ನನ್ನ ಹೆಸರು ರಮಾ. ತೀರ್ಥಹಳ್ಳಿ ಸಮೀಪದ ಒಂದು ಚಿಕ್ಕಹಳ್ಳಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದುಬಂದವಳು. ಓದಿನಲ್ಲಿ ಪ್ರತಿಭಾವಂತಳಲ್ಲದಿದ್ದರೂ ದಡ್ಡಿಯಾಗಿರಲಿಲ್ಲ. ನಾನು ಬಿ..ಯನ್ನು ತೀರ್ಥಹಳ್ಳಿಯಲ್ಲಿ ಮುಗಿಸಿ ಇದೀಗ ಮೈಸೂರಿನಲ್ಲಿ ಎಂ.. ಮಾಡುತ್ತ ಇದ್ದೇನೆ.

ನಾನು ಆಸೆ ಆಕಾಂಕ್ಷೆಗಳನ್ನಿಟ್ಟುಕೊಂಡು ಎಂ.. ಮಾಡಲು ಬಂದೆ. ಎಲ್ಲರಿಗೂ ಇದು ವರವಾಗಿ ಪರಿಣಮಿಸಿದರೆ ನನಗೆ ಶಾಪವಾಗಿ ಪರಿಣಮಿಸಿದೆ. ಫಸ್ಟ್ ಇಯರ್ನಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಬೇಕೆಂಬ ಆಸೆ ಇಟ್ಟುಕೊಂಡ ಮೊದಲಿನಿಂದಲೂ ತಯಾರಿ ನಡೆಸಿದ್ದೆ. ಆದರೆ ಎಕ್ಸಾಮ್ಸ್ ಎರಡುದಿನ ಇರುವಾಗಲೇ ಒಂದು ಮನೋದ್ವೇಗಕ್ಕೆ ಮನೋವಿಕಾರಕ್ಕೆ ಬಲಿಯಾದೆ. ಪರೀಕ್ಷೆಯ ಬಗ್ಗೆ ವಿಪರೀತ ಭಯ ಶುರುವಾಯಿತು. ದಿನಾ ಏಕಾಗ್ರತೆಯೇ ಇಲ್ಲದೆ ಎಷ್ಟು ಓದಿದರೂ ಅರ್ಥವಾಗುತ್ತಿರಲಿಲ್ಲ. ಎದೆಯಲ್ಲಿ ಡವಗುಟ್ಟುವಿಕೆ, ತಲೆ, ಹೊಟ್ಟೆಯಲ್ಲಿ ನೋವಾದಂತೆ, ಏನೋ ಭಾರವಾದ ವಸ್ತು ಇಟ್ಟಂತಾಗುವುದು, ನಡುಕ, ತಲೆಸುತ್ತು, ಮೈಬಿಸಿ ಏರಿದ ಹಾಗಾಗಿ ಬೆವರುವಿಕೆ ಹೀಗೆ ಹಲವಾರು ರೀತಿಯಲ್ಲಿ ಬಳಲಿದೆ. ಕೊನೆಗೂ ನನ್ನ ಯತ್ನಕ್ಕೆ ತಕ್ಕ ಫಲ ಸಿಗಲಿಲ್ಲ. ನನ್ನ ಆಸೆಗಳೆಲ್ಲ ನುಚ್ಚು ನೂರಾಗಿವೆ.

ಫಸ್ಟ್ ಇಯರ್ ಎಕ್ಸಾಮ್ಸ್ಮುಗಿದು ಆಗಲೆ ಐದು ಆರು ತಿಂಗಳಾಗಿದೆ. ಆಗ ಪರೀಕ್ಷಾ ಕೊಠಡಿಯಲ್ಲಿ ಓದಿದ್ದೆಲ್ಲಾ ಮರೆತಂತೆ ಭಾಸವಾಗಿತ್ತು. ಬಿದ್ದು ಬಿಟ್ಟೇನೇ ಎನಿಸಿತ್ತು. ಈಗಲೂ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಮನಸ್ಸಿನ ತುಂಬಾ ಭೀತಿ ತುಂಬಿಹೋಗಿದೆ. ಯಾವುದಕ್ಕೂ ಹೆದರಬಾರದೆಂದು ಕೊಂಡರೂ ಸಾಧ್ಯವಾಗುತ್ತಿಲ್ಲ. ಎದೆಯಲ್ಲಿ ವಿಪರೀತ ಡವಗುಟ್ಟುವಿಕೆ, ತಲೆಸುತ್ತು, ತಲೆತಿರುಗದ ಅನುಭವ, ಯಾವುದರ ಬಗ್ಗೆಯೂ ಏಕಾಗ್ರತೆ ಇಲ್ಲ. ತಲೆಕುತ್ತಿಗೆಯಲ್ಲಿ ಭಾರವಾದ ಹಾಗೆ (ನೋವಿಲ್ಲ), ಮಾತನಾಡಲು ನಾಲಿಗೆ ತೊದಲಿದಂತಾಗುವುದು, ಓದಿದ್ದು ಸಂಪೂರ್ಣ ಮರೆತುಹೋಗುತ್ತದೆ.

ನನ್ನ ಸಮಸ್ಯೆಯನ್ನು ಯಾರಿಗೂ ಹೇಳಿಕೊಳ್ಳಲಾರದವಳಾಗಿದ್ದೇನೆ. ದಿನವೂ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುತ್ತೇನೆ. ಆತ್ಮಸ್ಥೈರ್ಯವೇ ಹೊರಟುಹೋಗಿದೆ. ಚಿಂತೆಯಿಂದ ನಿದ್ದೆ ಬರುತ್ತಿಲ್ಲ.

ಪರೀಕ್ಷೆಗೆ ಹೆದರಿ ಹೀಗಾಗಿದೆ ಎಂದುಕೊಂಡಿದ್ದ. ಕ್ರಮೇಣ ಸರಿಹೋಗಬಹುದೆಂದು ಕೊಂಡಿದ್ದು ಈಗ ಇನ್ನೂ ತೀವ್ರವಾಗಿದೆ. ಡಿಸೆಂಬರ್ ೨೫ ರಿಂದ ಇಂಟರ್ನಲ್ ಎಕ್ಸಾಮ್ಸ್ ಇದೆ. ಅದನ್ನು ಎದುರಿಸುವ ಶಕ್ತಿಯೇ ನನ್ನಲ್ಲಿಲ್ಲ.

ಇನ್ನು ಐದು ಆರು ತಿಂಗಳಲ್ಲಿ ಎಕ್ಸಾಮ್ ಶುರುವಾಗುತ್ತದೆ. ನನ್ನ ಭವಿಷ್ಯವೆಲ್ಲ ಪರೀಕ್ಷೆ ಫಲಿತಾಂಶದ ಮೇಲೆ ನಿಂತಿದೆ.

ಡಾಕ್ಟರ್, ನಾನೊಬ್ಬಳು ಮನೋರೋಗಿಯೇ? ಇದಕ್ಕೆ ಏನಾದರೂ ಚಿಕಿತ್ಸೆ ಇದೆಯೇ ನಾನು ಮೊದಲಿನಂತೆಯೇ ಆಗಬಲ್ಲೆನು? ನನ್ನ ಮಾನಸಿಕ ತುಮುಲವನ್ನು ನನಗೆ ತಡೆದುಕೊಳ್ಳಲೇ ಆಗುತ್ತಿಲ್ಲ. ನನ್ನ ಮರೆವಿಗೆ ಮದ್ದು ಇದೆಯೇ? ಭೀತಿಗೆ ಕೊನೆಯಿದೆಯೇ?

ಈ ಆತಂಕದ ಸ್ಥಿತಯನ್ನು ಪರೀಕ್ಷಾ ಭೀತಿ ಎಕ್ಸಾಮಿನೇಷನ್ ಫೋಬಿಯಾ’ ಎಂದು ಕರೆಯುತ್ತಾರೆ. ಇದು ಮನೋರೋಗವಲ್ಲ. ಭಯಕ್ಕೆ ಮಹತ್ವ ಕೊಟ್ಟಾಗ ಫೋಬಿಯಾ ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕಾಗಿ ಕೆಲವು ಮೂಲಭೂತ ಪರೀಕ್ಷಾ ನೀತಿ ತತ್ವಗಳನ್ನು ಗಮನಿಸಿ.

೧.   ಹೆಚ್ಚು ಓದಿದರೆ ಅಂಕ ಬರುತ್ತದೆ ಎಂಬ ಮೂಢನಂಬಿಕೆ ಬಿಡುವುದು. ಹಾಲನ್ನು ಎಷ್ಟೆ, ಸುರಿದರೂ ಪಾತ್ರೆ ತನ್ನ ಗಾತ್ರಕ್ಕನುಗುಣವಾಗಿ ಅದನ್ನು ಉಳಿಸಿಕೊಳ್ಳಬಹುದೇ ವಿನಾ ಮೀರಿದ ಹಾಲು ಅನವಶ್ಯಕವಾಗಿ ಹೊರಚೆಲ್ಲುವುದು.

೨.    ನಮ್ಮೆಲ್ಲರಿಗೂ ಗ್ರಹಣಶಕ್ತಿಯ ಪೂರ್ವನಿಗದಿತ ವಿನ್ಯಾಸಗಳಿವೆ. ನಿಜವಾದ ಮರೆವು ಮುಪ್ಪಿನಲ್ಲಿ ಅಥವಾ ಅಪಘಾತದಲ್ಲಿ ಮೆದುಳಿಗೆ ಪೆಟ್ಟಾದಾಗ ಮಾತ್ರ ಕಾಣಿಸಿಕೊಳ್ಳುತ್ತದೆ. ನಾವು ಮರೆವು ಎಂದು ತಿಳಿದುಕೊಳ್ಳುವುದು ಸಬ್ಜೆಕ್ಟೀವ್ ಫರ್ಗೆಟ್ಫುಲ್ನೆಸ್  ಮಾತ್ರ. ನೆನಪಿನ ಕ್ರಿಯೆ ಮೂರು ಹಂತದಲ್ಲಿ ಆಗುತ್ತದೆ; ನೋಂದಣಿ ಆಗುವುದು (ರೀಜಿಸ್ಟ್ರೇಶನ್), ಹಿಡಿದಿಟ್ಟು ಕೊಳ್ಳುವುದು? (ರಿಟೆನ್ಷನ್) ನೆನಪಿಸಿಕೊಳ್ಳುವಿಕೆ (ರಿಕಾಲ್). ಈ ಗತಿಯಲ್ಲಿ ಪ್ರತಿಯೊಬ್ಬರ ಗ್ರಹಣಬುದ್ಧಿ ಶಕ್ತಿ ಕಾರ್ಯನಿರ್ವಹಿಸುತ್ತದೆ. ಆತಂಕವನ್ನು ನಿರ್ಲಕ್ಷಿಸಿ, ನೆನಪು ಸರಿಯಾದೀತು.

೩.    ಮನೋಶಕ್ತಿಯನ್ನು ಮಿತವ್ಯಯದಿಂದ ಬಳಸಿ. ವ್ಯಾವಹಾರಿಕವಾಗಿ ನಾವು ಹಣವನ್ನು ಯಾವ ರೀತಿ ಪೂರ್ವನಿಗದಿತ ಆಯವ್ಯಯ ಪಟ್ಟಿಯನ್ನು ಬಳಸುವಂತೆ ಮನೋಶಕ್ತಿಯನ್ನು ಬುದ್ಧಿಶಕ್ತಿ, ವಿಚಾರಶಕ್ತಿ, ಯೋಚನೆ, ಏಕಾಗ್ರತೆ ಮುಂತಾದ ವಿಭಿನ್ನ ಘಟಕಗಳಿಗೆ ಸಮ ಪ್ರಮಾಣದಲ್ಲಿ ಬಳಸಿ.

೪.   ದಯವಿಟ್ಟು ನಿಮ್ಮ ನೆನಪಿನ ಶಕ್ತಿಯ ಬಗ್ಗೆ ಗೂಢಚರ್ಯೆ ನಡೆಸಬೇಡಿ.

೫.   ಸಮಯದ ಅಭಾವದ ನೆಪಮಾಡಿ ಫಲಾಯನವಾದಿಗಳಾಗಬೇಡಿರಿ. ದಯವಿಟ್ಟು ಗಮನಿಸಿ. ಒಂದು ದಿನದಲ್ಲಿರುವ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಏಳು ಗಂಟೆ ನಿದ್ರೆ ಆರುಗಂಟೆ ಕಾಲೇಜಿನ ಪಾಠ ಪ್ರವಚನಗಳು, ಒಂದು ಗಂಟೆ ಆಟದ ಮೈದಾನ, ಮತ್ತೆರಡು ಗಂಟೆ ದಿನಚರಿಯ ಇತರ ಕಾರ್ಯಕ್ರಮಗಳಿಗೆ ಬಳಸಿದರೂ ಕನಿಷ್ಟ ಎಂಟು ಗಂಟೆ ಓದಲು ಬಿಡುವಿನ ಸಮಯ ದೊರೆಯುತ್ತದೆ. ಈ ಸಮಯದಲ್ಲಿನ ಅಭ್ಯಾಸ, ಎಷ್ಟೇ ಕಷ್ಟ ಪರೀಕ್ಷೆಯನ್ನು ಸುಲಭವಾಗಿ ತೇರ್ಗಡೆ ಆಗಲು ಸಾಕು.

೬.   ಪರೀಕ್ಷಾ ಪದ್ಧತಿಯ ಅವ್ಯವಸ್ತೆಗೆ ನೀವು ಪಾಲುದಾರರಾಗದಿರಿ. ವಿಶ್ವವಿದ್ಯಾನಿಲಯ, ವಿದ್ಯಾಲಯದ ವಾತಾವರಣದಲ್ಲಿನ ಅರಾಜಕತೆ, ಅಶಿಸ್ತು ಅಸಮರ್ಪಕ ನಿರ್ವಹಣೆ, ವಿದ್ಯಾರ್ಥಿಯ ಚಿತ್ತ ಶಾಂತಿಯನ್ನು ಕದಡುವ ಸಾಧ್ಯತೆ ಇದೆ. ಇದರಲ್ಲಿ ಭಾಗಿಯಾಗದೇ ನಿರ್ಲಿಪ್ತರಾಗಿ.

೭.    ನಿಮ್ಮದೇ ಆದ ಅಧ್ಯಯನ ಅಭ್ಯಾಸ ರೂಪಿಸಿಕೊಳ್ಳಿ.

ನಿಮ್ಮ ಶೈಕ್ಷಣಿಕ ವರ್ಷ ಪ್ರಾರಂಭವಾದಾಗಲೇ ಆ ವರ್ಷದಲ್ಲೇ ಪರೀಕ್ಷೆ ಇರುವ ಸಂಗತಿ ನಿಮಗೆ ಮೊದಲೇ ತಿಳಿದ ವಿಷಯ. ಅದರ ಬಗ್ಗೆ ಮಾನಸಿಕ ಸಿದ್ಧತೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಮಾಡಿಕೊಂಡರೆ ಆತಂಕ ಕಡಿಮೆ ಆಗುತ್ತದೆ. ನಿಮ್ಮ ಮನಸ್ಸು ನಿರಾತಂಕವಾಗುತ್ತದೆ. ಮುಕ್ತವಾದ ಆತಂಕರಹಿತ ವಾತಾವರಣದಲ್ಲಿ ಅಧ್ಯಯನ ಮಾಡಿ, ಪರೀಕ್ಷೆ ನಿರ್ವಹಣೆ ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ. ಇದರಿಂದ ವಂಚಿತರಾಗಬೇಡಿರಿ. ನಿಮ್ಮ ಮನೋಸ್ಥೈರ್ಯ, ಮನೋಬಲವನ್ನು ಪರೀಕ್ಷೆಗೆಂದೇ ಮೀಸಲಿಡಿರಿ. ಈ ಸಲಹೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಭೀತಿ ತೊಲಗುವುದು ಖಂಡಿತ.