ್ಯಯನ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.

೩. ಕಾಡಯ್ಯ, ೧೯೯೧, ನಂಜನಗೂಡು ಶ್ರೀನಂಜುಂಡೇಶ್ವರಸ್ವಾಮಿ ಜಾತ್ರೆಯ ಒಂದು ಸಾಮಾಜಿಕ ಮಾನವಶಾಸ್ತ್ರೀಯ ಅಧ್ಯಯನ, ಪ್ರೌಢಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ.

೪. ಕೃಷ್ಣ ದೀಕ್ಷಿತ್‌, ೧೯೬೬, ತಲಕಾಡಿನ ಕೈಪಿಡಿ, ಶ್ರೀ ಮನೋನ್ಮನಿ ಗ್ರಂಥಮಾಲ ಪ್ರಕಟನೆ ಮಂದಿರ, ಬಸವನಗುಡಿ, ಬೆಂಗಳೂರು.

೫. ಕೃಷ್ಣ ದೀಕ್ಷಿತ್‌, ೧೯೬೦, ಶ್ರೀ ಸೋಮಶೈಲದ ಮಹಿಮೆ, ಪದ್ಮ ಪ್ರಿಂಟಿಂಗ್‌ವರ್ಕ್ಸ್‌, ಹನುಮಂತನಗರ, ಬೆಂಗಳೂರು.

೬. ಮಂಜುಳ ಹುಲ್ಲಹಳ್ಳಿ, ೨೦೦೦, ನಂಜನಗೂಡು ಒಂದು ಸಾಂಸ್ಕೃತಿಕ ಅಧ್ಯಯನ ಶ್ರೀ ರಾಜೇಂದ್ರ ಪ್ರಿಂಟರ್ಸ್‌, ಮೈಸೂರು.