ಶುಂಠಿ ಬೆಳೆ – ಅತಿ ಹೆಚ್ಚು ರಾಸಾಯನಿಕ ಉಂಡು ಬೆಳೆಯುವ ಬೆಳೆ ಎಂಬ ಖ್ಯಾತಿ ಪಡೆದಿದೆ. ನಾಟಿಯಿಂದ ಹಿಡಿದು ಕೊಯ್ಲಾಗುವವರೆಗೂ ಅನೇಕ ಬಾರಿ ರಾಸಾಯನಿಕ ಗೊಬ್ಬರ – ಕೀಟನಾಶಕಗಳ ಜೊತೆ ಒಡನಾಟವಿಟ್ಟುಕೊಳ್ಳುವ ಈ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ.

ಒಂದು ಕಡೆ ಚಿನ್ನದ ಬೆಲೆ ಗಳಿಸಿರುವ ಈ ಶುಂಠಿಗೆ ರಾಸಾಯನಿಕ ಸುರಿದು ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೆಲವು ರೈತರು ತಮ್ಮ ‘ಸ್ಥಳೀಯ ತಳಿ ಶುಂಠಿ’ಯನ್ನು ರಾಸಾಯನಿಕ ಸೋಕಿಸದೇ ಬೆಳೆಯುತ್ತಿದ್ದಾರೆ. ಅಂಥ ರೈತರಲ್ಲಿ ಫಲ್ಗುಣಿಯ ಕೃಷಿಕ ಗೋಪಾಲ್ ಕೂಡ ಒಬ್ಬರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಫಲ್ಗುಣಿ ಗ್ರಾಮದ ಕೃಷಿಕ ಗೋಪಾಲ್ ಅವರದ್ದು ಆರು ಎಕರೆ ತೋಟ. ಅದರಲ್ಲಿ ಕಾಫಿ, ಶುಂಠಿ, ಏಲಕ್ಕಿ, ಕಾಳು ಮೆಣಸು, ಹಣ್ಣುಗಳಾದ ಮಾವು, ಹಲಸು, ಸೀಬೆ, ಪಪ್ಪಾಯ, ನೇರಳೆ ಇತ್ಯಾದಿ ಗಿಡಗಳು. ಅದರ ಜೊತೆಯಲ್ಲಿ ನೂರಾರು ಜಾತಿಯ ಕಾಡು ಮರಗಳು ಇವೆ. ತಮ್ಮ ಹತ್ತು ಗುಂಟೆ ಜಾಗದಲ್ಲಿ ಕಾಫಿ ಜೊತೆಗೆ ಮಿಶ್ರ ಬೆಳೆಯಾಗಿ ನಾಟಿ ಶುಂಠಿ ಬೆಳೆಯುತ್ತಿದ್ದಾರೆ.

ನಾಟಿಗೆ ಮುನ್ನ:

ಶುಂಠಿ ಬೆಳೆಯುವುದಕ್ಕೆ ಗೋಪಾಲ್ ತೋಟದಲ್ಲಿ ಪ್ರತ್ಯೇಕ ಸ್ಥಳವಿಲ್ಲ. ಕಾಫಿ ತೋಟದ ಒಂದು ಬದಿಯಲ್ಲಿ ಶುಂಠಿ ನಾಟಿ ಮಾಡುತ್ತಾರೆ. ‘ಶುಂಠಿ ನಾಟಿ ಮಾಡುವ ಮುನ್ನ ಮಣ್ಣಿನ ಬೆಡ್ ತಯಾರಿಸಬೇಕು. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಸುಣ್ಣವನ್ನು ಮಣ್ಣಿನೊಂದಿಗೆ ಮಿಶ್ರ ಮಾಡಿದರೆ ಮಣ್ಣಿನ ಬೆಡ್ ಸಿದ್ಧವಾಗುತ್ತದೆ. ಈ ಬೆಡ್‌ಮೇಲೆ ಶುಂಠಿ ಬೀಜ ನಾಟಿ ಮಾಡುತ್ತೇನೆ’ ಎನ್ನುತ್ತಾರೆ ಗೋಪಾಲ್.

ಮಣ್ಣಿನ ಬೆಡ್ ನೆಲದಿಂದ ಒಂದು ಅಡಿ ಎತ್ತರ, ಎರಡರಿಂದ ಮೂರು ಅಡಿ ಅಗಲ, ಉದ್ದಕ್ಕೆ ಮಿತಿಯಿಲ್ಲ. ಮಡಿಯಿಂದ ಮಡಿಗೆ ಮೂರು ಅಡಿ ಅಂತರ. ನೀರು ಹರಿದು ಹೋಗುವಂತೆ ಸುತ್ತ ಕಾಲುವೆ ನಿರ್ಮಾಣ ಮಾಡಬೇಕು. ‘ಕಾಫಿ ತೋಟದಲ್ಲಿ ನೀರು ಬಸಿದು ಹೋಗುವುದರಿಂದ ಶುಂಠಿ ಬೆಳೆಯಲು ಸೂಕ್ತ’ ಎನ್ನುವುದು ಅವರ ಅಭಿಪ್ರಾಯ.

ಬೆಡ್ ತಯಾರಿಸಿದ ನಂತರ ಬಲಿತ ಶುಂಠಿಯನ್ನು ನೆಲದಿಂದ ಎರಡು ಇಂಚು ಬಿಟ್ಟು ಕತ್ತ್ತರಿಸಿ ಬೇರು ಸಮೇತ ಮಣ್ಣಿನ ಹಾಸುಗಳಲ್ಲಿ ನೆಡುತ್ತಾರೆ. ಆಗಸ್ಟ್ – ಸೆಪ್ಟೆಂಬರ್ ತಿಂಗಳು ನಾಟಿ ಮಾಡುವುದಕ್ಕೆ ಸೂಕ್ತ ಕಾಲ. ನಾಟಿ ಮಾಡಿದ ಹದಿನೈದು ದಿನಗಳ ನಂತರ ಜೀವಾಮೃತ ಮತ್ತು ಗಂಜಲವನ್ನು ಪ್ರತಿ ಗುಣಿಗೆ ಚಿಮುಕಿಸುತ್ತಾರೆ. ಮೂರು – ನಾಲ್ಕು ತಿಂಗಳ ನಂತರ ಮಳೆ ಕಡಿಮೆಯಾದಾಗ ಕಳೆ ಕಿತ್ತು ಮೇಲು ಗೊಬ್ಬರ ಕೊಟ್ಟು ಸೊಪ್ಪು ತರಗೆಲೆ ಮುಚ್ಚುತ್ತಾರೆ. ಮೇ – ಜೂನ್ ಹೊತ್ತಿಗೆ ಶುಂಠಿ ಬೆಳೆಯಲು ಪ್ರಾರಂಭವಾಗುತ್ತದೆ.

ಮೂಲತಃ ಶುಂಠಿಗೆ ರೋಗದ ಕಾಟ ಹೆಚ್ಚು. ಪ್ರಮುಖವಾಗಿ ಕಾಂಡಕೊರಕ ರೋಗದ ಬಾಧೆ ಕಾಡುತ್ತದೆ. ಈ ರೋಗವನ್ನು ಹತೋಟಿಗೆ ತರಲು ಗಂಜಲ ಅಥವಾ ಜೀವಾಮೃತವನ್ನು ಹಾಕುತ್ತೇವೆ. ರೋಗ ಬಂದಾಗ ಮಾತ್ರ ಈ ಚಿಕಿತ್ಸೆ ಎನ್ನುತ್ತಾರೆ ಗೋಪಾಲ್.

ಇಳವರಿಯವರಿಯಿಲ್ಲ :

ಹೈಬ್ರಿಡ್ ತಳಿಗೆ ಹೋಲಿಸಿದರೆ ನಾಟಿ ಶುಂಠಿ ಫಸಲು ನೀಡುವುದು ನಿಧಾನ. ಅಂದರೆ ನಾಟಿ ಮಾಡಿ ಎರಡು ವರ್ಷದ ಬಳಿಕ ನಾಟಿ ಶುಂಠಿ ಫಸಲು ಆರಂಭವಾಗುತ್ತದೆ. ಇಳುವರಿಯೂ ಕಡಿಮೆ. ಆದರೆ ರುಚಿ, ಆರೋಗ್ಯದ ವಿಷಯದಲ್ಲಿ ನಾಟಿಯೇ ಶ್ರೇಷ್ಠ. ‘ಭೂಮಿಗೆ ವಿಷ ಉಣಿಸಿ ಹೈಬ್ರಿಡ್ ತಳಿ ಬಿತ್ತಿ ಉತ್ತಮ ಫಸಲನ್ನೇನೋ ಪಡೆಯಬಹುದು. ಆದರೆ, ವಿಷವುಣಿಸಿದ ಭೂಮಿಯ ಫಲವತ್ತತೆ ಕುಸಿಯುತ್ತದೆ’ ಎನ್ನುವುದು ಗೋಪಾಲ ಅವರ ಅನುಭವದ ಮಾತು.

ಪ್ರಸ್ತುತ ಗೋಪಾಲ್ ಅವರು ನಾಟಿ ಶುಂಠಿ ಬಿತ್ತಿ ಎಕರೆಗೆ ಐದರಿಂದ ಆರು ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ. ‘ಮಾರುಕಟ್ಟೆಯಲ್ಲಿ ನಾಟಿ ಶುಂಠಿಗೆ ಉತ್ತಮ ಬೆಲೆಯಿದೆ. ಕ್ವಿಂಟಾಲ್‌ಗೆ ಮೂರರಿಂದ ನಾಲ್ಕು ಸಾವಿರದ ತನಕ ಮಾರಾಟವಾಗುತ್ತದೆ. ತರಕಾರಿ ಅಂಗಡಿಯವರು, ಸ್ಥಳೀಯ ವ್ಯಾಪಾರಿಗಳೇ ನಮ್ಮ ಶುಂಠಿಯ ಪ್ರಮುಖ ಗ್ರಾಹಕರು. ಮಾತ್ರವಲ್ಲ, ಕೇರಳ, ಮಂಗಳೂರಿನ ಮಾರುಕಟ್ಟೆಗೂ ಈ ಶುಂಠಿ ಸರಬರಾಜಾಗುತ್ತದೆ. ನಾಟಿ ಶುಂಠಿಯ ಪರಿಮಳ ಪಕ್ಕದ ರಾಜ್ಯಕ್ಕೂ ಮುಟ್ಟುತ್ತಿರುವುದು ಸಂತಸದ ವಿಷಯ’ ಎಂದರು ಗೋಪಾಲ್

ವಿಷವುಣಿಸಿ ಶುಂಠಿ ಬೆಳೆದ ಸ್ಥಳದಲ್ಲಿ ಏನೂ ಬೆಳೆಯುವುದಿಲ್ಲ ಎನ್ನುವ ಮಾತಿದೆ. ಆದರೆ ಗೋಪಾಲ್ ಅವರು ವಿಷವುಣಿಸದೇ ಶುಂಠಿ ಬೆಳೆದು ಅದರ ಜೊತೆಯಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಬಹುದೆಂದು ತೋರಿಸಿದ್ದಾರೆ.

ನಾಟಿ ಶುಂಠಿ ಕೃಷಿ ಕುರಿತ ಹೆಚ್ಚಿನ ಮಾಹಿತಿಗೆ ಗೋಪಾಲ್ ಅವರ ದೂರವಾಣಿ ಸಂಖ್ಯೆ: ೯೮೮೬೫೭೭೨೮೪ ಸಂಪರ್ಕಿಸಬಹುದು.