ಹುಲಿಗೆಮ್ಮ ಮತ್ತು ಹೊಸೂರಮ್ಮ ದೈವಗಳು ನೆಲೆಸಿರುವ ಕೇತ್ರಗಳು ಚಾರಿತ್ರಿಕವಾಗಿ, ಪೌರಾಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ತಮ್ಮದೇ ಆದ ಮಹತ್ವವನ್ನು ಪಡೆದವುಗಳಾಗಿವೆ. ಈ ಎರಡೂ ಕ್ಷೇತ್ರಗಳು ತುಂಗಭದ್ರಾ ನದಿಯ ಆಚೆ ಈಚೆ ದಡದಲ್ಲಿವೆ. ಹಾಗಾಗಿ ಎರಡೂ ಕ್ಷೇತ್ರಗಳ ಮಧ್ಯೆ ನದಿಯು ಸದಾ ಹರಿಯುತ್ತಿರುತ್ತದೆ. ದೈವಗಳು ನೆಲೆಸಿರುವ ಪ್ರಭವದಿಂದಾಗಿ ಎರಡೂ ಕ್ಷೇತ್ರಗಳಿಗೆ ಬೇರೆ ಹೆಸರುಗಳಿದ್ದರೂ ಸಹ ಆಯಾ ದೈವಗಳ ಹೆಸರಿನಿಂದಲೇ ಕರೆಯಾಗುತ್ತಿದೆ.

ಹುಲಿಗಿ (ಮುನಿರಾಬಾದ್) : ಕರ್ನಾಟಕದ ಕೊಪ್ಪಳ ಜಿಲ್ಲೆಯ ಹುಲಿಗಿ (ಮುನಿರಾಬಾದ್) ಗ್ರಾಮವು ಹುಲಿಗೆಮ್ಮ ಕ್ಷೇತ್ರ ಹುಲಿಗೆಗೆ ವ್ಯಾಘ್ರಪುರಿ ಎಂದು ಸಂಸ್ಕೃತ ಸಾಹಿತ್ಯದಲ್ಲಿ ಕರೆದಿರುವುದುಂಟು. ಹುಲುಗಿ ಸಮತಟ್ಟಾದ ಪ್ರದೇಶವಾಗಿದ್ದು, ತುಂಗಭದ್ರ ನದಿಯ ದಂಡೆಯಲ್ಲಿದೆ.

ಹೊಸಪೇಟೆಯಿಂದ ಎಂಟು ಕಿಲೋ ಮೀಟರ್ ದೂರವಿರುವ ಹುಲಿಗಿಯು ರಾಷ್ಟೀಯ ಹೆದ್ದಾರಿ ೧೩ರಲ್ಲಿ ಬರುವುದರಿಂದ ಸಾರಿಗೆ ವ್ಯವಸ್ಥೆ ತುಂಬಾ ಅನುಕೂಲಕರವಾಗಿರುವುದರ ಜೊತೆಗೆ ಜನರಿಗೆ ಆಧುನಿಕ ಸೌಲಭ್ಯಗಳು ದೊರಕಿವೆ. ಹಾಗಾಗಿ ಸದಾ ದಟ್ಟವಾದ ಜನಸಂದಣಿ, ವ್ಯಾಪಾರ, ವಹಿವಾಟು, ಶಿಕ್ಷಣ, ಸಿನೇಮಾ ಮುಂತಾದ ಆಧುನಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹುಲುಗೆಮ್ಮ ಬಹಳಷ್ಟು ಭಕ್ತರನ್ನು ಹೊಂದಿರುವುದು ಸಹ ಹುಲಿಗಿಯ ಜನದಟ್ಟಣೆಗೆ ಕಾರಣವಾಗಿದೆ. ಕರ್ನಾಟಕದ ನಾನಾ ಕಡೆ ಹಾಗೂ ಬೇರೆ ರಾಜ್ಯಗಳಲ್ಲೂ ಸಹ ಹುಲಿಗೆಮ್ಮ ಭಕ್ತರನ್ನು ಹೊಂದಿದ್ದಾಳೆ. ಹೆಚ್ಚಾಗಿ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಭಕ್ತರನ್ನು ಕಾಣಬಹುದು. ದಲಿತ ಮತ್ತು ಹಿಂದುಳಿದ ಜನಾಂಗದವರು ಈ ದೈವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಾಗಿದ್ದಾರೆ. ಅವರುಗಳು ತಮ್ಮ ಮನೆ ದೈವವಾಗಿ ಹುಲಗೆಮ್ಮನನ್ನು ಸ್ಥಾಪಿಸಿಕೊಂಡಿದ್ದಾರೆ. ಈ ದೈವಕ್ಕೆ ಭಕ್ತರಾಗಿರುವವರು ಸಾಮಾನ್ಯವಾಗಿ ಮನೆಗಳಲ್ಲಿ ಹುಲಿಗೆಪ್ಪ, ಹುಲಿಗೆಮ್ಮ ಎಂಬ ಹೆಸರುಗಳನ್ನು ಸಹ ಇಟ್ಟುಕೊಂಡಿರುತ್ತಾರೆ.

ತುಂಗಭದ್ರ ನದಿಯ ದಂಡೆಯ ಮೇಲೆ ವಿರಾಜಿಸುವ ಈ ಕ್ಷೇತ್ರಕ್ಕೆ ಶತಮಾನಗಳ ಚರಿತ್ರೆಯಿದೆ. ಹಿಲಿಗೆಮ್ಮನ ವಾಸಸ್ಥಳವಾಗಿರುವುದರಿಂದ ಹುಲಿಗಿ ಗ್ರಾಮವು ಜನಪದರಿಗೆ ಒಂದು ಪುಣ್ಯಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಹುಲಿಗೆಮ್ಮನ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಸೋಮೇಶ್ವರನ ದೇವಸ್ಥಾನವಿದೆ. ಈ ಸೋಮೇಶ್ವರ ದೇವಸ್ಥಾನದಲ್ಲಿ ಚಾಲುಕ್ಯರು ಕೆತ್ತಿಸಿದ ಒಂದು ಶಾಸನವಿದೆ. ಶಾಸನದ ಉಲ್ಲೇಖನ ಪ್ರಕಾರ ಚೌಡಿಭಟ್ಟ ಎಂಬುವರು ತುಂಗಭದ್ರೆಯ ನೀರನ್ನು ಗ್ರಾಮ ನಿವಾಸಿಗಳ ಸಹಕಾರದಿಂದ ನದಿಗೆ ಅಡ್ದಗೋಡೆ ಕಟ್ಟಿ, ಕಾಲುವೆ ತೋಡಿ ನೀರಾವರಿಗೆ ವ್ಯವಸ್ಥೆ ಮಾಡಿದರು. ಅದರಿಂದಾಗಿ ಅಲ್ಲಿಯ ಗ್ರಾಮನಿವಾಸಿಗಳ ವ್ಯವಸಾಯಕ್ಕೆ ಅನುಕೂಲವಾಯಿತು. ಇಲ್ಲಿ ತುಂಗಭದ್ರಾ ನದಿಯು ಉತ್ತರಾಭಿಮುಖವಾಗಿ ಹರಿಯುತ್ತದೆ. ಈ ಕಾರ್ಯಕ್ಕಾಗಿ ಚಾಲುಕ್ಯಾ ವಿಕ್ರಮ ಶಕೆ ೧೩ರಲ್ಲಿ, ಅಂದಿನ ಆಳರಸರು ಚೌಡಿಭಟ್ಟನಿಗೆ ದತ್ತಿಗಳನ್ನು ನೀಡಿದರು ಇದನ್ನು ಕುರಿತು ಶಾಸನವು ಹೇಳುತ್ತದೆ. ಇದರ ಪ್ರಕಾರ ಸುಮಾರು ಕ್ರಿ. ಶ. ೧೨ನೆಯ ಶತಮಾನದಲ್ಲಿಯೇ ಹುಲಿಗಿ ಕ್ಷೇತ್ರದಲ್ಲಿ ಬೇಸಾಯ ಚೆನ್ನಾಗಿ ನಡೆಯುತ್ತಿತ್ತು ಎಂಬುದನ್ನು ಗಮನಿಸಬಹುದು.

ಹುಲಿಗೆಮ್ಮ ದೇವಸ್ಥಾನವು ದಕ್ಷಿಣಾಭಿಮುಖವಾಗಿದ್ದು, ಗರ್ಭಗೃಹ ಹಾಗೂ ಸುಖನಾಸಿ ಮಂಟಪವಿದೆ. ಹುಲಿಗೆಮ್ಮನ ದೇವಸ್ಥಾನಕ್ಕೆ ಸುತ್ತಲೂ ಪೌಳಿಯಿದ್ದು ಪೌಳಿಯ ಒಳಗಡೆ ಗರುಡಗಂಭ, ಹರಕೆಕಂಬ, ಪರುಶುರಾಮನ ದೇವಸ್ಥಾನ, ಮುದ್ದಮ್ಮನ ದೇವಸ್ಥಾನ, ಮಾತಂಗಿ ದೇವಸ್ಥಾನಗಳಿವೆ. ಹುಲಿಗೆಮ್ಮನ ದೇವಸ್ಥಾನಕ್ಕೆ ಸುಮಾರು ಹತ್ತು ಅಡಿ ಗರ್ಭಗುಡಿ ಇದ್ದು ಮೇಲೆ ಶಿಲೆಯ ಚೌಕಟ್ಟು ಇದೆ. ಹುಲಿಗೆಮ್ಮನ ಮೂಲ ಮೂರ್ತಿಯು ಒಂದು ದುಂಡಾದ ಕಲ್ಪಿನ ಶಿಲೆಯಂತೆ ಕಂಡುಬರುತ್ತಿದೆ. ಎರಡೂ ಕಣ್ಣುಗಳಲ್ಲಿ ಸಾಲಿಗ್ರಾಮಗಳಿವೆ. ಮುಖವನ್ನು ಅಲಂಕಾರಗೊಳಿಸಿದಾಗ ಮೀಸೆ, ಬಾಯಿ, ಕಿರೀಟ ಇತ್ಯಾದಿಗಳನ್ನು ಇಂದಿಗೂ ಹಾಕುತ್ತಾರೆ. ಗರ್ಭಗುಡಿಯ ಒಳಗಡೆ ನಾಗಜೋಗಿ ಮತ್ತು ಬಸವ ಜೋಗಿಯ ಕಲ್ಲಿನ ಮೂರ್ತಿಗಳಿವೆ.

ಸೋಮೇಶ್ವರ ಗುಡಿಯ ಸ್ಪಲ್ಪ ಮುಂದಕ್ಕೆ ಹುಲಿಗೆಮ್ಮನ ಪಾದಗಟ್ಟೆ ಇದೆ. ಈ ಪಾದಗಟ್ಟೆ ನದಿಯ ಒಂದು ದಡದಲ್ಲಿದ್ದ್ದು ಇನ್ನೊಂದು ಪಾದಗಟ್ಟೆಯು ನದಿಯ ಇನ್ನೊಂದು ದಡ ಅಂದರೆ ಹೊಸೂರಿನಲ್ಲಿದೆ. ಈ ಎರಡು ಪಾದಗಟ್ಟೆಗಳು ಹೋಸೂರಮ್ಮ ಮತ್ತು ಹುಲಿಗೆಮ್ಮ ಇಬ್ಬರೂ ಅಕ್ಕತಂಗಿಯರು ಎಂಬುದಕ್ಕೆ ಜನಪದರು ಕೊಡುವ ಸಾಕ್ಷಿಗಳಾಗಿವೆ. ಹುಲಿಗೆಮ್ಮ ಮೊದಲು ಹೋಸೂರಿನಲ್ಲಿ ವಾಸವಾಗಿದ್ದಳು. ನಂತರ ಹೊಸೂರನ್ನು ಬಿಟ್ಟು ಹುಲಿಗಿಯಲ್ಲಿ ವಾಸವಾದಳು ಎಂಬುದಕ್ಕೆ ಮೌಖಿಕ ಸಾಹಿತ್ಯದ ಜನಪದ ಕಥೆ ಮತ್ತು ಐತಿಹ್ಯಗಳು ಭಾಗದಲ್ಲಿರುವ ಐದನೆಯ ಐತಿಹ್ಯವು ನಮಗೆ ಸ್ಪಷ್ಟೀಕರಣ ಕೊಡುತ್ತದೆ. ಹಾಗೆ ಹುಲಿಗೆಮ್ಮ ಹೊಸೂರಿನಿಂದ ಹುಲಿಗಿಗೆ ಬರುವಾಗ ಇಟ್ಟಂತಹ ಹೆಜ್ಜೆಗಳೇ ನದಿಯ ಎರಡು ದಡದಲ್ಲಿರುವ ಪಾದಗಟ್ಟೆಗಳು. ಈ ಎರಡು ಪಾದಗಟ್ಟೆಗಳು ಈಗ ಹೊಸೂರು ಮತ್ತು ಹುಲಿಗಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಎರಡು ಕೊನೆಯಲ್ಲಿವೆ.

ಹೊಸೂರು

ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮವು ಹೊಸೂರಮ್ಮನ ಕ್ಷೇತ್ರ. ಹೊಸಪೇಟೆಯಿಂದ ಸುಮಾರು ನಾಲ್ಕೈದು ಕಿ.ಮೀ. ದೂರದಲ್ಲಿರುವ ಹೊಸೂರಿಗೆ ಮೊದಲು ಹೊನ್ನ ಹೊಸೂರು ಎಂದು ಕರೆಯುತ್ತಿದ್ದರಂತೆ. ಇದಕ್ಕೆ ಬಹಳ ಹಿಂದಿನಿಂದ ‘ಹೊಸೂರು ಮಾಗಾಣಿ’ ಎಂದು ಸಹ ಕರೆಯುವರು. ವಿಜಯನಗರ ಅರಸರ ಸಾಮ್ರಾಜ್ಯಕ್ಕೆ ಸೇರಿದ ಶ್ರೀ ಹೊಸೂರಮ್ಮ ದೇಗುಲ. ಹೊಸೂರಮ್ಮ ತುಂಗಭದ್ರಾ ನದಿಯ ಬಲದಂಡೆಯಲ್ಲಿರುವ ಹೊಸೂರಿನ ದೇವತೆ. ಹೊಸೂರು ಗ್ರಾಮವು ವಿಜಯನಗರ ಕಾಲದಿಂದಲೂ ಶಾಸನಗಳಲ್ಲಿ ಹೊಸೂರು ಎಂದು ಉಲ್ಲೇಖಗೊಂಡಿದೆ. ಸ್ಥಳೀಯರು ಇದು ಹೊನ್ನಿನ ಹೊಸೂರು ಎಂದು ತಿಳಿಸುತ್ತಾರೆ. ತುಂಗಭದ್ರಾ ನದಿಗೆ ತಾಕಿದಂತೆ ಹಳೇ ವಸತಿ ಇದ್ದು ಅಲ್ಲಿನ ಪಾಳು ಬಿದ್ದ ದೇವಾಲಯಗಳು ಈಗಲೂ ಕಂಡು ಬರುತ್ತವೆ. ಇದರ ಪೂರ್ವದ ಹೆಸರು ತಿಳಿದು ಬರುವುದಿಲ್ಲ. ವಿಜಯನಗರ ಕಾಲದಿಂದಲೂ ಇದರ ಸ್ಥಳ ನಾಮದಲ್ಲಿ ಒಂದೇ ರೂಪ ಕಂಡು ಬರುತ್ತದೆ. ವಿಜಯನಗರ ಅರಸರ ಕಾಲದಲ್ಲಿ ದೇವತೆಗೆ ಅಷ್ಟು ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ಕೇವಲ ಗರ್ಭಗುಡಿಯೊಂದು ಇತ್ತು. ದೇವತೆಗೆ ಆಸ್ತಿ ಕೂಡ ಇರಲಿಲ್ಲ.

ಹೊಸೂರಮ್ಮ ದೇವಾಲಯವು ಉತ್ತಾರಭಿಮುಖವಾಗಿದೆ. ಈ ದೇವತೆಗೆ ಕೆಲವು ಉಪಸ್ಥಾನ ದೇವತೆಗಳಿವೆ. ಅವುಗಳೆಂದರೆ, ಮೈಲಾರಲಿಂಗಸ್ವಾಮಿ ಗುಡಿ, ಗಣೇಶನ ವಿಗ್ರಹ, ಮತ್ತು ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಮಾತಂಗೇಶ್ವರನ ಗುಡಿ ಇದೆ. ದಕ್ಷಿಣ ಭಾಗದಲ್ಲಿ ಜಮದಗ್ನೇಶ್ವರನ ಗುಡಿಯಿದೆ. ಇದರಲ್ಲಿ ಶಿವಲಿಂಗ ಮತ್ತು ಅಕ್ಷಮಾಲೆಗಳನ್ನು ಧರಿಸಿದ ಒಂದು ಮೂರ್ತಿಯೂ, ದುರ್ಗೆ ಒಂದು ಬಿಂಬವೂ ಇದೆ. ಇವೆರಡು ಶಿಲಾ ಮೂರ್ತಿಗಳು ಇವುಗಳೆದುರು ಶಿವಲಿಂಗವು ಸ್ಥಾಪಿತವಾಗಿದೆ. ಪಶ್ವಿಮ ಭಾಗದಲ್ಲಿ ‘ತಾಯಿ ಮುದ್ದಮ್ಮನ’ ದೇವತೆ ಇದೆ. ಹತ್ತಡಿ ಎತ್ತರದ ನಾಗನ ಸುರಳಿಹಾಕಿ ನಿಂತ ಶಿಲ್ಪಿವಿದೆ. ಪಶ್ಚಿಮ ಭಾಗದ ಇನ್ನೊಂದು ಗುಡಿಯೆಂದರೆ, ಆಂಜನೇಯ’ ನದು, ಹೊಸೂರಿಗೆ ಸಂಬಂಧಿಸಿದ ಇನ್ನಿತರ ಗುಡಿಗಳಿಗೆ. ಶ್ರೀ ದುರ್ಗದ ಅಂಜನೇಯ ಸ್ವಾಮಿ ಗುಡಿ (ಗ್ರಾಮಕ್ಕೆ ಹೋಗುವ ದಾರಿಯಲ್ಲಿ), ಊರಮ್ಮನ ದೇವಾಲಯ (ಗ್ರಾಮದ ಹೊರಗಡೆ), ಶ್ರೀ ಪವಾಡದ ಆಂಜನೇಯ ಸ್ವಾಮಿ ಗುಡಿ (ನದಿಗೆ ಹೋಗುವದಾರಿ) ಇದೆ.

ಹೊಸೂರಮ್ಮ ದೇವಸ್ಥಾನಕ್ಕೆ ಸುಮಾರು ಹತ್ತು ಅಡಿ ಗರ್ಭಗುಡಿ ಇದ್ದು ಮೇಲೆ ಶಿಲೆಯ ಚೌಕಟ್ಟಿದೆ .ಗರ್ಭಗೃಹದ ಎದುರು ಕಿರಿದಾದ ಸುಖನಾಸಿ ಇದೆ. ಅದರ ಎದುರೇ ನವರಂಗವಿದೆ. ಕ್ರಿ. ಶ. ೧೬ನೇ ಶತಮಾನಕ್ಕೆ ಸೇರಿಸಬಹುದಾದ ನಾಲ್ಕು ಕಗ್ಗಲ್ಲಿನ ಸ್ಥಂಭಗಳಿವೆ. ನವರಂಗದ ಬಲ ಭಾಗದಲ್ಲಿ ಗಣೇಶನ ಬಿಂಬವೂ, ಎರಡು ಪಂಚಲೋಹದ ಮೂರ್ತಿಗಳೂ ಇದ್ದು, ಒಂದು ಪರಶುರಾಮನ ವಿಗ್ರಹ, ಇನ್ನೊಂದು ದುರ್ಗಾದೇವಿ ವಿಗ್ರಹವಿದೆ. ಈ ವಿಹ್ರಹಗಳು ಸುಮಾರು ೧೭ನೇ ಶತಮಾನದವುಗಳಾಗಿರಬಹುದು. ನವರಂಗದ ಹೊರಗಡೆ ಇರುವ ಮಂಟಪ ದ್ವಾರದ ಎರಡು ಬದಿಗೂ ಆಳೆತ್ತರದ ಶಿಲೆಯ ದ್ವಾರಪಾಲಕ ಮೂರ್ತಿಗಳಿವೆ. ಇವು ೧೬ನೇ ಶತಮಾನದವುಗಳಾಗಿರಬಹುದು. ಮಂಟಪದ ಎದುರು ಬಾಗದಲ್ಲಿ ಎರಡು ಸಾಲು ಶಿಲಾಸ್ತಂಭಗಳಿವೆ. ಆವರಿಸಲ್ಪಟ್ಟ ಕಲ್ಲುಚಪ್ಪರವಿದೆ. ಇದರ ನಿರ್ಮಾಣವು ಸ್ಥಾನಿಕರಿಂದ ಕ್ರಿ. ಶ. ೧೬ನೇ ಶತಮಾನದಲ್ಲಾಯಿತೆಂದು ಒಂದು ಶಿಲಾಸ್ತಂಭದಲ್ಲಿರುವ ಶಾಸನದಿಂದ ತಿಳಿಯಬಹುದು.

ಹೊಸೂರಮ್ಮ ದೇವಾಲಯದಲ್ಲಿ ವಿಗ್ರಹಗಳ ರೂಪದಲ್ಲಿರುವ ದೇವಿಗೆ ತ್ರಿಶೂಲ ಡಮರು, ಖಡ್ಗ ಮತ್ತು ಪಾನ ಪಾತ್ರೆಗಳಿವೆ. ದೇವಿಯ ಮೂಲ ರೂಪ ಪ್ರಾಚೀನ ಪದ್ಧತಿಗನುಸಾರವಾಗಿದೆ. ಈ ದೇವಾಲಯವು ಒಂದು ಸಹಸ್ರ ವರ್ಷಗಳಷ್ಟಾದರೂ ಹಳೆಯಕಾಲದ್ದೆನ್ನಬಹುದು. ದೇವಾಲಯದ ಮೂಲ ರಚನೆ ತೀರಾ ವಿಭಿನ್ನವಾಗಿದ್ದಿರಬಹುದು. ಈಗಿನ ಗರ್ಭಗೃಹದಿಂದಾರಂಭವಾಗಿ ನವರಂಗದ ತನಕ ವಿಜಯನಗರ ಕಾಲದಲ್ಲಿ ಪುನರ್ ನಿರ್ಮಾಣವಾಗಿದ್ದಿರಬೇಕು. ಇದರ ರಚನೆ ಪಾಳೆಯಗಾರರ ಕಾಲದ (ನಾಯಕರು) ನಿರ್ಮಾಣವೆಂಬುವುದು ವಿದಿತವಾಗುತ್ತದೆ (ಹರಪ್ಪನಹಳ್ಳಿಯ ಸೋಮ ಶೇಖರ ನಾಯಕ) (ಪಿ. ಗುರುರಾಜಭಟ್‌ ೧೯೭೬ : ೬). ದೇವಾಲಯದ ಗೋಪುರದಲ್ಲಿರುವ ೧೦ ಅಡಿ ಎತ್ತರದ ದ್ವಿಬಾಹುಗಣೇಶ ಮೂರ್ತಿಯು ಈ ಸ್ಥಳಕ್ಕೆ ಸಂಬಂಧಿಸಿದುದಾದರೆ, ಅದು ಈ ಕ್ಷೇತ್ರದ ಪ್ರಾಚೀನತೆಯನ್ನು ಸ್ಪಷ್ಟಪಡಿಸಬಲ್ಲದು.

ಇಷ್ಟೆಲ್ಲಾ ಪಾಚೀನತೆಯನ್ನು ಹೊಂದಿರುವ ದೇವಾಲಯದಲ್ಲಿ ಶಾಸನಗಳು ಸಹ ಇವೆ. ದೇವಾಲಯದಲ್ಲಿನ ಕಲ್ಲಿನ ಚಪ್ಪಡಿ ಮಂಟಪದ ಬಲಭಾಗಕ್ಕೆ ಇರುವ ದ್ವಾರಪಾಲಕ ವಿಗ್ರಹದ ಪಕ್ಕ ಇರುವ ಕಲ್ಲು ಚಪ್ಪಡಿಯ ಮೇಲೆ ಇರುವ ಶಾಸನವು ಹೊಸೂರಿನ ಮಹಾಮಾಯಿ (ಹೊಸೂರಮ್ಮ) ದೇವಿಯ ಸೇವೆಗಾಗಿ ಬ್ರಾಹ್ಮಣನಿಗೆ ಚಿತ್ತವಾಡ್ಗಿ ಸೀಮೆಯ ಕೆಲವು ಗ್ರಾಮಗಳಲ್ಲಿ ಭೂಮಿಯನ್ನು ಮಾದಿನಾಯಕನು ದತ್ತಿಯಾಗಿ ನೀಡಿದ್ದಾನೆಂದು ತಿಳಿಸುತ್ತದೆ. ದೇವಾಲಯದ ಮುಖ ಮಂಟಪದ ಕಲ್ಲು ಚಪ್ಪಡಿಯ ಮೇಲೆ ಶಾಸನವಿದೆ. ಕ್ರಿ. ಶ. ೧೫೧೩ ರ ಹೊಸೂರಿನ ಹೊಸೂರಮ್ಮ ದೇವಾಲಯದಲ್ಲಿರುವ ಆ ಶಾಸನವು ದೇವಿ ಎಕ್ಕನಾಥೆ ಮಹಾಮಾಯಿ (ಹೊಸೂರಮ್ಮ)ಯನ್ನು ಉಲ್ಲೇಖಿಸಿದೆ. ದೇವಿ ಎಕ್ಕನಾಥಗೆ ಗೌರವಣ್ಣ ನಾಯಕನ ಮಗ ಬಸಪ್ಪ ಮತ್ತು ಉಪಪ್ರಧಾನ ಸೋಮರಸನು ಕೃಷ್ಣ ರಾಯನ ಪರವಾಗಿ ದತ್ತಿಬಿಟ್ಟ ಬಗ್ಗೆ ತಿಳಿಸುತ್ತದೆ. ಅದೇ ಮಂಟಪದ ಕಂಬದ ಮೇಲ್ಭಾಗದಲ್ಲಿರುವ ಶಾಸನದಲ್ಲಿ ಕೃಷ್ಣ ರಾಯನು ದೇವಾಲಯವನ್ನು ಪುನರ್ ನಿರ್ಮಿಸಲು ಭೂದಾನ ಮಾಡಿದುದರ ಬಗೆಗೆ ಇದೆ. ಅದೇ ಕಂದಲ್ಲಿರುವ ಇನ್ನೊಂದು ಶಾಸನವು ‘ಹೊಸೂರಿನ ಮಹಾಮಾಯಿ ದೇವಸ್ಥಾನದ ಸ್ಥಾನಿಕನು ದೇವಿಯ ಸಿಂಹವಾಹನಕ್ಕೆ ಅಲಂಕಾರ ಮಾಡಲು ವಿಜಯನಗರ ಕಟಕಮ್ ಮಲ್ಲಯ್ಯನಿಗೆ ಭೂಮಿಯನ್ನು ನೀಡುತ್ತಾನೆ.’ ಎಂಬುದರ ಬಗೆಗೆ ಇದೆ.

ಹೊಸೂರು ಗ್ರಾಮಕ್ಕೆ ಹೊಸಪೇಟೆಯಿಂದ ನಿಯಮಿತ ಅವಧಿಗೊಮ್ಮೆ ಬಸ್ಸಿನ ಸೌಕರ್ಯವಿದೆ. ಹೊಸೂರಿನಲ್ಲಿ ವಾಸಿಸುವವರು ಮೂಲತಹ ಹೊಸಪೇಟೆ ಮತ್ತು ಸುತ್ತ ಮುತ್ತಲಿನ ಗ್ರಾಮದವರು. ದೈನಂದಿನ ತಮ್ಮ ಚಟುವಟಿಕೆಗಳಿಗೆ ಹೊಸೂರಿನವರು ಹೊಸಪೇಟೆಯನ್ನು ಆಶ್ರಯಿಸಿದ್ದಾರೆ. ಹೊಸೂರಿನ ಸುತ್ತಲೂ ಗದ್ದೆಗಳಿದ್ದು ನಿಸರ್ಗದ ಸೌಂದರ್ಯವನ್ನು ಪಡೆದುಕೊಂಡಿದೆ. ಹೊಸೂರಮ್ಮನಿಗೆ ಕರ್ನಾಟಕದ ನಾನಾ ಕಡೆ ಮತ್ತು ಬೇರೆ ರಾಜ್ಯಗಳಲ್ಲಿ ಭಕ್ತರಿದ್ದರೂ ಸಹ ಸಂಖ್ಯೆಯ ದೃಷ್ಟಿಯಿಂದ ಕಡಿಮೆ ಇದ್ದಾರೆ. ಹೆಚ್ಚಾಗಿ ಹಿಂದುಳಿದ ಮತ್ತು ದಲಿತ ವರ್ಗದ ಜನರು ಭಕ್ತರಾಗಿದ್ದಾರೆ. ಹೊಸೂರಮ್ಮನನ್ನು ಮನೆದೈವವೆಂದು ಸ್ಥಾಪಿಸಿಕೊಂಡವರಿದ್ದಾರೆ.

ಹೊಸೂರಮ್ಮನಿಗೆ ರಾಮಮಹಾರಾಜರು ಮತ್ತು ಸಾಮಂತರು ಜಾಗೀರು ಕೊಟ್ಟಿರುವ ೮೪ ಎಕರೆ ಜಮೀನು (ಮಾನ್ಯೇವು) ಮೊದಲಿನಿಂದಲೂ ಇತ್ತು. ಅದರಲ್ಲಿ ಪವಾಡ ಪುರುಶರಿಗೆ ೧೧ ಎಕರೆ, ಸಾರಂಗದ ಗುರುಗಳಿಗೆ (ಪವಾಡ ಪೂಜಾರರ ಗುರುಗಳು) ೨ ಎಕರೆ, ಚೌರಿ ಹಾಕುವ ಜೋಗಮ್ಮ ನವರಿಗೆ ೩ ಎಕರೆ, ಊರಮ್ಮ ದೇವಸ್ಥಾನದ ಪೂಜಾರಿಗೆ ಹಾಗೂ ಜೇನುಗಾರ (೪ಜನ)ರಿಗೆ ೯ ಎಕರೆ ಹಾಗೂ ಮೇಳದವರಿಗೆ ೯ ಎಕರೆ ಜಮೀನನ್ನು ಹಂಚಲಾಗಿತ್ತು. ಅವು ೧೯೭೪ ರಲ್ಲಿ ಕರ್ನಾಟಕ ಸರಕಾರದ ಉಳುವವನೇ ಭೂ ಒಡೆಯ ಕಾನೂನಿನ ಮೇರೆಗೆ ಬೇರೆ ಬೇರೆ ಜನರಿಗೆ ಹೋದವು. ಈಗ ಕೇವಲ ಅರ್ಧ ಎಕರೆ ಮಾತ್ರ ಹೊಸೂರಮ್ಮನಿಗೆ ಉಳಿದಿದೆ. ಎಂದು ದೇವಸ್ಥಾನದ ಪೂಜಾರಿಗಳು ಹೇಳುತ್ತಾರೆ.