ಉತ್ಪಾದನೆಯ ಮೂಲದಲ್ಲಿಯೇ ಕಸ ನಿರ್ವಹಣೆ

ಕಸ ಉತ್ಪಾದನೆಯ ಮೂಲ

ತೆಗೆದುಕೊಳ್ಳಬೇಕಾದ ಕ್ರಮ

೧. ಮನೆಗಳು ಯಾವುದೇ ಗಟ್ಟಿಕಸವನ್ನು ಅಕ್ಕಪಕ್ಕದ ನಿವೇಶನಗಳಿಗಾಗಲೀ, ರಸ್ತೆಗಾಗಲೀ, ತೆರೆದ ಸ್ಥಳಗಳಿಗಾಗಲೀ, ಖಾಲಿ ಸ್ಥಳಗಳಿಗಾಗಲೀ ಅಥವಾ ಚರಂಡಿಗಾಗಲೀ ಎಸೆಯಬಾರದು.

ಆಹಾರದ ಜೈವಿಕ ವಿಘಟನೆಯಾಗುವ ಕಸವನ್ನು ತುಕ್ಕು ಹಿಡಿಯದ ಹಾಗೂ ಮುಚ್ಚಳವಿರುವ ಪಾತ್ರೆಗಳಲ್ಲಿ ಹಾಕಿ.

ಒಣಗಿದ ಹಾಗೂ ಪುನರುತ್ಪಾದನೆ ಮಾಡಬಹುದಾದ ಕಸವನ್ನು ಒಂದು ತೊಟ್ಟಿ / ಚೀಲದೊಳಗೆ ಹಾಕಿ.

ಯಾವುದೇ ಅಪಾಯಕಾರಿ ಕಸವಿದ್ದಲ್ಲಿ ಅದನ್ನು ಪ್ರತ್ಯೇಕವಾಗಿಡಿ ಹಾಗೂ ನಿಗದಿಗೊಳಿಸಿದ ಸ್ಥಳಗಳಲ್ಲಿ ಅದನ್ನು ಹಾಕಿ.

೨. ಬಹುಮಹಡಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು, ಖಾಸಗಿ ಸಂಸ್ಥೆಗಳು ಆ ಕಟ್ಟಡ / ವಾಣಿಜ್ಯ ಸಂಕೀರ್ಣ / ಖಾಸಗಿ ಸಂಸ್ಥೆಯಲ್ಲಿ ಉತ್ಪತ್ತಿಯಾಗಬಹುದಾದ ಆಹಾರ ಕಸ/ಜೈವಿಕ ವಿಘಟನೆಯ ಕಸವನ್ನು ಹಿಡಿಯಬಹುದಾದಷ್ಟು ದೊಡ್ಡದಾದ ಸಮುದಾಯ ಕಸದ ತೊಟ್ಟಿಯನ್ನು ಒದಗಿಸಿ. ಪುನರುತ್ಪಾದನೆಗೆ ಸಾಧ್ಯವಿರುವ ಕಸದ ಶೇಖರಣೆಗೆ ಪ್ರತ್ಯೇಕ ತೊಟ್ಟಿ ಇಡಿ. ಅಲ್ಲಿ ವಾಸಿಸುವ ಎಲ್ಲರೂ ಕಸವನ್ನು ಸಮುದಾಯದ ತೊಟ್ಟಿಗಳಲ್ಲಿ ಹಾಕುವಂತೆ ನಿರ್ದೇಶನ ನೀಡಿ.
೩. ಕೊಳೆಗೇರಿಗಳು ಸ್ಥಳೀಯ ಆಡಳಿತ ಒದಗಿಸಿರುವ ಸಮುದಾಯದ ತೊಟ್ಟಿಯೊಳಗೆ ಆಹಾರದ ಕಸ / ಜೈವಿಕ ವಿಘಟನೆ ಹೊಂದುವ ಕಸ ಹಾಕುವಂತೆ ಮಾಡಿ.
೪. ಅಂಗಡಿಗಳು, ಕಛೇರಿಗಳು, ಸಂಸ್ಥೆಗಳು, ಇತ್ಯಾದಿ ಕಸವನ್ನು ನಿಗದಿಪಡಿಸಿರುವ ಕಸದ ತೊಟ್ಟಿಯೊಳಗೇ ಹಾಕುವಂತೆ ಮಾಡಿ. ಕಸದ ತೊಟ್ಟಿಯ ಗಾತ್ರ ಹಾಗೂ ಸ್ಥಳವನ್ನು ಅಗತ್ಯಕ್ಕೆ ತಕ್ಕಂತೆ ನಿರ್ಧರಿಸಿ.
೫. ಹೋಟೆಲುಗಳು ಮತ್ತು ಉಪಹಾರ ದರ್ಶಿನಿಗಳು ಕಸ ತುಂಬುವ ತೊಟ್ಟಿಯು ಬಲಿಷ್ಟವಾಗಿರಬೇಕು. ಗಾತ್ರದಲ್ಲಿ ೧೦೦ ಲೀಟರುಗಳಿಗಿಂತ ಹೆಚ್ಚಿರಬಾರದು ಹಾಗೂ ಮೇಲ್ಭಾಗದಲ್ಲಿ ಕೈಹಿಡಿ ಇರಬೇಕು. ಅಥವಾ ಪಾರ್ಶ್ವಗಳಲ್ಲಿ ಕೈಹಿಡಿಗಳಿರಬೇಕು ಹಾಗೂ ತಳಭಾಗದಲ್ಲಿ ಗಟ್ಟಿಯಾದ ಅಂಚಿರಬೇಕು. ಇದರಿಂದ ತೊಟ್ಟಿಗಳನ್ನು ಸಾಗಿಸಲು ಸುಲಭವಾಗುತ್ತದೆ.
೬. ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟೆ ಸ್ಥಳೀಯ ಸಂಸ್ಥೆ ಒದಗಿಸಿರುವ ಸಾಗಾಟದ ವಾಹನಕ್ಕೆ ಸೂಕ್ತವಾದಂತಹ ದೊಡ್ಡ ಕಸದ ತೊಟ್ಟಿಯಿರಬೇಕು. ಅಂಗಡಿಯವರು ಕಸವನ್ನು ತಮ್ಮ ಅಂಗಡಿಯ ಮುಂದೆ ಅಥವಾ ತೆರೆದ ಸ್ಥಳಗಳಲ್ಲಿ ಎಸೆಯಬಾರದು. ಕಸ ಉಂಟಾದ ಘಳಿಗೆಯಲ್ಲಿಯೇ ನಿಗದಿತ ತೊಟ್ಟಿಗೆ ಹಾಕುವಂತೆ ಮಾಡಿ
೭. ಮೀನು ಹಾಗೂ ಮಾಂಸದ ಮಾರುಕಟ್ಟೆಗಳು ಯಾವುದೇ ಕಸವನ್ನು ಅಂಗಡಿಗಳ ಮುಂದೆ ಅಥವಾ ತೆರೆದ ಸ್ಥಳಗಳಲ್ಲಿ ಹಾಕಬಾರದು. ಪ್ರತಿ ಅಂಗಡಿಯವರು ಹೋಟೆಲ್ ಕಸ ತುಂಬಲು ಬಳಸುವಂತಹ ೧೦೦ ಲೀಟರುಗಳನ್ನು ಮೀರದ ಕಸದ ತೊಟ್ಟಿಗಳನ್ನು ಬಳಸಬೇಕು. ಪ್ರತಿ ಕಸದ ತೊಟ್ಟಿ ತುಂಬಿದ ಮೇಲೆ ಮಾರುಕಟ್ಟೆಯಲ್ಲಿರುವ ದೊಡ್ಡ ತೊಟ್ಟಿಗೆ ವರ್ಗಾಯಿಸಬೇಕು.
೮. ಬೀದಿಯಲ್ಲಿ ಆಹಾರ ಮಾರುವವರು ರಸ್ತೆ, ಕಾಲು ಹಾದಿ ಅಥವಾ ತೆರೆದ ಸ್ಥಳಗಳಿಗೆ ಯಾವುದೇ ರೀತಿಯ ಕಸವನ್ನು ಎಸೆಯಬಾರದು. ಮಾರಾಟ ಮಾಡುವ ಪ್ರಕ್ರಿಯೆ ಉಂಟಾಗುವ ಕಸವನ್ನು ತುಂಬಲು ಒಂದು ಚೀಲ ಅಥವಾ ಕಸದ ತೊಟ್ಟಿಯನ್ನು ಹೊಂದಿರಬೇಕು. ಮಾರಾಟ ಮಾಡಲು ಬಳಸುವ ಕೈಗಾಡಿಗೆ ಕಸದ ತೊಟ್ಟಿಯನ್ನು ತೂಗು ಹಾಕಿದರೆ ತುಂಬಾ ಒಳ್ಳೆಯದು.
೯. ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಯಾವುದೇ ಗಟ್ಟಿ ಕಸವನ್ನು ಸುತ್ತಮುತ್ತಲ ಪ್ರದೇಶಕ್ಕೆ, ಬೀದಿಗಳಿಗೆ, ತೆರೆದ ಪ್ರದೇಶಗಳಿಗೆ ಎಸೆಯಬಾರದು. ಸ್ಥಳೀಯ ಸಂಸ್ಥೆಯು ಏರ್ಪಡಿಸಿರುವ ಕಸದ ಸಾಗಣೆಗೆ ಸೂಕ್ತವಾದ ಕಸದ ತೊಟ್ಟಿಗಳನ್ನು ಬಳಸಬೇಕು. ಅಲ್ಲಿ ಉಂಟಾಗುವ ಕಸವನ್ನು ತೊಟ್ಟಿಗಳಲ್ಲಿ ತುಂಬಬೇಕು.
೧೦. ಆಸ್ಪತ್ರೆಗಳು, ನರ್ಸಿಂಗ್ ಚರಂಡಿಗಳಿಗೆ ಎಸೆಯಬಾರದು. ಜೈವಿಕ-ಔಷಧೀಯ ತ್ಯಾಜ್ಯವನ್ನು ನಗರಸಭೆ ಕಸದ ತೊಟ್ಟಿಗಳಿಗೆ ಅಥವಾ ಕಸ ಸಂಗ್ರಹಣೆಗೆ ಇಟ್ಟಿರುವ ಯಾವುದೇ ತೊಟ್ಟಿಗಳಿಗೆ ಹಾಕಬಾರದು. ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ರೂಪಿಸಿರುವ ಜೈವಿಕ ಕಸ (ನಿರ್ವಹಣೆ ಹಾಗೂ ಕೈಬಳಕೆ) ನಿಯಮಾವಳಿ ೧೯೯೮ರ ರೀತಿ ಜೈವಿಕ-ಔಷಧೀಯ ಕಸದ ವಿಲೇವಾರಿ ಮಾಡಬೇಕು.
೧೧. ನಿರ್ಮಾಣ ಅಥವಾ ಕೆಡುವುದರಿಂದ ಉಂಟಾಗುವ ಕಸ ಕಟ್ಟಡ ನಿರ್ಮಾಣದ ಕಸ ಅಥವಾ ಹಾಳು ಮಣ್ಣನ್ನು ರಸ್ತೆಗಳಿಗೆ, ಕಾಲು ಹಾದಿಗಳಿಗೆ, ತೆರೆದ ಜಾಗಗಳಲ್ಲಿ ನೀರಿನ ತಾಣಗಳಲ್ಲಿ ಹಾಕಬಾರದು. ಆವರಣದೊಳಗೆ  ಅಥವಾ ಸ್ಥಳೀಯ ಆಡಳಿತದ ಅನುಮತಿ ಪಡೆದು  ಆವರಣದ ಅತಿ ಸಮೀಪದಲ್ಲಿ ಹಾಗೂ ಸಾಗಾಟಕ್ಕೆ ತೊಂದರೆಯಾಗದಂತೆ ರಾಶಿ ಹಾಕಬೇಕು.ಸಾಧ್ಯವಿದ್ದಲ್ಲಿ ಖಾಸಗಿ ಕಂಟ್ರಾಕ್ಟರ್‌ಗಳ ಹತ್ತಿರ ಅಥವಾ ಸ್ಥಳೀಯ ಆಡಳಿತದವರ ಹತ್ತಿರವಿರುವ ಕಸದ ತೊಟ್ಟಿಗಳನ್ನು ಬಳಸಬಹುದು.
೧೨. ತೋಟದ ಕಸ ಕಸವನ್ನು ತೋಟದೊಳಗೆ ಕಾಂಪೋಸ್ಟ್ ಮಾಡಿ. ವಾರದಲ್ಲಿ ಒಂದು ದಿನ ಅದೂ ಸ್ಥಳೀಯ ಆಡಳಿತ ನಿಗದಿಪಡಿಸಿದ ದಿನ ಹೆಚ್ಚಿನ ರೆಂಬೆಕೊಂಬೆಗಳನ್ನು ಕತ್ತರಿಸಿ. ಆ ಕಸವನ್ನು ದೊಡ್ಡ ಚೀಲಗಳಲ್ಲಿ ಅಥವಾ ತೊಟ್ಟಿಗಳಲ್ಲಿ ಸಂಗ್ರಹಿಸಿ. ಸ್ಥಳೀಯ ಆಡಳಿತ ಗೊತ್ತುಪಡಿಸಿರುವ ಸಿಬ್ಬಂದಿ ಬಂದಾಗ ಆ ಕಸವನ್ನು ನೀಡಿ.

ಕಸದ ರಾಶಿಯೂ ಹಾಗೂ ಚಿಂದಿ ಆಯುವ ಜನರೂ ….?

ಕಸದ ತೊಟ್ಟಿಗಳ ಹತ್ತಿರ ಹೋಗಿ, ಕೈಯಿಂದ ಅಥವಾ ಕಡ್ಡಿಯಿಂದ ಕೆದಕಿ ಪ್ಲಾಸ್ಟಿಕ್, ಕಾಗದ, ಲೋಹ ಮುಂತಾದ ಪುನರುತ್ಪಾದಿಸಬಹುದಾದ ವಸ್ತುಗಳನ್ನು ಆಯುವ ಜನರನ್ನು ನೀವು ನೋಡಿರಬಹುದು. ಅವರೇ ಚಿಂದಿ ಆಯುವ ಜನ ಬೆನ್ನ ಮೇಲೆ ಒಂದು ದೊಡ್ಡಚೀಲವನ್ನು ಹಾಕಿಕೊಂಡು ಚಿಂದಿ ಅಯುತ್ತಾ ಸಾಗುವ ಈ ಜನರ ಜೀವನ ಅತ್ಯಂತ ಹೀನಾಯವಾದುದು. ಬೇರಾವ ಉದ್ಯೋಗ ದೊರಕದಿದ್ದಾಗ ಜನ ಈ ಕೆಲಸ ಆರಂಭಿಸುವರು. ಆದರೆ ಈ ಜನ ಪರಿಸರವನ್ನು ನಿರ್ಮಲವಾಗಿಡಲು, ಸಂಪನ್ಮೂಲಗಳನ್ನು ಪುನಃ ಬಳಕೆ ಮಾಡಲು ಹಾಗೂ ಕ್ರೋಢೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಗಟ್ಟಿ ಕಸ ನಿರ್ವಹಣೆಯಲ್ಲಿ ನಗರಸಭೆ ಮಾಡಬೇಕಾದ ಪ್ರಮುಖ ಕೆಲಸವೊಂದನ್ನು ಚಿಂದಿ ಆಯುವ ಈ ಜನ ಮಾಡುತ್ತಾರೆ. ಕಸದ ತೊಟ್ಟಿ ಹಂತದಲ್ಲಿಯೇ ಕಸದ ವಿಂಗಡಣೆ ಮಾಡುವುದಕ್ಕೆ ಚಿಂದಿ ಆಯುವ ಜನರ ಪಾತ್ರವೇ ಉತ್ತಮ ಉದಾಹರಣೆ.

ಕಸದ ಪುನರ್ಬಳಕೆಯಲ್ಲಿ ಚಿಂದಿ ಆಯುವ ಜನರೇ ಕೇಂದ್ರ ಬಿಂದು. ಚಿಂದಿ ಆಯುವಾಗ ನಾನಾ ರೋಗಗಳಿಗೆ ಹಾಗೂ ಅಪಾಯಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಕಸದ ತೊಟ್ಟಿಯ ಕಸದಲ್ಲಿ ಕೈ ಹಾಕಿ ತಡಕುವಾಗ ಸೂಜಿ, ಮುಳ್ಳು, ಮೊಳೆ ಮುಂತಾದವುಗಳಿಂದ ಗಾಯಗಳಾಗಬಹುದು. ಸೋಂಕು ಇರುವ ಆಹಾರವನ್ನು ವಸ್ತುವನ್ನು ಪ್ರತ್ಯೇಕಿಸುವಾಗ ವಿವಿಧ ರೋಗಕಾರಕಗಳು ಚಿಂದಿ ಆಯುವವರ ಶರೀರ, ಶ್ವಾಸಕೋಶ ಸೇರಬಹುದು. ಲಾಡಿಹುಳು, ಕೊಕ್ಕೆ ಹುಳು, ಜಂತುಹುಳು, ಕಾಲರಾ, ಕಾಮಾಲೆ ರೋಗಗಳು ಅಂಟಿಕೊಳ್ಳಬಹುದು. ಈ ಎಲ್ಲ ಅಪಾಯಗಳ ಜೊತೆಗೆ ಬೀದಿನಾಯಿಗಳು, ಹಂದಿಗಳು ಕಚ್ಚುವ ಸಾಧ್ಯತೆಯೂ ಇರುತ್ತದೆ. ಚಿಂದಿ ಆಯುವ ಜನ ತಾವು ಸಂಗ್ರಹಿಸಿದ ಪ್ಲಾಸ್ಟಿಕ್, ಕಾಗದ, ಕಬ್ಬಿಣ ಮುಂತಾದವನ್ನು ಗುಜರಿ ಸಾಮಾನು ಸಂಗ್ರಹಿಸುವ ಜನರಿಗೆ ಮಾರುತ್ತಾರೆ. ಅಂತವರು ಪುನರುತ್ಪಾದನೆಯ ಕಾರ್ಖಾನೆಗಳಿಗೆ ಇವನ್ನು ಕಚ್ಛಾ ವಸ್ತುವನ್ನಾಗಿ ಮಾರುತ್ತಾರೆ. ಚಿಂದಿ ಆಯುವವರಲ್ಲಿ ಕೆಲವೊಮ್ಮೆ ಪುಟ್ಟ ಮಕ್ಕಳೂ ಇರುವುದುಂಟು. ಶಾಲೆಗೆ ಹೋಗಿ ಅಕ್ಷರ ಕಲಿಯಬೇಕಾದ, ಆಟ ಆಡಬೇಕಾದ ಮಕ್ಕಳು ರೋಗಕ್ಕೆ ತುತ್ತಾಗುವ ವೃತ್ತಿ ಮಾಡುವುದು ಇಡೀ ಸಮಾಜಕ್ಕೆ ಕಳಂಕದ ಸಂಗತಿ. ಚಿಂದಿ ಆಯುವವರಿಗೆ ವೃತ್ತಿ ಸಂಬಂಧಿ ರೋಗಗಳು ಯಾವುವೆಂದರೆ :-

 • ಕಸ ಹಾಗೂ ಗಾಯಗಳಿಗೆ ಚಿಕಿತ್ಸೆ ಮಾಡಿದ್ದ ಕಸ ಮುಟ್ಟುವುದರಿಂದ ಚರ್ಮ ಹಾಗೂ ರಕ್ತಕ್ಕೆ ಸಂಬಂಧಿಸಿದ ಸೋಂಕು ರೋಗಗಳು.
 • ಸೋಂಕು ಇರುವ ಧೂಳಿಗೆ ಒಳಗಾಗುವುದರಿಂದ ಕಣ್ಣು ಹಾಗೂ ಉಸಿರಾಟದ ಸೋಂಕು ರೋಗಗಳು.
 • ಕಸವನ್ನು ತಿನ್ನುವ ಇಲಿ, ಹೆಗ್ಗಣ, ನಾಯಿಗಳ ಕಡಿತಕ್ಕೆ ಒಳಗಾಗಿ ವಿವಿಧ ರೋಗಗಳು.
 • ಕಸವನ್ನು ತಿನ್ನಲು ಬರುವ ನೊಣಗಳಿಂದ ಹರಡುವ ವಿವಿಧ ಕರುಳುಬೇನೆ ರೋಗಗಳು.

ಚಿಂದಿ ಆಯುವ ಚಿಣ್ಣರು ಶಾಲೆಯ ಅಂಗಳಕ್ಕೆ ಬರುವಂತೆ ಮಾಡುವುದು ಪ್ರಜ್ಞಾವಂತ ನಾಗರೀಕರ ಹಾಗೂ ಪ್ರಜಾಪ್ರಭುತ್ವದ ಜವಾಬ್ದಾರಿಯಲ್ಲವೇ ?

ಸ್ವಯಂ ಸೇವಾ ಸಂಸ್ಥೆಗಳ ಪಾತ್ರವೇನು ?

ಇತ್ತೀಚಿನ ದಿನಗಳಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಸ್ಥಳೀಯ ನಿವಾಸಿ ಸಂಘಗಳ ಜೊತೆ ಸೇರಿ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ವಾಸ ಪ್ರದೇಶಗಳ ನೈರ್ಮಲ್ಯದ ಬಗ್ಗೆ ಸರ್ವೆ ನಡೆಸುವುದು, ಅಧ್ಯಯನ ಮಾಡುವುದು ಹಾಗೂ ನಿವಾಸಿಗಳಿಗೆ ಸೂಕ್ತ ತಿಳುವಳಿಕೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಗಟ್ಟಿ ಕಸ ನಿರ್ವಹಣೆಯಲ್ಲಿ ಇಂತಹ ಅಧ್ಯಯನಗಳು ಉಪಯೋಗಕ್ಕೆ ಬರುತ್ತವೆ. ಖಾಸಗಿ ಉದ್ಯಮಿಗಳು ಗಟ್ಟಿ ಕಸ ನಿರ್ವಹಣೆಯಲ್ಲಿ ಆಸಕ್ತಿ ತೋರಿಸುವುದರಿಂದ ಇದರಿಂದ ಸಹಾಯವಾಗುತ್ತದೆ. ಗಟ್ಟಿ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಲು, ಸಂಗ್ರಹಿಸಲು ಹಾಗೂ ಸ್ಥಳೀಯ ಅಧಿಕಾರದ ವಿಭಾಗದವರಿಗೆ ನೀಡಲು ಸ್ವಯಂಸೇವಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬಹುದು.

ಈಗಾಗಲೇ ಹಲವು ಸ್ವಯಂಸೇವಾ ಸಂಸ್ಥೆಗಳು ಗಟ್ಟಿ ಕಸ ನಿರ್ವಹಣೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಉದಾಹರಣೆಗೆ ಮೈಸೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ People’s Science Forum, ಬೆಂಗಳೂರಿನ Waste-wise, ಮುಂಬಯಿಯ Environmental Action Group, ಅಹಮದಾಬಾದಿನ Clean Ahamedabad Abhiyan ಮುಂತಾದವು ಹೆಸರುವಾಸಿಯಾದ ಸಂಸ್ಥೆಗಳು. ನಗರವನ್ನು ಚೊಕ್ಕಟವಾಗಿಟ್ಟುಕೊಳ್ಳುವಲ್ಲಿ ಪ್ರತಿಯೊಬ್ಬ ನಾಗರೀಕ ಯಾವ ಪಾತ್ರ ವಹಿಸಬೇಕೆಂಬ ತಿಳುವಳಿಕೆಯನ್ನು ಈ ಸಂಸ್ಥೆಗಳು ನೀಡುತ್ತಿವೆ. ಅಲ್ಲದೆ ಸ್ಥಳೀಯ ಜನರು ಗಟ್ಟಿ ಕಸ ನಿರ್ವಹಣೆಯಲ್ಲಿ ಭಾಗವಹಿಸುವಂತೆ ಮಾಡುತ್ತಿವೆ. ಇವು ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಸರ ಪ್ರಜ್ಞೆ ಬೆಳೆಸುವುದಕ್ಕೆ ಸೂಕ್ತವಾದ ಪರಿಸರ ಶಿಕ್ಷಣ ನೀಡುತ್ತಿವೆ.

ಸ್ವಯಂಸೇವಾ ಸಂಸ್ಥೆಗಳ ಕಾರ್ಯಕ್ರಮಗಳು :

 • ಗಟ್ಟಿ ಕಸದಲ್ಲಿನ ಪುನರುತ್ಪಾದನೆ ಮಾಡುವ ವಸ್ತುಗಳನ್ನು ಪ್ರತ್ಯೇಕಿಸುವ ಬಗ್ಗೆ ಹಾಗೂ ಗಟ್ಟಿ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಬಗ್ಗೆ ಸಾಮೂಹಿಕ ತಿಳುವಳಿಕೆ ನೀಡುವುದು.
 • ಗಟ್ಟಿ ಕಸ ನಿರ್ವಹಣೆಯಲ್ಲಿ ಜನ ಸಮುದಾಯ ಪಾಲ್ಗೊಳ್ಳುವಂತೆ ಮಾಡುವುದು.
 • ಕಸವನ್ನು ಮನೆಯಿಂದ ಮನೆಗೆ ಸಂಗ್ರಹಿಸುವಂತೆ ಮಾಡುವ ಮೂಲಕ ಉದ್ಯೋಗವನ್ನು  ಒದಗಿಸುವುದು.
 • ಗೃಹಮಟ್ಟದ ಎರೆಹುಳು ಕಾಂಪೋಸ್ಟಿಂಗ್, ಹಿತ್ತಲ ಕಾಂಪೋಸ್ಟಿಂಗ್ ಹಾಗೂ ಜೈವಿಕ ಅನಿಲ ಉತ್ಪಾದನೆಗೆ ಜನರನ್ನು ಪ್ರೋತ್ಸಾಹಿಸುವುದು.

ನಗರಗಳಲ್ಲಿ ಕಸಕ್ಕೂ, ಕೊಳೆಗೇರಿಗಳಿಗೂ ಹಾಗೂ ಬಡತನಕ್ಕೂ ನೇರ ಸಂಬಂಧವಿದೆ. ನಗರಗಳ ಕಸವಿರುವ ಸ್ಥಳದಲ್ಲಿ ಜೀವನವನ್ನು ಸಾಗಿಸಲು ಹತ್ತು ಲಕ್ಷಕ್ಕೂ ಹೆಚ್ಚು ಜನ ಚಿಂದಿ ಆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಆರೋಗ್ಯ ಹಾಗೂ ಕಸದ ವ್ಯವಸ್ಥಿತ ನಿರ್ವಹಣೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಪ್ರಮುಖವಾದುದು.

ಮಾಲಿನ್ಯ ನಿಯಂತ್ರಣ ಮಂಡಲಿ ಸಹಾಯ ಮಾಡುವುದೇ ?

ನಗರದ ಗಟ್ಟಿ ಕಸ ನಿರ್ವಹಣೆಯು ಸ್ಥಳೀಯ ನಗರಸಭೆ ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾಲಿನ್ಯ ನಿಯಂತ್ರಣಾ ಮಂಡಲಿಗಳಿಗೆ ಗಟ್ಟಿಕಸ ನಿರ್ವಹಣೆಯಲ್ಲಿ ವಿಶಿಷ್ಟವಾದ ಪಾತ್ರವಿದೆ. ಗಟ್ಟಿ ಕಸವು ಅನೇಕ ಪರಿಸರ ಸಮಸ್ಯೆಗಳನ್ನು ಹಾಗೂ ಆರೋಗ್ಯಕ್ಕೆ ಅಪಾಯಗಳನ್ನು ತಂದೊಡ್ಡುವುದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಗಳು ನಗರಸಭೆ ಆಡಳಿತ ವ್ಯವಸ್ಥೆಯನ್ನು ಗಟ್ಟಿ ಕಸದ ಬಗ್ಗೆ ಸೂಕ್ತ ಪ್ರೋತ್ಸಾಹವನ್ನು ಮತ್ತು ಮಾರ್ಗದರ್ಶನವನ್ನು ನೀಡಬೇಕು. ಗಟ್ಟಿ ಕಸದ ಬಗ್ಗೆ ಸರ್ವೇಕ್ಷಣೆ ನಡೆಸಲು ಹಾಗೂ ಯುಕ್ತವಾದ ತಂತ್ರಜ್ಞಾನವನ್ನು ಒದಗಿಸಲು ಮಲಿನ್ಯ ನಿಯಂತ್ರಣ ಮಂಡಲಿಗಳು ಸಹಾಯ ಮಾಡಬೇಕು. ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಗಟ್ಟಿಕಸ ನಿರ್ವಹಣೆಯ  ಬಗ್ಗೆ ಮಾಹಿತಿಯನ್ನು ಪ್ರಚಾರ ಮಾಡುವ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನಿರ್ವಹಿಸಬೇಕು. ಸಾರ್ವಜನಿಕರಿಗೆ ಹಾಗೂ ಸಂಬಂಧಿತ ಅಧಿಕಾರ ವರ್ಗದವರಿಗೆ ಗಟ್ಟಿ ಕಸ ನಿರ್ವಹಣೆಯ ಅರಿವನ್ನು ಉಂಟು ಮಾಡಬೇಕು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ತಮಗೆ ಅನ್ವಯಿಸುವ ಕಾನೂನು ಹಾಗೂ ನಿಯಮಾವಳಿಗಳ ಪ್ರಕಾರ ಸ್ಥಳೀಯ ಸಂಸ್ಥೆಗಳು ಗೃಹ ರೊಚ್ಚು ಹಾಗೂ ಗಟ್ಟಿ ಕಸದ ಸಂಸ್ಕರಣೆಗೆ ಹಾಗೂ ವಿಲೇವಾರಿಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡುತ್ತಿವೆ. ಜಲ (ಮಾಲಿನ್ಯ ನಿರ್ವಹಣೆ ಹಾಗೂ ನಿಯಂತ್ರಣ) ಕಾಯಿದೆ ೧೯೭೪ರ ೧೮ನೇ ವಿಧಿಯ ಪ್ರಕಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಎಲ್ಲಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಆದೇಶ ನೀಡಿ ನಗರ ಕಸ (ಗೃಹ ರೊಚ್ಚು ಹಾಗೂ ಗಟ್ಟಿ ಕಸ)ದ ವ್ಯವಸ್ಥಿತ ನಿರ್ವಹಣೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಸೂಚಿಸಿದೆ.

ಅದೇ ರೀತಿ ರಾಜ್ಯಮಾಲಿನ್ಯ ಮಂಡಳಿಗಳು ನಗರಸಭೆ/ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿವೆ.

ನಮ್ಮನಿಮ್ಮ ಜವಾಬ್ದಾರಿ ಏನು ?

ಗಟ್ಟಿ ಕಸವು ನಗರ ಮಟ್ಟದಲ್ಲಿ ಒಂದು ಬೃಹತ್ ಸಮಸ್ಯೆಯೇನೋ ಹೌದು. ಅಲ್ಲದೆ ಅದರ ಪ್ರಮಾಣವು ಸಹ ಲಕ್ಷ ಲಕ್ಷ ಟನ್ನುಗಳಾಗಿರುತ್ತದೆ. ನಾವು ಗಟ್ಟಿ ಕಸ ಉಂಟಾಗುವ ಮೂಲವನ್ನು ಹುಡುಕುತ್ತಾ ಬಂದರೆ, ಅದು ಅಂತಿಮವಾಗಿ ನಿಲ್ಲುವುದು ಪ್ರತಿವ್ಯಕ್ತಿಯ ಹತ್ತಿರ. ಅಂದರೆ ನಮ್ಮ ನಿಮ್ಮ ಮುಂದೆ ! ನಾವೇ ಗಟ್ಟಿ ಕಸದ ಮೂಲ ಕಾರಣಕರ್ತರು !! ಗಟ್ಟಿ ಕಸ ರಾಕ್ಷಸನ ಪೋಷಕರು !!!

ಗಟ್ಟಿ ಕಸದ ದುಷ್ಪರಿಣಾಮಗಳ ಬಗ್ಗೆ, ನಿರ್ವಹಣೆಯ ವಿವಿಧ ಸಮಸ್ಯೆಗಳ ಬಗ್ಗೆ ಹಾಗೂ ಹಲವು ಸಂಪನ್ಮೂಲಗಳ ನಷ್ಟದ ಬಗ್ಗೆ ನಾವು ಇದುವರೆವಿಗೂ ಚರ್ಚಿಸಿದ್ದೇವೆ. ಯಾವುದೇ ಸಮಸ್ಯೆಯನ್ನು ನಿವಾರಿಸಬೇಕಾದಲ್ಲಿ ಅದರ ಜನ್ಮ ಸ್ಥಳದಲ್ಲಿಯೇ ನಿವಾರಣೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾಗಿ ವ್ಯಕ್ತಿ ಮಟ್ಟದಲ್ಲಿ ಗಟ್ಟಿಕಸವನ್ನು ಕಡಿಮೆ ಮಾಡುವ ಹಾಗೂ ಗಟ್ಟಿ ಕಸ ನಿರ್ವಹಣೆಗೆ ಅಗತ್ಯವಾದ ಕ್ರಮಗಳನ್ನು ಜಾರಿ ಮಾಡಬೇಕು.

ಗಟ್ಟಿ ಕಸ ಕಡಿಮೆ ಮಾಡಲು ನಾವು ನೀವು ಮಾಡಬಹುದಾದ ಕರ್ತವ್ಯಗಳು ಹೀಗಿವೆ :

 • ಅಂಗಡಿ ಅಥವಾ ಮಾರುಕಟ್ಟೆಗೆ ಹೋಗುವಾಗ ಮನೆಯಿಂದ ಬಟ್ಟೆಯ ಕೈಚೀಲ ಅಥವಾ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ.
 • ಸಾಧ್ಯವಾದಷ್ಟು ಮಟ್ಟಿಗೆ ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಡಿ.
 • ಕಾಗದದ ಚೀಲಗಳ ಬಳಕೆಯನ್ನು ಕಡಿಮೆ ಮಾಡಿ.
 • ನೀರನ್ನು ಸಂಗ್ರಹಿಸಿಡಲು ಮೆದುಪಾನೀಯಗಳ ಪಾಲಿ ಬಾಟಲಿಗಳನ್ನು ಬಳಸಿ.
 • ಮನೆಯಲ್ಲಿಯೇ ಗಟ್ಟಿ ಕಸವನ್ನು ವಿಂಗಡಿಸಿ. ಕಸದ ಎರಡು ತೊಟ್ಟಿಗಳನ್ನಿಡಿ. ಒಂದರಲ್ಲಿ ಜೈವಿಕವಾಗಿ ವಿಘಟನೆಯಾಗುವ ಕಸವನ್ನು ಹಾಕಿ. ಜೈವಿಕ ವಿಘಟನೆಯಾಗದ ಕಸವನ್ನು ಮತ್ತೊಂದು ತೊಟ್ಟಿಯಲ್ಲಿ ಹಾಕಿ. ಪ್ರತ್ಯೇಕವಾಗಿ ವಿಲೇವಾರಿ ಮಾಡಿ.
 • ನಿಮ್ಮ ಕೈತೋಟದಲ್ಲಿ ಒಂದು ಕಾಂಪೋಸ್ಟ್ ಗುಂಡಿ ಸಿದ್ಧ ಮಾಡಿ. ಎಲ್ಲ ಜೈವಿಕ ಕಸವನ್ನು ಅದರೊಳಗೆ ಹಾಕಿ ಮಣ್ಣು ಮುಚ್ಚಿ.
 • ಮನೆಯಲ್ಲಿನ ಗಟ್ಟಿ ಕಸವನ್ನು ಆಗಾಗ್ಗೆ ನಗರಸಭೆ ಕಸದ ತೊಟ್ಟಿಯೊಳಕ್ಕೆ ಹಾಕಿ. ಒಂದು ವೇಳೆ ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸುವ ಪದ್ಧತಿ ಜಾರಿಯಲ್ಲಿದ್ದರೆ ಅದನ್ನೇ ಪಾಲಿಸಿ.
 • ನೀವು ಮನೆಯ ಹೊರಗಡೆ ಇದ್ದಾಗ ಕಾಗದ, ಚೀಟಿ, ಪ್ಲಾಸ್ಟಿಕ್ ತುಂಡು, ಕವರ್ ಅಥವಾ ಉಳಿದ ಆಹಾರ ಮುಂತಾದವನ್ನು ಬೇಕಾಬಿಟ್ಟಿ ಎಸೆಯಬೇಡಿ. ಕಸದ ತೊಟ್ಟಿಯೊಳಗೇ ಹಾಕುವುದನ್ನು ರೂಢಿ ಮಾಡಿಕೊಳ್ಳಿ.
 • ಯಾವುದೇ ರೀತಿಯ ಕಸ ಅಥವಾ ಕಚಡವನ್ನು ರಸ್ತೆಗಳಿಗೆ, ಚರಂಡಿಗಳಿಗೆ, ಖಾಲಿಸ್ಥಳಗಳಿಗೆ, ನೀರಿನ ತಾಣಗಳಿಗೆ ಅಥವಾ ಮತ್ತಾವುದೇ ಸ್ಥಳಗಳಲ್ಲಿ ಎಸೆಯಬೇಡಿ.
 • ಮರುಬಳಸಬಹುದಾದ ವಸ್ತುಗಳನ್ನು ಎಸೆಯಬೇಡಿ.
 • ಪುನರುತ್ಪಾದನೆ ಮಾಡಬಹುದಾದ ಕಸದ ವಸ್ತುಗಳನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ.
 • ನಿಮ್ಮ ಸಾಕು ಬೆಕ್ಕು ಹಾಗೂ ನಾಯಿಗಳ ಮಲಮೂತ್ರಗಳನ್ನು ಯುಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.
 • ಅನಗತ್ಯವಾದ ವಸ್ತು, ಉಪಕರಣಗಳನ್ನು ಕೊಳ್ಳಬೇಡಿ.
 • ಬಳಸಿ ಬಿಸಾಡುವ ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗಬೇಡಿ.
 • ಕಸ ನಿರ್ವಹಣೆಗೆ ಇತರರ ಸೇವೆ ಪಡೆದಲ್ಲಿ ಯುಕ್ತವಾಗಿ ಹಣ ನೀಡಿ.
 • ನಿಮ್ಮ ಮನೆಯ ಎಲ್ಲ ಸದಸ್ಯರಿಗೆ ಗಟ್ಟಿ ಕಸ ರಾಕ್ಷಸನ ದುಷ್ಪರಿಣಾಮಗಳನ್ನು ತಿಳಿಸಿ. ಬಂಧು ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಪರಿಸರ ಪ್ರಜ್ಞೆ ಬೆಳೆಯುವಂತೆ ಮಾಡಿ.
 • ಗಟ್ಟಿಕಸ ಕಡಿಮೆ ಮಾಡುವುದರಲ್ಲಿ ಹಾಗೂ ಸೂಕ್ತ ನಿರ್ವಹಣೆಯಲ್ಲಿ ನೀವು ಇತರರಿಗೆ ಆದರ್ಶರಾಗಿ.

ಭಾರತ ಸಂವಿಧಾನದ ಪರಿಚ್ಛೇದ ೫೧ಎ(ಜಿ)ಯ ಪ್ರಕಾರ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯಕರ್ತವ್ಯ. ನಾವು ಆ ಕರ್ತವ್ಯವನ್ನು ದಕ್ಷವಾಗಿ ನಿರ್ವಹಿಸೋಣ. ನಮ್ಮ ಭವಿಷ್ಯ ಜನಾಂಗಕ್ಕೆ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಮತ್ತೂ ಉತ್ತಮವಾದ ಪರಿಸರ ಸಿಗುವಂತೆ ಮಾಡೋಣ.