ರೇಣುಕೆ-ಜಮದಗ್ನಿ ಪರಶುರಾಮರಿಗೆ ಸಂಬಂಧಿಸಿದ ಪುರಾಣದ ಘಟನೆ ಜಾನಪದೀಯವಾದಾಗ ಹಲವು ತಿರುವುಗಳನ್ನು ಪಡೆಯುತ್ತದೆ. ತಂದೆ ಜಮದಗ್ನಿಯ ಆಜ್ಞೆಯಂತೆ ಪರಶುರಾಮ ತಾಯಿ ರೇಣುಕೆಯ ಶಿರಚ್ಛೇದನ ಮಾಡುತ್ತಾನೆ. ಇದರಿಂದ ಸಂತೋಷಗೊಂಡ ಜಮದಗ್ನಿಯು ಪರಶುರಾಮನಿಗೆ ‘ನಿನಗೆ ಏನು ಬೇಕು ಕೇಳು’ ಎಂದಾಗ, ನನ್ನ ತಾಯಿಯ ಶಿರಕ್ಕೆ ಜೀವ ಕೊಡು ಎಂದು ಬೇಡಿದೆ. ಅದರಂತೆ ಜೀವ ಪಡೆದ ಶಿರವು ಎಲ್ಲಮ್ಮನಾಯಿತು. ಅದರಂತೆ ಎಲ್ಲಮ್ಮದೇವರಿಗೆ ಶಿರವಿದೆಂಬುದಿದೆ. ಆದರೆ, ಹುಲಿಗೆಮ್ಮ ಹೊಸೂರಮ್ಮರಿಗೆ ಶಿರವಿದೆ ದಿಂಬವಿಲ್ಲವೆಂಬುದು ಕುತೂಹಲದ ಸಂಗತಿಯಾಗುತ್ತದೆ. ಹುಲಿಗೆಮ್ಮ, ಹೊಸೂರಮ್ಮ ದೇವತೆಗಳಿಗೆ ದಿನಾಲೂ ಪೂಜೆಗಳು ನಡೆಯುತ್ತವೆ. ಹಾಗೂ ಮಂಗಳವಾರ, ಶುಕ್ರವಾರಗಳಂದು ವಿಶೇಷ ಪೂಜೆ ಆಚರಣೆಗಳು ಜರುಗುತ್ತವೆ. ಅಲ್ಲದೆ, ಪ್ರತಿ ಹುಣ್ಣಿಮೆ-ಅಮವಾಸ್ಯೆ ಮತ್ತಿತರ ಹಬ್ಬ- ಹರಿದಿನಗಳಂದು ಒಂದಲ್ಲ ಒಂದು ಆರಾಧನೆಗಳು ನಡೆಯುತ್ತವೆ.

ಹುಲಿಗೆಮ್ಮನ ದೇವಸ್ಥಾನಕ್ಕೆ ನಾಯಕ ಸಮುದಾಯದ ‘ಕಳ್ಳ ಒಕ್ಕಲು’ ಮತ್ತು ‘ಗಜ್ಜಲ’ರು ಎಂಬ ಬೆಡಗಿನವರು ಹೋಗುವುದಿಲ್ಲ. ಆದರೆ, ಇವರ ಮನೆದೇವರು ಹುಲಿಗೆಮ್ಮನಾಗಿರುತ್ತಾಳೆ. ಆದರೆ ಹೊಸೂರು ಗ್ರಾಮವಾಸಿಗಳಲ್ಲಿ ಬಹುಪಾಲು ನಾಯಕ ಸಮುದಾಯದವರಿದ್ದು, ಹಬ್ಬ ಹರಿದಿನಗಳಲ್ಲಿ ದೇವಿಯ ಉತ್ಸವ-ಆಚರಣೆಗಳಿಗೆ ಸಂಬಂಧಿಸಿದ ಮುಖಂಡತ್ವವನ್ನು ಇವರು ವಹಿಸುತ್ತಾರೆ. ಹುಲಿಗೆಮ್ಮನಿಗೆ ಭಕ್ತಾದಿಗಳ ಆಚರಣೆಗಳಿಗೆ ಅಮವಾಸ್ಯೆ-ಹುಣ್ಣಿಮೆಗಳೆರಡಕ್ಕೂ ಪ್ರಾಶಸ್ತ್ಯ. ಹುಲಿಗೆಮ್ಮನಿಗೆ ಇರುವ ಪ್ರಾಣಿ ಬಲಿಯಂಥ ಜನಪದ ಆಚರಣೆಗಳು ಹೊಸೂರಮ್ಮನಿಗೆ ಇಲ್ಲ. ಏಕೆಂದರೆ ಈ ದೈವವು ಕಾಲಾನಂತರ ಶಿಷ್ಟ ಸಂಸ್ಕೃತೀಕರಣಕ್ಕೆ ಒಳಪಟ್ಟಿದ್ದು, ದೇವಾಲಯ ಆಸ್ತಿ ಇತ್ಯಾದಿ ಹೊಂದಿದ್ದು, ರಾಜರ-ಪಾಳೆಯಗಾರರ ಕಾಲದಿಂದಲೂ ಆಸ್ತಿಯ ಸಂಪತ್ತನ್ನು ರೂಢಿಸಿಕೊಳ್ಳುತ್ತಾ ಸಾಂಸ್ಥಿಕ ರೂಪವನ್ನು ಪಡೆದುಕೊಂಡಿದೆ.

ಶ್ರೀ ಕ್ಷೇತ್ರ ಹುಲಿಗಿ, ಹುಲಿಗೆಮ್ಮ ದೇವಿಯಿಂದ ಪ್ರಸಿದ್ಧಿಯನ್ನು ಪಡೆದಿದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ನೆಲೆಸಿರುವ ಈ ಕ್ಷೇತ್ರ ಪುಣ್ಯಕ್ಷೇತ್ರವಾಗಿದೆ. ಹೊಸಪೇಟೆಯಿಂದ ೮ ಕಿ. ಮೀ. ದೂರವಿರುವ ಈ ಕ್ಷೇತ್ರ ನೂರಾರು ಭಕ್ತರಿಂದ ಪ್ರಸಿದ್ಧಿ ಪಡೆದಿದೆ. ಪೂಜೆಯ ಹಲವಾರು ವಿಧಗಳು ಇಂದಿಗೂ ಉಳಿದು ಬರುವುದಕ್ಕೆ ಈ ಕ್ಷೇತ್ರವೇ ಕಾರಣ, ಪ್ರತಿ ಮಂಗಳವಾರ ಹಾಗೂ ಹುಣ್ಣಿಮೆ ದಿನ ಸಾವಿರಾರು ಭಕ್ತರು ಹುಲಿಗೆಮ್ಮ ದೇವಿಯ ಆಶೀರ್ವಾದ ಪಡೆಯಲು ಬರುತ್ತಾರೆ. ಹುಲಿಗೆಮ್ಮ ದೇವಿಯ ಹೆಚ್ಚಿನ ಭಕ್ತರು ಮೊದಲಿನಿಂದ ನೆಲೆಸಿರುವುದು ಬಳ್ಳಾರಿ ಜಿಲ್ಲೆ, ಕೊಪ್ಪಳ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ. ಪ್ರತಿ ಮಂಗಳವಾರ ಹಾಗೂ ಹುಣ್ಣಿಮೆ ದಿನ ಈ ತಾಯಿಕೆ ಪೂಜೆ ಸಲ್ಲಿಸಲು ಬರುತ್ತಾರೆ. ಹಿಂದುಳಿದ ಸಮುದಾಯಗಳಾದ ನಾಯಕರು, ಕಬ್ಬೇರು, ಹರಿಜನ, ಗಿರಿಜನ, ಕುರುಬರು ಮುಂತಾದವರು ಹೆಚ್ಚಾಗಿ ಈ ದೇವರಿಗೆ ನಡೆದುಕೊಳ್ಳುತ್ತಾರೆ.

ಇಲ್ಲಿನ ಬಹುಪಾಲು ಜನರ ಮನೆದೇವರು ಹುಲಿಗೆಮ್ಮ. ಹಲವಾರು ಹರಕೆಗಳನ್ನು ಮೊದಲಿನಿಂದಲೂ ಸಮುದಾಯದವರು ಈ ದೇವರಿಗೆ ನೆರೆವೇರಿಸಿದ್ದಾರೆ. ಈಗಲೂ ಸಹ ಬೆಳೆಗೆ ಸಂಬಂಧಿಸಿದಂತೆ, ರೋಗಗಳಿಗೆ ಸಂಬಂಧಿಸಿದಂತೆ, ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಹರಕೆಗಳನ್ನು ಕೊಡುತ್ತಾ ಬಂದಿದ್ದಾರೆ, ಮೂಲತಃ ಈ ದೇವರು ಶಕ್ತಿ ದೇವರು. ಹಾಗಾಗಿ ಕುರಿ, ಕೋಣಗಳನ್ನು ಬಲಿ ಕೊಡುವುದು ಸಹ ಇವರ ಹರಕೆಯಾಗಿದೆ. ಜೋಗುತಿ ನೀಡುವುದು, ದೀಡು ನಮಸ್ಕಾರ ಪಂಕ್ತಿ , ನೀಡುವುದು, ಉಡುಗೆ ತೊಡುವುದು, ತಲೆ ಮುಡಿ ಕೊಡುವುದು, ಕಾಣಿಕೆ ಅರ್ಪಿಸುವುದು ಇವರ ಹರಕೆಯ ವಿಧಿ- ವಿಧಾನಗಳಾಗಿವೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ , ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ ಮತ್ತು ಬಳ್ಳಾರಿ ತಾಲೂಕಿನ ಜನರು ಹೆಚ್ಚಾಗಿ ಈ ದೇವರಿಗೆ ಬರುತ್ತಾರೆ. ಪ್ರತಿ ಹುಣ್ಣಿಮೆಯ ದಿನ ಕಡ್ಡಾಯವಾಗಿ ಬರುವುದು ಸಹ ಇದೆ. ಅದೇ ರೀತಿ ರಾಯಚೂರು, ಕೊಪ್ಪಳ ಜಿಲ್ಲೆಯ, ಕುಷ್ಟಗಿ, ಗಂಗಾವತಿ ಮುಂತಾದ ತಾಲೂಕಿನಿಂದ ಹೆಚ್ಚು ಜನರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಹರಕೆಯ ವಿಧಿ- ವಿಧಾನಗಳನ್ನು ನೀಡುತ್ತಾರೆ. ಶ್ರೀಕ್ಷೇತ್ರ ಹುಲಿಗಿಯಲ್ಲಿ ಪ್ರತಿ ಮಂಗಳವಾರ ಜಾತ್ರೆಯ ವಾತಾವರಣ ಕಂಡು ಬರುತ್ತದೆ. ಹುಲಿಗೆಮ್ಮನ ಭಕ್ತಾದಿಗಳು ಬೆಳಿಗೆ ಎದ್ದು ಏನೂ ತಿನ್ನದೇ ಬಂದು ದೇವಿಯ ದರ್ಶನ ಪಡೆಯುತ್ತಾರೆ. ದರ್ಶನವಾದ ನಂತರ ಉಪಹಾರ ತೆಗೆದುಕೊಳ್ಳುತ್ತಾರೆ. ಪ್ರತಿ ಮಂಗಳವಾರ ಹುಲಿಗೆಮ್ಮ ಕ್ಷೇತ್ರದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪ್ರತಿ ಮಂಗಳವಾರ ಸ್ನಾನ ಮಾಡುವವರ ಸಂಖ್ಯೆ ಗಣನೀಯವಾದ ರೀತಿಯಲ್ಲಿ ಇರುತ್ತದೆ. ಎಲ್ಲೆಲ್ಲೂ ಭಕ್ತಾದಿಗಳ ಉಧೋ – ಉಧೋ ಎನ್ನುವ ಝೆಂಕಾರ ಕೇಳಿಬರುತ್ತದೆ.

ಶ್ರೀಕ್ಷೇತ್ರ ಹುಲಿಗೆಮ್ಮನಿಗೆ ಹೋಗುವ ಭಕ್ತಾದಿಗಳಿಗೆ ಅಮವಾಸ್ಯೆ ಮುಖ್ಯವಾಗಿ ಕಂಡುಬರುವುದಿಲ್ಲ. ಹುಣ್ಣಿಮೆ ಮಾತ್ರ ಅವರಿಗೆ ಮುಖ್ಯವಾಗಿ ಕಂಡುಬರುತ್ತದೆ. ಅಮವಾಸ್ಯೆ ದಿನ ಹೆಚ್ಚಾಗಿ ಭಕ್ತಾದಿಗಳು ಈ ಕ್ಷೇತ್ರದಲ್ಲಿ ಕಂಡು ಬರುವುದಿಲ್ಲ. ಹುಣ್ಣಿಮೆ ದಿನ ಅವರಿಗೆ ಮುಖ್ಯವಾಗಿ ಕಂಡುಬರುತ್ತದೆ. ಪ್ರತಿಯೊಬ್ಬ ಭಕ್ತಾದಿಗಳ ಮೇಲೆ ಹುಲಿಗೆಮ್ಮನ ಭಂಡಾರ ಹುಣ್ಣಿಮೆ ದಿನ ಕಂಡುಬರುತ್ತದೆ. ಪ್ರತಿ ಹುಣ್ಣಿಮೆ ದಿನ ಹುಲಿಗೆಮ್ಮ ನಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದೇವರಿಗೆ ನಡೆದುಕೊಳ್ಳುತ್ತಿರುವ ಭಕ್ತಾದಿಗಳಲ್ಲಿ ಗಂಡಸರಿಗಿಂತ ಹೆಂಗಸರು ಹೆಚ್ಚಾಗಿ ಕಂಡು ಬರುತ್ತಾರೆ.

ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ತಾಲೂಕುಗಳಲ್ಲಿ ಹುಲಿಗೆಮ್ಮ, ಹುಲಗೆಪ್ಪ, ಎಂಬ ಹೆಸರಿನವರು ಅತಿ ಹೆಚ್ಚಾಗಿ ಕಂಡು ಬರುತ್ತಾರೆ. ಈ ದೇವರ ಪ್ರಭಾವ ದಟ್ಟವಾಗಿ ಈ ಎರಡು ಜಿಲ್ಲೆಗಳಲ್ಲಿ ಹರಡಿದೆ. ಈ ಹೆಸರಿನವರು ಹುಲಿಗೆಮ್ಮನ ಜಾತ್ರೆಗೆ ಹೋಗಬೇಕೆಂದು ನಂಬಿಕೆ ಇದೆ. ಪ್ರತೀತಿ ಇದೆ. ಹಾಗಾಗಿ ಹುಲಿಗೆಮ್ಮನ ಜಾತ್ರೆಗೆ ಹೋಗುತ್ತಾರೆ. ಹುಲಿಗೆಮ್ಮನ ಜಾತ್ರೆಯ ದಿನ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಭಕ್ತಾದಿಗಳು ಈ ಕ್ಷೇತ್ರದಲ್ಲಿ ಕಂಡು ಬರುತ್ತಾರೆ. ಈ ಕ್ಷೇತ್ರದ ಸುತ್ತಲೂ ಬಿಡಾರಗಳನ್ನು ಹಾಕಿರುತ್ತಾರೆ.

ಹುಲಿಗೆಮ್ಮ ಮತ್ತು ಹೊಸೂರಮ್ಮನ ಭಕ್ತ ಪರಂಪರೆಯಿಂದ ತಿಳಿದು ಬರುವ ಸಂಗತಿಗಳೆಂದರೆ.

ಹೊಸೂರಮ್ಮ ಸಂಸ್ಕೃತೀಕರಣಕ್ಕೆ ಒಳಗಾಗಿದ್ದಾಳೆ. ಹುಲಿಗೆಮ್ಮ ಆರೆ ಸಂಸ್ಕೃತೀಕರಣಕ್ಕೆ ಒಳಗಾಗಿದ್ದಾಳೆ. ಹುಲಿಗೆಮ್ಮನಿಗೆ ಬಲಿ ಆಚರಣೆ ಇದೆ. ಹಾಗೆಯೇ ಜೋಗತಿ ಸಂಪ್ರದಾಯ ಇದೆ. ಹುಲಿಗೆಮ್ಮನಿಗೆ ಜನಪ್ರಿಯತೆ ಇದೆ. ಹೊಸೂರಮ್ಮನಿಗೆ ಆಸ್ತಿ ಇದೆ. ಹುಲಿಗೆಮ್ಮನಿಗೆ ಇರುವ ಭಕ್ತರ ಸಂಖ್ಯೆ ಜಾಸ್ತಿ. ಹುಲಿಗೆಮ್ಮನ ಹತ್ತಿರ ಭೂಮಿ, ಆಸ್ತಿ ಮುಂತಾದವು ಇಲ್ಲ. ಹುಲಿಗೆಮ್ಮ ಇನ್ನೂ ತನ್ನ ಮೂಲದ ಆಚರಣೆಗಳನ್ನು ಬಿಟ್ಟುಕೊಟ್ಟಿಲ್ಲ. ಹುಲಿಗೆಮ್ಮ ಈಗಲೂ ಜನಪದ ದೈವವಾಗಿದ್ದಾಳೆ.

ಸಾಮಾನ್ಯವಾಗಿ ಹುಲಿಗೆಮ್ಮನ ಜಾತ್ರೆ ಒಂದು ತಿಂಗಳಿಗಳವರೆಗೆ ನಡೆಯುತ್ತದೆ. ಒಂದು ತಿಂಗಳವರೆಗೆ ಜಾತ್ರೆ ನಿಮಿತ್ತ ಹಾಕಿದ ಅಂಗಡಿಗಳು, ಜಾತ್ರೆ ಸಾಮಾನುಗಳು ಹಾಗೆಯೇ ಇರುತ್ತವೆ.

ರಾಜ ಮಹಾರಾಜರು, ಸಾಮಂತರರು ಜಾಗೀರು ಕೊಟ್ಟಿರುವುದಕ್ಕೆ ಮಾನ್ಯೇವು ಎಂದು ಕರೆಯುತ್ತಾರೆ. ಹೊಸೂರಮ್ಮನಿಗೆ ಕೊಟ್ಟಿರುವ ಮಾನ್ಯೇವು ೧೯೭೪ರಲಿ ಅವಾರ್ಡ ಆಗಿ ಎಲ್ಲ ಭೂಮಿಗಳು ಜನರಿಗೆ ಹೋದವು. ಬಹಳ ಆಸ್ತಿ ಹೊಸೂರಮ್ಮನದು ಇತ್ತು ಎಂಬುದು ಎಲ್ಲರ ಅನಿಸಿಕೆ.

ಹೊಸೂರಮ್ಮ ಗ್ರಾಮ ದೇವತೆ. ಹೊಸೂರು ಒಂದು ಗ್ರಾಮ. ಹೊಸೂರು ಗ್ರಾಮಕ್ಕೆ ಹೊಸೂರಮ್ಮ ಗ್ರಾಮ ದೇವತೆ ಆಗಿದ್ದಾಳೆ. ಹೊಸೂರಮ್ಮ ಪಾರ್ವತಿ ಸ್ವರೂಪದ ದೇವತೆ. ಆದುದರಿಂದ ಈಕೆಗೆ ಕುರಿ, ಕೋಳಿ ಬಲಿಕೊಡುವುದಿಲ್ಲ. ಹೊಸೂರಮ್ಮ ಮೂಲತಃ ಶಾಂತಿ ದೇವತೆ. ಶಾಂತಿ ಸ್ವರೂಪ, ಹೊಸೂರಿನ ದೇವಸ್ಥಾನ, ನಾರಾಯಣ, ದೇವರ ಕೆರೆಯಲ್ಲಿ ಮುಳುಗಿದ ದೇವಸ್ಥಾನ ಎರಡು ಒಂದೇ ರೀತಿ ಇದ್ದವು. ಹೊಸೂರಮ್ಮ, ಹುಲಿಗೆಮ್ಮ ದೇವರುಗಳ ಮೂರ್ತಿ ಎರಡು ಒಂದೇ ರೀತಿ ಇವೆ. ಆಚರಣೆ ಪೂಜೆ ವಿಧಾನ ಹಬ್ಬ ಎರಡು ಒಂದೇ ತರ ಇವೆ. ಅಲ್ಲಿಯೂ ಸಹ ಕೆಂಡವಿದೆ. ಪಾಯಸ ಕಾರ್ಯಕ್ರಮವಿದೆ.

ಹೊಸೂರಮ್ಮನ ಪಾಯಸ ಏಕಾದಶಿ ದಿನ ಆಗುತ್ತದೆ. ಹೊಸೂರಮ್ಮನ ಅಗ್ನಿ (ಕೆಂಡ) ಕೂಡಾ ಏಕಾದಶಿ ದಿನ ಆಗುತ್ತದೆ. ಹುಲಿಗೆಮ್ಮನ ಮತ್ತು ಹೊಸೂರಮ್ಮನ ಕಂಕಣವನ್ನು ಕಾರಿ ಹುಣ್ಣಿಮೆಯ ದಿನ ಬಿಚ್ಚುತ್ತಾರೆ. ಇಬ್ಬರ ಕಂಕಣವನ್ನು ಒಂದೇ ದಿನ ಬಿಚ್ಚುತ್ತಾರೆ. ಹುಲಿಗೆಮ್ಮ ಪಾದಗಟ್ಟಿಯ ಹತ್ತಿರ ನಿಂತು ಕಹಳೆ ಊದೂತ್ತಾರೆ ಇಬ್ಬರ ಕಂಕಣವನ್ನು ಆ ಸಮಯದಲ್ಲಿ ಬಿಚ್ಚುತ್ತಾರೆ.

ಹೊಸೂರಮ್ಮನ ಕೆಂಡ, ಪಾಯಸಕ್ಕಿಂತ ಮುಂಚಿತವಾಗಿ ಹೂವನ್ನು ಕೇಳುತ್ತಾರೆ. ಐದು ಹೂವಿನ ಹುಂಡಿಯನ್ನು ಹೊಸೂರಮ್ಮನಿಗೆ ಇಟ್ಟು ಹೂ ಕೇಳುತ್ತಾರೆ. ಆ ಐದು ಹೂವಿನ ಹುಂಡಿಯನ್ನು ಹೊಸೂರಮ್ಮ ಎಸೆಯುತ್ತಾಳೆ. ಎಸೆದ ಮೇಲೇಯೇ ಪಾಯಸ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಹೂ ಕೇಳುವಾಗ ಸಾರ್ವಜನಿಕರು ನೋಡುತ್ತಾರೆ. ಹೂ ಎಸೆಯುವುದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಾರೆ.

ಹೊಸೂರು ಗ್ರಾಮದಲ್ಲಿ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಹೊಸೂರು ಕ್ಷೇತ್ರದಲ್ಲಿ ಹಬ್ಬ ಹರಿದಿನಗಳಲ್ಲಿ ಹೊಸೂರಮ್ಮನ ಮುಖಂಡರು ಅವರೇ. ಅವರ ಸಮ್ಮುಖದಲ್ಲಿ ಕಾರಕ್ರಮ ಶುರುವಾಗುತ್ತದೆ. ನಾಯಕ ಸಮುದಾಯಗಳು ಮೊದಲಿನಿಂದಲೂ ಇಲ್ಲಿ ನೆಲೆಸಿದ್ದಾರೆ. ಹೊಲಗದ್ದೆಗಳಲ್ಲಿ ಹೊಸೂರಮ್ಮನ ಸುತ್ತಲೂ ಮಾಡುವವರು ಇವರೇ ಆಗಿದ್ದಾರೆ. ಹಬ್ಬ ಇತ್ಯಾದಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜನರೆಂದರೆ ನಾಯಕ ಜನಾಂಗದವರು. ಹೊಸಪೇಟೆ ಕೇರಿಗಳಲ್ಲಿ ವಾಸಿಸುವ ನಾಯಕ ಸಮುದಾಯದವರೇ ಈಗ ಹೊಸೂರಮ್ಮನ ದೇವಾಸ್ಥಾನದಲ್ಲಿ ನೆಲೆಸಿದ್ದಾರೆ. ಇವರಿಂದ ಹೊಸೂರು ಒಂದು ಗ್ರಾಮವಾಗಿ ಇಂದಿಗೂ ಉಳಿದುಬಂದಿದೆ. ವಿಶೇಷ ಪೂಜೆಗಳು ಹೊಸೂರಮ್ಮ ದೇವಾಸ್ಥಾನದಲ್ಲಿ ನಡೆಯುತ್ತವೆ.