ಸದ್ದು ಸದ್ದುಲೋ ಹನುಮ, ಗದ್ದಲು ಬಹಳ ಮಾಡಬೇಡ

ವಿಷ್ಣು ಅವತಾರಾದಾಗ ರಾಮನ ದೂತ ಅಂಜನೇಯ, ಮಾರುತಿ ವೇಷ ಆದಾಗ, ಬಳೆ ತೆಗೆದುಕೊಂಡು ಹೋಗುತ್ತಾನೆ. ಹೋಗುತ್ತಾ, ಹೋಗುತ್ತಾ ಬಳೆ ಮಾರಿಕೊಳ್ಳುತ್ತಾ ಹೋಗುತ್ತಾ , ಇರುವಾಗ ಒಂದು ಸಣ್ಣ ಹುಡುಗಿ ಬರುತ್ತಾಳೆ. ಏನಪ್ಪಾ ಬಳೆಗಾರಣ್ಣ ಬಳೆ ಹಾಕುತ್ತೀಯಾ ಏನಪ್ಪಾ ಎಂದು ಕೇಳಿದಳು. ಹಾಕುತ್ತೇನೆ. ಬಾರಮ್ಮಿ ಬಳೆ ಹಾಕುತ್ತೇನೆ ಬಾ ಎಂದು ಹತ್ತಿರಕ್ಕೆ ಕರೆದ. ಹತ್ತಿರಕ್ಕೆ ಬಂದಳು. ಹತ್ತಿರಕ್ಕೆ ಬಂದ ತಕ್ಷಣ ಒಳ್ಳೆಯ ಹರೆಯದ ಸುಂದರಿಯಾಗಿ ಕಂಡಳು. ಈಗ ನಾನು ನೋಡಿದೆ ಹುಡುಗಿಯಾಗಿದ್ದಳು. ತಿರುಗಿ ನನ್ನ ಹತ್ತಿರಕ್ಕೆ ಬಂದ ಮೇಲೆ ಎಷ್ಟು ಎತ್ತರ ಕಾಣುತ್ತಾಳಲ್ಲ, ಎಂದು ಆಶ್ಚರ್ಯವಾಗಿ ತಾರಮ್ಮ ಕೈ ಎಂದನು, ಕೈಕೊಟ್ಟಳು ಒಂದು ಕೈ ಕೊಡು ಎಂದರೆ, ಒಂಭತ್ತು ಕೈ ತೋರಿಸುತ್ತಾಳೆ ಒಂದು ಕೈ ಕೊಡಮ್ಮ ಆಳತೆ ನೋಡುತ್ತೇನೆ ಎಂದು ಕೇಳಿದರೆ, ಒಂಭತ್ತು ಕೈ ಕೊಡುತ್ತಾಳೆ, ಅಬ್ಬಬ್ಬಾ ನಾನು ಹೆದರಿಬಿಟ್ಟೆನಲ್ಲಾ, ಯಾರು ನೀನು ಎಂದು ಕೇಳಿದನು.

“ಸದ್ದು ಸದ್ದುಲೋ ಹನುಮ, ಗದ್ದಲು ಬಹಳ ಮಾಡಬೇಡ” ಇದ್ದಲೇ ನಿನ್ನ ಇರಗೊಡದೆ ಎಂದಳು. ನಾನು ಇದ್ದಲೇ ನೀನು ಹೇಗೆ ಇರಗೊಡವೆ ಎಂದು ಕೇಳುತ್ತಾನೆ ಬಳೆಗಾರ. ಆಂಜನೇಯ, ನೀನ ಆಂಜನೇಯನಾಗಿ ಊರೂರಿಗೆ, ಹಳ್ಳಿ ಹಳ್ಳಿಗೆ ಇರು ನಾನು ಹುಲಿಗೆಮ್ಮ , ನಾನು ಜೋಗುತಿಯಾಗಿ ಬರುತ್ತೇನೆ. ನೀನು ಯಾವ ಊರಾಗ ಇರುತ್ತೀಯೋ ನಾನು ಆ ಊರಿಗೆ ಬರುತ್ತೇನೆ ಎಂದು ಹೇಳುತ್ತಾಳೆ, ಇಬ್ಬರು ವಚನ ಕೊಡುತ್ತಾರೆ. ಆತ ಆಂಜನೇಯನ ರೂಪ, ಈಕೆ ಹುಲಿಗೆಮ್ಮನ ರೂಪ, ಹೋಗಪ್ಪಾ ಆಂಜನೇಯಾ ಹುಲಿಗೆಮ್ಮ ಬರುತ್ತಾಳೆ ಎಂದು ಮುಂದಿನ ಊರಾಗ ಹೇಳು ಹೋಗು, ಹುಲಿಗೆಮ್ಮ ಬರುತ್ತಾಳೆ ವರ್ಷಕ್ಕೆ ಐದು ಬಳೆ ಕೊಡಿರಿ ಎಂದು ಹೇಳು ಹೋಗಪ್ಪಾ ಎಂದು ಹುಲಿಗೆಮ್ಮ ಹೇಳುತ್ತಾಳೆ. ಹಾಗಾಗಿ ಹುಲಿಗೆಮ್ಮನಿಗೆ ಹಸಿರು ಬಳೆ ಇಷ್ಟ, ಹುಲಿಗೆಮ್ಮ ಆದಿಶಕ್ತಿ.

ಊರು ಹೊಸೂರು, ಇಲ್ಲಿ ತಾಯಿ ಮುದ್ದಮ್ಮ ನಿದ್ದಳು. ಆಕೆಗೆ ಇಬ್ಬರು ಮಕ್ಕಳು. ಹುಲಿಗೆಮ್ಮ ಮತ್ತು ಹೊಸೂರಮ್ಮನೆಂದು. ಇವರಿಬ್ಬರು ಅಕ್ಕ ತಂಗಿಯರು. ಹುಲಿಗೆಮ್ಮನಿಗೆ ಕೊಟ್ಟದ್ದು ಮಂದಿ ಪಾಲಾಗುತ್ತಿತ್ತು. ಹೊಸೂರಮ್ಮನಿಗೆ ಕೊಟ್ಟದ್ದು ಹಾಗೆಯೇ ಇರುತಿತ್ತು. ಹುಲಿಗೆಮ್ಮ ಚಿಕ್ಕ ಹುಡುಗಿ ಇದ್ದಾಗಿನಿಂದ ಆಕೆಗೆ ಜನ ಬಳಕೆ ಜಾಸ್ತಿ. ಆದರೆ ಹೊಸೂರಮ್ಮನಿಗೆ ಜನ ಬಳಕೆ ಇಲ್ಲ. ಹೊಸೂರಮ್ಮ ಚಿಕ್ಕ ಹುಡುಗಿ ಇದ್ದಾಗಿನಿಂದ ಆಕೆ ಜನ ಬಳಕೆ ಇಲ್ಲ ತನ್ನದೇನೋ ತಾನೇನೋ.

ಹುಲಿಗೆಮ್ಮನಿಗೆ ತಾಯಿ ಹಾಗೂ ಯಾರಾದರೂ, ಏನಾದರೂ ಕೊಟ್ಟರೆ ಆಕೆ ಮಂದಿಗೆ ಕೊಟ್ಟು ಬರಕೈಯಲ್ಲಿ ಇರುತ್ತಿದ್ದಳು. ಹೊಸೂರಮ್ಮನಿಗೆ ಏನಾದರೂ ಕೊಟ್ಟರೆ ಅದನ್ನು ಆಕೆ ಯಾರಿಗೂ ಕೊಡುತ್ತಿರಲಿಲ್ಲ. ಒಂದು ಸಲ ಹೊಸ ಸೀರೆಯನ್ನು ಹುಲಿಗೆಮ್ಮನಿಗೆ ಹಾಗೂ ಹೊಸೂರಮ್ಮನಿಗೆ ತಾಯಿ ಮುದ್ದಮ್ಮ ಉಡಿಸಿದಳು. ಉಡಿಸಿ ಕಳಿಸಿದಳು. ಹುಲಿಗೆಮ್ಮ ತಾನು ಉಟ್ಟ ಸೀರೆಯನ್ನು ಮಂದಿಗೆ ಕೊಟ್ಟಳು. ಹೊಸೂರಮ್ಮ ಆ ಸೀರೆಯನ್ನು ಯಾರಿಗೂ ಕೊಡಲಿಲ್ಲ. ಮುದ್ದಮ್ಮ ಕೇಳಿದಳು, ನಿನ್ನ ತಂಗಿಯ ಮೇಲೆ ಸೀರೆ ಇದೆ ನಿನ್ನ ಮೇಲೆ ಏಕೆ ಸೀರೆ ಇಲ್ಲವೆಂದು ಕೇಳಿದಳು. ನೀನು ಮನೆಯಲ್ಲಿ ಇರುತಕ್ಕವಳಲ್ಲವೆಂದು ತಾಯಿ ಮುದ್ದಮ್ಮ ಹುಲಿಗೆಮ್ಮನಿಗೆ ಸಿಟ್ಟಿನಿಂದ ಹೇಳುತ್ತಾಳೆ. ಸೀರೆ ಮಂದಿಗೆ ಕೊಟ್ಟಮೇಲೆ ನೀನು ಮನೆಯಲ್ಲಿ ಇರುತಕ್ಕವಳಲ್ಲವೆಂದು ಮುದ್ದಮ್ಮ ಹೇಳುತ್ತಾಳೆ. ಮುದ್ದಮ್ಮ ಹುಲಿಗೆಮ್ಮನಿಗೆ ಮನೆ ಬಿಟ್ಟು ಹೋಗು ಎಂದು ಹೇಳುತ್ತಾಳೆ. ಹುಲಿಗೆಮ್ಮ ಹೊಸೂರಿನಿಂದ ಹುಲಿಗೆಗೆ ಹಾರುತ್ತಾಳೆ. (ಹೊಸೂರಿನಲ್ಲಿ ಇರುವ ಪಾದಗಟ್ಟಿಯಿಂದ ಹುಲಿಗೆ ಪೂಲ್‌ನ ಕೆಳಗೆ ಪಾದಗಟ್ಟಿ ಇದೆ. ಅಲ್ಲಿಂದ ಆ ಕಡೆ ಹಾರಿದ್ದಾಳೆ. ಎರಡು ಕಡೆ ಪಾದಗಟ್ಟಿ ಇದೆ).

ಹುಲಿಗೆಮ್ಮನ ಜಾತ್ರೆ ಮೊದಲು ಹೊಸೂರಮ್ಮನ ಜಾತ್ರೆ ನಂತರ ನಡೆಯುತ್ತದೆ. ಹುಣ್ಣಿಮೆಗೆ ಹುಲಿಗೆಮ್ಮನಿಗೆ ಕಂಕಣ ಕಟ್ಟುತ್ತಾರೆ. ಅಮವಾಸ್ಯೆಗೆ ಹೊಸೂರಮ್ಮನಿಗೆ ಕಂಕಣ ಕಟ್ಟುತ್ತಾರೆ. ಹುಲಿಗೆಮ್ಮ ಜನರಿದ್ದಲ್ಲಿ ಇರುವಾಕೆ. ಏನು ಕೊಟ್ಟರೂ ಮಂದಿಗೆ ದಾನ ಮಾಡುವ ಬುದ್ಧಿ ಹುಲಿಗೆಮ್ಮನದು. ಹುಲಿಗೆಮ್ಮನಿಗೆ ಜನರೆಂದರೆ ತುಂಬ ಇಷ್ಟ. ಹುಲಿಗೆಮ್ಮ ನನಗೆ ಜನಬೇಕು ಎಂದು ಹಾರಿಬಂದಳು ಹೊಸೂರಿನಿಂದ. ಹುಲಿಗೆಮ್ಮ ಹೇಳುತ್ತಾಳೆ ಜನ ನನಗೆ ಬೇಕು, ಹೊಸೂರಮ್ಮ ನೀನು ಆಸ್ತಿವಂತೆ ನಿನಗೆ ಆಸ್ತಿ ಇರಲಿ ನನಗೆ ಜನವಿರಲಿ, ಪರಿಷಿ ಇರಲಿ. ನಾನು ದಾನ ಮಾಡುವವಳು ನನಗೆ ಜನಬೇಕು ಎಂದು ಹುಲಿಗೆಮ್ಮ ಹೊಸೂರಿನಿಂದ ಹುಲಿಗಿಗೆ ಬಂದಿದ್ದಾಳೆ ಎಂದು ಕತೆ ಇದೆ.

ಕಾನುಕಾಯನ ಗೋತ್ರಜರಾದ ವೆ. ಬ್ರ. ಶ್ರೀಚೌಡಿಭಟ್ಟ ಎಂಬ ಹೆಸರಿನ ಋತ್ವಿಜರು ಅಂದು ಶ್ರೀಸೋಮೇಶ್ವರ ಲಿಂಗದ ಪೂಜೆ ಮಾಡುತ್ತ ಬಂದಿದ್ದರು. ಸೌ. ಅಂಚಿಕಟ್ಟೆ ಅವರ ಧರ್ಮಪತ್ನಿ. ಪತಿ ಪತ್ನಿಯರಿಬ್ಬರೂ ಶಿವಾಲಯದಲ್ಲಿ ಸೇವೆ ಸಲ್ಲಿಸುತ್ತ ಆದರ್ಶ ಜೀವನ ನಡೆಸುತ್ತಿದ್ದರು. ಗ್ರಾಮ ನಿವಾಸಿಗಳಿಗೆ ಧಾರ್ಮಿಕ ಜೀವನದಲ್ಲಿ ಸದಾಕಾಲವೂ ಸಹಾಯ ಸಹಕಾರಗಳನ್ನೀಯುತ್ತಿದ್ದರಲ್ಲದೇ, ಭಟ್ಟ ದಂಪತಿಗಳು, ಸಮಾಜ ಸೇವೆಯಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದರು. ಗ್ರಾಮ ನಿವಾಸಿಗಳು ಸಹ ಭಟ್ಟರಲ್ಲಿ , ಭಕ್ತಿ ಹಾಗೂ ಗೌರವ ಸಲ್ಲಿಸುವಲ್ಲಿ ಹಿಂದೆ ಇರಲಿಲ್ಲ. ಮಳೆಯ ತುಟಾಗ್ರತೆಯಿಂದಾಗಿ ಈ ಪ್ರದೇಶ ಯಾವಾಗಲೂ ಕೃಷಿಯಲ್ಲಿ ಹಿಂದುಳಿದಿದ್ದಾಗಿತ್ತು. ತುಂಗಭದ್ರೆಯ ನೀರನ್ನು ಕೃಷಿಗೆ ಉಪಯೋಗಿಸಬೇಕೆನ್ನುವ ಯೋಚನೆಯಲ್ಲಿ ಚೌಡಿಭಟ್ಟರು ಸದಾ ಮಗ್ನರಾಗಿರುತ್ತಿದ್ದರು. ಶ್ರೀಯುತರು ಗ್ರಾಮ ನಿವಾಸಿಗಳ ಸಹಕಾರದಿಂದ ನದಿಗೆ ಅಡ್ಡ ಗೋಡೆ ನಿರ್ಮಿಸಿ, ಕಾಲುವೆ ತೋಡಿ ಈ ಪ್ರದೇಶದ ನೀರಾವರಿಗೆ ವ್ಯವಸ್ಥೆಗೊಳಿಸಿದರು. ಈ ಪ್ರದೇಶದ ಜನರ ಅರ್ಥಿಕ ಜೀವನಕ್ಕೆ ಇದೊಂದು ಭದ್ರ ಬುನಾದಿಯಾಯಿತು. ಚಾಲುಕ್ಯ ವಿಕ್ರಮ ಶಕೆ. ೧೩ರಲ್ಲಿ. ಅಂದಿನ ಆಳರಸರು ಚೌಡಿಭಟ್ಟರ ಈ ಘನಕಾರ್ಯಕ್ಕೆ ಮೆಚ್ಚಿ ಅವರಿಗೆ ಕೆಲ ದತ್ತಿಗಳನ್ನು ನೀಡಿದರು. ಈ ಐತಿಹಾಸಿಕ ಘಟನೆಯ ವಿವರವನ್ನು ಸಾರಿ ಹೇಳುವ ಶಿಲಾಶಾಸನವು ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಿಂತಿದೆ.

ಚೌಡಿಭಟ್ಟರ ವಂಶಜರೇ ಆದ ಸೋಮನಾಥ ಭಟ್ಟರು ಅವರ ಪೂರ್ವಜನರಂತೆಯೇ ಧಾರ್ಮಿಕ, ಸಾಮಾಜಿಕ ಪ್ರವೃತ್ತಿಯನ್ನು ಹೊಂದಿ ಈ ಪ್ರದೇಶದಲ್ಲಿ ಘನತೆ ಮೆರೆದವಾರಾಗಿದ್ದರು. ಶ್ರೀ ಸೋಮನಾಥ ಭಟ್ಟರೂ ಸಹ ಶಿವಾರ್ಚನೆ ಮಾಡುತ್ತಿದ್ದರು. ಅಲ್ಲದೆ ಶಕ್ತಿಯ ಆರಾಧಕರೂ ಆಗಿದ್ದರು. ಶಕ್ತಿಯ ಮಹಿಮೆಯನ್ನು ಕುರಿತು ತಮ್ಮ ಆಸ್ತಿಕ ಅನುಯಾಯಿಗಳಿಗೆ ಸದಾ ಉಪದೇಶ ನೀಡುತ್ತಿದ್ದರು. ಭಟ್ಟರ ಉಪದೇಶಾಮೃತದಲ್ಲಿ ವಿಶೇಷ ಶ್ರದ್ಧೆ ಹಾಗೂ ಭಕ್ತಿ ಇರಿಸಿದವರೆಂದರೆ ಇದೇ ಗ್ರಾಮದ ನಿವಾಸಿಗಳಾದ ನಾಗಜೋಗಿ ಮತ್ತು ಬಸವಜೋಗಿ ಎಂಬುವರು. ಇವರೀರ್ವರು ಗಂಗಾಮತಸ್ಥರಿದ್ದು ದೇವಿಯಲ್ಲಿ ಅನನ್ಯ ಭಕ್ತಿ ಹೊಂದಿದವರಾಗಿದ್ದರು. ವೇದಾಂತ ವಿಚಾರಗಳನ್ನು ಹೊಂದಿದ ದೇವಿ ಭಾಗವತದ ಪ್ರಸಂಗಗಳನ್ನು ಸಣ್ಣ ಸಣ್ಣ ಕಥೆಗಳನ್ನಾಗಿ ಅನೇಕ ಉದಾಹರಣೆಗಳೊಂದಿ, ಭಟ್ಟರು ಇವರೀರ್ವರಿಗೂ ತಿಳಿಸಿ ಹೇಳುತ್ತಿದ್ದರು. ನಾಗಜೋಗಿ ಮತ್ತು ಬಸವಜೋಗಿಯವರ ಮನೆಯಲ್ಲಿ ಸವದತ್ತಿಯ ದೇವಿ ಎಲ್ಲಮ್ಮನಿಗೆ ಪೂಜಾದಿಗಳು ಅವರ ಪೂರ್ವಜರಿಂದ ಸಲಿಸಲ್ಪಡುತ್ತಿದ್ದವು. ಪ್ರತಿ ಹುಣ್ಣಿಮೆಗೂ ದೇವಿ ಎಲ್ಲಮ್ಮನ ದರ್ಶನಕ್ಕೆ ಅವರ ಪೂರ್ವಜರು ಸವದತ್ತಿಗೆ ಹೋಗಿ ಬರುತ್ತಿದ್ದಂತೆಯೇ ನಾಗಜೋಗಿ ಬಸವಜೋಗಿಯವರು ಸಹ ಅದೇ ಸಂಪ್ರದ್ರಾಯವನ್ನು ಮುಂದುವರೆಸಿಕೊಂಡು ಬಂದವರಾಗಿದ್ದರು. ಅವರ ಈ ಧಾರ್ಮಿಕ ಸಂಪ್ರಾದಾಯಕ್ಕೆ, ಶ್ರೀದೇವಿ ಎಲ್ಲಮ್ಮನಲ್ಲಿ ಅನನ್ಯ ಭಕ್ತಿಯುಳ್ಳವರಾದ ನಾಗಜೋಗಿ ಬಸವಜೋಗಿಯವರಿಗೆ, ಭಟ್ಟರ ವೇದಾಂತ ಪೂರಿತ ಉಪದೇಶ ಪರಿಪಕ್ವತೆಯಲ್ಲಿ ತಂದಿದುದರಲ್ಲಿ ಸಂಶಯವಿಲ್ಲ. ಅವರ ಭಕ್ತಿಯ ಪರಾಕಾಷ್ಠೆಯ ಫಲವೇ ಶ್ರೀದೇವಿ ಹುಲಿಗೆಮ್ಮನ ಅವತಾರಕ್ಕೆ ಮೂಲ ಕಾರಣವಾಯಿತು.

ಅದೊಂದು ವರ್ಷ ಋತುವಿನ ಕಾಲ. ನಾಗಜೋಗಿ ಮತ್ತು ಬಸವಜೋಗಿ ಈರ್ವರೂ ವಾಡಿಕೆಯಂತೆ ಪೂರ್ಣಿಮೆಯ ದರ್ಶನಕ್ಕಾಗಿ ಎಲ್ಲಮ್ಮನ ಗುಡ್ಡಕೆ ಪ್ರಯಾಣ ಬೆಳೆಸಲು ಉದ್ಯುಕ್ತರಾಗಿ ತಮ್ಮ ಗುರುಗಳಾದ ಸೋಮನಾಥ ಭಟ್ಟರಲ್ಲಿ ಬಂದರು. ಈರ್ವರನ್ನೂ ಸೋಮನಾಥ ಭಟ್ಟರು ಹರಸಿ ಬೀಳ್ಕೊಟ್ಟರು. ಅಂದು ಮಾತ್ರ ಸೋಮನಾಥ ಭಟ್ಟರ ಮುಖದಲ್ಲಿ ಭಯವೂ ಕುತುಹಲವೂ ಅವರಿಸಿರುವುದು ಕಂಡುಬಂದಿತು.

ವಾಹನಗಳ ಸೌಕರ್ಯವೇ ಇಲ್ಲದ ಅಂದಿನ ಕಾಲದಲ್ಲಿ ಪ್ರಯಾಣ ತುಂಬಾ ಕಷ್ಟಕರವೆನಿಸಿದ್ದಿತು. ಶ್ರೀದೇವಿ ಎಲ್ಲಮ್ಮನಲ್ಲಿಯೂ ಭಕ್ತಿ, ನಾಗಜೋಗಿ ಬಸವಜೋಗಿ ಅವರಿಗೆ, ಪ್ರಯಾಣದ ಆಯಾಸವನ್ನು ಹೋಗಲಾಡಿಸುತ್ತಿದ್ದಿತು. ಉಧೋ ಉಧೋ ಎನ್ನುವ ಉದ್ಗಾರ ಮಾತ್ರ ಪ್ರಯಾಣದುದ್ದಕ್ಕೂ ಅವರ ಬಾಯಿಂದ ಹೊರ ಬರುತ್ತಿತ್ತು. ಹೀಗೆಯೇ ದಿನಗಟ್ಟಲೇ ಅವರ ಪ್ರವಾಸ ಸಾಗಿದ್ದಿತು.

ಆಷಾಢ ಶುದ್ಧ ಚತುರ್ದಶಿಯ ಹೊತ್ತಿಗೆ, ಇಬ್ಬರೂ ಭಕ್ತರು ಸವದತ್ತಿಯ ಸಮೀಪಕ್ಕೆ ಬರುವಷ್ಟರಲ್ಲಿ ಮಳೆ ಧಾರಾಕಾರವಾಗಿ ಸುರಿಯತೊಡಗಿತು. ಮಾರನೆಯ ದಿನವೇ ಪೂರ್ಣಿಮೆ, ಪೂರ್ಣೆಮೆಯಂದು ನಾಗಜೋಗಿ ಮತ್ತು ಬಸವಜೋಗಿಯರು ದೇವಿಯ ದರ್ಶನ ಪಡೆದುಕೊಂಡು ಅನ್ನ ಆಹಾರಾದಿಗಳನ್ನು ಸ್ವೀಕರಿಸಬೆಕು. ಮಳೆ ನಿಲ್ಲುವ ಲಕ್ಷಣಗಳು ಕಾಣಬರುತ್ತಿರಲಿಲ್ಲ. ಅವರು ಅಂದುಕೊಂಡಂತೆಯೇ ಮಲಪ್ರಭಾ ನದಿಯು ತುಂಬಿ ಹರಿಯುತ್ತಿದ್ದಿತು. ನದಿಯ ದಡಕ್ಕೆ ಬಂದು ಭಕ್ತರೀರ್ವರೂ ನದಿಯಲ್ಲಿ ಪ್ರವಾಹ ಕಡಿಮೆಯಾಗಲೆಂದು ಕಾಯುತ್ತ ಕುಳಿತರು.

ನದಿಯ ದಡದಲ್ಲಿ ದಟ್ಟವಾಗಿ ಬೆಳೆದ ಕಾಡಿನಲ್ಲಿ ಆ ಘೋರ ಕತ್ತಲೆಯಲ್ಲಿ ಮರದಡಿ ಯೊಂದರಲ್ಲಿ ಓರೆಯಾಗಿ ಕುಳಿತಿದ್ದಾರೆ. ಮಿಂಚಿದಾಗೊಮ್ಮೆ ಆಕಾಶದಲ್ಲಿ ಒತ್ತರಿಕೊಂಡು ಬರುತ್ತಿರುವ ಮೋಡಗಳು ಕಾಣುತ್ತಿವೆ. ದಿಕು ದಿಕ್ಕುಗಳಲ್ಲಿ ಭೋರ್ಗರೆಯುತ್ತಿರುವ ಗುಡುಗಿನ ಶಬ್ಧ: ಒಂದೊಂದು ಸಲ ಸಿಡಿಲಿನ ಶಬ್ಧವೂ ಕೆಳಿಬರುತ್ತಿದೆ. ಈರ್ವರ ಉಟ್ಟ ಬಟ್ಟೆಗಳು ಸಾಕಷ್ಟು ವದ್ದೆಯಾಗಿದೆ. ಎಷ್ಟೇ ದೊಡ್ಡ ಗಾತ್ರದ ಮರದಡಿಯಲ್ಲಿ ಓರೆಯಾಗಿ ಕುಳಿತರೂ ಆ ಅವಿರತ ಮಳೆಯ ಹನಿಗಳಿಂದ ಬಟ್ಟೆಗಳನ್ನು ಒಣದಾಗಿ ಉಳಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಅದು ಆಷಾಢಮಾಸವಿದ್ದುದರಿಂದ ಗಾಳಿಯೂ ಬೀಸುತ್ತಿತ್ತು. ಆ ಗಾಳಿ ಮಳೆಗಳಲ್ಲಿ ಇಬ್ಬರೂ ತತ್ತರಿಸಿ ಹೋಗಿದ್ದಾರೆ. ಮಳೆ ನಿಲ್ಲುವ ಯಾವ ಸೂಚನೆಗಳು ಕಾಣಬರಲಿಲ್ಲ. ಚತುರ್ದಶಿಯ ರಾತ್ರಿ ಕಳೆದು ಪೂರ್ಣಿಮೆಯ ಅರುಣೋದಯವಾಯಿತಾದರೂ ಸೂರ್ಯರಶ್ಮಿಗಳು, ಮೋಡಗಳನ್ನು ಛೇದಿಸಿಕೊಂಡು ಬರಲಾರದಂತೆ ತಡೆಯಲ್ಪಟ್ಟಿದ್ದವು. ಪೂರ್ಣಿಮೆಯ ಹಗಲೆಲ್ಲವೂ ಮಳೆ ಧಾರಕಾರವಾಗಿ ಸುರಿಯುತ್ತಲೇ ಇದ್ದಿತು. ಭಕ್ತಿರೀರ್ವರಿಗೂ ಮಳೆ ಕಡಿಮೆಯಾದೀತೆಂಬ ಆಸೆ. ಆದರೂ ಮಳೆಯ ಪರಿವೇ ಅವರಿಗಿದ್ದಂತಿರಲಿಲ್ಲ. ದೇವಿಯ ದರ್ಶನದ್ದೇ ಅವರ ಬಯಕೆ. ದರ್ಶನವಿಲ್ಲದೆ ಆಹಾರಾದಿಗಳ ಸೇವನೆ ಇಲ್ಲ. ಮಳೆ ನಿಲ್ಲದೇ ಹೊಳೆ ದಾಟುವಂತಿಲ್ಲ. ಚತುರ್ದಶಿ ಮತ್ತೂ ಹುಣ್ಣಿಮೆ, ಹೀಗೆ ಎರಡು ದಿನಗಳಿಂದ ಅವರಿಗೆ ಊಟವಿರಲಿಲ್ಲ. ಹಸಿವಿನ ಬಾಧೆ ಒಂದೆಡೆಯಾದರೆ, ಉಟ್ಟ ಬಟ್ಟೆಗಳ ತೊಯ್ದು ಚಳಿಯ ಬಾಧೆ ಮತ್ತೊಂದೆಡೆಗೆ, ಹೀಗಾಗಿ ಭಕ್ತರೀರ್ವರೂ ತತ್ತರಿಸಿ ಹೋಗಿದ್ದರು. ಅವರಿಗೆ ಇಂತಹ ಪ್ರಸಂಗ ಹಿಂದೆಂದೂ ಒದಗಿ ಬಂದಿರಲಿಲ್ಲ.

ಶ್ರೀದೇವಿಯ ಗುಡ್ಡಕ್ಕೆ ಹೊರಡುವಾಗ, ತಮ್ಮ ಗುರುಗಳಲ್ಲಿ ಆಶೀರ್ವಾದ ಪಡೆಯಲು ಹೋದಾಗ, ಭಯ ಮತ್ತೂ ಕುತೂಹಲಪೂರಿತ ಮುಖಚರ್ಮದ ಕಲ್ಪನೆ ಈಗ ಅವರಿಗೆ ಹೊಳೆಯತೊಡಗಿತು. ಶ್ರೀದೆವಿಯ ದರುಶನ ಪಡೆಯಲು ಈಗ ಯಾರಿಂದಲೂ ಸಹಾಯ ದೊರೆಯುವ ಸಾಧ್ಯತೆಯೇ ಇರಲಿಲ್ಲ. “ಆ ದೇವಿಯೇ ನಮ್ಮನ್ನು ಪಾರು ಮಾಡುವಳೆಂಬ” ಅಚಲ ಶ್ರದ್ಧೆ ಮಾತ್ರ ಅವರಲ್ಲಿ ತುಂಬಿ ತುಳುಕುತ್ತಿದ್ದಿತು.

ಪೂರ್ಣಿಮೆಯ ಸಂಜೆಗೆ ಮಳೆ ನಿಂತಿತಾದರೂ ನದಿಯಲ್ಲಿ ಪ್ರವಾಹ ತಗ್ಗಲಿಲ್ಲ. ಮಳೆಯಲ್ಲಿ ತೊಯ್ದಿದ್ದ ಬಟ್ಟೆಗಳು ಮೈಮೇಲೇಯೇ ಅರ್ಧಬರ್ಧ ಒಣಗಿದ್ದವು. ಕುಳಿತಲ್ಲಿಯೇ ಕಲ್ಲು ಬಂಡೆಯ ಮೇಲೆ ಈರ್ವರೂ ವರಗಿಕೊಂಡಿದ್ದರು. ನಾಲಿಗೆಯ ಮೇಲೆ, ದೇವಿಯ ನಾಮ, ಮನದಲ್ಲಿ ಶ್ರೀದೇವಿಯ ಸುಂದರ ಮೂರ್ತಿಯ ಚಿತ್ರಣ ಲಾಸ್ಯವಾಡುತ್ತಿದ್ದಾಗಲೇ ಅವರಿಗೆ ನಿದ್ರೆಯ ಮಂಪರು ಕವಿಯಿತು.

ನಾಗಜೋಗಿ ಬಸವಜೋಗಿ ಇಬ್ಬರೂ ತದೇಕ ಚಿತ್ತದಿಂದ ದೇವಿಯ ಕಡೆಗೆ ನೋಡುತ್ತಿದ್ದಾರೆ. ದೇವಿಯ ದೃಷ್ಟಿ ಇವರ ಮೇಲೆ ಬೀಳುತ್ತಿಲ್ಲ. ಆರ್ತತೆಯಿಂದ ದೇವಿಯನ್ನು ಕೂಗುತ್ತಿದ್ದಾರೆ. ಇಬ್ಬರ ಮೈಮೇಲೆಯೂ ಪರಿವೆಯೇ ಇಲ್ಲ. ಸೋಮನಾಥಭಟ್ಟರು ಕಾಣಿಸಿಕೊಳ್ಳುತ್ತಾರೆ. ಭಕ್ತರೀರ್ವರೂ ದೇವಿಯ ಅವಕೃಪೆಯನ್ನು ಗುರುಗಳೆದುರು ತೋರಿಕೊಳ್ಳುತಾರೆ. ಶಿಷ್ಯರೀರ್ವರನ್ನೂ ಸಾಂತ್ವನಗೊಳಿಸುತ್ತ ಅವರಿಗೆ ಮಹಿಮೆಯನ್ನು ತಿಳಿಸಿ ಹೇಳುತ್ತಾರೆ. ದೇವಿಯು ನಿಮ್ಮ ಭಕ್ತಿಯ ಪರೀಕ್ಷೆ ನಡೆಸಿದ್ದಾಳೆಂದೂ ಮತ್ತೂ ಇಂಥ ಪರೀಕ್ಷೆಯಲ್ಲಿ ಜಯ ಯಾವಾಗಲೂ ಭಕ್ತರಿಗೇನೇ ಎಂದೂ ಭಟ್ಟರು ಹೇಳಿ ಶಿಷ್ಯರೊಡಗೂಡಿ ದೇವಿಯನ್ನು ವೇದಾಂತ ವಾಕ್ಯಗಳಿಂದ ಸ್ತುತಿಸತೊಡಗುತ್ತಾರೆ.

ಕರುಣೆಯೇ ಭಕ್ತಾಧೀನೆಯೇ ನಿನ್ನಿಂದ ಸತ್ವ, ರಜ, ತಮೋ ಗುಣಗಳುದಿಸಿದವು. ನಿನ್ನ ಚರಣದ ರೇಣುಬಲದಿಂದ ಹರಿಹರವಿರಂಚಿಯರು ಜಗತ್ತನ್ನು ಪಾಲಿಸುವರು. ದೇವತೆಗಳು ಸರ್ವ ಜೀವರುಗಳು ನಿನ್ನ ಸೂತ್ರದ ಗೊಂಬೆಗಳು. ಸರ್ವ ಜೀವರು, ತತ್ವ ಭೂತಿಗಳು ಮತ್ತೂ ಸರ್ವ ವ್ಯವಹಾರಗಳು ನಿನ್ನ ತೇಜಸ್ಸುಗಳು. ನಾನಾ ಗುಣಗಳು, ನಾನಾ ಜಾತಿಗಳು, ನಾನಾ ಮತಗಳು ಮತ್ತೂ ನಾನಾ ಭಕ್ತಿಗಳು ಎಲ್ಲ ನೀನೇ ಅಗಿರುವಿ, ಸತಿಯು, ಪುರುಷರು, ಸಂತರು, ಬಳಗಗಳು, ಮದುವೆಯು, ಮುಂಜಿವೆಯು ನೀನೇ ಇರುವೆ, ಕರ್ಮವೆಲ್ಲವೂ ನೀನೇ ಆಗಿರುವಿ. ಸತಿಯು, ಪುರುಷರು, ಸುತರು, ಬಳಗಗಳು, ಮದುವೆಯು, ಮುಂಜಿವೆಯು ನೀನೇ ಇರುವೆ, ಕರ್ಮವೆಲ್ಲವೂ ನೀನೆ ಇರುವಿ, ಬಡತನ, ಸಿರಿತನ, ಹಿತ-ಅಹಿತ ಇಹ- ಪರ ಎಲ್ಲವೂ ನೀನೇ, ಚಲಿಸುತ್ತಿರುವ ಗಾಳಿ, ಹರಿಯುವ ನೀರು, ಅಗ್ನಿ ಮತ್ತೂ ಆಗಸ ಇವೆಲ್ಲವೂ ನೀನೇ ಆಗಿರುವೆ, ಸರ್ವ ಸಾಕ್ಷಿಯು ನೀನೆ. ಸರ್ವ ಜ್ಞಾನಿಯು ನೀನೇ, ಅಗ್ನಿಯು ನಿನ್ನನ್ನು ಸುಡಲಾರದು. ಜಲವು ನಿನ್ನನ್ನು ತೋಯಿಸಲಾರದು. ವಾಯು ನಿನ್ನನ್ನು ಒಳಗಿಸಲಾರದು. ಒಳಗೆ, ಹೊರಗೆ ಎಲ್ಲೆಲ್ಲಿಯೂ ನೀನೇ ಇರುವಿ. ಸೂರ್ಯನಿಗೆ ತೇಜಸ್ಸು, ಚಂದ್ರನಿಗೆ ಶೀತಲ ಕಿರಣ ನಿನ್ನಿಂದಲೇ ಬಂದಿರುವವು. ನಿನ್ನ ಮಾಯೆಯಿಂದ ಜಗತ್ತು ಉತ್ಪನ್ನವಾಗಿ, ತೋರಿ ಲಯವನ್ನು ಹೊಂದುವುದು. ನಿನ್ನ ಮಾಯೆಯಿಂದಲೇ ಹರಿ, ಹರ, ಬ್ರಹ್ಮಾದಿಗಳು ಜನಿಸಿ ಅಡಗುವರು. ನಿನ್ನನ್ನು ಕೆಣಕಿ ಅದಾರು ಬದುಕುವರು! ನೀನು ಯಾರ ಮೇಲೆ ಸಿಟ್ಟಾಗಿರುವೆಯೋ ಅವರನ್ನು ಯಾರು ಕಾಪಾಡಬಲ್ಲರು! ಕಾಯುವವಳು ಕೊಲ್ಲುವವಳು ನೀನೇ, ನಿನ್ನ ಮಹಿಮೆಯನ್ನು ಕೊಂಡಾಡುವವನು ಅಮರನೇ ಸರಿ. ಯಾವ ಪುರುಷನಿಗೆ ನಿನ್ನ ಪದ ದೊರೆತಿಯೋ ಯಾರು ನಿನ್ನ ಸ್ಮಾರಣೆಯನ್ನು ನಿತ್ಯ ಮಾಡುವರೋ, ಯಾರು ನಿನ್ನನ್ನು ಪರಬ್ರಹ್ಮವೆಂದು ನಂಬಿರುವರೋ ಅವರು ಹರಿಹರರಿಗಿಂತಲೂ ಮಿಗಿಲಾದವರು. ಬ್ರಹ್ಮ, ವಿಷ್ಣು, ಮಹೇಶ್ವರಿಗೆ, ಅನುಕ್ರಮವಾಗಿ ಸೃಷ್ಟಿ, ಸ್ಥಿತಿ, ಲಯ ಅಧಿಕಾರಿಗಳನ್ನು ಕರುಣಿಸಿರುವೆ. ನೀನು ಯಾರಿಗೆ ಒಲಿಯುವೆಯೋ ಅವರು ನಿನ್ನಲ್ಲಿಯೇ ಐಕ್ಯರಾಗುವರು. ನಿನ್ನ ಸ್ಮರಣೆಯನ್ನು ಒಮ್ಮೆ ಮಾಡಿದರೂ ಅದು ನಿನಗೆ ಪರ್ವತ ಗಾತ್ರದಷ್ಟು ಭಾರವಾಗುವುದು. ನಿನ್ನ ಧ್ಯಾನದಲ್ಲಿ ಮಗ್ನನಾದವನಿಗೆ ಯಾವ ಸ್ಮರಣ ಮಾತ್ರದಿಂದ ಸರ್ವ ಫಲಗಳು ದೊರಕುವವು. ನಿನ್ನ ಭಕ್ತರನ್ನು ನಿಂದಿಸಿದವರ ವಂಶಾರಣ್ಯಗಳನ್ನೇ ಸುಟ್ಟು ಹಾಕುವಿ ನಿನ್ನ ಭಕ್ತರನ್ನು ಸದಾ ನೀನು ಕಾಪಾಡುವಿ, ನಿನ್ನ ಭಕ್ತನ ಗಾಳಿ ಸೋಕಿದರೆ ಪಾಪಿಷ್ಠನ ಪಾಪ ನಶಿಸಿಹೋಗುವವು. ನಿನ್ನ ದಯಯುಳ್ಳವನು, ಅಡವಿಯಲ್ಲಿರಲಿ, ಮನೆಯಲ್ಲಿರಲಿ, ಅಗ್ನಿಯಲ್ಲಿರಲಿ, ನೀರಿನೊಳಳಿರಲಿ ಮತ್ತೂ ರಣರಂಗದಲ್ಲಿರಲಿ ಅವನನ್ನು ರಕ್ಷಿಸಲು ನೀನು ಸದಾ ಸಿದ್ಧಳಿರುವಿ. ನಿನಗೆ ಆಶೆ ಎಂಬುದಿಲ್ಲ. ಆದರೆ ನಿನ್ನ ಭಕ್ತರನ್ನು, ಅವರ ಕುಟುಂಬದವರನ್ನು ಕಾಪಾಡಲೇಬೇಕೆಂಬ ಆಶೆ ಮಾತ್ರ ಅತಿಯಾಗಿದೆ. ಅಂದ ಬಳಿಕ ನೀನು ನಿರಾಶೆಯುಳ್ಳವಳೆಂದು ಹೇಗೆ ಭಾವಿಸೋಣ?

ಕಣ್ಣಿನ ಕಣ್ಣು ನೀನು, ಕಿವಿಯ ಕಿವಿ ನೀನು, ವಾಕ್ಕಿನ ವಾಕು ನೀನು, ಮೂಗಿನ ಅಘ್ರಾಣಿಸುವ ಶಕ್ತಿ ನೀನು, ಪಂಚ ತತ್ವವು ನೀನು, ಪಂಚ ಇಂದ್ರಿಯಗಳು ನೀನು, ಸರ್ವ ಪಿಂಡಾಂಡ ಮತ್ತೂ ಬ್ರಹ್ಮಾಂಡದಲ್ಲಿ ಇದ್ದು ಇಲ್ಲದಂತೆಯೂ ಇಲ್ಲದೆಯೇ ಇರುವವಳು ನೀನೇ ಆಗಿರುವಿ, ನಿನ್ನ ವರುಶನವಿಲ್ಲದೆ ಅನ್ನ ನೀರನ್ನು ಮುಟ್ಟಲಾರೆವು. ನಿನ್ನ ಕಾಣದಲೇ ಮರಳಲಾರೆವು. ನಮ್ಮ ಯಾವ ಪಾಪಕ್ಕಾಗಿ ನೀನಿಂದು ನಮಗೆ ಈ ಘೋರ ಶಿಕ್ಷೆ ನೀಡುತ್ತಿರುವೆ. ನೀನು ಯಾವ ಶಿಕ್ಷೆ ವಿಧಿಸಿದರೂ ಸರಿಯೇ, ನಿನ್ನ ಕರುಣೆ ಮಾತ್ರ ನಮ್ಮ ಮೇಲಿರಲಿ.

ಕತ್ತಲೆಯ ಆ ಕರಾಳ ಛಾಯೆಯಲ್ಲಿಯೇ ಬೆಳಕೊಂದು ಗೋಚರಿಸಿತು. ಅಂತಹ ಬೆಳಕನ್ನು ನಿಜ ಜೀವನದಲ್ಲಿ ಯಾರೂ ಎಂದೂ ಕಂಡುದದಿಲ್ಲ. ಆ ಅನಿರ್ವಚನೀಯ ಬೆಳಕಿನ ಮಧ್ಯದಲ್ಲಿ, ಸುಂದರ ಸುಕೋಮಲ ತೇಜೋಮಯ ತಾಯಿ ಕಾಣಿಸಿದಳು. “ಮಕ್ಕಳಿರಾ ನಿಮ್ಮನ್ನು ಬಹಳ ಕಷ್ಟಕ್ಕೀಡು ಮಾಡಿದೆ, ನಿಮಗದೆಷ್ಟು ತೊಂದರೆಯಾಯಿತೋ? ಪಾಪ, ನೀನು ಇನ್ನು ಮೇಲೆ ಇಷ್ಟೆಲ್ಲ ತೊಂದರೆಪಟ್ಟುಕೊಂಡು ಗುಡ್ಡಕ್ಕೆ ಬರಬೇಕಾದದ್ದಿಲ್ಲ. ನಿಮ್ಮೂರಿನ ಶಿವಾಲಯದ ಪಶ್ಚಿಮ ತಾಣದಲ್ಲಿ ಹರಿಹರ ಬ್ರಹ್ಮಾದಿಗಳು ಪೂಜಿಸುವ ಶ್ರೀಚಕ್ರ ದೊರಕುವುದು. ಸಾಲಿಗ್ರಾಮ ರೂಪದಲ್ಲಿ ನನ್ನ ಮುಖವೂ ಗೋಚರಿಸುವುದು. ಅಲ್ಲಿಯೇ ನೀವು ಅವುಗಳನ್ನು ಪೂಜಿಸಿರಿ. ಅಲ್ಲಿ ನಾನು ಆವಿರ್ಭವಿಸುವೆ” ಎಂದು ಆ ತಾಯಿ ಅಪ್ಪಣೆ ಕೊಡಿಸಿದಳಲ್ಲದೇ ತನ್ನ ಪ್ರಭಾವದಿಂದ ದೇವಿಯು ಭಕ್ತರೀರ್ವರಿಗೂ ಗುಡ್ಡದ ದರ್ಶನವನ್ನು ಮಾಡಿಸಿ ಅಂಥರ್ಧಾನವಾದಳು.

ಭಕ್ತರೀರ್ವರೂ ಪಕ್ಕನೆ ಕಣ್ತೆರೆದು ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಇಬ್ಬರಿಗೂ ಒಂದೇ ತೆರನಾದ ಕನಸು. ಬಾಯಿಂದ ಮಾತುಗಳೇ ಹೊರಸೂಸುತ್ತಿಲ್ಲ. ಕಣ್ಣಲ್ಲಿ ಆನಂದ ಬಾಷ್ಪಗಳು ಒಂದೇ ಸಮನೆ ಹರಿಯುತ್ತಿವೆ. ಆನಂದದಿಂದ ಮೈ ಪುಳಕಿತಗೊಂಡಿತು. ಶ್ರೀದೇವಿ ನಮ್ಮ ಮೇಲೆ ಕೃಪೆ ಮಾಡಿದಳೆಂದು ಮನಗಂಡರು.

ಅಲ್ಲಿಂದ ಮರಳಿದ ಬಳಿಕ, ನಡೆದ ವಿದ್ಯಮಾನಗಳನ್ನೆಲ್ಲ ಗುರು ಸೋಮನಾಥ ಭಟ್ಟರೆದುರು ಸವಿಸ್ತಾರ ವರ್ಣಿಸಿದರು. ದೇವಿಯ ಅಪ್ಪಣೆಯಂತೆ ಶಿವಾಲಯದ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಚಕ್ರ ಮತ್ತು ಸಾಲಿಗ್ರಾಮಗಳು ದೊರೆತವು. ಅದೇ ಸ್ಥಳದಲ್ಲಿ ಚಿಕ್ಕ ದೇವಾಲಯ ಒಂದನ್ನು ನಿರ್ಮಿಸಲಾಯಿತಲ್ಲದೇ ಶಾಸ್ತ್ರೋಕ್ತವಾಗಿ ವೇದ ಘೋಷಗಳೊಂದಿಗೆ ದೇವಿಯ ಪ್ರತಿಷ್ಠಾಪನೆ ಮಾಡಲಾಯಿತು. ಹುಲಿಗಿ ಗ್ರಾಮಕ್ಕೇನೇ ಆಕೆಯು ತಾಯಿಯಾದ್ದರಿಂದ ಆಕೆಯು ಹುಲಿಗೆಮ್ಮನಾದಳು. ಶ್ರೀದೇವಿ ಹುಲಿಗೆಮ್ಮನವರನ್ನು ಷೋಢಶೋಪಚಾರಗಳಿಂದ ನಿತ್ಯವೂ ಪೂಜಿಸುವ ಹೊಣೆ ಗುರು ಸೋಮನಾಥ ಭಟ್ಟರದಾಯಿತು.

ಪ್ರತಿ ಮಂಗಳವಾರ, ಶುಕ್ರವಾರ, ಪೂರ್ಣಿಮೆ ಮತ್ತೂ ಅಮಾವಾಸ್ಯೆಯಗಳಂದು ಶ್ರೀದೇವಿ ಭಾಗವತ ಪಠಣ, ಶ್ರೀ ಸೋಮನಾಥ ಭಟ್ಟರಿಂದ ಜರುಗತೊಡಗಿತು. ಗ್ರಾಮ ನಿವಾಸಿಗಳೆಲ್ಲ ದೇವಸ್ಥಾನ ಸೇರತೊಡಗಿದರು. ಮೂಲ ದೇವಸ್ಥಾನಕ್ಕೆ ಮುಂದುಗಡೆ ಪ್ರಾಂಗಣ ಹಾಗೂ ಇಕ್ಕೆಲಗಳಲ್ಲಿ ಉಗ್ರಾಣಗಳ ರಚನೆಯಾಯಿತು. ನವರಾತ್ರಿಯಲ್ಲಿ ನವದಿನ ಪುರಾಣ ಪಠಣ, ವಿವಿಧ ಅಲಂಕಾರಯುಕ್ತ ಪೂಜೆ, ಭಕ್ಷ್ಯಭೋಜ್ಯ ಹಾರಗಳ ನೈವೇದ್ಯ ಮತ್ತೂ ಬ್ರಹ್ಮ ಭೋಜನಾದಿಗಳು ಜರುಗತೊಡಗಿದವು.

ಶ್ರೀದೇವಿಯ ದರುಶನವಾದ ಬಳಿಕ ನಾಗಜೋಗಿ ಮತ್ತೂ ಬಸವಜೋಗಿಯರಲ್ಲಿ ವಿಚಿತ್ರ ಮಾರ್ಪಾಟು ಕಾಣತೊಡಗಿತು. ಸದಾವಕಾಲದಲ್ಲಿ ದೇವಿಯ ಉಪಾಸನೆಯಲ್ಲಿ ತೊಡಗಿದರು. ಮನದಲ್ಲಿ ದೇವಿಯ ಸುಂದರ ಮೂರ್ತಿ ಗೋಚರಿಸತೊಡಗಿತು. ಊಟ ಮಾಡುವಾಗ, ಮಲುಗುವಾಗ, ತಿರುಗಾಡುವಾಗ, ಕುಳಿತಲ್ಲಿ, ನಿಂತಲ್ಲಿ ದೇವಿಯನ್ನೇ ಧ್ಯಾನಿಸತೊಡಗಿದರು. ಮುಖದಲ್ಲಿ ತೇಜಸ್ಸು ಹೊಳೆಯತೊಡಗಿತು. ಸಿಟ್ಟು ಅವರ ಮನದಿಂದ ದೂರ ಸರಿಯಿತು. ಮನೆ ಮಾರುಗಳನ್ನು ಹೆಚ್ಚಿಗೆ ಹಚ್ಚಿಕೊಳ್ಳದೇ ಅವರು ಏಕಾಂತವನ್ನು ಬಯಸತೊಡಗಿದರು. ದುಃಖ ದುಮ್ಮಾನಗಳಲ್ಲಿ ತೊಳಲಾಡುವ ಜನ ಅವರಲ್ಲಿ ಸಾಂತ್ವನಕ್ಕಾಗಿ ಬರತೊಡಗಿದರು. “ಶ್ರೀದೇವಿಯಲ್ಲಿ ನಂಬಿಕೆಯನ್ನಿಟ್ಟು ಅವಳನ್ನು ಪೂಜಿಸಿರಿ ಅವಳೇ ನಿಮ್ಮ ಸಂಕಷ್ಟಗಳನ್ನು ದೂರ ಮಾಡುತ್ತಾಳೆ” ಎಂಬುದೇ ಅವರು ಎಲ್ಲರಿಗೂ ಹೇಳುವ ಏಕೈಕವಾಕ್ಯವಾಯಿತು. ಈ ಪ್ರದೇಶದ ಜನರೆಲ್ಲರ ಸಂಕಷ್ಟಗಳು ಪರಿಹಾರಗೊಳ್ಳಬೇಕು. ಜನತೆಯಲ್ಲಿ ಧರ್ಮ ಜಾಗ್ರತೆಗೊಂಡು ಧರ್ಮಾಚರಣೆ ನಿತ್ಯದ ಉಸಿರಾಗಬೇಕು. ಅಧರ್ಮವನ್ನು ಮೆಟ್ಟಿನಿಲ್ಲುವ ಚಿರಂತನ ಶಕ್ತಿ ಜನತೆಯಲ್ಲಿ ಸಂಚಯಿಸಬೇಕು. ಇದಕ್ಕೆ ಪೂರಕವಾಗಬಹುದಾದ ವ್ರತ ಒಂದನ್ನಾಚರಿಸಬೇಕೆಂಬುದಾಗಿ ನಾಗಜೋಗಿ ಬಸವಜೋಗಿಯವರು ಯೋಚಿಸತೊಡಗಿದರು. ನಿಷ್ಕಾಮ ಕರ್ಮದ ಅಂತಃಪುರದಲ್ಲಿ ಅಡಿ ಇರಿಸಿದವನಿಗೆ “ತಾನು ತನ್ನದು” ಎಂದು ಕಲ್ಪನೆ ದೂರವಾಗಿ “ಎಲ್ಲರೂ ತನ್ನವರೆ” ಎಂಬ ವಿಶಾಲ ಅಂತಃ ಕರುಣೆ ಜಾಗ್ರತಗೊಳ್ಳುತ್ತದೆ. ಇದೇ ಕರುಣೆ ನಾಗಜೋಗಿ ಮತ್ತೂ ಬಸವಜೋಗಿಯವರಲ್ಲಿ ವ್ರತಾಚರಣೆಯ ವಿಚಾರ ಮೂಡಿಸಿರಬೇಕು. ಅಥವಾ ಶ್ರೀದೇವಿಯೇ ತನ್ನ ಭಕ್ತರೀರ್ವರ ಉಪಾಸನೆಯ ದಿವ್ಯ ಫಲವನ್ನು ಮಾನವ ಕೋಟಿಗೆ ಮನವರಿಕೆ ಮಾಡಿಕೊಡಬೇಕೆಂಬ ಉದ್ದೇಶದಿಂದಲೋ ವ್ರತ ಒಂದರ ಕಲ್ಪನೆಯನ್ನು ಅವರಲ್ಲಿ ಅಂಕುರಗೊಳ್ಳುವಂತೆ ಕೃಪೆ ತೋರಿರಬೇಕು. ಯಾವ ವ್ರತ ಆಚರಿಸುವುದರಿಂದ ಇದು ಸಾಧ್ಯವಾದೀತೆಂಬುದನ್ನು ಕುರಿತು, ನಾಗಜೋಗಿ ಬಸವಜೋಗಿ ಮತ್ತೂ ಸೋಮನಾಥಭಟ್ಟರು ಯೋಚಿಸತೊಡಗಿದರು. ಧರ್ಮಾಚರಣೆಯಲ್ಲಿ ತಿಲಕ ಪ್ರಾಯನಾದ ನಹುಷನ ಚರಿತ್ರೆ, ಆತ ಇಂದ್ರನಾದಾಗ ಸ್ವರ್ಗದಲ್ಲಿ ಆಚರಿಸಿದ ಶಿಬಿಕೋತ್ಸವ ತನ್ಮೂಲಕ ಮೂರು ಲೋಕಗಳಲ್ಲಿ ಅಧರ್ಮವು ಅಳಿದು ಧರ್ಮ ಉತ್ಥಾನ ಹೊಂದಿದ ಬಗೆಯನ್ನು ಮನದಲ್ಲಿ ಚಿಂತಿಸಿ ಗುರು ಸೋಮನಾಥಭಟ್ಟರು ಭಕ್ತರೀರ್ವರಿಗೂ ವಿಷಯ ವಿವರಿಸಿದರು. ಮಾರ್ಗಧರ್ಶನ ಸೋಮನಾಥಭಟ್ಟರದು; ಅನುಚರಣೆ ನಾಗಜೋಗಿ ಬಸವಜೋಗಿಯರದು, ಬಾಳೆದಂಡಿಗೆ ಆಚರಣೆಯ ಪ್ರಾರಂಭ ಅಲ್ಲಿಂದಲೇ ಆಯಿತು.

ಈ ವ್ರತಾಚರಣೆಯ ಜೊತೆಯಲ್ಲಿಯೇ ಶ್ರೀದೇವಿಯ ಮಹಿಮೆಯನ್ನು ಲೋಕಕ್ಕೆ ತೋರಿಸಿಕೊಡ ಬೇಕಾಗಿದ್ದೀತು. ಇದು ಪವಾಡ ರೂಪಿಸಿದರೆ ಮಾತ್ರ ಸಾಧ್ಯವೆಂದು ಭಟ್ಟರಿಗೆ ತಿಳಿದಿದ್ದರಿಂದ ಪಾಯಸ ನಿವೇದನೆ ಮತ್ತೂ ಆಗ್ನಿಕುಂಡದ ಕಾರ್ಯಕ್ರಮವನ್ನು ಸೋಮನಾಥಭಟ್ಟರು ರೂಪಿಸಿದರು.

ವೈಶಾಖ ಶುದ್ಧ ಪೂರ್ಣಿಮೆಯಿಂದ ವ್ರತಾಚರಣೆ ಪ್ರಾರಂಭವಾಯಿತು. ಪ್ರತಿಪದೆಯಂದು ನಾಗಜೋಗಿ ಬಸವ ಜೋಗಿಯವರಿಗೆ ತೈಲಾಭ್ಯಂಗ ಮಾಡಿಸಿ ಪುಣ್ಯಾಹವಾಚನ ನೆರವೇರಿಸಿದರಲ್ಲದೇ ಶ್ರೀ ದೇವಿಯನ್ನು ಕುರಿತು ಆಚರಿಸಬೇಕಾಗಿರುವ ಬಾಳದಂಡಿಗೆ ನಿವೇದನೆ ಮತ್ತೂ ಅಗ್ನಿಕುಂಡ ಕಾರ್ಯಕ್ರಮ ಜರುಗಿಸಲು ಕಂಕಣಬದ್ಧರನ್ನಾಗಿ ಮಾಡಲಾಯಿತು. ದೇವಿಚರಿತೆಯ ದಿವ್ಯ ಭಾಗಗಳನ್ನು ಓದಿ ಓದಿ ಶ್ರೀ ಸೋಮನಾಥಭಟ್ಟರ ಉಪದೇಶದಂತೆ ನಾಗಜೋಗಿ ಬಸವ ಜೋಗಿಯರು ಕೇವಲ ಹಣ್ಣ ಹಾಲು ಸ್ವೀಕರಿಸಿದರಲ್ಲದೇ ಸದಾವಕಾಲವೂ ದೇವಿಯ ಧ್ಯಾನಮಾಡಿದರು. ನಿಗದಿತ ಸಮಯವಷ್ಟೇ ನಿದ್ರೆಗೈದರು. ಅಷ್ಟಮಿಯಂದು ದೇವಿಯರಿಗೆ ಸರ್ವಾಲಂಕಾರ ಮಾಡಿ ರಥೋತ್ಸವ ಜರುಗಿಸಲಾಯಿತು. ನವಮಿಯ ರಾತ್ರಿಯಲ್ಲಿ (ಶಿಬಿಕೆ) ಬಾಳೆದಂಡಿಗೆ ತಯಾರಿಸಲಾಯಿತು. ಗ್ರಾಮ ಮತ್ತೂ ದೇವಾಲಯದ ಎಲ್ಲ ಮನೆ ಮಾರುಗಳು ತಳಿರು ತೋರಣದಿಂದ ಅಲಂಕೃತವಾದವು. ಏಕಾದಶಿಯಂದು ಬ್ರಾಹ್ಮೀ ಮೂಹೂರ್ತದಲ್ಲಿ ತುಂಗಭದ್ರೆಯಲ್ಲಿ ಪೂಜೈಗೈದು ಬಾಳೆದಂಡಿಗೆಯನ್ನೇರಿದ ನಾಗಜೋಗಿ ಬಸವ ಜೋಗಿಯು ಮುಖ್ಯವಾಹಕವಾದ ದಂಡಿಗೆಯು ಶ್ರೀದೆವಿಯ ದೇವಾಲಯವನ್ನು ತ್ರಿಪ್ರದಕ್ಷಿಣೆಗೈದು ದೇವಾಲಯ ಪ್ರವೇಶಿಸಿತು. ಬಾಳೆಯ ಎಲೆಗಳು ಹರಿಯದಷ್ಟು ಹಗುರವಾಗಿ ನಾಗಜೋಗಿಯು ದಂಡಿಗೆಯ ಮೇಲೆ ವಿರಾಜಮಾನನಾಗಿದ್ದ.

ದ್ವಾದಶಿಯ ಬ್ರಾಹ್ಮೀ ಮೂಹೂರ್ತದಲ್ಲಿ ಹೊಸ ಹರವಿಯೊಂದರಲ್ಲಿ ಅಕ್ಕಿಯ ಅನ್ನ ಬೇಯಿಸಲಾಯಿತು. ನಾಗಜೋಗಿ ಬಸವ ಜೋಗಿಯವರು ತಮ್ಮ ಬರೀ ಕೈಗಳಿಂದಲೇ ಬಿಸಿಬಿಸಿ ಅನ್ನವನ್ನು ಹರವಿಯಿಂದ ತೆಗೆದು ದೇವಿಗೆ ನೆವೇದಿಸಿದರು. ನಂತರ ವೃತಾಚರಣೆಯ ಕೊನೆಯ ಕಾರ್ಯಕ್ರಮವಾಗಿ ನಿಗಿ ನಿಗಿ ಕೆಂಡ ತುಂಬಿದ ಅಗ್ನಿಕುಂಡದಲ್ಲಿ ಈರ್ವರೂ ಶ್ರೀದೇವಿಯನ್ನು ಪ್ರಾರ್ಥಿಸಿ ಪ್ರವೇಶ ಮಾಡಿ, ಅದರಲ್ಲಿ ಹಾಯ್ದು ಶ್ರೀದೇವಿಯ ದೇವಾಲಯದಲ್ಲಿ ಪ್ರವೇಶಿಸಿದರು. ನೆರೆದ ಜನಸ್ತೋಮ ಉತ್ಸಾಹದಲ್ಲಿ ಮುಳುಗಿ ಹೋಯಿತು. ಸರ್ವರೂ ಶ್ರೀದೇವಿಯನ್ನು ಆಕೆಯ ಭಕ್ತರೀರ್ವರನ್ನೂ ಮನಸಾರೆಸ್ಮರಿಸಿದರು. ನಂತರ ನಾಗಜೋಗಿ ಬಸವ ಜೋಗಿಯವರು ಶ್ರೀದೇವಿಗೆ ಮಾಡಿದ ನೈವೇದ್ಯವನ್ನು ವೃತಾಚರಣೆಯಲ್ಲಿ ಪಾಲ್ಗೊಂಡವರೆಲ್ಲರೊಂದಿಗೂ ಸೇರಿ ಸ್ವೀಕರಿಸಿದರು, ಅದೇ ಇಂದಿಗೂ ಜೋಗ ಪಂಕ್ತಿ ಎಂದು ಕರೆಯಿಸಿಕೊಳ್ಳುತ್ತದೆ. ಈ ವ್ರತಾಚರಣೆಯೇ ಶ್ರೀದೇವಿ ಹುಲಿಗೆಮ್ಮನ ಜಾತ್ರೆಯಾಗಿ ವರ್ಷ ವರ್ಷವೂ ಸಂಪ್ರದಾಯವಾಯಿತು.

ಈ ವ್ರತಾಚರಣೆ ಪ್ರಾರಂಭವಾದ ನಂತರ, ಯಾರಿಂದಲೋ ದೋಷ ಉಂಟಾಗಿ. ಕೆಲ ವರ್ಷಗಳ ನಂತರ ವಿಚಿತ್ರ ಘಟೆನೆಯೊಂದು ಜರುಗಿತು. ತಾಯಿ ತುಂಗಭದ್ರೆಯಲ್ಲಿ ಮಿಂದು ಪೂಜೆಗೈದು ನಾಗಜೋಗಿಯು ಬಾಳಿದಂಡಿಗೆಯನ್ನೇರಿ ಶ್ರೀ ದೇವಿಯ ದೇವಸ್ಥಾನಕ್ಕೆ ಬರುತ್ತಿರುವಾಗ ಬಾಳೆದಂಡಿಗೆಯು ಮುರಿದು ನಾಗಜೋಗಿಯು ಕೆಳಗುರಳಿ ಬಿದ್ದನಲ್ಲದೇ ತಕ್ಷಣ ಮೃತನಾದನು. ಈ ರೀತಿ ನಾಗಜೋಗಿಯು ಅಸುನೀಗಿದುದು ಬಸವ ಜೋಗಿಗೆ ದೊಡ್ಡ ಆಘಾತವೇ ಆದಂತಾಯಿತು. ಲೋಕ ಕಲ್ಯಾಣಾರ್ಥ ಕೈಕೊಂಡಿರುವ ಬಾಳೆದಂಡಿಗೆ ಕಾರ್ಯಕ್ಕೆ ಇಂತಹ ಘನ ಕುಂದು ಬರುವ ಕಾರಣ ಕುರಿತು ಹಳಹಳಿಸತೊಡಗಿದನು. ತಮ್ಮಿಂದ ಯಾವ ಘನ ಅಪರಾಧವಾಯಿತೋ! ಏಕೆ ಶ್ರೀದೇವಿ ಹುಲಿಗೆಮ್ಮ ತಮಗೆ ಈ ಪ್ರಸಂಗ ತಂದೊಡ್ಡಿದಳೋ ಎಂದು ಮನದಲ್ಲಿಯೇ ಚಡಪಡಿಸತೊಡಗಿದನು. ಶ್ರೀದೇವಿಯನ್ನೇ ಆಶ್ರಯಸಿ ಬದುಕುತ್ತಿರುವ ಗ್ರಾಮದ ಜನತೆಗೆ ಯಾವ ವಿಪತ್ತುಬರಲಿದೆಯೋ? ಎಂಬ ದುಃಖವೂ ಒತ್ತರಿಸಿ ಬರತೊಡಗಿತು. ಆದರೂ ಬಸವಜೋಗಿ ಗಾಬರಿಪಡದೇ ಶ್ರೀದೇವಿಯ ಮೇಲೆ ಭಾರ ಹಾಕಿ ಅವಳನ್ನೇ ಅನೇಕ ರೀತಿಯಲ್ಲಿ ಪ್ರಾರ್ಥಿಸತೊಡಗಿದನು. ಮನಸ್ಸು ಮಾಡಿದರೆ ದೇವಿ ಏನು ಬೇಕಾದರೂ ಮಾಡಬಲ್ಲಳು. ಈ ಜಗವನ್ನೇ ಸೃಷ್ಟಿಸಿದ ಆದಿ ಶಕ್ತಿಗೆ ಈ ವ್ರತಾಚರಣೆ ಪೂರ್ಣಗೊಳಿಸುವುದು ಅದೆಂತಹ ಘನ ಕಾರ್ಯ ಎಂದುದಾಗಿ ಚಿಂತಿಸತೊಡಗಿದನು. ಒಮ್ಮೆ ದೇವಿಯನ್ನು ಮನಸಾರೆ ಹೊಗಳುತ್ತಿದ್ದ ಮತ್ತೊಮ್ಮೆ ಹಟಮಾರಿ ಮಕ್ಕಳಂತೆ ಆಕೆಯ ವ್ರತ ಪೂರ್ತಿಗೊಳಿಸುವಂತೆ ಕೃಪೆ ಮಾಡೆಂದು ಹಟ ಮಾಡತೊಡಗಿದ. ಅಸಂಖ್ಯ ಜನ ಅವನ ಸುತ್ತ ನೆರೆದಿದ್ದರು. ಮೃತ್ಯು ದೇವತೆಯ ಭೀಕರತೆಯನ್ನು ಕಂಡು ನೆರೆದ ಜನ ಕಂಪಿಸುತ್ತಿದ್ದರೆ, ಬಸವಜೋಗಿ ಹುಲಿಗೆಮ್ಮನ ಮೇಲೆ ಭರವಸೆಯನ್ನಿರಿಸಿದ. ವ್ರತಾಚರಣೆ ಪೂರ್ತಿಗೊಳಿಸಬೇಕೆಂಬ ಸಂಕಲ್ಪವನ್ನು ಹೊತ್ತು ಭಕ್ತಿಯ ತಲ್ಲೀನತೆಯಲ್ಲಿ ತೊಳಲಾಡುವ ಸ್ಥಿತಪ್ರಜ್ಞನಾದ. ನೆರೆದ ಜನತೆಯ ಗಾಬರಿಯಾಗಲೀ ಚೀತ್ಕಾರವಾಗಲೀ ಹಾಹಾಕಾರವಾಗಲೀ ಅವನಿಗೆ ಕೇಳಿಸಲಿಲ್ಲ. ಅವನ ಆತ್ಮದ ಅಮರವಾಣಿ ಮಾತ್ರ ಸಾರಿ ಸಾರಿ ಹೇಳುತ್ತಿದ್ದದು ಕೇಳಿಸುತ್ತಿತ್ತು. “ಶ್ರೀದೇವಿ ಹುಲಿಗೆಮ್ಮನ ಮುಂದೆ ನಾಗಜೋಗಿಯನ್ನಿರಿಸು ಮಿಕ್ಕೆದೆಲ್ಲ ಅವಳಿಗೇ ಸೇರಿದದ್ದು ಎಂದು ಅನುಜ್ಞೆಯಂತೆ ನಾಗಜೋಗಿಯ ಮೃತದೇಹವನ್ನು ಶ್ರೀದೇವಿಯ ದೇವಸ್ಥಾನದಲ್ಲಿರಿಸಿ ಬಾಗಿಲು ಮುಚ್ಚಲಾಯಿತು. ಮತ್ತೆ ಕೆಲ ನಿಮಿಷಗಳ ನಂತರ ನಾಗಜೋಗಿಯು ನಿದ್ರೆಯಿಂದ ಎಚ್ಚತ್ತವನಂತೆ ಎದ್ದು ಕುಳಿತನು. ಭಕ್ತಿ ಜನಸ್ತೋಮ ಹರ್ಷೋದ್ಗಾರಗಳಿಂದ ಕುಣಿದಾಡತೊಡಗಿದರು. ಮೇರೆ ಮಿಕ್ಕಿದ ಉತ್ಸಾಹದಿಂದ ಬಾಳೆದಂಡಿಗೆ ವ್ರತವನ್ನಾಚರಿಸಿದರು. ಭಕ್ತರ ಕೈವಾರಿಯಾದ ದೇವಿಯು, ನಂಬಿದ ಭಕ್ತರನ್ನು ಎಂದೆಂದೂ ಕೈಬಿಡಲಾರಳೆಂಬ ಅಂಶವನ್ನು ಅಂದು ಜನತೆಗೆ ಮನವರಿಕೆ ಮಾಡಿ ತೋರಿಸಿದಳು.

ಸಗುಣೋಪಾಸನ ಸೋಪಾನಗಳಿಂದಲೇ ನಿರ್ಗುಣತ್ವದ ಶಿಖರಕ್ಕೇರಿದ ನಾಗಜೋಗಿ ಬಸವಜೋಗಿಯರಿಗೆ ಶ್ರೀದೇವಿ ಹುಲಿಗೆಮ್ಮ ಆದಿಶಕ್ತಿಯಾಗಿ ಕಾಣಿಸಿಕೊಂಡಳು. ಭವಾನಿಯಾಗಿ, ಭೀಮೆಯಾಗಿ, ಹೈಮವತಿಯಾಗಿ, ಚಂಡಿಯಾಗಿ, ಚಾಮುಂಡಿಯಾಗಿ, ಅಂಬೆಯಾಗಿ, ಜಗದಾಧಾರಿಣಿಯಾಗಿ, ಅನ್ನಪೂರ್ಣೆಯಾಗಿ, ಶಾಕಂಬರಿಯಾಗಿ ಅನೇಕ ರೂಪಗಳನ್ನು ತಾಳಿ ವಿವಿಧ ಸ್ಥಳಗಳಲ್ಲಿ ಭಾವನೆಗಳಿಗೆ ತಕ್ಕಂತೆ ರೂಪದೋರಿ ಪೂಜೆಗೊಳ್ಳುತ್ತಿರುವ ಆ ಆದಿಶಕ್ತಿ ಅಂದು ಅವರಿಗೆ ಪರಾತ್ಪರ ಬ್ರಹ್ಮನಾಗಿ ಕಾಣಿಸಿಕೊಂಡಳು. ಹುಲಿಗೆಯ ತುಂಗಭದ್ರೆಯಲ್ಲಿಯೇ ಅವರು ಗಂಗೆ, ನರ್ಮದೆ, ಮಲಪ್ರಭೆಯನ್ನು ಕಂಡರು. ಶ್ರೀದೇವಿಯ ಈ ಪುಣ್ಯಕ್ಷೇತ್ರದಲ್ಲಿಯೇ ಅವರು ಕಾಶಿ, ರಾಮೇಶ್ವರ ಮತ್ತು ಸವದತ್ತಿಯ ಪಾವನತೆಯನ್ನನುಭವಿಸಿದರು. ಬ್ರಹ್ಮನ ಆರಾಧ್ಯದೇವತೆಯಾದ ಸರಸ್ವತಿಯನ್ನು, ವಿಷ್ಣುವಿನ ಹೃದಯ ಕಮಲವೇ ಆದ ಲಕ್ಷಿಯನ್ನೂ ಶಿವನ ದೇಹಾರ್ದಧಾರಿಣಿಯಾದ ಉಮೆಯನ್ನೂ ಅವರು ಶ್ರೀದೇವಿ ಹುಲಿಗೆಮ್ಮನಲ್ಲಿ ಕಂಡುಕೊಂಡರು.

ಗುರು ಸೋಮನಾಥ ಭಟ್ಟರು ಹಾಕಿಕೊಟ್ಟ ಮಾರ್ಗದಲ್ಲಿ ನಿಷ್ಕಾಮ ಭಕ್ತಿಯನ್ನಿಟ್ಟು ತಾವು ಆತ್ಮಸಾಕ್ಷಾತ್ಕಾರ ಸಾಧಿಸಿಕೊಂಡರಲ್ಲದೇ ಮಾನವ ಕಲಕೋಟಿ ಶ್ರದ್ಧಾ ಸ್ಥಾನವನ್ನೇ ನಿರ್ಮಿಸಿ ಪರಮ ಪಾವನ ಕಾರ್ಯವೆಸಗಿದ್ದಾರೆ. ಅವರ ಮಾರ್ಗದಲ್ಲಿ, ಅವರಷ್ಟು ನಿಷ್ಕಾಮ ಭಕ್ತಿಯನ್ನಿರಿಸದಿದ್ದರೂ ಸಹ, ಕಿಂಚಿದ್ಭಕ್ತಿಯನ್ನಿರಿಸಿ ದೇವಿಯ ಸೇವೆಗೈದದ್ದಾದರೆ ಅವನೇ ಪುಣ್ಯವಂತನ್ನೆನುವುದರಲ್ಲಿ ಸಂಶಯವಿಲ್ಲ. ನಾಗಜೋಗಿ ಬಸವಜೋಗಿಯರಿಗೆ ದೇವಿಯು ಕೃಪೆ ಮಾಡಿ ಅವರಿಂದ ಬಾಳೆದಂಡಿಗೆ (ಶಿಬಿಕೋತ್ಸವ) ಮತ್ತು ಶರನ್ನವರಾತ್ರ್ಯಾದಿ ಸಕಲ ಪೂಜಾ ವಿಧಾನಗಳನ್ನು ಮಾಡಿಕೊಂಡು ಅವರ ಮೂಲಕ ತನ್ನ ಭಕ್ತರಿಗೆಲ್ಲ ಕೃಪೆ ಮಾಡುತ್ತ ಹುಲಿಗಿಯಲ್ಲಿ ನೆಲೆಸಿದ್ದಾಳೆ. ಯಜ್ಞಯಾಗಾದಿಗಳು, ಜಪ, ತಪ, ಹೋಮ ಹವನಾದಿಗಳಾವವೂ ಇಲ್ಲದಿದ್ದರೂ ಸರಿ, ಅವಳನ್ನು ಭಕ್ತಿಪೂರ್ವಕ ಆರಾಧಿಸಿದರೆ ಸಾಕು, ಅವಳಿಂದು ಭಕ್ತರಿಗೆ ಬೇಡಿದಿಷ್ಟಾರ್ಥಗಳನ್ನು ಪೂರೈಸುವವಳಾಗಿದ್ದಾಳೆ. “ನಮೇ ಭಕ್ತಃ ಪ್ರಣಶ್ಯತಿ” ಎಂಬ ವಾಕ್ಯವನ್ನು ನಾಗಜೋಗಿ ಬಸವಜೋಗಿಯರ ವೃತ್ತಾಂತದಿಂದ ತೋರಿಸಿದ್ದಾಳೆ. ಶ್ರೀದೆವಿ ಹುಲಿಗೆಮ್ಮನನ್ನು ಭಕ್ತಿಯಿಂದ ಪೂಜಿಸಿ ಭಜಿಸಿ ಇಹದಲ್ಲಿ ಸುಖವನ್ನೂ ಪರದಲ್ಲಿ ಸದ್ಗತಿಯನ್ನು ಪಡೆಯುವ ಸದಾವಕಾಶವನ್ನು ದೇವಿ ಕರುಣಿಸಿರುವುದು ಮಾನವಕೋಟಿಗೆ ಒಂದು ವರದಾನವಾಗಿದೆ.

ಅಂದಿನಿಂದ ಇಂದಿನವರೆಗೆ ಅಸಂಖ್ಯ ಜನ ಶ್ರೀದೆವಿಯಲ್ಲಿ ಭಕ್ತಿಯನ್ನಿರಿಸಿ ಅವಳ ಕೃಪೆಗೆ ಪಾತ್ರರಾಗಿದ್ದಾರೆ. ತಮ್ಮ ದುಃಖ ದುಮ್ಮಾನಗಳನ್ನು ಪರಿಹರಿಸಿಕೊಂಡಿದ್ದಾರೆ. ರೋಗ ರುಜಿನಗಳನ್ನು ಗುಣಪಡಿಸಿಕೊಂಡಿದ್ದಾರೆ. ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗಿದ್ದಾರೆ. ಸಿರಿ ಸಂಪತ್ತನ್ನು ಪಡೆದು ಪುಣ್ಯ ಕಾರ್ಯಗಳನ್ನೆಸಗಿದ್ದಾರೆ. ನಿಷ್ಕಾಮ ಭಕ್ತಿಯನ್ನು ಹೊಂದಿ ಪರಾತ್ಪರ ಬ್ರಹ್ಮವನ್ನೇ ಹೊಂದಿದ್ದಾರೆ (ಶ್ರೀ ಬಿ. ಆರ್. ದೇಸಾಯಿ : ೧೯೭೩ : ೧-೧೨).

ಸಪ್ತ ಮಣಿಗಳಲ್ಲಿ ಓರ್ವನಾದ ಜಮದಗ್ನಿಯು ಬಹ್ಮಚರ್ಯಾನುಷ್ಠಾನವನ್ನು ಬಹುಕಾಲ ಮಾಡಿ ಭೂಭಾರವನ್ನು ಇಳಿಸುವುದಕ್ಕೋಸ್ಕರ ಸಾಕ್ಷಾತ್ ನಾರಾಯಣನನ್ನು ಪುತ್ರ ಮುಖೇನ ಪಡೆಯಲು ದೇವತೆಗಳಿಂದ ಪ್ರಾರ್ಥಿತನಾಗಿ ರೇಣುಕಾದೇವಿಯನ್ನು ವಿವಾಹ ಮಾಡಿಕೊಂಡನು. ರೇಣುಕೆಯು ಅಯೋನಿಜಳು ಜಮದಗ್ನಿಯು ಈಕೆಯಲ್ಲಿ ವಿವಾಹವಾಗಿ ಬಹುಕಾಲ ಸಂಸಾರ ಮಾಡಿಕೊಂಡು ತಪೋನಿರತನಾಗಿದ್ದನು. ರೇಣುಕೆಯಲ್ಲಿ ಜಮದಗ್ನಿಗೆ ಜನಿಸಿದ ಐವರು ಸುಪುತ್ರರಲ್ಲಿ ಪರಶುರಾಮನು ಕಡೆಯವನು. ಈ ಪರಶುರಾಮನೇ ಶ್ರೀಮನ್ನಾರಾಯಣನ ಅವತಾರವೆಂದು ತಿಳಿಯಾಲಾಗಿದೆ. ಈ ಐವರು ಸುಪುತ್ರರಿಂದಲೂ, ರೇಣುಕಾ, ದೇವಿಯಿಂದಲೂ ಕೂಡಿಕೊಂಡು, ಹೊಸೂರು-ಹುಲಿಗಿ ಪ್ರಾಂತವನ್ನು ಆಶ್ರಯವನ್ನಾಗಿ ಮಾಡಿಕೊಂಡು, ಮಧ್ಯ, ಪ್ರವಹಿಸುವ ತುಂಗಭದ್ರಾ ನದಿಯ ದಡದಲ್ಲಿ ಜಮದಗ್ನಿಯು ತಪಸ್ಸನ್ನಾಚರಿಸುತ್ತಿದ್ದನು.

ಒಂದು ಸಂದರ್ಭದಲ್ಲಿ ಎಲ್ಲ ಕುಮಾರನೂ ಫಲಹಾರ ತರಲು ಅಡವಿಗೆ ಹೋಗಿರಲು, ಜಮದಗ್ನಿಯು ದೇವರ ಪೂಜೆಯಲ್ಲಿ ನಿತರನಾಗಿದ್ದಾಗ ರೆಣುಕೆಯು ಸ್ನಾನಕ್ಕೆಂದು ನದಿಗೆ ತೆರಳಿದಳು. ಸ್ನಾನಾನಂತರ ಹಿಂತಿರುಗಿ ಬರುತ್ತಿದ್ದಾಗ ಚಿತ್ರ ರಥನೆಂಬ ಗಂಧರ್ವನು ತನ್ನ ವನಿತೆಯೊಂದಿಗೆ ಜಲಕ್ರೀಡೆಯಲ್ಲಿ ನಿರತನಾಗಿದ್ದದು ಗೋಚರಿಸಿತು. ವಿಚಿತ್ರವಾದ ಕ್ರೀಡಾ ದರ್ಶನದಿಂದ ರೇಣುಕಾದೇವಿಗೆ ಮನೋವಿಕಾರವಾಯಿತು. ತಡವಾಗಿ ಆಶ್ರಮಕ್ಕೆ ಬಂದ ರೇಣುಕೆಯನ್ನು ಸಿಟ್ಟಿನಿಂದ ನೋಡಲು ಆಕೆಯ ಮನಸ್ಸು ಮಲಿನವಾದುದು ಜಮದಗ್ನಿಯ ಜ್ಞಾನದೃಷ್ಟಿಗೆ ತೋರಿತು. ಋಷಿಯು ಮತ್ತಷ್ಟೂ ಕುಪಿತನಾಗಿ ಅನುಕ್ರಮವಾಗಿ ತನ್ನ ಪುತ್ರರನ್ನು ಕರೆದು ತಾಯಿಯ ಶಿರಸ್ಸನ್ನು ಛೇದಿಸುವಂತೆ ಅಜ್ಞಾಪಿಸಿದನು. ಧರ್ಮ ಸಂಕಟದಲ್ಲಿ ಬಿದ್ದ ಮೊದಲಿನ ನಾಲ್ಕು ಮಂದಿ ಪುತ್ರರು (ಯರ್ಮಶ್ವಾಸ, ಸುಕ್ಷೇಣ, ವಸು ಮತ್ತು ವಿಶ್ವಾವಸು) ತಾಯಿಯ ಶಿರಚ್ಛೇದನವನ್ನು ಮಾಡುವ ಪಾಪಕೃತ್ಯಕ್ಕೆ ಅಂಜಿ, ಏನೆಂದೂ ಪ್ರತ್ರ್ಯುತ್ತರವನ್ನು ಕೊಡದೆ ನಿಂತರು. ಜಮದಗ್ನಿಯು ಇವರ ಉದ್ಧಟತನಕ್ಕೆ ಇವರನ್ನು ಶಪಿಸಿ, ಪರಶುರಾಮನನ್ನು ಉದ್ದೇಶಿಸಿ ತನ್ನ ಆಜ್ಞೆಯನ್ನು ಪರಿಪಾಲಿಸಬೇಕೆಂದು ಕೇಳಿಕೊಂಡನು. ತಾಯಿಯ ರುಂಡವನ್ನು ಕತ್ತರಿಸಿ ಹಾಕಿದನು. ಸುಪ್ರಸನ್ನವಾದ ಜಮದಗ್ನಿಯ ಮಗನ ವಿಧೇಯತೆಗೆ ಮನಸೋತು ಬೇಕಾದ ವರವನ್ನು ಬೇಡಬೇಕೆಂದನು. ಈ ಮಾತಿಗೆ ಹುರುಷಗೊಂಡು ಪರಶುರಾಮನು ತನ್ನ ತಾಯಿಯನ್ನು ಪುನಃ ಬದುಕಿಸಬೇಕೆಂದು ತಂದೆಯನ್ನು ಪ್ರಾರ್ಥಿಸಿಕೊಂಡುನು ಮಾತ್ರವಲ್ಲದೆ ಮಾತೃ ಹತ್ಯಾದೋಷ ತಟ್ಟಬಾರದೆಂದೂ, ತನ್ನ ಅಣ್ಣಂದಿರೆಲ್ಲಾ ಮೊದಲಿನಂತೆಯೇ ಸಚೇತನರಾಗಬೇಕೆಂದೂ, ಎಲ್ಲಾ ವಿಷಯಗಳಲ್ಲೂ ಅನುಗ್ರಹಿಸಬೇಕೆಂದೂ ಬೇಡಿಕೊಂಡನು. ಮಹಾತಪಸ್ವಿಯಾದ ಜಮದಗ್ನಿಗಿಯು ಎಲ್ಲಾ ವರಗಳನ್ನೂ ಪರಶುರಾಮನಿಗೆ ದಯಾಪಾಲಿಸಿದನು. ರೇಣುಕಾದೇವಿಯು ನಿದ್ರೆಯಿಂದ ಎದ್ದಂತೆ ಸಜೀವಿತಳಾಗಿ ನಿಂತಳು. ಅಗ್ರಜರೆಲ್ಲರೂ ಉದ್ಥೃತರಾದರು.

ಪರಶುರಾಮನು ರೇಣುಕೆಯನ್ನು ಸಂಹರಿಸಿದುದು ಹುಲಿಗೆ ಪ್ರದೇಶದಲ್ಲಿ. ಅಲ್ಲಿಯೇಪಾದದಿಂದ ಕಂಠ ಪರ್ಯತ ಇದ್ದ ದೇಹವು ಬಿದ್ದುಹೋಗಿ, ಶಿರಸ್ಸು ಪ್ರಹಾರ ವೇಗದಿಂದ ಹೊಸೂರು ಪ್ರವೇಶ ಪತಿತವಾಯಿತು. ಈ ಎರಡೂ ಯೋಜಿತವಾಗಿ ರೇಣುಕಾದೇವಿಯು ಬದುಕಿದ ಮೇಲೆ, ಶ್ರೀಪರಶುರಾಮನು ತನ್ನ ಕರಕಮಲದಿಂದಲೇ ಒಂದು ಗೋಳಾಕಾರವಾದ ಶಿಲೆಯನ್ನು ತನ್ನ ತಾಯಿಯ ದಂಡವು ಬಿದ್ದಲ್ಲಿಯೂ, ಮತ್ತೊಂದನ್ನು ರುಂಡ ಬಿದ್ದಲ್ಲಿಯೂ ಇರಸಿ ತನ್ನ ಪರಶುವಿನಿಂದ ಭಿನ್ನವಾಗಿ ದುರ್ಗಾರೂಪವನ್ನು ತಾಳಿದ ತನ್ನ ತಾಯಿಯ ಅಂಶದಿಂದಲೂ, ಸಾಕ್ಷಾತ್ ಲಕ್ಷೀದೇವಿಯ ಆವೇಶದಿಂದಲೂ ಯುಕ್ತರಾಗುವಂತೆ ಮಾಡಿದನು. ಭಗವಂತರ ಇಚ್ಛೆಯಿಂದ ಎರಡು ಕಡೆಗಳಲ್ಲಿಯೂ ದುರ್ಗಾರೂಪದಿಂದ ದೇವಿಯು ಪ್ರತ್ಯಕ್ಷಳಾದಳು.

“ನೀನು ಕಲಿಯುಗ ಇರುವ ಪರ್ಯಂತರ ಇಲ್ಲೇ ಇದ್ದು ದುಷ್ಟರನು ಶಿಕ್ಷಿಸಿ, ಶಿಷ್ಟರನ್ನು ಪರಿಪಾಲಿಸುತ್ತ, ವಾಸವಾಗಿದ್ದು ಈ ಭಾರ್ಗವ ಕ್ಷೇತ್ರಕ್ಕೆ ಸ್ಮಾರಕಳಾಗಿರು” ಎಂದು ವರಗಳನ್ನಿತ್ತು ಪರಶುರಾಮನು ಮಹೇಂದ್ರ ಪರ್ವತವನ್ನು ಸೇರಲು ಹೊರಟು ಹೋದನು (ಡಾ. ಪಿ. ಗುರುರಾಜಭಟ್ : ೧೯೭೬ : ೧-೨)

ಶ್ರೀ ವ್ಯಾಸರಾಯರು ಹೊಸೂರಿಗೆ ದಿಗ್ವಿಜಯ ಮಾಡಿ ತಮ್ಮ ಶಿಷ್ಯನ ಮನೆಯಲ್ಲಿ ಇಳಿದುಕೊಂಡರು. ಮರುದಿನ ಪುರಪ್ರಮುಖರು ಒಂದು ಶ್ರೀ ಹೊಸೂರಮ್ಮನ ಗುಡಿಯಲ್ಲಿಯೇ ದೇವತಾರ್ಚನೆ ನಡೆಸಬೇಕೆಂದು ಬೇಡಿಕೊಂಡರು. ಶ್ರೀ ಸ್ವಾಮಿಗಳು ಔದಾಸೀನ್ಯದಿಂದ ಊರ ಪುರುಜನರ ಬೇಡಿಕೆಯನ್ನು ಕಡೆಗಣಿಸಿದರು. ಶಿಷ್ಯರೊಂದಿಗೆ ಸ್ವಾಮಿಗಳು ಸ್ನಾನಕ್ಕೆ ನದಿತಟಾಕಕ್ಕೆ ಹೋಗಿ ಸ್ನಾನಾದಿಕಾರ್ಯವನ್ನು ಮುಗಿಸಿದರು. ಹಿಂತಿರುಗುವಾಗ ಶ್ರೀಪಾದರಿಗೆ ಎರಡು ಕಣ್ಣುಗಳು ಮುಸುಕಾಗಿ ಕಾಣದಾದವು. ಜ್ಞಾನಿಗಳಾದ ಶ್ರೀವ್ಯಾಸತೀರ್ಥರು, ಇದು ದೇವಿಯ ಕೋಪದಿಂದಿರಬೇಕೆಂದು ಮನಗಂಡು ಮರುದಿನ ದೇವಾಲಯದಲ್ಲಿಯೇ ತನ್ನ ಆರಾಧ್ಯ ದೇವತೆಯಾದ ಶ್ರೀ ವೆಣುಗೋಪಾಲನ ಪೂಜೆಯನ್ನು ಮಾಡುವೆನೆಂದು ದೇವಿಯನ್ನು ಪ್ರಾರ್ಥಿಸಿಕೊಂಡರು. ಶ್ರೀ ಪಾದಂಗಳವರ ಕಣ್ಣುಗಳು ಮುಂಚಿನಂತೆಯೇ ಶಕ್ತಿಯುತವಾದವು.

ಸಂಕಲ್ಪದಂತೆಯೇ ಶ್ರೀಪಾದರು ಮರುದಿನ ತಮ್ಮ ಪೂಜಾದಿ ವಿನಿಯೋಗಗಳನ್ನು ದುರ್ಗಾದೇವಿಯ ದೇವಾಲಯದಲ್ಲಿಯೇ ಮಾಡಲು ಸನ್ನದ್ಧರಾದರು ಆದಿನ ರಾತ್ರಿ ಶ್ರೀಪಾದರಾಯರಿಗೆ ದೇವಿಯು ಸ್ವಪ್ನದಲ್ಲಿ ಕಾಣಿಸಿಕೊಂಡು ರುಕ್ಮಿಣೀ, ಸತ್ಯಭಾಮಾ ಸಹಿತ ಶ್ರೀಕೃಷ್ಣ ದೇವರಾರ್ಚನೆಯಾದನಂತರ ತಮ್ಮಲ್ಲಿರುವ ಎರಡು ಸಾಲಿಗ್ರಾಮಗಳನ್ನು ತನಗೆ ಕಣ್ಣಾಗಿಸಿಕೊಳ್ಳಲು ಒಪ್ಪಿಸಬೇಕೆಂದೂ, ತಾನು ಸ್ವತಃ ಬಂದು ಶ್ರೀಪಾದರ ಕೈಗಳಿಂದ ಹಿಂಬದಿಯಲ್ಲಿ ಅವುಗಳನ್ನು ಸ್ವೀಕರಿಸುವೆನೆಂದೂ ಹೇಳಿ ಅದೃಶ್ಯಳಾದಳು. ಶ್ರೀಪಾದರಿಗೆ ಆದ ಆನಂದ ಅಪರಿಮಿತವಾದುದು. ಮರುದಿನ ಅಂತೆಯೇ ಶ್ರೀಕೃಷ್ಣನ ಪೂಜೆಯಾದ ಅನಂತರ ಶ್ರೀಪಾದರು ತನ್ನ ಎರಡೂ ಕೈಗಳನ್ನು ಸಾಲಿಗ್ರಾಮಗಳೊಂದಿಗೆ ಹಿಂದೆ ಚಾಚಿದಾಗ, ದೇವಿಯು ನೃತ್ಯ ಸಪ್ಪಳದೊಂದಿಗೆ ಅವುಗಳನ್ನು ಸ್ವೀಕರಿಸಿ ಅದೃಶ್ಯಳಾದಳು. ಈ ಸಾಲಿಗ್ರಾಮಗಳೇ ಇಂದಿಗೂ ದೇವಿಯ ಮೂಲ ಮೂರ್ತಿಯ ಎರಡು ಕಣ್ಣುಗಳಾಗಿ ಪೂಜಿಸಲ್ಪಡುತ್ತವೆ. (ಡಾ. ಪಿ. ಗುರುರಾಜಭಟ್; ೧೯೭೬ : ೭-೮).

ವಿಜಯನಗರ ಪತನದನಂತರ ಅದಕ್ಕೆ ಅಧೀನರಾದ ಅನೇಕ ಪಾಳೆಯಗಾರರು ಸ್ವತಂತ್ರರಾದರು. ಹೀಗೆ ಸ್ವತಂತ್ರರಾದವರಲ್ಲಿ ಹರಪನಹಳ್ಳಿಯ ಪಾಳೆಯಗಾರನಾದ ಸೋಮಶೇಖರ ನಾಯಕನೂ ಒಬ್ಬನು. “ಹೊಸೂರು ಕ್ಷೇತ್ರ”ವು (ಕೋಟೆ) ಇವನ ಅಂಕಿತದಲ್ಲಿತ್ತು. ಕೆಲವು ವರ್ಷಗಳು ಗತಿಸಿದ ನಂತರ ಹೊಸೂರು ಕೋಟೆಯ ಪಾಳೆಯಗಾರನು ತಾನೂ ಸ್ವಾತಂತ್ರನೆಂದು ಘೋಷಿಸಿದನು. ಕುಪಿತನಾದ ಸೋಮಶೇಖರ ನಾಯಕನು ಹೊಸೂರಿನ ಪಾಳೆಯಗಾರನ ಮೇಲೆ ಯುದ್ಧ ಹೂಡಿದನು. ಅನೇಕ ದಿನಗಳ ಘನಘೋರ ಸಮಯ ಸಂಭವಿಸಿ ಹೊಸೂರು ಕೋಟೆ ನಾಶವಾಯಿತು. ಬಹುಸಂಖ್ಯೆಯಲ್ಲಿ ಸರದಾರರು, ಸೈನಿಕರು ಮೃತ್ಯುವಶರಾದರು. ಆದರೂ ಸೋಮಶೇಖರ ನಾಯಕನಿಗೆ ಕೋಟೆಯನ್ನು ಗೆಲ್ಲುವುದಾಗಿಲ್ಲ. ಸೈನಿಕರು ಜೋಗಮ್ಮನ ವೇಷದಲ್ಲಿ “ಯಾಕುಲದೇ ಜಗಾಕಲದೇ ಜಗಾ ಉಧೋ ಉಧೋ ಉಧೋ” ಎಂದು ಘೋಷಣೆ ಹಾಕುತ್ತ ಸಂಚರಿಸುತ್ತಿದ್ದರು. ಹಿಂದೂ ಸಾಮ್ರಾಜ್ಯ ಸಂಸ್ಥಾಪಕನಾದ ಛತ್ರಪತಿ ಶಿವಾಜಿಯ ಸೈನಿಕರು “ಹರ ಹರ ಮಹಾದೇವ” ಎಂದು ಘೋಷಣೆಯಿಂದ ಸ್ಫೂರ್ತಿ ಉತ್ಸಾಹಗಳನ್ನು ಪಡೆಯುತ್ತಿದ್ದಂತೆ ಹೊಸೂರಿನ ಕೋಟೆಯ ಸೈನಿಕರು ಮೇಲಿನ ಘೋಷಣೆಯಿಂದ ಸ್ಫೂರ್ತಿಯನ್ನು ಪಡೆದು ನಾಯಕನೊಂದಿಗೆ ಧೈರ್ಯೋತ್ಸಾಹಗಳಿಂದ ಸೆಣಸುತ್ತಿದ್ದರು.

ಈ ಮಧ್ಯೆ ಒಂದು ದಿನ ಸೋಮಶೇಖರನಿಗೆ ಸ್ವಪ್ನದಲ್ಲಿ ಗ್ರಾಮದೇವತೆ ಶ್ರೀ ಹೊಸೂರಮ್ಮ ದೇವಿಯು ಹೊಸೂರು ಕೋಟೆಯನ್ನು ರಕ್ಷಿಸುತ್ತಿದ್ದಂತೆಯೂ, ಅದು ಅಜೇಯವೆಂಬಂತೆಯೂ ಕಂಡಿತು. ಇದರಿಂದ ಪಶ್ಚಾತ್ತಾಪವಾಗಿ ನಾಯಕನು ಶ್ರೀ ಹೊಸೂರಮ್ಮನಿಗೆ ಶಿರಸಾಷ್ಟಾಂಗ ಪ್ರಣಾಮಗಳನ್ನು ಮಾಡಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡನಲ್ಲದೆ, ಭಯಭಕ್ತಿಗಳಿಂದ ಶ್ರೀದೇವಿಯ ಪೂಜೆಯನ್ನು ವಿಜೃಂಭಣೆಯಿಂದ ಮಾಡಿಸಿದನು. ಸುಪ್ರಸನ್ನಳಾದ ದೇವಿಯು ಅವನಿಗೆ ಪ್ರತ್ಯಕ್ಷಳಾಗಿ ಕ್ಷಮಾಧಾನ ಮಾಡಿದಳು. ಈ ಸುಸಂದರ್ಭದಲ್ಲಿ ಸೋಮಶೇಖರ ನಾಯಕರು ಶ್ರೀ ಹೊಸೂರಮ್ಮದೇವಿಯ ಪೂಜೆ ಮತ್ತು ಇನ್ನಿತ್ತರ ಸಂಪ್ರದಾಯಗಳನ್ನು ಅನೂಚೀನವಾಗಿ ಜರುಗಿಸುವುದಕ್ಕಾಗಿ ಎಪ್ಪತ್ತು ಎಕರೆ ಸುಜಲಾ ಹಾಗೂ ಸುಫಲಾ ಭೂಮಿಯನ್ನು ಕಾಣಿಕೆಯಿತ್ತನು. (ಡಾ. ಪಿ. ಗುರುರಾಜಭಟ್; ೧೯೭೬ : ೯-೧೦).