ಕಂಜರಭಾಟ ಸಮುದಾಯವು ಪ್ರಾಚೀನ ಕಾಲದಿಂದ ಹುಟ್ಟಿ ಬಂದಿದ್ದರೂ ಅದರ ಜನಸಂಖ್ಯೆ ಕಡಿಮೆ ಇದ್ದ ಕಾರಣ ಅವರ ಬಗ್ಗೆ ದೇಶದ ಹಳ್ಳಿಗಳ ಸುತ್ತಲಿನ ಜನಕ್ಕೆ ಗೊತ್ತಿಲ್ಲ. ಈ ಜನ ಅಲ್ಲಲ್ಲಿ ಈಗ ಪಟ್ಟಣಗಳಲ್ಲಿ ವಾಸಿಸಿದ್ದಾರೆ. ನಮ್ಮ ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ, ಈ ಜನ ಅಲೆಮಾರಿಗಳಾಗಿ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕಾಲ ಕಳೆಯುತ್ತಿದ್ದರು.

ಮಹಾರಾಣಾ ಪ್ರತಾಪಸಿಂಹನ ರಾಜ ದರಬಾರದಲ್ಲಿ ಈ ಸಮುದಾಯದ ಭಟ್ಟಂಗಿಗಳು ಆಗಿನ ರಾಜರ ಬಿರುದುಗಳನ್ನು ಘಂಟಾಘೋಷವಾಗಿ ಸಾರುತ್ತಿದ್ದರು. ಜಯ ಜಯಕಾರ ಮೊದಲಾದ ರೀತಿಯಲ್ಲಿ ಕೆಲವು ವರ್ಷಗಳ ನಂತರ ಪ್ರತಾಪಸಿಂಹನು ಅಕ್ಬರನ ವಿರುದ್ಧ ೨೮ ವರ್ಷಗಳ ಕಾಲ ಯುದ್ಧ ಮಾಡಿ ಸೋತ ಕಾರಣ, ಈ ಜನ ರಾಜಸ್ಥಾನವನ್ನು ಬಿಟ್ಟು ಅಲೆಮಾರಿಗಳಾಗಿ, ಹಳ್ಳಿಗಳ ಬೀದಿಗಳಲ್ಲಿ ವಿವಿಧ ರೀತಿಯಲ್ಲಿ ಸೋಗುಗಳನ್ನು ಹಾಕುತ್ತ ನೃತ್ಯ ಮಾಡಿ ತಮ್ಮ ಜೀವನ ಸಾಗಿಸತೊಡಗಿದರು. ಈಗಲೂ ಕೂಡ ಕೆಲವು ಜನ ಅದೇ ವೃತ್ತಿಯಲ್ಲಿ ಇದ್ದಾರೆ.

ಈ ಸಮುದಾಯವನ್ನು ಭಾಟ್‌, ಕಂಜರಭಾಟ್‌, ಕಾರವಾರನ್‌, ಛಾರಾ, ಲೋಲ್ಲ್ಯಾರ್‌, ಸಾಂಶಿ, ಮುಖೇರು, ಭಾಂತು, ಕಂಝೂರಿ, ಮುಖೇರಿ, ಝಂಜುಣೀಯ, ಧವಳಾಭಾಂತು, ಮಾಳವಿ, ಲಗೋಜಿ, ಕಂಜೀರಭಾಟ್‌, ಹೀಗೆ ಅನೇಕ ಹೆಸುಗಳಿಂದ ಕರೆಯುತ್ತಾರೆ. ಇವರಿಗೆ ಭೈರುಪಗೇರ ಎಂದು ಹಳ್ಳಿಗಳಲ್ಲಿ ಕರೆಯುವದು ವಾಡಿಕೆಯುಂಟು.

ಈ ಸಮುದಾಯ ಕತ್ತಿ, ಕುದುರೆಗಳ ಮೇಲೆ ಗುಳೆ ಕಟ್ಟಿಕೊಂಡು ಪ್ರತಿಹಳ್ಳಿ, ಹಳ್ಳಿಗೆ ಅಲೆದಾಡಿ ಭಿಕ್ಷೆ ಬೇಡುವುದು ಇವರ ವೃತ್ತಿಯಾಗಿತ್ತು. ಈ ಭಾಟ್‌ಸಮುದಾಯ ಧಾರವಾಡ ಜಿಲ್ಲೆಯ ಸುತ್ತಲೂ ಇದೆ. ಕಂಜರಭಾಟ್‌ಕರ್ನಾಟಕದ ಗದಗ, ಬೆಳಗಾವಿ, ಹಾವೇರಿ, ಗುಲಬರ್ಗಾ ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

ಕಂಜರ್‌ಭಾಟ್‌ಜನ ಪ್ರಾಚೀನ ಕಾಲದಲ್ಲಿ ಹಮೀಣಿ, ಕೈಚೀಲ, ಮಣಿಬ್ಯಾಗ್‌, ಕಸೂತಿಯ ಕೆಲಸ, ಕೈನೂಲಿನಿಂದ ಕೌದಿಗಳನ್ನು ಹೊಲಿಯುವ ಉದ್ಯೋಗ ಮಾಡುತ್ತಿದ್ದರು. ಆದ್ದರಿಂದ ಈ ಭಾಟ್‌ಜನ ತಾವು ಕಂಜರಭಾಟ್‌ಎಂದು ಕರೆಯಿಸಿಕೊಂಡರು. ಕಾರವಾನ್‌ಎಂಬುದು ಮರಾಠಿ ಶಬ್ದ ಮರಾಠಿಯಲ್ಲಿ ಕಾರವಾನ್‌ಎಂದರೆ ಸಂಚಾರಿ ಜನ ಎಂದು ಅರ್ಥವಾಗುವುದು. ಆದ್ದರಿಂದ ಈ ಜನ ತಾವು ಮರಾಠಿಯಲ್ಲಿ ಕಾರವಾನ್‌ಎಂದು ಕರೆಯಿಸಿಕೊಳ್ಳುವುದು.

ಗುಜರಾತ್‌ದಲ್ಲಿ ಈ ಜನಕ್ಕೆ ಛಾರಾ ಎಂದು ಕರೆಯುವರು. ಸಾಂಶಿ ಎಂದು ಗುಜರಾತ ರಾಜಸ್ಥಾನಗಳಲ್ಲಿ ಕರೆಯುತ್ತಾರೆ. ಲೋಲ್ಯಾರ್‌ಎಂದು ಕರ್ನಾಟಕದ ಬಿಜಾಪುರ, ಗುಲಬರ್ಗಾ, ಧಾರವಾಡ, ಬೆಳಗಾವಿ ಭಾಗಗಳಲ್ಲಿ ಕರೆಯುತ್ತಾರೆ. ಗುಲಬರ್ಗಾದಲ್ಲಿ ಮುಖೇರು ಎಂದು ಮತ್ತೊಂದು ರೀತಿಯಲ್ಲಿ ಕರೆಯುತ್ತಾರೆ. ಸಾಂಶಿ ಎಂದರೆ ಚಾಕು ಚೂರಿಗಳನ್ನು ತಯಾರಿಸುವವರು. ಉತ್ತರ ಪ್ರದೇಶದಲ್ಲಿ ಹಾಗೂ ದಿಲ್ಲಿ, ಮುರಾದಾಬಾದ್‌ಭಾಗಗಳಲ್ಲಿ ಭಾಂತು ಎಂದು ಕರೆಯುವರು. ಭಾಂತು ಎಂದರೆ ಹಿಂದಿಯಲ್ಲಿ ಧೈರ್ಯವಂತರು ಎಂದು ಅರ್ಥವಾಗುತ್ತದೆ. ಈ ಜನ ಪ್ರತಿಯೊಂದು ಕೆಲಸದಲ್ಲಿ ಧೈರ್ಯದಿಂದ ಕೆಲಸ ಮಾಡುವರು. ಆದ್ದರಿಂದ ಇವರಿಗೆ ಹಿಂದಿಯಲ್ಲಿ ಭಾಂತು ಎಂದು ಕರೆಯುವ ರೂಢಿ ಬಂದಿದೆ.

ಕಂಝೂರಿ ಈ ಜನ ಕರ್ನಾಟಕದ ಗುಲಬರ್ಗಾ ಹಾಗು ಶಾಬಾದವಾಡಿ ಭಾಗಗಳಲ್ಲಿ ವಾಸಿಸಿದ್ದಾರೆ. ಮುಖೇರು ಶಬ್ದ ಬದಲಾವಣೆ ಹೊಂದಿ ಮುಖೇರಿ ಎಂದು ಕೆಲವು ಕಡೆ ಕರೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಝಂಜಣೀಯ ಎಂದು ಕರೆಯುವ ವಾಡಿಕೆ ಉಂಟು. ಇದೇ ರಾಜ್ಯದಲ್ಲಿ ಧಳವಾ ಭಾಂತ ಎಂದು ಕರೆಯಿಸಿಕೊಳ್ಳುತ್ತಾರೆ. ಹಿಂದಿಯಲ್ಲಿ ಧಳವಾ ಎಂದರೆ ಬೆಳ್ಳಗೆ ಎಂದು ಅರ್ಥವಾಗುವುದು. ಉತ್ತರ ಪ್ರದೇಶದಲ್ಲಿ ಈ ಜನ ಸ್ವಲ್ಪ ಪ್ರಮಾಣದಲ್ಲಿಯಾದರೂ ಮೈ ಬಣ್ಣ ಬೆಳ್ಳಗವುಳ್ಳರಾಗಿದ್ದರಿಂದ ಇವರಿಗೆ ಧಳವಾ ಭಾಂತು ಎಂದು ಕರೆಯಿಸಿಕೊಳ್ಳುವರು ಎಂದು ಈ ಸಮುದಾಯದವರು ಹೇಳುತ್ತಾರೆ.

ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳ ಕಡೆ ಈ ಸಮುದಾಯಕ್ಕೆ ಮಾಳವಿ ಎಂದು ಕರೆಯುತ್ತಾರೆ. ಮಾಳವಿ ಎಂದು ಹೆಸರು ಬರಲು, ಮಧ್ಯಪ್ರದೇಶದಲ್ಲಿಯ ಮಾಳವಾ ಎಂಬ ಊರಲ್ಲಿ ಈ ಜನ ಹೆಚ್ಚಾಗಿರುವುದರಿಂದ ಈ ಜನ ತಾವು ಮಾಳವಿ ಎಂದು ಕರೆಯಿಸಿಕೊಂಡರು.

ಈ ಸಮುದಾಯದಲ್ಲಿಯ ಕೆಲವರು ಜೋಡು ಕೊಳಲುಗಳನ್ನು ಬಾಯಲ್ಲಿಟ್ಟು ಬಾರಿಸುತ್ತಿದ್ದರು. ಇಂಥವರಿಗೆ ಲಗೋಜಿ ಎಂದು ಕರೆಯಲಾಗುತ್ತದೆ. ಈ ಸಮುದಾಯದ ಹೆಣ್ಣು ಮಕ್ಕಳು ಡೋಲು ಬಾರಿಸುತ್ತ ಎರಡು ಕೈಗಳಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡುತ್ತ ಹಳ್ಳಿ ಹಳ್ಳಿಗೆ ಅಲೆದಾಡಿ ಭಿಕ್ಷೆ ಬೇಡಿ ತಮ್ಮ ಜೀವನ ಸಾಗಿಸುತ್ತಿದ್ದರು.

ಈ ರೀತಿಯಲ್ಲಿ ಅಲೆದಾಡಿ ಜೀವನ ನಡೆಸುವ ನಡೆಸುವ ಜನರನ್ನು ೧೯೦೯ರಲ್ಲಿ ಬ್ರಿಟಿಷರು ಹಿಡಿದು ಅಲ್ಲಲ್ಲಿ ಇವರಿಗಾಗಿ ವಿಶೇಷವಾಗಿ ನಿರ್ಮಿಸಲಾದ ವಸಾಹತುಗಳಲ್ಲಿ ಬಂಧಿಸಿ ದಿನಾಲು ಇವರಿಗೆ ಹಾಜರಾತಿಯ ಪ್ರಕಾರ ಉದ್ಯೋಗ ಮಾಡಿಸಿ ಜೀವನಕ್ಕೆ ಆಹಾರ ಒದಗಿಸುತ್ತಿದ್ದರು. ಇಂಥ ವಸಾಹತುಗಳಿಗೆ ಸೆಟಲ್‌ಮೆಂಟ್‌ಎಂದು ಕರೆಯುತ್ತಾರೆ. ಉದಾಹರಣೆಗಾಗಿ ಗದಗ, ಹುಬ್ಬಳ್ಳಿ, ಗೋಕಾಕ, ಬಿಜಾಪುರ, ಅಹಮದಾಬಾದ್‌, ಅಂಬರನಾಥ ಮೊದಲಾದ ಸ್ಥಳಗಳಲ್ಲಿ ಕಾಣಬಹುದು. ಈ ಸಮುದಾಯ ಅಹಮದಾಬಾದ್‌ನ ಚಾರಾ ನಗರಗಳಲ್ಲಿ ಹಾಗೂ ಪೂನಾದಲ್ಲಿ ವಾಸವಾಗಿದ್ದಾರೆ.

ಆಧಾರ ಗ್ರಂಥಗಳು

ಬಾಗಡೆ ಜೆ.ವ್ಹಿ. ೨೦೦೮, ಕಂಜರಭಾಟ ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆ, ರಾಜಾ ಪ್ರಿಂಟರ್ಸ್‌, ನಂ ೫೯, ೪ನೇ ಕ್ರಾಸ್‌, ಲಾಲ್‌ಬಾಗ್‌ರಸ್ತೆ ಬೆಂಗಳೂರು.