ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜಗಳಲ್ಲೊಬ್ಬರಾಗಿದ್ದ. ಪಲ್ಲವಿ ಎಂದೊಡನೆ ಚಂದ್ರಪ್ಪ ಎಂಬ ಹೆಸರು ನೆನಪಿಗೆ ಬರುವ ಹಾಗೆ ಪಲ್ಲವಿಯನ್ನು ಕರಗತ ಮಾಡಿಕೊಂಡಿದ್ದಕ ಚಂದ್ರಪ್ಪನವರನ್ನು, “ಪಲ್ಲವಿ ಚಂದ್ರಪ್ಪ” ಎಂದೇ ಎಲ್ಲರೂ ಕರೆಯುವುದು ಪದ್ಧತಿ.

ಪಲ್ಲವಿಯು ಅವರ ಹೆಸರಿನ ಜೊತೆಗೆ ಲಾಂಛನವಾಗಿ ಅಂಟಿಕೊಂಡುಬಿಟ್ಟಿತು. ಹೀಗಾಗಿ ದಂಡಿನ (ಬೆಂಗಳೂರು ಶಿವಾಜಿನಗರ ಕಂಟೋನ್ಮೆಂಟ್‌) ಪ್ರದೇಶದ “ಚೆನ್ನಪ್ಪ” (ಅದು ಅವರ ಬಾಲ್ಯದಲ್ಲಿ ತಾಯಿತಂದೆ ಕರೆಯುತ್ತಿದ್ದ ಹೆಸರು) ಪಲ್ಲವಿ ಚಂದ್ರಪ್ಪನವರಾದರು.

“ಪಲ್ಲವಿ”ಯು ಯಾವುದೇ ಒಬ್ಬ ವಿದ್ವಾಂಸನ ವಿದ್ವತ್ತು, ಪಾಂಡಿತ್ಯ ಹಾಗೂ ಆತನ ಬುದ್ಧಿ ಚಾಣಾಕ್ಷತೆಯನ್ನು ಪರೀಕ್ಷಿಸುವ ಒಂದು ಅಳತೆಯ ಸಾಧನವಾಗಿದೆ. “ಅವಧಾನ” ಎಂದರೆ ಹಲವಾರು ವಿಷಯಗಳನ್ನು ಏಕಕಾಲದಲ್ಲಿಕ ನೆನಪಿನಲ್ಲಿಟ್ಟುಕೊಂಡು ನಿರ್ವಹಿಸುವುದು. ಎರಡೂ ಕೈಗಳಲ್ಲಿ ಬೇರೆ ಬೇರೆ ಗತಿಯ ತಾಳಗಳನ್ನು ಹಾಕುತ್ತಾ ಸ್ವರ, ಸಾಹಿತ್ಯ ರಾಗ, ಭಾವ ಹಾಗೂ ಮುಂತಾದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಏಕಾಗ್ರಚಿತ್ರದಿಂದ ಹಾಡುವುದಕ್ಕೆ ಅವಧಾನ ಎಂದು ಹೇಳಬಹುದು.

ಪಲ್ಲವಿ ಚಂದ್ರಪ್ಪನವರು ಸಂಗೀತಗಾರರಾಗಿದ್ದು ಬಳಕೆಯಲ್ಲಿಲ್ಲದ ಅಪರೂಪ ರಾಗಗಳ ಕೀರ್ತನೆಗಳ ಜೊತೆಗೆ ಅಪರೂಪ ರಾಗಗಳ ಕೀರ್ತನೆಗಳ ಜೊತೆಗೆ ಅಪರೂಪ ರಾಗಗಳಲ್ಲಿ ದೇವರನಾಮ ಮತ್ತು ವಚನಗಳನ್ನು ಸ್ವರಸಂಯೋಜನೆ ಮಾಡಿ ಹಾಡುತ್ತಿದ್ದರು. ಅಪರೂಪ ಪಲ್ಲವಿಯಲ್ಲಿ ವಿಶೇಷ ಪ್ರಾವೀಣ್ಯತೆ ಗಳಿಸಿದ್ದಕ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾಳಾವಧಾನ ಪಲ್ಲವಿಯಲ್ಲಿ ಅದ್ವಿತೀಯ ಪಾಂಡಿತ್ಯಗಳಿಸಿ ಕರ್ನಾಟಕ ರಾಜ್ಯದ ಸಂಗೀತ ಕ್ಷೇತ್ರದ ಚರಿತ್ರೆಯಲ್ಲಿ ಅವಧಾನ ಪದ್ಧತಿಯ ಪಲ್ಲವಿಗಳನ್ನು ಪರಿಚಯ ಮಾಡಿಕೊಟ್ಟ ಮಹಾನ್‌ ಮೇರು ಪುರುಷರಾಗಿದ್ದಾರೆ.

ಪಲ್ಲವಿ ಚಂದ್ರಪ್ಪನವರ ಮತ್ತೊಂದು ವೈಶಿಷ್ಟ್ಯವೆಂದರೆ ಪ್ರಚಲಿತವಲ್ಲದ ಗುರು-ಪ್ಲುತ-ಕಪಾದ ಮುಂತಾದ ಅಂಗಗಳಿಂದ ಕೂಡಿದ ಅಪೂರ್ವ ಹಾಗೂ ಮರ್ಮ ತಾಳಗಳನ್ನು ವಿವಿಧ ಗತಿಭೇದಗಳಿಂದ ವೈವಿಧ್ಯಮಯ ನೆರವಲ್‌ ಮತ್ತು ಕೊರಪುಗಳೊಂದಿಗೆ ಲೀಲಾ ಜಾಲವಾಗಿ ನಿರೂಪಿಸುತ್ತಿದ್ದುದು.

ಪಲ್ಲವಿ ಚಂದ್ರಪ್ಪನವರು ನಳನಾಮ ಸಂವತ್ಸರ ೧೯೧೬ನೇ ಇಸವಿ ಮೇ ೧೧ರಂದು  ಬೆಂಗಳೂರಿನ ದಂಡು ಪ್ರದೇಶದಲ್ಲಿ (ಈಗಿನ ಶಿವಾಜಿನಗರ ದಂಡು ಪ್ರದೇಶ) ವಿದ್ವಾನ್‌ ಬಿ. ಶೇಷಪ್ಪ ಮತ್ತು ಮುನಿಯಮ್ಮ ದಂಪತಿಗಳ ೪ನೇ ಸುಪುತ್ರನಾಗಿ ಜನಿಸಿದರು. ಇವರಿಗೆ ಇಬ್ಬರು ಅಕ್ಕಂದಿರು (ಲಕ್ಷ್ಮಮ್ಮ ಮತ್ತು ಪುಟ್ಟಮ್ಮ) ಹಾಗೂ ಅಣ್ಣ (ತಮ್ಮಯ್ಯ). ತಂದೆಯ ಜೊತೆಗೆ ತಾತ ಮುರಾರಿ ತಿಮ್ಮಯ್ಯ ಶೆಟ್ಟರು ಒಳ್ಳೆಯ ವಿದ್ವಾಂಸರಾಗಿದ್ದು ಸಂಗೀತ, ಗಮಕ, ಕಾವ್ಯವಾಚನ, ಕೀರ್ತನೆ, ಶಿವಶರಣರ ವಚನಗಳನ್ನೂ ಹರಿದಾಸರುಗಳ ದೇವರನಾಮಗಳನ್ನು ಹಾಡುವುದರಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಗಳಿಸಿದ್ದರು. ಪೂರ್ವಿಕರು ನೆಲಮಂಗಲದವರಾಗಿದ್ದು (ಬೆಂಗಳೂರು ಸಮೀಪ ತುಮಕೂರು ರಸ್ತೆಯಲ್ಲಿರುವ) ಸ್ವಂತ ಉದ್ಯೋಗ ಮಾಡಲು ಬೆಂಗಳೂರು ನಗರಕ್ಕೆ ಬಂದು ದಂಡು ಪ್ರದೇಶದಲ್ಲಿ ಮಹಾತ್ಮ ಕೆಫೆ ಎಂಬ ಹೆಸರಿನಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತ ನೆಲೆಸಿದರು. ಓ.ಪಿ.ಹೆಚ್‌. ರಸ್ತೆಯಲ್ಲಿ ಶ್ರೀರಾಮ ಭಜನಾ ಮಂಡಳಿಯನ್ನು ನಡೆಸುತ್ತಿದ್ದು ಸ್ಥಳೀಯ ವಿದ್ವಾಂಸರುಗಳನ್ನೊಳಗೊಂಡಂತೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ತಮಿಳುನಾಡಿನಿಂದ ಭಜನೆ ಮಂದಿರಕ್ಕೆ ವಿದ್ವಾಂಸರು ಆಗಮಿಸಿ ರಾತ್ರಿಯಿಂದ ಬೆಳಗಿನ ಜಾವದವರೆವಿಗೂ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದರು.

ಬಾಲ್ಯ ಮತ್ತು ಸಂಗೀತ ವಾತಾವರಣ: ಚಂದ್ರಪ್ಪನವರು ಎಳೆಯ ವಯಸ್ಸಿನಲ್ಲೇ ತಾತನ ಹಾಗೂ ತಂದೆಯ ತೊಡೆಯೇರಿ ಸಂಗೀತವನ್ನು  ಸದಾ ಆಲಿಸುತ್ತಿದ್ದು ಮನಸ್ಸು ಸಹಜವಾಗಿ ಸಂಗೀತಕ್ಕೆ ಆಕರ್ಷಿತವಾಗಿ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿ ಒಮ್ಮೆ ಕೇಳಿದರೆ ಸಾಕು ಅದರಂತೆಯೇ ಹಾಡುವ ಜ್ಞಾನ ಎಳೆತನದಲ್ಲೇ ಲಭಿಸಿತ್ತು. ನಾಲ್ಕು ಮಕ್ಕಳಲ್ಲಿ ಬಾಲಕ ಚಂದ್ರಪ್ಪನಿಗಾದರೂ ಸಂಗೀತದಲ್ಲಿದ್ದ ಆಸಕ್ತಿಯನ್ನು ಕಂಡು ತಾತ ಮತ್ತು ತಂದೆಯವರಿಂದ ಸಂಗೀತ ಶಿಕ್ಷಣ ಪ್ರಾರಂಭವಾಯಿತು. ಜೊತೆಗೆ ವಿದ್ಯಾಭ್ಯಾಸಕ್ಕಾಗಿ ಶಾಲೆಗೂ ಸೇರಿಸಲಾಯಿತು. ಬಾಲಕ ಚನ್ನಪ್ಪನಿಗೆ ಸಂಗೀತದ ಮೇಲೆ ಹೆಚ್ಚಿನ ಅಭಿರುಚಿಯಾಗಿ ಶಾಲೆಗೆ ಚಕ್ಕರ ಹೊಡೆದು ಭಜನೆ ಮಂದಿರಗಳಿಗೆ ಓಡುತ್ತಿದ್ದ ಹಾಗೂ ಮರದ ಕೆಳಗೆ ಕುಳಿತು ಸಂಗೀತ ಅಭ್ಯಾಸ ಮಾಡುತ್ತಿದ್ದ. ತನ್ನ ಮುದ್ದಿನ ಚನ್ನಪ್ಪ ಶಾಲೆಯ ವಿದ್ಯೆ ಹಾಳು ಮಾಡಿಕೊಳ್ಳುತ್ತಾನಲ್ಲ ಎಂದು ತಾಯಿಯು ಕೊರಗಿದರೆ, ತಾತ ಮತ್ತು ತಂದೆಯವರು ‘ಸರಸ್ವತಿ ಅವನ ಕೈ ಹಿಡಿಯುವಂತಿದೆ’ ಎಂದು ಹೇಳಿ ಸಮಾಧಾನ ಪಡುತ್ತಿದ್ದರು. ಹೀಗಾಗಿ ಚನ್ನಪ್ಪನಿಗೆ ಸಂಗೀತ ವಿದ್ಯೆಯು ಒಲಿಯತೊಡಗಿತು. ಹೇಳಿಕೊಟ್ಟಿದ್ದನ್ನೆಲ್ಲ ಅರಗಿಸಿಕೊಳ್ಳುತ್ತಿದ್ದ ಬಾಲಕ, ಕಚೇರಿಗಳು ನಡೆಯುತ್ತಿದ್ದ ಕಡೆಗಳೆಲ್ಲೆಲ್ಲಾ ಹಾಜರಾಗುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಪುರಂದರದಾಸರ, ತ್ಯಗರಾಜರ ಆರಾಧನೆಗಳಲ್ಲಿ, ಭಜನಾ ಮಂದಿರಗಳಲ್ಲಿ ನಡೆಸುವ ಗುರುಪೂಜೆ ಹಾಗೂ ಇನ್ನಿತರ ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಾಡಲಾರಂಭಿಸಿದರು. ಚಂದ್ರಪ್ಪನವರ ಗಾಯನಕ್ಕೆ ಮನಸೋತು ಕೆಲವು ಗಣ್ಯ ವ್ಯಕ್ತಿಗಳು ತಮ್ಮ ತಮ್ಮ ಮನೆಯ ಸಮಾರಂಭಗಳಿಗೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರೆದೊಯ್ದು ಹಾಡಿಸುತ್ತಿದ್ದರು.

ಗಣ್ಯ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಗುರುಪೂಜೆಯ ಸಮಾರಂಭಕ್ಕೆ ಬಾಲಕ ಚಂದ್ರಪ್ಪನವರನ್ನು ಕರದೊಯ್ದು ಹಾಡಿಸುತ್ತಿದ್ದಾಗ ಅದೇ ಸಂದರ್ಭದಲ್ಲಿ ನಾಗಸ್ವರ ನುಡಿಸಲು ಬಂದಿದ್ದ ಪ್ರಖ್ಯಾತ ವಿದ್ವಾಂಸರಾಗಿದ್ದ ಬಂಗಾರು ನಾಗಸ್ವರ ವಿದ್ವಾನ್‌ ಎನ್‌.ವೆಂಕಟಪ್ಪನವರು (ಇವರಿಗೆ ಬಂಗಾರದ ನಾಗಸ್ವರವನ್ನು ಸನ್ಮಾನದಲ್ಲಿ ನೀಡಿದ್ದರೆಂತೆ) ಬಾಲಕ ಚಂದ್ರಪ್ಪನವರನ್ನು ಕರೆದು “ನಿನ್ನಲ್ಲಿ ದೈವಾಂಶವಿದೆ ನೀನು ಮುಂದೆ ಬಹಳ ದೊಡ್ಡ ವಿದ್ವಾಂಸನಾಗುವ ಯೋಗವಿದೆ” ಎಂದು ಹೇಳಿ “ನಿನಗೆ ಸಂಗೀತವನ್ನು ಕಲಿಸಬೇಕೆಂದು ನನ್ನಲ್ಲಿ ಪ್ರೇರೇಪಣೆಯಾಗುತ್ತಿದೆ” ಎಂದರು. ಹೀಗೆ ಆರಂಭವಾದ ಸಂಗೀತ ಶಿಕ್ಷಣವು ಲಮುಂದೆ ವಿದ್ವಾಂಶರುಗಳಾದ ಟೈಗರ್ ವರದಾಚಾರರ ಪ್ರಥಮ ಶಿಷ್ಯರಾಗಿದ್ದ ಬಿ. ನರಸಿಂಹಮೂರ್ತಿ, ವಿ.ಶ್ರೀನಿವಾಸರಾವ್‌ ಇವರಲ್ಲಿ ಮುಂದುವರೆಯಿತು. ತೀರದ ದಾಹ, ಮತ್ತೆ ಹಿರಿಯ ವಿದ್ವಾಂಸರಲ್ಲಿ ಸಂಗೀತ ಶಿಕ್ಷಣ ಮುಂದುವರೆಸಿದರು. ಮೈಸೂರು ಆಸ್‌ಆನ ವಿದ್ವಾನ್‌ ಡಾ.ಬಿ. ದೇವೇಂದ್ರಪ್ಪನವರಲ್ಲೂ ಕೆಲವು ಕಾಲ ಸಂಗೀತ ಪಾಠವಾಯಿತು.

ಪಲ್ಲವಿ ಚಂದ್ರಪ್ಪನವರ ಆಪ್ತ ಸ್ನೇಹಿತರಾಗಿದ್ದ ಸಿ. ಲಕ್ಷಣನ್‌ ಮದರಾಸಿನ ದೊಡ್ಡ ಜವಳಿ ಅಂಗಡಿಯ ಮಾಲಿಕರಾಗಿದ್ದು ಮದರಾಸಿನ ಸಿನಿಮಾ ಪ್ರಪಂಚದೊಂದಿಗೆ ನಿಕಟ ಸಂಪರ್ಕವಿದ್ದು ಅನೇಕ ನಟನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರುಗಳಿಗೆ ಬಹಳ ಬೇಕಾದವರಾಗಿದ್ದು ಚಂದ್ರಪ್ಪನವರಿಗೆ ಮದರಾಸಿನ ಚಲನಚಿತ್ರದಲ್ಲಿ ನಟಿಸುವ ಒಳ್ಳೆಯ ಅವಕಾಶವೊದಗಿ ಬಂತು. ಮದರಾಸಿಗೆ ತೆರಳಿ ಸಿನಿಮಾ ನಟನೆಯ ಪ್ರಯತ್ನದಲ್ಲಿರುವ ಸಂದರ್ಭದಲ್ಲಿ ಮದರಾಸಿನಲ್ಲಿ ನೆಲೆಸಿದ್ದ ಪಾಂಡಿಚೇರಿಯ ದೊಡ್ಡ ಜಮೀನ್ದಾರರೊಬ್ಬರ ಮನೆಯ ಮದುವೆ ಸಮಾರಂಭದಲ್ಲಿ ಚಂದ್ರಪ್ಪನವರ ಸಂಗೀತ ಕಚೇರಿ ಏರ್ಪಾಡಾಯಿತು. ಚಂದ್ರಪ್ಪನವರಿಗೆ ಮದರಾಸು ಹೊಸದಾದ್ದರಿಂದ ಸ್ನೇಹಿತ ಲಕ್ಷ್ಮಣನ್‌ರಿಗೆ ಕಚೇರಿಗೆ ಪಕ್ಕವಾದ್ಯ  ಏರ್ಪಡಿಸಲು ಹೇಳಿದಾಗ ಲಕ್ಷ್ಮಣನಿಗೆ ತಿಳಿದಿದ್ದ ಸ್ನೇಹಿತ ತಿರುಪತಿ ವಿದ್ಯಲ ನರಸಿಂಹಲು ನಾಯುಡು (ಇವರು ಪ್ರಸಿದ್ಧ ವಾಗ್ಗೇಯಕಾರ ಪರಾಕೇಲ ಸರಸ್ವತಿ ಕೃತಿ ಮತ್ತು ವಗಲಾಡಿ ಜಾವಳಿಗಳ ಕರ್ತೃ ತಿರುಪತಿ ನಾರಾಯಣ ಸ್ವಾಮಿ ನಾಯುಡು ಇವರ ಸೋದರಳಿಯ) ಎಂಬುವರ ಬಳಿ ಚಂದ್ರಪ್ಪನವರನ್ನು ಕರೆದೊಯ್ದು ಇವರ ವಿಷಯವನ್ನು ತಿಳಿಸಿ ಪಕ್ಕವಾದ್ಯಗಾರರನ್ನೇರ್ಪಡಿಸಲು ಕೋರಿದರು. ನಾಯುಡುರವರು ಚಂದ್ರಪ್ಪನವರನ್ನು  ನೋಡಿ ಈತನೇನು ಹಾಡಬಲ್ಲ ಮಹಾ? ಎಂದುಕೊಂಡಿದ್ದರು. ಚಂದ್ರಪ್ಪನವರ ಕಚೇರಿ ಕೇಳಲು ನರಸಿಂಹಲು ನಾಯುಡುರವರು ಸಹ ಮದುವೆ ಮನೆಗೆ ಬಂದರು. ಚಂದ್ರಪ್ಪನವರ ಹಾಡುಗಾರಿಕೆ ಎಲ್ಲರ ಮನಸೆಳೆಯಿತು. ಅದೇ ವೇದಿಕೆಯಲ್ಲಿ ನಾಯುಡುರವರು ಚಂದ್ರಪ್ಪನವರಿಗೆ ಒಂದು ಪಲ್ಲವಿಯನ್ನು ಹಾಡಲು ಆದೇಶಿಸಿದರು.  ಚಂದ್ರಪ್ಪನವರು ಪ್ರಥಮ ಗುರುಗಳಾದ ನಾಗಸ್ವರ ವಿದ್ವಾನ್‌ ವೆಂಟಪ್ಪನವರಿಂದ ಕಲಿತ ದ್ವಿಗತಿ ಪಲ್ಲವಿಯನ್ನು ಅತ್ಯುತ್ತಮವಾಗಿ ಹಾಡಿದರು. ಇದನ್ನು ಕೇಳಿದ ನಾರಾಯಣಸ್ವಾಮಿ ನಾಯುಡುರವರು ಆನಂದ ಮತ್ತು ಆಶ್ಚರ್ಯದಿಂದ ಈ ಮುಂಚೆ ಚಂದ್ರಪ್ಪನವರನ್ನು ಶಂಕಿಸಿದುದಾಗಿಯೂ ಇನ್ನು ತಮ್ಮ ಶಂಕೆನೀಗಿತೆಂದು ಚಂದ್ರಪ್ಪನವರನ್ನು ಕುರಿತು “ನಿನಗೆ ಸಂಗೀತ ಪಾಠ ಹೇಳಲು ನನ್ನ ಮನಸ್ಸು ಪ್ರೇರೇಪಿಸುತ್ತಿದೆ. ನನ್ನ ಬಳಿಯೇ ಇದ್ದು ಇನ್ನು ಕೆಲವು ಪಲ್ಲ;ವಿಯ ಕುರಿತಾದ ವಿಷಯಗಳನ್ನು ತಿಳಿದುಕೊ ನೀನು ಅದಕ್ಕೆ ಯೋಗ್ಯನಾಗಿದ್ದೀಯ” ಎಂದು ತಿಳಿಸಿದರು. ಈ ಘಟನೆಯಿಂದ ಸಿನಿಮಾ ರಂಗದಲ್ಲಿ ವಿಜೃಂಭಿಸಬೇಕೆಂದಿದ್ದ ಚಂದ್ರಪ್ಪನವರ ಬಾಳಿನಲ್ಲಿ ಬಹಳ ಮಹತ್ವದ ತಿರುವಾಗಿ ಮತ್ತೆ ಸಂಗೀತ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿ ನರಸಿಂಹಲು ನಾಯುಡುರವರ ನೆಚ್ಚಿನ ಶಿಷ್ಯರಾದರು. ನಾಯುಡುರವರು ಶಿಷ್ಯನಿಗೆ ಲಯದಲ್ಲಿರುವ ಸೂಕ್ಷ್ಮ ಜ್ಞಾನವನ್ನು ಗುರುತಿಸಿ ತಮ್ಮ ವಿದ್ಯೆಯನ್ನೆಲ್ಲ ಮುಕ್ತ ಮನಸ್ಸಿನಿಂದ ಧಾರೆಯೆರೆದು ಹಲವಾರು ವರ್ಷಗಳ ಕಾಲ ಅವರನ್ನು ತನ್ನ ಮಗನಂತೆ ಭಾವಿಸಿ ಲಯಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು, ಪ್ರಾಚೀನ ಕಾಲದ ಕ್ಲಿಷ್ಟ ಹಾಗೂ ಅಪರೂಪದ ದೊಡ್ಡ ದೊಡ್ಡ ಪಲ್ಲವಿಗಳ ಜೊತೆಗೆ ನವೀನ ಕಾಲದ ಪಲ್ಲವಿಗಳನ್ನು ಹೇಳಿಕೊಟ್ಟು “ನಿನ್ನ ಪೂರ್ವಜನ್ಮದ ಪುಣ್ಯ” ಎಂದು ಚಂದ್ರಪ್ಪನವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಸಾಧಾರಣವಾಗಿ ಲಯಜ್ಞಾನವು ಯಾರಿಗೂ ಸ್ವಾಧೀನವಾಗುವುದಿಲ್ಲ ನನಗೂ ಸಾವಿರಾರು ಶಿಷ್ಯರಿದ್ದು ನಿನ್ನ ಜೊತೆಯಲ್ಲಿಯೇ ಎಷ್ಟೋ ಶಿಷ್ಯರು ಕಲಿಯುತ್ತಿದ್ದಾರೆ ಸರಸ್ವತಿ ಮಾತೆಯ ವರಪ್ರಸಾದದಿಂದ ಅವರ್ಯಾರಿಗೂ ಲಭ್ಯವಾಗದ ವಿದ್ಯೆ ನಿನಗೆ ಪ್ರಾಪ್ತವಾಗಿರುವುದು ಎಂದರು.

ಒಮ್ಮೆ ಮದರಾಸಿನ ಒಂದು ಸಂಗೀತ ಸಭೆಯಲ್ಲಿ ಸುಪ್ರಸಿದ್ಧ ವಿದ್ವಾಂಸರಾಗಿದ್ದ ಚಿತ್ತೂರು ಸುಬ್ರಹ್ಮಣ್ಯಂ ಪಿಳ್ಳೆಯವರ ಸಂಗೀತ ಕಚೇರಿ ಏರ್ಪಾಡಾಗಿದ್ದು ಅನಿವಾರ್ಯ ಕಾರಣದಿಂದ ಆ ದಿನದ ಕಚೇರಿಗೆ ಬರಲಾಗುವುದಿಲ್ಲವೆಂದು ತಂತಿ ಕಳಿಸಿದ್ದು ಕಚೇರಿಗೆ ಸಂಪೂರ್ಣ ಟಿಕೆಟ್‌ಗಳನ್ನು ಮಾರಿಯಾಗಿದ್ದು, ಕಚೇರಿಯನ್ನು ನಿಲ್ಲಿಸಲಾಗದೆ ಅಂತ ದೊಡ್ಡ ವಿದ್ವಾಂಸರ ಸ್ಥಾನದಲ್ಲಿ ಕುಳಿತು ಹಾಡುವ ಅರ್ಹತೆಯುಳ್ಳವರ್ಯಾರೆಂದು ಸಭೆಯ ವ್ಯವಸ್ಥಾಪಕರಿಗೆ ತಿಳಿಯದೆ ತಮ್ಮ ಮರ್ಯಾದೆ ಕಾಪಾಡಿಕೊಳ್ಳಲು ನರಸಿಂಹುಲು ನಾಯ್ಡುರವರ ಮೊರೆ ಹೋದರು. ನಾಯುಡುರವರು ಅವರ ದೇಹ ಸ್ಥಿತಿ ಸರಿಯಿಲ್ಲದ ಕಾರಣ ತಮ್ಮ ಶಿಷ್ಯ ಚಂದ್ರಪ್ಪನನ್ನು ಸಭಾ ಕಚೇರಿಗೆ ಕಳುಸುತ್ತೇನೆಂದು ತಿಳಿಸಿದರು. ವ್ಯವಸ್ಥಾಪಕರಿಗೆ, ಚಂದ್ರಪ್ಪನವರ ಹೆಸರು ಕೇಳಿ ಅಚ್ಚರಿ ಅನುಮಾನವಾಗಿ ಮೈಸೂರು ಹುಡುಗ ಇವನೇನು ಹಾಡಬಲ್ಲ ಎಂದು ಅನುಮಾನಿಸಿದ್ದವರಿಗೆ ಅಂದಿನ ಕಚೇರಿ ಅಮೋಘವಾಗಿ ನಡೆದು, ನೆರೆದಿದ್ದ ಮಹಾಮಹಾ ವಿದ್ವಾಂಸರೆಲ್ಲ “ನಾಯುಡುರವರು ತಮ್ಮ ವಿದ್ಯೆಯ ಸಂಪತ್ತನ್ನೆಲ್ಲವನ್ನೂ ಈ ಮೈಸೂರು ಹುಡುಗನಿಗೆ ಧಾರೆಯೆರೆದು ಬಿಟ್ಟಿದ್ದಾರೆ” ಎಂದು ಹೊಗಳಿ ಸಂಮಾನಿಸಿದರು.

ಪಲ್ಲವಿ ಚಂದ್ರಪ್ಪನವರು ಮೈಸೂರು ಅರಮನೆಯಲ್ಲಿ ಹಾಡಿ ತಮ್ಮ ವಿದ್ವತ್‌ ಪಾಂಡಿತ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದರು. ಮೈಸೂರು ಅರಮನೆ ಆಸ್ಥಾನದ ಮೃದಂಗ ವಿದ್ವಾಂಸರಾಗಿದ್ದ ಟಿ.ಎಂ. ವೆಂಕಟೇಶ ದೇವರು (ಇವರ ತಂದೆ ಮುತ್ತುಸ್ವಾಮಿ ದೇವರು (೧೮೭೧-೧೯೩೬) ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಮಹಾರಾಜರ ಆಸ್ಥಾನ ವಿದ್ವಾಂಸರಾಗಿದ್ದರು). ಚಂದ್ರಪ್ಪನವರಿಗೆ ಅವರು ಮದರಾಸಿನಲ್ಲಿ ಸಂಗೀತ ಪಾಠ ಮಾಡುತ್ತಿದ್ದಾಗಿನಿಂದಲೂ ಆಪ್ತ ಗೆಳೆಯರಾಗಿದ್ದರು. ಚಂದ್ರಪ್ಪನವರಲ್ಲಿದ್ದ ಅಪೂರ್ವ ಲಯ ಮತ್ತು ಪಲ್ಲವಿಯಲ್ಲಿದ್ದ ಜ್ಞಾನವನ್ನು ತಿಳಿದಿದ್ದ ವೆಂಕಟೇಶದೇವರು ಚಂದ್ರಪ್ಪನವರಿಗೆ ೩೫ ದೇಶಾದಿ ತಾಳಗಳನ್ನು ಬಿಟ್ಟು ಅನ್ಯ ತಾಳಗಳಲ್ಲಿ ಹಾಗೂ ತಾಳಾವಧಾನ ಪದ್ಧತಿಯಲ್ಲಿ ಪಲ್ಲವಿ ಹಾಡಲು ಪ್ರಚೋದಿಸಿ ಅವರ ಸಂಗೀತ ಕಚೇರಿಯಲ್ಲಿ ಕೊನೆಗೋಲು ಹಾಡುತ್ತಿದ್ದರು.

ಚಂದ್ರಪ್ಪನವರು ಗುರುಕುಲ ವಾಸ ಮುಗಿಸಿ ಮದ್ರಾಸಿನಿಂದ ಬೆಂಗಳೂರಿಗೆ ಹಿಂತುರಿಗಿದ ಸಂದರ್ಭದಲ್ಲಿ ಮೈಸೂರಿನ ಬಿಡಾರಂ ಕೃಷ್ಣಪ್ಪ ರಾಮಮಂದಿರದಲ್ಲಿ ವಾರ್ಷಿಕ ಸಂಗೀತ ಸಮ್ಮೇಳನದ ವಿದ್ವತ್‌ ಸದಸ್ಸಿನಲ್ಲಿ ಅಷ್ಟೋತ್ತರ ಶತತಾಳದಲ್ಲಿನ ಒಂದು ಕ್ಲಿಷ್ಟ ಪಲ್ಲವಿಯನ್ನು ಪ್ರಾತ್ಯಕ್ಷಿಕೆ ನೀಡಿ ಸಭೆಯಲ್ಲಿ ನೆರೆದಿದ್ದ ಪ್ರಖ್ಯಾತ ವಿದ್ವಾಂಸರಾಗಿದ್ದ ಬಿ.ಕೆ. ಪದ್ಮನಾಭರಾವ್‌, ನಾರಾಯಣಸ್ವಾಮಿ ಭಾಗವತರ್ ಇನ್ನಿತರ ನೂರಾರು ವಿದ್ವಾಂಸರುಗಳನ್ನು ಚಕಿತಗೊಳಿಸಿದರು. ಪಿಟೀಲು ಚೌಡಯ್ಯನವರು ವೇದಿಕೆಗೆಕ ಬಂದು ಈಗ ಚಂದ್ರಪ್ಪ ಹಾಡಿದ ಪಲ್ಲವಿಗೆ ವಿದ್ವತ್‌ನ್ನು ಪ್ರಶಂಸಿಸಿದರು.

ಚಂದ್ರಪ್ಪನವರ ಸಹಪಾಠಿ ಶ್ರೀಮತಿ ಡಿ.ಕೆ. ಪಟ್ಟಮ್ಮಾಳ್‌ರವರು ಬೆಂಗಳೂರಿನ ಸಂಗೀತ ಕಚೇರಿಗೆ ಬಂದಿದ್ದಾಗ ಚಂದ್ರಪ್ಪನವರನ್ನು ಕಂಡು “ನೀವು ಮದರಾಸನ್ನು ಮರೆತಂತೆ ಕಾಣುತ್ತದೆ, ನಿಮ್ಮಲ್ಲಿರುವ ಅಪಾರವಾದ ಪಾಂಡಿತ್ಯವನ್ನು ಮದರಾಸು ಮ್ಯೂಸಿಕ್‌ ಅಕಾಡೆಮಿಯ ಸಂಗೀತ ಸಮ್ಮೇಳನ ವಿದ್ವತ್‌ ಸದಸ್‌ನಲ್ಲಿ ದಯವಿಟ್ಟು ಪ್ರದರ್ಶಿಸಿ, ಮದರಾಸಿನ ಎಲ್ಲಾ ವಿದ್ವಾಂಸರಿಗೂ ನಿಮ್ಮ ವಿದ್ವತ್ತು ಪಾಂಡಿತ್ಯ ಗೊತ್ತಾಗಲಿ” ಎಂದು ಹೇಳಿ ಮದರಾಸು ಮ್ಯೂಸಿಕ್‌ ಅಕಾಡೆಮಿಯಿಂದ ಕರೆಯೋಲೆಯನ್ನು ಕಳಿಸಿದರು. ಅದರಂತೆ ಶ್ರೀ ಚಂದ್ರಪ್ಪನವರು ೧೯೬೦ರಿಂದ ಪ್ರತಿವರ್ಷವೂ ಮದರಾಸು ಮ್ಯೂಸಿಕ್‌ ಅಕಾಡೆಮಿಯಲ್ಲಿ ಅನೇಕ ಅಪರೂಪದ ಪಲ್ಲವಿಗಳನ್ನೂ, ಅಷ್ಟೋತ್ತರ ಶತತಾಳದ ಅವಧಾನ ಪದ್ಧತಿಯಲ್ಲಿನ ಪಲ್ಲವಿಗಳ ಪ್ರಾತ್ಯಕ್ಷಿಕೆಗಳನ್ನು ನೀಡಿರುತ್ತಾರೆ. ಪ್ರತಿ ವರ್ಷವೂ ಇವರ ಅತ್ಯದ್ಭುತ ಪಲ್ಲವಿಗಳ ಪ್ರಾತ್ಯಕ್ಷಿಕೆಗಳನ್ನು ನೋಡಿ, ಕೇಳಿ ನಲಿದ ಮಹಾ ಮಹಾ ವಿದ್ವಾಂಸರುಗಳು ಕರ್ನಾಟಕ ರಾಜ್ಯದಲ್ಲಿ ಮಹಾ ವಿದ್ವಾಂಸರಿದ್ದಾರೆಂದು ಮುಕ್ತ ಮನಸ್ಸಿನಿಂದ ಕೊಂಡಾಡಿದ್ದಾರೆ. ಸುಪ್ರಸಿದ್ಧ ವಿದ್ವಾಂಸರುಗಳಾದ ಮುಡಿಕೊಂಡಾನ್‌ ವೆಂಕಟ ರಾಮಯ್ಯರ್, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆ, ವೆಂಕಟರಾಮಯ್ಯರ್, ಬೂದಲೂರು ಕೃಷ್ಣಮೂರ್ತಿ ಶಾಸ್ತ್ರಿ, ಆಲತ್ತೂರು ಶಿವಸುಬ್ರಹ್ಮಣ್ಯ ಅಯ್ಯರ್, ಡಾ. ದ್ವಾರಂ ವೆಂಕಟಸ್ವಾಮಿ ನಾಯುಡು (ಇವರೆಲ್ಲರೂ ಸಂಗೀತ ಕಲಾನಿಧಿಕ ಮುಂತಾದ ಬಿರುದಾಂಕಿತರು) ಡಾ.ವಿ. ರಾಘವನ್‌ ಮುಂತಾದವರು ಸ್ವಹಸ್ತದಿಂದ ಪಲ್ಲವಿ ಚಂದ್ರಪ್ಪನವರಿಗೆ ಅರ್ಹತಾ ಪತ್ರಗಳವನ್ನು ನೀಡಿ ಈ ಪ್ರಾಚೀನ ಕಾಲದ ಅಪರೂಪವಾದ ಹಾಗೂ ಸಂಪ್ರದಾಯಬದ್ಧ ಪಲ್ಲವಿ ಪರಂಪರೆಯನ್ನು  ಸರ್ಕಾರದವರು ಇಂತಹ ಅಪರೂಪದ ವಿದ್ವಾಂಸರ ಉಪಯೋಗವನ್ನು  ಪಡೆದುಕೊಂಡು ಕಲಾ ಪ್ರಪಂಚಕ್ಕೆ ಹಂಚದಿದ್ದಲ್ಲಿ ತುಂಬಲಾರದ ನಷ್ಟವೆಂದು ಹೇಳಿರುತ್ತಾರೆ. ಅವರುಗಳು ನೀಡಿರುವ ಅರ್ಹತಾ ಪತ್ರಗಳು ಈಗಲೂ ಇವೆ.

ಒಮ್ಮೆ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಚಂದ್ರಪ್ಪನವರ ಪಲ್ಲವಿ ಪ್ರದರ್ಶನದ ಬಳಿಕ ಅಧ್ಯಕ್ಷರಾದ ಆಲತ್ತೂರು ಶಿವಸುಬ್ರಹ್ಮಣ್ಯಂರವರು ಹಿಂದಿನ ತಲೆಮಾರಿನಲ್ಲಿದ್ದ ಕೆಲವು ಪಲ್ಲವಿ ಪ್ರವೀಣರ ಬಗೆಗೆ ಪ್ರಸ್ತಾಪಿಸಿ ಚಂದ್ರಪ್ಪನವರ ಪ್ರತಿಭೆ ಹಾಗೂ ಪಲ್ಲವಿ ಪರಂಪರೆಯನ್ನು ಬಾಯಿ ತುಂಬಾ ಹೊಗಳಿ “ನಾವೇನೋ ಪಲ್ಲವಿಯಲ್ಲಿ ಗಟ್ಟಿಗರೆಂದು ತಿಳಿದುಕೊಂಡಿದ್ದೇವೆ. ಆದರೆ ಇನ್ನು ಮುಂದೆ ಬೆಂಗಳೂರು ಮೈಸೂರು ಕಡೆ ಹೋಗಬೇಕಾದಾಗ ಸ್ವಲ್ಪ ಎದೆಮುಟ್ಟಿಕೊಂಡು ಹೋಗಬೇಕಾಗಿದೆ!” ಎಂದು ಹೇಳಿದ್ದಾರೆ.

ರಾಜ್ಯದ ಕರ್ನಾಟಕ ಸಂಗೀತ ಪ್ರಪಂಚದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವ ಅಂಶವೆಂದರೆ ಪ್ರಪ್ರಥಮವಾಗಿ ತಾಳಾವಧಾನ ಪಲ್ಲವಿಯನ್ನು ಹಾಡಿದ ಕೀರ್ತಿ ಪಲ್ಲವಿ ಎಸ್‌.ಚಂದ್ರಪ್ಪನವರಿಗೆ ಸೇರುತ್ತದೆ. ಅವರು ದಿನಾಂಕ ೨೦.೮.೧೯೭೦ ರಂದು ಬೆಂಗಳೂರು ನಗರ ಶಂಕರ ಪುರಂನ ಥಿಯಾಸಾಫಿಕಲ್‌ ಸೊಸೈಟಿಯ ಶಂಕರಯ್ಯ ಸಭಾಂಗಣದಲ್ಲಿ ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್‌ ಸದಸ್ಸಿನಲ್ಲಿ ಅವಧಾನ ಪಲ್ಲವಿಯ ಪ್ರಾತ್ಯಕ್ಷಿಕೆ ನೀಡಿ ಒಂದು ಹೊಸ ಚರಿತ್ರೆಯನ್ನು ನಿರ್ಮಿಸಿದರು. ಅಂದು ಅವರು “ಎಂದರೊ ಮಹಾನುಭಾವುಲು ಅಂದರಿಕಿ ವಮದನಮು’’ ಎಂಬ ಸಾಹಿತ್ಯವನ್ನು ಪಲ್ಲವಿಯಾಗಿ ಮಾಡಿಕೊಂಡು , ಬಲಗೈಯಲ್ಲಿ ಖಂಡಜಾತಿ ಅಟ್ಟ ತಾಳ ಚಿತ್ರತರಮಾರ್ಗ ಅತೀತ ಗ್ರಹದ ೨ನೇ ದ್ರುತದಿಂದ ಪ್ರಾರಂಭ ಎಡಗೈಯಲ್ಲಿ ತ್ರಿಶ್ರಜಾತಿ ಮಠ್ಯ ಮಿಶ್ರಗತಿ ಅರ್ಧಾವರ್ತದಲ್ಲಿ ಎಡಪು ಇವೆರಡೂ ಸೇರಿದ ಅಪೂರ್ವ ಮಿಶ್ರಣದಿಂದ ವಿದ್ವಾಂಸರುಗಳ ಸಮ್ಮುಖದಲ್ಲಿ ಹಾಡಿ ನೆರೆದಿದ್ದ ಎಲ್ಲ ಸಭಿಕರನ್ನು ದಿಗ್ಭ್ರಮೆಗೊಳಿಸಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ವಿದ್ವಾಂಸರಾದ ಆರ್.ಆರ್.ಕೇಶವಮೂರ್ತಿ ಅವರು ವೇದಿಕೆಗೆ ಬಂದು ಪಲ್ಲವಿ ಚಂದ್ರಪ್ಪನವರ ಅದ್ಭುತ ಪಾಂಡಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತ, ನಗರದ ಪುರಭವನದಲ್ಲಿ ಚಂದ್ರಪ್ಪನವರ ಕೈಗೆ ಬಂಗಾರದ ತೋಡಾ ತೊಡಿಸಿ ಕಲಾವಿದರು ಸನ್ಮಾನಿಸಿದ್ದನ್ನು ಪ್ರಸ್ತಾಪಿಸಿ ಆ ಸನ್ಮಾನ ಅವರ ಪಾಂಡಿತ್ಯಕ್ಕೆ ಸಾಲದು ಅವರ ಕಾಲಿಗೂ ಬಂಗಾರದ ತೋಡಾ ತೊಡಿಸಬೇಕೆಂದು ಹೇಳಿ ನನಗೆ ಅವರ ಪಾಂಡಿತ್ಯದ ಮೇಲೆ ಇದ್ದ ಶಂಕೆಕ ದೂರವಾಯಿತೆಂದು ಹೇಳಿರುತ್ತಾರೆ. ಪ್ರತಿವರ್ಷವೂ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರುಗಳ ಸಮ್ಮೇಳನದ ವಿದ್ವತ್‌ ಗೋಷ್ಠಿಯಲ್ಲಿ ಪಲ್ಲವಿ ಚಂದ್ರಪ್ಪನವರ ವಿಶೇಷ ಹಾಗೂ ಅಪರೂಪ ತಾಳಾವಧಾನ ಪಲ್ಲವಿಗಳ ಪ್ರಾತ್ಯಕ್ಷಿಕೆ ಎಲ್ಲರ ಕುತೂಹಲವನ್ನು ಕೆರಳಿಸಿ ಇವರ ಕಾರ್ಯಕ್ರಮವು ಪ್ರಧಾನ ಆಕರ್ಷಣೆಯಾಗುತ್ತಿದ್ದುದು ಒಂದು ವಿಶೇಷ. ಇದರಿಂದ ಹಿರಿಯ ಮತ್ತು ಕಿರಿಯ ವಿದ್ವಾಂಸರುಗಳಿಗೆ ಪಲ್ಲವಿಯಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಆಯಿತು.

ದಿನಾಂಕ ೩೦.೮.೧೯೬೯ ರಂದು ಬೆಂಗಳೂರು ನಗರದ ಪುಟ್ಟಣ್ಣಶೆಟ್ಟಿ ಪುರಭವನದಲ್ಲಿ ರಾಜ್ಯದ ವಿದ್ವಾಂಸರುಗಳು, ನಗರದ ಗಣ್ಯ ವ್ಯಕ್ತಿಗಳು, ಕಲಾರಸಿಕರು ಹಾಗೂ ಪಲ್ಲವಿ ಚಂದ್ರಪ್ಪನವರ ಶಿಷ್ಯರು ಎಲ್ಲರೂ ಸೇರಿ ಚಂದ್ರಪ್ಪನವರಿಗೆ ಪಲ್ಲವಿ ಸಂಗೀತ ವಿದ್ವಾನ್‌ ಎಂಬ ಬಿರುದು ನೀಡಿ ಬಂಗಾರದ ಕಡಗವನ್ನು ಕೈಗೆ ತೊಡಿಸಿ ರೂ. ೧,೫೦೧/- ರೂಪಾಯಿ ಜೊತೆಗೆ ಜರೀ ಪೀತಾಂಬರ ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿರುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಕಲಾವಿದರಿಂದ ಕಲಾವಿದನಿಗೆ ಸನ್ಮಾನ ಲಭಿಸುತ್ತಿರುವುದು ಇದೇ ಪ್ರಥಮ. ಈ ಸನ್ಮಾನ ಎಲ್ಲಾ ಸಂಗೀತಗಾರರಿಗೆ ಸಲ್ಲಿಸಿದಂತಾಗಿದೆ ಎಂದು ಖ್ಯಾತ ವಿದ್ವಾಂಸರಾಗಿದ್ದ ‘ಗಾನಕಲಾ ಭೂಷಣ’ ಸಿ. ಹೊನ್ನಪ್ಪ ಭಾಗವತರ್ ಸನ್ಮಾನ ಸಮಾರಂಭದಲ್ಲಿ ತಿಳಿಸಿರುತ್ತಾರೆ.

ಚಂದ್ರಪ್ಪನವರ ಕೀರ್ತಿ ದೇಶದ ರಾಜಧಾನಿ ನವದೆಹಲಿಗೂ ಮುಟ್ಟಿತು. ತಾಳಾವಧಾನ ಪಲ್ಲವಿಯಲ್ಲಿ ಅವರು ಸಾಧಿಸಿರುವ ಸಂಶೋಧನೆಯ ಫಲ ರಾಷ್ಟ್ರದ ಸಂಪತ್ತಾಗಿ ಈ ಅಪೂರ್ವ ದಾಖಲೆಯ ಕಲೆಯು ಮುಂದಿನ ಪೀಳಿಗೆಗೆ ಉಳಿಯಲು ಕೇಂದ್ರ ಸರ್ಕಾರದ ಸಂಗೀತ ನೃತ್ಯ ಮತ್ತು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರವರು ಖ್ಯಾತ ಸಂಗೀತ ವಿಮರ್ಶಕರಾದ ಶ್ರೀ ಬಿ.ವಿ.ಕೆ ಶಾಸ್ತ್ರಿಯವರ ನೆರವಿನಿಂದ ಪಲ್ಲವಿ ಚಂದ್ರಪ್ಪನವರನ್ನು ವಿಶೇಷ ಆಹ್ವಾನದ ಮೇರೆಗೆ ದೆಹಲಿಗೆ ಬರಮಾಡಿಕೊಂಡು ಅಪರೂಪ ಅವಧಾನ ಪಲ್ಲವಿಗಳನ್ನು ( ೩ ತಾಳಾವಧಾನ ಪಲ್ಲವಿಗಳು) ಚಿತ್ರೀಕರಿಸಿಕೊಂಡರು. ಅಕಾಡೆಮಿ ಭಂಡಾರಕ್ಕೆ ಇವನ್ನು ಸೇರಿಸಿಕೊಳ್ಳಲಾಯಿತು.

ಪಲ್ಲವಿ ಚಂದ್ರಪ್ಪನವರ ಜೀವನದಲ್ಲಿ ಅನೇಕ ರೋಮಾಂಚಕ ಘಟನೆಗಳು ನಡೆದಿದ್ದು ಅವುಗಳಲ್ಲಿ ಮುಖ್ಯವಾದ ಒಂದು ಘಟನೆ ಈ ಸಂದರ್ಭದಲ್ಲಿ ತಿಳಿಸುವುದು ಅತ್ಯಂತ ಸೂಕ್ತ.

ಕೇಂದ್ರ ಸಂಗೀತ ನೃತ್ಯ ಮತ್ತು ನಾಟಕ ಅಕಾಡೆಮಿ ನವದೆಹಲಿಯು ಪದ್ಧತಿಯಂತೆ ಚಿತ್ರೀಕರಣಕ್ಕೆ ಮೊದಲು ಪಲ್ಲವಿ ಚಂದ್ರಪ್ಪನವರ ವಿಶೇಷ ಅವಧಾನ ಪಲ್ಲವಿಗಳ ಪ್ರಾತ್ಯಕ್ಷಿಕೆಯನ್ನು ಅಕಾಡೆಮಿಯ ರವಿಂದ್ರಭವನದಲ್ಲಿ ಆಹ್ವಾನಿತ ಮಹಾ ಮಹಾ ವಿದ್ವಾಂಸರುಗಳ ಹಾಗೂ ನೂರಾರು  ಶೋತೃಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿತ್ತು. ಅಂದಿನ ಆಹ್ವಾನಿತರ ಪೈಕಿ ಆಂಧ್ರಪ್ರದೇಶದ ಪ್ರಖ್ಯಾತ ಕಠಿಣ ವಿಮರ್ಶಕರಾದ ಶ್ರೀ ಸುಬ್ಬುಡು ಅವರು ಪ್ರಮುಖರು. ವೇದಿಕೆ ಹತ್ತಿರ ಬಂದ ಸುಬ್ಬುಡುರವರು ಚಂದ್ರಪ್ಪನವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅಸ್ವೌಂಡಿಂಗ್‌,-ದಿಗ್ಭ್ರಮೆಗೊಳಿಸುವಂತಹ ಪಾಂಡಿತ್ಯ-ಎಂದು ಉದ್ಗರಿಸಿದುದೇ ಅಲ್ಲದೆ “ಇದೇ ನಿಜವಾದ ತಾಳಾವಧಾನ ಪಲ್ಲವಿಯ ಪದ್ಧತಿ”ಎಂದೂ ರಾಷ್ಟ್ರೀಯ ಆಂಗ್ಲ ದಿನಪತ್ರಿಕೆಗಳಲ್ಲಿ ವಿಮರ್ಶೆಯನ್ನು ಬರೆದರು.

ಏಪ್ರಿಲ್‌ ತಿಂಗಳ ೧೯೮೬ರಲ್ಲಿ ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಅವರ ಅಪರೂಪದ ಅವಧಾನ ಪಲ್ಲವಿಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು.

ನೃತ್ಯ ಸಂಗೀತ ಮನೋರಂಜನೆಯಲ್ಲಿಯೂ ಒಳಹೊಕ್ಕಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯ ಖ್ಯಾತ ನೃತ್ಯಪಟು ಶಾಂತಾರಾವ್‌ ಅವರಿಗೆ “ಅಷ್ಟ ಮಹಿಷಿ” ಮುಂತಾದ ವಿಶೇಷ ನೃತ್ಯ ಸಂಗೀತ ಸಂಯೋಜನೆ ಮಾಡಿ ಆ ನೃತ್ಯದಿಂದ ಖ್ಯಾತಿ ಬರುವಂತೆ ಸಹಕರಿಸಿದ ಹೆಗ್ಗಳಿಕಲೆಯನ್ನು ಹೊಂದಿದವರು ಚಂದ್ರಪ್ಪನವರು.

ಇವರು ಆಕಾಶವಾಣಿ ನಿಲಯದ ಕಲಾವಿದರ ಸಿಬ್ಬಂದಿ ಆಯ್ಕೆ ಸಮಿತಿಯ ಸದಸ್ಯರಾಗಿ ಹಾಗೂ ಆಡಿಷನ್‌ ಸಮಿತಿಯ ಸದಸ್ಯರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಗಾನಕಲಾ ಪರಿಷತ್‌ ಬೆಂಗಳೂರು-ಇದರ ತಜ್ಞರ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ.

ಶ್ರೀ ಪುರಂದರ ಸೇವಾ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿಯ ವಿಶೇಷ ಸಂಗೀತ ಪರೀಕ್ಷೆಯ ಅಧ್ಯಕ್ಷರಾಗಿ, ಪರೀಕ್ಷಕರಾಗಿ ಹಾಗೂ ಇನ್ನೂ ಅನೇಕ ಸಂಗೀತ ಸಭಾ ಸಂಸ್ಥೆಗಳ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಗೀತ ಕ್ಷೇತ್ರದಲ್ಲಿ ಅನೇಕ ಮಹತ್ವದ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿರುತ್ತಾರೆ.

ಪಲ್ಲವಿ ಚಂದ್ರರಪ್ಪನವರು ತಮ್ಮ ಬಿಡುವಿದ್ದ ಸಮಯದಲ್ಲೆಲ್ಲ ರಾತ್ರಿ ಹಗಲೆನ್ನದೆ ಅವಿರತವಾಗಿ ಸಂಗೀತ ಶಾಸ್ತ್ರ ಅಧ್ಯಯನ ಹಾಗೂ ತಾಳ ಶಾಸ್ತ್ರಗಳ ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸುತ್ತಿದ್ದರು.

ಮೊದಲಿಗೆ ಇವರು ಅನೇಕ ಹರಿದಾಸರ ಕೃತಿಗಳಿಗೆ ಹಾಗೂ ಶಿವಶರಣರ ವಚನಗಳಿಗೆ ಅಪರೂಪ ರಾಗಗಳಲ್ಲಿ ಸ್ವರಸಂಯೋಜನೆ ಮಾಡಿರುತ್ತಾರೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳ ಬಳಕೆಯಲ್ಲಿಲ್ಲದ ಅಪರೂಪ ರಾಗಗಳ ಕೃತಿಗಳನ್ನು ಯಥೇಚ್ಚವಾಗಿ ಹಾಡುತ್ತಿದ್ದರು. ನಂದಕೇಶ್ವರ ಮತಕ್ಕೆ ಸೇರಿದ ಅಷ್ಟೋತ್ತರ ಶತ ತಾಳಗಳು (೧೦೮ ತಾಳಗಳು) ಶುಕ್ರಾಚಾರ್ಯರ ಮತಕ್ಕೆ ಸೇರಿದ ೩೫ ದಿವ್ಯ ಸಂಕೀರ್ಣ ತಾಳಗಳು, ಅಗಸ್ತ್ಯರ ಮತಕ್ಕೆ ಸೇರಿದ ೫೨ ಅಪೂರ್ವ ತಾಳಗಳು, ಹನುಮ ಭರ್ತರ ಮತಕ್ಕೆ ಸೇರಿದ ಮರ್ಮ ತಾಳಗಳು, ಸೂಳಾದಿ ೩೫ ತಾಳಗಳಲ್ಲಿ ವಿಶಾಲವಾದ ಒಂದೊಂದೇ ತಾಳವಾಗಲಿ, ಬೇರೆ ಬೇರೆ ಜಾತಿಯ ತಾಳಗಳ ಮಿಶ್ರಣವಾಗಲಿ ಅವುಗಳಲ್ಲಿ ಅಳವಡಿಸಿದ ವಿಧ ವಿಧ ಗತಿಭೇದಗಳಿಂದ ಕೂಡಿದ ಷಟ್ಕಾಲ ಪಲ್ಲವಿ, ದ್ವಿಗತಿ ತಾಳ, ದ್ವಿತಾಳ ಅಥವಾ ರಟ್ಟೆಯ ಪಲ್ಲವಿಗಳು, ತಾಳಮಾಲಿಕಾ ಪಲ್ಲವಿ, ಪಂಚನಡೆ ಪಲ್ಲವಿ, ಸ್ವರಾಕ್ಷರ ಹಾಗೂ ‘ತತ್ಕಾರ ಪಲ್ಲವಿಗಳು ತಾಳಮಾಲಿಕಾ ಪಲ್ಲವಿ, ಪಂಚನಡೆ ಪಲ್ಲವಿ, ಸ್ವರಾಕ್ಷರ ಹಾಗೂ ‘ತತ್ಕಾರ ಪಲ್ಲವಿಗಳು ೩ ಕಳೆಯಿಂಧ ೧೬ ಕಳೆವರೆವಿಗೂ ಪಲ್ಲವಿಗಳು, ಸ್ರೋತೋವಾಹಯತಿ ಹಾಗೂ ಗೋಪುಚ್ಛ ಯತಿ ತಾಳದ ಪಲ್ಲವಿಗಳು ಹಾಗೂ ಇನ್ನೂ ಅನೇಕ ಪ್ರಾಚೀನ ಕಾಲದ ಪಲ್ಲವಿಗಳನ್ನು ಬೆಳಕಿಗೆ ತಂದಿರುತ್ತಾರೆ.

ಇವರ ಪಾಂಡಿತ್ಯದಲ್ಲಿ ಗಮನಸಿಬೇಕಾದ ಬಹಳ ಮುಖ್ಯವಾದ ಅಂಶವೆಂದರೆ ‘ಲಯ’ ಜ್ಞಾನದಲ್ಲಿದ್ದ ಅಪೂರ್ವ ಸಿದ್ಧಿ ಹಾಗೂ ಮತ್ತೊಂದು ಮುಖ್ಯ ಅಂಶ ಪ್ರಾಚೀನ ಕಾಲದ ಲಘು, ಗುರು, ಪ್ಲುತ ಹಾಗೂ ಕಾಕಪಾದಗಳಿಂದ ಕೂಡಿದ ತಾಳ ನಿರ್ವಹಿಸುವಾಗ ಹಾಗೂ ಪಲ್ಲವಿ ಹಾಡುವಾಗ ಆ ಅಂಗಗಳ ಎಣಿಕೆ ಮಾಡದೆ ನಿರ್ವಹಿಸುವಂತಾದ್ದು. (ಇದು ಸಾಧನೆಯಿಂದ ಸಿದ್ಧಿಸುವ ಕಾರ್ಯ).

ಪಲ್ಲವಿ ಚಂದ್ರಪ್ಪನವರ ಗರಡಿಯಲ್ಲಿ ಅನೇಕ ಶಿಷ್ಯರು ತಯಾರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅವರಲ್ಲಿ ಮೊದಲಿಗೆ ಅವರ ಸುಪುತ್ರರೇ ಆದ ಪಲ್ಲವಿ ಸಿ. ವರದರಾಜ ಅವರು ೨ ದಶಕಗಳಿಗೂ ಮಿಗಿಲಾಗಿ ತಂದೆಯವರೊಡನೆ ಸಹಗಾಯನ ನೀಡುತ್ತಿದ್ದು ತಂದೆಯ ಅಪೂರ್ವ ಕಲೆಯಾದ ಅವಧಶಾನ ಪದ್ಧತಿಯ ಪಲ್ಲವಿಗಳನ್ನು ಪ್ರಾಚೀನ ಕಾಲದ ಅಪರೂಪ ಹಾಗೂ ಕ್ಲಿಷ್ಟ ಪಲ್ಲವಿಗಳ ಪಾಂಡಿತ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಜೊತೆಗೆ ಇನ್ನೊಬ್ಬ ಪುತ್ರ ಪಲ್ಲವಿ ಸಿ. ಜನಾರ್ದನ್‌, ಪ್ರಸನ್ನಕುಮಾರಿ ಸತ್ಯಂ, ಶಾಂತಿರಾವ್‌, ಜ್ಯೋತಿ ಅಶ್ವತ್ಥನಾರಾಯಣ್‌, ಪಿ. ರಾಮಯ್ಯ, ದಿವಂಗತರಾದ ಹನುಮಂತ ರಾಜು (ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಲ್ಲಿ ರಿಜಿಸ್ಟ್ರಾರ್ ಆಗಿದ್ದರು) ಎ. ರಾಮಚಂದ್ರನ್, ಅಮೇರಿಕಾದಲ್ಲಿ ನೆಲೆಸಿರುವ ಡಾ.ವಿ. ಮಹಾದೇವನ್‌, ಎ.ಡಿ. ಜಕರಯ್ಯ, ಅನಂತಾಚಾರ್ ಹಾಗೂ ಮುಂತಾದವರು. ಬೆಳಕಿಗೆ ಬರದ ಇನ್ನೂ ಎಷ್ಟೋ ಮಂದಿ ಅವರಿಂದ ಸಂಗೀತ ಕಲಿತು ಆತ್ಮ ತೃಪ್ತಿಗಾಗಿ ಸಂಗೀತಾಭ್ಯಾಸವನ್ನು ಇಟ್ಟುಕೊಂಡಿದ್ದಾರೆ.

ಪ್ರಶಸ್ತಿ ಮತ್ತು ಬಿರುದು ಸನ್ಮಾನಗಳು: ೧೯೭೪ರಲ್ಲಿ ಮಲ್ಲೇಶ್ವರಂ ರಾಮ ಸೇವಾ ಮಂಡಳಿಯಿಂದ ಉಚ್ಚ ನ್ಯಾಯಾಲಯದ ನ್ಯಾಯಧೀಶರಾಗಿದ್ದ ಕೊ.ಕ. ಸುಬ್ಬರಾಯರ ಅಧ್ಯಕ್ಷತೆಯಲ್ಲಿ ಅವಧಾನ ಪಲ್ಲವಿ ವಿಶ್ಲೇಷಣ ತಿಲಕ ಬಿರುದು; ಅದೇ ವರ್ಷ ಬೆಂಗಳೂರಿನ ಗಾಯನ ಸಮಾಜದವರು ೬ನೇ ಸಂಗೀತ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಿದ್ದಾರೆ. ೧೯೭೫ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತಿನ ೫ನೆಯ ಸಮ್ಮೇಳನಕ್ಕೆ ಅವಿರೋಧವಾಗಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡು ಗಾನಕಲಾ ಭೂಷಣ ಬಿರುದು ಪತ್ರ ಸುವರ್ಣ ಲಾಂಛನದೊಂದಿಗೆ ಸನ್ಮಾನ. ಅದೇ ವರ್ಷ ಅಲಸೂರಿನ ಗುರುಸೇವಾ ಮಂಡಳಿಯಿಂದ ಲಯಯೋಗಿ ಎಂಬ ಬಿರುದು ಪತ್ರದೊಡನೆ ಗೌರವ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಕಲಾ ಸಂಸ್ಥೆಯಿಂದ ಸನ್ಮಾನ ಗೌರವಧನ. ೧೯೭೬ ಮೈಸೂರಿನ ಕಲಾಭಿವರ್ಧಿನಿ ಸಭಾ ವತಿಯಿಂದ ಸನ್ಮಾನ ಪತ್ರ ನೀಡಿ ಗೌರವ. ಇದೇ ವರ್ಷ ಮೈಸೂರಿನ ಡಾ. ಬಿ. ದೇವೇಂದ್ರಪ್ಪನವರು ಸ್ಥಾಪಿಸಿದ ಶ್ರೀ ಮಾರುತಿ ಸೇವಾ ಸಂಗೀತ ಸಮಾಜದವರಿಂದ ತಾಳ ನಿರ್ಣಯ ಸಿಂಧು ಬಿರುದಿನೊಡನೆ ಪುರಸ್ಕಾರ. ೪.೨.೧೯೮೨ರಂದು ಪುರಭವನದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಇವರಿಗೆ ಕರ್ನಾಟಕ ಕಲಾ ತಿಲಕ ಬಿರುದು ನೀಡಿ ಗೌರವಿಸಿದೆ.

ಹೀಗೆ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಅನೇಕ ಸಂಗೀತ ಸಂಘ ಸಂಸ್ಥೆಗಳು ಪಲ್ಲವಿ ಎಸ್‌. ಚಂದ್ರಪ್ಪನವರಿಗೆ ಸನ್ಮಾನಿಸಿ ಗೌರವಿಸಿರುತ್ತಾರೆ.

ಬಿಳಿಯ ಶುಭ್ರವಾದ ಬಟ್ಟೆ ಜರಿಯ ಅಂಗವಸ್ತ್ರವನ್ನು ಧರಿಸಿ ಹಣೆಯ ತುಂಬ ವಿಭೂತಿಯ ಜೊತೆ ಕುಂಕುಮದ ಬೊಟ್ಟನ್ನು ಧರಿಸಿ ಸದಾ ಹಸನ್ಮುಖಿಯಾಗಿರುತ್ತಿದ್ದ ಪಲ್ಲವಿ ಚಂದ್ರಪ್ಪನವರು ನೋಡಿದೊಡನೆ ಭಕ್ತಿ ಗೌರವ ಮೂಡಿಸುವಂತಹ ಆಕರ್ಷಣೆ ಮತ್ತು ವ್ಯಕ್ತಿತ್ವವನ್ನು ಹೊಂದಿದ್ದರು. ಬಹಳ ವಿನಯ ಸ್ವಭಾವದ ಚಂದ್ರಪ್ಪನವರು ವೇದಿಕೆ ಮೇಲೆ ಕುಳಿತು ಕಚೇರಿ ಮಾಡುವಾಗ ಒಳ್ಳೆಯ ಬುದ್ಧ ವಿಗ್ರೆಹದಂತೆ ಅನುಭವವಾಗುತ್ತಿತ್ತು. ಅವರಿಗೆ ಕಿಂಚಿತ್ತೂ ಗರ್ವವಿರಲಿಲ್ಲ. ಸಂಗೀತ ಕಚೇರಿಗಳಲ್ಲಿ ಏಕಾಏಕಿ ಅಪರೂಪ ಹಾಗೂ ಕ್ಲಿಷ್ಟ ಪಲ್ಲವಿಗಳನ್ನು ಹಾಡಿ ಪಕ್ಕವಾದ್ಯಗಾರರಿಗೆ ತಬ್ಬಿಬ್ಬುಗೊಳಿಸದೆ ಪೂರ್ವಭಾವಿಯಾಗಿ ಅಭ್ಯಾಸ ಮಾಡಿ ವೇದಿಕೆಯಲ್ಲಿ ಪಲ್ಲವಿ ಹಾಡಬೇಕೆಂದು ಹೇಳುತ್ತಿದ್ದರು. ಕಲೆ ಮತ್ತು ಕಲಾವಿದರ ಪ್ರತಿಷ್ಠೆಗಳ ಬಗ್ಗೆ ಪಾರ ಗೌರವ ಹೊಂದಿದ್ದ ವ್ಯಕ್ತಿಯಾಗಿದ್ದರು.

ನಮ್ಮ ಕರ್ನಾಟಕ ಸಂಗೀತದಲ್ಲಿ ಶ್ರುತಿರ್ಮಾತಾ ಲಯಃ ಪಿತಾ ಎಂಬ ಹಿರಿಯರ ವಾಕ್ಯವಿದೆ ಅದರಂತೆ ಶ್ರುತಿಗೆ ಎಷ್ಟೊಂದು ಪ್ರಾಧಾನ್ಯವಿರುತ್ತದೋ ಅದೇ ರೀತಿ ಲಯಕ್ಕೂ ಸಹಾ ಪ್ರಾಧಾನ್ಯವಿರಬೇಕು. ಇತ್ತೀಚಿನ ಬಹಳಷ್ಟು ವಿದ್ವಾಂಸರು ಲಯಕ್ಕೆ ಕಡಿಮೆ ಪ್ರಾಧಾನ್ಯತೆ ನೀಡುವುದರ ಜೊತೆಗೆ ಪಲ್ಲವಿಯನ್ನು ಬಹಳ ನಿಕೃಷ್ಟವಾಗಿಕ ಕಾಣುತ್ತಿದ್ದಾರೆಂದು ಚಂದ್ರಪ್ಪನವರು ವಿಷಾದ ವ್ಯಕ್ತಪಡಿಸುತ್ತಿದ್ದರು. ದಿನಾಂಕ ೬.೬.೧೯೭೯ರ ಆಕಾಶವಾಣಿಯಿಂದ ಪ್ರಸಾರವಾದ ಭಾಷಣದಲ್ಲಿ ಚಂದ್ರಪ್ಪನವರು “ಗಂಡು ಶೈಲಿಯ ಸಂಗೀತ ಮರೆಯಾಗುತ್ತಿದೆ, ಸಂಪ್ರದಾಯಬದ್ಧ ಸಂಗೀತ ಕಡಿಮೆಯಾಗುತ್ತಿದೆ. ಕೈ ಚಪ್ಪಾಳೆಯ ಚಪಲ, ಅಸಂಬದ್ದ ಪ್ರಯೋಗ, ಸ್ವಂತಿಕೆಯಿಲ್ಲದ ಹಾಗೂ ಕಲಬೆರಕೆಯ ಸಂಗೀತ, ಶ್ರದ್ಧೆ ಭಕ್ತಿರಕ್ತಿ ಇವುಗಳ ಅಭಾವ ಇವುಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಲಿನವಾಗಲು ಬಿಡಬಾರದು” ಎಂದು ಎಚ್ಚರಿಕೆಯ ಮಾತುಗಳನ್ನು ಆಡಿರುತ್ತಾರೆ.

ಪಲ್ಲವಿ ಎಸ್‌. ಚಂದ್ರಪ್ಪನವರು ಶ್ರೀ ಸುಬ್ರಹ್ಮಣ್ಯ ದೇವರ ಪರಮಭಕ್ತರಾಗಿದ್ದರು. ದಿನವೂ ಬೆಳಗಿನ ಜಾವ ಎದ್ದು ಮೌನ ವ್ರತದಿಂದ ಶ್ರೀ ಸುಬ್ರಹ್ಮಣ್ಯನ ಜಪ ತಪ ಹಾಗೂ ಪೂಜೆ ಮುಗಿಸಿ ಮೌನ ಮುರಿದು ಪ್ರತಿದಿನವೂ ಒಂದೊಂದು ರಾಗವನ್ನು ಮೂರು ಸ್ಥಾಯಿಯಲ್ಲೂ ಅಭ್ಯಸಿಸಿ ವಿಸ್ತಾರವಾಗಿ ರಾಗ ಹಾಡಿ ಅದೇ ರಾಗದ ಕೀರ್ತನೆ ಅಥವಾ ದೇವರ ನಾಮ ನೆರವಲ್‌ ಸ್ವರ ಪ್ರಸ್ತಾರದೊಂದಿಗೆ ಮುಗಿಸುತ್ತಿದ್ದರು. ಎಂದೂ ಸುಮ್ಮನೆ ಕೂತು ಕಾಲ ವ್ಯರ್ಥ ಮಾಡುತ್ತಿರಲಿಲ್ಲ. ಸದಾ ಕಾಲ ಸಂಗೀತದ ಬಗ್ಗೆಯೇ ಚಿಂತನೆ. ಬಸ್‌ ಅಥವಾ ರೈಲುಗಳಲ್ಲಿ ಎಲ್ಲೇ ಹೋಗಿ ಬರಲಿ ಪ್ರಯಾಣದ ಕಾಲದಲ್ಲೂ ಯಾವುದಾದರೂ ಪಲ್ಲವಿಗಳ ಬಗ್ಗೆ ಕೊರಪು ಮುಕ್ತಾಯ ಸ್ವರಗಳ ಬಗ್ಗೆ ಯೋಚಿಸಿ ಮನೆ ತಲುಪಿದ ತಕ್ಷಣ ಅವರನ್ನು ಬರೆದಿಡುತ್ತಿದ್ದರು.

ಎಪ್ಪತ್ತೊಂದು ವರ್ಷಗಳ ತುಂಬು ಜೀವನ ನಡೆಸಿ ಅಸಂಖ್ಯಾತ ಬಂಧು ಮಿತ್ರರನ್ನು, ಶಿಷ್ಯವರ್ಗ ಮತ್ತು ಸಂಗೀಥಾಭಿಮಾನಿಗಳನ್ನು ಅಗಲಿ ೧೯೮೬ರ ಅಕ್ಟೋಬರ್ ೨೨ರಂದು ಪಲ್ಲವಿ ಎಸ್‌. ಚಂದ್ರಪ್ಪನವರು ಲಯಲೋಕದಲ್ಲಿ ಐಕ್ಯರಾಗಿ ಹೋದರು.