ಗಟ್ಟಿ ಕಸವು ನಿಜವಾಗಿಯೂ ಆಧುನಿಕ ಸಮಾಜದ ರಾಕ್ಷಸನೇ ಹೌದು. ಆತನ ಗಾತ್ರ, ರೂಪ, ವಿವಿಧ ಆಕಾರಗಳ ಸಂಕ್ಷಿಪ್ತ ಪರಿಚಯವೇನೋ ನಮಗೀಗ ಉಂಟಾಗಿದೆ. ಈ ರಕ್ಕಸನಿಂದ ಮಾನವನಿಗೆ, ಜೀವಿಗಳಿಗೆ ಹಾಗೂ ಪರಿಸರಕ್ಕೆ ಉಂಟಾಗುತ್ತಿರುವ ಅಡೆತಡೆಗಳೇನು, ಅಪಾಯಗಳೇನು ಎಂಬುದನ್ನು ಈಗ ತಿಳಿಯೋಣ.

. ವಿಕಾರರೂಪ ದರ್ಶನ :          ನಿಮ್ಮ ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ಎರಚಲ್ಪಟ್ಟಿರುವ ಗಾಜು, ಪ್ಲಾಸ್ಟಿಕ್, ಕಾಗದಗಳ ಚೂರು, ಧೂಳು, ಕಸ, ಕಡ್ಡಿಗಳು ನಿಮಗೆ ದಿನನಿತ್ಯದ ಮೊದಲ ದರ್ಶನ ನೀಡಿದರೆ ಸಂತೋಷವಾಗುವುದೇ ? ಗಾಳಿಯಲ್ಲಿ ಹಾರಾಡುವ ಚಿಂದಿಗಳು, ಅಡ್ಡಾದಿಡ್ಡಿ ಬಿದ್ದಿರುವ ಕಸಕಡ್ಡಿಗಳು ಇಂದು ನಗರಗಳ ಅಂದವನ್ನೇ ಹಾಳು ಮಾಡಿವೆ. ಬಸ್‌ನಿಲ್ದಾಣ, ರೈಲು ನಿಲ್ದಾಣಗಳಲ್ಲಿನ ಪ್ಲಾಸ್ಟಿಕ್ ಚೂರುಗಳು, ಮಲಮೂತ್ರ ದರ್ಶನ ಯಾರಿಗೆ ಪ್ರಿಯವಾದೀತು ? ಪ್ರಕೃತಿಯ ಸೌಂದರ್ಯವನ್ನೇ ಹಾಳು ಮಾಡುವ ಕಸವನ್ನು ಒಮ್ಮೆ ದೃಷ್ಟಿಸಿ ನೋಡಿ. ಆ ಕಸವನ್ನು ಹಾಗೂ ಕಸದ ಸೃಷ್ಟಿಕರ್ತನಾದ ವ್ಯಕ್ತಿಗಳನ್ನು ನೆನಪಿಸಿಕೊಳ್ಳಿ. ಅದೊಂದು ಹೇಸಿಗೆ. ಅದರ ವಿಕಾರ ರೂಪ ಎಂತಹ ಸಂಯಮವಿರುವ ವ್ಯಕ್ತಿಯಲ್ಲಿಯೂ ಸಿಟ್ಟು ಉಕ್ಕುವಂತೆ ಮಾಡುತ್ತದೆ. ಮನಶ್ಶಾಂತಿಯನ್ನು ಹಾಳು ಮಾಡುತ್ತದೆ. ಬೇಸರ, ಬೇಗುದಿಯನ್ನುಂಟು ಮಾಡುತ್ತದೆ. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲ ಜನರು ಪ್ರತಿದಿನ ಉತ್ಪತ್ತಿ ಮಾಡುವ ಕಸವನ್ನು ರಾಶಿ ಹಾಕಿದರೆ, ಅದು ಗೌರಿಶಂಕರ ಪರ್ವತವನ್ನು ಮೀರಿಸುತ್ತದೆ. ಅಷ್ಟು ದೈತ್ಯಾಕಾರದ ವಿಕಾರರೂಪದರ್ಶನ ಯಾರಿಗೆ ಬೇಕು ?

. ದುರ್ವಾಸನೆಯ ಮೂಲ : ಗಟ್ಟಿ ಕಸದಲ್ಲಿನ ಸಸ್ಯ, ಪ್ರಾಣಿಜನ್ಯ ವಸ್ತುವು ಜೈವಿಕವಾಗಿ ವಿಘಟನೆ ಹೊಂದುವುದು. ಗೃಹಬಳಕೆ ಕಸ, ಮಾರುಕಟ್ಟೆ ಕಸ, ಪ್ರಾಣಿವಧಾ ಕಸ ಮುಂತಾದವುಗಳಲ್ಲಿ ಜೈವಿಕ ವಿಘಟನೆ ಕಸದ ಪ್ರಮಾಣವೇ ಹೆಚ್ಚಿರುತ್ತದೆ. ಅನೇಕರು ಮನೆಯಲ್ಲಿ ಉಳಿದ, ಕೊಳೆತ ಅನ್ನ, ತರಕಾರಿ, ಹಣ್ಣು ಮುಂತಾದವನ್ನು ಪ್ಲಾಸ್ಟಿಕ್ ಕವರುಗಳಲ್ಲಿ ಹಾಕಿ ಗಂಟು ಬಿಗಿದು ಹೊರಕ್ಕೆ ಎಸೆಯುವುದುಂಟು. ಹೋಟೆಲುಗಳು, ಕಲ್ಯಾಣ ಮಂಟಪಗಳು, ಸಭಾಭವನಗಳು ಮುಂತಾದವುಗಳಲ್ಲಿ ಊಟ ಉಪಚಾರಗಳು ನಡೆದ ನಂತರ ಬಾಳೆಎಲೆಗಳು, ಅಳಿದುಳಿದ ಆಹಾರಗಳನ್ನು ಕಸದ ತೊಟ್ಟಿಗಳಿಗೆ ಎಸೆಯುತ್ತಾರೆ. ಈ ಕಸಗಳು ಶೀಘ್ರವಾಗಿ ಕೊಳೆತು ದುರ್ವಾಸನೆ ಹೊರ ಬರುತ್ತದೆ. ಕಸದ ತೊಟ್ಟಿ ಸಮೀಪ ವಾಸಿಸುವವರಿಗೆ ದುರ್ವಾಸನೆ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಕಸದ ರಾಶಿಯನ್ನು ಕಾಲಕಾಲಕ್ಕೆ ಚೊಕ್ಕಟಗೊಳಿಸುವ ಶಿಸ್ತು ನಗರಸಭೆ ನೌಕರುಗಳಲ್ಲಿಲ್ಲ. ಅಥವಾ ನೌಕರರ ಸಂಖ್ಯೆಯೇ ಕಡಿಮೆ ಇರುತ್ತದೆ. ಅಥವಾ ದಕ್ಷ ನಿರ್ವಹಣೆಯ ನಗರಸಭೆ ಆಡಳಿತವಿರುವುದಿಲ್ಲ. ಅಂತಹ ಕಸವನ್ನು ಸೂಕ್ತವಾಗಿ ಜವಾಬ್ದಾರಿಯಿಂದ ವಿಲೇವಾರಿ ಮಾಡುವ ಆಯಾ ಮಾಲಿನ್ಯಕ್ಕೆ ಕಾರಣರಾದ ವರಲ್ಲಿ ಕಂಡುಬರುವುದಿಲ್ಲ. ಕಸದ ಕೊಳೆಯುವಿಕೆಯಿಂದ ದುರ್ವಾಸನೆ ಸುತ್ತಲೂ ಹರಡುತ್ತದೆ. ಅಂತಹ ಗಾಳಿಯ ಸೇವನೆಯಿಂದ ಶ್ವಾಸಕೋಶಗಳಿಗೆ ಘಾಸಿಯಾಗುತ್ತದೆ. ತಲೆನೋವು, ತಲೆಸುತ್ತು, ಉಬ್ಬಸ, ಅಸ್ತಮಾದಂತಹ ರೋಗಗಳು ಉಂಟಾಗುವ ಸಾಧ್ಯತೆ ಇದೆ.

ಜೈವಿಕ ಕಸವಿರುವ ಸ್ಥಳದ ದುರ್ವಾಸನೆಯು ಹಲವು ಜೀವಿಗಳಿಗೆ ಆಹಾರ, ಆಶ್ರಯ ನೀಡುವುದೂ ಉಂಟು. ಕಾಗೆ, ಹದ್ದು ಮುಂತಾದ ಪಕ್ಷಿಗಳು ಅಲ್ಲಿ ಮುಸುರುತ್ತವೆ. ಇಲಿ, ಹೆಗ್ಗಣಗಳು, ಇಂತಹ ಸ್ಥಳಗಳಲ್ಲಿಯೇ ಮನೆ ಮಾಡುತ್ತವೆ. ಹಂದಿ, ಬೀದಿಗೆ ಬಿಟ್ಟ ಹಸುಗಳು, ಕುದುರೆಗಳು, ಕತ್ತೆಗಳು, ಜೈವಿಕ ಕಸವನ್ನು ತಿನ್ನಲು ಪೈಪೋಟಿ ನಡೆಸುತ್ತವೆ. ಕೆಲವೊಮ್ಮೆ ಈ ಪ್ರಾಣಿಗಳ ಜೊತೆಗೆ ಬಡಮಕ್ಕಳು ಸಹ ಆಹಾರಕ್ಕೆ ತಡಕಾಡುವುದು ಹೃದಯ ವಿದ್ರಾವಕ ದೃಶ್ಯ.

. ರೋಗಗಳ ತವರು : ಗೃಹ ಗಟ್ಟಿಕಸ, ಮಾರುಕಟ್ಟೆ ಕಸ, ಆಸ್ಪತ್ರೆ ಕಸ, ಕಲ್ಯಾಣ ಮಂಟಪಗಳ ಕಸ, ಪ್ರಾಣಿವಧಾ ಕಸ ಹಾಗೂ ಜೈವಿಕ ಔಷಧೀಯ ಕಸದಲ್ಲಿ ಅನೇಕ ರೋಗಕಾರಕಗಳಿರುತ್ತವೆ. ಜೈವಿಕ ಕಸವು ನೊಣಗಳ ವಾಸಸ್ಥಾನವಾಗುವುದರಿಂದ ಕಾಲರಾ, ಅತಿಭೇದಿ ಮುಂತಾದ ಕಾಯಿಲೆಗಳು ಹರಡಲು ಕಾರಣವಾಗುತ್ತವೆ. ಪ್ಲೇಗ್, ಮೆದುಳುಜ್ವರಗಳು ಹರಡಲು ಈ ಕಸದ ರಾಶಿಗಳೇ ಮೂಲ ಕಾರಣ, ಟೈಪಾಯ್ಡ್ ಜ್ವರ, ಕಾಮಾಲೆ, ಜಂತುಹುಳು, ಕೊಕ್ಕೆ ಹುಳು, ಮುಂತಾದವು ಹರಡುವುದಕ್ಕೆ ಜೈವಿಕ ವಿಘಟನೆ ಹೊಂದುವ ಗಟ್ಟಿ ಕಸದ ಕಾಣಿಕೆ ಗಣನೀಯವಾಗಿರುತ್ತದೆ.

ಆಸ್ಪತ್ರೆಯ ಗಟ್ಟಿಕಸ, ಜೈವಿಕ-ಔಷಧೀಯ ಕಸದಲ್ಲಿ ರೋಗಕಾರಕಗಳು ಹೇರಳವಾಗಿರುತ್ತವೆ. ಅಲ್ಲದೆ ಸೂಚಿಗಳು, ಕತ್ತರಿಗಳು, ಚಾಕುಗಳು, ಸೋಂಕಾದ ಹತ್ತಿಗಳು ಇಂತಹ ಕಸದಲ್ಲಿರುವುದರಿಂದ ಕಸ ಬೇರ್ಪಡಿಸುವವರಿಗೆ ಕಸ ಎತ್ತುವ ನೌಕರರಿಗೆ ರೋಗಗಳು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಲಾಡಿಹುಳು ಬಾಧೆ, ಕ್ಷಯ, ಮುಂತಾದವು ಹರಡಲಿಕ್ಕೂ ಗಟ್ಟಿ ಕಸದ ಕೊಡುಗೆ ಇದೆ.

. ಸಾವಿಗೆ ಮೂಲ : ಜೈವಿಕ ಕಸವನ್ನು ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಹಾಕುವ ರೂಢಿ ನಮ್ಮಲ್ಲಿದೆ. ಕಲ್ಯಾಣ ಮಂಟಪ, ಹೋಟೆಲುಗಳ ಕಸವನ್ನು ಪ್ಲಾಸ್ಟಿಕ್ ಹಾಳೆಗಳಲ್ಲಿ ಸುತ್ತಿ ಬಿಸಾಡುವ ಪ್ರವೃತ್ತಿ ನಮ್ಮಲ್ಲಿದೆ. ಇಂತಹ ಆಹಾರವನ್ನು ಅರಸುತ್ತ ಬರುವ ಕುದುರೆಗಳು, ಹಸುಗಳು ಆಹಾರದ ಜೊತೆ ಪ್ಲಾಸ್ಟಿಕ್ ಕವರು, ಹಾಳೆಗಳನ್ನು ಸಹ ತಿನ್ನುತ್ತವೆ. ಪ್ಲಾಸ್ಟಿಕನ್ನು ಜೀವಿಗಳು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಅನ್ನನಾಳದಲ್ಲಿ ಸುಲಭವಾಗಿ ಮುಂದಕ್ಕೆ ಹೋಗಿ ಗುದದ್ವಾರದ ಮೂಲಕ ಹೊರಕ್ಕೂ ಬರುವುದಿಲ್ಲ. ಪ್ಲಾಸ್ಟಿಕ್ ನಿಧಾನವಾಗಿ ಹಸುಗಳ ಜಠರದಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಪ್ಲಾಸ್ಟಿಕ್‌ನ ಪ್ರಮಾಣ ಹೆಚ್ಚಿದಂತೆ ಜಠರ ಊದಿಕೊಳ್ಳುವುದು. ಆಹಾರಕ್ಕೆ ಸ್ಥಳವೇ ಇಲ್ಲದಂತಾಗುವುದು. ಇದರ ಪರಿಣಾಮವಾಗಿ ಹಸುಗಳು ಅಸು ನೀಗುತ್ತವೆ. ಹಾಗೆ ಸತ್ತ ಹಸುಗಳ ಕಳೇಬರವನ್ನು ವಿಚ್ಛೇದಿಸಿದಾಗ ಅವುಗಳ ಜಠರದಲ್ಲಿ ೧೫ ರಿಂದ ೨೦ ಕಿಲೋವರೆಗೆ ಪ್ಲಾಸ್ಟಿಕ್ ಇದ್ದುದು ವರದಿಯಾಗಿದೆ ! ಪ್ಲೇಗು, ಕಾಲರಾ ಮುಂತಾದ ರೋಗಗಳಿಂದ ಮಾನವನ ಸಾವಿಗೂ ಗಟ್ಟಿ ಕಸವೇ ಮೂಲಕಾರಣವೆಂದು ಹೇಳುವ ಅಗತ್ಯವಿಲ್ಲ.

. ಹೊಲಸಿನ ಪ್ರವಾಹಕ್ಕೆ ಮೂಲ ಕಾರಣ : ಗಟ್ಟಿ ಕಸವನ್ನು ಒಳಚರಂಡಿಗಳಿಗೆ ಒತ್ತಾಯವಾಗಿ ನೂಕುವ ಅಭ್ಯಾಸ ನಮ್ಮಲ್ಲಿ ಕೆಲವರಿಗೆ ಇದೆ. ಸೋಪು, ಶಾಂಪು, ಝರ‍್ದಾ ಮುಂತಾದವುಗಳ ಪ್ಲಾಸ್ಟಿಕ್ ಪೌಚುಗಳು, ಸ್ಟೇಪ್ರೀ, ವಿಸ್ಪರ್‌ನಂತಹ ಹತ್ತಿ ಬಟ್ಟೆ, ಪ್ಲಾಸ್ಟಿಕ್‌ಗಳ ತುಂಡುಗಳನ್ನು ಶೌಚಾಲಯಗಳಲ್ಲಿ ಎಸೆಯುವುದರಿಂದ ಅವು ಒಳಚರಂಡಿಗೆ ಸೇರುತ್ತವೆ. ಹೊಲಸು ಕೆಸರಲ್ಲಿ ಸೇರಿಕೊಂಡು ಅಥವಾ ತಿರುವುಗಳಲ್ಲಿ ನಿಂತು ಅಥವಾ ಪೈಪುಗಳಿಗೆ ಅಂಟಿಕೊಂಡು ಒಳಚರಂಡಿ ನೀರು ಹರಿಯುವುದಕ್ಕೆ ಅಡ್ಡ ಬರುತ್ತವೆ. ಆಗ ಒಳಚರಂಡಿ ನೀರು ಮ್ಯಾನ್‌ಹೋಲ್‌ಗಳ ಮೂಲಕ ಹೊರ ಹೊಮ್ಮಿ ಹೊಲಸಿನ ಪ್ರವಾಹಕ್ಕೆ ಕಾರಣವಾಗುತ್ತವೆ. ಮಳೆ ಬಿದ್ದಾಗ ಇಂತಹ ಸಮಸ್ಯೆಗಳು ನಗರಗಳಲ್ಲಿ ಸಾಮಾನ್ಯ ಸಂಗತಿಯಾಗಿವೆ.

ಪ್ಲಾಸ್ಟಿಕ್ ಮೂಲಗಳು ಹೀಗಿವೆ

ಗೃಹ ಬಳಕೆಯಿಂದ         • ಕೈಚೀಲದ ಕವರುಗಳು

• ಪ್ಲಾಸ್ಟಿಕ್ ಬಾಟಲಿಗಳು

• ಪ್ಲಾಸ್ಟಿಕ್ ಬಿಂದಿಗೆ, ಲೋಟಗಳು

• ಪ್ಲಾಸ್ಟಿಕ್ ಗೃಹೋಪಕರಣಗಳು

• ಪ್ಲಾಸ್ಟಿಕ್ ಬಕೆಟ್‌ಗಳು, ಬಟ್ಟಲುಗಳು

ಹೋಟೆಲು / ಉಪಹಾರ ಮಂದಿರಗ            • ಕುಡಿಯುವ ನೀರಿನ ಬಾಟಲಿಗಳು

• ಕಾಫಿ, ಟೀ, ನೀರಿನ ಲೋಟಗಳು

• ಪ್ಲಾಸ್ಟಿಕ್ ಚಮಚ, ತಟ್ಟೆಗಳು

• ತುಂಬಲು, ಕಟ್ಟಲು ಬಳಸುವ ಪ್ಲಾಸ್ಟಿಕ್ ವಸ್ತುಗಳು.

 

ಆಸ್ಪತ್ರೆ ಮೂಲಗಳಿಂದ    • ಬಳಸಿ ಬಿಸಾಡುವ ಇಂಜೆಕ್ಷನ್ ಟ್ಯೂಬುಗಳು

• ಗ್ಲೂಕೋಸ್ ಬಾಟಲಿಗಳು

• ರಕ್ತ ಹಾಗೂ ಮೂತ್ರದ ಚೀಲಗಳು

• ನಳಿಕೆಗಳು, ಪ್ಲಾಸ್ಟಿಕ್ ಕೈಕವರುಗಳು

ರೈಲು/ವಾಯುಯಾನಗಳಿಂದ• ಕುಡಿಯುವ ನೀರಿನ ಬಾಟಲಿಗಳು

• ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚಗಳು

• ಪ್ಲಾಸ್ಟಿಕ್ ಚೀಲಗಳು

• ಚಾಕ್ಲೇಟು, ತಾಂಬೂಲ, ತಂಬಾಕು, ಝರ‍್ದಾ, ಸಿದ್ಧ ಆಹಾರದ ಕವರುಗಳು

 

ತೆರೆದ ಚರಂಡಿ ಇರುವ ಪಟ್ಟಣಗಳಲ್ಲಿ ಈ ಸಮಸ್ಯೆಯ ತೀವ್ರತೆ ಇನ್ನೂ ಹೆಚ್ಚು. ಪ್ಲಾಸ್ಟಿಕ್‌ನ ತುಂಡುಗಳು, ಸಿಮೆಂಟ್, ಇಟ್ಟಿಗೆಗಳ ತುಂಡುಗಳು ಅಲ್ಲಲ್ಲಿ ಗುಂಪು ಗುಂಪಾಗಿ ಬಿದ್ದಿರುತ್ತವೆ. ಚರಂಡಿ ನೀರು ನಿಂತು ಸೊಳ್ಳೆಗಳು ಹೆಚ್ಚಲು ಈ ಗಟ್ಟಿ ಕಸವೇ ಕಾರಣ. ಮಳೆ ನೀರು ಬಂದಾಗ ಚರಂಡಿಗಳು ಉಕ್ಕಿ ಹರಿಯಲು, ರಸ್ತೆಗಳಿಗೆ ಹಾಗೂ ಕೆಳಸ್ತರದಲ್ಲಿರುವ ಮನೆಗಳಿಗೆ ನುಗ್ಗಲು ಗಟ್ಟಿಕಸದ ಕೊಡುಗೆ ಇದ್ದೇ ಇರುತ್ತದೆ. ನೀರಿನ ಓಟಕ್ಕೆ ಪ್ಲಾಸ್ಟಿಕ್, ಹಳೆಬಟ್ಟೆ, ಕಸಕಡ್ಡಿಗಳು ಅಡ್ಡಲಾಗಿರು ವುದರಿಂದ ಹೊಲಸಿನ ಪ್ರವಾಹ ಉಂಟಾಗುವುದು.

. ಜಲಚಕ್ರಕ್ಕೆ ತೊಡಕು : ಇಂದಿನ ಸಮಾಜದಲ್ಲಿ ಪ್ಲಾಸ್ಟಿಕ್‌ನ ಬಳಕೆ ಹೆಚ್ಚುತ್ತಿದೆ. ಬಳಸಿ-ಬಿಸಾಡಲಾಗುವ ಪ್ಲಾಸ್ಟಿಕ್ ತುಂಡುಗಳು ರಸ್ತೆ, ಹೊಲಗದ್ದೆ, ತೋಟ ತುಡಿಕೆಗಳು, ಬಂಜರು ಭೂಮಿ, ಕಸದ ರಾಶಿಗಳಲ್ಲಿ ಚೆಲ್ಲಾಡಿರುತ್ತವೆ. ಇವು ನೆಲದ ಮೇಲೆ ಸಹಸ್ರಾರು ವರ್ಷಗಳ ಕಾಲ ಕೊಳೆಯದೆ ಇರುವುದರಿಂದ ಭೂಮಿಯು ನೀರನ್ನು ಹಿಂಗುವುದಕ್ಕೆ ಅಡ್ಡ ಬರುತ್ತವೆ. ಅಂತರ್ಜಲವು ಮಳೆಯ ನೀರಿನಿಂದ ಮರುಪೂರಣ ಹೊಂದಲು ಅಡ್ಡಿಯಾಗುತ್ತವೆ.

ಗಣಿಗಾರಿಕೆ, ಕೈಗಾರಿಕೆಗಳಲ್ಲಿ ಉಂಟಾಗುವ ಕಸ ಹಾಗೂ ಮಣ್ಣು ರಾಶಿಗಳು ಸಹ ಜಲಚಕ್ರಕ್ಕೆ ಅಡ್ಡಿ ಉಂಟು ಮಾಡುತ್ತವೆ. ಕಬ್ಬಿಣ, ಮ್ಯಾಂಗನೀಸ್ ಅದಿರುಗಳನ್ನು ತೆಗೆದಾಗ ಉಳಿಯುವ ಮಣ್ಣಿನ ರಾಶಿಗಳು ಮಳೆ ನೀರಿನ ಜೊತೆ ಸೇರಿ ಕೆಸರು ಉಂಟಾಗುವುದು. ಅಂತಹ ಕೆಸರು ನೀರು ನದಿಗಳನ್ನು ಸೇರಿದಾಗ ಹಾಗೂ ಕೆರೆಕುಂಟೆಗಳನ್ನು ಸೇರಿದಾಗ ತಳಭಾಗದಲ್ಲಿ ಕೆಸರು ಶೇಖರವಾಗುತ್ತದೆ. ಅಂತರ್ಜಲ ಪೂರೈಕೆಗೆ ಅಡ್ಡಿಯಾಗುತ್ತದೆ. ಅಲ್ಲದೆ ಮೀನುಗಳಂತಹ ಜಲಚರ ಜೀವಿಗಳ ಉಸಿರಾಟಕ್ಕೆ ತೊಂದರೆ ಉಂಟು ಮಾಡಿ ಸಾವಿಗೆ ಕಾರಣವಾಗುತ್ತವೆ.

. ವಾಯುಮಾಲಿನ್ಯಕ್ಕೆ ಕೊಡುಗೆ : ಗಟ್ಟಿ ಕಸವನ್ನು ಸುಲಭವಾಗಿ ವಿಲೇವಾರಿ ಮಾಡುವ ವಿಧಾನವೆಂದರೆ ಅದನ್ನು ಸುಟ್ಟು ಹಾಕುವುದು ಎಂದು ಹಲವರು ನಂಬಿದ್ದಾರೆ. ಬೀದಿಕಸವನ್ನು ಗುಡ್ಡೆ ಮಾಡಿ ಬೆಂಕಿ ಹಚ್ಚುವುದನ್ನು ನೀವು ನೋಡಿರಬಹುದು. ಕಸಕ್ಕೆ ಬೆಂಕಿ ಇಟ್ಟಾಗ, ಅದರಲ್ಲಿನ ಪ್ಲಾಸ್ಟಿಕ್‌ನ ವಸ್ತುಗಳು ಸುಟ್ಟು ಡೈಆಕ್ಸಿನ್‌ನಂತಹ ಕ್ಯಾನ್ಸರ್‌ಕಾರಕ ಅನಿಲಗಳು ವಾಯುಮಂಡಲಕ್ಕೆ ಸೇರುತ್ತವೆ. ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್ ಮುಂತಾದ ಅನಿಲಗಳು ಬಿಡುಗಡೆಯಾಗಿ ವಾಯುಮಲಿನ್ಯ ಉಂಟಾಗುವುದು. ಹೊಗೆ, ಧೂಳಿನ ಕಣಗಳು ಗಾಳಿಯಲ್ಲಿ ಸೇರಿ ಎದೆಯುರಿ, ಅಸ್ತಮಾ, ಉಬ್ಬಸದಂತಹ ರೋಗಗಳಿಗೆ ಕಾರಣವಾಗುವುದು.

ಕೆಲವು ಕಡೆ ನಗರಸಭೆ ಗಟ್ಟಿ ಕಸವನ್ನು ಹಾಳು ಗುಂಡಿಗಳಿಗೆ ತುಂಬಿ ಮೇಲೆ ಮಣ್ಣು ಹಾಕುತ್ತಾರೆ. ಇಂತಹ ಗಟ್ಟಿ ಕಸವು ನಿಧಾನವಾಗಿ ಕೊಳೆಯುವಿಕೆಗೆ ಒಳಗಾಗುತ್ತದೆ. ಹಾಗಾಗಿ ಅಂತಹ ಸ್ಥಳಗಳಿಂದ ಮಿಥೇನ್, ಸಾರಜನಕದ ಆಕ್ಸೈಡ್‌ಗಳು ವಾಯು ಮಂಡಲ ಸೇರಿ ಮಾಲಿನ್ಯ ಉಂಟು ಮಾಡುತ್ತವೆ.

ನಗರಗಳ ಹೊರಭಾಗದಲ್ಲಿ ಸಂಗ್ರಹ ಮಾಡುವ ಗಟ್ಟಿ ಕಸದ ರಾಶಿಯಿಂದ ವಿವಿಧ ಅನಿಲಗಳು ಬಿಡುಗಡೆಯಾಗಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ವಿಷಯ.

ಆಸ್ಪತ್ರೆ, ಸಂಶೋಧನಾ ಸಂಸ್ಥೆಗಳಿಂದ ಬರುವ ತ್ಯಾಜ್ಯವನ್ನು ವಿಶೇಷವಾಗಿ ತಯಾರಿಸಿದ ಅಗ್ನಿ ಒಲೆಗಳಲ್ಲಿ ಸುಡುತ್ತಾರೆ. ಹೆಚ್ಚಿನ ಉಷ್ಣತೆಯಲ್ಲಿ ಕಸವನ್ನು ಸುಡುವುದರಿಂದ ಕೆಲವು ಸಮಸ್ಯೆಗಳನ್ನು ನಿವಾರಿಸುವುದು ಸಾಧ್ಯ. ಆದರೆ ಅದು ಅಂತಿಮವಾಗಿ ವಾಯುಮಾಲಿನ್ಯದಲ್ಲಿ ಪರ್ಯಾವಸಾನವಾಗುತ್ತದೆ ಎಂಬುದನ್ನು ಮರೆಯಬಾರದು.

. ಮಣ್ಣು ಮಾಲಿನ್ಯಕ್ಕೆ ಕೊಡುಗೆ : ಗೃಹ ಮೂಲ, ಕೈಗಾರಿಕಾ ಮೂಲ ಹಾಗೂ ಗಣಿಗಾರಿಕಾ ಮೂಲದ ಗಟ್ಟಿ ಕಸವನ್ನು ಕೊರಕಲು, ಗುಂಡಿಗಳನ್ನು ಮುಚ್ಚಲು ಉಪಯೋಗಿಸುವರು. ಅಂತಹ ಸ್ಥಳಗಳಲ್ಲಿ ಮಳೆ ನೀರು ನಿಂತಾಗ ಗಟ್ಟಿ ಕಸದಲ್ಲಿನ ವಿಷ ವಸ್ತುಗಳು ಕರಗಿ ಮಣ್ಣು ಮಾಲಿನ್ಯ ಉಂಟಾಗುವುದು. ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಕ್ರೋಮಿಯಂನಂತಹ ವಿಷವಸ್ತು ಮಣ್ಣಿನ ಮೂಲಕ ಅಂತರ್ಜಲವನ್ನು ಸೇರುವ ಸಾಧ್ಯತೆ ಇದೆ. ಪ್ಲಾಸ್ಟಿಕ್‌ನ ಚೂರುಗಳು ನೆಲದ ಮೇಲೆ ಹರಡಿರುತ್ತವಾದ್ದರಿಂದ ಸೂರ್ಯನ ಕಿರಣಗಳು ಮಣ್ಣಿನ ಮೇಲೆ ಬೀಳುವುದಿಲ್ಲ. ಇದರಿಂದ ಕೆಲವು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಸಾವುಂಟಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುವುದು. ಗಾಜು, ಸುಟ್ಟ ಮಣ್ಣು, ಸಿಮೆಂಟು ಪುಡಿ, ಇಟ್ಟಿಗೆ ಪುಡಿಗಳು ಸಹ ಮಣ್ಣಿನ ಫಲವತ್ತತೆಯನ್ನು ಕುಂದಿಸುತ್ತವೆ.

ಜೈವಿಕ ಔಷಧೀಯ ಕಸವನ್ನು ಮಣ್ಣಿನಲ್ಲಿ ಹೂಳುವುದರಿಂದಲೂ ಮಣ್ಣು ಮಾಲಿನ್ಯ ಉಂಟಾಗುವುದು.

. ಸ್ಥಳದ ಕೊರತೆ : ನಗರಗಳ ಗಟ್ಟಿ ಕಸ, ಕೈಗಾರಿಕಾ ತ್ಯಾಜ್ಯ ಹಾಗೂ ಗಣಿಗಾರಿಕೆಯ ತ್ಯಾಜ್ಯವನ್ನು ಬೀಳು ಹೊಲಗಳಲ್ಲಿ, ಕೊರಕಲು, ಗುಂಡಿಗಳಲ್ಲಿ ತುಂಬುತ್ತಾರೆ. ಆದರೆ ನಗರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗಣಿ ಉದ್ಯಮ ತೀವ್ರಗತಿಯಲ್ಲಿ ಏರುತ್ತಿದೆ. ಹಾಗಾಗಿ ಗಟ್ಟಿಕಸವನ್ನು ಸಂಗ್ರಹಿಸಿಡುವ ಜಾಗದ ಕೊರತೆ ಉಂಟಾಗುತ್ತಿದೆ. ಗುಜರಿ ವಸ್ತುಗಳು, ಕಚಡ, ಲೋಹದ ತುಂಡುಗಳು ಮುಂತಾದವನ್ನು ಎಸೆಯಲು ಜಾಗವಿಲ್ಲವಾಗುತ್ತಿದೆ.

ಗಟ್ಟಿ ಕಸದಿಂದ ಪ್ರಯೋಜನಗಳಿವೆಯೇ ?

ಗಟ್ಟಿ ಕಸದಿಂದ ಏನೆಲ್ಲಾ ಅನಾಹುತಗಳು, ಅಪಾಯಗಳು ಹಾಗೂ ಅನಾರೋಗ್ಯ ಉಂಟಾಗುತ್ತಿದ್ದರೂ, ಅದರಿಂದ ಅನೇಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ. ‘ಕಸದಿಂದ ರಸ’ ಪಡೆಯುವ ಮಾರ್ಗ ನಮಗೆ ತಿಳಿದಿರಬೇಕು. ಕಸದಲ್ಲಿನ ಸಂಪನ್ಮೂಲಗಳ ವಿಂಗಡನೆ, ಪುನರ್ಬಳಕೆ ಅಥವಾ ಪುನರ್ ಉತ್ಪಾದನೆಯಿಂದ ನಾವು ಆರ್ಥಿಕ ಲಾಭವನ್ನು ಪಡೆಯಬಹುದು ಮತ್ತು ನಿಸರ್ಗದ ಸಮತೋಲವನ್ನು ಕಾಪಾಡಬಹುದು.

. ಆರ್ಥಿಕ ಲಾಭ : ಗಟ್ಟಿ ಕಸದಲ್ಲಿನ ವಿವಿಧ ಘಟಕಗಳನ್ನು ಅರ್ಥಪೂರ್ಣವಾಗಿ ಪುರ್ನಬಳಕೆ ಮಾಡುವುದರಿಂದ ಸಾಕಷ್ಟು ಪ್ರಮಾಣದ ಲಾಭ ಪಡೆಯಲು ಸಾಧ್ಯವಿದೆ. ನಮ್ಮ ದೇಶದ ನಗರಗಳಲ್ಲಿ ಪ್ರತಿವರ್ಷ ಅರವತ್ತು ಲಕ್ಷ ಟನ್ನುಗಳಷ್ಟು ಜೈವಿಕ ಕಸ ಉಂಟಾಗುವುದು. ಅಲ್ಲದೆ ೭.೫ ಲಕ್ಷ ಟನ್ನುಗಳಷ್ಟು ಪ್ಲಾಸ್ಟಿಕ್ ಕಸ ಉಂಟಾಗುವುದು. ಪ್ರತಿ ಕೆ.ಜಿ. ಪ್ಲಾಸ್ಟಿಕ್‌ಗೆ ಮುಂಬಯಿ ಹಾಗೂ ದೆಹಲಿನಗರಗಳಲ್ಲಿ ೩ ರಿಂದ ೧೫ ರೂ.ಗಳ ಬೆಲೆಯಿದೆ. ಪ್ಲಾಸ್ಟಿಕನ್ನು ಪುನರ್‌ಬಳಕೆ ಮಾಡುವುದರಿಂದ ಪ್ರತಿವರ್ಷ ೨೫ ರಿಂದ ೩೯ ಲಕ್ಷ ರೂ.ಗಳನ್ನು ಪಡೆಯಬಹುದೆಂದು ‘ಟೆರಿ’ ಸಂಸ್ಥೆ ಅಂದಾಜು ಮಾಡಿದೆ.

. ಪರಿಸರ ರಕ್ಷಣೆ : ಗಟ್ಟಿ ಕಸದಲ್ಲಿರುವ ಕಾಗದವನ್ನು ಬೇರ್ಪಡಿಸಿ ಪುನಃ ಕಾಗದವನ್ನು ತಯಾರಿಸಲು ಉಪಯೋಗಿಸುವುದರಿಂದ ನಾವು ಅರಣ್ಯಗಳನ್ನು ಸಂರಕ್ಷಿಸಿದಂತಾಗುವುದು. ಬಿದಿರು ಸಸ್ಯಗಳು ಉಳಿಯುವುದರಿಂದ ವನ್ಯಜೀವಿಗಳು ಬದುಕಲು ಸಾಧ್ಯವಾಗುತ್ತದೆ. ಹಸಿರು ಹೊದಿಕೆ ಹೆಚ್ಚುವುದರಿಂದ ಮಣ್ಣಿನ ಸವಕಳಿ ತಪ್ಪುತ್ತದೆ. ಭೂ ಫಲವತ್ತತೆ ಹೆಚ್ಚುತ್ತದೆ. ಜಲಚಕ್ರ, ಆಮ್ಲಜನಕದ ಚಕ್ರ ಮುಂತಾದವು ಯಾವುದೇ ಏರುಪೇರಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

. ಸಂಪನ್ಮೂಲಗಳ ಸಂರಕ್ಷಣೆ : ನಾಗರೀಕತೆ ಮುಂದುವರೆದಂತೆ ಹಾಗೂ ಜನಸಂಖ್ಯೆ ಹೆಚ್ಚಿದಂತೆ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಉಂಟಾಗುತ್ತದೆ. ಉರುವಲು, ಕಾಗದ, ಮರಮುಟ್ಟು ಸಾಮಾನುಗಳಿಗಾಗಿ ಮರಗಳು ಬಲಿಯಾಗುತ್ತವೆ. ಗಟ್ಟಿ ಕಸದಲ್ಲಿನ ಜೈವಿಕ ಭಾಗವನ್ನು ಬೇರ್ಪಡಿಸಿ, ನೂತನ ತಂತ್ರಜ್ಞಾನದ ಸಹಾಯದಿಂದ ಜೈವಿಕ ಉರುವಲನ್ನು ಪಡೆಯಬಹುದು. ಅದೇ ರೀತಿ ಲೋಹಗಳನ್ನು ಸಹ ಪುನರ್ಬಳಕೆಗೆ ಉಪಯೋಗಿಸಬಹುದು. ಇಂತಹ ಕ್ರಮಗಳಿಂದ ಅರಣ್ಯನಾಶ ತಪ್ಪಿಸಬಹುದು. ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಅವನತಿಯನ್ನು ಕಡಿಮೆ ಮಾಡಬಹುದು. ಸಂಪನ್ಮೂಲಗಳ ಗರಿಷ್ಠ ಬಳಕೆ ಮಾಡಬಹುದು.

. ಉದ್ಯೋಗ : ಗಟ್ಟಿ ಕಸದ ಮರುಬಳಕೆಯನ್ನು ಆರಂಭಿಸುವುದರಿಂದ ಸಹಸ್ರಾರು ಜನರಿಗೆ ಉದ್ಯೋಗ ನೀಡಬಹುದು. ಕಸದಲ್ಲಿನ ಘಟಕಗಳನ್ನು ವಿಂಗಡಿಸುವುದಕ್ಕೆ, ಕಾಂಪೋಸ್ಟೀಕರಣ ಮಾಡುವುದಕ್ಕೆ ಎರೆಹುಳು ಕೃಷಿ ಮಾಡುವುದಕ್ಕೆ ಸಾವಿರಾರು ಜನರ ಅಗತ್ಯವಿದೆ. ಆದ್ದರಿಂದ ಸ್ವಲ್ಪ ಜನರಿಗಾದರೂ ಉದ್ಯೋಗ ನೀಡಲು ಇಲ್ಲಿ ಅವಕಾಶವಿದೆ. ಅವರ ಜೀವನ ಸುಗಮವಾಗಿ ಸಾಗಲು ಗಟ್ಟಿ ಕಸದ ನಿರ್ವಹಣೆ ಉತ್ತಮ ಮಾರ್ಗವಾಗಿದೆ.

. ಶಕ್ತಿ ಸ್ಥಾವರಗಳು : ಗಟ್ಟಿ ಕಸವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಮೂಲಕ ಶಕ್ತಿಯನ್ನು ಪಡೆಯಬಹುದು. ಗಟ್ಟಿಕಸ ಉತ್ಪಾದನೆಯಾಗುವ ಸ್ಥಳಗಳಲ್ಲಿಯೇ ಜೈವಿಕ ಅನಿಲ ಉತ್ಪಾದಿಸುವ ಸ್ಥಾವರಗಳನ್ನು ಸ್ಥಾಪಿಸಬಹುದು. ಪಡೆದಂತಹ ಜೈವಿಕ ಅನಿಲವನ್ನು ಅಡುಗೆ ತಯಾರಿಸಲು, ವಿದ್ಯುತ್ ಉತ್ಪಾದಿಸಲು ಹಾಗೂ ನೀರು ಸರಬರಾಜು ಮಾಡಲು ಬಳಸಬಹುದು.

ಮೇಲಿನ ಎಲ್ಲ ಸಾಧ್ಯತೆಗಳನ್ನು ಸಾಕಾರಗೊಳಿಸಲು ವ್ಯವಸ್ಥಿತವಾದ ಹಾಗೂ ವೈಜ್ಞಾನಿಕವಾದ ಪ್ರಯತ್ನ ಮಾಡಬೇಕು.

ಗಟ್ಟಿ ಕಸ ನಿರ್ವಹಣೆ ಹೇಗೆ ?

ಭಾರತದಲ್ಲಿ ಗಟ್ಟಿ ಕಸದ ಉತ್ಪಾದನೆ ತೀವ್ರವಾಗಿ ಏರುತ್ತಿದೆ. ಒಂದು ಕುಟುಂಬದ ಆರ್ಥಿಕ ಗಳಿಕೆಗೂ ಗಟ್ಟಿ ಕಸದ ಉತ್ಪಾದನೆಗೂ ನೇರವಾದ ಸಂಬಂಧವಿದೆ. ತಲಾವಾರು ಆದಾಯ ಹೆಚ್ಚಿದಂತೆ ಹೆಚ್ಚಿನ ಹಣವನ್ನು ಮನುಷ್ಯ ವಿವಿಧ ಸರಕು ಹಾಗೂ ಸೇವೆಗಳಿಗೆ ವಿನಿಯೋಗಿಸುತ್ತಾನೆ. ಆರ್ಥಿಕವಾಗಿ ಹಿಂದುಳಿದವ ಮಧ್ಯಮ ಆದಾಯ ವರ್ಗಕ್ಕೆ ಬದಲಾದಂತೆ ಸಮಾಜದಲ್ಲಿ ಗಟ್ಟಿ ಕಸದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಭಾರತದಲ್ಲಿ ಗಟ್ಟಿ ಕಸದ ಉತ್ಪಾದನೆಯು ಪ್ರತಿ ವರ್ಷ ೪೦,೦೦೦ ಮೆಟ್ರಿಕ್‌ಟನ್ನುಗಳಷ್ಟಿದೆ. ಕ್ರಿ.ಶ. ೨೦೩೦ರ ವೇಳೆಗೆ ಇದು ೧೨೫,೦೦೦ ಮೆಟ್ರಿಕ್ ಟನ್ನುಗಳಿಗಿಂತಲೂ ಹೆಚ್ಚಾಗಲಿದೆ. ೧೯೪೭ರಲ್ಲಿ ಭಾರತದ ಪಟ್ಟಣಗಳು ಹಾಗೂ ನಗರಗಳು ೬೦ ಲಕ್ಷ ಟನ್ನುಗಳಷ್ಟು ಗಟ್ಟಿಕಸವನ್ನು ಉತ್ಪತ್ತಿ ಮಾಡುತ್ತಿದ್ದವು. ೧೯೯೭ರಲ್ಲಿ ಗಟ್ಟಿ ಕಸ ಸುಮಾರು ೪೮೦ ಲಕ್ಷ ಟನ್ನುಗಳಷ್ಟಾಗಿತ್ತು. ಇಂದು ಗಟ್ಟಿ ಕಸದ ಸಂಗ್ರಹಣೆ ಹಾಗೂ ವಿಲೇವಾರಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ.  ಸುಮಾರು ೨೫%ರಷ್ಟು ಗಟ್ಟಿ ಕಸವನ್ನು ನಗರಸಭೆಗಳು ಸಂಗ್ರಹಿಸುವುದೇ ಇಲ್ಲ. ಸುಮಾರು ೭೦%ರಷ್ಟು ನಗರಗಳಲ್ಲಿ ಗಟ್ಟಿ ಕಸವನ್ನು ಸಾಗಾಟ ಮಾಡುವ ಸಾಮರ್ಥ್ಯವೇ ಇಲ್ಲ. ಅಲ್ಲದೆ ಗಟ್ಟಿ ಕಸ ಸಂಗ್ರಹಕ್ಕೆ ಬೇಕಾದ ಖಾಲಿ ಜಾಗ, ಕೊರಕಲು, ಗುಂಡಿಗಳೇ ನಗರಸಭೆ ನಿಯಂತ್ರಣದಲ್ಲಿಲ್ಲ. ಹಾಲಿ ಇರುವ ಕಸದ ರಾಶಿಗಳನ್ನು ಜಲ ಹಾಗೂ ಮಣ್ಣಿನ ಮಾಲಿನ್ಯ ಉಂಟಾಗದಂತೆ ರಕ್ಷಿಸಿಲ್ಲ.

ಗಣಿಗಾರಿಕೆ, ಕೈಗಾರಿಕೆ, ಆಸ್ಪತ್ರೆಗಳ ಗಟ್ಟಿ ಕಸದ ನಿರ್ವಹಣೆ ಇನ್ನೂ ಹೀನಾಯ ಸ್ಥಿತಿಯಲ್ಲಿದೆ. ಆದ್ದರಿಂದ ಗಟ್ಟಿ ಕಸದ ವೈಜ್ಞಾನಿಕ ನಿರ್ವಹಣೆಯು ಇಂದಿನ ಅಗತ್ಯ. ಗ್ರಾಮಾಂತರ ಪ್ರದೇಶದ ಹಾಗೂ ಕೃಷಿ ಮೂಲದ ಗಟ್ಟಿಕಸವು ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಕಸವನ್ನೇ ಹೊಂದಿರುವುದರಿಂದ ಸಮಸ್ಯೆ ತೀವ್ರವಾಗಿಲ್ಲ. ನಗರಗಳ, ಕೈಗಾರಿಕೆಗಳ, ಆಸ್ಪತ್ರೆಗಳ ಹಾಗೂ ಗಣಿಗಾರಿಕೆಗಳ ಗಟ್ಟಿಕಸದಲ್ಲಿ ವಿಷಕಾರಿ ಹಾಗೂ ಅಪಾಯಕಾರಿ ವಸ್ತುಗಳಿರುತ್ತವೆ. ವಿಘಟನೆಯಾಗದ ಅಂಶಗಳಿರುತ್ತವೆ. ಆರೋಗ್ಯವನ್ನು ಹದಗೆಡಿಸುವ ಹಾಗೂ ಪರಿಸರಕ್ಕೆ ಅಪಾಯ ಉಂಟು ಮಾಡುವ ವಸ್ತುಗಳಿರುತ್ತವೆ. ಅಲ್ಲದೆ ಜನರು ಪುನಃ ಬಳಸಬಹುದಾದ ಹಾಗೂ ಪುನರುತ್ಪಾದನೆ ಮಾಡಬಹುದಾದ ವಸ್ತುಗಳಿರುತ್ತವೆ. ಹಾಗಾಗಿ ಇಂತಹ ಗಟ್ಟಿ ಕಸದ ನಿರ್ವಹಣೆ ಹೆಚ್ಚು ವೈಜ್ಞಾನಿಕವಾಗಿರಬೇಕು.

ಸಾರ್ವಜನಿಕ ಆರೋಗ್ಯ, ಆರ್ಥಿಕತೆ, ಇಂಜಿನಿಯರಿಂಗ್, ಸಂರಕ್ಷಣೆ, ಸೌಂದರ್ಯ ಹಾಗೂ ಇತರೆ ಪರಿಸರದ ಅಂಶಗಳ ಅತ್ಯುತ್ತಮ ತತ್ವಗಳನ್ನು ಆಧರಿಸಿ ಗಟ್ಟಿ ಕಸದ ಉತ್ಪಾದನೆಯ ನಿಯಂತ್ರಣ, ಸಂಗ್ರಹ, ದಾಸ್ತಾನು, ಸಾಗಣೆ, ಸಂಸ್ಕರಣೆ ಹಾಗೂ ವಿಲೇವಾರಿಯ ಶಿಸ್ತನ್ನು ಗಟ್ಟಿ ಕಸದ ನಿರ್ವಹಣೆ ಎನ್ನುವರು.

ಗಟ್ಟಿ ಕಸದ ವಸ್ತುಗಳಲ್ಲಿ ಕೆಲವು ಮರುಬಳಕೆ ಹಾಗೂ ಮರುಉತ್ಪಾದನೆಗೆ ಬರುತ್ತವೆ. ಅಂತವನ್ನು ಪ್ರತ್ಯೇಕಿಸಿದ ನಂತರ ಉಳಿದ ಕಸವನ್ನು ಸಾಮಾನ್ಯವಾಗಿ ನಾಲ್ಕು ರೀತಿಯಲ್ಲಿ ವಿಲೇವಾರಿ ಮಾಡುವರು. ನೆಲದ ಮೇಲೆ ಹಾಕುವುದು, ನೀರಿನೊಳಕ್ಕೆ ಹಾಕುವುದು, ಮಣ್ಣಿಗೆ ಸೇರಿಸುವುದು ಹಾಗೂ ಸುಟ್ಟು ಹಾಕುವುದು. ನಾವೀಗ ಗಟ್ಟಿ ಕಸ ನಿರ್ವಹಣೆಗೆ ಕೆಲವು ಉದಾಹರಣೆಗಳನ್ನು ತೆಗೆದುಕೊಂಡು ಚರ್ಚಿಸೋಣ.

ನಗರಗಳ ಗಟ್ಟಿ ಕಸ :

ನಗರ ಗಟ್ಟಿ ಕಸವೆಂದರೆ ಅದರಲ್ಲಿ ಗೃಹಗಳಿಂದ ಹಾಗೂ ವಾಣಿಜ್ಯ ಸ್ಥಳಗಳಿಂದ ಉಂಟಾಗುವ ಗಟ್ಟಿ ಕಸ, ಘನ ರೂಪದ ಅಥವಾ ಪಾರ್ಶ್ವ ಘನರೂಪದ ಕಸವಿರಬಹುದು. ಕೈಗಾರಿಕೆಗಳ ಗಟ್ಟಿ ಕಸ ಪ್ರತ್ಯೇಕವಾದುದು. ಆದರೆ ಸಂಸ್ಕರಣೆಗೆ ಒಳಗಾದ ಜೈವಿಕ-ಔಷಧಿಯ ಕಸವನ್ನು ನಗರ ಗಟ್ಟಿ ಕಸ ಎನ್ನಲಾಗುವುದು.

ಗಟ್ಟಿ ಕಸದ ವಿಧಗಳು

ಗಟ್ಟಿ ಕಸದ ಪ್ರಮುಖ ಘಟಕಗಳು ಕಸದ ವಸ್ತುಗಳು
೧. ಸಾವಯವ ತ್ಯಾಜ್ಯ ಅಡುಗೆಮನೆ ತ್ಯಾಜ್ಯ, ತರಕಾರಿಗಳು, ಹೂವು, ಹಣ್ಣು, ಎಲೆಗಳು.
೨. ವಿಷಕಾರಿ ತ್ಯಾಜ್ಯ ಹಳೆಯ ಔಷಧಿಗಳು, ಬಣ್ಣಗಳು, ರಸಾಯನಿಕಗಳು ಬಲ್ಬುಗಳು, ರಸಗೊಬ್ಬರ, ಬ್ಯಾಟರಿಗಳು, ಚಪ್ಪಲಿ, ಕೀಟನಾಶಕದ ಬಾಟಲಿಗಳು, ಚೀಲಗಳು, ಬೂಡ್ಸು ಪಾಲಿಶ್.
೩. ಮಲಿನವಾದ ವಸ್ತುಗಳು ರಕ್ತ, ಗಾಯಗಳಿಂದ ಮಲಿನಗೊಂಡ ಹತ್ತಿ, ಬಟ್ಟೆ ಮುಂತಾದ ಆಸ್ಪತ್ರೆ ಕಸ.
೪. ಮರು ಉತ್ಪಾದಿಸ ಬಹುದಾದ ವಸ್ತುಗಳು ಕಾಗದ, ಗಾಜು, ಲೋಹಗಳು ಮತ್ತು ಪ್ಲಾಸ್ಟಿಕ್‌ಗಳು.

 ನಗರ ಗಟ್ಟಿಕಸದ ಸಂಯೋಜನೆ ಹಾಗೂ ಪ್ರಮಾಣ

 

ಸಂಯೋಜನೆ ಪ್ರತಿಶತ
೧. ಜೈವಿಕ ವಿಘಟನೆ ಹೊಂದಬಲ್ಲ ೫೨%
೨. ಲೋಹದ ಚೂರುಗಳು, ಬಟ್ಟೆ ಇತ್ಯಾದಿ ೧೧%
೩. ಕಲ್ಲುಗಳು ಹಾಗೂ ರಬ್ಬರ್ ೮%
೪. ಮರಳು ೨೩%
೫. ಪ್ಲಾಸ್ಟಿಕ್ ೧೦%
೬. ಕಾಗದದ ಉತ್ಪನ್ನಗಳು ೫%

ಕೇಂದ್ರ ಸರ್ಕಾರವು ನಗರದ ಗಟ್ಟಿ ಕಸ ನಿರ್ವಹಣೆಗೆ ಹಲವು ಕಾನೂನುಗಳನ್ನು ರಚಿಸಿದೆ. ಅವುಗಳ ಪ್ರಕಾರ ನಗರದ ಗಟ್ಟಿಕಸವನ್ನು ಕೆಳಕಂಡಂತೆ ಸಂಗ್ರಹಿಸಬೇಕು.

ರಾಜ್ಯ ಸರ್ಕಾರಗಳು ಗುರುತಿಸಿದ ಪಟ್ಟಣ, ನಗರ ಪ್ರದೇಶಗಳಲ್ಲಿ ನಗರದ ಗಟ್ಟಿ ಕಸ ಬಿಸಾಡುವನ್ನು ನಿಷೇಧಿಸಲಾಗಿದೆ. ಈ ಕೆಲಸವನ್ನು ನಿರ್ವಹಿಸಲು ನಗರ ಸಭೆ ಆಡಳಿತವು ಕೆಳಗೆ ಸೂಚಿಸಿದ ಕ್ರಮಗಳನ್ನು ತೆಗೆದುಕೊಳ್ಳಬಹುದು.

  • ಪ್ರತಿ ಮನೆಯಿಂದ ಗಟ್ಟಿ ಕಸವನ್ನು ಸಂಗ್ರಹಿಸಬೇಕು. ಈ ಕೆಲಸಕ್ಕೆ ಸಮುದಾಯದ ಕೇಂದ್ರ ತೊಟ್ಟಿ ಬಳಸಬಹುದು. ಪೂರ್ವ ನಿಧಾರಿತ ವೇಳೆಗೆ ಪ್ರತಿ ಮನೆಗೂ ಭೇಟಿ ನೀಡಬಹುದು. ಸಂಗ್ರಹ ಮಾಡುವ ವಾಹನಕ್ಕೆ ಗಂಟೆ ಕಟ್ಟಿ ಬಾರಿಸುವ ಮೂಲಕ ಸೂಚನೆ ನೀಡಬಹುದು ಅಥವಾ ಇಂತಹ ಯಾವುದೇ ವಿಧಾನದಿಂದ ಮನೆ, ಮನೆಯಿಂದ ಕಸವನ್ನು ಸಂಗ್ರಹಿಸಲು ಸಂಘಟನೆ ಮಾಡಬೇಕು.
  • ಕೊಳಗೇರಿ ಪ್ರದೇಶಗಳು, ಹೋಟೆಲುಗಳು, ಉಪಹಾರ ಮಂದಿರಗಳು, ಕಛೇರಿ ಸಂಕೀರ್ಣಗಳು ಹಾಗೂ ವಾಣಿಜ್ಯ ಪ್ರದೇಶಗಳಿಂದ ಕಸವನ್ನು ಸಂಗ್ರಹಿಸಲು ಸೂಕ್ತ ವಿಧಾನಗಳನ್ನು ರೂಪಿಸಬೇಕು.
  • ಪ್ರಾಣಿ ವಧಾ ಸ್ಥಳಗಳಿಂದ, ಮಾಂಸ ಹಾಗೂ ಮೀನು ಮಾರಾಟ ಕೇಂದ್ರಗಳಿಂದ, ತರಕಾರಿ ಮಾರುಕಟ್ಟೆಗಳಿಂದ ಕಸವನ್ನು, ಅದರಲ್ಲಿಯೂ ಜೈವಿಕವಾಗಿ ವಿಘಟಿಸಬಲ್ಲ ಕಸವನ್ನು ಸಂಗ್ರಹಿಸಿ, ಅಂತಹ ಕಸದ ಯುಕ್ತ ಬಳಕೆಯಾಗುವಂತೆ ಮಾಡಬೇಕು.
  • ಜೈವಿಕ-ಔಷಧೀಯ ಕಸವನ್ನು ಹಾಗೂ ಕೈಗಾರಿಕಾ ಕಸವನ್ನು ನಗರ ಗಟ್ಟಿ ಕಸದೊಡನೆ ಬೆರೆಸಬಾರದು. ಅವುಗಳಿಗೆ ರೂಪಿಸಿರುವ ನಿಯಮಾನುಸಾರವಾಗಿ ಆ ಕಸಗಳನ್ನು ವಿಲೇವಾರಿ ಮಾಡಬೇಕು.
  • ಮನೆಗಳಿಂದ ಮತ್ತು ಇತರೆ ಪ್ರದೇಶಗಳಿಂದ ಕಸವನ್ನು ತಳ್ಳುವ ಗಾಡಿಗಳಿಂದ ಅಥವಾ ಪುಟ್ಟ ವಾಹನಗಳ ಬಳಕೆಯಿಂದ ಗಟ್ಟಿ ಕಸವನ್ನು ಸಂಗ್ರಹಿಸಿ ಅನಂತರ ಕೇಂದ್ರ ಕಸದ ತೊಟ್ಟಿಗೆ ವರ್ಗಾವಣೆ ಮಾಡಿಕೊಳ್ಳಬೇಕು.
  • ಕಟ್ಟಡಗಳ ನಿರ್ಮಾಣ ಅಥವಾ ಕೆಡವಿ ಹಾಕುವ ಸಂದರ್ಭದಲ್ಲಿ ಉಂಟಾಗುವ ಗಟ್ಟಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು ಹಾಗೂ ಸೂಕ್ತ ಕ್ರಮಗಳನ್ನು ಅನುಸರಿಸಿ ವಿಲೇವಾರಿ ಮಾಡಬೇಕು. ಅದೇ ರೀತಿ ಹಾಲು ಉತ್ಪಾದನಾ ಕೇಂದ್ರಗಳಿಂದ ಉಂಟಾಗುವ ಕಸವನ್ನು ರಾಜ್ಯದ ಕಾನೂನುಗಳಿಗೆ ಅನುಗುಣವಾಗಿ ನಿಯಂತ್ರಿಸಬೇಕು.
  • ಕಸವನ್ನು (ಹೊಲಸು, ಒಣಗಿದ ಎಲೆಗಳು) ಸುಡುವಂತಿಲ್ಲ.
  • ಕಸ ಸಂಗ್ರಹಣಾ ಪ್ರದೇಶಗಳಲ್ಲಿ ಅಥವಾ ನಗರ ಅಥವಾ ಪಟ್ಟಣದ ಯಾವುದೇ ಪ್ರದೇಶದಲ್ಲಿ ಬೀದಿ ಪ್ರಾಣಿಗಳು ಓಡಾಡಲು ಬಿಡಬಾರದು.