ಆದಿಮ ಮಾನವನು ನಿಸರ್ಗದೊಂದಿಗೆ ಸಂಘರ್ಷಕ್ಕೆ ಬಿದ್ದಾಗ ಮಾಂತ್ರಿಕಾಚರಣೆಗಳ ಉಗಮವಾಯಿತು. ತಾನು ಜಯಿಸಬೇಕಾಗಿದೆ ಎಂದುಕೊಂಡು ನಿಸರ್ಗದ ಶಕ್ತಿಗಳನ್ನು ಮಣಿಸಲು ಹಾಗೂ ಒಲಿಸಿಕೊಳ್ಳಲು ಮಾನವನ ಆರಂಭಿಕ ತರ್ಕ ಏನೇನು ಹಾದಿಗಳನ್ನು ಸೂಚಿಸಿತೋ ಅವೆಲ್ಲವೂ ಆಚಜರಣೆಗಾಗಿ ರೂಪಗೊಂಡವು. ಇಂತಹ ಆಚರಣೆ ಮತ್ತು ನಂಬಿಕೆಯ ಮೂಲಕವೇ ದೈವಗಳ ಬಗೆಗಿನ ಪರಿಕಲ್ಪನೆ ಬೆಳೆದು ಬಂದಿತು. ದೈವಗಳ ಬಗೆಗಿನ ಪರಿಕಲ್ಪನೆ, ಮನುಷ್ಯನ ಮನಸ್ಸಿನಲ್ಲಿ ಯಾವಾಗ ಪ್ರಾರಂಭವಾಯಿತೆಂಬುದು ಮುಖ್ಯವಾದ ಸಂಗತಿ. ಈ ದೈವಗಳ ಹುಟ್ಟಿಗೆ ಮನುಷ್ಯನಲ್ಲಿದ್ದ ಭಯವೇ ಮೂಲ ಕಾರಣವಾಗಿದೆ. ಆದಿಮಾನವನಿಗೆ ಪ್ರಕೃತಿಯ ಬದಲಾವಣೆಗಳು ಆಶ್ಯರ್ಯವನ್ನುಂಟು ಮಾಡಿರಬೇಕು. ಗುಡುಗು, ಮಿಂಚು, ಹರಿಯುವ ನೀರು, ಸುಡುವ ಬೆಂಕಿ ಇವೇ ಮೊದಲಾದ ಪ್ರಕೃತಿಯ ಚಮತ್ಕಾರಗಳು ಆದಿಮಾನವನಿಗೆ ಭಯವನ್ನುಂಟುಮಾಡಿರಬೇಕು – ಇಂತಹ ಪ್ರಕೃತಿಯ ವಿಕೋಪಗಳಿಂದ ಪಾರಾಗಲು ಆತ ಪ್ರಕೃತಿಯಲ್ಲಿಯ ಮರ-ಗಿಡಗಳನ್ನು, ನೆಲ-ಜಲವನ್ನು, ಸೂರ್ಯ-ಚಂದ್ರರನ್ನು ದೈವವೆಂದು ಪೂಜಿಸಿರಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಮಾನವನ ಹುಟ್ಟಿನಿಂದಲೇ ದೈವಗಳ ಬಗೆಗಿನ ಪರಿಕಲ್ಪನೆ ಪ್ರಾರಂಭವಾಗಿದೆಯೆನ್ನಬಹುದು.

ಪ್ರಕೃತಿಯಲ್ಲಿ ಪಡೆಯುವ ಎಲ್ಲ ಘಟನೆಗಳಿಗೆ ಯಾವುದೋ ಒಂದು ಶಕ್ತಿ ಕಾರಣವಿರಬೇಕೆಂದು ನಂಬಿದ್ದ ಮನುಷ್ಯ, ಆ ಶಕ್ತಿಯನ್ನೇ ದೈವವೆಂದು ತಿಳಿದು ಪೂಜಿಸತೊಡಗಿದ. ಹೀಗೆ ವ್ಯಕ್ತಿಯಿಂದ – ವ್ಯಕ್ತಿಗೆ, ಸಮುದಾಯದಿಂದ – ಸಮುದಾಯಕ್ಕೆ ದೈವಗಳ ಗ್ರಹಿಕೆಯಲ್ಲಿ ಭಿನ್ನತೆ ಕಾಣಿಸಿದ್ದರಿಂದ ಭಿನ್ನ-ಭಿನ್ನ ಹೆಸರಿನ ದೈವಗಳು ಹುಟ್ಟಲು ಕಾರಣವಾಗಿದೆ. ದ್ರಾವಿಡ ಸಂಸ್ಕೃತಿಯಲ್ಲಿ ಸ್ತ್ರೀ ದೈವಗಳೇ ಪ್ರಧಾನವಾದರೆ, ಆರ್ಯ ಸಂಸ್ಕೃತಿಯಲ್ಲಿ ಪುರುಷ ದೈವಗಳೇ ಪ್ರಧಾನವಾಗಿವೆ. ಭಾರತಕ್ಕೆ ಬಂದು ನೆಲೆಸಿರುವ ಇತರ ಸಮುದಾಯಗಳಲ್ಲಿ ಕೂಡ ಪುರುಷ ದೈವಗಳೇ ಪ್ರಧಾನವಾಗಿವೆ. ಮನುಷ್ಯನ ಭಕ್ತಿಗಳಿಂದ ಕೆಲವು ದೈವಗಳು ಹುಟ್ಟಿದರೆ, ಆತನ ಮೂಢನಂಬಿಕೆಗೆ ಹಾಗೂ ಅಂಧ ಸಂಪ್ರದಾಯಗಳಿಂದ ಕೆಲವು ದೈವಗಳು ಹುಟ್ಟಿಕೊಂಡಿವೆ. ಅರ್ನೆಸ್ಟ್‌ ಹೆಕಲ್‌ ಅವರು ಹೇಳಿರುವಂತೆ “ಧಾರ್ಮಿಕ ನಂಬಿಕೆ ಯಾವಾಗಲೂ ಅದ್ಭುತಗಳೊಂದಿಗೆ ಹೊಂದಿಕೆಯುಳ್ಳದ್ದಾಗಿರುತ್ತದೆ. ಆದ್ದರಿಂದ ದೇವರ ಕಲ್ಪನೆ ಪ್ರಕೃತಿ ವಿರೋಧಿ ಹಾಗೂ ಅಲೌಕಿಕದೊಂದಿಗೆ ಹೊಂದಿಕೆಯುಳ್ಳದ್ದಾಗಿರುತ್ತದೆ. ಧರ್ಮ ಮತ್ತು ಮೂಢನಂಬಿಕೆ ಪ್ರಕೃತಿ ನಿಯಮಗಳನ್ನು ವಿರೋಧಿಸಿ ಬದುಕಲಿಚ್ಛಿಸುತ್ತವೆಯಾದ್ದರಿಂದ ಅವು ವಿಚಾರಹೀನವಾಗಿವೆ.” (ಸಬರದ : ೧೯೯೪–೬). ಹೀಗೆ ದೈವಗಳ ಪರಿಕಲ್ಪನೆಗೆ ಸಂಬಂಧಿಸಿದಂತೆ ಬೇರೆ ಬೇರೆ ಅಭಿಪ್ರಾಯಗಳನ್ನು ಕಾಣಬಹುದು.

ಸ್ಥೂಲವಾಗಿ ನೋಡಿದರೆ ಜನಪದ ದೈವಗಳು ದ್ರಾವಿಡ ಸಂಸ್ಕೃತಿಯ ಪ್ರತೀಕವಾಗಿದ್ದರೆ; ಶಿಷ್ಟದೈವಗಳು ಆರ್ಯ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ದ್ರಾವಿಡ ಸಂಸ್ಕೃತಿಯ ಮೇಲೆ ಆರ್ಯ ಸಂಸ್ಕೃತಿಯ ಪ್ರಭಾವ, ಆರ್ಯ ಸಂಸ್ಕೃತಿಯ ಮೇಲೆ ದ್ರಾವಿಡ ಸಂಸ್ಕೃತಿಯ ಪ್ರಭಾವ ಆಗುತ್ತಲೇ ಬಂದಿದೆ. ಹಾಗೆಯೇ ಜನಪದ ದೈವಗಳ ಪ್ರಭಾವ ಶಿಷ್ಟ ದೈವಗಳ ಮೇಲೆ ಮತ್ತು ಶಿಷ್ಟದೈವಗಳ ಪ್ರಭಾವ ಜನಪದ ದೈವಗಳ ಮೇಲೆ ಉಂಟಾಗಿದೆ. “ಇವುಗಳು ಸಂಸ್ಕೃತಿ-ಸಂಸ್ಕೃತಿಗಳ ನಡುವೆ ನಡೆಯುವ ಸಂಘರ್ಷ ಅಥವಾ ಸಮನ್ವಯದ ಮೂಲಕ ಏರ್ಪಡುವಂತಹದ್ದು. ಹೀಗೆ ಮನುಷ್ಯ ಮನುಷ್ಯರ ನಡುವೆಯೇ ಸಂಘರ್ಷ ಏರ್ಪಟ್ಟಾಗ, ಒಂದು ಸಮುದಾಯದೊಳಗೇ ಬೇರೆ ಬೇರೆ ಪಂಗಡಗಳು ಮೇಲ್‌ಗೈ ಸಾಧಿಸಲು ನಡೆಸುವ ಪ್ರಯತ್ನದೊಂದಿಗೆ ಧರ್ಮ ಉಗಮವಾಗಯಿತು” ಎನ್ನುತ್ತಾರೆ. ದಿ. ದೇವಿಪ್ರಸಾದ್‌ ಚಟ್ಟೋಪಾಧ್ಯಾಯ. ನಾವು ಮಾಂತ್ರಿಕಾಚರಣೆಯನ್ನು ಪರಿಶೀಲಿಸಲಿ, ಧಾರ್ಮಿಕಾಚರಣೆಗಳನ್ನು ವಿಶ್ಲೇಷಿಸಲಿ, ಈ ಸಂಘರ್ಷದ ಅಂಶವನ್ನು ಮರೆತು ಬಿಡುವಂತಿಲ್ಲ. ಪ್ರಸ್ತುತ ಅವು ನಮ್ಮ ಕಣ್ಣೆದುರಿಗಿರುವಾಗ ಬೇಕಾದಷ್ಟು ಸಂಕೀರ್ಣಗೊಂಡಿರಬಹುದು. ರೂಪಾಂತರ ಹೊಂದಿರಬಹುದು. ಆದರೆ ಅವುಗಳ ಉಗಮದ ಅಧ್ಯಯನದಲ್ಲಿ ಈ ಮೂಲ ಪ್ರೇರಣೆಗಳ ಎಳೆಗಳನ್ನಂತೂ ಹಿಡಿಯಬಹುದು. ಅವು ಇನ್ನೂ ಉಳಿದುಕೊಂಡು ಬಂದಿರುವ ಸಂದರ್ಭದಲ್ಲಿ ಹಳೆಯ ಜೀವನ ಪರಿಸ್ಥಿತಿಗಳ ಪ್ರಜ್ಞೆಯ ವಿಕಾಸದ ಪಳೆಯುಳಿಕೆಗಳನ್ನು ಅರ್ಥಮಾಡಿಕೊಳ್ಳಬಹುದು.

ಭಾರತೀಯ ಸಮಾಜವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕೆಂದು ಬಯಸುವವರಿಗೆ ದೊರೆಯುವ ಒಂದು ದೊಡ್ಡ ಆಕರ ಈ ಸಾಂಸ್ಕೃತಿಕಾಚರಣೆಗಳು. ಗ್ರಾಮೀಣ ಜನರ ಆಚರಣೆ, ನಂಬಿಕೆಗಳನ್ನು ಕೇವಲ ಮೌಢ್ಯವೆಂದೋ, ಕಂದಾಚರವೆಂದೋ ನಿರ್ಲಕ್ಷಿಸುವ ಧೋರಣೆ ಬಹಳ ಕಾಲದವರೆಗೆ ಇತ್ತು. ಪ್ರತಿ ಸಾಂಸ್ಕೃತಿಕಾಚರಣೆ ರೂಪಗೊಳ್ಳಲು ಅದಕ್ಕೆ ತಳಹದಿಯಾಗಿ ಅದರ ಉಗಮದಲ್ಲಿ ಒಂದು ಭೌತಿಕಾವಶ್ಯಕತೆಯಿತ್ತು ಎಂಬ ನಿಲುವು ಹೆಚ್ಚು ಪ್ರಚಲಿತಗೊಂಡಂತೆಲ್ಲಾ ಅದರ ಬಗೆಗಿನ ಅಧ್ಯಯನಕ್ಕೆ ತುಂಬಾ ಮಹತ್ವವೊದಗಿದೆ. ಇಂತಹ ಒಂದು ಸಮಗ್ರ ಗ್ರಹಿಕೆಯೊಂದಿಗೆ ಈ ಎಲ್ಲಾ ಅಂಶಗಳನ್ನು ಪರಿಶೀಲಿಸುವ ಕೆಲಸವಾಗಬೇಕಾಗಿದೆ.

ನಾವು ಇತಿಹಾಸದ ಉದಾಹರಣೆಯೊಂದನ್ನು ಗಮನಿಸುವ ಮೂಲಕ ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಈಗ ಇರುವ ಆಚರಣೆಗಳ ಹಿನ್ನೆಲೆಯನ್ನು ಪರಿಶೀಲಿಸೋಣ. “ಭಾರತೀಯ ವೇದಿಕೆಯಲ್ಲಿ ಗುಪ್ತ ಸಾಮ್ರಾಟರು ಕಾಣಿಸಿಕೊಂಳ್ಳುವ ಹೊತ್ತಿಗೆ ಸಂಸ್ಕೃತಿಯಲ್ಲಿ ಹೊಸದೊಂದು ಹಿನ್ನೆಲೆ ರೂಪಗೊಂಡಿತ್ತು. ಇದು ಕ್ರಿ. ಶ. ೩ ಮತ್ತು ೪ನೇ ಶತಮಾನದ ಅವಧಿಯಾಗಿತ್ತು. ಗುಪ್ತರ ಕಾಲದ ಹಿಂದೂ ಸಂಸ್ಕೃತಿ ಅಂದಿನ ಜನ ಸಮುದಾಯದ ಅಸ್ಪಷ್ಟ ಸಂಮಿಲಿತ ಪಿತ್ರಾರ್ಜಿತ ಸಂಪತ್ತೇ ಆಗಿತ್ತು. ಆದರೆ ಅದರಲ್ಲಿ ಎಂದೂ ಸಾಮರಸ್ಯ ಹಾಗೂ ಸಮಂಜಸ್ಯ ಏರ್ಪಟ್ಟಿರಲಿಲ್ಲ. ಇದನ್ನು ಸಾಧಿಸಿದ ಹಿರಿಮೆ ಗುಪ್ತರದಾಗಿತ್ತು. ಗುಪ್ತರು ಅಂತಹ ಸಾಮೂಹಿಕ ಹಾಗೂ ಪರಸ್ಪರ ವಿರೋಧಿ ರೀತಿ ನೀತಿಗಳ ರಾಶಿಗೆ ಸಂಘಟಿತ ರೂಪವನ್ನೊದಗಿಸಿದರು. ಅವರ ಪ್ರಯತ್ನದಿಂದಾಗಿಯೇ ಆದರ್ಶಗಳನ್ನು ಮತ್ತು ಸಾಮಾಜಿಕ ರೀತಿ ನೀತಿಗಳನ್ನು ಒಳಗೊಂಡ ಇಂದಿನ ಹಿಂದೂ ಸಂಸ್ಕೃತಿಯ ಹೊಸ ರೂಪ ಮೂಡಿಬಂತು. ಈ ಅವಧಿಯಲ್ಲಿಯೇ ಪುರಾಣಗಳನ್ನು ರಚಿಸಲಾಯಿತು ಹಾಗೂ ಹಿಂದೂ ಸಂಸ್ಕೃತಿಗೆ ಪೌರಾಣಿಕ ಹಿನ್ನೆಲೆ ದೊರೆತಂತಾಯಿತು. ಇದೊಂದು ಅಪೂರ್ವ ಸಮಷ್ಟಿಯ ಅಥವಾ ಧಾರ್ಮಿಕ ವಿಲೀನತೆಯ ಅವಧಿಯಾಗಿತ್ತು. ವೇದ ವರೋಧಿಯೂ, ಈಶ್ವರ ವಿರೋಧಿಯೂ ಆಗಿದ್ದ ಬುದ್ಧನನ್ನು ಕೂಡ ಅವತಾರದ ಪಂಕ್ತಿಯಲ್ಲಿ ಸೇರಿಸಿಕೊಳ್ಳಲಾಯಿತು. ದ್ವಂದ್ವಾತ್ಮಕವಾಗಿದ್ದ ಎಲ್ಲಾ ಪರಸ್ಪರ ವಿರೋಧಿ ವಿಚಾರಗಳು ಹಿತಮಿತವಾಗಿ ಬೆರೆತು, ಒಂದು ರೂಪದಲ್ಲಿ ಸಂಘಟಿತವಾಗಿಬಿಟ್ಟವು” (ಭಗವತ್‌ ಶರಣ ಉಪಧ್ಯಾಯ : ೧೯೮೬, ೧೧೭). ಈ ಹೇಳಿಕೆಗೆ ಆಧಾರವಾಗಿ ನಾವು “ಭಾರತೀಯ ಬುಡಕಟ್ಟು ಜೀವನ ನೇರವಾಗಿ ಸಾಮಾನ್ಯ ಸಮಾಜದೊಳಕ್ಕೆ ಪರಿವರ್ತಿಸಲ್ಪಟ್ಟಿದ್ದರಿಂದ ಇಂದಿನ ಜಾತಿ ವ್ಯವಸ್ಥೆ ಬೇರೆಲ್ಲೂ ಕಾಣದಷ್ಟು ವಿಶಿಷ್ಟವಾಗಿ ಇಲ್ಲಿ ಏರ್ಪಟ್ಟಿತ್ತು” ಎನ್ನುವುದನ್ನು ಸೇರಿಸಬಹುದು.

ಆರ್ಯ ಮತ್ತು ಆರ್ಯೇತರ ಸಂಸ್ಕೃತಿಗಳ ಒಡಂಬಡಿಕೆಯಾಗಿ ಇಂದು ಇವು ಆಚರಣೆಯಲ್ಲಿವೆ. ಇದನ್ನು ಸಮನ್ವಯವೆಂದೂ ಕೂಡ ನಾವು ಪರಿಗಣಿಸಬಹುದು. ಆರ್ಯೇತರರಿಗೆ ಮೀಸಲಾಗಿದ್ದ ಮಾತೃದೇವತೆಗಳು ಆರ್ಯರ ಪುರುಷ ದೇವತೆಗಳ ಹೆಂಡದಿರಾಗಿ ಪೂಜಾರ್ಹ ಸ್ಥಾನ ಪಡೆದದ್ದು ಕೂಡ ಇಂತಹ ಒಂದು ಲಕ್ಷಣ. ಇದರ ಅರ್ಥ ಎರಡು ವಿಭಿನ್ನ ಸಂಸ್ಕೃತಿಗಳು ಸಮ್ಮಿಳಿತವಾಗಿ ಹೊಸದೊಂದು ಸಂಸ್ಕೃತಿ ಆಚರಣೆಯಲ್ಲಿ ಇದೆ ಎಂದರ್ಥ, ಹೊಸ ಸಂಸ್ಕೃತಿ ಎಂದರೆ “ಹೊಸ ಸಾಮಾಜಿಕ ವ್ಯವಸ್ಥೆ ಎಂಬ ಅರ್ಥ”ವನ್ನೂ ಸಹ ಒಳಗೊಳ್ಳುತ್ತದೆ. ಹಾಗಾದರೆ ಆರಂಭದಲ್ಲಿ ಇದ್ದಂತ ಸಾಂಸ್ಕೃತಿಕ ವಿಭೇದಗಳು ಯಾವುವು? ಅವು ಸಮ್ಮಿಲನಗೊಳ್ಳಬೇಕಾದ ಅನಿವಾರ್ಯತೆ ಏನಿತ್ತು ಎಂಬುದನ್ನು ನಾವು ಪರಿಶೀಲಿಸಬೇಕು. “ವಾಸ್ತವವಾಗಿ ಧರ್ಮ ಬೆಳೆದು ಬಂದಿರುವುದೇ ಭಯದ ಮತ್ತು ಮೋಸದ ನೆರಳಿನಲ್ಲಿ. ಇಲ್ಲಿ ಒಂದು ಕಾಲ್ಪನಿಕ ಉದಾಹರಣೆಯನ್ನು ಕೊಡಬಹುದಾಗಿದೆ. ನಾಗರೀಕತೆಯ ಆರಂಭದ ದಿನಗಳಲ್ಲಿ ಒಬ್ಬ ವ್ಯಕ್ತಿ ಅಂಧಕಾರದಲ್ಲಿ ಓಡಾಡುತ್ತಿದ್ದಾನೆಂದು ಇಟ್ಟುಕೊಳ್ಳಿ ಅವನು ಇದ್ದಕ್ಕಿದ್ದಂತೆ ಒಂದು ಕಲ್ಲನ್ನು ಎಡವಿ ಬೀಳುತ್ತಾನೆ. ಮೂರ್ಚೆ ಹೋಗುತ್ತಾನೆ. ನಿಧಾನವಾಗಿ ಅವನಿಗೆ ತಿಳಿವು ಮೂಡುತ್ತದೆ. ಅವನು ಆಲೋಚಿಸತೊಡಗುತ್ತಾನೆ. ಇದೇನಿದು? ನನಗೆ ಏಕೆ ಪೆಟ್ಟನ್ನುಂಟುಮಾಡಿತು? ರಾತ್ರಿಯ ಕತ್ತಲು, ನಾಡಿನ ನಿಭೀಡತೆ, ಹಳ್ಳಿಯಲ್ಲಿ ಗುಂಪಿನ ನಡುವೆ ವಯೋವೃದ್ಧರಿಂದ ಕೇಳಿದ ಪಿತೃಗಳ ನೆನಪು – ಇವೆಲ್ಲಾ ಅವನ ಮೇಲೆ ಆಕ್ರಮಣ ನಡೆಸುತ್ತವೆ. ಪೆಟ್ಟಿಗಿಂತಲೂ ಹೆಚ್ಚಿನ ವೇದನೆ ಅವನಿಗಾಗುವುದು. ಆ ಭಯದ ಪರಿಣಾಮವಾಗಿ, ಭಯದಿಂದ ಊರಿಗೆ ಓಡುತ್ತಾನೆ. ಸಾವಿಗೆ ಮುಂಚೆ ತನ್ನ ಸಾವಿಗೆ ಕಲ್ಲಿನ ಆಕ್ರಮಣವೇ ಕಾರಣ ಎಂದು ತಿಳಿಸುತ್ತಾನೆ” (ಭಗವತ್‌ ಶರಣ ಉಪಾಧ್ಯಾಯ : ೧೯೮೬, ೧೫೫–೧೫೬). ಇಲ್ಲಿಂದ ಮುಂದೆ ಧರ್ಮದ ಆಚರಣೆಗಳು ನಡೆಯುತ್ತವೆ.

ಮಾರನೆಯ ದಿನ ಬೆಳಿಗ್ಗೆ ಆ ಸಮುದಾಯದ ಜನರೆಲ್ಲ ಅವನ ಶವವನ್ನು ನೋಡುತ್ತಾರೆ. ಕಣ್ಣಿಗೆ ಕಾಣದ ಆ ಶಕ್ತಿಗೆ ಎಲ್ಲರೂ ತಲೆ ಬಾಗುತ್ತಾರೆ. ಆ ಸಮುದಾಯದ ಛದ್ಮವೇಷಿ ಚಿಂತಕ ಎಚ್ಚೆತ್ತು ಕಾರ್ಯೋನ್ಮುಖವಾಗುತ್ತಾನೆ. ಅವನೆನ್ನುತ್ತಾನೆ : “ಈ ಶವವನ್ನು ಆ ‘ಶಕ್ತಿ’ಯ ಬಳಿಗೆ ಕೊಂಡೊಯ್ಯಿರಿ”. ಬಳಿಕ ಶವವನ್ನು ಕಲ್ಲಿನ ಹತ್ತಿರ ಕೊಂಡೊಯ್ಯುತ್ತಾರೆ. ಸತ್ತ ವ್ಯಕ್ತಿಯ ಹೆಸರನ್ನು ಹಿಡಿದು ಅವನು ಪ್ರಶ್ನಿಸುತ್ತಾನೆ. “ಅವನೆಲ್ಲಿದ್ದಾನೆ? ಅವನೆಲ್ಲಿಗೆ ಹೋಗಿದ್ದಾನೆ?” ಯಾರೂ ಉತ್ತರವನ್ನು ಕೊಡುವುದಿಲ್ಲ. ಭೂಮಿ ಮತ್ತು ಆಕಾಶಕ್ಕೆ, ಅಲ್ಲಿಯ ನದಿ ಮತ್ತು ಝರಿಗಳಿಗೆ, ಅಲ್ಲಿ ನೆರೆದಿರುವ ಪ್ರತಿಯೊಬ್ಬರಿಗೂ ಅವನು ಅದೇ ಪ್ರಶ್ನೆಯನ್ನು ಹಾಕುತ್ತಾನೆ. ಭೂಮ್ಯಾಕಾಶಗಳು ತೆಪ್ಪಗಿರುತ್ತವೆ. ನದಿ ಝರಿಗಳು ಮೌನವಾಗಿರುತ್ತವೆ, ಜನರೂ ಮೌನಿಗಳಾಗಿರುತ್ತಾರೆ. ಅವನೆನ್ನುತ್ತಾನೆ “ಅವನು ಎಲ್ಲಿಯೋ ಇದ್ದಾನೆ. ಆದರೆ ಎಲ್ಲಿದ್ದಾನೆ ಎಂಬುವುದು ನಿಮಗೆ ಗೊತ್ತಿಲ್ಲ, ನನಗೆ ಗೊತ್ತಿದೆ” ಮುಂದುವರಿದು ಅವನೆನ್ನುತ್ತಾನೆ, “ಅವನು ಎದುರಿಗಿರುವ ಶಕ್ತಿಗೆ ಭೋಜ್ಯನಾಗಿದ್ದಾನೆ, ಆ ಶಕ್ತಿ ಎಷ್ಟು ಕಠೋರವಾದುದು ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಬಾಣವನ್ನು ಪ್ರಯೋಗಿಸಿ ನೋಡಿ.” ಕಲ್ಲಿನ ಮೇಲೆ ಬಾಣಗಳನ್ನು ಪ್ರಯೋಗಿಸಿ ನೋಡುತ್ತಾರೆ. ಅವುಗಳ ಮೊನೆ ಮುರಿದು ಬೀಳುತ್ತದೆ. ಭರ್ಜಿಗಳನ್ನು ಎಸೆಯುತ್ತಾರೆ, ಅವುಗಳ ತುದಿ ಕೊಂಕುತ್ತದೆ. ಬಾಣ ಭರ್ಜಿಗಳು ಬಂದು ತಾಗಿದಾಗ ಉಂಟಾಗುವ ಧ್ವನಿಯನ್ನು ಕಲ್ಲಿನ ಅಟ್ಟಹಾಸವೆಂದು ಭಾವಿಸುತ್ತಾರೆ. ಆ ಛದ್ಮವೇಷಿ ಚಿಂತಕ ಹೇಳುತ್ತಾನೆ, “ಈ ಶಕ್ತಿ ಅನ್ನಾದಿ ದೇವತೆ, ಹೆಣವೇ ಅದಕ್ಕೆ ಅನ್ನ, ಅದೇ ಅದಕ್ಕೆ ಎಡೆ, ಹೆಣವನ್ನು ಅದರ ಮೇಲೆ ಇಡಿ, ಆಗಿಂದಾಗ್ಗೆ ಬದುಕಿರುವ ವ್ಯಕ್ತಿಯನ್ನು ಈ ಶಕ್ತಿಯ ತೃಪ್ತಿಗಾಗಿ ಬಲಿಕೊಡಲು ಏರ್ಪಾಟು ಮಾಡಿ ಇಲ್ಲವಾದರೆ ಅದೇ ಸ್ವತಃ ಜನರನ್ನು ಕೊಂದು ತಿಂದು ಹಾಕುತ್ತದೆ. ಯಾರನ್ನು ಯಾವಾಗ ಬಲಿಕೊಡಬೇಕೆಂಬುದನ್ನು ‘ನಾನು’ ತಿಳಿಸುತ್ತೇನೆ. ಈ ಕೊನೆಯ ಅಪ್ಪಣೆ ಆ ಛದ್ಮವೇಷಿ ಚಿಂತಕನಿಗೆ ಸಾಕು ಬೇಕೆನಿಸುವಷ್ಟು ಶಕ್ತಿಯನ್ನು ತಂದುಕೊಡುತ್ತದೆ. ಅವನು ಆ ತನ್ನ ಸಮುದಾಯದ ಜನರ ತನು ಮತ್ತು ಧನಗಳಿಗೆ ಒಡೆಯನೇ ಆಗಿ ಪರಿಣಮಿಸುತ್ತಾನೆ. ನದಿಯಲ್ಲಿ ಜೀವವಿಲ್ಲದೇ ಇದ್ದರೆ ಅದು ಕೆಳಕ್ಕೆ ಧುಮುಕಿ ಸತತವಾಗಿ ಸದ್ದು ಮಾಡುತ್ತ ಇರುವುದಾದರೂ ಹೇಗೆ ಸಾಧ್ಯ? ಈ ಚಿಂತಕನೇ ಮೊದಲ ಪೂಜಾರಿ; ಕಲ್ಲೇ ಮೊದಲ ದೇವರು (ಅಂತೆಯೇ ನದಿ, ಮರ, ಝರಿ ಮೊದಲಾದವು ಕೂಡಾ). ಶವವೇ ಮೊದಲ ಬಲಿ. ಪಿತೃ ಧರ್ಮದ ಭಾವ ಪರಂಪರೆ ಮೊದಲಿಡುವುದು ಹೀಗೆ, ಈ ಚಿಂತಕನೇ ಇಂಗ್ಲೇಂಡಿನಲ್ಲಿ ‘ಡ್ರೂಯಿಡ್‌’ ಆಗುತ್ತಾನೆ. ಸುಮೇರಿಯಾದಲ್ಲಿ ‘ಪತ್ತೇಸಿ’ ಯಾಗುತ್ತಾನೆ. ಆರ್ಯರಲ್ಲಿ ‘ಬ್ರಾಹ್ಮಣ’ ನಾಗುತ್ತಾನೆ (ಭಗವತ್‌ ಶರಣ ಉಪಾಧ್ಯಾಯ ೧೯೮೬, ೧೫೬–೧೫೭). ಆರಂಭ ಕಾಲದಲ್ಲಿ ಜಾಗರೂಕನಾಗಿರುವ ಚಿಂತಕ ಪರಂಪರೆಯೊಂದಕ್ಕೆ ನಾಂದಿಯನ್ನು ಹಾಡುತ್ತಾನೆ. ಅವನ ಉತ್ತರಾಧಿಕಾರಿಗಳು ದುರಾಶೆಯಿಂದ ಮತ್ತು ಭಯದಿಂದ ಆ ಪರಂಪರೆಯನ್ನು ಪೋಷಿಸಿಕೊಂಡು ಬೆಳೆಸಿಕೊಂಡು ಬರುತ್ತಾರೆ. ಭಾರತದಲ್ಲಿ ಈ ಪರಂಪರೆಯ ಉಗಮ ಮತ್ತು ವಿಕಾಸ ಐತಿಹಾಸಿಕವಾಗಿದೆ. ತುಂಬಾ ಗಟ್ಟಿಯಾಗಿರುವ ನೆಲದ ಮೇಲೆ ಅದಕ್ಕೆ ಬುನಾದಿಯನ್ನು ಹಾಕಲಾಗಿದೆ. ಆರ್ಯರು ಭಾರತಕ್ಕೆ ಬರುವುದಕ್ಕೂ ಬಹಳ ಹಿಂದೆಯೇ ದ್ರಾವಿಡರ ವೃಕ್ಷ ಪೂಜೆ ಮತ್ತು ನಾಗಪೂಜೆ ಸಂಪ್ರದಾಯಗಳಲ್ಲಿ ಪುರೋಹಿತಶಾಹಿಯ ಸ್ತಂಭಗಳನ್ನು ನೆಡಲಾಗಿತ್ತು. ಬಲಿ ಪದ್ಧತಿ ಮಾನವನನ್ನು ಪ್ರಬಲನನ್ನಾಗಿಯೂ ಮಾಡಿಬಿಟ್ಟಿತ್ತು. ಪುರೋಹಿತನನ್ನು ಪ್ರಬಲನನ್ನಾಗಿಸಿತ್ತು. ಬಲಿಪಶುವನ್ನು ದುರ್ಬಲನನ್ನಾಗಿಸಿತ್ತು. ಮೊಹೆಂಜದಾರೊ ಮತ್ತು ಹರಪ್ಪಗಳಲ್ಲಿನ ಸಿಮಧೂತೀರದ ನಾಗರೀಕತೆಯಲ್ಲಿ ಬಹಳ ಹಿಂದೆಯೇ ಈ ಪುರೋಹಿತಶಾಹಿ ವಿಕಾಸಗೊಂಡಿತ್ತು. ಬಹಳ ಹಿಂದೆಯೇ ಅನಾಗರೀಕತೆಯಲ್ಲಿ ಪೂಜಾರಿ ಜಾಗೃತನಾಗಿ ಬಿಟ್ಟಿದ್ದ – (ಭಗವತ್‌ ಶರಣ ಉಪಧ್ಯಾಯ : ೧೯೮೬, ೧೫೭–೧೫೮).

ಹೀಗೆ ಬುಡಕಟ್ಟು ಜೀವನದಲ್ಲಿ ಒಂದೆಡೆ ಅವರದೇ ಆದ ದೇವರುಗಳು, ರೀತಿ ನೀತಿಗಳು, ಆಚಾರ ಸಂಪ್ರದಾಯಗಳು ಬೆಳೆದು ಬರತೊಡಗಿದವು. ಸಾಮಾನ್ಯವಾಗಿ ಗತಿಸಿದ ಅವರ ಹಿರಿಯರು ದೇವರ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದುದುಂಟು.

ಈ ನಡುವೆ ‘ಏಷ್ಯಾ ಮೈನರ್’ ಕಡೆಯಿಂದಾಗಿ ಸಾಗಿ ಬಂದ ಆರ್ಯರ ಗುಂಪು ಸಿಂಧೂ ನಾಗರೀಕತೆಯನ್ನು ಧ್ವಂಸ ಮಾಡಿ ನಿಧಾನವಾಗಿ ಮಗಧದವರೆಗೆ ಚಲಿಸಿ ಬಂದು, ಮೊದಲ ಹಳ್ಳಿಗಳನ್ನು ಸ್ಥಾಪಿಸಿದರು. ಈ ಮಹಾ ಪ್ರಸ್ತಾನಕ್ಕೆ ತೆಗೆದುಕೊಂಡ ಅವಧಿ ೧೦,೦೦೦ ವರ್ಷಗಳು. ಈ ಅವಧಿಯ ಕಡೆಗಾಲದಲ್ಲಿ ಬುಡಕಟ್ಟು ಜೀವನದ ರೀತಿ ನೀತಿಗಳಿಗೆ ಹೊಸದಾಗಿ ಏರ್ಪಡತೊಡಗಿದ ಊಳಿಗಮಾನ್ಯ ಹಳ್ಳಿಯ ಪದ್ಧತಿಗಳಿಗೆ ಸಂಗ್ರಾಮ ಮೊದಲಿಟ್ಟಿತು. ಪದೇ ಪದೇ ದಂಡೆತ್ತಿ ಹೋಗಿ ಬುಡಕಟ್ಟುಗಳನ್ನು ನಾಶಮಾಡಿ ಜನರನ್ನು ಹಿಡಿದು ತಂದು ಗುಲಾಮರನ್ನಾಗಿ ದುಡಿಸುವುದು ಆರಂಭವಾಗಿಯತು. ಬುಡಕಟ್ಟು ಜನರು ಇದಕ್ಕೆ ನಿರಂತರ ಪ್ರತಿರೋಧ ಒಡ್ಡುತ್ತಾ ಬಂದರಾದರೂ ಹೊಸ ವ್ಯವಸಾಯ ಪದ್ಧತಿಗಳು ಬುಡಕಟ್ಟುಗಳಿಗಿಂತ ಹಳ್ಳಿಗಳ ನಿರ್ಮಾಣವನ್ನೇ ಹೆಚ್ಚು ಒತ್ತಾಯಿಸುವಂತಿದ್ದವು. ಸಂಘರ್ಷ ಸಾಗುತ್ತಲೇ ಇತ್ತು.

ಕಾಲನಿಗಿಂತ ದೊಡ್ಡ ಸಂಧಾನಕಾರ ಯಾರು? ಗುಲಾಮರಾಗಿ ಬದುಕುತ್ತಿದ್ದ ಬುಡಕಟ್ಟಿನವರು ಸಹ ಹಳ್ಳಿಯ ಸಾಮಾನ್ಯ ಸಾಮಾಜಿಕ ವ್ಯವಸ್ಥೆಯ ಒಂದಂಗವಾಗಿ ಬಲವಂತವಾಗಿ ಕೆಲವೊಮ್ಮೆ ಹೊಸ ವ್ಯವಸ್ಥೆ ಒದಗಿಸಿದ ಜೀವನ ಭದ್ರತೆಯ ಕಾರಣದಿಂದಾಗಿ ಬೆರೆಯತೊಡಗಿದರು. ಬುಡಕಟ್ಟು ದೇವರಿಗೂ, ಬುಡಕಟ್ಟು ಆಚಾರಗಳಿಗೂ ಪುರೋಹಿತಶಾಹಿಯ ವಿಧಿ ವಿಧಾನಗಳಲ್ಲಿ ಸ್ಥಾನ ಕೊಡಬೇಕಾಯಿತು. ಮೊದಲು ಬುಡಕಟ್ಟುಗಳ ದೇವರಾಗಿದ್ದ ಗಣಪತಿಯನ್ನು (ಗಣಾಧೀಶ) ವಿಘ್ನೇಶ್ವರನೆಂದೇ ಪುರೋಹಿತಶಾಹಿ ಪುರಾಣಗಳು ಚಿತ್ರಿಸಿದವು. ಗಣಪತಿಯನ್ನು ಕಾಲಕೆಳಗೆ ತುಳಿದು ನಿಂತ ರಾಕ್ಷಸನೊಬ್ಬನ ಶಿಲ್ಪಗಳು ಇಂದಿಗೂ ದೊರೆಯುತ್ತವೆ (ನೋಡಿ : ಡಿ. ಡಿ. ಕೊಸಾಂಬಿಯವರ ಮಿತ್‌ ಅಂಡ್‌ ರಿಯಲಿಟಿ). ಅನಂತರದ ಗಣಪತಿ ವಿದ್ಯಾಧಿ ದೇವತೆ ಆದನು. ವಿಘ್ನೇಶ್ವರ ನಂತರ ಆರ್ಯರ ಎಲ್ಲಾ ದೇವತೆಗಳಿಗಿಂತಲೂ ಮೊದಲೇ ಅಗ್ರಪೂಜೆ ಪಡೆಯುವಂತಾದದ್ದು ಹೇಗೆ? ಬುಡಕಟ್ಟು ವ್ಯವಸ್ಥೆ ಹಳ್ಳಿಯ ಊಳಿಗಮಾನ್ಯ ವ್ಯವಸ್ಥೆಯೊಳಕ್ಕೆ ಒಗ್ಗಿಕೊಳ್ಳಲಾರದೆ ಪ್ರತಿರೋಧ ತೋರಿಸುತ್ತಿದ್ದಾಗ ಅವರ ದೇವರಾದ ಗಣಪತಿ ವಿಘ್ನಸೂಚಕನಾಗಿದ್ದ. ನಂತರ ಬುಡಕಟ್ಟು ವ್ಯವಸ್ಥೆಗಳು ಕ್ರಮೇಣ ನಶಿಸಿ ಆ ಜನ ಜೀವನದ ತೊಂದರೆಗಳೆಲ್ಲಾ ಊಳಿಗಮಾನ್ಯ ವ್ಯವಸ್ಥೆಯ ಮಹಾ ಪ್ರವಾಹದೊಳಗೆ ಬೆರೆತು ಹೋದ ನಂತರ ಆ ವಿಘ್ನ ಸೂಚಕ ‘ವಿಘ್ನ ನಿವಾರಕ’ನಾದ. ಪುರಾಣಗಳು ಮರು ರಚಿಸಲ್ಪಟ್ಟವು. ಆರ್ಯ ದೇವತೆಯಾದ ಈಶ್ವರನ ಮಗನಾಗಿ ವಿಘ್ನೇಶ್ವರ ನೆಲೆ ನಿಲ್ಲಿಸಲ್ಪಟ್ಟ. ಹೀಗೆ ಎರಡು ಸಂಸ್ಕೃತಿಗಳು ಬೆರೆತವು. ವೈದಿಕ ಸಂಸ್ಕೃತಿ ಇತರ ಸಂಸ್ಕೃತಿಗಳನ್ನು ತನ್ನ ಬಕಾಸುರ ಒಡಲಿನೊಳಕ್ಕೆ ಸ್ವಾಹಾ ಮಾಡಿಕೊಳ್ಳುವ ಪ್ರವೃತ್ತಿ ವೇದ ವಿರೋಧಿ ಮತ್ತು ಈಶ್ವರ ವಿರೋಧಿ ಯಾದಂತಹ ಬುದ್ಧನಂತಹವನನ್ನು ಅವತಾರಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಮೂಲಕ ಸಾಂಸ್ಕೃತಿಕ ಮಿಲನದ ಪರಿಪೂರ್ಣತೆಯನ್ನು ತಲುಪಿತು. ಇದು ಭಾರತೀಯ ಸಂಸ್ಕೃತಿಯ ಒಂದು ಘಟ್ಟ. ಇದರ ವಿವರವಾದ ಚರ್ಚೆಯನ್ನು ದೇವಿ ಪ್ರಸಾದ ಚಟ್ಟೋಪಾಧ್ಯಾಯರ ‘ಗಣಪತಿ’ ಎಂಬ ಬರಹದಲ್ಲಿ ನಾವು ಕಾಣಬಹುದು.

ಪರಿಷಿ ಮತ್ತು ಮಾನ್ಯೇವು

ಊರು ಹೊಸೂರು, ಅಲ್ಲಿ ತಾಯಿ ಮುದ್ದಮ್ಮನಿದ್ದಳು. ಆಕೆಗೆ ಇಬ್ಬರು ಮಕ್ಕಳು. ಹುಲಿಗೆಮ್ಮ ಮತ್ತು ಹೊಸೂರಮ್ಮನೆಂದು. ಇವರಿಬ್ಬರು ಅಕ್ಕತಂಗಿಯರು. ಹುಲಿಗೆಮ್ಮನಿಗೆ ಕೊಟ್ಟದ್ದು ಮಂದಿ ಪಾಲಾಗುತ್ತಿತ್ತು. ಹೊಸೂರಮ್ಮನಿಗೆ ಕೊಟ್ಟದ್ದು ಹಾಗೆಯೇ ಇರುತ್ತಿತ್ತು. ಹೊಸೂರಮ್ಮ ಚಿಕ್ಕ ಹುಡುಗಿ ಇದ್ದಾಗಿನಿಂದ ಆಕೆಗೆ ಜನ ಬಳಕೆ ಇಲ್ಲ ತನ್ನದೇನೋ ತಾನೇನೋ.

ಹುಲಿಗೆಮ್ಮನಿಗೆ ತಾಯಿ ಹಾಗೂ ಯಾರಾದರೂ, ಏನಾದರೂ ಕೊಟ್ಟರೆ ಆಕೆ ಮಂದಿಗೆ ಕೊಟ್ಟು ಬರಿಕೈಯಲ್ಲಿ ಇರುತ್ತಿದ್ದಳು. ಹೊಸೂರಮ್ಮನಿಗೆ ಏನಾದರೂ ಕೊಟ್ಟರೆ ಅದನ್ನು ಆಕೆ ಯಾರಿಗೂ ಕೊಡುತ್ತಿರಲಿಲ್ಲ. ಒಂದು ಸಲ ಹೊಸ ಸೀರೆಗಳನ್ನು ಹುಲಿಗೆಮ್ಮ ಹಾಗೂ ಹೊಸೂರಮ್ಮನಿಗೆ ತಾಯಿ ಮುದ್ದಮ್ಮ ಉಡಿಸಿ ಕಳಿಸಿದಳು. ಹುಲಿಗೆಮ್ಮ ತಾನು ಉಟ್ಟ ಸೀರೆಯನ್ನು ಮಂದಿಗೆ ಕೊಟ್ಟಳು. ಹೊಸೂರಮ್ಮ ಆ ಸೇರೆಯನ್ನು ಯಾರಿಗೂ ಕೊಡಲಿಲ್ಲ. ಮುದ್ದಮ್ಮ ಕೇಳಿದಳು, ನಿನ್ನ ತಂಗಿಯ ಮೇಲೆ ಸೀರೆ ಇದೆ. ನಿನ್ನ ಮೇಲೆ ಸೀರೆ ಇಲ್ಲವೆಂದು ಕೇಳಿದಳು. ನೀನು ಮನೆಯಲ್ಲಿ ಇರುತಕ್ಕವಳಲ್ಲವೆಂದು ತಾಯಿ ಮುದ್ದಮ್ಮ ಹುಲಿಗೆಮ್ಮನಿಗೆ ಸಿಟ್ಟಿನಿಂದ ಹೇಳುತ್ತಾಳೆ. ಸೀರೆ ಮಂದಿಗೆ ಕೊಟ್ಟ ಮೇಲೆ ನೀನು ಮನೆಯಲ್ಲಿ ಇರುತಕ್ಕವಳಲ್ಲವೆಂದು ಮುದ್ದಮ್ಮ ಹೇಳುತ್ತಾಳೆ. ಮುದ್ದಮ್ಮ ಹುಲಿಗೆಮ್ಮನಿಗೆ ಮನೆಬಿಟ್ಟು ಹೋಗು ಎಂದು ಹೇಳುತ್ತಾಳೆ. ಹುಲಿಗೆಮ್ಮ ಹೊಸೂರಿನಿಂದ ಹುಲಿಗಿಗೆ ಹಾರುತ್ತಾಳೆ. (ಹೊಸೂರಿನಲ್ಲಿ ಇರುವ ಪಾದಗಟ್ಟಿಯಿಂದ ಹುಲಿಗೆ ಪೂಲ್‌ನ ಕೆಳಗೆ ಪಾಲಗಟ್ಟಿ ಇದೆ. ಅಲ್ಲಿಂದ ಆ ಕಡೆ ಹಾರಿದ್ದಾಳೆ. ಎರಡು ಕಡೆ ಪಾದಗಟ್ಟೆ ಇದೆ).

ಹುಲಿಗೆಮ್ಮನ ಜಾತ್ರೆ ಮೊದಲು ಹೊಸೂರಮ್ಮನ ಜಾತ್ರೆ ನಂತರ ನಡೆಯುತ್ತದೆ. ಹುಣ್ಣಿಮೆಗೆ ಹುಲಿಗೆಮ್ಮನಿಗೆ ಕಂಕಣ ಕಟ್ಟುತ್ತರೆ. ಅಮವಾಸ್ಯೆಗೆ ಹೊಸೂರಮ್ಮನಿಗೆ ಕಂಕಣ ಕಟ್ಟುತ್ತಾರೆ. ಹುಲಿಗೆಮ್ಮ ಜನರಿದ್ದಲ್ಲಿ ಇರುವಾಕೆ. ಏನು ಕೊಟ್ಟರೂ ಮಂದಿಗೆ ದಾನ ಮಾಡುವ ಬುದ್ಧಿ ಹುಲಿಗೆಮ್ಮನದು. ಹುಲಿಗೆಮ್ಮನಿಗೆ ಜನರೆಂದರೆ ತುಂಬಾ ಇಷ್ಟ. ಹುಲಿಗೆಮ್ಮ ನನಗೆ ಜನಬೇಕು ಎಂದು ಹಾರಿಬಂದಳು, ಹೊಸೂರಿನಿಂದ. ಹುಲಿಗೆಮ್ಮ ಹೇಳುತ್ತಾಳೆ ಜನ ನನಗೆ ಬೇಕು ಹೊಸೂರಮ್ಮ ನೀನು ಆಸ್ತಿವಂತೆ ನಿನಗೆ ಆಸ್ತಿ ಇರಲಿ ನನಗೆ ಜನವಿರಲಿ, ಪರಿಷೆ ಇರಲಿ, ನಾನು ದಾನ ಮಾಡುವವಳು ನನಗೆ ಜನಬೇಕು ಎಂದು ಹುಲಿಗೆಮ್ಮ ಹೊಸೂರಿನಿಂದ ಹುಲಿಗೆಗೆ ಬಂದಿದ್ದಾಳೆ ಎಂಬ ಕಥೆ ಇದೆ.

ಪರಿಷೆ ಮತ್ತು ಮಾನ್ಯೇವುಗೆ ಪದಕೋಶಗಳಲ್ಲಿ ಕೆಳಗಿನ ಅರ್ಥಗಳಿವೆ.

. ಕನ್ನಡ ಕ್ಲಿಷ್ಟಪದ ಕೋಶ, ಸಂ. ವೆಂಕಟಸುಬ್ಬಯ್ಯ
ಪರಿಶೆ(ಸ) (ಪರಿಸಾ) = ಜಾತ್ರೆ, ಉತ್ಸವ, ಗುಂಪು, ಸಮೂಹ

. ಕನ್ನಡ – ಕನ್ನಡ – ಇಂಗ್ಲಿಷ್‌ ನಿಘಂಟು
ಪರಿಷೆ = ಉತ್ಸವ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಕೂಡಿದ ಜನಸಂದಣಿ; ಪರಿಸೆ a holiday crowd; a fair

. ಕನ್ನಡ ಕನ್ನಡ ಶಬ್ದಕೋಶ
ಪರಿಷೆ, ಪರಿಶೆ – ಪರಿಷತ್ತು, ಜಾತ್ರೆ, ಮೇಳ

. ಕನ್ನಡ – ಇಂಗ್ಲೀಷ್‌ ನಿಘಂಟು
ಪರಿಶೆ = gathering or croud at a festival or fair
ಪರಿಷೆ = ಪರಿಶೆ

. ಕನ್ನಡ ನಿಘಂಟು – ೭ನೇ ಸಂಪುಟ
ಪರಿಷೆ = ಪರಿಶೆ, ಪರಸೆ, ಪರಸ, ಪರಿಷೆ, ಪರುಷೆ, ಪರಿಷೆ, ಪರುಸೆ, ಜಾತ್ರೆ, ಉತ್ಸವ ಮುಂತಾದ ಸಂದರ್ಭಗಳಲ್ಲಿ ಸೇರುವ ಜನಸಂದಣಿ ಜನರ ಗುಂಪು, ಒಂದು ಸ್ಥಳದ ಹೆಸರು.
ಪರಿಷತ್ತು, ಸಭೆ, ಸಮಿತಿ, ಅಧಿಕಾರವುಳ್ಳ ಸಂಸ್ಥೆಗಳು.
ಪರಿಸೆ : ಪರಶೆ, ಪರಷೆ, ಪರಸ, ಪರಸೆ, ಪರಿಸೆ, ಪರಿಷೆ, ಪರುಷ, ಪರುಸೆ(ನಾ) (ಉತ್ಸವ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಸೇರುವ)
* ಜನಸಂದಣಿ; ಜನರ ಗುಂಪು
* ಒಂದು ಸ್ಥಳದ ಹೆಸರು
* ಪರಿಷತ್ತು; ಸಭೆ; ಸಮಿತಿ; ಅಧಿಕಾರವುಳ್ಳ ಸಂಸ್ಥೆಗಳು, ಐನೂರಾಳರು ಇತ್ಯಾದಿ, ಪರಿಷೆ, ಅಧ್ಯಕ್ಷ, ಬಾಳಕೆಯವರು.
* ಪರುಸೆ : ಬರುತಿರ್ದ ಪರುಸೆಯಂ ಕರಡು ಸತ್ಕರಿಸಿ, ಸಕಲದೇಶದ ಪರುಸೆಯೆಲ್ಲವೈ ತಂದು ಸಿದ್ಧಂಗೆ ವಂದಿಸಿ
ಮಾನ್ಯ = * ಗೌರವಕ್ಕೆ ತಕ್ಕ : ಮನ್ನಣೆಗೆ ಯೋಗ್ಯವಾದ, ಮನ್ನಣೆ, ಗೌರವ
* ಗೌರವಯುಕ್ತವಾದುದು, ಮನ್ನಣೆಗೆ ಪಾತ್ರವಾದುದು
* ಗೌರವಯುಕ್ತನಾದವನು
* ಇನಾಮು; ಬಹುಮಾನ, ಉಡುಗೊರೆ
* ಒಪ್ಪಿಗೆಯಾದುದು; ಸಮ್ಮತಿ ಪಡೆದುದು
ಮಾನೆ = ಮೇಲ್ಪಂಕ್ತಿ; ನಕಲು; ಮಾದರಿ; ಇವಲ್ಲದೆ ‘ಮಾನೆ’
ಮಾನ್ಯೆ(ನಾ) = ಗೌರವವುಳ್ಳವಳು; ಮರ್ಯಾದಸ್ಥೆ
ಮಾನ್ಯವೊಲ = ದತ್ತಿಯಾಗಿ ಬಂದ ಜಮೀಣು
ಮಾನ್ಯವಂತ = ಗೌರವಸ್ತ; ಮಾನ್ಯವಾದವನು

ಈ ಎರಡೂ ದೈವಗಳಿಗೆ ಸಂಬಂಧಿಸಿದ ಆಚರಣೆ ಜಾತ್ರೆಗಳನ್ನು ಗಮನಿಸಿದಾಗ ವಾರ್ಷಿಕಾವರ್ತನದ ಆಚರಣೆಗಳಾಗಲಿ, ದಿನನಿತ್ಯದ ಆಚರಣೆಗಳಾಗಲಿ ಒಂದೇ ರೀತಿಯಲ್ಲಿರುವುದನ್ನು ಕಾಣಬಹುದು. ಜಾತ್ರೆಗಳು ಸಹ ಒಂದು ತರಹದಲ್ಲಿ ನಡೆಯುತ್ತವೆ. ಆಹಾರ ಪದ್ಧತಿಯಲ್ಲಿ ಭಿನ್ನತೆ ಇರುವುದನ್ನು ಕಾಣಬಹುದು. ಬಿಟ್ಟರೆ ಉಳಿದಂತೆ ಒಂದೇ ತೆರನಾಗಿರುವುದು. ಎರಡೂ ದೈವಗಳಿಗೆ ಇರುವ ಕಥೆಯು ಆ ದೈವಗಳ ಗುಣಸ್ವಭಾವವನ್ನು ತಿಳಿಸುವಂತಹವುಗಳಾಗಿದ್ದು, ಈಗಲೂ ಜಾತ್ರೆ ಆಚರಣೆ ಮುಂತಾದ ಸಂದರ್ಭಗಳಲ್ಲಿ ಸೇರುವ ಜನಸಂಖ್ಯೆಯು ಹುಲಿಗೆಮ್ಮನಿಗೆ ಜಾಸ್ತಿಯಾಗಿರುವುದನ್ನು ಕಾಣಬಹುದಾಗಿದೆ.

ಜೊತೆಗೆ ಹುಲಿಗೆಮ್ಮ ಹೊಸೂರಮ್ಮ ಅಕ್ಕತಂಗಿಯರಾಗಿ ಸಮಾನವಾದ ಆಚರಣೆಗಳನ್ನು ಹೊಂದಿದ್ದಾರೆ. ವ್ಯತ್ಯಾಸವಾಗಿ ಹೊಸೂರಮ್ಮ ಮಾನ್ಯೇವು ಎಂದು ಗದ್ದೆಗಳನ್ನು ಪಡೆದಿದ್ದಾಳೆ. ಹುಲಿಗೆಮ್ಮ ಜಾತ್ರೆ ನಡೆಸಲು ಜನರನ್ನು ಪಡೆದಿದ್ದಾಳೆ.

ಹೊಸೂರಮ್ಮ ದೇವಾಲಯದಲ್ಲಿ ಇರುವ ಪರಶುರಾಮಪಂಥ ಎಂದಿನಿಂದ ಪ್ರಾರಂಭವಾಯಿತೆಂದು ಹೇಳುವುದು ಕಷ್ಟ. ಕಾರಣ ಇಷ್ಟರ ತನಕ ದೊರಕಿದ ಯಾವ ದಾಖಲೆಗಳಲ್ಲೂ ಪರಶುರಾಮನ ಉಲ್ಲೇಖವಿದ್ದಂತೆ ಕಂಡುಬರುವುದಿಲ್ಲ. ಇಲ್ಲಿರುವ ಪರಶುರಾಮನ ಪಂಚಲೋಹ ಮೂರ್ತಿಯು ಕ್ರಿ. ಶ. ೧೬–೧೭ನೇ ಶತಮಾನಕ್ಕಿಂತ ಪ್ರಾಚೀನವಾದುದಲ್ಲ. ಪ್ರಾಯಶಃ ಇಲ್ಲಿಯ ಸ್ಥಳ ಪುರಾಣ ಪ್ರಚಾರಕ್ಕೆ ಬಂದಾಗ ಈ ಪರಶುರಾಮನ ಕಥೆ ಅಸ್ತಿತ್ವಕ್ಕೆ ಬಂತೆನ್ನಬಹುದು.

ಸಪ್ತ ಋಷಿಮಣಿಗಳಲ್ಲಿ ಓರ್ವನಾದ ಜಮದಗ್ನಿಯು ಬ್ರಹ್ಮಚರ್ಯಾನುಷ್ಠಾನವನ್ನು ಬಹುಕಾಲ ಮಾಡಿ ಭೂಭಾರವನ್ನು ಇಳಿಸುವುದಕ್ಕೋಸ್ಕರ ಸಾಕ್ಷಾತ್‌ ನಾರಾಯಣನನ್ನು ಪುತ್ರ ಮುಖೇನ ಪಡೆಯಲು ದೇವತೆಗಳಿಂದ ಪ್ರಾರ್ಥಿತನಾಗಿ ರೇಣುಕಾದೇವಿಯನ್ನು ವಿವಾಹ ಮಾಡಿಕೊಂಡನು. ರೇಣುಕೆಯು ಅಯೋನಿಜಳು, ಜಮದಗ್ನಿಯು ಈಕೆಯನ್ನು ವಿವಾಹವಾಗಿ ಬಹುಕಾಲ ಸಂಸಾರ ಮಾಡಿಕೊಂಡು ತಪೋನಿರತನಾಗಿದ್ದನು. ರೇಣುಕೆಯಲ್ಲಿ ಜಮದಗ್ನಿಗೆ ಜನಿಸಿದ ಐವರು ಪುತ್ರರಲ್ಲಿ ಪರುಶುರಾಮ ಕಡೆಯವನು. ಈ ಪರುಶುರಾಮನೇ ಶ್ರೀಮನ್ನಾರಾಯಣನ ಅವತಾರವೆಂದು ತಿಳಿಸಲಾಗಿದೆ.

ಈ ಐವರು ಸುಪುತ್ರರಿಂದಲೂ, ರೇಣುಕಾ ದೇವಿಯಿಂದಲೂ ಕೂಡಿಕೊಂಡು ಹೊಸೂರು, ಹುಲಿಗೆ ಪ್ರಾಂತ್ಯವನ್ನು ಆಶ್ರಯವನ್ನಾಗಿ ಮಾಡಿಕೊಂಡು, ಮಧ್ಯ ಪ್ರವಹಿಸುವ ತುಂಗಭದ್ರಾ ನದಿಯ ದಡದಲ್ಲಿ ಜಮದಗ್ನಿಯು ತಪಸ್ಸನ್ನಾಚರಿಸುತ್ತಿದ್ದನು.

ಒಂದು ಸಂದರ್ಭದಲ್ಲಿ ಎಲ್ಲಾ ಕುಮಾರರೂ ಫಲಹಾರ ತರಲು ಅಡವಿಗೆ ಹೋಗಿರಲು, ಜಮದಗ್ನಿಯು ದೇವರ ಪೂಜೆಯಲ್ಲಿ ನಿರತನಾಗಿದ್ದಾಗ ರೇಣುಕೆಯು ಸ್ನಾನಕ್ಕೆಂದು ತೆರಳಿದಳು. ಸ್ನಾನಾನಂತರ ಹಿಂತಿರುಗಿ ಬರುತ್ತಿದ್ದಾಗ ಚಿತ್ರರಥನೆಂಬ ಗಂಧರ್ವನು ತನ್ನ ವನಿತೆಯರೊಂದಿಗೆ ಜಲಕ್ರೀಡೆಯಲ್ಲಿ ನಿರತನಾಗಿದ್ದುದು ಗೋಚರಿಸಿತು. ವಿಚಿತ್ರವಾದ ಕ್ರೀಡಾ ದರ್ಶನದಿಂದ ರೇಣುಕಾದೇವಿಗೆ ಮನೋವಿಕಾರವಾಯಿತು. ತಡವಾಗಿ ಆಶ್ರಮಕ್ಕೆ ಬಂದ ರೇಣುಕೆಯನ್ನು ಸಿಟ್ಟಿನಿಂದ ನೋಡಲು ಆಕೆಯ ಮನಸ್ಸು ಮಲಿನವಾದುದು ಜಮದಗ್ನಿಯ ಜ್ಞಾನ ದೃಷ್ಟಿಗೆ ತೋರಿತು. ಋಷಿಯು ಮತ್ತಷ್ಟೂ ಕುಪಿತನಾಗಿ ಅನುಕ್ರಮವಾಗಿ ತನ್ನ ಪುತ್ರರನ್ನು ಕರೆದು ತಾಯಿಯ ಶಿರಸ್ಸನ್ನು ಛೇಧಿಸುವಂತೆ ಆಜ್ಞಾಪಿಸಿದನು. ಧರ್ಮ ಸಂಕಟದಲ್ಲಿ ಬಿದ್ದ ಮೊದಲಿನ ನಾಲ್ಕು ಮಂದಿ ಪುತ್ರರು (ಯರ್ಮಶ್ವಾಸ, ಸುಕೇಣ, ವಸು ಮತ್ತು ವಿಶ್ವಾವಸು) ತಾಯಿಯ ಶಿರಚ್ಛೇದನವನ್ನು ಮಾಡುವ ಪಾಪಕೃತ್ಯಕ್ಕೆ ಅಂಜಿ, ಏನೊಂದು ಪ್ರತ್ಯುತ್ತರವನ್ನು ಕೊಡದೆ ನಿಂತರು. ಜಮದಗ್ನಿಯು ಇವರ ಉದ್ಧಟತನಕ್ಕೆ ಇವರನ್ನು ಶಪಿಸಿ, ಪರಶುರಾಮನನ್ನು ಉದ್ದೇಶಿಸಿ ತನ್ನ ಆಜ್ಞೆಯನ್ನು ಪರಿಪಾಲಿಸಬೇಕೆಂದು ಹೇಳಿದನು. ತಂದೆಯ ಆಜ್ಞೆಯನ್ನು ಪರಿಪಾಲಿಸುವುದು ತನ್ನ ಧರ್ಮವೆಂಬುದನ್ನು ಮನಗಂಡ ಪರಶುರಾಮನು ತಕ್ಷಣ ಕಠಾರದಿಂದ ತಾಯಿಯ ರುಂಡವನ್ನು ಕತ್ತರಿಸಿ ಹಾಕಿದನು. ಸುಪ್ರಸನ್ನನಾದ ಜಮದಗ್ನಿಯು ಮಗನ ವಿಧೇಯತೆಗೆ ಮನಸೋತು ಬೇಕಾದ ವರವನ್ನು ಬೇಡಬೇಕೆಂದನು. ಈ ಮಾತಿಗೆ ಹರುಷಗೊಂಡು ಪರಶುರಾಮನು ತನ್ನ ತಾಯಿಯನ್ನು ಪುನಃ ಬದುಕಿಸಬೇಕೆಂದು ತಂದೆಯನ್ನು ಪ್ರಾರ್ಥಿಸಿಕೊಂಡನು. ಮಾತ್ರವಲ್ಲದೆ ಮಾತೃಹತ್ಯಾದೋಷ ತಟ್ಟಬಾರದೆಂದೂ, ತನ್ನ ಅಣ್ಣಂದಿರೆಲ್ಲಾ ಮೊದಲಿನಂತೇ ಸಚೇತನರಾಗಬೇಕೆಂದೂ, ಎಲ್ಲಾ ವಿಷಯಗಳಲ್ಲೂ ಅನುಗ್ರಹಿಸಬೇಕೆಂದೂ ಬೇಡಿಕೊಂಡನು. ಮಹಾತಪಸ್ವಿಯಾದ ಜಮದಗ್ನಿಯು ಎಲ್ಲ ವರಗಳನ್ನೂ ಪರಶುರಾಮನಿಗೆ ದಯಪಾಲಿಸಿದನು. ರೇಣುಕಾದೇವಿಯು ನಿದ್ರೆಯಿಂದ ಎದ್ದಂತೆ ಸಜೀವಿತಳಾಗಿ ನಿಂತಳು. ಅಗ್ರಜರೆಲ್ಲರೂ ಉದೃತರಾದರು.

ಪರಶುರಾಮನು ರೇಣುಕೆಯನ್ನು ಸಂಹರಿಸಿದುದು ಹುಲಿಗೆ ಪ್ರದೇಶದಲ್ಲಿ, ಅಲ್ಲಿಯೇ ಪಾದದಿಂದ ಕಂಠ ಪರ್ಯಂತ ಇದ್ದ ದೇಹವು ಬಿದ್ದು ಹೋಗಿ, ಶಿರಸ್ಸು ಪ್ರಹಾರ ವೇಗದಿಂದ ‘ಹೊಸೂರು’ ಪ್ರದೇಶದಲ್ಲಿ ಪತಿತವಾಯಿತು. ಈ ಎರಡೂ ಯೋಜಿತವಾಗಿ ರೇಣುಕಾದೇವಿಯು ಬದುಕಿದ ಮೇಲೆ, ಪರಶುರಾಮನು ತನ್ನ ಕರಕಮಲದಿಂದಲೇ ಒಂದು ಗೋಳಾಕಾರವಾದ ಶಿಲೆಯನ್ನು ತನ್ನ ತಾಯಿಯ ದಿಂಬವು ಬಿದ್ದಲ್ಲಿಯೂ, ಮತ್ತೊಂದನ್ನು ರುಂಡ ಬಿದ್ದಲ್ಲಿಯೂ ಇರಿಸಿ ತನ್ನ ಪರಶುವಿನಿಂದ ಭಿನ್ನವಾಗಿ ದುರ್ಗಾ ರೂಪವನ್ನು ತಾಳಿದ ತನ್ನ ತಾಯಿಯ ಅಂಶದಿಂದಲೂ, ಸಾಕ್ಷಾತ್‌ ಲಕ್ಷ್ಮೀದೇವಿಯ ಆವೇಶದಿಂದಲೂ ಯುಕ್ತರಾಗುವಂತೆ ಮಾಡಿದನು. ಭಗವಂತನ ಇಚ್ಛೆಯಿಂದ ಎರಡು ಕಡೆಗಳಲ್ಲಿಯೂ ದುರ್ಗಾ ರೂಪದಿಂದ ದೇವಿಯು ಪ್ರತ್ಯಕ್ಷಳಾದಳು.

“ನೀನು ಕಲಿಯುಗ ಇರುವ ಪರ್ಯಂತರ ಇಲ್ಲಿಯೇ ಇದ್ದು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪರಿಪಾಲಿಸುತ್ತಾ, ವಾಸವಾಗಿದ್ದು ಈ ಭಾರ್ಗವ ಕ್ಷೇತ್ರಕ್ಕೆ ಸ್ಮಾರಕಗಳಾಗಿರು” ಎಂದು ವರಗಳನ್ನಿತ್ತು ಪರಶುರಾಮನು ಮಹೇಂದ್ರ ಪರ್ವತವನ್ನು ಸೇರಲು ಹೊರಟು ಹೋದನು (ಪಿ. ಗುರುರಾಜಭಟ್‌ ೧೯೭೬, ೧, ೨೨).

ಜನಪದರ ದೇವತೆಯಾದ ಹೊಸೂರಮ್ಮನು, ಈಗ ವೈದಿಕ ಪ್ರಭಾವದಿಂದಾಗಿ ಸ್ಥಳ ಪುರಾಣವನ್ನು ಹೊಂದಿದ್ದಾಳೆ. ಸ್ಥಳಪುರಾಣವನ್ನು ವಿಶ್ಲೇಷಣೆಗೊಳಪಡಿಸಿದಾಗ ಮಾತೃ ಪ್ರಧಾನ ಮತ್ತು ಪಿತೃ ಪ್ರಧಾನ, ಸಂಸ್ಕೃತಿಗಳು ಸಮ್ಮಿಳಿತವಾಗಿ ಹೊಸತೊಂದು ಸಂಸ್ಕೃತಿ ಆಚರಣೆಯಲ್ಲಿ ತಂದಿರುವುದು ಸ್ಪಷ್ಟವಾಗಿದೆ. ಹೊಸ ಸಂಸ್ಕೃತಿ ಎಂದರೆ “ಹೊಸ ಸಾಮಾಜಿಕ ವ್ಯವಸ್ಥೆ ಎಂಬ ಅರ್ಥ”ವನ್ನೂ ಸಹ ಒಳಗೊಳ್ಳುತ್ತದೆ. ಆರಂಭದಲ್ಲಿ ಬೇರೆ ಬೇರೆಯಾಗಿದ್ದ ಸಂಸ್ಕೃತಿಗಳು ಹೆಣ್ಣು ಗಂಡುಗಳ ಕೊಡುಕೊಳ್ಳುವಿಕೆಯ ಮುಖಾಂತರ ಒಂದಾಗಿ ಜೀವಿಸುವುದು. ಪುರುಷ ಪ್ರಧಾನ ವ್ಯವಸ್ಥೆಯ ಕಟ್ಟಳೆಗಳಿಗೆ ಸ್ತ್ರೀ ಪ್ರಧಾನ ವ್ಯವಸ್ಥೆಯವರು ಹೊಂದಿಕೊಳ್ಳದೆ ಮೂಲ ವ್ಯವಸ್ಥೆಯ ಗುಣಗಳನ್ನು ಪ್ರದಶಿಸುವುದು ಅದು ಸಂಘರ್ಷಕ್ಕೆ ಕಾರಣವಾಗುವುದನ್ನು ಪೌರಾಣಿಕ ಕಥೆಯಿಂದ ತಿಳಿದುಕೊಳ್ಳಬಹುದು.

ಪುರುಷಪ್ರಧಾನ ಪ್ರತಿರೂಪವಾಗಿ ಜಮದಗ್ನಿ ಮತ್ತು ಪರಶುರಾಮರಿದ್ದರೆ, ಮಾತೃಪ್ರಧಾನ ವ್ಯವಸ್ಥೆಯ ಪ್ರತಿರೂಪವಾಗಿ ರೇಣುಕೆ, ಯರ್ಮಶ್ವಾ, ವಸು, ವಿಶ್ವಾವಸು ಮತ್ತು ಸಕ್ಷೇಣರಿದ್ದಾರೆ. ರೇಣುಕೆ ಸ್ನಾನಕ್ಕೆಂದು ಹೊಗುವುದು ಗಂಧರ್ವನ ಜಲಕ್ರೀಡೆ ನೋಡುವುದು, ಮನೋವಿಕಾರವಾಗುವುದು, ತಡವಾಗಿ ಆಶ್ರಮಕ್ಕೆ ಬರುವುದು ಜಮದಗ್ನಿಗೆ ಆಕೆಯ ಮನಸ್ಸು ಮಲಿನವಾಗಿರುವುದು, ಮಕ್ಕಳಿಗೆ ಶಿರಶ್ಚೇದನವನ್ನು ಮಾಡಲು ಹೇಳುವುದು ಪರಶುರಾಮ ಶಿರಚ್ಛೇದ ಮಾಡುವುದು, ಪರಶುರಾಮ ತಂದೆಯನ್ನು ಪ್ರಾರ್ಧಿಸಿಕೊಂಡು ತಾಯಿಯನ್ನು ಬದುಕಿಸುವುದು ಇವಿಷ್ಟು ಕಥೆಯ ಮುಖ್ಯ ಅಂಶಗಳು. ಈ ಅಂಶಗಳನ್ನು ನಾವು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿವೇಚಿಸಿದಾಗ ವಾಸ್ತವತೆಗೆ ಈ ರೀತಿಯಾಗಿ ವಿಶ್ಲೇಷಿಸಬಹುದು. ಎರಡು ವ್ಯವಸ್ಥೆಗಳು ಹೆಣ್ಣು ಗಂಡುಗಳ ಕೊಡುಕೊಳ್ಳುವಿಕೆಯ ಮೂಲ ಒಂದಾದ ಪ್ರತೀಕವಾಗಿ ಜಮದಗ್ನಿ ರೇಣುಕೆಯನ್ನು ಮದುವೆಯಾಗಿ ಐದು ಜನ ಮಕ್ಕಳನ್ನು ಪಡೆಯುತ್ತಾ ಜೀವನ ನಡೆಸುತ್ತಿರಬೇಕು. ಹೀಗಿರುವಾಗ ರೇಣುಕೆ ಮೂಲ ವ್ಯವಸ್ಥೆಯಲ್ಲಿರುವ ಸಹಜವಾದ ಲೈಂಗಿಕ ಬಯಕೆಯನ್ನು ಬೇರೊಬ್ಬನೊಂದಿಗೆ ತೀರಿಸಿಕೊಂಡಿರಬಹುದು. ಅದು ಜಮದಗ್ನಿಗೆ ಗೊತ್ತಾಗಿರಬೇಕು. ಇದಕ್ಕೆ ಪೂರಕವೆನ್ನುವಂತೆ ದೇವಾಲಯದ ಜಾತ್ರೆಯಲ್ಲಿ ಈಗಲೂ ನಡೆಯುವ ಪಾಯಸದ ಪವಾಡದ ಆಚರಣೆಯ ಹಿನ್ನೆಲೆಯನ್ನು ಗಮನಿಸಿದಾಗ ಈ ಅಂಶ ಇನ್ನೂ ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಪರಸ್ಪರ ಜಗಳಗಳು ನಡೆದು ಬೇರೆ ಬೇರೆಯಾಗಿ ವಾಸವಾಗಿರಬಹುದು. ಆಗ ರೇಣುಕೆಯು ತನ್ನ ಮೊದಲಿನ ನಾಲ್ಕು ಮಕ್ಕಳೊಂದಿಗೆ, ಅಂದರೆ ಸಹಜ ಲೈಂಗಿಕತೆಯನ್ನು ಒಪ್ಪಿಕೊಂಡ ಮಕ್ಕಳೊಂದಿಗೆ ವಾಸವಾಗಿರಬಹುದು. ರೇಣುಕೆಯ ಈ ರೀತಿಯ ಒಂದು ಜೀವನ ಪದ್ಧತಿಯೇ ಮಾತೃಪ್ರಧಾನ ವ್ಯವಸ್ಥೆಯವರಿಗೆ ಒಂದು ದೊಡ್ಡ ಸಾಹಸವಾಗಿ ಅವರು ಅದನ್ನು ದೈವತ್ವಕ್ಕೇರಿಸಿರಬಹುದು. ಏಕೆಂದರೆ ಜನಪದರ ಬಹುಮುಖ್ಯವಾದ ಗುಣವೆಂದರೆ ನೈಸರ್ಗಿಕ ಭೌತವಾದಿ (Natural Materialist) ಮನೋಭಾವ. ಅಂದರೆ ರೇಣುಕೆಯು ಸಹ ತನ್ನ ಮೊದಲಿನ ಸಹಜವಾದ ಗುಣದಿಂದ ಬದುಕಿರುವುದೇ ಅವರಿಗೆ ದೊಡ್ಡ ಗುಣವಾಗಿ ಕಂಡು, ಅದನ್ನು ಬರೀ ಚೈತನ್ಯವಾಗಿ ನೋಡದೇ ವಸ್ತುರೂಪದಲ್ಲಿ ನೋಡಿ ಪರ್ಸ್ಯಾನಿಫಿಕೇಷನ್‌ ಮಾಡಿರಬಹುದು.

ಹುಲಿಗೆಮ್ಮ ಹಾಗೂ ಹೊಸೂರಮ್ಮ ಇವರಿಬ್ಬರೂ ಒಂದೇ ಎಂಬ ಕಲ್ಪನೆ ಕೆಲವರಲ್ಲಿದ್ದರೆ, ಮತ್ತೆ ಕೆಲವರು ಇಬ್ಬರೂ ಒಂದೇ ತಾಯಿಯ ಮಕ್ಕಳು, ಅಕ್ಕ-ತಂಗಿಯರು ಎಂಬ ನಿಲುವನ್ನು ತಾಳಿದ್ದಾರೆ. ಇನ್ನೂ ಹಲವಾರು ದೇವಿಯ ಅವತಾರಗಳಲ್ಲಿ ಭಿನ್ನರಾದಂಥವರು; ಹುಲಿಗೆಮ್ಮನು ಆದಿಶಕ್ತಿಯ ಅವತಾರ. ಆದ್ದರಿಂದ ಇವಳಿಗೆ ಬಲಿಕೊಡುವ ಮಾಂಸಾಹಾರವನ್ನು ನೈವೇದ್ಯ ಮಾಡುವ ಕ್ರಮವಿದೆ ಎನ್ನುತ್ತಾರೆ. ಹಾಗೆಯೇ ಹೊಸೂರಮ್ಮನನ್ನು ಪಾರ್ವತಿಯ ಅವತಾರವೆಂದೂ ಶಾಂತರೂಪಗಳೆಂದೂ ಗುರುತಿಸುತ್ತಾರೆ. ಆದ್ದರಿಂದಲೇ ಸಸ್ಯಹಾರಕ್ಕೆ ಸಂಬಂಧಿಸಿದ ನೈವೇದ್ಯ ಪ್ರಸಾದಗಳನ್ನು ಹೊಸುರಮ್ಮನಿಗಾಗಿ ಹಂಚಿಕೆ ಮಾಡುತ್ತಾರೆ.

ಹುಲಿಗೆಮ್ಮನಿಗೆ ಇರುವಷ್ಟು ಭಕ್ತ ವಲಯ ಮೌಖಿಕ ಪ್ರಚಾರ ಹೊಸೂರಮ್ಮನಿಗೆ ಇಲ್ಲ. ಹುಲಿಗೆಮ್ಮನಿಗೆ ಸಂಬಂಧಿಸಿದ ಜನಪದ ಆಚರಣೆಗಳು, ಜೋಗಪ್ಪ-ಜೋಗವ್ವ ಆರಾಧಕ ವರ್ಗ ಹೊಸೂರಮ್ಮನಲ್ಲಿ ಶಿಷ್ಟ ಅಂಶಗಳನ್ನು ಪಡೆದುಕೊಳ್ಳುತ್ತವೆ. ಹೊಸೂರು ಮತ್ತು ಹುಲಿಗೆಯ ಈ ದೇವಾಲಯಗಳನ್ನು ಗಮನಿಸಿದರೆ ಹೊಸೂರಿನ ಪರಿಸರವು, ಹುಲಿಗಿಗಿಂತ ಪ್ರೌಢವೂ, ಹುಲಿಗಿಯ ಪರಿಸರವು ಸರಳವೂ ಆಗಿರುವಂತೆ ಅನಿಸುತ್ತದೆ. ಹೊಸೂರಿನ ದೇವಿಯ ಭಕ್ತವಲಯ ದೇವಿಯ ಪೂಜಾಕ್ರಮಗಳು, ಆಚರಣೆ, ವಿಧಿ-ವಿಧಾನಗಳು ಸಾಸ್ಥಿಕ ವ್ಯವಸ್ಥೆಗೆ ಬಹುಪಾಲು ಬದ್ಧವೆನಿಸುತ್ತವೆ. ಹುಲಿಗೆಯ ವಾತಾವರಣವು ತೀರ ಜಾನಪದೀಯವಾಗಿದೆ. ಹೊಸೂರಿನ ದೇವಾಲಯಕ್ಕೆ ದೊರೆತ ರಾಜರ ಅಥವಾ ಪಾಳೆಗಾರರ ಆರ್ಥಿಕ ಬೆಂಬಲ ಬಹುಲಿಗೆಮ್ಮನಿಗೆ ದೊರೆತಂತೆ ಅನಿಸುವುದಿಲ್ಲ. ಹುಲಿಗೆಮ್ಮನ ಪರಂಪರೆಯಲ್ಲಿ ಭಕ್ತರ ಬೆಳವಣಿಗೆಯನ್ನು ಹೇರಳವಾಗಿ ಕಾಣಬಹುದು.

ಹೊಸೂರಮ್ಮನ ಮೂರ್ತಿ, ದೇವಾಲಯದ ಪರಿಸರ ಪೂಜೆಗೆ ಸಂಬಂಧಿಸಿದ ಆಚರಣೆಗಳು ಪ್ರಸಾದದ ಪದಾರ್ಥ ಇತ್ಯಾದಿಗಳ ಮೇಲೆ ಶಿಷ್ಟತೆಯ ಪ್ರಭಾವ ಹೆಚ್ಚುತ್ತಾ ಹೋಗಿರುವುದನ್ನು ಗಮನಿಸಬಹುದು. ಉದಾಹರಣೆಗೆ ಶ್ರೀಪಾದರಾಯರು ಹೊಸೂರಮ್ಮನ ಗುಡಿಯಲ್ಲಿ ವಿತರಣೆ ಮಾಡುತ್ತಿದ್ದ ಬದನೆಕಾಯಿಯ ಪ್ರಸಾದವನ್ನು ಬೇಸರಗೊಂಡರೆಂದೂ, ಈ ಕಾರಣದಿಂದ ಪ್ರಸಾದದಲ್ಲಿ ಬದಲಾವಣೆ ಮಾಡಿದರೆಂದೂ ಹೇಳುತ್ತಾರೆ. ಅವರು ಹೊಸೂರಮ್ಮನ ಗುಡಿಯಲ್ಲಿ ವೇಣುಗೋಪಾಲಸ್ವಾಮಿ ಆರಾಧನೆ ನಡೆಸಿ, ದೇವಿಯ ವಿಗ್ರಹದ ಕಣ್ಣುಗಳಿಗಾಗಿ ಎರಡು ಸಾಲಿಗ್ರಾಮಗಳನ್ನು ನೀಡಿದರೆಂದು ಹೇಳುತ್ತಾರೆ. ಅದೇ ಸಾಲಿಗ್ರಾಮಗಳನ್ನು ದೇವಿಯ ವಿಗ್ರಹದ ಕಣ್ಣುಗಳಿಗೆ ಇಟ್ಟಿದ್ದಾರೆಂದೂ ತೋರಿಸುತ್ತಾರೆ.

ಹುಲಿಗೆಮ್ಮ ಹೊಸೂರಮ್ಮ ಜನಪದ ಪರಂಪರೆಯ ದೇವತೆಗಳಲ್ಲಿ ವಿಶಿಷ್ಟರೆನಿಸುವುದು ಒಂದು ಕಾರಣಕ್ಕಾಗಿ, ಅದೆಂದರೆ, ಕೆಲವು ದೇವತೆಗಳಿಗೆ ಇರುವಂಥ ಹಲವು ದೈವಗಳೊಂದಿಗಿನ ಸಂಬಂಧದ ಬೆಸುಗೆ ಇವರಿಗೆ ಇಲ್ಲ. ಅಂದರೆ ಈ ದೇವತೆಗಳಿಬ್ಬರೂ ಅಕ್ಕ-ತಂಗಿಯರು ಎಂಬುದನ್ನು ಹೊರತುಪಡಿಸಿದರೆ, ಇವರಿಬ್ಬರಿಗೂ ಅಣ್ಣ-ತಮ್ಮಂದಿರಾಗಲಿ, ಗಂಡ-ಮಕ್ಕಳಾಗಲಿ ಇತ್ಯಾದಿ ಸಂಬಂಧಗಳ ಬಂಧವೇ ಇಲ್ಲ. ಆದರೂ ಹೊಸೂರಮ್ಮನನ್ನು ಏಕನಾಥೇಶ್ವರಿ ಎಂದು ಕರೆಯುತ್ತಾರೆ. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ಮೇಲೆ “ಏಕನಾಥನ” ಹಿಡಿತದ ಪ್ರಯತ್ನಗಳು ಇಲ್ಲಿ ಗಮನಾರ್ಹವೆನಿಸುತ್ತವೆ. ಚಿತ್ರದುರ್ಗದ ಏಕಾಂತಮ್ಮನೆಂಬ ಜನಪದ ದೇವತೆ ಶಿಷ್ಟತೆಯ ಪ್ರಭಾವದಿಂದ ಏಕನಾಥೇಶ್ವರಿಯೆಂಬ ಹೆಸರು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಶಿಷ್ಟ ದೈವದ ಕಲ್ಪನೆಯಲ್ಲಿ ತಮ್ಮ ವಿರೋಧಿಗಳು ಹಾಗೂ ತಮ್ಮ ಬಗ್ಗೆ ಅಸಮಾಧಾನ ತಾಳಿದ ವಲಯವನ್ನು ದೇವತೆಗಳು ಶತ್ರುಗಳಂತೆ ಭಾವಿಸುತ್ತಾರೆ. ಅಂತಹ ವೈರಿಗಳನ್ನು ನಾಶಪಡಿಸುತ್ತಾರೆ. ಆದರೆ, ಜನಪದ ದೇವತೆಗಳು ತಮ್ಮನ್ನು ವಿರೋಧಿಸುವವರನ್ನು ಅನುಭವದ ಗರಡಿಯಲ್ಲಿ ಪಳಗಿಸುವಂತೆ ಮಾಡಿ ತಮ್ಮ ಭಕ್ತರನ್ನಾಗಿಸಿಕೊಳ್ಳುತ್ತಾರೆ. ಹುಲಿಗೆಮ್ಮನಾಗಲಿ, ಹೊಸೂರಮ್ಮನಾಗಲಿ ಸರಳ ತಂತ್ರಗಳ ಮೂಲಕ ಭಕ್ತರಲ್ಲದವರನ್ನು ಭಕ್ತರನ್ನಾಗಿ ಒಲಿಸಿಕೊಳ್ಳುವ ಮೊದಲು ಕಷ್ಟ-ಕಾರ್ಪಣ್ಯಗಳ ಜೀವನಾನುಭವದಿಂದ ಪರಿಪಕ್ವಗೊಳಿಸಿ ಪಳಗಿಸುವುದು ವಿಶೇಷವಾಗಿದೆ. ಅನುಭವದ ಚಿಂತನೆಯಲ್ಲಿ ಸರಿ-ತಪ್ಪುಗಳನ್ನು, ಮನವರಿಕೆಯಾಗುವಂತೆ ಮಾಡುವುದರ ಮೂಲಕ ಭಕ್ತರಿಗೆ ಒಲಿದು ತನ್ನತ್ತ ಒಲಿಸಿಕೊಳ್ಳುವ ಸಾಮರ್ಥ್ಯ ಈ ಇಬ್ಬರೂ ದೇವತೆಗಳ ಕಥೆ-ಐತಿಹ್ಯಗಳಿಂದ ತಿಳಿಯುತ್ತದೆ. ಉದಾ : ಮಲಶೆಟ್ಟಿಯ ಕಥೆ, ಹಾಗೆಯೇ ಅಣ್ಣ-ತಂಗಿಯರ ಕಥೆಯಲ್ಲಿ ಭಕ್ತಿಯೇ ಇಲ್ಲದ ಶ್ರೀಮಂತ ಜಿಪುಣ ಹಾಗೂ ನಿಷ್ಕರುಣಿಯಾದ ಮಲ್ಲರೆಡ್ಡಿಯನ್ನು ಒಳ್ಳೆಯವನನ್ನಾಗಿ ಮಾಡುವುದು ಹಾಗೂ ಭಕ್ತನಾದ ಬಡವ ನೀಲಪ್ಪನಿಗೆ ಐಶ್ವರ್ಯಗಳನ್ನು ನೀಡುವುದರೊಂದಿಗೆ ಶ್ರೀಮಂತಗೊಳಿಸುತ್ತಾಳೆ.

ಯಾವುದೇ ಜನಪದ ದೇವತೆಯ ಹೆಸರು ಅಮ್ಮನಿಂದ ಕೊನೆಗೊಳ್ಳುವ ಹಾಗೆ ಹುಲಿಗೆಮ್ಮನ ಹೆಸರೂ ‘ಅಮ್ಮ’ ಎಂದೇ ಕೊನೆಗೊಳ್ಳುತ್ತದೆ. ಇದು ಮಾತೃಪ್ರಧಾನ್ಯತೆ ತಿಳಿಸುತ್ತದೆ. ಶಿಷ್ಟ ಸಂಕುಲದಲ್ಲಿ ಹೀಗಿಲ್ಲ ‘ದೇವಿ’ಯಾಗಿರುತ್ತದಷ್ಟೇ. ಪುರುಷನ ಪತ್ನಿಯಾಗಿ ಮಾತೃ ಆದ್ಯತೆ. ಉದಾಹರಣೆಗೆ ತ್ರಿಮೂರ್ತಿಗಳ ಅಧಿನತೆಯಲ್ಲಿ ಶಕ್ತಿಯರು ಇದ್ದಾರೆ.

ಇಲ್ಲಿ ಮಾತೃಸಂವೇದನೆಯು ಅಸ್ತಿತ್ವದ ಹಂಬಲ, ಸ್ವಾತಂತ್ರ್ಯ ಸ್ಥಾಪನೆಯ ಹೋರಾಟ-ಪ್ರತಿನಿಧೀಕರಣ ಆಚರಣೆಗಳ ಸತ್ವ ಆಗಿದೆ. ಏಕೆಂದರೆ ಇಲ್ಲಿ ಕೌಟಂಬಿಕ ಹಿನ್ನೆಲೆಯ ಪರಂಪರೆ ಇದೆ. ಪುರುಷ ಸಹಕಾರವಿದೆ. ಆದರೆ ಪುರುಷ ಪ್ರಾಧಾನ್ಯ ಅಹಂಕಾರಕ್ಕೆ ನೆಲೆ ಇಲ್ಲ.

ಗ್ರಾಮೀಣ ಪರಿಸರ, ಜನಪದ ಪರಂಪರೆ, ಕೆಳಜಾತಿ ಅಥವಾ ಬುಡಕಟ್ಟು ಸಂಸ್ಕೃತಿಯ ಭಕ್ತಸಮೂಹ ಹುಲಿಗೆಮ್ಮನ ಭಕ್ತರು, ಜೋಗ/ಜೋಗತಿ ಇಲ್ಲಿ ಪುರುಷ ಭಕ್ತನಿಗೆ ಇರುವ ಕಟ್ಟುಪಾಡುಗಳು ಭಕ್ತೆಗೆ ಇಲ್ಲ. ಅವಳ ಹೆಣ್ತನವನ್ನು ದೇವತೆ ಮರ್ಧಿಸುವುದಿಲ್ಲ. ಭಕ್ತೆಯರ ಮಕ್ಕಳಿಗೆ ಅಪ್ಪನ ಅಧಿಕೃತತೆಯ ಹಂಗೂ ಇಲ್ಲ. ಅದನ್ನು ದೇವಿ ಹೊರುತ್ತಾಳೆ. ಜೋಗತಿಯರಿಗೆ ವಿವಾಹಬಂಧನ ಮತ್ತು ಗಂಡನ ಹಿಡಿತವಿಲ್ಲ. ತಮ್ಮ ಮಕ್ಕಳಿಗೆ ಸಂಬಂಧಿಸಿದ ಸಾಮಾಜಿಕ ಹೊಣೆ ಅವರದೇ ಆಗುತ್ತದೆ. ಆದರೆ ಧಾರ್ಮಿಕ ರಕ್ಷಣೆ ಭದ್ರತೆ ಹುಲಿಗೆಮ್ಮನದಾಗಿರುತ್ತದೆ. ಭಕ್ತೆಯರಿಗೆ ವಿಧವೆತನದ ಅವಮಾನಗಳು ಇಲ್ಲ. ನಿತ್ಯ ಸುಮಂಗಲೆಯರು.

ಭಕ್ತನ ಪುರಷತ್ವವನ್ನೇ ನಾಶಮಾಡುತ್ತಾಳೆಂದು ಸಂಕೇತಿಸುವುದರಿಂದ ಜೋಗಯ್ಯನಾದ ಮೇಲೆ ಆತನ ಸಂಭೋಗಕ್ಕೆ ಧಾರ್ಮಿಕ ನಿಷೇಧವಿರುತ್ತದೆ. ನಂತರ ಆತನ ಸಂತತಿಗೆ ಅಧಿಕೃತತೆ ಬರುವುದಿಲ್ಲ. ಆ ಮಕ್ಕಳನ್ನು ಹುಲಿಗೆಮ್ಮನ ಮಕ್ಕಳೆಂದು ಗುರುತಿಸಲಾಗುತ್ತದೆಯೇ ಹೊರತು ಜೋಗಯ್ಯನ ಮಕ್ಕಳೆಂದಲ್ಲ. ಪುರುಷ ಭಕ್ತರ ವಿಷಯದಲ್ಲಿ ಸವಾಲಾಗಿ ಹುಲಿಗೆಮ್ಮನ ನಿಯಮಗಳು ಪಾಲನೆಯಾಗಿ ಸ್ತ್ರೀ ಮೂಲದ ದರ್ಪ ಪ್ರತಿಪಾಲನೆಯಾಗುತ್ತದೆ.

ಆಚರಣೆಗಳು ಆಶಯ, ಅಪರಿಮಿತವಾದ ಸಂಭೊಗ ಸುಖ, ಗರ್ಭಧಾರಣೆ, ಸಂತಾನ ಪ್ರಾಪ್ತಿ ಆಗಿರುತ್ತದೆ. ಈ ಫಲವಂತಿಕೆಯಲ್ಲಿ ಸಂತತಿ ಶಾಶ್ವತವಾಗಿರಬೇಕೆಂಬ ಬಯಕೆ ಇರುತ್ತದೆ. ದಾಂಪತ್ಯ ಜೀವನದ ನಿಷ್ಠೆ ನಿಯಮಗಳು ಪುರುಷ ಅಧೀನತೆಯಂಥ ಅಂಶಗಳು ಇಲ್ಲಿ ಗೌಣ. ಆಚರಣೆಗಳ ಪರಿಕರಗಳಾದ ಅರಿಶಿಣ, ಕುಂಕುಮ, ಬಳೆ ಇತ್ಯಾದಿ ಆಕರ್ಷಣೆ ಬಣ್ಣಗಳು ಗಮನಾರ್ಹ. ಲೈಂಗಿಕ ಕಾಯಿಲೆಗಳ ಪರಿಹಾರ ಆಚರಣೆಗಳ ಆಶಯಗಳಲ್ಲೊಂದು ಶುಚಿತ್ವದಲ್ಲಿ ಆಚರಣೆಯನ್ನು ನೆರವೇರಿಸುವಾಗ ನಿಗದಿತ ದಿನಗಳ ಸ್ನಾನ, ನಿಗದಿತ ಆಹಾರ, ನಿದ್ರೆ ಇವೆಲ್ಲ ಕಡ್ಡಾಯವಾಗಿರುತ್ತದೆ. ಇದು ಪ್ರಾಕೃತಿಕ ಚಿಕಿತ್ಸೆಯಾಗಿರುತ್ತದೆ.

ಹುಲಿಗೆಮ್ಮನಿಗಿರುವ ನಂಬಿಕೆಯನ್ನು ಗಮನಿಸಿದಾಗ ಪುರುಷರನ್ನು ಮಹಿಳೆಯರನ್ನಾಗಿ ಮಾಡುತ್ತಾಳೆ ಎಂಬ ನೆಲೆ ಪ್ರಾತಿನಿಧೀಕರಣಕ್ಕೆ ಒತ್ತನ್ನು ನೀಡುತ್ತದೆ. ಹುಲಿಗೆಮ್ಮನ ಕಣ್ಣು ಯಾವ ಪುರುಷನ ಮೇಲೆ ಬೀಳುತ್ತದೋ ಆತ ಅವಳ ಕಿಂಕರನಾಗುತ್ತಾನೆ. ಅದುವರೆಗೆ ಆತನಲ್ಲಿದ್ದ ಅಹಂಕಾರ ಪೌರುಷಗಳನ್ನು ದೇವಿ ನಿರ್ನಾಮ ಮಾಡುತ್ತಾಳೆ. ಆ ಮೂಲಕ ಪುರುಷತ್ವ ಕಳೆದು ನಪುಂಸಕನನ್ನಾಗಿಸಿ ತನ್ನ ಆರಾಧನೆಯ ವೇಷಭೂಷಣಗಳನ್ನು ತೊಡಿಸುತ್ತಾಳೆ. ಕುಂಕುಮ, ಬಳೆ, ವಿಭೂತಿ, ಸೀರೆ, ರವಿಕೆಗಳನ್ನು ಉಡಿಸಿ ಹೆಣ್ಣಿನಂತೆ ಪರಿವರ್ತಿಸಿಕೊಳ್ಳುತ್ತಾಳೆ. ಅಂದರೆ ದೇವಿಯು ಪುರುಷನ ಅಸ್ತಿತ್ವದ ವಿರುದ್ಧ ಹೋರಾಟ ಮಾಡಿ ಹೆಣ್ಣಿನ ಬಳಗಕ್ಕೆ ಪರಿವರ್ತನೆ ಮಾಡಿಕೊಳ್ಳುತ್ತಾಳೆ. ಇದು ಸ್ತ್ರೀ ಕೇಂದ್ರೀಕೃತ ಆಳ್ವಿಕೆ ಅಥವಾ ಯಜಮಾನ್ಯ. ಇದಲ್ಲದೆ ಹುಲಿಗೆಮ್ಮನೂ ಇತರೆ ದೇವತೆಗಳಂತೆ ಮಾತೃಮೂಲದ ಭಕ್ತರನ್ನೂ ಆಶ್ರಯಿಸಿರುವವಳು. ದೇವಿ- ಭಕ್ತ ಸಂಬಂಧ, ಅನ್ಯೋನ್ಯ ತಾಯಿ ಮಕ್ಕಳಂತೆ. ಅವಿವಾಹಿತ ತಾಯಿ ಮತ್ತು ಭಕ್ತವಲಯದ ವರ್ತಮಾನ ಭವಿಷ್ಯತ್‌ಗಳಲ್ಲಿ ಇರುತ್ತದೆ. ಬಂಧು- ಬಳಗವನ್ನು ಬಯಸುವುದು ಮಾತೃಮೂಲ ಮನಸ್ಸು. ದಾಯಾದಿತನ, ಪಿತೃಪರಂಪರೆ ಇದು ಈ ದೇವತೆಯ ಪರಿಧಿಗೆ ಬರುವುದಿಲ್ಲ. ಆಚರಣೆಗಳು, ಆಹಾರ ಪದ್ಧತಿ, ಉಡುಗೆ ತೊಡುಗೆ, ವಾದ್ಯ ಎಲ್ಲವೂ ದೈಹಿಕ ಸುಖ, ಮಾನಸಿಕ ನೆಮ್ಮದಿ, ಸಂತಾನ ಅಭಿವೃದ್ಧಿಯ ಪೂರಕ ಅಂಶಗಳು. ಇಲ್ಲಿ ಮೈಲಿಗೆಯ ಪ್ರಶ್ನಯೇ ಇಲ್ಲ. ಈರುಳ್ಳಿ-ಬೆಳ್ಳುಳ್ಳಿ, ಹುಣಿಸೆಯ ಹುಳಿ, ಮಾಂಸಾಹಾರಗಳಿಗೆ ಆದ್ಯತೆಯಿದೆ. ಇವು ಹೆಣ್ಣಿನ ಫಲವಂತಿಕೆಗೆ ಸತ್ವ ವೃದ್ಧಿಸುವಂಥವು.

ಚೌಡಿಕೆವಾದ್ಯಸ್ತ್ರೀಯ ಜನನಾಂಗದ ಆಕಾರದಲ್ಲಿದೆ. ಅದನ್ನು ಮಿಡಿಯಿಸಿ ನುಡಿಸಿ ಹಾಡಿ ನಲಿಯುವುದು ಭಿಕ್ಷೆ ಬೇಡುವುದು- ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಆಚರಣೆಯಲ್ಲಿ ಬಲಿನೀಡಿದ ಪ್ರಾಣಿಯ ಮಾಂಸಕ್ಕಿಂತ ರಕ್ತವನ್ನು ದೇವರಿಗೆ ಅರ್ಪಿಸುವುದು ಮುಖ್ಯವಾಗಿರುತ್ತದೆ. ಏಕೆಂದರೆ ಹೆಣ್ಣು ಮುಟ್ಟಿನ ರೂಪದ ರಕ್ತದ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ಫಲವಂತಿಕೆಯನ್ನು ಪ್ರತಿನಿಧಿಸುತ್ತಾಳೆ. ಮುಟ್ಟು ಆಗುವುದು ನಿಲ್ಲುವುದು ಇದ್ಯಾವುದೂ ವೈಯಕ್ತಿಕ ನೆಲೆಯಲ್ಲಿ ಮೈಲಿಗೆಯಲ್ಲ. ಅದೇ ಪ್ರಧಾನ ಹಾಗೂ ಹೆಣ್ತನದ ಭಾಗ್ಯ. ಈ ಆರಾಧನೆಯೇ ಬಲಿಯಾದ ಪ್ರಾಣಿಯ ರಕ್ತವನ್ನು ದೇವತೆಗೆ ಅರ್ಪಿಸುವುದಾಗಿರುತ್ತದೆ.

ಹೊಸೂರಮ್ಮ ಸಂಸ್ಕೃತೀಕರಣಕ್ಕೆ ಒಳಗಾಗಿದ್ದಾಳೆ. ಹುಲಿಗೆಮ್ಮ ಅರೆ ಸಂಸ್ಕೃತೀಕರಣಕ್ಕೆ ಒಳಗಾಗಿದ್ದಾಳೆ. ಹುಲಿಗೆಮ್ಮನಿಗೆ ಬಲಿ ಆಚರಣೆ ಇದೆ. ಹಾಗೆಯೇ ಜೋಗತಿ ಸಂಪ್ರದಾಯ ಇದೆ. ಹುಲಿಗೆಮ್ಮನಿಗೆ ಜನಪ್ರಿಯತೆ ಇದೆ. ಹೊಸೂರಮ್ಮನಿಗೆ ಆಸ್ತಿ ಇದೆ. ಹುಲಿಗೆಮ್ಮನಿಗೆ ಇರುವ ಭಕ್ತರ ಸಂಖ್ಯೆ ಜಾಸ್ತಿ. ಹುಲಿಗೆಮ್ಮನ ಹತ್ತಿರ ಭೂಮಿ, ಆಸ್ತಿ ಮುಂತಾದವು ಇಲ್ಲ. ಹುಲಿಗೆಮ್ಮ ಇನ್ನೂ ತನ್ನ ಮೂಲದ ಆಚರಣೆಗಳನ್ನು ಬಿಟ್ಟು ಕೊಟ್ಟಿಲ್ಲ. ಹುಲಿಗೆಮ್ಮ ಈಗಲೂ ಜನಪದ ದೈವವಾಗಿದ್ದಾಳೆ.

ಸಾಮಾನ್ಯವಾಗಿ ಹುಲಿಗೆಮ್ಮನ ಜಾತ್ರೆ ಒಂದು ತಿಂಗಳವರೆಗೆ ನಡೆಯುತ್ತದೆ. ಒಂದು ತಿಂಗಳವರೆಗೆ ಜಾತ್ರೆ ನಿಮಿತ್ತ ಹಾಕಿದ ಅಂಗಡಿಗಳು, ಜಾತ್ರೆ ಸಾಮಾನುಗಳು ಹಾಗೆಯೇ ಇರುತ್ತವೆ.

ರಾಜ ಮಹಾರಾಜರು, ಸಾಮಂತರರು, ಜಹಗೀರು ಕೊಟ್ಟಿರುವುದಕ್ಕೆ ಮಾನ್ಯೇವು ಎಂದು ಕರೆಯುತ್ತಾರೆ. ಹೊಸೂರಮ್ಮನಿಗೆ ಕೊಟ್ಟಿರುವ ಮಾನ್ಯೇವು ೧೯೭೪ರಲ್ಲಿ ಅವಾರ್ಡ್‌ ಆಗಿ ಎಲ್ಲ ಭೂಮಿಗಳು ಜನರಿಗೆ ಹೋದವು. ಬಹಳ ಆಸ್ತಿ ಹೊಸೂರಮ್ಮನದು ಇತ್ತು ಎಂಬುದು ಎಲ್ಲರ ಅನಿಸಿಕೆ.

ಹುಲಿಗೆಮ್ಮ ಗ್ರಾಮ ದೇವತೆ. ಹೊಸೂರು ಒಂದು ಗ್ರಾಮ ಹೊಸೂರು ಗ್ರಾಮಕ್ಕೆ ಹೊಸೂರಮ್ಮ ಗ್ರಾಮದೇವತೆ ಆಗಿದ್ದಾಳೆ. ಹೊಸೂರಮ್ಮ ಪಾರ್ವತಿ ಸ್ವರೂಪದ ದೇವತೆ. ಆದುದರಿಂದ ಈಕೆಗೆ ಕುರಿ, ಕೋಳಿ ಬಲಿ ಕೊಡುವುದಿಲ್ಲ. ಹೊಸೂರಮ್ಮ ಮೂಲತಃ ಶಾಂತಿ, ದೇವತೆ, ಶಾಂತಿ ಸ್ವರೂಪಿಣಿ. ಹೊಸೂರಮ್ಮ, ಹುಲಿಗೆಮ್ಮ ದೇವರುಗಳ ಮೂರ್ತಿ ಎರಡು ಒಂದೇ ರೀತಿ ಇವೆ. ಆಚರಣೆ, ಪೂಜೆ ವಿಧಾನ ಹಬ್ಬ ಎರಡು ಒಂದೇ ತರಹ ಇವೆ. ಇಲ್ಲಿಯೂ ಸಹ ಅಗ್ನಿಕೊಂಡವಿದೆ. ಪಾಯಸ ಕಾರ್ಯಕ್ರಮವಿದೆ.

ಹೊಸೂರಮ್ಮನ ಪಾಯಸ ಏಕಾದಶಿ ದಿನ ಆಗುತ್ತದೆ. ಹೊಸೂರಮ್ಮನ ಅಗ್ನಿ (ಕೊಂಡ) ಕೂಡ ಏಕಾದಶಿ ದಿನ ಆಗುತ್ತದೆ.

ಹುಲಿಗೆಮ್ಮ ಮತ್ತು ಹೊಸೂರಮ್ಮನ ಕಂಕಣವನ್ನು ಕಾರಬ್ಬದ ಹುಣ್ಣಿಮೆಯ ದಿನ ಬಿಚ್ಚುತ್ತಾರೆ. ಇಬ್ಬರ ಕಂಕಣವನ್ನು ಒಂದೇ ದಿನ ಬಿಚ್ಚುತ್ತಾರೆ. ಹುಲಿಗೆಮ್ಮನ ಪಾದಗಟ್ಟೆಯ ಹತ್ತಿರ ನಿಂತು ಕಹಳೆ ಊದುತ್ತಾರೆ. ಇಬ್ಬರ ಕಂಕಣವನ್ನು ಆ ಸಮಯದಲ್ಲಿ ಬಿಚ್ಚುತ್ತಾರೆ.

ಹೊಸೂರಮ್ಮನ ಕೊಂಡ ಹಾಗೂ ಪಾಯಸಕ್ಕಿಂತ ಮುಂಚಿತವಾಗಿ ಹೂವನ್ನು ಕೇಳುತ್ತಾರೆ. ಐದು ಹೂವಿನ ಹುಂಡಿಯನ್ನು ಹೊಸೂರಮ್ಮನಿಗೆ ಇಟ್ಟು ಹೂ ಕೇಳುತ್ತಾರೆ. ಆ ಐದು ಹೂವಿನ ಹುಂಡಿಯನ್ನು ಹೊಸೂರಮ್ಮನಿಗೆ ಇಟ್ಟು ಹೂ ಕೇಳುತ್ತಾರೆ. ಆ ಐದು ಹೂವಿನ ಹುಂಡಿಯನ್ನು ಹೊಸೂರಮ್ಮನಿಗೆ ಎಸೆಯುತ್ತಾರೆ. ಎಸೆದ ಮೇಲೆಯೇ ಪಾಯಸ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಹೂ ಕೇಳುವಾಗ ಸಾರ್ವಜನಿಕರು ನೋಡುತ್ತಾರೆ. ಹೂ ಎಸೆಯುವುದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಾರೆ.

ಹೊಸೂರು ಗ್ರಾಮದಲ್ಲಿ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಹೊಸೂರು ಕ್ಷೇತ್ರದಲ್ಲಿ ಹಬ್ಬ ಹರಿದಿನಗಳಲ್ಲಿ ಹೊಸೂರಮ್ಮನ ಮುಂಖಡರು ಅವರೇ. ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಶುರುವಾಗುತ್ತದೆ. ನಾಯಕ ಸಮುದಾಯದವರು ಮೊದಲಿನಿಂದಲೂ ಇಲ್ಲಿ ನೆಲೆಸಿದ್ದಾರೆ. ಹೊಲಗದ್ದೆಗಳನ್ನು ಹೊಸೂರಮ್ಮನ ಗುಡಿಯ ಸುತ್ತಲೂ ಮಾಡುವವರು ಇವರೇ ಆಗಿದ್ದಾರೆ. ಹಬ್ಬ ಇತ್ಯಾದಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜನರೆಂದರೆ ನಾಯಕ ಸಮುದಾಯದವರು. ಹೊಸಪೇಟೆ ಕೇರಿಗಳಲ್ಲಿ ವಾಸಿಸಿರುವ ನಾಯಕ ಸಮುದಾಯದವರೇ ಈಗ ಹೊಸೂರಮ್ಮನ ದೇವಸ್ಥಾನದಲ್ಲಿ ನೆಲೆಸಿದ್ದಾರೆ. ಇವರಿಂದ ಹೊಸೂರು ಒಂದು ಗ್ರಾಮವಾಗಿ ಇಂದಿಗೂ ಉಳಿದು ಬಂದಿದೆ. ವಿಶೇಷ ಪೂಜೆಗಳು ಹೊಸೂರಮ್ಮ ದೇವಸ್ಥಾನದಲ್ಲಿ ನಡೆಯುತ್ತವೆ.