ಕರ್ಣಾಟಕದ ರಾಜಧಾನಿಯೆನಿಸಿದ ಬೆಂಗಳೂರಿನಿಂದ ಸುಮಾರು ೬೦ ಕಿಲೋಮೀಟರ್ ದೂರದಲ್ಲಿರುವ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಒಂದುಜೋಡಿಗ್ರಾಮವಿದೆ.   ಇದರ ಹೆಸರು ಹೆಬ್ಬಳಲು. ಇದು ಇಂದಿಗೂ ಒಂದು ಚಿಕ್ಕ ಗ್ರಾಮವಾಗಿಯೇ ಉಳಿದಿದೆ. ಗ್ರಾಮದ ಸುತ್ತಲೂ ಫಲವತ್ತಾದ ಕೃಷಿಯಿಂದ ಹಸಿರು ಅರಳಿ ಹೊಮ್ಮುತ್ತಲಿದೆ. ಪ್ರಶಾಂತ ವಾತಾವರಣ. ಗ್ರಾಮದ ಮಧ್ಯದಲ್ಲಿ ಒಂದು ಶಿಥಿಲವಾದ ದೇವಸ್ಥಾನವಿದೆ. ಇದು ರಾಮಲಿಂಗೇಶ್ವರ ಗುಡಿ. ಈ ಗುಡಿಯನ್ನು ನಿರ್ಮಿಸಿದವರು ಆ ಗ್ರಾಮದ ಮುಖ್ಯಸ್ಥರಾಗಿದ್ದ ನರಸಪ್ಪನೆಂಬುವರು.

ಹತ್ತೊಂಬತ್ತನೆಯ ಶತಮಾನದ ದ್ವಿತೀಯ ಪಾದದ ಸರಿಸುಮಾರು ಸಮಯ. ಆ ಹೆಬ್ಬಳಲು ಗ್ರಾಮದ ನರಸಪ್ಪ ಮತ್ತು ಪತ್ನಿ ಸಾವಿತ್ರಮ್ಮನವರ ಜೀವನದಲ್ಲಿ ಒಂದು ಪವಾಡವೇ ನಡೆದು ಹೋಯಿತು. ಸಂತಾನಹೀನರಾದ ದಂಪತಿಗಳು ತೀರ್ಥಯಾತ್ರೆಗೆಂದು ಹೊರಟು ನಿಂತ ವೇಳೆಗೆ ಸರಿಯಾಗಿ ಮನೆಯ ಮುಂದೆ ರಾಮೇಶ್ವರದಿಂದ ಬಂದಿದ್ದೇನೆಂದು ಹೇಳಿಕೊಂಡ ಒಬ್ಬ ಸನ್ಯಾಸಿಯು ಬಂದು ನಿಂತು ನರಸಪ್ಪನವರಿಗೆ ಲಿಂಗವೊಂದನ್ನು ಕೊಟ್ಟು, ಅದು ರಾಮಲಿಂಗೇಶ್ವರನೆಂದೂ, ಅದನ್ನು ಸ್ಥಾಪಿಸಿ ಪೂಜಿಸಿದರೆ ದೈವಪ್ರಸಾದದಿಂದ ಅವರ ಅಪೇಕ್ಷೆಯು ಈಡೇರುತ್ತದೆಂದು ತಿಳಿಸಿ ಹೊರಟುಹೋದನಂತೆ. ಅತ್ಯಂತ ದೈವಶ್ರದ್ಧೆಯುಳ್ಳವರೂ, ಸಾತ್ವಿಕರೂ ಆದ ನರಸಪ್ಪನವರು ತಮ್ಮ ಪತ್ನಿಯೊಡಗೂಡಿ ಅಲ್ಲೇ ಒಂದು ದೇವಸ್ಥಾನವನ್ನು ಕಟ್ಟಿಸಿ, ರಾಮಲಿಂಗೇಶ್ವರನನ್ನು ಸ್ಥಾಪಿಸಿದರು. ಇದರ ಫಲವಾಗಿ ಒಬ್ಬ ಪುತ್ರ ಜನಿಸಿದ. ಇವನಿಗೆ ದಂಪತಿಗಳು ಅಕ್ಕರೆಯಿಂದ ರಾಮಲಿಂಗಯ್ಯ ಎಂದು ನಾಮಕರಣ ಮಾಡಿದರು.

ರಾಮಲಿಂಗಯ್ಯನವರ ಬಾಲ್ಯ, ವಿದ್ಯಾಭ್ಯಾಸ, ಅಸಾಧಾರಣವಾದ ಮೇಧಾಶಕ್ತಿ, ದೈವಭಕ್ತಿ ಇವುಗಳ ಬಗ್ಗೆ ಇಂದಿಗೂ ಅವರ ವಂಶಜರಲ್ಲಿ ಉಳಿದುಬಂದ ದಂತಕಥೆಗಳು ಹಲವಾರು. ರಾಮಲಿಂಗಯ್ಯನವರು ಸಂಗೀತದ ಪ್ರಥಮಪಾಠವನ್ನು ತಂದೆಯವರಲ್ಲಿ ಅಭ್ಯಾಸಮಾಡಿದರು. ಇವು ಕೇವಲ ಸ್ತೋತ್ರಗಳನ್ನು, ಆರಾಧ್ಯ ದೈವವಾದ ರಾಮಲಿಂಗದೇವರ ಭಜನೆಗಳನ್ನು ಒಳಗೊಂಡಿತ್ತು. ಕಾಲಕ್ರಮೇಣ ರಾಮಲಿಂಗಯ್ಯನವರು ಸಂಸ್ಕೃತ, ತೆಲುಗು, ಭಾಷೆಗಳನ್ನೂ, ಸಂಗೀತ, ಜ್ಯೋತಿಷ್ಯಗಳನ್ನೂ ಅಭ್ಯಾಸಮಾಡಿ ಅವುಗಳಲ್ಲಿ ಪಾಂಡಿತ್ಯ ಗಳಿಸಿದರು. ಇವರ ಇಪ್ಪತ್ತನೆಯ ವಯಸ್ಸಿನಲ್ಲಿ ಸುಬ್ಬಮ್ಮನೆಂಬ ಕನ್ಯೆಯೊಡನೆ ವಿವಾಹವಾಯಿತು.

ತನ್ನ ತಂದೆಯವರ ಮನೆಯಲ್ಲಿ ಎಲ್ಲ ಸಂಪತ್ತುಗಳೂ ಸಮೃದ್ಧಿಯಾಗಿದ್ದರೂ ಸ್ವತಂತ್ರ ಜೀವನಾಕಾಂಕ್ಷೆಯ ಹಂಬಲ ರಾಮಲಿಂಗಯ್ಯನವರಲ್ಲಿ ಹೆಚ್ಚಾಯಿತು. ತನ್ನ ದೃಢನಿರ್ಧಾರವನ್ನು ತಂದೆಗೆ ತಿಳಿಸಿ ಬೀರೂರಿಗೆ ತೆರಳಿ ಅಲ್ಲಿ ನೆಲೆಸಿದರು. ಶೀಘ್ರದಲ್ಲೇ ಅವರು ಅಲ್ಲಿನ ಸುಂಕಟಕಟ್ಟೆ ಅಧಿಕಾರಿಗಳಾದರು. ತಮ್ಮ ಸತ್ಯಸಂಧತೆ, ನಿಷ್ಠೆ ಮತ್ತು ಸೌಜನ್ಯತೆಯಿಂದ ಜನಪ್ರೀತಿಯನ್ನು ಗಳಿಸಿಕೊಂಡರು. ಇವರಿಗೆ ನಾಲ್ವರು ಪುತ್ರರೂ ಇಬ್ಬರು ಪುತ್ರಿಯರೂ ಇದ್ದರು. ಅನುಕೂಲೆಯಾದ ಪತ್ನಿ, ಸುಖಮಯವಾದ ಸಂಸಾರ, ಇಷ್ಟವಾದ ಉದ್ಯೋಗದಿಂದ ಅವರ ಜೀವನದಲ್ಲಿ ಒಂದು ಪ್ರಶಾಂತತೆಯುಂಟಾಯಿತು. ಇದು ಅವರ ಪ್ರಥಮ ಪ್ರೇಮವಾದ ಸಂಗೀತವಿದ್ಯೆಯನ್ನು ಅಭ್ಯಸಿಸಲು ಅನುಕೂಲವಾಯಿತು. ಸಂಗೀತಭ್ಯಾಸವು ತಪಸ್ಸಾಯಿತು. ಇದೇ ವೇಳೆಗೆ ಅವರು ದಕ್ಷಿಣಭಾರತದಾದ್ಯಂತ ತೀರ್ಥಯಾತ್ರೆಯನ್ನು ಕೈಗೊಂಡರು. ಸಂತ ಶ್ರೀತ್ಯಾಗರಾಜರ ಪ್ರಮುಖ ಶಿಷ್ಯರಾಗಿದ್ದ ಮಾನಂಬುಚ್ಚಾವಡಿ ವೆಂಕಟಸುಬ್ಬಯ್ಯನವರನ್ನು ಸಂಧಿಸುವ ಸುಯೋಗವು ದೊರಕಿತು. ಅವರಿಂದ ಆಕರ್ಷಿತರಾಗಿ ಅಲ್ಲಿಯೇ ಒಂದು ವರ್ಷಕಾಲ ಶಿಷ್ಯವೃತ್ತಿಯನ್ನು ಕೈಗೊಂಡು ತ್ಯಾಗರಾಜ ಪರಂಪರೆಯ ಕೃತಿಗಳನ್ನೂ ಗಾನಶೈಲಿಯನ್ನೂ ರಾಮಲಿಂಗಯ್ಯನವರು ಮೈಗೂಡಿಸಿಕೊಂಡು ಪ್ರವೀಣರಾದರು. ಅಲ್ಲದೆ ಅದೇ ವೇಳೆಗೆ ಶ್ರೀತ್ಯಾಗರಾಜರನ್ನೂ ದರ್ಶನ ಮಾಡಿ ಅವರಿಂದ ಆಶೀರ್ವಾದವನ್ನೂ ಪಡೆಯುವ ಸೌಭಾಗ್ಯವನ್ನೂ ದೊರಕಿಸಿಕೊಂಡರು.

ರಾಮಲಿಂಗಯ್ಯನವರಲ್ಲಿ ಶಾರೀರಸಂಪತ್ತು, ವಿದ್ಯಾಪ್ರೌಢಿಮೆ ಮತ್ತು ಪಾರಮಾರ್ಥಿಕ ಸಾಧನೆಗಳು ಸಂಗಮವಾಗಿದ್ದವೆಂದು ಅವರನ್ನು ಕಂಡು ಕೇಳಿದವರು ಹೇಳುತ್ತಿದ್ದರು. ಅವರ ದಿನಚರಿಯ ಬಗ್ಗೆ ಹೆಬ್ಬಳಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಇಂದೂ ಸಹ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ. ಬೆಳಗಿನ ದೈನಂದಿನ ಪೂಜೆ ಧ್ಯಾನ ಇತ್ಯಾದಿ ಕರ್ಮಾಚರಣೆಗಳ ನಂತರ ಊಟ ಮಾಡುವ ಮುಂಚೆಯೇ ಊರ ಬಾಗಿಲಬಳಿ ಬಂದು ನಿಲ್ಲುತ್ತಿದ್ದರಂತೆ. ಅಲ್ಲಿ ಯಾತ್ರಾರ್ಥಿಗಳಾದ ಅತಿಥಿಗಳನ್ನು ಕಂಡೊಡನೆ ಅವರನ್ನು ತನ್ನ ಮನೆಗೆ ಕರೆದೊಯ್ದು ಅತಿಥಿಸತ್ಕಾರಗಳನ್ನು ಮಾಡುತ್ತಾ ಅವರಿಗೆ ಉಣಬಡಿಸಿ ಸಂತೃಪ್ತಿಗೊಳಿಸಿದ ನಂತರವೇ ಅವರು ಅಂದಿನ ಆಹಾರವನ್ನು ಸೇವಿಸುತ್ತಿದ್ದರಂತೆ. ಇದು ಎಷ್ಟರಮಟ್ಟಿಗೆ ಜನಜನಿತವಾದ ವಿಚಾರವಾಗಿತ್ತೆಂದರೆ ಆ ಊರಿಗೆ ಯಾರೇ ಬಂದು ಆಶ್ರಯದ ಅಪೇಕ್ಷೆಪಟ್ಟರೂ ಎಲ್ಲರೂ ರಾಮಲಿಂಗಯ್ಯನವರ ಕಡೆಗೇ ಕೈಮಾಡಿ ತೋರಿಸುತ್ತಿದ್ದರಂತೆ. ಊರಿನ ಸರ್ವಸತ್ಕಾರ್ಯಗಳಲ್ಲೂ ರಾಮಲಿಂಗಯ್ಯನವರದೇ ಪ್ರಮುಖಪಾತ್ರ. ಅನ್ನಸಂತರ್ಪಣೆಯಲ್ಲದೆ ಪ್ರತಿದಿನ ಸಂಜೆಯೂ ಅವರ ಮನೆಯಲ್ಲಿ ಸಂಗೀತ ಸಮಾರಾಧನೆಯೂ ಆಗುತ್ತಿತ್ತು. ರಾಮಚಂದ್ರಮೂರ್ತಿಯ ಮುಂದೆ ಅವರ ಸಂಗೀತ ಸೇವೆ ನಡೆಯುತ್ತಿತ್ತು. ಇಂತಹ ಪ್ರಸಂಗಗಳಲ್ಲಿ ಕನ್ನಡದಲ್ಲಿ ಕೆಲವು ದೇವರನಾಮಗಳನ್ನು ಸಹ ಅವರು ರಚಿಸಿದ್ದರೆಂದೂ ತಿಳಿದು ಬರುತ್ತದೆ.

ತೀಕ್ಷ್ಣಮತಿಯೂ, ಮೇಧಾವಿಯೂ ಆಗಿದ್ದ ರಾಮಲಿಂಗಯ್ಯನವರ ಮನಸ್ಸು ಸಹಜವಾಗಿಯೇ ಕರ್ಣಾಟಕ ಸಂಗೀತದ ಅತ್ಯಂತ ಪ್ರೌಢ ಮನೋಧರ್ಮ ಗೇಯ ಪ್ರಕಾರವಾದ ಪಲ್ಲವಿ ಗಾಯನದತ್ತ ಆಕರ್ಷಿತವಾಯಿತು. ಕೈಗೆತ್ತಿಕೊಂಡ ಎಂತಹ ವಿಚಾರದಲ್ಲಿಯೂ ತಳಸ್ಪರ್ಷಿಯಾದ ಶೋಧನ ಸಾಧನ ಮಾಡುವುದರಲ್ಲಿ ಇವರು ಅದ್ವಿತೀಯರಾಗಿದ್ದರಿಂದ ಪಲ್ಲವಿ ರಚನೆ, ಗಾಯನ ಮತ್ತು ಸಾಂಪ್ರದಾಯಿಕವಾದ ಅಚ್ಚುಕಟ್ಟಿನಲ್ಲಿ ಹೊಸತನದ ಪಲ್ಲವಿ ಸೃಷ್ಟಿಯಲ್ಲಿ ರಾಮಲಿಂಗಯ್ಯನವರು ಅತ್ಯಂತ ಶೀಘ್ರವಾಗಿಯೇ ಸಿದ್ಧಿಯನ್ನು ಪಡೆದರು. ಸಾಧಾರಣವಾಗಿ ಬಳಸುವ ಆದಿ, ತ್ರಿಪುಟ, ರೂಪಕ ಮುಂತಾದ ಸುಳಾದಿ ತಾಳಗಳಲ್ಲಿ ಮಾತ್ರವಲ್ಲದೆ ದೇಶೀತಾಳಗಳೆಂದು ಹೆಸರಾದ ನೂರಿಪ್ಪತ್ತೆಂಟು ತಾಳಗಳಲ್ಲಿಯೂ ಮರ್ಮ, ಭಂಗ, ಉರುಪು, ಸಂಕರ ಮುಂತಾದ ಅಪೂರ್ವ ತಾಳಗಳಲ್ಲಿಯೂ, ಅವಧಾನ ಪದ್ಧತಿಯಲ್ಲಿಯೂ  ಇವರು ಕಚೇರಿಯನ್ನು ಮಾಡುತ್ತಿರುವಾಗಲೇ ಪ್ರೌಢವೂ ಜಟಿಲವೂ, ಆದರೆ, ಬಹು ಶ್ರಾವ್ಯವೂ ಚಮತ್ಕಾರಯುಕ್ತವೂ ಆದ ಪಲ್ಲವಿಗಳನ್ನು ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಆಶುರಚನೆ ಮಾಡಿ ಹಾಡಿ ತೋರಿಸುತ್ತಿದ್ದರು. ದಕ್ಷಿಣಭಾರತದಲ್ಲೆಲ್ಲ ಇವರು ಪಲ್ಲವಿ ರಾಮಲಿಂಗಯ್ಯ ಎಂಬ ಹೆಸರಿನಿಂದಲೇ ಚಿರಪರಿಚಿತರಾದರು. ಹೀಗೆ ದೇಶೀತಾಳ ಪಲ್ಲವಿ ಗಾಯನ ಪದ್ಧತಿಯು ಇವರಿಂದ ಕರ್ಣಾಟಕದಲ್ಲಿ ಪ್ರಾರಂಭವಾಯಿತೆಂದು ಹೇಳಬಹುದು. ಇದನ್ನು ಗುರುತಿಸಿದ ದಕ್ಷಿಣ ದೇಶದ ಹಲವು ರಾಜರುಗಳಿಂದ ಇವರು ಸನ್ಮಾನಿತರಾಗಿದ್ದರು ಎಂಬ ಪ್ರತೀತಿ ಇಂದಿಗೂ ಉಳಿದು ಬಂದಿದೆ.

೧೯೦೦-೧೯೦೧ರಲ್ಲಿ ಕರ್ಣಾಟಕದಾದ್ಯಂತ ಪ್ಲೇಗ್‌ರೋಗವು ಬರಸಿಡಿಲಿನಂತೆ ಕಾಣಿಸಿಕೊಂಡು ಕಾಳ್ಗಿಚ್ಚಿನಂತೆ ಹರಡಿಕೊಂಡಿತು. ಈ ಮಾರಕರೋಗಕ್ಕೆ ಅನೇಕರು ಬಲಿಯಾದರು. ಆಗ ಹೆಬ್ಬಳಲು ಗ್ರಾಮದಲ್ಲಿದ್ದ ರಾಮಲಿಂಗಯ್ಯನವರನ್ನೂ ಅವರ ಪತ್ನಿಯನ್ನೀ ಈ ರೋಗ ಆವರಿಸಿಕೊಂಡಿತು. ಪ್ಲೇಗಿಗೆ ಬಲಿಯಾಗಿ ಇವರೂ ಇವರ ಪತ್ನಿಯೂ ಕೇವಲ ಹನ್ನೆರಡು ದಿನಗಳ ಅಂತರದಲ್ಲಿ ವಿಧಿವಶರಾದರು. ಸರ್ವಸಂಪತ್ತು, ಸಂಸ್ಕೃತಿ ಭರಿತವಾಗಿದ್ದ ಮನೆ ಅನಾಥವಾಯಿತು. ಅದರ ಪರಿಣಾಮವಾಗಿ ಉಂಟಾದ ಅರಾಜಕತೆಯ ಫಲವಾಗಿ ಮನೆಯಲ್ಲಿದ್ದ ಎಲ್ಲ ಸಂಪತ್ತೂ ನಾಶವಾಯಿತು. ಇದರ ಜೊತೆಗೆ ರಾಮಲಿಂಗಯ್ಯನವರು ಸಂಪಾದಿಸಿ ಸಂಗ್ರಹಿಸಿದ್ದ ಸಂಗೀತಕೃತಿಗಳ ಅಮೂಲ್ಯ ಭಂಡಾರ, ಅವರೇ ರಚಿಸಿ ಹಾಡುತ್ತಿದ್ದ ಕೃತಿಗಳು, ಪಲ್ಲವಿಗಳೂ ನಾಮಾವಶೇಷವಾಯಿತು. ಆದರೆ, ಆ ಸಮಯ ರಾಮಲಿಂಗಯ್ಯನವರ ಮನೆಯಲ್ಲಿದ್ದ ಮುದಿವಯಸ್ಸಿನ ಸೋದರತ್ತೆಯು ಅವರ ಮಕ್ಕಳನ್ನೆಲ್ಲಾ ಕರೆದುಕೊಂಡು ಮೈಸೂರಿಗೆ ಧಾವಿಸಿ ಬಂದರು. ಹೀಗೆ ವಲಸೆಬಂದವರಲ್ಲಿ ರಾಮಲಿಂಗಯ್ಯನವರ ಜ್ಯೇಷ್ಠಪುತ್ರ ರಾಮಯ್ಯನವರೂ ಅವರ ಸಂತತಿಯೂ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದರು. ರಾಮಯ್ಯನವರಿಗೆ ನಾಲ್ಕು ಪುತ್ರರು ಮತ್ತು ಒಬ್ಬ ಮಗಳು. ಈ ನಾಲ್ಕು ಪುತ್ರರೂ ಮೈಸೂರು ಸಹೋದದರೆಂದು ಖ್ಯಾತಿಯನ್ನು ಪಡೆದರು. ಮೈಸೂರು ಸಹೋದರರ ಮಕ್ಕಳೂ ಸಹ ಉತ್ತಮ ಸಂಗೀತಗಾರರು. ಅವರಲ್ಲಿ ಕೆಲವರು ನಾಡಿನಲ್ಲಿ ಪ್ರಸಿದ್ಧಿಪಡೆದು ತಮ್ಮ ವಂಶದ ಹೆಮ್ಮೆಯ ಸಂಗೀತಸೇವೆಯಲ್ಲಿ ಭಾಗಿಯಾಗಿದ್ದಾರೆ. ರಾಮಲಿಂಗಯ್ಯನವರ ಇನ್ನೊಬ್ಬ ಪುತ್ರ ಸುಬ್ಬರಾಯರ ಪುತ್ರರಾದ ರಾಮಲಿಂಗನವರೂ ಸಹ ಒಬ್ಬ ಉತ್ತಮ ನಟನಾಗಿ ಪ್ರಖ್ಯಾತಿ ಪಡೆದಿದ್ದರು.

ಪಲ್ಲವಿ ರಾಮಲಿಂಗಯ್ಯನವರು ಹಚ್ಚಿದ ಸಂಗೀತ ಜ್ಯೋತಿ ಇಂದಿಗೂ ಉಳಿದು ಬೆಳಗುತ್ತಿದೆ.