. ಪೀಠಿಕೆ :

 

ಯಾವುದೇ ಒಂದು ಸಂಪನ್ಮೂಲ ಸಮೃದ್ಧವಾಗಿರುವಾಗ ನಮಗೆ ಅದರ ಮಹತ್ವ ಮನವರಿಕೆಯಾಗುವುದಿಲ್ಲ. ಆದರೆ ಅದು ಕ್ಷೀಣಿಸುವಾಗ ಅಥವಾ ದೂರವಾದಾಗ ಅದರ ಮಹತ್ವ ಚೆನ್ನಾಗಿ ಮನವರಿಯಾಗುತ್ತದೆ. ಆದರೆ ಆ ವೇಳೆಗೆ ಕಾಲ ಮಿಂಚಿಹೋಗಿರಬಹುದು. ಅಥವಾ ಕಾಲ ಇನ್ನೂ ಮಿಂಚಿ ಹೋಗಿಲ್ಲದಿದ್ದರೆ ಅದನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಇಂತಹ ಬಹು ಮುಖ್ಯವಾದ ಸಂಪನ್ಮೂಲವೇ ಪರಿಸರ (Environment), ಪರಿಸರ ನಮ್ಮ ಸಂಪನ್ಮೂಲ ಮಾತ್ರವಲ್ಲ. ನಮ್ಮ ಜೀವ ಮೂಲವೂ ಹೌದು, ನಮ್ಮ ಪರಿಸರ ಹಾಳದರೆ ನಾವೂ ನಾಶವಾಗುತ್ತೇವೆ. ಈ ಪರಿಸರದ ಪ್ರಜ್ಞೆ ಮನುಷ್ಯನಿಗೆ ಉಂಟಾದದ್ದು ಕೈಗಾರಿಕಾ ಕ್ರಾಂತಿಯ ನಂತರ ಎಂಬುದು ಸಾಮಾನ್ಯ ತಿಳುವಳಿಕೆ.  ನಮ್ಮ ಜೀವ ಮೂಲವೂ ಹೌದು. ನಮ್ಮ ಪರಿಸರ ಹಾಳಾದರೆ ನಾವೂ ನಾಶವಾಗುತ್ತೇವೆ. ಈ ಪರಿಸರದ ಪ್ರಜ್ಞೆ ಮನುಷ್ಯನಿಗೆ ಉಂಟಾದದ್ದು ಕೈಗಾರಿಕಾ ಕ್ರಾಂತಿಯ ನಂತರ ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಜಗತ್ತಿನ ಅನೇಕ ಧರ್ಮಗಳು ಆದಿವಾಸಿ ಮತ್ತು ಗ್ರಾಮೀಣ ಸಂಸ್ಕೃತಿಗಳು ಪರಿಸರದ ಮಹತ್ವವನ್ನು ಗುರುತಿಸಿದ್ದವು. ಆದರೆ ಕೈಗಾರಿಕಾ ಕ್ರಾಂತಿಯ ನಂತರ, ವಿಶೇಷವಾಗಿ ಕಳೆದ ಒಂದು ಶತಮಾನದಲ್ಲಿ ಮಾನವ ತನ್ನ ಉಪಭೋಗದ ಸಲುವಾಗಿ, ಹೆಚ್ಚಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ನಮ್ಮ ಸುತ್ತಲ ಪರಿಸರದ ಸಸ್ಯ ಮತ್ತು ಪ್ರಾಣಿ ಮೂಲದ ಜೈವಿಕ ಪರಿಸರವನ್ನು (Biotic-Environment) ಗಾಳಿ, ನೀರು, ಮಣ್ಣು ಮೊದಲಾದ ಅಜೈವಿಕ ಪರಿಸರವನ್ನು (Abiotic-Environment) ವ್ಯವಸ್ಥಿತವಾಗಿ ನಾಶಮಾಡುತ್ತಾ ಮಲಿನಗೊಳಿಸುತ್ತಾ ಬಂದಿರುವುದರಿಂದ ಪರಿಸರ ಪ್ರಜ್ಞೆಯನ್ನು (Environment Consciousness) ಅನಿವಾರ್ಯವಾಗಿ ರೂಢಿಸಿಕೊಂಡು ಅಳಿದುಳಿದ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿಯುಂಟಾಗಿದೆ. ಇದರಿಂದಾಗಿ ಜೀವ ವಿಜ್ಞಾನಗಳ, ಸಮಾಜ ವಿಜ್ಞಾನಗಳ ಮತ್ತು ಭೌತಿಕ ವಿಜ್ಞಾನಗಳ ನೆರವಿನಿಂದ ಪರಿಸರ ಸಂರಕ್ಷಣೆಗಾಗಿ ಮತ್ತು ಆ ಸಂಬಂಧವಾದ ಸಂಶೋಧನೆಗಳಿಗಾಗಿ ಪರಿಸರ ವಿಜ್ಞಾನ (Environmental Science) ಎಂಬ ಅಂತರಶಿಸ್ತಿನ (Inter-Disciplinery) ಅಧ್ಯಯನವನ್ನು (Discipline) ರೂಪಿಸಲಾಗಿದೆ. ಕಳೆದ ಮೂರು ದಶಕಗಳಿಂದ ಪರಿಸರ ವಿಜ್ಞಾನ ಒಂದು ಅನ್ವಯಿಕ ವಿಷಯವಾಗಿ (Applied science) ರೂಪುಗೊಂಡಿದೆ. ಇದು ಪರಿಸರದ ವಿವಿಧ ವ್ಯವಸ್ಥೆಗಳ ಅಧ್ಯಯನ. ಇದರಲ್ಲಿ ಭೌತಿಕ ಮತ್ತು ಜೈವಿಕ ಪರಿಸರಗಳನ್ನು, ಅವುಗಳ ಪರಸ್ಪರ ಸಂಬಂಧಗಳನ್ನು ಪರಿಸರದ ಮೇಲೆ ಸಮಾಜ ಮತ್ತು ಸಂಸ್ಕೃತಿಗಳ ಪ್ರಭಾವಗಳನ್ನು, ಮಾನವನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅವುಗಳ ನಿವಾರಣೋಪಾಯಗಳನ್ನು ಕುರಿತು ಅಭ್ಯಾಸ ಮಾಡೂವ ವಿಷಯವಾಗಿದೆ. ಆದರೆ ಜೀವ ವಿಜ್ಞಾನದ (Biology) ಒಂದು ಉಪವಿಭಾಗವಾಗಿ ಜೀವ ಪರಿಸರ ವಿಜ್ಞಾನ (Ecology) ಈ ಶತಮಾನದ ಆರಂಭದಿಂದಲೂ ಅಸ್ಥಿತ್ವದಲ್ಲಿದೆ. ಜೀವಿಗಳ ಪರಸ್ಪರ ಸಂಬಂಧ ಹಾಗೂ ಜೀವಿಗಳಿಗೆ ಮತ್ತು ಪರಿಸರಕ್ಕೂ ಇರುವ ಸಂಬಂಧಗಳ ಅಧ್ಯಯನವೇ ಜೀವ ಪರಿಸರ ವಿಜ್ಞಾನದ ಉದ್ದೇಶ. ಗ್ರೀಕ್ ಭಾಷೆಯಲ್ಲಿ Eco ಎಂದರೆ ಮನೆ ಅರ್ಥ. ಅಂದರೆ ನಾವು ವಾಸಿಸುವ ಪರಿಸರವೇ ನಮ್ಮ ಮನೆ ಎಂಬ ಕಲ್ಪನೆ ಇದರಲ್ಲಿದೆ. ನಮ್ಮ ಮನೆಯೇ ಆಗಿರುವ ಜೀವಗೋಳವನ್ನು Ecologyಯಲ್ಲಿ ಅಭ್ಯಾಸ ಮಾಡಲಾಗುವುದು.

. ಜೀವ ಸಂಕುಲ ಸ್ವರೂಪ :

ಇಡೀ ಬ್ರಹ್ಮಾಂಡದಲ್ಲಿ ಭೂಮಿಯ ಮೇಲೆ ಮಾತ್ರ ಜೀವಿಗಳಿವೆ. ಹೀಗಾಗಿ ಭೂಮಿ ಒಂದು ವಿಶಿಷ್ಟವಾದ ಗ್ರಹವಾಗಿದೆ. ಭೂಮಿಯಲ್ಲಿ ಗಾಳಿಯಿಂದ ಕೂಡಿದ ವಾಯುಗೋಳ ನೀರಿನಿಂದ ಕೂಡಿದ ಜಲಗೋಳ, ಮಣ್ಣು ಮತ್ತು ಕಲ್ಲಿನಿಂದ ಕುಡ್ದ ಶಿಲಾಗೋಳ ಹಾಗೂ ಜೀವ ಸಂಕುಲಗಳಿಂದ ಕೂಡಿದ ಜೀವಗೋಳ ಈ ನಾಲ್ಕು ಗೋಳಗಳಿವೆ. ಇವು ಪರಿಸ್ಪರ ಸಂಬಂಧ ಹೊಂದಿದ್ದು, ಪರಸ್ಪರ ಅವಲಂಬಿತವಾಗಿವೆ. ಇವುಗಳಲ್ಲಿ ಪರಿಸರ ಮತ್ತು ಜೀವ ಸಂಕುಲಕ್ಕೆ ಸಂಬಂಧಿಸಿದ ಪ್ರಮುಖವಾದ ಅಂಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ನಿರ್ಜೀವ ಘಟಕಗಳು ಪರಿಸರದ ವ್ಯವಸ್ಥೆಯನ್ನು ರೂಪಿಸುತ್ತವೆ. ಗಾಳಿ, ನೀರು ಮಣ್ಣು ಹಾಗೂ ಸೂರ್ಯನ ಶಾಖದಿಂದಾಗಿ ಪರಿಸರದಲ್ಲಿ ಜೀವಿಗಳು ಬದುಕಲು ಸಾಧ್ಯವಾಗಿದೆ. ಸುಮಾರು ೩೦೦೦ ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಯ ಉಗಮವಾಗಿತ್ತು. ಅತ್ಯಂತ ಸೂಕ್ಷ್ಮವಾದ ವೈರಸ್ಸುಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಹಿಡಿದು ಬೃಹತ್ ಗಾತ್ರದ ಆನೆಯವರೆಗೆ ಇರುವ ಸುಮಾರು ೫೦ ರಿಂದ ೩೦೦ ಲಕ್ಷ ಜೀವ ಸಂಕುಲಗಳು ಜಗತ್ತಿನಲ್ಲಿವೆ. ಇವುಗಳಲ್ಲಿ ಈವರೆಗೆ ಜೀವಿಗಳ ಪ್ರಭೇದಗಳನ್ನು ಗುರುತಿಸಿ ಪಟ್ಟಿ ಮಾಡುವುದು ಕಷ್ಟದ ಕೆಲಸ. ಜೀವ ಸಂಕುಲಗಳನ್ನು ಗುರುತಿಸಿ, ಅಧ್ಯಯನ ಮಾಡುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಭೂಮಿಯ ಮೇಲಿನ ಜೀವ ಸಂಕುಲ ಪಿರಮಿಡ್ ಮಾದರಿಯಲ್ಲಿದೆ. ಪಿರಮಿಡ್ಡಿನ ತಳದಲ್ಲಿ ಅಸಂಖ್ಯಾತ ಸಸ್ಯ ಸಂಕುಲಗಳಿವೆ. ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಸೌರಶಕ್ತಿಯನ್ನು ಉಪಯೋಗಿಸಿಕೊಂಡೂ ನೀರು, ಇಂಗಾಲದ ಡೈ ಆಕ್ಸೈಡ್ ಮತ್ತು ಖನಿಜಗಳನ್ನು ಬಳಸಿಕೊಂಡು ಹೆಚ್ಚಿನ ಶಕ್ತಿಯ ಜೈವಿಕ ಸಂಯುಕ್ತ ವಸ್ತುಗಳಾದ ಕಾರ್ಬೋಹೈಡ್ರೇಟ್ ಗಳನ್ನಾಗಿ ದ್ಯುತಿ ಸಂಶ್ಲೇಷಣೆಯ ಮೂಲಕ ಪರಿವರ್ತಿಸುತ್ತವೆ. ಹೀಗಾಗಿ ಹಸಿರು ಸಸ್ಯಗಳನ್ನು ಸ್ವಪೋಷಕಗಳು (Autotrophs) ಎಂದು ಕರೆಯಲಾಗಿದೆ. ಉಳಿದ ಎಲ್ಲಾ ಪ್ರಾಣಿಗಳು ಮತ್ತು ಮನುಷ್ಯರನ್ನು ಪರಪೋಷಕಗಳು (Hetrotrophs) ಎಂದು ಕರೆಯಲಾಗಿದೆ. ಇವುಗಳು ತಮ್ಮ ಆಹಾರವನ್ನು ಹಸಿರು ಸಸ್ಯಗಳಿಂದ ಪಡೆಯುತ್ತವೆ. ಇವುಗಳು ಆಹಾರ ಸರಪಳಿ (Food Chain) ಮತ್ತು ಆಹಾರ ಜಾಲ (Food Web) ಗಳಿಂದ ಒಂದರೊಡನೊಂದು ಸಂಬಂಧ ಹೊಂದಿದೆ. ಪರಿಸರ ವ್ಯವಸ್ಥೆಯಲ್ಲಿ ಜೀವಿಗಳಿಗೆ ಶಕ್ತಿಯ ವರ್ಗಾವಣೆಯಾಗುತ್ತದೆ. ಈ ಜೀವಿಗಳ ಶ್ರೇಣಿಯನ್ನು ಆಹಾರ ಸರಪಳಿ ಎಂದು ಕರೆಯುತ್ತಾರೆ. ಇಂತಹ ಅಹಾರ ಸರಪಳಿಗಳಿಗೆ ಸಂಬಂಧ ಕಲ್ಪಿಸುವ ವಿನ್ಯಾಸಗಳನ್ನು ಆಹಾರ ಜಾಲ ಎಂದು ಕರೆಯುತ್ತಾರೆ. ಆಹಾರ ಸರಪಳಿಗಳಿಗೆ ಮುಖ್ಯವಾದ ಎರಡು ಬಗೆಗಳಿವೆ. ಮೊದಲನೆಯದು ಸಸ್ಯಗಳು, ಸಸ್ಯಹಾರಿಗಳೂ, ಸಸ್ಯಾಹಾರಿಗಳನ್ನು ತಿನ್ನುವ ಮಾಂಸಾಹಾರಿಗಳು ಮತ್ತು ಈ ಮಾಂಸಾಹಾರಿ ಭಕ್ಷಕಗಳನ್ನು ತಿನ್ನುವ ಮಾಂಸಾಹಾರಿ ಮಹಾ ಭಕ್ಷಕಗಳಿವೆ. ಈ ನಾಲ್ಕು ಬಗೆಯ ಜೀವಿಗಳನ್ನು ಒಳಗೊಂಡ ಪಿರಮಿಡ್ ವಿನ್ಯಾಸದ ಜೀವಸಂಕುಲ ಈ ಪಿರಮಿಡ್ ಮಾದರಿಯ ತಳದಲ್ಲಿ ಸಸ್ಯಗಳಿದ್ದರೆ ಮೇಲಿನ ತುದಿಯಲ್ಲಿ ಮಾಂಸಾಹಾರಿ ಮಹಾಭಕ್ಷಕಗಳಿವೆ. ಇವುಗಳ ನಡುವೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳಿವೆ. ಮಾನವನು ಸಸ್ಯಾಹಾರಿಯೂ ಹೌದು, ಮಾಂಸಾಹಾರಿಯೂ ಹೌದು. ಈ ಪಿರಮಿಡ್ ಮಾದರಿಯಲ್ಲಿನ ನಾಲ್ಕು ಸ್ತರಗಳನ್ನು ಪೋಷಣಾಸ್ಥರಗಳು (Trophic levels) ಎಂದು ಕರೆಯುತ್ತಾರೆ. ಎರಡನೆಯ ಬಗೆಯ ಆಹಾರ ಸರಪಳಿಯಲ್ಲಿರುವ ಜೀವಿಗಳನ್ನು ವಿಘಟಕಗಳು ಎಂದು ಕರೆಯುತ್ತಾರೆ. ಬ್ಯಾಕ್ಟೀರಿಯಾ, ಫಂಗೈ, ನುಸಿಗಳು ಮತ್ತು ಕ್ರಿಮಿಗಳು ಇವುಗಳೇ ವಿಘಟಕಗಳು. ಇವು ಸತ್ತ ಜೈವಿಕ ವಸ್ತುಗಳನ್ನು ವಿಘಟನೆ ಮಾಡಿ ಸಸ್ಯಗಳು ಮಣ್ಣಿನಲ್ಲಿ ಬೆಳೆಯಲು ನೆರವಾಗುತ್ತವೆ. ಜೀವಸಂಕುಲ ಸಮತೋಲನದಲ್ಲಿ ಇರಬೇಖಾದರೆ ಈ ಎರಡು ಬಗೆಯ ಆಹಾರ ಸರಪಳಿಗಳ ಜಾಲ ಇರಲೇಬೇಕಾಗುತ್ತದೆ. ಒಂದು ಸಮುದಾಯದಲ್ಲಿ ಉತ್ಪಾದಕ ಜೀವಿಗಳು, ಗ್ರಾಹಕ ಜೀವಿಗಳು ಮತ್ತು ವಿಘಟಕಗಳು ಒಂದರ ಮೇಲೊಂದು ಅವಲಂಬಿತವಾಗಿರುತ್ತವೆ. ಆಹಾರ ಸರಪಳಿಯ ಪ್ರತಿಕೊಂಡಿಯಲ್ಲಿಯೂ ಶಕ್ತಿ ವರ್ಗಾವಣೆಗೊಂಡಾಗ ಶೇಕಡಾ ೮೦-೯೦ ಭಾಗ ಶಾಖವಾಗಿ ಪರಿವರ್ತಿತವಾಗುತ್ತದೆ. ಹೀಗೆ ಹಂತದಿಂದ ಹಂತಕ್ಕೆ ಶಕ್ತಿ ಕಡಿಮೆಯಾಗುವುದರಿಂದ ಪ್ರತಿ ಹಂತದಲ್ಲೂ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಿರ್ದಿಷ್ಟವಾದ ಕೆಲವು ಗುಣಲಕ್ಷಣಗಳನ್ನು ಹೊಂದಿ ಒಂದೇ ಘಟಕದಂತೆ ಕೆಲಸ ಮಾಡುವ ಗುಂಪನ್ನು ಜೀವಸಮುದಾಯ ಎಂದು ಕರೆಯುತ್ತಾರೆ. ಒಂದು ಕೊಚ್ಚೆ ಗುಂಡಿಯಲ್ಲಿಯೂ ಜೀವ ಸಮುದಾಯವಿರಬಹುದು. ಒಂದು ಕೆರೆಯಲ್ಲಿಯೂ ಇರಬಹುದು. ಒಂದು ಸಮುದ್ರದಲ್ಲಿಯೂ ಇರಬಹುದು. ಸಮುದಾಯದಲ್ಲಿ ಪ್ರಧಾನ ಸಮುದಾಯ ಮತ್ತು ಲಘು ಸಮುದಾಯ ಎಂಬ ಎರಡು ಬಗೆಗಳಿವೆ. ಪ್ರಧಾನ ಸಮುದಾಯಗಳು ತಮ್ಮ ದೈಹಿಕ ಚಟುವಟಿಕೆಗಳಿಗೆ ಸೂರ್ಯನಿಂದಲೇ ನೇರವಾಗಿ ಶಕ್ತಿಯನ್ನು ಪಡೆದರೆ ಸಮುದಾಯಗಳು ತಮ್ಮ ಸುತ್ತಲ ಇತರ ಸಮುದಾಯಗಳಿಂದ ಶಕ್ತಿಯನ್ನು ಪಡೆಯುತ್ತವೆ. ಎರಡು ಅಥವಾ ಅದಕ್ಕಿಂದ ಹೆಚ್ಚಿನ ಸಮುದಾಯಗಳ ಮಧ್ಯದ ಸ್ಥಿತ್ಯಂತರದ ಪ್ರದೇಶವನ್ನು  ಎಂದು ಕರೆಯುತ್ತಾರೆ. ಇದಕ್ಕೆ ಉದಾಹರಣೆಯಾಗಿ ಮರುಭೂಮಿ ಮತ್ತು ಹುಲ್ಲುಗಾವಲಿನ ನಡುವಿನ ಪ್ರವೇಶದಲ್ಲಿ ಎರಡು ಪ್ರದೇಶಗಳಲ್ಲಿ ಇರುವುದಕ್ಕಿಂದ ಹೆಚ್ಚಿನ ವೈವಿಧ್ಯಮಯವಾದ ಜಾತಿಗಳನ್ನು ಮತ್ತು ಸಾಂದ್ರವಾದ ಜೀವ ಸಂದಣಿಯನ್ನು ಕಾಣಬಹುದು. ಇದನ್ನು ಅಂಚಿನ ಪರಿಣಾಮ (Edge effect) ಎಂದು ಕರೆಯುತ್ತಾರೆ. (ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು ೧೯೯೬ ಪು.೫ ರಿಂದ ೪೦)

. ಜೀವ ವೈವಿಧ್ಯ :

ಪರಿಸರದಲ್ಲಿನ ಜೀವ ಸಂಕುಲದಲ್ಲಿ ವೈವಿಧ್ಯಮಯವಾದ ಜೀವಿಗಳಿವೆ. ಜೀವ ವೈವಿಧ್ಯ (Bio-diversity) ಪರಿಸರದ ಸಮತೋಲನಕ್ಕೆ ತುಂಬ ಅಗತ್ಯವಾದುದು. ಈ ಪರಿಸರ ಸಮತೋಲನದಲ್ಲಿ ಜೀವ ವೈವಿಧ್ಯವನ್ನು ಕಾಪಾಡುವುದು ಮತ್ತು ಅಧ್ಯಯನ ಮಾಡುವುದು ಎಷ್ಟು ಮುಖ್ಯವಾದ ವಿಷಯವಾಗಿದೆ ಎಂಬುದಕ್ಕೆ ಜೀವ ವೈವಿಧ್ಯ ವಿಜ್ಞಾನ (Bio-diversity science) ಎಂಬ ವಿಜ್ಞಾನದ ಉಪಶಾಖೆಯೇ ರೂಪುಗೊಂಡಿರುವುದು ಸಾಕ್ಷಿಯಾಗಿದೆ. ಜೀವಿಗಳ ಸಂಪೂರ್ಣ ವೈಜ್ಞಾನಿಕ ತಿಳುವಳಿಕೆಯೊಂದಿಗೆ ಜೀವ ಪ್ರಭೇದಗಳ ಸಂರಕ್ಷಣೆ ಮತ್ತು ವಿವೇಚನಾ ಪೂರ್ಣ ಬಳಕೆಯು ಜೀವ ವೈವಿಧ್ಯ ವಿಜ್ಞಾನದ ಇತರೆ ಎಲ್ಲಾ ವಿಭಾಗಗಳು ಸೇರುತ್ತವೆ. ಇದೊಂದು ಕೇವಲ ಅಕಾಡೆಮಿಕ್ ವಿಷಯವಾಗಿರದೆ ವ್ಯಾಪಕ ಹಿತಾಸಕ್ತಿಯ ಮಹತ್ವದ ಜ್ಞಾನ ಪ್ರಕಾರವಾಗಿರುತ್ತದೆ. (ಪರಿಸರ ಮುಂದೇನು ? ೧೯೯೭, ಪು. ೨೩-೨೪) ರಯೋ-ಡಿ-ಜನೈರೋದಲ್ಲಿ ೧೯೯೨ ರಲ್ಲಿ ನಡೆದ ೧೭೦ ರಾಷ್ಟ್ರಗಳ ಪ್ರಮುಖರ ಜಾಗತಿಕ ಶೃಂಗಸಭೆಯಲ್ಲಿ ಜಗತ್ತಿನ ಪರಿಸರದಲ್ಲಿ ಜೀವ ವೈವಿಧ್ಯದ ಮಹತ್ವವನ್ನು ಸ್ಪಷ್ಟಪಡಿಸಿ, ಅದನ್ನು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕಾರ್ಯ ಸೂಚಿಯನ್ನು ಸಿದ್ಧಪಡಿಸಲಾಯಿತು. ಜಗತ್ತಿನಲ್ಲಿ ಹನ್ನೆರಡು ಬೃಹತ್ ಜೀವ ವೈವಿಧ್ಯದ (Mega diversity) ರಾಷ್ಟ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಭಾರತವೂ ಒಂದು. ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಹಿಮಾಲಯದ ಘಟ್ಟಗಳು ಭಾರತದ ಜೀವ ವೈವಿಧ್ಯದ ಪ್ರಮುಖ ಕೇಂದ್ರಗಳು. ಪ್ರಪಂಚದ ಶೇ. ೨ ರಷ್ಟು ಭೂಭಾಗವಿರುವ ಈ ಉಪಖಂಡದಲ್ಲಿ ಜೀವಕೋಲದ ಶೇ. ೫ ರಷ್ಟು ಸಂಪತ್ತಿದೆ. ನಮ್ಮ ದೇಶದ ವಿವಿಧ ರೀತಿಯ ಭೌಗೋಳಿಕ ಸನ್ನಿವೇಶಗಳು, ಹವಾಗುಣ ಮತ್ತು ಆವಾಸಗಳು ಜೀವಕೋಟಿಗೆ ಪ್ರಶಸ್ತ ತಾಣಗಳನ್ನು ಒದಗಿಸಿವೆ. ಜಗತ್ತಿನ ಬಹುತೇಕ ಜೀವ ಪರಿಸರ (Ecogy Steme) ಗಳಿರುವುದು ಈ ದೇಶದ ಹೆಚ್ಚುಗಾರಿಕೆ. (ಅದೇ ಪು.೧೮)

ದೇಶವೊಂದರ ಸ್ಥಳೀಯ ಜೀವ ವೈವಿಧ್ಯ ಸಂಪತ್ತನ್ನು ಗಮನದಲ್ಲಿಟ್ಟುಕೊಂಡು, ೧೯೯೦ ರಲ್ಲಿ ಮೆಕ್ ನೀಲಿ ಮತ್ತಿತರರು ಹನ್ನೆರಡು ಬೃಹತ್ ಜೀವ ವೈವಿಧ್ಯದ (Mega Diversity) ರಾಷ್ಟ್ರಗಳನ್ನು ಗುರುತಿಸಿದ್ದಾರೆ. ಜಗತ್ತಿನ ಜೀವ ಸಂಪತ್ತಿನ ಬಹುಭಾಗ ಈ ದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಅಪಾರ ಜೈವಿಕ ಸಂಪತ್ತಿನ ರಾಷ್ಟ್ರಗಳೆಂದರೆ ಮೆಕ್ಸಿಕೋ, ಕೊಲಂಬಿಯಾ, ಈಕ್ವೆಡಾರ್, ಪೆರು, ಬ್ರೆಜಿಲ್, ಜೈರ್, ಮಡಗಾಸ್ಕರ್, ಚೈನಾ, ಭಾರತ, ಮಲೇಶಿಯಾ, ಇಂಡೋನೇಶಿಯಾ ಮತ್ತು ಆಸ್ತ್ರೇಲಿಯಾ. ಭೂಮಿಯ ಮೇಲೆ ಇಂದು ಲಭ್ಯವಿರುವ ಜೀವರಾಶಿಯ ಶೇ.೭೦ ರಷ್ಟು ಈ ಹನ್ನೆರಡು ರಾಷ್ಟ್ರಗಳ ಸೊತ್ತು. ಆದ್ದರಿಂದಲೇ ಶ್ರೀಮಂತ ರಾಷ್ತ್ರಗಳ ಹದ್ದಿನ ಕಣ್ಣು ಈ ರಾಷ್ಟ್ರಗಳ ಮೇಲೆ. ಮುಂದಿನ ಶತಮಾನಗಳಲ್ಲಿ ಮಾನವರ ಅಳಿವು ಉಳಿವು ಇರುವುದು ಈ ಹನ್ನೆರಡು ರಾಷ್ಟ್ರಗಳ ಜೈವಿಕ ಸಂಪತ್ತನ್ನು ಅವಲಂಬಿಸಿದೆ.

ಪರಿಸರದಲ್ಲಿ ಜೈವಿಕ ವೈವಿಧ್ಯವನ್ನು ಉಳಿಸಿಕೊಂಡು ಬರಬೇಕೆಂಬುದಕ್ಕೆ ಕಾರಣ ಮೊದಲನೆಯದು ಪ್ರತಿಯೊಂದು ಜೀವಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಇದು ನೈತಿಕವಾದ ಕಾರಣ. ಎರಡನೆಯದು ಮನುಷ್ಯನ ಉಳಿವಿನ ಪ್ರಶ್ನೆ. ಪ್ರತಿಯೊಂದು ಜೀವಿಯೂ ಪರಿಸರದಲ್ಲಿ ನಿರ್ದಿಷ್ಟವಾದ ಕಾರ್ಯವನ್ನು ನಿರ್ವಹಿಸುತ್ತದೆ. ಅವು ಆಯಾ ಪರಿಸರಕ್ಕೆ ಹೊಂದಿಕೊಂಡಿರುತ್ತದೆ. ಸಸ್ಯಗಳು ಅನೇಕ ಬಗೆಯ ಪಕ್ಷಿಗಳಿಗೆ, ಕ್ರಿಮಿಕೀಟಗಳಿಗೆ ಆಸರೆ ನೀಡುತ್ತವೆ. ಮರಗಳು ಗಾಳಿಯನ್ನು ಧೂಳಿನ ಕಣಗಳಿಂದ ಶುದ್ಧಿಗೊಳಿಸುತ್ತವೆ. ಬಿಸಿಲಿನ ಶಾಖದಿಂದ ಪ್ರಾಣಿಪಕ್ಷಿಗಳಿಗೆ ರಕ್ಷಣೆ ನೀಡುತ್ತವೆ. ಶಾಖವನ್ನು ರಕ್ಷಿಸಲು ನೆರವಾಗುತ್ತವೆ. ಹಾಗೂ ಶಬ್ದವನ್ನು ಹೀರಿಕೊಳ್ಳುತ್ತವೆ. ವೈವಿಧ್ಯಮಯವಾದ ಮರಗಿಡಬಳ್ಳಿಗಳಿಂದ ಕೂಡಿದ ಕಾಡುಗಳು ತುಂಬ ಸಂಕೀರ್ಣವಾದ ಪರಿಸರ ವ್ಯವಸ್ಥೆಗಳಾಗಿವೆ. ಕಾಡುಗಳು ಭೂಮಿಯ ಮೇಲ್ಮಣ್ಣನ್ನು ರಕ್ಷಿಸುತ್ತವೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಶಾಖವಾಗಲಿ, ಶೀತವಾಗಲಿ ಅತಿ ಹೆಚ್ಚಗದಂತೆ ನಿಯಂತ್ರಣ ಮಾಡಿ ವಾಯುಗುಣವನ್ನು ಸಮತೋಲನದಲ್ಲಿ ಇಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದನೆ ಮಾಡಿ, ವಾಯುಮಂಡಲದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರುತ್ತವೆ. ಗಾಳಿಯ ವೇಗವನ್ನು ತಗ್ಗಿಸುತ್ತವೆ. ಅನೇಕ ಬಗೆಯ ಪ್ರಾಣಿ ಸಂಕುಲಗಳಿಗೆ ಆಶ್ರಯ ಸ್ಥಾನಗಳಾಗಿವೆ. ಮಳೆಯ ಮಾರುಗಳನ್ನು ತಡೆದು, ಮಳೆ ಬೀಳಲು ನೆರವಾಗುತ್ತವೆ. ಇಂತಹ ಕಾಡುಗಳು ಸಕಲ ಜೀವಿಗಳಿಗೂ ಉಪಯುಕ್ತವಾಗಿವೆ. ಪರಿಮಿತವಾದ ಪ್ರಮಾಣದಲ್ಲಿ ಕಾಡುಗಳನ್ನು ಕಡಿದು ಭೂಮಿಯನ್ನು ವ್ಯವಸಾಯ ಮತ್ತು ಇತರೆ ಉದ್ದೇಶಗಳಿಗೆ ಬಳಸುವುದರಿಂದ ಹಾನಿಯಾಗುವುದಿಲ್ಲ.

. ಜೀವ ವೈವಿಧ್ಯ ನಾಶದ ಕಾರಣಗಳು ಮತ್ತು ಪರಿಣಾಮಗಳು :

ಮಾನವ ತನ್ನ ಉಪಭೋಗಕ್ಕಾಗಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಬೇಕಾದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಅತಿಯಾದ ಪ್ರಮಾಣದಲ್ಲಿ ಪರಿಸರ ನಾಶ ಮಾಡುತ್ತಿರುವುದರಿಂದ ಅನೇಕ ಅನಾಹುತಗಳಾಗಿವೆ. ಫಲವತ್ತಾದ ಭೂಮಿಯ ಮೇಲ್ಮಣ್ಣಿನ ಸವಕಳು ಉಂಟಾಗುತ್ತದೆ. ಕಾಡುಗಳು ನಾಶವಾದರೆ ಅದನ್ನೇ ಅವಲಂಬಿಸಿದ್ದ ವನ್ಯಜೀವಿಗಳ ಆವಾಸಸ್ಥಳ ಹಾಗೂ ನೈಸರ್ಗಿಕ ಸಂಪನ್ಮೂಲಗಳು ನಾಶವಾಗುತ್ತವೆ. ಆ ಭೂಮಿ ಬರಡಾಗುತ್ತದೆ. ನದಿಗಳು ಮೇಲ್ಮಣ್ಣನ್ನು ಕೊಚ್ಚಿ ತರುವುದರಿಂದ ನದಿಯ ಪಾತ್ರದ ಆಳ ಕಡಿಮೆಯಾಗಿ ಪ್ರವಾಹದ ಅನಾಹುತವಾಗುತ್ತದೆ. ವಾಯುಗುಣದಲ್ಲಿ ಹಾನಿಕಾರಕ ಬದಲಾವಣೆಗಳಾಗುತ್ತವೆ, ಅತ್ಯಂತ ದಟ್ಟವಾದ ಕಾಡುಗಳಿಂದ ಕೂಡಿದ ನಮ್ಮ ದೇಅಶದ ಚಿರಾಪುಂಜಿ ಇದು ಅವನತಿಯ ಹಾದಿಯಲ್ಲಿದೆ. ವನ್ಯ ಜೀವಿಗಳಲ್ಲಿ ಕೆಲವು ಜೀವಿಗಳು ಇತರ ಜೀವಿಗಳನ್ನು ತಿಂದು ಬದುಕುತ್ತವೆ. ಈ ಪ್ರಾಕೃತಿಕ ಸಮತೋಲನ ಇರಬೇಕಾದರೆ ಅಸಮತೋಲನ ಉಂಟಾಗುತ್ತದೆ. ಭೂ ಮತ್ತು ಅದರ ಮೇಲಿನ ಬದುಕಿನ ನಿರಂಟರ ಒಳಿತಿಗೆ ಜೀವ ವೈವಿಧ್ಯತೆ ಮುಖ್ಯವಾದುದು. ಭೂಮಿಯ ಮೇಲೆ ಜೀವಿಗಳ ವಿಧಗಳು ಹೆಚ್ಚಾದಂತೆಲ್ಲಾ ಜೀವಗೋಳ ಮತ್ತು ಅದರ ವ್ಯವಸ್ಥೆ ಹೆಚ್ಚು ಚೇತರಿಸಿಕೊಳ್ಳುತ್ತದೆ. ಹೆಚ್ಚಿನ ವೈವಿಧ್ಯತೆ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಆಯ್ಕೆಯ ಹೆಚ್ಚಿನ ಸಾಧ್ಯತೆ ಎಂದೂ ಆಗುತ್ತದೆ. ಭೂಮಿಯ ಜೀವ ವೈವಿಧ್ಯತೆಯು ಅದರ ವಂಶವಾಹಿ ಸಂಪನ್ಮೂಲಗಳಲ್ಲಿನ ವೈವಿಧ್ಯತೆಯನ್ನು ತೋರಿಸುತ್ತದೆ. ನಮ್ಮ ಅವಶ್ಯಕ ವಸ್ತುಗಳ (ಉದಾ : ಆಹಾರ, ಅನೇಕ ಔಷಧಿಗಳು, ನಾರುಗಳು) ಮೂಲಕವೇ ಇದಾಗಿದೆ. ಈ ವೈವಿಧ್ಯತೆಯ ನಾಶದಿಂದ ಕೃಷಿಗೆ ತುಂಬಾ ಕೇಡಾಗುತ್ತದೆ. ಏಕೆಂದರೆ ೮೦೦೦ ಜಾತಿಯ ಖಾದ್ಯ ಸಸ್ಯಗಳಲ್ಲಿ ಕೇವಲ ಇಪ್ಪತ್ತಕ್ಕೂ ಕಡಿಮೆ ಜಾತಿಯ ಸಸ್ಯಗಳೇ ನಮ್ಮ ಆಹಾರದ ಶೇಕಡಾ ೯೦ ರಷ್ಟು ಭಾಗವಾಗಿದೆ. ಉಷ್ಣವಲಯಗಳು ನಿರ್ದಿಷ್ಟವಾಗಿ ಶ್ರೀಮಂತ ಸಸ್ಯ ಅನುವಂಶಿಕ ವಸ್ತುಗಳನ್ನು ಹೊಂದಿವೆ. (ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು ೧೯೯೬ ಪು. ೮೦)

ಪ್ರಾಣಿಗಳ ಸಂತತಿ ನಾಶದಿಂದಾಗುವ ಪರಿಣಾಮಕ್ಕೆ ಒಂದೆರಡು ಉದಾಹರಣೆಗಳನ್ನು ಕೊಡಬಹುದು. ಹಾವುಗಳ ಸಂತತಿಯನ್ನು ನಾಶಮಾಡಿದರೆ ಇಲಿಗಳ ಸಂಖ್ಯೆ ಹೆಚ್ಚಾಗಿ ಬೆಳೆಗಳ ನಾಶಕ್ಕೆ ಕಾರಣವಾಗುತ್ತದೆ. ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಕಥನ ಕವನದಲ್ಲಿ ವರ್ಣಿತವಾಗಿರುವ ರೀತಿಯಲ್ಲಿ ‘ಮನುಷ್ಯನ ಜೀವನದ ಮೇಲೆ ಪರಿಣಾಮ ಉಂಟಾಗುತದೆ. ಕಪ್ಪೆಗಳನ್ನು ರಫ್ತು ಮಾಡುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುತ್ತಿದೆ. ಇದರಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಕ್ರಿಮಿನಾಶಕಗಳ ಮತ್ತು ರಸಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿರುವ ಎರೆಹುಳುಗಳ ಸಂಖ್ಯೆ ಕಡಿಮೆಯಾಗಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ. ಹಕ್ಕಿಗಳು ಹೊಲಗದ್ದೆಗಳಲ್ಲಿ ಬೆಳೆದು ನಿಂತಿರುವ ಧಾನ್ಯದ ತೆನೆಯಲ್ಲಿರುವ ಕಾಳುಗಳನ್ನು ತಿನ್ನುತ್ತವೆ. ಆದ್ದರಿಂದ ತೆನೆಬಂದ ಸಂದರ್ಭದಲ್ಲಿ ಕವಣಿಕಲ್ಲಿನಿಂದ ರೈತರು ಹಕ್ಕಿಗಳನ್ನು ಓಡಿಸುತ್ತಾರೆ. ಇದರಿಂದಾಗಿ ಹಕ್ಕಿಗಳು ಧಾನ್ಯಗಳನ್ನು ಅಲ್ಪಸ್ವಲ್ಪ ತಿಂದರೂ ಬಹುಬಾಗ ರೈತನಿಗೆ ಉಳಿಯುತ್ತದೆ. ಹಕ್ಕಿಗಳು ಕ್ರಿಮಿಕೀಟಗಳನ್ನು ತಿಂದು ಬದುಕುತ್ತವೆ. ಆದರೆ ಹಕ್ಕಿಗಳನ್ನೇ ನಾಶಮಾಡದರೆ ಕ್ರಿಮಿಕೀಟಗಳ ಸಂಖ್ಯೆ ವಿಪರೀತ ಹೆಚ್ಚುತ್ತದೆ. ಇದರಿಂದಾಗಿ ಕ್ರಿಮಿಕೀಟಗಳು ಧಾನ್ಯದ ಕಾಳುಗಳನ್ನು ಸಂಪೂರ್ಣ ತಿಂದು ಹಾಕುವುದರಿಂದ ರೈತನಿಗೆ ಏನೂ ಸಿಗದಂತಾಗುತ್ತದೆ. ಚೈನಾದಲ್ಲಿ ಈ ರೀತಿಯ ವಾಸ್ತವಿಕ ಘಟನೆ ನಡೆದ ನಂತರ ಅಲ್ಲಿನ ರೈತರು ಎಚ್ಚೆತ್ತುಕೊಂಡು ಹಕ್ಕಿಗಳನ್ನು ನಾಶ ಮಾಡುವುದನ್ನು ನಿಲ್ಲಿಸಿದರು.

ಜೀವಸಂಕುಲಗಳು ನಾಶವಾಗಲು ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಾಣವೂ ಒಂದು ಮುಖ್ಯವಾದ ಕಾರಣ. ಈ ಅಣೆಕಟ್ಟುಗಳನ್ನು ಕಟ್ಟುವಾಗ ಸಾವಿರಾರು ಎಕರೆಗಳ ದಟ್ಟವಾದ ಅರಣ್ಯ ಮುಳುಗಡೆಯಾಗಿ ಅದರಲ್ಲಿರುವ ಅಸಂಖ್ಯಾತ ಮರಗಿಡಬಳ್ಳಿಗಳು ಮಾತ್ರವಲ್ಲದೆ ಅನೇಕ ಜೀವ ಸಂಕುಲಗಳು ನಾಶವಾಗುತ್ತವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯವಾದ ಕೃಷಿ ಭೂಮಿಗೆ ನೀರನ್ನು ಒದಗಿಸಲು, ವಿದ್ಯುಚ್ಛಕ್ತಿಯನ್ನು ತಯಾರಿಸಲು, ಕುಡಿಯುವ ನೀರನ್ನು ಒದಗಿಸಲು ಇದು ಅನಿವಾರ್ಯವಾಗುತ್ತದೆ. ಪರಿಸರದ ನಾಶಕ್ಕೆ ಆ ಮೂಲಕ ಜೀವ ಸಂಕುಲಗಳ ನಾಶಕ್ಕೆ ಮಾನವ ಮಿತಿ ಮೀರಿದ ಜನಸಂಖ್ಯೆ ಬಹುಮುಖ್ಯ ಕಾರಣಗಳಲ್ಲೊಂದು. ಅಮೇರಿಕಾ ಮತ್ತು ಯುರೋಪಿನ ಕೆಲವು ಮುಂದುವರಿದ ದೇಶಗಳು ಜಗತ್ತಿನ ಜನಸಂಖ್ಯೆಯ ಶೇಕಡಾ ೨೦ ರಷ್ಟು ಭಾಗವನ್ನು ಮಾತ್ರ ಉಪಯೋಗಿಸಬೇಕಾಗಿರುವುದ್ ಇದಕ್ಕೆ ಕಾರಣವಾಗಿದೆ.

ಪರಿಸರ ಮಾಲಿನವೂ ಜೀವಸಂಕುಲಗಳ ನಾಶಕ್ಕೆ ಕಾರಣವಾಗಿದೆ. ದೊಡ್ಡ ಕೈಗಾರಿಕೆಗಳ ತ್ಯಾಜ್ಯ ವಸ್ತುಗಳನ್ನು ನದಿ ಮತ್ತು ಸಮುದ್ರಗಳಿಗೆ ಬಿಡುವುದರಿಂದ ಅಲ್ಲಿನ ಅನೇಕ ಜಲಚರಗಳು ನಾಶವಾಗುತ್ತವೆ. ಈ ಅಶುದ್ಧವಾದ ನೀರನ್ನು ಕುಡಿಯುವುದರಿಂದ ಮನುಷ್ಯರು ಮತ್ತು ಪ್ರಾಣಿಗಳು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಕೈಗಾರಿಕೆಗಳ ಹಾಗೂ ಇಂಧನಗಳನ್ನು ಬಳಸುವ ವಾಹನಗಳ ಹೊಗೆಯಿಂದ ವಾತಾವರಣ ಕಲುಷಿತವಾಗುತ್ತದೆ. ಇಂತಹ ಗಾಳಿಯ ಉಸಿರಾಟದಿಂದಲೇ ಅನೇಕ ರೋಗಗಳು ಬರುತ್ತವೆ. ಹೊಗೆಯ ಮೂಲಕ ರಾಸಾಯನಿಕ ವಸ್ತುಗಳು ಮೋಡದಲ್ಲಿ ಸೇರುವುದರಿಂದ ಕೆಲವು ಕಡೆ ಆಮ್ಲ ಮಳೆ (Acid rain) ಬೀಳುವುದೂ ಉಂಟು. ಅಣುಬಾಂಬುಗಳ ಸ್ಫೋಟದಿಂದ ಜೀವ ಸಂಕುಲಕ್ಕೆ ಏನೆಲ್ಲಾ ಅನಾಹುತಗಾಳಾಗಬಹುದು ಎಂಬುದನ್ನು ಹಿರೋಷಿಮಾ, ನಾಗಸಾಕಿಯ ಮೇಲೆ ಅಮೇರಿಕಾ ಮಾಡಿದ ಬಾಂಬ್ ದಾಳಿಯಿಂದ ತಿಳಿಯಬಹುದು. ಇದರ ಪರಿಣಾಮ ಅನೇಕ ತಲೆಮಾರುಗಳ ಮೇಲೆ ಆಗುತ್ತದೆ. ಕ್ಲೋರೋ, ಪ್ಲೋರೋ ಕಾರ್ಬನ್ ವಾತಾವರಣಕ್ಕೆ ಸೇರುವುದರಿಂದ ಓಜೋನ್ ಪದರ ಛಿದ್ರವಾಗಿ ಅತಿ ನೇರಳೆ ವಿಕಿರಣದಿಂದ ಚರ್ಮದ ಕ್ಯಾನ್ಸರ್ ಬರುತ್ತದೆ.

. ಪರಿಸರ, ಜೀವ ಸಂಕುಲ ಮತ್ತು ಸಂಸ್ಕೃತಿ :

ಮನುಷ್ಯನ ಸಂಸ್ಕೃತಿಯಲ್ಲಿ ಕೈಗಾರಿಕಾ ಕ್ರಾಂತಿಯವರೆಗೆ ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೆ ಧಕ್ಕೆಯಾಗಿರಲಿಲ್ಲ. ಪ್ರಕೃತಿಯ ಜೀವ ಸಂಕುಲದಲ್ಲಿ ತಾನೂ ಒಂದು ಭಾಗ ಮಾತ್ರ, ಉಳಿದ ಜೀವ ಸಂಕುಲಗಳು ಉಳಿದರೆ ಮಾತ್ರ ತಾನೂ ಉಳಿಯುತ್ತೇನೆ ಎಂಬ ಪ್ರಜ್ಞೆ ಇದ್ದುದರಿಂದ ಪ್ರಕೃತಿಯ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಳ್ಳುತ್ತಿದ್ದುದು ಹಾಗೂ ಪರಿಸರವನ್ನು ಮಲಿನಗೊಳಿಸದೆ ಇದ್ದುದ್ದು ಇದಕ್ಕೆ ಕಾರಣ. ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಪ್ರಕೃತಿಯನ್ನು ಭಕ್ತಿ ಗೌರವಗಳಿಂದ ಕಾಣಲಾಗಿದೆ. ವೇದವಾಙಯದಲ್ಲಿ ಪರಿಸರವನ್ನು ಕುರಿತು ಬರೆದಿರುವ ಸಾ.ಕೃ.ರಾಮಚಂದ್ರರಾವು ಅವರ ಭೂಮಿ, ಕಾಡು, ಗಿಡಮರಗಳು, ಪಶುಪಕ್ಷಿಗಳು ಇವೆಲ್ಲವನ್ನು ಹಿಂದೆ ಎಷ್ಟು ಭಕ್ತಿ ಗೌರವಗಳಿಂದ ಕಾಣುತ್ತಿದ್ದರು ಎಂಬುದನ್ನು ವಿವರಿಸಿ ಹೀಗೆ ಹೇಳುತ್ತಾರೆ. “ಪರಿಸರವನ್ನು ಅಸಡ್ಡೆಯಿಂದ ಕಾಣುವುದಾಗಲಿ, ಪರಿಸರದೊಂದಿಗೆ ಹೋರಾಟದಲ್ಲಿ ತೊಡಗುವುದಾಗಲಿ, ಪರಿಸರದ ಮೇಲೆ ಮನುಷ್ಯ ತನ್ನ ಒಡೆತನವನ್ನು ಸ್ಥಾಪಿಸಿಕೊಳ್ಳಬೇಕೆಂಬ ಬಯಕೆಯಾಗಲಿ ನಮ್ಮ ಸಂಸ್ಕೃತಿ ಸಹಜವಾದುದಲ್ಲ. ಪರಿಸರದ ಹಂಗಿಲ್ಲದೇ ಮನುಷ್ಯ ಬಾಳಬಲ್ಲನೆಂದು ನಮ್ಮ ಸಂಸ್ಕೃತಿ ಎಂದಾದರೂ ನಂಬಿದ್ದಿತೆನ್ನಲು ಪುರಾವೆಯಿಲ್ಲ” (ಪರಿಸರ : ಮುಂದೇನು ? ೧೯೬೬ ಪು.೩) ಬೌದ್ಧ, ಜೈನ, ಸಿಖ್, ಕ್ರೈಸ್ತ, ಇಲ್ಸಾಂ ಧರ್ಮಗಳಲ್ಲಿಯೂ ಮನುಷ್ಯ ಪ್ರಕೃತಿಯ ಪರಿಸರವನ್ನು ಭಕ್ತಿ ಗೌರವದಿಂದಲೇ ಕಾಣಬೇಕೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಆಲದ ಮರ ಮತ್ತು ಅರಳಿ ಮರದ ಬಗ್ಗೆ ಅಪಾರವಾದ ಭಕ್ತಿ ಗೌರವಗಳಿವೆ. ಇವುಗಳನ್ನು ಪೂಜಿಸುತ್ತಾರೆ. ಕಡಿಯುವುದಿಲ್ಲ. ಈ ಎರಡೂ ಮರಗಳು ಜೀವಿಗಳಿಗೆ ನೆರಳು ನೀಡುವುದು ಮಾತ್ರವಲ್ಲದೆ, ಪಕ್ಷಿಗಳಿಗೆ ಬೇರೆ ಯಾವುದೇ ಮರದ ಹಣ್ಣುಗಳು ದೊರಕದೆ ಇದ್ದಾಗಳು ತಮ್ಮ ಹಣ್ಣುಗಳಿಂದ ಆಹಾರವನ್ನು ಒದಗಿಸುತ್ತವೆ. ಪವಿತ್ರ ವನಗಳು ಕೆರೆಗಳು ಹಾಗೂ ನದಿಗಳ ಸಂರಕ್ಷಣೆ ಮಾಡಬೇಕೆಂದು ಎಲ್ಲ ಧರ್ಮಗಳು ಹೇಳುತ್ತವೆ. “ಧರ್ಮವು ಪರಿಸರ ಸಂರಕ್ಷಣೆಗೆ ಸ್ಫೂರ್ತಿ ತಂದ ಸಂಗತಿಗಳುಂಟು. ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಕ್ರಿ.ಶ. ೧೫೮೫ ರ ಸುಮರಿನಲ್ಲಿ ಕಂಡೂ ಬರುವ ಬಿಶ್ ನಾಯ್ ಜನಾಂಘವು ತನ್ನ ಅನುಪಾಲಕರಿಗೆ ಹಸಿರು ಗಿಡವನ್ನು ಕಡಿಯಕೂಡದು ಮತ್ತು ಪ್ರಾಣಿಯನ್ನು ಕೊಲ್ಲಕೂಡದೆ ಎಂದು ಆಜ್ಞಾಪಿಸುತ್ತದೆ.  ೩೫೦ ವರ್ಷಗಳ ಹಿಂದೆ ತಮ್ಮ ಪ್ರದೇಶದ ಮರಗಳನ್ನು ಸ್ಥಳೀಯ ದೊರೆ ಕಡಿಯುವುದನ್ನು ತಡೆಗಟ್ಟಲು ೩೬೩ ಬಿಶ್ ನಾಯ್ ಗಳು (ಹೆಂಗಸರು ಮಕ್ಕಳನ್ನು ಒಳಗೊಂಡಂತೆ) ತಮ್ಮ ಪ್ರಾಣ ತೆತ್ತರು. ಸಂರಕ್ಷಣೆಯ ಈ ಸಂಪ್ರದಾಯವು ಹಾಗೆಯೇ ಮುಂದುವರಿದು, ಇಂದಿಗೂ ಬಿಶ್ ನಾಯ್ ಗ್ರಾಮಗಳು ಭಾರತದ ಮರುಭೂಮಿಯಲ್ಲಿ ಹಸಿವಿನಿಂದ, ವನ್ಯಜೀವಿಗಳಿಂದ ಕಂಗೊಳಿಸುವುದನ್ನು ಕಾಣಬಹುದು.” (ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು, ೧೯೯೬ ಪು.೧೧೮) ಅನೇಕ ಆದಿವಾಸಿ ಸಂಸ್ಕೃತಿಯಲ್ಲಿ ಕೆಲವು ಗಿಡಮರಗಳನ್ನು ಕಡಿಯಬಾರದು, ಕೆಲವು ಪ್ರಾಣಿಪಕ್ಷಿಗಳನ್ನು ಕೊಲ್ಲಬಾರದು ಎಂಬ ನಿಯಮಗಳಿವೆ. ಇದು ಮೂಢನಂಬಿಕೆ ಎಂದು ತಳ್ಳಿ ಹಾಕುವುದು ಸುಲಭ. ಆದರೆ ಈ ನಂಬಿಕೆಗಳಿಂದಲೇ ಪರಿಸರ ಸಮತೋಲನದಲ್ಲಿ ಉಳಿಯಲು ಸಾಧ್ಯವಾಯಿತು ಎಂಬುದಂತೂ ನಿಜ. ಆದಿವಾಸಿ ಸಂಸ್ಕೃತಿಗಳನ್ನು ಅಭ್ಯಾಸ ಮಾಡುವ ವಿಜ್ಞಾನದಲ್ಲಿ ಸಾಂಸ್ಕೃತಿಕ ಜೀವ ಪರಿಸರ ವಿಜ್ಞಾನ (Cultural Ecology) ಎಂಬ ಶಾಖೆಯೇ ರೂಪುಗೊಂಡಿದೆ.

ಪರಿಸರ ಮತ್ತು ಜಾನಪದದಲ್ಲಿ ಪರಿಸರ ಪ್ರಜ್ಞೆ ವ್ಯಕವಾಗಿದೆ ಎಂಬುದರ ಬಗ್ಗೆ ವಿವರವಾದ ಪ್ರತಿಪಾದನೆ ಹಾಗೂ ಚರ್ಚೆ ನಡೆಯುವುದರಿಂದ ಆ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡಿಲ್ಲ. ಆದರೆ ಈ ಚರ್ಚೆಗಳಿಗೆ ಅಗತ್ಯವಾದ ಪರಿಸರ ವಿಜ್ಞಾನದ ಕೆಲವು ಪ್ರಾಥಮಿಕ ವಿಷಯಗಳನ್ನು ಮಾತ್ರ ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.

ಕೃತಜ್ಞತೆಗಳು :

ಈ ಲೇಖನವನ್ನು ಸಿದ್ಧಪಡಿಸುವಾಗ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ವಿಜ್ಞಾನಿಯಾಗಿರುವ ಡಾ. ಕೆ.ಎಸ್.ಮುರಳಿ ಅವರೊಡನೆ ವಿವರವಾಗಿ ಚರ್ಚೆ ಮಾಡಿ ಅದರ ಸಲಹೆಗಳನ್ನು ಪಡೆದಿದ್ದೇನೆ. ಅವರಿಗೆ ಹಾಗೂ ನನಗೆ ನೆರವು ನೀಡಿದ ಶ್ರೀ.ಕೆ.ಎಸ್.ಮುಕುಂದರಾವ್ ಅವರಿಗೂ ನನ್ನ ವಂದನೆಗಳು.

 

ಗ್ರಂಥಋಣ :

೧. ಕಿರಣ ಬಿ. ವೋಕರ ಮತ್ತು ಇತರರು, (ಸಂ) ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು ೧೯೯೬, ಪರಿಸರ ಶಿಕ್ಷಣ ಕೇಂದ್ರ, ದಕ್ಷಿಣ ವಲಯ ಘಟಕ, ಬೆಂಗಳೂರು.

೨. ಶೈಲಜಾ ರವೀಂದ್ರನಾಥ ಮತ್ತು ಇತರರು (ಸಂ) ಎಳೆಯರಿಗೆ ಪರಿಸರ, ೧೯೯೭ ಪರಿಸರ ಶಿಕ್ಷಣ ಕೇಂದ್ರ, ದಕ್ಷಿಣ ವಲಯ ಘಟಕ, ಬೆಂಗಳೂರು.

೩. ಕೃಷ್ಣಯ್ಯ ಶೆಟ್ಟಿ.ಪಿ ಮತ್ತು ನಟರಾಜ್.ಡಿ.ಆರ್ (ಸಂ) ಪರಿಸರ : ಮುಂದೇನು ? ೧೯೯೭ ಪರಿಸರ ವಿಜ್ಞಾನ ಪರಿಷತ್ತು, ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರು ಮತ್ತು ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ಜಕ್ಕೂರು, ಬೆಂಗಳೂರು.

೪. Miller, Elmer.S, and Weitz, Charles, A Introduction To Anthropology, 1979, Presence – Hall Inc. New Jersey.

5. Eugene, Odum,P., Fundamentals of Ecology, 1971, W.B.Saunders Company, Philadelphia.

* * *