ಮತ ಧರ್ಮಗಳಿಗೆ ಸಂಬಂಧಿಸಿದಂತೆ, ಅಗೋಚರ ದೈವಶಕ್ತಿಗಳ ಪ್ರೀತ್ಯಾರ್ಥವಾಗಿ ಮಾನವ ನಡೆಸುತ್ತ ಬಂದಿರುವ ಮತಾಚಾರಗಳಿಗೆ, ಕರ್ಮ ವಿಧಿಗಳಿಗೆ ಈ ಹೆಸರಿದೆ. ಪ್ರಾದಿಮ ಜನಪದ ಗುಂಪು ನಿಸರ್ಗದಲ್ಲಿ ಜೀವಿಸುತ್ತಿದ್ದುದರಿಂದ ನಿಸರ್ಗದ ವ್ಯಾಪಾರಗಳನ್ನು ವಿಸ್ಮಯ, ಭಯದಿಂದ, ನೋಡಿ, ನಿಸರ್ಗವನ್ನು ತನ್ನದೇ ರೀತಿಯಲ್ಲಿ ಅರಿಯುವ ಪ್ರಯತ್ನ ಮಾಡಿತು. ಪ್ರತಿನಿತ್ಯ ಉದಯಿಸುವ ಮತ್ತು ಮುಳುಗುವ ಸೂರ್ಯ, ಬೀಸುವ ಗಾಳಿ, ಉರಿಯುವ ಬೆಂಕಿ, ಸುರಿಯುವ ಮಳೆಯ ಬಗ್ಗೆ ಜನಪದ ಗುಂಪು ಭಯ, ವಿಸ್ಮಯವನ್ನು ತೋರಿ ಅವುಗಳಲ್ಲಿ ಅತಿಮಾನುಷ ಶಕ್ತಿ ಇದೆ ಎಂದು, ಅವುಗಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿತು. ಇಂತಹ ಅನುಭವಗಳು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಒಂದೇ ಆದುದರಿಂದ ಇಡೀ ಜನಪದ ವೃಂದ ತನ್ನ ರಕ್ಷಣೆಗಾಗಿ, ಅಗೋಚರ ಶಕ್ತಿಯನ್ನು ಗಾಢವಾಗಿ ನಂಬಿ, ದೈವೀಕರಣಗೊಳಿಸಿ, ಪೂಜಿಸುವ ಆರಾಧಿಸುವ ಪರಂಪರೆ ಜಗತ್ತು ಅನೇಕ ಜನಪದ ಗುಂಪುಗಳಿಗೆ ರೂಢಿಗೆ ಬಂದಿತು. ಈ ನಂಬಿಕೆಗಳು ಕ್ರಿಯೆಯ ಮೂಲಕ ಆಚರಣೆಗಾಗಿ ಜನಪದ ಸಮುದಾಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡವು.

“ಆಚರಣೆ ಎಂಬುದು ಪ್ರಾದಿಮ ಧಾರ್ಮಿಕ ಕ್ರಿಯೆಯ ಮುಂದುವರಿದ ರೂಪ. ಅತೀಂದ್ರಿಯ ಶಕ್ತಿ ಅಥವಾ ಶಕ್ತಿಗಳಿಂದ ಅನುಗ್ರಹ ಪಡೆಯಲು ಕೈಕೊಂಡ ಕ್ರಿಯೆ ಇದಾಗಿದೆ” ಎಂದು ಮೋನಿಕಾವಿಲ್ಸನ್ ಹೇಳುತ್ತಾರೆ ಕ್ರಮವತ್ತಾದ, ವಿಧಿ ಪೂರ್ವಕವಾದ, ಪರಂಪರಾಗತವಾಗಿ ನಡೆದು ಬಂದ ರೀತಿಯಲ್ಲಿ ನಡೆವ ಇಂಥ ಕ್ರಿಯೆಗಳ ಹಿನ್ನೆಲೆಯಲ್ಲಿ ನಂಬಿಕೆ ಆಳವಾಗಿ ಬೇರು ಬಿಟ್ಟಿರುತ್ತದೆ. ಧರ್ಮ ಇದರ ಅಡಿಗಲ್ಲು. ಧಾರ್ಮಿಕ ವಿಧಿಗಳಿಂದ ತಾನು ನಂಬಿದ ಪವಿತ್ರ ವಸ್ತುಗಳ ಪೀತಿಯನ್ನು ಸಂಪಾದಿಸಬಹುದೆಂದು ಮನುಷ್ಯ ಎಣಿಸುತ್ತಾನೆ. ಇದು ಕ್ರಮವತ್ತಾದ ಅರ್ಚನಾ ಕ್ರಮವೂ ಹೌದು. ಲೌಕಿಕ ಹಿನ್ನೆಲೆಗಳಲ್ಲಿ ಸಂಪ್ರಾದಾಯನಿಷ್ಟ ರೀತಿಯಲ್ಲಿ ನಡೆಸುವ ಒಂದು ಕ್ರಿಯೆಯೂ ಹೌದು.

ಧಾರ್ಮಿಕ ಪಾವಿತ್ರ್ಯದ ಜೊತೆಗೆ ಅತಿಮಾನುಷ ಶಕ್ತಿಗಳ ಭಯವೂ ಮಿಗಿಲಾದುದೇ ಆದುದರಿಂದ ಆಚರಣೆಗಳನ್ನು ಅತ್ಯಂತ ಶ್ರದ್ಧೆಯಿಂದ ನಡೆಸಲಾಗುತ್ತದೆ. ನುಡಿಯಲ್ಲಿ ಸಣ್ಣ ತಪ್ಪಾದರೂ ಅನರ್ಥವಾದೀತೆಂದು ಅಂಜಿಕೆ ಪ್ರತಿಯೊಂದು ಆಚರಣೆಯ ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. ಉಪವಾಸವಿರುವುದು, ಮೀಸಲು ವಸ್ತುಗಳನ್ನು ತೆಗೆದಿಡುವುದು, ಹಿಂದಿನಿಂದ ನಡೆದುಬಂದ ಪದ್ಧತಿಯಲ್ಲಿ ಸ್ಪಲ್ಪವೂ ಲೋಪ ಬರದಂತೆ ಎಚ್ಚರವಹಿಸುವುದು, ಸಂಬಂಧಪಟ್ಟ ವ್ಯಕ್ತಿಯಿಂದಲೇ ಕ್ರಿಯೆಗಳನ್ನು ನಡೆಸುವುದು ಈ ಮುಂತಾದ ಕ್ರಮಗಳನ್ನು ಗಮನಿಸಿದಾಗ ಮತದ ಬಾಹ್ಯಾಚರಣೆಗಳಾದ ಇವು ಬದುಕಿನ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ವೇದ್ಯವಾಗುತ್ತದೆ.

ಆಚರಣೆಯ ಸಂದರ್ಭದಲ್ಲಿ ಕತ್ತಿ, ಭಲ್ಲೆ, ಬೆತ್ತ ತ್ರಿಶೂಲ ಮುಂತಾದ ಗೊತ್ತಾದ ವಸ್ತುಗಳು ಆಯುಧ ವಿಶೇಷಗಳೂ ಹೌದು. ಆಚರಣೆಯ ಸಾಧನೆಗಳು ಹೌದು ಸಾಮಾನ್ಯವಾಗಿ ಆಚರಣೆಯಲ್ಲಿ ಮೂರು ಮಜಲುಗಳನ್ನು ಕಾಣಬಹುದು. ೧. ಪ್ರಾರ್ಥನೆ ೨. ಅರ್ಪಣೆ ೩. ದೈಹಿಕ ಸಂಜ್ಞೆಗಳು ಮತ್ತು ಇತರ ಕ್ರಿಯೆಗಳು.

ಹೊಸೂರಮ್ಮನ ಆಚರಣೆಗಳು

ಹೊಸೂರಮ್ಮನಿಗೆ ಪ್ರತಿದಿನ ಪೂಜೆ ನಡೆಯುತ್ತದೆ. ಮಂಗಳವಾರ ಮತ್ತು ಶುಕ್ರವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ಮೊದಲು ಹೊಸೂರಮ್ಮನಿಗೆ ಪ್ರತಿ ಮಂಗಳವಾರ ಪಲ್ಲಕ್ಕಿ ಪೂಜೆ ನಡೆಯುತ್ತಿತ್ತು. ಈಗ ಅದನ್ನು ಕೈಬಿಡಲಾಗಿದೆ. ಜೊತೆಗೆ ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ವಿಶೇಷ ಪೂಜೆಗಳು ಜರುಗುತ್ತವೆ. ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳೆಂದರೆ:

೦೧. ಕುಂಕುಮಾರ್ಚನೆ
೦೨. ಹಾಲು ಪರಮಾನ್ನ
೦೩. ಪಂಚಾಮೃತಾಭಿಷೇಕ
೦೪. ಪಂಚ ಭಕ್ಷ್ಯಗಳು
೦೫. ಕ್ಷೀರಾಭಿಷೇಕ
೦೬. ಮಹಾಪೂಜೆ
೦೭. ಸಹಸ್ರನಾಮ
೦೮. ಮಂಗಳಾರತಿ
೦೯. ಸಮರ್ಪಣಾ ಕಾಣಿಕೆ
೧೦. ಅಲಂಕಾರ ಪೂಜೆ
೧೧. ಕರ್ಪೂರ ಮಂಗಳಾರತಿ
೧೨. ಶಾಶ್ವತ ಪೂಜೆ ಪ್ರತಿ ವರ್ಷದಲಿ ಒಂದು ದಿನ

ವಾರ್ಷಿಕಾವರ್ತನದಲ್ಲಿ ನಡೆಯುವ ಆಚರಣೆಗಳು

ಚೈತ್ರ ಮಾಸದಲ್ಲಿ ಯುಗಾದಿ ಉತ್ಸವ

ಯುಗಾದಿ ಪಾಡ್ಯದ ದಿನ ದೀವಿಗೆ ವಿಶೇಷ ಅಭಿಷೇಕದಿಂದ ಪೂಜೆ ಮಾಡುತ್ತಾರೆ. ಅದೇ ದಿನ ಸಂಜೆ ಗ್ರಾಮಸ್ಥರು ಸೇರಿ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಜನ ಜೀವನದ ಮುಂದಿನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ.

ವೈಶಾಖ ಮಾಸದಲ್ಲಿ ವಸಂತೋತ್ಸವ

ವಸಂತೋತ್ಸವದಲ್ಲಿ ದೇವಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಪೂಜೆಯ ನಂತರ ಭಕ್ತಾದಿಗಳಿಗೆ ಪ್ರಸಾದ ಸಂತರ್ಪಣೆ ಇರುತ್ತದೆ.

ವಾರ್ಷಿಕ ಜಾತ್ರೆ

ಜ್ಯೆಷ್ಠ ಶುದ್ಧಪ್ರತಿ ಪದೆಯಿಂದ ಆರಂಭವಾಗಿ ಪೌರ್ಣಮಿಯವರೆಗೆ ನಡೆಯುತ್ತದೆ.

ಆಷಾಢ

ಆಷಾಢ ಮಾಸದಲ್ಲಿ ಕರ್ನಾಟಕ ಸಂಕ್ರಮಣ ದಿನಂದು ದೇವಿಗೆ ವಿಶೇಷ ಪೂಜೆ ಹಾಗೂ ನೈವೇದ್ಯವನ್ನು ಅರ್ಪಿಸಲಾಗುತ್ತದೆ.

ಶ್ರಾವಣ

ಶ್ರಾವಣಮಾಸದಲ್ಲಿ ನಾಗರಪಂಚಮಿಯಲ್ಲಿ ಹೊಸೂರಮ್ಮನ ತಾಯಿ ಮುದ್ದಮ್ಮನ ವಿಶೇಷ ಪೂಜೆ ನಡೆಯುತ್ತದೆ.

ಭಾದ್ರಪದ ಮಾಸ

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮೂರು ಅಥವಾ ಐದು ದಿನಗಳ ನಂತರ ಗಣೇಶನನ್ನು ನದಿಯಲ್ಲಿ ವಿಸರ್ಜಿಸಲಾಗುತ್ತದೆ.

ಆಶ್ವೀಜಮಾಸ

ಆಶ್ವೀಜ ಶುದ್ಧ ಪಾಡ್ಯದ ದಿನದಿಂದ ವಿಜಯದಶಮಿಯವರೆಗೆ ಸತತವಾಗಿ ಒಂಬತ್ತು ದಿನ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ನವರಾತ್ರಿಯಲ್ಲಿ ಹೊಸೂರಮ್ಮನನ್ನು ಮತ್ತು ಪರಶುರಾಮನನ್ನು ತೊಟ್ಟಿಲಲ್ಲಿ ಇಟ್ಟು ಪೂಜಾರಿಯು ತೂಗುತ್ತಾನೆ. ಜೋಗತಿಯರು ಆ ಸಮಯದಲ್ಲಿ ಜೋಗುಳ ಪದಗಳನ್ನು ಹಾಡುತ್ತಾರೆ. ಭಕ್ತಾದಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನೆರವೇರುತ್ತದೆ.

ಕಾರ್ತಿಕ ಮಾಸ

ಹೊಸೂರಮ್ಮ ದೇವಿ ಗುಡಿಯಲ್ಲಿ ಪ್ರತಿ ಕಾರ್ತಿಕ ಮಾಸಕ್ಕೆ ವಿಶೇಷ ಪೂಜೆಗಳು ನಡೆಯುತ್ತವೆ. ಈ ಪೂಜೆ ಸತತವಾಗಿ ಮೂವತ್ತು ದಿನಗಳವರೆಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಿಯನ್ನು ವಿಶೇಷವಾಗಿ ಅಲಂಕಾರದಿಂದ ಶೃಂಗರಿಸಿರುತ್ತಾರೆ. ಹೊಸೂರಮ್ಮನ ಭಕ್ತಾದಿಗಳು ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಿ, ಪ್ರಸಾದ ಇತ್ಯಾದಿಯನ್ನು ತೆಗೆದುಕೊಂಡು ಹೋಗುತ್ತಾರೆ.

ಮಾರ್ಗಶಿರ ಮಾಸ

ಈ ದಿನದಂದು ಹನುಮಂತ ಮತ್ತು ದತ್ತ ಜಯಂತಿಯ ಉತ್ಸವಗಳು ನಡೆಯುತ್ತವೆ.

ಮಾಘ ಮಾಸ (ಭರತ ಹುಣ್ಣಿಮೆ)

ಹೊಸೂರಮ್ಮ ದೇವಿಗೆ ಭರತ ಹುಣ್ಣಿಮೆಯ ದಿನ ವಿಶೇಷ ಪೂಜೆ ನಡೆಯುತ್ತದೆ. ಭರತ ಹುಣ್ಣಿಮೆ ಮರುದಿನ ಮಾತಂಗಿಯರು ಐದು ದಿನಸಿನ ಗುಗ್ಗರಿ ಮಾಡಿ ಹೊಸೂರಮ್ಮ ದೇವಿಗೆ ನೈವೇದ್ಯೆ ಮಾಡುತ್ತಾರೆ. ಮಾತಂಗಿಯರು ಹೊಸೂರಮ್ಮನ ಗುಡಿಗೆ ಬರಬೇಕಾದರೆ ಅವರಿಗೆ ಇಳೇವು ಕೊಡಬೇಕು. ಅಕ್ಕಿ, ಕಾಯಿ, ಎಲೆ ಅಡಿಕೆ ಇತ್ಯಾದಿ ಕೊಟ್ಟ ಮೇಲೆ ಅವರು ಗುಡಿಗೆ ಬರುತ್ತಾರೆ. ಮಾತಂಗಿಯರು ಮೂಲತಃ ಹರಿಜನರು. ಎರಡು ಹೊಸಮಡಿಕೆಯನ್ನು, ತಂದು ಪೂಜೆ ಮಾಡಿ ಅದರಲ್ಲಿ ಎಳೆನೀರು (ಮೊದಲು ಹೆಂಡವನ್ನು ಹಾಕುತ್ತಿದ್ದರು) ಹಾಕುತ್ತಾರೆ. ಅದನ್ನು ಪೂಜಿಸಿ, ನಂತರ ಮಾತಂಗಿಯರು ಅದನ್ನು ಕುಡಿಯುತ್ತಾರೆ. ಇಲ್ಲಿಗೆ ಕಾರ್ಯಕ್ರಮ ಮುಗಿಯುತ್ತದೆ.

ಧನುರ್ಮಾಸದ ಪೂಜೆ

ಧನುರ್ಮಾಸ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಅದಕ್ಕೆ ‘ಅಧಿಕ’ ಮಾಸ ಎಂದು ಕರೆಯುತ್ತಾರೆ. ಧನುರ್ಮಾಸದಲ್ಲಿ ಹೊಸೂರಮ್ಮನ ವಿಶೇಷ ಪೂಜೆಗಳು ನಡೆಯುತ್ತವೆ. ೨೮ ದಿನಗಳವರೆಗೆ ವಿಶೇಷ ಪೂಜೆಗಳು ನಡೆಯುತ್ತವೆ.

ಹುಲಿಗೆಮ್ಮನ ಆಚರಣೆಗಳು

ಪ್ರತಿ ಮಂಗಳವಾರ

ಪ್ರತಿ ಮಂಗಳವಾರಕೊಮ್ಮೆ ಶ್ರೀ ಕ್ಷೇತ್ರ ಹುಲಿಗೆಮ್ಮ ದೇವಿಯ ಪಲ್ಲಕ್ಕಿ ಸೇವೆ ಹಾಗೂ ತೊಟ್ಟಿಲ ಸೇವೆ ನಡೆಯುತ್ತದೆ. ಶ್ರೀದೇವಿ ಹುಲಿಗೆಮ್ಮನ ಭಕ್ತಾದಿಗಳು ಪಲ್ಲಕ್ಕಿ ಸೇವೆ ಹಾಗೂ ತೊಟ್ಟಿಲ ಸೇವೆಯ ಸಂದರ್ಭದಲ್ಲಿ ಹಾಜರಿರುತ್ತಾರೆ. ತೊಟ್ಟಿಲ ಸೇವೆ ಹಾಗೂ ಪಲ್ಲಕ್ಕಿ ಸೇವೆಯ ಸಂದರ್ಭದಲ್ಲಿ ಹಾಜರಿರುತ್ತಾರೆ. ಶ್ರೀ ಕ್ಷೇತ್ರ ಹುಲಿಗೆಮ್ಮ ನಿಗೆ ವಿಶೇಷ ಪೂಜೆಗಳು ನಡೆಯುತ್ತವೆ.

ಪ್ರತಿ ಹುಣ್ಣಿಮೆಯ ದಿನ

ಪ್ರತಿ ಹುಣ್ಣಿಮೆಯ ದಿನ ಶ್ರೀ ಕ್ಷೇತ್ರ ಹುಲಿಗೆಮ್ಮನ ತೇರನ್ನು ಎಳೆಯುತ್ತಾರೆ. ಶ್ರೀದೇವಿ ಹುಲಿಗೆಮ್ಮನ ಮೂರ್ತಿಯನ್ನು ರಥದಲ್ಲಿ ಇಟ್ಟು ಭಕ್ತಾದಿಗಳು ತೇರನ್ನು ಎಳೆಯುತ್ತಾರೆ. ಗುಡಿಯ ಸುತ್ತ ತೇರನ್ನು ಎಳೆಯುತ್ತಾರೆ. ಶ್ರೀದೇವಿ ಹುಲಿಗೆಮ್ಮ ನ ತೇರನ್ನು ಎಳೆದ ನಂತರ ತೊಟ್ಟಿಲ ಸೇವೆ ನಡೆಯುತ್ತದೆ. ಹುಲಿಗೆಮ್ಮ ನ ತೇರನ್ನು ಪ್ರತಿ ಹುಣ್ಣಿಮೆಯ ರಾತ್ರಿ : ೮.೩೦ರ ಸುಮಾರಿಗೆ ಎಳೆಯುತ್ತಾರೆ. ಆ ಸಮಯದಲ್ಲಿ ಸಹಸ್ರಾರು ಜನ ಭಕ್ತಾದಿಗಳು ನೆರೆದಿರುತ್ತಾರೆ.

ಆಗಿ ಹುಣ್ಣಿಮೆ

ಆಗಿ ಹುಣ್ಣಿಮೆ ಆದ ಮಾರನೇ ದಿನಕ್ಕೆ ಹುಲಿಗೆಮ್ಮ ದೇವಿಗೆ ಕಂಕಣವನ್ನು ಕಟ್ಟುತ್ತಾರೆ. ಕಂಕಣ ಕಟ್ಟಿದ ಮೇಲೆ ಶ್ರೀದೇವಿ ಹುಲಿಗೆಮ್ಮನ ಶುಭ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ಒಂಭತ್ತು ದಿನ ಜಾತ್ರೆ ನಡೆಯುವ ಶುಭ ಸೂಚನೆ.

ಕಾರ ಹುಣ್ಣಿಮೆ

ಶ್ರೀದೇವಿ ಹುಲಿಗೆಮ್ಮನಿಗೆ ಆಗಿ ಹುಣ್ಣಿಮೆಗೆ ಕಂಕಣವನ್ನು ಕಟ್ಟಿದ್ದನ್ನು ಕಾರಿ ಹುಣ್ಣಿಮೆಗೆ ಬಿಚ್ಚುತ್ತಾರೆ. ಒಂದು ತಿಂಗಳವರೆಗೆ ಜಾತ್ರೆ ನಡೆಯುತ್ತದೆ ಕಾರಿ ಹುಣ್ಣಿಮೆಗೆ ಕಂಕಣವನ್ನು ಬಿಚ್ಚುತ್ತಾರೆ. ಹುಲಿಗೆಮ್ಮ ದೇವಿಯ ಪಾದಗಟ್ಟಿ ಹತ್ತಿ ನಿಂತು ಕಹಳೆ ಊದುತ್ತಾರೆ. ಆ ಸಮಯದಲ್ಲಿ ಹುಲಿಗೆಮ್ಮನ ಕಂಕಣವನ್ನು ಬಿಚ್ಚುತ್ತಾರೆ.

ಭಾರತ ಹುಣ್ಣಿಮೆ

ಭಾರತ ಹುಣ್ಣಿಮೆಗೆ ಶ್ರೀದೇವಿ ಹುಲಿಗೆಮ್ಮನಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಇಂದು ಶ್ರೀದೇವಿ ಹುಲಿಗೆಮ್ಮನ ಭಕ್ತಾದಿಗಳ ಮನೆಯಲ್ಲಿ ಹುಲಿಗೆಮ್ಮನಿಗೆ ಎಡೆ ಹಾಕುವ ಕಾರ್ಯಕ್ರಮವಿರುತ್ತದೆ. ಭಾರತ ಹುಣ್ಣಿಮೆ ದಿನ ರಾತ್ರಿ ಶ್ರೀದೇವಿ ಹುಲಿಗೆಮ್ಮನಿಗೆ ಎಡೆ ಹಾಕುತ್ತಾರೆ. ಭಾರತ ಹುಣ್ಣಿಮೆಗೆ ಶ್ರೀದೇವಿ ಹುಲಿಗೆಮ್ಮನಿಗೆ ಎಡೆ ಹಾಕುವವರೆಗೆ ಸುಮಾರು ೨೦ ದಿನಗಳವರೆಗೆ, ಪಲ್ಲೇ, ಕೆಲವು ತರಕಾರಿ, ಸಿಹಿ ಊಟ. ಐದು ದಿನಸಿನ ಗುಗ್ಗರಿಯನ್ನು ಮನೆಯಲ್ಲಿ ಮಾಡುವಂತೆ ಇಲ್ಲ. ತಿನ್ನುವಂತೆ ಇಲ್ಲ. ಭಾರತ ಹುಣ್ಣಿಮೆಗೆ ಹುಲಿಗೆಮ್ಮನ ಭಕ್ತಾದಿಗಳು ಊಟ ಮಾಡುತ್ತಾರೆ. ಶ್ರೀ ಹುಲಿಗೆಮ್ಮ ದೇವಿ ಗರ್ಭಿಣಿ ಇರುವುದರಿಂದ ನೈವೇದ್ಯ ಹಾಕುತ್ತಾರೆ. ಇದೊಂದು ಸಡಗರ ಹಬ್ಬವಾಗಿ ಹುಲಿಗೆಮ್ಮನ ಭಕ್ತಾದಿಗಳಲ್ಲಿ ಕಂಡುಬರುತ್ತದೆ.

ಹಂಪಿ ಹುಣ್ಣಿಮೆ

ಹಂಪಿ ಹುಣ್ಣಿಮೆಯ ದಿನ ಶ್ರೀದೇವಿ ಹುಲಿಗೆಮ್ಮನಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ನೈವೇದ್ಯ ಕಾರ್ಯಕ್ರಮ ನಡೆಯುತ್ತದೆ. ಹುಲಿಗೆಮ್ಮನ ಭಕ್ತಾದಿಗಳ ಮನೆಯಲ್ಲಿ ಹಂಪಿ ಹುಣ್ಣಿಮೆಗೆ ಶ್ರೀದೇವಿ ಹುಲಿಗೆಮ್ಮ ಮುತ್ತೈದೆ ಆಗಿರುತ್ತಾಳೆ. ಆದುದರಿಂದ ಸಡಗರ ಬಳೆ, ಮೂಗುತಿ, ಸರ, ಇತ್ಯಾದಿ ಆಭರಣಗಳಿಂದ ಶ್ರೀದೇವಿ ಹುಲಿಗೆಮ್ಮನ ಶೃಂಗಾರ ಮಾಡಿರುತ್ತಾರೆ. ಆಗ ತೊಟ್ಟಿಲಲ್ಲಿ ಕೂಡಿಸಿ, ಶ್ರೀದೇವಿ ಹುಲಿಗೆಮ್ಮನನ್ನು ತೂಗಿಸುತ್ತಾರೆ. ಈ ಸಮಯದಲ್ಲಿ ಭಕ್ತಾದಿಗಳು ನೆರೆದಿರುತ್ತಾರೆ.

ದಸರಾ ಹಬ್ಬದ ವಿಶೇಷ ಪೂಜೆಗಳು

ಹೊನ್ನೂರ ಮಟ್ಟಿ ಎಂಬುದು ಶ್ರೀದೇವಿ ಹುಲಿಗೆಮ್ಮನ ತವರುಮನೆ. ಅಲ್ಲಿ ಶ್ರೀದೇವಿ ಹುಲಿಗೆಮ್ಮನಿಗೆ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ ಅಲ್ಲಿಂದ ಹುಲಿಗೆಮ್ಮ ದೇವಿಯನ್ನು ಮರಳಿ ಗುಡಿಗೆ ಕರೆದುಕೊಂಡು ಬರುತ್ತಾರೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಹ ಸೇರಿರುತ್ತಾರೆ. ಶ್ರೀದೇವಿ ಹುಲಿಗೆಮ್ಮ ಗುಡಿಗೆ ಬಂದ ನಂತರ ತೊಟ್ಟಿಲ ಸೇವೆ ನಡೆಯುತ್ತದೆ. ನವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ನಡೆಯುತ್ತವೆ. ಗುಡಿಯನ್ನು ಚೆನ್ನಾಗಿ ಸಾರಿಸಿ ಮೇಲೆ ಮಂಟಪ ತಯಾರು ಮಾಡುತ್ತಾರೆ. ಬಾಳೆ ಕಂಬದಿಂದ ಮಂಟಪವನ್ನು ತಯಾರು ಮಾಡುತ್ತಾರೆ. ಎಂಟು ಪೂಜೆಗಳು ಬಂದರೆ ಎಂಟು ದಿನ, ಒಂಬತ್ತು ಪೂಜೆಗಳು ಬಂದರೆ, ಒಂಬತ್ತು ದಿನ ಪೂಜೆಗಳು ನಡೆಯುತ್ತವೆ. ಪ್ರತಿ ಪೂಜೆಗಳಲ್ಲಿ ಶ್ರೀದೇವಿ ಹುಲಿಗೆಮ್ಮನ ಮೂರ್ತಿಯನ್ನು ಮೊದಲ ದಿನ ಹುಲಿಮೇಲೆ ಕೂಡಿಸುತ್ತಾರೆ. ಎರಡನೇ ದಿನ ಸಿಂಹದ ಮೇಲೆ ಕೂಡಿಸುತ್ತಾರೆ. ಮೂರನೇ ದಿನ ಕುದುರೆ (ಹಿತ್ತಾಳೆ) ಮೇಲೆ ಕೂಡಿಸುತ್ತಾರೆ. ನಾಲ್ಕನೇ ದಿ ಆನೆ ಮೇಲೆ ಕೂಡಿಸುತ್ತಾರೆ. ಐದನೇ ದಿನ ಸರ್ಪದ ಮೇಲೆ ಕೂಡಿಸುತ್ತಾರೆ, ಅರನೇ ದಿನ ನವಿಲಿನ ಮೇಲೆ ಕೂಡಿಸುತ್ತಾರೆ – ಹೀಗೆ ಎಂಟು ಅಥವಾ ಒಂಭತ್ತು ಪೂಜೆಗಳು ಮುಗಿದ ನಂತರ “ದಸಮಿ ದಂಡು” (ಕಟ್ಟಿಗೆಯಿಂದ) ತಯಾರು ಮಾಡಿರುತ್ತಾರೆ. ಶ್ರೀದೇವಿ ಹುಲಿಗೆಮ್ಮನನ್ನು ಬನ್ನಿಗಿಡಕ್ಕೆ ಕರೆದುಕೊಂಡು ಹೋಗುತ್ತಾರೆ. ಆ ಸಮಯದಲ್ಲಿ ಊರಿನ ರೈತರು, ಊರಿನ ಮುಖಂಡರು, ಗಣ್ಯ ವ್ಯಕ್ತಿಗಳು, ಸಮಸ್ತ ಜನರೆಲ್ಲ ಅಂದರೆ, ಮೋಡಿಯವರು, ಅಗಸರು, ನಾಯಕರು – ಇತ್ಯಾದಿ ಸಿಬ್ಬಂದಿ ಜೊತೆಗೂಡಿ ಹೋಗುತ್ತಾರೆ. ಶ್ರೀದೇವಿ ಹುಲಿಗೆಮ್ಮನ “ಬಾಕನ್ನು” ಸಹ ತೆಗೆದುಕೊಂಡು ಹೋಗುತ್ತಾರೆ. ಬನ್ನಿಗಿಡದ ಬಳಿ ಶ್ರೀದೇವಿ ಹುಲಿಗೆಮ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ. ಬನ್ನಿಗಿಡ (ಕಟ್ಟೆ) ಯಲ್ಲಿ ಶ್ರೀದೇವಿ ಹುಲಿಗೆಮ್ಮ ಬನ್ನಿ ಮುಡಿಯುತ್ತಾಳೆ. ಬನ್ನಿ ಮುಡಿದ ನಂತರ ಊರೊಳಗೆ ಡೊಳ್ಳು, ವಾದ್ಯಗಳೊಂದಿಗೆ ಗುಡಿಗೆ ಬರುತ್ತಾಳೆ. ಇದೊಂದು ಹಬ್ಬವಾಗಿ ಊರೊಳಗೆ ಸಿಹಿ ಊಟದೊಂದಿಗೆ ಹೊಸ ಬಟ್ಟೆಯನ್ನು ಎಲ್ಲರೂ ತೊಟ್ಟಿರುವುದು ಎದ್ದು ಕಾಣುತ್ತದೆ.

ಜಾತ್ರೆ

ಜಾತ್ರೆ’ ಎನ್ನುವುದು ಯಾತ್ರಾ, ಯಾತ್ರೆಗಳ ತದ್ಭವ ರೂಪ. ವ್ಯಾಪಾರ ವ್ಯವಹಾರಗಳೊಂದಿಗೆ ಜಲಪದರಿಗೆ ಮನರಂಜನೆಯನ್ನೂ ಒದಗಿಸುವ, ವರ್ಷದ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ಸಾಮಾಜಿಕ ಚಟುವಟಿಕೆ. ಪ್ರಸಿದ್ಧ ಕ್ಷೇತ್ರ ದರ್ಶನ ಮಾಡಲು ಜನ ಯಾತ್ರೆ ಹೋಗುತ್ತಾರೆ. ವರ್ಷಕ್ಕೊಮ್ಮೆ ಅಂಥ ಸ್ಥಳಗಳಲ್ಲಿ ಜನರ ಜಾತ್ರೆ ಸೇರುತ್ತದೆ. ಪ್ರಸಿದ್ಧ ದೇವರಿಗೆ ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವ ಕಾಲ ಜಾತ್ರೆಗೆ ಪ್ರಶಸ್ತ ಕಾಲ.

“ಪ್ರತಿ ನಿತ್ಯವೂ ಪ್ರತಿ ಕ್ಷಣವೂ ನಿಸರ್ಗದ ಮಡಿಲಲ್ಲಿ ನಿರಂತರವಾಗಿ ಶ್ರಮವಹಿಸಿ ದುಡಿಯುವ ಜನತೆ, ಆ ಬದುಕಿನಲ್ಲಿ ಸ್ಪಲ್ಪ ವಿರಾಮ ಪಡೆದು ನೆಮ್ಮದಿಯ ಉಸಿರು ಬಿಡಲು ಹಬ್ಬ, ತೇರು, ಉತ್ಸವ, ಜಾತ್ರೆ ಮೊದಲಾದ ಸಾಮೂಹಿಕ ಆಚರಣೆಗಳನ್ನು ಕಂಡುಕೊಂಡರು. ಈ ಆಚರಣೆಗಳೆಲ್ಲ ಹುಟ್ಟಿಕೊಂಡಿದ್ದು ಸಂತೋಷದ ಜೀವನವನ್ನು ನಡೆಸಬೇಕೆಂದು ಎಂಬ ಉದ್ದೇಶದಿಂದ ಈ ವಿಧಿಗಳೆಲ್ಲ ಜಾನಪದ ಭಾಗವೇ ಆಗಿರುವುದರಿಂದ ಇವುಗಳಲ್ಲಿ ವೈಯಕ್ತಿಕ ಕಾಳಜಿಗಿಂತ ಸಮಷ್ಟಿಯ, ಹಿತಾಸಕ್ತಿಯ ಕಡೆಗೇ ಒಲವು ಮೂಡಿತು. ಸಮಾಜದ ಹಿತರಕ್ಷಣೆಯೇ ಇವುಗಳ ಮುಖ್ಯ ಉದ್ದೇಶವಾಯಿತು. ಇಂಥ ಉದ್ದೇಶವನ್ನು ಅಭಿವ್ಯಕ್ತಿಸುವ ಹಲವು ಆಚರಣೆಗಳಲ್ಲಿ ಜಾತ್ರೆಗಳು ತುಂಬಾ ಪ್ರಮುಖ ಪಾತ್ರವಹಿಸುತ್ತವೆ” (ಹಂಪ ನಾಗರಾಜಯ್ಯ : ೧೯೮೫ : ೯)

ಜಾತ್ರೆಗಳನ್ನು ಅವು ನಡೆಯುವ ಊರು ಮತ್ತು ಉತ್ಸವ ನಡೆಯುವ ದೇವರ ಹೆಸರುಗಳಿಂದ ಕರೆಯುತ್ತಾರೆ. ಇದರಂತೆಯೇ ಕೆಲವು ಸಂದರ್ಭಗಳಲ್ಲಿ ಗ್ರಹಯೋಗ ವಿಶೇಷದಿಂದ ಪುಣ್ಯ ನದಿಗಳ ಸ್ನಾನಕ್ಕಾಗಿ ಜನ ಒಂದು ನಿರ್ದಿಷ್ಟ ಕಾಲದಲ್ಲಿ ಒಂದೆಡೆಯಲ್ಲಿಯೇ ಸ್ನಾನಪಾನ ಮೊದಲಾದವುಗಳನ್ನು ಮಾಡುವುದಕ್ಕಾಗಿ ಸೇರುತ್ತಾರೆ. ಇವೂ ಜಾತ್ರೆಗಳೇ, ಇವನ್ನು ಮೇಳ ಎಂದು ಸಹ ಕರೆಯುತ್ತಾರೆ.

ಈ ಜಾತ್ರೆಗಳು ಮತದ ದೃಷ್ಟಿಯಿಂದಲ್ಲದೇ ಸಮಾಜದ ದೃಷ್ಟಿಯಿಂದಲೂ ಮುಖ್ಯವಾಗಿವೆ. “ಜಾತ್ರೆ ಎಷ್ಟರಮಟ್ಟಿಗೆ ಜನಸಾಮನ್ಯರ ಧಾರ್ಮಿಕ ಪ್ರವೃತ್ತಿಯ ಅಭಿವ್ಯಕ್ತಿಯಾಗಿದೆಯೋ ಅಷ್ಟರಮಟ್ಟಿಗೆ ಅವರ ಕಲಾತ್ಮಕ ಅಭಿವ್ಯಕ್ತಿಯೂ ಆಗಿರುತ್ತದೆ (ಶಂಕರ ನಾರಾಯಣ : ೧೯೭೮ : ೯). ಜನರು ಪರಸ್ಪರ ಕಲಿತು ಅವರ ನಡುವಣ ಸಂಪರ್ಕ ಹೆಚ್ಚಲು ಜಾತ್ರೆಗಳಲ್ಲಿ ಜನರ ಗುಂಪು ಅಧಿಕವಾಗಿರುವುದರಿಂದ ವ್ಯಾಪಾರಿಗಳಿಗೆ ಅದೊಂದು ಒಳ್ಳೆಯ ಕಾಲ. ದನಗಳ ಪ್ರದರ್ಶನ, ಕ್ರಯ ವಿಕ್ರಯಗಳು ಇಲ್ಲಿ ನಡೆಯುತ್ತವೆ. ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ವ್ಯವಹಾರಿಕ ಪ್ರಾಮುಖ್ಯ ಉಳ್ಳವಾಗಿ ಆಯಾ ಸ್ಥಳದ ವಿಶಿಷ್ಟ ಪದಾರ್ಥಗಳು ವಿಲೇವಾರಿಯಾಗಲು ಜಾತ್ರೆಗಳು ಸಹಾಕವಾಗಿವೆ. ಹಲವು ಜಾತೆಗಳು ಒಳ್ಳೆಯ ವ್ಯಾಪಾರ ಕೇಂದ್ರಗಳೆನಿಸಿವೆ. ಹೂವು, ಹಣ್ಣು , ಕಾಯಿ, ಸಕ್ಕರೆ, ಕರ್ಪೂರ, ಚಿತ್ರಗಳು. ಸ್ಥಳ ಮಹಿಮೆ ಪುಸ್ತಕಗಳು ಇತ್ಯಾದಿಗಳ ವ್ಯಾಪಾರವೇ ಹೆಚ್ಚು ಇವುಗಳಿಂದ ಸರ್ಕಾರಕ್ಕೆ ಪ್ರತ್ಯಕ್ಷ ತೆರಿಗೆಗಳ ಮೂಲಕ ಅಪಾರ ಆದಾಯ ಉಂಟು.”

ನಮ್ಮ ನಾಡಿನಲ್ಲಿ ಜರುಗುವ ಎಲ್ಲ ಜಾತ್ರೆಗಳ ಸ್ವರೂಪ ಅವುಗಳ ಹಿನ್ನೆಲೆ ಒಂದೇ ರೀತಿಯಾಗಿರುವುದು ಕಂಡುಬಂದರೂ, ಶಿಷ್ಟ ದೇವರುಗಳ ಸಮ್ಮುಖದಲ್ಲಿ ಜರುಗುವ ಜಾತ್ರೆಗಳಿಗಿಂತ ಗ್ರಾಮೀಣರು ನಡೆಸುವ ಜಾತ್ರೆಗಳು ಭಿನ್ನವಾಗಿರುತ್ತವೆ. ಶಿಷ್ಟ ದೇವರ ಜಾತ್ರೆಗಳಿಗೆ ಪುರಾಣದ ಹಿನ್ನೆಲೆ ಇರುತ್ತದೆ. ಪೂಜಾ ರೀತಿಗಳೆಲ್ಲವೂ ಶಾಸ್ತ್ರಬದ್ಧವಾಗಿಯೇ ನಡೆಯುತ್ತವೆ. ತಿಥಿ, ವಾರ, ನಕ್ಷತ್ರಗಳನ್ನು ಅವಲಂಬಿಸಿರುತ್ತವೆ. ಆಗಮಗಳ ಹಿನ್ನೆಲೆಯಲ್ಲಿ ನಡೆಯುವ ಮೇಲು ವರ್ಗದ ಜಾತ್ರೆಗಳು ಒಮ್ಮೊಮ್ಮೆ ಸರ್ಕಾರದ ಅಧೀನದಲ್ಲಿ ಜರುಗುವುದು ಉಂಟು. ಬೆಂಗಳೂರು ಕರಗ, ತಲಕಾಡು ಜಾತ್ರೆ, ಶ್ರವಣಬೆಳಗೊಳದ ಗೊಮ್ಮಟ ಮಹೋತ್ಸವ ಇವು ಅಂಥವುಗಳಲ್ಲಿ ಕೆಲವು (ಹಂಪ ನಾಗರಾಜಯ್ಯ : ೧೯೮೫ : ೧೦).

ಇಂಥ ಜಾತ್ರೆಗಳು ಭಾರತ ದೇಶಕ್ಕೆ ಮಾತ್ರ ಸೀಮಿತವೇನೂ ಅಲ್ಲ. ಪ್ರಪಂಚದ ನಾನಾ ದೇಶಗಳಲ್ಲೂ ಈ ತೆರನಾದ ಉತ್ಸವಗಳು ಉಂಟು. ಸಿರಿಯಾ, ಪ್ಯಾಲಸ್ಟೈನ್‌, ಮೆಸಪೊಟೇಮಿಯಾ ಕಣಿವೆ, ಈಜಿಪ್ಟ್‌, ಅರೇಬಿಯಾಗಳಿಗೆ ಭೇಟಿಕೊಟ್ಟ ವ್ಯಾಪಾರಿಗಳು ಈ ಬಗೆಯ ಜಾತ್ರೆಗಳನ್ನು ಕುರಿತು ಹೇಳಿದ್ದಾರೆ. ಗ್ರೀಸಿನ ಹಿಮಾಸ್ತನೀಸ ವರ್ಷಕ್ಕೆ ಆರು ತಿಂಗಳಿಗೆ ದೇವರ ಹೆಸರಿನಲ್ಲಿ ಐಥೋರಿಯಾದಲ್ಲಿ ನಡೆಯುವ ಜಾತ್ರೆಗಳನ್ನು ಪಾಸನಿಯಸ್‌ ಹೇಳಿದ್ದಾನೆ. ಅಲ್ಲಿ ನಡೆಯುವ ಜನಗಳು (ಗುಲಾಮರ), ದನಗಳ, ಬೆಳ್ಳಿ ಬಂಗಾರ, ವಸ್ತು, ಉಡುಪುಗಳ ಇತರ ಸರಕುಗಳ ವ್ಯಾಪಾರವನ್ನು ಬಣ್ಣಿಸಿದ್ದಾರೆ. ರೋಮ್‌, ಜರ್ಮನಿ, ಫ್ರಾನ್ಸ್‌, ಇಟಲಿ ದೇಶಗಳ ಅತ್ಯಂತ ಪ್ರಾಚೀನತಮ ಜಾತ್ರೆ ಎಂದರೆ ಫೆರಾರ ಎಂದು ಹೇಳಲಾಗಿದೆ.

ಜಾತ್ರೆಯಲ್ಲಿ ಭಾಗವಹಿಸಲು ಬಂದಿರುವ ಭಕ್ತರ ಸಮೂಹ ದೇವರ ಬಗೆಗೆ ಇರುವ ಭಯ ಭಕ್ತಿಗಳನ್ನು ದೃಢೀಕರಿಸುತ್ತಾ ಹೋಗುತ್ತಾರೆ. ಆದ್ದರಿಂದ ಜಾತ್ರೆಗಳು ಭಕ್ತ ಪರಂಪರೆಯನ್ನು ಮುಂದುವರಿಸುತ್ತಿರುವ ಭಾವನೆಯನ್ನು ಹುರಿಗೊಳಿಸಿ ಸ್ಥಿರೀಕರಿಸುತ್ತವೆ.

ಹೊಸೂರಮ್ಮ ದೇವಿಯ ಜಾತ್ರೆ

ಕಂಕಣಧಾರಣ

ಜಾತ್ರೆಯ ಮೊದಲ ದಿನದಂದು ಹೊಸೂರಮ್ಮ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ. ಅಂದು ದೇವಿಯನ್ನು ನೀರಿನಿಂದ ತೊಳೆದು ಸಂಪೂರ್ಣ ಹೂವು ಬಿಲ್ಪತ್ರಿಗಳಿಂದ ಅಲಂಕಾರಗೊಳಿಸುತ್ತಾರೆ. ಜೊತೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಹಾಗೂ ಮಂತ್ರ ಪಠಣದ ಮೂಲಕ ಮಹಾ ಮಂಗಳಾರತಿ ಜರುಗುತ್ತದೆ. ನಂತರ ದೇವಸ್ಥಾನದೊಳಗಿರುವ ಪಂಚಲೋಹದ (ಕಂಚಿನ) ಮೂರ್ತಿಗಳಾದ ಪರಶುರಾಮ ಮತ್ತು ರೇಣುಕೆಯ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ತುಂಗಭದ್ರಾನದಿಗೆ ಹೋಗುತ್ತಾರೆ. ಅದೇ ಸಂದರ್ಭದಲ್ಲಿ ಗಂಗಮ್ಮನ ಪೂಜೆಯನ್ನು ಹಾಗೂ ಮೂರ್ತಿಗಳ ಪೂಜೆಯನ್ನು ಮಾಡುತ್ತಾರೆ. ದೇವಸ್ಥಾನಕ್ಕೆ ಬಂದ ಮೇಲೆ ಕಂಚಿನ ಮೂರ್ತಿಗಳಿಗೆ ಪೂಜಾರಿಗಳಿಗೂ ಕಂಕಣವನ್ನು ಕಟ್ಟುತ್ತಾರೆ. ಈ ಕಂಕಣ ಕಾರ್ಯಕ್ರಮ ಪ್ರತಿಪದ ಪಾಡ್ಯದ ದಿನದಂದು ರಾತ್ರಿ ಸುಮಾರು ಹತ್ತು ಗಂಟೆಗೆ ನಡೆಯುತ್ತದೆ. ಸಾಧ್ಯವಾದಷ್ಟು ಅಲ್ಲಿನ ಜನರು ತಪ್ಪಿಸದೇ ಈ ಉತ್ಸವಗಳಲ್ಲಿ ಪಾಲ್ಗೊಂಡಿರುತ್ತಾರೆ.

ಮಯೂರ ವಾಹನೋತ್ಸವ

ಮರುದಿನ ಬಿದಿಗಿಯ ದಿನದಂದು ಮಯೂರ ವಾಹನೋತ್ಸವ ಕಾರ್ಯಕ್ರಮ ಆರಂಭವಾಗುತ್ತದೆ. ಮಯೂರ ವಾಹನವೆಂದರೆ, ಕಟ್ಟಿಗೆಯಿಂದ ತಯಾರಿಸಿದ ನವಿಲನ್ನು ಪಲ್ಲಕ್ಕಿಯಲ್ಲಿ ಇಟ್ಟು ಅಲುಗಾಡದಂತೆ , ಹುರಿಯಿಂದ ಕಟ್ಟುತ್ತಾರೆ. ತದನಂತರ ಪರಶುರಾಮ ಹಾಗೂ ರೇಣುಕೆಯ ಮೂರ್ತಿಗಳನ್ನು ಆ ನವಿಲಿನ ಮೇಲೆ ಇಟ್ಟು ಬಿಗಿಯಾಗಿ ಕಟ್ಟುತ್ತಾರೆ. ಪ್ರತಿವರ್ಷ ಜಾತ್ರೆಯ ಉತ್ಸವದಲ್ಲಿ ಉಪಯೋಗಿಸಲು ಈ ಮಯೂರವನ್ನು ಕಟ್ಟಿಗೆಯಿಂದ ಸಿದ್ಧಪಡಿಸಿ ಇಟ್ಟಿರುತ್ತಾರೆ. ಹಾಗೆಯೇ ಇನ್ನುಳಿದ ಆಶ್ವವಾಹನ, ಸಿಂಹವಾಹನ, ಶೇಷವಾಹನ, ಶ್ವೇತವಾಹನ, ಹಾಗೂ ಗೋಪುರವನ್ನು ಪ್ರತಿವರ್ಷ ಉಪಯೋಗಕ್ಕೆ ಬರುವಂತೆ ತಯಾರು ಮಾಡಿರುತ್ತಾರೆ. ಜಾತ್ರಾ ಸಮಯದಲ್ಲಿ ಮಾತ್ರ ಅವುಗಳಿಗೆ ಮತ್ತೊಮ್ಮೆ ಬಣ್ಣವನ್ನು ಹಚ್ಚಿ ಪಲ್ಲಕ್ಕಿಯಲ್ಲಿ ಇಡುತ್ತಾರೆ. ಪೂಜಾರಿಗಳು ಮತ್ತು ಇತರೇ ಜನರು ಕೂಡಿಕೊಂಡು ಮಂಗಳ ವಾದ್ಯಗಳ ಸಮೇತರಾಗಿ ನದಿಗೆ ಹೋಗುತ್ತಾರೆ. ಅಲ್ಲಿ ಗಂಗಮ್ಮನ ಪೂಜೆ ಮಾಡಿಕೊಂಡು ಹಿಂದಿನಂತೆ ವಾಪಸ್ಸು ಗುಡಿಗೆ ಬರುತ್ತಾರೆ. ಉತ್ಸವ ಮೂರ್ತಿಗಳನ್ನು ಮತ್ತು ದೇವಿಯನ್ನು ಪೂಜೆ ಮಾಡುತ್ತಾರೆ. ನಂತರ ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ದೇವಸ್ಥಾನದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕುತ್ತಾರೆ. ಆ ಮೂರ್ತಿಗಳನ್ನು ಮೊದಲಿನ ಸ್ಥಳದಲ್ಲಿ ಇಡುತ್ತಾರೆ.

ಆಶ್ವ ವಾಹನೋತ್ಸವ

ಬೆಳಿಗ್ಗೆ ನಾಲ್ಕೈದು ಗಂಟೆಯ ಹೊತ್ತಿನಲ್ಲಿ ಈ ಉತ್ಸವ ಆರಂಭವಾಗುತ್ತದೆ. ಮಯೂರ ವಾಹನೋತ್ಸವದ ರೀತಿಯಲ್ಲಿಯೇ ಈ ಉತ್ಸವವನ್ನು ಮಾಡುತ್ತಾರೆ. ಕಟ್ಟಿಗೆಯಿಂದ ತಯಾರಾದ ಆಶ್ವವನ್ನು ಪಲ್ಲಕ್ಕಿಯಲ್ಲಿಟ್ಟು ಅಲುಗಾಡದಂತೆ, ಹುರಿಯಿಂದ ಕಟ್ಟುತ್ತಾರೆ. ಅದರ ಮೇಲೆ ಉತ್ಸವ ಮೂರ್ತಿಗಳನಿಟ್ಟು ಕಟ್ಟುತ್ತಾರೆ. ಈ ದಿನವೂ ಸಹ ಎಲ್ಲರೂ ನದಿಗೆ ವಾದ್ಯಗಳ ಸಮೇತರಾಗಿ ನದಿಗೆ ಹೋಗುತ್ತಾರೆ. ಅಲ್ಲಿ ಸ್ನಾನ ಮಾಡಿದ ನಂತರ ಗಂಗಮ್ಮನ ಪೂಜೆಯನ್ನು ಮಾಡಿ ವಾಪಾಸು ದೇವಸ್ಥಾನಕ್ಕೆ ಬರುತ್ತಾರೆ. ತದನಂತರ ಪಲ್ಲಕ್ಕಿಯನ್ನು ಹಿಂದೆ ಮತ್ತು ಮುಂದೆ ಒಬ್ಬೊಬ್ಬರು ಅಥವಾ ಇಬ್ಬಿಬ್ಬರು ಹೆಗಲ ಮೇಲೆ ಹೊತ್ತುಕೊಂಡು ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕುತ್ತಾರೆ. ಇಲ್ಲಿಗೆ ಈ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಸಿಂಹ ವಾಹನೋತ್ಸವ

ಸುಮಾರು ನಾಲ್ಕು ಗಂಟೆಗೆ ಸಿಂಹವಾಹನೋತ್ಸವ ಆರಂಭವಾಗುತ್ತದೆ. ಸಿಂಹದ ಆಕಾರದಲ್ಲಿ ಕಟ್ಟಿಗೆಯಿಂದ ಮಾಡಿದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಹುರಿಯಿಂದ ಕಟ್ಟುತ್ತಾರೆ. ಅದರ ಮೇಲೆ ಉತ್ಸವ ಮೂರ್ತಿಗಳನಿಟ್ಟು ಕಟ್ಟುತ್ತಾರೆ. ವಾದ್ಯಗಳೊಂದಿಗೆ ನದಿಗೆ ಹೋಗುತ್ತಾರೆ. ಅಲ್ಲಿ ಗಂಗಮ್ಮನ ಪೂಜೆಯನ್ನು ಮಾಡಿ ವಾಪಾಸು ದೇವಸ್ಥಾನಕ್ಕೆ ಬರುತ್ತಾರೆ. ಹೊಸೂರಮ್ಮನ ಪೂಜೆ ಹಾಗೂ ಮೂರ್ತಿಗಳ ಪೂಜೆಯಿಂದ ನಂತರ ಪಲ್ಲಕ್ಕಿಯನ್ನು ಹೊತ್ತುಕೊಂಡು ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕುತ್ತಾರೆ.

ಶೇಷ ವಾಹನೋತ್ಸವ

ಬೆಳ್ಳಿಗ್ಗೆ ನಾಲ್ಕು ಗಂಟೆಗೆ ಶೇಷ ವಾಹನೋತ್ಸವ ಪ್ರಾರಂಭವಾಗುತ್ತದೆ. ಕಟ್ಟಿಗೆಯಿಂದ ಮಾಡಲಾದ ಶೇಷವನ್ನು ಪಲ್ಲಕ್ಕಿಯಲ್ಲಿಟ್ಟು ಹುರಿಯಿಂದ ಕಟ್ಟುತ್ತಾರೆ. ನಂತರ ಮೂರ್ತಿಗಳನ್ನಿಡುತ್ತಾರೆ. ಮಂಗಳವಾದ್ಯದೊಂದಿಗೆ ನದಿಗೆ ಹೋಗಿ ಗಂಗಮ್ಮನ ಪೂಜೆ ಮಾಡಿಕೊಂಡು ವಾಪಾಸು ಗುಡಿಗೆ ಬರುತ್ತಾರೆ. ನಂತರ ಪಲ್ಲಕ್ಕಿಯನ್ನು ಹೆಗಲಮೇಲೆ ತೆಗೆದುಕೊಂಡು ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಾರೆ. ಜೋಗತಿಯರು ಹಾಗೂ ಪೂಜಾರಿಗಳು ಈ ಸಂದರ್ಭದಲ್ಲಿ ದೇವಿಯ ಹಾಡುಗಳನ್ನು ಹಾಡುತ್ತಾರೆ.

ಶ್ವೇತ ವಾಹನೋತ್ಸವ

ಬೆಳಿಗ್ಗೆ ಈ ಉತ್ಸವ ಆರಂಭವಾಗುತ್ತದೆ. ಪಲ್ಲಕ್ಕಿಯಲ್ಲಿ ಬಿಳಿ ಬಟ್ಟೆಯನ್ನು ಹಾಕಿ ಅದರ ಮೇಲೆ ಉತ್ಸವ ಮೂರ್ತಿಗಳನ್ನಿಡುತ್ತಾರೆ. ನದಿಗೆ ಹೋಗಿ ಗಂಗಮ್ಮನ ಪೂಜೆ ಮಾಡಿಕೊಂಡು ಬಂದ ನಂತರ ಪಲ್ಲಕ್ಕಿಯನ್ನು ತೆಗೆದುಕೊಂಡು ಪ್ರದಕ್ಷಿಣೆಯನ್ನು ಹಾಕುತ್ತಾರೆ.

ಗೋಪುರೋತ್ಸವ

ಈ ಉತ್ಸವ ಬೆಳಿಗ್ಗೆ ಆರಂಭವಾಗುತ್ತದೆ. ಕಟ್ಟಿಗೆಯಿಂದ ತಯಾರಿಸಲಾದ ಗೋಪುರವನ್ನು ಪಲ್ಲಕ್ಕಿಯಂತೆ, ತಯಾರಿಸಿದ ಬಿದಿರಿನ ಬಂಬುಗಳ ಮೇಲೆ ಬಿಗಿಯಾಗಿ ಕಟ್ಟುತ್ತಾರೆ. ಅಲ್ಲಿ ಉತ್ಸವ ಮೂರ್ತಿಗಳನ್ನು ಇಡುತ್ತಾರೆ. ವಾದ್ಯಗಳೊಂದಿಗೆ, ನದಿಗೆ ಎಲ್ಲರೂ ಹೋಗಿ ಗಂಗಮ್ಮನ ಪೂಜೆಯನ್ನು ಸಲ್ಲಿಸಿ, ಮತ್ತೆ ವಾಪಸು ದೇವಸ್ಥಾನಕ್ಕೆ ಬರುತ್ತಾರೆ. ದೇವಿಯ ವಿಶೇಷ ಪೂಜೆ, ಉತ್ಸವ ಮೂರ್ತಿಗಳ ಪೂಜೆ ಮುಗಿದ ನಂತರ ಗೋಪುರ ಪಲ್ಲಕ್ಕಿಯನ್ನು ಇಬ್ಬರು ಭುಜದ ಮೇಲೆ ಹೊತ್ತುಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆಯನ್ನು ಹಾಕುತ್ತಾರೆ.

ಗಜ ವಾಹನೋತ್ಸವ

ಬೆಳಿಗ್ಗೆ ಸುಮಾರು ೨ ಗಂಟೆ ೩೦ ನಿಮಿಷಕ್ಕೆ ವೀರಶೈವ ಪೂಜಾರಿ ಹಾಗೂ ಬ್ರಾಹ್ಮಣ ಪೂಜಾರಿಗಳೊಡನೆ ಉಳಿದ ಅನೇಕ ಭಕ್ತಾದಿಗಳೆಲ್ಲರೂ ಜೊತೆಗೂಡಿ ಮಂಗಳವಾದ್ಯಗಳೊಡನೆ, ನದಿಗೆ ದೇವಸ್ಥಾನದಿಂದ ಹೋಗುತ್ತಾರೆ. ಕಂಕಣಧಾರಣ ದಿನದಿಂದ ವೀರಶೈವ ಪೂಜಾರಿ ಬಹಳ ಮಡಿಯಿಂದ ಉಪವಾಸ ಇರುತ್ತಾನೆ. ಈತನನ್ನು ಬಹಳ ಮುತುವರ್ಜಿಯಿಂದ ಎಲ್ಲರೂ ನೋಡಿಕೊಳ್ಳುತ್ತಾರೆ. ಒಂದು ಬಂಡಿಯಲ್ಲಿ ಕಟ್ಟಿಗೆಯಿಂದ ತಯಾರಿಸಲಾದ ಗಜವನ್ನು ಅಲುಗಾಡದಂತೆ, ಬಿಗಿಯಾಗಿ ಕಟ್ಟಿ ಆದರಮೇಲೆ ಉತ್ಸವ ಮೂರ್ತಿಗಳನ್ನು ಸಹ ಅಲುಗಾಡದಂತೆ, ಕಟ್ಟಿ ಅಲಂಕಾರ ಮಾಡುತ್ತಾರೆ. ದೇವಸ್ಥಾನದಿಂದ ಮೆರವಣಿಗೆಯ ಮೂಲಕ ನದಿಗೆ ಹೋಗುತ್ತಾರೆ. ಗಂಗಮ್ಮನ ಪೂಜೆಯನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಭಕ್ತಾದಿಗಳೆಲ್ಲರೂ ಸ್ನಾನಾದಿಗಳನ್ನು ಮುಗಿಸುತ್ತಾರೆ. ನಂತರ ಈ ಮೂರ್ತಿಯನ್ನು ವಾಪಸು ದೇವಸ್ಥಾನಕ್ಕೆ ತರುತ್ತಾರೆ. ದಾರಿಯಲ್ಲಿ ಬರುವಾಗ ಪವಾಡದ ಅಂಜನೇಯ, ಬಸವಣ್ಣ, ಊರಮ್ಮ ಇತ್ಯಾದಿ ದೇವರುಗಳಿಗೆ ಪೂಜೆ ಮಾಡುತ್ತಾರೆ. ಪಲ್ಲಕ್ಕಿಯನ್ನು ಹೊತ್ತುಕೊಂಡು ಕೆಲ ಭಕ್ತರು ದೇವಸ್ಥಾನದ ಸುತ್ತಲೂ ಮೂರು ಪ್ರದಕ್ಷಿಣೆಯನ್ನು ಹಾಕುತ್ತಾರೆ. ಉತ್ಸವ ಮೂರ್ತಿಗಳನ್ನು ಮುಖ್ಯ ದೇವಸ್ಥಾನದ ಮುಂದಿನ ಮುಖ ಮಂಟಪದಲ್ಲಿ ಕಟ್ಟಲಾಗಿರುವ ತೊಟ್ಟಿಲಿನಲ್ಲಿ ಇಟ್ಟು ಪೂಜಿಸುತ್ತಾರೆ. ನಂತರ ತೊಟ್ಟಿಲು ತೂಗುತ್ತಾ ತೊಟ್ಟಿಲೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಜೋಗತಿಯರು ದೇವಿಯ ಕುರಿತಾದ ಹಾಡುಗಳನ್ನು ಹಾಡುತ್ತಾರೆ. ಈ ತೊಟ್ಟಿಲೋತ್ಸವವನ್ನು ನೋಡಲು ಬಹಳ ಜನರು ನೆರೆದಿರುತ್ತಾರೆ.

ಬಾಳೆ ದಂಡಿಗೆ

ಈ ಬಾಳೆ ದಂಡಿಗೆಯ ಪವಾಡವು ವೀರಶೈವ ಪೂಜಾರಿಯಿಂದ ನಡೆಯುತ್ತದೆ. ಅತೀ ಚಿಕ್ಕ ಎಳಸಿನಂತಿರುವ ಬಾಳೆದಂಡಿನಿಂದ ಹೊರತೆಗೆದು ಪೂರ್ಣ ಬೇರ್ಪಡಿಸಿ, ಅದರ ಜೊತೆಗೆ ಗಟ್ಟಿಯಾದ ಸುಮಾರು ಮೂರ್ನಾಲ್ಕು ಕಬ್ಬುಗಳನ್ನು ಸೇರಿಸಿ ಅದರ ಮೇಲೆ ಬಾಳೆ ಎಲೆಗಳನ್ನು ಮತ್ತು ಹೂವುಗಳನ್ನು ಚೆನ್ನಾಗಿ ಸುತ್ತಿ ಬಿಗಿಯಾಗಿ ಅಲುಗಾಡದಂತೆ ಕಟ್ಟುತ್ತಾರೆ. ಇದನ್ನು ವೀರಶೈವ ಮನೆಯಲ್ಲಿ ಇಟ್ಟಿರುತ್ತಾರೆ.

ಬೆಳಿಗ್ಗೆ ಸುಮಾರು ಮೂರು ಗಂಟೆಗೆ ಪೂಜಾರಿ ಮತ್ತು ಭಕ್ತರು ವಾದ್ಯಗಳ ಸಮೇತ ನದಿಗೆ ಹೋಗುತ್ತಾರೆ. ಅಲ್ಲಿ ಸ್ನಾನ ಇತ್ಯಾದಿ ಮುಗಿದ ನಂತರ ದೇವಿಯ ಉಗ್ರ ಸ್ವರೂಪದ ಸಂಕೇತವಾಗಿ ಮುಖಕ್ಕೆ ಕುಂಕುಮವನ್ನು ಹಚ್ಚುತ್ತಾರೆ. ಗಂಗಾ ಪೂಜೆಯ ನಂತರ ಗುಡಿಗೆ ಬರುತ್ತಾರೆ. ನದಿಯಿಂದ ಬಂದ ನಂತರ ಅಂಜನೇಯ, ದೇವಸ್ಥಾನದಲ್ಲಿ ಎಲ್ಲರೂ ಬಂದು ಸೇರಿರುತ್ತಾರೆ. ಅಲ್ಲಿಗೆ ತಂದಿಟ್ಟ ಬಟ್ಟೆಗಳಿಗೆ ಅರಿಶಿಷಿಣ ಕುಂಕುಮ ಹಚ್ಚಿ ನಂತರ ಪೂಜೆ ಮಾಡುತ್ತಾರೆ. ವೀರಶೈವ ಪೂಜಾರಿಯನ್ನು ವಾದ್ಯಗಳ ಮೂಲಕ ಮನೆಯಿಂದ ದೇವಾಸ್ಥನಕ್ಕೆ ಕರೆತರಲಾಗುತ್ತದೆ. ನಂತರ ಬಾಳೆದಂಡಿಗೆಯನ್ನು ತೆಗೆದುಕೊಂಡು ಬಂದು ದೇವಸ್ಥಾನದಲ್ಲಿ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ನಂತರ ಈ ಪೂಜಾರಿಯು ಆ ಬಾಳೆದಂಡಿಗೆಯನ್ನು ಏರಿ ಕುಳಿತುಕೊಳ್ಳುತ್ತಾನೆ. ಅದನ್ನು ಇಬ್ಬರು ಹಿಂದೆ ಮತ್ತು ಇಬ್ಬರು ಮುಂದೆ ಭುಜದ ಮೇಲೆ ಹೊತ್ತುಕೊಳ್ಳುತ್ತಾರೆ. ಆಗ ಎಲ್ಲರೂ ಉಧೋ…. ಉಧೋ ಎಂದು ಜೋರಾಗಿ ಹೇಳುತ್ತಾರೆ. ಆ ಬಾಳೆದಂಡಗಿ ಮುರಿಯುವುದಿಲ್ಲ. ಇದನ್ನೇ ದೇವಿಯ ಪವಾಡ ಎಂದು ಭಕ್ತರು ನಂಬುತ್ತಾರೆ. ಮೂರು ಬಾರಿ ದೇವಸ್ಥಾನದ ಪ್ರದಕ್ಷಿಣೆ ಮುಗಿದ ನಂತರ ಗರ್ಭಗುಡಿಯೊಳಗೆ ಪೂಜಾರಿಯನ್ನು ಬಾಳೆದಂಡಿಗೆಯಿಂದ ಕೆಳಗೆ ಇಳಿಸುತ್ತಾರೆ. ಇದಕ್ಕೂ ಮುಂಚಿತವಾಗಿ ಸುಮಾರು ನಾಲ್ಕು ಗಂಟೆಗೆ ಒಂಬತ್ತು ಹೂವಿನ ಪ್ರಸಾದಗಳನ್ನು ಸ್ವೀಕರಿಸಲಾಗುತ್ತದೆ. ಅಂದರೆ ದೇವಿಯನ್ನು ಕೇಳುತ್ತಾರೆ. ದೇವಿಯ ತಲೆಯ ಮೇಲೆ ಇಟ್ಟಿರುವ ಹೂಗಳು ಕೆಳಗೆ ಬೀಳುತ್ತವೆ. ಇದರಿಂದ ಎಲ್ಲಾ ರೀತಿಯ ಉತ್ಸವ ಕಾರ್ಯಗಳು ಸುಗಮವಾಗಿ ನಡೆಯಲ್ಪಡುತ್ತವೆ ಎಂದು ಜನರು ನಂಬುತ್ತಾರೆ. ಆ ಹೂಗಳನ್ನು ಪೂಜಾರಿ ಭಕ್ತರಿಗೆ ಹಂಚುತ್ತಾನೆ. ಭಕ್ತಾದಿಗಳು ಆ ಹೂವನ್ನು ಸ್ವೀಕರಿಸುತ್ತಾರೆ. ಈ ಘಟನೆಯನ್ನು ನೋಡಲು ಸಾವಿರಾರು ಜನರು ಸೇರಿರುತ್ತಾರೆ.