ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ಅನೇಕ ವಸ್ತುಗಳನ್ನು ನೀಡಿವೆ. ಇವು ನಮ್ಮ ಬದುಕಿನ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿವೆ ಮತ್ತು ಇವುಗಳಲ್ಲಿ ಕೆಲವು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ; ನಾಗರಿಕ ಬದುಕಿಗೆ ಅನಿವಾರ್ಯ ಎನಿಸಿಕೊಂಡಿವೆ. ಈವತ್ತು ಯಾರಾದರೂ ಪ್ಲಾಸ್ಟಿಕ್ಕನ್ನು ಸಂಪೂರ್ಣವಾಗಿ ವರ್ಜಿಸಿ ಬದುಕುತ್ತೇನೆಂದು ಸವಾಲೆಸೆದರೆ ಅವರು ಸೋಲುವುದು ಖಂಡಿತ.

ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ನೀಡಿರುವ ಅನೇಕ ವಸ್ತುಗಳು ನಮ್ಮ ಸುಖವನ್ನು ಹೆಚ್ಚಿಸಿರುವಂತೆಯೇ ಕೆಲವು ವಸ್ತುಗಳು ನಮ್ಮ ಬದುಕನ್ನು ದುರ್ಬರಗೊಳಿಸಿವೆ. ಆ ವಸ್ತುಗಳು ಜನ್ಮ ಪಡೆದಾಗ ಅವುಗಳ ಮಾರಿ ರೂಪ ಗೋಚರವಾಗದೆ ಕಾಲಾಂತರದಲ್ಲಿ ಬೆಳಕಿಗೆ ಬಂದಿದೆ. ಅಂಥ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು.

ವಿಜ್ಞಾನದಲ್ಲಿ ಯಾವುದೇ ಶೋಧವಾದಾಗ ಅದರ ದೀರ್ಘಕಾಲೀನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ನಾವು ಕಾಯಬೇಕಾಗುತ್ತದೆ; ಸಂಯಮ ತೋರಬೇಕಾಗುತ್ತದೆ. ವಿಜ್ಞಾನಕ್ಕೆ ಸಂಯಮವಿದೆ. ಆದರೆ ತಂತ್ರಜ್ಞಾನಕ್ಕೆ, ಕೈಗಾರಿಕೆಗೆ ಸಂಯಮವಿರುವುದಿಲ್ಲ. ಲಾಭ ಬರುವುದಾದರೆ ಅದು ಏನನ್ನು ಬೇಕಾದರೂ ತಯಾರಿಸುತ್ತದೆ; ವಿಷವಾದರೂ ಸರಿ. ಮತ್ತದು ಎಲ್ಲವನ್ನೂಮುಕ್ಕುವ ಧಾವಂತದಲ್ಲಿ ಬೃಹತ್ತಾಗಿ ಮತ್ತು ವೇಗವಾಗಿ ತಯಾರಿಸುತ್ತದೆ. ಏಕೆಂದರೆ ಬೃಹತ್ ಮತ್ತು ವೇಗ ತಂತ್ರಜ್ಞಾನದ ಸ್ಥಾಯಿಪ್ರಜ್ಜೆಯಾಗಿದೆ. ಹೀಗಾಗಿ ಲಾಭ ತರುವ ವಸ್ತುವೊಂದರ ಶೋಧವಾಗುತ್ತಲೇ ಅದು ಎಲ್ಲಿಲ್ಲದ ಆತುರದಿಂದ ಅದರ ತಯಾರಿಕೆಗೆ ತೊಡಗುತ್ತದೆ ಮತ್ತು ಆ ಮೂಲಕ ಮನುಕುಲಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಇದೇ ತರಹದ ಅಪಾಯ ನಮಗೆ ಡಿಡಿಟಿಯಿಂದಲೂ ಆಗಿದೆ.

ಡಿಡಿಟಿಯನ್ನು ಕಂಡುಹಿಡಿದಾಗ ಸೊಳ್ಳೆಗಳ ನಿಯಂತ್ರಣಕ್ಕೆ ರಾಮಬಾಣ ದೊರಕಿತು ಎಂದು ಎಲ್ಲರೂ ಖುಷಿಪಟ್ಟರು. ಅದನ್ನು ಕಂಡುಹಿಡಿದ ವಿಜ್ಞಾನಿಗೆ ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಯಿತು. ಈಗೇನಾಗಿದೆ? ಅದು ಪರಿಸರಕ್ಕೆ ಮುಳ್ಳಾಗಿದೆ. ತಾಯಿಯ ಎದೆ ಹಾಲನ್ನು ಸೇರಿ ಅವಾಂತರವನ್ನು ಸೃಷ್ಟಿಸುತ್ತಿದೆ. ಹೀಗಾಗಿ ಅನೇಕ ದೇಶಗಳಲ್ಲಿ ಅದರ ಬಳಕೆಯನ್ನು ನಿಷೇಧಿಸಲಾಗಿದೆ. ಸಮಸ್ಯೆಯೊಂದಕ್ಕೆ ಕಂಡುಹಿಡಿದ ಪರಿಹಾರವೇ ಕಾಲಾಂತರದಲ್ಲಿ ಸಮಸ್ಯೆಯಾಗಿ ಕಾಡಿನ ಅನೇಕ ಉದಾಹರಣೆಗಳು ವಿಜ್ಞಾನದಲ್ಲಿ ಸಿಗುತ್ತವೆ. ಈ ಪಟ್ಟಿಗೆ ಈಚೆಗೆ ಪ್ಲಾಸ್ಟಿಕ್ ಸೇರಿದೆ.

ಪ್ಲಾಸ್ಟಿಕ್‌ನ್ನು ಕಂಡುಹಿಡಿದದ್ದು ಒಂದು ಆಕಸ್ಮಿಕ. ಹಿಂದೆ ಬಿಲಿಯರ್ಡ್ಸ್ ಚೆಂಡನ್ನು ದಂತದಿಂದ ತಯಾರಿಸುತ್ತಿದ್ದರು. ದಂತ ತುಂಬಾ ದುಬಾರಿಯಾದ ಕಾರಣ ಬಿಲಿಯರ್ಡ್ಸ್ ಚೆಂಡನ್ನು ತಯಾರಿಸಲು ಯೋಗ್ಯವಾದಂತ ಬೇರೆ ವಸ್ತುವನ್ನು ಕಂಡುಹಿಡಿದವರಿಗೆ ೧೦,೦೦೦ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕದ ಸಂಸ್ಥೆಯೊಂದು ೧೮೬೩ರಲ್ಲಿ ಪ್ರಕಟಿಸಿತು.

ಜಾನ್ ವೆಸ್ಲಿ ಹ್ಯಾಟ್ ಎಂಬ ೧೬ ವರ್ಷದ ಯುವಕ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆ ಅಚ್ಚುಮೊಳೆ ಜೋಡಿಸುವಾಗ ಅವನ ಬೆರಳಿಗೆ ಗಾಯವಾಯಿತು. ತಕ್ಷಣಕ್ಕೆ ಯಾವ ಔಷಧಿಯೂ ಸಿಗದಿದ್ದುದರಿಂದ ವೆಸ್ಲಿ ಹ್ಯಾಟ್, ಕೈಗೆ ಸಿಕ್ಕಿದ ಕೊಲೋಡಿಯನ್ ದ್ರಾವಣವನ್ನು ಗಾಯದ ಮೇಲೆ ಸವರಿದ. ಹೀಗೆ ಸವರಿದ ದ್ರಾವಣ ಸ್ವಲ್ಪ ಹೊತ್ತಿನಲ್ಲೇ ಒಣಗಿ ಹಗುರವಾದ ತೆಳು ಪೊರೆಯಂತಾಯಿತು. ಇದೇ ಮೊತ್ತಮೊದಲ ಪ್ಲಾಸ್ಟಿಕ್.

ಕೊಲೋಡಿಯನ್ ದ್ರಾವಣವೆಂಬುದು ನೈಟ್ರೊಸೆಲ್ಯುಲೋಸ್, ಮದ್ಯಸಾರ ಮತ್ತು ಈಥರ್‌ಗಳ ಮಿಶ್ರಣ. ಇದನ್ನು ಗಾಳಿಗೆ ತೆರೆದಿಟ್ಟರೆ ಮದ್ಯಸಾರ ಮತ್ತು ಈಥರ್ ಆವಿಯಾಗಿ ಅದು ಹಗುರವಾದ ತೆಳು ಪೊರೆಯಂತಾಗುತ್ತದೆ. ಹ್ಯಾಟ್ ಇದರಿಂದ ಬಿಲಿಯರ್ಡ್ಸ್ ಚಂಡನ್ನು ತಯಾರಿಸಿ ಬಹುಮಾನವನ್ನು ಗೆಲ್ಲದಿದ್ದರೂ ಮೊದಲ ಪ್ಲಾಸ್ಟಿಕ್ ಜನಕನೆಂಬ ಹೆಸರಿಗೆ ಪಾತ್ರನಾದ.

ಅಲ್ಲಿಂದಾಚೆ ನೂರಾರು ತರಹ ಪ್ಲಾಸ್ಟಿಕ್‌ಗಳ ಶೋಧವಾಗಿದೆ. ಒಂದೊಂದಕ್ಕೂ ಅವುಗಳದೇ ಆದ ಗುಣಲಕ್ಷಣಗಳಿವೆ. ಆ ಗುಣಲಕ್ಷಣಗಳಿಗೆ ತಕ್ಕಂತೆ ಅವುಗಳಿಂದ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಈವತ್ತು ತಿನ್ನುವ ಆಹಾರವೊಂದನ್ನು ಬಿಟ್ಟು ಉಳಿದೆಲ್ಲ ವಸ್ತುಗಳನ್ನು ತಯಾರಿಸಲು ಬರುವಂಥ ಪ್ಲಾಸ್ಟಿಕ್‌ಗಳು ಮಾರುಕಟ್ಟೆಯಲ್ಲಿವೆ.

ಕೆಲವು ಸಣ್ಣ ಸಣ್ಣ ಅಣುಗಳು ರಾಸಾಯನಿಕ ಬಂಧಗಳಿಗೆ ಸಿಲುಕಿ ದೈತ್ಯ ಅಣುಗಳಾಗುತ್ತವೆ. ಇವುಗಳನ್ನು ಪಾಲಿಮರುಗಳೆಂದು ಕರೆಯುತ್ತಾರೆ. ಪಾಲಿಮರುಗಳ ಗುಣಲಕ್ಷಣಗಳು ವಿಶೇಷವಾಗಿ ಅವುಗಳ ಅಣುರಚನೆಯನ್ನು ಅವಲಂಬಿಸಿವೆ. ಅಣುರಚನೆಯನ್ನು ಬದಲಿಸಿ ಬೇಕಾದಂತ ಪಾಲಿಮರನ್ನು ತಯಾರಿಸಬಹುದು. ಈ ಪಾಲಿಮರುಗಳೇ ಪ್ಲಾಸ್ಟಿಕ್ಕುಗಳು.

ಅಪಾಯವೇನು?

ಪ್ಲಾಸ್ಟಿಕ್ಕುಗಳಿಂದ ಅಪಾಯವೇನು? ಏಕೆ ಈವತ್ತು ಜಗತ್ತಿನಾದ್ಯಂತ ಅದರ ವಿರುದ್ಧ ಸಮರ ಸಾರಲಾಗಿದೆ? ಅದರ ಬಳಕೆಯನ್ನು ಕಡಿಮೆ ಮಾಡಬೇಕೆಂದು ಸರಕಾರಗಳೂ ಸೇರಿದಂತೆ ಅನೇಕರು ಒತ್ತಾಯಿಸುತ್ತಿದ್ದಾರೆ?

ಪ್ಲಾಸ್ಟಿಕ್ಕುಗಳಲ್ಲಿ ಸ್ವಾಭಾವಿಕ ಪ್ಲಾಸ್ಟಿಕ್ಕುಗಳೂ ಇವೆ. ರೇಷ್ಮೆ, ಮರವಜ್ರ ಮೊದಲಾದವು ಸ್ವಾಭಾವಿಕ ಪ್ಲಾಸ್ಟಿಕ್ಕುಗಳು. ಇವು ಪ್ರಕೃತಿದತ್ತ ವಸ್ತುಗಳಾದ್ದರಿಂದ ಪ್ರಕೃತಿ ನಿಯಮವನ್ನು ಪಾಲಿಸುವಂಥವು. ಈ ಕಾರಣಕ್ಕಾಗಿಯೇ ಇವುಗಳಿಂದ ನಮಗೆ ಅಥವಾ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ತೊಂದರೆ ಇರುವುದು ಕೃತಕವಾಗಿ ತಯಾರಿಸಿರುವ ನೂರಾರು ತರದ ಪ್ಲಾಸ್ಟಿಕ್ಕುಗಳಿಂದ. ಮೊದಲಿಗೆ, ಸರಿಸುಮಾರು ಈ ಶತಮಾನದ ಪ್ರಾರಂಭದಲ್ಲಿ, ಇವು ಜನಬಳಕೆಗೆ ಬಂದಾಗ ಅವುಗಳ ಗುಣಗಳ ಪೂರ್ಣ ಪರಿಚಯ ಯಾರಿಗೂ ಇರಲಿಲ್ಲ ಮತ್ತು ಆ ಕಾಲಕ್ಕೆ ಪರಿಸರದ ಮೇಲಾಗುವ ದುಷ್ಪರಿಣಾಮ ಕುರಿತು ಯಾರಿಗೂ ಎಚ್ಚರವಿರಲಿಲ್ಲ. ಹೀಗಾಗಿ ಪ್ಲಾಸ್ಟಿಕ್ಕನ್ನು ಅದರ ಆಗಾಧ ಅನುಕೂಲತೆಗಳಿಗಾಗಿ ಎಲ್ಲರೂ ತೆರೆದ ತೋಳಿನಿಂದ ಸ್ವಾಗತಿಸಿ ಅದಕ್ಕೆ ಎಲ್ಲೆಡೆಯೂ ಸ್ಥಾನ ಕೊಟ್ಟರು – ತಲೆಬಾಗಿಲಿನಿಂದ ಹಿಡಿದು ದೇವರ ಪೀಠದವರೆಗೆ. ಹೀಗೆ ನಮ್ಮ ಮನೆ – ಮನವನ್ನು ಹೊಕ್ಕ ಪ್ಲಾಸ್ಟಿಕ್ ಇಂದು ಮಾರಿಯಾಗಿ ನಮ್ಮನ್ನು ಕಾಡುತ್ತಿದೆ.

ಕೃತಕ ಪ್ಲಾಸ್ಟಿಕ್ಕುಗಳು ಪ್ರಕೃತಿಗೆ ವಿಮುಖವಾದವುಗಳು. ಅವು ಪ್ರಕೃತಿಗೆ ಅಪಥ್ಯ ವಸ್ತುಗಳಾಗಿದ್ದು, ಪರಿಸರ ಅವುಗಳನ್ನು ಸಹಿಸದು. ಇದಕ್ಕೆ ಕಾರಣ ಪ್ಲಾಸ್ಟಿಕ್ ವಸ್ತುಗಳು ’ಹುಟ್ಟಿದ್ದು ಸಾಯಲೇಬೇಕು’ ಎಂಬ ಪ್ರಕೃತಿ ನಿಯಮವನ್ನು ಧಿಕ್ಕರಿಸುತ್ತವೆ. ಇವುಗಳಿಗೆ ಸಾವೇ ಇಲ್ಲ. ಇವು ಇತರೆ ಪರಿಸರ ಪಥ್ಯ ವಸ್ತುಗಳಂತೆ ಪರಿಸರದಲ್ಲಿ ವಿಲೀನವಾಗುವುದಿಲ್ಲ. ಕೊಳೆತು ಗೊಬ್ಬರವಾಗುವುದಿಲ್ಲ. ನೂರಾರು ವರ್ಷಗಳವರೆಗೆ ಏನೂ ಆಗದೇ ಹಾಗೇ ಇರುತ್ತವೆ. ಪರಿಸರದಲ್ಲಿ ಬಿದ್ದ ಪ್ಲಾಸ್ಟಿಕ್ ರಾಶಿರಾಶಿಯಾಗಿ ಬೆಳೆಯುತ್ತಾ ಹೋಗುತ್ತದೆ ಮತ್ತು ಈ ರಾಶಿ ಕರಗುವುದೇ ಇಲ್ಲ. ಇದು ತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ಅಸಾಧ್ಯಗೊಳಿಸುತ್ತದೆ. ಹೀಗಾಗಿ ಮುಂದೊಂದು ದಿನ ನಮಗೆ ಯಾವುದೇ ತ್ಯಾಜ್ಯವನ್ನು ಎಸೆಯಲು ಜಾಗವೇ ಇಲ್ಲದಂತೆ ಆಗುತ್ತದೆ. ಅಷ್ಟೇ ಅಲ್ಲ. ನಾವು ಹೆಜ್ಜೆಯೂರಲೂ ಒಂದು ಪಾದದಷ್ಟು ಸ್ವಚ್ಛ ಜಾಗ ಉಳಿಯದಂತಾಗುತ್ತದೆ.

ತ್ಯಾಜ್ಯ ಸಮಸ್ಯೆಯ ದೃಷ್ಟಿಯಿಂದ ಅಲ್ಪಕಾಲೀನ ಉಪಯೋಗದ ಪ್ಲಾಸ್ಟಿಕ್ ವಸ್ತುಗಳು – ಬಹು ಮುಖ್ಯವಾಗಿ ಎಲ್ಲ ಥರದ ಪ್ಯಾಕೇಜಿಂಗ್ ಪ್ಲಾಸ್ಟಿಕ್ಕುಗಳು – ಅತ್ಯಂತ ಗಂಡಾಂತರಕಾರಿ. ಇವು ಐದಾರು ನಿಮಿಷಗಳಿಂದ ಐದಾರು ದಿನಗಳೊಳಗೆ ತಮ್ಮ ಉಪಯೋಗವನ್ನು ಮುಗಿಸಿ ರಸ್ತೆ, ಗಟಾರ ಅಥವಾ ಯಾವುದಾದರೂ ಖಾಲಿ ಜಾಗಗಳನ್ನು ಸೇರುತ್ತವೆ. ತ್ಯಾಜ್ಯ ರಾಶಿಯ ಪ್ರಮಾಣವನ್ನು ಬೃಹತ್ತಾಗಿ ಮತ್ತು ವೇಗವಾಗಿ ಹೆಚ್ಚಿಸುತ್ತವೆ. ಈ ದೃಷ್ಟಿಯಿಂದ ದೀರ್ಘಕಾಲೀನ ಉಪಯೋಗದ ಪ್ಲಾಸ್ಟಿಕ್ ವಸ್ತುಗಳು – ಕುರ್ಚಿಗಳು, ವಾಟರ್ ಟ್ಯಾಂಕುಗಳು ಇತ್ಯಾದಿ – ಅಷ್ಟು ಆತಂಕವನ್ನು ಉಂಟುಮಾಡುವುದಿಲ್ಲ. ಆದರೂ ಜೀವಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲ ಥರದ ಪ್ಲಾಸ್ಟಿಕ್ ವಸ್ತುಗಳೂ ಅಪಾಯಕಾರಿಗಳೇ.

ಪ್ಲಾಸ್ಟಿಕ್ ವಸ್ತುಗಳಿಗೆ ಸಂಬಂಧಿಸಿದಂತೆ, ಬಹುತೇಕ ಎಲ್ಲ ಕೃತಕ ವಸ್ತುಗಳಿಗಿದ್ದಂತೆ, ಒಂದು ಮೋಸದ ಗುಣವಿದೆ. ಬಳಕೆಗೆ ಸಿದ್ಧವಾದ ಪ್ಲಾಸ್ಟಿಕ್ ವಸ್ತು ಯಾವತ್ತೂ ನಿರಪಾಯಕಾರಿಯಾಗಿ ಕಾಣುತ್ತದೆ. ಅಂದಚಂದದಿಂದ ರಂಗುರಂಗಾಗಿ ಮಿರಮಿರನೆ ಮಿರುಗುತ್ತಾ ನಮ್ಮನ್ನಾಕರ್ಷಿಸುವಂತಿರುತ್ತವೆ. ಆದರೆ ಅವುಗಳ ಜನ್ಮಮೂಲದಲ್ಲೇ ವಿಷಬೀಜ ಅಡಗಿರುತ್ತದೆ. ಇದು ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಹೀಗಾಗಿ ಜನ ಅವುಗಳನ್ನು ಎಗ್ಗಿಲ್ಲದೆ ಬಳಸುತ್ತಾರೆ.

ತಯಾರಿಕಾ ಹಂತದಲ್ಲಿ ಪ್ಲಾಸ್ಟಿಕ್ ಉಂಟುಮಾಡುವ ಮಾಲಿನ್ಯ ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ೧೯೮೬ರಲ್ಲಿ ತೀರ ಅಪಾಯಕಾರಿ ತ್ಯಾಜ್ಯವನ್ನು ಉತ್ಪಾದಿಸುವ ಇಪ್ಪತ್ತು ರಾಸಾಯನಿಕಗಳ ರ‍್ಯಾಂಕಿಂಗ್ ಪಟ್ಟಿಯೊಂದನ್ನು ತಯಾರಿಸಿತ್ತು. ಅದರಲ್ಲಿ ಮೊದಲ ಐದು ರಾಸಾಯನಿಕಗಳು ಪ್ಲಾಸ್ಟಿಕ್ ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂಥವುಗಳಾಗಿವೆ.

ಪ್ಲಾಸ್ಟಿಕ್ ತಯಾರಿಕೆಗೆ ಕ್ಯಾಡ್ಮಿಯಂ, ಟೈಟಾನಿಯಂ ಡೈ ಆಕ್ಸೈಡ್, ಫಾಸ್ಟೇಟ್, ಥಾಲೈಟ್ಸ್, ಪಾಲಿಕ್ಲೋನಿನೇಟೆಡ್ ಬೈಫಿನೈಲ್, ಆರ್ತೋ ಟೈಕ್ರಿಸಾಯಿನ್, ಎಥಿಲಿನ್, ಪೊಲಿವಿನೈಲ್ ಕ್ಲೋರೈಡ್, ಡಯಾಕ್ಸಿನ್ ಹಾಗೂ ಸೀಸದಿಂದ ಕೂಡಿದ ಅನೇಕ ರಾಸಾಯನಿಕಗಳನ್ನು ಬಳಸುತ್ತಾರೆ. ಇವುಗಳೆಲ್ಲ ತಮ್ಮದೇ ಆದ ರೀತಿಯಲ್ಲಿ ವಿಷದ ತುತ್ತುಗಳು. ಇವು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲವು. ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ನರಮಂಡಲಕ್ಕೆ ಧಕ್ಕೆಯುಂಟುಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿಯುಂಟುಮಾಡಬಲ್ಲವು.

ಸಿದ್ಧ ಪ್ಲಾಸ್ಟಿಕ್ ವಸ್ತುಗಳು ಸಾಮಾನ್ಯವಾಗಿ ಯಾವುದರೊಂದಿಗೂ ವರ್ತಿಸದೆ ತಮ್ಮ ಪಾಡಿಗೆ ತಾವು ಇರುತ್ತವೆ ಎಂಬುದು ನಿಜವಾದರೂ ತೇವಾಂಶವಿರುವ ಆಹಾರ ಪದಾರ್ಥಗಳನ್ನು (ಉದಾ : ಉಪ್ಪಿನಕಾಯಿ) ದೀರ್ಘಕಾಲ ಪ್ಲಾಸ್ಟಿಕ್ಕಿನೊಂದಿಗೆ ಸಂಪರ್ಕದಲ್ಲಿರಿಸುವುದರಿಂದ ಅವು ವಿಷವಾಗಿ ಪರಿವರ್ತನೆಗೊಳ್ಳುತ್ತವೆ. ಪ್ಲಾಸ್ಟಿಕ್ಕಿನಲ್ಲಿರುವ ಕೆಲವೊಂದು ವಿಷಕಾರಿ ರಾಸಾಯನಿಕಗಳು ದೀರ್ಘಕಾಲದ ಸಂಪರ್ಕದಲ್ಲಿ ಆಹಾರ ಪದಾರ್ಥಗಳೊಂದಿಗೆ ವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ.

ನಾವು ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳು ಹೊಲಗದ್ದೆಗಳನ್ನು ಸೇರಿದಾಗ ಅವು ಎರೆಹುಳುಗಳ ಉಸಿರುಕಟ್ಟಿಸಿ ಅವುಗಳ ಬೆಳವಣಿಗೆಯನ್ನು ತಡೆಯುತ್ತವೆ. ಮಣ್ಣಿನ ಫಲವತ್ತತೆ ಕ್ಷೀಣಿಸುವಂತೆ ಮಾಡುತ್ತವೆ. ಸಸ್ಯಗಳ ಬೇರುಗಳು ನೆಲದಲ್ಲಿ ಹರಡದಂತೆ ತಡೆಯುತ್ತವೆ.

ಅಂತರ್ಜಲ ಕುಸಿತ

ಮಣ್ಣಿನಲ್ಲಿ ಸೇರಿಕೊಂಡ ಪ್ಲಾಸ್ಟಿಕ್ ವಸ್ತುಗಳು ಮಳೆಯ ನೀರು ನೆಲದಲ್ಲಿ ಇಂಗದಂತೆ ಮಾಡಿ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುತ್ತವೆ. ನಮ್ಮ ಬಾವಿ, ಕೆರೆಗಳಿಗೆ ಬರುವ ನೀರಿಗೆ ತಡೆಯೊಡ್ಡುತ್ತವೆ. ಜಲಕ್ಷಾಮಕ್ಕೆ ಪರೋಕ್ಷವಾಗಿ ಕಾರಣವಾಗುತ್ತವೆ. ಈಗ ಸಾರ್ವತ್ರಿಕವಾಗಿರುವ ಜಲಬರದಿಂದಾಗಿ ಇಂದು ಮಹಿಳೆಯರು ನೀರು ಸಂಗ್ರಹಿಸಲು ಹತ್ತಾರು ಪ್ಲಾಸ್ಟಿಕ್ ಬಿಂದಿಗೆಗಳನ್ನು ಇಟ್ಟುಕೊಳ್ಳುವ ಅನಿವಾರ್ಯಕ್ಕೆ ಬಲಿಯಾಗಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಬೇರೆ – ಸ್ಟೀಲ್, ಹಿತ್ತಾಳೆ ಇತ್ಯಾದಿ – ಬಿಂದಿಗೆಗಳನ್ನು ಕೊಳ್ಳುವುದು ತುಂಬಾ ದುಬಾರಿಯಾಗುತ್ತದಲ್ಲ! ಹಿಂದೆ ಇದೇ ಕೆಲಸಕ್ಕೆ ಒಂದೆರಡು ಬಿಂದಿಗೆಗಳು ಸಾಕಾಗುತ್ತಿದ್ದವು. ಇದು ಒಂದು ರೀತಿಯಲ್ಲಿ ಪ್ಲಾಸ್ಟಿಕ್ ವಿಷವೃತ್ತವನ್ನು ಹುಟ್ಟುಹಾಕಿದೆ.

ರಸ್ತೆ ಗಟಾರಗಳನ್ನು ಸೇರುವ ಪ್ಲಾಸ್ಟಿಕ್ ವಸ್ತುಗಳು ಮತ್ತೊಂದು ಅನಾಹುತವನ್ನು ಉಂಟುಮಾಡುತ್ತವೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡ್ಡಿಯುಂಟುಮಾಡುತ್ತವೆ. ನಿಂತ ನೀರು ಕ್ರಿಮಿಕೀಟಗಳಿಗೆ ಆಶ್ರಯ ಕಲ್ಪಿಸಿ ಸಾಂಕ್ರಾಮಿಕ ರೋಗಗಳು ಹರಡುವಂತೆ ಮಾಡುತ್ತದೆ.

ಪರಿಸರ ಪಥ್ಯ ವಸ್ತುಗಳಿಂದ ಬೀಳುವ ತ್ಯಾಜ್ಯದ ವಿಲೇವಾರಿ ಕೊಂಚ ಸಮಸ್ಯೆಯೇ. ಆದರೂ ಅದು ಪರಿಸರ ಅಪಥ್ಯ ವಸ್ತುವಾದ ಪ್ಲಾಸ್ಟಿಕ್‌ನಷ್ಟು ಗಂಭೀರವಾದುದಲ್ಲ. ಏಕೆಂದರೆ ಪರಿಸರ ಪಥ್ಯ ತ್ಯಾಜ್ಯ ಇದ್ದಲ್ಲೇ ಕರಗುತ್ತದೆ. ಒಂದಲ್ಲ ಒಂದು ಜೀವಿ ಅದನ್ನು ತಿಂದು ಅರಗಿಸಿಕೊಂಡು ಮಣ್ಣಿಗೆ ಅಗತ್ಯವಾದ ಗೊಬ್ಬರವಾಗಿ ಪರಿವರ್ತಿಸುತ್ತದೆ – ವಿಶೇಷವಾಗಿ ಸೂಕ್ಷ್ಮಜೀವಿಗಳು. ಆದರೆ ಪ್ಲಾಸ್ಟಿಕ್ ಹಾಗೆ ಕರಗುವುದಿಲ್ಲ. ಆದ್ದರಿಂದಲೇ ತ್ಯಾಜ್ಯವನ್ನು ಸುರಿಯುವ ಜಾಗಗಳು ವೇಗವಾಗಿ ನಮ್ಮ ನಗರಸಭೆ ಮತ್ತು ಪುರಸಭೆಗಳ ಕೈತಪ್ಪಿ ಹೋಗುತ್ತಿವೆ.

ಒಂದೊಮ್ಮೆ ಪ್ಲಾಸ್ಟಿಕ್ಕನ್ನು ಸುಟ್ಟು ಅವುಗಳಿಂದ ಬಿಡುಗಡೆ ಪಡೆಯೋಣವೆಂದರೆ ಅದೂ ಸಾಧ್ಯವಿಲ್ಲ. ಪ್ಲಾಸ್ಟಿಕ್ಕನ್ನು ಸುಟ್ಟಾಗ ಪೋಸ್ಟೀನ್, ಕಾರ್ಬನ್ ಮಾನಾಕ್ಸೈಡ್, ಕ್ಲೋರೀನ್, ಸಲ್ಫರ್ ಡೈ ಆಕ್ಸೈಡ್, ಡಯಾಕ್ಸಿನ್ ಮುಂತಾದ ವಿಷಾನಿಲಗಳು ವಾತಾವರಣವನ್ನು ಸೇರುತ್ತವೆ. ಇವುಗಳಿಂದ ಕ್ಯಾನ್ಸಕ್ ಸೇರಿದಂತೆ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ತೀವ್ರವಾಗುತ್ತದೆ. ಇಷ್ಟಾಗಿ ಪ್ಲಾಸ್ಟಿಕ್ಕನ್ನು ಸುಟ್ಟಾಗ ಕೂಡ ಅದು ಪೂರ್ಣ ಮಾಯಾವಾಗುವುದಿಲ್ಲ. ಕೊನೆಯಲ್ಲಿ ಗಟ್ಟಿ ಮುದ್ದೆಯ ರೂಪ ಪಡೆದು ನಮ್ಮನ್ನು ಮತ್ತು ಪರಿಸರವನ್ನು ಅಣಕಿಸುತ್ತ ಹಾಗೆಯೇ ಇದ್ದುಬಿಡುತ್ತದೆ.

ಪ್ಲಾಸ್ಟಿಕ್ಕನ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಜೀವಿಯೊಂದು ಇದ್ದಿದ್ದರೆ ಪ್ಲಾಸ್ಟಿಕ್ ನಮಗೆ ಇಂದು ಇಷ್ಟು ದೊಡ್ಡ ಸಮಸ್ಯೆಯಗಿ ಕಾಡುತ್ತಿರಲಿಲ್ಲ. ಆದರೆ ಈವತ್ತಿನವರೆಗೆ ಪ್ಲಾಸ್ಟಿಕ್ಕನ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಯಾವ ಸೂಕ್ಷ್ಮಜೀವಿಯಾಗಲಿ ಅಥವಾ ಪ್ರಾಣಿಯಾಗಲಿ ಹುಟ್ಟಿಬಂದಿಲ್ಲ. ಬದಲಿಗೆ, ಭಾರತದಲ್ಲಿ ಪ್ರತಿ ವರ್ಷ ಪ್ಲಾಸ್ಟಿಕ್ ತಿಂದು ಸುಮಾರು ೨೦,೦೦೦ ದನಕರುಗಳು ಜೀವ ಕಳೆದುಕೊಳ್ಳುತ್ತಿವೆ.

ವಿಜ್ಜಾನದ ನೆಚ್ಚಿಕೆ ಎಷ್ಟು?

ಈ ಮಧ್ಯೆ ವಿಜ್ಞಾನಿಗಳು ಪ್ಲಾಸ್ಟಿಕ್ಕನ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಜೀವಿಯ ಶೋಧದಲ್ಲಿ ತೊಡಗಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಆಗಾಗ ‘ಇನ್ನೇನು ಸಿಕ್ಕಿತು, ಇನ್ನೇನು ಸಿಕ್ಕಿತು’ ಎಂಬಂಥ ಮರೀಚಿಕೆಯ ವರದಿಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇವುಗಳ ಆಧಾರದ ಮೇಲೆ ಕೆಲವರು ‘ವಿಜ್ಜಾನ ಎಲ್ಲ ಸಮಸ್ಯೆಗೂ ಪರಿಹಾರವನ್ನು ಕಂಡುಹಿಡಿಯುತ್ತದೆ. ನಾವೇಕೆ ಚಿಂತಿಸಬೇಕು?’ ಎಂಬ ಅತೀ ವಿಶ್ವಾಸದ ಮಾತುಗಳನ್ನು ಆಡುತ್ತಾರೆ. ಇದರಿಂದ ನಾವೆಲ್ಲ ಮೋಸಹೋಗುವ ಸಾಧ್ಯತೆ ಇದೆ. ಏಕೆಂದರೆ ವಿಜ್ಞಾನದಲ್ಲಿ ಎಲ್ಲ ಶೋಧಗಳ ಯಶಸ್ಸು ನಿಶ್ಚಿತವಾದರೂ ಅವುಗಳ ಸಮಯ ನಿಶ್ಚಿತವಲ್ಲ. ಅದು ಒಂದು ವರ್ಷದಲ್ಲಾಗಬಹುದು ಅಥವಾ ನೂರು ವರ್ಷದಲ್ಲಾಗಬಹುದು. ಯಾವ ವಿಜ್ಞಾನಿಯೂ ಇಂಥದ್ದನ್ನ ಇಂಥ ದಿನದೊಳಗೆ ಕಂಡುಹಿಡಿಯುಏನೆ ಎಂದು ಬಾಜಿ ಕಟ್ಟಿ ಹೇಳಲಾರ. ಪ್ಲಾಸ್ಟಿಕ್ಕನ್ನು ತಿನ್ನುವ ಜೀವಿಯ ಶೋಧ ಇನ್ನೂ ಕೆಲವು ದಶಕಗಳಲ್ಲಿ ಸಾಧ್ಯವಾಗಲಿಲ್ಲ ಎಂದಿಟ್ಟುಕೊಳ್ಳಿ. ಆಗ ಪ್ರಪಂಚದ ಸ್ಥಿತಿ ಏನಾಗಿರುತ್ತದೆ?… ‘ಹಸಿರೆಲ್ಲ ಬರಿದಾಗಿ, ಭೂಮಿ ಬರಡಾಗಿ, ಮರಳಿನ ಬಿಸಿಗಾಳಿ ಯಾವ ತಡೆಯೂ ಇಲ್ಲದೆ ರಭಸದಿಂದ ಬೀಸಲು ಆರಂಭಿಸಿದಾಗ ಕೇವಲ ಪ್ಲಾಸ್ಟಿಕ್ ವಸ್ತುಗಳೇ ಇಡೀ ಭೂಮಂಡಲದ ಮೇಲೆಲ್ಲ ಹಾರಾಡುತ್ತಿರುತ್ತವೆ.’

ಪ್ಲಾಸ್ಟಿಕ್ ಹಾವಳಿಯಿಂದ ಜಗತ್ತನ್ನು ಉಳಿಸುವುದು ಹೇಗೆ? ಇರುವುದು ಒಂದೇ ದಾರಿ. ಪ್ಲಾಸ್ಟಿಕ್ ತಯಾರಿಕೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ವರ್ಜಿಸುವುದು. ಆದರೆ ಈವತ್ತಿನ ಪರಿಸ್ಥಿತಿಯಲ್ಲಿ ಎಲ್ಲ ಸಂದರ್ಭಗಳಲ್ಲೂ ಇದು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ನಾವು ಸಾಧ್ಯವಿರುವೆಡೆಯಲ್ಲೆಲ್ಲ ಅದನ್ನು ಸಂಪೂರ್ಣವಾಗಿ ವರ್ಜಿಸಬೇಕು. ಅನಿವಾರ್ಯವೆಂದಾಗ ಮಾತ್ರ ಉಪಯೋಗಿಸಬೇಕು. ಇದರ ಜೊತೆಗೆ ನಾವು ಉಪಯೋಗಿಸುವ ಪ್ಲಾಸ್ಟಿಕ್ ವಸ್ತುಗಳ ಪ್ರಮಾಣವನ್ನು ಕಡಿತಗೊಳಿಸಬೇಕು. ಒಂದು ಪ್ಲಾಸ್ಟಿಕ್ ವಸ್ತುವಿನಿಂದ ಆಗುವ ಕೆಲಸಕ್ಕೆ ಹತ್ತನ್ನು ಖರೀದಿಸಬಾರದು (ಬಿಟ್ಟಿ ಸಿಗುತ್ತದೆಯೆಂದರೂ ತೆಗೆದುಕೊಳ್ಳಬಾರದು). ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಹೆಚ್ಚು ಸಲ ಮರುಬಳಕೆ ಮಾಡಬೇಕು. ಒಂದು ಪ್ಲಾಸ್ಟಿಕ್ ಕ್ಯಾರಿಬ್ಯಾಗನ್ನು ನೀವು ಹತ್ತು ಸಲ ಉಪಯೋಗಿಸಿದರೆ ಹತ್ತು ಹೊಸ ಪ್ಲಾಸ್ಟಿಕ್ ಕ್ಯಾರಿಬ್ಯಾಗನ್ನು ಕೊಳ್ಳುವುದು ತಪ್ಪುತ್ತದೆ. ಇಲ್ಲಿ ಬಂದಿರುವ ‘ಆದಷ್ಟು, ಸಾಧ್ಯವಿರುವೆಡೆ, ಅನಿವಾರ್ಯವಾದಾಗ ಮಾತ್ರ’ ಎಂಬುದನ್ನು ತೀರ್ಮಾನಿಸುವಾಗ ನಾವು ನಮ್ಮಷ್ಟಕ್ಕೆ ಪ್ರಾಮಾಣಿಕವಾಗಿರಬೇಕು ಮತ್ತ್ತು ಈ ತೀರ್ಮಾನ ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆ ಹಿತವನ್ನಷ್ಟೇ ಆಧರಿಸಿರಬೇಕು. ಯಾವುದು ತೀರ ಅಗತ್ಯ ಮತ್ತು ಎಷ್ಟು ಅಗತ್ಯ ಎಂಬುದನ್ನು ನಿರ್ಧರಿಸುವ ಇದನ್ನು ನಾವು ‘ಅಗತ್ಯ ಪ್ರಜ್ಞೆಯ ಸೂತ್ರ’ ವೆಂದು ಕರೆಯಬಹುದು.

ಪ್ಲಾಸ್ಟಿಕ್ ವಸ್ತುಗಳ ವರ್ಜನೆ ಮತ್ತು ಕಡಿತದ ಬಗ್ಗೆ ಮಾತನಾಡುವಾಗಲೆಲ್ಲ ಸಾಮಾನ್ಯವಾಗಿ ಜನ ಒಂದು ಪ್ರಶ್ನೆಯನ್ನು ಎತ್ತುತ್ತಾರೆ: ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವೆಲ್ಲಿದೆ? ಪರ್ಯಾಯ ಯಾವುದಕ್ಕಿಲ್ಲ ಎಂದು ನಾವು ಕೇಳಬೇಕಾಗಿದೆ. ಪ್ಲಾಸ್ಟಿಕ್ ವ್ಯಾಪಕ ಬಳಕೆಗೆ ಬಂದು ಒಂದೆರಡು ದಶಕಗಳಾಗಿವೆ ಅಷ್ಟೆ. ಅದಕ್ಕೂ ಮುಂಚೆ ನಾವು ಈವತ್ತು ಉಪಯೋಗಿಸುತ್ತಿರುವ ಪ್ಲಾಸ್ಟಿಕ್ ವಸ್ತುಗಳಿಗೆ ಬದಲಿಯಾದ ವಸ್ತುಗಳನ್ನು ಬಳಸುತ್ತಿರಲಿಲ್ಲವೆ? ಆಗ ಯಾರೂ ಅಂಗಡಿಗಳಿಂದ ವಸ್ತುಗಳನ್ನು ತರುತ್ತಿರಲಿಲ್ಲವೆ? ಅವುಗಳನ್ನು ಅಂಗಡಿಯವನು ಕಾಗದದಲ್ಲಿ ಪೊಟ್ಟಣ ಕಟ್ಟಿಕೊಡುತ್ತಿರಲಿಲ್ಲವೆ? ಅಥವಾ, ನಾವು ತೆಗೆದುಕೊಂಡು ಹೋಗುತ್ತಿದ್ದ ಕೈಚೀಲಗಳಲ್ಲಿ ಹಾಕಿಕೊಡುತ್ತಿರಲಿಲ್ಲವೆ? ಪ್ರಕೃತಿ ಕೊಟ್ಟ ಹೂಗಳು ಮತ್ತು ಪತ್ರೆಗಳಿಂದ ದೇವರನ್ನು ಪೂಜಿಸುತ್ತಿರಲಿಲ್ಲವೆ? ಬಿದಿರಿನಿಂದ ಹೆಣೆದ ಬುಟ್ಟಿ, ತಟ್ಟೆ, ಮರ ಇತ್ಯಾದಿಗಳು ಬಳಕೆಯಲ್ಲಿರಲಿಲ್ಲವೆ? ಹೀಗೆ ಎಲ್ಲಕ್ಕೂ ಪರ್ಯಾಯಗಳಿದ್ದವು. ನಾವು ಅವುಗಳನ್ನು ಮರೆತಿದ್ದೇವಷ್ಟೆ ಅಥವಾ ನಮ್ಮ ಸೋಮಾರಿತನದಿಂದಾಗಿ ಬೇಕೆಂದೇ ಅವುಗಳನ್ನು ದೂರವಿಟ್ಟು, ಪ್ರಕೃತಿ ವಿಮುಖರಾಗಿದ್ದೇವೆ. ದೂರವಿಡಬೇಕಾಗಿದ್ದ ಪ್ಲಾಸ್ಟಿಕ್ಕನ್ನು ಆಪ್ಯಾಯಮಾನವೆಂದು ತಬ್ಬಿಕೊಂಡಿದ್ದೇವೆ.

ಮತ್ತೊಂದು ಪ್ರಶ್ನೆ : ಪ್ಲಾಸ್ಟಿಕ್ ವಸ್ತುಗಳನ್ನು ವರ್ಜಿಸಿ ಎಂದರೆ ಬಡವರು ಏನು ಮಾಡಬೇಕು? ಪ್ಲಾಸ್ಟಿಕ್ ವಸ್ತುಗಳಿಗೆ ಹೋಲಿಸಿದರೆ ಬೇರೆ ವಸ್ತುಗಳು ತುಂಬಾ ದುಬಾರಿ. ಅವುಗಳನ್ನು ಬಡವರು ಕೊಳ್ಳಲಾಗುವುದಿಲ್ಲ.

ಪರಿಸರಕ್ಕೆ ಬಡವರು ಸಮಸ್ಯೆಯೇ ಅಲ್ಲ. ಪರಿಸರಕ್ಕೆ ಬಲ್ಲಿದರದೇ ಕಾಟ. ಬಡವರು ಅವರ ಪರಿಸ್ಥಿತಿಯಿಂದಾಗಿಯೇ ‘ಅಗತ್ಯ ಪ್ರಜ್ಞೆ’ಯ ಸೂತ್ರವನ್ನು ಪಾಲಿಸುತ್ತಾರೆ. ಯಾವುದು ತೀರ ಅನಿವಾರ್ಯವೋ ಮತ್ತು ಕನಿಷ್ಟ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಕೊಳ್ಳುತ್ತಾರೆ. ಬಲ್ಲಿದರು ಹಾಗಲ್ಲ. ಅವರು ಅನುಸರಿಸುವ ಸೂತ್ರವೇ ಬೇರೆ. ಅವರಲ್ಲಿ ಕೆಲಸ ಮಾಡುವುದು ‘ಶೋಕಿ ಪ್ರಜ್ಞೆ’. ಶೋಕಿಗಾಗಿಯೇ ಅವರು ಎಷ್ಟೋ ವಸ್ತುಗಳನ್ನು ಅಗತ್ಯವಿಲ್ಲದಿದ್ದರೂ ಕೊಳ್ಳುತ್ತಾರೆ. ಅದೂ, ಅಧಿಕ ಪ್ರಮಾಣದಲ್ಲಿ. ಸದ್ಯ ಉಪಯೋಗಿಸುತ್ತಿರುವ ವಸ್ತು ಹಳೆಯದಾಯಿತೆಂದೋ, ಬೇಸರವಾಯಿತೆಂದೋ ಅಥವಾ ಮಾರುಕಟ್ಟೆಯಲ್ಲಿ ಹೊಸ ನಮೂನೆ ಮತ್ತು ವಿನ್ಯಾಸದ ವಸ್ತು ಬಂದಿದೆಯೆಂದೋ ಹಳೆಯದನ್ನು, ಅದು ಇನ್ನೂ ಉಪಯೋಗಕ್ಕೆ ಅರ್ಹವಾಗಿದ್ದರೂ, ಬೀದಿಯಲ್ಲಿ ಬಿಸಾಡಿ ಹೊಸದನ್ನು ಮನೆ ತುಂಬಿಸಿಕೊಳ್ಳುತ್ತಾರೆ. ಇದು ಪರಿಸರಕ್ಕಿರುವ ದೊಡ್ಡ ಅಪಾಯ.

ಪರಿಸರದ ದೃಷ್ಟಿಯಿಂದ ಬಲ್ಲಿದರು ಪ್ಲಾಸ್ಟಿಕ್ಕನ್ನು ವರ್ಜಿಸಬೇಕು. ದುಬಾರಿಯಾದರೂ ಬೇರೆ ಪರ್ಯಾಯ ವಸ್ತುಗಳನ್ನೇ ಬಳಸುವ ಮನಸ್ಸು ಮಾಡಬೇಕು. ಇದರಿಂದ ನಮ್ಮ ಅನೇಕ ಗುಡಿ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಬಹುದು. ಅನೇಕ ಬಡ ಕುಟುಂಬಗಳಿಗೆ ಬದುಕನ್ನು ನೀಡಬಹುದು.

ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯನ್ನೇ ಸರಕಾರ ಸಂಪೂರ್ಣ ನಿಷೇಧಿಸಬೇಕು. ಆಗ ಯಾರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ ಎಂಬ ಸುಲಭ ಪರಿಹಾರವನ್ನು ಕೆಲವರು ಸೂಚಿಸುತ್ತಾರೆ. ಆದರೆ ಇದು ಕಾರ್ಯಾಸಾಧುವಲ್ಲ. ಎಲ್ಲವನ್ನೂ ಕಾನೂನಿನಿಂದ ಸಾಧಿಸಲಾಗುವುದಿಲ್ಲ. ಸಂಸ್ಕರಿತ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಿ ಕೇಂದ್ರ ಸರಕಾರ ೧೯೯೯ರ ಸೆಪ್ಟೆಂಬರ್ ೨ರಂದು ಗೆಜೆಟ್ ಪ್ರಕಟಣೆ ಹೊರಡಿಸಿದೆ. ಆದರೆ ಇವುಗಳ ತಯಾರಿಕೆ ಮತ್ತು ಬಳಕೆ ಅವ್ಯಾಹತವಾಗಿ ಮುಂದುವರಿದಿದೆ. ತಜ್ಞರ ಪ್ರಕಾರ ಕೇವಲ ಶೇಕಡಾ ೧೦ರಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಮಾತ್ರ ಮರುಸಂಸ್ಕರಿಸಬಹುದು. ಭಾರತದಲ್ಲಿ ಶೇ. ೯೦ರಷ್ಟು ಪ್ಲಾಸ್ಟಿಕ್ ವಸ್ತುಗಳು ಮರುಸಂಸ್ಕರಣೆಗೊಳ್ಳುತ್ತಿವೆ. ಇವು ಮತ್ತಷ್ಟು ಅಪಾಯಕಾರಿ. ಏಕೆಂದರೆ ಇವುಗಳ ತಯಾರಿಕೆಗೆ ಹಾಲಿನ ಲಕೋಟೆ, ಕ್ರಿಮಿನಾಶಕ ಲಕೋಟೆ, ಪಿವಿಸಿ ಪೈಪು, ಬೂಟುಗಳ ಹಿಮ್ಮಡಿ, ಆಸಿಡ್ ಕ್ಯಾನು ಮುಂತಾದ ವಸ್ತುಗಳನ್ನು ಬಳಸುತ್ತಾರೆ. ಕಾನೂನಿನಿಂದ ಇದನ್ನು ತಡೆಯುವುದು ಸಾಧ್ಯವಾಗಿಲ್ಲ. ಹಾಗೆಯೇ, ಚಿತ್ರದುರ್ಗ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಕ್ಯಾರಿಬ್ಯಾಗುಗಳ ಬಳಕೆಯನ್ನು ನಿಷೇಧಿಸಿ ಅಲ್ಲಿನ ಜಿಲ್ಲಾಧಿಕಾರಿ ಹೊರಡಿಸಿರುವ ಆಜ್ಞೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಮ್ಮ ದೇಶದ ಕೆಲವೊಂದು ರಾಜ್ಯಗಳೂ ಇದೇ ರೀತಿಯ ನಿಷೇಧವನ್ನು ಹೇರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಪ್ಲಾಸ್ಟಿಕ್ ವಸ್ತುಗಳ ದುಷ್ಪರಿಣಾಮವನ್ನು ಅರ್ಥಮಾಡಿಕೊಂಡು ಅವುಗಳ ಉಪಯೋಗವನ್ನು ಸ್ವಯಂ ನಿಯಂತ್ರಿಸದಿದ್ದರೆ ಪ್ಲಾಸ್ಟಿಕ್ ಮಾರಿಯ ಪರಿಸರ ಪರಿಣಾಮಗಳನ್ನು ತಡೆಯುವುದು ಸಾಧ್ಯವೇ ಇಲ್ಲ.

ಪ್ಲಾಸ್ಟಿಕ್ ತಯಾರಿಕೆಯ ಮೇಲೇ ಸರಕಾರ ನಿರ್ಬಂಧ ಹೇರಲೆಂದು ಕಾದುಕುಳಿತುಕೊಳ್ಳುವುದು ವಿವೇಕವಲ್ಲ. ಇದು ಸರಕಾರಗಳಿಗೆ ಅಷ್ಟು ಸುಲಭದ ಕೆಲಸವೂ ಅಲ್ಲ. ಯಾವಾಗಲೂ ಮತ್ತು ಎಲ್ಲ ದೇಶಗಳಲ್ಲೂ ಬಂಡವಾಳಶಾಹಿಗಳು ಬಲಿಷ್ಠರಾಗಿರುತ್ತಾರೆ. ಲಾಭ ತರುವ ಯಾವುದೇ ಉದ್ದಿಮೆಯನ್ನು, ಅದು ಮಾನವಕಂಟಕವಾಗಿದ್ದರೂ, ಉಳಿಸಿಕೊಳ್ಳುವ ತಾಕತ್ತು ಅವುಗಳಿಗಿರುತ್ತದೆ. ಭಾರತದಲ್ಲೂಂತೂ ಇದು ಸತ್ಯ. ನಾವು ಅವುಗಳಿಗೆ ಕಾದುಕುಳಿತುಕೊಳ್ಳವುದರಿಂದ ತೊಂದರೆಯಾಗುವುದು ನಮಗೆ. ಏಕೆಂದರೆ ಪಣದಲ್ಲಿರುವುದು ನಮ್ಮ ಆರೋಗ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಆದ್ದರಿಂದ ನಾವು ಮೊದಲು ಎಚ್ಚೆತ್ತುಕೊಡು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿದರೆ ಮಾತ್ರ ನಾವು ಉಳಿಯುತ್ತೇವೆ ಮತ್ತು ಕೊಳ್ಳುವವರೇ ಇಲ್ಲದಿದ್ದರೆ ಅದರ ತಯಾರಿಕೆ ತಾನಾಗಿ ನಿಂತುಹೋಗುತ್ತದೆ ಅಥವಾ ಕಡಿಮೆಯಾಗುತ್ತದೆ. ಕೊಳ್ಳುವವರೇ ಇಲ್ಲದಿದ್ದಾಗ ತಯಾರಕ ಅದನ್ನು ಯಾರಿಗಾಗಿ ತಯಾರಿಸುತ್ತಾನೆ? ಅಂಥ ವಾತಾವರಣ ಇಂದು ಸೃಷ್ಟಿಯಾಗಬೇಕಾಗಿದೆ. ಸಾರ್ವಜನಿಕರ ವಿರೋಧವೂ ತೀವ್ರವೆನಿಸಿದಾಗ ಸರಕಾರಗಳು ಅವುಗಳ ವಿರುದ್ಧ ಕ್ರಮತೆಗೆದುಕೊಳ್ಳುವುದು ಸುಲಭವಾಗುತ್ತದೆ.

ವಿಜಯ ಕರ್ನಾಟಕ
ಸೆಪ್ಟೆಂಬರ್