ಹುಲಿಗೆಮ್ಮ ಮತ್ತು ಹೊಸೂರಮ್ಮನಿಗೆ ಸಂಬಂಧಿಸಿದಂತೆ ಕಥೆ, ಐತಿಹ್ಯ ಮತ್ತು ಗೀತೆಗಳ ರೂಪದಲ್ಲಿ ಮೌಖಿಕ ಸಾಹಿತ್ಯ ಪ್ರಕಾರಗಳು ನಮಗೆ ಸಿಗುತ್ತವೆ.

ಜನಪದ ಕಥೆ ಮತ್ತು ಐತಿಹ್ಯಗಳು
ಮಲೈಸೆಟ್ಟಿ

ಒಂದೂರಾಗ ಮಲೈಸೆಟ್ಟಿ ಎಂಬ ಒಬ್ಬ ಸೆಟ್ಟಿ ಇದ್ದ. ಆತನಿಗೆ ಹೆಣ್ಣು ದೇವರು ಎಂದರೆ ಆಗುತ್ತಿರಲಿಲ್ಲ. ಗಂಡು ದೇವರ ಮೇಲೆಯೇ ಆತನಿಗೆ ಪ್ರೀತಿ ಜಾಸ್ತಿ. ಗಂಡು ದೇವರ ಭಕ್ತ. ಹೆಣ್ಣುದೇವರು ಕಂಡರೆ ಆಗುತ್ತಿರಲಿಲ್ಲ. ಅಷ್ಟು ಶೀಲವಂತ ಆತ. ಆತನ ಶೀಲ ನೋಡಬೇಕೆಂದು ಹುಲಿಗೆಮ್ಮ ಒಂದು ದಿನ ಇವನ ಪರೀಕ್ಷೆ ಮಾಡೋಣವೆಂದು, ಹೆಣ್ಣು ದೇವರ ಮೇಲೆ ಇವನಿಗೆ ಭಕ್ತಿ ಇದೆಯೋ, ಇಲ್ಲವೋ ಎಂದು ಬರೇ ಗಂಡು ದೇವರು, ಗಂಡು ದೇವರು ಭಕ್ತ ಎಂದು ಬಹಳ ಹೇಳುತ್ತಾರೆ ಎಂದು ಅವನ ಪರೀಕ್ಷೆ ಮಾಡಲು ಜೋಳಿಗೆ ಹಾಕಿಕೊಂಡು, ಮುದುಕಿ ವೇಷ ಧರಿಸಿಕೊಂಡು ಅಡ್ಲಿಗಿ ತಗೊಂಡು ಬಂದು ಅವನ ಮನೆ ಬಾಗಿಲಿಗೆ ನಿಲ್ಲುತ್ತಾಳೆ. ನಿಂದು ಉಧೋ ಹಾಕುತ್ತಾಳೆ. ಬಾಗಿಲ ಕಾಯುವವರು ಹೇ ಮುದುಕಿ ಒಳಗೆ ಇರುವ ಧನಿಯವರು ನೀನು ಹಾಕಿದ ಉಧೋ ಎಂಬ ಶಬ್ದ ಕೇಳಿ ವದಿತಾನೆ (ಬಡಿಯುತ್ತಾನೆ). ನೀನು ಉಧೋ ಹಾಕಬೇಡ. ಇಲ್ಲಿ ಹೆಣ್ಣು ದೇವರ ನಡತೇನೆ ಇಲ್ಲ. ಇಲ್ಲಿಗೆ ಬರಬೇಡ ನಡಿ ಎಂದು ಹೇಳುತ್ತಾರೆ. ಮುದುಕಿಯನ್ನು ಹೊರಕ್ಕೆ ದಬ್ಬುತ್ತಾರೆ. ಆಗ ಆಕಿ ಏನು ಅನ್ನುತ್ತಾಳೆ ಎಂದರೆ ಅಪ್ಪ ಆ ಮಲೈಸೆಟ್ಟಿನಾ ಕಾಣಬೇಕು. ಆತನ ಹತ್ತಿರ ನಾನು ಎರಡು ಮಾತನಾಡಬೇಕು. ಎರಡು ಮಾತನಾಡಿ ಬರಬೇಕಪ್ಪಾ ಎಂದು ಆ ಮುದುಕಿ (ಹುಲಿಗೆಮ್ಮ) ಕೇಳುತ್ತಾಳೆ. ಮಲೈಸೆಟ್ಟಿ ಹತ್ತಿರ ಮಾತನಾಡಿ ಹೋಗುತ್ತೇನಪ್ಪಾ ಎಂದು ಹೇಳುತ್ತಾಳೆ.

ಛೆ, ಛೆ, ಛೆ, ಹೆಣ್ಣು ಮಕ್ಕಳ ಶಬ್ದ ಆತನಿಗೆ ಆಗುವುದಿಲ್ಲವೆಂದರೆ ನೀನು ಮಾತನಾಡಿಸುವುದಕ್ಕೆ ಹೋಗುತ್ತಿಯಾ, ನೀನು ಅಲ್ಲಿಗೆ ಹೋಗಕೂಡದು. ನೀನು ಆತನ ಮುಖ ನೋಡಕೂಡದು. ಆತ ನಿನ್ನ ಮುಖ ನೋಡಕೂಡದು. ಬೇಡ ನಾವು ಹೇಳೋ ಮಾತು ಕೇಳು ಸುಮ್ಮನೆ ನಡಿ ನೀನು ಎಂದು ಬಾಗಿಲು ಕಾಯುವವರು ಮುದುಕಿ (ಹುಲಿಗೆಮ್ಮನಿಗೆ) ಹೇಳುತ್ತಾರೆ. ಬಹಳ ಹಠಕ್ಕೆ ನಿಲ್ಲುತ್ತಾಳೆ. ಆತನನ್ನು ಕಂಡು ಹೋಗೇ ತೀರುತ್ತೇನೆ. ಎಂದು ಹೇಳುತ್ತಾಳೆ. ಆಗ ಬಾಗಿಲು ಕಾಯುವವರು ಹೇಳುತ್ತಾರೆ. ನೋಡವ್ವಾ ನೀನು ಇಷ್ಟು ಹೇಳಿದಾಗಲೂ ಆತನನ್ನು ನೋಡಬೇಕೆಂದು ಹೇಳುತ್ತಿ. ಆತನ ಕೂಡ ವದಿಸಿಕೊಳ್ಳಬೇಕೆಂದು ಮಾಡಿರುವೆ, ಏನೋ ವದಿಸಿಕೊಂಡು ಹೋಗು ಎಂದು ಹೇಳುತ್ತಾರೆ. ಆಗ ಮತ್ತೆ ಉಧೋ ಎಂದು ಅನ್ನುತ್ತಾಳೆ. ಆಗ ಉಧೋ ಎನ್ನೋ ಶಬ್ಧ ಮಲೈಸೆಟ್ಟಿ ಕಿವಿಗೆ ಬೀಳುತ್ತದೆ. ಮಂಚದ ಮೇಲೆ ಮಲಗಿರುವ ಮಲೈಸೆಟ್ಟಿ ಎದ್ದು ಕರಿ ಕರಿ ಹಲ್ಲು ಕಡಿಯುತ್ತಾನೆ. ಬಾಗಿಲು ಕಾಯುವವರಿಗೆ ಲೇ ಯಾವ ರಂಡಿ ಬಂದಿದ್ದಾಳೀ ಹೊರಗ, ಉಧೋ ಎಂದು ನಿಂತಿದ್ದಾಳೆ. ನನಗೆ ಆ ಶಬದ, ಹಾಕಬೇಡಿ ಎಂದು ನಾನು ಎಷ್ಟು ಸಲ ಹೇಳಿದರೂ ಆಕೆಯನ್ನು ಯಾಕೆ ಬಾಗಿಲದ ಹತ್ತಿರ ಕರಕೊಂಡಿರಿ ದಬ್ಬಿರಿ ಆ ಕಡೆ ಎಂದು ಹೇಳುತ್ತಾನೆ ಮಲೈಸೆಟ್ಟಿ. ಆಗ ಬಾಗಿಲು ಕಾಯುವವರು ಹೇಳುತ್ತಾರೆ. ನೋಡಮ್ಮ ನಾವು ಎಷ್ಟು ಸಲ ಹೇಳಿದರೂ ನೀನು ಕೇಳಲಿಲ್ಲ, ಆ ಶಬ್ಧ ಆತನಿಗೆ ಆಗುವುದಿಲ್ಲವೆಂದು ನಮಗೆ ಆರ್ಡರ್ ಬಂದಿದೆ, ಬಡಿಯಿರಿ ಎಂದು ಹೇಳಿದ್ದಾರೆ ಎನ್ನುತ್ತಾರೆ. ಆಗ ಮುದುಕಿ (ಹುಲಿಗೆಮ್ಮ) ಅಪ್ಪಾ ಈಗ ಇಚ್ಛೆ ಬಂದಂಗೆ ಬಡಿದು ಕೊಳ್ಳಿರಿ ಎಂದು ಹೇಳುತ್ತಾಳೆ. ಆ ಮುದುಕಿ. ಈಗ ಬಾರಕೋಲು ತೆಗೆದುಕೊಂಡು ಮುದುಕಿಗೆ ಬಡಿಯುತ್ತಾರೆ. ನಿಂತ ಜಾಗದಲ್ಲಿಯೇ ಬಡಿಯುತ್ತಾರೆ. ಆಗ ಮುದುಕಿಗೆ ಬಡಿದಾಗ ಮುದುಕಿ ಏನು ಅನ್ನುತ್ತಾಳೆ ಎಂದರೆ ಇವನದು ಇನ್ನು ಸೊಕ್ಕು ಮುರಿದಿಲ್ಲ. ಇವನದು ಇನ್ನು ಎಷ್ಟು ಸೊಕ್ಕು ಐತಿ ಎಂಬುದನ್ನು ನೋಡಿಯೇ ಬಿಡುತ್ತೇನೆಂದು ಹೇಳುತ್ತಾಳೆ.

ಹಠಮಾಡಿ ನಿಲ್ಲುತ್ತಾಳೆ (ಹುಲಿಗೆಮ್ಮ) ಮುದುಕಿ. ಆಗ ಮತ್ತೆ ಬಡಿಯುತ್ತಾರೆ. ಬಾಗಿಲು ಕಾಯುವವರು ಬಡಿದಂತೆಲ್ಲ ಉಧೋ ಎಂದು ಹೇಳುತ್ತಾಳೆ. ಆಗ ಮಲೈಸೆಟ್ಟಿಗೆ ಬಹಳ ಸಿಟ್ಟು ಬಂದು ಬಿಟ್ಟಿತು. ಎಷ್ಟು ಬಡಿದರೂ ಆ ರಂಡೆ ಮತ್ತೇ ಉಧೋ ಅಂಬುತ್ತಾಳೇ, ವಗಿಯಿರಿ ದೂರ ತೆಗೆದುಕೊಂಡು ಹೋಗಿ ಇಬ್ಬರು ಎಂದು ಹೇಳುತ್ತಾರೆ ಮಲಯಸೆಟ್ಟಿ. ಆಗ ಇಬ್ಬರು ಆಳುಗಳು ರಟ್ಟೆ ಹಿಡಿದು ದೂರ ತೆಗೆದುಕೊಂಡು ಹೋಗಿ ವಗಿಯುತ್ತಾರೆ. ಅವರು ವಾಪಸ್ಸು ಬರುವುದಕ್ಕಿಂತ ಮೊದಲೆ ತಲೆಬಾಗಿಲದ ಹತ್ತಿರ ಬಂದು ನಿಂತಿರುತ್ತಾಳೆ. ಆ ಈಗ ಇನ್ನೂ ಆಕೆಯನ್ನು ವಗೆದು ನಾವು ಬಂದೀವಿ. ಆಗಲೇ ಇಲ್ಲಿ ಇದ್ದಾಳಲ್ಲ, ನಮಗಿಂತ ಮೊದಲೆ ಇಲ್ಲಿ ಬಂದು ನಿಂತು ಬಿಟ್ಟೆಯಾ, ಎಂದು ಹೇಳುತ್ತಾರೆ. ಮುದುಕಿ ನೀನು ಎಷ್ಟು ಬಂಡಿ ಇದ್ದೀಯಾ, ನಿನ್ನಂತ ಬಂಡಿನಾ ನಾವು ಎಲ್ಲಿಯೂ ನೋಡಿಲ್ಲ. ಹೋಗಮ್ಮ ನೀನೇನು ಬಂಡತಕ್ಕೆ ಬಿದ್ದಿಯಾ ಎಂದು ಬೈಯುತ್ತಾರೆ. ಆಗಲಪ್ಪಾ ನನ್ನಂತ ಬಂಡಿ ಎಲ್ಲಿದ್ದಾಳೆ, ಬಂಡತನಕ್ಕೆ ಬಿದ್ದೀನಿ, ಬಿದ್ದೀನಿ. ಇವತ್ತು ಹಠ ಮಾಡಿ ನಾನು ನೋಡಿಯೇ ತಿರುತ್ತೇನೆ ಎಂದು ಹೇಳುತ್ತಾಳೆ. ಆಗ ನಿಂತುಕೊಂಡಳು ತಲೆ ಬಾಗಿಲಿಗೆ. ಆಕಾಶಕ್ಕೆ ಭುಮಿಗೆ ಏಕವಾಗಿ ಚೀಲದಾಗಿನಿಂದ ಮುತ್ತಿನ ಚಂಡು ತೆಗೆದುಕೊಂಡಳು. ಮುತ್ತಿನ ಚಂಡಿನ ಭಂಡಾರ ಉಗ್ಗಿಬಿಟ್ಟಳು. ಆ ಚಂಡು ಸುವಾಸನೆ ಬೀರುವ ರೀತಿಯಲ್ಲಿ ಗಮ ಗಮ ಅನ್ನುವ ರೀತಿಯಲ್ಲಿ ಇದೆ. ಆಗ ಆ ಚಂಡು ಹಿಡಿದುಕೊಂಡು ಉಧೋ. ಉಧೋ ಎಂದು ಬೀಡಿ ಮಂಚಕ್ಕೆ ವಗೆದು ಬಿಟ್ಟಳು. ಮಂಚದ ಮೇಲೆ ಮಲಗಿದ್ದ ಮಲೈಸೆಟ್ಟಿ ಎದ್ದು ಕಣ್ಣು ತೆರುತ್ತಾನೆ. ಚಂಡು ಗಮ, ಗಮ ಎಂದು ಸುವಾಸನೆ ಬೀರಿದಾಗ ಮಲೈಸೆಟ್ಟಿ ಏನು ನನ್ನ ದೇವರು, ಏನುವಾಸನೆ, ನನ್ನ ಮುತ್ತಿನ ಚೆಂಡೋ ಎಂಥವಾಸನೆ, ಯಾವ ದೇವರದ್ದಾಗಿದ್ದಿತು. ಆಗ ಆ ಮುತ್ತಿನ ಚೆಂಡನ್ನು ಕೈಯಲ್ಲಿ ಹಿಡಿದುಕೊಂಡು ತಿರುವು, ಮುರುವು ತಿರುಗಿ ನೋಡುತ್ತಾನೆ. ಛೆ, ಛೆ, ಛೆ, ನನ್ನ ಭಕ್ತಿಗೆ ಇದನ್ನು ಕೊಟ್ಟಿದ್ದಾನೋ ಪರಮಾತ್ಮ. ಇದನ್ನು ಎಲ್ಲಿಯೂ ಇಡತಕ್ಕದ್ದಲ್ಲವೆಂದು ಅಂದುಕೊಂಡು, ದೇವರ ಜಗಲಿ ಮೇಲೆಯೇ ಇಡಬೇಕೆಂದು ಹೆಂಡತಿಯನ್ನು ಕರೆಯುತ್ತಾನೆ. ಎಂಥ ಚೆಂಡು ಕೊಟ್ಟಾನೆ ನೋಡೆ, ದೇವರು ನನ್ನ ಭಕ್ತಿಗೆ, ಮುತ್ತಿನ ಚೆಂಡು ನನ್ನ ಮಂಚಕ್ಕೆ ಬಂದು ಬಿದ್ದಿದೆ. ಎಷ್ಟು ವಾಸನೆ ಇದೆ ಮೂಸಿ ನೋಡು ಎಂದು ಹೆಂಡತಿಗೆ ಹೇಳುತ್ತಾನೆ. ನಾನು ಮೂಸಿ ನೋಡುವುದಿಲ್ಲ ಎಂದು ಗಂಡನಿಗೆ ಹೇಳುತ್ತಾಳೆ ಹೆಂಡತಿ.

ಆಗ ಮೂಸಿ ನೋಡುತ್ತಾನೆ. ಎಷ್ಟು ವಾಸನೆ ಇದೆ ಇದನ್ನು ತೆಗೆದುಕೊಂಡು ಹೋಗಿ ಜಗಲಿ ಮೇಲೆ ಇಡು ಎಂದು ಹೇಳುತ್ತಾನೆ. ಛೆ, ಏನು ಗಮ, ಗಮವಿದೆ, ಎಂದು ಹೇಳುತ್ತಾನೆ. ಆಗ ಹೆಂಡತಿ ಅದನ್ನು ತೆಗೆದುಕೊಂಡು ಹೋಗಿ ಜಗಲಿ ಮೇಲೆ ಇಡುತ್ತಾಳೆ. ಅದನ್ನು ಮೂಸಿ ನೋಡಿ ಒಂದು ವಾರದೊಳಗೆ ೩೬೦ ಹುಣ್ಣುಗಳು ಹುಟ್ಟಿದವು ಮೈತುಂಬಾಹುಣ್ಣು ಮೂಗು ಪಿಶಿಸಿ ಹುಣ್ಣು, ತಲೆಡೊಬಿ ಹುಣ್ಣು, ಕಪಾಳ ಹುಣ್ಣು, ಹಲ್ಲು ಹುಣ್ಣು, ಕುತುಗಿ ಹುಣ್ಣು, ಹೊಟ್ಟೆ ಹುಣ್ಣು, ಬೆನ್ನು ಬೇತಾಲದ ಹುಣ್ಣು, ಕೇಸುದುಣ್ಣು, ಕೀಲು, ಕೀಲುಗಳಿಗೆ ಹುಣ್ಣಾಗಿ, ಜಿಬಿ, ಜಿಬಿ, ಜಿಬಿ ಎಂದು ಜಿಬಿಗುಟ್ಟಿದವು ವಾರ ಎಂಬುದರೊಳಗೆ, ಆಗ ಈತನನ್ನು ತೆಗೆದುಕೊಂಡು, ಮಿರ್ಜಿಗೆ ಹೋದರು, ಹುಬ್ಬಳ್ಳಿಗೆ ಹೋದರು, ಧಾರವಾಡಕ್ಕೆ ಹೋದರು, ಬೆಂಗಳೂರಿಗೆ ಹೋದರು. ಎಲ್ಲೆಲ್ಲಿ ತಿರುಗಿದರು ಯಾವ ಡಾಕ್ಟರ್ ಮುಟ್ಟಲಿಲ್ಲ. ಏನು ಇಲ್ಲ ಎಂದು ಹೇಳಿದರು. ಇದೇನಿದು ಎಂದು ಆತನ ಕತೆ ಮುಗಿಯಿತು ಎಂದು ಮನೆಗೆ ತಂದು ಒಗೆದರು, ಮಂಚಕ್ಕೆ ತಂದು ಒಗೆದರು, ಮಂಚದ ಮೇಲೆ ಒಬ್ಬರೂ ಹೋಗದ ರೀತಿ ಕೆಟ್ಟ ವಾಸನೆ ಹೊಡೆಯುತ್ತಿದ್ದಾನೆ. ಆತನ ಹತ್ತಿರ ಜನರು, ಆಳುಗಳು ಹಿಂಜರಿಯುತ್ತಾರೆ. ಆ ರೀತಿ ಕೆಟ್ಟ ವಾಸನೆ ಹೊಡೆಯುತ್ತಿದ್ದಾನೆ.

ದಿನಕ್ಕೆ ಎರಡು ಸಲ ಮೈ ತೊಳೆದರು ಕೀವು ರಕ್ತ ಹರಿದು ವಾಸನೆ ಇಟ್ಟಿದ್ದಾನೆ. ಕೆಟ್ಟವಾಸನೆ ಹೊಡೆಯುತ್ತಿದ್ದಾನೆ. ಆಗ ಹುಲಿಗೆಮ್ಮ (ಮುದುಕಿ) ಈಗಲಾದರೂ ಇವನ ಸೊಕ್ಕು ಮುರಿದಿದೆಯೋ, ಇಲ್ಲವೋ, ನೋಡಿಬರೋಣವೆಂದು ಮಲೈಸೆಟ್ಟಿ ಮನೆ ಹತ್ತಿರ ಬಂದಳು. ಅವನ ಮನೆ ಹತ್ತಿರ ಬಂದಾಗ ಮತ್ತೆ ಮುದುಕಿ ವೇಷವಾಗಿ ಜೋಳಿಗೆ ಹಾಕಿಕೊಂಡು, ಅಡ್ಲಿಗಿ ಹಿಡಿಕೊಂಡು ಬಂದಳು. ಮತ್ತೆ ಬಾಗಿಲಿಗೆ ಬಂದು ನಿಂತಾಗ ಆ ಕಡೆ, ಈ ಕಡೆ, ಇರುವ ಆಳುಗಳು ನೋಡುತ್ತಾರೆ. ಮತ್ತೆ ಈ ಮುದುಕಿ ಬಂದಳಲ್ಲ ಎಂದು ಕೊಂಡು ಸುಮ್ಮನಾಗುತ್ತಾರೆ. ಮತ್ತೆ ಮುದುಕಿ ಬಾಗಿಲಿಗೆ ನಿಂತುಕೊಂಡ ಉಧೋ ಉಧೋ ಎಂದು ಅಂಬುತ್ತಾರೆ. ಆ ಶಬ್ಧ ಸಾಯೋ ಸ್ಥಿತಿಯಲ್ಲಿದ್ದ ಮಲೈಸೆಟ್ಟಿ ಕಿವಿಗೆ ಬಿದ್ದಿತು. ಜೋಗಮ್ಮ ಬಂದಿರಬೇಕು ನೋಡಿರಿ ಎಂದು, ಎಚ್ಚೆತು ಕೊಂಡಿದ್ದಾನೆ, ಎಂದು ಅಂದುಕೊಂಡಳು, ಮುದುಕಿ (ಹುಲಿಗೆಮ್ಮ). ಹೌದುರೀ ಜೋಗಮ್ಮ ಬಂದಿದ್ದಾಳೆ ಎಂದು ಮಲೈಸೆಟ್ಟಿಗೆ ಅವನ ಹೆಂಡತಿ ತಿಳಿಸಿದಳು. ಆಗ ಚೆಂಬು ನೀರುಹಾಕಿ ಒಳಕ್ಕೆ ಕರೆದುಕೊಳ್ಳೇ ಎಂದು ತನ್ನ ಹೆಂಡತಿಗೆ ಮಲೈಸೆಟ್ಟಿ ತಿಳಿಸಿದ. ಆಗ ಮಲೈಸೆಟ್ಟಿ ಹೆಂಡತಿ ಚೆಂಬು ನೀರು ಆಕೆಯ ಪಾದಕ್ಕೆ ಹಾಕಿ ಕೈಮುಗಿದು ಒಳಕ್ಕೆ ಕರೆದುಕೊಂಡು ಬಂದಳು. ಆಗ ಒಳಕ್ಕೆ ಬಂದ ಮುದುಕಿ (ಹುಲಿಗೆಮ್ಮ) ಅವನ ಕೋಣೆಗೆ ಹೋಗಲು ಕಾಲು ಇಡುತ್ತಾಳೆ. ಅವನ ಕೋಣೆಗೆ ಕಾಲು ಇಡುವಂತಿಲ್ಲ. ಅಷ್ಟು ವಾಸನೆ, ಕೆಟ್ಟ ವಾಸನೆ ಅವನ ಕೋಣೆಯಿಂದ ಬರುತ್ತದೆ. ಏನಿದು ಇಷ್ಟು ಕೆಟ್ಟ ವಾಸನೆ ಎಂದು ಅನ್ನುತ್ತಾಳೆ. ಏನಿಲ್ಲ ತಾಯಿ ಬಾರವ್ವ ಎಂದು ಎದ್ದು ಹೆಣವೇ ಕೈಮುಗಿಯುತ್ತದೆ. ಆ ರೀತಿಯಾಗಿದ್ದ ಮಲೈಸೆಟ್ಟಿ ಬಾ ತಾಯಿ ನಿನ್ನ ಮೇಲೆ ಮಾಡಿದ್ದು ಬಹಳತಪ್ಪು ಆಯಿತು. ತಪು ಮಾಡಿದ್ದಕ್ಕಾಗಿ ಈ ಶಿಕ್ಷೆ ಅನುಭವಿಸಿದ್ದೇನವ್ವ ತಾಯಿ, ಶರಣಾಗುತ್ತೇನೆ. ನಾನು, ನನ್ನಬ್ಯಾನಿ ತೆಗೆದುಕೊಳ್ಳವ್ವಾ ಎಂದು ಕೈ ಮುಗಿಯುತ್ತಾನೆ. ಆಗ ಮನಸ್ಸಿನಾಗ ಅಂದು ಕೊಳ್ಳುತ್ತಾಳೆ. ನೀನು ಎಷ್ಟು ಅಹಂಕಾರದಿಂದ ಎಷ್ಟು ಸೊಕ್ಕಿನಿಂದ ಮರೆದೆಯಲ್ಲೋ ಎಂದು ಎನ್ನುತ್ತಾಳೆ. ಹೆಣ್ಣು ದೇವರೆಂದರೆ ಆಗದಂತವನು ಈಗ ನನಗೆ ಶರಣಾದೆಯಾ, ಹೌದು ತಾಯಿ ನಾನು ತಪ್ಪು ಮಾಡಿದ್ದೇನವ್ವ ನನ್ನನ್ನು ಕ್ಷಮಿಸಿಬಿಡು ಎಂದು ಕೇಳಿಕೊಳ್ಳುತ್ತಾನೆ ಮಲೈಸೆಟ್ಟಿ. ನನ್ನ ಬ್ಯಾನಿ ತೆಗೆದು ಬಿಡವ್ವಾ ಎಂದು ಕೇಳಿಕೊಳ್ಳುತ್ತಾನೆ ಮಲೈಸೆಟ್ಟಿ. ಆಗ ಮುದುಕಿ (ಹುಲಿಗೆಮ್ಮ).ತಪ್ಪು ಎಂದು ಶರಣಾಗಿದ್ದಾನೆ. ತಪ್ಪು ಮಾಡಿದ ಮೇಲೆ, ತಪ್ಪು ಎಂದು ಶರಣಾದ ಮೇಲೆ ಒಪ್ಪೊಕೊಂಡ ಮೇಲೆ ಸುಮ್ಮನಿರುವುದು ಸರಿಯಲ್ಲ. ಅವನ ಬ್ಯಾನಿಯನ್ನು ತೆಗೆದು ಬಿಡೋಣವೆಂದು, ಅಂದು ಕೊಳ್ಳುತ್ತಾಳೆ ಮುದುಕಿ (ಹುಲಿಗೆಮ್ಮ).

ಆಗ ಸ್ನಾನ ಮಾಡಿಸುತ್ತಾರೆ ಮುದುಕಿಗೆ, ಸೀರೆ ಕುಬುಸ ಹೊಸವು ತಂದು ಉಡಿಸುತ್ತಾರೆ. ಆಗ ಮಲೈಸೆಟ್ಟಿ ಮುಂದೆ ಬಂದು ಕುಳಿತುಕೊಂಡು ನೋಡುತ್ತಾಳೆ. ಮಲೈಸೆಟ್ಟಿಗೆ ಹೇಳುತ್ತಾಳೆ. ಏನಪ್ಪಾ ನಾನು ಕೊಟ್ಟ ಔಷಧ ಕುಡಿಯುತ್ತೀಯಾ, ತಿನ್ನುತ್ತೀಯಾ ಎಂದು ಕೇಳುತ್ತಾಳೆ. ಆಗಲಿ ತಾಯಿ, ನೀನು ಕೊಟ್ಟಾ ಔಷಧಿ ಕುಡಿಯುತ್ತೇನೆ, ನೀನು ಕೊಟ್ಟ ತೀರ್ಥಾನು ಕುಡಿಯುತ್ತೇನೆ. ನೀನು ಕೊಟ್ಟ ಔಷಧವನ್ನು ತಿನ್ನುತ್ತೇನೆ ಎಂದು ಹೇಳಿದ ಮಲೈಸೆಟ್ಟಿ. ಸರಿ ಎಂದು ತನ್ನ ಜೋಗುಳಿಯಲ್ಲಿ ಇಟ್ಟುಕೊಂಡಿದ್ದ ಮಾಂಸದ ತುಂಡನ್ನು ಕರೆ ಮಾಡಿರುವುದನ್ನು ಮಲೈಸೆಟ್ಟಿ ಕೈಯಲ್ಲಿ ಇಡುತ್ತಾಳೆ. ನಂತರ ಹೆಂಡದ ಬಾಟ್ಲನ್ನು ಕೊಡುತ್ತಾಳೆ. ಆ ಇದನ್ನು ತಿಂದು, ಇದನ್ನು ಕುಡಿ ಎಂದು ಹೇಳುತ್ತಾಳೆ. ಅಂದರೆ ಮಾಂಸದ ಕರೆಯನ್ನು ತಿಂದು, ಹೆಂಡವನ್ನು ಕುಡಿ ಎಂದು ಹೇಳುತ್ತಾಳೆ. ಅವೆರಡನ್ನು ಕೈಯಲ್ಲಿ ಹಿಡಿದುಕೊಂಡು ಬೋರಾಡಿ ಆಳುತ್ತಾನೆ. ಏನು ತಾಯಿ ಎಂಥದ್ದು ಕೊಟ್ಟುಬಿಟ್ಟೀದ್ದೀಯಾ, ನನ್ನ ಕೈಯಾಕ ಇದನ್ನು ತಂದು, ಇದನ್ನು ಕುಡಿಯದ್ದಿದ್ದರೆ, ನಿನ್ನ ಬ್ಯಾನಿ ವಾಸಿಯಾಗುವುದಿಲ್ಲಪ್ಪಾ ಎಂದು ಹೇಳುತ್ತಾಳೆ ಮುದುಕಿ ಅಯ್ಯೋ ತಾಯಿ ಎಂಥದ್ದು ತಂದೆವ್ವ ನನಗೆ ಎಂದು ಅಳುತ್ತಾನೆ. ಕಣ್ಣು ಮುಚ್ಚಿಕೊಂಡು, ಉಧೋ ಉಧೋ ಎಂದು ಕೊಳ್ಳುತ್ತಾ ತಿನ್ನೋ ನನ್ನ ಮಗನೆ ಎಂದು ಮುದುಕಿ ಹೇಳುತ್ತಾಳೆ. ಆಗ ಕಣ್ಣು ಮುಚ್ಚಿಕೊಂಡು, ತಾಯಿ ಹುಲಿಗೆಮ್ಮ ಎಂದು, ನಾನು ಮಾಡಿದ ಪಾಪದ ಪ್ರಾಯಶ್ಚಿತ್ತ ಅನುಭವಿಸುತ್ತೇನಮ್ಮ ಎಂದು ಆಗ ಉಧೋ ಉಧೋ ಎಂದ ಕಂಡ ತಿಂದು ಹೆಂಡ ಗಟಗಟವೆಂದು ಕುಡಿದ ಮಲೈಸೆಟ್ಟಿ .

ಆಗ ತಣ್ಣಗೆ ತನ್ನ ಜನ್ಮಕ್ಕೆ ಸಂತೋಷವಾಯಿತು ಮಲೈಸೆಟ್ಟಿ. ಎಷ್ಟು ಔಷಧ ಕುಡಿದರು ಆತನಿಗೆ ಶಾಂತಿ ಆಗಿದ್ದಿಲ್ಲ. ಆಗ ಆಕೆ ಹೇಳಿದ ವಾಕ್ಯದಲ್ಲಿ ನಡೆದ, ಆಗ ಆಕಿ ತನ್ನ ಉಡಿಯಲ್ಲಿದ್ದ ಭಂಡಾರ ತೆಗೆದುಕೊಂಡು, ಉಧೋ ಉಧೋ ಎಂದು ಅವರ ಮೈಮೇಲೆ ಹಾಕಿದಳು. ಆಗ ಒಂದುವಾರ ಎಂಬುದಷ್ಟರಲ್ಲಿ ಹುಣ್ಣು ಉಷ್ಣ ಎಲ್ಲವೂ ಜಳಜಳವಾದವು. ಅಲ್ಲಿಯವರೆಗೆ ಆಕೆಯನ್ನು ಅಲ್ಲಿಯೇ ಇಟ್ಟುಕೊಂಡಿದ್ದ ಮಲೈಸೆಟ್ಟಿ. ಆಗ ಎಲ್ಲ ವಾಸಿಯಾದ ಮೇಲೆ ನಾನು ಬರಲೇನಪ್ಪಾ ಮಗನೆ ಎಂದಳು. ಮುದುಕಿ (ಹುಲಿಗೆಮ್ಮ). ಆಗ ಮಲೈಸೆಟ್ಟಿ ತಾಯಿ ನಮ್ಮವ್ವ ಎಂದು ಸತ್ತು ಹೋಗುತ್ತಿದ್ದ, ನನ್ನ ಜೀವ ಉಳಿಸಿದೆವ್ವ ಎಂದು, ನಿನ್ನ ಪಾದದ ದೈವದಿಂದ ನಾನು ಉಳಿದುಕೊಂಡೆ ನಮ್ಮವ್ವ ಎಂದು ಅನ್ನುತ್ತಾನೆ. ತಾಯಿ ನಿನ್ನನ್ನು ಹಾಗೆಯೇ ಕಳಿಸುವುದಿಲ್ಲ. ಎಂದು ಹೊಸ ಸೀರೆ, ಹೊಸ ಕುಬುಸ ತಂದು ಆಕೆಗೆ ತಾಯಿ ನಮ್ಮವ್ವ ನಿನ್ನ ಕಥೆ ಕೇಳಿದವರಿಗೆ ಯಾವ ರೋಗ ಬಾರದಂತೆ ನೋಡವ್ವ ಎಂದು, ಹೇಳುತ್ತಾನೆ ಮಲೈಸೆಟ್ಟಿ .

ತಾಯಿ ನಮ್ಮವ್ವ ನಿನ್ನ ಹೆಸರು ಎತ್ತಿ ಬದುಕಿದೇನವ್ವ ಎಂದು ಹೇಳುತ್ತಾನೆ ಮಲೈಶೆಟ್ಟಿ. ಇವತ್ತಿಗೂ ಹುಲಿಗೆಮ್ಮ ಎಂದು ಹೆಸರೆತ್ತಿ ಏನೇ ಜಡ್ಡು, ಜಾಪತ್ತು ಬಂದರೂ, ಆಕೆಯ ಹೆಸರೆತ್ತಿ ಉಧೋ ಉಧೋ ಎಂದರೆ ಆ ಬ್ಯಾನಿ ವಾಸಿಯಾಗುತ್ತದೆ. ಎಂದು ಹೇಳಿದ್ದಾಳೆ. ಅದರಂತೆ ನಡೆದವರಿಗೆ , ಒಳ್ಳೆಯದಾಗುತ್ತದೆ, ಒಳ್ಳೆಯದಾಗಬಹುದು.

ಸಾವುಕಾರ ನಾಗಸೆಟ್ಟಿ, ಸಾವುಕಾರ ಭೀಮಸೆಟ್ಟಿ

ಸಾವುಕಾರ ನಾಗಸೆಟ್ಟಿ, ಸಾವುಕಾರ ಭೀಮಸೆಟ್ಟಿ ಎಂದು ಇದ್ದರು. ಊರ ಹೊರಗೆ ಅವರ ಉಳ್ಳಗಡ್ಡಿ, ಹಸಿಮೆಣಸಿನಕಾಯಿ ತೋಟ ಭರ್ಜರಿಯಾಗಿತ್ತು. ನಾಗಸೆಟ್ಟಿ ತೋಟ ಶ್ರೀಮಂತವಾಗಿತ್ತು. ಆಕೆ ಹುಲಿಗೆಮ್ಮ ಪರಶುರಾಮನ ಗರ್ಭಿಣಿ, ತರಕಾರಿ ಊಟ ಮಾಡಬೇಕೆಂದು ಬೇರೆ ವೇಷದಲ್ಲಿ ಉದೋ ಎಂದು ಹೋಗಿ ನಿಲ್ಲುತ್ತಾಳೆ. ಸಾವುಕಾರ ನಾಗಸೆಟ್ಟಿ, ಏನಮ್ಮ ಜೋಗುತಿ ನಾವು ಮಾಲೆಲ್ಲ ಅಂಗಡಿಗೆ ಕಳಿಸಬೇಕು ನಡಿ ಎಂದು ಹೇಳುತ್ತಾನೆ. ಅಪ್ಪಾ ಬದನೆಕಾಯಿ, ಉಳ್ಳಗಡ್ಡಿ, ಮೂರು ಬದನೆಕಾಯಿ ಕೊಡಪ್ಪಾ ಎಂದು ಕೆಳುತ್ತಾಳೆ. ಏ ಇನ್ನು ವ್ಯಾಪಾರವಾಗಿಲ್ಲ ನಾವು ದಾನ ಮಾಡುವುದಿಲ್ಲ ಹೋಗು ಎಂದು ಬೈಯುತ್ತಾನೆ. ಸಾವುಕಾರ ನಾಗಸೆಟ್ಟಿ, ನೀನಾದರೂ ದಾನ ಮಾಡಬೇಕಪ್ಪಾ ಎಂದು ಕೇಳುತ್ತಾಳೆ ಅವನೂ, ಬೈಯುತ್ತಾನೆ.

ರಾಶಿ, ರಾಶಿ, ಇರುವ ತರಕಾರಿ ಮೇಲೆ ಅಡ್ಲಿಗಿಯಲ್ಲಿರುವ ಭಂಡಾರ ತೆಗೆದು ಅವುಗಳ ಮೇಲೆ ತೂರುತ್ತಾಳೆ. ಮನುಷ್ಯನ ಎತ್ತರವಿರುವ ರಾಶಿಗಳು ಒಂದು ಹಿಡಿಕೆಯಾದವು. ಅವರು ಅತ್ತಿತ್ತ ನೊಡುತ್ತಾರೆ. ಒಂದು ಜೋಗುತಿ ಬಂದಳೆಲ್ಲ ನೋಡಿರೆಂದು ಹುಡುಕುತ್ತಾರೆ. ಎಲ್ಲೆಲ್ಲಿ ಇಲ್ಲ. ಅತ್ತ ಭೀಮಸೆಟ್ಟಿ ತೊಗರಿ, ಹಲಸಂದಿ, ಒಕ್ಕುತ್ತಿರುತ್ತಾನೆ. ಎರಡಾಳಿನಷ್ಟು ಎತ್ತರದ ರಾಶಿಗಳು, ತೊಗರಿ ಗುಗ್ಗರಿ, ಹಲಸಂದಿ ಗುಗ್ಗರಿ ತಿನ್ನೊ ಆಸೆ ಆಗಿದೆ ಹುಲಿಗೆಮ್ಮನಿಗೆ, ಸಾವುಕಾರ ಭೀಮಸೆಟ್ಟಿ ಕಾಳು ಕೊಡಪ್ಪ ಗುಗ್ಗರಿ ತಿನ್ನೊ ಆಸೆ ಎಂದು ಕೇಳುತ್ತಾಳೆ. ಹೇ ಜೋಗುತಿ ನಾವು ದಾನ ಕೊಡವವರಲ್ಲವೆಂದು ಬೈಯುತ್ತಾನೆ. ಅಂಗಡಿಗೆ ಹಾಕದೆ ನಾವು ದಾನ ಮಾಡುವುದಿಲ್ಲವೆಂದು ಹೇಳುತ್ತಾನೆ. ಆಳುಗಳು ಆಕೆಯನ್ನು ಬಡಿದು ದಬ್ಬುತ್ತಾರೆ. ಅಡ್ಲಿಗಿ ತೆಗೆದುಕೊಂಡು ಉಧೋ ಎಂದು ಭಂಡಾರ ಉಗ್ಗುತ್ತಾಳೆ. ಮನುಷ್ಯನಷ್ಟು ಎತ್ತರವಿರುವ ರಾಶಿ ಹಿಡಿಕೆಯಷ್ಟು ಆಗುತ್ತದೆ. ಹಲಸಂದ, ತೊಗರಿ ಹಿಡಿಕೆಯಷ್ಟು ರಾಸಿಯಾಗುತ್ತವೆ. ಆ ಜೋಗುತಿ ಎಲ್ಲೆ ಇದ್ದಾಳೆ ಹುಡುಕಿ ಎಂದು ಹುಡುಕುತ್ತಾರೆ. ಎಲ್ಲೆಲ್ಲೂ ಇಲ್ಲ. ಜೋಗುತಿಗಾಗಿ ಹುಡುಕುತ್ತಾರೆ. ಊರ ಹನುಪ್ಪನ ಗುಡಿ ಮುಂದೆ ಅಡ್ಲಿಗಿ ಇಟ್ಟುಕೊಂಡು ಮಲಗಿರುತ್ತಾಳೆ. ಹೇ ಜೋಗುತಿ, ಬಾ ಇಲ್ಲಿ ಏನು ಮೋಡಿ ಮಾಡಿಯೇಣು ರಾಶಿ ಮುಂದೆ ನಿಲ್ಲಿಸಿ ಏನುಬೇಕು ನಿನಗೆ ಎಂದು ಕೇಳುತ್ತಾರೆ. ಹೆಚ್ಚಲ್ಲ ಮೂರು ಉಳ್ಳಗಡ್ಡಿ, ಮೂರು ಬದನೆಕಾಯಿ, ಕೇಳಿದೆ ನೀವು ಕೊಡಲಿಲ್ಲ ಎಂದು ಹೇಳುತ್ತಾಳೆ. ಮೊದಲಿನಂತೆ ರಾಶಿ ಮಾಡು ಕೊಡುತ್ತೇವೆ ಎಂದು ಹೇಳುತ್ತಾನೆ. ಮತ್ತೆ ಭಂಡಾರ ಉಗ್ಗುತ್ತಾಳೆ. ಆಕಾಶಕ್ಕೆ ಎತ್ತರವಾಗಿ ರಾಶಿಯಾಗುತ್ತವೆ. ದೊಡ್ಡಾಕಿಯವ್ವ ನೀನು ಎಂದು ಕೇಳುತ್ತಾರೆ. ನಾನು ಹುಲಿಗೆಮ್ಮನೆಂದು ಹೇಳುತ್ತಾಳೆ. ನನಗೆ ಭಾರತ ಹುಣ್ಣಿಮೆ ಹಬ್ಬದಾಗ ಅಡ್ಲಿಗಿ ತುಂಬಿ, ಇನ್ನಷ್ಟು ಹೆಚ್ಚುತ್ತದೆ ಬೆಳೆ ಎಂದು ಹೇಳುತ್ತಾಳೆ. ಮೊದಲು ಉಳ್ಳಗಡ್ದಿ ನಿನ್ನ ಅಡ್ಲಿಗಿ ತುಂಬಿದ ಮೇಲೆಯೇ ಮುಂದಿನ ಕೆಲಸವೆಂದು ನಾಗಸೆಟ್ಟಿ ಆಕೆಯ ಪಾದಕ್ಕೆ ಬೀಳುತ್ತಾನೆ. ಭಿಮಸೆಟ್ಟಿ ಆಕೆಯನ್ನು ಹುಡುಕಿಕೊಂಡು ಬರುತ್ತಾನೆ. ಆಕೆಯನ್ನು ಬಡಿಯಲು ಹೋಗುತ್ತಾನೆ. ಆಗ ಏನು ಮಾಡಿದ್ದೇನೆ ಎಂದು ಕೇಳುತಾಳೆ. ನನ್ನೇಕೆ ಬಡಿಯುತ್ತೀರಿ. ಎಂದು ಕೇಳುತ್ತಾಳೆ. ನಮ್ಮ ರಾಶಿಗಳನ್ನು ಮೊದಲಿನಂತೆ ಮಾಡು ಎಂದು ಭೀಮಸೆಟ್ಟಿ ಕೇಳುತ್ತಾನೆ. ಆಗ ರಾಶಿ ಮುಂದೆ ನಿಂತು ಭಂಡಾರ ಉಗ್ಗುತ್ತಾಳೆ. ಆ ರಾಶಿಗಳು ಮೊದಲಿನಂತೆ ಆಗುತ್ತವೆ. ಭಂಡಾರ ತೆಗೆದುಕೊಂಡು ಉಧೋ ಎಂದು ಉಗ್ಗುತ್ತಾಳೆ. ರಾಶಿ ಮೊದಲಿನಂತೆ ಆದವು.

ಏನು ಬೇಕು ತಾಯಿ ನಿನಗೆ ಎಂದು ಭೀಮಸೆಟ್ಟಿ ಕೇಳುತ್ತಾನೆ. ನನಗೆ ಏನು ಬೇಡ ಭಾರತ ಹುಣ್ಣಿಮೆ ದಿನ ನನಗೆ ಗುಗ್ಗರಿ ಎಡೆ ಮಾಡಿಹಾಕಿ ಎಂದು ಕೇಳುತ್ತಾಳೆ. ಭಾರತ ಹುಣ್ಣಿಮೆ ದಿನ ಆಕೆಗೆ ಎಡೆ ಹಾಕದೇ ನಾವು ಊಟ ಮಾಡುವುದಿಲ್ಲವೆಂದು ಭೀಮಸೆಟ್ಟಿ ಹೇಳುತ್ತಾನೆ. ಗುಗ್ಗರಿ ಎಡೆ ಮಾಡಿ ಹಾಕುತ್ತಾನೆ. ಹುಲಿಗೆಮ್ಮ ಆಗಿನಿಂದ ಶಾಂತವಾಗಿ ಇರುತ್ತಾಳೆ.

ಅಣ್ಣತಂಗಿ

ರೆಡ್ದಿ ವಂಶದಾಗ ಇಬ್ಬರು ಅಣ್ಣ-ತಂಗಿ, ಮಲ್ಲರೆಡ್ಡಿ , ಬಡವಿ ನೀಲಮ್ಮ. ಬಡವಿ ನೀಲಮ್ಮನಿಗೆ ೭ ಮಂದಿ ಗಂಡು ಮಕ್ಕಳು ಅವರು ಬಹಳ ಬಡವರು. ಅವರ ತಂದೆ, ಕೂಲಿ ಕೆಲಸ ಮಾಡುತ್ತಿದ್ದ. ಆದರೆ ಮಳೆಗಾಲದಲ್ಲಿ ಆತನಿಗೆ ಎಲ್ಲಿ ಕೆಲಸ ಸಿಗಲಿಲ್ಲ. ಅವ್ವಾ ನಿನ್ನ ಅಣ್ಣನ ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇವೆ ಎಂದು ಬಡವಿ ನೀಲಮ್ಮನ ಮಕ್ಕಳು ತನ್ನ ತಾಯಿಗೆ ಹೇಳುತ್ತಾರೆ. ನಿನ್ನ ಅಣ್ಣ ಬಹಳ ಶ್ರೀಮಂತ ಆದುದರಿಂದ ಅಲ್ಲಿ ಊಟ ಮಾಡಿಕೊಂಡು ಬರುತ್ತೇವೆ ಎಂದು ಹೋಗುತ್ತಾರೆ.

ಮಕ್ಕಳು ಹೋದರೆ ನೋಡುವಿದಿಲ್ಲ. ಮಕ್ಕಳಿಗೆ ಹೊರಗಡೆ ನಿಂತು, ನಿಂತು ಸಾಕಾಗುತ್ತದೆ. ಡೋಣಿಯಲ್ಲಿ ಅನ್ನ ಬಿದ್ದಿರುತ್ತದೆ. ಅದು ಬೇರೆ ಮುಸುರಿ ಡೋಣಿ, ಮುಸುರಿ ಡೋಣಿಯಲ್ಲಿ ಎಷ್ಟೊಂದು ಅನ್ನ ಹಾಳಾಗಿ ಹೋಗುತ್ತದೆ, ತೆಗೆದುಕೊಂಡು ಹೋಗೋಣವೆಂದು ಆಲೋಚಿಸುತ್ತಾರೆ. ಅದನ್ನು ತೆಗೆದುಕೊಂಡು ಹೋಗಿ ತಿನ್ನೋಣ ಏನು ತಮ್ಮ. ಹೋಗಿ ಬಟ್ಟೆ ತೆಗೆದುಕೊಂಡು ಬಾ ಎಂದು ಅವರಲ್ಲಿ ಅಣ್ಣ ಕಳಿಸುತ್ತಾನೆ. ಅವನು ಹೋಗಿ ಬಟ್ಟೆ ತೆಗೆದುಕೊಂಡು ಬಂದು ಎಲ್ಲ ಹುಡುಗರು ಡೋಣಿಯಲ್ಲಿರುವ ಅನ್ನ ಹಾಕಿಕೊಳ್ಳುತ್ತಾರೆ ಪುಟ್ಯಾಗ. ಬಡವಿ ನೀಲಮ್ಮನ ಅಣ್ಣನ ಹೆಂಡತಿ, ಮೇಲೆ ಕುಳಿತುಕೊಂಡು ನೋಡುತ್ತಾಳೆ. ಇಲ್ಲಿ ಬಾರೋ ನೋಡು ನಿನ್ನ ತಂಗಿಬಡವಿ ನೀಲಮ್ಮನ ಮಕ್ಕಳು ಅನ್ನ ತೆಗೆದುಕೊಂಡು ಹೋಗುತ್ತಾರೆ ಎಂದು ತನ್ನ ಗಂಡನಿಗೆ ಹೇಳುತ್ತಾಳೆ.

ಹೇಗಾದರೂ ಮಾಡಿ ಆ ಆನ್ನ ಕಿತ್ತುಕೊಳ್ಳಲು ಆಳುಗಳನ್ನು ಕರೆಸುತ್ತಾಳೆ. ಹುಂಚಿ ಬರಲು ತೆಗೆದುಕೊಂಡು ಹೊಡಿಯಿರಿ ಎಂದು ಆಳುಗಳನ್ನು ಬಿಡುತ್ತಾಳೆ. ಆ ಅನ್ನ ಕಸಿದುಕೊಳ್ಳುತ್ತಾರೆ, ನಡಿಯಿರಿ ಎಂದು ಬೈಯುತ್ತಾರೆ. ನಮ್ಮ ಎಮ್ಮೆಗಳು ತಿಂದು ಹಾಲು ಕೊಡುತ್ತಾವೆ ಎಂದು ಬೈಯುತ್ತಾರೆ. ಅನ್ನ ತೆಗೆದುಕೊಂಡು ಹುಡುಗರನ್ನು ಬಾಸುಂಡೆ ಬರುವಂತೆ ಬಡಿದು ಕಳಿಸುತ್ತಾರೆ. ಆ ಹುಡುಗರು ಮನೆಗೆ ಅಳುತ್ತಾ ಹೋಗುತ್ತಾರೆ. ಬಡವಿ ನೀಲಮ್ಮ ಯಾಕೆ ಆಳುತ್ತೀರಪ್ಪಾ ಎಂದು ಮಕ್ಕಳನ್ನು ಕೇಳುತ್ತಾಳೆ. ಡೋಣಿಯಲ್ಲಿನ ಅನ್ನ ತೆಗೆದುಕೊಳ್ಳುತ್ತಿದ್ದೆವು. ಅದನ್ನು ಕಸಿದುಕೊಂಡು ಬಡಿದರು ಎಂದು ಹೇಳುತ್ತಾರೆ. ನೀವ್ಯಾಕೆ ಹೋಗಿದ್ದೀರಿ ಎಂದು ತಾಯಿ ಬೈಯಿತ್ತಾಳೆ. ಮಲ್ಲರೆಡ್ದಿ ನಿಮ್ಮ ಅಣ್ಣ ಇದ್ದಾನೆಂದು ಹೋಗಿದ್ದೇವು, ಬಡಿದು ಕಳಿಸಿದರೆಂದು ಹೇಳುತ್ತಾರೆ. ಪಾಪ ಬಡತನ ಕೆಟ್ಟದೆಂದು ಹೋಗಬಾರದಪ್ಪಾ ಎಂದರೂ ನೀವು ಹೋಗಿರಪ್ಪಾ ಎಂದು ಹೇಳುತ್ತಾಳೆ. ಆ ಹುಡುಗರನ್ನು ಬಡವಿ ನೀಲಮ್ಮ ಮಲಗಿಸುತ್ತಾಳೆ. ಈಕೆ ನನ್ನ ಜನ್ಮ ಇರಬಾರದೆಂದು ಮಕ್ಕಳಿಗೆ ಹಸಿವೆ ಇದೆ, ಗಂಡನಿಗೆ ಕೆಲಸವಿಲ್ಲವೆಂದು ಅಳುತ್ತಾ ಕೂಡುತ್ತಾಳೆ. ಅದೇ ಸಮಯಕ್ಕೆ ಆದಿಶಕ್ತಿ ಹುಲಿಗೆಮ್ಮ ಅಡ್ಲಿಗಿ ತೆಗೆದು ಅವರ ಮನೆಗೆ ಬರುತ್ತಾಳೆ. ಹಿಂದಕ್ಕೆ ಮೂರು ಹುಣ್ಣು, ಮುಂದಕ್ಕೆ ಮೂರು ಹುಣ್ಣು ಹಾಕಿಕೊಂಡು ಉಧೋ ಎಂದು ನಿಲ್ಲುತ್ತಾಳೆ. ಯಾರಮ್ಮ ತಾಯಿ ನಾನು ಉಪವಾಸ ಇದ್ದೇನೆ ಎಂದು ಆಕೆಯ ಮುಂದೆ ಹೇಳಲಿಲ್ಲ ತನ್ನ ಕಷ್ಟವನ್ನು ತಾನು ನುಂಗಿಕೊಂಡು ಬಂದು ಚೆಂಬು ನೀರು ತಂದು ಪಾದ ತೊಳೆಯುತ್ತಾಳೆ. ಆ ನೀರನ್ನು ಹಿಡಿದುಕೊಂಡು ನನ್ನ ಕಷ್ಟ ಪರಿಹಾರ ಮಾಡೆಂದು ತಾನು ಕುಡಿದು ನನ್ನ ಮಕ್ಕಳಿಗೆ ಕುಡಿಸಿ, ಜಗಲಿ ಮೇಲೆ ಇಡುತ್ತಾಳೆ. ಈ ಜನ್ಮ ಇರಬಾರದೆಂದು ಹೆಂಗಾರ ಮಾಡಿ ಈ ತಾಳಿಮಾರಿ ಅಕ್ಕಿ ತಂದರಾಯಿತೆಂದು, ತಾಳಿ ತರಲು ಹೋಗುತ್ತಾಳೆ. ತಾಳಿ ಬಿಚ್ಚಿ ಇದನ್ನು ಮಾರಿ ಒಂದು ಸೇರು ಅಕ್ಕಿ ತಂದರಾಯಿತೆಂದು ಅಂಗಡಿಗೆ ಹೋಗುತ್ತಾಳೆ. ಅಷ್ಟರಲ್ಲಿ ಹುಲಿಗೆಮ್ಮ ಅಂಗಡಿಯವನ ಮನಸ್ಸಿಗೆ ತಾಳಿ ತೆಗೆದುಕೊಳ್ಳದೆ ಅಕ್ಕಿ ಕೊಡುವಂತ ಮನಸ್ಸು ಕೊಡುತ್ತಾಳೆ. ಅವರು ಮಾಂಗಲ್ಯ ಬೇಡವೆಂದು ನಾಳೆ ಬಂದು ಏನಾದರೂ ಕೆಲಸ ಮಾಡುವಂತೆ ಎಂದು ಅಕ್ಕಿಯನ್ನು ಕೊಡುತ್ತಾರೆ. ಆ ಅಕ್ಕಿಯನ್ನು ಅಲ್ಲೇ ಇಟ್ಟು ನೀರಿಗೆ ಹೋಗುತ್ತಾಳೆ. ತನ್ನ ಮಕ್ಕಳ ಕಷ್ಟ ಹೇಳತೀರದು.

ಬಾವಿ ಹಾರೋಣವೆಂದು ಬಾವಿಗೆ ಹೋಗುತ್ತಾಳೆ. ಅಷ್ಟರಲ್ಲಿ ಆಕೆಯ ಮನದಲ್ಲಿ ಹುಲಿಗೆಮ್ಮ ಬಂದು ನೀನು ಬಾವಿ ಹಾರಬೇಡ ಮಗಳೆ ಹಿಂದಕೆ ಹೋಗು ಎಂದು ಮನಸ್ಸಿನಲ್ಲಿ ಹೇಳುತ್ತಾಳೆ. ವಾಪಾಸ್ಸು ಹೋಗುತ್ತಾಳೆ ಕೊಡ ತಂದು ಅಕ್ಕಿ ತೊಳೆದು ಒಲೆ ಮೇಲೆ ಇಟ್ಟು ಮತ್ತೆ ಹಾವಿನ ಹುತ್ತಿನಾಗೆ ಕೈ ಇಟ್ಟು ಸಾಯೋಣವೆಂದು ತೀರ್ಮಾನ ಮಾಡುತ್ತಾಳೆ. ಆ ಹುತ್ತಿನಾಗೆ ಏಳು ಹೆಡೆ ಸರ್ಪಕ್ಕೆ ಹುಣ್ಣು ಆಗಿ ನಿದ್ದೆ ಇರುವುದಿಲ್ಲ. ಕೈ ಇಡುತ್ತಾಳೆ ಹುಲಿಗೆಮ್ಮ ಅಲ್ಲಿಗೆ ಬಂದು ಬಡವಿ ನೀಲಮ್ಮನ ಕೈಗೆ ಆಶೀರ್ವಾದ ಮಾಡುತ್ತಾಳೆ. ಬಡವಿ ನೀಲಮ್ಮನ ಕೈ ಹಾವಿಗೆ ಬಡಿದ ತಕ್ಷಣ ಅದರ ಹುಣ್ಣು ಒಡೆಯುತ್ತದೆ. ಅದಕ್ಕೆ ವಿಪರೀತ ಆನಂದವಾಗುತ್ತದೆ. ಯಾವ ತಾಯಿ ಆಗಿದ್ದಳು ಎಷ್ಟೋ ದಿನದಿಂದ ನನಗೆ ನಿದ್ದೆ ಇದ್ದಿಲ್ಲ. ಯಾರಾಗಿರಬಹುದು ಎಂದು ಹಾವು ನೋಡುತ್ತದೆ. ಹುಲಿಗೆಮ್ಮ ಅಲ್ಲಿಗೆ ಬಂದು ಕಷ್ಟವಿದೆ ಎಂದು ಬಂದಿದ್ದಾಳೆ ನೀನು ಹೋಗಿ ನಾಗರಾಜ ಆಕೆಯ ಕಷ್ಟ ಈಡೇರಿಸಪ್ಪ ಎಂದು ಹೇಳುತ್ತಾಳೆ. ಆಗ ನಾಗರ ಹಾವು ಆಕೆಯ ಕೈಗುಂಡ ಬಂದು ಉಡ್ಯಾಕ (ಸೆರಗಿನಲ್ಲಿ) ಕುಳಿಕೊಳ್ಳುತ್ತದೆ. ವಾಪಸ್ಸು ಮನೆಗೆ ಬರುತ್ತಾಳೇ ನೋಡುತ್ತಾಳೆ ಇದನ್ನು ಸೆರಗಿನಿಂದ ಹೊರಕ್ಕೆ ಬಿಡಬಾರದೆಂದು ಅದನ್ನು ಬಡಿಯುತ್ತಾಳೆ. ಅದು ಮಾಯದ ಸರ್ಪ ಸತ್ತಂತೆ ಇರುತ್ತದೆ. ಅದನ್ನು ಗಡಿಗೆಯಲ್ಲಿ ತುಂಡುಗಳನ್ನು ಮಾಡಿ ಹಾಕುತ್ತಾಳೆ, ಕುಚ್ಚಲು ಇಡುತ್ತಾಳೆ.

ಯಾವಾಗ ಕುಚ್ಚಲು ಇಟ್ಟಳೋ ಮಕ್ಕಳು ಏನವ್ವಾ ಅದು ನೋಡುತ್ತಾರೆ. ತಾಯಿಯನ್ನು ಕೇಳುತ್ತಾರೆ. ಮೀನು ತಂದಿದ್ದೇನೆ ನಿಮಗೆ ಎಂದು ಹೇಳುತ್ತಾಳೆ. ತಾಯಿ ಮೀನು ತಂದಿದ್ದಾಳೆ ಎಂದು ಮಕ್ಕಳಿಗೆ ಸಂತೋಷವಾಗುತ್ತದೆ. ನಾನು ಬರುವತನಕ ಯಾರು ತಿನ್ನಬೇಡಿ ಎಂದು ಹೊರಕ್ಕೆ ನೀರು ತರಲು ಹೋಗುತ್ತಾಳೆ. ತಾಯಿ ನೀರು ತರಲುಹೋದ ಕೂಡಲೇ ಮಕ್ಕಳೆಲ್ಲ ಸೇರಿ ಚೌಟಿನಿಂದ ತೆಗೆದು ತಿನ್ನಲು ಮುಂದಾಗುತ್ತಾರೆ. ಬಾಯಲ್ಲಿ ಇಟ್ಟುಕೊಳ್ಳುತ್ತಾರೆ ಕಲ್ಲು, ಕೈಯಲ್ಲಿ ಇಟ್ಟುಕೊಳ್ಳುತ್ತಾರೆ ಕಲ್ಲು, ಹಲ್ಲಿಗೆ ನುರಿಯುವುದಿಲ್ಲ ಅಷ್ಟೊತ್ತಿಗೆ ತಾಯಿ ಬರುತ್ತಾಳೆ. ಇದೆಂತ ಮೀನು ಕಲ್ಲಿಗೆ ನುರಿಯುತ್ತಿಲ್ಲ ಹಲ್ಲಿಗೆ ನುರಿಯುತ್ತಿಲ್ಲವೆಂದು ತಾಯಿಯನ್ನು ಬೈಯುತ್ತಾರೆ.

ಬಡವಿ ನೀಲಮ್ಮ ತಾನು ತೆಗೆದುಕೊಂಡು ನೋಡುತ್ತಾಳೆ. ಬಂಗಾರ ಕುದ್ದಂತೆಲ್ಲ ಬಂಗಾರ, ಮುತ್ತು, ರತ್ನ , ಹುಲಿಗೆಮ್ಮನ ಪಾದ ತೊಳೆದ ನೀರು ನೋಡುತ್ತಾಳೆ. ಅದರಲ್ಲಿ ಮುತ್ತು, ರತ್ನ, ಹುಲಿಗೆಮ್ಮನ ಮಹಿಮೆಯಿಂದ ಇವೆಲ್ಲವೆಂದು ಬಡವಿ ನೀಲಮ್ಮ ತಿಳಿಯುತ್ತಾಳೆ. ಊಟ ಮಾಡುತ್ತಾರೆ.

ಮಲ್ಲರೆಡ್ಡಿಯನ್ನು ನೋಡಬೇಕೆಂದು ಹುಲಿಗೆಮ್ಮ ಉಧೋ ಎಂದು ಅವನ ಮನೆ ಮುಂದೆ ನಿಲ್ಲುತ್ತಾಳೆ. ಇವಳ್ಯಾವಳೋ ಜೋಗುತಿ ಬಂದಾಳೆಂದು ಮಲ್ಲರೆಡ್ದಿ ಹೇಳುತ್ತಾನೆ. ನಾವು ಜೋಗುತಿಯರಿಗೆ ನೀಡಲ್ಲವೆಂದು ಮುಂದಕ್ಕೆ ಕಳಿಸುತ್ತಾನೆ. ಆಕೆಯನ್ನು ದೂಡುತ್ತಾರೆ. ಬಡವಿ ನೀಲಮ್ಮನ ಹತ್ತಿರವಿರುವ ಭಕ್ತಿ ಇವನಲ್ಲಿ ಇಲ್ಲ. ಇವನ ಸೊಕ್ಕು ಆಡಗಿಸಬೇಕೆಂದು ಉಡಿಯಲ್ಲಿ ಭಂಢಾರ ಉಗ್ಗುತ್ತಾಳೆ. ಅವನಿಗೆ ಬಡತನ ಬರುತ್ತದೆ. ಬಡವಿ ನೀಲಮ್ಮನು ಶ್ರೀಮಂತಳಾಗುತ್ತಾಳೆ. ಶುಕ್ರವಾರ, ಮಂಗಳವಾರ ಹುಲಿಗೆಮ್ಮನ ಧ್ಯಾನ ಮಾಡುತ್ತಾಳೆ. ಇದರಂತೆ ಇರಬೇಕಾದರೆ ಮಲ್ಲರೆಡ್ಡಿ ಹೆಂಡತಿ ಕಟ್ಟಿಗೆ ಹೊತ್ತುಕೊಂಡು ಬಂದು ಮಾರುತ್ತಿರುತ್ತಾಳೆ.

ಬಡವಿ ನೀಲಮ್ಮ ಮಕ್ಕಳಿಗೆ ಹೇಳುತ್ತಾಳೆ. ನಮ್ಮ ಅಣ್ಣನ ಹೆಂಡತಿ ಕಟ್ಟಿಗೆ ಮಾರುತ್ತಾಳೆ ಕರೆ ಬನ್ನಿ ಎಂದು ಹೇಳುತ್ತಾಳೆ. ಮಕ್ಕಳು ಬರುವುದಿಲ್ಲ. ನಮ್ಮನ್ನು ಬಡಿಸಿದ್ದಾಳೆ ನಾವು ಕರೆಯುವುದಿಲ್ಲವೆಂದು ಹೇಳುತ್ತಾರೆ. ಅಣ್ಣ ತಮ್ಮಂದಿರು ಒಟ್ಟುಗೂಡಿ, ನೀನೇ ಕರೆ ಎಂದು ಹೇಳುತ್ತಾಳೆ. ಬಡವಿ ನೀಲಮ್ಮ ಕಟ್ಟಿಗೆ ಮಾರುವ ಹೆಣ್ಣನ್ನು ಕರೆಯುತ್ತಾಳೆ. ಹೆಚ್ಚಿನ ಹಣ ಕೊಟ್ಟು ಕಟ್ಟಿಗೆಯನ್ನು ಕೊಳ್ಳುತ್ತಾಳೆ. ಅಡಕಿ, ಎಲೆ, ಕುಬುಸ ಕೊಟ್ಟು ಕಳಿಸುತ್ತಾಳೆ. ಕಟ್ಟಿಗೆ ಮಾರಿದ ಮೇಲೆ ಗಂಡ ಹೆಂಡತಿ ಮಾತನಾಡಿಸುತ್ತಾರೆ. ಶ್ರೀಮಂತರ ಮನೆಗೆ ಕಟ್ಟಿಗೆ ಕೊಟ್ಟಿದ್ದಕ್ಕಾಗಿ ಕುಬುಸ, ಹಣ ಕೊಟ್ಟ ಬಗ್ಗೆ ಗಂಡನಿಗೆ ಹೇಳುತ್ತಾಳೆ. ಮರುದಿನವು ಕಟ್ಟಿಗೆ ಮಾರಲು ಅಲ್ಲಿಗೆ ಹೋಗುತ್ತಾಳೆ. ಗಂಡನು ಅಲ್ಲಿಗೆ ಹೋಗುತ್ತಾನೆ ತಂಗಿ ಬಡವಿ ನೀಲಮ್ಮನ ಮನೆಗೆ. ಅಣ್ಣನ ಹೆಂಡತಿ ಬಡವಿ ನೀಲಮ್ಮನನ್ನು ಗುರುತಿಸುತ್ತಾಳೆ. ನಿನ್ನ ತಂಗಿ ಎಂದು ಹೇಳುತ್ತಾಳೆ. ಅವರ ಮನೆ ಮುಟ್ಟು ಸಾಮಾನುಗಳೆಲ್ಲ ನಮಗೆ ಸೇರಿದವು. ಅವುಗಳನ್ನು ತೆಗೆದುಕೊಂಡು ಹೋಗಿ ನಿನ್ನ ತಂಗಿ ಕಟ್ಟಿಸಿಕೊಂಡಿದ್ದಾಳೆ ಎಂದು ದೂರುತ್ತಾಳೆ. ನೀನು ವ್ಯಾಪರಕ್ಕೆ ಹೋದಾಗ ತೆಗೆದುಕೊಂಡು ಹೋಗಿರಬೇಕೆಂದು ಹೇಳುತ್ತಾಳೆ. ಬಡವಿ ನೀಲಮ್ಮನ ಅಣ್ಣ ಹಾಗಾದರೆ ನಮ್ಮ ತಂಗಿ ಮನೆಗೆ ಹೋಗಿ ನೋಡುತ್ತೇನೆ ಎಂದು ಹೇಳುತ್ತಾನೆ. ಎಷ್ಟೋತ್ತನ ಆಗಲಿ ನಿನ್ನ ತಂಗಿಯನ್ನು ಕಡಿದು ಬರಬೇಕೆಂದು ಹೆಂಡತಿ ಹೇಳುತ್ತಾಳೆ, ಹುರುದುಂಬಿಸಿ ಹೇಳುತ್ತಾಳೆ. ಕಟ್ಟಿಗೆ ಮಾರಲು ತಂಗಿ ಮನೆಗೆ ಹೋಗುತ್ತಾನೆ. ತಂಗಿ ಕಟ್ಟಿಗೆ ಮಾರಲು ಬಂದ ಅಣ್ಣನಿಗೆ ಕರೆಯುತ್ತಾಳೆ. ಕಟ್ಟಿಗೆ ಹಾಕಿದ ಕುಡುಗೋಲು ತೆಗೆದುಕೊಂಡು ತಂಗಿಯನ್ನು ಕಡಿಯಲು ಮುಂದಾಗುತ್ತಾನೆ. ಹುಲಿಗೆಮ್ಮ ಅದೇ ಹೊತ್ತಿಗೆ ಮಂಗಳವಾರ ದಿನ ಉಧೋ ಎಂದು ನಿಲ್ಲುತ್ತಾಳೆ. ಬಡವಿ ನೀಲಮ್ಮ ಬಂಗಾರದ ಮಂಚದ ಮೇಲೆ ಕುಳಿತಾಕಿ ಇಳಿದು ಬಂದು ಆಕೆಯ ಪಾದಕ್ಕೆ ತುಂಬಿದ ಕೊಡದ ನೀರು ಹಾಕುತ್ತಾಳೆ. ಆಕೆಯ ಮಕ್ಕಳು ಸೊಸೆಯಂದಿರು ಎಲ್ಲರೂ ಭಕ್ತಿಯಿಂದ ನಿಲ್ಲುತ್ತಾರೆ. ಹುಲಿಗೆಮ್ಮ ದೇವಿಯನ್ನು ಒಳಕ್ಕೆ ಬರ ಮಾಡುತ್ತಾಳೆ ಬಡವಿ ನೀಲಮ್ಮ. ಬಡವಿ ನೀಲಮ್ಮ ಅಣ್ಣನನ್ನು ಹುಲಿಗೆಮ್ಮ ಕೇಳುತ್ತಾಳೆ. ನಿನ್ನ ಹೆಂಡತಿ ಏನು ಹಚ್ಚಿ ಕಳಿಸಿದ್ದಾಳೆಪ್ಪಾ ಎಂದು. ಇದ್ದದ್ದೆಲ್ಲವನ್ನು ಇದ್ದಾಂತೆ ಹೇಳುತ್ತಾಳೆ ಎಂದು ಗಾಬರಿಯಾಗುತ್ತಾನೆ. ಇದೆಲ್ಲ ಬಡವಿ ನೀಲಮ್ಮ ಆದಿಶಕ್ತಿ ಹುಲಿಗೆಮ್ಮನಿಂದ ಪಡೆದಿದ್ದಾಳಪ್ಪ ನಿನ್ನ ಹೆಂಡತಿ ಮಾತು ಕೇಳಿ ಬಂದಿಯಲ್ಲ ಎಂದು ಹೇಳುತ್ತಾಳೆ. ಹುಲಿಗೆಮ್ಮ ಬಿಚ್ಚಿ ಹೇಳುತ್ತಾಳೆ. ನಿನ್ನ ಮನೆ ಹಾಳಾಗಲು ನಿನ್ನ ಸೊಕ್ಕು ನಿನ್ನ ಹೆಂಡತಿ ಸೊಕ್ಕಿನಿಂದ ಹೀಗಾಗಿದೆ. ಮೊದಲಿನಂತೆ ಆಗುವೆ ಎಂದು ಹೇಳುತ್ತಾಳೆ. ತಾಯಿ ನಾವು ಎಂದೆಂದೂ ಅಡ್ಲಿಗಿ ಹಿಡಿದವರಲ್ಲಾ. ನಮ್ಮ ತವರುಮನೆಯವರು ನೀನೇನೋಡವ್ವಾ ಎಂದಾಗ, ಹುಲಿಗೆಮ್ಮ ನನ್ನ ಸ್ಥಳಕ್ಕೆ ಹುಲಿಗಿ ಕ್ಷೇತ್ರ ಬಾ ಎಂದು ಹೇಳುತ್ತಾಳೆ. ಮಲ್ಲರೆಡ್ದಿ ಹುಲಿಗಿ ಕ್ಷೇತ್ರಕ್ಕೆ ಹೋಗಿ ಹುಲಿಗೆಮ್ಮನಿಗೆ ನಡೆದುಕೊಂಡ ನಂತರ ಮನೆತನ ಉದ್ಧಾರವಾಯಿತು.