ಹುಲಿಗಿಯ ದೇವಾಲಯದಲ್ಲಿ ಹುಲಿಗೆಮ್ಮನ ಶಿರವೂ, ಹೊಸೂರಿನಲ್ಲಿ ತಂಗಿ ಹೊಸೂರಮ್ಮನೊಂದಿಗೆ ಮುಂಡವೂ ಉಳಿದಿದೆಯೆಂದು ಭಕ್ತ ಪರಂಪರೆ ನಂಬುವ ಹುಲಿಗೆಮ್ಮ ಹಾಗೂ ಹೊಸೂರಮ್ಮ ಈ ಇಬ್ಬರು ದೇವತೆಗಳನ್ನು ಭಕ್ತಾದಿಗಳು ಅಕ್ಕ ತಂಗಿಯರೆಂದು ಪೂಜಿಸುತ್ತಾರೆ. ಇವರುಗಳ ಹೆಸರುಗಳೇ ನೆಲೆಸಿರುವ ಊರುಗಳಿಗೆ ಬಂದಿವೆ. ಜಿಲ್ಲಾವಾರು ದೃಷ್ಟಿಯಿಂದ ದೇವತೆಗಳಿಬ್ಬರೂ ಬೇರೆ ಬೇರೆ ಪ್ರದೇಶಗಳಿಗೆ ಸೇರುತ್ತಾರಾದರೂ ಹರಿವ ತುಂಗಭದ್ರ ನದಿಯ ದಡವು ಇಬ್ಬರನ್ನೂ ಒಂದು ನೆಲೆಗೆ ತರುತ್ತದೆ. ಜನಪದರ ನಂಬಿಕೆಯ ಪ್ರಕಾರ ಹುಲಿಗೆಮ್ಮ ಹಾಗೂ ಹೊಸೂರಮ್ಮ ಮೂಲತಃ ಹೊಸೂರಿನ ಹೆಣ್ಣುಮಕ್ಕಳು. ಅದರಲ್ಲೂ ಒಂದೇ ತಾಯಿಯ ಮಕ್ಕಳಾದ ಇವರು ಅಕ್ಕ-ತಂಗಿಯರು. ಹೊಸೂರಮ್ಮನು ಸಂಪತ್ತನ್ನು ತನ್ನದೆಂದು ಗುರುತಿಸಿ ಕೊಳ್ಲುತ್ತಿರುವಾಗಲೇ, ಹುಲಿಗೆಮ್ಮನು ಜನಪರಳಾಗುತ್ತಾಳೆ. ತನ್ನದೆನ್ನುವ ಎಲ್ಲಾ ವಸ್ತುಗಳನ್ನು ಭಕ್ತರಿಗೆ ಕೊಡುತ್ತಾಳೆ. ಕೊನೆಗೆ ತನ್ನ ಹೊಸ ಸೀರೆಯನ್ನು ಭಕ್ತರಿಗೆ ನೀಡುತ್ತಾಳೆ. ಇದರಿಂದ ಸಿಟ್ಟಿಗೆದ್ದ ತನ್ನ ತಾಯಿಯನ್ನು ಸಹಿಸಲಾರದೆ ಹೊಸೂರಿನಿಂದ ಕಾಲ್ತೆಗೆದು ಹುಲಿಗೆಗೆ ಬಂದು ನೆಲೆಸುತ್ತಾಳೆ. ಅಂದರೆ ಇಲ್ಲಿ ಹೊಸೂರಮ್ಮನು ಸಾಂಸ್ಥಿಕವಾಗಿಯೂ, ಹುಲಿಗೆಮ್ಮನು ಜನಪದಗಳಾಗಿಯೂ ಪ್ರಚಲಿತಗೊಂಡ ಸುಳಿವುಗಳನ್ನು ಕಾಣಬಹುದು.

ಹೊಸೂರಮ್ಮ, ಹುಲಿಗೆಮ್ಮ ಈ ಇಬ್ಬರೂ ದೇವತೆಗಳಿಗೂ ಮೂಲ ಎಲ್ಲಮ್ಮನ ಆರಾಧನೆಯ ಪರಂಪರೆ (Culture) ಅದ್ದರಿಂದ ಮಾತೃ ಪ್ರಧಾನ ವ್ಯವಸ್ಥೆಗೆ ಪೂರಕವೆಂಬಂತೆ ಕತೆ – ಐತಿಹ್ಯ – ನಂಬಿಕೆ – ಆಚರಣೆಗಳು ಬೆಳೆದು ಬಂದಿವೆ. ನಾಗಜೋಗಿ ಮತ್ತು ಬಸವ ಜೋಗಿಯು ಇವರ ಮೂಲ ಆರಾಧಕರಾಗುತ್ತಾರೆ. ಹಾಗೆಯೇ ದೇವತೆಗಳಿಗೆ ಸಂಬಂಧಿಸಿದಂತೆ ಜೋಗಿ-ಜೋಗತಿ ಸಂಪ್ರದಾಯ ಬೆಳೆದು ಮುಂದುವರಿದಿದೆ. ಅಕ್ಕ-ತಂಗಿಯರೆನಿಸಿಕೊಳ್ಳುವ ಹುಲಿಗೆಮ್ಮ-ಹೊಸೂರಮ್ಮನಿಗೆ ಮೂಲ ಎಲ್ಲಮ್ಮನೆಂಬಲ್ಲಿ ಜನಪದ ನೆಲೆಯೂ, ಪೌರಾಣಿಕ ವ್ಯಾಪ್ತಿಯಾಗಿ ರೇಣುಕೆಯ ದೃಢೀಕರಣವೂ ಈ ಇಬ್ಬರಿಗೆ ಹಿನ್ನೆಲೆಯಾಗುತ್ತಾ ಹೋಗುತ್ತದೆ. ಇದು ಶಿಷ್ಟ ಮತ್ತು ಜನಪದಗಳ ವ್ಯಾಪ್ತಿ ವಿಸ್ತಾರಗಳನ್ನು ಹೇಳುತ್ತದೆ. ಆದರೆ ಶಿಷ್ಟ ಪರಂಪರೆಯಲ್ಲಿ ರೇಣುಕೆಗೆ ದೈವೀ ನೆಲೆಯ ಆರಾಧನೆ ಇದ್ದಂತೆ ಕಂಡುಬುರುವುದಿಲ್ಲ.

ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಗೆ ಪುರುಷನು ಕಡಿವಾಣ ಹಾಕಲು ಪ್ರಾರಂಭಿಸಿದ ಹಂತಗಳನ್ನು ರೇಣುಕೆಯ ಕಥೆಯಲ್ಲಿ ಕಾಣಬಹುದು. ಜಮದಗ್ನಿ ಮತ್ತು ಪರಶುರಾಮ ಇವರಿಬ್ಬರೂ ರೇಣುಕೆಯನ್ನು ನಿಯಂತ್ರಿಸಿದರು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ರಾಜನ ಮಗಳಾದ ರೇಣುಕೆಯು ಋಷಿ ಪತ್ನಿಯಾಗಿ ಆಶ್ರಮದ ನಿಯಮಗಳಿಗೆ ಅಧೀನಳಾಗಿದ್ದರೂ ಗಂಧರ್ವರಾಜನನ್ನು ಕಂಡಾಗ ಚಂಚಲ ಚಿತ್ತಳಾಗುತ್ತಾಳೆ. ಏಕೆಂದರೆ ಅವಳು ಹುಟ್ಟಿ ಬೆಳೆದ ರಾಜ್ಯತ್ವದ ವೈಭವಕ್ಕೆ ಮಾರು ಹೋಗುವುದು ಸಹಜವಾಗುತ್ತದೆ. ಇಲ್ಲಿ ಎರಡು ವರ್ಗಗಳ ಬದುಕಿನ ವಿಶಿಷ್ಟತೆಗಳೇ, ರೇಣುಕೆ ಜಮದಗ್ನಿ ಪರಶುರಾಮನಿಗೆ ವೈರುಧ್ಯಗಳಾಗುತ್ತವೆ.

ಋಷಿ ಜಮದಗ್ನಿ ಹಾಗೂ ರಾಜರು ಕಾರ್ತಿಕೆ ವಿರಾರ್ಜುನನಲ್ಲಿ ಆಸ್ತಿ ಹಾಗೂ ಸಂಪತ್ತಿನ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಹವಣಿಕೆ-ಹೋರಾಟಗಳು ನಡೆಯುತ್ತಲೇ ಇದ್ದವು ಎಂಬುದಕ್ಕೆ ಕಾಮಧೇನು ಮತ್ತು ರೇಣುಕೆ ಉದಾಹರಣೆಗಳಾಗುತ್ತಾರೆ. ಪರಶುರಾಮನು ತಂದೆಯ ಆಜ್ಞೆಗೆ ಅನುಗುಣವಾಗಿ ತಾಯಿಯನ್ನು ಕೊಂದು ನಂತರ ತಂದೆಯ ವರದಿಂದಲೇ ಬದುಕಿಸಿಕೊಂಡನಾದರೂ ಜಮದಗ್ನಿ ರೇಣುಕೆಯಲ್ಲಿ ಅನ್ಯೋನ್ಯತೆ ಇಲ್ಲದೆ ಹೋಗುತ್ತದೆ. ಮುಂದೆ ಪರಶುರಾಮನು ರಾಜರನ್ನು ಕೊಲ್ಲತ್ತಾ ಹೋಗುವುದು ತಂದೆಯ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೆ.

ಈ ಪುರಾಣ ಹಿನ್ನೆಲೆಯುಳ್ಳ ಎಲ್ಲಮ್ಮನು ಜನಪದರಲ್ಲಿ ರೇಣುಕೆಯು; ಋಷಿ ಪತ್ನಿ, ಆಶ್ರಮ ಎಂಬ ಪ್ರತಿಷ್ಠೆಗಳನ್ನು ಧಿಕ್ಕರಿಸಿ ಸ್ವತಂತ್ರ ನೆಲೆಯಲ್ಲಿ ನಿಂತಳೆಂಬ ಕಲ್ಪನೆಯಾಗಿದೆ. ಜೋಗಪ್ಪ- ಗವ್ವಗಳೆಂದು ಭಕ್ತರಾಗುವ ಆರಾಧಕ ಅಸ್ಥಿತ್ವವು ಹಲವು ಕಾರಣಗಳಿಂದ ವಿಸ್ಮಯವನ್ನು ಮೂಡಿಸುತ್ತದೆ. ಸಾಮಾಜಿಕ ನೆಲೆಯ ದಾಂಪತ್ಯ ಜೀವನ ಹಾಗೂ ಕೌಟುಂಬಿಕ ಚೌಕಟ್ಟುಗಳನ್ನು ಮೀರುವ ಈ ಭಕ್ತ ವಲಯವು ವಿಶಿಷ್ಟವೆನಿಸುವುದು ಎರಡು ಕಾರಣಗಳಿಂದಾಗಿ.

. ಈ ಭಕ್ತ ವಲಯ ಪುರುಷರು-ಸ್ತ್ರೀಯರಿರಲಿ ಇವರು ಎಲ್ಲಮ್ಮನ ಸತಿಯರು. ಇವರಿಗೆ ಗಂಡನ ಹೊಣೆಯನ್ನು ಹೊರುವಂಥದ್ದು ಎಲ್ಲಮ್ಮ ಅಥವಾ ಅವರ ಅವತಾರವೆಂದು ಭಾವಿಸುವ ಹುಲಿಗೆವ್ವ, ಹೊಸೂರವ್ವ ಇತ್ಯಾದಿ ಜನಪರ ದೇವತೆಗಳು. ಇಲ್ಲಿ ಸ್ತ್ರೀ ದೈವವು ತನ್ನ ಅರಾಧಕ ಭಕ್ತ ವಲಯಕ್ಕೆ ಪತಿಯಾಗಿ ಜವಾಬ್ದಾರಿ ನಿರ್ವಹಿಸುವುದರಿಂದ ಜೋಗಪ್ಪಗಳು ಸಹ ಜೋಗವ್ವಗಳ ವೇಷಭೂಷಣಗಳನ್ನು ನಡೆ-ನುಡಿ, ಜೀವನ ಕ್ರಮಗಳನ್ನು ಪಾಲಿಸುತ್ತಾರೆ.

. ಎರಡನೆಯದಾಗಿ ಸಾಮಾಜಿಕವಾಗಿ ಮದುವೆಯ ವ್ಯವಸ್ಥೆಯನ್ನು ಜೋಗಪ್ಪ- ಜೋಗವ್ವಗಳು ಮುರಿಯುತ್ತಾರೆ. ಅಲ್ಲದೆ ಕೆಲವು ಜೋಗಪ್ಪಗಳು ಮರ್ಮಾಗ ಅಂಗ ವಿಚ್ಛೇದನ ಮಾಡಿಸಿಕೊಂಡು ದೇವತೆಯ ಹೆಸರಿನಲಿ ಬೇರೆ ಗಂಡಸರೊಂದಿಗೆ ಹೆಂಗಸರಂತೆ ಸಂಪರ್ಕವಿರಿಸಿಕೊಳ್ಳುತ್ತಾರೆಂದು ಕೆಲವರು ಹೇಳುತ್ತಾರೆ.

ಜೋಗಪ್ಪ-ಜೋಗವ್ವಗಳ ಪರಂಪರೆಯಲ್ಲಿ ಶಿಷ್ಯ ಪರಂಪರೆಗೂ ಸಂತಾನ ಪರಂಪರೆಗೂ ಭಿನ್ನತೆಗಳುಂಟು ಅಂದರೆ ಇವರ ಮಕ್ಕಳೇ ಈ ಪರಂಪರೆಯನ್ನು ಬೆಳೆಸಬೇಕೆಂದಿಲ್ಲ. ಸಮಾಜದ ಯಾವುದೇ ವರ್ಗ ಅಥವಾ ಯಾವುದೇ ಜಾತಿಯ ಸ್ತ್ರೀ-ಪುರುಷರು ಜೋಗಿ ಪರಂಪರೆಗೆ ಸೇರಬಹುದು.

ಸಾಮಾನ್ಯವಾಗಿ ಶೂದ್ರ ವರ್ಗದ ಕೆಳಜಾತಿಗಳ ಜನರು ಹೆಚ್ಚಾಗಿ ಜೋಗಪ್ಪ-ಜೋಗವ್ವಗಳಾಗಿರುತ್ತಾರೆ. ಜಾತಿ ಹಾಗೂ ಬಡತನದ ಕಾರಣದಿಂದ ತುಳಿತಕ್ಕೆ ಒಳಗಾದವರು ಇವರುಗಳಾಗಿರುತ್ತಾರೆ. ದೇವತೆಯು ತಮ್ಮ ಸಂಕಷ್ಟಗಳನ್ನು ಪರಿಹರಿಸುತ್ತಾಳೇಂಬುದು ಇವರ ನಂಬಿಕೆ. ಸಾಮಾಜಿಕವಾಗಿ ಬಹಿಷ್ಕೃತರಾದವರು ಕೆಲವರು ಮತ್ತೆ ಗೌರವದಿಂದ ಬದುಕಲು ಜೋಗಪ್ಪ- ಜೋಗವ್ವರಾಗುತ್ತಾರೆ.

ದೇವಿಯ ಸೇವಕರೆಂಬ ಕಾರಣಕ್ಕಾಗಿ ಇವರಿಗೆ ತಮ್ಮ ಸಮಾಜದಲ್ಲಿ ಮಾನ್ಯತೆ ಇರುತ್ತದೆ. ಪುರುಷತ್ವವಿಲ್ಲದವರು, ಸಂತಾನವಿಲ್ಲದವರು, ಗಂಡು ಸಂತಾನ ಹಡೆಯುದ ಮಹಿಳೆಯರು ಇಂಥವರು ತಮ್ಮ ಕೊರಗುಗಳಿಂದ ಪಾರಾಗಲು ಜೋಗಿ ಪರಂಪರೆಗೆ ಸೇರುತ್ತಾರೆ. ಭಕ್ತರೆನ್ನುವ ಕಾರಣಕ್ಕಾಗಿ ಇವರನ್ನು ಯಾರು ಅವಹೇಳನ ಮಾಡುವುದಿಲ್ಲ. ಶೈಶವಾವಸ್ಥೆ ಅಥವಾ ಬಾಲ್ಯಾವಸ್ಥೆಯಲ್ಲಿ ಜಡೆ ಬೆಳೆದ ಗಂಡು-ಹೆಣ್ಣು ಮಕ್ಕಳನ್ನು ಈ ಪರಂಪರೆಗೆ ಸೇರಿಸುತ್ತಾರೆ. ಕೆಲವರು ಸಂತಾನ ಫಲಕ್ಕಾಗಿ ಹರಕೆ ಹೊರುತ್ತಾರೆ. ಹರಕೆಗೆ ಅನುಗುಣವಾಗಿ ಹುಟ್ಟಿದ ಹೆಣ್ಣು ಕೂಸನ್ನು ಜೋಗವ್ವನನ್ನಾಗಿ ಮಾಡುತ್ತಾರೆ. ಬಂದೊದಗಿದ ರೋಗ-ರುಜಿನಗಳಿಂದ ಪಾರಾದರೆ ಆ ಮಗುವನ್ನು ಜೋಗಿ ಮಾಡುವುದಾಗಿ ಹರಕೆ ಹೊತ್ತು ನಂತರ ಅದರಂತೆ ನಡೆದುಕೊಳ್ಳುತ್ತಾರೆ. ದೊಡ್ಡವರು ಇಂಥ ಕಾರಣಗಳಿಂದ ಮುಕ್ತರಾದರೆ ಜೋಗಪ್ಪ/ವ್ವನಾಗುವುದಾಗಿ ಪ್ರಾರ್ಥನೆ ಮಾಡಿಕೊಂಡಿರುತ್ತಾರೆ. ಅದಕ್ಕೆ ಅನುಗುಣವಾಗಿ ಸ್ವ ಇಚ್ಛೆಯಿಂದ ಸೇರುತ್ತಾರೆ. ಹೀಗೆ ಹಲವು ಕಾರಣಗಳಿಂದಾಗಿ ಈ ಸಂಪ್ರಾದಾಯಕ್ಕೆ ಬದ್ಧರಾಗುವ ಪರಂಪರೆಯ ವ್ಯಾಪ್ತಿ ಹೆಚ್ಚುತ್ತಾ ಹೋಗುತ್ತದೆ.

ಜ್ಞಾನ, ವೈರಾಗ್ಯ, ಸಮೃದ್ಧ ಮಳೆ-ಬೆಳೆ, ಸಂತಾನ ಭಾಗ್ಯ, ರೋಗ ನಿವಾರಣೆ, ಸದ್ ಬುದ್ಧಿ, ಶಿಶು ಮಕ್ಕಳಿಗೆ ತಾಯಿಯ ಹಾಲಿನ ಸಮೃದ್ಧಿ ಇತ್ಯಾದಿ ಆಶಯಗಳು ಈ ಆರಾಧನಾ ಪರಂಪರೆಯಲ್ಲಿವೆ.

ಹುಲಿಗೆಮ್ಮ ಹಾಗೂ ಹೊಸೂರಮ್ಮ ದೇವತೆಗಳು ಮಾತೃ ಪರಂಪರೆಯನ್ನು ಬಿಂಬಿಸುವ ದೇವತೆಗಳಾಗಿದ್ದು ಇವರು ಜಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ತುಂಗ ಭದ್ರನದಿಯ ದಡದಲ್ಲಿ ನೆಲೆಯಾಗಿರುವ ಈ ಇಬ್ಬರೂ ಗಂಗ ಮತಸ್ಥರ ಮೂಲ ಆರಾಧನಾ ದೈವಗಳಾಗಿದ್ದಾರೆ. ಎಲ್ಲಮ್ಮ ದೆವತೆಯ ಆರಾಧನೆಯನ್ನು ಸ್ಥಳೀಯವಾಗಿ ಆರಾಧಿಸಿಕೊಂಡು ನಾಗಜೋಗಿ ಬಸವಜೋಗಿ, ಗಂಗ ಮತಸ್ಥರಾಗಿದ್ದು ಇವರೇ ಈ ದೇವತೆಗಳ ಮೂಲ ಆರಾಧಕರು. ಶಿಷ್ಟ ಪರಂಪರೆಯ ರೇಣುಕೆಯ ಜನಪದರಲ್ಲಿ ಎಲ್ಲಮ್ಮನಾದಾಗ ಅವಳ ಕಲ್ಪನೆ (imagie) ವಿಶೇಷತೆಗಳನ್ನು ಪಡೆಯುತ್ತದೆ. ಅದು ಹೇಗೆಂದರೆ ಶಿಷ್ಟ ಪುರಾಣದಲ್ಲಿ ಜಮದಗ್ನಿಯ ಕೋಪಕ್ಕೆ ಗುರಿಯಾದ ರೇಣಿಕೆ ಮಗ ಪರಶುರಾಮನಿಂದ ಕೊಲ್ಲಲ್ಪಟ್ಟು ಮತ್ತೆ ಬದುಕಲ್ಪಡುತ್ತಾಳೆ. ಆದರೆ ಜನಪದರಲ್ಲಿ ಎಲ್ಲಮ್ಮ ನಾಗುವಳು ಜಮದಗ್ನಿಯ ಶಾಪದಿಂದ ಮತ್ತೆ ಕುರೂಪಿಯೂ, ರೋಗ ಪೀಡಿತಳೂ ಆಗುತ್ತಾಳೆ. ಅಶ್ವನಿ ದೇವತೆಗಳಿಂದ ಶಾಪ ನಿವಾವರಣೆಯಾದರೂ ಜಮದಗ್ನಿಯು ಅವಳನ್ನು ಸ್ವೀಕರಿಸದೆ ಹಿಮಾಲಯಕ್ಕೆ ತಪಸ್ಸಿಗೆ ಹೋಗುತ್ತಾನೆ. ಅವಳು ಆಶ್ರಮದಲ್ಲಿಯೇ ನೆಲಸಿ ದೇವತೆಯಾಗುತ್ತಾಳೆ. ಪಿತೃ ವಾಕ್ಯ ಪರಿಪಾಲನೆಯನ್ನು ಧಿಕ್ಕರಿಸಿ ಅವಳನ್ನು (ತಾಯಿಯನ್ನು) ಕೊಲ್ಲುವ ಧೈರ್ಯ ತೋರದೆ, ತಂದೆಯ ದೃಷ್ಟಿಯಲ್ಲಿ ಷಂಡರಂತೆ ಕಂಡ ಇತರೆ ಗಂಡು ಮಕ್ಕಳು ಜೋಗಪ್ಪ-ಜೋಗಮ್ಮಗಳಾಗಿ ಆಶ್ರಮದಲ್ಲಿ ತಾಯಿಯ ಸೇವೆಯನ್ನು ಮಾಡಿಕೊಂಡಿರುತ್ತಾಳೆ.

ಮತ್ತೊಂದು ಪಾಠಾಂತರದ ಪ್ರಕಾರ ಜಮದಗ್ನಿಯಿಂದ ತಿರಸ್ಕೃತಳಾದ ಎಲ್ಲಮ್ಮನೂ ಯಾರಲ್ಲಿಯೂ ನ್ನೆಲೆಸುವುದಿಲ್ಲ. ಜೋಗಪ್ಪಗಳು ಆಶ್ರಯ ನೀಡತ್ತರಾದರೂ ಇವಳ ನೈಜತೆಯ ಮೂಲವನ್ನು ತಿಳಿದ ನಂತರ ಆಶ್ರಯ ಕೊಡುವುದಿಲ್ಲ. ಅಂದರೆ ಇಲ್ಲಿ ಜೋಗಪ್ಪಗಳು ಶಿಷ್ಟ ಪುರಾಣದ ಕಲ್ಪನೆಯ ರೇಣುಕೆಯ ಅಸ್ಥಿತ್ವವನ್ನು, ಗಂಡನೊಬ್ಬನಿಗೇ ಮೀಸಲಾಗುವ ಪಾವಿತ್ರ್ಯದ ಪರಿಧಿಯನ್ನು ತಿರಸ್ಕರಿಸಿದ ಸುಳಿವು ಇದಾಗಿರಬಹುದು. ಇದೇ ಶಿಷ್ಟ – ಜನಪದಗಳ ವೈರುದ್ಯವೂ ಆಗಿದೆ.

ವೀರಶೈವ ಪರಂಪರೆಯ ಶಿವಶರಣರು ಏಕದೈವೋಪಾಸನೆ ಹಾಗೂ ಸರಳವಾದ ಪೂಜಾ ವಿಧಿಗಳಿಂದ ಅತ್ಯುನ್ನತ ಭಕ್ತಿಯ ನೆಲೆಗಳನ್ನು ಕಾಣಿಸಲು ಯತ್ನಿಸಿದರು. ಜನಪದ ದೈವಗಳ ಪರಿಕಲ್ಪನೆಯನ್ನೆ ಹೊಡೆದು ಹಾಕಲು ಯತ್ನಿಸಿದರು. ಇಂಥಾ ಸಂದರ್ಭಗಳೂ ಸಹ ಶಿಷ್ಟ – ಜನಪದಗಳ ವೈರುದ್ಯಗಳಿಗೆ ಕಾರಣವಾಗುತ್ತವೆ.

ಒಂದು ಕಾಲದಲ್ಲಿ ಮೈಲಾರಲಿಂಗನ ಆರಾಧಕ ಸಮುದಾಯದೊಂದಿಗೆ ಎಲ್ಲಮ್ಮನ ಆರಾಧಕರ ಮುಖಾಮುಖಿ ಘರ್ಷಣೆಗಳು ನಡೆದು ಅಂಬಿಗಾರದ ಗಂಗ ಮತಸ್ಥರೊಂದಿಗೆ ಘರ್ಷಣೆಯು ಹೊಂದಾಣಿಕೆಯಾಗಿ ಮಾರ್ಪಟ್ಟಿದೆ. ಹೀಗೆ ಗಂಗಮತಸ್ಥರ ಮೂಲ ಆರಾಧನಾ ದೇವತೆಗಳಾಗುವ ಹುಲಿಗೆಮ್ಮ ಮತ್ತು ಹೊಸೂರಮ್ಮ ವಿಜಯನಗರ ಕಾಲದ ಹಾಗೂ ನಂತರದಲ್ಲಿ ಪಾಳೆಯಗಾರರ ಆರಾಧನಾ ದೇವತೆಗಳಾಗಿದ್ದರು. ವಿಜಯನಗರದ ಪತನದ ನಂತರ ಸೈನಿಕರು ಜೋಗಮ್ಮಗಳ ವೇಷದಲ್ಲಿ ಆರಾಧನೆ ಮಾಡುತ್ತಿದ್ದರೂ ಈ ಪ್ರದೇಶದ ಪಾಳೇಯಗಾರರ ಮೇಲೆ ಟಿಪ್ಪು ಆಕ್ರಮಣ ನೆಡೆಸಿದಾಗಲೂ ಅವನ ಸೈನ್ಯದ ಮೇಲೆಯೂ ಈ ಪ್ರಭಾವಗಳಾಗಿವೆ ಎಂಬುದಕ್ಕೆ ಹಲವು ಕಥೆಗಳು ಹುಟ್ಟಿಕೊಂಡಿವೆ.

ಬ್ರಿಟಿಷರ ಕಾಲದ ರೈಲ್ವೆ ಯೋಜನೆಯು ಹುಲಿಗಿಯ ಬಳಿ ದೇವಾಲಯಕ್ಕಿಂತ ಸ್ವಲ್ಪ ದೂರದಲ್ಲಿ ಸ್ಥಾಪನೆಯಾಗಲು ಭಕ್ತ ಪರಂಪರೆ ಪ್ರೇರಕವಾಗಿದೆ.

ಹುಲಿಗೆಮ್ಮನ ಭಕ್ತ ಪರಂಪರೆಯನ್ನು ನಾಥಪಂಥದ ಮೂಲದಿಂದ ಗುರ್ತಿಸುತ್ತಾರೆ. ನಾಥ ಪಂಥ ಹಾಗೂ ಸಿದ್ಧ ಪಂಥಗಳ ಸಂಘರ್ಷವನ್ನು ಹುಲಿಗೆಮ್ಮನಿಗೆ ಸಂಬಂಧಿಸಿದ ಪುರಾಣ ಗಾತೆಗಳಲ್ಲಿ ಗುರ್ತಿಸಬಹುದಾಗಿದೆ. ಅವಳು ಸಿದ್ಧರ ತಲೆಗಳಿಗೆ ಮೊಳೆ ಹೊಡೆದು ನಾಶಪಡಿಸಿದಳೆಂಬ ಮಾಹಿತಿ ಇದೆ. ಸುಡುಗಾಡು ಸಿದ್ಧರ ಮನೆದೇವತೆ ಇವಳೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅಂದರೆ ಸಿದ್ಧಪಂಥದೊಂದಿಗೆ ಹುಲಿಗೆಮ್ಮನ ಆರಾಧಕ ವರ್ಗವು ಸಾಮರಸ್ಯ ಮೂಡಿಸಿಕೊಂಡ ಸಂದರ್ಭವಿದ್ದಿತೆಂಬುದು ಸ್ಪಷ್ಟವಾಗುತ್ತದೆ.

ಹುಲಿಗೆಮ್ಮ ಹಾಗೂ ಹೊಸೂರಮ್ಮ ಇವರಿಬ್ಬರೂ ಒಂದೇ ಎಂಬ ಕಲ್ಪನೆ ಕೆಲವರಲ್ಲಿದ್ದರೆ ಮತ್ತೆ ಕೆಲವರು ಇಬ್ಬರೂ ಒಂದೇ ತಾಯಿಯ ಮಕ್ಕಳು , ಅಕ್ಕ – ತಂಗಿಯರು ಎಂಬ ನಿಲುವನ್ನು ತಾಳಿದ್ದಾರೆ. ಇನ್ನೂ ಹಲಾವಾರು ದೇವಿಯ ಅವತಾರಗಳಲ್ಲಿ ಭಿನ್ನರಾದಂಥವರು; ಹುಲಿಗೆಮ್ಮನು ಅದಿಶಕ್ತಿಯ ಅವತಾರ. ಆದ್ದರಿಂದ ಇವರಿಗೆ ಬಲಿಕೊಡುವ ಮಾಂಸಾಹಾರವನ್ನು ನೈವೇದ್ಯ ಮಾಡುವ ಕ್ರಮವಿದೆ ಎನ್ನುತ್ತಾರೆ. ಹಾಗೆಯೇ ಹೊಸೂರಮ್ಮನನ್ನು ಪಾರ್ವತಿಯ ಅವತಾರವೆಂದೂ ಶಾಂತ ರೂಪಳೆಂದೂ ಗುರುತಿಸುತ್ತಾರೆ, ಆದ್ದರಿಂದಲೇ ಸಸ್ಯಾಹಾರಕ್ಕೆ ಸಂಬಂಧಿಸಿದ ನೈವೇದ್ಯ ಪ್ರಸಾದಗಳನ್ನು ಹೊಸೂರಮ್ಮನಿಗಾಗಿ ಹಂಚಿಕೆ ಮಾಡುತ್ತಾರೆ.

ಹುಲಿಗೆಮ್ಮನಿಗೆ ಇರುವಷ್ಟು ಭಕ್ತ ವಲಯ ಮೌಖಿಕ ಪ್ರಚಾರ ಹೊಸೂರಮ್ಮನಿಗೆ ಇಲ್ಲ. ಹುಲಿಗೆಮ್ಮನಿಗೆ ಸಂಬಂಧಿಸಿದ ಜನಪದ ಆಚರಣೆಗಳೂ, ಜೋಗಪ್ಪ – ಜೋಗವ್ವ ಆರಾಧಕ ವರ್ಗ ಹೊಸೂರಮ್ಮನಲ್ಲಿ ಶಿಷ್ಟ ಅಂಶಗಳನ್ನು ಪಡೆದುಕೊಳ್ಳುತ್ತದೆ. ಹೊಸೂರು ಮತ್ತು ಹುಲಿಗಿಯು ಈ ದೇವಾಲಯಗಳನ್ನು ಗಮನಿಸಿದರೆ ಹೊಸೂರಿನ ಪರಿಸರವು, ಹುಲಿಗಿಗಿಂತ ಪ್ರೌಢವೂ, ಹುಲಿಗಿಯ ಪರಿಸರವು ಸರಳವೂ ಆಗಿರುವಂತೆ ಅನಿಸುತ್ತದೆ. ಹೊಸೂರಿನ ದೇವಾಲಯದ ಭಕ್ತ ವಲಯ ದೇವಿಯ ಪೂಜಾಕ್ರಮಗಳು ಅಚರಣೆ ವಿಧಿ – ವಿಧಾನಗಳು ಸಾಂಸ್ಥಿಕ ವ್ಯವಸ್ಥೆಗೆ ಬಹುಪಾಲು ಬದ್ಧವೆನಿಸುತ್ತವೆ.

ಹುಲಿಗಿಯ ವಾತಾವರಣವು ತೀರ ಜಾನಪದೀಯವಾಗಿದೆ. ಹೊಸೂರಿನ ದೇವಾಲಯಕ್ಕೆ ದೊರೆತ ರಾಜರ ಅಥವಾ ಪಾಳೆಯಗಾರರ ಆರ್ಥಿಕ ಬೆಂಬಲ ಹುಲಿಗೆಮ್ಮನಿಗೆ ದೊರೆತಂತೆ ಅನಿಸುವುದಿಲ್ಲ . ಹುಲಿಗೆಮ್ಮನ ಪರಂಪರೆಯಲ್ಲಿ ಭಕ್ತರ ಬೆಖವಣಿಗೆಯನ್ನು ಹೇರಳವಾಗಿ ಕಾಣಬಹುದು.

ಹೊಸೂರಮ್ಮನ ಮೂರ್ತಿ, ದೇವಾಲಯದ ಪರಿಸರ ಪೂಜೆಗೆ ಸಂಬಂಧಿಸಿದ ಆಚರಣೆಗಳು ಪ್ರಸಾದದ ಪದಾರ್ಥ ಇತ್ಯಾದಿಗಳ ಮೇಲೆ ಶಿಷ್ಠತೆಯ ಪ್ರಭಾವ ಹೆಚ್ಚುತ್ತಾ ಹೋಗಿರುವುದನ್ನು ಗಮನಿಸಬಹುದು. ಉದಾಹರಣೆಗೆ ಶ್ರೀಪಾದರಾಯರು ಹೊಸೂರಮ್ಮನ ಗುಡಿಯಲ್ಲಿ ವಿತರಣೆ ಮಾಡುತ್ತಿದ್ದ ಬದನೆಕಾಯಿ ಪ್ರಸಾದವನ್ನು ಬೇಸರಗೊಂಡರೆಂದೂ, ಈ ಕಾರಣದಿಂದ ಪ್ರಸಾದದಲ್ಲಿ ಬದಲಾವಣೆ ಮಾಡಿದರೆಂದೂ ಹೇಳುತ್ತಾರೆ. ಅವರು ಹೊಸೂರಮ್ಮನ ಗುಡಿಯಲ್ಲಿ ವೇಣುಗೋಪಾಲಸ್ವಾಮಿಯ ಆರಾಧನೆ ನಡೆಸಿ, ದೇವಿಯ ವಿಗ್ರಹದ ಕಣ್ಣುಗಳಿಗಾಗಿ ಎರಡು ಸಾಲಿಗ್ರಾಮಗಳನ್ನು ನೀಡಿದರೆಂದೂ ಹೇಳುತ್ತಾರೆ. ಅದೇ ಸಾಲಿಗ್ರಾಮಗಳನ್ನು ದೇವಿಯ ವಿಗ್ರಹದ ಕಣ್ಣುಗಳಿಗೆ ಇಟ್ಟಿದ್ದಾರೆಂದೂ ತೋರಿಸುತಾರೆ.

ಹುಲಿಗೆಮ್ಮ ಹೊಸೂರಮ್ಮ ಜನಪದ ಪರಂಪರೆಯ ದೇವತೆಗಳಲ್ಲಿ ವಿಶಿಷ್ಟರೆನಿಸುವುದು ಒಂದು ಕಾರಣಕ್ಕಾಗಿ ಅದೆಂದರೆ, ಕೆಲವು ದೇವತೆಗಳಿಗೆ ಇರುವಂಥ ಹಲವು ದೈವಗಳೊಂದಿಗಿನ ಸಂಬಂಧ ಬೆಸುಗೆ ಇವರಿಗೆ ಇಲ್ಲ. ಅಂದರೆ ಈ ದೇವತೆಗಳಿಬ್ಬರೂ ಅಕ್ಕ-ತಂಗಿಯರು ಎಂಬುದನ್ನು ಹೊರತುಪಡಿಸಿದರೆ, ಇವರಿಬ್ಬರಿಗೂ ಅಣ್ಣ-ತಮ್ಮಂದಿರಾಗಲಿ, ಗಂಡ-ಮಕ್ಕಳಾಗಲಿ ಇತ್ಯಾದಿ ಸಂಬಂಧಗಳ ಬಂಧವೇ ಇಲ್ಲ. ಆದರೂ ಹೊಸೂರಮ್ಮನನ್ನು ಏಕನಾಥೇಶ್ವರಿ ಎಂದು ಕರೆಯುತ್ತಾರೆ. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ಮೇಲೆ “ಏಕನಾಥನ” ಹಿಡಿತದ ಪ್ರಯತ್ನಗಳು ಇಲ್ಲಿ ಗಮನಾರ್ಹವೆನಿಸುತ್ತವೆ. ಚಿತ್ರದುರ್ಗದ ಏಕಾಂತಮ್ಮನೆಂಬ ಜನಪದ ದೇವತೆ ಶಿಷ್ಟತೆಯ ಪ್ರಭಾವದಿಂದ ಏಕನಾಥೇಶ್ವರೀ ಎಂಬ ಹೆಸರು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಶಿಷ್ಟ ದೈವದ ಕಲ್ಪನೆಯಲ್ಲಿ ತಮ್ಮ ವಿರೋಧಿಗಳು ಹಾಗೂ ತಮ್ಮ ಬಗ್ಗೆ ಅಸಮಾಧಾನ ತಾಳಿದ ವಲಯವನ್ನು ದೇವತೆಗಳು ಶತ್ರುಗಳಂತೆ ಭಾವಿಸುತ್ತಾರೆ. ಅಂತಹ ವೈರಿಗಳನ್ನು ನಾಶಪಡಿಸುತ್ತಾರೆ. ಆದರೆ, ಜನಪದ ದೇವತೆಗಳು ತಮ್ಮನ್ನು ವಿರೋಧಿಸುವವರನ್ನು ಅನುಭವದ ಗರಡಿಯಲಿ ಪಳಗಿಸುವಂತೆ ಮಾಡಿ ತಮ್ಮ ಭಕ್ತರನ್ನಾಗಿಸಿ ಕೊಳ್ಳುತ್ತಾರೆ. ಹುಲಿಗೆಮ್ಮನಾಗಲಿ, ಹೊಸೂರಮ್ಮನಾಗಲಿ ಸರಳ ತಂತ್ರಗಳ ಮೂಲಕ ಭಕ್ತರಲ್ಲದವರನ್ನು ಭಕ್ತರನ್ನಾಗಿ ಒಲಿಸಿಕೊಳ್ಳುವುದೇಕೆಂದರೆ, ಕಷ್ಟ- ಕಾರ್ಪಣ್ಯಗಳ ಜೀವನಾನುಭವದಿಂದ ಪರಿಪಕ್ವಗೊಳಿಸಿ ಪಳಗಿಸುವುದು. ಅನುಭವದ ಚಿಂತನೆಯಲ್ಲಿ ಸರಿ- ತಪ್ಪುಗಳನ್ನು, ಮನವರಿಕೆಯಾಗುವಂತೆ ಮಾಡುವುದರ ಮೂಲಕ ಭಕ್ತರಿಗೆ ಒಲಿದು ತನ್ನತ್ತ ಒಲಿಸಿಕೊಳ್ಳುವ ಸಾಮರ್ಥ್ಯ ಈ ಇಬ್ಬರು ದೇವತೆಗಳ ಕಥೆ-ಐತಿಹ್ಯಗಳಿಂದ ತಿಳಿಯುತ್ತದೆ. ಉದಾ: ಮಲೈಶೆಟ್ಟಿಯ ಕಥೆ. ಹಾಗೆಯೇ ಅಣ್ಣ- ತಂಗಿಯರ ಕಥೆಯಲ್ಲಿ ಭಕ್ತಿಯೇ ಇಲ್ಲದ ಶ್ರೀಮಂತ- ಜಿಪುಣ ಹಾಗೂ ನಿಷ್ಕರುಣೆ ಮಲ್ಲರೆಡ್ಡಿಯನ್ನು ಒಳ್ಳೆಯವನನ್ನಾಗಿ ಮಾಡುವುದು ಹಾಗೂ ಭಕ್ತಳಾದ ಬಡವಿ ನೀಲವ್ವನಿಗೆ ಐಶ್ವರ್ಯಗಳನ್ನು ನೀಡುವುದರೊಂದಿಗೆ ಶ್ರೀಮಂತಗೊಳಿಸುತ್ತಾಳೆ.