ವಿದ್ವಾನ್‌ ಬಿ. ಶೇಷಯ್ಯ- ಮುನಿಯಮ್ಮ ದಂಪತಿಗಳ ಚತುರ್ಥ ಸಂತಾನವಾಗಿ ಜನಿಸಿದ ಚಂದ್ರಪ್ಪ ಎಳೆತನದಿಂದಲೂ ತಂದೆ ಹಾಗೂ ಸಂಗೀತ ಗಮಕ ಕಾವ್ಯ ವಾಚನ, ಶಿವಶರಣರ ವಚನ – ದೇವರನಾಮಗಳ ಹಾಡಿಕೆಯಲ್ಲಿ ಪ್ರವೀಣರಾಗಿದ್ದ ತಾತ ಮುರಾರಿ ತಿಮ್ಮಯ್ಯ ಶೆಟ್ಟರ ಸಹಯೋಗದಿಂದ ಸಂಗೀತಾಸಕ್ತಿ ತಳೆದವರಾದರು. ಬಂಗಾರು ನಾಗಸ್ವರ ವಿದ್ವಾನ್‌ ಎನ್‌. ವೆಂಕಟಪ್ಪನವರಲ್ಲಿ ಆರಂಭಿಸಿ ಬಿ. ನರಸಿಂಹಮೂರ್ತಿ ಮತ್ತು ವಿ. ಶ್ರೀನಿವಾಸನ್‌ ಅವರಲ್ಲಿ ಮುಂದುವರಿಸಿ ಬಿ. ದೇವೇಂದ್ರಪ್ಪನವರಲ್ಲಿ ಉನ್ನತ ಸಂಗೀತಾಭ್ಯಾಸ ಮಾಡಿದರು. ಮುಂದೆ ನರಸಿಂಹುಲು ನಾಯಿಡು ಅವರಿಂದ ಲಯದಲ್ಲಿರುವ ಸೂಕ್ಷ್ಮ ಜ್ಞಾನವನ್ನು ಪಡೆದರು. ಹಲವಾರು ಕ್ಲಿಷ್ಟವಾದ ಪ್ರಾಚೀನ ಹಾಗೂ ನವೀನ ಪಲ್ಲವಿಗಳ ಮರ್ಮವನ್ನು ಅಭ್ಯಸಿಸಿದರು.

ನಾಡಿನ ಹೊರ ನಾಡುಗಳ ಎಲ್ಲಾ ಪ್ರತಿಷ್ಠಿತ ಸಭೆಗಳಲ್ಲಿ, ಸಮ್ಮೇಳನಗಳಲ್ಲಿ ಚಂದ್ರಪ್ಪನವರು ವಿಶೇಷ ಪಲ್ಲವಿ ಪ್ರದರ್ಶನಗಳನ್ನು ನೀಡಿ ‘ಪಲ್ಲವಿ ಚಂದ್ರಪ್ಪ’ ಎಂದೇ ಖ್ಯಾತ ನಾಮರಾದರು. ಟಿ.ಎಂ. ವೆಂಕಟೇಶ ದೇವರು ಚಂದ್ರಪ್ಪನವರನ್ನು ಪ್ರೋತ್ಸಾಹಿಸಿ ಸುಳಾದಿ ತಾಳಗಳನ್ನು  ಬಿಟ್ಟು ಇತರ ತಾಳಗಳಲ್ಲಿ ಅವಧಾನವನ್ನನುಸರಿಸಿ ಪಲ್ಲವಿ ನಿರೂಪಿಸಲು ಪ್ರಚೋದಿಸಿ ಅವರ ಕಛೇರಿಗಳಿಗೆ ತಾವೇ ಕೊನ್ನಕೋಲು (ಕೊನಗೋಲು) ಹಾಡುತ್ತಿದ್ದರು.

ಚಂದ್ರಪ್ಪನವರು ಹಾಡಿರುವ ಅಪರೂಪ ಅವಧಾನ ಪಲ್ಲವಿಗಳಲ್ಲಿ ಮೂರನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯವರು ಚಿತ್ರೀಕರಿಸಿಕೊಂಡು ಭಂಡಾರಕ್ಕೆ ಸೇರಿಸಿಕೊಂಡಿದ್ದಾರೆ. ಹಾಗೆಯೇ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯೂ ಇವರ ಅವಧಾನ ಪಲ್ಲವಿಗಳ ಚಿತ್ರೀಕರಿಸಿದ ಮುದ್ರಣವನ್ನು ಭದ್ರವಾಗಿಸಿದೆ.

ಖ್ಯಾತ ನೃತ್ಯ ಕಲಾವಿದೆ ಶಾಂತಾರಾವ್‌ ಅವರ ‘ಅಷ್ಟಮಹಿಷಿ’ ಮುಂತಾದ ವಿಶೇಷ ನೃತ್ಯಗಳಿಗೂ ಸಂಗೀತ ಸಂಯೋಜಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳಲ್ಲಿ ಸದಸ್ಯರಾಗಿ ಮಾರ್ಗದರ್ಶನ ಮಾಡಿರುತ್ತಾರೆ. ಅಷ್ಟೋತ್ತರ ಶತತಾಳಗಳೂ ಸೇರಿದಂತೆ ಅನೇಕಾನೇಕ ಅಪೂರ್ವ ತಾಳಗಳು ಇತರ ವಿದ್ವಾಂಸರಿಗೂ ಆಸಕ್ತರಿಗೂ ಪರಿಚಯವಾದುದೇ ಚಂದ್ರಪ್ಪನವರ ಪ್ರಸ್ತುತಿಯ ಮೂಲಕ!

‘ಅವಧಾನ ಪಲ್ಲವಿ ವಿಶ್ಲೇಷಣ ತಿಲಕ’, ‘ಗಾನ ಕಲಾಭೂಷಣ’, ‘ಲಯಯೋಗಿ’, ‘ತಾಳ ನಿರ್ಣಯ ಸಿಂಧು’, ‘ಕರ್ನಾಟಕ ಕಲಾ ತಿಲಕ’ ಇತ್ಯಾದಿ ಹಲವು ಹತ್ತು ಸನ್ಮಾನಗಳಿಂದ ಭೂಷಿತರಾಗಿದ್ದ ಚಂದ್ರಪ್ಪನವರು ಸಾರ್ಥಕ ಜೀವನ ನಡೆಸಿ ಅನೇಕ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡಿ ೨೨-೧೦-೧೯೮೬ ರಂದು ನಾದ ಲಯ ಬ್ರಹ್ಮನಲ್ಲಿ ಲೀನರಾದರು.