ಶ್ರೀಗಂ ವಿಶುದ್ಧ ಕೀರ್ತಿ
ಶ್ರೀಗಂ ನೆಲೆಯಪ್ಪೆನೆಂಬ ಮಹಿಪತಿ ರಭಸೋ-
ದ್ಯೋಗಮನುೞ*ದು ಪರೀಕ್ಷಕ
ನಾಗಲ್ವೇೞ್ಪುದು ಸಮಸ್ತಕಾರ‍್ಯಂಗಳೊಳಂ  ೨೪೫

ವಿಪುಳನಯಶಾಸ್ತ್ರ ವಾರಾ
ಶಿ ಪಾರಗಂ ಸುಕವಿ ಸಂವಿಗ್ರಹಿ ದುರ್ಗಂ
ನೃಪಹಿತಮಂ ಪೇೞ್ಗುಂ ಸಲೆ
ಸುಪರೀಕ್ಷಾತಂತ್ರಮಂ ಜಗಜ್ಜನವಿನುತಂ  ೨೪೬

ಶ್ಲೋ|| ಯೋರ್ಥ ತತ್ತ್ವಮವಿಜ್ಞಾಯ ವಶಂ ಕ್ರೋಧಸ್ಯ ಗಚ್ಛತಿ
ಸೋಚಿರಾದ್ಭ್ರಂಶಯೇನ್ಮಿತ್ರಂ ಬ್ರಾಹ್ಮಣೋ ನಕುಲಂಯಥಾ  ||೧೩೦||

ಟೀ|| ಆವನಾನೊರ್ವಂ ಕಾರ‍್ಯದ ನಿಜವನಱ*ಯದೆ ಕೊಪಿಸಿಹಂ, ಅವಂ ಬೇಗದಿಂ ಮಿತ್ರನಂ ಕಿಡಿಸುವಂ, ಅದೆಹಗೆಂದೊಡೆ ಬ್ರಾಹ್ಮಣಂ ಮುಂಗುರಿಯಂ ಕಿಡಿಸಿದಹಗೆ.

೨೪೫.   ಸಂಪತ್ತಿಗೂ ಕೀರ್ತಿಗೂ ನೆಲೆಯಾಗಬೇಕೆಂಬ ಮಹೀಪತಿಯು ರಭಸೋದ್ಯೋಗವನ್ನು ಬಿಟ್ಟು ಸಮಸ್ತ ಕಾರ್ಯಗಳಲ್ಲೂ  ಪರೀಕ್ಷಕನಾಗಿ ವರ್ತಿಸಬೇಕು. ೨೪೬. ಅನೇಕ ನೀತಿಶಾಸ್ತ್ರ ಸಮುದ್ರಪಾರಂಗತನೂ, ಸುಕವಿಯೂ, ಸಂವಿಗ್ರಹಿಯೂ ಆದ ದುರ್ಗಸಿಂಹನು ಜಗಜ್ಜನವು ಹೊಗಳಿದ, ರಾಜರಿಗೆ ಹಿತವಾದ ಪರೀಕ್ಷಾತಂತ್ರವನ್ನು  ಹೇಳುವನು. ಶ್ಲೋ || ಯಾವನಾದರೂ ಕಾರ್ಯದ ಸತ್ಯಾಂಶವನ್ನರಿಯದೆ ಕೋಪಿಸಿಕೊಳ್ಳುವವನೂ ಬ್ರಾಹ್ಮಣನು ಮುಂಗುರಿಯನ್ನು ಕೊಂದಂತೆ ಬೇಗನೆ ಮಿತ್ರನನ್ನು ಕಳೆದುಕೊಳ್ಳುವನು. ವ|| ಆ ಕಥೆ ಏನೆಂದರೆ,