ಮುಳ್ಳು ಹೊದರೊಳಗೊಂದು
ಚೆಂಗುಲಾಬಿಯ ಬಿರಿಸಿ
ಹೀರು ಬಾ ಮಧುಕರನೆ
ಎನ್ನುತಿಹೆ ನೀನು :
ಮುಳ್ಳು ಹೊದರಿನ ಸುತ್ತ
ಯುಗ ಯುಗವು ಸುತ್ತುತ್ತ
ಮಧುವ ಕುಡಿವಾಸೆಯಲಿ
ಭ್ರಮಿಸುವೆನು ನಾನು.

ಬಯಲುಗಾಳಿಗೆ ಕಿರಿಯ
ಸೊಡರನೊಂದನು ಒಡ್ಡಿ
ಬೆಳಗು ಬೆಳಗೆಲೆ ಹಣತೆ
ಎನ್ನುತಿಹೆ ನೀನು.
ಬಿರುಗಾಳಿಯಬ್ಬರಕೆ
ಅತ್ತಿತ್ತ ಹೊಯ್ದಾಡಿ
ನಿನ್ನ ಶಕ್ತಿಯ ನಂಬಿ
ಬೆಳಗುವೆನು ನಾನು.

ಕೆಸರಿನಲಿ ಕೈಬಿಟ್ಟು
ಹಾರು ಎನ್ನುವೆ ನೀನು,
ಕೆಸರಿನಲಿ ಕಾಲ್ಕುಸಿದು
ಮುಳುಗುತಿಹೆ ನಾನು.

ರೆಕ್ಕೆಗಳ ಬಡಿಯುವೆನು
ನಿನಗಾಗಿ ಕೂಗುವೆನು
ಆಟವೇನೋ ನಿನಗೆ
ನರಳುತಿರೆ ನಾನು ?

ಆವಾವ ರೀತಿಯಲಿ
ನೀನೆನ್ನ ಪರಿಕಿಸುವೆ
ಬುವಿಯ ಬಾಳಿನ ಕಣದಿ
ನನ್ನ ನಿಲಿಸಿ ?

ನೀನೆನ್ನ ಚರಮಗುರಿ
ಎಂದರಿತು ಪ್ರಾರ್ಥಿಸುವೆ
ನನ್ನ ಸರ್ವಸ್ವವನು
ನಿನ್ನೊಳಿರಿಸಿ.