ಪಾಯಸ

ಪಾಯಸದ ಕಾರ್ಯಕ್ರಮಗಳು ಜೇಷ್ಠ ದಶಮಿಯದಿನ ನಡೆಯುತ್ತದೆ. ಈ ಕಾರ್ಯಕ್ರಮ ರಾತ್ರಿ ಸುಮಾರು ೧೦ ಗಂಟೆಗೆ ಆರಂಭವಾಗುತ್ತದೆ. ದೇವಸ್ಥಾನದ ಎಡಕ್ಕಿರುವ ಚಿಕ್ಕದಾದ ಸಿಡಿಕಟ್ಟೆಯೆಂದು ಕರೆಯಾಲಾಗುವ ಆ ಕಟ್ಟೆಯ ಮೇಲೆ ರಾತ್ರಿ ಸುಮಾರು ೧೧ ಗಂಟೆಗೆ ಒಂದು ಕಂಬಳಿ ಹಾಸಿ ಅದರ ಮೇಲೆ ಸೇರು ಪಾವು ಅಕ್ಕಿಯನ್ನು ಹಾಕಿ ಪಾಯಸ ಮಾಡುವುದಕ್ಕೆ ಬೇಕಾಗುವ ಒಂದು ಹೊಸಗಡಿಗೆಯನ್ನು, ಆ ಅಕ್ಕಿಯ ಮೇಲಿಟ್ಟು ಅದಕ್ಕೆ ಪೂಜೆ ಮಾಡುತ್ತಾರೆ. ಪ್ರತಿವರ್ಷ ಹೊಸ ಪಡುಗವನ್ನು ತಯಾರು ಮಾಡುತ್ತಾರೆ. ಪಾಯಸದ ಪಡುಗ ಮಾಡುವವನು ಅನಂತಶಯನ ಗುಡಿಯಿಂದ ಬಂದಿರುತ್ತಾನೆ. ಅವನು ಹೊಸ ಪಡುಗವನ್ನು ತಯಾರು ಮಾಡುತ್ತಾನೆ. ನಂತರ ಗಡಿಗೆಯನ್ನು ವಾದ್ಯ ಸಮೇತವಾಗಿ ಪೂಜಾರಿಯು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾನೆ.

ರಾತ್ರಿ ಸುಮಾರು ೨ ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಪೂಜಾರಿ ಒಳಗೊಂಡು ಎಲ್ಲರೂ ನದಿಗೆ ಹೋಗುತ್ತಾರೆ ಅಲ್ಲಿ ಪೂಜಾರಿಯ ಮೀಸೆ ಮತ್ತು ಗಡ್ಡವನ್ನು ಕ್ಷೌರಿಕರಿಂದ ತೆಗೆಯಿಸುತ್ತಾರೆ. ಎಲ್ಲರೂ ಸ್ನಾನ ಮಾಡುತ್ತಾರೆ. ನಂತರ ಗಂಗಮ್ಮನ ಪೂಜೆಯನ್ನು ಮಾಡುತ್ತಾರೆ. ಪಾಯಸಕ್ಕೆ ಬೇಕಾಗುವ ಅಕ್ಕಿಯನ್ನು ನದಿಯಲ್ಲಿ ತೊಳೆದು ಆ ಸಮಯದಲ್ಲಿ ಎಲ್ಲರೂ ಮುಖಕ್ಕೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ. ಆ ಗಡಿಗೆಯನ್ನು ಪೂಜಾರಿಯು ತನ್ನ ಮನೆಯಿಂದ ಹೊತ್ತುಕೊಂಡು ದೇವಸ್ಥಾನಕ್ಕೆ ಬರುತ್ತಾನೆ. ಈ ಕಡೆ ದೆವಿಗೆ ಪ್ರಸಾದ ಕಟ್ಟುವ ಕಾರ್ಯ ಸುಮಾರು ೪ ಗಂಟೆಗೆ ನಡೆದಿರುತ್ತದೆ. ಅಂದರೆ ದೇವಿಯ ಮುಡಿಗೆ ಏರಿಸಲಾದ ಹೂವುಗಳಲ್ಲಿ ಒಂಭತ್ತು ಬಾರಿ ದೇವಿಯು ಕರುಣಿಸುತ್ತಾಳೆ. ಆ ಹೂವುಗಳನ್ನು ತೆಗೆದುಕೊಂಡು ಪವಾಡದ ಪೂಜಾರಿಯು ಭಕ್ತರಿಗೆ ಹಂಚುತ್ತಾನೆ. ಬೆಳಿಗ್ಗೆ ದೇವಸ್ಥಾನದ ಮುಂದಿರುವ ಮೂರು ಕಲ್ಲು ಗುಂಡುಗಳ ನಡುವೆ ಬೆಂಕಿಯನ್ನು ಮಾಡುತ್ತಾರೆ. ಮೂರು ಗುಂಡುಗಳ ಮೇಲೆ ಬಟ್ಟೆಯಿಂದ ಸುತ್ತಿದ ಮೂರು ಸಣ್ಣ ತುಂಡುಗಳನ್ನು ಎಣ್ಣೆಯಲ್ಲಿ ಅದ್ದಿ ಇಟ್ಟಿರುತ್ತಾರೆ. ಆ ಬಟ್ಟೆ ತುಂಡುಗಳ ಮೇಲೆ ಪಾಯಸದ ಗಡಿಗೆಯನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಐದು ಸಿವುಡು ಗಂಧ ಕಟ್ಟಿಗೆಗಳಿಂದ ಬೆಂಕಿ ಮಾಡಿ ಆ ಪಾಯಸವನ್ನು ಕುದಿಸುತ್ತಾರೆ. ಗಡಿಗೆಯಲ್ಲಿ ನೀರು ಮತ್ತು ಅಕ್ಕಿಯನ್ನು ಹಾಕಿ ಪಾಯಸ ತಯಾರು ಮಾಡುತ್ತಾರೆ. ೨೫ ನಿಮಿಷಗಳಲ್ಲಿ ೫ ಸೇರು ಪಾಯಸ ತಯಾರಾಗುತ್ತದೆ. ಪಾಯಸಕ್ಕಿಂತ ಮೊದಲು ಪ್ರಸಾದ ಕೇಳುತ್ತಾರೆ. ಪ್ರಸಾದ ನಡೆಯುವ ಹೊತ್ತಿಗೆ ಈ ಕಡೆ ಪಾಯಸ ಸಿದ್ಧವಾಗುತ್ತದೆ. ಹೊಸೂರಮ್ಮ ಪ್ರಸಾದವನ್ನು ಕೊಟ್ಟ ಮೇಲೇಯೇ ಮುಂದಿನ ಕೆಲಸ. ಪಾಯಸ ತೆಗೆಯುವವರು ಮುಖ್ಯವಾಗಿ ಲಿಂಗಾಯತ ಜನಾಂಗದವರು. ಅವರುಗಳು ಯಾರೆಂದರೆ, (ಪಾಯಸದ ಮನೆಯವರು).

. ಕಲ್ಲಪ್ಪ ಪೂಜಾರು
. ವೀರಣ್ಣ ಪೂಜಾರು
. ವೀರಭದ್ರಪ್ಪ ಪೂಜಾರು
. ವೀರಣ್ಣ ಪೂಜಾರು (ಈಗ ಪಾಯಸ ತೆಗೆಯುವವರು)

ಹೊಸೂರಮ್ಮ ಪ್ರಸಾದವನ್ನು ಕೊಟ್ಟ ಮೇಲೆ ಪೂಜಾರಿಯು ಗರ್ಭಗುಡಿಯಿಂದ ಹೊರಬಂದು, ಬಿಸಿ ಬಿಸಿಯಾಗಿ ಕುದಿಯುತ್ತಿರುವ ಪಾಯಸದ ಗಡಿಗೆಯೊಳಗೆ ಎರಡೂ ಕೈ ಹಾಕಿ ಮೂರ್ನಾಲ್ಕು ಬಾರಿ ತಿರುವುತ್ತಾನೆ. ಮತ್ತು ಬೊಗಸೆಯಿಂದ ಮೂರು ಬಾರಿ ಪಾಯಸವನ್ನು ಹೊರತೆಗೆದು ದೊಡ್ಡ ಪರಾತದಲ್ಲಿ ಹಾಕುತ್ತಾನೆ. ಆ ಬಿಸಿಯಾದ ಪ್ರಸಾದದಿಂದ ಪೂಜಾರಿಯ ಕೈಗೆ ಆಘಾತವಾಗುವುದಿಲ್ಲ. ಇದೆಲ್ಲ ಆ ದೇವಿಯ ಪವಾಡ ಹಾಗೂ ಮಹಿಮೆಯೆಂದು ಜನರು ಭಾವಿಸುತ್ತಾರೆ. ಈ ಪಾಯಸ ಕಾರ್ಯಕ್ರಮ ನೋಡಲು ಬೆಳಗಿನ ಸಮಯದಲ್ಲಿಯೇ ಸಾವಿರಾರು ಜನರು ಸೇರಿರುತ್ತಾರೆ. ಆಗ ಆ ಪ್ರಸಾದವನ್ನು ತೆಗೆದುಕೊಂಡು ಗರ್ಭಗುಡಿಯೊಳಗೆ ಬಂದು ದೇವಿಗೆ ನೈವೇದ್ಯ ಅರ್ಪಿಸುತ್ತಾರೆ. ಪೂಜಾಯವರು ಈ ನೈವೇದ್ಯವನ್ನು ಭಕ್ತರಿಗೆ ಹಂಚಲಾಗುತ್ತದೆ. ಸ್ವೀಕರಿಸಿದ ಈ ಪ್ರಸಾದವನ್ನು ಜನರು ತಮ್ಮ ದನಕರುಗಳಿಗೆ ತಿನ್ನುಸುತ್ತಾರೆ. ಮತ್ತು ತಮ್ಮ ಹೊಲ-ಗದ್ದೆಗಳಿಗೆ ಹರಡುತ್ತಾರೆ. ಇದರಿಂದ ಭೂಮಿಯಲ್ಲಿ ಹುಲುಸಾಗಿ ಬೆಳೆ ಬರುತ್ತದೆಂದು ನಂಬಿದ್ದಾರೆ. ಅದೇ ರೀತಿ ಈ ಪ್ರಸಾದವನ್ನು ತಮ್ಮ ತಮ್ಮ ಮನೆಯ ಮುಂಬಾಗಿಲಿಗೆ ಕಟ್ಟುತ್ತಾರೆ. ಇದರಿಂದ ಯಾವ ಅನಿಷ್ಠಗಾಳಿ ಬರುವುದಿಲ್ಲವೆಂಬ ಭಾವನೆ ಅದರಲ್ಲಿ ಕಂಡುಬರುತ್ತದೆ. ಈ ಪ್ರಸಾದ ಕಾರ್ಯಕ್ರಮದ ನಂತರ ಅಗ್ನಿಕೊಂಡ ಕಾರ್ಯಕ್ರಮ ನಡೆಯುತ್ತದೆ.

ಅಗ್ನಿಕುಂಡ

ಈ ಕಾರ್ಯಕ್ರಮ ರಾತ್ರಿ ೧೦ ಗಂಟೆಗೆ ಪ್ರಾರಂಭವಾಗುತ್ತದೆ. ಪ್ರತಿವರ್ಷದಂತೆ ಚಿಕ್ಕ ಹೊಂಡದಲ್ಲಿ ಒಂದು ಬಂಡಿ ಕಟ್ಟಿಗೆಗಳನ್ನು ಕ್ರಮವಾಗಿ ಜೋಡಿಸಲಾಗುತ್ತದೆ ಆ ಹೊಂಡಕ್ಕೆ ಅಥವಾ ಕುಂಡಕ್ಕೆ ಪೂಜಾರಿಯು ಪೂಜೆಯನ್ನು ಮಾಡುತ್ತಾನೆ. ಗಂಧದ ಕಟ್ಟಿಗೆಗಳನ್ನು ಇಟ್ಟು ಚಿಕ್ಕ ತುಂಡುಗಳಿಗೆ ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಅದ್ದಿದ ಆ ತುಂಡನ್ನು ಒಂದು ದೊಡ್ದ ಕಟ್ಟಿಗೆಗೆ ಸಿಕ್ಕಿಸಿಕೊಂಡು ಪೂಜಾರಿಯ ಗರ್ಭಗುಡಿಯೊಳಗಿರುವ ದೀಪದ ಸಹಾಯದಿಂದ ಅದನ್ನು ಹಚ್ಚಿಕೊಂಡು ಬಂದು ಜೋಡಿಸಲಾದ ಕಟ್ಟಿಗೆಗಳಿಗೆ ದೀಪ ಹಚ್ಚುತ್ತಾನೆ.

ಹೊಸುರಮ್ಮ ದೇವಿ ಹೂವುಗಳ ಪ್ರಸಾದ ಕೊಟ್ಟ ಮೇಲೆ ಪಾಯಸದ ಕಾರ್ಯಕ್ರಮ ನಡೆಯುತ್ತದೆ. ಪಾಯಸದ ಕಾರ್ಯಕ್ರಮ ಅದ ನಂತರ ಅಗ್ನಿಕುಂಡ ಕಾರ್ಯಕ್ರಮ. ಪೂಜಾರಿಯು ಬೆಳಿಗ್ಗೆ ಸುಮಾರು ೫.೩೦ ಕ್ಕೆ ಬೆಂಕಿ ಕೆಂಡವಾಗಿರುವ ಅಗ್ನಿಯನ್ನು ಪ್ರವೇಶ ಮಾಡಿ ತುಳಿಯುತ್ತಾನೆ. ತದನಂತರ ಬೇಡಿಕೊಂಡಿದ್ದ ಭಕ್ತರು ಅಗ್ನಿಯನ್ನು ತುಳಿಯುತ್ತಾರೆ. ಅಗ್ನಿಕೊಂಡ ಕಾರ್ಯಕ್ರಮಕ್ಕಾಗಿ ಭಕ್ತರ ಸಮೂಹ ಸಡಗರದಿಂದ ಸೇರುತ್ತದೆ.

ಹುಲಿಗೆಮ್ಮನ ಜಾತ್ರೆ

ಹುಣ್ಣಿಮೆ ಕಾರ್ಯಕ್ರಮ

ಆಗಿ ಹುಣ್ಣಿಮೆಯಂದು ನಡೆಯುತ್ತದೆ.

ರಾತ್ರಿ ಹೋಮ ಶ್ರೀ ಹುಲಿಗೆಮ್ಮ ದೇವಿಗೆ ಮತ್ತು ಪೂಜಾರಿಗೆ ಕಂಕಣ ಧಾರಣ

ಆಗಿ ಹುಣ್ಣಿಮೆ ಆಗಿ ಮಾರನೆ ದಿನ ಹುಲಿಗೆಮ್ಮ ದೇವಿಯ ಹೆಸರಿಗೆ ಹೋಮ ಮಾಡಿ ಬಾಳೆದಂಡಿಗಿ ಮತ್ತು ಪಾಯಸದ ಪೂಜಾರಿಗೆ ಕಂಕಣ ಕಟ್ಟುತ್ತಾರೆ. ಕಂಕಣವೆಂದರೆ, ಅರಿಶಿನ ಕೊಂಬು, ಎಲೆಗೆ ದಾರ ಕಟ್ಟಿ ಕೈಗೆ ಕಟ್ಟುವುದಕ್ಕೆ ಕಂಕಣ ಎನ್ನುತಾರೆ. ಇದನ್ನು ಶುಭ ಸಂದರ್ಭದಲ್ಲಿ, ಮದುವೆ ಕಾರ್ಯಗಳಲ್ಲಿ ಬಳಸುತ್ತಾರೆ.

ಶ್ರೀ ಹುಲಿಗೆಮ್ಮ ದೇವಿಗೆ ಪವಾಡ ಪುರುಷರಾದ ನಾಗಜೋಗಿ, ಬಸವಜೋಗಿ, ನೈವೇದ್ಯ ಪೂಜಾಗಳು

ನಾಗಜೋಗಿ, ಬಸವಜೋಗಿ ಪೂಜಾರ ಮನೆತನದವರು, ಬಸವಜೋಗಿ ಪಾಯಸದ ಪೂಜಾರ ಮನೆತನದವರು ಇವರಿಗೆ ಕಂಕಣ ಕಟ್ಟುವಾಗ ನೈವೇದ್ಯ ಹಾಕುತ್ತಾರೆ. ಕಂಕಣವನ್ನು ಹುಲಿಗೆಮ್ಮ ದೇವಿಗೆ, ಪಾಯಸದ ಪೂಜಾರಿಗೆ, ಬಾಳೆದಂಡಿಗಿ ಪೂಜಾರರಿಗೆ ಕಟ್ಟುತ್ತಾರೆ. ದಿನ ೧೬ ಎಡೆ ಹಾಕಿ ನೈವೇದ್ಯ ಬಡಿಸುತ್ತಾರೆ. ನಾಗಜೋಗಿ, ಬಸವಜೋಗಿಯರ ಹೆಸರಿನಲ್ಲಿ ನೈವೇದ್ಯ ಹಾಕುತ್ತಾರೆ. ಅವರ ಹೆಸರಿಗೆ ಅರ್ಪಣೆಯಾಗಲೆಂದು ನೈವೇದ್ಯ ಹಾಕುತ್ತಾರೆ. ನಂತರ ಹುಲಿಗೆಮ್ಮನಿಗೂ ನೈವೇದ್ಯ ಹಾಕುತ್ತಾರೆ. ೫ ಸೇರಿನ ಅಕ್ಕಿ ಅನ್ನ ಹಾಗೂ ೪೬ ಹೋಳಿಗೆಗಳನ್ನು ನೈವೇದ್ಯಕ್ಕೆ ತಯಾರು ಮಾಡಿರುತ್ತಾರೆ. ಹುಲಿಗೆಮ್ಮನಿಗೆ ೨೪ ಹೋಳಿಗೆ ಎಡೆ (ನೈವೇದ್ಯ) ಹಾಕುತ್ತಾರೆ. ನಾಗಜೋಗಿ, ಬಸವಜೋಗಿರಿಗೆ ೧೬ ಹೋಳಿಗೆಗಳನ್ನು ಎಡೆ (ನೈವೇದ್ಯ) ಹಾಕುತ್ತಾರೆ. ಹುಲಿಗೆಮ್ಮ ದೇವಿಗೆ ಹಾಕಿದ ನೈವೇದ್ಯವನ್ನು ಬಾಳೆದಂಡಿಗಿ, ಪಾಯಸದ, ದೇವರಮನಿ, ಯಲಿಶೇಟಿ, ಅಮ್ಮನವರ ಪೂಜಾರರು ತೆಗೆದುಕೊಂಡು ಹೋಗುತ್ತಾರೆ. ಅಲ್ಲದೇ ನಾಗಜೋಗಿ, ಬಸವಜೋಗಿಗೆ ಹಾಕಿ ೫ ಪ್ರಸಾದವನ್ನು ಸಹ ಇವರು ತೆಗೆದುಕೊಂಡು ಹೋಗುತ್ತಾರೆ. ಉಳಿದ ೧೧ ಹೋಳಿಗೆಗಳನ್ನು (ನೈವೇದ್ಯ) ಭಜಂತ್ರಿಯವರು, ಅಗಸರು, ಸೇವಕರು, ಕೊಂಡದವರು, ಕಟ್ಟಿಯವರು ತೆಗೆದುಕೊಂಡು ಹೋಗುತ್ತಾರೆ.

ಬೆಳಿಗ್ಗೆ ಪಲ್ಲಕ್ಕಿ ಸೇವಾ, ತೊಟ್ಟಿಲ ಸೇವಾ

ಆಗಿ ಹುಣ್ಣಿಮೆ ಆಗಿ ಎರಡನೇ ದಿನಕ್ಕೆ ಬೆಳಿಗ್ಗೆ ಮತ್ತು ರಾತ್ರಿ ಉತ್ಸವ ಮೂರ್ತಿಯನ್ನು (ಹುಲಿಗೆಮ್ಮನನ್ನು) ತೆಗೆದುಕೊಂಡು ಮುದಮ್ಮನ ಕಟ್ಟೆಯವರೆಗೆ (ಗುಡಿವರೆಗೆ) ಕರೆದುಕೊಂಡು ಹೋಗಿ ಮುದ್ದಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಹುಲಿಗೆಮ್ಮನ ತಾಯಿ ಮುದ್ದಮ್ಮ, ಹುಲಿಗೆಮ್ಮನ ತವರುಮನೆ ಮುದ್ದಮ್ಮನ ಗುಡಿ. ರಾತ್ರಿ ಅದೇ ಮೂರ್ತಿಯನ್ನು ತೊಟ್ಟಿಲಲ್ಲಿ ಕೂಡಿಸಿಕೊಂಡು ತೊಟ್ಟಿಲ ಸೇವಾ ತೂಗುತ್ತಾರೆ.

ರಥೋತ್ಸವ

ಆಗಿ ಹುಣ್ಣಿಮೆ ಆಗಿ ೭ನೇ ದಿನಕ್ಕೆ ರಥದಲ್ಲಿ ಹುಲಿಗೆಮ್ಮನ ಉತ್ಸವ ಮೂರ್ತಿಯನ್ನು ಇಟ್ಟುಕೊಂಡು ಮುದ್ದಮ್ಮನ ಗುಡಿಯವರೆಗೆ ಹೋಗುತ್ತಾರೆ. ಅಲ್ಲಿ ಹುಲಿಗೆಮ್ಮನ ತಾಯಿ ಮುದ್ದಮ್ಮನ ಪೂಜೆ ನಡೆಯುತ್ತದೆ. ಮತ್ತೆ ಹುಲಿಗೆಮ್ಮನ ತೊಟ್ಟಿಲ ಸೇವೆ ನಡೆಯುತ್ತದೆ. ಈ ಆಚರಣೆ ನಡೆಯುವ ಸಮಯದಲ್ಲಿ ಭಕ್ತಾದಿಗಳು ಇರುತ್ತಾರೆ.

ಅಕ್ಕಪಡಿ ರಥೋತ್ಸವ

ಆಗಿ ಹುಣ್ಣಿಮೆ ಆಗಿ ೮ನೇ ದಿನಕ್ಕೆ ಹಿಂದಿನ ಕಾಲದಲ್ಲಿ ರೈತರು ಭತ್ತ ಬೆಳೆದುಕೊಂಡು ಬಂದು ಕೊಡುತ್ತಿದ್ದರು. ಅವರು ತಂದ ಭತ್ತದಿಂದ ಪಾಯಸ ಮಾಡುತ್ತಿದ್ದರು. ಈಗ ಆ ರೀತಿ ಇಲ್ಲ. ಅಕ್ಕಿಯನ್ನು ತಂದು ಕೊಡುತ್ತಾರೆ. ಅಕ್ಕಿಯನ್ನು ಗುಡಿಯೊಳಕ್ಕೆ ಇಟ್ಟು ಪೂಜೆ ಮಾಡುತ್ತಾರೆ. ಅದನ್ನು ಪಾಯಸಕ್ಕೆ ಉಪಯೋಗಿಸುತ್ತಾರೆ. ಅಕ್ಕಿಪಡಿ ದಿನವೇ ರಥೋತ್ಸವ ನಡೆಯುತ್ತದೆ. ಆ ಕಾರಣಕ್ಕಾಗಿಯೇ ಅಕ್ಕಿಪಡಿ ರಥೋತ್ಸವವೆಂದು ಹೆಸರು.

ಕೊಂಡದ ಬಾಳೆದಂಡಿಗಿ ಕಾರ್ಯಕ್ರಮ ಪೂಜೆ

ಆಗಿ ಹುಣ್ಣಿಮೆ ಆಗಿ ೯ನೇ ದಿನಕ್ಕೆ ಕಮಲಾಪುರದಿಂದ ಬಾಳೆದಂಡನ್ನು ತರುತ್ತಾರೆ. ತರುವವರು ಮುಖ್ಯವಾಗಿ ಜೋಗಿನವರು, ಮೇಟಿಯವರು, ಬಾಳಿಸುಳಿದಂಡನ್ನು ಹುಲಿಗೆಮ್ಮ ದೇವಿ ಮುಂದೆ ಇಡುತ್ತಾರೆ. ನದಿ ಪೂಜೆ ಮಾಡಿಕೊಂಡು ಕಾಯಿ, ಕರ್ಪೂರ ಮಾಡಿಕೊಂಡು ಬರುತ್ತಾರೆ. ಆಮೇಲೆ ರಾತ್ರಿ ೮ ಗಂಟೆ ಸುಮಾರಿಗೆ, ಪೂಜಾರರು ಬಂದ ಮೇಲೆ ಕಾರ್ಯಕ್ರಮ ಶುರುವಾಗುತ್ತದೆ. ಅಮ್ಮನವರ ಮನೆತನದವರು ಬಾಳೆ ದಂಡಿಗೆ ಪೂಜೆ ಮಾಡುತ್ತಾರೆ.

ಬಾಳಿದಂಡಗಿಯನ್ನು ದೇವರಮನಿ, ಪೂಜಾರಮ್ಮನಿಗೆ ತೆಗೆದುಕೊಂಡು ಹೋಗುವರು

ಬಾಳೆದಂಡಿಗಿಯನ್ನು ಜೋಗಿನ ಹುಲುಗಪ್ಪ (ಹೊಸೂರಿನವರು) ಎಂಬುವರು ಹೊತ್ತುಕೊಂಡು ದೇವರಮ್ಮನಿಗೆ ಹೋಗುತ್ತಾರೆ. ನಂತರ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಈ ಬಾಳೆದಂಡಿಗೆಯನ್ನು ಹೊತ್ತುಕೊಂಡು ಬಂದು ಹುಲಿಗೆಮ್ಮ ದೇವಿ ಮುಂದೆ ಇಡುತ್ತಾರೆ. ಇಟ್ಟ ನಂತರ ನದಿಗೆ ಹೋಗಿ ಪೂಜೆ ಮಾಡಿಕೊಂಡು ಬರುತಾರೆ.

ಶ್ರೀದೇವಿಗೆ ಹೂವಿನ ಪ್ರಸಾದ ಕಟ್ಟವುದು

ಪ್ರಸಾದವೆಂದರೆ, ಮಲ್ಲಿಗೆ ಹೂವಿನ ಉಂಟೆಗಳನ್ನು ಹುಲಿಗೆಮ್ಮ ದೇವಿ ಮೂರ್ತಿಯ ತಲೆಯ ಮೇಲೆ ಇಟ್ಟಿರುತ್ತಾರೆ. ಜಾತ್ರೆ ಸುಗಮವಾಗಿ ನೆರವೇರಲು ಹುಲಿಗೆಮ್ಮನನ್ನು ಕೇಳುತ್ತಾರೆ. ಅಂದರೆ ವರವನ್ನು ಕೇಳುತ್ತಾರೆ. ಹುಲಿಗೆಮ್ಮನ ಅನುಮತಿ ಪಡೆಯುತ್ತಾರೆ. ಬಾಳೆದಂಡಿಗಿ ದಿನ ಕೇವಲ ೩ ಪ್ರಸಾದ ಕಟ್ಟುತ್ತಾರೆ. ಪ್ರತ್ಯೇಕವಾಗಿ ಒಂದೊಂದರಂತೆ ಅನುಮತಿ ಪಡೆಯುತ್ತಾರೆ. ಪ್ರತ್ಯೇಕವಾಗಿ ಒಂದೊಂದರಂತೆ ಪ್ರಸಾದ ಕೇಳುತ್ತಾರೆ. ಹುಗೆಮ್ಮ ದೇವಿ ಪ್ರಸಾದವನ್ನು ಕೊಡುತ್ತಾಳೆ. ಕೊಟ್ಟ ಹೂವನ್ನು ಬಾಳೆದಂಡಿಗಿ ಪೂಜಾರಿ, ಪಾಯಸದ ಪೂಜಾರಿ ಕೈಗೆ, ಕೊರಳಿಗೆ ಹಾಕುತ್ತಾರೆ. ಅಲ್ಲದೇ ಜೊತೆಗೆ ಪೂಜಾರರ ಕೈಗೆ ಕೊರಳಿಗೆ ಹಾಕುತ್ತಾರೆ.

ಬಾಳಿದಂಡಗಿಗೆಯಲ್ಲಿ ಪೂಜಾರಿ ಅರೋಹಣ

ಬಾಳದಂಡಿಗಿ ಪೂಜಾರಿ ೯ ದಿನಗಳವರೆಗೆ ಉಪವಾಸ ಇರುತ್ತಾನೆ. ಆತನಿಗೆ ಊಟವಿಲ್ಲ. ಆದರೆ ಕೇವಲ ಹಣ್ಣು ಹಾಗೂ ಹಾಲು ಮಾತ್ರ ಆತನ ಸೇವನೆಯಾಗಿರುತ್ತದೆ. ಒಂದು ಜಾತ್ರೆಯಿಂದ ಬರುವ ಇನ್ನೊಂದು (ಹುಲಿಗೆಮ್ಮ ) ಜಾತ್ರೆವರೆಗೆ ಗಡ್ಡ, ಮೀಸೆಯನ್ನು ಮಾಡಿಸುವಂತಿಲ್ಲ, ಕೈ ಹಾಗೂ ಕಾಲಿನಲ್ಲಿರುವ ಉಗುರನ್ನು ತೆಗೆಯುವಂತಿಲ್ಲ. ತಲೆಕೂದಲು ಮಾಡಿಸುವಂತಿಲ್ಲ. ಅವರ ಜೀವಿತದ ಕೊನೆವರೆಗೆ ಕೂದಲು ಹಾಗೇಯೇ ಇರಬೇಕು. ತಲೆ ಕೂದಲನ್ನು ಚೌರ ಮಾಡಿಸುವಂತಿಲ್ಲ. ಹುಲಿಗೆಮ್ಮನ ಬಾಳೆದಂಡಿಗಿ ದಿನ ಆತನ ಗಡ್ಡ, ಮೀಸೆಯನ್ನು ತೆಗೆಯುತ್ತಾರೆ. ನದಿಯಲ್ಲಿ ಸ್ನಾನ ಮಾಡಿಸಿ, ಹುಲಿಗೆಮ್ಮನ ಮೂರ್ತಿ ಪೂಜೆ ಮಾಡಿ ಗುಡಿಗೆ ಬರುತ್ತಾರೆ. ಹುಲಿಗೆಮ್ಮನ ಗುಡಿಯಲ್ಲಿ ಬಾಳೆದಂಡಿಗಿ ಮನೆತನದ ಪೂಜಾರಿಗೆ ಆರ್ಚನೆ ಕುಂಕುಮವನ್ನು ಮುಖದ ತುಂಬ ಹಚ್ಚುತ್ತಾರೆ. ಕೊರಳಿಗೆ ಹೂವಿನ ಹಾರ ಹಾಕುತ್ತಾರೆ. ಹೂವಿನ ದಂಡಿಗೆಯನ್ನು ಆತನ ತಲೆಗೆ ಹಾಕುತ್ತಾರೆ. ಹುಲಿಗೆಮ್ಮ ದೇವಿಗೆ ಮಂಗಳಾರತಿ ಮಾಡುತ್ತರೆ. ನಂತರ ಹೊರಗಡೆ ಬಾಳೆದಂಡಿಗಿ ಪೂಜಾರರು, ಬಾಳೆದಂಡಿಗಿ ಮೇಲೆ ಕೂಡುತ್ತಾರೆ. ಬಾಳೆದಂಡಿಗೆ ಮೇಲೆ ಕುಳಿತು ಗುಡಿಯ ತುಂಬ ಮೂರು ಸಲ ಪ್ರದಕ್ಷಿಣೆ ಹಾಕುತ್ತಾರೆ. ಒಂದು ವೇಳೆ ಬಾಳೆದಂಡಿಗಿ ಮುರಿದರೆ, ಅವ್ರು ಅಲ್ಲಿಗೆ ಅನರ್ಹರೆಂದೇ ಅರ್ಥ, ಮತ್ತೆ ಬಾಳೆದಂಡಿಗಿಯನ್ನು ಅವರು ಏರುವಂತಿಲ್ಲ.

ಬೆಳಿಗ್ಗೆ ವ್ಯಾಘ್ರೇಶ್ವರಿ ಅವತಾರದಲ್ಲಿ ಭಕ್ತರಿಗೆ ಪ್ರಸಾದ ಕೊಡುವುದು

ಬಾಳೆದಂಡಿಗಿ ಮನೆತನದ ಪೂಜಾರಿಗೆ ಮತ್ತು ಪಾಯಸದ ಮನೆತನದ ಪೂಜಾರಿಯ ಮುಖಕ್ಕೆ ಕುಂಕುಮವನ್ನು (ಅರ್ಚನೆ ಮಾಡಿದ ಕುಂಕುಮ) ಹಚ್ಚುತ್ತಾರೆ. ಆ ರೀತಿ ಹಚ್ಚಿದ ಕಾರಣ ಅವರು ವ್ಯಾಘ್ರೇಶ್ವರಿ ಅವತಾರ ತಾಳುತ್ತಾರೆ. ಅವರು ಬಾಳೆದಂಡಿಗಿ ಕಾರ್ಯಕ್ರಮ ಮುಗಿಸಿದ ಮೇಲೆ ಆ ಬಾಳೆದಂಡಿಗಿ ಕಾರ್ಯಕ್ರಮ ಮುಗಿಸಿದ ಮೇಲೆ ಆ ಬಾಳೆದಂಡಿಗಿಯನ್ನು ಭಕ್ತಾದಿಗಳಿಗೆ ಕೊಡಲು ತುಂಡು, ತುಂಡುಗಳಾಗಿ ಕತ್ತರಿಸುತ್ತಾರೆ. ಆ ಬಾಳೆದಂಡಿಗಿಯ ಎಸಳುಗಳನ್ನು ಭಕ್ತಾದಿಗಳಿಗೆ, ಊರಿನ ಹಿರಿಯರಿಗೆ, ಮುಖಂಡರಿಗೆ ಹಚುತ್ತಾರೆ. ಇದೇ ಪ್ರಸಾದ ಕೊಡುವ ಕಾರ್ಯಕ್ರಮ.

ಬಾಳೆದಂಡಿಗಿ, ದೇವರಮನಿ, ಪಾಯಸದ, ಅಮ್ಮನವರ, ಯಲಿಶೇಟಿ, ದೇವರಮನಿಗಳಲ್ಲಿ ವ್ಯಾಘ್ರೇಶ್ವರಿಯ ಪೂಜಾರಿಗಳನ್ನು ಮಾಡುವರು

ಬಾಳೆ ದಂಡಿಗಿ ದೇವರಮನಿ, ಪಾಯಸದ ಮನಿ, ಅಮ್ಮನವರ ಮನೆ, ಯಲಿಶೇಟಿಯರ ಮನೆಗಳಲ್ಲಿ ದೇವರನ್ನು ಇಟ್ಟಿರುತ್ತಾರೆ. ಪ್ರಸಾದವನ್ನು ಭಕ್ತಾದಿಗಳಿಗೆ ಹಂಚಿದ ಮೇಲೆ ಪೂಜೆ ಮಾಡುತ್ತಾರೆ. ಪ್ರತಿ ದಿನ ಈ ಐದು ಮನೆಗಳಲ್ಲಿ ಹುಲಿಗೆಮ್ಮ ದೇವಿಯ ಪೂಜೆ ನಡೆಯುತ್ತದೆ. ನೈವೇದ್ಯ ಹಾಕುತ್ತಾರೆ.

ಕೊಂಡದ ಪೂಜೆ

ಆಗಿ ಹುಣ್ಣಿಮೆ ಆಗಿ ೧೦ನೇ ದಿನಕ್ಕೆ ಅಗ್ನಿಕೊಂಡ ಜಾಗದ ಬಳಿ ಐದು ಕಟ್ಟಿಗೆಗಳನ್ನು ಇಟ್ಟು ಅದಕ್ಕೆ ಗಂಧ, ಕುಂಕುಮ, ಭಂಡಾರ, ಹಚ್ಚುತ್ತಾರೆ. ಅದಕ್ಕೆ ಹೂವಿನ ಮಾಲೆ ಸುತ್ತುತ್ತಾರೆ. ನಂತರ ಮಂಗಳಾರತಿ, ಕಾಯಿ, ಒಡೆದು ಅದನ್ನು ಕಟ್ಟಿಗೆಗಳನ್ನು ಬಾಳೆದಂಡಿಗಿ ಮನೆತನದವರು, ಪಾಯಸದ ಮನೆಯವರು, ದೇವರುಮನೆಯ ಯಲಿಶೇಟಿ, ಅಮ್ಮನವರ ಪೂಜಾರರು (ಮನೆತನದವರು) ಅಗ್ನಿಗೆ ಹಾಕುತ್ತಾರೆ. ಕಟ್ಟಿಗೆಗಳನ್ನು ಅಗ್ನಿಗೆ ಹಾಕಿದ ಮೇಲೆ ಗುಡಿಯ ಒಳಕ್ಕೆ ಹೋಗುತ್ತಾರೆ. ನಂತರ ಪಂಚಾಯಿತಿ ಕಟ್ಟೆಯಲ್ಲಿ ಕೂಡುತ್ತಾರೆ.

ಹಿಡಿದಕ್ಷಿಣೆ, ಬಾಳೆದಂಡಿಗಿ, ಪಾಯಸದ ಪೂಜಾರದಿಂದ ಬಾಬುದಾರರಿಗೆ ಕೊಡುವುದು

ಶ್ರೀ ಕ್ಷೇತ್ರ ಹುಲಿಗೆಮ್ಮನಿಗೆ ಹರಕೆಯಿಂದ ತೂರಿದ ಹಣವನ್ನು ಹಾಕಿದ ಹಣವನ್ನು ಬಾಳೆದಂಡಿಗೆ ಪೂಜಾರರು, ಮುಟ್ಟಿ ದಾನದ ರೂಪದಲ್ಲಿ ವೈದಿಕ ಬ್ರಾಹ್ಮಣರಿಗೆ ಕೊಡುತ್ತಾರೆ. ಲಿಂಗಾಯತ ಜನಾಂಗದವರಿಗೂ ಕೊಡುತ್ತಾರೆ. ಕಟ್ಟಿಯವರಿಗೆ, ಕೊಂಡದವರಿಗೆ, ಅಗಸರಿಗೆ, ಭಜಂತ್ರಿಯವರಿಗೆ, ಸೇವಕರಿಗೆ ಕೊಡುತ್ತಾರೆ.

ಕೊಂಡಕ್ಕೆ ಅಗ್ನಿ ಪುಟಾವು

ಹುಲಿಗೆಮ್ಮ ದೇವಿಯ ಗುಡಿಯೊಳಕ್ಕೆ ಬಾಳೆದಂಡಿಗಿ ಪೂಜಾರಿ ಹಾಗು ಪಾಯಸದ ಪೂಜಾರಿ ಭಕ್ತಿಯಿಂದ ಹಚ್ಚಿದ ದೀಪವನ್ನು ಹುಲಿಗೆಮ್ಮ ದೇವಿಗೆ ಬೆಳೆಗುತ್ತಾರೆ. ನಂತರ ನಾಗಜೋಗಿ, ಬಸವಜೋಗಿಗೆ ಇವರಿಬ್ಬರೂ ದೀಪ (ಜ್ಯೋತಿ) ಬೆಳಗುತ್ತಾರೆ. ನಂತರ ಅದನ್ನು ತಂದು ಅಗ್ನಿಕೊಂಡಕ್ಕೆ ಸ್ಪರ್ಶ ಮಾಡುತ್ತಾರೆ. ಅಗ್ನಿಕೊಂಡ ತಯಾರು ಆಗುತ್ತದೆ.

ಸಾರಂಗ ಮಠದಲ್ಲಿ ಪಡುಗ ಪೂಜೆ ಮಾಡುವುದು

ಅಗ್ನಿಪೂಜೆ ಮಾಡಿದ ನಂತರ ದೇವರ ಮನಿಗೆ ಹೊಸ ಪಾಯಸದ ಪಡುಗ ತೆಗೆದುಕೊಂಡು ಹೋಗುತ್ತಾರೆ. ಕಂಬಳಿ ಹಾಸಿ, ಅಕ್ಕಿ ಹಾಕಿ ಅದರ ಮೇಲೆ ಪಡುಗ ಇಡುತ್ತಾರೆ. ಅದನ್ನು ಅಮ್ಮನವರು ಪೂಜೆ ಮಾಡುತ್ತಾರೆ. ಆಮೇಲೆ ಮಂಗಳಾರತಿ, ಕಾಯಿ ಒಡೆದು, ಅದನ್ನು ಪುನಃ ದೇವರ ಮನಿಗೆ ತರುತ್ತಾನೆ. ಅಲ್ಲಿಗೆ ಈ ಕಾರ್ಯಕ್ರಮ ಮುಗಿಯಿತು.

ಪಡುಗವನ್ನು ಸಾರಾಂಗ ಮಠದಿಂದ ದೇವರಮನಿಗೆ ತರುವುದು

ಬೆಳಿಗ್ಗೆ ಯಲಿಶೇಟಿ ಪೂಜಾರ್ ಹೊಸ ಪಡುಗವನ್ನು ತೆಗೆದುಕೊಂಡು ನದಿಗೆ ಹೋಗುತ್ತಾನೆ. ವಾದ್ಯಗಳೊಂದಿಗೆ ಭಕ್ತಾದಿಗಳು ಸಹ ನದಿಗೆ ಹೋಗುತ್ತಾರೆ. ಅಲ್ಲಿ ಈ ಪಡುಗವನ್ನು ಚೆನ್ನಾಗಿ ತೊಳೆಯುತ್ತಾರೆ. ಆ ಮೇಲೆ ಅದರಲ್ಲಿ ನೀರು ತರುತ್ತಾರೆ. ನದಿಯ ದಂಡೆಯಲ್ಲಿ ಪಡುಗ ಮಾಡುತ್ತಾರೆ. ಆ ದಿನ ಪಾಯಸದ ಮನೆಯ ಪೂಜಾರಿಗೆ ಚೌರ ಮಾಡಿಸುವ ಕಾರ್ಯಕ್ರಮ ಇರುತ್ತದೆ.

ಹುಲಿಗೆಮ್ಮ ದೇವಿ ಗುಡಿಯಲ್ಲಿ ಪಡುಗಪೂಜೆ ಮಾಡುವುದು

ಶ್ರೀ ಕ್ಷೇತ್ರ ಹುಲಿಗೆಮ್ಮನ ಗುಡಿಯಲ್ಲಿ ಪಡುಗ ಪೂಜೆ ಮಾಡುತ್ತಾರೆ. ಮಂಗಳಾರತಿ ಮಾಡುತ್ತಾರೆ. ಕಾಯಿಯನ್ನು ಒಡೆಯುತ್ತಾರೆ. ಗುಡಿಯ ಮುಂದೆ ಪಡಗವನ್ನು ತಂದು ಮೂರು ಒಲೆಗುಂಡಿಗಳ ಮೇಲೆ ಇಟ್ಟು ಅದರಮೇಲೆ ಮೂರು ರುಮಾಲುಗಳನ್ನು ಇಟ್ಟು ಅದರ ಮೇಲೆ ಪಡುಗ ಇಡುತ್ತಾರೆ. ಒಲೆಗೆ ಗಂಧದ ಕಟ್ಟಿಗೆ ಬಳಸುತ್ತಾರೆ. ಒಂದು ಬೊಗಸೆ ಗಂಧದ ಕಟ್ಟಿಗೆಗಳಲ್ಲಿ ೨೫ ಸೇರು ಅಕ್ಕಿಯ ಪಾಯಸ ತಯಾರಾಗುತ್ತದೆ. ಇದನ್ನೇ ಶ್ರೀದೇವಿ ಹುಲಿಗೆಮ್ಮನ ಪವಾಡವೆಂದು ಕರೆಯುವುದು, ಪಡುಗಕ್ಕೆ ಸುತ್ತಿದ ಹೂವಿನ ಮಾಲೆಯೂ ಸಹ ಬಾಡುವುದಿಲ್ಲ. ಜಳತಾಕದೇ (ಹೂವಿಗೆ) ಕುದಿಯುತ್ತದೆ.

ಶ್ರೀದೆವಿಗೆ ಹೂವಿನ ಪ್ರಸಾದ ಕಟ್ಟುವುದು

ಹುಲಿಗೆಮ್ಮನ ಗರ್ಭಗುಡಿಯಲ್ಲಿ ಪ್ರಸಾದ ಕಟ್ಟುವ ಕಾರ್ಯಕ್ರಮ. ಒಂದೊಂದರಂತೆ, ೫ ಪ್ರಸಾದ ಕಟ್ಟುತ್ತಾರೆ. ೫ ಪ್ರಸಾದವನ್ನು ಹುಲಿಗೆಮ್ಮ ಕೊಡುತ್ತಾಳೆ. ಕೊಟ್ಟ ನಂತರ ಪಾಯಸವನ್ನು ಕೈಯಾಡಿಸುವುದು. ಮೂರು ಸಲ ಪಾಯಸವನ್ನು ಪಾಯಸದ ಪೂಜಾರಿ ತೆಗೆಯುತ್ತಾರೆ. ಒಂದೊಂದು ಸಲದಂತೆ ಪಾಯಸ ತೆಗೆದು ಹುಲಿಗೆಮ್ಮ ದೇವಿಗೆ ನೈವೇದ್ಯ ಹಾಕುತ್ತಾರೆ. ಪಾಯಸದ ಪೂಜಾರಿ ಒಂದು ಕೈಯಿಂದ ತೆಗೆದರೆ, ಬಾಳೆದಂಡಿಗಿ ಪೂಜಾರಿ ಎರಡು ಕೈಯಿಂದ ಪಾಯಸ ತೆಗೆಯುತ್ತಾರೆ.

ಪಾಯಸ

ಶ್ರೀದೇವಿ ಹುಲಿಗೆಮ್ಮನ ಜಾತ್ರೆ ಬಹಳ ವಿಶಿಷ್ಟವಾದದ್ದು ಹಾಗೂ ಪ್ರಖ್ಯಾತವಾದದ್ದು. ಪಾಯಸದ ದಿನ ರಾತ್ರಿಯ ಸಮಯ ಸುಮಾರು ೨ ಗಂಟೆಗೆ ಹುಲಿಗೆಮ್ಮ ದೇವಿಯ ಮೂರ್ತಿ ತೆಗೆದುಕೊಂಡು ನದಿಗೆ ಹೋಗುತ್ತಾರೆ. ಜೊತೆಗೆ ಪಾಯಸ ತೆಗೆಯುವವರನ್ನು ನದಿಗೆ ಕರೆದುಕೊಂಡು ಹೋಗಿ ಅವರ ಗಡ್ಡ, ಮೀಸೆಯನ್ನು ತೆಗೆಯುತ್ತಾರೆ. ರಾತ್ರಿ ಸಮಯ ಸುಮಾರು ೩ ಗಂಟೆಗೆ ಹುಲಿಗೆಮ್ಮ ದೇವಿಯ ಮೂರ್ತಿ ಪೂಜೆ ನಡೆಯುತ್ತದೆ. ಪೂಜೆ ನಡೆದ ನಂತರ ನದಿಯಿಂದ ೫ ಕೊಡ ನೀರು ತರುತ್ತಾರೆ.

ಹುಲಿಗೆಮ್ಮ ದೇವಿಯ ಗುಡಿಯ ಮುಂದೆ ಒಲೆ ಗುಂಡು ಇಡುತ್ತಾರೆ. ನಂತರ ಮೂರು ಹೊಸ ರುಮಾಲುಗಳನ್ನು ಸುತ್ತಿ ಆ ಮೂರು ಒಲೆಗುಂಡುಗಳ ಮೇಲೆ ಇಡುತ್ತಾರೆ. ಹೊಸ ಮಣ್ಣಿನ ಪಡುಗವನ್ನು ತಂದು ಅದರ ಮೇಲೆ ಇಡುತ್ತಾರೆ. ಗಂಧದ ಕಟ್ಟಿಗೆಗಳಿಂದ ಒಲೆಯನ್ನು ಹಚ್ಚುತ್ತಾರೆ. ಇಲ್ಲಿಯ ವಿಶೇಷತೆ ಎಂದರೆ ಮೂರು ಒಲೆಗುಂಡುಗಳ ಮೇಲೆ ಇಟ್ಟಿರುವ ರೂಮಾಲುಗಳು ಸುಡುವುದಿಲ್ಲ. ಅಲ್ಲದೇ ಅವುಗಳಿಗೆ ಮಸಿಯೂ ಸಹ ಹತ್ತುವುದಿಲ್ಲ. ಒಲೆ ಗುಂಡುಗಳ ಮೇಲಿಟ್ಟ ಪಡುಗಕ್ಕೆ ೫ ಕೊಡ ನೀರು ಹಾಕುತ್ತಾರೆ. ಎಲ್ಲವನ್ನು ಪಡುಗಕ್ಕೆ ಹಾಕಿದ ಮೇಲೆ ಹುಲಿಗೆಮ್ಮ ದೇವಿಯನ್ನು ಪ್ರಸಾದ ಕೇಳಲು ಹೋಗುತ್ತಾರೆ. ಪ್ರಸಾದವೆಂದರೆ ಇಷ್ಟೇ ಮಲ್ಲಿಗೆ ಹೂವನ್ನು ದುಂಡಾಗಿ ಸುತ್ತಿರುತ್ತಾರೆ. ಒಂದೊಂದರಂತೆ ೯ ಮಲ್ಲಿಗೆ ಹೂವನ್ನು ಕಟ್ಟಿ ದುಂಡಾಗಿ ಸುತ್ತಿ ದೇವಿಯ ಮೂರ್ತಿಯ ಮೇಲೆ ಇಟ್ಟಿರುತ್ತಾರೆ. “ಹುಲಿಗೆಮ್ಮ ಬಹುಫರಾಕ್, ಹುಲಿಗೆಮ್ಮ ಬಹುಫರಾಕ್” ಎಂದು ಆ ಸಮಯದಲ್ಲಿ ಭಕ್ತಾದಿಗಳು ಕೂಗುತ್ತಾರೆ. ಹೂವನ್ನು ಬೇಗ ಕೊಡದೆ ಇದ್ದಾಗ ಹುಲಿಗೆಮ್ಮನನ್ನು ಬೈಯುತ್ತಾರೆ. ೯ ಪ್ರಸಾದವನ್ನು ಹುಲಿಗೆಮ್ಮ ಕೊಡುತ್ತಾಳೆ. ಹೂ ಕೊಟ್ಟ (ಪ್ರಸಾದ) ಮೇಲೇಯೇ ಮುಂದಿನ ಕೆಲಸಗಳು ಪ್ರಾರಂಭವಾಗುತ್ತದೆ. ಈಗ ಪಾಯಸ ತೆಗೆಯುವ ಕೆಲಸ, ಅಷ್ಟೊತ್ತಿಗೆ ಪಾಯಸ ಕುದ್ದು ತಯಾರಾಗಿರುತ್ತದೆ. ಪಾಯಸ ಅಗ್ನಿಕೊಂಡ, ಇತ್ಯಾದಿ ಎಲ್ಲ ಕೆಲಸ ಕಾರ್ಯಗಳನ್ನು ಜಾತ್ರೆಯ ಸಮಯದಲಿ ಕಬ್ಬೇರು ಜನಾಂಗದವರು ಮಾಡುತ್ತರೆ.

. ಬಾಳೆದಂಡಿಗಿ
. ದೇವರಮನಿ
. ಪಾಯಸದವರು
. ಅಮ್ಮನವರು
. ಯಲಿಶೇಟಿ

ಹುಲಿಗೆಮ್ಮ ನ ಜಾತ್ರೆಯ ಸಂದರ್ಭದಲ್ಲಿ ಈ ಐದು ಮನೆತನಗಳು ಪಾಯಸ ಮತ್ತು ಅಗ್ನಿಕೊಂಡ ಇತ್ಯಾದಿ ಕೆಲಸಗಳಲ್ಲಿ ಭಾಗವಹಿಸುತ್ತವೆ.

ಅಕ್ಕಿ ಪಾಯಸದ ಮನೆತನದವರು (ಪಾಯಸ ತೆಗೆಯುವವರು)

. ಪವಡೆಪ್ಪ ಪೂಜಾರಿ
. ಚಿದಾನಂದಪ್ಪ ಪೂಜಾರು
. ದೇವಪ್ಪ ಪೂಜಾರು
. ಗುರುನಾಥಪ್ಪ ಪೂಜಾರು

ಬಾಳೆದಂಡಗಿ ಮನೆತನದವರು (ಬಾಳೆದಂಡಗಿ ಕಾರ್ಯಕ್ರಮದಲ್ಲಿ ನಿರತರಾದ ವ್ಯಕ್ತಿಗಳು)

. ಹುಲುಗಪ್ಪ ಪೂಜಾರು
. ಬಾಳಪ್ಪ ಪೂಜಾರು
. ರಾಮಣ್ಣ ಪೂಜಾರು

ಯಲಿಶೇಟಿ ಮನೆತನದವರು (ಪಾಯಸದ ಪಡಗ ಹೊರುವವರು ಹಾಗೂ ಅಗ್ನಿಕೊಂಡ ಪೂಜೆ ಮಾಡುವವರ ಮನೆ)

. ಬಾಳಪ್ಪ ಪೂಜಾರು
. ನಾಗಒಪ್ಪ ಪೂಜಾರು

ಈ ಮನೆತನದವರೆಲ್ಲ ಕಬ್ಬೇರು ಜನಾಂಗದವರು. ಹುಲಿಗೆಮ್ಮ ಪ್ರಸಾದ ಕೊಟ್ಟ ಮೇಲೆ ಪಾಯಸದ ಮನೆಯ ವ್ಯಕ್ತಿ ಗುರುನಾಥ ಪೂಜಾರು ಬಂದು ಪಾಯಸವನ್ನು (ಬಿಸಿಯಾಗಿ ತಯಾರದ ಅನ್ನವನ್ನು) ಮೂರು ಸಲ ಎರಡು ಕೈಯಿಂದ ತೆಗೆದು ಪರಾತಕ್ಕೆ ಹಾಕುತ್ತಾನೆ. ಮೂರು ಸಲ ತೆಗೆದು ಹಾಕುವಾಗ, ಪ್ರತಿಸಲಕ್ಕೊಮೆ ಹುಲಿಗೆಮ್ಮ ದೇವಿಯ ಗುಡಿ ಒಳಗೆ ಹೋಗಿಬಂದು ಹಾಕುತ್ತಾನೆ. ಪಾಯಸ ತೆಗೆಯುವಾಗ ಅತನ ಕೈಗೆ ಯಾವ ತರಹದ ಆಘಾತವಾಗುವುದಿಲ್ಲ. ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ಈ ಪಾಯಸ ಶ್ರೀ ಕ್ಷೇತ್ರ ಹುಲಿಗೆಮ್ಮನ ಪವಾಡವೆಂದು ಕರೆಯುತ್ತಾರೆ. ಭಕ್ತಾದಿಗಳ ದೊಡ್ಡ ಸಮೂಹವೇ ಈ ಪಾಯಸ ಪಾಯಸ ದೃಶ್ಯವನ್ನು ವೀಕ್ಷಿಸಲು ನೆರೆದಿರುತ್ತದೆ. ಇನ್ನೂ ಕೆಲವರು ರಾತ್ರಿಯಿಂದಲೇ ತಮ್ಮ ತಮ್ಮ ಜಾಗವನ್ನು ಗೊತ್ತು ಮಾಡಿಕೊಂಡಿರುತ್ತಾರೆ. ಮೂರು ಸಲ ತೆಗೆದ ಪಾಯಸವನ್ನು ಮೂರು ಸಲ ಹೋಗಿ ಹುಲಿಗೆಮ್ಮ ದೇವಿಯ ಗರ್ಭಗುಡಿಯಲ್ಲಿ ಹುಲಿಗೆಮ್ಮನಿಗೆ ನೈವೇದ್ಯ ಹಾಕುತ್ತಾರೆ. ಪಾಯಸದ ನಂತರ ಕಾರ್ಯಕ್ರಮವೆಂದರೆ ಅಗ್ನಿಕುಂಡ ಕಾರ್ಯಕ್ರಮ.

ಅಗ್ನಿಕುಂಡ

ಪಾಯಸದ ನಂತರ ಅಗ್ನಿಕುಂಡ ಕಾರ್ಯಕ್ರಮ ನಡೆಯುತ್ತದೆ. ಪಾಯಸ ತೆಗೆದ ಪೂಜಾರಿ, ಪಾಯಸ ತೆಗೆದ ನಂತರ ಹುಲಿಗೆಮ್ಮ ದೇವಿಯ ಗುಡಿಯ ಒಳಗೆ ಹೋಗುತ್ತಾನೆ. ಪಾಯಸ ತೆಗೆದ ಪೂಜಾರಿ ಹಾಗೂ ಬಾಳೆದಂಡಗಿ ಮನೆತನದ ಪೂಜಾರಿ ಇವರಿಬ್ಬರು ಮಾತ್ರ ಕೆಂಡ ತುಳಿಯುತ್ತಾರೆ. ಮೊದಲು ಬಾಳೆದಂಡಿಗಿ ಪೂಜಾರಿ ನಂತರ ಪಾಯಸ ಪೂಜಾರಿ ಕೆಂಡ ತುಳಿಯುತ್ತಾರೆ. ನಂತರ ಕಾಲಿಗೆ ಕೊಡದಿಂದ ನೀರು ಹಾಕುತ್ತಾರೆ. ಬಂಡಿ ಕಟ್ಟಿಗೆಗಳನ್ನು ಅಗ್ನಿಕೊಂಡಕ್ಕೆ ಹಾಕಿರುತ್ತಾರೆ. ಇವರನ್ನು ಬಿಟ್ಟು ಬೇರೆ ಯಾರೂ ಕೆಂಡ ತುಳಿಯುವುದಿಲ್ಲ. ಅಗ್ನಿ ತುಳಿಯುವ ಪೂಜಾರಿಯರ ಮುಖದ ತುಂಬಾ ಭಂಡಾರ (ಕುಂಕುಮ) ವನ್ನು ಹಚ್ಚುತ್ತಾರೆ. ಇದನ್ನು ಹಚ್ಚಲು ಕಾರಣ ದೇವಿಯ ಆಕಾರವಾಗಿ ಕಾಣಬೇಕೆಂಬ ಉದ್ದೇಶದಿಂದ. ಅವರನ್ನು ನೋಡಿದ ತಕ್ಷಣ ಭಕ್ತಾದಿಗಳಿಗೆ ಭಯವಾಗುವ ರೀತಿಯಲ್ಲಿ ಭಂಡಾರ ಹಚ್ಚಿರುತ್ತಾರೆ. ಹಿಂದೆ ಕೆಂಡ ತುಳಿಯಲು ಬರುವ ಪೂಜಾರಿಗೆ ಮುತ್ತಿನ ದಂಡೆಯನ್ನು ಹಾಕುತ್ತಿದ್ದರು. ಈ ಮುತ್ತಿನ ದಂಡೆಯನ್ನು ಶ್ರೀ ಕ್ಷೇತ್ರ ಹುಲಿಗೆಮ್ಮನಿಗೆ ಟಿಪ್ಪುಸುಲ್ತಾನ ಕೊಟ್ಟಿದ್ದಾನೆ ಎಂಬ ಪ್ರತೀತಿ ಇದೆ. ಅದನ್ನು ಧರಿಸಿದ ಪೂಜಾರಿಯು ಕೆಂಡವನ್ನು ತುಳಿಯುತ್ತಿದ್ದನಂತೆ. ಆದರೆ ಈಗ ಆ ಮುತ್ತಿನ ದಂಡೆಯನ್ನು ಪೂಜಾರಿಯು ಧರಿಸುತ್ತಿಲ್ಲ. ಅಗ್ನಿ ತುಳಿಯುವ ಪೂಜಾರಿಯರು ಅಗ್ನಿಯ ಹತ್ತಿರ ಬಂದ ತಕ್ಷಣ ಅಗ್ನಿಗೆ ಮಗಿಯಿಂದ ತುಪ್ಪವನ್ನು ಸುರಿಯುತ್ತಾರೆ. ನಂತರ ಗೊತ್ತಾದ ವ್ಯಕ್ತಿಗಳು ಕೋಳಿಗಳನ್ನು ಹಾರಿ ಬಿಡುತ್ತಾರೆ. ಅದಕ್ಕೆ “ಹಾರುಗೋಳಿ” ಎಂದು ಹೆಸರು. ಈ ಕಟ್ಟಿಗೆಯವರು ತೆಗೆದುಕೊಂಡು ಹೋಗುತ್ತಾರೆ. ಕೋಳಿಯನ್ನು ಹಾರಿಬಿಟ್ಟ ನಂತರ ಕೆಂಡವನ್ನು ತುಳಿಯುತ್ತಾರೆ. ಕೆಂಡವನ್ನು ಒಂದೇ ಬಾರಿ ತುಳಿಯುತ್ತಾರೆ. ಕೆಂಡವನ್ನು ತುಳಿಯುವ ಸಮಯದಲ್ಲಿ ಹುಲಿಗೆಮ್ಮ ಭಕ್ತಾದಿಗಳ ಮಹಾ ಸಮೂಹವೇ ನೆರೆದಿರುತ್ತದೆ. ಸ್ವಲ್ಪವೂ ಜಾಗವನ್ನು ಬಿಡದ ರೀತಿಯಲ್ಲಿ ಭಕ್ತಾದಿಗಳು, ಜೋಗತಿಯರು, ನೆರೆದಿರುತ್ತಾರೆ. ಕೆಂಡವನ್ನು ತುಳಿದ ನಂತರ ಪೂಜಾರಿಗಳು ಹುಲಿಗೆಮ್ಮನ ಗರ್ಭಗುಡಿಯ ಒಳಕ್ಕೆ ಹೋಗುತ್ತಾರೆ. ಅಲ್ಲಿಂದ ವಾದ್ಯಗಳ ಸಮೇತರಾಗಿ ಭಕ್ತಾದಿಗಳ ಮನೆ, ಮನೆಗೆ ಹೋಗುತ್ತಾರೆ. ಅಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.

ಬಾಳೆದಂಡಿಗಿ ಮನೆತನದ ಪೂಜಾರಿ ಹಾಗೂ ಪಾಯಸದ ಮನೆತನದ ಪೂಜಾರಿ, ಇಬ್ಬರು ಅಗ್ನಿಕೊಂಡ ಮುಚ್ಚುವವರೆಗೆ ಹುಲಿಗೆಮ್ಮನ ಗುಡಿಗೆ ಬರುವುದಿಲ್ಲ. ಅಗ್ನಿಕೊಂಡ ಮುಚ್ಚಿದ ಮೇಲೆನೇ ಹುಲಿಗೆಮ್ಮನ ಗುಡಿಗೆ ಬರುವರು. ಅಗ್ನಿ ಕೊಂಡವನ್ನು ಮುಚ್ಚುವವರು ರಂಗಪ್ಪ ಗುನ್ನಾಳರವರು. ಇವರಿಗೆ ಕೊಂಡದವರೆಂದು ಕರೆಯುತ್ತಾರೆ. ಅಗ್ನಿ ಕೊಂಡವನ್ನು ಮುಚ್ಚುವಾಗ ಅನ್ನದ ನೈವೇದ್ಯ ಹಾಕಿ ಮುಚ್ಚುತ್ತಾನೆ.

ವ್ಯಾಘ್ರೇಶ್ವರಿ ಅವತಾರದಲ್ಲಿ ಐದು ಮನೆಯ ಪೂಜಾರ ಪ್ರಸಾದ ಕೊಡುವುದು

ಬಾಳೆದಂಡಿಗಿ ಕಾರ್ಯಕ್ರಮ ಮುಗಿದ ನಂತರ, ಬಾಳೆದಿಂಡನ್ನು ಎಳೆ ಎಳೆಯಾಗಿ ಪ್ರಸಾದವಾಗಿ ಭಕ್ತಾದಿಗಳಿಗೆ, ಊರಿನ ಹಿರಿಯರಿಗೆ, ಗಣ್ಯ ವ್ಯಕ್ತಿಗಳಿಗೆ, ವ್ಯಾಘ್ರೇಶ್ವರಿ ಅವತಾರದಲ್ಲಿ ಪೂಜಾರರು ಹಂಚುತ್ತಾರೆ.

ವ್ಯಾಘ್ರೇಶ್ವರಿ ಅವತಾರದಲ್ಲಿ ಊರಿನ ಹಿರಿಯರಿಗೆ, ಭಕ್ತರಿಗೆ, ಪ್ರಸಾದ ಕೊಡುವುದು

ಹುಲಿಗೆಮ್ಮ ದೇವಿಯ ಪಾಯಸದ ಕಾರ್ಯಕ್ರಮ ಮುಗಿದ ನಂತರ ಪಾಯಸದ ಪಡುಗ ಬಾಳೆದಂಡಿಗಿ ಮನೆಯರಿಗೆ ಹೋಗುತ್ತದೆ. ಅಲ್ಲಿ ಪಾಯಸದ ಪ್ರಸಾದವನ್ನು ಭಕ್ತಾದಿಗಳಿಗೆ, ಊರಿನ ಹಿರಿಯರಿಗೆ, ಗಣ್ಯ ವ್ಯಕ್ತಿಗಳಿಗೆ, ವ್ಯಾಘ್ರೇಶ್ವರಿ ಅವತಾರದಲ್ಲಿ ಪೂಜಾರರು ಹಂಚುತ್ತಾರೆ.

ಬಾಳೆದಂಡಿಗಿ, ದೇವರಮನಿ, ಪಾಯಸದವರಮನಿ, ಅಮ್ಮನವರ ಮನಿ, ಯಲಿಶೇಟಿ ಅವರ ಮನಿಗಳಲ್ಲಿ ಹುಲಿಗೆಮ್ಮ ದೇವಿಯ ಪೂಜೆಗಳು ನಡೆಯುತ್ತವೆ. ಇದರ ಮನೆಗಳಲ್ಲಿ ಜಗಲಿಯ ಮೇಲೆ ಗುಲಿಗೆಮ್ಮ ಮೂರ್ತಿಯನ್ನು ಇಟ್ಟಿರುತ್ತಾರೆ. ಆದುದರಿಂದ ಪೂಜೆಗಳು ನಡೆಯುತ್ತವೆ. ಜೊತೆಗೆ ಹಡ್ಲಿಗಿ ಪೂಜೆ ನಡೆಯುತ್ತದೆ. ಭಕ್ತಾದಿಗಳಿಗೆ ಊಟ ಹಾಕಿಸುತ್ತಾರೆ. ಅವರು ಭಕ್ತಾದಿಗಳಿಗೆ ಊಟ ಹಾಕಿದ ಮೇಲೆಯೇ (ಜೋಗಪಂಕ್ತಿ) ಒಂದೊತ್ತು ಬಿಡುತ್ತಾರೆ. ಏಕೆಂದರೆ ಅಲ್ಲಿಯವರೆಗೆ ಉಪವಾಸವಿರುತ್ತಾರೆ. ಹಾಲು ಹಾಗೂ ಹಣ್ಣು ಮಾತ್ರ ಅವರ ಉಪಹಾರವಾಗಿರುತ್ತದೆ. ಕಂಕಣ ಕಟ್ಟಿದಾಗಿನಿಂದ ವೈಶಾಖ ಬಹಳ ಪ್ರತಿಪದದಿಂದ ಹಿಡಿದು ಪಾಯಸದ ಕಾರ್ಯಕ್ರಮ ನಡೆಯುವವರೆಗೆ ಉಪವಾಸ ಇರುತ್ತಾರೆ. ಒಂಭತ್ತು ದಿನ ಉಪವಾಸವಿರುತ್ತಾರೆ.