ಕಸ ನಮ್ಮ ರೈತ ಗೆಳೆಯರಿಗೆ ದೇವರ ಸಮಾನ. ಪ್ರತಿದಿನ ಬೆಳಿಗ್ಗೆ ಮನೆಯ ಒಳಗೆ, ಹೊರಗೆ ಕಸ ಗುಡಿಸಿ ತಿಪ್ಪೆ ಗುಂಡಿಗೆ ಹಾಕುವುದು ರೈತರಿಗೆ ಸಂಪ್ರದಾಯದಿಂದ ಬಂದ ಕಾಯಕ. ದನಕರುಗಳ ಕೊಟ್ಟಿಗೆಯಿಂದ ಕಸವನ್ನು ಎತ್ತಿ ರಾಶಿ ಹಾಕುವುದು, ತಿಪ್ಪೆಗುಂಡಿ ತುಂಬಿದಂತೆ ಸಂತೋಷದಿಂದ ಸಂಭ್ರಮಿಸುವುದು ರೈತರ ಹವ್ಯಾಸ. ಪ್ರತಿ ವರ್ಷ ಬೇಸಾಯ ಆರಂಭಿಸುವ ಮೊದಲು ತಿಪ್ಪೆಗುಂಡಿಯಿಂದ ಗೊಬ್ಬರವನ್ನು ಹೊಲಗದ್ದೆಗಳಿಗೆ ಹಾಕಿ, ಅನಂತರ ಬಿತ್ತನೆ ಮಾಡಿದರೆ ರೈತನಿಗೆ ತೃಪ್ತಿ. ಮುಂದಿನ ದಿನಗಳಲ್ಲಿ ಉತ್ತಮ ಬೆಳೆ ಬಂದೇ ಬರುವುದೆಂಬ ಆತ್ಮವಿಶ್ವಾಸ. ಹಾಗಾಗಿ ತಿಪ್ಪೆರಾಶಿಯು ರೈತರಿಗೆ ದೇವರ ಸಂಕೇತ. ತಿಪ್ಪೇಸ್ವಾಮಿ ಎಂದು ಪೂಜಿಸುವ ಸಂಪ್ರದಾಯವೂ ಹಲವು ಕಡೆ ರೂಢಿಯಲ್ಲುಂಟು.

ರೈತರ ತಿಪ್ಪೆಗುಂಡಿಯಲ್ಲಿ ದವಸಧಾನ್ಯಗಳು ಬೆಳೆಯುವ ಅಗತ್ಯವಾದ ಎಲ್ಲ ಪೋಷಕಾಂಶಗಳಿರುತ್ತವೆ. ಅದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಆದರೆ ಜನಸಂಖ್ಯೆ ಹೆಚ್ಚಿದಂತೆ, ವಿಜ್ಞಾನ ತಂತ್ರಜ್ಞಾನಗಳನ್ನು ಬಳಸಿಕೊಂಡಂತೆ ಹಾಗೂ ನಗರೀಕರಣ ಹೆಚ್ಚಾದಂತೆ ಕಸದ ಸ್ವರೂಪವೇ ಬದಲಾಗಿದೆ. ಕಸದಿಂದ ರಸ ತೆಗೆಯುತ್ತಿದ್ದ ಕಾಲ ಕಣ್ಮರೆಯಾಗಿದೆ. ಕಸದ ಪ್ರಮಾಣ, ಅದರ ಹೂರಣ ವಿಭಿನ್ನವಾಗಿ ಕಸವೇ ಈಗ ರಾಕ್ಷಸವಾಗಿದೆ! ಅದರ ದೈತ್ಯ ಗಾತ್ರ ಹಾಗೂ ಸ್ವರೂಪ ಊಹೆಗೂ ನಿಲುಕದಷ್ಟು ಹೆಚ್ಚಾಗಿದೆ. ಅದರಿಂದ ಮಾನವನಿಗೆ ಮತ್ತು ಪರಿಸರಕ್ಕೆ ಅಗಾಧ ದುಷ್ಪರಿಣಾಮ ಗಳಾಗುತ್ತಿವೆ. ಗಟ್ಟಿ ಕಸ ರಕ್ಕಸನ ವಿರಾಟ ದರ್ಶನವನ್ನು ಸಂಕ್ಷಿಪ್ತವಾಗಿ ಅರಿತುಕೊಂಡು ಅದರ ನಿಗ್ರಹಕ್ಕೆ ನಾವೇನು ಮಾಡಬಹುದೆಂಬ ಪುಟ್ಟ ಪರಿಚಯ ಮಾಡುವುದಕ್ಕಾಗಿ ಈ ಕಿರುಹೊತ್ತಿಗೆಯನ್ನು ನಿಮ್ಮ ಕೈಯಲ್ಲಿಡುತ್ತಿದ್ದೇವೆ.

ಗಟ್ಟಿ ಕಸ ಎಂದರೇನು ?

ಕಸ ಎಂದರೆ ಏನು ? ಸರಳವಾಗಿ ಹೇಳುವುದಾದರೆ ಉಪಯೋಗಕ್ಕೆ ಬಾರದ ವಸ್ತುವೇ ಕಸ – ತ್ಯಾಜ್ಯ. ಮಾನವನ ಚಟುವಟಿಕೆಯಿಂದ ಇಂದಿನ ನಾಗರೀಕ ಸಮಾಜದಲ್ಲಿ ವಿಭಿನ್ನ ಅಂಶಗಳಿರುವ ಕಸ ಉಂಟಾಗುತ್ತಿದೆ. ಕೃಷಿ ಪ್ರಧಾನವಾದ ಸಮಾಜವಿದ್ದಾಗ ದನಕರುಗಳ ಸಗಣಿ, ಹುಲ್ಲು, ಕೃಷಿ ತ್ಯಾಜ್ಯ ಮುಂತಾದವೇ ಕಸದ ಅಂಶಗಳಾಗಿರುತ್ತಿದ್ದವು. ಇಂದು ನಾವು ಕೈಗಾರಿಕೆಗಳ ಯುಗ, ವಿಜ್ಞಾನ-ತಂತ್ರಜ್ಞಾನ ಯುಗ, ಮಾಹಿತಿಯುಗ, ಪ್ಲಾಸ್ಟಿಕ್‌ಯುಗ, ಕಂಪ್ಯೂಟರ್‌ಯುಗ, ಜೈವಿಕತಂತ್ರಜ್ಞಾನಯುಗ ದಲ್ಲಿ ಜೀವಿಸುತ್ತಿದ್ದೇವೆ. ಮಾನವನ ಸೇವೆಗೆ ಸಹಸ್ರಾರು ಹೊಸ ಹೊಸ ವಸ್ತುಗಳು ಸೇರ್ಪಡೆಯಾಗಿವೆ. ಕಬ್ಬಿಣ, ಉಕ್ಕು, ಅಲ್ಯೂಮಿನಿಯಂ ಮುಂತಾದ ಲೋಹಗಳ ಉಪಕರಣಗಳು ಹೇರಳವಾಗಿ ಬಳಕೆಯಾಗುತ್ತಿವೆ. ಕಾಗದ, ಗಾಜು, ಪ್ಲಾಸ್ಟಿಕ್‌ಯಿಲ್ಲದ ಸಮಾಜ ಇರಲು ಸಾಧ್ಯವೇ ಎಂದು ಹಲವರು ಕೇಳುತ್ತಾರೆ. ಅಷ್ಟೇ ಅಲ್ಲದೆ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ಮಾನವ ಕೊಳ್ಳುಬಾಕ ಸಂಸ್ಕೃತಿಯ ದಾಸನಾಗುತ್ತಿದ್ದಾನೆ. ನವನವೀನ ಉಪಕರಣಗಳ ಮಾಲೀಕನಾಗುವುದು ನಾಗರೀಕತೆಯ ಸಂಕೇತ ಎಂದು ಭಾವಿಸುತ್ತಿದ್ದಾನೆ. ‘ಬಳಸಿ ಬಿಸಾಡುವ’ ಪ್ರವೃತ್ತಿ ಹೆಚ್ಚುತ್ತಿದೆ. ಜನದಟ್ಟಣೆಯ ಪಟ್ಟಣ, ನಗರ ಹಾಗೂ ಕೊಳಗೇರಿಗಳ ಪ್ರಮಾಣ ವಿಷವೇರಿದಂತೆ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಕಸದ ಪ್ರಮಾಣವೂ ಏರುತ್ತಿದೆ. ಕಸದ ವೈವಿಧ್ಯವೂ ಹೆಚ್ಚಾಗುತ್ತಿದೆ. ಕಸವು ಅನಿಲರೂಪ, ದ್ರವರೂಪ ಅಥವಾ ಘನರೂಪದಲ್ಲಿರಬಹುದು.

ನಾವು ಉಸಿರಾಟದ ನಂತರ ಬಿಡುವ ಇಂಗಾಲದ ಡೈಆಕ್ಸೈಡ್‌ನ್ನು ಅನಿಲಕಸ ಎನ್ನಬಹುದು. ಅದೇ ರೀತಿ ಕಾರ್ಖಾನೆಗಳಿಂದ ಹಾಗೂ ವಾಹನಗಳಿಂದ ಹೊರ ಬರುವ ಇಂಗಾಲದ ಮಾನಾಕ್ಸೈಡ್, ಡೈಆಕ್ಸೈಡ್, ಗಂಧಕದ ಡೈಆಕ್ಸೈಡ್, ಸಾರಜನಕ ಆಕ್ಸೈಡ್ ಮುಂತಾದವನ್ನು ಅನಿಲರೂಪದ ಕಸ ಎನ್ನಬಹುದು.

ಮನೆಗಳಿಂದ, ಕೈಗಾರಿಕೆಗಳಿಂದ ಹೊರಬರುವ ಕೊಚ್ಚೆ ನೀರನ್ನು, ದ್ರವರೂಪದ ಕಸ ಎಂದು ಕರೆಯಬಹುದು. ಬಳಸಿ ಬಿಸಾಡುವ ತೈಲ, ಗ್ರೀಸ್, ಯಂತ್ರೋಪಕರಣಗಳನ್ನು ಸ್ವಚ್ಛ ಮಾಡಿದ ನೀರು, ಮಲ, ಮೂತ್ರಗಳು ಸೇರಿದ ನೀರು ಮುಂತಾದವು ದ್ರವರೂಪದ ಕಸಕ್ಕೆ ಉತ್ತಮ ಉದಾಹರಣೆಗಳು.

ಗಟ್ಟಿ ಕಸ ಎಂದರೇನು ? ಗಟ್ಟಿ ಅಥವಾ ಘನರೂಪದ ಕಸವೆಂದರೆ ಮಾನವನ ಚಟುವಟಿಕೆಯಿಂದಾದ ಅನುಪಯೋಗಿ ವಸ್ತುಗಳ ತ್ಯಾಜ್ಯ. ಅದರಲ್ಲಿ ಗೃಹಬಳಕೆಯ ವಸ್ತುಗಳಾದ ಹಣ್ಣು, ತರಕಾರಿಗಳ ಸಿಪ್ಪೆ, ಕಾಗದದ ಚೂರುಗಳು, ಗಾಜು, ಪ್ಲಾಸ್ಟಿಕ್ ಕವರ್‌ಗಳು, ಔಷಧಿ ಬಾಟಲುಗಳು, ಎಸೆಯಲ್ಪಟ್ಟ ಮಾತ್ರೆಗಳು, ಟಾನಿಕ್‌ಗಳು, ಹಳೆಯ ಬಟ್ಟೆ, ಬಲ್ಬುಗಳು, ಮುಂತಾದವು ಇರಬಹುದು. ಕೈಗಾರಿಕೆ, ನಗರಸಭೆ, ಆಸ್ಪತ್ರೆ, ಶಾಲಾಕಾಲೇಜು, ಮಾರುಕಟ್ಟೆ, ವ್ಯಾಪಾರ ವಹಿವಾಟು ಕೇಂದ್ರಗಳಿಂದಲೂ ಗಟ್ಟಿಕಸ ಉಂಟಾಗುವುದು. ಅಂತಹ ಗಟ್ಟಿಕಸದ ಅಂಶಗಳು ವಿಭಿನ್ನವಾಗಿರುತ್ತವೆ. ಗಟ್ಟಿ ಕಸವು ಇತ್ತೀಚೆಗೆ ಒಂದು ಬೃಹತ್ ಸಮಸ್ಯೆಯಾಗಿ ತಲೆ ಎತ್ತುತ್ತಿದೆ.

ಸುಮಾರು ಎರಡು ಶತಮಾನಗಳ ಹಿಂದೆ ಗಟ್ಟಿ ಕಸ ಎಂಬುದು ಒಂದು ಸಮಸ್ಯೆಯೇ ಆಗಿರಲಿಲ್ಲ. ಕೃಷಿ ಹಾಗೂ ಗೃಹಮೂಲಗಳಿಂದ ಬಂದ ಗಟ್ಟಿ ಕಸವನ್ನು ನಿಸರ್ಗವೇ ನಿಭಾಯಿಸುತ್ತಿತ್ತು. ಬಹಳಷ್ಟು ಗಟ್ಟಿಕಸವನ್ನು ರೈತರು ಗೊಬ್ಬರವನ್ನಾಗಿ ಪರಿವರ್ತಿಸಿ ಕೃಷಿಯಲ್ಲಿ ಬಳಸುತ್ತಿದ್ದರು. ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಟ್ಟು ಸುಡುವ ರೂಢಿಯೂ ಇತ್ತು. ಕೆಲವೊಮ್ಮೆ ಕೃಷಿಯೋಗ್ಯವಲ್ಲದ ಇಳಿಜಾರುಗಳಲ್ಲಿ, ಗುಂಡಿಗಳಲ್ಲಿ, ಬಯಲುಗಳಲ್ಲಿ ಬಿಸಾಡುವ ಪ್ರವೃತ್ತಿಯೂ ಇತ್ತು. ಆದರೆ ಅಂದಿನ ಕಾಲದಲ್ಲಿ ಜನಸಂಖ್ಯೆ ಕಡಿಮೆ ಇದ್ದ ಕಾರಣ, ಕಸದ ಪ್ರಮಾಣವೂ ಕಡಿಮೆ ಇರುತ್ತಿತ್ತು. ನಿಸರ್ಗ ಅರಗಿಸಿ ಕೊಳ್ಳಬಹುದಾದ ಗಟ್ಟಿ ಕಸ ಮಾತ್ರ ಇದ್ದುದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಇಂದು ಕಾಲ ಬದಲಾಗಿದೆ. ಜನಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಗಾಜು, ಪ್ಲಾಸ್ಟಿಕ್ ಮುಂತಾದವನ್ನು ಸಹಸ್ರಾರು ವರ್ಷಗಳಾದರೂ ನಿಸರ್ಗ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಗಟ್ಟಿ ಕಸದ ರಾಶಿ ಪರ್ವತೋಪಾದಿಯಲ್ಲಿ ಬೆಳೆಯುತ್ತಿದೆ. ಜನರ ಜೀವನಮಟ್ಟ, ಆಹಾರದ ಅಭ್ಯಾಸ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಆಧರಿಸಿ ಗಟ್ಟಿಕಸದ ಪ್ರಮಾಣ ನಿರ್ಧಾರವಾಗುವುದು. ನೀವು ಒಂದು ದಿನಕ್ಕೆ ಬಿಸಾಡುವ ಗಟ್ಟಿ ಕಸದ ಪ್ರಮಾಣದ ಎಷ್ಟೆಂದು ಊಹಿಸಿದ್ದೀರಾ ? ಮುಖಕ್ಷೌರ ಮಾಡಿದ ಬ್ಲೇಡು, ಔಷಧಿಯ ಬಾಟಲಿ, ಹಳೆಯ ಕಾಗದಗಳು, ಕೆಟ್ಟು ಹೋದ ನಲ್ಲಿ, ಹರಿದ ಬಟ್ಟೆ, ಹಣ್ಣಿನ ಸಿಪ್ಪೆ … ಹೀಗೆ ಒಂದು ದಿನಕ್ಕೆ ಎಷ್ಟು ಗಟ್ಟಿ ಕಸ ಉತ್ಪತ್ತಿ ಮಾಡಿ ನಿಸರ್ಗದ ಮಡಿಲು ತುಂಬುತ್ತಿದ್ದೀರಾ ? ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿ ನಡೆಸಿದ ಸರ್ವೇಕ್ಷಣೆ ಪ್ರಕಾರ ಮೊದಲದರ್ಜೆ ನಗರಗಳಲ್ಲಿ ಪ್ರತಿದಿನ ಒಬ್ಬ ವ್ಯಕ್ತಿ ೪೦೦ ಗ್ರಾಂಗಳಷ್ಟು ಗಟ್ಟಿಕಸವನ್ನು ಉತ್ಪತ್ತಿ ಮಾಡುತ್ತಾನೆ. ಸಣ್ಣಪುಟ್ಟ ನಗರಗಳಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಸುಮಾರು ೨೦೦ ಗ್ರಾಂಗಳಷ್ಟು ಗಟ್ಟಿಕಸ ಉತ್ಪತ್ತಿ ಮಾಡುತ್ತಾನೆ. ನಗರಗಳ ಜನದಟ್ಟಣೆ ಹೆಚ್ಚಾದಂತೆ ಗಟ್ಟಿಕಸದ ತಲಾವಾರು ಉತ್ಪಾದನೆಯೂ ಹೆಚ್ಚಾಗುತ್ತದೆ. ಇಂದು ಭಾರತದ ಸುಮಾರು ೨೫% ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಕ್ರಿ.ಶ.೨೦೨೫ರ ವೇಳೆಗೆ ೬೦%ಕ್ಕಿಂತ ಹೆಚ್ಚು ಜನ ನಗರಗಳಲ್ಲಿರುತ್ತಾರೆ. ಭಾರತದಲ್ಲಿ ಈಗ ಪ್ರತಿದಿನ ಒಂದುಲಕ್ಷ ಟನ್ನುಗಳಷ್ಟು ನಗರಸಭೆ ಗಟ್ಟಿ ಕಸ ಉತ್ಪಾದನೆಯಾಗುತ್ತಿದೆ!

ಭಾರತದ ಪ್ರಮುಖನಗರಗಳಲ್ಲಿ ಗಟ್ಟಿ ಕಸದ ಉತ್ಪಾದನೆ

ನಗರ

ನಾಗರೀಕರಿಂದ ಉಂಟಾಗುವ ಗಟ್ಟಿ ಕಸ (ಪ್ರತಿ ದಿನಕ್ಕೆ … ಟನ್)

ಪ್ರತಿ ವ್ಯಕ್ತಿಯಿಂದ (ಪ್ರತಿ ದಿನಕ್ಕೆ … ಕಿಲೋ)

೧. ಅಹಮದಾಬಾದ್ ೧,೬೮೩ ೦.೫೮೫
೨. ಬೆಂಗಳೂರು ೨,೦೦೦ ೦.೪೮೪
೩. ದೆಹಲಿ ೪,೦೦೦ ೦.೪೭೫
೪. ಹೈದರಾಬಾದ್ ೧,೫೬೬ ೦.೩೮೨
೫. ಕೊಲ್ಕತ್ತಾ ೩,೬೯೨ ೦.೪೩೬
೬. ಮುಂಬಯಿ ೫,೩೫೫ ೦.೪೩೬
೭. ಚೆನ್ನೈ ೩,೧೨೪ ೦.೬೨೩
೮. ಭೋಪಾಲ್ ೫೪೬ ೦.೫೧೪

ನಗರಗಳು ಬೆಳೆದಂತೆ, ನಾಗರೀಕತೆ ಹೆಚ್ಚಿದಂತೆ, ಗಟ್ಟಿ ಕಸದ ಪ್ರಮಾಣ ಹೆಚ್ಚಿದಂತೆ, ಅದರೊ ಳಗಿನ ಅಂಶಗಳಲ್ಲಿಯೂ ಬದಲಾ ವಣೆ ಉಂಟಾಗುತ್ತದೆ. ಒಂದು ಅಂದಾಜಿನ ಪ್ರಕಾರ ಕ್ರಿ.ಶ.೨೦೦೦ ದಿಂದ ೨೦೨೫ರೊಳಗೆ ಭಾರತದಲ್ಲಿ ಉಂಟಾಗುವ ಗಟ್ಟಿ ಕಸದ  ರೂಪದಲ್ಲಿ ಉಂಟಾಗುವ ಪ್ರಮುಖ ಬದಲಾವಣೆಗಳು ಹೀಗಿರುತ್ತವೆ :

  • ಸಾವಯವ ತ್ಯಾಜ್ಯದ ಪ್ರಮಾಣ ಪ್ರತಿಶತ ೪೦ರಿಂದ ೬೦ಕ್ಕೆ ಏರುವುದು.
  • ಪ್ಲಾಸ್ಟಿಕ್‌ನ ಪ್ರಮಾಣ ಪ್ರತಿಶತ ೪ ರಿಂದ ೬ಕ್ಕೆ ಹೆಚ್ಚಾಗುವುದು.
  • ಲೋಹದ ಪ್ರಮಾಣವು ಪ್ರತಿಶತ ೧ ರಿಂದ ೪ ರಷ್ಟು ಹೆಚ್ಚಾಗುವುದು.
  • ಗಾಜಿನ ಪ್ರಮಾಣವು ಪ್ರತಿಶತ ೨ ರಿಂದ ೩ ರಷ್ಟು ಹೆಚ್ಚುವುದು.
  • ಕಾಗದದ ಪ್ರಮಾಣವು ಪ್ರತಿಶತ  ೫ ರಿಂದ ೧೫ ರವರೆಗೆ ಏರುವುದು.
  • ಬೂದಿ, ಮರಳು, ಇಟ್ಟಿಗೆ, ಗಾರೆ ಮುಂತಾದವು ಪ್ರತಿಶತ ೪೭ ರಿಂದ ೧೨ ರಷ್ಟು ಕಡಿಮೆಯಾಗುವುದು. 

ಗಟ್ಟಿ ಕಸದ ವಿಧಗಳೆಷ್ಟು ?

ಗಟ್ಟಿಕಸವನ್ನು ಅದರ ಹುಟ್ಟಿನ ಸ್ಥಳವನ್ನಾಧರಿಸಿ ಗೃಹಕಸ, ನಗರಸಭೆ ಕಸ, ವಾಣಿಜ್ಯಕಸ, ಇತ್ಯಾದಿ ಹೆಸರುಗಳನ್ನಿಟ್ಟು ಕೆಳಕಂಡಂತೆ ವಿಂಗಡಿಸಬಹುದು.

. ಗೃಹ ಕಸ : ಗೃಹ ಚಟುವಟಿಕೆಗಳಾದ ಅಡಿಗೆ ತಯಾರಿ, ಗುಡಿಸುವ, ದುರಸ್ತಿ ಮಾಡುವ,  ಅಲಂಕಾರ ಮಾಡುವ,  ಖಾಲಿಯಾದವುಗಳನ್ನು ಎಸೆಯುವ, ಬಟ್ಟೆ,

ಹಳೆ ಕಾಗದ, ಪುಸ್ತಕಗಳು, ಹಳೆಯ ಪೀಠೋಪಕರಣಗಳನ್ನು ಎಸೆಯುವ ಮುಂತಾದ ಚಟುವಟಿಕೆಗಳಿಂದ ಸಿದ್ಧಗೊಳ್ಳುವ ಗಟ್ಟಿ ಕಸ. ಬ್ಲೇಡು, ಮುರಿದ ಕತ್ತರಿ, ಖಾಲಿಯಾದ ರಿಫಿಲ್‌ಗಳು, ಪ್ಲಾಸ್ಟಿಕ್ ಚೀಲಗಳು, ಒಡೆದ ಗಾಜಿನ ಲೋಟ, ಪಿಂಗಾಣಿ ವಸ್ತುಗಳು ಗೃಹತ್ಯಾಜ್ಯದ ಅವಿಭಾಜ್ಯ ಅಂಗಗಳಾಗಿವೆ.

 . ವಾಣಿಜ್ಯ ಕಸ : ಕಛೇರಿಗಳು, ವಾಣಿಜ್ಯ ಸಂಕೀರ್ಣ, ಸಗಟು ವ್ಯಾಪಾರ, ಹೋಟೆಲುಗಳು, ಮಾರುಕಟ್ಟೆಗಳು, ದಾಸ್ತಾನು ಕೊಠಡಿಗಳು ಹಾಗೂ ಇತರೆ ವಾಣಿಜ್ಯ ಕ್ಷೇತ್ರಗಳಲ್ಲಿ ಉತ್ಪಾದನೆಯಾಗುವ ಗಟ್ಟಿಕಸ. ಇವನ್ನು ಮತ್ತೆ ಹೊಲಸು ಹಾಗೂ ಕಚಡ ಎಂದು ವರ್ಗೀಕರಿಸಬಹುದು.

. ಸಾಂಸ್ಥಿಕ ಕಸ : ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಸಂಸ್ಥೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾಂಸ್ಥಿಕ ಕಸ ಎನ್ನುವರು. ಇದರಲ್ಲಿ ಹೊಲಸು, ಕಚಡ ಹಾಗೂ ಅಪಾಯಕಾರಿ ತ್ಯಾಜ್ಯಗಳಿರುತ್ತವೆ.

. ನಗರ ಕಸ : ಇದು ನಗರಗಳಲ್ಲಿನ ಚಟುವಟಿಕೆ ಹಾಗೂ ಸೇವೆಗಳಿಂದ ಉಂಟಾಗುವ ಕಸ. ಇದರಲ್ಲಿ ರಸ್ತೆಕಸ, ಸತ್ತಪ್ರಾಣಿಗಳು, ಮಾರುಕಟ್ಟೆ ಕಸ ಮತ್ತು ತೊರೆಯಲ್ಪಟ್ಟ ಉಪಕರಣಗಳು ಹಾಗೂ ವಾಹನಗಳಿರುತ್ತವೆ. ಸಾಮಾನ್ಯವಾಗಿ ನಗರ ಕಸ ಎಂದರೆ ಗೃಹಕಸ, ವಾಣಿಜ್ಯಕಸ ಹಾಗೂ ಸಾಂಸ್ಥಿಕ ಕಸಗಳು ಸೇರಿರುತ್ತವೆ.

. ಹೊಲಸು : ಇದು ಪ್ರಾಣಿ ಹಾಗೂ ಸಸ್ಯಗಳ ತ್ಯಾಜ್ಯಗಳನ್ನು ಒಳಗೊಂಡಿದೆ. ಸಸ್ಯ ಹಾಗೂ ಪ್ರಾಣಿಗಳನ್ನು ಮಾರಾಟ ಮಾಡುವಾಗ, ಮನೆಗೆ ತರುವಾಗ, ಅಡುಗೆಗೆ ಸಿದ್ಧ ಮಾಡುವಾಗ,  ಬೇಯಿಸುವಾಗ, ಬಡಿಸುವಾಗ ಅಥವಾ ಇತರೆ ಚಟುವಟಿಕೆಗಳಲ್ಲಿ ಹೊಲಸು ಉಂಟಾಗುತ್ತದೆ.

. ಬೂದಿ : ಸೌದೆ, ಗಿಡಗೆಂಟೆಗಳನ್ನು ಉರಿಸುವಾಗ, ಇದ್ದಿಲು ಸಿದ್ಧ ಮಾಡುವಾಗ, ಗೃಹ, ಸಂಸ್ಥೆ ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ಬಿಸಿ ನೀರು ಪಡೆಯುವ ಸಂದರ್ಭದಲ್ಲಿ ಸೌದೆ ಉರಿಸುವುದರಿಂದ ಬೂದಿ ಉಂಟಾಗುವುದು. ಅನೇಕ ವೇಳೆ ಬೂದಿ ರಾಶಿಗಳಲ್ಲಿ ಸಣ್ಣ ಕಣಗಳು, ಪುಡಿ ಇದ್ದಿಲು, ಲೋಹ ಹಾಗೂ ಗಾಜಿನ ತುಂಡುಗಳು ಇರುತ್ತವೆ.

. ಕಚಡ : ಇದು ಗೃಹಗಳಿಂದ, ವಾಣಿಜ್ಯ ವ್ಯವಸ್ಥೆಗಳಿಂದ ಹಾಗೂ ಸಂಸ್ಥೆಗಳಿಂದ ಉಂಟಾಗುವ ಕಸ. ಬೂದಿಯನ್ನು ಬಿಟ್ಟು ಉಳಿಯುವ ಇತರೆ ಎಲ್ಲಾ ಗಟ್ಟಿಕಸವನ್ನು ಕಚಡ ಎನ್ನುವರು.

. ಸ್ಥೂಲವಾದ ತ್ಯಾಜ್ಯ : ಗೃಹೋಪಕರಣಗಳಾದ ಅಡುಗೆ ಕುಕ್ಕರ್, ರಿಪ್ರಿಜರೇಟರ್, ಬಟ್ಟೆ ಒಗೆಯುವ ಯಂತ್ರ, ಮುಂತಾದವನ್ನು ಸ್ಥೂಲವಾದ ತ್ಯಾಜ್ಯ ಎನ್ನುವರು. ಇವಲ್ಲದೆ ಮರದ ಉಪಕರಣಗಳು, ವಾಹನಗಳ ಭಾಗಗಳು, ಟೈರುಗಳು, ಮರಗಳು, ರೆಂಬೆಕೊಂಬೆಗಳು ಸಹ ಸ್ಥೂಲ ತ್ಯಾಜ್ಯಗಳಾಗುತ್ತವೆ. ಇವುಗಳಲ್ಲಿ ಕೆಲವುಗಳಿಂದ ಲೋಹಗಳನ್ನು ಪುನಃ ಪಡೆಯಲು ಗುಜರಿಗೆ ಹಾಕುವರು. ಬಳಸಲಿಕ್ಕೆ ಸಾಧ್ಯವಿಲ್ಲದ ವಸ್ತುಗಳನ್ನು ಗುಂಡಿ, ಹಳ್ಳಕೊಳ್ಳಗಳನ್ನು ತುಂಬಲು ಉಪಯೋಗಿಸುವರು.

ಕೆಲವು ಬೃಹತ್ ತ್ಯಾಜ್ಯಗಳ ಮೂಲ ಹಾಗೂ ಪ್ರಮಾಣ

ತ್ಯಾಜ್ಯ

ವಾರ್ಷಿಕ ಪ್ರಮಾಣ (ಹತ್ತುಲಕ್ಷ ಟನ್ನು)

ಮೂಲ

೧. ಉಕ್ಕು / ಊದುಕುಲುಮೆ ಕಿಟ್ಟ ೩೫.೦ ಉಕ್ಕಾಗಿ ಪರಿವರ್ತಿಸುವ ಸ್ಥಳ
೨. ಉಪ್ಪಿನ ಮಣ್ಣು ೦.೦೨ ಕಾಸ್ಟಿಕ್ ಸೋಡ ಕೈಗಾರಿಕೆ
೩. ತಾಮ್ರದ ಕಿಟ್ಟ ೦.೦೧೬೪ ತಾಮ್ರ ಕರಗುವಾಗಿನ ಉಪಉತ್ಪನ್ನ
೪. ಹಾರು ಬೂದಿ ೭೦.೦ ಕಲ್ಲಿದ್ದಲನ್ನು ಬಳಸುವ ಶಾಖೋತ್ಪನ್ನ ಶಕ್ತಿಸ್ಥಾವರಗಳು
೫. ಆವಿಗೆ ಧೂಳು ೧.೬ ಸಿಮೆಂಟ್ ಕೈಗಾರಿಕೆಗಳು
೬. ಸುಣ್ಣದ ಜಿಡ್ಡು / ಬುರುದೆ ೩.೦ ಸಕ್ಕರೆ, ಕಾಗದ, ರಸಗೊಬ್ಬರ, ಚರ್ಮ ಹದ ಮಾಡುವ ಕೈಗಾರಿಕೆ, ಸೋಡ ಬೂದಿ, ಕ್ಯಾಲ್ಸಿಯಂ ಕಾರ್ಬೈಡ್ ಕೈಗಾರಿಕೆ
೭. ಮೈಕಾ ತುಣುಕುಗಳ ಕಸ ೦.೦೦೫ ಮೈಕಾ ಗಣಿಗಾರಿಕೆ ಸ್ಥಳಗಳು
೮. ಪಾಸ್ಪೊಜಿಪ್ಸಮ್ ೪.೫ ಪಾಸ್ಪಾರಿಕ್ ಆಮ್ಲ, ಅಮೋನಿಯಂ ಫಾಸ್ಫೇಟ್ ತಯಾರಿಕಾ ಕೈಗಾರಿಕೆ
೯. ಕೆಂಪು ಮಣ್ಣು / ಬಾಕ್ಸೈಟ್ ೩.೦ ಬಾಕ್ಸೈಟ್‌ಗಳಿಂದ ಅಲ್ಯೂಮಿನಿಯಂ ಪಡೆಯುವ ಗಣಿಗಾರಿಕೆ ಹಾಗೂ ಬೇರ್ಪಡಿಕೆಯ ಸ್ಥಳಗಳು
೧೦. ಕಲ್ಲಿದ್ದಲಿನ ಧೂಳು ೩.೦ ಕಲ್ಲಿದ್ದಲ ಗಣಿಗಳು
೧೧. ಕಬ್ಬಿಣದ ಅದಿರಿನ ಕಳಪೆವಸ್ತು ೧೧.೨೫ ಕಬ್ಬಿಣದ ಅದಿರು
೧೨. ಸುಣ್ಣದ ಕಲ್ಲು ತ್ಯಾಜ್ಯ ೫೦.೦೦ ಸುಣ್ಣದ ಕಲ್ಲು ಗಣಿಗಾರಿಕೆ

. ಬೀದಿ ಕಸ : ರಸ್ತೆಯ ಬದಿಗಳಲ್ಲಿ, ಅನೇಕ ವೇಳೆ ರಸ್ತೆಯ ಮೇಲೆಯೇ ಕಾಗದ ಕಾಡ್‌ಬೋರ್ಡ್, ಪ್ಲಾಸ್ಟಿಕ್, ಧೂಳು, ಎಲೆಗಳು ಮತ್ತು ತರಕಾರಿಗಳ ತ್ಯಾಜ್ಯಗಳಿರುತ್ತವೆ. ಇವನ್ನು ರಸ್ತೆ, ಕಾಲುದಾರಿ, ಉದ್ಯಾನವನ ಮತ್ತು ಖಾಲಿ ಸ್ಥಳಗಳಲ್ಲಿ ಕಾಣಬಹುದು ಹಾಗೂ ಸಂಗ್ರಹಿಸಬಹುದು.

೧೦. ಸತ್ತ ಪ್ರಾಣಿಗಳು : ಪ್ರಾಣಿಗಳು ಪ್ರಕೃತಿದತ್ತವಾಗಿ ಅಥವಾ ಅಪಘಾತಗಳಿಂದ ಸಾವಿಗೀಡಾಗಬಹುದು. ಇಂತಹ ಕಸವು ಶೀಘ್ರವಾಗಿ ಕೊಳೆತು ದುರ್ವಾಸನೆ ಬರುವುದರಿಂದ ಬೇಗ ವಿಲೇವಾರಿ ಮಾಡಬೇಕು. ಕಟುಕರ ಮನೆಗಳಿಂದ ಅಥವಾ ಪ್ರಾಣಿವಧಾ ಸ್ಥಳಗಳಿಂದ ಉಂಟಾಗುವ ಕಸವನ್ನು ಕೈಗಾರಿಕಾ ತ್ಯಾಜ್ಯ ಎನ್ನುವರು.

೧೧. ಕಟ್ಟಡ ನಿರ್ಮಾಣ ಹಾಗೂ ಕೆಡುವುದರಿಂದ ಉಂಟಾಗುವ ಕಸ : ಭಾರತದಲ್ಲಿ ಪ್ರತಿವರ್ಷ ೧೦ ರಿಂದ ೧೨ ದಶಲಕ್ಷ ಟನ್ನುಗಳಷ್ಟು ಇಂತಹ ತ್ಯಾಜ್ಯ ಉಂಟಾಗುತ್ತದೆ. ಇದರಲ್ಲಿ ಸಿಮೆಂಟು, ಇಟ್ಟಿಗೆ, ಕಬ್ಬಿಣ, ಕಲ್ಲು, ಮರದ ತುಂಡುಗಳು, ಪ್ಲಾಸ್ಟಿಕ್ ಮತ್ತು ಕಬ್ಬಿಣದ ಪೈಪುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಭಾರತದಲ್ಲಿ ಈ ಕಸದ ಶೇ.೫೦ರಷ್ಟನ್ನು ಪುನಃ ಬಳಕೆ ಮಾಡುತ್ತಿಲ್ಲ. ನಮ್ಮ ದೇಶದಲ್ಲಿರುವ ನಿರ್ಮಾಣ ಉದ್ಯಮಕ್ಕೆ ಶೇ.೭೦ರಷ್ಟು ಪುನರ್ಬಳಕೆ ಮಾಡುವ ವಿಧಾನಗಳ ಪರಿಚಯವಿಲ್ಲ.

೧೨. ಕೈಗಾರಿಕಾ ತ್ಯಾಜ್ಯಗಳು : ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಹಾಗೂ ವಿವಿಧ ವಸ್ತುಗಳ ಉತ್ಪಾದನಾ ಹಂತಗಳಲ್ಲಿ ಘನವಸ್ತುಗಳು ತ್ಯಾಜ್ಯವಾಗಿ ಅಂದರೆ ಕಸವಾಗಿ ಮಾರ್ಪಡುತ್ತವೆ. ಸಣ್ಣ ಕೈಗಾರಿಕೆಗಳಿಂದ ಉಂಟಾಗುವ ಕಸ ಹಾಗೂ ಶಕ್ತಿಸ್ಥಾವರಗಳಿಂದ ಉಂಟಾಗುವ ಬೂದಿಯನ್ನು ಗುಂಡಿಗಳಿಗೆ ತುಂಬುವರು. ಆದರೆ ಬೃಹತ್ ಪ್ರಮಾಣದ ಕೈಗಾರಿಕೆಗಳಲ್ಲಿ ಉಂಟಾಗುವ ತ್ಯಾಜ್ಯದ ಪ್ರಮಾಣ ಹೆಚ್ಚಿರುತ್ತದೆ. ಶಾಖೋತ್ಪನ್ನ ಸ್ಥಾವರಗಳಿಂದ ಕಲ್ಲಿದ್ದಲ ಧೂಳು ಅಪಾರವಾಗಿ ಉಂಟಾಗುವುದು. ಕಬ್ಬಿಣ ಕಾರ್ಖಾನೆಗಳಿಂದ ಚರಟ, ಉಕ್ಕಿನ ತಯಾರಿಯಲ್ಲಿ ಉಂಟಾಗುವ ಕಿಟ್ಟ (Slag), ಸತು, ಅಲ್ಯೂಮಿನಿಯಂ ಮುಂತಾದ ಕೈಗಾರಿಕೆಗಳಿಂದ ಒತ್ತು ಮಣ್ಣು, ಕೆಂಪು ಮಣ್ಣು, ಸಕ್ಕರೆ ಕಾರ್ಖಾನೆಗಳಿಂದ ರೊಚ್ಚು ಮುಂತಾದ ಕೈಗಾರಿಕಾ ತ್ಯಾಜ್ಯಗಳು ಉಂಟಾಗುತ್ತವೆ. ಕೈಗಾರಿಕಾ ಗಟ್ಟಿ ಕಸದ ನಿರ್ವಹಣೆ ನಗರಸಭೆಗಳ ಜವಾಬ್ದಾರಿ ಅಲ್ಲ. ಕೈಗಾರಿಕೆಗಳೇ ಸೂಕ್ತವಾದ ವಿಲೇವಾರಿ ಅಥವಾ ಪುನರ್ಬಳಕೆ ಮಾಡಬೇಕು. ಅಲ್ಲದೆ ಅವು ಕೈಗಾರಿಕೆಗಳನ್ನು ಸ್ಥಾಪಿಸುವ ಮುನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಗಳಿಂದ ನಿಯಮಾನುಸಾರ ಅನುಮತಿ ಪಡೆಯಬೇಕು.

೧೩. ಪ್ರಾಣಿ ವಧಾಸ್ಥಳಗಳ ತ್ಯಾಜ್ಯ : ಭಾರತದಲ್ಲಿ ಜಗತ್ತಿನಲ್ಲಿಯೇ ಹೆಚ್ಚಿನ ಸಂಖ್ಯೆಯ ದನಕರುಗಳಿವೆ. ಆಹಾರ ಸಂಸ್ಕರಣೆಯ ಸಚಿವಾಲಯದ ವರದಿಯಂತೆ ಒಟ್ಟು ೩೬೧೬ ಪ್ರಾಣಿವಧಾಸ್ಥಳಗಳು ಭಾರತದಲ್ಲಿವೆ. ಇಲ್ಲಿ ಪ್ರತಿವರ್ಷ ೨೦ ಲಕ್ಷಕ್ಕೂ ಹೆಚ್ಚಿನ ಹಸು, ಎಮ್ಮೆಗಳು, ೫೦೦ ಲಕ್ಷದಷ್ಟು ಕುರಿ, ಮೇಕೆಗಳು, ೧೫ ಲಕ್ಷ ಹಂದಿಗಳು ಹಾಗೂ ೧೫೦೦ ಲಕ್ಷ ಕೋಳಿಗಳ ವಧೆಯಾಗುತ್ತಿದೆ.  ಅನಂತರ ಇವನ್ನು ತಿನ್ನಲು ಅಥವಾ ರಫ್ತು ಮಾಡಲು ಉಪಯೋಗಿಸುವರು. ಇಲ್ಲಿ ದ್ರವ ಹಾಗೂ ಘನರೂಪದ ಕಸಗಳುಂಟಾಗುತ್ತವೆ. ಪ್ರಾಣಿಗಳನ್ನು ಕತ್ತರಿಸಿದಾಗ ತಿನ್ನಲಾಗದ ಅಂಗಗಳು, ಅನ್ನನಾಳದೊಳಗಿನ ಅಂಶಗಳು, ಸಗಣಿ, ಮೂಳೆಗಳು ಹಾಗೂ ಹೆಪ್ಪುಗಟ್ಟಿದ ರೊಚ್ಚು ತ್ಯಾಜ್ಯಗಳಾಗಿ ಪರಿಣಮಿಸುತ್ತವೆ.

ಪ್ರಾಣಿವಧಾಸ್ಥಳಗಳು ತ್ಯಾಜ್ಯದ ಪ್ರಮಾಣ
೧. ಬೃಹತ್ ಗಾತ್ರ ಪ್ರತಿದಿನ ೬.೦ – ೭.೦ ಟನ್ನು
೨. ಮಧ್ಯಮ ಗಾತ್ರ ಪ್ರತಿದಿನ ೨.೦ – ೬.೦ ಟನ್ನು
೩. ಸಣ್ಣದಾದವು ಪ್ರತಿದಿನ ೦.೫ – ೧.೦ ಟನ್ನು

೧೪. ಆಸ್ಪತ್ರೆಗಳ ಕಸ : ಮಾನವ ಅಥವಾ ಪ್ರಾಣಿಗಳ ಕಾಯಿಲೆಗಳನ್ನು ಪತ್ತೆ ಹಚ್ಚುವಾಗ, ಗುಣಪಡಿಸುವಾಗ, ಚುಚ್ಚುಮದ್ದು ನೀಡುವಾಗ ವಿವಿಧ ರೀತಿಯ ಕಸಗಳು ಉಂಟಾಗುತ್ತವೆ. ಸೂಚಿಗಳು, ಕೊಳಕಾದ ಹತ್ತಿ ಉಂಡೆಗಳು, ಬಿಸಾಡುವ ಇಂಜೆಕ್ಷನ್ ಟ್ಯೂಬ್‌ಗಳು, ಅಂಗಾಶ ತ್ಯಾಜ್ಯಗಳು, ಎಸೆಯಲ್ಪಟ್ಟ ಔಷಧಿಗಳು, ರಸಾಯನಿಕ ತ್ಯಾಜ್ಯಗಳು, ಕೃಷಿ ಮಾಡಿದ ಅಂಗಾಂಶಗಳು, ಸೂಕ್ಷ್ಮಜೀವಿಗಳು ಇತ್ಯಾದಿಗಳು ಆಸ್ಪತ್ರೆಯ ಕಸದಲ್ಲಿರುತ್ತವೆ.  ಇವುಗಳಲ್ಲಿ ಶರೀರದ ದ್ರವಗಳು, ಬ್ಯಾಂಡೇಜ್ ಹತ್ತಿ, ಮಾನವನ ಮಲ ಮೂತ್ರಗಳು, ಶಸ್ತ್ರಚಿಕಿತ್ಸೆಯಿಂದ ಹೊರತೆಗೆದ ಅಂಗಗಳೂ ಇರಬಹುದು. ಆಸ್ಪತ್ರೆ ಕಸವು ತುಂಬ ಅಪಾಯಕಾರಿಯಾದುದು. ಇದರಲ್ಲಿ ಸೋಂಕು ಉಂಟು ಮಾಡುವ ಕ್ರಿಮಿಗಳು, ವಿಷಾಣುಗಳು ಇರುತ್ತವೆ. ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದಲ್ಲಿ ಅನೇಕ ರೋಗ ರುಜಿನಗಳು ಹರಡುವ ಸಾಧ್ಯತೆ ಇರುತ್ತದೆ. ಆಸ್ಪತ್ರೆ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಕ್ತ ವಿಧಿವಿಧಾನಗಳನ್ನು ಅನುಸರಿಸಬೇಕು.

೧೫. ಜೈವಿಕಔಷಧೀಯ ಕಸ (Bio-medical waste) : ಮಾನವ ಅಥವಾ ಪ್ರಾಣಿಗಳ ರೋಗ ತಪಾಸಣೆ, ಚಿಕಿತ್ಸೆ, ಲಸಿಕೆ ಹಾಕುವ ಕ್ರಿಯೆ ಅಥವಾ ಅವುಗಳ ಸಂಶೋಧನೆ ಮಾಡುವಾಗ ಉಂಟಾಗುವ ದ್ರವ ಅಥವಾ ಘನ ರೂಪದ ಕಸವನ್ನು ಜೈವಿಕ-ಔಷಧೀಯ ಕಸ ಎನ್ನುವರು. ಇದರಲ್ಲಿ ತ್ಯಾಜ್ಯವಿರುವ ಉಪಕರಣಗಳು ಅಥವಾ ಮಧ್ಯದಲ್ಲಿ ಉಂಟಾಗುವ ಉತ್ಪನ್ನಗಳನ್ನು ಸಹ ಜೈವಿಕ-ಔಷಧೀಯ ಕಸ ಎಂದು ಕರೆಯುವರು.

ಜೈವಿಕ ಔಷಧೀಯ ಕಸವೆಂದರೆ ಮಾನವನ ಶರೀರದಿಂದ ಕತ್ತರಿಸಿ ಹೊರತೆಗೆದ ಅಂಗಗಳು, ಅಂಗಾಂಶಗಳು, ಶರೀರದ ಭಾಗಗಳು, ಪಶು ಆಸ್ಪತ್ರೆ, ಸಂಶೋಧನಾಲಯ ಗಳಲ್ಲಿ ಹಾಗೂ ಸೂಕ್ಷ್ಮಜೀವಿ ಮತ್ತು ಜೈವಿಕ ತಂತ್ರಜ್ಞಾನ ಉಂಟಾಗುವ ತ್ಯಾಜ್ಯಗಳು ಸೇರಿರುತ್ತವೆ. ಇಂತಹ ಸ್ಥಳಗಳಲ್ಲಿ ಸೂಜಿಗಳು, ಇಂಜೆಕ್ಷನ್ ಟ್ಯೂಬುಗಳು, ಚಾಕು, ಕತ್ತರಿಗಳು, ಒಡೆದ ಗಾಜು, ಎಸೆಯಲ್ಪಟ್ಟ ಔಷಧಗಳು ಹಾಗೂ ಜೀವಕೋಶೀಯ ವಿಷವಸ್ತುಗಳು ಇರುತ್ತವೆ. ಗಾಯಗಳ ಚಿಕಿತ್ಸೆಗೆ ಬಳಸಿದ ಹತ್ತಿ, ಪ್ಲಾಸ್ಟರುಗಳು, ರಕ್ತಸಿಕ್ತವಾದ ಬಟ್ಟೆ, ದಾರ, ನಳಿಕೆ, ಬಾಟಲಿಗಳು ಸಹ ತ್ಯಾಜ್ಯ ವಸ್ತುವಾಗಿರುತ್ತದೆ. ಸೋಂಕು ಉಂಟಾದ ಸ್ಥಳದ ದ್ರವ, ಬೂದಿ ಹಾಗೂ ಇತರೆ ರಸಾಯನಿಕ ತ್ಯಾಜ್ಯಗಳು ಜೈವಿಕ-ಔಷಧೀಯ ಕಸದ ಭಾಗಗಳಾಗಿರುತ್ತವೆ.

ಇಂತಹ ಸನ್ನಿವೇಶಗಳಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆಸ್ಪತ್ರೆಗಳಿಂದ ಗಳಿಸಿದ ರೋಗಗಳು ಎಂಬ ಹೆಸರು ಇತ್ತೀಚೆಗೆ ಪ್ರಚಲಿತವಾಗುತ್ತಿದೆ. ಆಸ್ಪತ್ರೆಯ ರೋಗಿಗಳಿಂದ, ಸೋಂಕುಕಾರಿ ತ್ಯಾಜ್ಯಗಳಿಂದ ರೋಗ ಬಂದರೆ ಅದನ್ನು ಆಸ್ಪತ್ರೆಗಳಿಂದ ಗಳಿಸಿದ ರೋಗ ಎನ್ನುವರು.

ಜೈವಿಕ ಔಷಧೀಯ ಕಸ ಕಾಯ್ದೆ (೧೯೭೮)ರ ಪ್ರಕಾರ ಅಂತಹ ಕಸ ಉಂಟು ಮಾಡುವ ವ್ಯಕ್ತಿಯೇ ಆ ಕಸವನ್ನು ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಬೇಕು.

ಗಟ್ಟಿ ಕಸವನ್ನು ಮತ್ತೊಂದು ವಿಧಾನದಲ್ಲಿ ವಿಂಗಡಿಸುವುದುಂಟು. ಕಸದಲ್ಲಿರುವ ವಿವಿಧ ವಸ್ತುಗಳನ್ನು ಎರಡು ರೀತಿ ಗುರುತಿಸಬಹುದು. ಮೊದಲನೆಯದಾಗಿ ಜೈವಿಕವಾಗಿ ವಿಘಟನೆಗೆ ಒಳಗಾಗುವ ವಸ್ತುಗಳು. ಉದಾಹರಣೆಗೆ ಸಸ್ಯ, ಪ್ರಾಣಿಜನ್ಯ ವಸ್ತುಗಳು, ಕಾಗದ, ಅಡಿಗೆ ಕಸ, ಇವು ನಿಧಾನವಾಗಿ ಪ್ರಕೃತಿದತ್ತವಾಗಿ ವಿಘಟನೆಗೆ ಒಳಗಾಗುತ್ತವೆ. ತರಕಾರಿ ಸಿಪ್ಪೆಗಳು, ಅನ್ನ ಮುಂತಾದವು ಸೂಕ್ಷ್ಮಜೀವಿಗಳಿಂದ ವಿಘಟನೆಯಾಗುತ್ತವೆ. ಎರಡನೆಯದಾಗಿ ವಿಘಟಿಸಲಾಗದ ವಸ್ತುಗಳು. ಉದಾಹರಣೆಗೆ ಗಾಜು, ಲೋಹದ ಚೂರುಗಳು, ಪ್ಲಾಸ್ಟಿಕ್ ಇತ್ಯಾದಿ. ಇವು ಸಾವಿರಾರು ವರ್ಷಗಳಾದರೂ ಬದಲಾಗುವುದಿಲ್ಲ. ವಿಘಟನೆ ಹೊಂದುವುದಿಲ್ಲ. ವಿಘಟನೆಯಾಗದ ಕಸವು ಸಾಮಾನ್ಯವಾಗಿ ಮಾನವ ನಿರ್ಮಿತ ವಸ್ತುಗಳು, ರಸಾಯನಿಕವಾಗಿ ಸಂಶ್ಲೇಷಣೆಗೊಂಡ ವಸ್ತುಗಳು ಹಾಗೂ ಸೂಕ್ಷ್ಮಜೀವಿಗಳಾಗಲೀ ಅಥವಾ ಇತರೆ ಪ್ರಾಣಿಗಳಾಗಲೀ ಇವನ್ನು ತಿಂದು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ವಿಘಟನೆಯಾಗದ ಗಟ್ಟಿ ಕಸವು ತುಂಬ ಉಪದ್ರಕಾರಿ.