ರೋಗ ಪರಿಹಾರ

ಈ ಘಟನೆಯು ೧೯೬೦ ನೇ ಸಾಲಿನ ಅಕ್ಟೋಬರ್ ತಿಂಗಳಲ್ಲಿ ಜರುಗಿತ್ತು. ಬಳ್ಳಾರಿಯ ಹಳ್ಳಿಯಲ್ಲಿ ದ್ಯಾಮಪ್ಪನೆಂಬ ಬಡ ರೈತನು ಇದ್ದಾನೆ. ಇವನಿಗೆ ಒಬ್ಬ ಮಗಳು ಯಮನವ್ವನೆಂಬುವಳು ಇರುತ್ತಾಳೆ. ಈಕೆಯನ್ನು ಅದೇ ಊರಿನಲ್ಲಿ ಹಳ್ಳಿ ಭೀಮಪ್ಪನಿಗೆ ಕೊಟ್ಟು ಆತನನ್ನು ಅಳಿಯತನಕ್ಕೆ ಇಟ್ಟುಕೊಂಡಿದ್ದಾನೆ. ೧೯೬೦ನೇ ಇಸ್ವಿಯ ಭಾದ್ರಪದ ಮಾಸದಲ್ಲಿ ಯಮನವ್ವನಿಗೆ ಜಡ್ಡಾಯಿತು. ಜಡ್ಡಿನ ಲಕ್ಷಣವು ಬಹಳ ಚಮತ್ಕಾರವಾಗಿತ್ತು. ಮೈಯಲ್ಲಿ ಸಣ್ಣಾಗಿ ಜ್ವರವಿದ್ದು ಯಾವಾಗಲೂ ನಡುಗುತ್ತಿದ್ದಳು. ಅನೇಕ ಮಂದಿ ವೈದ್ಯರು ಡಾಕ್ಟರುಗಳಿಗೆ ತೋರಿಸಿದ್ದಾಯಿತು ಗುಣವಾಗಲಿಲ್ಲ. ಒಂದು ದಿನ ಶ್ರೀದೇವಿಯು ದ್ಯಾಮವ್ವನ ಮೈಯಲ್ಲಿ ಪ್ರವೇಶಿಸಿ “ಯಾವಾಗಲೂ ನಿಮ್ಮ ಮನೆತನದವರು ನನ್ನಲ್ಲಿ ಭಕ್ತಿ ಶ್ರದ್ಧೆ ಹೊಂದಬೇಕು. ಅಂದರೆ ನಿನ್ನ ಕಷ್ಟ ಪರಿಹಾರ ಮಾಡುವೆನು” ಎಂದು ಹೇಳಿದಳು ಮೂರು ದಿನ ಮೈಯಲ್ಲಿ ಎಚ್ಚರವಿಲ್ಲದೇ ಮಲಗಿಬಿಟ್ಟಳು. ಅದೇ ಸ್ಥಿತಿಯಲ್ಲಿ ದಸರೆಯ ಮುಂದೆ ಶ್ರೀ ಹುಲಿಗೆಮ್ಮನ ಗುಡಿಗೆ ಕರಕೊಂಡು ಬಂದು, ತಪ್ಪಾಯಿತೆಂದು ಬೇಡಕೊಂಡು, ಸೇವೆಗೈಯಲು ಪ್ರಾರಂಭಮಾಡಲಾಗಿ ಮರುದಿನವೇ ಗುಣವಾಯಿತು. ಈಗ ಒಂದು ಹೆಣ್ಣು ಶಿಶುವನ್ನು ಹೆತ್ತು ಸೌಖ್ಯದಿಂದ ಇರುತ್ತಾಳೆ. (ಶ್ರೀ .ಬಿ. ದೇಸಾಯಿ; ೧೯೭೩ : ೨೦).

ಭಕ್ತರ ಕೈವಾರಿ ಶ್ರೀದೇವಿ ಟಿಪ್ಪುಸುಲ್ತಾನನ ಮೇಲೆ ಕೃಪಾ ಮಾಡಿದ್ದು

ಒಮ್ಮೆ ಟಿಪ್ಪು ಸುಲ್ತಾನನು ದಂಡಯಾತ್ರೆಗೆ ಹೊರಡಿದ್ದಾನೆ. ದಾರಿಯಲ್ಲಿ ಅನೇಕ ಪಾಳೇಗಾರರನ್ನು ಸದೆಬಡೆಯುತ್ತಾ, ಅವರನ್ನು ಗೆಲ್ಲುತ್ತ ಅವರಿಂದ ಕಪ್ಪಕಾಣಿಕೆಯನ್ನು ಸ್ವೀಕರಿಸುತ್ತ ಹೊರಟಿದ್ದಾನೆ. ಹೀಗೆ ಸಾಗುತ್ತ ಸಾಗುತ್ತ ಹುಲಿಗಿ ಗ್ರಾಮಕ್ಕೆ ಆಗಮಿಸಿದನು. ಆಗಿನ ಕಾಲಕ್ಕೆ ಹುಲಿಗಿಯು ಭದ್ರವಾದ ಕೋಟೆಯಿಂದ ಯುಕ್ತವಾಗಿ ಆಭೇದ್ಯವಾಗಿತ್ತು. ಕೋಟೆಯನ್ನು ಮುತ್ತಿ ಒಂದು ತಿಂಗಳಾದರೂ ಸೋಲು ಗೆಲುವು ನಿಶ್ಚಯವಾಗಲೊಲ್ಲದು. ಹುಲಿಗಿಯ ಪಾಳೇಗಾರ ದೇವಿಯ ಪರಮಭಕ್ತನಿದ್ದನು. ಒಂದು ದಿನ ಪಾಳೇಗಾರನು ಟಿಪ್ಪುವಿನಿಂದ ಜರ್ಜರನಾಗಿ ಶ್ರೀದೇವಿಯನ್ನು ಕುರಿತು ನಾನಾ ರೀತಿಯಿಂದ ಸ್ತೋತ್ರಮಾಡಿ ಶ್ರೀದೇವಿಯ ದಂಡಕವನ್ನು ಭಕ್ತಿಪರವಶದಿಂದ ಪಾಡುತ್ತಿರಲು ಅವನಿಗೆ ನಿದ್ರೆ ಬಂದಂತಾಗಿ ಮಲಗಿಬಿಟ್ಟನು. ಅವನ ಕನಸಿನಲ್ಲಿ ಶ್ರೀದೇವಿಯು ಬಂದು “ಕುಮಾರ, ಏಕೆ ದುಃಖ ಮಾಡುವೆ? ನಾನಿರಲು ನೀನು ದುಃಖಿಸುವುದೆ? ಇನ್ನು ಮೂರು ದಿನಗಳಲ್ಲಿ ಟಿಪ್ಪುವು ತನ್ನ ಬಿಡಾರವನ್ನು ಇಲ್ಲಿಂದ ಎಬ್ಬಿಸುತ್ತಾನೆ. ನೀನು ಕಾಳಜಿ ಮಾಡುವ ಕಾರಣವಿಲ್ಲ. “ಹೀಗೆಂದು ಅಪ್ಪಣೆ ಕೊಟ್ಟಳು. ಮರುದಿನ ಟಿಪ್ಪುವಿನ ಬಿಡಾರದಲ್ಲಿ ಅಲ್ಲೋಲ ಕಲ್ಲೋಲ ಪ್ರಾರಂಭವಾಯಿತು. ದಂಡಾಳುಗಳು ಮತ್ತು ಆನೆ, ಕುದುರೆ, ಎಲ್ಲವೂ ಕಣ್ಣು ಕಾಣದೆ ಬಳಲ ಹತ್ತಿದವು. ಇದೇನು ಆಶ್ಚರ್ಯ ಎಂದು ಸುತ್ತು ಮುತ್ತು ನೋಡಿ ಸ್ವತಃ ಕುದುರೆಯನ್ನೇರಿ ತನ್ನ ಸೈನ್ಯದಲ್ಲಿ ತಿರುಗಾಡತ್ತಿರಲು ಅವನ ಕುದುರೆಯು ಒಂದು ಹೆಜ್ಜೆಯನ್ನು ಸಹ ಮುಂದಿಡದೆ ಚಡಪಡಿಸಲು ಪ್ರಾರಂಭವಾಯಿತು. ಸೈನ್ಯದಲ್ಲಿ ಎತ್ತ ನೋಡಿದತ್ತ ಹಾಹಾಕಾರವು ಪ್ರಾರಂಭವಾಯಿತು. ಇಷ್ಟಾದ ಬಳಿಕ ದೂರದಿಂದ ಯಾರೋ ಹೆಣ್ಣುಮಗಳು ಬರುವಂತೆ ಭಾಸವಾಯಿತು. ನೋಡುತ್ತಾನೆ ಇವಳೇನು ಮೋಹಿನಿಯೋ ಅಥವಾ ದೇವಲೋಕದ ಅಪ್ಸರೆಯೋ ಎಂದು ನೋಡುತ್ತಿರಲಾಗಿ ಅವಳು ತೀರ ಹತ್ತಿರ ಬಂದಳು.”

ಟಿಪ್ಪು – “ನೀನಾರಮ್ಮ , ನನ್ನ ದಂಡಿನ ಪಾಳಯದಲ್ಲಿ ನಿರ್ಭಯವಾಗಿ ಅಡ್ಡಾಡಲು ನಿನಗೆ ಸ್ವಲ್ಪಾದರೂ ಭಯವಿಲ್ಲವೇ?”

ಸ್ತ್ರೀ – “ನಾನು ಇಲ್ಲಿಯವಳೇ; ಇದೇ ಊರಲ್ಲಿರುವವಳು.”

ಟಿಪ್ಪು – “ನೀನು ನನ್ನೆದುರಿಗೆ ಇಷ್ಟು ದಿಟ್ಟತನದಿಂದ ಮಾತಾಡುವಿ. ನನ್ನ ಎದುರಿನಲ್ಲಿ ಸ್ರ್ತೀಯರು ಬರಬೇಕಾದರೆ ಅಂಜುವರು. ಇದನ್ನೆಲ್ಲ ನೋಡಲಾಗಿ ನೀನು ಮನುಷ್ಯಳಲ್ಲ. ನಮ್ಮ ಚಾಮುಂಡಿಯೇ ನೀನಿರುವೆಯೆಂದು ತಿಳಿಯುವೆ. ಅಲ್ಲವೆಂದಾದರೆ ಸಾಮಾನ್ಯ ಮನುಷ್ಯಳಾಗಿದ್ದರೆ ನನ್ನ ಎದುರಿಗೆ ಬರುವ ಸಾಹಸ ಮಾಡುತ್ತಿದ್ದಿಲ್ಲ. ಒಂದು ವೇಳೆ ನೀನು ಚಾಮುಂಡಿಯೇ ನಿಜವಾಗಿದ್ದ ಪಕ್ಷದಲ್ಲಿ ನನ್ನ ಸೈನ್ಯದ ಅವಸ್ಥೆಯು ಹೀಗಾಗಲು ಕಾರಣವೇನು? ದಯವಿಟ್ಟು, ನನಗೆ ತಿಳಿಸುವ ಕೃಪೆ ಮಾಡಬೇಕೆಂದು” ಟಿಪ್ಪುವು ಪ್ರಾರ್ಥಿಸುತ್ತಾನೆ.

ಶ್ರೀದೇವಿ – “ಕುಮಾರ ನೀನಂದಂತೆ ನಾನು ಸಾಮಾನ್ಯ ಸ್ತ್ರೀಯಾಗಿರದೆ ಚಾಮುಂಡಿಯೇ. ಇಲ್ಲಿ ನಾನು ಅವತಾರ ಮಾಡಿದ್ದೇನೆ. ಇಲ್ಲಿ ನಾನು ವ್ಯಾಘ್ರೇಶ್ವರಿ ಎಂದು ಹೆಸರಾಗಿದ್ದೇನೆ. ಮೈಸೂರಿನಲ್ಲಿ ನೀನು ಹೇಗೆ ನನ್ನ ಪರಮ ಭಕ್ತನೋ ಅದರಂತೆಯೇ ಈ ಊರಿನಲ್ಲಿರುವ ಪಾಳೇಗಾರನು ನನ್ನ ಪರಮ ಭಕ್ತನು. ಮತ್ತು ಕೆವಲ ಧರ್ಮನಿಷ್ಠನು. ಈತನಿಗೆ ನೀನು ತೊಂದರೆ ಕೊಟ್ಟಿದ್ದಕ್ಕೆ ನನ್ನ ಪ್ರಭಾವ ತೋರಿಸಬೇಕಾಗಿ ಬಂದಿತು. ನೀನು ಇಂದೇ ಈ ಊರ ಗೊಡವಿಗೆ ಬರುದಿಲ್ಲವೆಂದು ನನಗೆ ವಚನ ಕೊಟ್ಟರೆ ಪುನಃ ನಿನ್ನ ಸೈನ್ಯಕ್ಕೆ ಮಾರ್ಗತೋರುವೆ” ಹೀಗೆಂದು ಹೇಳಿ ಅಂತರ್ಧಾನವಾದಳು.

ಹುಲಿಗೆಮ್ಮನಿಗೆ ಹಿನ್ನೆಲೆಯಾಗಿ ಹೇಳುವ ಕತೆ ಮತ್ತು ಸವದತ್ತಿಯ ಎಲ್ಲಮ್ಮನಿಗೆ ಹಿನ್ನಲೆಯಾಗಿ ಹೇಳುವ ಕಥೆಯು ಬಹುಮಟ್ಟೆಗೆ ಒಂದೇ ಆಗಿದೆ. ಎಲ್ಲಮ್ಮನೇ ಹುಲಿಗೆಮ್ಮನ ರೂಪದಲ್ಲಿ ‘ಹುಲಿಗಿ’ ಯಲ್ಲಿ ಪ್ರತ್ಯಕ್ಷಳಾಗಿದ್ದಾಳೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇದು ಸಹಜವೂ ಹೌದು.

ಲಭ್ಯ ಇರುವ ಪುರಾಣ ಕತೆಯ ಸ್ವರೂಪ ಇಂತಿದೆ : ನರ್ಮದಾ ನದಿ ಬಯಲಿನಲ್ಲಿ ಜಮದಗ್ನಿಯು ವಾಸಿಸುತ್ತಿದ್ದ. ಅವನ ಹೆಂಡತಿಯ ಹೆಸರು ರೇಣುಕ. ಈಕೆ ಒಬ್ಬಳು ರಾಜಕುಮಾರಿಯಾಗಿದ್ದು, ಜಮದಗ್ನಿಯ ತಪಃ ಶಕ್ತಿಗೆ ಮರುಳಾಗಿ ಆತನನ್ನು ಮದುವೆ ಆಗುತ್ತಾಳೆ. ಜಮದಗ್ನಿ-ರೇಣುಕೆಯರಿಗೆ ೫ ಜನ ಮಕ್ಕಳು ಕೊನೆಯವನೇ ಪರಶುರಾಮ.

ದಿನಂಪ್ರತಿ ನರ್ಮದೆಯಲ್ಲಿ ಸ್ನಾನ ಮಾಡಿ ಮುಡಿಯುಟ್ಟು, ಮರಳಿನ ಕೊಡದಲ್ಲಿ ಜಮದಗ್ನಿಯ ಯಜ್ಞಕ್ಕೆ ನೀರು ತರುವುದು ರೇಣುಕೆಯ ಕೆಲಸ. ಒಂದು ದಿನ ರೇಣುಕೆಯು ಸ್ನಾನ ಮಾಡುತ್ತಿರುವಾಗ ನರ್ಮದೆಯಲ್ಲಿ ಕೆಲವು ಜನ ಗಂಧರ್ವರು ಸ್ನಾನ ಮಾಡುವುದನ್ನು ನೋಡುತ್ತಾಳೆ. ಅವಳ ಮನಸ್ಸು ಸ್ವಲ್ಪ ಚಂಚಲವಾಗುತ್ತದೆ. ಪರಿಣಾಮವಾಗಿ ಆದಿನ ಆ ಕೆಗೆ ಉಸುಕಿನಲ್ಲಿ ಕೊಡ ಮಾಡಲಾಗುವುದಿಲ್ಲ. ಅಸಹಾಯಕಳಾದ ರೇಣುಕೆ ಆಶ್ರಮಕ್ಕೆ ಬರುತ್ತಾಳೆ. ವಿಷಯ ತಿಳಿದ ಜಮದಗ್ನಿಯು ಆಕೆಯ ತಲೆ ಕತ್ತರಿಸಲು ಮಕ್ಕಳಿಗೆ ಆಜ್ಞಾಪಿಸುತ್ತಾನೆ. ತಾಯಿಯ ತಲೆ ಕಡಿಯಲು ನಿರಾಕರಿಸಿದ ಮೊದಲ ನಾಲ್ಕು ಮಕ್ಕಳು ಸುಟ್ಟು ಭಸ್ಮರಾಗುತ್ತಾರೆ. ಕೊನೆಯವನಾದ ಪರಶುರಾಮನು ತಾಯಿಯ ತಲೆ ಕತ್ತರಿಸುತ್ತಾನೆ. ಮತ್ತು ಜಮದಗ್ನಿ ನೀಡಿದ ವರದಿಂದ ಸತ್ತ ತಾಯಿಯನ್ನು ಮರಳಿ ಬದುಕಿಸಿ, ಹಿಮಾಲಯಕ್ಕೆ ಹೋಗುತ್ತಾನೆ.

ಜನಪದ ಪುರಾಣಗಳಲ್ಲಿ ಹುಲಿಗೆಮ್ಮ

ಜನಪದ ಪುರಾಣಗಳಲ್ಲಿ ಕಂಡುವರುವ ಎಲ್ಲಮ್ಮನ ಕತೆಯು ಕೆಳಗೆ ಕಾಣಿಸಿದ ಹಾಡಿನಲ್ಲಿ ಹ್ರಸ್ವವಾಗಿ ಕೇಂದ್ರಿಕೃತಗೊಂಡಿದೆ.

ಹುಟ್ಟಿ ಬಂದೆ ಎಲ್ಲಮ್ಮನಾಗಿ
ನಿನ್ನ ಮದಿವಿಯ ಮಾಡಿ
ಕೊಟ್ಟಾರಪ್ಪ ಜಮದಗ್ನಿಗೆ
ರೇಣುಕ ರಾಜ ನಿನ ತಂದಿ
ಭೋಗಾವತಿ ನಿನ ತಾಯಿ
ಹುಟ್ಟಿ ಬಂದೆ ಅವರ ಹೊಟ್ಟೇಲಿ
ಹಾಕಿ ತೂಗ್ಯಾರ ತೋಟ್ಟೀ ಮೇಲೆ
ಹಾವಿನ ಸಿಂಬಿ ತಲಿಯ ಮ್ಯಾಲಿ
ಉಸುಗಿನ ಕೊಡ ಅದರ ಮ್ಯಾಲ
ಪತಿ ಸೇವೆ ಮಾಡುತಲಿ
ನೀರು ತರೂದು ನದಿಯಲಿ
ನೀರು ತರೂ ನದಿಯಲಿ
ದೃಷ್ಟಿ ಹೋತ ಅದರ ಮ್ಯಾಲ
ಕೊಡ ಬಿತ್ತ ಅದರ ಮ್ಯಾಲ
ಜಮದಗ್ನಿಗೆ ತಿಳಿದೀತೆಲ್ಲ
ಪತ್ನಿ ಮಾಡಳ ದುಃಖವಲ್ಲಿ
ಶಾಪ ಕೊಟ್ಟ ಆತನಲ್ಲ
ಕುಷ್ಠರೋಗ ಬಡೀತ ಮೈಲಿ
ಕಾಡು ಮೇಡು ತಿರುಗತಲಿ
ಎಕ್ಕಯ್ಯ ಜೋಗಯ್ಯ ಬಂದಾನಲಿ
ಜಲ್ಮ ಉದ್ಧರಾದೀತಲಿ
ಮತ್ತೆ ಬಂದಾಳಲ್ಲೊ ಮನಿಗೆ
ಸಿಟುಗೊಂಡ ಮುನಿಯೇ ಕರೆದ
ಬಾ ರಾಮಾ ಏನ ಬೇಡತಿ ರಾಮ
ತಲೆಯ ಕಡಿಯೇ ಶಿರಾವಾ ಕಡಿಯೇ
ದಿಡಾ ಬಿತ್ತ ಭೂಮಿಯ ಮ್ಯಾಲೆ

ತುಂಬ ಸಂಕ್ಷಿಪ್ತವಾಗಿರುವ, ಆದರೆ ಬಹಳ ಜನಪ್ರಿಯವಾಗಿರುವ ಹಾಡಿದು, ಇದೇ ಹಾಡಿನ ಜಾಡು ಹಿಡಿದ ಜನರ ಕತೆಯ ಸ್ಥೂಲ ರೂಪ ಇಂತಿದೆ.

ಕಾಶ್ಮೀರ ಪಟ್ಟಣದಲ್ಲಿ ಒಬ್ಬ ರಾಜ ಇದ್ದ. ಅವನ ಹೆಸರು ರೇಣುಕ ರಾಜ. ಮೂರು ಲೋಕಕ್ಕೆ ಆತ ಶ್ರೀಮಂತ, ಭಾರೀ ಅರಮನೆ, ಅವನ ಮೊದಲನೇ ಹೆಂಡತಿಯ ಹೆಸರು ಭೋಗಾವತಿ, ಆಕೆಗೆ ಮಕ್ಕಳಾಗಲಿಲ್ಲ. ಆರಸ ಎರಡನೇ ಮದುವೆ ಆದ, ಏಳು ವರ್ಷ ಆದರೂ ಈಕೆಯಲ್ಲಿ ಮಕ್ಕಳಾಗಲಿಲ್ಲ. ಆಮೇಲೆ ಅರಸ ಮೂರನೇ ಮದುವೆ ಆಗುತ್ತಾನೆ. ಅವಳಿಗೂ ಮಕ್ಕಳಾಗಲಿಲ್ಲ. ಹೀಗೆ ಆರಸ ಒಟ್ಟು ಎಳು ಮದುವೆ ಆಗುತ್ತಾನೆ. ಅದರೂ ಮಕ್ಕಳಾಗುವುದಿಲ್ಲ. ಕೊನೆಗೆ ಅರಸು ತಪಸ್ಸು ಮಾಡುತ್ತಾನೆ. ಶಿವನ ಧ್ಯಾನಿಸುತ್ತಾನೆ. ಪಾರ್ವತೀನ ಬೇಡಿಕೊಳ್ಳುತಾನೆ. ಪಾರ್ವತಿ ತಾನೇ ಎಲ್ಲವ್ವನಾಗಿ ಹುಟ್ಟುತ್ತೇನೆ ಎನ್ನುತ್ತಾಳೆ. ಹಾಗೆ ಹುಟ್ಟುತ್ತಾಳೆ. ಹುಟ್ಟಿದ ಎಲ್ಲವ್ವನಿಗೆ ಹನ್ನೆರಡು ಗಾವುಡ ದೂರದಲ್ಲಿರುವ ಜಮದಗ್ನಿ ಎಂಬ ಋಷಿಯ ಮೇಲೆ ದೃಷ್ಟಿ ಬೀಳುತ್ತದೆ. ನೆಲದವರೆಗೆ ಗಡ್ಡ ಮುಗಿಲವರೆಗೆ ಜಡೆ ಬೆಳೆಸಿದ ಜಮದಗ್ನಿಯನ್ನು ಮಾತಾಡುಸುವುದು ಕಷ್ಟ ಆಗುತ್ತದೆ. ಕೊನೆಗೆ ರೇಣುಕ ರಾಜ ಕೈಮುಗಿದು ನಿಲ್ಲುತ್ತಾನೆ. ಜಮದಗ್ನಿಗೆ ಸಂತೋಷ ಆಗುತ್ತದೆ. ನಾನ ಹೇಳಿದಂಗೆ ಕೇಳಿದರೆ ಮದುವೆ ಆಗುತ್ತೇನೆ ಎಂದು ಜಮದಗ್ನಿ ಹೇಳುತ್ತಾನೆ. ಅರಸ ಒಪ್ಪುತ್ತಾನೆ. ಜಮದಗ್ನಿ ರೇಣುಕೆಯರ ಮದುವೆ ನಡೆಯುತ್ತದೆ.

ಆ ಮದುವೆ ಆದ ನಂತರ ರೇಣುಕೆಗೆ ಒಂದು ಕೆಲಸ ಒಪ್ಪಿಸುತ್ತಾನೆ. ಅದೇನೆಂದರೆ ಉಸುಕಿನ ಕೊಡ ಮಾಡಿ ಹಾವಿನ ಸಿಂಬಿ ಮೇಲಿಟ್ಟು ಜಮದಗ್ನಿಯ ಯಜ್ಞದ ಕೆಲಸಕ್ಕೆ ನೀರು ತರುವುದು. ದಿನಾ ಇದೇ ನಡೆಯುತ್ತಿತ್ತು. ಒಂದು ದಿನ ಪಾರ್ವತಿ ಪರಮೇಶ್ವರರು ಹೊಳೆಯಲ್ಲಿ ಈಜಾಡುತ್ತಿದ್ದರು. ರೇಣುಕ ಅದನ್ನು ನೋಡಿದಳು. ನೋಡಿ ಮನಸ್ಸಿನಲ್ಲಿ ಅಂದುಕೊಂಡಳು. “ನಾ ಎಂಥ ಪಾಪಿ ಬೂದಿಬಡುಕನ ಮದುವೆ ಆಗಿ ಬಿಟ್ಟೆ, ರಾಜನ ಮದುವೆ ಅಗಿದ್ರೆ ಸುಖವಾಗಿರುತ್ತಿದ್ದೆ” ಹಾಗಂದದ್ದಷ್ಟೆ ತಡ ಸರ್ಪದ ಸಿಂಬಿ ಹರಿದು ಹೋಯಿತು. ಉಸುಕಿನ ಕೊಡ ನಿಲ್ಲಲೇ ಇಲ್ಲ. ಎಷ್ಟು ಪ್ರಯತ್ನ ಮಾಡಿದರೂ ಸಫಲ ಆಗಲಿಲ್ಲ. ಹಾಗೇ ಆಶ್ರಮಕ್ಕೆ ಬರುತ್ತಾಳೆ. ಜಮದಗ್ನಿ ಉರಿ ಉರಿ ಮುಖ ಮಾಡಿ ಕುಂತಿದ್ದ ‘ಎಲ್ಲಿ ನೀರು ಎಂದು ಕೇಳಿದಾಗ ಆಕೆ ನಡೆದದ್ದು ಹೇಳುತ್ತಾಳೆ’. ನೀಚ – ಹಾದರಗಿತ್ತಿ ಮೈಮೇಲೆ ಕುಷ್ಠ ಬರಲಿ ಎಂದು ಆತ ಶಪಿಸುತ್ತಾನೆ. ಆಕೆಯ ಮೈ ತುಂಬ ಕಜ್ಜಿ ಆಗಿ ಎಲ್ಲರೂ ಹೇಸಿಕೊಂಡರು. ಎಲ್ಲಿಗೆ ಹೋಗಲಿ ಎಂದು ಚಿಂತಿಸಿದ ಆಕೆ ತನ್ನ ಅಕ್ಕ ತಂಗಿಯರ ಮನೆಗೆ ಹೋಗುತ್ತಾಳೆ. ಅದರೆ ಅಕ್ಕ-ತಂಗಿಯರು ರೇಣುಕೆಗೆ ಸ್ಥಳ ಕೊಡುವುದಿಲ್ಲ. ಸಿಟ್ಟಿನಿಂದ ರೇಣುಕೆ ಒಬ್ಬಳ ತಲೆಗೆ ಗುದ್ದಿದಳು. ಆಕೆಯ ನೆತ್ತಿ ಸೋರಲಿಕ್ಕೆ ಶುರುವಾಯಿತು. ಇನ್ನೊಬ್ಬಳು ತಂಗಿ ಬಾದಾಮಿ ಬನಶಂಕರಿ ಹತ್ತಿರ ಬಂದರೆ ಆಕೆಯೂ ನೆಲೆ ನೀಡಲು ನಿರಾಕರಿಸುತ್ತಾಳೆ. ನಿನ್ನ ಪೂಜಾರಿಗಳಿಗೆ ಬಡತನ ಬರಲಿ ಎಂದು ಆಕೆಗೆ ರೇಣುಕೆ ಶಾಪ ನೀಡುತ್ತಾಳೆ. ಅಲ್ಲಿಂದ ಮುಂದೆ ರೇಣುಕೆಯು ಎಕ್ಕಯ್ಯ, ಜೋಗಯ್ಯ, ಉದ್ದಯ್ಯ, ಶರಣಯ್ಯ, ಎಂಬ ನಾಲ್ಕು ಜನ ಜೋಗಿಗಳ ಹತ್ತಿರಬರುತ್ತಾಳೆ. ಎಕ್ಕಯ್ಯ – ಜೋಗಯ್ಯ ಸ್ನಾನ ಮಾಡುವಾಗ, ಅವರ ಮೈಲಿಂದ ಬಿದ್ದ ನೀರಿಗೆ ರೇಣುಕೆ ಮೈಗೊಡತ್ತಾಳೆ. ಆಗ ಆಕೆಗೆ ನೋವು ಕಡಿಮೆ ಆಯಿತು. ಇವರು ಮಹಾ ಪುರುಷರು ಎಂದುಕೊಂಡು ಆಕೆ ಮುಂದೆ ಆ ನಾಲ್ವರ ಬಳಿ ಇದ್ದು, ದಿನಾ ಕಸಹೊಡೆಯುತ್ತಿದ್ದಳು. ಒಂದು ದಿನ ಜೋಗಪ್ಪನಿಗೆ ಈಕೆ ಯಾರೋ ದೊಡ್ದವರ ಮನೆ ಹೆಣ್ಣು ಅನ್ನಿಸಿತ್ತು. ಆತ ಆಕೆಯ ಕೈ ಹಿಡಿದು ‘ಯಾಕವಾ ಮಗಳಾ ನೀ ದೊಡ್ದವರ ಮನೆ ಮಗಳು ಹೌದಲ್ಲೋ ಎಂದು ಕೇಳುತ್ತಾನೆ. ರೇಣುಕೆ ನಡೆದದ್ದೆಲ್ಲ ಹೇಳಿ ನಿಮ್ಮ ಪಾದ ಸೇವೆಯಿಂದ ರೋಗ ಕಡಿಮೆ ಆಗುತ್ತಿದೆ ಎನ್ನುತ್ತಾಳೆ. ‘ದೊಡ್ಡವರ ಮಗಳು ಹೀಗೆ ಬದುಕಬಾರದು ಬೇರೆ ಕಡೆ ಹೋಗು’ ಎನ್ನುತ್ತಾರೆ. ಜೋಗಯ್ಯ ನಾ ಹೋಗಲಾರೆ ನನಗೆ ಬದುಕಲು ದಾರಿ ತೋರಿಸಿ ಎನ್ನುತ್ತಾಳೆ. ಆಗ ಜೋಗಯ್ಯು ತನ್ನ ಪಾದರಕ್ಷೆ ತೆಗೆದು ಆಕೆಗೆ ಕೊಟ್ಟು ‘ಹೋಗು ಒಳ್ಳೆಯದಾಗುತ್ತದೆ’ ಎನ್ನುತ್ತಾನೆ.

ಅಲ್ಲಿಂದ ಹೊರಟ ರೇಣುಕಳು ಸೀತಿಮನಿಗೆ ಬರುತ್ತಾಳೆ. ಅಪ್ಪಯ್ಯ, ಚಿಕ್ಕಯ್ಯ, ಮರುಳಯ್ಯ ಮತ್ತು ರಾಮ ಎಂಬ ನಾಲ್ಕು ಜನ ಸ್ವಾಮಿಗಳನ್ನು ಭೇಟಿ ಮಾಡುತ್ತಾಳೆ. ಅವರೂ ಆಕೆಗೆ ಇರಲು ಜಾಗ ಕೊಡುವುದಿಲ್ಲ. ಅಲ್ಲಿಂದ ಮುಂದೆ ಕೂಡಲ ಸಂಗಮಕ್ಕೆ ಬಂದು ಸಂಗಪ್ಪಣ್ಣನನ್ನು ಕೇಳುತ್ತಾಳೆ. ಆತನೂ ಜಾಗಕೊಡುವುದಿಲ್ಲ. ಅಲ್ಲಿಂದ ಮುಂದ ಗೊಡಚಿ ಈರಣ್ಣನಲ್ಲಿಗೆ ಹೋಗುತ್ತಾಳೆ. ಆತನೂ ಜಾಗಕೊಡದೆ ಅಲ್ಲಿ ಗುಡದಾಗೆ ಇರು ಎನ್ನುತ್ತಾನೆ. ಆ ಪ್ರಕಾರ ಎಲ್ಲವ್ವ ಗುಡ್ಡದಲ್ಲಿ ಬಂದು ನಿಲ್ಲುತ್ತಾಳೆ. ಅಲ್ಲಿ ಮೈಲಾರಲಿಂಗ ಇದ್ದ. ಮೈಲಾರನ ಭಂಡಾರ ಕಂಡು ಆಕೆಗೆ ಆಸೆ ಆಗುತ್ತದೆ. ಐದು ಹಿಡಿ ಭಂಡಾರನ ಉಡಿಯಲ್ಲಿ ಕಟ್ಟಿಕೊಂಡು ಅಲ್ಲಿಂದ ಒಡುತ್ತಾ ನೇರ ಹುಲಿಗಿಗೆ ಬರುತ್ತಾಳೆ. ಹುಲಿಗಿಯಲ್ಲಿ ನದಿ ತುಂಬಿ ಹರಿಯುತ್ತಿತ್ತು. ಅಂಬಿಗರು ದೋಣೀಲಿ ಹೋಗುತ್ತಿದ್ರು. ನನ್ನನ್ನೂ ಆಕಡೆ ದಾಟಿಸಿರಿ ಎಂದು ರೆಣುಕೆ ಅಂಬಿಗರನ್ನು ಬೇಡಿಕೊಳ್ಳುತ್ತಾಳೆ. ದೋಣಿ ಮೇಲೇರಿ ಕುಳಿತುಕೊಳ್ಳುತ್ತಾಳೆ. ಹೊಳೆ ನಡುವಿನಲ್ಲಿ ದೋಣಿಯಲ್ಲಿದ್ದ ಇತರರು ರೇಣುಕೆಯ ಮೇಲೆ ಮನಸ್ಸು ಮಾಡುತ್ತಾರೆ. ಎಕ್ಕಪ್ಪ, ಜೋಗಪ್ಪ, ಉದ್ದಯ್ಯ, ಶರಣಯ್ಯ ಇದುವವರೆಗೆ ನನ್ನ ಪಾತಿವ್ರತ್ಯಕ್ಕೆ ತೊಂದರೆ ಇಲ್ಲ ಎಂದು ಆಕೆ ಹೇಳಿಕೊಳ್ಳುತ್ತಾಳೆ. ಉಧೋ ಎಂದು ಹೇಳಿ ಸೊಂಟದಿಂದ ಭಂಡಾರ ತೆಗೆದು ಅವರ ಮೇಲೆ ಉಗ್ಗುತ್ತಾಳೆ. ನಾಲ್ಕು ಜನ ದೋಣಿಯಲ್ಲಿ ಮಲಗಿ ಬಿಡುತ್ತಾರೆ. ಕೊನೆಗೆ ಆಕೆ ತಾನೇ ದೋಣಿ ನಡೆಸಿಕೊಂಡು ಆಚೆ ದಡ ಸೇರುತ್ತಾಳೆ. ದೋಣಿಯನ್ನು ಮಾಯ ಮಾಡುತ್ತಾಳೆ. ಇನ್ನು ಬೇರೆ ಯಾರಾದರೂ ತೊಂದರೆ ನೀಡುವುದು ಬೇಡ ಎಂದು ಕೊಂಡು ಕೊರವಂಜಿ ವೇಷ ಹಾಕುತ್ತಾಳೆ. ಬಗಲಾಗಿನಲ್ಲಿ ಒಂದು ಕೂಸು ಕಟ್ಟಿ ಕೊಳ್ಳುತ್ತಾಳೆ. ಆಚೆಗೆ ನಡೆಯುತ್ತಾಳೆ. ಅಷ್ಟರಲ್ಲಿ ಮಲಗಿದ್ದ ಅಂಬಿಗರಿಗೆ ಎಚ್ಚರಿಕೆ ಆಗುತ್ತದೆ. ಗಡಿ ಬಿಡಿಯಿಂದ ಎದ್ದು ನೋಡುವಾಗ ಕೊರವಂಜಿ ಕಾಣಿಸುತ್ತಾಳೆ. ಆಕೆಯನ್ನೇ ಕೇಳುತ್ತಾರೆ.

ಯವ್ವಾವಾ ನಮ್ಮ ದೋಣಿ ಕಂಡೆಯಾ?
ದೋಣಿಯ ಹಗ್ಗ ಕಂಡೆಯಾ?
ಹಗ್ಗದೊಂದಿಗೆ ಒಬ್ಬ ಹೆಣಮಗಳ ನೋಡಿದೆಯಾ?

ಕೊರವಂಜಿ ಇಲ್ಲವೆಂದು ಹೇಳುತ್ತಾಳೆ. ಅಂಬಿಗರು ಮತ್ತೆ ಕೇಳಿದಾಗ ‘ನಿಮ್ಮ ಮಕ್ಕಳ ಕೈದು ಅಡಿಗೆ ಮಾಡಿ ಬಳಸಿದ್ರೆ ನಾವೆ ಸಿಗತದೆ’ ಎನ್ನುತ್ತಾಳೆ. ಅವರು ಹಾಗೆ ಮಾಡುತ್ತಾರೆ. ಅವರ ನಿಷ್ಠಗೆ ಮೆಚ್ಚಿ ರೇಣುಕ ಸತ್ತ ಮಕ್ಕಳನ್ನು ಮತ್ತೆ ಬದುಕಿಸುತ್ತಾಳೆ. ನಮ್ಮದು ತಪ್ಪಾಯಿತು ಎಂದು ಬೇಡಿಕೊಂಡ ಆ ಅಂಬಿಗರನ್ನು ರೇಣುಕ ಕ್ಷಮಿಸುತ್ತಾಳೆ. ಹುಲಿಗಿಯಲ್ಲಿ ಈ ಘಟನೆ ನಡೆದುದ್ದರಿಂದ ಆಕೆ ಹುಲಿಗೆಮ್ಮ ಎಂಬ ಹೆಸರು ಧರಿಸುತ್ತಾಳೆ.

ಹುಲಿಗೆಮ್ಮ ನೆಲ ನಿಂತ ಜಾಗದಲ್ಲಿ ಸರಕಾರದವರು ರೈಲು ಪಟ್ಟಿ ಹಾಕುತ್ತಾರೆ ಎಂಬ ಸುದ್ದಿ ಬಂತು. ಹುಲಿಗೆಮ್ಮ ಪಾತ್ರೆ ಮಾರುವವಳ ವೇಷ ಹಾಕಿ ಇಂಗ್ರಜಿಯವರನ್ನು ಹೆದರಿಸುತ್ತಾಳೆ. ಇಂಗ್ರಜಿ ಸರಕಾರ ಗುಡಿ ಬಿಟ್ಟು ದೂರದಲ್ಲಿ ರೈಲು ಓಡಿಸಲು ವಚನ ನೀಡುತ್ತಾರೆ. ಹಾಗೆ ಮಾಡುತ್ತಾರೆ. ಹುಲಿಗೆಮ್ಮನ ಮಾತಿನಂತೆ ಈಗಲೂ ಹುಲಿಗಿಯಲ್ಲಿ ರೈಲು ಹಾದು ಹೋಗುವಾಗ ಉಧೋ ಉಧೋ ಎನ್ನುತ್ತದೆ.

ಇಷ್ಟರಲ್ಲಿ ಹುಲಿಗೆಮ್ಮ-ಎಲ್ಲಮ್ಮ ಬೇರೆ ಬೇರೆ ಆದ್ರು. ಅವರಿಬ್ಬರ ನಡುವೆ ಸ್ಪರ್ಧೆ ಬಿತ್ತು. ಹುಲಿಗೆಮ್ಮ ಕೆಂಡ ಹಾದರೆ ಎಲ್ಲಮ್ಮನಿಗೆ ಆಗಲಿಲ್ಲ. ಹುಲಿಗೆಮ್ಮ ಕುದಿಯುವ ಪಾಯಸಕ್ಕೆ ಕೈ ಹಾಕಿದಳು. ಎಲ್ಲಮ್ಮನಿಗೆ ಆಗಲಿಲ್ಲ. ಕೊನೆಗೆ ಹುಲಿಗೆಮ್ಮ ಬಾಳೆದಿಂಡು ಮೇಲೆ ಕುಳಿತು ಸವಾರಿ ಮಾಡಿದಳು. ಅದು ಎಲ್ಲಮ್ಮನಿಗೆ ಆಗಲಿಲ್ಲ. ಗೆದ್ದ ಹುಲಿಗೆಮ್ಮನನ್ನು ಅಲ್ಲಿಯೆ ಬಿಟ್ಟು ಎಲ್ಲವ್ವ ಮುಂದೆ ಹೋದಳು. ಯಮುನೂರಪ್ಪನನ್ನು ಭೇಟಿಯಾಗಿ ನೆಲೆಯಾಗಲು ಸ್ಥಳ ಕೇಳಿದಳು. ಇಲ್ಲಿ ಏಳು ಖಂಡುಗ ಬ್ಯಾಟಿ ಬೀಳುತ್ತದೆ. ರಕ್ತ ನೋಡಿ ನೀ ಹೆದರಿಕೊಳ್ಳಿ ಎನ್ನುತ್ತಾನೆ ಆತ. ಅಲ್ಲಿಂದ ಎಲ್ಲಮ್ಮ ನೇರವಾಗಿ ಏಳು ಕೊಳ್ಳಕ್ಕೆ ಹೋಗುತ್ತಾಳೆ. ಅಲ್ಲಿ ಏಳು ಮಂದಿ ಸಿದ್ಧರಿರುತ್ತಾರೆ. ಅವರಿಗೆ ಪವಾಡದಿಂದ ಅನ್ನ ಮಾಡಿ ಹಾಕುತ್ತಾಳೆ. ಪವಾಡದಿಂದ ಕಲ್ಲಿನಡಿಯಿಂದ ನೀರು ತೆಗೆಯುತ್ತಾಳೆ. ಕೈಕಟ್ಟಿ ಭಂಗಿ ತರಿಸುತ್ತಾಳೆ.

ರೇಣುಕ ಪೂರ್ತಿ ಶುದ್ಧಳಾಗಿ ಮತ್ತೆ ಜಮದಗ್ನಿಯ ಬಳಿ ಬರುತ್ತಾಳೆ. ಜಮದಗ್ನಿಯ ಆಶ್ರಮಕ್ಕೆ ಕಾರ್ತಿಕ ರಾಜ ಬರುತ್ತಾನೆ. ಕಾಮಧೇನುವಿನ ಕಾರಣದಿಂದ ಜಮದಗ್ನಿಗೂ ಕಾರ್ತಿಕ ರಾಜನಿಗೂ ಯುದ್ಧ ನಡೆದು ಜಮದಗ್ನಿ ಸಾಯುತ್ತಾನೆ. ರೇಣುಕೆ ಮುಂಡೆಯಾಗುತ್ತಾಳೆ. ಆಕೆ ಮುಂದೆ ಪರಮಾತ್ಮನನ್ನು ಧ್ಯಾನಿಸಿ ಪರಶುರಾಮನನ್ನು ಹೆರುತ್ತಾಳೆ. ಪರಶುರಾಮ ತಂದೆಯನ್ನು ಕೇಳುತ್ತಾನೆ. ಆತನಿಗೆ ತಾಯಿಯ ಪಾತಿವ್ರತ್ಯದ ಮೇಲೆ ಸಂಶಯ ಬರುತ್ತದೆ. ‘ಕರಿ ಸೀರಿ ಉಟ್ಟು ಉರಿಯಾಗೆ ನಿಲ್ಲು’ ಎನ್ನುತಾನೆ. ಹಾಗೆ ನಿಂತ ರೇಣುಕಾಳು ಬೆಂಕಿಯಲ್ಲಿ ಉರಿದು ಹೋಗುತ್ತಾಳೆ. ಪರಶುರಾಮ ತಂದೆ ತಾಯಿ ಇಬ್ಬರನ್ನು ಕಳಕೊಂಡದ್ದಕ್ಕ ಪರಿತಪಿಸುತ್ತಾನೆ. ಆಗ ರೇಣುಕ ಮತ್ತೆ ಉರಿಯಿಂದ ಎದ್ದು ಬರುತ್ತಾಳೆ ‘ನೀ ಸೂಳಿ ಅಂತ’ ಪರಶುರಾಮ ಆಕೆಗೆ ಬೈಯುತ್ತಾನೆ. ಆಕೆ ‘ನಾ ಸೂಳೆ ಅಲ್ಲಾ’ ಎನ್ನುತ್ತಾಳೆ. ಆಕೆಯ ಮಾತಿನಂತೆ ದೇವಲೋಕಕ್ಕೆ ಹೋಗಿ ಜಮದಗ್ನಿಯ ರುಂಡ ತರುತ್ತಾನೆ. ರುಂಡ ನಿಜ ಹೇಳುತ್ತದೆ. ಪರಶುರಾಮನೇ ಕಾರ್ತಿಕ ರಾಜನ ತೆಲೆ ತುಂಡರಿಸುತ್ತಾನೆ. ತಲೆಯಿಂದ ಚೌಡಿಕೆ ಮಾಡಿ ಕರುಳು ತೆಗೆದು ತಂತಿ ಮಾಡುತ್ತಾಳೆ. ಕಾಲು ಕಿತ್ತು ಕೋಲು ಮಾಡುತ್ತಾನೆ. ಟಿಂವ ಟಿಂವ ತಂತಿ ಅಂತ ಹಾಡುತ್ತ ರೇಣುಕ ತಾಯಿ ಬಳಿ ಬರುತ್ತಾನೆ. (ಡಾ. ಪುರುಷೋತ್ತಮ ಬಿಳಿಮಲೆ; ೧೯೯೯ : ೪ರಿಂದ೯).

. ಏನೆಂದು ಹಾಡಲಿ

ಏನೆಂದು ಹಾಡಲೀ ಏನೆಂದು ಕೇಳಿರೀ
ಏನೆಂದು ಧನಿಯ ತಗೆಯಲೀ          ||ಸೋ||

ಏನೆಂದು ಹಾಡಲೀ ಏನೆಂದು ಕೇಳಿರೀ
ಏನೆಂದು ಧನಿಯ ತೆಗೆಯಲೀ          ||ಸೋ||

ಏನೆಂದು ಧನಿಯ ತಗೆಯಲಿ ಹೊಸಪೇಟೆ
ಗ್ಯಾನವಂತೆ ಹುಲಿಗೆವ್ವನಾ ಗುಡಿಯಾಗೇ        ||ಸೋ||

ಏನೆಂದು ಧನಿಯ ತಗೆಯಲಿ ಹೊಸಪೇಟೆ
ಗ್ಯಾನವಂತೆ ಹುಲಿಗೆವ್ವನಾ ಗುಡಿಯಾಗೇ        ||ಸೋ||

ಯಂತೆನ್ನಾ ಹಾಡಲಿ, ಯಂತೆನ್ನಾ ಕೇಳಿರಿ
ಯಂತನ್ನಾ ಧನಿಯ ತೆಗೆಯಲೀ       ||ಸೋ||

ಯಂತೆನ್ನಾ ಧನಿಯ ತೆಗಿಯಲಿ, ಹೊಸಪೇಟೆ
ಮಂತ್ರಿ ಕೊಂಗಮ್ಮನಾ ಮಾಠುದಾಗೇ           ||ಸೋ||

ಯಂತೆನ್ನಾ ಧನಿಯ ತೆಗಿಯಲಿ ಹೊಸಪೇಟೆ
ಮಂತ್ರಿ ಕೊಂಗಮ್ಮನಾ ಮಠುದಾಗೇ ||ಸೋ||

ಅವನೊಡಾಸೀಮಿ ಕಾವಲ ಮಾಡವ್ವಾ ನಡೆ ನಿಮ್ಮ ನಾಡಿಗೆ
ಈ ನಾಡ ಸೀಮೇ ಬಳವವ್ವಾ, ಬಾ ನಮ್ಮ ಸೀಮೆಗೆ       ||ಸೋ||

ಈ ನಾಡ ಸೀಮೆ ಒಳವವ್ವಾ, ಬಾ ನಮ್ಮ ಸೀಮೆಗೆ        ||ಸೋ||

ಇವನೋಡ ಸೀಮೆ ಒಳವವ್ವಾ ಉಂಟುವ ದೇವರೆ ನಡೆನಿಮ್ಮ
ನಾಡಿಗೆ ಅವಳ ಮಾಣಿಕದೊಡಿಯಕ್ಕಿ, ಬಾ ನಮ್ಮ ಸೀಮಿಗೆ         ||ಸೋ||

ಆಳ ಮಾಣಿಕದೊಡಿಯಕ್ಕಿ, ಬಾ ನಮ್ಮ ಸೀಮೆಗೆ           ||ಸೋ||

ಹತ್ತು ಒಳಸೀಮೇ ಕತ್ತಲು ಮಾಡವ್ವಾ ನಡಿ ನಮ್ಮ
ನಾಡಿಗೆ ಇತ್ತಳಾ ಸಿಮೇ ಒಳವವ್ವಾ ಬಾ ನಮ್ಮ ಸಿಮೆಗೆ  ||ಸೋ||

ಇತ್ತಳಾ ಸಿಮೇ ಒಳವವ್ವಾ ಬಾ ನಮ್ಮ ಸೀಮಿಗೆ           ||ಸೋ||

ಇತ್ತು ಒಳಸೀಮೇ ಒಳವವುಂಟುವ ದೇವರ ನಡೆ ನಿಮ್ಮ ನಾಡಿಗೆ
ಮುತ್ತಿನ ಕೆಂಜಡಿಯವ್ವಾ ಗರತಿ ಬಾ ನಮ್ಮ ಸೀಮಿಗೆ     ||ಸೋ||

ಮುತ್ತಿನ ಕಂಜಡಿಯವ್ವಾ ಗರತಿ ಬಾ ನಮ್ಮ ಸೀಮಿಗೆ     ||ಸೋ||

ಬತ್ತಿದ ಹೊಲದಾಗೇ ಬಿಚ್ಚುವ ಕೊಯ್ಯೋಳೆ ನಡೆ ನಿಮ್ಮ
ನಾಡಿಗೆ ಮುತ್ತಿನ ಕೆಂಜಡಿಯವ್ವಾ ಗರತಿ ಬಾ ನಮ್ಮ ಸೀಮಿಗೆ      ||ಸೋ||

ಮುತ್ತಿನ ಕೆಂಜಡಿಯವ್ವಾ ಗರತಿ ಬಾ ನಮ್ಮ ಸೀಮಿಗೆ     ||ಸೋ||

ಮುತ್ತಿನ ಕೆಂಜಡಿಯೋ ಅವ್ವಾಗರತಿ ಹುಲಿಗೆಮ್ಮನ ನಡೆ ನಿಮ್ಮ
ನಾಡಿಗೆ ಆಗಲೇ ನಾ ಪೂಜೆ ವತ್ತಾಗಲೇ ಬಾ ನಮ್ಮ ಸೀಮಿಗೆ       ||ಸೋ||

ಆಗಲೇ ನಾ ಪೂಜೆ ವತ್ತಾಗಲೇ ಬಾ ನಮ್ಮ ಸೀಮಿಗೆ      ||ಸೋ||

ಅರಗಿದ ಹೊಲದಾಗೇ ಅರಳುವ್ವಾ ಕೊಯ್ಯೋಳೆ ನಡೆ ನಿಮ್ಮ
ನಾಡಿಗೆ ಅವಳದ ಕೆಂಜಡಿಯವ್ವಾ ಗರತಿ ಬಾ ನಮ್ಮ ಸೀಮಿಗೆ      ||ಸೋ||

ಅವಳದ ಕೆಂಜಡಿಯವ್ವಾ ಗರತಿ ಬಾ ನಮ್ಮ ಸೀಮೆಗೆ     ||ಸೋ||

ಅವಳದ ಕೆಂಜಡಿಯೋ ಅವಗತ್ತಿ ಕೊಂಗಮ್ಮನಾ ನಡೆ ನಿಮ್ಮ
ನಾಡಿಗೆ ಉತ್ತುತ್ತಿ ಪೂಜೆ ಒದಗಾಲಿ ಬಾ ನಮ್ಮ ಸೀಮೆಗೆ ||ಸೋ||

ಉತ್ತುತ್ತಿ ಪೂಜೆ ಒದಗಾಲಿ ಬಾ ನಮ್ಮ ಸೀಮಿಗೆ            ||ಸೋ||

ಹೂವ ಹೂವೆಂದರೆ ಹೂವಲ್ಲಿ ಜರಿಯಾವೆ ಹೂವ
ಹುಲಿಗೇರಿ ವನದಾಗೆ ಬಾ ಹೂವೆ      ||ಸೋ||

ಹೂವ ಹುಲಿಗೇರಿ ವನದಾಗೆ ಬಾ ಹೂವೆ         ||ಸೋ||

ಹೂವೇನೆ ಹುಲಿಗೇರಿ ವನದಾಗೆ ಪೂಜಾರಿ
ಹೂವೆಗೊನವನವಾ ತಿಂಗ್ಯಾನೆ ಬಾ ಹೂವೆ     ||ಸೋ||

ಹೂವೆಗೊನವನವಾ ತಿಂಗ್ಯಾನೆ ಬಾ ಹೂವೆ     ||ಸೋ||

ಮಾಗ್ಯಾ, ಮಗ್ಯಾಂದಾರೆ ಮಗ್ಗಿಲೀ ದಾರಿಯಾವೆ
ಮಗ್ಗಿ ಮದಗೇರಿ ವನದಾಗೆ ಬಾ ಹೂವೆ
ಮಗ್ಗಿ ಮದಗೇರಿ ವನದಾಗೆ ಬಾ ಹೂವೆ           ||ಸೋ||

ಮಗ್ಗಿಲಿ ಮದಗೇರಿ ವನದಾಗೇ ಪೂಜಾರಿ
ಮಗ್ಗಿಗೊನವನವಾ ತಿರಿಗ್ಯಾನೆ ಬಾ ಹೂವೆ      ||ಸೋ||

ಮಗ್ಗಿ ಗೊನವನವಾ ತಿರಿಗ್ಯಾನೆ ಬಾ ಹೂವೆ     ||ಸೋ||

ಕಾಯಿ, ಕಾಯೆಂದಾರೇ ಕಾಯಲಿ ದಾರಿಯಾವೇ
ಕಾಯಿ ಕನಗೇರಿ ವನದಾಗೇ ಬಾ ಹೂವೆ         ||ಸೋ||

ಕಾಯಿ ಕನಗೇರಿ ವನದಾಗೇ ಬಾ ಹೂವೆ         ||ಸೋ||

ಯಾಕು ಬಂದರ್ಯಾರು ಬಲ್ಲಾರೆ, ನಮ್ಮವವಾ
ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ           ||ಸೋ||

 

ಯಾಕು ಬಂದಾರ್ಯಾರ ಬಲ್ಲಾರೆ

ಯಾಕು ಬಂದರ್ಯಾರು ಬಲ್ಲಾರೆ, ನಮ್ಮವ್ವಾ
ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ           ||ಸೋ||

ಕರಿಯ ಅಂಚಿನಿ ಸೀರಿ, ಸರಗೆಲ್ಲ ಜರತಾರ
ದುರುಗ ಬಳಿಯಲಿ ಜಳಕಾವೇ
ಯಾಕು ಬಂದರ್ಯಾರು ಬಲ್ಲಾರೆ, ನಮ್ಮವ್ವಾ
ಕೊಂಗವ್ವಾ ಹೂನಾಗೆ ಚೆಂಡಾಡ್ಯಾಳೆ            ||ಸೋ||

ನಮ್ಮವ್ವಾ ಕೊಂಗವ್ವಾ ಹೂನಾಗೆ ಚೆಂಡಾಡ್ಯಾಳೆ         ||ಸೋ||

ದುರುಗದಾ ಹೊಳೆಯಲಿ ಜಳಕ ಮಾಡವಾಕಿ
ಅರಬಿ ಹುಲಿಗೆವ್ವಾನಾದ ದೆಳೆ
ಯಾಕು ಬಂದರ್ಯಾರು ಬಲ್ಲಾರೆ, ನಮ್ಮವ್ವಾ
ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ           ||ಸೋ||

ನಮ್ಮವ್ವಾ ಕೊಂಗವ್ವಾ ಹೂನಾಗೆ ಚೆಂಡಾಡ್ಯಾಳೆ         ||ಸೋ||

ಕೆಂಪಾ ಅಂಚಿನ ಸೀರಿ ಅಂಚಲ್ಲ ಜರತಾರ
ಕೊಂಪದಲಿ ಇಳಿಜಳಕಾವೇ
ಯಾಕು ಬಂದರ್ಯಾರು ಬಲ್ಲಾರೆ, ನಮ್ಮವ್ವಾ
ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ           ||ಸೋ||

ನಮ್ಮವ್ವಾ ಕೊಂಗವ್ವಾ ಹೂನಾಗೆ ಚೆಂಡಾಡ್ಯಾಳೆ         ||ಸೋ||

ಕೆಂಪಾ ಅಂಚಿನ ಸೀರಿ ಅಂಚಲ್ಲ
ಜರತಾರ ಕೊಂಪದಲಿ ಇಳಿಜಳಕಾವೇ
ಯಾಕು ಬಂದರ್ಯಾರು ಬಲ್ಲಾರೆ,
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಕೆಂಪಾ ಅಂಚಿನ ಸೀರಿ ಅಂಚಲ್ಲ
ಜರತಾರ ಕೊಂಪದಲಿ ಇಳಿಜಳಕಾವೇ
ಯಾಕು ಬಂದರ್ಯಾರು ಬಲ್ಲಾರೆ,
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಕೊಂಪಲೀ ಹೊಳೆಯಲ್ಲಿ ಜಳಕಾ ಮಾಡುವಾಕಿ
ಕೆಂಚಿ ಕೊಂಗಮ್ಮನಾವದೇಳೇ
ಯಾಕು ಬಂದರ್ಯಾರು ಬಲ್ಲಾರೆ,
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಗುಡ್ಡ ಗುಡ್ಡಕೆ ಡೊಳ್ಳೆ, ಡಪ್ಪೆಂದು
ಬಡಿದಾಗ ಒಬ್ಬಾಕಿ ಹುಲಿಗೆವ್ವಾ ಬರುವಾಗೇ
ಯಾಕು ಬಂದರ್ಯಾರು ಬಲ್ಲಾರೆ,
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಒಬ್ಯಾಕಿ ಹುಲಿಗೆವ್ವಾ ಬರುವಾಗ ಗಿಡದಾಳ
ಕಬ್ಬಕ್ಕಿ ಕೈ ಮುಗುದಾವೋ
ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಹಸುಮಗಳೇ ಹುಲಿಗೆವ್ವಾ ಬಸವಾನ
ಹೇರಿಕೊಂಡೆ ಯಸಳ ಕ್ಯಾದಗಿಮುಡಕೊಂಡೆ
ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಯಸಳೇನೇ ಕ್ಯಾದಗಿ ಮುಡಕೊಂಡೆ
ಹೊಸಪೇಟೆ ಶಶಿದೇವಿಯ ನೆನೆದಾಳೋಯಾಕು ಬಂದರ್ಯಾರು ಬಲ್ಲಾರೆ
ಕೊಂಗವ್ವಾ ಹೂನಾಗೆ ಚೆಂಡಾಡ್ಯಾಳೆ            ||ಸೋ||

ನಮ್ಮವ್ವಾ ಕೊಂಗವ್ವಾ ಹೂ ನಾಗೆ ಚೆಂಡಾಡ್ಯಾಳೆ        ||ಸೋ||

ಕರಿಯ ಹೊಳೆಗೆ ಹೋಗೆ, ಅಂಬಾ
ಕರಿಯ ಹೊಳೆಗೆ ಹೋಗೆ ಅಂಬಾ
ಕರಿಯ ಹೊಳೆಗೆ ಹೋಗೆ
ಕರಿಯ ಹೊಳೆಗೆ ಹೋಗೆ, ಜಾವಾಜಳಕ ಮಾಡಿಕ್ಯಾಳೇ  ||ಸೋ||

ಜಾವಾ ಜಳಕ ಮಾಡೆ ಅಂಬಾ, ಜಾವಾ, ಜಳಕ ಮಾಡೆ ಅಂಬಾ
ಜಾವಾ ಜಳಕ ಮಾಡೆ,
ಜಾವಾ ಜಳಕ ಮಾಡೆ ಹೂವೇ ಹಣ್ಣು ಪೂಜೆ ಮಾಡೆ      ||ಸೋ||

ಜಾವಾ ಜಳಕ ಮಾಡೆ ಹೂವೇ ಹಣ್ಣು ಪೂಜೆ ಮಾಡೆ      ||ಸೋ||

ಯತ್ತಗಟ್ಟದವಳೇ ಅಂಬಾ, ಯತ್ತಾವ ಮಗ ಮುಂದೆ ಅಂಬಾ
ಯತ್ತಾವ ಮಗ ಮುಂದೆ
ಯಾಕಾಲೆ ಜೋಗ್ಯಾಂಬಾ, ಚಳ್ಳೆಲೆಕ್ಕವಿಲ್ಲ ಮಾಯೇ     ||ಸೋ||

ಪರಶುರಾಮನ ತಾಯೇ ಅಂಬಾ ಪರಮ ಕಲ್ಯಾಣೇ ಅಂಬಾ
ಪರಮ ಕಲ್ಯಾಣೇ
ಪರಮ ಕಲ್ಯಾಣೇ ನೀನೇ ಮಲ್ಲಿಗೂವಿನ ಜಾಣೇ            ||ಸೋ||

ಪರಮ ಕಲ್ಯಾಣೇ ನೀನೇ ಮಲ್ಲಿಗೂವಿನ ಜಾಣೇ            ||ಸೋ||

ಉತ್ತು ಗಾನ ಇರುವ ನಮ್ಮ ಉತ್ತುಗಾ ಕರಿ ಹುಲುಗಾ
ನಮ್ಮ ಉಚ್ಚವ ಕರಿ ಹುಲುಗಾ
ಉಚ್ಚಾಯಕ ಬರುವ ಬಹಳ ಸತ್ಯವಾ ತೋರೇ            ||ಸೋ||

ಉಚ್ಚಾಯಕ ಬರುವ ಬಹಳ ಸತ್ಯವಾ ತೋರೇ            ||ಸೋ||

ಶುಕ್ರವಾರ ದಿನಾ ಗಿರಿಮ್ಯಾಲೆ ಕೆಚ್ಚಿನ ಪೂಜೆ ಅಂಬಾ
ಕೆಚ್ಚಿನಾ ಪೂಜೆ
ಕೆಚ್ಚಿನಾರ್ಯಾಳೆ ಭಕುತಾರ ದಿಟ್ಟಿಸಿ ನೋಡ್ಯಾಳೇ        ||ಸೋ||

ಕೆಚ್ಚಿನಾರ್ಯಾಳೆ ಭಕುತಾರ ದಿಟ್ಟಿಸಿ ನೋಡ್ಯಾಳೇ        ||ಸೋ||

ಮಂಗಳವಾರ ದಿನಾ ಗಿರಿಮ್ಯಾಲೆ ಕೆಂಡಾದ ಪೂಜೆ ಅಂಬಾ
ಕೆಂಡಾದ ಪೂಜೆ
ಕೊಂಡಕಾ ಹೋಗೆ ಪರವತ ಕೆಂಡಾವ ತುಳಿಯೇ         ||ಸೋ||

ಪರಶುರಾಮನ ತಾಯೇ ಅಂಬಾ ಪರಮಳ ಕಲ್ಯಾಣೇ ಅಂಬಾ
ಪರಮಳ ಕಲ್ಯಾಣೇ
ಪರಮಳ ಕಲ್ಯಾಣೇ ಅಂಬಾ ಮಲ್ಲಿಗೂವಿನ ಜಾಣೆ         ||ಸೋ||

ಪರಮ ಕಲ್ಯಾಣೇ ನೀನೇ ಮಲ್ಲಿಗೂವಿನ ಜಾಣೆ ||ಸೋ||

ಬಾಳೆದಂಡಿಗ್ಯಾವ್ವಾ ನಿನ್ನ ಬಾಳ ನಂಬಿದೇನೇ ಅಮ್ಮ
ಬಾಳ ನಂಬಿದೇನೆ
ಉಧೋ, ಉಧೋ, ಅಂಬುತ್ತಾ ಹುಲಿಗೆಮ್ಮ ಗೆಲ್ಗುಗಾ ಸಾರುತ್ತಾ  ||ಸೋ||

ಉಧೋ, ಉಧೋ, ಅಂಬುತ್ತಾ ಹುಲಿಗೆಮ್ಮ ಗೆಲ್ಗುಗಾ ಸಾರುತ್ತಾ  ||ಸೋ||