ನಿರೂಪಕರು ತಮ್ಮ ತಮ್ಮಲ್ಲಿ ಗ್ರಾಮ್ಯ ರೂಪ ಬಳಸಿದರೂ ಶಿಕ್ಷಣ ಪಡೆದವರ ಬಳಿಯಲ್ಲಿ ಶುದ್ಧರೂಪ ಉಚ್ಚಾರ ಮಾಡುತ್ತಾರೆ. ಉದಾ. ‘ಆಹಾರ’ ಅವರು ತಮ್ಮ ರೂಢಿಯಲ್ಲಿ ‘ಆಯಾರ’ ಎನ್ನುತ್ತಾರೆ.

ಇ ಕಾರಕ್ಕೆ ಎಕಾರಾದೇಶ ದಿಬ್ಬಣ-ದೆಬ್ಬ, ಇಲಿ-ಎಲಿ, ಯೆಲಿ ಅಡ್ಡಿ ಇಲ್ಲ-ಅಡ್ಡಿಲ್ಲ, ಇಬ್ಬರು-ಯೆಬರಾಳು.

ಈ ಕಾರಕ್ಕೆ ಯಕಾರ, ಈಗ-ಯೇಗ, ದೀಪ-ದೇಪ ಎರಡು-ಯೆರಡು, ಯೆಯ್ಡು.

ಎಕಾರಕ್ಕೆ ಇಕಾರ, ಪತ್ರೆ, ಪತ್ರಿ, ಅತ್ತೆ, ಅತ್ತಿ, ಕತ್ತೆ, ಕತ್ತಿ.

ಉಕಾರಕ್ಕೆ ವ ಕಾರ: ಉಲಿ-ವಲಿ (ಶಬ್ದ ಆಗುವುದು)

ಉ ಕಾರಕ್ಕೆ ಒ ಕಾರ ಕೂಡೆ, (ಹಿತ್ತರ) ಕೋಡೆ, ಊಟ-ವೋಟ, ಪೂಜೆ-ಪೋಜಿ ಉಸ್ರಾಗೆ ಓಸ್ಕರ, ಕುದುರೆ-ಕೊದ್ರಿ.

ಓ ಕಾರ ಉ ಕಾರವಾಗುತ್ತದೆ: ಕೊಡವಿಕೊಂಡು-ಕುಡಿಕಂಡು,

ವ ಕಾರಕ್ಕೆ ಯಕಾರ: ವಿಚಾರ-ಯಚಾರ, ವೇಳೆ-ಯಾಳಿ,

ಶ ಕಾರಕ್ಕೆ ಸಕಾರ: ಶಿಶು-ಶಿಸ, ಮಹಾಶೇಷ-ಮಾಶೇಶ, ಮಾಸೇಸ್‌,

ಸಂಸ್ಕೃತ ಶಬ್ದಗಳ ತದ್ಭವ ರೂಪಗಳು ವಿಶಿಷ್ಟವಾಗಿವೆ. ಅಭ್ಯಾಸ-ಅಬ್ಬೇಸ, ಯೋಗಕ್ಷೇಮ-ವಾಗಕ್ಷೇಮ, (ವಾಗಕೇಮ ಎಂದೂ ಇದೆ.) ಬೃಹಸ್ಪತಿವಾರ-ಬೆರಸ್ತಾರ, ಬ್ರಾಹ್ಮಣ-ಬೆರಾಮಣ, ತಾಮ್ರ-ತಾಂಬರ, ಅರಣ್ಯ-ಅರಾಣ, ಅಂಶ-ಅಂಸ, ಪ್ರೀತಿ-ಪಿರತಿ, ಲಗ್ನ-ನಗ್ನ, ಮಾರ್ಗ-ಮಾರಿಗ, ಸ್ಮರಣೆ-ಸ್ಮೊರಣಿ; ಪ್ರವೇಶ ಎಂದರೆ ಒಳಸೇರುವುದು, ಹೆಣ್ಣಿನ ದೇಹದಲ್ಲಿ ಪ್ರವೇಶ ಎಂದರೆ ದೈಹಿಕ ಸಂಪರ್ಕ, (ಪರ್ವೇಸ ಎಂದೂ ಇದೆ.) ಕಾರ್ಪಾಸ-ಕಪ್ಪಡ ಎಂದು ತದ್ಬವವಾದುದು ಸೀರೆ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ತಾಪತ್ರಯ ಎನ್ನಲು ತಾಪತ್ರಿ,

ಹೆಂಗಸರಿಗೆ ನಪುಂಸಕಲಿಂಗ ಉಪಯೋಗಿಸುವುದು ಸಾಮಾನ್ಯ ರೂಢಿ. ಹೋದಳು ಎನ್ನಲು ಹೋಯ್ತು. ಬಿಟ್ಟಳ ಬಿಟ್ತು. (ಬುಟ್ತೂ, ಎಂದೂ ಇದೆ) ಅವಳು ಎನ್ನಲು ಅದು, ತಂಗಿಯನ್ನು ಕೊಂದಳು ಎನ್ನಲು ತಂಗಿ ಕೊಂತ್ತು.

ಕೆಲವು ವಿಶಿಷ್ಟ ಪ್ರಯೋಗಗಳು: ಬಹಳ ದೂರ ಹೋಗಿ ಎಲ್ಲಲು ಹೋಗ್‌ಹೋಗ್‌ಹೋಗಿ, ಮನುಷ್ಯರು ಎನ್ನಲು ನರಮನ್ಸರು, ಘೋರ ಕತ್ತಲೆ ಗೋರಂಗಟ್ಲೆ, ನ್ಯಾಯ ಎಂದರೆ ಜಗಳ, ನೀರಡಿಕೆ ಎನ್ನಲು ದಕ್ಷಿಣ ಕನ್ನಡದಲ್ಲಿ ಬಳಸುವ ‘ಬಾಯರು’ ಎಂಬ ಶಬ್ದ (ಬಾಯಾರು) ಅಪೂರ್ವವಾಗಿ ಇಲ್ಲಿ ಬಳಕೆಯಾಗಿದೆ.

ಇಲ್ಲಿನ ನಿರೂಪಕರು ವೃತ್ತಿ ನಿರೂಪಕರಲ್ಲ, ಹವ್ಯಾಸಿಗರು. ನಿರೂಪಣೆಯಲ್ಲಿ ಪುನರುಕ್ತಿ ಬರಬಹುದು. ವಾಕ್ಯ ರಚನೆಯಲ್ಲಿ ಏರುಪೇರಾಗಿರುವುದೂ ಸಾಧ್ಯವಿರುತ್ತದೆ. ಆದರೂ ಉತ್ತಮವಾಗಿ ಕಥೆ ಹೇಳಿದ್ದಾರೆ.