ಬೆಳಿಗ್ಗೆ ಏಳುವ ಹೊತ್ತಿಗೆ ಇಡೀ ವಾಷಿಂಗ್‌ಟನ್ ಮಹಾನಗರದ ಮೇಲೆ ದಟ್ಟೈಸಿದ ಮೋಡಗಳಿಂದಾಗಿ ಧೋ ಧೋ ಎಂದು ಮಳೆ ಸುರಿಯುತ್ತಿದೆ. ಆ ಮಳೆಯಲ್ಲೇ, ನನ್ನ ಜತೆಗೆ ಮೂರು ದಿನಗಳ ಕಾಲ ಇದ್ದ ಉಮೇಶ್ ಅವರಿಗೆ  ಮತ್ತು ಇತರರಿಗೆ ಗುಡ್‌ಬೈ ಹೇಳಿ, ಹರಿಹರೇಶ್ವರ ಅವರ ಜತೆಗೆ ಪಾಟ್ಸ್‌ಟೌನ್‌ಗೆ ಹೊರಟೆ, ದಾರಿಯುದ್ದಕ್ಕೂ ನಿಲ್ಲದ ಮಳೆ. ಆ ಮಳೆಯಲ್ಲಿಯೇ ಅಮೆರಿಕಾದ ದೈನಂದಿನ ಯಾಂತ್ರಿಕ ಜೀವನ ತನ್ನ ಚಕ್ರಗಳ ಮೇಲೆ ಏನೇನೂ ತಡೆಯಿಲ್ಲದೆ ಸಾಗಿತ್ತು. ಸುರಿವ ಮಳೆಯ ದಾಳಿಯೊಳಗೇ ವೇಗವಾಗಿ ಧಾವಿಸುವ ಕಾರಿನಲ್ಲಿ, ಅನೇಕ ಊರುಗಳನ್ನು ಹಾದು, ಸುಮಾರು ನಾಲ್ಕು, ನಾಲ್ಕೂವರೆ ಗಂಟೆಗಳ ಕಾಲವನ್ನು ತೆಗೆದುಕೊಂಡಿತು ನಮ್ಮ ಪಯಣ. ಪ್ರಯಾಣದ ಉದ್ದಕ್ಕೂ ಹೊರಗೆ ಸುರಿಯುವ ಮಳೆಯನ್ನು ಒಂದಿಷ್ಟೂ ಲೆಕ್ಕಕ್ಕೆ ತೆಗೆದುಕೊಳ್ಳದವರಂತೆ, ಹರಿಹರೇಶ್ವರ ಅವರ ಸಾರಥ್ಯವೂ, ಮಾತುಗಾರಿಕೆಯೂ ಒಟ್ಟಿಗೇ ನಡೆದಿತ್ತು. ಅಮೆರಿಕಾದಲ್ಲಿನ ಅವರ ಬಹುಮುಖವಾದ ಅನುಭವಗಳನ್ನು, ಅವರು ಹಾಕಿಕೊಂಡಿರುವ ಕನ್ನಡದ ಯೋಜನೆಗಳನ್ನು, ಅಮೆರಿಕಾದ ವಿವಿಧ ಕನ್ನಡ ಸಂಘಗಳು ನಡೆಸುತ್ತಿರುವ ಚಟುವಟಿಕೆಗಳನ್ನು, ಅಮೆರಿಕ ಕನ್ನಡ ಪತ್ರಿಕೆಯನ್ನು ನಡೆಸುವಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು, ಬರುವ ತಿಂಗಳಲ್ಲಿ, ಅಮೆರಿಕಾದ ಕನ್ನಡ ಬರಹಗಾರರಿಗಾಗಿ ಒಂದು ಕಾರ್ಯಾಗಾರವನ್ನು ನಡೆಯಿಸುವ ಯೋಜನೆಗಳನ್ನು – ಒಂದೇ ಸಮನೆ, ಮಳೆಗೆ ಸಮಸ್ಪರ್ಧಿಯಾಗಿ ಪಟಪಟನೆ ಹೇಳುತ್ತಾ ಬಂದಹಾಗೆ, ಮಧ್ಯಾಹ್ನ ಎರಡೂ, ಎರಡೂವರೆಯ ಹೊತ್ತಿಗೆ  ಪೆನ್ಸಿಲ್‌ವೇನಿಯಾ ರಾಜ್ಯದ ಪಾಟ್ಸ್‌ಟೌನ್ ಪರಿಸರದ ಹಚ್ಚಹಸುರಿನ ಗುಡ್ಡಗಾಡುಗಳ ಏರಿಳಿತಗಳಲ್ಲಿ ಹಾದು ಹರಿಹರೇಶ್ವರ ಅವರ ಮನೆಯನ್ನು ತಲುಪಿದೆವು. ಬಾಗಿಲಲ್ಲೆ ಅವರ ಶ್ರೀಮತಿ ನಾಗಲಕ್ಷ್ಮಿ ‘ಹಳೆಯ ಮೇಷ್ಟ್ರಾದ’ ನನ್ನನ್ನು ಪ್ರೀತಿ ಗೌರವಗಳಿಂದ ಬರಮಾಡಿಕೊಂಡರು.

ಹರಿಹರೇಶ್ವರ ಅವರ ಏರ್ಪಾಡಿನ ಪ್ರಕಾರ, ನನ್ನ ಅಮೆರಿಕಾದ ಪರ್ಯಟನ ಪ್ರಾರಂಭವಾಗಬೇಕಾದದ್ದು ಸೆಪ್ಟೆಂಬರ್ (೧೯೮೭) ಹನ್ನೆರಡನೆಯ ದಿನಾಂಕದಿಂದ. ಅಲ್ಲಿನವರೆಗೂ ನಾನು ಪ್ರಯಾಣದ ಪೂರ್ವಸಿದ್ಧತೆ ಹಾಗೂ ವಿಶ್ರಾಂತಿಗಾಗಿ, ಹರಿಹರೇಶ್ವರ ದಂಪತಿಗಳ ಆತಿಥ್ಯದಲ್ಲೆ ಇರತಕ್ಕದ್ದೆಂದು ವ್ಯವಸ್ಥೆಯಾಗಿತ್ತು. ಹೀಗಾಗಿ ಇವರ ಪ್ರೀತಿಯ ಅತಿಥ್ಯವನ್ನು ಸವಿಯುತ್ತಾ, ಪಾಟ್ಸ್‌ಟೌನಿನ ಪರಿಸರದಲ್ಲಿ ಸುತ್ತಾಡುತ್ತಾ, ಮೂರು ದಿನಗಳನ್ನು ಹಾಯಾಗಿ ಕಳೆದೆ. ಈ ನಡುವೆ ಹರಿಹರೇಶ್ವರ ಅವರು ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕೂತು, ನಾನು ಯಾವ ಯಾವ ದಿನ ಎಲ್ಲೆಲ್ಲಿಗೆ ಹೋಗಬೇಕು. ಯಾವ ವಿಮಾನಗಳಲ್ಲಿ ಪ್ರಯಾಣ ಮಾಡಬೇಕು, ಹೋಗಿ ತಲುಪಿದ ಸ್ಥಳಗಳಲ್ಲಿ  ಯಾರ ಅತಿಥಿಯಾಗಿರಬೇಕು, ಅದಕ್ಕಾಗಿ ನಾನು ಪ್ರತಿಯೊಂದು ಊರಿನಿಂದಲೂ, ಮುಂದಿನ ಊರಿಗೆ ಹೋಗುವಾಗ ಯಾರನ್ನು ದೂರವಾಣಿಯ ಮೂಲಕ ಸಂಪರ್ಕಿಸಬೇಕು, ಯಾವ ಊರಿನಲ್ಲಿ ಎಷ್ಟು ದಿನ ಇರಬೇಕು, ಆಯಾ ಊರುಗಳಿಂದ ನನ್ನನ್ನು ಬರಮಾಡಿಕೊಳ್ಳುವ ಹಾಗೂ ಕಳುಹಿಸುವ ವ್ಯಕ್ತಿಗಳು ಯಾರು, ಯಾವ ಯಾವ ಕನ್ನಡ ಸಂಘಗಳಲ್ಲಿ ನನ್ನ ಕಾರ್ಯಕ್ರಮಗಳು ನಡೆಯಬೇಕಾಗಬಹುದು-ಇತ್ಯಾದಿ ವಿವರಗಳನ್ನೆಲ್ಲಾ ಸಿದ್ಧಪಡಿಸಿ, ಈ ವೇಳಾಪಟ್ಟಿಯಂತೆ, ನನ್ನ ಪಯಣದ ನಿಲುಗಡೆಯ ಊರುಗಳ ಕನ್ನಡ ಸಂಘದ ಕಾರ್ಯಕರ್ತರೊಡನೆ ದೂರವಾಣಿಯ ಮೂಲಕ ಮಾತನಾಡಿ, ಮತ್ತೆ ಅವರೇ ನಾನು ಆಗಲೇ ಬೆಂಗಳೂರಿನಲ್ಲಿ ಕೊಂಡುಕೊಂಡಿದ್ದ, ಅಮೆರಿಕಾದ ಒಳ ಸಂಚಾರದ ‘ಊಸಾ’ ಟಿಕೆಟ್ ಅನ್ನು ಫಿಲಡೆಲ್ಫಿಯಾದ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ, ಕಂಪ್ಯೂಟರ್‌ಗೆ ಹಾಕಿಸಿ, ನನ್ನ ಸಮಸ್ತ ಪ್ರಯಾಣವನ್ನೂ ಖಚಿತಪಡಿಸಿಕೊಂಡು, ನನ್ನ ಒಂದು ತಿಂಗಳ ಪ್ರವಾಸದ ಸಮಗ್ರ ನೀಲನಕ್ಷೆಯನ್ನು ನನ್ನ ಕೈಯಲ್ಲಿ ಇರಿಸಿದರು. ನನ್ನ ಈ ಸಂಚಾರದ ಬಗ್ಗೆ ಅವರು ವಹಿಸಿದ ಕಾಳಜಿ, ಮುಂದಾಲೋಚನೆ, ಪ್ರತಿಯೊಂದನ್ನು ಯೋಜಿಸುವ ಕಾರ್ಯಕ್ಷಮತೆ, ಇದೆಲ್ಲದರ ಹಿಂದೆ ನನ್ನನ್ನು ಕುರಿತು ಅವರಿಗಿರುವ ಪ್ರೀತಿ-ವಿಶ್ವಾಸ, ಈ ಎಲ್ಲವೂ ನನ್ನ ನಿಶ್ಯಬ್ದವಾದ ಕೃತಜ್ಞತೆಗೆ ಪಾತ್ರವಾಗಿದೆ.

ಸೆಪ್ಟೆಂಬರ್ ಹತ್ತನೆಯ ತಾರೀಖು, ಫಿಲಡೆಲ್ಫಿಯಾದಿಂದ, ನನ್ನನ್ನು ಅವರ ಮನೆಗೆ ಕರೆದೊಯ್ಯಲು ಬಂದ ನನ್ನ ಹಳೆಯ ವಿದ್ಯಾರ್ಥಿ ಮಿತ್ರ, ಟಿ.ಎಸ್. ಸತ್ಯನಾಥ್ ಅವರ ಜತೆ, ಮುಂದೆ ವಾಷಿಂಗ್‌ಟನ್‌ನಿಂದ ಪ್ರಾರಂಭವಾಗುವ ನನ್ನ ಸಂಚಾರಕ್ಕೆ ಅಗತ್ಯವಾದ ಸಾಮಾನುಗಳೊಂದಿಗೆ ಹೊರಟೆ. ಪಾಟ್ಸ್‌ಟೌನ್‌ನಿಂದ ಫಿಲಡೆಲ್ಫಿಯಾಕ್ಕೆ ನಾನು ಪ್ರಯಾಣ ಮಾಡಿದ್ದು ಬಸ್ಸಿನಲ್ಲಿ. ಮೆತ್ತನೆಯ ಸುಖಾಸನಗಳು; ಅಗತ್ಯಬಿದ್ದರೆ ಬಳಸಬಹುದಾದ ಬಾತ್‌ರೂಂನ ಅನುಕೂಲವುಳ್ಳ ಹವಾನಿಯಂತ್ರಿತವಾದ ಇಂಥ ಬಸ್ಸುಗಳಲ್ಲಿ ಪ್ರಯಾಣ ಮಾಡುವುದೇ ಒಂದು ಸೊಗಸು. ಸುಮಾರು ಎರಡು ಗಂಟೆಗಳ ಕಾಲ ಸತ್ಯನಾಥ್ ಅವರ ಜತೆ ಸಾಹಿತ್ಯ ವಿಷಯಗಳನ್ನು ಕುರಿತ ಸಂವಾದ ಹಿತವಾಗಿತ್ತು. ಸತ್ಯನಾಥ್, ಹಿಂದೆ ಎಪ್ಪತ್ತರ ದಶಕದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಎಂ.ಎ. ತರಗತಿಗಳಲ್ಲಿ ನನ್ನ ವಿದ್ಯಾರ್ಥಿ. ಮುಂದೆ ಅವರು ದೆಹಲಿ ವಿಶ್ವವಿದ್ಯಾಲಯದ ಆಧುನಿಕ ಭಾಷಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದು, ಈ ಕೆಲವು ತಿಂಗಳ ಹಿಂದೆ ಅವರೂ ಅವರ ಶ್ರೀಮತಿಯವರೂ ಫಿಲಡೆಲ್ಫಿಯಾ ವಿಶ್ವವಿದ್ಯಾಲಯದ ಆಧುನಿಕ ಭಾಷಾ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಕಲಿಕೆಗಾಗಿ ಪ್ರವೇಶ ಪಡೆದಿದ್ದಾರೆ. ಹಿಂದೆ ಸತ್ಯನಾಥ್ ಜತೆ, ಕಳೆದ ದಿನಗಳ ನೆನಪು ಮಾಡಿಕೊಳ್ಳುತ್ತಾ ಫಿಲಡೆಲ್ಫಿಯಾ ತಲುಪಿದಾಗ ಸಂಜೆ ಐದು ಗಂಟೆ. ಬಸ್ಸಿಳಿದು ಪಕ್ಕದ ‘ಸಬ್‌ವೇ’ (ಸುರಂಗ ರೈಲು ಮಾರ್ಗ)ಯನ್ನು, ಚಲಿಸುವ ಮೆಟ್ಟಿಲುಗಳ ಮೂಲಕ ಇಳಿದು, ವಿದ್ಯುದ್ದೀಪಗಳ ಮಂಕು ಬೆಳಕಿನಲ್ಲಿ ಟ್ರಾಂವೇ (ಟ್ರಾಲಿ)ಗಾಗಿ ಕಾಯುತ್ತ ನಿಂತೆವು. ನಾವು ನಿಂತ ನಿಲ್ಮನೆಯ ನೆಲ ಅಷ್ಟೇನೂ ಸ್ವಚ್ಛವಾಗಿರಲಿಲ್ಲ. ನಮ್ಮಂತೆ ಟ್ರಾಲಿಗೆ ಕಾದು ನಿಂತವರಲ್ಲಿ ಬಹು ಮಂದಿ ಕಪ್ಪುಜನ. ಅವರೆಲ್ಲ ಮಧ್ಯಮ ವರ್ಗದ ದುಡಿಯುವ ಜನ. ತಮ್ಮ ದುಡಿಮೆಯ ನಂತರ ಮನೆಗಳನ್ನು ತಲುಪಲು ಟ್ರಾಲಿಗಾಗಿ ಕಾದುನಿಂತವರು. ಸ್ವಲ್ಪ ಹೊತ್ತಿನಲ್ಲೇ ಎದುರಿಗೆ ಹಾಸಿದ ರೈಲು ಕಂಬಿಗಳ ಮೇಲೆ ಬಂದು ನಿಂತಿತು, ಬಸ್ಸಿನಂಥ ಒಂದು ವಾಹನ. ಅದರೊಳಗೆ ನಾಮುಂದು ತಾಮುಂದು ಎಂದು ನುಗ್ಗಿದರು ಮಂದಿ. ನಾವೂ ಸಾಮಾನು ಸಮೇತ ನುಗ್ಗಿ ಸ್ಥಳ ಹಿಡಿದು ಕೂತೆವು. ಒಂದಿಪ್ಪತ್ತು ನಿಮಿಷ ನೆಲದೊಳಗಣ ಕತ್ತಲ ಹಾದಿಯಲ್ಲಿ ನಡೆದ ಟ್ರಾಲಿ, ಮತ್ತೆ ನಗರದೊಳಗಿನ ಬಯಲಿಗೆ ಬಂದಿತು. ನಾವು ಟ್ರಾಲಿ ಇಳಿದು ಅಲ್ಲಿಗೆ ತೀರಾ ಸಮೀಪದಲ್ಲೇ ಇದ್ದ ಸತ್ಯನಾಥ್ ಅವರ ಅಪಾರ್ಟ್‌ಮೆಂಟ್ ಕಡೆ ಹೊರಟೆವು. ದಾರಿ ಉದ್ದಕ್ಕೂ ಕಸದ ರಾಶಿ; ಧೂಳು; ಗಲೀಜು. ಕುಡಿದು ಎಸೆದ ಶೀಸೆಗಳು ಒಡೆದು ಚಲಾಪಿಲ್ಲಿಯಾದ ಗಾಜಿನ ಚೂರು; ಅಲ್ಲಲ್ಲಿ ಮನೆಗಳ ಮುಂದೆ ರಾಶಿ ಹಾಕಿದ ರದ್ದಿ; ಮೂಗು ಮುಚ್ಚಿಕೊಳ್ಳಬೇಕಾದ ದುರ್ವಾಸನೆ. ಇದನ್ನೆಲ್ಲ ನೋಡಿ ನನಗೆ ಮಹದಾನಂದವಾಯಿತು. ಇದುವರೆಗೂ ನಾನು ಕಂಡ ಊರುಗಳ – ಹಾವೆಲ್, ಸ್ಯಾಲಿಸ್‌ಬರಿ, ವಾಷಿಂಗ್‌ಟನ್, ಪಾಟ್ಸ್‌ಟೌನ್ – ಬೀದಿಗಳು, ಅತ್ಯಂತ ಸ್ವಚ್ಛ; ಹುಡುಕಿದರೂ ಒಂದಿಷ್ಟೂ ಕಸವೇ ಕಾಣದು, ಮನೆಗಳಂತೂ ಹಸುರ ಜಮಖಾನೆಯ ನಡುವೆ ಕೂರಿಸಿದ ಕಲಾಕೃತಿಗಳು. ಆದರೆ, ಫಿಲಡೆಲ್ಫಿಯಾದ ಈ ಬೀದಿಗಳ, ಹಿತವಾದ ಗಲೀಜನ್ನು ನೋಡಿದ ಕೂಡಲೇ ನನಗೆ ನಮ್ಮ ಪುಣ್ಯಭೂಮಿ ಭಾರತದ ಊರುಗಳ ನೆನಪು ಬಂದು ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು.

ಮರುದಿನ ಬೆಳಿಗ್ಗೆ ನಾನು, ಸತ್ಯನಾಥ್ ಹಾಗೂ ಅವರ ಶ್ರೀಮತಿಯವರಾದ ಶೋಭಾ, ಮೂವರೂ ಫಿಲಡೆಲ್ಫಿಯಾದ ಪೇಟೆಬೀದಿಗಳ ಮೂಲಕ ವಿಶ್ವವಿದ್ಯಾಲಯದ ಆವರಣವನ್ನು ಪ್ರವೇಶಿಸಿದೆವು. ದಾರಿಯುದ್ದಕ್ಕೂ ಬೇರೆ ಬೇರೆ ದೇಶದ ಜನ.

ಅಮೇರಿಕಾ ದೇಶವೇ ಹೀಗೆ. ಇದೊಂದು ಕಲಬೆರಕೆ ದೇಶ. ಇಲ್ಲಿ ಹೊರದೇಶಗಳಿಂದ ಬಂದು ನೆಲಸಿ, ಈ ನಾಡನ್ನು ತಮ್ಮದೆಂದುಕೊಂಡವರೇ ಹೆಚ್ಚು. ನಮ್ಮ ದೇಶದ,  ಅಂದರೆ ಇಂಡಿಯಾದ ಮೂರರಷ್ಟು ವಿಸ್ತಾರವಾದ, ಆದರೆ ಜನಸಂಖ್ಯೆಯಲ್ಲಿ ಮಾತ್ರ, ನಮ್ಮ ದೇಶದ ಮೂರನೆಯ ಒಂದರಷ್ಟನ್ನು ಮಾತ್ರ ಉಳ್ಳ ದೇಶ. ಇದರಿಂದಾಗಿ ಇಲ್ಲಿನ ಜನಕ್ಕೆ ಹೆಚ್ಚು ಸಂಪನ್ಮೂಲಗಳನ್ನೂ, ನೆಮ್ಮದಿಯನ್ನೂ ಇದು ಒದಗಿಸಲು ಸಾಧ್ಯವಾಗಿದೆ. ಮೊದಮೊದಲು ಈ ಭೂಖಂಡಕ್ಕೆ ಕಾಲಿರಿಸಿದ ಇಂಗ್ಲೆಂಡಿನ ಬಿಳಿಯರು, ಇಲ್ಲಿನ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಜನರನ್ನು   ಮೂಲೆಗುಂಪು ಮಾಡಿ, ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡ ನಂತರ, ಜಗತ್ತಿನ ಬೇರೆ ಬೇರೆ ದೇಶದ ಜನರೂ ವಲಸೆ ಬಂದು ಇದನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡು, ಎಲ್ಲವನ್ನೂ ಹೊಸದಾಗಿ ಕಟ್ಟತೊಡಗಿದರು. ಜತೆಗೆ ಬಿಳಿಯ ಜನ ತಮ್ಮ ದುಡಿಮೆಗಾಗಿ ಆಫ್ರಿಕಾದ ಕಪ್ಪು ಖಂಡದಿಂದ ಜನರನ್ನು, ಬಹುಸಂಖ್ಯೆಯಲ್ಲಿ ಹಿಡಿದು ತರಿಸಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಬಹುಕಾಲ ಬಿಳಿಯರ ಅಮಾನವೀಯ ದಬ್ಬಾಳಿಕೆಗೆ ಕ್ರೌರ್ಯಕ್ಕೆ ಒಳಗಾಗಿ, ಕ್ರಮೇಣ ಬಿಡುಗಡೆಯನ್ನು ಪಡೆದು ಹಳ್ಳಿ ಹಳ್ಳಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈ ಕಪ್ಪು ಜನ, ಬಿಳಿಯರ ಕಾಟವನ್ನು ತಡೆಯಲಾರದೆ ನಗರಗಳಿಗೆ ಬಂದು ಸೇರಿಕೊಂಡರು. ಈಗಲೂ ಉತ್ತರ ಅಮೆರಿಕಾದ ದೊಡ್ಡ ನಗರಗಳಾದ ವಾಷಿಂಗ್‌ಟನ್, ಫಿಲಡೆಲ್ಫಿಯಾ, ಡೆಟ್ರಾಯಿಟ್ ಇಂಥ ನಗರಗಳಲ್ಲಿ ಈ ಕಪ್ಪು ಜನರ ಸಂಖ್ಯೆ ಹೆಚ್ಚು ಪ್ರಮಾಣದಲ್ಲಿದೆ. ಅವರ ಈ ಸಂಖ್ಯಾಬಲದಿಂದಾಗಿ ಅವರ ಪ್ರತಿನಿಧಿಗಳು ಕೆಲವು ದೊಡ್ಡ ನಗರಗಳ ಮೇಯರ್, ಉಪಮೇಯರ್‌ಗಳೂ ಆಗಿದ್ದಾರೆ. ಫಿಲಡೆಲ್ಫಿಯಾ ನಗರದಲ್ಲಿಯೂ ಈ ಕಪ್ಪುಜನಗಳ ಸಂಖ್ಯೆ ಸಾಕಷ್ಟಿದೆ. ಜತೆಗೆ ಫ್ರೆಂಚರೂ, ಡಚ್ ಜನರೂ ಬಹು ಸಂಖ್ಯೆಯಲ್ಲಿದ್ದಾರೆ.

ಫಿಲಡೆಲ್ಫಿಯಾ ವಿಶ್ವವಿದ್ಯಾಲಯದ ಆವರಣ, ಹೊಸ ಶಿಕ್ಷಣ ವರ್ಷದ ಪ್ರಾರಂಭದಿಂದಾಗಿ ಬಹುಸಂಖ್ಯೆಯ ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿತ್ತು. ಗಂಡಿಗೂ ಹೆಣ್ಣಿಗೂ ಅಷ್ಟೇನೂ ವ್ಯತ್ಯಾಸವಿಲ್ಲದ ಉಡುಗೆ ತೊಡುಗೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ತಮ್ಮ ಪೂರ್ವಪರಿಚಿತರನ್ನು ಕಂಡೊಡನೆ ಹಾಯ್ ಹಾಯ್ ಅನ್ನುತ್ತ ಅತ್ಯಂತ ಸ್ನೇಹಾನುರಾಗಗಳಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುತ್ತಿಡುತ್ತಾ ನಿಂತಲ್ಲೇ ನಿಂತು ಸಮಾಧಿಸ್ಥರಾಗುತ್ತಿದ್ದರು. ಬೇಸಗೆಯ ಬಿಸಿಲು ಸಾಕಷ್ಟು ಬೆಚ್ಚಗಿದ್ದುದರಿಂದ, ಅಲ್ಲಲ್ಲಿ ಮರಗಳ ಕೆಳಗಿನ ಹಸುರು ಹುಲ್ಲಿನ ಮೇಲೊರಗಿಕೊಂಡು ಕೋಕೋ – ಕೋಲಾ ಕುಡಿಯುತ್ತ, ಐಸ್ ಕ್ರೀಂ ತಿನ್ನುತ್ತ, ಸುಖಸಂಕಥಾವಿನೋದಗಳಲ್ಲಿ ಮಗ್ನವಾದವರ ಸಂಖ್ಯೆಯೂ ಸಾಕಷ್ಟಿತ್ತು. ನಾವು ಈ ಕ್ಯಾಂಪಸ್ ಮೂಲಕ ಹಾದು ‘ಷೇಕ್ಸ್‌ಪಿಯರ್ ಮ್ಯೂಸಿಯಂ’ ಎಂಬ ಹಳೆಯ ಕಟ್ಟಡವನ್ನು (ಅಮೆರಿಕಾದಲ್ಲಿ ‘ಹಳೆಯ’ ಎಂದರೆ ಕೇವಲ ಮುನ್ನೂರು ನಾನೂರು ವರ್ಷಗಳಷ್ಟು ಹಳೆಯ ಎಂದಷ್ಟೇ ಅರ್ಥ) ಹೊಕ್ಕೆವು. ಅದರ ವಿನ್ಯಾಸ ಮತ್ತು ಅದರೊಳಗಿನ ಕಲಾಪುಸ್ತಕ ಭಂಡಾರವನ್ನು ನೋಡಿಕೊಂಡು, ಮುಂದೆ ವಿಶ್ವವಿದ್ಯಾಲಯದ ಮ್ಯೂಸಿಯಂಗೆ ಬಂದೆವು. ಈ ಮ್ಯೂಸಿಯಂ ಮುಖ್ಯವಾಗಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡುವವರ ಪಾಲಿಗೆ ಮಹತ್ವದ ಮಾಹಿತಿಗಳನ್ನು ಒದಗಿಸುವಂಥದಾಗಿದೆ. ಅಮೆರಿಕಾದ ಮೂಲನಿವಾಸಿಗಳಾದ ರೆಡ್ ಇಂಡಿಯನ್‌ರನ್ನು ಕುರಿತು, ಜತೆಗೆ ಜಗತ್ತಿನ ದ್ವೀಪಾಂತರಗಳಲ್ಲಿನ ಪ್ರಾಚೀನ ಬುಡಕಟ್ಟು ಜನರ ಸಂಸ್ಕೃತಿಯನ್ನು ಕುರಿತು, ಮಾಯಾ, ಅಲಾಸ್ಕ, ಎಸ್ಕಿಮೋ ಜನಾಂಗಗಳ ಜೀವನ ವಿಧಾನಗಳನ್ನು ಕುರಿತು, ಸುಮೇರಿಯನ್ ಮತ್ತು ಈಜಿಪ್ಷಿಯನ್ ನಾಗರಿಕತೆಯನ್ನು ಕುರಿತು ಅಪೂರ್ವವಾದ ಹಾಗೂ ನಿರ್ದಿಷ್ಟವಾದ ಸಚಿತ್ರ ಮಾಹಿತಿಗಳನ್ನು ಈ ಪ್ರದರ್ಶನಾಲಯ ಕೊಡುತ್ತದೆ. ಅದರಲ್ಲಿಯೂ ಈಜಿಪ್ಟಿನ ಮಮ್ಮಿಗಳ ಬಗೆಗೆ ಅನೇಕ ಹೊಸ ಸಂಗತಿಗಳನ್ನು ತಿಳಿಸುವ ಉಪವಿಭಾಗವೊಂದು ಇಲ್ಲಿನ ವಿಶೇಷವಾಗಿದೆ. ಮೃತರಾದ ರಾಜರಾಣಿಯರ ಶವಗಳನ್ನು ಮಮ್ಮಿಗಳನ್ನಾಗಿ ಮಾಡಿ ಇರಿಸುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಇದಕ್ಕೆ ‘ಮಮ್ಮೀಕರಣ’  Mummification ಎಂದು ಹೇಳಲಾಗಿದೆ.  ಈಜಿಪ್ಟ್‌ನ ರಾಜ ರಾಣಿಯರ ಶರೀರಗಳನ್ನು ಮಮ್ಮಿಗಳನ್ನಾಗಿ ಮಾಡಿ ಸಂರಕ್ಷಿಸುವ ಕ್ರಮ ಹೀಗಿದೆ : ಆ ಮೃತ ದೇಹಗಳ ಹೊಟ್ಟೆಯನ್ನು ಸೀಳಿ, ಅಲ್ಲಿರುವ ಕರುಳು ಇತ್ಯಾದಿಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ, ಅನಂತರ ತಲೆಯೊಳಗಿನ ಮೆದುಳನ್ನು ಮೂಗಿನ ಮೂಲಕ ಹೊರಕ್ಕೆ ತೆಗೆದು, ವಿವಿಧ ಲೇಪನಗಳಿಂದ ಆ ಶರೀರಗಳನ್ನು ಸವರಿ, ಆ ಶವಗಳನ್ನು ಬಟ್ಟೆಯಲ್ಲಿ ಬಿಗಿಯಾಗಿ ಸುತ್ತುತ್ತಿದ್ದರು. ಆಮೇಲೆ ಆ ಶರೀರಗಳ ಆಕಾರಕ್ಕೆ ಅನುಗುಣವಾದ ಮರದ ಕವಚಗಳನ್ನು ಜೋಡಿಸಿ, ಕೆಲವು ವೇಳೆ ಮುಖದ ಆಕಾರ – ಲಕ್ಷಣಕ್ಕೆ ಹೊಂದುವಂಥ ಸಚಿತ್ರವಾದ ಮರದ ಮುಖವಾಡ ಕವಚವನ್ನು ಜೋಡಿಸಿ, ಆಯಾ ರಾಜ ರಾಣಿಯರಿಗೆ ಪ್ರಿಯವಾದ ಸಮಸ್ತ ವಸ್ತುಗಳನ್ನೂ ಅವುಗಳ ಬದಿಗಿರಿಸಿ, ಪಿರಮಿಡ್ಡಿನ ಕೋಣೆಗಳಲ್ಲಿ ಭದ್ರವಾಗಿ ಮುದ್ರೆ ಮಾಡುತ್ತಿದ್ದರು. ನಾನು ಈ ಪ್ರವಾಸ ಕಾಲದಲ್ಲಿ ಮುಂದೆ ಚಿಕಾಗೋ, ಲಂಡನ್ ನಗರಗಳ ಮ್ಯೂಸಿಯಂಗಳಲ್ಲಿರುವ ‘ಮಮ್ಮಿ’ಗಳ ವಿಭಾಗವನ್ನು ನೋಡಿದೆನಾದರೂ, ‘ಮಮ್ಮೀಕರಣಕ್ರಿಯೆ’ಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಂಡದ್ದು ಫಿಲಡೆಲ್ಫಿಯಾದ ಈ ಮ್ಯೂಸಿಯಂನಲ್ಲಿಯೇ.

ಮತ್ತೆ ಸಂಜೆಯ ವೇಳೆಗೆ ನಾವು ಟ್ರಾಲಿ ಹಾಗೂ ಮೆಟ್ರೋಗಳನ್ನು ಹಿಡಿದು ಡೆಲೆವೆರ್ ನದೀ ತೀರಕ್ಕೆ ಬಂದೆವು. ತುಂಬ ಅಗಲವಾದ ಈ ನದೀ ದಡಗಳ ಉದ್ದಕ್ಕೂ, ಆಗಲೇ ಝಗ್ಗನೆ ಹತ್ತಿಕೊಂಡ ದೀಪಗಳ ಸಾವಿರ ಕಣ್ಣುಗಳ ಎತ್ತರವಾದ ಕಟ್ಟಡಗಳ ಬೆಳಕುಗಳು ನೀರಿನಲ್ಲಿ ಛಿದ್ರ ಛಿದ್ರವಾಗಿ ಬಿಂಬಿಸುತ್ತಿದ್ದವು. ನದಿಯೊಳಗೆ ಅಲ್ಲಲ್ಲಿ ದೋಣಿಗಳು ಮತ್ತು ಹಡಗುಗಳು, ದಡಕ್ಕೆ ಆತುಕೊಂಡಿದ್ದವು. ನದೀ ತೀರದ ಅಷ್ಟಗಲಕ್ಕೂ ಕಲ್ಲು ಹಾಸಿದ ಮೆಟ್ಟಿಲ ದಾರಿಗಳು, ಅಲ್ಲಲ್ಲಿ ಬಯಲು ರಂಗಮಂದಿರಗಳು, ಕ್ರೀಡಾಂಗಣಗಳು, ಸಣ್ಣ ಪುಟ್ಟ ಉಪಹಾರ ಗೃಹಗಳು ಮತ್ತು ವಸ್ತು ಪ್ರದರ್ಶನಾಲಯಗಳೂ ಇದ್ದು ರಸಿಕರ  ವಿಹಾರಕ್ಕೆ ಆಕರ್ಷಕವಾಗಿವೆ. ನದಿಗೆ ತೀರಾ ಸಮೀಪದ ಕಟಕಟೆಗೆ ಹೊಂದಿಕೊಂಡಂತೆ, ತಂಗಾಳಿಗೆ ಮೈಯೊಡ್ಡಲು ಮತ್ತು ವಿರಮಿಸಲು ಅನುಕೂಲವಾದ ಶಿಲಾಪೀಠಗಳಿವೆ. ಈ ಶಿಲಾಸನಗಳಲ್ಲಿ ಆಗಲೇ ತುಟಿಗೆ ತುಟಿ ಮೈಗೆಮೈ ಬೆಸೆದುಕೊಂಡು ಕೂತ ಕಾಮ-ರತಿಯರ ಜೋಡಿಗಳು ಸಾಕಷ್ಟಿದ್ದವು. ಆ ಜೋಡಿಗಳೂ ಸಹ ಜಗತ್ತಿನ ಬೇರೆ ಬೇರೆ ದೇಶದ ಬಣ್ಣಗಳನ್ನು ಪ್ರತಿನಿಧಿಸುವಂಥವು. ಈ ‘ವಿರಹಿಗಳ ಶೃಂಗಾರ’ವನ್ನು ನೋಡುತ್ತ, ಮುಂದೆ ಬಂದು ಸ್ವಲ್ಪ ದೂರದಲ್ಲಿದ್ದ ವಸ್ತು ಪ್ರದರ್ಶನಾಲಯವೊಂದನ್ನು ಪ್ರವೇಶಿಸಿದೆವು. ಅದರೊಳಗಣ ಮೊಗಸಾಲೆಯಲ್ಲಿದ್ದ ಚಿತ್ರಕಲಾ ಪ್ರದರ್ಶನವನ್ನು ನಾವು ನೋಡುತ್ತಿದ್ದಾಗ. ಅದರ ಮೇಲ್ವಿಚಾರಕನೊಬ್ಬ ಬಂದು ‘ಕ್ಷಮಿಸಿ, ಮೇಲಿನ ಆಡಿಟೋರಿಯಂನಲ್ಲಿ ಇದೀಗ ಸಾಕ್ಷ್ಯಚಿತ್ರ ಪ್ರದರ್ಶನ ಪ್ರಾರಂಭವಾಗಲಿದೆ. ನಿಮಗೆ  ಇಷ್ಟವಿದ್ದರೆ ನೋಡಬಹುದು’_ ಎಂದು ತಿಳಿಸಿದ. ನಾವು ಅವನಿಗೆ ಥ್ಯಾಂಕ್ಸ್ ಹೇಳಿ ಮೇಲೆ ಹೋದೆವು. ಅಲ್ಲೊಂದು ಸಭಾಂಗಣ. ಸೇರಿದ್ದ ಪರಿಮಿತ ಸಂಖ್ಯೆಯ ಪ್ರೇಕ್ಷಕರ ಜತೆ ಕುಳಿತೆವು. ಕೆಲವೇ ಕ್ಷಣಗಳಲ್ಲಿ New America ಎಂಬ ಸಾಕ್ಷ್ಯ ಚಿತ್ರವೊಂದರ ಪ್ರದರ್ಶನ ಪ್ರಾರಂಭವಾಯಿತು. ಇಲ್ಲಿಯೂ ನಮ್ಮ ದೇಶದಲ್ಲಿ ಹೇಗೋ ಹಾಗೆ, ಈ ದೇಶದ ಗತವೈಭವಗಳನ್ನು ಕುರಿತು, ಅಮೆರಿಕಾದ ಸಂಸ್ಕ್ರತಿಯನ್ನು ಕುರಿತು, ಅದರ ಸಾಧನೆಗಳನ್ನು ಕುರಿತು, ರಾಷ್ಟ್ರೀಯ ಐಕ್ಯತೆಯನ್ನು ಕುರಿತು (ಅಂದರೆ ರಾಷ್ಟ್ರ ಹಾಗೂ ರಾಜ್ಯಗಳ ಹೊಂದಾಣಿಕೆಯನ್ನು ಕುರಿತು) ಪ್ರಚಾರಾತ್ಮಕವಾದ ನಿಲುವೇ ಪ್ರಧಾನವಾಗಿತ್ತು. ಈ ಪ್ರದರ್ಶನದ ಸಂದರ್ಭದಲ್ಲಿ “America excells in transmitting ideas into action” (ಅಮೆರಿಕಾ ತನ್ನ ಕನಸು-ಕಲ್ಪನೆಗಳನ್ನು ವಾಸ್ತವ ಕಾರ್ಯರೂಪಕ್ಕೆ ಇಳಿಸುವುದರಲ್ಲಿ ಅದ್ವಿತೀಯವಾದದ್ದು)  ಎಂಬ ಮಾತೊಂದು, ಒಪ್ಪಬಹುದಾದದ್ದು ಎನ್ನಿಸಿತು. ಅಮೆರಿಕಾದ ಪ್ರಗತಿಯ ಮೂಲಮಂತ್ರವೇ ಇದು.

ನನ್ನ ವೀಸಾ ಟಿಕೆಟ್ ಪ್ರಕಾರ  ಹಾಗೂ ಹರಿಹರೇಶ್ವರ ಅವರ ವ್ಯವಸ್ಥೆಯ ಪ್ರಕಾರ ನನ್ನ ಪರ್ಯಟನದ ದಿನ ಬಂತು. ಅಂದು (೧೨.೯.೧೯೮೭) ನಾನು ಫಿಲಡೆಲ್ಫಿಯಾದಿಂದ, ೯.೩೦ರ ರೈಲು ಹಿಡಿದು, ೧೨.೩೦ರ ವೇಳೆಗೆ  ವಾಷಿಂಗ್‌ಟನ್ ತಲುಪಬೇಕು. ಅಲ್ಲಿ ರಾಜಶೇಖರ್ ಅನ್ನುವವರು, ರೈಲ್ವೇ ಸ್ಟೇಷನ್‌ನಿಂದ ನನ್ನನ್ನು ಅವರ ಮನೆಗೆ ಊಟಕ್ಕೆ ಕರೆದುಕೊಂಡು ಹೊಗುತ್ತಾರೆ. ಅನಂತರ ಅವರೇ ನನ್ನನ್ನು ಡಲ್ಲಾಸ್ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಮಧ್ಯಾಹ್ನ ಮೂರು ಗಂಟೆಗೆ ಡೆಟ್ರಾಯಿಟ್‌ಗೆ ಹೊರಡುವ ಕಾಂಟಿನೆಂಟಲ್ ವಿಮಾನವನ್ನು ಹತ್ತಿಸುತ್ತಾರೆ.

ಆದರೆ ಯಾಕೋ ಏನೋ ನನಗಾಗಲಿ, ಸತ್ಯನಾಥ್‌ಗಾಗಲಿ, ಈ ದಿನ ಬೆಳಿಗ್ಗೆ ವಾಷಿಂಗ್‌ಟನ್‌ಗೆ ಹೊರಡುವ ಎಕ್ಸ್‌ಪ್ರೆಸ್ ರೈಲಿಗೆ, ಹಿಂದಿನ ದಿನವೇ ಟಿಕೆಟ್ಟನ್ನು ರಿಸರ್ವ್ ಮಾಡಿಸಬೇಕಾಗಿತ್ತೆಂಬುದು ತಲೆಗೇ ಹೊಳೆಯಲಿಲ್ಲ! ಇದರಿಂದಾಗಿ ನಾವು ಬೆಳಿಗ್ಗೆ ಸಾಧ್ಯವಾದಷ್ಟು ಬೇಗ ತಯಾರಾಗಿ, ಬಸ್ಸು ಟ್ರಾಲಿ ಹಿಡಿದು ರೈಲ್ವೆ ಸ್ಟೇಷನ್ನಿಗೆ ಬರುವ ಹೊತ್ತಿಗೆ ಆಗಲೇ ಒಂಭತ್ತು ಗಂಟೆಯಾಗಿತ್ತು. ಫಿಲಡೆಲ್ಫಿಯಾ ರೈಲು ನಿಲ್ದಾಣದಲ್ಲಿ ಟಿಕೆಟ್‌ಕೊಳ್ಳಲು ನೋಡಿದರೆ ದೊಡ್ಡದೊಂದು ಕ್ಯೂ. ಆದರೆ ಆ ಕ್ಯೂನಲ್ಲಿ ಕೊನೆಯವನಾಗಿ ನಿಂತ ನನಗೆ, ಟಿಕೆಟ್  ಕೊಡುವ ನಿಧಾನಗತಿಯನ್ನು ಗಮನಿಸುತ್ತಲೇ ಸ್ವಲ್ಪ ಆತಂಕ ಶುರುವಾಯಿತು. ಒಂಭತ್ತೂಕಾಲು ಗಂಟೆಯಾಯಿತು. ನನ್ನ ಮುಂದೆ ಇನ್ನೂ ಹದಿನೈದು ಇಪ್ಪತ್ತು ಮಂದಿ ನಿಂತಿದ್ದಾರೆ. ೯.೨೦ಕ್ಕೆ ನಾನು ಹೊರಡಬೇಕಾದ ಎಕ್ಸ್‌ಪ್ರೆಸ್ ರೈಲು ಬಂದೇ ಬಿಟ್ಟಿತು. ಇದನ್ನು ಗಮನಿಸಿದ ಸತ್ಯನಾಥ್ ಅವರು, ‘ಸಾರ್, ನೀವು ನೇರವಾಗಿ ರೈಲು ಹತ್ತಿಬಿಡಿ. ಅಲ್ಲೇ ಕಂಡಕ್ಟರ್ ಬಂದು ಟಿಕೆಟ್ ಕೊಡುತ್ತಾನೆ. ಒಂದಷ್ಟು ಪೆನಾಲ್ಟಿ (ದಂಡ) ತೆತ್ತರಾಯಿತು’ ಎಂದರು. ನಾನು ನಿಂತ ರೈಲಿನ ತೆರೆದ ಬಾಗಿಲೊಳಗೆ ಹೋಗಿ ಕಿಟಕಿಯ ಪಕ್ಕದ ಪ್ರಶಸ್ತವಾದ ಸೀಟೊಂದನ್ನು ಹಿಡಿದು ಕೂತೆ. ಕೆಲವೇ ನಿಮಿಷಗಳಲ್ಲಿ ರೈಲು ಹೊರಟಿತು. ರೈಲು ನಿಲ್ದಾಣದಲ್ಲಿ ಸತ್ಯನಾಥ್ ಮತ್ತು ಶ್ರೀಮತಿ ಶೋಭಾ ಅವರು ನನಗೆ ಕೈಬೀಸಿ ಗುಡ್‌ಬೈ ಹೇಳುತ್ತಿದ್ದರು.

ರೈಲಿನ ಬೋಗಿಯೊಳಗೆ ಸ್ವಸ್ಥವಾಗಿ ಕೂತು ಕಣ್ಣಾಡಿಸಿದೆ. ಮೆತ್ತನೆಯ ಸೋಫಾದಂಥ ಸೀಟು. ಕಾಲಕೆಳಗೆ ಹಾಸಿದ ಮೆದುವಾದ ಜಮಖಾನೆ. ಶುಭ್ರವಾದ, ಕಮಾನಿನಾಕಾರದ, ವಿಮಾನದ ಒಳಭಾಗವನ್ನು ಹೋಲುವಂಥ ಕಂಪಾರ್ಟ್‌ಮೆಂಟಿನ  ವಿನ್ಯಾಸ; ಹವಾನಿಯಂತ್ರಿತ ಹಿತವಾದ ವಾತಾವರಣ; ಮುಚ್ಚಿದ ಅಥವಾ ತೆರೆಯಲು ಬಾರದಂತೆ ಅಳವಡಿಸಿದ ನಸುನೀಲಿ ಗಾಜಿನ ಕಿಟಕಿಗಳು; ರೈಲು ವೇಗವಾಗಿ ಹೋಗುತ್ತಿದ್ದರು ಸದ್ದೇ ಇಲ್ಲದ ಮೌನ; ಅಲ್ಲಲ್ಲಿ ಕೂತು ಮೆಲುದನಿಯಲ್ಲಿ ತಮ್ಮ ಪಾಡಿಗೆ ತಾವು ಮಾತನಾಡುತ್ತಲೋ ಪತ್ರಿಕೆ ಓದುತ್ತಲೋ ಇದ್ದ ಕೆಲವೇ ಪ್ರಯಾಣಿಕರು. ನಾನು ವೇಗದಿಂದ ಚಲಿಸುವ ರೈಲಿನ ಕಿಟಕಿಯಾಚೆಗೆ ಗೋಚರವಾಗುತ್ತಿದ್ದ ಪೆನ್ಸಿಲ್ ವೇನಿಯಾ ರಾಜ್ಯದ ದಟ್ಟಹಸಿರನ್ನೂ, ಹಸಿರಿನ ನಡುವೆ ಹರಹಿಕೊಂಡ ಸರೋವರಗಳನ್ನೂ, ಹರಿದೋಡುವ ನದಿಗಳನ್ನೂ ನೋಡುತ್ತ ಕೂತೆ.

ಬೋಗಿಯೊಳಗಣ ಧ್ವನಿವರ್ಧಕದ ಮೂಲಕ, ಬರುವ ನಿಲ್ದಾಣ ಯಾವುದು ಎಂಬುದನ್ನು ಹೇಳಲಾಯಿತು; ನಿಧಾನಗತಿಗೆ ಬಂದ ರೈಲು ಯಾವುದೋ ನಿಲ್ದಾಣದಲ್ಲಿ ಒಂದೆರಡು ನಿಮಿಷ ನಿಂತು ಮುಂದಕ್ಕೆ ಚಲಿಸತೊಡಗಿತು; ಮತ್ತೆ ಧ್ವನಿವರ್ಧಕದಲ್ಲಿ ರೈಲು ತಲುಪುವ ಮುಂದಿನ ನಿಲ್ದಾಣ ಯಾವುದೆಂಬುದನ್ನೂ, ಅಲ್ಲಿಗೆ ಎಷ್ಟು ಹೊತ್ತಿಗೆ ರೈಲು ಹೋಗುವುದೆಂಬುದನ್ನೂ ತಿಳಿಸಲಾಯಿತು. ಈ ರೈಲಿನ ಒಳ ವಿನ್ಯಾಸ, ಅದರ ಅನುಕೂಲಗಳು, ಮುಂದಿನ ನಿಲ್ದಾಣದ ಬಗ್ಗೆ ಕೂತಲ್ಲಿಗೇ ಕೇಳಿಸಲಾಗುವ ಮಾಹಿತಿ ಇವುಗಳನ್ನು ಮನಸ್ಸಿನಲ್ಲೇ ಮೆಚ್ಚುತ್ತಾ ಇದ್ದ ಹಾಗೆ, ನಾನು ಕೂತ ಬೋಗಿಯ ಮಧ್ಯಂತರದ ಬಾಗಿಲನ್ನು ತೆರೆದುಕೊಂಡು ಕಂಡಕ್ಟರ್ ಬರುವುದನ್ನು ಕಂಡೆ. ನಾನು ಕೈಯೆತ್ತಿ ಸನ್ನೆ ಮಾಡಿದೆ. ನನ್ನ ಬಳಿ ಬಂದ ಆತನಿಗೆ ನಾನು ಫಿಲಡೆಲ್ಫಿಯಾ ಸ್ಟೇಷನ್ನಿನಲ್ಲಿ ಟಿಕೆಟ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದನ್ನು ತಿಳಿಸಿದೆ. ಆತ ಎರಡೂ ಭುಜಗಳನ್ನು ಕುಲುಕಿಸಿ “Ok, No             problem, but where are you going” (ಆಗಲಿ, ಅದಕ್ಕೇನಂತೆ, ನೀವು ಹೋಗುತ್ತಿರುವುದೆಲ್ಲಿಗೆ?) ಎಂದ. ನಾನು ‘ವಾಷಿಂಗ್‌ಟನ್ ನಗರಕ್ಕೆ’ ಎಂದೆ. ಆತ ‘ಮೂವತ್ತೈದು ಡಾಲರ್, ಐವತ್ತು ಸೆಂಟ್’ ಎಂದ. ನಾನು ಅಷ್ಟನ್ನೂ ಕೊಟ್ಟೆ, ಕೈಗೊಂದು ಟಿಕೆಟ್ ಕೊಟ್ಟು ‘ಬೈ,  have a nice journey’ (ಪ್ರಯಾಣ ಸುಖವಾಗಲಿ) – ಎಂದು ಹೇಳಿ ಮುಂದಕ್ಕೆ ಹೊರಟೇ ಹೋದ. ನನಗೆ ಪರಮಾಶ್ಚರ್ಯವಾಯಿತು. ಟಿಕೆಟ್ ಇಲ್ಲದೆ ಹೀಗೆ ಪ್ರಯಾಣ ಮಾಡುವುದು ಅಂತಹ ಮಹಾಪರಾಧವೇನೂ ಅಲ್ಲ ಎಂಬಂತೆ ಮರ್ಯಾದೆಯಿಂದ ಪ್ರಯಾಣಿಕರನ್ನು ನಡೆಸಿಕೊಳ್ಳುವ ಈ ಸೌಜನ್ಯ ನಿಜವಾಗಿಯೂ ದೊಡ್ಡದು. ನಮ್ಮಲ್ಲಿ ಇದೇ ಪರಿಸ್ಥಿತಿಗೆ ಯಾರಾದರೂ ಸಿಕ್ಕಿದರೆ ಮುಗಿಯಿತು. ಏನು ಗುಮಾನಿ, ಏನು ತಪಾಸಣೆ, ರೈಲು ಮೊದಲು ಎಲ್ಲಿಂದ ಹೊರಟಿತೋ ಅಲ್ಲಿಂದಲೇ ಡಬ್ಬಲ್ ಛಾರ್ಜು ವಸೂಲ್ಮಾಡುವ ಬೆದರಿಕೆ. ಒಂದು ದೊಡ್ಡ ಗೊಂದಲವನ್ನೇ ಎಬ್ಬಿಸಿ ಅವಮಾನಕ್ಕೆ ಗುರಿಪಡಿಸಲು ಹಿಂಜರಿಯುವುದಿಲ್ಲ ನಮ್ಮ ರೈಲ್ವೆ ಅಧಿಕಾರಿಗಳು. ಇಲ್ಲಿ ನನ್ನ ಕೈಗೆ ಬಂದ ಟಿಕೆಟ್ಟನ್ನು ನೋಡಿದೆ. ಫಿಲಡೆಲ್ಫಿಯಾದಿಂದ ವಾಷಿಂಗ್‌ಟನ್‌ಗೆ ವಾಸ್ತವದ ರೈಲುದರ ಮೂವತ್ತೆರಡು ಡಾಲರ್, ಐವತ್ತು ಸೆಂಟ್. ಆದರೆ ಟಿಕೆಟ್ ತೆಗೆದುಕೊಳ್ಳದೆ ನಾನು ಬಂದು ಕೂತಕಾರಣ ನನಗೆ ಬಂದ ಟಿಕೆಟ್ ಮೇಲೆ ಮೂವತ್ತೈದು ಡಾಲರ್, ಐವತ್ತು ಸೆಂಟ್ ಎಂದು ಬರೆಯಲಾಗಿತ್ತು. ಅಂದರೆ ನೇರವಾಗಿ ರೈಲು ಹತ್ತುವ ಮುನ್ನ ಟಿಕೆಟ್ ತೆಗೆದುಕೊಳ್ಳದೆ ಹೋದ ‘ತಪ್ಪಿಗೆ’ ನಾನು ತೆರಬೇಕಾಗಿದ್ದ ಅಥವಾ ತೆತ್ತ ಹೆಚ್ಚಿನ ಹಣ ಮೂರು ಡಾಲರ್, ನಾನು ಪಡೆದ ಟಿಕೆಟ್ ಹಿಂದೆ “Please purchase your ticket at the Station. Why pay more?” (ದಯಮಾಡಿ ನೀವು ಹತ್ತುವ ಸ್ಟೇಷನ್‌ನಿಂದಲೇ ಟಿಕೆಟ್ ತೆಗೆದುಕೊಳ್ಳಿರಿ, ಅನಗತ್ಯವಾಗಿ ಹೆಚ್ಚಿಗೆ ಹಣ ಯಾಕೆ ಕೊಡುತ್ತೀರಿ?) ಎಂಬ ಪ್ರಶ್ನೆ ಅಚ್ಚಾಗಿತ್ತು. ಈ ದಿನವಂತೂ ನಾನು ಮೂರು ಡಾಲರ್ ಹೆಚ್ಚಿಗೆ ತೆರುವ ಸಂದರ್ಭಕ್ಕೆ ಒಳಗಾಗದಿದ್ದರೆ, ನನ್ನ ಮುಂದಿನ ಕಾರ್ಯಕ್ರಮವೆಲ್ಲಾ ಅಸ್ತವ್ಯಸ್ತವಾಗುತ್ತಿದ್ದುದಂತೂ ಖಂಡಿತ.

ಹನ್ನೆರಡೂವರೆಗೆ, ವಾಷಿಂಗ್‌ಟನ್‌ನಲ್ಲಿ ರೈಲಿಳಿದು, ನನಗಾಗಿ ಕಾಯುತ್ತಿದ್ದ ರಾಜಶೇಖರ ಅವರ ಜತೆಗೆ, ಅವರ ಮನೆಗೆ ಹೋಗಿ, ಒಳ್ಳೆಯ ಊಟ ಮುಗಿಸಿ ಮತ್ತೆ ಎರಡು ಗಂಟೆಯ ವೇಳೆಗೆ ಅವರ ಮನೆಯಿಂದ ಹೊರಟು, ಎರಡೂಮುಕ್ಕಾಲರ ಹೊತ್ತಿಗೆ ಡಲ್ಲಾಸ್ ಏರ್‌ಪೋರ್ಟಿಗೆ ಬಂದೆ. ಯಾವ ತಕರಾರು ಇಲ್ಲದೆ, ಸೂಚಿತವಾದ ಗೇಟಿನ ಮೂಲಕ ಕಾಂಟಿನೆಂಟಲ್ ಕಂಪನಿಯ ವಿಮಾನದೊಳಗೆ ಪ್ರವೇಶಿಸಿ ಕೂತೆ. ವಾಷಿಂಗ್‌ಟನ್‌ಗೆ ಪಶ್ಚಿಮಾಭಿಮುಖವಾಗಿ, ವಿಮಾನ ಹೊರಟಿತು. ನಗೆಮೊಗದ ಗಗನಸಖಿಯರು ಕೊಟ್ಟ ಜೇನುತುಪ್ಪ ಸವರಿದ ಕಡಲೆಕಾಯಿಬೀಜ, ಕಿತ್ತಲೆ ಹಣ್ಣಿನ ರಸ, ಇವುಗಳ ರುಚಿಯಲ್ಲಿ ಒಂದೂವರೆ ಗಂಟೆಯ ಪ್ರಯಾಣ ಸಾಗಿದ್ದೇ ಅರಿವಿಗೆ ಬರಲಿಲ್ಲ. ನಾಲ್ಕೂವರೆ ಗಂಟೆಯ ಹೊತ್ತಿಗೆ ಡೆಟ್ರಾಯಿಟ್ ವಿಮಾನದೊಳಗಿಂದ ಹೊರಕ್ಕೆ ಬಂದಾಗ, ಶ್ರೀನಿವಾಸಭಟ್ ಅವರು ನನಗಾಗಿ ಕಾದಿದ್ದರು. ಅವರ ಕಾರಿನಲ್ಲಿ ಕೂತು ನಲವತ್ತೈದು ಮೈಲಿ ದೂರದ ಟ್ರಾಯ್ ಎಂಬ ಹೆಸರಿನ ಉಪನಗರದ ಅವರ ಮನೆಯನ್ನು ತಲುಪುವ ಹೊತ್ತಿಗೆ ಸಂಜೆ ಐದೂವರೆ.